Saturday, October 28, 2017

ಚೌಕಟಿ ಹೆಗಡೆ ಪುರಾಣ

ಚೌಕಳಿ ಚೌಕಳಿ ಅಂಗಿ, ಮಾಸಲು ಮಣ್ಣ ಬಣ್ಣದ ದೊಗಳೆ ಪ್ಯಾಂಟು ಹಾಕಿಕೊಂಡ ಅನಾಮತ್ತು ಆರಡಿ ಮೂರಿಂಚು ಎತ್ತರದ ಆದರೆ ಅಷ್ಟೇನೂ ದೃಢಕಾಯವಲ್ಲದ ಬಡಕಲು ಶರೀರದ ವ್ಯಕ್ತಿ ನಮ್ಮೂರ ದಾರಿಯಲ್ಲಿ ನಡೆದು ಬರುತ್ತಿದ್ದಾನೆ ಎಂದರೆ ಖಂಡಿತವಾಗಿಯೂ ಅವನು ಚೌಕಟಿ ಹೆಗಡೆಯೇ ಹೌದು ಎಂಬುದು ನಮ್ಮೂರು ಮಾತ್ರವಲ್ಲ ಸುತ್ತಮುತ್ತಲ ಫಾಸಲೆಯ ಚೌಕಟಿ ಹೆಗಡೆಯನ್ನು ಬಲ್ಲಾದವರ ಅಭಿಪ್ರಾಯ. ಮನೇಗದ್ದೆಯ ಶಿರಿ ಹೆಗಡೆ ಎಂಬ ಸ್ವಲ್ಪ ವಿಶಿಷ್ಟವಾದ ಮನೋಭಾವದ ಹಾಗೂ ಉಳಿದಂತೆ ಸೀದಾಸಾದ ಆದ ವ್ಯವ್ಯಕ್ತಿ ಚೌಕಟಿ ಹೆಗಡೆ ಎಂದು ಹೆಸರಾಗಿ ಎಲ್ಲರ ಮನಸ್ಸಿನಲ್ಲಿಯೂ ಅಚ್ಚಳಿಯದೇ ಉಳಿದುಕೊಂಡಿದ್ದು ಮಾತ್ರ ಶತಮಾನದ ವೈಶಿಷ್ಟ್ಯ ಎಂಬ ಖ್ಯಾತಿ ನಮ್ಮ ಭಾಗದಲ್ಲಿದೆ.
ಒಂದಾನೊಂದು ಕಾಲದಲ್ಲಿ, ತನ್ನ ಯವ್ವನದಲ್ಲಿ ಮನೆಗದ್ದೆ ಶ್ರೀಧರಮೂರ್ತಿ ಹೆಗಡೆ ಎಂಬ ಪೂರ್ಣನಾಮಧೇಯವನ್ನು ಹೊಂದಿದ್ದ ಈ ವ್ಯಕ್ತಿ ಕಾಲಾಂತರದಲ್ಲಿ ಶಿರಿ ಹೆಗಡೆಯಾಗಿ ಬದಲಾಗಿದ್ದನ್ನು ಕಂಡವರು ಅನೇಕರಿದ್ದಾರೆ. ಇಂತಹ ಶಿರಿ ಹೆಗಡೆಯೇ ತದನಂತರದಲ್ಲಿ, ಯಾವುದೋ ಒಂದು ಹಂತದಲ್ಲಿ ಚೌಕಟಿ ಹೆಗಡೆಯಾಗಿ ಅಭಿದಾನವನ್ನು ಪಡೆದುಕೊಂಡಿರುವುದು ಹಲವರಲ್ಲಿ ಎಂದೂ ಮರೆಯಲಾಗದಂತಹ ವಿಸ್ಮಯದ ಸಂಗತಿ.
 ಮೂಲತಃ ಆರೆಕರೆ ಭಾಗಾಯ್ತದ ಜಮೀನನ್ನು ಹೊಂದಿದ್ದ ಶಿರಿ ಹೆಗಡೆ ಒಂದು ಕಾಲದಲ್ಲಿ ದೊಡ್ಡ ಕುಳ. ಅಲ್ಲದೇ ಕೈಕಾಲಿಗೂ ಆಳು-ಕಾಳು ಹೊಂದಿದ್ದ. ಅದಕ್ಕಿಂತಲೂ ಹೆಚ್ಚಾಗಿ ಒಂದಾನೊಂದು ಕಾಲದಲ್ಲಿ ಹೈನೋದ್ಯಮದ ಪಂಟರ್ ಈತ. ಮನೆಯಲ್ಲಿ ಏನಿಲ್ಲವೆಂದರೂ ಕನಿಷ್ಟ 15ಕ್ಕೂ ಹೆಚ್ಚಿನ ಕಾಲ್ನಡೆಗಳಿದ್ದವು ಎಂದರೆ ಆತನ ಹೈನುಗಾರಿಕೆಯ ಹೆಚ್ಚುಗಾರಿಕೆಯನ್ನು ಅರಿಯಲೇಬೇಕು ಬಿಡಿ. ಆದರೆ ಕಾಲಾನಂತರದಲ್ಲಿ ಅದೆಲ್ಲವನ್ನೂ ಕಳೆದುಕೊಂಡಿದ್ದು ಮಾತ್ರ ಜಗತ್ತಿನ ಬದಲಾಣೆಗೆ ಸಾಕ್ಷಿಯಾಗಿದ್ದು ಸುಳ್ಳಲ್ಲ. ಜಮೀನನ್ನು ಹೊಂದಿದ್ದ ಸಂದರ್ಭದಲ್ಲಿ  ಶ್ರೀಧರಮೂರ್ತಿ ಹೆಗಡೇರು ಎನ್ನುವ ಗೌರವವನ್ನು ಗಳಿಸಿಕೊಂಡಿದ್ದವನು ತನ್ನ ಜಮೀನು ಹಾಗೂ ಕೊಟ್ಟಿಗೆಯಲ್ಲಿನ ರಾಸುಗಳನ್ನು ಕಳೆದುಕೊಂಡ ಹಾಗೆಲ್ಲ ಹೆಸರು, ಗೌರವವನ್ನೂ ಕಳೆದುಕೊಂಡಿದ್ದ. ಆರೆಕರೆ ಜಮೀನು ಮೂರೆಕರೆಗೆ ಇಳಿದಾಗ ಶಿರಿ ಹೆಗಡೆಯಾದ ಈತ ಎಲ್ಲ ಜಮೀನು ಕಳೆದುಕೊಂಡು ಅಕ್ಷರಶಃ ಬೀದಿಗೆ ಬಿದ್ದ ಸಂದರ್ಭದಲ್ಲೇ ಚೌಕಟಿ ಹೆಗಡೆಯಾಗಿ ಬದಲಾಗಿದ್ದ.
 ಚೌಕಟಿ ಹೆಗಡೆ ಆರು ಅಡಿ ಮೂರಿಂಚು ಎತ್ತರದವನು ಎಂದು ಆಗಲೇ ಹೇಳಿದೆನಲ್ಲ ಮಾರಾಯ್ರೇ. ಆತನಿಗೆ ಚೌಕಟಿ ಹೆಗಡೆ ಎಂಬ ಹೆಸರು ಬರಲು ಕಾರಣ ಏನು ಎನ್ನುವುದನ್ನು ಹೇಳದೇ ಇದ್ದರೆ, ಸ್ವಾರಸ್ಯವೇ ಇರುವುದಿಲ್ಲ ಬಿಡಿ. ಇಂತಹ ಮಾಸ್ಟರ್ಪೀಸ್ ಕಟೌಟ್ ಚೌಕಟಿ ಹೆಗಡೆ ಆಗೀಗ ನಮ್ಮೂರಿಗೆ ಬರುತ್ತಾನೆ. ಚೌಕಟಿ ಹೆಗಡೆಯನ್ನು ಬಲ್ಲಾದವರಿಗೆ ಆತ ದೂರದಿಂದಲೇ ಇಂವ ಇಂತವನೇ ಎಂಬುದು ನಜರಿಗೆ ಬರುತ್ತದೆ. ಆದರೆ ಊರಿಗೆ ಯಾರಾದರೂ ಹೊಸಬರು ಬಂದರೆ ಮಾತ್ರ ಇವರು ಯಾರು ಬಲ್ಲಿರೇನು ಎಂದು ಮೂಗಿನ ಒಳಗೆ ಬೆರಳಿಡುವುದು ಖಚಿತ. ಹೀಗೆ ಒಂದು ಯಮಗಂಡ ಕಾಲದಲ್ಲಿ ಈತ ನಮ್ಮೂರಿಗೆ ಕಾಲಿರಿಸಿದ್ದ. ಆ ಸಂದರ್ಭದಲ್ಲಿ ನಮ್ಮೂರಿನಲ್ಲಿ ಏನೋ ಒಂದು ವಿಶೇಷ ಕಾರ್ಯಕ್ರಮದ ಸಂಭ್ರಮ. ನೂರಾರರು ಜನರು ನೆಂಟರು-ಇಷ್ಟರು ನಮ್ಮೂರಿನಲ್ಲಿ ಗೌಜಿಯನ್ನು ಹುಟ್ಟುಹಾಕಿದ್ದರು. ನೂರಾರು ಜನರು ಸೇರಿದ್ದ ಸಂದರ್ಭದಲ್ಲಿ ಚೌಕಟಿ ಹೆಗಡೆ ಊರಿನ ಫಾಸಲೆಯಲ್ಲಿ ಕಾಲಿಟ್ಟಾಗ ಕೇಳಬೇಕೇ? ಒಂದಲ್ಲಾ ಒಂದು ಕಡೆ ಈತ ಕ್ವಶ್ಚನ್ ಮಾರ್ಕ್ ಆಗದೇ ಇರುತ್ತಾನೆಯೇ? ಆ ಸಂದರ್ಭದಲ್ಲಿ ನಮ್ಮೂರಿನಲ್ಲಿ ದಿವ್ಯ ಉಪಸ್ಥಿತಿ ಹೊಂದಿದ್ದ ವ್ಯಕ್ತಿಯೊಬ್ಬನಿಗೆ ಶಿರಿ ಹೆಗಡೆ ಬಹಳ ಕುತೂಹಲಕರವಾಗಿ ಕಂಡಿದ್ದ. ಹೇಳಿ ಕೇಳಿ ಅದು ಇಸ್ಪೀಟ್, ರಮ್ಮಿ, ಅಂದರ್ ಬಾಹರ್ನ ಖದರ್ರಿನ ಕಾಲ. ಊರಿಗೆ ಬಂದ ಬಹುತೇಕರು ಆ ಅಂತರಾಷ್ಟ್ರೀಯ ಕ್ರೀಡೆಯಲ್ಲಿ ಗಿನ್ನಿಸ್ ರೆಕಾರ್ಡ್ ಹೋಲ್ಡರ್ಗಳು.
 ಶಿರಿ ಹೆಗಡೆಯನ್ನು ನೋಡಿದ ವ್ಯಕ್ತಿ ಸ್ವಲ್ಪ ತಮಾಷೆಯ ಸ್ವಭಾವದವನೂ ಆಗಿದ್ದ. ಅಲ್ಲದೇ ಅವರಿವರನ್ನು ಕಾಲೆಳೆಯುತ್ತ, ವ್ಯಂಗ್ಯವಾಗಿ ಆಡಿಕೊಳ್ಳುತ್ತ ಇರುವವನೂ ಆಗಿದ್ದ. ಅಂತಹವನು ಶಿರಿ ಹೆಗಡೆಯನ್ನು ಕಾಡಿಸಲು ಮುಂದಾದ. ಶಿರಿ ಹೆಗಡೆಗೆ ಏನಾದರೂ ಬಿರುದು, ಬಾವಲಿಗಳನ್ನು ನೀಡಬೇಕಲ್ಲ ಎಂಬ ಅಂಶ ಆತನ ಮನಸ್ಸಿನಲ್ಲಿ ಮೂಡಿತು. ಆ ವ್ಯಕ್ತಿಗೆ ಶಿರಿ ಹೆಗಡೆ ಇಸಪೀಟ್ ಆಟದ ಚೌಕಟ್ (ಡೈಸ್)ನಂತೆ ಕಾಣಿಸಿದನಂತೆ. ಚೌಕಟ್ ಹೇಗೆ ಉದ್ದುದ್ದವಾಗಿ ಇರುತ್ತದೆಯೋ ಅದೇ ರೀತಿ ಕಾಣಿಸಿದ್ದನಂತೆ. ಅಲ್ಲದೇ ದುರದೃಷ್ಟವೋ ಅಥವಾ ಎಂದಿನಂತೇ ಸಹಜ ಸಂಗತಿಯೋ ಏನೋ ಆ ದಿನ ಶಿರಿ ಹೆಗಡೆ ಚೌಕ ಚೌಕ ಬಣ್ಣದ ಡಿಸೈನ್ ಹೊಂದಿದ್ದ ಅಂಗಿಯನ್ನು ಹಾಕಿಕೊಂಡು ಬಂದಿದ್ದ. ಈ ಕಾರಣದಿಂದಲೇ ಶಿರಿ ಹೆಗಡೆಯನ್ನು ನೋಡಿ ವ್ಯಕ್ತಿ `ಇವನ್ಯಾರೋ ಚೌಕಟಿ ಹೆಗಡೆ... ಚೌಕಳಿ ಚೌಕಳಿ ಮನೆಯಂತಿದ್ದಾನಲ್ಲ' ಎಂದು ನಾಲ್ಕು ಜನರಿಗೆ ಕೇಳುವಂತೆಯೇ ಕರೆದುಬಿಟ್ಟಿದ್ದ. ಅಂದಿನಿಂದಲೇ ಶಿರಿ ಹೆಗಡೆ ಎಂಬ ಹೆಸರು ಮರೆಯಾಗಿ ಚೌಕಟಿ ಹೆಗಡೆ ಎಂಬ ಹೆಸರು ಮನೆಗದ್ದೆಯ  ಶ್ರೀಧರಮೂರ್ತಿಗೆ ಪ್ರಾಪ್ತವಾಗಿತ್ತು.
 ಇನ್ನು ಮುಂದಿನ ಸಂದರ್ಭಗಳಲ್ಲೆಲ್ಲ ಚೌಕಟಿ ಹೆಗಡೆಯನ್ನು ಚೌಕಟಿ ಹೆಗಡೆ ಎಂದೇ ಕರೆಯೋಣ. ಪ್ರಸ್ತುತ ನಮ್ಮ ಕಥೆಯಲ್ಲಿ ಚೌಕಟಿ ಹೆಗಡೆಯ ಪುರಾಣ ಹೇಳುವುದೇ ಆಗಿರುವುದರಿಂದ ಶ್ರೀಧರಮೂರ್ತಿ ಹೆಗಡೆ ಎಂಬ ಹೆಸರು ಪರಕೀಯವಾಗುತ್ತದೆ. ಹೀಗಾಗಿ ಚೌಕಟಿ ಎಂಬ ಹೆಸರಿನಲ್ಲಿಯೇ ಮುಂದುವರಿಯೋಣ. ಚೌಕಟಿ ಹೆಗಡೆಯ ಗಾತ್ರವನ್ನೇನೋ ಹೇಳಿಯಾಯಿತು. ಅಲ್ಲದೇ ಆತನ ವಸ್ತ್ರವಿನ್ಯಾಸವನ್ನೂ ಅರುಹಿ ಆಯಿತು. ಇನ್ನುಳಿದ ಆತನ ವಿವರಗಳನ್ನು, ಪ್ರವರಗಳನ್ನೆಲ್ಲ ಹೇಳಲೇಬೇಕಲ್ಲ ಮಾರಾಯ್ರೇ.. ಇವುಗಳಲ್ಲಿಯೇ ಇದೆ ನೋಡಿ ಆಸಕ್ತಿದಾಯಕ ಅಂಶಗಳು.  ಚೌಕಟಿ ಹೆಗಡೆಯ ಬಾಹ್ಯ ರೂಪಗಳು ಎಷ್ಟು ಮಹತ್ವದ್ದೆನ್ನಿಸುತ್ತವೆಯೋ, ಆತನ ಬಿಳಿಯ ಗಡ್ಡ ಕೂಡ ಇನ್ನೊಂದು ವಿಶಿಷ್ಟ ಅಂಶಗಳಲ್ಲಿ ಒಂದು. ಆತನ ಗಡ್ಡ ಬಿಳಿಯದೆಂದರೆ ಬಿಳಿಯದು ಖಂಡಿತವಾಗಿಯೂ ಅಲ್ಲ ಬಿಡಿ. ಅದೊಂಥರಾ ಮಾಸಿದ ಬಿಳಿ ಬಣ್ಣ ಅಥವಾ ಕಂದು ಎಂದರೆ ತಪ್ಪಾಗುವುದಿಲ್ಲ ನೋಡಿ. ಹಾಲುಬಣ್ಣದ ಬಿಳುಪು ಕಂದಾಗಲು ಮುಖ್ಯಕಾರಣ ಎಂದರೆ ಆತನ ಮೋಟು ಬೀಡಿ. ಹಾ ಹೇಳಲು ಮರೆತಿದ್ದೆ ನೋಡಿ, ಈ ಚೌಕಟಿ ಹೆಗಡೆ ಬೀಡಿ ಸೇದುವುದರಲ್ಲಿ ಎತ್ತಿದ ಕೈ. ಆದರೆ ಆತ ಪೂತರ್ಿ ಬೀಡಿಯನ್ನು ಸೇದಿದ್ದನ್ನು ಯಾವತ್ತೂ ಕಂಡವರಿಲ್ಲ. ಆತ ಬೀಡಿ ಸೇದುತ್ತಿದ್ದ ಸಂದರ್ಭದಲ್ಲಿ ಪ್ರತಿಯೊಬ್ಬರೂ ಚೌಕಟಿ ಹೆಗಡೆ ಕೈಯಲ್ಲಿ ಮೋಟು ಬೀಡಿಯನ್ನೇ ಕಂಡಿದ್ದಾರೆ. ಈ ಕಾರಣದಿಂದಲೇ ಮೋಟು ಬೀಡಿಯ ಚೌಕಟಿ ಹೆಗಡೆ ಎಂದು ಕರೆಯುವವರೂ ಇದ್ದಾರೆ. ಇಂತಹ ಮೋಟು ಬೀಡಿಯ ಹೊಗೆ ತಾಗಿದ ಕಾರಣದಿಂದ ಚೌಕಟಿ ಹೆಗಡೆಯ ಗಡ್ಡದ ರೂಪು ಬದಲಾಗಿದೆ ಎಂದು ಹೇಳುವವರೂ ಇದ್ದಾರೆ.
 ಚೌಕಟಿ ಹೆಗಡೆಯ ಹಲ್ಲುಗಳ ಬಗ್ಗೆ ಹೇಳಬೇಕು. ಈ ಹಲ್ಲುಗಳು ತಮ್ಮ ಮೂಲ ರೂಪ, ಬಣ್ಣ ಹಾಗೂ ವಾಸನೆಯನ್ನು ಕಳೆದುಕೊಂಡು ಹಲವು ದಶಕಗಳೇ ಕಳೆದಿವೆ. ಈತನ ಹಲ್ಲಿನ ನಿಜವಾದ ರೂಪ ಕಂಡವರು ಯಾರೂ ಇಲ್ಲ ಎನ್ನಲಾಗುತ್ತದೆ. ಸಹಜವಾಗಿ ಪ್ರತಿಯೊಬ್ಬರ ಹಲ್ಲುಗಳ ಬಣ್ಣ ಬಿಳಿ. ಮತ್ತೆ ಕೆಲವರ ಬಣ್ಣ ಹಳದಿಯೂ ಇರುತ್ತದೆ ಬಿಡಿ. ಆದರೆ ಚೌಕಟಿ ಹೆಗಡೆಯ ಮೇಲ್ಪಂಕ್ತಿ ಹಾಗೂ ಕೆಳ ಪಂಕ್ತಿಯ ತಲಾ ನಾಲ್ಕು ಹಲ್ಲುಗಳ ಬಣ್ಣ ಕಡುಗೆಂಪು. ಇನ್ನುಳಿದ ಹಲ್ಲುಗಳಲ್ಲಿ ಒಂದೆರಡು ಹಾಳಾಗಿರುವ ಕಾರಣ ಅವುಗಳ ಬಣ್ಣ ನೀಲಿ. ಕವಳ, ಗುಟ್ಕಾ, ತಂಬಾಕಿನ ಕಾರಣದಿಂದ ಹಲ್ಲುಗಳು ಈ ಬಣ್ಣಕ್ಕೆ ಬಂದಿವೆ ಎನ್ನುವ ಅಭಿಪ್ರಾಯ ಚೌಕಟಿ ಹೆಗಡೆಯ ಕುರಿತು ದೀರ್ಘ ಸಂಶೋಧನೆ ಮಾಡಿದದ ವ್ಯಕ್ತಿಗಳದ್ದು. ಬಿಡಿ ಈತನೂ ಅಷ್ಟೇ ದಿನಕ್ಕೆ ಕನಿಷ್ಟ ಒಂದು ಡಜನ್ನಷ್ಟು ಕವಳ ಹಾಕುತ್ತಾನೆ. ಪ್ರತಿಯೊಂದು ಕವಳಕ್ಕೂ ಅರ್ಧ ಎಸಳು ತಂಬಾಕು ಬೇಕೇ ಬೇಕು. ಇನ್ನು ಗುಟ್ಕಾ ಎಷ್ಟು ಎನ್ನುವುದು ಮಾತ್ರ ಲೆಕ್ಖ ಇಟ್ಟವರಿಲ್ಲ ನೋಡಿ.
 ಚೌಕಟಿ ಹೆಗಡೆ ಎಂಬುವವನು ಮೇಲ್ನೋಟಕ್ಕೆ ಒಳ್ಳೆಯವನು. ಆದರೆ ಆತನಲ್ಲಿಯೂ ಒಂದೆರಡು ಕೆಟ್ಟಗುಣಗಳಿವೆ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ಗುಟ್ಟೇ ಸರಿ. ಆತ ಸಣ್ಣ ಪ್ರಮಾಣದಲ್ಲಿ ಕಳ್ಳತನ ಮಾಡುತ್ತಾನೆ ಎನ್ನುವ ಮಾಹಿತಿಗಳು ಬಹುತೇಕರಿಗೆ ತಿಳಿದಿದೆ ಬಿಡಿ. ಹಾಗಂತ ಆತ ಯಾರದ್ದೋ ಮನೆಗೆ ಕನ್ನವಿಕ್ಕಿದ್ದಾನೆ ಎಂದೋ ಅಥವಾ ಯಾರ ಮನೆಯಲ್ಲಿಯೋ ಇರುವ ಚಿಕ್ಕಪುಟ್ಟ ಸಾಮಾನು-ಸರಂಜಾಮುಗಳನ್ನು ಕದ್ದುಕೊಂಡು ಹೋಗುತ್ತಾನೆ ಎಂದುಕೊಂಡರೆ ಖಂಡಿತವಾಗಿಯೂ ಅದು ತಪ್ಪು. ಮನೆಗಳಿಗೆ ಸಂಬಂಧಿಸಿದ ಯಾವುದೇ ಒಂದು ವಸ್ತುವನ್ನೂ ಕೂಡ ಆತ ಕದ್ದುಕೊಂಡು ಹೋಗುವುದಿಲ್ಲ. ಈ ದೆಸೆಯಿಂದ ಚೌಕಟಿ ಹೆಗಡೆ ಬಹಳ ಒಳ್ಳೆಯವನು ಬಿಡಿ. ಆದರೆ ಆತ ತೋಟಗಳಲ್ಲಿನ ಸಣ್ಣಪುಟ್ಟ ವಸ್ತುಗಳನ್ನು ಖಂಡಿತವಾಗಿಯೂ ಕದ್ದೊಯ್ಯುತ್ತಾನೆ. ಸಾಮಾನ್ಯವಾಗಿ ನಮ್ಮೂರಿನ ತೋಟಗಳಲ್ಲಿ, ತೋಟಪಟ್ಟಿಯ ಮಧ್ಯದಲ್ಲಿ ಅಲ್ಲಲ್ಲಿ ಸೂಜಿ ಮೆಣಸಿನ ಗಿಡಗಳನ್ನು ಬೆಳೆಯುತ್ತಾರೆ. ತೋಟದ ಫಲವತ್ತತೆಗೆ ತಕ್ಕಂತೆ ಉತ್ತಮವಾಗಿ ಕಾಯಿಗಳನ್ನು ಬಿಡುತ್ತವೆ. ಇಂತಹ ಸೂಜು ಮೆಣಸನ್ನು ಆತ ಕೊಯ್ದುಕೊಂಡು ಹೋಗುತ್ತಾನೆ ಎನ್ನುವುದು ಆತನ ಮೇಲೆ ಇರುವ ಗಂಭೀರ ಆರೋಪ.
 ಅಷ್ಟೇ ಅಲ್ಲದೇ ಶೀಗೆಕಾಯಿಗಳು, ಅಣಲೆ ಕಾಯಿಗಳು, ಅಂಟುವಾಳ ಕಾಯಿಗಳು, ಜಾಯಿಕಾಯಿ, ಕಂಚೀಕಾಯಿ ಹೀಗೆ ವಿವಿಧ ಸಾಂಬಾರ ಪದಾರ್ಥಗಳನ್ನು ಈತ ಕೊಯ್ದುಕೊಂಡು ಹೋಗುತ್ತಾನೆ ಎನ್ನುವುದು ಈತನ ಮೇಲೆ ಇರುವ ಮತ್ತಷ್ಟು ಆರೋಪಗಳು. ಈ ಕುರಿತು ಚೌಕಟಿ ಹೆಗಡೆಯನ್ನು ಕೇಳಿದರೆ ಆತ ಹೇಳುವುದೇ ಬೇರೆ ಬಿಡಿ. ಆತನ ಪ್ರಕಾರ ಇದು ತಪ್ಪಲ್ಲವೇ ಅಲ್ಲ. ಮಂಗನೋ ಅಥವಾ ಇನ್ಯಾವುದೋ ಕಾಡು ಪ್ರಾಣಿಗಳು ಹಾಳು ಮಾಡುವುದನ್ನು ತಾನು ಕೊಯ್ಯುತ್ತೇನೆ ಅಷ್ಟೇ ಎನ್ನುತ್ತಾನೆ. ಸಾಮಾನ್ಯವಾಗಿ ನಮ್ಮೂರಿನಲ್ಲಿ ಇಂತಹ ಬೆಳೆಗಳನ್ನು ಕೊಯ್ದು ಮಾರಾಟ ಮಾಡುವುದರಲ್ಲಿ ಯಾರೂ ಆಸಕ್ತಿ ತೋರುವುದಿಲ್ಲ. ಆಗೀಗ ಮನೆ ಬಳಕೆಗೆ ಇಂತವನ್ನು ಕೊಯ್ಯುತ್ತಾರೆ ಬಿಟ್ಟರೆ ಉಳಿದದ್ದೆಲ್ಲ ಕಾಡುಪ್ರಾಣಿಗಳ ಪಾಲಾಗುತ್ತದೆ. ಹೀಗಿರುವ ಸಂದರ್ಭದಲ್ಲಿ ತಾನು ಕೊಯ್ದರೆ ತಪ್ಪೇನಿಲ್ಲ ಎನ್ನುವುದು ಚೌಕಟಿ ಹೆಗಡೆಯ ವಾದ. ಈ ಕುರಿತು ಚಿಂತನೆ ನಡೆಸಿದಾಗ ಆತ ಹೇಳುವುದರಲ್ಲಿ ತಪ್ಪಿಲ್ಲ ಎಂದೂ ಅನ್ನಿಸುತ್ತದೆ. ಕೊಯ್ದಿದ್ದನ್ನು ಪಟ್ಟಾಗಿ ಒಣಗಿಸಿ, ಸಂಸ್ಕರಿಸಿ ನಾಲ್ಕು ಕಾಸು ಮಾಡಿಕೊಂಡು, ಆ ಕಾಸಿನಿಂದ ಗಣೇಶ ಬೀಡಿಯನ್ನೋ, ಮಂಗಳೂರು ಬೀಡಿಯನ್ನೋ ತೆಗೆದುಕೊಂಡು ಇಳಿಸಂಜೆಯ ಹೊತ್ತಿಗೆ ಧಮ್ಮು ಎಳೆದರೆ ಆತನಿಗೆ ಸಿಗುವ ಸುಖವೇ ಬೇರೆ ಬಿಡಿ.
 ಹಾ, ಇಷ್ಟು ಹೊತ್ತೂ ಕೂಡ ನೆನಪಾಗಿರಲಿಲ್ಲ ನೋಡಿ. ಆತನಲ್ಲಿನ ಇನ್ನೊಂದು ಪ್ರಮುಖ ಗುಣ ಎಂದರೆ ಓಸಿ. ದೋ ನಂಬರಿನ ಮಟ್ಕಾದಲ್ಲಿ ಚೌಕಟಿ ಹೆಗಡೆಯದ್ದು ಎತ್ತಿದ ಕೈ. ಪ್ರತಿದಿನವೂ ಚೌಕಟಿ ಹೆಗಡೆ ಕನಿಷ್ಟ ನೂರು ರೂಪಾಯಿ ಮೊತ್ತದ ಓಸಿಯನ್ನು ಆಡದೇ ಇದ್ದರೆ ಆತನಿಗೆ ನಿದ್ದೆ ಬರುವುದೂ ಇಲ್ಲವೇನೋ. ಪ್ರತಿದಿನ ಅವರಿವರ ಬಳಿ ನಿನಗೆ ಆ ಕನಸು ಬಿತ್ತಾ, ಈ ಕನಸು ಬಿತ್ತಾ ಎಂದು ಕೇಳುವ ಈತ ಕನಸಿನ ಆಧಾರದ ಮೇಲೆ ನಂಬರನ್ನು ಹುಡುಕಿ ತೆಗೆದು, ಆ ನಂಬರಿಗೆ ಹಣ ಹೂಡುವ ಕಾರ್ಯವನ್ನೂ ಮಾಡುತ್ತಾನೆ. ಇಂತಹ ವ್ಯಕ್ತಿಯ ಪಾಲಿಗೆ ನಾನು ಒಂದೆರಡು ಸಾರಿ ಅದೃಷ್ಟ ದೇವರಾಗಿದ್ದೆ. ನನ್ನ ಬಳಿಯೂ ಒಂದೆರಡು ಸಾರಿ ಕನಸಿನ ಬಗ್ಗೆ ಕೇಳಿದ್ದ ಈತ. ನಾನು ನನಗೆ ರಾತ್ರಿಯ ವೇಳೆ ಬೀಳುತ್ತಿದ್ದ ಕನಸಿನ ಬಗ್ಗೆ ಹೇಳುತ್ತಿದ್ದೆ. ಇದರ ಆಧಾರದ ಮೇಲೆ ಯಾವುದೋ ರೇಖಾಗಣಿತವನ್ನು ಲೆಕ್ಕ ಹಾಕಿ ನಂಬರು ಹುಡುಕಿ ಅದಕ್ಕೆ ದುಡ್ಡು ಹೂಡಿದ್ದ. ವಿಚಿತ್ರವೆಂದರೆ ಒಂದೆರಡು ಸಾರಿ ದುಡ್ಡು ಬಂದೇ ಬಿಟ್ಟಿತ್ತು. ಆ ನಂತರದಲ್ಲಿ ನನ್ನ ಬೆನ್ನು ಬಿದ್ದು, ಕನಸು ಬಿದ್ದರೆ ಹೇಳು ಮಾರಾಯ ಎಂದು ತಿಂಗಳು ಗಟ್ಟಲೆ ಕಾಡಿದ್ದು ನನಗೆ ಸದಾ ನೆನಪಿನಲ್ಲಿ ಇತ್ತು. ಆ ನಂತರ ಎಷ್ಟೋ ದಿನಗಳ ವರೆಗೆ ನಾನು ಚೌಕಟಿ ಹೆಗಡೆಯ ನಜರಿಗೆ ಬೀಳದಂತೆ ತಪ್ಪಿಸಿಕೊಂಡು ಓಡಾಡಿದ್ದೆ..!
 ಇಂತಹ ಚೌಕಟಿ ಹೆಗಡೆ ಇತ್ತೀಚಿನ ದಿನಗಳಲ್ಲಿ ಭಾರೀ ಸುಭಗನಾಗಿದ್ದಾನೆ ಎನ್ನುವ ಮಾತುಗಳು ನನ್ನನ್ನೂ ಸೇರಿದಂತೆ ಹಲವರಲ್ಲಿ ಅಚ್ಚರಿಯನ್ನು ಹುಟ್ಟು ಹಾಕಿದೆ. ಚೌಕಟಿ ಹೆಗಡೆ ಓಸಿ ಬಿಟ್ಟನಂತೆ ಎನ್ನುವುದು ನಮಗೆ ಮೊಟ್ಟಮೊದಲು ಕೇಳಿ ಬಂದ ಸುದ್ದಿ. ಅಬ್ಬ ಏನೋ ಆಗಿದೆ ಚೌಕಟಿ ಹೆಗಡೆಗೆ ಅಂದುಕೊಳ್ಳುತ್ತಿದ್ದಾಗಲೇ, ಚೌಕಟಿ ಹೆಗಡೆ ಮೋಟು ಬೀಡಿಯ ಸಹವಾಸವನ್ನೂ ಬಿಟ್ಟನಂತೆ ಎನ್ನುವ ಮಾತು ಕಿವಿಗೆ ಬಿದ್ದಾಗ ಮಾತ್ರ ನಮಗೆ ಶಾಕ್ ಆಗಿದ್ದು ಸತ್ಯ. ಇದೇನಿದು ಚೌಕಟಿ ಹೆಗಡೆ ಇದ್ದಕ್ಕಿದ್ದಂತೆ ಹೀಗಾದನಲ್ಲ ಎಂದುಕೊಳ್ಳುತ್ತಿರುವ ವೇಳೆಗೆ ಆತ ತಾನು ಕಳೆದುಕೊಂಡಿದ್ದನ್ನೆಲ್ಲ ಮತ್ತೆ ಸಂಪಾದಿಸಬೇಕು ಎಂಬ ಹುಕಿಗೆ ಬಿದ್ದಿದ್ದಾನಂತೆ ಎನ್ನುವ ಮಾತು ಕೇಳಿ ಬಂದಾಗ ಮೊದಲ ಬಾರಿಗೆ ನನಗೆ ಆತನ ಮೇಲೆ ಅಭಿಮಾನ ಉಕ್ಕಿತು. ಜಮೀನು, ರಾಸುಗಳನ್ನು ಮತ್ತೆ ಪಡೆಯಬೇಕು. ಅದೆಲ್ಲವನ್ನೂ ನ್ಯಾಯಯುತ ಮಾರ್ಗದಲ್ಲಿಯೇ ಸಂಪಾದಿಸಬೇಕು ಎನ್ನುವ ಆಶಯ ಇಟ್ಟುಕೊಂಡ ಚೌಕಟಿ ಹೆಗಡೆ ತೋಟಗಳಲ್ಲಿ ಮಾಡುತ್ತಿದ್ದ ಸಣ್ಣಪುಟ್ಟ ಕರಾಮತ್ತುಗಳನ್ನೂ ನಿಲ್ಲಿಸಿದ ಮಾಹಿತಿ ಸಿಕ್ಕವು. ಹಾಗಾದರೆ ಆತ ಮುಂದೇನು ಮಾಡಬಹುದು ಎಂದು ಆಲೋಚಿಸುತ್ತಿದ್ದ ಸಂದರ್ಭದಲ್ಲಿಯೇ ಆತ ಕೊಳಿ ಅಡಿಕೆ ವ್ಯಾಪಾರ ಸೇರಿದಂತೆ ಹಲವು ಸಣ್ಣ-ಪುಟ್ಟ ವ್ಯಾಪಾರ ನಡೆಸಲು ಆರಂಭಿಸಿದ ವಿಷಯ ತಿಳಿದು ಬೆರಗು ಮೂಡಿತು. ಇಷ್ಟೆಲ್ಲದದ ನಡುವೆ ನನಗೆ ಕಾಡಿದ್ದು ಹಾಗೂ ಕಾಡುತ್ತಿರುವುದೇನೆಂದರೆ ಚೌಕಟಿ ಹೆಗಡೆ ಇದ್ದಕ್ಕಿದ್ದಂತೆ ಸುಭಗನಾಗಿದ್ದು ಹೇಗೆ ಎನ್ನುವುದು..! ತಾನು ಕಳೆದುಕೊಂಡಿದ್ದನ್ನು ಮತ್ತೆ ಸಂಪಾದಿಸಲು ಮುಂದಾಗಿದ್ದೇಕೆ ಎನ್ನುವುದು ಖಂಡಿತವಾಗಿಯೂ ನನಗೆ ಗೊತ್ತಿಲ್ಲ ನೋಡಿ. ಅದನ್ನು ಹುಡುಕುವ ಯತ್ನ ಮಾಡುತ್ತಿದ್ದೇನೆ. ಗೊತ್ತಾದರೆ ಖಂಡಿತವಾಗಿಯೂ ತಿಳಿಸುತ್ತೇನೆ ಹಾ..!

Wednesday, October 25, 2017

ಪೇಪರ್ ಹಾಕುವ ಹುಡುಗನೂ ಕ್ಯಾಶ್ ಲೆಸ್

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ನಗದು ರಹಿತ ವ್ಯವಹಾರಕ್ಕೆ ನಗರದಲ್ಲಿ ಪೇಪರ್ ಹಾಕುವ ಯುವಕನೊಬ್ಬ ತನ್ನದೆ ಆದ ಕೊಡುಗೆ ನೀಡುತ್ತಿದ್ದು, ಎಲ್ಲರಿಗೂ ಮಾದರಿಯಾಗಿದ್ದಾನೆ.
ಶಿರಸಿಯ ಗಣೇಶ ನಗರದ ಮದನ ಬಿ. ಗೌಡ ಎನ್ನುವ ಯುವಕ ನಗದು ರಹಿತ ವ್ಯವಹಾರವನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸುತ್ತಿದ್ದಾನೆ.  ಕಳೆದ ಹತ್ತು ವರ್ಷಗಳಿಂದ ಈತ ಪೇಪರ್ ಹಾಕುತ್ತಿದ್ದು, ನಗರದ ಸುಮಾರು 300 ಮನೆಗಳಿಗೆ ಪ್ರತಿನಿತ್ಯ ದಿನಪತ್ರಿಕೆ ಹಂಚುತ್ತಾನೆ. ದುಡಿದು ತಿನ್ನುವ ಈತನಿಗೆ ನಗದು ರಹಿತ ವ್ಯವಹಾರ ಅನಿವಾರ್ಯವಲ್ಲ. ದೇಶ ಬದಲಾಗುವ ಸಂದರ್ಭದಲ್ಲಿ ನಾವೂ ಸಹ ಬದಲಾಗಬೇಕು ಎನ್ನುವ ಮಹತ್ವಾಕಾಂಕ್ಷೆಯಿಂದ ಮದನ್ ಈ ಕೆಲಸಕ್ಕೆ ಮುಂದಾಗಿದ್ದಾನೆ.
ಪ್ರತಿ ತಿಂಗಳು ದಿಪತ್ರಿಕೆಯ ಬಿಲ್ ಕಲೆಕ್ಟ ಮಾಡುವಾಗ ತನ್ನ ಅಕೌಂಟ್ ನಂಬರ್ ನೀಡಿ ಹಣವನ್ನು ಹಾಕಲು ಹೇಳುತ್ತಾನೆ. ಅದರ ಜೊತೆಗೆ ಬಿಲ್ ಹಿಂಬದಿಯಲ್ಲಿ ಪೆಟಿಎಮ್ ಹಾಗೂ ಭೀಮ್ ಆಪ್ ಬಳಸಿಯೂ ಸಹ ಹಣ ಸಂದಾಯ ಮಾಡುವ ವ್ಯವಸ್ಥೆಯನ್ನು ಕಲ್ಪಿಸಿದ್ದಾನೆ. ಈಗಾಗಲೇ ಸುಮಾರು 30 ಕ್ಕೂ ಅಧಿಕ ಜನರು ಇತನ ಜತೆ ನಗದು ರಹಿತ ವ್ಯವಹಾರಕ್ಕೆ ಕೈಜೋಡಿಸಿದ್ದಾರೆ.
ದೇಶದಲ್ಲಿ ಬದಲಾಣೆಯ ಹಾದಿಯಲ್ಲಿದೆ. ನಾವು ಸಹ ಬದಲಾಗಬೇಕಿದೆ. ಕಾಲಕ್ಕೆ ತಕ್ಕಂತೆ ನಾವು ಹೊಂದಿಕೊಂಡು ಹೋಗಬೇಕು. ನಾವು ಮೊದಲು ಯೋಜನೆಯನ್ನು ರೂಢಿಸಿಕೊಂಡರೆ ಇನ್ನೊಬ್ಬರಿಗೆ ತಿಳಿ ಹೇಳಲು ಸಾಧ್ಯ. ಆದ್ದರಿಂದ ನೋಟ್ ಬ್ಯಾನ್ ನಂತರದಿಂದ ನಾನು ನಗದು ರಹಿತ ವ್ಯವಹಾರ ಮಾಡುತ್ತಿದ್ದೇನೆ" ಎಂದು ಮದನ ಗೌಡ ಹೇಳುತ್ತಾರೆ.
 ಕೆಲವೊಂದು ಮಂದಿ ಕಡಿಮೆ ಹಣವನ್ನು ನಗದು ರಹಿತವಾಗಿ ನೀಡುವುದಕ್ಕೆ ಇಷ್ಟ ಪಡುವುದಿಲ್ಲ. ಈ ಪ್ರಯತ್ನಕ್ಕೆ ಜನರಿಂದ ಮಿಶ್ರ ಪ್ರತಿಕ್ರಿಯೆ ದೊರಕುತ್ತಿದೆ ಎಂದು ತಿಳಿಸಿದ್ದಾರೆ.


-----------
ಪೇಟ್ರೋಲ್ ಬಂಕ್, ಹೋಟೇಲ್ ಹೀಗೆ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡಗಳು ನಡೆಯುವ ಎಲ್ಲಾ ಕಡೆಯುವಲ್ಲಿಯೂ ನಾನು ನಗದು ರಹಿತವಾಗಿಯೇ ವ್ಯವಹಾರ ನಡೆಸುತ್ತೇನೆ. 
ಮದನ ಗೌಡ, 
ಪೇಪರ್ ಹಾಕುವ ಯುವಕ 

Thursday, October 19, 2017

ಮುಕ್ತಿ ವಾಹಿನಿ

ನಗುವವರೆಂದೂ ನನ್ನ ಜೊತೆ
ಪಯಣಿಸುವುದಿಲ್ಲ
ಕೇಕೆ ಕಲರವಗಳ ಸದ್ದು
ನನ್ನೊಳಿಲ್ಲ|

ಕೆಲವೊಮ್ಮೆ ಒಬ್ಬಂಟಿ
ಆಗಾಗ ಜಂಟಿ
ಬಂಧುಬಾಂಧವರು ಸುತ್ತ
ಬತ್ತದಂತ ಅಳುವೇ
ಸುತ್ತಮುತ್ತ |

ಬರುವವರಲ್ಲಿ ಮುಗಿಯದ
ಕಣ್ಣೀರು
ಬಿಕ್ಕುತ್ತ ಸಾಗುವವರೇ ಎಲ್ಲರೂ,
ಕಿವಿ ಗಡಚಿಕ್ಕಿದೆ
ತಮಟೆಯ ಸದ್ದು
ಯಮ ಸನಿಹಕೆ ಬಂದರೂ
ಅವನೆದೆಗೂ ಗುದ್ದು |

ಮನೆಯಿಂದ ಮಸಣ
ನನ್ನ ಏಕೈಕ ಮಾರ್ಗ
ನಡುವೆ ಪ್ರತಿಧ್ವನಿಸುವುದು
ಗೋವಿಂದ...ಗೋವಿಂದಾ..
ರಾಮ ನಾಮ ಸತ್ಯ ಹೇ...|

ನನಗೂ ನಗುವ
ಕೇಳುವ ಆಸೆಯಿದೆ
ಪುಟ್ಟ ಮಗುವ ಅಳುವ
ಹೊಸಹುಟ್ಟಿನ ಕೇಕೆಯ
ಕೇಳುವ ಆಸೆ ಹೆಚ್ಚಿದೆ |

ನಾನು ಮುಕ್ತಿ ವಾಹಿನಿ
ನನಗಿದೆ ಕರ್ತವ್ಯ
ಸತ್ತವರ ಹೊತ್ತೊಯ್ಯುವ
ಕೈಂಕರ್ಯ ನನ್ನದು
ಹುಟ್ಟುವವರ ಕರೆದೊಯ್ಯುವ
ಕನಸು ಕಾಣುವ ಅರ್ಹತೆಯೆನಗಿಲ್ಲ |

ಆದರೂ
ಕನಸು ಕಾಣುತ್ತೇನೆ ನಾನು
ಸತ್ತವರ ಹೊತ್ತೊಯ್ಯುವ
ಕಾರ್ಯದ ನಡುವೆಯೂ
ಹೊಸ ಹುಟ್ಟಿನ,
ಮಗುವಿನ ಅಳುವಿಗಾಗಿ |

ಅತ್ತಿತ್ತ ತುಯ್ದಾಡಿ
ತೊಟ್ಟಿಲಾಗುತ್ತೇನೆ ||


===================

(ಈ ಕವಿತೆಯನ್ನು ಬರೆದಿರುವುದು ಅಕ್ಟೋಬರ್ ೧೮, ೨೦೧೭ರಂದು ದಂಟಕಲ್ಲಿನಲ್ಲಿ)