Tuesday, April 23, 2013

ನಿನ್ನದೇ ನೆನಪು ನೆರಳಿನಲ್ಲಿ : ಪ್ರೇಮಪತ್ರ-4

ಪ್ರೇಮಪತ್ರ-4

ನಿನ್ನದೇ ನೆನಪು ನೆರಳಿನಲ್ಲಿ

   
ಪ್ರೀತಿಯ ಗೆಳತಿ,
    ಛೇ.., ನೀನು ಹೀಗೆ ಮಾಡ್ತೀಯಾ ಅಂತ ನಾನು ಅಂದುಕೊಂಡಿರಲಿಲ್ಲ. ನೀನು ಬರ್ತೀಯಾ.. ಬಂದು ನನ್ನ ಬಳಿಯಲ್ಲಿ ನಾಲ್ಕೆಂಟು ಮಾತುಗಳನ್ನಾಡಿ, ಹಾಗೆ ಸುಮ್ಮನೇ ನಕ್ಕು ನಲಿದು ವಾತಾವರಣವನ್ನು ಸೆಳೆದುಹೋಗುತ್ತೀಯಾ ಅಂದುಕೊಂಡಿದ್ದೆ.. ಆದರೆ ನನ್ನ ನಿರೀಕ್ಷೆ ಹುಸಿಯಾಗಿ ಹೋಯ್ತು. ನಾನು ನಿನಗಾಗಿ ಕಾದು ಕಾದು ಸುಸ್ತಾಗಿ ಬಸವಳಿದು ಹೋದೆ.
    ಅಂದು ನಿನಗೆ ನೆಪಿತ್ತಲ್ಲ. ಫೆಬ್ರವರಿ 14. ನನ್ನ ನಿನ್ನಂತಹ ಪ್ರೇಮಿಗಳಿಗೆಂದೇ ರಿಸರ್ವ್ ಆಗಿರೋ ದಿನ. ವ್ಯಾಲಂಟಾಯಿನ್ಸ್ ಡೇ. ನಿನಗೆ ಮರೆತಿಲ್ಲ. ಮರೆಯೋದೂ ಇಲ್ಲ ಅಂದ್ಕೊಂಡಿದ್ದೀನಿ. ಆವತ್ತು ನೀನು ನನ್ನ ಬಳಿ ಬಂದು ಮಾತನಾಡಿ ಹೋಗ್ತೀಯಾ ಅಂದ್ಕೊಂಡಿದ್ನಲ್ಲೆ ಗೆಳತಿ., ಯಾಕೆ ನೀನು ಬರ್ಲೇ ಇಲ್ಲ..? ನೀನು ಬರದೇ ಇರಲು ಅಂತಹುದೇನಾದರೂ ಕಾರಣವಿದೆಯಾ..? ಇಲ್ಲವಾದಲ್ಲಿ ನನ್ನನ್ನು ಸುಮ್ಮ ಸುಮ್ಮನೇ ಕಾಡಿಸಬೇಕೆಂಬ ಕಾರಣದಿಂದಲೇ ಬಂದಿಲ್ಲವಾ..?
    ನೀನಾಗಿಯೇ ಮೈಮೇಲೆ ಬಿದ್ದು, ಕಾಟಕೊಟ್ಟು ಅದೆಷ್ಟೋ ಪರಿ ಬಳಸಿ ಬಯಸಿ ನನ್ನಿಂದ ಪ್ರೇಮವನ್ನು ಪಡೆದ ನಿನಗೆ ಪ್ರೇಮಿಗಳ ದಿನದಂದು ನನ್ನ ಮರೆತುಹೋಯಿತಾ..?
    ನನ್ನೊಲವೆ., ನಿನಗಾಗಿ ಅಂತ್ಲೇ ಒಂದು ಬಿಳಿಯ ಹಾಗೂ ಮತ್ತೊಂದು ನಸುಗೆಂಪಿನ ಗುಲಾಬಿಯನ್ನು ತಂದು, ಕೊಡಬೇಕೆಂದು ಕೈಯಲ್ಲಿ ಹಿಡಿದು ನಿಂತಿದ್ದೆ. ಆದರೆ ನೀನು ಎಷ್ಟು ಹೊತ್ತಾದರೂ ಬರಲೇ ಇಲ್ಲ. ಅದರ ದಂಟಿನಲ್ಲಿದ್ದ ಮುಳ್ಳೊಂದು ಹಾಗೆ ಸುಮ್ಮನೆ ಚುಚ್ಚಿ ರಕ್ತವನ್ನು ಒತ್ತರಿಸಿದ ಗಾಯ ನಿಧಾನವಾಗಿ ಮಾಯುತ್ತಿದೆ. ಕೈಯಲ್ಲಿ ಹಿಡಿದ ಹೂವಿನ ಎಸಳುಗಳೆಲ್ಲ ಉದುರಿ ಕೇವಲ ದಂಟೊಂದೆ ಉಳಿದುಕೊಂಡಿದೆ. ಯಾಕ್ಹೀಗೆ ಗೆಳತಿ..? ನಾನು ನಿನಗೆ ಬೇಡವಾದ್ನಾ..?
    ಫೆಬ್ರವರಿ 14ರಂದು ನಿನ್ನ ನೋಟ ಮಾತ್ರದಿಂದಲೇ ಹೊಸದೊಂದು ಲೋಕ ಕಟ್ಟಿಕೊಳ್ಳೋಣ ಎಂದು ಬಯಸಿದ್ದೆ. ನಿನ್ನ ನಗುವಲ್ಲಿ ನಾನು ಮಗುವಾಗ ಬಯಕೆಯನ್ನು ಹೊಂದಿದ್ದೆ..ನಿನ್ನ ಉಸಿರಾಗಬೇಕೆಂದುಕೊಂಡಿದ್ದೆ. ಕಣ್ಣಲ್ಲಿ ಕಣ್ಣಿಟ್ಟು ಮನದ ಭಾವನೆಗಳನ್ನು ನಿನ್ನ ಜೊತೆ ಹಂಚಿಕೊಳ್ಳಬಯಸಿದ್ದೆ.. ಆದರೆ ಅದೆಲ್ಲ ಭಾವನೆಗಳ ಗಾಳಿ ಗೋಪರುವನ್ನು ಉಫ್ ಎಂದು ಊದಿದೆ. ಕಾಯುತ್ತಲೇ ಇರುವ ನನ್ನ ಭಾವನೆಗೆ ಪೂರಕವಾಗಿ ನಡೆದುಕೊಳ್ಳಲೇ ಇಲ್ಲ. ಬೆಳಗ್ಗಿನಿಂದ ಸಂಜೆಯವರೆಗೆ ನಮ್ಮ ರೆಗ್ಯೂಲರ್ ಜಾಗದಲ್ಲಿ ನಾನು ಕಾದಿದ್ದೇ ಬಂತು. ಹಾಂ.. ನೀನು ನಮ್ಮ ಟ್ರಿಪ್ಪಿನ ಸಂದರ್ಭದಲ್ಲಿ ಕೊಡಿಸಿದ್ದೆಯಲ್ಲ ತಿಳಿನೀಲಿ ಬಣ್ಣದ ಟೀಷರ್ಟ್.. ಎದೆಯ ಮೇಲೆ ಚೆ ಗುವೆರಾ ನ ಉತ್ಸಾಹ ಉಕ್ಕಿಸುವ ಪೋಟೋ. ಅದನ್ನು ಧರಿಸಿಯೇ ಬಂದಿದ್ದೆ.. ಆದಿನ ಅದೇನಾಗಿತ್ತೋ ಏನೋ ನಾವು ಸೇರುತ್ತಿದ್ದ ಆ ಜಾಗದ್ದಿ ನಮ್ಮಂತಹ ಎಂಟ್ಹತ್ತು ಜೋಡಿಗಳು. ನಾನೊಬ್ಬನೆ .. ಒಂಟಿ ಒಂಟಿ.. ಅದೆಷ್ಟು ನಕ್ಕರೋ..
    ನಿನಗಾಗಿ ಕಾದು ಕಾದು ಈಗ ಬರುತ್ತೀಯಾ ಆಗ ಬರುತ್ತೀಯಾ ಎಂದು ಗಡಿಯಾರದ ಮೇಲೆ ಕಣ್ಣೊಟ ಬೀರಿದ್ದೇ ಬಂತು.. ಆದರೆ ನೀನು ಬರಲೇ ಇಲ್ಲ. ನಿನ್ನ ನೋಡುವ ತವಕದ ನನ್ನ ಮನಸ್ಸಿಗೆ ಉರಿಕೆಂಡವನ್ನು ಸೋಕಿಬಿಟ್ಟೆ ನೀನು. ಯಾಕೆ ಹೀಗೆ..? ಎಷ್ಟು ಬೇಜಾರಾಗಿದೆ ಗೊತ್ತಾ..? ಅಳೋಣ ಎಂದರೆ ನಾನು ಗಂಡಸು. ನಕ್ಕುಬಿಡುತ್ತದೆ ಸಮಾಜ. ಆದರೆ ಸೀದಾ ಸಾದಾ ಇರಲೋ ಎಂದರೆ ಮೀರಿ ಮೆರೆವ ಎದೆ ಭಾರ.. ನಿಟ್ಟುಸಿರು. ನೀನು ಹಾಗೆ ಮಾಡಿದ್ದರ ಕಾರಣ ಏಕೋ.. ಏನೋ.. ನಾನರಿಯೆ.. ಯಾಕೋ ಭಯವಾಗುತ್ತಿದೆ ಗೆಳತಿ..
    ಇರಲಿ ಬಿಡು.., ಮತ್ತೆ ನಿನ್ನದೇ ನೆನಪು ನೆರಳಿನಲ್ಲಿ ಕನವರಿಕೆಯಲ್ಲಿ ಬದುಕಿದ್ದೇನೆ. ಗೋಡೆಗಂಟಿಸಿದ ನವಿಲುಗರಿ  ನಿನ್ನ ನೆನಪನ್ನು ಮತ್ತಷ್ಟು ತರುತ್ತಿದೆ. ನಮ್ಮ ಮನೆಗೆ ಬಂದಾಗ ಗುಡ್ಡದ ಮೇಲೆ ನಿನಗೆ ಸಿಕ್ಕ ನವಿಲುಗರಿಯನ್ನು ಜತನದಿಂದ ಎತ್ತಿಕೊಂಡು ನನಗೆ ಕೊಟ್ಟಿದ್ದೆ.. ನಾನು ಅದನ್ನು ಅಷ್ಟೇ ಜತನದಿಂದ ನನ್ನ ಮಲಗುವ ಕೋಣೆಯ ಪಕ್ಕದ ಗೋಡೆಗೆ ಅಂಟಿಸಿದ್ದೆ... ಅಮೃತವರ್ಷಿಣಿಯ ಥರ.. ನಿನ್ನ ನೆನಪಾದಾಗ ನವಿಲುಗರಿಯ ಟೆಲಿಪತಿ ಸಂದೇಶ ರವಾನೆ ಮಾಡುತ್ತಿದ್ದೆ..
    ಬಿಡು.. ನೀನು ಬರಲಿಲ್ಲ.. ಆದರೂ ನಾನು ಕಾಯುತ್ತಿದ್ದೇನೆ.. ನಿನ್ನ ನೆನಪಿನಲ್ಲಿ.. ಭಯದ ನೆರಳಿನಲ್ಲಿ.. ನೀ ಬಂದರೆ ನನ್ನ ಹಳೆಯ ದುಕ್ಕ ಬೇಗುದಿಯನ್ನೆಲ್ಲ ಮರೆತುಬಿಡುತ್ತೆನೆ.. ಬರುವೆಯಲ್ಲ..?
ಇಂತಿ ನಿನ್ನವ
ಜೀವನ

No comments:

Post a Comment