ಬೆಂದ ಕಾಳನ್ನು ಹುಡುಕುತ್ತ
ಕಾಣದೂರಿಗೆ ಹೊರಟಿದೆ
ನಮ್ಮ ತುರಗ..!
ಆಚೆ ಈಚೆ ನೋಡದಂತೆ ತುರಗಕ್ಕೆ
ಕಣ್ಣು ಪಟ್ಟಿ ಕಟ್ಟಿದ್ದಾರೆ..
ತುರಗದ ಬಾಲ ಥೇಟು
ಅವಳ ಜಡೆಯಂತೇ ಕುಣಿಯುತ್ತಿದೆ..
ಅಂತಿಂತದ್ದಲ್ಲ ಈ
ತುರಗಕ್ಕೆ ಕೊಂಬೂ ಇದೆ. !!
ಅಜ್ಜ ಅಜ್ಜಿ ಅಪ್ಪ ಅಮ್ಮ
ಯಾರಮಾತಿಗೂ ಕವಡೆ ಕಾಸಿನ ಕಿಮ್ಮತ್ತಿಲ್ಲ
ಸಾಕಿ ಬೆಳೆಸಿದವನ ಕೂಗಿಗೆ ಬೆಲೆಯಿಲ್ಲ
ತುರಗಕ್ಕೆ ಹಸಿರು ಹುಲ್ಲು ಬೇಡ
ದಾಣಿ ಬೂಸಾವನ್ನು ಹುಡುಕುತ್ತಿದೆ..!!
ತುರಗಕ್ಕೆ ತುರಗವೇ ಜೊತೆಗಾರ
ಬೆನ್ನ ಮೇಲೆ ಜೀನಿಲ್ಲ..!
ಮಲೆನಾಡಿನ ಕಸುವೆಲ್ಲ
ತಿಂದು ಕೊಬ್ಬಿದರೂ
ನಾಗಾಲೂಟದಲ್ಲಿರುವ ತುರಗಕ್ಕೆ
ಇದೆಲ್ಲ ಕಾಲು ಕಸ..!!
ನುಗ್ಗುವ ಕುದುರೆಗೆ ಅದ್ಯಾರೋ
ಲಗಾಮು ಹಾಕಿ ಗಾಣಕ್ಕೆ ಕಟ್ಟಿದರೂ
ಆಸೆಗೆ ಅಂಕೆಯಿಲ್ಲ..!
ಉಸಿರುಕಟ್ಟಿ ಓಡಿದ ಬೆಟ್ಟದ ತುದಿ
ಬಯಲಾದರೂ ಓಟ ನಿಂತಿಲ್ಲ..!!
ಇಷ್ಟರ ನಡುವೆ ಮನೆಯೊಳಗಣ
ಅಪ್ಪ ಅಮ್ಮ ಅಜ್ಜ ಅಜ್ಜಿಯ ಕಣ್ಣೀರು
ಬ್ರೇಕಿಂಗ್ ನ್ಯೂಸ್ ಆಗಲೇ ಇಲ್ಲ..!!
ವಸಂತಗಳಾಚೆ
ಮರದ ಹಣ್ಣೆಲೆಗಳು ಉದುರಿದವು
ಇತಿಹಾಸ ಮರುಕಳಿಸಿತು..
ತುರಗ ಹಣ್ಣಾಯಿತು.!!
ಕೊನೆಗೂ ಕಾಲಚಕ್ರದಲ್ಲಿ
ತುರಗ ಅಜ್ಜ ಅಜ್ಜಿ..
ಅನಿವಾರ್ಯ ಅಸಹಾಯಕ ಪಾತ್ರಧಾರಿ..!!
ಕವಿತೆಯನ್ನು ಬರೆಯದೇ ಬಹಳ ದಿವಸಗಳೇ ಕಳೆದಿದ್ದವು ನೋಡಿ...ವರುಷಗಳೆ ಸಂದಿದ್ದವೇನೋ.. ಮೊನ್ನೆ ತಾನೆ ಶಿರಸಿಯಲ್ಲಿ ತಾಲೂಕಾ ಮಟ್ಟದ ಸಾಹಿತ್ಯ ಸಮ್ಮೇಳನ ನಡೆಯಿತು. ಕವಿ ಸಮಯದಲ್ಲಿ ನನ್ನ ಹೆಸರನ್ನೂ ಹಾಕಿ ಕವಿತೆ ವಾಚನ ಮಾಡಬೇಕೆಂದರು.. ಅದಕ್ಕೆ ಬರೆದು ವಾಚಿಸಿದ ಕವಿತೆ ಇದೆ..
No comments:
Post a Comment