ಜೊರ ಜೊರ ಸುರಿಯುವ ಮಳೆಯಲ್ಲಿ, ತ್ರಯಂಬಕ ಹೆಗಡೇರ ಗದ್ದೆಯಲ್ಲಿ ಪವರ್ ಟಿಲ್ಲರ್
ಮೂಲಕ ಹೂಡುವ ಕೆಲಸದಲ್ಲಿ ನಿರತನಾಗಿದ್ದ ಕುಟ್ಣ. ಅರಲು ಗದ್ದೆಯಲ್ಲಿ ಆಗಾಗ ಹೂತು ಬೀಳುವ ಟಿಲ್ಲರ್
ನ ಚಕ್ರವನ್ನು ಸರಿಪಡಿಸುತ್ತ, ಸೊಂಯನೆ ಬೀಸುವ ಗಾಳಿಗೆ ಹಾರಿ ಹೋಗುತ್ತಿದ್ದ ಪ್ಲಾಸ್ಟಿಕ್ ಕೊಪ್ಪೆಯನ್ನು
ಭದ್ರವಾಗಿ ಹಿಡಿದು ಅದಕ್ಕೊಂದು ಬಳ್ಳಿಯಿಂದ ಕಟ್ಟುತ್ತ, ಬಾಯಲ್ಲಿ ಯಾವುದೋ ಗಾಂವಟಿ ಹಾಡನ್ನು ಹಾಡುತ್ತ
ಕೆಲಸದಲ್ಲಿ ನಿರತನಾಗಿದ್ದ ಕುಟ್ಣ. ಹೀಗಿದ್ದಾಗಲೇ ಕುಟ್ಣನ ಬಳಿ ಮಗ ಸತ್ನಾರ್ಣ ಬಂದು ತನ್ನ ವಾರಗೆಯವರು
ಕೊಡುತ್ತಿದ್ದ ಕಾಟದ ಬಗ್ಗೆ ಪುಕಾರು ಹೇಳಿದ್ದ.
`ಸತ್ನಾರ್ಣ, ಸತ್ನಾರ್ಣ… ನಿನ್ ಅಪ್ಪನ ಹೆಸರು ಹೇಳೋ…’ ಎಂದು ತನ್ನದೇ ಕ್ಲಾಸಿನ
ಹುಡುಗರು ವ್ಯಂಗ್ಯವಾಗಿ ಮಾತನಾಡುವುದರ ಕುರಿತಂತೆ ಸತ್ನಾರ್ಣ ತನ್ನ ಅಪ್ಪ ಕುಟ್ಣನ ಬಳಿ ಬಂದು ಹೇಳಿದ್ದ.
`ಯಾರು ಹಂಗೆ ಮಾತಾಡಿದವರು….’ ಎಂದು ಸಿಟ್ಟಿನಿಂದ ಗುಡುಗಿದ್ದ ಕುಟ್ಣ.
`ನೀನು ನನ್ನ ಅಪ್ಪ ಅಲ್ವಂತೆ… ತ್ರಯಂಬಕ ಹೆಗಡೇರು ನನ್ನ ಅಪ್ಪನಂತೆ… ಹೌದಾ?’
ಮಗ ಗೊಳೋ ಎಂದು ಅಳುತ್ತ ಕುಟ್ಣನ ಬಳಿ ಹೇಳಿದಾಗ ಕುಟ್ಣ ಇದ್ದಕ್ಕಿದ್ದಂತೆ ತಣ್ಣಗಾಗಿ ಹೋಗಿದ್ದ.
ಕುಟ್ಣನ ಧ್ವನಿ ಇದ್ದಕ್ಕಿದ್ದಂತೆ ತೊದಲಲು ಆರಂಭವಾಗಿತ್ತು. `ಯಾ.. ಯಾ..
ಯಾರು ಹಾಗೆ ಹೇಳಿದ್ದು.. ಕ..ಕ.. ಕರ್ಕೊಂಡು ಬಾ…’ ಎಂದು ತೊದಲುತ್ತಲೇ ಹೇಳಿದ್ದ ಕುಟ್ಣ.
`ನನ್ನ ಕ್ಲಾಸಿನವರೆಲ್ಲ ಹೀಗೆ ಹೇಳ್ತಾರೆ ಅಪ್ಪಾ… ನಾನು ನಿಮ್ಮ ಮಗ ಅಲ್ಲವಂತೆ..
ತ್ರಯಂಬಕ ಹೆಗಡೇರ ಮಗನಂತೆ.. ಅದಕ್ಕೆ ನಾನು ತ್ರಯಂಬಕ ಹೆಗಡೇರ ಹಾಗೇ ಕಾಣಿಸುತ್ತೇನಂತೆ… ತ್ರಯಂಬಕ
ಹೆಗಡೇರ ಮಗಳಿಗೂ, ಮಗನಿಗೂ, ನನಗೂ ಹೋಲಿಕೆ ಇದೆಯಂತೆ…ಹಾಗೆ ಹೀಗೆ ಎಲ್ಲ ಮಾತಾಡ್ತಿದ್ದಾರೆ ಅಪ್ಪಾ…’
ಎಂದ ಸತ್ನಾರ್ಣ..
ಮತ್ತಷ್ಟು ಕಂಪಿಸಿದ ಕುಟ್ಣ, `ಮತ್ತೆ ಎಂತೆಂತ ಹೇಳಿದರೋ ಅವರು…’ ಕೀರಲು
ಧ್ವನಿಯಲ್ಲಿ ಕೇಳಿದ.
`ನಾನು ಅವರ ಮಗನಂತೆ. ಹಾಗಾಗಿ ನನ್ನನ್ನು ತ್ರಯಂಬಕ ಹೆಗಡೇರ ಮಕ್ಕಳ ಜತೆ
ಸದಾ ಬೆರೆಯಲು ಬಿಟ್ಟಿದ್ದಾರಂತೆ. ಹಾಗೆ ಹೀಗೆ.. ಏನೇನೋ ಹೇಳಿದರು…’ ಸತ್ನಾರ್ಣನ ಒರಲಾಟ ಹೆಚ್ಚಿತ್ತು.
ಮಗನ ಮಾತನ್ನು ಕೇಳಿ ಕುಟ್ಣ ಇನ್ನಷ್ಟು ಕಂಪಿಸಿದ್ದ.
ಮಗನನ್ನು ಹಾಗೂ ಹೀಗೂ ಸಮಾಧಾನ ಮಾಡಿ ಮನೆಗೆ ಕಳಿಸಿದ ಕುಟ್ಣನಿಗೆ ನಂತರ
ಕೆಲಸ ಮಾಡಲು ಮನಸ್ಸೇ ಬರಲಿಲ್ಲ. ಮಗ ಹೇಳಿದ ವಿಷಯವೇ ತಲೆಯಲ್ಲಿ ಕೊರೆಯಲು ಆರಂಭಿಸಿತ್ತು.
ಮಗ ಬಂದು ಪುಕಾರು ಹೇಳಿದ ನಂತರ ಕುಟ್ಣನಿಗೆ ಏನೂ ಮಾಡಲೂ ಮನಸ್ಸಿಲ್ಲ ಎಂಬಂತಾಗಿತ್ತು.
ಕುಳಿತಲ್ಲಿ ಕುಳಿತಿರಲಾರ, ನಿಂತಲ್ಲಿ ನಿಂತಿರಲಾರ ಎಂಬಂತೆ ಕುಟ್ಣ ಚಡಪಡಿಸಲು ಆರಂಭಿಸಿದ್ದ.
ಆಡುವ ಹುಡುಗರು ತಮಾಷೆ ಮಾಡಿರಬೇಕು
ಎಂದುಕೊಂಡು ಕುಟ್ಣ ಪದೇ ಪದೆ ತಲೆ ಕೊಡವಿ ತನ್ನ ಕೆಲಸದಲ್ಲಿ ಮುಂದುವರಿಯಲು ಯತ್ನಿಸಿದ. ಆದರೆ ಏನೂ
ಮಾಡಿದರೂ ಮಗ ಹೇಳಿದ ವಿಷಯ ಮಾತ್ರ ತಲೆಯಿಂದ ಹೋಗಲೇ ಇಲ್ಲ. ಮತ್ತೆ ಮತ್ತೆ ಭೂತಾಕಾರವಾಗಿ ಕೊರೆಯಲು
ಆರಂಭವಾಗಿತ್ತು.
ಮನಸ್ಸಿನಲ್ಲಿ ಮಗ ಹೇಳೀದ ವಿಷಯ ದೊಡ್ಡದಾದಂತೆಲ್ಲ,
ಜೊರಗುಡುವ ಮಳೆಯೂ ಹೆಚ್ಚಳವಾದಂತೆ ಕಂಡಿತು ಕುಟ್ಣನಿಗೆ. ಎಂದೂ ಹಾಳಾಗದ ಪವರ್ ಟಿಲ್ಲರ್ ನಲ್ಲಿ ಏನೋ
ಸಮಸ್ಯೆ ಇದೆ ಎಂಬಂತೆಲ್ಲ ಭಾಸವಾಯಿತು.
`ದರಿದ್ರದ ಟಿಲ್ಲರ್..’ ಎಂದು ಬೈದುಕೊಂಡ
ಕುಟ್ಣ ಬಾಯಲ್ಲಿದ್ದ ಕವಳದ ರಸವನ್ನು ಪಿಚಿಕ್ಕನೆ ಪಕ್ಕದ ಹಾಳಿಯ ಮೇಲೆ ಉಗಿದು, ಗದ್ದೆಯಿಂದ ದೂರ ಸರಿದು
ಬಂದು ಹಾಳಿಯ ಬಳಿ ತುದಿಗಾಲಿನಲ್ಲಿ ಕುಳಿತ.. ಮನಸ್ಸು ಅಂಕೆ ತಪ್ಪಿದಂತಾಗಿತ್ತು.. ದೂರದಲ್ಲೆಲ್ಲೋ
ಕೂಗುವ ನವಿಲಿನ `ಕೆಂಯ್ಯೋ… ಧ್ವನಿ.. ಪ್ರತಿದಿನದಂತೆ ಇಂದು ಹಿತವೆನಿಸದೇ ಕರ್ಕಶದಂತೆ ಅನ್ನಿಸಿತು.
ಮಳೆಜಿರಲೆಗಳ ಟರ್ ಟರ್ ಸದ್ದಂತೂ ಕುಟ್ಣನ ಅಸಹನೆಯನ್ನು ಇನ್ನಷ್ಟು ಹೆಚ್ಚಿಸಿತು. ಮಳೆಯ ಹನಿಗಳು ಜೋರಾದಂತೆಲ್ಲ
ಕುಟ್ಣನ ಮನಸ್ಸಿನ ಹೊಯ್ದಾಟಗಳೂ ಕೂಡ ಮತ್ತಷ್ಟು ಹೆಚ್ಚಿತು.
***
ಕೃಷ್ಣ ಎಂಬ ಸುಂದರವಾದ ಹೆಸರಿನ ವ್ಯಕ್ತಿ ಕುಟ್ಣ ಆಗಿ ಅದೆಷ್ಟೋ ಕಾಲವೇ
ಆಗಿಹೋಗಿದೆ. ಆತ ತ್ರಯಂಬಕ ಹೆಗಡೇರ ಮನೆಗೆ ಕೆಲಸಕ್ಕೆ ಬರಲು ಪ್ರಾರಂಭಿಸಿದ ಹೊಸತರಲ್ಲಿ ಕೃಷ್ಣ ಆಗಿದ್ದ.
ತದನಂತರದಲ್ಲಿ ಯಾವುದೋ ಸಂದರ್ಭದಲ್ಲಿ ಕುಟ್ಣನಾಗಿ ಪರಿವರ್ತನೆಯಾದವನು, ಖಾಯಂ ಅದೇ ಹೆಸರಿನಿಂದಲೇ ಕರೆಸಿಕೊಳ್ಳಲು
ಆರಂಭಿಸಿದ್ದ. ಸತ್ಯನಾರಾಯಣ ಎನ್ನುವ ಹೆಸರಿನ ಮಗ ಕೂಡ ಸತ್ನಾರ್ಣನಾಗಿ ಬದಲಾಗಿದ್ದ.
ಬಡಕಲು ಶರೀರದ ಕುಟ್ಣ ಸಾಧು ಸ್ವಭಾವದ ವ್ಯಕ್ತಿ. ಕಣ್ಣು ಸಣ್ಣ. ಕೈಕಾಲು
ಕೂಡ ಸಣ್ಣ. ವಯಸ್ಸು ಐವತ್ತರ ಆಜೂಬಾಜಿರಬೇಕು. ತಲೆ ಕೂದಲೆಲ್ಲ ಬೆಳ್ಳಗಾಗಿದೆ. ಸದಾ ಬಿಸಿಲಿನಲ್ಲಿ
ಹಾಗೂ ಬಯಲಿನಲ್ಲಿ ಕೆಲಸ ಮಾಡಿ ಮಾಡಿ ಆತನ ಬಣ್ಣ ಕಪ್ಪಾಗಿ ಬದಲಾಗಿದೆ. ಇಂತಿಪ್ಪ ಕುಟ್ಣ ಯಾವತ್ತೂ,
ಯಾರ ಮೇಲೆಯೂ ಸಿಟ್ಟಾದವನಲ್ಲ. ರೇಗಿದವನಲ್ಲ. ಹಸನ್ಮುಖಿ ಸದಾ ಸುಖಿ ಎನ್ನುವ ಮಾತಿಗೆ ತಕ್ಕಂತೆ ಎದುರು
ಕಾಣಿಸಿದವರಿಗೆಲ್ಲ ನಗುವಿನ ಉತ್ತರವನ್ನು ನೀಡಿ ಮುನ್ನಡೆಯುತ್ತಿದ್ದ.
ಕುಟ್ಣ ಮೂಲತಃ ಕರಾವಳಿ ತೀರದ ಯಾವುದೋ ಹಳ್ಳಿಯವನಂತೆ. ಚಿಕ್ಕಂದಿನಲ್ಲಿ
ಯಾವುದೋ ಸೇರೂಗಾರನ ಬೆನ್ನಿಗೆ ಬಂದಿದ್ದವನು ತ್ರಯಂಬಕ ಹೆಗಡೆಯವರ ಮನೆಯಲ್ಲಿ ಅದೂ, ಇದೂ ಕೆಲಸವನ್ನು
ಮಾಡುತ್ತ ಕಾಲ ತಳ್ಳಲು ಆರಂಭಿಸಿದ್ದ. ತದನಂತರದಲ್ಲಿ ತ್ರಯಂಬಕ ಹೆಗಡೆಯವರ ಮನೆಯ ಖಾಯಂ ಆಳಾಗಿ ಬದಲಾಗಿದ್ದ.
ತ್ರಯಂಬಕ ಹೆಗಡೆಯವರು ನಾಲ್ಕೈದು ವರ್ಷ ವಯಸ್ಸಿನ ಅಂತರದ, ಕಿರಿಯವನಾದ ಕುಟ್ಣನನ್ನು ಪ್ರೀತಿಯಿಂದ,
ಅಕ್ಕರೆಯಿಂದ ಕಾಣುತ್ತಿದ್ದರು. ತಮ್ಮ ಮನೆಯ ಆಳಾಗಿ ಉಳಿದುಕೊಂಡ ಕುಟ್ಣನಿಗೆ ನಾಲ್ಕೈದು ಗುಂಟೆ ಜಮೀನನ್ನೂ
ಬರೆದುಕೊಟ್ಟಿದ್ದರು. ಅಷ್ಟೇ ಅಲ್ಲದೇ ಮನೆಯನ್ನೂ ಕೂಡ ಕಟ್ಟಿಸಿಕೊಟ್ಟಿದ್ದರು. ತ್ರಯಂಬಕ ಹೆಗಡೆಯವರ
ಅಕ್ಕರೆಗೆ ತಕ್ಕಂತೆ ಕುಟ್ಣ ನಂಬಿಕೆಯಿಂದಲೇ ಕೆಲಸ ಮಾಡುತ್ತಿದ್ದ.
ಇಂತಿದ್ದಾಗಲೇ ಯಜಮಾನರಾದ ತ್ರಯಂಬಕ ಹೆಗಡೆಯವರಿಗೆ ಮದುವೆಯಾಗಿತ್ತು. ಮೊದಲ
ಹೆರಿಗೆಯಲ್ಲಿ ಹೆಗಡೆಯವರ ಮಡದಿ ಸುಂದರ ಹೆಣ್ಣು ಕೂಸನ್ನೂ, ಎರಡನೇ ಹೆರಿಗೆಯಲ್ಲಿ ಗಂಡು ಕೂಸನ್ನೂ ಹಡೆದುಕೊಟ್ಟಿದ್ದಳು.
ಮನೆಯ ಆಳಾಗಿದ್ದರೂ ಕುಟ್ಣ ಈ ಮಕ್ಕಳನ್ನು ಅಕ್ಕರೆಯಿಂದ ಬೆನ್ನ ಮೇಲೆ, ಹೆಗಲ ಮೇಲೆ ಕೂರಿಸಿಕೊಂಡು ಪ್ರೀತಿಯಿಂದ
ಬೆಳೆಸಿದ್ದ. ಕಾಡು, ಮಳೆ, ಬೆಟ್ಟ, ಬಯಲು, ತೋಟ, ಗದ್ದೆಗಳನ್ನು ಪರಿಚಯಿಸಿದ್ದ. ಇಲಿ ಹಿಡಿಯಲು ಪಂಜರವನ್ನು
ಮಾಡುವುದು, ವಾಟೆಗಳವನ್ನು ಕಡಿದು ಅದಕ್ಕೆ ಆರು ಕಣ್ಣುಗಳನ್ನು ಕೊರೆದು ಕೊಳಲನ್ನು ಮಾಡುವುದು, ಕೊಡಸವೋ,
ಲಾವಂಚವೋ ಬಳ್ಳಿಯನ್ನು ತಂದು ಅದರಿಂದ ಬುಟ್ಟಿಯನ್ನು ಮಾಡುವುದು ಹೀಗೆ ತನಗೆ ಗೊತ್ತಿದ್ದ ಪ್ರಕೃತಿಯ
ಜತೆಗಿನ ವಿಶಿಷ್ಟ ಪಾಠಗಳನ್ನೆಲ್ಲ ಅವರಿಗೂ ಹೇಳಿಕೊಟ್ಟಿದ್ದ. ಹೀಗೆ ಹೇಳಿಕೊಡುತ್ತಿದ್ದ ಕಾರಣಕ್ಕೆ
`ಮಕ್ಕಳನ್ನ ಹಾಳು ಮಾಡ್ತಿದ್ದ ಕುಟ್ಣ..’ ಎಂದು ತ್ರಯಂಬಕ ಹೆಗಡೆಯವರ ತಾಯಿಯಿಂದ ಬೈಗುಳಕ್ಕೂ ತುತ್ತಾಗಿದ್ದ.
ಹೀಗಿದ್ದಾಗಲೇ ಒಂದು ದಿನ ತ್ರಯಂಬಕ ಹೆಗಡೆಯವರು ಕುಟ್ಣನಿಗೆ ಮದುವೆ ಮಾಡಬೇಕು
ಎಂದು ಹೇಳಿದ್ದರು. `ಹುಡುಗಿ ಹುಡ್ಕಿದರೆ ಮದುವೆ ಆಗ್ತೀಯೇನೋ ಕುಟ್ಣ..’ ಎಂದೂ ಕೇಳೀದ್ದರು. ಕುಟ್ಣ
ನಾಚಿಕೆಯಿಂದ ತಲೆ ತಗ್ಗಿಸಿದ್ದ.
(ಮುಂದುವರಿಯುತ್ತದೆ)