Thursday, October 29, 2015

ಸಜ್ಜನರೊಡನೆ.. ಸಜ್ಜನಘಡದ ಕಡೆಗೆ -3

           ಆಟೋದಲ್ಲಿ ಲಗೆಜ್ ಹೇರುವ ಜಾಗದಲ್ಲಿ ನಾನು ಕುಳಿತಿದ್ದೆ. ಉಸಿರು ಕಟ್ಟುತ್ತಿತ್ತು. ಆಟೋ ಓಡಿಸುತ್ತಿದ್ದ ಚಾಲಕನ ಬಳಿ ಸಂಜಯ ಮಾತಿಗೆ ನಿಂತಿದ್ದ. ಸಜ್ಜನಘಡಕ್ಕೆ ಹೋಗುವುದು ಹೇಗೆ ಎಂಬ ವಿವರಗಳನ್ನು ಕೇಳಲು ಆರಂಭಿಸಿದ್ದ. ಸಜ್ಜನಘಡಕ್ಕೆ ಬಸ್ ವ್ಯವಸ್ಥೆ ಬಹಳ ಕಡಿಮೆ ಇದೆಯೆಂದೂ, ಯಾವುದಾದರೂ ಖಾಸಗಿ ವಾಹನಗಳನ್ನು ಮಾಡಿಕೊಂಡು ಹೋಗಬಹುದೆಂದೂ ಆಟೋ ಚಾಲಕ ತಿಳಿಸಿದ. ಮಾತಿಗಿಳಿದಿದ್ದ ಸಂಜಯ ಆತನ ಹೆಸರು ನೀಲೇಶ ಮಂತ್ರಿ ಎಂಬುದನ್ನು ಕೇಳಿ ತಿಳಿದುಕೊಂಡ. ಸಂಜಯ ಆಟೋವನ್ನು ಮಾಡಿಸಿಕೊಂಡು ಹೋದರೆ ಹೇಗೆ ಎನ್ನುವ ಬಗ್ಗೆ ಪ್ರಶಾಂತ ಭಾವನ ಬಳಿ ಕೇಳಿದ. ರೇಟು ಎಷ್ಟಾಗಬಹುದು ಎನ್ನುವ ಚರ್ಚೆ ನಡೆಯಲಾಗಿ ಕೊನೆಗೊಮ್ಮೆ ಆಟೋ ಮಾಡಿಸಿಕೊಂಡು ಹೋಗೋಣ ಎಂದು ಎಲ್ಲರೂ ಒಪ್ಪಿಕೊಂಡರು. 600 ರು. ಗೆ ಮಾತಾಯಿತು.
          ಸತಾರಾ ನಗರಕ್ಕೆ ಬಂದು ಆಟೋ ನಿಲ್ಲಿಸಿ, ಆಟೋದಲ್ಲಿದ್ದ ಎಲ್ಲರನ್ನೂ ಇಳಿಸಿದ ಆಟೋ ದ್ರೈವರ್ ನಮ್ಮನ್ನು ಕೂರಿಸಿಕೊಂಡು ಪೆಟ್ರೂಲ್ ಬಂಕಿನತ್ತ ಸಾಗಿದ. ಬಂಕಿನಲ್ಲಿ ಪೆಟ್ರೂಲ್ ತುಂಬಿಸಿಕೊಂಡವನೇ ನಮ್ಮ ಬಳಿ ದುಡ್ಡು ಕೇಳಿದಾಗ ಒಮ್ಮೆಲೆ ನಮಗೆ ಪಿಗ್ಗಿ ಬಿದ್ದೆವೇನೋ ಅನ್ನುವ ಅನುಮಾನ. ಆದರೆ ಆತನ ಆಟೋವನ್ನು ನಾವು ಇಳಿಯುವ ಕೆಲಸ ಮಾತ್ರ ಮಾಡಲಿಲ್ಲ. ಹಾಗಾಗಿ ಎಲ್ಲೋಗ್ತಾನೆ ನೋಡೋಣ ಎನ್ನುವ ಧೈರ್ಯ ನಮ್ಮಲ್ಲಿ ಮೂಡಿತು.
           ಬೆಳಗಿನ ಜಾವ 5 ಗಂಟೆ ಆಗಿದ್ದ ಕಾರಣ ಸತಾರಾದಲ್ಲಿ ಯಾವುದೇ ಪೆಟ್ರೋಲ್ ಬಂಕುಗಳು ಬಾಗಿಲು ತೆರೆದಿರಲಿಲ್ಲ. ಸತಾರಾ ನಗರಿಯಲ್ಲಿ ಒಂದೆರಡು ಕಡೆಗಳಲ್ಲಿ ಸುತ್ತಾಡಿಸಿದ ಆಟೋ ಡ್ರೈವರ್. ಆಮೇಲೆ ಮಾತು ಶುರು ಮಾಡಿದ ನೋಡಿ. ಇನ್ನು ಸಜ್ಜನಘಡಕ್ಕೆ ಹೋಗುವ ವರೆಗೆ ಅವನ ಬಾಯಲ್ಲಿನ ವಿಷಯವನ್ನೇ ಹೇಳುತ್ತೇನೆ.
          `ಇದು ನೋಡಿ ಸತಾರಾದ ಕ್ರಿಕೆಟ್ ಸ್ಟೇಡಿಯಂ. ಇಲ್ಲಿ ರಣಜಿ ಪಂದ್ಯಗಳು ಜಾಸ್ತಿ ನಡೆಯುತ್ತವೆ.'
          `ಈ ಸತಾರಾ ಇದೆಯಲ್ಲ, ಮಹಾರಾಷ್ಟ್ರದ ದೊಡ್ಡ ಜಿಲ್ಲೆಗಳಲ್ಲಿ ಇದೂ ಒಂದು. ಎಲ್ಲ ಸೌಲಭ್ಯಗಳೂ ಇಲ್ಲಿದೆ. ಸತಾರಾದ ಸುತ್ತಮುತ್ತ ಒಟ್ಟೂ ಏಳು ದೊಡ್ಡ ದೊಡ್ಡ ಬೆಟ್ಟಗಳಿವೆ. ಇವನ್ನು ತಾರಾ ಎಂದು ಕರೆಯುತ್ತಾರೆ. ಏಳು ನಕ್ಷತ್ರಗಳಿರುವ ಈ ಊರಗೆ ಒಂದಾನೊಂದು ಕಾಲದಲ್ಲಿ ಸಾತ್ ತಾರಾ ಎಂದು ಕರೆಯುತ್ತಿದ್ದರಂತೆ. ಇದೇ ಈಗ ಸತಾರಾ ಆಗಿದೆ. ಇದೋ ನೋಡಿ, ಈಗ ಸರಿಯಾಗಿ ಕಾಣುವುದಿಲ್ಲ. ಪೂರ್ತಿ ಬೆಳಕಾಗಲಿ. ಇಲ್ಲೊಂದು ದೈತ್ಯ ಗುಡ್ಡವಿದೆ. ಗುಡ್ಡದ ಮೇಲೊಂದು ಕೋಟೆ. ಅದನ್ನು ಅಜಿಂಕ್ಯತಾರಾ ಎಂದು ಕರೆಯಲಾಗುತ್ತದೆ. ಈ ಸುತ್ತಮುತ್ತಲ ಪ್ರದೇಶಗಳೆಲ್ಲ ಹಿಂದೂ ಸಾಮ್ರಾಟ ಶಿವಾಜಿ ಓಡಾಡಿದ ನಾಡು. ಇಲ್ಲೆಲ್ಲ ಶಿವಾಜಿಯ ಖುರಪುಟದ ಸದ್ದುಗಳಿವೆ..' ಎಂದು ಆಟೋ ಡ್ರೈವರ್ ಹಿಂದಿ ಹಾಗೂ ಮರಾಠಿ ಮಿಶ್ರಿತ ಭಾಷೆಯಲ್ಲಿ ಹೇಳುತ್ತಲೇ ಇದ್ದ. ನಾವು ಮೌನವಾಗಿ ಕೇಳುತ್ತಿದ್ದರೂ ಮಧ್ಯಮದ್ಯದಲ್ಲಿ, ಗೊಂದಲ ಬಗೆಹರಿಸಿಕೊಳ್ಳುತ್ತಿದ್ದೆವು.
            ಸತಾರಾದ ಬಾನಿನಲ್ಲೀ ಸೂರ್ಯ ಇನ್ನೂ ಹುಟ್ಟಿರಲಿಲ್ಲ. ಮೋಡಗಳು ಸಾಕಷ್ಟು ದಟ್ಟೈಸಿದ್ದರೂ ಮಳೆ ಸುರಿಯುವ ಲಕ್ಷಣಗಳಿರಲಿಲ್ಲ. ಗುಡ್ಡ ಹತ್ತಿ, ಇಳಿದು ಆಟೋ ಸಾಗುತ್ತಲೇ ಇತ್ತು. ಇದ್ದಕ್ಕಿದ್ದಂತೆ ಸುರಂಗವೊಂದು ನಮ್ಮೆದುರು ಕಾಣಿಸಿತು. ಹಾದು ಹೋಗುತ್ತಿದ್ದಂತೆಯೇ ಆಟೋ ಡ್ರೈವರ್ ಬೆಳ್ಳಂಬೆಳಿಗ್ಗೆ ನನಗೆ ಸಮರ್ಥ ರಾಮದಾಸರನ್ನು ದರ್ಶನ ಮಾಡುವ ಭಾಗ್ಯವನ್ನು ನೀವು ಕರುಣಿಸಿದ್ದೀರಿ. ಪ್ರತಿದಿನ 4 ಗಂಟೆಗೆ ಎದ್ದು ನಾನು ಬಾಡಿಗೆ ಹೊಡೆಯಲು ಆರಂಭಿಸುತ್ತೇನೆ. ಆದರೆ ಅಪರೂಪಕ್ಕೆ ಮಾತ್ರ ಇಂತಹ ಅವಕಾಶ ನಮಗೆ ಲಭ್ಯವಾಗುತ್ತದೆ. ನಾನು ಇವತ್ತು ಧನ್ಯನಾಗಿದ್ದೇನೆ. ನಿಮ್ಮಬಳಿ ತಲಾ 50 ರು. ನಂತೆ ಜಾಸ್ತಿ ಪಡೆದುಕೊಂಡಿದ್ದೆನೆ ಎನ್ನುವುದು ನನಗೆ ಗೊತ್ತಿದೆ. ಆದರೆ ಇದು ಅನಿವಾರ್ಯ. ನಾನು ಈ ಕಾರಣದಿಂದಾಗಿ ನಿಮಗೆ ಒಂದು ತೋಫಾ ಕೊಡಲು ಇಷ್ಟ ಪಡುತ್ತೇನೆ..' ಎಂದ ಆಟೋ ಡ್ರೈವರ್.
            ಸೀದಾ ಚಹಾ ಅಂಗಡಿಯೊಂದರ ಬಳಿ ನಿಲ್ಲಿಸಿದ ಆತ. ನಿಲ್ಲಿಸಿದವನೇ ಪ್ರತಿಯೊಬ್ಬರಿಗೂ ಬಿಸ್ಸಿ ಬಿಸಿ ಚಹಾ ಆರ್ಡರ್ ಮಾಡಿದ. ಬೆಲ್ಲದ ಚಹ ಬಹಳ ಹಿತವಾಗಿತ್ತು. ಆಟೋದಿಂದ ಆಳಿಸಿದವನೇ ಒಮ್ಮೆ ಹಿಂತಿರುಗಿ ನೋಡಿ ಎಂದ. ನೋಡಿದೆವು. ಆಹ್, ಎಂತ ಸುಂದರ ದೃಶ್ಯ ಅದು. ದೊಡ್ಡದೊಂದು ಸುರಂಗ. ಸುರಂಗದ ನಡುವೆ ಕಾಣುತ್ತಿದ್ದ ಸತಾರಾದ ಮನೆ ಮನೆಗಳು. ಮನೆಮನೆಗಳಲ್ಲಿ ಬೆಳಗಿಸಿದ್ದ ವಿದ್ಯುತ್ ದೀಪಗಳು. ಅದೆಂತಹ ಆಕರ್ಷಕ. ಅದೆಂತಹ ಸೊಬಗು. ನಾವೆಲ್ಲ ಅದೆಷ್ಟು ಪೋಟೋಗಳನ್ನು ತೆಗೆಸಿಕೊಂಡೆವೋ. ಚಹಾ ಕುಡಿದಾದ ನಂತರ ಮತ್ತೆ ನಮ್ಮ ಪಯಣ ಸಾಗಿತು.
            `ನಮ್ಮವರೂ ಇದ್ದಾರೆ ಅದೆಲ್ಲೋ ದೂರ ದೂರದ ಸ್ಥಳಗಳಂತೆ, ಅಲ್ಲೆಲ್ಲಿಗೋ ಹೋಗುತ್ತಾರಂತೆ. ಆದರೆ ನೀವು ನೋಡಿ ದೂರದ ಕರ್ನಾಟಕದಿಂದ ನಮ್ಮ ಪ್ರದೇಶ ಅದರಲ್ಲೂ  ಮುಖ್ಯವಾಗಿ ಸ್ವಾಮಿ ಸಮರ್ಥರು ನಡೆದಾಡಿದ ಸ್ಥಳವನ್ನು ನೋಡಲು ಬಂದಿದ್ದೀರಿ. ನಮ್ಮವರಿಗೆ ಇದು ಗೊತ್ತೇ ಇಲ್ಲ. ಸ್ವಾಮಿ ಸಮರ್ಥರಾಮದಾಸರ ಸ್ಥಳದ ಬಗ್ಗೆ ಯಾರೂ ಗಮನ ಕೊಡುವುದೇ ಇಲ್ಲ. ನಮ್ಮವರಿಗೆ ನಮ್ಮದರ ಬಗ್ಗೆ ಅಸಡ್ಡೆ. ಆದರೆ ನಿಮ್ಮನ್ನು ನೋಡಿ ನನಗೆ ಬಹಳ ಸಂತೋಷವಾಗುತ್ತಿದೆ. ನಿಜಕ್ಕೂ ನೀವು ಪುಣ್ಯಪುರುಷರು. ನಿಮಗೆ ನಮಸ್ಕಾರಗಳನ್ನು ತಿಳಿಸಲೇಬೇಕು. ನೀವು ಅಲ್ಲಿಂದ ಬಂದಿದ್ದೀರಿ. ಬೆಳ್ಳಂಬೆಳಿಗ್ಗೆ ದೇಗುಲ ದರ್ಶನಕ್ಕೆ ಕಾರಣರಾಗುತ್ತಿದ್ದೀರಿ. ನಿಮಗೆ ನಾನೊಂದು ವ್ಯೂ ಪಾಯಿಂಟನ್ನು ತೋರಿಸುತ್ತೇನೆ. ಇದು ನನ್ನ ಇನ್ನೊಂದು ತೋಫಾ..' ಎಂದು ಆಟೋ ಡ್ರೈವರ್ ಮಾತನಾಡುತ್ತಲೇ ಇದ್ದ.
            ನಾವು ಅಷ್ಟರಲ್ಲಿ ಮಹಾಭಲೇಶ್ವರ, ರಾಯಘಡದ ಬಗ್ಗೆ ಕೇಳಿದೆವು. `ಮಹಾಭಲೇಶ್ವರದಲ್ಲೇನಿದೆ ಮಣ್ಣು. ನಿಜ. ಅಲ್ಲಿ ನೋಡುವಂತದ್ದು ಸಾಕಷ್ಟಿದೆ. ಆದರೆ ಎಲ್ಲವೂ ದುಬಾರಿ. ಆದರೆ ಸತಾರಾದಲ್ಲಿ ಹಾಗಲ್ಲ. ಸಜ್ಜನಘಡದಲ್ಲಂತೂ ಎಲ್ಲವೂ ಫ್ರಿ. ಊಟ, ವಸತಿ ಎಲ್ಲವೂ ಕೊಡುತ್ತಾರೆ. ಮಹಾಭಲೇಶ್ವರ ನೋಡುವುದು ಬೇಡ. ಸುಮ್ಮನೆ ನಿಮಗೆ ದುಡ್ಡು ಜಾಸ್ತಿಯಾಗಿದ್ದರೆ ಹೋಗಿ ಬನ್ನಿ ಅಷ್ಟೆ. ರಾಯಘಡವನ್ನು ನೋಡಬಹುದು. ಶಿವಾಜಿ ಮಹಾರಾಜರ ರಾಜಧಾನಿ ಅದು. ಚನ್ನಾಗಿದೆ ಎಂದು ಆತ ಉತ್ತರಿಸಿದ್ದ. ಆತನ ಉತ್ತರ ಕೇಳಿದ ನಾವು ರಾಯಘಡ ಹಾಗೂ ಮಹಾಭಲೇಶ್ವರವನ್ನು ನೋಡಿ ಬರುವ ಆಲೋಚನೆಯನ್ನು ಕೈಬಿಟ್ಟೆವು.
           ಶಿವಾಜಿ ಮಹಾರಾಜರು ಆರಂಭದಲ್ಲಿ ರಾಯಘಡವನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡರಂತೆ. ಆ ನಂತರ ಅವರಿಗೆ ಸಜ್ಜನಘಡದಲ್ಲಿ ಸ್ವಾಮಿ ಸಮರ್ಥ ರಾಮದಾಸರು ಇರುವ ಬಗ್ಗೆ ಮಾಹಿತಿ ಸಿಕ್ಕಿತಂತೆ. ರಾಮದಾಸರನ್ನು ಭೇಟಿಯಾಗಬೇಕು ಎಂದು ಶಿವಾಜಿ ಮಹಾರಾಜ್ ಕುದುರೆಯನ್ನೇರಿ ಬಂದರಂತೆ. ಸಿಟ್ಟು ಹಾಗೂ ಅಹಂಕಾರದಿಂದ ಸಜ್ಜನಘಡವನ್ನು ಏರಿ ಬಂದ ಸಂದರ್ಭದಲ್ಲಿ ಸಮರ್ಥ ರಾಮದಾಸರು ಧ್ಯಾನ ಹಾಗೂ ಪೂಜೆಯಲ್ಲಿ ನಿರತರಾಗಿದ್ದರಂತೆ. ಶಿವಾಜಿ ಬಂದು ಸಮರ್ಥ ರಾಮದಾಸರ ಎದುರು ಗತ್ತಿನಿಂದ ಕುಳಿತರಂತೆ. ಆದರೆ ರಾಮದಾಸರು ಅದನ್ನು ಗಮನಿಸಿಯೂ ಗಮನಿಸದಂತೆ ಉಳಿದರಂತೆ. ಕೊನೆಗೆ ಶಿವಾಜಿ ನಮಸ್ಕಾರ ಮಾಡಿ ಆಶಿರ್ವಾದ ಬೇಡಿದರಂತೆ. ಕೊನೆಗೆ ಸಮರ್ಥ ರಾಮದಾಸರು ಅತ್ಯಂತ ಮಿದುವಾದ ಕಲ್ಲನ್ನು ಹೊತ್ತುಕೊಂಡು ಬಾ. ಹುಡುಕಿ ತಾ. ಆಗ ಆಶಿರ್ವಾದ ಮಾಡುತ್ತೇನೆ. ಹಿಂದೂ ಸಾಮ್ರಾಟನಾಗುತ್ತೀಯಾ ಎಂದರಂತೆ. ಕೊನೆಗೆ ಶಿವಾಜಿ ಮಹಾರಾಜರು ಬಹಳ ಹುಡುಕಿ ಕೊನೆಗೊಂದು ಮೃದು ಕಲ್ಲನ್ನು ಹೊತ್ತು ತಂದರಂತೆ. ಆ ಕಲ್ಲನ್ನು ನೋಡಿದ ರಾಮದಾಸರು ಕೈಯಲ್ಲಿ ಮುಟ್ಟಿ `ಇದು ಗಟ್ಟಿಯಾಗಿದೆ. ಇನ್ನೂ ಮಿದುವಾದ ಕಲ್ಲನ್ನು ತನ್ನಿ..' ಎಂದರಂತೆ. ಕೊನೆಗೆ ಹುಡುಕಿ ತಂದಾಗ ಮತ್ತೆ ಇದೇ ಘಟನೆ ಪುನರಾವರ್ತನೆ ಆಯಿತಂತೆ. ಕೊನಗೊಮ್ಮೆ ಶಿವಾಜಿ ಮಹಾರಾಜರು ದಿಕ್ಕೆಟ್ಟು ಸೋತಂತಾಗಿ ಸಜ್ಜನಘಡಕ್ಕೆ ತೆರಳಿ ಸ್ವಾಮಿ ರಾಮದಾಸರ ಚರಣದಲ್ಲಿ ಶರಣಾದರಂತೆ. ಆಗ ಸಮರ್ಥ ರಾಮದಾಸರು ಹೇಳಿದ್ದೆಂದರೆ `ಮೃದುವಾದ ಕಲ್ಲು ಎಂದರೆ ಏನೆಂದುಕೊಂಡೆ ಮಹಾರಾಜಾ. ನೀನೇ ಮೃದುವಾದ ಕಲ್ಲು. ನೀನು ಕಲ್ಲಿನಷ್ಟು ಕಠಿಣ. ಆದರೆ ಸಿಟ್ಟು ಹಾಗೂ ಅಹಂಕಾರವನ್ನು ಬಿಟ್ಟು ಮೃದುವಾಗಿ ಬಾ ಎಂದು ಹೇಳಿದ್ದೆನಷ್ಟೇ ಎಂದು ಹೇಳಿದಾಗ ಶಿವಾಜಿ ಮಹಾರಾಜರ ಕಣ್ಣಿನಲ್ಲಿ ಆಶ್ರುಧಾರೆ ಸುರಿಯಲಾರಂಭಿಸಿತಂತೆ. ಆ ಕ್ಷಣದಲ್ಲಿ ಸಮರ್ಥ ರಾಮದಾಸರು ಶಿವಾಜಿ ಮಹಾರಾಜರ ತಲೆಯ ಮೇಲೆ ಕೈ ಇಟ್ಟು ಹಿಂದೂ ಸಾಮ್ರಾಟನಾಗಿ ಲೋಕವಿಖ್ಯಾತನಾಗಿ. ವಿಜಯೀಭವ ಎಂದು ಹರಸಿದರಂತೆ. ನಂತರದ ದಿನಗಳಲ್ಲಿ ಶಿವಾಜಿ ಮಹಾರಾಜ ಯಾವರೀತಿ ವಿಖ್ಯಾತಿ ಗಳಿಸಿದ ಎನ್ನುವುದು ಇತಿಹಾಸ ಎಂದು ಆಟೋ ಡ್ರೈವರ್ ದೀರ್ಘವಾಗಿ ಹೇಳಿದಾಗ ನಮಗೆ ಒಮ್ಮೆಲೆ ಮೈಯೆಲ್ಲ ಪುಳಕವಾಯಿತು. ನಾವು ಆಟೋ ಡ್ರೈವರ್ ಜೊತೆ ಬಂದಿದ್ದೇವೋ ಅಥವಾ ಸತಾರಾದ ಸಮಗ್ರ ಮಾಹಿತಿಯನ್ನು ತಿಳಿದುಕೊಂಡು ಬಂದಿರುವ ಗೈಡ್ ಜೊತೆ ಬಂದಿದ್ದೇವೋ ಎನ್ನುವ ಅನುಮಾನವೂ ನಮ್ಮನ್ನು ಕಾಡಿತು. 600 ರು. ಕೊಟ್ಟಿದ್ದಕ್ಕೂ ಅನ್ಯಾಯವಾಗಲಿಲ್ಲ ಎಂದುಕೊಂಡೆವು.
          `ಶಿವಾಜಿ ಮಹಾರಾಜರು ನಂತರದ ದಿನಗಳಲ್ಲಿ ಸಜ್ಜನಘಡಕ್ಕೆ ದೊಡ್ಡದೊಂದು ದ್ವಾರವನ್ನು ಕಟ್ಟಿಸಿದರು. ಕೋಟೆಯೊಂದನ್ನು ನಿರ್ಮಾಣ ಮಾಡಿದರು. ಅಷ್ಟೇ ಅಲ್ಲ. ಅಲ್ಲಿ ಒಂದೆರಡು ದೇಗುಲಗಳ ಕಟ್ಟಡವನ್ನೂ ಕಟ್ಟಿಸಿದರು. ಇದೇ ಸಜ್ಜನಘಡದಲ್ಲಿಯೇ ಮಾಫಳಾ ಯುವಕರ ಜೊತೆ ಸೇರಿ ರಕ್ತ ತರ್ಪಣ ನೀಡಿ ಹಿಂದೂ ರಕ್ಷಣೆಗೆ ಶಿವಾಜಿ ಪಣ ತೊಟ್ಟಿದ್ದು. ಒಮ್ಮೆ ನೀವು ಈ ನಾಡಿನಲ್ಲಿ ಶಿವಾಜಿ ಮಹಾರಾಜ ಕುದುರೆಯ ಮೇಲೆ ಹೋಗುತ್ತಿದ್ದುದನ್ನು ಕಲ್ಪನೆ ಮಾಡಿಕೊಳ್ಳಿ ಎಂದ. ನಮಗೆ ಮೈಯೆಲ್ಲ ಒಮ್ಮೆಗೆ ರೋಮಾಂಚನ.
           ನಿಧಾನವಾಗಿ ಬೆಳಗಾಗುತ್ತಿತ್ತು. ಆಕಾಶದೆತ್ತರದ ದೂರದಲ್ಲೊಂದು ಬೆಳಕಿನ ಬಿಂಬವನ್ನು ತೋರಿಸಿದ ಆಟೋ ಡ್ರೈವರ್ ಅದೋ ನೋಡಿ ಅಲ್ಲಿಯೇ ಸಜ್ಜನ ಘಡ ಇದೆ. ನಾವು ಅದನ್ನು ಏರಬೇಕು ಎಂದ. ಕತ್ತನ್ನು ಎತ್ತಿ ನೋಡಿ ಹಿತವಾಗಿ ನೋವು ಮಾಡಿಕೊಂಡೆವು. ಸತಾರಾದಿಂದ 17 ಕಿ.ಮಿ ದೂರದಲ್ಲಿರುವ ಸಜ್ಜನಘಡಕ್ಕೆ ಹೋಗುವ ಸಲುವಾಗಿ ಆಟೋ ಏರಿದ್ದ ನಾವು ಅಂಕುಡೊಂಕಿನ ದಾರಿಯಲ್ಲಿ ಸಾಗುತ್ತಲೇ ಇದ್ದೆವು. ಬೆಳಗಿನ ಮುಂಜಾವು ನಮ್ಮನ್ನು ಹಿತವಾಗಿ ಚುಂಬಿಸುತ್ತಿತ್ತು. ಮಂಜಿನ ಹನಿಗಳು ಮುತ್ತಿಕ್ಕುತ್ತಿದ್ದವು. ಅಲ್ಲಿಯೇ ಇದ್ದ ಮಿಲಿಟರಿ ಕ್ಯಾಂಪನ್ನು ನೀಲೇಶ ಮಂತ್ರಿ ತೋರಿಸಿದ. ಮರಾಠಾ ಪ್ಲಟೂನ್ ಇಲ್ಲಿಯೇ ತಯಾರಾಗುತ್ತದೆ. ಇಲ್ಲಿ ತರಬೇತಿ ಪಡೆದವರು ಪ್ರತಿಯೊಬ್ಬರೂ ಸೈನ್ಯಕ್ಕೆ ಆಯ್ಕೆಯಾಗುತ್ತಾರೆ ಎಂದು ಹೆಮ್ಮೆಯಿಂದ ಹೇಳಿದ. ನಮಗೂ ಹೆಮ್ಮೆ ಎನ್ನಿಸಿ ಎದೆಯುಬ್ಬಿತು.

(ಮುಂದುವರಿಯುತ್ತದೆ)

Wednesday, October 21, 2015

ಸಜ್ಜನರೊಡನೆ.. ಸಜ್ಜನಘಡದ ಕಡೆಗೆ - 2

          ಹುಬ್ಬಳ್ಳಿಯಿಂದ ಧಾರವಾಡಕ್ಕೆ ಬಂದಿದ್ದರೂ ರೈಲು ವೇಗವಾಗಿ ಸಾಗುತ್ತಿರಲಿಲ್ಲ. ಲೋಂಡಾ, ಅಳ್ನಾವರ, ಖಾನಾಪುರ ಮೂಲಕ ಬೆಳಗಾವಿಗೆ ಹೋಗುತ್ತಿತ್ತು ರೈಲು. ಖಾಲಿ ಖಾಲಿ ರೈಲು. ನಾನು, ಸಂಜಯ ಹಾಗೂ ಪ್ರಶಾಂತ (ನಿರಂತರ ಚಲನೆಯಲ್ಲಿರುವ ಖ್ಯಾತಿಯ) ಸಾಕಷ್ಟು ಹಲುಬಿಕೊಳ್ಳುತ್ತ ಸಾಗಿದೆವು. ನಮ್ಮ ಪಕ್ಕದಲ್ಲಿ ಒಂಟಿ ಸೀಟಿನಲ್ಲಿ ಒಬ್ಬಾತ ಗಡವನಂತನು ಬಂದು ಕುಳೀತುಕೊಂಡಿದ್ದ. ಆತನಿಗೆ ಆಗಲೇ ನಿದ್ದೆ. ಬಾಯಿಂದಂತೂ ಸಪ್ತಸ್ವರಗಳೂ ಸಮ್ಮಿಳಿತವಾಗಿ ಗೊರ್.. ಎನ್ನುತ್ತ ಬರುತ್ತಿದ್ದವು.
           ಧಾರವಾಡ ಕಳೆದ ನಂತರ ನಿಧಾನವಾಗಿ ವಾತಾವರಣ ಬದಲಾಗತೊಡಗಿತು. ಪ್ರಶಾಂತ ಭಾವ ತನ್ನ ಮೊಬೈಲಿನಲ್ಲಿದ್ದ ಹಲವು ಆಪ್ ಗಳನ್ನು ನನ್ನ ಮೊಬೈಲಿಗೆ ರವಾನೆ ಮಾಡತೊಡಗಿದ. ಜಿಪಿಎಸ್, ಅದು, ಇದು ಎಂಬಂತೆ ಬಹಳಷ್ಟು ಆಪುಗಳು ನನ್ನ ಮೊಬೈಲಿಗೆ ಬಂದವು. ರೈಲಿಗೆ ವೇಗವಿನ್ನೂ ಸಿಕ್ಕಿರಲಿಲ್ಲ. ಬರಬರುತ್ತ ಹಸಿರು ಹೆಚ್ಚಾಯಿತು. ಅಳ್ನಾವರ ಬರುವ ಮುನ್ನ ನಾಲ್ಕೈದು ಕಿಲೋಮೀಟರ್ ದೂರ ಉತ್ತರ ಕನ್ನಡ ಜಿಲ್ಲೆಯಲ್ಲಿ ರೈಲು ಮಾರ್ಗ ಹಾದು ಹೋಗಿದೆ. ನಾನು ಪ್ರಶಾಂತ ಹಾಗೂ ಸಂಜಯನ ಬಳಿ ಈ ವಿಷಯವನ್ನು ಹೇಳಿ ವಾದಿಸಿದೆ. ಅವರು ಸಾಧ್ಯವೇ ಇಲ್ಲ ಎಂದು ಹೇಳಿದರೆ ನಾನು ಇದೆ ಎಂದು ಹೇಳುತ್ತಿದೆ. ನನ್ನ ಬಳಿ ಸೂಕ್ತ ಸಾಕ್ಷ್ಯ ಹಾಗೂ ದಾಖಲೆಗಳಿರದಿದ್ದ ಕಾರಣ ಸುಮ್ಮನಾದೆ.
           ಎಲ್ಲೋ ಮಳೆ ಬಿದ್ದಿರಬೇಕು. ನಾವು ಹೋರಟಿದ್ದು ಮಳೆಗಾಲವಾದರೂ ಹಾಗನ್ನಿಸುತ್ತಿರಲಿಲ್ಲ. ರಭಸದಿಂದ ಸುರಿಯಬೇಕಿದ್ದ ಮಳೆ ನಾಪತ್ತೆಯಾಗಿತ್ತು. ಆಗೊಮ್ಮೆ ಈಗೊಮ್ಮೆ ತುಂತುರು ಮಳೆ ಮಾಲೆ ಮಾಲೆಯಾಗಿ ಇಳಿಯುತ್ತಿತ್ತು. ದಾರಿಯಲ್ಲಿ ಕಾಣುವ ನದಿ, ಹಳ್ಳ, ತೊರೆಗಳಲ್ಲೆಲ್ಲ ನೀರಿದೆಯೇ ಎಂದು ಇಣುಕುತ್ತಿದ್ದೆವು. ಯಾವುದೋ ಒಂದೆರಡು ಹೊಳೆ ಹಳ್ಳಗಳು ತುಂಬಿ ಹರಿಯುತ್ತಿದ್ದವು. ಅಜಮಾಸು 5 ಅಥವಾ ಇನ್ನೂ ಜಾಸ್ತಿ ಗಂಟೆಯೇನೋ, ಅಳ್ನಾವರ ಹಾಗೂ ಲೋಂಡಾಗಳನ್ನು ದಾಟಿದ ನಮ್ಮ ಚುಕುಬುಕು ರೈಲು ಖಾನಾಪುರಕ್ಕೂ ಬಂದಿತು. 15 ನಿಮಿಷಕ್ಕೊಮ್ಮೆಯೋ ಅಥವಾ 30 ನಿಮಿಷಕ್ಕೆ ಒಮ್ಮೆ ಎಂಬಂತೆಯೋ ನಿಂತು ನಿಂತು ಸಾಗುತ್ತಿದ್ದ ರೈಲು ನಿಧಾನಕ್ಕೆ ರಶ್ಶಾಗತೊಡಗಿತು.
           ಸಂಜಯ ತನ ಡಿಎಸ್.ಎಲ್.ಆರ್ ಕ್ಯಾಮರಾಕ್ಕೆ ಆಗಲೇ ಕೆಲಸ ಕೊಟ್ಟಿದ್ದ. ನಾನು ಹಾಗೂ ಪ್ರಶಾಂತ ಭಾವ ಸಾಧ್ಯವಾದಷ್ಟು ಪೋಟೋಗಳನ್ನು ಮೊಬೈಲಿನಲ್ಲಿಯೇ ಕ್ಲಿಕ್ಕಿಸಿಕೊಂಡೆವು. ಬಾಯಲ್ಲಿ ಬಾ ಮಳೆಯೇ ಬಾ.. ಎಂಬ ಹಾಡೂ ಗುನುಗುತ್ತಿತ್ತು. ದಾರಿಯಲ್ಲಿ ಎಲ್ಲೋ ಒಂದೆರಡು ಕಡೆಗಳಲ್ಲಿ ರೈಲುಗಳು ಅಡ್ಡಾದವು. ವೇಗದ ರೈಲುಗಳು ದಡದಡನೆ ಸಾಗುತ್ತಿದ್ದರೆ ಪಕ್ಕದಲ್ಲಿಯೇ ನಿಂತ ನಾವು ಪೋಟೋ ಕ್ಲಿಕ್ಕಿಸಿ ಹಿತವಾಗಿ ಬೆಚ್ಚಿದ್ದೆವು.
            ಈ ನಡುವೆ ಇನ್ನೊಂದು ವಿಷಯ ಹೇಳಲೇಬೇಕು ನೋಡಿ. ಧಾರವಾಡ ದಾಟಿ ರೈಲು ಮುಂದೆ ಹೋಗುತ್ತಿದ್ದಂತೆ ಟಿಸಿ ಬಂದು ತಪಾಸಣೆಗೆ ಇಳಿದ. ನಾನು ಹಾಗೂ ಸಂಜಯ ಟಿಕೆಟ್ ಕೊಟ್ಟು ನಮ್ಮ ಗುರುತಿನ ಚೀಟಿಯನ್ನು ನೀಡಿದೆವು. ಪ್ರಶಾಂತ ಭಾವನ ಬಳಿ ಗುರುತಿನ ಚೀಟಿ ತೋರಿಸು ಎಂದರೆ ಚೀಟಿ ಎಲ್ಲಿದೆ? ವೋಟಿಂಗ್ ಕಾರ್ಡ್, ರೇಶನ್ ಕಾರ್ಡ್, ಆಧಾರ್ ಕಾರ್ಡುಗಳ ಝೆರಾಕ್ಸ್ ತಂದಿದ್ದ. ಟಿಸಿ ವರಾತ ಶುರುಮಾಡಿದ. ಒರಿಜಿನಲ್ ದಾಖಲೆಗಳನ್ನು ತೋರಿಸಿ, ಝೆರಾಕ್ಸ್ ಬೇಡ ಎಂದ. ಎಷ್ಟು ಹುಡುಕಿದರೂ ಒರಿಜಿನಲ್ ಸಿಗಲಿಲ್ಲ.
           ಕೊನೆಗೆ 500 ರು. ದಂಡ ಕಟ್ಟಬೇಕಾಗುತ್ತದೆ ಎನ್ನಲು ಆರಂಭಿಸಿದ. ಸಂಜಯ ಟಿಸಿ ಬಳಿ ಮಾತಿಗೆ ನಿಂತ. ರೈಲ್ವೆ ರೂಲ್ಸು, ರೆಗ್ಯುಲೇಶನ್ನುಗಳನ್ನೆಲ್ಲ ಪಟಪಟನೆ ಮಾತನಾಡಿದ. ಹೀಗಿದ್ದಾಗಲೇ ಟಿಸಿ ಪ್ರಶಾಂತ ಭಾವನ ಬಳಿ ನೀವೇನು ಕೆಲಸ ಮಾಡುತ್ತಿದ್ದೀರಿ ಎಂದ. ಭಾವ ಕೃಷಿ ಎಂದು ಉತ್ತರಿಸಿದ. ಸಂಜಯನೂ ಕೃಷಿ ಮಾಡುತ್ತಿದ್ದೇನೆ ಎಂದ. ನನ್ನ ಬಳಿಯೂ ಕೇಳಿದ. ಕೊನೆಗೆ ನಾನು ಪತ್ರಕರ್ತ ಎಂದೆ. ಎಲ್ಲಿ ನಿನ್ನ ಕಾರ್ಡ್ ತೋರಿಸು ನೋಡೋಣ ಎಂದ. ಕಾರ್ಡ್ ನೋಡಿದವನೇ ಸ್ವಲ್ಪ ಅನುಮಾನ ಮಾಡಿದ. ಮೊದಲೇ ಹೇಳಿದ್ದರೆ ಆಗುತ್ತಿರಲಿಲ್ಲವಾ ಎಂದ. ನಾನು ಮಿಕಿ ಮಿಕಿ ನೋಡಿದೆ. ಇನ್ನೊಮ್ಮೆ ಬರುವಾಗ ಝೆರಾಕ್ಸ್ ಅಲ್ಲ. ಎಲ್ಲ ಒರಿಜಿನಲ್ ದಾಖಲೆಗಳನ್ನೇ ತನ್ನಿ ಎಂದು ಹೇಳಿ ಹೊರಟುಹೋದ.
           `ಮಾರಾಯಾ.. ನೀನು ಪತ್ರಕರ್ತ ಹೇಳಕಾಗಿತ್ತಿಲ್ಲೆ. ಟಿಸಿ ಎಂತಾ ಮಾಡ್ತ ನೋಡ್ಲಾಗಿತ್ತು..' ಎಂದು ಸಂಜಯ ಹೇಳಿದ. `ಸುಮ್ನೆ ಎಂತಾ 500 ರು. ಕೊಡ್ತಿದ್ರಾ ಮಾರಾಯಾ..' ಎಂದೆ. ಹೌದೆನ್ನಿಸಿರಬೇಕು ಸುಮ್ಮನಾದರು.
              ರೈಲಿನಲ್ಲಿ ಹೋಗುತ್ತಿದ್ದ ನಮಗೆ ಇದ್ದಕ್ಕಿದ್ದಂತೆ ಆಲೋಚನೆಯೊಂದು ಮೂಡಿತು. ಯಾವಾಗಲೂ ನಾವು ಜೊತೆಗೂಡಿದರೆ ಎಲ್ಲಾದರೂ ಹೋಗಬೇಕು ಎನ್ನಿಸಿದರೆ ತಕ್ಷಣಕ್ಕೆ ಹೊರಟುಬಿಡುತ್ತೇವೆ. ಸಜ್ಜನಘಡಕ್ಕೂ ಹೀಗೆಯೇ. ದಿಢೀರ್ ನಿರ್ಧಾರ ಮಾಡಿ ಹೊರಟಿದ್ದೇ. ರೈಲಿನಲ್ಲಿ ಹೋಗುವಾಗ ಪ್ರಶಾಂತ ಭಾವ ಇದ್ದಕ್ಕಿದ್ದಂತೆ `ಹೋಯ್.. ಉತ್ತರ ಭಾರತಕ್ಕೆ ಹೊರಟು ಬಿಡೋಣ್ವಾ..?' ಎಂದ. ನಾನು ಹಾಗೂ ಸಂಜಯ ಇಬ್ಬರೂ ಇಂತದ್ದೇ ಮನೋಭಾವದವರು. ಹೋ.. ಹೋಗೋಣ ಎಂದು ತಯಾರಾದೆವು. `ನೋಡೋಣ. ಮೊದಲು ಸಜ್ಜನಘಡಕ್ಕೆ ಹೋಗಿ ಆ ನಂತರ ಆಲೋಚನೆ ಮಾಡೋಣ..' ಎಂದ ಪ್ರಶಾಂತ ಭಾವ. ನಾವು ತಲೆಯಲ್ಲಾಡಿಸಿದೆವು.
                   ಬೆಳಗಾವಿ ತಲುಪುವ ವೇಳೆಗೆ ಸೂರ್ಯನೂ ಬಾನಂಚಿನಲ್ಲಿ ರಥವನ್ನು ಹೋಡಿ ಹೋಗಿದ್ದ. ಬೆಳಗಾವಿ ತಲುಪುವ ವೇಳೆ ರೈಲಿನಲ್ಲಿ ಸುಮಾರು ಜನವೋ ಜನ. ಅಲ್ಲಿಂದ ಮುಂದಕ್ಕೆ ರೈಲು ಚಲಿಸಿದಂತೆಲ್ಲ ನಿಧಾನವಾಗಿ ಕತ್ತಲು ಆವರಿಸಿತು. ಗೋಕಾಕ ರೋಡ್, ಘಟಪ್ರಭಾ, ಚಿಕ್ಕೋಡಿ ಕ್ರಾಸ್ ಈ ಮುಂತಾದ ಪ್ರದೇಶಗಳನ್ನು ದಾಟಿದ ರೈಲು ಕೊನೆಗೊಮ್ಮೆ ಮಹಾರಾಷ್ಟ್ರಕ್ಕೆ ಕಾಲಿಟ್ಟಿತು. ಮಹಾರಾಷ್ಟ್ರಕ್ಕೆ ಬಂದಿದ್ದೇವೆ ಎನ್ನುವುದರ ಕುರಹಾಗಿ ನಮ್ಮ ಮೊಬೈಲ್ ರೋಮಿಂಗ್ ಏರಿಯಾದಲ್ಲಿದೆ ಎನ್ನುವುದನ್ನು ಸಾರಿ ಸಾರಿ ಹೇಳುತ್ತಿತ್ತು.
             ಅದೇ ಸಂದರ್ಭದಲ್ಲಿ ರಾತ್ರಿಯ ಊಟ ಮಾಡಬೇಕಿತ್ತು. ಪ್ರಶಾಂತ ಭಾವ ಇಡ್ಲಿಯನ್ನು ಕಟ್ಟಿಸಿಕೊಂಡು ಬಂದ. ಗಡದ್ದಾಗಿ ತಿಂದೆವು. ಮಲಗಿ ನಿದ್ರಿಸೋಣವೇ? ಎಂದುಕೊಂಡರೆ ನಿದ್ದೆ ಬರಲೊಲ್ಲದು. ಮರುದಿನ ಮುಂಬಯಿಯಲ್ಲಿ ಎಫ್.ಡಿ.ಎ ಎಕ್ಸಾಂ ಇದ್ದ ಕಾರಣ ಒಂದಷ್ಟು ಯುವಕರು ನಾವಿದ್ದಲ್ಲಿ ಬಂದು ಕುಳಿತರು. ಬಂದವರೇ ಹರಟೆಗೆ ಕುಳಿತರು.
                 ನಿಧಾನಕ್ಕೆ ನಮ್ಮನ್ನು ನಿದ್ದೆ ಆವರಿಸುತ್ತಿತ್ತು. ಆ ಹುಡುಗರೂ ಮರಾಠಿ ಹಾಗೂ ಹಿಂದಿಯಲ್ಲಿ ಮಾತನಾಡುತ್ತಿದ್ದರು. ಅವರಲ್ಲೊಬ್ಬನಿಗೆ ಅಲ್ಪ ಸ್ವಲ್ಪ ಕನ್ನಡ ಬರುತ್ತಿತ್ತು. ಅವರೊಂದಿಗೆ ಸಾಕಷ್ಟು ಸಮಯ ಹರಟೆ ಹೊಡೆದೆವು. ಕೊನೆಗೊಮ್ಮೆ ಸಾಂಗ್ಲಿ ಹಾಗೂ ಮಿರಜನ್ನು ದಾಟಿದ ರೈಲು ಮುಂದಕ್ಕೆ ಸಾಗಿತು. ರಾತ್ರಿಯಾಗಿ ಬಹಳ ಹೊತ್ತು ಸಂದಿತ್ತು. ಕೊನೆಗೂ ಒಮ್ಮೆ ನಮ್ಮ ನಿಗದಿತ ಗಮ್ಯ ಸಿಕ್ಕಿತು. ಮಧ್ಯರಾತ್ರಿ 12.10ರ ವೇಳೆಗೆ ನಾವು ಇಳಿಯಬೇಕಿದ್ದ ಸತಾರಾ ಹತ್ತಿರ ಬಂದಿತು. ಲಗುಬಗೆಯಿಂದ ಇಳಿದೆವು.
            ಇಳಿದವರು ಹೋಗುವುದೆಲ್ಲಿ? ಸತಾರಾ ರೈಲ್ವೆ ನಿಲ್ದಾಣದಿಂದ ಬಸ್ ನಿಲ್ದಾಣಕ್ಕೆ ಅಥವಾ ಮುಖ್ಯ ಪೇಟೆಗೆ ಅಜಮಾಸು 8-10 ಕಿಮಿ ದೂರವಿದೆ. ರಾತ್ರಿ ಯಾವುದೇ ವಾಹನ ಸಂಚಾರ ಇರುವುದಿಲ್ಲ. ಯಾವುದಾದರೂ ಹೊಟೆಲಿಗೋ, ಲಾಡ್ಜಿಗೋ ಹೋಗಿ ಉಳಿಯೋಣ ಎಂದರೆ ಅದು ಸಾಧ್ಯವಿಲ್ಲದ ಮಾತು ಬಿಡಿ. ಕೊನೆಗೊಮ್ಮೆ ಅಲ್ಲಿಯೇ ಬಿಸ್ಸಿ ಬಿಸಿ ಕಾಫಿ ಕುಡಿದೆವು. ರೈಲ್ವೆ ನಿಲ್ದಾಣದಲ್ಲಿಯೇ ಮಲಗಿ ನಿದ್ರಿಸೋಣ ಎಂದುಕೊಂಡೆವು. ಪ್ರಶಾಂತ ಭಾವ ನಿಲ್ದಾಣದಲ್ಲಿಯೇ ಇದ್ದ ಪೊಲೀಸರ ಬಳಿ ಮಾತನಾಡಲು ಆರಂಭಿಸಿದ. ಪೊಲೀಸರು ಹೇಳಿದ ಪ್ರಕಾರ ಸಜ್ಜನಘಡ ಸತಾರಾದಿಂದ 18 ಕಿಮಿ ದೂರದಲ್ಲಿತ್ತು. ದಿನಕ್ಕೆ 3 ಬಸ್ಸುಗಳು ಹೋಗುತ್ತಿದ್ದವು. ಯಾವುದಾದರೂ ವಾಹನ ಮಾಡಿಕೊಂಡು ಹೋಗಬೇಕಿತ್ತು. ಅಲ್ಲದೇ ಸತಾರಾ ರೈಲ್ವೆ ನಿಲ್ದಾಣದಿಂದ ಸತಾರಾ ನಗರಕ್ಕೆ ಹೋಗಲು ಬೆಳಗಿನವರೆಗೆ ಯಾವುದೇ ವಾಹನ ಸೌಲಭ್ಯ ಇಲ್ಲ ಹಾಗೂ ರಾತ್ರಿ ಜಪ್ಪಯ್ಯ ಅಂದರೂ ಯಾವುದೇ ಹೊಟೆಲಿನವರು ಉಳಿಯಲು ರೂಮು ಕೊಡುವುದಿಲ್ಲ. ಆದ್ದರಿಂದ ರೈಲ್ವೆ ನಿಲ್ದಾಣದಲ್ಲಿಯೇ ಮಲಗಿಕೊಳ್ಳಿ ಎಂದರು.
          ನಿಲ್ದಾಣದಲ್ಲಿದ್ದ ಎರಡು ಸೀಟಿನ ಮೇಲೆ ನಾನು, ಸಂಜಯ ಹಾಗೂ ಪ್ರಶಾಂತ ಭಾವ ಅಡ್ಡಾದೆವು. ಪಕ್ಕದಲ್ಲಿಯೇ ದೊಡ್ಡದೊಂದು ಮರವಿತ್ತು. ಅದರ ತುಂಬಾ ಹಕ್ಕಿಗಳಿದ್ದವು. ರಪ್ಪನೆ, ಪಿಚ್ಚನೆ ಹಿಕ್ಕೆಯನ್ನು ಹಾಕುತ್ತಿದ್ದವು. ಅದು ನಮ್ಮ ಮುಖ ಹಾಗೂ ಮೈಮೇಲೆ ಬೀಳುತ್ತಿತ್ತು. ಅದನ್ನು ತಪ್ಪಿಸಿಕೊಳ್ಳಬೇಕು ಎಂದು ಮುಖಕ್ಕೆ ಟವೆಲ್ ಹೊದ್ದುಕೊಂಡು ಮಲಗಿದೆವು. ಸ್ವಲ್ಪ ಸಮಯದಲ್ಲಿ ಅಲ್ಲಿಯೇ ಇದ್ದ ಪೊಲೀಸರು ಮತ್ತೆ ನಮ್ಮನ್ನು ಎಬ್ಬಿಸಿದರು. ಎಬ್ಬಿಸಿದವರೇ ಪಕ್ಕದಲ್ಲಿದ್ದ ಪ್ರವಾಸಿ ಬಂಗಲೆ ತೋರಿಸಿ ಅಲ್ಲಿ ಹೋಗಿ ಮಲಗಿಕೊಳ್ಳಿ, ಯಾವುದೇ ತೊಂದರೆ ಇಲ್ಲ ಎಂದರು.
            ಪ್ರವಾಸಿ ಬಂಗಲೆಯೆಂದರೆ ಮಲಗಲಿಕ್ಕೆ ಬಹಳ ಅವಕಾಶ ಇರುತ್ತದಲ್ಲ ಎಂದುಕೊಂಡು ಖುಷಿಯಿಂದ ಹೋದವರಿಗೆ ನಿರಾಸೆ ಕಾದಿತ್ತು. ಅಲ್ಲೇನಿದೆ ಮಣ್ಣು. ದೊಡ್ಡದೊಂದು ರೂಮು ಬಿಟ್ಟರೆ ಇನ್ನೇನೋ ಇಲ್ಲ. ಪಕ್ಕದಲ್ಲಿ ಎರಡು ಬಾಂಕುಗಳಿದ್ದವು. ಬಾಂಕಿನ ಮೇಲಿನ ಭಾಗದಲ್ಲಿ ಪ್ರಶಾಂತ, ಮಧ್ಯ ಭಾಗದಲ್ಲಿ ಸಂಜಯ ಹಾಗೂ ಕೆಳಭಾಗದಲ್ಲಿ ನಾನು ಮಲಗುವುದೆಂದು ತೀರ್ಮಾನವಾಯಿತು. ಆಗಲೇ 1.30 ದಾಟಿ 2 ಗಂಟೆಯತ್ತ ಗಡಿಯಾರ ಚಲಿಸುತ್ತಿತ್ತು. ಸೊಳ್ಳೆ ಕಾಟ ಬೇರೆ. ಬಾಂಕಿನ ಮೇಲೆ ಬಿದ್ದುಕೊಂಡೆವು. ಪ್ರಶಾಂತ ಭಾವ ಹಾಗೂ ಸಂಜಯನಿಗೆ ನಿದ್ದೆ ಬಂದಿತ್ತೇನೋ. ನನಗೆ ಮಾತ್ರ ಏನು ಮಾಡಿದರೂ ನಿದ್ದೆ ಹತ್ತಿರ ಸುಳಿಯುತ್ತಿಲ್ಲ. ಬಾಂಕಿನ ಮೇಲೆ ಹೊರಳಾಡಿದೆ. ಸೊಳ್ಳೆಗಳು ಕೂಡ ಮೈಮೇಲೆ ದಾಳಿ ಮಾಡುತ್ತಿದ್ದೆವು.ಸ್ವಲ್ಪ ನಿದ್ದೆ ಜೊಂಪು ಬಂದಂತಾಗಿತ್ತು. ಪ್ರಶಾಂತಭಾವ ಎಬ್ಬಿಸಿದ್ದ. 4.30 ಆಗುತ್ತಿತ್ತು. ಮುಖ ತೊಳೆದ ಶಾಸ್ತ್ರ ಮಾಡಿದವರೇ ಸತಾರಾ ಬಸ್ ನಿಲ್ದಾಣಕ್ಕೆ ಹೋಗಬೇಕು ಎಂದುಕೊಂಡೆವು.
          5 ಗಂಟೆಯಿಂದ ವಾಹನ ಓಡಾಡಲು ಆರಂಭವಾಗುತ್ತದೆ ಎಂದು ಪೊಲೀಸ ಹೇಳಿದ್ದ ನೆನಪು. ರೈಲ್ವೆ ನಿಲ್ದಾಣದಿಂದ ಹೊರಗೆ ಬಂದು ನೋಡಿದರೆ ಯಾವ ದಿಕ್ಕಿನಲ್ಲಿ ಸಾಗಬೇಕು ಎನ್ನುವುದರ ಕುರಿತು ಅಂತ-ಪಾರವೇ ಹರಿಯುತ್ತಿಲ್ಲ. ಕತ್ತಲೆಯಲ್ಲಿ ಒಂದು ದಾರಿಯಲ್ಲಿ ಹೋದೆವು. ಯಾಕೋ ಆ ದಾರಿ ಸರಿಯಲ್ಲ ಎನ್ನಿಸಿತು. ಮತ್ತೊಂದು ದಾರಿಯನ್ನು ಹಿಡಿದೆವು. ಆ ದಾರಿಯೂ ತಪ್ಪು ಎಂದೆನ್ನಿಸಿ ವಾಪಾಸು ಬಂದೆವು. ಕೊನೆಗೊಮ್ಮೆ ನಾನು ಮತ್ತೆ ಜಿಪಿಎಸ್ ಹಾಕಿ ನೋಡಿ ನಾವು ಹೋಗಬೇಕಿದ್ದ ದಾರಿಯನ್ನು ಹುಡುಕಿದೆ. ಮೂರ್ನಾಲ್ಕು ದಾರಿ ಕಾಣಿಸಿತು. ಮತ್ತೆ ಗೊಂದಲ. ಕೊನೆಗೆ ಯಾವುದೋ ಒಂದು ದಾರಿ ಕಾಣಿಸಿ, ಏನಾದರಾಗಲಿ ಇದರಲ್ಲಿಯೇ ಹೋಗೋಣ ಎಂದುಕೊಂಡು ಹೊರಟೆವು.
           1 ಕಿಮಿ ನಡೆದ ನಂತರ ನಮಗೆ ಸತಾರಾ-ಫಂಡರಾಪುರ ಹೈವೆ ಸಿಕ್ಕಿತು. ಎಲ್ಲಾದರೂ ಬಸ್ ನಿಲ್ದಾಣವನ್ನು ಹುಡುಕೋಣ ಎಂದುಕೊಂಡವರಿಗೆ ಪಕ್ಕದಲ್ಲಿಯೇ ಇದ್ದ ಬಸ್ ನಿಲ್ದಾಣ ಕಾಣಿಸಿತು. ಅಲ್ಲಿಗೆ ಹೋದರೆ ಆರೆಂಟು ಜನ ಆಗಲೇ ಸೇರಿದ್ದರು. ಒಂದೆರಡು ಆಟೋಗಳು ಹಾದು ಹೋದವು. ನಿಲ್ಲಿಸಲಿಲ್ಲ. ಕೊನೆಗೊಂದು ಆಟೋ ಬಂದಿತು. ಬರುವಾಗಲೇ ಅರ್ಧ ತುಂಬಿದ್ದ ಆಟೋದ ಬಳಿ ನಾವು ಹೋದೆವು. ನಿಲ್ಲಿಸಿದ ಪುಣ್ಯಾತ್ಮ, ನಾವು ಮೂವರು ಬರುತ್ತೇವೆ ಎಂದೆವು. ಜಾಗ ಸಾಲುತ್ತಿಲ್ಲ ಎನ್ನಿಸಿತು. ಕೊನೆಗೆ ಹೇಗು ಹೇಗೋ ಗುದ್ಯಾಡಿ ಆಟೋ ಹತ್ತಿದ್ದಾಯಿತು. ಓಲಾಡುತ್ತ ಸತಾರಾ ನಗರಿಯತ್ತ ಆಟೋ ಸಾಗಿತು.

(ಮುಂದುವರಿಯುತ್ತದೆ)

ನಾವು ಹವ್ಯಕರು-4

ನಾವು ಹವ್ಯಕರು ನಾವು ಹವ್ಯಕರು
ಪ್ರೀತಿಯ ಕರು..||
ಆಕಳು ಸಾಕಿ, ಅಡಿಕೆಯ ಬೆಳೆದು
ದುಡಿಯುವವರು ನಾವು ಹವ್ಯಕರು ||

ಯಾಲಕ್ಕಿ, ವೆನಿಲ್ಲಾ, ಕಾಳುಮೆಣಸು ಎಲ್ಲಾ
ಬಾಳೆಯ ಜೊತೆಗೆ ತೆಂಗಿನ ಬೆಳೆ
ಅಡಿಕೆ, ಕೊಕ್ಕೋ, ಭತ್ತದ ಗದ್ದೆಯ
ನಾವು ಹವ್ಯಕರು ||

ಉತ್ತರಕ್ಕೆ ಸ್ವರ್ಣವಲ್ಲಿ,
ದಕ್ಷಿಣಕ್ಕೆ ರಾಮಚಂದ್ರಾಪುರ
ಮಧ್ಯದಲ್ಲೊಂದು ನೆಲೆಮಾವು
ನಾವು ಹವ್ಯಕರು ||

ಹಬ್ಬ ಹರಿದಿನಗಳಲ್ಲಿ ನಗು
ಸೊಸೈಟಿ ಸಾಲದಲ್ಲಿ ಬಿಗು
ದಿನಂಪ್ರತಿ ನಗ್ತಾ ಇರುವ
ನಾವು ಹವ್ಯಕರು ||

ಓದಿನಲ್ಲಿ ಜೋರು, ಭಟ್ಟತನಿಕೆಯಲ್ಲಿ ಮುಂದು
ಸಾಪ್ಟ್ ವೇರ್ ಉದ್ಯೋಗದ ಜೊತೆ ಅರ್ಚಕರು
ಎಲ್ಲೆಲ್ಲು ಹವ್ಯಕರು
ನಾವು ಪ್ರೀತಿಯ ಕರು ||

-----

(ಈ ಹವಿಗವಿತೆ ಬರೆದಿದ್ದು 21-10-2015ರಂದು ಶಿರಸಿಯಲ್ಲಿ)
(ನಾವು ಹವ್ಯಕರು ಸರಣಿಯ 4ನೇ ಕವಿತೆ ಇದು. ಈ ಹಿಂದೆ ಬರೆದಿದ್ದ ಮೂರು ಕವಿತೆಗಳೂ ಬಹಳ ಚನ್ನಾಗಿದೆ ಎಂದು ಪ್ರತಿಯೊಬ್ಬರೂ ಹೇಳಿ, ಆದರಿಸಿದ್ದರಿಂದ ಖುಷಿಯಾಗಿ ನಾಲ್ಕನೆ ಕವಿತೆ ಬರೆದಿದ್ದೇನೆ ಎಂದರೆ ತಪ್ಪಾಗಲಿಕ್ಕಿಲ್ಲ. ಇದೂ ಕೂಡ ಟಪ್ಪಾಂಗುಚ್ಚಿ. ಸುಮ್ನೆ ತಮಾಷೆಗೆ ಬರೆದಿದ್ದಾದರೂ ಹೇಳಿರುವ ವಿಷಯ ಕಟು ವಾಸ್ತವ. ಓದಿ, ಖುಷಿಪಡಿ)

Tuesday, October 20, 2015

ಸಜ್ಜನರೊಡನೆ... ಸಜ್ಜನಗಡದ ಕಡೆಗೆ - 1

ಮೊದಲೇ ಒಂದೆರಡು ಮಾತು :
ಪ್ರವಾಸ ಕಥನ ಬರೆಯುವುದು ಅಂದರೆ ನನಗೆ ಬಹಳ ಅಚ್ಚುಮೆಚ್ಚು. ಬಹಳ ದಿನಗಳ ಹಿಂದೆ ಹಲವು ಪ್ರವಾಸ ಕಥನಗಳನ್ನು ಬರೆದಿದ್ದೆ. ಆಮೇಲೆ ಅದೆಷ್ಟೋ ನೂರಾರು ಪಯಣಗಳು, ಟ್ರೆಕ್ಕಿಂಗುಗಳನ್ನು ಮಾಡಿದ್ದರೂ ಬರೆಯಲು ಸಾಧ್ಯವಾಗಿರಲಿಲ್ಲ. ಕೆಲವು ತಿಂಗಳುಗಳ ಹಿಂದೆ ಮಿತ್ರರ ಜೊತೆ ಸಜ್ಜನಘಡಕ್ಕೆ ಹೋಗಿದ್ದೆ. ಬಹಳ ದಿನಗಳ ಆಸೆ. ಅವುಗಳ ಬಗ್ಗೆ ಇಲ್ಲಿ ಬರೆದಿದ್ದೇನೆ. 

****

            ಸಜ್ಜನಘಡಕ್ಕೆ ಒಂದ್ ಸಾರಿ ಹೋಗ್ ಬರವು.. ಇಂತದ್ದೊಂದು ಆಲೋಚನೆ ನನ್ನಲ್ಲಿ ಮೂಡಲು ಪ್ರಮುಖ ಕಾರಣ ಎಂದರೆ ದೊಡ್ಡಮ್ಮನ ಮಗ ಗಿರೀಶ ಕಲ್ಲಾರೆ. ಮೂರ್ನಾಲ್ಕು ವರ್ಷಗಳ ಹಿಂದೆ ಅಕ್ಟೋಬರ್ ರಜೆಯ ಸಂದರ್ಭದಲ್ಲಿ ಆತ ನನ್ನ ಬಳಿ ಸಜ್ಜನಘಡಕ್ಕೆ ಹೋಗಿ ಬರೋಣ್ವಾ ಎಂದು ಕೇಳಿದ್ದ. ಆದರೆ ಅದೇನು ಕಾರಣವೋ, ನಮಗೆ ಅದು ಸಾಧ್ಯವಾಗಿರಲಿಲ್ಲ. ಪಾಪ ಗಿರೀಶಣ್ಣ ನನ್ನ ಬಳಿ ಪ್ರತಿ ವರ್ಷ ಹೋಗೋಣ್ವಾ ಎಂದು ಕೇಳುತ್ತಲೇ ಇದ್ದ. ನಾನೂ ಒಪ್ಪಿಕೊಳ್ಳುತ್ತಿದ್ದೆ. ಆದರೆ ತದನಂತರ ಅದೇನು ನೆಪವೋ ನಮಗೆ ಹೋಗಲಾಗುತ್ತಿರಲಿಲ್ಲ.
          ಈ ಸಜ್ಜನಘಡದ ವಿಷಯವನ್ನು ಮಾವನ ಮಗ ಪ್ರಶಾಂತನ ಬಳಿ ಗಿರೀಶ ಹೇಳಿದ್ದ. ನಂತರದ ದಿನಗಳಲ್ಲಿ ನಾನೂ ಅಲ್ಲಿಗೆ ಹೋಗಿ ಬರೋಣ ಎಂದು ಮಾತನಾಡಿದ್ದೆ. ಆತನೂ ಒಪ್ಪಿಕೊಂಡಿದ್ದ. ಇದೂ ಕೂಡ ಒಂದೆರಡು ವರ್ಷಗಳ ಹಿಂದಿನ ಮಾತು. ಆಮೇಲೆ ನಮಗೆ ಸಜ್ಜನಘಡಕ್ಕೆ ಹೋಗಿ ಬರಬೇಕೆಂಬ ಬಯಕೆ ಪದೇ ಪದೆ ಮನಸ್ಸಿನಲ್ಲಿ ಮೂಡುತ್ತಲೇ ಇತ್ತು. ಹೋಗಿದ್ದಾಗ ಕಳೆದ ಒಂದೂವರೆ ತಿಂಗಳಿನ ಹಿಂದೆ ಪ್ರಶಾಂತ ಭಾವ ಇದ್ದಕ್ಕಿದ್ದಂತೆ ಪೋನ್ ಮಾಡಿ, `ವಿನಯಾ.. ಸಜ್ಜನಘಡಕ್ಕೆ ಹೋಗಿ ಬಪ್ಪನಾ. ಬತ್ಯನಾ?' ಎಂದ. ನಾನು ಹೂ ಅಂದೆ. 
          ಮನಸ್ಸಿನಲ್ಲಿ ಈ ಸಾರಿಯೂ ಅಲ್ಲಿಗೆ ಹೋಗುವುದರ ಬಗ್ಗೆ ಸಂದೇಹಗಳಿದ್ದವು. ಆದರೆ ಪ್ರಶಾಂತ ಭಾವನ ಜೊತೆ ನಾನು ಹೊರಟರೆ ಏನಾದರೂ ಮಾಡಿ ಬಿಡುತ್ತೇವೆ ಎನ್ನುವ ಆಲೋಚನೆಯೂ ಬಂದಿತು. ಈ ಹಿಂದೊಮ್ಮೆ ತಿರುಪತಿಗೆ ನಾವಿಬ್ಬರೇ ಹೋಗಿದ್ದೆವು. ಮದ್ಯಾಹ್ನ ಹುಬ್ಬಳ್ಳಿಗೆ ಹೋಗಿ, ಹರಿಪ್ರಿಯಾ ಎಕ್ಸ್ ಪ್ರೆಸ್ ಹತ್ತಿ, ಮರುದಿನ 11 ಗಂಟೆಯ ವೇಳೆಗೆ 45 ರು. ವೆಚ್ಚದಲ್ಲಿ ತಿರುಪತಿ ಮುಟ್ಟಿದ್ದ ನಾವು ಸಂಜೆಯ ಒಳಗೆ ತಿರುಪತಿ ದೇವರ ದರ್ಶನ ಮಾಡಿದ್ದೆವು. ನಂತರ ಸಂಜೆ ತಿರುಪತಿ-ಮೈಸೂರು ರೈಲು ಹತ್ತಿ, ಬೆಂಗಳೂರಿಗೆ ಮರುದಿನ ಬೆಳಿಗ್ಗೆ ವೇಳೆಗೆ ಬಂದಿಳಿದಿದ್ದೆವು. ಅಲ್ಲಿಂದ ಯಲ್ಲಾಪುರ ಬಸ್ಸನ್ನು ಹತ್ತಿ  ಎರಡು ದಿನಗಳ ಒಳಗಾಗಿ ವಾಪಸಾಗಿದ್ದೆವು.
               ವಿಚಿತ್ರವೆಂದರೆ 2008ರ ಸಂದರ್ಭ ಅದು, ನನಗಿನ್ನೂ ಉದ್ಯೋಗ ಸಿಕ್ಕಿರಲಿಲ್ಲ. ನನ್ನ ಬಳಿ ನಯಾಪೈಸೆ ದುಡ್ಡಿರಲಿಲ್ಲ. ಮನೆಯಲ್ಲಿಯೂ ಬಹಳ ಕಷ್ಟದ ದಿನಗಳು ಅವು. ಅಮ್ಮನ ಬಳಿ ತಿರುಪತಿ ಟ್ರಿಪ್ಪಿನ ವಿಷಯ ಹೇಳಿದಾಗ ಅಲ್ಲಿ ಇಲ್ಲಿ ಹುಡುಕಿ 150 ರು. ಕೊಟ್ಟಿದ್ದರು. ಅದರಲ್ಲಿ ಹುಬ್ಬಳ್ಳಿ ಬಸ್ಸಿನಲ್ಲಿ ಟಿಕೆಟ್ ಕೊಂಡು ಹೋಗಿದ್ದಾಗ ಟಿಕೆಟ್ ಕಳೆದು ಹೋಗಿ ಗಲಾಟೆ ಆಗಿತ್ತು. ಕೊನೆಗೆ ದಮ್ಮಯ್ಯ ದಾತಾರಾ ಎಂದು ಹೇಳಿ ಹುಬ್ಬಳ್ಳಿ ತಲುಪಿದ್ದೆ. ನಂತರ ಪ್ರಶಾಂತ ಭಾವನೇ ನನ್ನೆಲ್ಲ ಖರ್ಚುಗಳನ್ನು ಹಾಕಿಕೊಂಡು ತಿರುಪತಿ ದರ್ಶನ ಮಾಡಿಸಿದ್ದ.
              ಸಜ್ಜನಘಡಕ್ಕೆ ಹೋಗೋಣ ಎಂದು ಹೇಳಿದಾಗಲೂ ನನ್ನ ಪರಿಸ್ತಿತಿ ಇದಕ್ಕಿಂತ ಭಿನ್ನವಾಗಿರಲಿಲ್ಲ. ಹೆಸರಿಗೆ ನಾನು ಕನ್ನಡಪ್ರಭದಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದೆ. ಆದರೆ ಕಳೆದ 6 ತಿಂಗಳಿನಿಂದ ಸಂಬಳ ಕೊಟ್ಟಿರಲಿಲ್ಲ. ಕೇಳಿದರೆ ಇವತ್ತು, ನಾಳೆ ಎಂದು ಸಬೂಬು ಹೇಳುತ್ತಿದ್ದರು. ಕನ್ನಡಪ್ರಭಕ್ಕೆ, ಅದರ ಮ್ಯಾನೇಜ್ ಮೆಂಟಿಗೆ ಪ್ರತಿದಿನ ಹಿಡಿಶಾಪ ಹಾಕುತ್ತಿದ್ದೆ. ಆ ಸಂದರ್ಭದಲ್ಲಿ ಪ್ರಶಾಂತ ಭಾವ ಪೋನ್ ಮಾಡಿ ಸಜ್ಜನಘಡಕ್ಕೆ ಹೋಗುವ ಬಗ್ಗೆ ತಿಳಿಸಿದ್ದ. ನಾನು ಒಪ್ಪಿಕೊಂಡ ಮೇಲೆ ಆತನ ಬಳಿ ಕನ್ನಡಪ್ರಭದವರು ದುಡ್ಡು ಕೊಟ್ಟಿಲ್ಲ. ನನ್ನ ಖರ್ಚನ್ನು ನೀನೇ ನೋಡಿಕೊಳ್ಳಬೇಕು ಎಂದು ಹೇಳಿದ್ದೆ. ಆತ ಒಪ್ಪಿಕೊಂಡಿದ್ದ.
             `ನಮ್ ಜೊತೆ ಇನ್ಯಾರಾದರೂ ಬರ್ತಿ ಅಂದ್ರೆ ಅವ್ಕೆಲ್ಲಾ ಹೇಳಲಕ್ಕನೋ..' ಎಂದು ಪ್ರಶಾಂತ ಭಾವನ ಬಳಿ ಕೇಳಿದ್ದೆ. `ಹೇಳು ಮಾರಾಯಾ.. ತೊಂದರೆ ಇಲ್ಲ..' ಎಂದಿದ್ದ. ನಾನು ನನ್ನ ತಂಗಿ ಸುಪರ್ಣ ಹಾಗೂ ಭಾವ ನಾಗರಾಜನ ಬಳಿ ಹೇಳಿದ್ದೆ. ಮೊದ ಮೊದಲು ಅವರು ಒಪ್ಪಿಕೊಂಡಿದ್ದರು. ಆದರೆ ಅವರಿಗೂ ಕನ್ನಡಪ್ರಭದ ಸಂಬಳ ಬಂದಿರಲಿಲ್ಲ. ಹಾಗಾಗಿ ಕೊನೆಯ ಕ್ಷಣದಲ್ಲಿ ಪ್ರವಾಸ ರದ್ದು ಮಾಡಿದರು. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ದೋಸ್ತ ನಾಗರಾಜ ವೈದ್ಯನ ಬಳಿ  ಪ್ರಶಾಂತ ಭಾವ ಕೇಳಿದ್ದನಂತೆ. ಆತನೂ ಬರಲಿಕ್ಕಾಗುವುದಿಲ್ಲ ಎಂದಿದ್ದ. ಕೊನೆಗೆ ದೊಡ್ಡಮ್ಮನ ಮಗ ಗುರುವಿನ ಬಳಿ ಹೇಳಲಾಯಿತು. ಮೊದ ಮೊದಲು ಬರಲು ಒಪ್ಪಿದ್ದ ಗುರು ನಂತರದ ದಿನಗಳಲ್ಲಿ ಬರಲಿಕ್ಕಾಗುವುದಿಲ್ಲ ಎಂದ. ಗಿರೀಶನೂ ಆಗುವುದಿಲ್ಲ ಎಂದ. ಕೊನೆಗೆ ಮಿತ್ರ ಸಂಜಯ ಭಟ್ಟ ಬೆಣ್ಣೆ ನೆನಪಾದ. ಆತನಿಗೆ ಹೊರಡಲು ಎರಡು ದಿನ ಇದ್ದಾಗ ಪೋನ್ ಮಾಡಿದೆ. `ದೋಸ್ತಾ, ತಿರುಗಾಟ ಎಲ್ಲೇ ಇರ್ಲಿ. ಹೇಳಾ ನೀನು. ಆನು ಬತ್ತಿ..' ಎಂದವನೇ ತಯಾರಾಗಿದ್ದ.
           ನಂತರದ ದಿನಗಳಲ್ಲಿ ಹೋಗುವ ತಯಾರಿ ಸ್ವಲ್ಪ ಭರದಿಂದ ನಡೆಯಿತು. ಜುಲೈ 11 ಹಾಗೂ 12ರಂದು ಸಜ್ಜನಘಡಕ್ಕೆ ಹೋಗುವುದು ನಿಕ್ಕಿಯಾಗಿತ್ತು. ಹೋಗುವ ಮೊದಲು ನಾನು ಹಾಗೂ ಪ್ರಶಾಂತ ಭಾವ ಹೆಗೆ ಹೋಗೋದು ಎನ್ನುವ ಬಗ್ಗೆ ಬಹಳ ಮಾತನಾಡಿಕೊಂಡಿದ್ದೆವು. ನಾನೂ ನನ್ನ ಮೊಬೈಲಿನಲ್ಲಿ ರೂಟ್ ಮ್ಯಾಪ್ ನೋಡಿಕೊಂಡಿದ್ದೆ. ರೈಲಿನಲ್ಲಿ ಹೋಗುವುದು ಚೀಪ್ ಎಂಡ್ ಬೆಸ್ಟ್ ಎಂಬ ನಿರ್ಧಾರಕ್ಕೆ ಬಂದಿದ್ದೆವು. ಶಿರಸಿಯಿಂದ ಸಜಮಾಸು 500 ಕಿಮಿ ದೂರದಲ್ಲಿರುವ ಸಜ್ಜನ ಘಡಕ್ಕೆ ಹೋಗುವ ಮೊದಲು ಸತಾರಾ ವರೆಗೆ ಹುಬ್ಬಳ್ಳಿಯಿಂದ ರೈಲಿನಲ್ಲಿ ಹೋಗುವುದು ಎನ್ನುವ ತೀರ್ಮಾನಕ್ಕೆ ನಾವು ಬಂದೆವು. ಆದರೆ ನಮಗೆ ರೈಲು ಟಿಕೆಟ್ ಸಿಕಬೇಕಲ್ಲ ಮಾರಾಯ್ರೆ. ಹುಬ್ಬಳ್ಳಿಯಲ್ಲಿ ಮದ್ಯಾಹ್ನ 3.30ಕ್ಕೆ ಹೊರಡುವ ರೈಲು ಮಧ್ಯರಾತ್ರಿ 12 ಗಂಟೆಗೆ ಸತಾರಾಕ್ಕೆ ತಲುಪುತ್ತದೆ. ಅಲ್ಲಿಂದ ಸಜ್ಜನಘಡಕ್ಕೆ ಹೋಗುವುದೆಂದರೆ ರಾತ್ರಿಯ ವೇಳೆ ಅಸಾಧ್ಯದ ಮಾತು. ಮೊದಲು ಸತಾರಾ ತನಕ ಹೋಗೋಣ ಆಮೇಲೆ ಮುಂದಿನದ್ದನ್ನು ನೋಡೋಣ ಎಂದುಕೊಂಡೆವು.
          ನಾನು ಯಾವುದಕ್ಕೂ ಇರಲಿ ಎಂದು ನನ್ನ ಸೀನಿಯರ್ ಆಗಿ ಕೆಲಸ ಮಾಡುತ್ತಿದ್ದ ಹುಬ್ಬಳ್ಳಿಯ ಮಹಾದೇವ ಸರ್ ಅವರ ಬಳಿ ಸಜ್ಜನಘಡದ ವಿಷಯವನ್ನು ಹೇಳಿದ್ದೆ.  `ನೀವ್ ಯಾಕ್ರೀ ತಲೆ ಕೆಡಿಸ್ಕಳ್ತೀರಿ. ಬರ್ರೀ ಸುಮ್ನೆ. ಟಿಕೆಟ್ ವಿಷ್ಯ ನಂಗ್ ಬಿಡ್ರಿ..' ಎಂದು ಹೇಳಿದ್ದರು. `ಬರುವಾಗ ನಿಮ್ಮ ಐಡೆಂಟಿಟಿ ಕಾರ್ಡ್ ತರೋದನ್ನ ಮರೀಬ್ಯಾಡ್ರೀ..' ಎಂದೂ ತಿಳಿಸಿದ್ದರು. ನಾನು `ಬೇಡ ಬಿಡ್ರೀ...' ಎಂದು ಹೇಳುತ್ತಿದ್ದರೂ ಅವರು ಪೋನ್ ಇಟ್ಟಿದ್ದರು.
           ಜುಲೈ 11ರಂದು ಮುಂಜಾನೆ ನನಗೆ ಅನೇಕ ಕೆಲಸಗಳಿದ್ದವು. ಮದ್ಯಾಹ್ನ 2 ಗಂಟೆ ಒಳಗೆ ಹುಬ್ಬಳ್ಳಿಯನ್ನು ತಲುಪಿ ಅಲ್ಲಿ ಊಟ ಮುಗಿಸಿ ರೈಲು ಹತ್ತಬೇಕಿತ್ತು. ಮುಂಜಾನೆಯೇ ಸ್ನಾನ ಮುಗಿಸಿ ತಯಾರಾಗಿದ್ದೆ. ಅಷ್ಟರಲ್ಲಿ ಸಂಜಯ ಪೋನ್ ಮಾಡಿ `ಆನು ಬರ್ತಾ ಇದ್ದಿ.. ಬೈಕ್ ಎಲ್ಲಿಡವೋ..' ಎಂದಿದ್ದ. ಆತನನ್ನು ಶಿರಸಿಯ ತಂಗಿಯ ಮನೆಗೆ ಕರೆಸಿಕೊಂಡು ಆತನ ಬೈಕ್ ಇರಿಸಿ, ತಿಂಡಿ ತಿನ್ನುವ ಶಾಸ್ತ್ರ ಮುಗಿಸಿ ಶಿರಸಿ ಬಸ್ ನಿಲ್ದಾಣದ ಕಡೆ ಹೊರಡುವ ವೇಳೆಗೆ 12 ಗಂಟೆಯಾಗುತ್ತಿತ್ತು. ಅದೇನೋ ಮರೆತೆವು ಎಂದು ಮತ್ತೆ ರೂಮಿಗೆ ವಾಪಾಸಾಗಿ ಮರಳಿ ಬಸ್ ಹತ್ತುವ ವೇಳೆಗೆ ಆಗಲೇ 12.15.
            ಬೆಳಿಗ್ಗೆಯೇ ಹೆಗ್ಗಾರಿನಿಮದ ಹೊರಟಿದ್ದ ಪ್ರಶಾಂತ ಭಾವ ಹುಬ್ಬಳ್ಳಿಯನ್ನು ತಲುಪಿ ಪೋನ್ ಮೇಲೆ ಪೋನ್ ಮಾಡುತ್ತಿದ್ದ. `ಥೋ.. ಇನ್ನೂ ಬಂಜ್ರಿಲ್ಯನಾ ಮಾರಾಯಾ.. ಟೈಮ್ ಆಗೋತು. ಬಡಾ ಬಡಾ ಬನ್ನಿ ನೋಡ್ವಾ.. ರೈಲು ತಪ್ಪಿ ಹೋದ್ರೆ ನಮ್ ಕಥೆ ಅಷ್ಟೇಯಾ..' ಎಂದು ಹೇಳುತ್ತಿದ್ದ. ಅವನಿಗೆ ಏನೇನೋ ಸಬೂಬು ಹೇಳಿದ್ದಾಯಿತು.
           ನಾವು ಹತ್ತಿದ್ದ ಬಸ್ ವೇಗವಾಗಿಯಾದರೂ ಸಾಗುತ್ತದೆಯೇ ಇಲ್ಲ. ಕುಯ್ಯೋ.. ಮರ್ರೋ.. ಎಂದು ನಿಧಾನವಾಗಿ ಸಾಗುತ್ತಿತ್ತು. ನಾವು ದಾರಿಯನ್ನು ಸವೆಸಬೇಕಾದರೆ ಬೇಸರ ಆಗದಿರಲಿ ಎಂದು ಸುದ್ದಿ ಹೇಳಿದೆವು. ಮುಂಡಗೋಡಿನಲ್ಲಿ ಜೋಳವನ್ನು ತಿಂದು ಹುಬ್ಬಳ್ಳಿಯನ್ನು ತಲುಪುವ ವೇಳೆಗೆ ಆಗಲೇ 2.45 ಆಗಿತ್ತು. ಟೈಮಿಲ್ಲ ಮಾರಾಯ್ರೇ ಎಂದುಕೊಂಡವರಿಗೆ ಮಾದೇವ ಸರ್ ಸಿಕ್ಕಿರಲಿಲ್ಲ. ಅವರು ಟಿಕೆಟ್ ಕೊಡುತ್ತೇನೆ ಸಿಗ್ರಿ ಎಂದು ಹೇಳಿದ್ದರು. ನಮಗೆ ಊಟವೂ ಆಗಿರಲಿಲ್ಲ. ಮಾದೇವ ಸರ್ ಪೋನ್ ಮಾಡಿ `ನೀವು ಊಟ ಮುಗಿಸಿ. ಅಷ್ಟರಲ್ಲಿ ನಾನು ನಿಮಗೆ ಸಿಗ್ತೀನಿ. ಟಿಕೆಟ್ ಕೊಡ್ತೀನಿ..' ಎಂದಿದ್ದರು. ಆಗಲೇ ಗಡಿಯಾರದಲ್ಲಿ ಮೂರು ಗಂಟೆ ತೋರಿಸುತ್ತಿತ್ತು. ಟೈಂ ಆಗ್ತಾ ಇದೆ ಬನ್ರೋ ಬೇಗ ಎಂದು ಪ್ರಶಾಂತ ಭಾವ ಊಟ ಮಾಡಲಿಕ್ಕೂ ಬಿಡದಂತೆ ನಿಮಿಷಕ್ಕೊಂದು ಪೋನ್ ಮಾಡುತ್ತಿದ್ದ.
          ಅಯೋಧ್ಯಾ ಹೊಟೆಲಿನಲ್ಲಿ ಊಟ ಮುಗಿಸುವ ವೇಳೆಗೆ ಸರಿಯಾಗಿ ಮಾದೇವ ಸರ್ ಬಂದಿದ್ದರು. ಟಿಕೆಟ್ ಕೊಟ್ಟರು. 3 ಬರ್ತ್ ಸೀಟುಗಳನ್ನು ಬುಕ್ಕಿಂಗ್ ಮಾಡಿಸಿದ್ದರು. 250*3 ರಂತೆ 750 ರು. ಆಗಿತ್ತು. ನಾವು ಟಿಕೆಟ್ ದುಡ್ಡು ಕೊಡಲು ನೋಡಿದರೆ ಮಾದೇವ ಸರ್ ಇಸ್ಕೊಳ್ಳಲಿಲ್ಲ. ಎಷ್ಟು ಒತ್ತಾಯ ಮಾಡಿದರೂ ಕೊನೆಗೂ ಇಸ್ಕೊಳ್ಳಲೇ ಇಲ್ಲ ಬಿಡಿ. ಆಗಲೇ 3.15 ಆಗಿತ್ತು. ಮತ್ತೊಮ್ಮೆ ಪೋನ್ ಮಾಡಿದ ಪ್ರಶಾಂತ ಭಾವ `ಯಾವ್ದೋ ರೈಲು ಹೊರಡ್ತಾ ಇದ್ದು. ಬೇಗ ಬರ್ರೋ..' ಎಂದು ಮತ್ತೊಮ್ಮೆ ಪೋನ್ ಮಾಡಿದ್ದ. ತಡಿಯಾ ಬತ್ತಾ ಇದ್ಯ ಎಂದು ಹೇಳಿ ಆಟೋವೊಂದನ್ನು ಹತ್ತಿ ರೈಲ್ವೆ ನಿಲ್ದಾಣದ ಬಳಿ ಬಳಿ ಬರುವಾಗಲೇ 3.25. ಇನ್ನೈದು ನಿಮಿಷದಲ್ಲಿ ನಿಲ್ದಾಣದ ಒಳಗೆ ಹೋಗಿ, ಪ್ರಶಾಂತ ಭಾವನನ್ನು ಹುಡುಕಿ, ಟ್ರೈನನ್ನು ಹಿಡಿಯಲು ಇನ್ನು ಕನಿಷ್ಟ 10 ನಿಮಿಷ ಬೇಕಾಗುತ್ತದೆ. ರೈಲು ತಪ್ಪೋದು ಗ್ಯಾರಂಟಿ ಎಂದುಕೊಂಡೆವು. ಓಡೋಡುತ್ತ ನಿಲ್ದಾಣದ ಒಳಗೆ ಹೋದರೆ ಪ್ರಶಾಂತ ಭಾವ ನಮಗಾಗಿ ಕಾಯುತ್ತ ನಿಂತಿದ್ದ.
           `ಬೇಗ್ನೆ ಬನ್ನಿ ಹೇಳಿದ್ದಿ. ನಿಂಗವ್ ಬಂಜ್ರಿಲ್ಲೆ. ಆನು ಬಂದು ಆಗ್ಲೆ 2-3 ತಾಸು ಆತು ನೋಡಿ..' ಎಂದ. ನಾನು ರೈಲು ಟಿಕೆಟ್ ತೋರಿಸಿದೆ. 3.45ಕ್ಕೆ ರೈಲಿನ ಸಮಯ ನಿಗದಿಯಾಗಿತ್ತು. ಒಮ್ಮೆ ನಿರಾಳರಾಗಿ ಪ್ಲಾಟ್ ಫಾರ್ಮನ್ನು ಹತ್ತಿ ರೈಲಿನ ಬಳಿಗೆ ಹೋದೆವು. ಸತಾರಾ, ಪುಣಾ ಮಾರ್ಗವಾಗಿ ಹೋಗಲು 3.30ಕ್ಕೆ ಒಂದು ಹಾಗೂ 3.45ಕ್ಕೆ ಇನ್ನೊಂದು ರೈಲುಗಳಿದ್ದವು. ಪ್ರಶಾಂತ ಭಾವ ನಾವು ಹೋಗಬೇಕಿದ್ದುದು 3.30ರ ರೈಲು ಇರಬೇಕು ಎಂದುಕೊಂಡು ಬಹಳ ಗಡಬಡೆ ಮಾಡಿದ್ದ. ನಾವು ಎದ್ದೋಬಿದ್ದೋ ಬಂದಿದ್ದೆವು. ಆದರೆ ನಾವು ಹೋಗಬೇಕಿದ್ದ 3.45ರ ಲೋಕಮಾನ್ಯ ತಿಲಕ್ ಎಕ್ಸ್ ಪ್ರೆಸ್ ನಮಗಾಗಿಯೇ ಕಾಯುತ್ತಿತ್ತು.
           ನಮಗೆ ಬುಕ್ ಆಗಿದ್ದ ಟಿಕೆಟಿನಲ್ಲಿ ನನಗೆ ಹಾಗೂ ಸಂಜಯನಿಗೆ 1 ಬೋಗಿಯಲ್ಲಿ 2 ಸೀಟ್ ಸಿಕ್ಕಿದ್ದರೆ ಪ್ರಶಾಂತ ಭಾವನಿಗೆ ಮಾತ್ರ ಇನ್ನೊಂದು ಬೋಗಿಯಲ್ಲಿ ಸೀಟ್ ಸಿಕ್ಕಿತ್ತು. ಟಿಸಿ ಬಂದು ಕೇಳಿದರೆ ಏನಾದರೂ ಸಬೂಬು ಹೇಳೋಣ ಎಂದುಕೊಂಡ ಕುಳಿತೆವು. ಅಷ್ಟರಲ್ಲಿ ಒಂದಿಷ್ಟು ತಿಂಡಿ ಸೇವನೆಯೂ ನಡೆಯಿತು. ರೈಲು ನಿಧಾನವಾಗಿ ಹೊರಡಲು ಅನುವಾಯಿತು. ಒಂದೆರಡು ಸಾರಿ ಕೂಗಿಕೊಂಡ ರೈಲು ನಿಧಾನವಾಗಿ ಮುನ್ನಡೆಯಿತು. ನಾಳೆ ಬೆಳಗಾದರೆ ಸಜ್ಜನಘಡ ಎಂಬ ಕನಸಿನೊಂದಿಗೆ ನಾವು ಹಿಗ್ಗಿದೆವು. ಟ್ರೈನಿನಲ್ಲಿ ಜನರೇ ಇರಲಿಲ್ಲ. ಮತ್ತೊಂದು 10 ನಿಮಿಷಕ್ಕೆ ಧಾರವಾಡ ರೈಲು ನಿಲ್ದಾಣ ಬಂದಿತು. ನಮ್ಮ ಕೈಗೆ ಮೊಬೈಲುಗಳು ಬಂದಿದ್ದವು. ಒಂದೆರಡು ಸೆಲ್ಫಿಗಳನ್ನು ಕ್ಲಿಕ್ಕಿಸಿಯೂ ಆಗಿತ್ತು. ಆಗಲೇ ಫೇಸ್ ಬುಕ್ಕಿಗೆ ಏರಿಸಿ ನಾಲ್ಕೈದು ಲೈಕುಗಳೂ ಬಂದಿದ್ದವು. ಖಾಲಿಯಿದ್ದ ರೈಲಿನಲ್ಲಿ, ನಿಂತು, ಕುಳಿತು, ಮಲಗಿ, ಬಾಗಿಲಿನಲ್ಲಿ ನಿಂತು ಈ ಮುಂತಾದ ಬಗೆಯಲ್ಲೆಲ್ಲ ಪೋಟೋಗಳನ್ನು ಕ್ಲಿಕ್ಕಿಸಿದ್ದಾಯಿತು. ಈ ನಡುವೆ ಎಂದೋ ಪರಿಚಯವಾಗಿ ಮರೆತು ಹೋಗವಂತಾಗಿದ್ದ ಪ್ರಶಾಂತ ಹಾಗೂ ಸಂಜಯರನ್ನು ಮತ್ತೊಮ್ಮೆ ಪರಿಚಯ ಮಾಡಿಕೊಟ್ಟು  ಮಾತಾಡ್ಕಳ್ಳಿ ಎಂದು ನಾನು ಸುಮ್ಮನಾಗಿದ್ದೆ. ಅಂತೂ ಇಂತೂ ಮೂವರೂ ಸಜ್ಜನಘಡದ ಕಡೆಗೆ ಹೊರಟಿದ್ದೆವು. ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿದ್ದ ಸಮರ್ಥರಾಮದಾಸರ ಭೂಮಿ, ಶಿವಾಜಿಗೆ ಮಾರ್ಗ ತೋರಿದ ನಾಡು, ಸದ್ಗುರು ಶ್ರೀಧರ ಸ್ವಾಮೀಜಿಗಳು ತಪಸ್ಸನ್ನಾಚರಿಸಿದ ಮಹಿಮಾ ಸ್ಥಳದ ಕಡೆಗೆ ನಾವು ಹೊರಟಿದ್ದೆವು. ಸೂರ್ಯ ಪಶ್ಚಿಮದ ಕಡೆಗೆ ಮುಖ ಮಾಡಿದ್ದನಾದರೂ ತೇಜಸ್ಸು ಕಡಿಮೆಯಾಗಿರಲಿಲ್ಲ.

(ಮುಂದುವರಿಯುತ್ತದೆ)

Friday, October 9, 2015

ಮಾಸ್ತರ್ ಮಂದಿ-8

           ಕಾನ್ಲೆ ಹೈಸ್ಕೂಲಿನಲ್ಲಿ ಕಲಿಸಿದ ವಿನೋದಾ ನಾಯ್ಕ್ ಹಾಗೂ ಸುಜಾತಾ ಮೇಡಮ್ ಬಗ್ಗೆ ಬರೆಯಲೇಬೇಕು. ಇಬ್ಬರೂ ಅಷ್ಟೇನೂ ಸ್ಟ್ರಿಕ್ಟ್ ಇರಲಿಲ್ಲ ಬಿಡಿ. ಆದರೆ ಅವರ ವಿಶಿಷ್ಟ ಹಾವ ಭಾವದಿಂದಾಗಿ ನಮ್ಮಲ್ಲಿ ಅಚ್ಚಳಿಯದೇ ಉಳಿದು ಹೋಗಿದ್ದಾರೆ. ಸುಜಾತಾ ಮೇಡಮ್ ಹಿಂದಿ ಕಲಿಸುತ್ತಿದ್ದರು. ವಿನೋದಾ ನಾಯ್ಕ್ ಮೇಡಮ್ ಹೊಲಿಗೆ ಕಲಿಸಲು ಬರುತ್ತಿದ್ದರು. ಅವರ ಕ್ಲಾಸಿನಲ್ಲಿ ಕೂರುವುದು ಅಂದರೆ ಮಜವೇ ಮಜಾ ಬಿಡಿ

ವಿನೋದಾ ನಾಯ್ಕ್ :
            ವಿ.ಎಸ್.ಎನ್  ಎಂಬ ಶಾರ್ಟ್ ಫಾರ್ಮಿನಿಂದ ಕರೆಸಿಕೊಳ್ಳುತ್ತಿದ್ದ ವಿನೋದಾ ನಾಯ್ಕ ಮೇಡಮ್ ನಾನು ಎಂಟನೇ ಕ್ಲಾಸಿನಲ್ಲಿದ್ದಾಗ ಕೊನೆ ಕೊನೆಯಲ್ಲಿ ಶಾಲೆಗೆ ವರ್ಗವಾಗಿ ಬಂದಿದ್ದರು. ಮೂಲತಃ ಉತ್ತರ ಕನ್ನಡದವರಾಗಿದ್ದ ವಿನೋದಾ ನಾಯ್ಕ ಅವರ ಯಜಮಾನರೂ ಹೈಸ್ಕೂಲು ಶಿಕ್ಷಕರಾಗಿದ್ದರು. ಹೊಲಿಗೆ ಶಿಕ್ಷಕಿಯಾಗಿ ಬಂದಿದ್ದ ಮೇಡಂ ಏನು ಕಲಿಸಿದರೋ. ನಾವೇನು ಕಲಿತೆವೋ ಗೊತ್ತಿಲ್ಲ ನೋಡಿ. ನಾಲ್ಕೈದು ದಿನ ಕಾನಲೆಯ ನನ್ನ ದೊಡ್ಡಪ್ಪನ ಮನೆಯಿಂದ ದೊಡ್ಡಮ್ಮನಿಗೆ ಭಾಗಿನಕ್ಕೆಂದು ಬಂದಿದ್ದ ಒಂದೆರಡು ವಾರುಗಳನ್ನು, ಶರ್ಟ್ ಫೀಸುಗಳನ್ನು ಹೈಸ್ಕೂಲಿಗೆ ಒಯ್ದಿದ್ದೆ. ದಾರದುಂಡೆ, ಸೂಜಿಗಳನ್ನು ಹಿಡಿದು ಹೋಗುತ್ತಿದ್ದೆವು. ತೋಳಿಲ್ಲದ ಝಬಲಾ, ಚೈನ್ ಹೊಲಿಗೆ ಈ ಮುಂತಾದ ಕೆಲವು ಹೊಲಿಗೆ ಪದ್ಧತಿಗಳನ್ನು ನಮಗೆ ಕಲಿಸಿದ್ದು ನೆನಪಿನಲ್ಲಿದೆ. ಆದರೆ ಹೊಲಿಗೆಗೆ ಸಂಬಂಧಿಸಿದಂತೆ ಯಾವುದೇ ಪರೀಕ್ಷೆಗಳನ್ನು ವಿನೋದಾ ಮೇಡಂ ನಡೆಸಲಿಲ್ಲ.
            ಒಂಭತ್ತನೇ ಕ್ಲಾಸಿನಲ್ಲಿ ನಾನು ಓದುತ್ತಿದ್ದಾಗ ವಿನೋದಾ ಮೇಡಂ ಕೆಲ ಕಾಲ ಇಂಗ್ಲೀಷ್ ಹಾಗೂ ಮತ್ತೆ ಕೆಲ ಕಾಲ ಸಮಾಜ ವಿಜ್ಞಾನಗಳನ್ನು ಕಲಿಸಲು ಬರುತ್ತಿದ್ದರು. ಇಂಗ್ಲೀಷ್ ಶಿಕ್ಷಕರಾಗಿದ್ದ ಬಿ. ಆರ್. ಲಕ್ಷ್ಮೀನಾರಾಯಣ ಹಾಗೂ ಸಮಾಜ ವಿಜ್ಞಾನ ಶಿಕ್ಷಕರಾಗಿದ್ದ ವನಮಾಲಾ ಮೇಡಂ ದೀರ್ಘಕಾಲದ ರಜೆ ಹಾಕಿದಾಗ ವಿನೋದಾ ಮೇಡಂ ಇವೆರಡೂ ವಿಷಯಗಳನ್ನು ಕಲಿಸಲು ಬರುತ್ತಿದ್ದರು. ಒಂದು ದಿನ ವಿದ್ಯಾರ್ಥಿಗಳೆಲ್ಲ ಸೇರಿ ಗ್ಲೋಬ್ ನೋಡುತ್ತಿದ್ದೆವು. ವಿನೋದಾ ಮೇಡಂ ಸಮಾಜ ವಿಜ್ಞಾನ ಕಲಿಸುತ್ತಿದ್ದವರು ಸಖತ್ ಜೋಶ್ ನಲ್ಲಿದ್ದರು. ಆ ದಿನಗಳಲ್ಲಿ ನಾನು ಕ್ಲಾಸಿಗೆ ಅತ್ಯಂತ ಇಂಟಲಿಜೆಂಟ್ ವಿದ್ಯಾರ್ಥಿ. ವಿನೋದಾ ಮೇಡಂ ಗ್ಲೋಬಿನಲ್ಲಿ ವಿವಿಧ ದೇಶಗಳನ್ನು ತೋರಿಸುತ್ತಿದ್ದರು. ನಾನು ಪ್ರೈಮರಿ ಶಾಲೆಯಲ್ಲಿದ್ದಾಗಲೇ ಗ್ಲೋಬ್ ಗಳನ್ನು ನೋಡಿ ದೇಶಗಳನ್ನು ಹುಡುಕಿ, ಅವುಗಳ ರಾಜಧಾನಿಗಳ ಹೆಸರನ್ನು ಬಾಯಲ್ಲಿ ಉರುಹೊಡೆದುಕೊಳ್ಳುತ್ತಿದ್ದೆ. ಅಮೇರಿಕಾ, ಕೆನಡಾ, ಬ್ರಿಟನ್ ಸೇರಿದಂತೆ ಹಲವಾರು ಖ್ಯಾತನಾಮ ದೇಶಗಳನ್ನು ವಿನೋದಾ ಮೇಡಂ ಹುಡುಕಲು ಕೇಳಿದರು. ನಮ್ಮದೇ ಕ್ಲಾಸಿನ ಹಲವು ವಿದ್ಯಾರ್ಥಿಗಳು ಅವುಗಳನ್ನು ತೋರಿಸಿದರು. ಆಮೇಲೆ ದಕ್ಷಿಣ ಕೋರಿಯಾ ಹಾಗೂ ಉತ್ತರ ಕೋರಿಯಾ ಯಾವ ಖಂಡದಲ್ಲಿ ಬರುತ್ತದೆ. ಅದನ್ನು ತೋರಿಸಿ ಎಂದರು. ಯಾರೊಬ್ಬರೂ ಇದಕ್ಕೆ ಮುಂದಾಗಲೇ ಇಲ್ಲ. ಕೊನೆಗೆ ನಾನು ಎದ್ದು ನಿಂತು `ಈ ಎರಡೂ ದೇಶಗಳು ಏಷ್ಯಾ ಖಂಡದಲ್ಲಿ ಬರುತ್ತದೆ. ಜಪಾನ್ ಪಕ್ಕಕ್ಕಿವೆ' ಎಂದೆ. `ನಿನ್ ತಲೆ.. ನೀ ಜೋರಿದ್ದೆ ಅನ್ನೊದು ನಂಗೊತ್ತು. ಹಾಗಂತ ಬಾಯಿಗೆ ಬಂದ ಹಾಗೆ ಹೇಳಬೇಡ. ಇವೆರಡೂ ದೇಶಗಳು ಅಮೆರಿಕಾ ಖಂಡದಲ್ಲಿವೆ..' ಎಂದರು.
            ನಾನು ಎದ್ದು ನಿಂತವನೇ `ಗ್ಲೋಬ್ ಕೊಡಿ.. ತೋರಿಸುತ್ತೇನೆ..' ಎಂದೆ. ಅವರು ಕೊಡಲು ಒಪ್ಪಲಿಲ್ಲ. ಗ್ಲೋಬ್ ಕಿತ್ತುಕೊಂಡು ಸೀದಾ ಚೀನಾದ ಪಕ್ಕಕ್ಕಿದ್ದ ಆ ಎರಡು ದೇಶಗಳನ್ನು ಹುಡುಕಿ ತೋರಿಸಿದೆ. ಮೇಡಂ ಮುಖ ಸಪ್ಪಗಾಗಿತ್ತು. ನಮ್ಮ ಕ್ಲಾಸಿನ ಹುಡುಗರು ಒಮ್ಮೆ ಹೋ ಎಂದಿದ್ದರು. ಏನೋ ಖುಷಿ ನನ್ನ ಮನಸ್ಸಿನಲ್ಲಿ ಮೂಡಿತ್ತು. ಆಮೇಲಿಂದ ನನ್ನ ಮೇಲೆ ಮೇಡಮ್ಮಿಗೆ ಎಲ್ಲಿಲ್ಲದ ದ್ವೇಷ ಬೆಳೆದಿತ್ತು ನೋಡಿ. ನಂತರದ ದಿನಗಳಲ್ಲಿ ಮೇಡಂ ಯಾವುದಾದರೂ ಕ್ಲಾಸನ್ನು ಕಲಿಸಲು ಬಂದರೆ ಸುಮ್ಮ ಸುಮ್ಮನೆ ಬೈಯುವುದು, ಪರೀಕ್ಷೆಗಳಲ್ಲಿ ಅಂಕಗಳನ್ನು ಕತ್ತರಿಸುವುದು ಇತ್ಯಾದಿ ಮಾಡುತ್ತಿದ್ದರು. ಒಂಭತ್ತನೇ ಕ್ಲಾಸು ಮುಗಿಯುವ ವೇಳೆಗೆ ಅವರಿಗೆ ಇದ್ದಕ್ಕಿದ್ದಂತೆ ದ್ವೇಷವೂ ಕಡಿಮೆಯಾಗಿತ್ತು ಬಿಡಿ.
           ವಿನೋದಾ ಮೇಡಂ ಅವರ ಗಂಡ ಪ್ರತಿದಿನ ಹೈಸ್ಕೂಲು ಬಿಡುವ ಸಮಯಕ್ಕೆ ಬಂದು ಮೇಡಂ ಅವರನ್ನು ಬೈಕಿನಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಹೀರೋಹೊಂಡಾ ಸ್ಪ್ಲೆಂಡರ್ ಬೈಕ್ ಅವರದ್ದು. ಆದರೆ ಅವರು ಎಷ್ಟು ಕುಳ್ಳಗಿದ್ದರು ಎಂದರೆ  ಬೈಕಿನ ಮೇಲೆ ಅವರು ಕುಳಿತರೆ ಕಾಲು ನೆಲಕ್ಕೆ ಮುಟ್ಟುತ್ತಿರಲಿಲ್ಲ. ನಾವು ಹುಡುಗರೆಲ್ಲ ಸೇರಿ ಕುಳ್ಳ-ಕುಳ್ಳಿ ಸವಾರಿ ಹೊರಟಿದೆ ನೋಡ್ರೋ ಎಂದು ತಮಾಷೆ ಮಾಡಿದ್ದೂ ಇದೆ. ಒಂಭತ್ತನೇ ತರಗತಿ ಕೊನೆ ಕೊನೆಯಲ್ಲಿ ವಿನೋದಾ ನಾಯ್ಕ್ ಅವರು ಹೈಸ್ಕೂಲಿಗೆ ಕಲಿಸಲು ಬರುತ್ತಿರಲಿಲ್ಲ. ಅವರು ಗರ್ಭಿಣಿಯಾಗಿದ್ದರು. ಹತ್ತನೇ ಕ್ಲಾಸಿನಲ್ಲಿ ನಾವು ಇದ್ದ ಸಂದರ್ಭದಲ್ಲಿ ವಿನೋದಾ ಮೇಡಮ್ಮಿಗೆ ಗಂಡು ಮಗುವಾಗಿದೆ ಎನ್ನುವ ವಿಷಯವೂ ತಿಳಿಯಿತು. ನಂತರ ಕೆಲವು ತಿಂಗಳುಗಳ ನಂತರ ಹೈಸ್ಕೂಲಿಗೆ ಬಂದು ಸ್ವೀಟ್ ಕೊಟ್ಟಿದ್ದರು. ಮಜಾ ಎಂದರೆ ನಮ್ಮ ದೈಹಿಕ ಶಿಕ್ಷಕರಾಗಿದ್ದ ಸಿ. ಆರ್. ಲಿಂಗರಾಜು ಅವರು ವಿನೋದಾ ಮೇಡಂ ಜೊತೆಗೂ ಸಿಕ್ಕಾಪಟ್ಟೆ ಜಗಳ ಮಾಡಿದ್ದರು. ಹೈಸ್ಕೂಲಿನ ಗ್ರೌಂಡಿನಲ್ಲಿ ಒಮ್ಮೆ ಸಿಕ್ಕಾಪಟ್ಟೆ ಕೂಗಾಡಿಕೊಂಡಿದ್ದರು. ಆಮೇಲೆ ಆ ಮೇಡಮ್ಮಿಗೆ ವರ್ಗವಾಯಿತೋ ಅಥವಾ ದೀರ್ಘಕಾಲದ ರಜಾ ತೆಗೆದುಕೊಂಡರೋ ಗೊತ್ತಿಲ್ಲ ನೋಡಿ. ನಾನು ಎಸ್ ಎಸ್ ಎಲ್ ಸಿ ಮುಗಿಯುವ ವೇಲೆಗೆ ಅವರು ಇರಲಿಲ್ಲ.

ಸುಜಾತಾ ಮೇಡಂ :
                 `ಏನೋ.. ಧನವೇ... ಗೊತ್ತಾಗದಿಲ್ಲೇನೋ ನಿಂಗೆ..' `ಏನೇನೂ ಇಲ್ಲ.. ಈ ಸಾರಿ ನಮ್ ಹುಡುಗ್ರು ಏನೇನೂ ಇಲ್ಲ..' ಎಂದು ರಾಗವಾಗಿ ಹೇಳುತ್ತಿದ್ದ ಸುಜಾತಾ ಮೇಡಂ ಹೈಸ್ಕೈಲಿನಲ್ಲೆಲ್ಲ ಹೆಚ್.ಎಸ್.ಎಸ್. ಎಂದೇ ಖ್ಯಾತಿ ಪಡೆದಿದ್ದವರು. ಹಿಂದಿ ವಿಷಯವನ್ನು ಕಲಿಸುತ್ತಿದ್ದ ಸುಜಾತಾ ಮೇಡಂ ಅದೆಷ್ಟು ಎತ್ತರ ಇದ್ದರು ಅಂದರೆ ಆರು ಅಡಿಗಿಂತ ಜಾಸ್ತಿ ಇರಬೇಕು. ಮೇಡಂ ಮುಂದಿನ ನಾಲ್ಕು ಹಲ್ಲುಗಳು ಸಿಕ್ಕಾಪಟ್ಟೆ ಹೊರಕ್ಕೆ ಬಂದಿದ್ದವು. ಪಾಪ ಮೇಡಂ ನಮಗೆ ಪಾಠ ಮಾಡುವಾಗ ಒಂದು ಕೈಯಲ್ಲಿ ಬಾಯಿ ಮುಚ್ಚಿಕೊಂಡು ಪಾಟ ಮಾಡುತ್ತಿದ್ದರು. ನಾವೆಲ್ಲ ನಗುತ್ತಿದ್ದೆವು.
              ಆ ದಿನಗಳಲ್ಲಿ ನಾನು ಹೋಂ ವರ್ಕ್ ಮಾಡದೇ ಕಳ್ಳ ಬೀಳುತ್ತಿದ್ದೆ. ಒಂದು ದಿನ ಹೋಂ ವರ್ಕ ಮಾಡದೇ ಇರುವ ಕಾರಣ ಹಲವು ವಿದ್ಯಾರ್ಥಿಗಳನ್ನು ಕ್ಲಾಸಿನಿಂದ ಹೊರಕ್ಕೆ ಹಾಕಿದ್ದರು. ನಾನೂ ಕೂಡ ಹೊರಕ್ಕೆ ಹೋಗಿದ್ದೆ. ಆ ದಿನಗಳಲ್ಲಿ ನನಗೆ ಹಿಂದಿ ಗೆ 25 ಕ್ಕೆ 24 ಮಾರ್ಕ್ಸುಗಳು ಬೀಳುವಷ್ಟು ಬುದ್ಧಿವಂತ. ನನ್ನನ್ನು ಹೊರಕ್ಕೆ ಕಳಿಸಿದ್ದ ಮೇಡಂ `ವಿನಯನ ಹೊರಕ್ಕೆ ಕಳಿಸಿದ್ನಾ ನಾನು.. ಏ ವಿನಯಾ.. ಬಾ ಒಳಕ್ಕೆ..' ಅಂದರು. ನಾನು ಹೋದೆ. `ನೀನು ಹೋಂ ವರ್ಕ್ ಮಾಡಿದ್ದೆ ಅಲ್ಲವಾ..?' ಎಂದರು. ನಾನು `ಇಲ್ಲ ಅಂದೆ...' `ಏನೋ.. ಧನವೇ... ಏನೋ ಅಂದಕಂಡಿದ್ದೆ ನಿನ್ನಾ.. ಹೋಗು.. ಹೋಗು ಹೊರಗೆ.. ನೆಡಿ..' ಎಂದು ಮತ್ತೆ ಬೆನ್ನಟ್ಟಿದ್ದರು.
            ಈ ಮೇಡಂ ಹೊಡೆಯುತ್ತಿದ್ದರು. ಆ ಹೊಡೆತ ಮಾತ್ರ ಯಾರಿಗೂ ತಾಗುತ್ತಲೇ ಇರಲಿಲ್ಲ. ಅವರು ಹೊಡೆಯುತ್ತಿದ್ದಾಗ ಮಾತ್ರ ನಾವು ನೋವಾದಂತೆ ನಟಿಸಬೇಕಿತ್ತು. ನಾವು ಹಾಗೆ ನಟಿಸುತ್ತಿದ್ದೆವು ಕೂಡ. ಆದರೆ ಒಳಗೊಳಗೆ ನಗು. ಇಂತಹ ಮೇಡಂ ಹಿಂದಿ ಕಲಿಸಿದ ಪರಿಣಾಮ ಎಸ್.ಎಸ್.ಎಲ್.ಸಿ ಪ್ರಿಪ್ರೆಟರಿ ಪರೀಕ್ಷೆಯಲ್ಲಿ ನನಗೆ 100ಕ್ಕೆ 97 ಅಂಕಗಳು ಬಂದಿದ್ದವು. ಪಬ್ಲಿಕ್ ಪರೀಕ್ಷೆಯಲ್ಲಿ 88 ಅಂಕಗಳು ಬಂದಿದ್ದವು ಬಿಡಿ. ಪ್ರತಿ ವರ್ಷ ಹೈಸ್ಕೂಲಿನಲ್ಲಿ ವಿವಿಧ ಸ್ಪರ್ಧೆಗಳು ನಡೆಯುತ್ತಿದ್ದವು. ಅದರಲ್ಲಿ ಕಂಠಪಾಠ ಸ್ಪರ್ಧೆಯೂ ಒಂದು. ನಾನು 8, 9 ಹಾಗೂ 10 ಈ ಮೂರೂ ವರ್ಷ ಕಂಠಪಾಠ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಗಳಿಸಿಕೊಂಡಿದ್ದೆ. ನನಗಿಂತ ಚಂದ ಮಾಡಿ ಹಿಂದಿ ಹಾಡುಗಳನ್ನು ಹಾಡುವವರು ನನ್ನ ಕ್ಲಾಸಿನಲ್ಲಿದ್ದರು. ರಾಗವಾಗಿ ಹಾಡುವವರೂ ಇದ್ದರು. ಆದರೆ ಯಾರೊಬ್ಬರೂ ಪೂರ್ತಿ ಹೇಳುತ್ತಿರಲಿಲ್ಲ. ಅಲ್ಲದೇ ಹಾಡಿನ ಮಧ್ಯ ಸುಮ್ಮ ಸುಮ್ಮನೆ ನಗುವುದು, ಮರೆತು ಹೋಗಿ ನಿಲ್ಲುವುದು ಇವನ್ನೆಲ್ಲ ಮಾಡುತ್ತಿದ್ದರು. ನಾನು ಉರು ಹೊಡೆದುಕೊಳ್ಳುತ್ತಿದ್ದ ಹಿಂದಿ ಕವಿತೆಯನ್ನು ಸ್ಫುಟವಾಗಿ ಹೇಳುತ್ತಿದ್ದೆ. ಹೀಗಾಗಿ ನನಗೆ ಮೊದಲ ಸ್ಥಾನ ಬರುತ್ತಿತ್ತು.
         ಇಂತಹ ಸುಜಾತಾ ಮೇಡಮ್ಮಿಗೆ ನನ್ನದೇ ಕ್ಲಾಸಿನ ಹುಡುಗರು ಕೊಕ್ಕರೆ ಎನ್ನುವ ಹೆಸರನ್ನೂ ಇಟ್ಟಿದ್ದರು. ಉದ್ದವಿದ್ದ ಅವರಿಗೆ ಈ ಹೆಸರನ್ನು ಇಟ್ಟಿದ್ದಾರೆ ಎನ್ನುವುದು ನಂತರದ ದಿನಗಳಲ್ಲಿ ನನಗೆ ತಿಳಿದಿತ್ತು. ನನಗೆ ಈಗ ಸ್ವಲ್ಪವಾದರೂ ಹಿಂದಿ ಓದಲು, ಮಾತನಾಡಲು ಬರುತ್ತದೆ ಎಂದರೆ ಅದಕ್ಕೆ ಸುಜಾತಾ ಮೇಡಂ ಕಾರಣ. ಅವರಿಗೆ ಎಷ್ಟು ಧನ್ಯವಾದಗಳನ್ನು ಅರ್ಪಿಸಿದರೂ ಸಾಲದು ಬಿಡಿ. ಬಹುಶಃ ಸುಜಾತಾ ಮೇಡಂ ಈಗ ನಿವೃತ್ತಿಯಾಗಿರಬೇಕು ಎನ್ನಿಸುತ್ತದೆ. ಎಲ್ಲಿದ್ದಾರೋ ಗೊತ್ತಿಲ್ಲ. ಅವರು ಚನ್ನಾಗಿರಲಿ.

(ಮುಂದುವರಿಯುತ್ತದೆ)

Wednesday, October 7, 2015

ಅಘನಾಶಿನಿ ಕಣಿವೆಯಲ್ಲಿ-27

             ಉಂಚಳ್ಳಿ ಜಲಪಾತವನ್ನು ನೋಡುವುದೇ ಒಂದು ಸೊಬಗು. ಥಟ್ಟನೆ ನೋಡಿದರೆ ಗೋಕರ್ಣದ ಆತ್ಮಲಿಂಗದ ಆಕಾರದಲ್ಲಿ ಕಾಣುವ ಜಲಪಾತದ ಚೆಲುವಿಗೆ ಸಾಟಿಯಿಲ್ಲ ಬಿಡಿ. ದೂರದಿಂದಲೇ ಭೋರೆಂದು ಸದ್ದು ಮಾಡುವ ಜಲಪಾತಕ್ಕೆ ಸರ್ವ ಕಾಲದಲ್ಲಿಯೂ ಪ್ರವಾಸಿಗರು ದಂಡು ದಂಡಾಗಿ ಆಗಮಿಸುತ್ತಾರೆ. ವಿಕ್ರಮ ಹಾಗೂ ತಂಡಕ್ಕೆ ಜಲಪಾತದ ಬುಡಕ್ಕೆ ತಲುಪುವ ತವಕ ಮತ್ತಷ್ಟು ಹೆಚ್ಚಿತು. ಜಲಪಾತ ವೀಕ್ಷಣೆಗೆ ಹಾಕಲಾಗಿದ್ದ ಸಿಮೆಂಟ್ ಮೆಟ್ಟಿಲುಗಳನ್ನು ಇಳಿದು ಪಕ್ಕದಲ್ಲಿಯೇ ಜರುಗಿ ಜಲಪಾತದ ಬುಡಕ್ಕೆ ಇಳಿಯಲಾರಂಭಿಸಿದರು. ಎಪ್ರಿಲ್ ತಿಂಗಳಾದ್ದ ಕಾರಣ ಜಲಪಾತದಲ್ಲಿ ಸಾಕಷ್ಟು ನೀರು ಇರಲಿಲ್ಲ. ಸೀದಾ ಜಲಪಾತ ಬೀಳುವ ಪ್ರದೇಶಕ್ಕೆ ತೆರಳಿ, ಜಲಪಾತದ ನೀರಿಗೆ ತಲೆಕೊಟ್ಟು ನಿಲ್ಲಬಹುದಾಗಿತ್ತು.
         ಅರ್ಧಗಂಟೆಯ ಸಮಯದಲ್ಲಿ ಜಲಪಾತದ ಬುಡಕ್ಕೆ ತಲುಪಿದ್ದರು. ದೊಡ್ಡ ದೊಡ್ಡ ಕಲ್ಲು ಬಂಡೆಗಳನ್ನು ದಾಟಿ ನೀರು ಬೀಳುತ್ತಿದ್ದ ಪ್ರದೇಶಕ್ಕೆ ಹೋದವರಿಗೆ ಆಸೆ ತಡೆಯಲಿಲ್ಲ. ಸೀದಾ ತೊಟ್ಟಿದ್ದ ಬಟ್ಟೆ ಯನ್ನು ಲೆಕ್ಕಿಸದೇ ಜಲಪಾತದ ನೀರಿಗೆ ತಲೆ ಕೊಟ್ಟರು. ದೊಡ್ಡದೊಂದು ನೀರಿನ ಗುಂಡಿಯನ್ನು ಈಜಲು ವಿನಾಯಕ ಮುಂದಾದ. ವಿಷ್ಣು ಹಾಗೂ ಪ್ರದೀಪ ಕೂಡ ವಿನಾಯಕನನ್ನು ಹಿಂಬಾಲಿಸಿದರು. ವಿಜೇತಾಳನ್ನು ಹೊರತುಪಡಿಸಿ ಉಳಿದೆಲ್ಲ ಹೆಂಗಳೆಯರು ಜಲಪಾತ ಬೀಳುತ್ತಿದ್ದ ಜಾಗಕ್ಕೆ ಸುತ್ತು ಬಳಸಿನ ಹಾದಿಯಲ್ಲಿ ಸಾಗಿ ತಲೆಕೊಟ್ಟು ನಿಂತರು. ಕ್ಷಣ ಕ್ಷಣಕ್ಕೂ ರೋಮಾಂಚನ ಅನುಭವಿಸಿದ ಇವರೆಲ್ಲರ ಬಾಯಿಂದ ಹಾ... ಹೋ... ಎನ್ನುವ ಕೂಗು ಉಂಚಳ್ಳಿ ಜಲಪಾತದ ಕಣಿವೆಯಿಂದ ಅಲೆ ಅಲೆಯಾಗಿ ಕೇಳುತ್ತಿತ್ತು. ಜಲಪಾತದ ಸದ್ದಿಗೆ ಪೈಪೋಟಿ ನೀಡುವಂತಿತ್ತು ಇವರ ಕೂಗು.
         ವಿಕ್ರಮ ಹಾಗೂ ವಿಜೇತಾ ಇಬ್ಬರೇ ದೂರದಲ್ಲಿ ಕಲ್ಲು ಬಂಡೆಯ ಮೇಲೆ ಕುಳಿತು ನೀರಿಗೆ ತಲೆ ಕೊಟ್ಟವರ ಹಾಗೂ ಜಲಪಾತದ ಗುಂಡಿಯಲ್ಲಿ ಈಸು ಬಿದ್ದಿದ್ದವರನ್ನು ನೋಡುತ್ತಿದ್ದರು. ವಿನಾಯಕ ಇದ್ದಕ್ಕಿದ್ದಂತೆ ವಿಜೇತಾಳ ಬಳಿ `ನಾನು ಒಂದು ವಿಷಯ ಕೇಳಲಾ..?' ಎಂದ.
          `ಹುಂ.. ಕೇಳು.. ನೀನು ಏನನ್ನಾದರೂ ಕೇಳಲು ನನ್ನ ಪರ್ಮಿಷನ್ ಬೇಕಾ? ಇವತ್ತೇನು ಹೊಸ ರೀತಿ ಕೇಳ್ತಾ ಇದ್ದೀ..?' ಎಂದಳು ವಿಜೇತಾ.
          `ಇದು ಸಾಮಾನ್ಯ ವಿಷಯ ಅಲ್ಲ. ಸ್ವಲ್ಪ ಬೇರೆಯ ವಿಷಯ. ಕೇಳಲೋ.. ಬೇಡವೋ ಅಂತ..' ಎಂದ ವಿಕ್ರಮ.
          `ಇದೊಳ್ಳೆ ಕಥೆ ನಿಂದು. ನನ್ನ ಹತ್ರ ಕೇಳೋಕೆ ಮುಜುಗರವಾ? ನಿಂದೊಳ್ಳೆ ಕಥೆ ಮಾರಾಯಾ.. ಸುಮ್ನೆ ಕೇಳು..'
           `ಹೆಂಗ್ ಕೇಳೋದು ಅಂತ ಗೊತ್ತಾಗ್ತಾ ಇಲ್ಲ.. ಯಾಕೋ ಸ್ವಲ್ಪ ನರ್ವಸ್ ಆಗಿದ್ದೇನೆ ನೋಡು..'
           `ಹೆಂಗೆ ಅಂದ್ರೆ..? ಬಾಯಲ್ಲಿ ಕೇಳು ಮಾರಾಯಾ.. ನೀನು ನರ್ವಸ್ ಆಗೋದಾ? ದಿ ಗ್ರೇಟ್ ಕರಾಟೆ ಚಾಂಪಿಯನ್ ನರ್ವಸ್ ಆಗೋದು ಅಂದ್ರೆ ಏನ್ ತಮಾಷೆನಾ? ಅಂತದ್ದೇನಪ್ಪಾ ವಿಷಯ..' ತಮಾಷೆ ಮಾಡಿದಳು ವಿಜೇತಾ.
            `ತಮಾಷೆ ಮಾಡ್ಬೇಡ ಪ್ಲೀಸ್.. ಹೆಂಗ್ ಕೇಳೋದು ಅಂತ ನಂಗೆ ಗೊತ್ತಾಗ್ತಿಲ್ಲ. ಮತ್ತೆ.. ನೀನು ಯಾರನ್ನಾದರೂ ಲವ್ ಮಾಡಿದ್ಯಾ?'
             ಇದ್ದಕ್ಕಿದ್ದಂತೆ ಸ್ವಲ್ಪ ಗಂಭೀರವಾದ ವಿಜೇತಾ ಒಮ್ಮೆ ವಿಕ್ರಮನನ್ನು ತೀಕ್ಷ್ಣವಾಗಿ ನೋಡಿದಳು. ನಂತರ ಇದು ತಮಾಷೆಯಿರಬೇಕು ಎಂದುಕೊಂಡು `ಹು.. ಮಾರಾಯಾ.. ಪಿಯುಸಿಯಲ್ಲಿ ಇರಬೇಕಾದರೆ ಒಬ್ಬ ಹುಡುಗ ಪ್ರಪೋಸ್ ಮಾಡಿದ್ದ ನೋಡು. ಒಳ್ಳೆಯ ಹುಡುಗ. ಆದರೆ ಹೇಳಿಕೊಳ್ಳಲು ಸಂಕೋಚ ಪಟ್ಟುಕೊಂಡಿದ್ದ. ಆತ ಹೆದರಿ ಹೆದರಿ ಹೇಳಿಕೊಂಡಿದ್ದ. ನಾನು ಸಿಟ್ಟಿನಿಂದಲೇ ಆತನಿಗೆ ಉತ್ತರ ಕೊಟ್ಟಿದ್ದೆ. ಆ ನಂತರ ಯಾಕೋ ಇಷ್ಟವಾಗಿದ್ದ ಆತ. ಆತನ ಪ್ರಪೋಸಲ್ ಗೆ ಒಪ್ಪಿಗೆ ಸೂಚಿಸಬೇಕು ಅಂತ ನಾನು ಅವನನ್ನು ಹುಡುಕಿ ಹೊರಟಿದ್ದೆ. ಆದರೆ ಆ ನಂತರ ಅಂವ ಏನಾದನೋ ಗೊತ್ತಿಲ್ಲ ನೋಡು.. ನಾಪತ್ತೆಯಾಗಿದ್ದ. ಆಮೇಲಿ ಡಿಗ್ರಿ ಓದುವಾಗ ಒಂದಿಬ್ಬರು ಲವ್ ಮಾಡ್ತೀಯಾ ಅಂತ ಕೇಳಿದ್ದರು. ನನಗೆ ಇಷ್ಟವಾಗಿರಲಿಲ್ಲ.. ರಿಜೆಕ್ಟ್ ಮಾಡಿದ್ದೆ.. ಹೌದು.. ಈಗ ಈ ಪ್ರಶ್ನೆ ಯಾಕೆ ಕೇಳಿದ್ದು..?'
            `ಹಿಂಗೆ ಸುಮ್ನೆ ಕೇಳಿದ್ದು ನೋಡು.. ಯಾಕೋ ನೀನು ಯಾರನ್ನಾದರೂ ಲವ್ ಮಾಡ್ತಿರಬಹುದಾ ಎಂಬ ಕುತೂಹಲ ಕಾಡಿತು. ಅದ್ಕೆ ಕೇಳಿದೆ ಅಷ್ಟೆ..' ವಿಕ್ರಮ ಉತ್ತರಿಸಿದ್ದ.
             `ಸುಮ್ನೆ ಎಲ್ಲಾ ಕೇಳೊ ವ್ಯಕ್ತಿಯಲ್ಲವಲ್ಲ ನೀನು.. ಏನೋ ಕಾರಣ ಇರಬೇಕು ನೋಡು. ಯಾವುದಾದರೂ ಪ್ರಪೋಸಲ್ ಬಂದಿದೆಯಾ? ಅಥವಾ ಜಾತಕ ಗೀತಕ ಬಂದಿದೆಯಾ.. ಹೇಳು ಮಾರಾಯಾ... ತಲೆಯಲ್ಲಿ ಹುಳ ಬಿಡಬೇಡ..' ವಿಜೇತಾ ಹೇಳಿದ್ದಳು.
             `ಏ ಏನಿಲ್ಲ. ಸುಮ್ನೆ ಕೇಳಿದೆ..'
             `ಹೇಳೋ ಮಾರಾಯಾ.. ನನ್ನನ್ನು ಯಾರಾದರೂ ಲವ್ ಮಾಡ್ತಾರಾ.. ನಾನು ಸಧ್ಯಕ್ಕೆ ಖಾಲಿ ಇದ್ದೇನೆ ನೋಡು.. ಯಾರಾದರೂ ನಿನ್ನ ಬಳಿ ಕೇಳಿದ್ದರೆ ಡೈರೆಕ್ಟಾಗಿ ಬಂದು ಕೇಳೋಕೆ ಹೇಳು.. ಇಷ್ಟ ಆದರೆ ಥಟ್ಟನೆ ಒಪ್ಪಿಕೊಂಡು ಬಿಡ್ತೀನಿ ನೋಡು..' ಮತ್ತೆ ತಮಾಷೆಯಾಗಿ ಹೇಳಿದ್ದಳು ವಿಜೇತಾ.
             `ಅಯ್ಯಯ್ಯೋ.. ಯಾರೂ ಹೇಳಿಲ್ಲ ನನ್ನ ಹತ್ರ. ನಾನೇ ಸುಮ್ಮನೆ ಕೇಳಿದೆ ನೋಡು..' ವಿಕ್ರಮ ತೊದಲಿದ.
             `ಇಲ್ಲ ಇದರಲ್ಲಿ ಏನೋ ಇದೆ. ನೀನು ಸುಮ್ಮನೆ ಕೇಳಿಲ್ಲ ಬಿಡು. ಯಾರಪ್ಪಾ ಅದು ನನ್ನ ಬಗ್ಗೆ ವಿಚಾರಿಸಿದ್ದು? ಯಾರಾದರೂ ನನ್ನ ಲವ್ ಮಾಡ್ತಾ ಇದ್ದಾರಾ ಹೇಗೆ? ನೀನೇನಾದ್ರೂ ಲವ್ ಮಾಡ್ತಾ ಇದ್ದೀಯಾ ಹೇಗೆ? ಹಂಗೇನಾದ್ರೂ ಇದ್ರೆ ಡೈರೆಕ್ಟ್ ಆಗಿ ಹೇಳ್ ಬಿಡು ಮಾರಾಯಾ.. ಮತ್ತಿನ್ಯಾರಾದ್ರೂ ಮನಸ್ಸಿನೊಳಗೆ ತೂರಿಕೊಳ್ಳುವ ಮೊದಲು ನಿಂಗೆ ಒಕೆ ಅಂತ ಹೇಳಿ ಬಿಡ್ತೀನಿ..' ಡೈರೆಕ್ಟ್ ಶೂಟ್ ಮಾಡಿದ್ದಳು ವಿಜೇತಾ. ಅವಳ ಮಾತಿನಲ್ಲಿ ತಮಾಷೆಯ ಸೆಳಕಿದ್ದರೂ ಸೀರಿಯಸ್ ಅಂಶಗಳು ಸಾಕಷ್ಟಿದ್ದವು.
            ವಿಕ್ರಮ ಬೆವೆತು ಹೋಗಿದ್ದ. ಏನು ಹೇಳಬೇಕು ಎನ್ನುವುದು ಆತನಿಗೆ ಗೊತ್ತಾಗಲಿಲ್ಲ. ಪರಿಚಯವಾದ ದಿನದಿಂದಲೇ ವಿಕ್ರಮನಿಗೆ ಮಾಡಿದರೆ ಇಂತಹ ಹುಡುಗಿಯನ್ನು ಲವ್ ಮಾಡಬೇಕು ಎನ್ನಿಸಿದ್ದು ಸುಳ್ಳಲ್ಲ. ಯಾಕೋ ಮೊದಲ ಸಂದರ್ಶನದ ದಿನದಂದೆ ವಿಜೇತಾ ವಿಕ್ರಮನಿಗೆ ಇಷ್ಟವಾಗಿ ಬಿಟ್ಟಿದ್ದಳು.ನಂತರದ ದಿನಗಳಲ್ಲಿ ವಿಕ್ರಮನಿಗೆ ಆಕೆ ಮತ್ತಷ್ಟು ಹತ್ತಿರವಾಗಿದ್ದಳು. ಹತ್ತಿರವಾದಂತೆಲ್ಲ ಪ್ರೀತಿಯ ಸಸಿ ಮೊಳಕೆಯೊಡೆದು ಹೆಮ್ಮರವಾಗಿತ್ತು. ವಿಕ್ರಮ ಕೂಡ ಆ ಸಸಿಗೆ ಪೋಷಣೆ ನೀಡಿ ಎದೆಯಲ್ಲಿ ಬೆಚ್ಚಗೆ ಕಾಪಾಡಿಕೊಂಡಿದ್ದ.
            ಕೆಲವು ದಿನಗಳಿಂದ ತನ್ನ ಮನದ ಅಭಿಲಾಷೆಯನ್ನು ಹೇಳಬೇಕು ಎಂದುಕೊಳ್ಳುತ್ತಿದ್ದ ವಿಕ್ರಮ. ಅದಕ್ಕೆ ಸರಿಯಾದ ಸಮಯ ಹಾಗೂ ಸಂದರ್ಭ ಒದಗಿ ಬಂದಿರಲಿಲ್ಲ. ತಾನು ಹೇಳಿಕೊಳ್ಳಬೇಕು ಅಂದಾಗಲೆಲ್ಲ ಜೊತೆಯಲ್ಲಿ ಮತ್ಯಾರೋ ಇರುತ್ತಿದ್ದರು. ಹೇಗಾದರೂ ಮಾಡಿ ಹೇಳಿಕೊಳ್ಳಬೇಕು ಎಂದುಕೊಂಡವನಿಗೆ ನೆನಪಾದದ್ದು ಉಂಚಳ್ಳಿ ಜಲಪಾತ. ಅಲ್ಲಿಗೆ ಹೋದಾಗ ತನ್ನ ಮನಸ್ಸಿನ ಭಾವನೆಯನ್ನು ವಿಜೇತಾಳಿಗೆ ಹೇಳಬೇಕು ಎಂದುಕೊಂಡಿದ್ದ ವಿಕ್ರಮ. ಎಲ್ಲರನ್ನೂ ಎಲ್ಲಾದರೂ ಸಾಗಹಾಕಿ ಅವಳೆದು ತನ್ನ ಅಂತರಂಗವನ್ನು ತೋಡಿಕೊಳ್ಳಬೇಕು ಎಂದುಕೊಂಡವನಿಗೆ ಇದುವರೆಗೆ ತಾನು ಬಯಸಿದಂತೆಯೇ ಎಲ್ಲವೂ ಆಗಿತ್ತು. ಜಲಪಾತಕ್ಕೆ ಬಂದಿದ್ದವರೆಲ್ಲಿ ಉಳಿದವರು ಅವರವರ ಲೋಕದಲ್ಲಿದ್ದರು. ವಿಜೇತಾ ಹಾಗೂ ವಿಕ್ರಮ ಇಬ್ಬರೆ ಜೊತೆಯಲ್ಲಿ ಕುಳಿತು ಮಾತನಾಡುತ್ತಿದ್ದರು. ಆದರೆ ವಿಕ್ರಮನಿಗೆ ಮಾತ್ರ ಮನದಾಳದ ಭಾವನೆಗಳನ್ನು ಏನೂ ಮಾಡಿದರೂ ಹೇಳಿಕೊಳ್ಳಲು ಆಗುತ್ತಿಲ್ಲ. ಇದು ಆತನಿಗೆ ಅಚ್ಚರಿಯನ್ನು ತಂದಿತ್ತು.
          ವಿಜೇತಾಳೇ ನೇರವಾಗಿ ಕೇಳುತ್ತಿದ್ದಾಳೆ. ಆದರೆ ತನಗೆ ಮಾತ್ರ ಹೇಳಿಕೊಳ್ಳಲು ಆಗುತ್ತಿಲ್ಲ. ಯಾಕೆ ಈ ಥರಾ? ಎಂದುಕೊಂಡ ವಿಕ್ರಮ. ಅವಳೇ ಕೇಳುತ್ತಿದ್ದಾಗ ತನಗೆ ಹೌದು ನಿನ್ನನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳಲು ಆಗುತ್ತಿಲ್ಲವಲ್ಲ. ಯಾಕೋ ಈ ಪ್ರೇಮ ಎನ್ನುವುದು ಸುಲಭವಲ್ಲ ಅನ್ನಿಸಿತು ಅವನಿಗೆ. ಕರಾಟೆಯಲ್ಲಿ ತನ್ನೆದುರು ಹತ್ತಾರು ಜನರು ಏಕಕಾಲಕ್ಕೆ ಮುಗಿ ಬೀಳಲಿ ಅವರನ್ನು ಮಣ್ಣುಮುಕ್ಕಿಸುತ್ತೇನೆ. ಆದರೆ ಇವಳಿಗೆ ಪ್ರೇಮದ ವಿಷಯ ತಿಳಿಸುವುದು ಹೇಗೆ? ಎಂದ.
           `ಹೇಯ್.. ಎಂತಾ ಆಲೋಚನೆ ಮಾಡ್ತಾ ಇರೋದು.. ಯಾರು ಕೇಳಿದ್ದು ಹೇಳು ಮಾರಾಯಾ..' ಎಂದು ವಿಜೇತಾ ತಿವಿದಾಗಲೇ ವಿಕ್ರಮ ವಾಸ್ತವಕ್ಕೆ ಮರಳಿದ್ದು.
            `ಏನ್ ಹೇಳೋದು ಅಂತ ಗೊತ್ತಾಗ್ತಾ ಇಲ್ಲೆ. ನಿನ್ ಬಗ್ಗೆ ವಿಷಯ ಗೊತ್ತಾಗಬೇಕಿತ್ತು, ನೀನು ಯಾರನ್ನಾದರೂ ಪ್ರೀತಿಸ್ತಾ ಇದ್ಯಾ ಅನ್ನೋದು ತಿಳಿದುಕೊಳ್ಳಬೇಕು ಅನ್ನೋದು ನಿಜ. ಆದರೆ...' ನಿಲ್ಲಿಸಿದ ವಿಕ್ರಮ
             `ಎಂತ ಆದರೆ.. ಒಗಟಾಗಿ ಮಾತನಾಡಬೇಡ. ಸ್ವಲ್ಪ ಬಿಡಿಸಿ ಹೇಳು ಮಾರಾಯಾ..'
              `ನಂಗೇ ಬೇಕಾಗಿತ್ತು...ಅದ್ಕೆ ಕೇಳಿದ್ದು..' ತೊದಲಿದ ವಿಕ್ರಮ.
               `ಅಂದರೆ ಎಂತ? ಸ್ವಲ್ಪ ಬಿಡಿಸಿ ಹೇಳೋ ಮಾರಾಯಾ.. ನಿಂಗೆಂತಾ ಬೇಕಾಗಿದ್ದು. ನಿಂಗ್ ನನ್ನ ವಿಷ್ಯ ಗೊತ್ತಿದ್ದಿದ್ದೇ. ಆದರೆ ಮತ್ತೆಂತಕ್ ಕೇಳ್ತಾ ಇದ್ದಿದ್ದು..?' ಕಾಡಿಸಿದಳು ವಿಜೇತಾ. ಅವಳಿಗೆ ಸ್ವಲ್ಪ ಅನುಮಾನ ಬರಲು ಆರಂಭವಾಗಿತ್ತು. ವಿಕ್ರಮನೇ ತನ್ನನ್ನು ಲವ್ ಮಾಡುತ್ತಿರಬಹುದಾ? ಕೆಲ ದಿನಗಳಿಂದ ಮನಸ್ಸಿನಲ್ಲಿ ಮೂಡಿದ್ದ ಅನುಮಾನದ ಸೆಲೆಯೊಂದು ದೊಡ್ಡದಾದಂತೆ ಭಾಸವಾಯಿತು.
              `ಹುಂ.. ನಾನು ನಿನ್ನ ಪ್ರೀತಿಸ್ತಾ ಇದ್ದೆ. ಆದರೆ ಹೇಳ್ಕಳೋದು ಹೆಂಗೆ ಅಂತ ಒದ್ದಾಡ್ತಿದ್ದೆ ನೋಡು. ಹೇಳೋಕೂ ಆಗದೇ, ನನ್ನಲ್ಲೇ ಇಟ್ಟುಕೊಳ್ಳೋದಕ್ಕೂ ಆಗದೇ ಪರಿತಪಿಸುತ್ತಿದ್ದೆ. ನಾನು ನಿನ್ನ ಪ್ರೀತಿಸ್ತಾ ಇದ್ದೇನೆ. ನೀನು ನನ್ನ ಪ್ರೀತಿಸ್ತೀಯಾ? ನಿನ್ನ ಮನಸ್ಸಿನಲ್ಲಿ ನನಗೆ ಸ್ವಲ್ಪ ಜಾಗ ಕೊಡ್ತೀಯಾ..?' ಹೇಗೋ ಧೈರ್ಯ ಮಾಡಿಕೊಂಡು ವಿಕ್ರಮ ಕೇಳಿಯೇ ಬಿಟ್ಟಿದ್ದ.
               ವಿಜೇತಾ ಅವಾಕ್ಕಾಗಿದ್ದಳು. ವಿಜೇತಾಳ ಮನಸ್ಸಿನಲ್ಲಿ ಚಿಕ್ಕದೊಂದು ಅನುಮಾನದ ಸೆಲೆಯಿತ್ತಾದರೂ ವಿಕ್ರಮ ಇಷ್ಟು ನೇರಾ ನೇರ ಕೇಳುತ್ತಾನೆ ಎಂದುಕೊಂಡಿರಲಿಲ್ಲ. ಇನ್ನಷ್ಟು ದಿನಗಳ ನಂತರ ಕೇಳಬಹುದು ಎಂದುಕೊಂಡಿದ್ದಳೇನೋ. ವಿಕ್ರಮ ಕೇಳಿದರೆ ಏನು ಹೇಳಬೇಕು ಎನ್ನುವುದು ವಿಜೇತಾಳಿಗೆ ಗೊತ್ತಿರಲಿಲ್ಲ. ಸುಮ್ಮನೆ ಕಾಡಿಸುತ್ತಿದ್ದಳಾದರೂ ಆಕೆಯಲ್ಲಿಯೇ ಸ್ಪಷ್ಟ ಭಾವನೆ ಇನ್ನೂ ಇರಲಿಲ್ಲ. ಆಲೋಚಿಸತೊಡಗಿದಳು ವಿಜೆತಾ.

(ಮುಂದುವರಿಯುತ್ತದೆ)

Saturday, October 3, 2015

ಅಘನಾಶಿನಿ ಕಣಿವೆಯಲ್ಲಿ-26

             ಉಂಚಳ್ಳಿ ಜಲಪಾತದ ಮಾರ್ಗದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೂ, ಮರಗಳ್ಳರಿಗೂ ನಡೆದಿದ್ದ ಕಣ್ಣಾಮುಚ್ಚಾಲೆಯ ಘಟನೆಗೂ, ದಂಟಕಲ್ಲಿನಲ್ಲಿ ನಡೆದಿದ್ದ ಮರಗಳ್ಳರ ಮೇಲಿನ ದಾಳಿಯ ನಡುವೆಯೂ ಏನೋ ಸಂಬಂಧ ಇರಬೇಕು ಎಂದು ತರ್ಕಿಸುತ್ತಿದ್ದ ಪ್ರದೀಪ. ಮರಗಳ್ಳರು ಹಲವು ಕಡೆಗಳಲ್ಲಿದ್ದರೂ ಸಾಮಾನ್ಯವಾಗಿ ಯಾರಾದರೂ ಮರಗಳ್ಳತನ ಮಾಡುತ್ತಿದ್ದ ಸಂದರ್ಭದಲ್ಲಿ ಕಣ್ಣಿಗೆ ಕಾಣಿಸಿದರೆ ಓಡಿ ಹೋಗುತ್ತಾರೆ. ಆದರೆ ಈ ಎರಡೂ ಘಟನೆಗಳಲ್ಲಿ ಮರಗಳ್ಳರು ಮೈಮೇಲೆ ಏರಿ ಬಂದಿದ್ದರು. ಜನಸಾಮಾನ್ಯರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ಮೇಲೆ ಧಾಳಿ ನಡೆಸಲು ಪ್ರಯತ್ನಿಸಿದ್ದರು. ಈ ಹಿನ್ನೆಲೆಯಲ್ಲಿ ದಾಳಿಗೆ ಮುಂದಾದ ಮರಗಳ್ಳರು ಖಂಡಿತ ಒಂದೇ ಗುಂಪಿಗೆ ಸೇರಿರಬೇಕು. ಖಂಡಿತ ಈ ಮರಗಳ್ಳರನ್ನು ಯಾವುದೋ ವ್ಯಕ್ತಿ ಅಥವಾ ಯಾವುದೋ ತಂಡ ನಿರ್ವಹಣೆ ಮಾಡುತ್ತಿರಬೇಕು. ಮರಗಳ್ಳರಿಗೆ ಎಲ್ಲೋ ಖಂಡಿತ ತರಬೇತಿಯೂ ಸಿಗುತ್ತಿರಬೇಕು ಎಂದು ಪ್ರದೀಪ ಆಲೋಚಿಸಿದ್ದ. ಮುಂದಿನ ದಿನಗಳಲ್ಲಿ ಪ್ರದೀಪನ ಆಲೋಚನೆಗೆ ಪೂರಕವಾಗಿ ಘಟನೆಗಳು ನಡೆಯಲಿದ್ದವು.
             ಉಂಚಳ್ಳಿ ಜಲಪಾತಕ್ಕೆ ಹೋಗಬೇಕು ಎಂದು ನಿರ್ಧಾರ ಮಾಡಿಕೊಂಡಿದ್ದವರು ಅನಿರೀಕ್ಷಿತವಾಗಿ ನಡೆದ ಮರಗಳ್ಳರ ಮೇಲಿನ ಹಲ್ಲೆಯ ಘಟನೆಯಿಂದ ತಮ್ಮ ಯೋಜನೆಯನ್ನು ಬದಲಾಯಿಸಿಕೊಳ್ಳಬೇಕಾಯಿತು. ಮರಗಳ್ಳರು ಹಗೆಯನ್ನು ಸಾಧಿಸಬಹುದು ಎಂದು ಆಲೋಚನೆ ಮಾಡಿಕೊಂಡಿದ್ದ ಇವರು ಕಾಲಕಾಲಕ್ಕೆ ತಮ್ಮ ಯೋಜನೆಗಳನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ ಎನ್ನುವುದನ್ನೂ ಮನಗಂಡಿದ್ದರು. ಅದು ಅನಿವಾರ್ಯವೂ ಆಗಿತ್ತು.
                ಮರುದಿನದಿಂದಲೇ ರಾಮುವಿನ ಧಾಳಿಯಿಂದ ಗಾಯಗೊಂಡಿದ್ದ ವ್ಯಕ್ತಿಯನ್ನು ಹುಡುಕುವ ಕೆಲಸ ಆರಂಭವಾಯಿತು. ಆರೋಗ್ಯ ಗಣತಿಯ ನೆಪವನ್ನು ಮಾಡಿಕೊಂಡು ವಿಕ್ರಮ, ಪ್ರದೀಪ, ವಿನಾಯಕ, ವಿಜೇತಾ, ವಿಷ್ಣು ಇವರೆಲ್ಲ ತಲಾ ಎರಡೆರಡು ತಂಡಗಳಂತೆ ಒಂದೊಂದು ಊರಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಲು ಆರಂಭಿಸಿದರು. ದಂಟಕಲ್ಲಿನ ಸುತ್ತಮುತ್ತ ಇರುವ ಊರುಗಳಿಗೆಲ್ಲ ಹೋಗಲಾಯಿತು. ಕೊನೆಗೊಮ್ಮೆ ಬೇಣದಗದ್ದೆಯ ಆಚೆಗೆ ಇರುವ ಹೊಸಗದ್ದೆ ಎಂಬಲ್ಲಿ ಬಾಸು ಗೌಡ ಎಂಬಾತನ ಮನೆಯಲ್ಲಿ ಬಾಸು ಗೌಡನ ಕಾಲಿಗೆ ಗಾಯವಾಗಿರುವ ವಿಷಯ ಪತ್ತೆಯಾಯಿತು. ಮನೆಯ ಮಾಡಿನ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಜಾರಿಬಿದ್ದು ಹಗರು ದಬ್ಬೆ ಬಡಿದು ಗಾಯವಾಗಿದೆ ಎಂದು ಬಾಸು ಗೌಡನ ಮನೆಯಲ್ಲಿ ಸಬೂಬನ್ನು ಹೇಳಿದರು. ಬಾಸು ಗೌಡನೂ ಸ್ಥಳದಲ್ಲಿದ್ದ. ಆತನ ಕಾಲಿಗೆ ಗಾಯವಾಗಿತ್ತು. ಗಾಯಕ್ಕೆ ಬ್ಯಾಂಡೇಜ್ ಸುತ್ತಲಾಗಿತ್ತು. ಮುಂಜಾನೆಯೇ ಎದ್ದು ಯಾವುದೋ ಆಸ್ಪತ್ರೆಗೆ ಹೋಗಿ ಬಂದಿರಬೇಕು ಎಂದುಕೊಂಡರು.
            ಬಾಸು ಗೌಡನ ಮನೆಯನ್ನು ಸೂಕ್ಷ್ಮವಾಗಿ ಪರೀಕ್ಷೆ ಮಾಡಿದಾಗ ಎಲ್ಲಿಯೂ ಮಾಡು ನಿರ್ಮಾಣ ಮಾಡಿದಂತಹ ಕುರುಹು ಸಿಗಲಿಲ್ಲ. ಆತ ಸುಳ್ಳು ಹೇಳಿದ್ದು ಸ್ಪಷ್ಟವಾಗಿತ್ತು. ಮರುದಿನದಿಂದಲೇ ಆತನ ಮೇಲೆ ಕಣ್ಣಿಡಬೇಕು ಎಂದುಕೊಂಡರು ಎಲ್ಲರೂ. ಆತ ಎಲ್ಲೆಲ್ಲಿ ಹೋಗುತ್ತಾನೆ? ಏನು ಮಾಡುತ್ತಾನೆ ಎನ್ನುವುದನ್ನು ಸೂಕ್ಷ್ಮವಾಗಿ ತಿಳಿದುಕೊಳ್ಳಬೇಕು ಎಂದುಕೊಂಡರು.
               ಬಾಸು ಗೌಡ ಮರಗಳ್ಳತನ ಮಾಡುತ್ತಿದ್ದಾನೆ ಎನ್ನುವುದು ಸ್ಪಷ್ಟವಾದ ಮೇಲೆ ಆತನ ಹಿನ್ನೆಲೆಯನ್ನು ತಿಳಿದುಕೊಳ್ಳಲು ವಿಕ್ರಮನ ತಂಡ ಪ್ರಯತ್ನಿಸಿತು. ಬಹಳ ಕಡೆಗಳಲ್ಲಿ ವಿಚಾರಿಸಿದಾಗ ಬಾಸು ಗೌಡ ಮೂಲತಃ ಈ ಕಡೆಯವನಲ್ಲವೆಂದೂ ತೀರ್ಥಹಳ್ಳಿಯಿಂದ ಬಂದವನೆಂದೂ ತಿಳಿಯಿತು. ಬಂದ ಹೊಸತರಲ್ಲಿ ಅವರಿವರ ಮನೆಯಲ್ಲಿ ಕೆಲಸ ಮಾಡುತ್ತಿದ್ದನೆಂಬುದೂ ತಿಳಿಯಿತು. ನಂತರ ಇದ್ದಕ್ಕಿದ್ದಂತೆ 407 ವಾಹನವನ್ನು ಕೊಂಡಾಗ ಮಾತ್ರ ಪ್ರತಿಯೊಬ್ಬರೂ ಬಾಸು ಗೌಡನ ಬಗ್ಗೆ ಹುಬ್ಬೇರಿಸಿದ್ದರು. ಆತ 407 ವಾಹನವನ್ನು ಕೊಂಡುಕೊಂಡ ಮೂರು ದಿನಗಳಲ್ಲಿಯೇ ಪೊಲೀಸರು ಬಾಸು ಗೌಡನನ್ನು ಬಂಧಿಸಿದಾಗ ಮಾತ್ರ ಬಾಸು ಗೌಡನ ಅಸಲೀ ಮುಖ ಹೊರಬಂದಿತ್ತು. ಸುತ್ತಮುತ್ತಲ ಊರುಗಳಲ್ಲಿ ಬಾಸುಗೌಡ ವೆನಿಲ್ಲಾ ಕಳ್ಳತನ ಮಾಡುತ್ತಿದ್ದ ಎನ್ನುವುದು ಪೊಲೀಸರ ಬಂಧನದ ನಂತರವೇ ಜಗಜ್ಜಾಹೀರಾಗಿತ್ತು. ವೆನಿಲ್ಲಾ ಕದ್ದು ಕದ್ದು ಸಾಕಷ್ಟು ಹಣ ಮಾಡಿಕೊಂಡು ಕೊನೆಗೊಮ್ಮೆ 407 ವಾಹನವನ್ನು ಕೊಂಡಿದ್ದ. ಬಾಸುಗೌಡನ ಪೋಟೋ ಇಂದಿಗೂ ಪೊಲೀಸ್ ಠಾಣೆಯಲ್ಲಿ ಇದೆ ಎಂದು ಒಂದಿಬ್ಬರು ಮಾಹಿತಿ ನೀಡಿದ್ದರು. ಇಂತಹ ಬಾಸುಗೌಡನನ್ನು `ಪಾಪ..' ಹೋಗಲಿ ಬಿಡಿ ಎಂದುಕೊಂಡು ಬೇಣದಗದ್ದೆಯ ಸುಬ್ರಹ್ಮಣ್ಯ ಹೆಗಡೆ ಬೇಲು ಕೊಡಿಸಿ ಬಿಡುಗಡೆ ಮಾಡಿಸಿದ್ದರಂತೆ.
             ಬಿಡುಗಡೆಯಾದ ಮೇಲೆ ಸಾಚಾತನ ತೋರಿಸಿದ ಬಾಸು ಗೌಡ ತನ್ನ 407 ವಾಹನದಲ್ಲಿ ಅವರಿವರಿಗೆ ಮನೆ ಕಟ್ಟುವ ಕೆಂಪು ಕಲ್ಲುಗಳನ್ನು, ಜಲ್ಲಿ, ಮರಳುಗಳನ್ನು ತಂದುಕೊಡುವ ಕೆಲಸ ಮಾಡತೊಡಗಿದ. ಮೂರ್ನಾಲ್ಕು ವರ್ಷ ಕಳೆದ ಮೇಲೆ ಸಣ್ಣ ಪ್ರಮಾಣದ ರೌಡಿಯಿಸಂ ಕೆಲಸಕ್ಕೂ ಬಾಸು ಗೌಡ ಇಳಿದಿದ್ದ. ಜನರಿಂದ ಮುಂಗಡ ಹಣ ಪಡೆದುಕೊಳ್ಳುವುದು, ಅದಕ್ಕೆ ಪ್ರತಿಯಾಗಿ ಸೆಕೆಂಡ್ ಗುಣಮಟ್ಟದ ಕಲ್ಲುಗಳನ್ನು ಸರಬರಾಜು ಮಾಡುವ ಕಾರ್ಯ ಮಾಡುತ್ತಿದ್ದ. ಇದಕ್ಕೆ ಪ್ರತಿಯಾಗಿ ಜನಸಾಮಾನ್ಯರು ಗಲಾಟೆ ಮಾಡಿದರೆ ತಂದು ಹಾಕಿದ್ದ ಕಲ್ಲನ್ನು ಬಲಾತ್ಕಾರವಾಗಿ ಎತ್ತಿಕೊಂಡು ಬರುವ ಕೆಲಸವನ್ನೂ ಮಾಡುತ್ತಿದ್ದ. ಈ ಕುರಿತಂತೆ ಒಂದೆರಡು ಸಾರಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣವೂ ದಾಖಲಾಗಿತ್ತು. ಆದರೆ ಹಣದ ಪ್ರಭಾವ ಹಾಗೂ ರೌಡಿಯಿಸಮ್ಮಿನ ಕಾರಣದಿಂದ ಅಂತಹ ಪ್ರಕರಣ ಮುಚ್ಚಿಹಾಕುವ ಕಾರ್ಯದಲ್ಲಿ ಬಾಸು ಗೌಡ ಯಶಸ್ವಿಯಾಗುತ್ತಿದ್ದ. ಇಂತಹ ಬಾಸುಗೌಡ ಮರಗಳ್ಳತನ ಮಾಡುತ್ತಿದ್ದ ಎನ್ನುವುದು ಈಗ ಆಗಿರುವ ಗಾಯದಿಂದ ಗೊತ್ತಾದಂತಾಗಿತ್ತು. ರಾಮು ಮಾಡಿದ ದಾಳಿಯಿಂದಾಗಿ ಬಾಸು ಗೌಡನ ಇನ್ನೊಂದು ಮುಖ ಜಗತ್ತಿಗೆ ತಿಳಿದಂತಾಗಿತ್ತು. ಪ್ರದೀಪ ಈ ಎಲ್ಲ ಮಾಹಿತಿಗಳನ್ನು ಪಡೆದುಕೊಂಡು ಆಲೋಚನೆಯಲ್ಲಿ ಬಿದ್ದಿದ್ದ.
             ಮರಗಳ್ಳತನ ಮಾಡಿ ಗಾಯಗೊಂಡಿರುವವನು ಬಾಸು ಗೌಡನಾದರೆ ತನ್ನ ಕೈಯಲ್ಲಿ ಹೊಡೆತ ತಿಂದು ಸಾವನ್ನಪ್ಪಿದವನು ಯಾರು ಎನ್ನುವುದು ಪ್ರದೀಪನ ತಲೆಯಲ್ಲಿ ಕೊರೆಯಲಾರಂಭಿಸಿತ್ತು. ಬಾಸುಗೌಡ ಪಕ್ಕದ ಊರಿನವನೇ ಆಗಿದ್ದರೂ ಸತ್ತವನು ಎಲ್ಲಿಯವನು? ಪಕ್ಕದ ಊರಿನವನಾಗಿದ್ದರೆ ಗೊತ್ತಾಗಬೇಕಿತ್ತಲ್ಲ. ಯಾರೂ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಬಂದಿಲ್ಲ. ಬೇರೆ ಕಡೆಯಿಂದ ಬಂದವನೇ ಎಂದು ಆಲೋಚಿಸಿದ. ಸುತ್ತಮುತ್ತ ಮಾಹಿತಿ ಸಂಗ್ರಹಿಸಿದಾಗ ಇಬ್ಬರಿಗೆ ಹಾರ್ಟ್ ಎಟ್ಯಾಕ್ ಆಗಿ ಆಸ್ಪತ್ರೆಯಲ್ಲಿದ್ದಾರೆ ಎನ್ನುವ ಮಾಹಿತಿ ಸಿಕ್ಕಿತ್ತು. ಒಬ್ಬರಿಗೆ ಬ್ರೈನ್ ಟ್ಯೂಮರ್ ಆಗಿ ಮಂಗಳೂರಿನ ಆಸ್ಪತ್ರೆಗೆ ಎರಡು ದಿನಗಳ ಹಿಂದೆ ಕರೆದೊಯ್ಯಲಾಗಿದೆ ಎನ್ನುವ ಮಾಹಿತಿಯೂ ಸಿಕ್ಕಿತ್ತು. ಇವರ್ಯಾರೂ ಅಲ್ಲ. ಬೇರೆ ಇನ್ಯಾರು ಸತ್ತಿರಬಹುದು ಎಂದು ಪ್ರದೀಪ ಆಲೋಚನೆ ಮಾಡಲಾರಂಭಿಸಿದ್ದ.

***

              ಒಂದೆರಡು ದಿನಗಳಲ್ಲಿ ಏನೆಲ್ಲ ನಡೆದು ಹೋದವಲ್ಲ ಎಂದುಕೊಂಡ ವಿಕ್ರಮ. ಪ್ರದೀಪನಿಂದ ಸುಮ್ಮ ಸುಮ್ಮನೇ ಯಾವುದೋ ಸಮಸ್ಯೆ ಉದ್ಭವವಾಗಿರಬಹುದೇ ಎಂದೂ ಆತನ ಮನದಲ್ಲಿ ಮೂಡಿತು. ಪ್ರದೀಪ ಖಂಡಿತವಾಗಿಯೂ ಸಾಮಾನ್ಯನಲ್ಲ. ಈತ ಬೇರೇನೋ ಇರಬೇಕು ಎನ್ನುವ ಶಂಕೆ ಮತ್ತಷ್ಟು ಬಲವಾಯಿತು. ಅಷ್ಟರಲ್ಲಿ ಅವನ ಬಳಿಗೆ ಬಂದ ವಿಜೇತಾ `ವಿಕ್ಕಿ.. ಉಂಚಳ್ಳಿ ಜಲಪಾತಕ್ಕೆ ಹೋಗಿ ಬರೋಣವಾ? ಯಾಕೋ ಮನಸ್ಸೆಲ್ಲ ಒಂಥರಾ ಆಗಿದೆ. ಸ್ವಲ್ಪ ಮನಸ್ಸಿಗೆ ರಿಲ್ಯಾಕ್ಸ್ ಸಿಗುತ್ತೇನೋ ಅಂತ..' ಎಂದಳು.
             `ಖಂಡಿತ. ನಾನೂ ಅದನ್ನೇ ಹೇಳೋಣ ಅಂದುಕೊಂಡಿದ್ದೆ. ನೀನು ಹೇಳಿದ್ದು ಚೆನ್ನಾಯಿತು ನೋಡು. ಎಲ್ಲರಿಗೂ ಹೇಳುತ್ತೇನೆ. ಇವತ್ತೇ ಹೋಗಿ ಬರೋಣ..' ಎಂದು ತಯಾರಾಗಲು ಅನುವಾದ ವಿಕ್ರಮ.
              `ಬೇಗ.. ' ಅವಸರಿಸಿದಳು ವಿಜೇತಾ.
               ಕೆಲವೇ ಸಮಯದಲ್ಲಿ ಎಲ್ಲರಿಗೂ ಸುದ್ದಿ ತಿಳಿದು ಪ್ರತಿಯೊಬ್ಬರೂ ತಯಾರಾದರು. ವಿಕ್ರಮ ಕಾರನ್ನು ತೆಗೆದಿದ್ದ. ವಿನಾಯಕ, ವಿಷ್ಣು, ಪ್ರದೀಪ, ವಿಜೇತಾ, ವಿಕ್ರಮ ಹಾಗೂ ವಿನಾಯಕನ ತಂಗಿಯರು ತಯಾರಾಗಿ ಕಾರನ್ನೇರಿದ್ದರು. ದಂಟಕಲ್ಲಿನಿಂದ ಒಂದು ತಾಸಿನ ಅಂತರದಲ್ಲಿ ಯಲುಗಾರ, ಹೊಸಗದ್ದೆ, ಹೇರೂರು, ಹೆಗ್ಗರಣೆ ಈ ಮುಂತಾದ ಊರುಗಳನ್ನು ದಾಟಿ ಉಂಚಳ್ಳಿ ಜಲಪಾತದ ಬಳಿ ತೆರಳಿದರು.
              ಅಘನಾಶಿನಿ ನದಿಯಿಂದ ಸೃಷ್ಟಿಯಾಗುವ ಈ ಜಲಪಾತವನ್ನು ಲೂಷಿಂಗ್ಟನ್ ಜಲಪಾತ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಶಿರಸಿಯಿಂದ 30 ಕಿಲೋಮೀಟರ್ ಅಂತರದಲ್ಲಿರುವ ಈ ಜಲಪಾತದ ಎತ್ತರ 116 ಮೀಟರ್. 1845ರಲ್ಲಿ ಉತ್ತರ ಕನ್ನಡದಲ್ಲಿ ಸರ್ವೇ ಕಾರ್ಯ ನಿರ್ವಹಿಸುತ್ತಿದ್ದ ಬ್ರಿಟೀಷ್ ಅಧಿಕಾರಿ ಜೆ. ಡಿ. ಲೂಷಿಂಗ್ಟನ್ ಈ ಜಲಪಾತವನ್ನು ಕಂಡುಹಿಡಿದ ಎಂಬ ಮಾಹಿತಿಯಿದೆ. ಆದ್ದರಿಂದ ಈ ಜಲಪಾತವನ್ನು ಲೂಷಿಂಗ್ಟನ್ ಜಲಪಾತ ಎಂದು ಕರೆಯುತ್ತಾರೆ. ಈ ಜಲಪಾತದ ನೀರು ಬೀಳುವಾಗ ಭಾರಿ ದೊಡ್ಡ ಶಬ್ದ ಉಂಟುಮಾಡುತ್ತದೆ. ಆ ಕಾರಣದಿಂದ ಸ್ಥಳೀಯರು ಈ ಜಲಪಾತವನ್ನು `ಕೆಪ್ಪ ಜೋಗ' ಎಂದು ಕರೆಯುತ್ತಾರೆ. ವರ್ಷದ ಎಲ್ಲ ಕಾಲದಲ್ಲಿಯೂ ಈ ಜಲಪಾತದ ದರ್ಶನ ಲಭ್ಯ. ಮಳೆಗಾಲದಲ್ಲಂತೂ ಇದು ರುದ್ರರಮಣೀಯ.
              ಬೇಸಿಗೆಯಾದ್ದರಿಂದ ಜಲಪಾತದಲ್ಲಿ ನೀರು ಅಷ್ಟಾಗಿ ಇರಲಿಲ್ಲ. ಆದರೆ ಜಲಪಾತ ಬಹಳ ಸುಂದರವಾಗಿ ಕಾಣುತ್ತಿತ್ತು. ಕಾರಿನಿಂದ ಇಳಿದವರು ಓಡಿದಂತೆ ಸಾಗಿದರು. ವೀಕ್ಷಣಾ ಗೋಪುರದ ಬಳಿ ನಿಂತು ಜಲಪಾತ ನೋಡಿದವರಿಗೆ ಸಮಯ ಸರಿದಿದ್ದೇ ಗೊತ್ತಾಗಲಿಲ್ಲ. ಜಲಪಾತಕ್ಕೆ ಮಳೆಗಾಲದ ಅಬ್ಬರ ಇರಲಿಲ್ಲ. ಕಲಕಲಕಿಸುತ್ತ ಇಳಿದು ಬರುತ್ತಿದ್ಧಳು ಅಘನಾಶಿನಿ. ಮಳೆಗಾಲದಲ್ಲಿ ಅಬ್ಬರದಿಂದ ಸದ್ದು ಮಾಡುತ್ತಿದ್ದವಳು ಇವಳೇ ಹೌದಾ ಎನ್ನುವಷ್ಟು ಸೌಮ್ಯ. ಒಂದೇ ನೋಟಕ್ಕೆ ಎಲ್ಲರ ಮನಸ್ಸನ್ನು ಕದ್ದು ಬಿಟ್ಟಿದ್ದಳು.
           'ಕೆಳಗೆ ಹೋಗಬಹುದಾ?' ಕೇಳಿದ್ದಳು ವಿಜೇತಾ.

(ಮುಂದುವರಿಯುತ್ತದೆ)

Friday, October 2, 2015

ಅಂ-ಕಣ-7

ನಿಶ್ಚಿಂತೆ

ತಲೆ ಮೇಲೆ
ಹತ್ತಿ ಕೂರುವವರು
ತಲೆ ದೊಡ್ಡದೋ, ಸಣ್ಣದೋ
ಎಂದು
ತಲೆ ಕೆಡಿಸಿಕೊಳ್ಳುವುದಿಲ್ಲ ||


ಹೊಸಮನೆ ಹೆಸರು

ಸಿನಿಮಾ ನಿರ್ದೇಶಕ
ಮಠ ಗುರುಪ್ರಸಾದ್
ಹೊಸ ಮನೆ ಕಟ್ಟಿಸಿದರೆ
ಇಡಬಹುದಾದ
ಹೊಸ ಹೆಸರು
ಗುರು-ವಿಲ್ಲಾ|
ಗುರುವಿಲ್ಲಾ||


ದಪ್ಪ

ದಪ್ಪ ಇರುವವರನ್ನು
ನೋಡಿದಾಗಲೆಲ್ಲಾ
HOWದಪ್ಪ ಎನ್ನಿಸುತ್ತದೆ ||