Tuesday, March 7, 2017

ಹುಲಿರಾಯ ಬಂದು ಹಾಯ್ ಅಂದಿದ್ದ...! ಜೊತೆಯಲ್ಲಿ ಮರಿಯನ್ನೂ ಕರೆತಂದಿದ್ದ!!


            ಇದು ನಿನ್ನೆ ಬೆಳಗನ ಜಾವ ನಡೆದ ಘಟನೆ. ಇನ್ನೂ ನನ್ನ ಮನಸ್ಸಿನಲ್ಲಿ ಹಸಿಯಾಗಿಯೇ ಇದೆ.
 ನಿನ್ನೆ ರಾತ್ರಿ ನಾನು ಮಲಗಲು ನಡುರಾತ್ರಿ 2 ಗಂಟೆ ಆಗಿತ್ತು. ಮಲಗಿ ಅರೆಘಳಿಗೆ ಆಗಿರಲಿಲ್ಲ. ಅಪ್ಪ `ತಮಾ ಹುಲಿ ಕೂಗ್ತಾ ಇದ್ದು ಕೇಳು..' ಎಂದ.. ನಾನು ಏಳಲಿಲ್ಲ. ನಮ್ಮೂರಿನಲ್ಲಿ ಆಗೊಮ್ಮೆ ಈಗೊಮ್ಮೆ ಹುಲಿ ಕೂಗುವುದು ಕೇಳಿದ್ದ ನನಗೆ ಇದು ಸಹಜ ಅನ್ನಿಸಿ ಕಡ್ಡ ಹರಿದು ಮಲಗಿದ್ದೆ. ಅಮ್ಮ ಎದ್ದಿದ್ದಳಿರಬೇಕು. `ಮೇಲಿನ ಮನೆ ಹತ್ರ ಕಾನಿನಲ್ಲಿ ಎಲ್ಲೋ ಹುಲಿ ಕೂಗ್ತಾ ಇದ್ದು..' ಎಂದು ಹೇಳಿದ ಅಪ್ಪ ಸುಮ್ಮನಾಗಿದ್ದ. ಅದಾಗಿ ಮತ್ತೊಂದು ಹತ್ತು ಹದಿನೈದು ನಿಮಿಷವಾಗಿರಲಿಲ್ಲ. ಮನೆಯ ಪಕ್ಕದಲ್ಲೇ ಒಮ್ಮೆ ಗಂವ್... ಎಂದಿತು ಸದ್ದು. ನಮ್ಮ ಮನೆಯೇ ಅದುರಿತೇನೋ ಎಂಬಂತೆ ಸದ್ದು. ಅಜಮಾಸು 10 5ರಿಂದ 10 ಸೆಕೆಂಡುಗಳ ಕಾಲ. ಮನೆಯೊಳಕ್ಕೆ ಮಲಗಿದ್ದ ನಾವು ಒಮ್ಮೆ ಬೆಚ್ಚಿ ಬಿದ್ದಿದ್ದೆವು. ಗಂವ್.. ಎನ್ನುವ ಸದ್ದು ಅಘನಾಶಿನಿ ಕಣಿವೆಯಲ್ಲಿ ಮತ್ತೆ ಮಾರ್ದನಿಸಿದಂತಾಯಿತು.
              `ತಮಾ... ಹುಲಿ ಬಂಜೋ... ಇಲ್ಲೇ ಎಲ್ಲೋ ಇದ್ದು..' ಅಮ್ಮ ಎದ್ದು ಲೈಟ್ ಹಾಕಿ ಕೂಗಿದಳು. ಅಪ್ಪ `ಯೇಹೇ.. ಅದು ಹುಲಿಯಲ್ಲ.. ಹಂದಿ..' ಎಂದ. `ಇಲ್ಯಪಾ ಇಲ್ಲೆ.. ಇದು ಹುಲಿನೇಯಾ..' ಎಂದ ಅಮ್ಮ ಸೀದಾ ಅಡುಗೆ ಮನೆಗೆ ಹೋಗಿ ಲೈಟ್ ಹಾಕಿದಳು. ಅಲ್ಲಿಂದ ಸೀದಾ ಅಪ್ಪನನ್ನು ಕರೆದು `ಬನ್ನಿ... ನಂಗೆ ಒಬ್ಬನೇ ಹೋಪಲೆ ಹೆದರ್ಕೆ ಆಗ್ತಾ ಇದ್ದು.. ಕೊಟ್ಟಿಗೆಗೆ ಹೋಗೋಣ..' ಎಂದಿದ್ದು ಕೇಳಿಸಿತು. ಅಪ್ಪ ಎದ್ದು ಬಂದ. ಅಮ್ಮ ಕೊಟ್ಟಿಗೆ ಲೈಟ್ ಹಾಕಿದಳು.
              ಕೊಟ್ಟಿಗೆಯಲ್ಲಿದ್ದ ಒಂದೆ ಒಂದು ಹಸು. ಪ್ರೀತಿಯ ಶ್ರೀದೇವಿ ಆಗಲೇ ಬೆಚ್ಚಿ ಬೆದರಿ ಮೈ ರೋಮಗಳನ್ನೆಲ್ಲ ನೆಟ್ಟಗೆ ಮಾಡಿಕೊಂಡು ಕಿವಿಚಟ್ಟೆಯನ್ನು ಸುತ್ತಲೂ ತಿರುಗಿಸುತ್ತ, ಮನೆಯ ಪಕ್ಕದಲ್ಲಿನ ಕಾಡನ್ನೂ, ಮನೆಯ ಕೆಳಭಾಗದಲ್ಲಿದ್ದ ರಸ್ತೆಯನ್ನೂ ನೋಡುತ್ತ ನಿಂತಿದ್ದಳು. ಹುಲಿ ಬಂದಿದ್ದು ಖರೆಯಾಗಿತ್ತು. ಆದರೆ ಎಲ್ಲಿ ಬಂದಿದೆ ಎಂಬುದು ಗೊತ್ತಾಗಲಿಲ್ಲ. ಮನೆಯ ಅಂಗಳದಲ್ಲೆಲ್ಲೋ ಇದೆ ಎನ್ನಿಸಿತ್ತು. ಅಪ್ಪ ಹುಡುಕಲು ಹೋಗುತ್ತಿದ್ದನೇನೋ, ಅಮ್ಮ ಬೇಡವೇ ಬೇಡ ಎಂದು ಗದರಿಸಿ ಸುಮ್ಮನಾಗಿಸಿದ್ದಳು.
               ಸೀದಾ ದೇವರ ಒಳಕ್ಕೆ ಬಂದಿದ್ದ ಅಮ್ಮ ಜಂವಟೆಯನ್ನು ತೆಗೆದುಕೊಂಡು ಬಡಿಯಲು ಹೊರಟಿದ್ದಳು. ನಾನು ಸುಮ್ಮನಿರು ಮಾರಾಯ್ತಿ.. ಜಂವಟೆ ಎಲ್ಲ ಬಡಿಯೋದು ಬೇಡ ಎಂದೆ. ಆಕೆ ಸುಮ್ಮನಾಗಿದ್ದಳು. ದೊಡ್ಡದಾಗಿ ಗದ್ದಲ ಮಾಡಿ ಹುಲಿಯನ್ನು ಓಡಿಸುವುದು ಅಮ್ಮನ ಉದ್ದೇಶವಾಗಿತ್ತು. ಕೊಟ್ಟಿಗೆಯಲ್ಲಿ ಒಂದೇ ಒಂದು ದನ ಇದೆ. ಅದಕ್ಕೆ ಏನಾದರೂ ತೊಂದರೆ ಮಾಡಿದರೆ ಎನ್ನುವ ಭಯ ಅಮ್ಮನನ್ನು ಕಾಡುತ್ತಿತ್ತು. ಅಲ್ಲಿಂದ ಶುರುವಾಯಿತು ನೋಡಿ ಅಮ್ಮನಿಗೆ ಸಂಕಟ. ಮೂನರ್ಾಲ್ಕು ಸಾರಿ ಮನೆಯನ್ನೆಲ್ಲ ಓಡಾಡಿದಳು. ಹುಲಿ ಬಂದಿದೆ ಎನ್ನುವುದು ಖಚಿತವಾಗಿತ್ತು. ಆದರೆ ಹುಲಿ ಹುಂಚುತ್ತ ಕುಳಿತರೆ ಕಷ್ಟ ಎನ್ನುವುದು ಅಮ್ಮನ ಭಾವನೆ.
ಅಮ್ಮನಿಗೆ ದನವನ್ನು ಉಳಿಸಿಕೊಳ್ಳಬೇಕು ಎನ್ನುವ ಆಲೋಚನೆ ತಲೆಯಲ್ಲಿ. ಸೀದಾ ಹೋದವಳೇ ಕೊಟ್ಟಿಗೆಯಲ್ಲಿ ಕಾಯಿಸಿಪ್ಪೆ, ಅದೂ ಇದೂ ತಂದು ದೊಡ್ಡಾಗಿ ಬೆಂಕಿಯನ್ನು ಹಾಕಿದಳು. ಅಪ್ಪನ ಬಳಿ ಇಲ್ಲೇ ಇರಿ ಎಂದು ಹೇಳಿ ಬೆಳಕು ಮೂಡುವವರೆಗೂ ಕೊಟ್ಟಿಗೆಯಲ್ಲಿ ಕಾಯುತ್ತಲೇ ಇದ್ದರು. ಅಷ್ಟರ ನಡುವೆ ತಿಂಡಿಯನ್ನು ಮಾಡುವ ಸಲುವಾಗಿ ಅಮ್ಮ ಮಿಕ್ಸರ್ ಸದ್ದು ಮಾಡಿದ್ದಳು. ಆಗ ಇನ್ನೊಮ್ಮೆ ಕೂಗಿತ್ತು ನೋಡಿ ಹುಲಿ. ಆದರೆ ಮೊದಲಿನಷ್ಟು ದೊಡ್ಡದಾಗಿರಲಿಲ್ಲ. ಸಣ್ಣ ಸ್ವರ ಇತ್ತು. ಹುಲಿ ಎಲ್ಲೋ ದೂರ ಹೋಯಿತು ಎಂದುಕೊಂಡೆವು. ಬೆಳಕಾದ ಮೇಲೆಯೇ ಮನೆಯವರಿಗೆಲ್ಲ ಸಮಾಧಾನ.
                 ದೂರದಲ್ಲೆಲ್ಲೋ ಮಂಗನ ಗ್ವಾಲೆ ದೊಡ್ಡದಾಗಿ ಕಿರುಚಾಡಿದ್ದು ಕೇಳಿಸಿತು. ನಾನು, ಅಮ್ಮ, ಅಪ್ಪ ಎಲ್ಲ ಕಿವಿಗೊಟ್ಟು ಆಲಿಸಿದೆವು. ನನ್ನ ಮನೆಯ ಜಮೀನಿನ ಪಕ್ಕದಲ್ಲಿಯೇ ಹಾದು ಹೋಗಿದ್ದ ಅಘನಾಶಿನಿ ನದಿಯ ಇನ್ನೊಂದು ದಡಡದಲ್ಲಿ ಮಂಗನ ಗ್ವಾಲೆ ದೊಡ್ಡದಾಗಿ ಕೂಗಿದ ಸದ್ದು ಕೇಳಿಸಿತ್ತು. `ಹುಲಿ ಹೊಳೆ ದಾಟಿ ಹೋಗಿದೆ..' ಎಂದ ಅಪ್ಪ. ಹುಲಿಯನ್ನು ಕಂಡರೆ ಮಂಗಗಳು ವಿಚಿತ್ರ ಸ್ವರದಲ್ಲಿ ಕೂಗುತ್ತವಂತೆ. ಹಾಗೆಯೇ ಕೂಗಿದ್ದವು ಮಂಗಗಳು. ಅರ್ಧಗಂಟೆಯ ನಂತರ ಮಂಗಗಳ ಕಮಾಂಡರ್ ಇರಬೇಕು. ಅದು ದೊಡ್ಡದಾಗಿ ಸಿಗ್ನಲ್ ಕೊಟ್ಟಿತು. ಅಷ್ಟಾದ ಮೇಲೆ ಮಂಗಗಳು ಕೂಗುವುದು ಬಂದಾಯಿತು. ಬಹುಶಃ ಹುಲಿ ಅವರ ಕಣ್ಣಂಚಿನಿಂದ ದೂರ ಹೋಗಿರಬೇಕು. ಎಲ್ಲರೂ ಸೇಫ್.. ಎಂದು ಮಂಗನ ಗ್ವಾಲೆಯ ನಾಯಕ ಹೇಳಿರಬೇಕು. ಎಲ್ಲ ಚುಪ್ ಚಾಪ್..
                ಆ ಸಮಯದಲ್ಲಿಯೇ ದೂರದಲ್ಲೆಲ್ಲೋ ನಾಯಿ ಬೊಗಳಿದ್ದೂ ಕೂಡ ನಮ್ಮ ಕಿವಿಗೆ ಬಿದ್ದಿತ್ತು. ಒಂದೋ ಎರಡೋ ನಾಯಿಗಳು ತಾರಕ ಸ್ವರದಲ್ಲಿ ಅರಚುತ್ತಿದ್ದವು. ಹುಲಿ ಅಲ್ಲಿಗೆ ಹೋಗಿರುವುದು ಪಕ್ಕಾ ಆಗಿದ್ದು. ಅಷ್ಟರಲ್ಲಿ ಬೆಳಕು ಮೂಡಿತ್ತಲ್ಲ..., ಅಮ್ಮ ಹುಲಿಯ ಜಾಡನ್ನು ಹುಡುಕಲು ಆರಂಬಿಸಿಬಿಟ್ಟಿದ್ದಳು. ಅಂಗಳದಲ್ಲೆಲ್ಲೋ ಹುಡುಕಿದ್ದವಳಿಗೆ ಹುಲಿಯ ಜಾಡು ಸಿಕ್ಕಿರಲಿಲ್ಲ. ಕೊನೆಗೆ ನನ್ನ ಮನೆಗೆ ಬರುವ ರಸ್ತೆಯಲ್ಲಿ ಹುಲಿಯ ಹೆಜ್ಜೆಗಳು ಕಾಣಿಸಿದವು. ಅಮ್ಮ ನನ್ನನ್ನು ಕರೆದು ತೋರಿಸಿದಳು. ನಾನು ಕೂಡಲೇ ಒಂದಷ್ಟು ಪೋಟೋಗಳನ್ನು ಕ್ಲಿಕ್ಕಿಸಿಕೊಂಡೆ. ಹುಲಿ ಯಾವ ದಿಕ್ಕಿನಲ್ಲಿ ಹೋಗಿರಬೇಕು ಎಂದುಕೊಂಡೆವು. `ತಮಾ.. ನೋಡ್ಕ್ಯಂಡು ಬಪ್ಪನ ನೆಡಿ..' ಎಂದಳು. ನಾನು ಹೊರಟೆ. ಮೊದ ಮೊದಲಿಗೆ ನಾಲ್ಕು ಹೆಜ್ಜೆಗಳು ಕಾಣಿಸಿದವು. ನಂತರ ಎಂಟು ಹೆಜ್ಜೆಗಳು ಕಣ್ಣಿಗೆ ಬಿದ್ದವು. ಎರಡು ಜೊತೆ ಹೆಜ್ಜೆಗಳು ಅಜಜಮಾಸು ನಾಲ್ಕಿಂಚಿಗಿಂತ ದೊಡ್ಡದು. ಮತ್ತೆರಡು ಜೊತೆ ಹೆಜ್ಜೆಗಳು 2-3 ಇಂಚು ದೊಡ್ಡದಾಗಿತ್ತು. ಎರಡು ಹುಲಿಗಳಿದ್ದು ಸಾಬೀತಾಗಿತ್ತು. ಒಂದು ದೊಡ್ಡದು. ಇನ್ನೊಂದು ಮರಿ. ದೊಡ್ಡ ಹೆಜ್ಜೆಯ ಗಾತ್ರ ನೋಡಿದರೆ ದೊಡ್ಡ ಹುಲಿ ಏನಿಲ್ಲ ಎಂದರೂ ಆರು ಅಡಿ ಇರಲೇ ಬೇಕು ಎಂದು ತಕರ್ಿಸಿದೆ. ಧೂಳಿನ ರಸ್ತೆಯಲ್ಲಿ ಆಳವಾದ ಅಚ್ಚಾಗಿತ್ತು. ಹೀಗಾಗಿ ತೂಕವೂ ಸಾಕಷ್ಟಿರಬೇಕು ಎಂದುಕೊಂಡೆ.


               ನನ್ನ ಮನೆಯಿಂದ 100 ಮೀಟರ್ ದೂರ ಹೋಗುವ ವೇಳೆಗೆ ಇದ್ದಕ್ಕಿದ್ದಂತೆ ಹಂದಿಯ ಹೆಜ್ಜೆಗಳು ಕಾಣಲು ಸಿಕ್ಕಿತು. ಹುಲಿಯ ಹೆಜ್ಜೆಗಳ ನಡುವೆ ಹಂದಿಯ ಹೆಜ್ಜೆಗಳು. ಓಹೋ ಹಂದಿ ಗ್ವಾಲೆಗೂ-ಹುಲಿಗೂ ಮುಖಾಮುಖಿಯಾಗಿದೆ ಎಂದುಕೊಂಡೆ. ಅಮ್ಮ `ಹಂದಿ ಗ್ವಾಲೆಯನ್ನು ಹುಲಿ ಬೆನ್ನಟ್ಟಿರಬೇಕು..' ಎಂದಳು. ನನಗೆ ಇದು ಹೌದೆನ್ನಿಸಿತು. ಸುಮಾರು ಅರ್ಧ ಕಿಲೋಮೀಟರ್ ವರೆಗೂ ಈ ಹೆಜ್ಜೆಗಳು ರಸ್ತೆಯಲ್ಲಿ ಕಾಣಿಸಿಕೊಂಡಿದ್ದು ನಂತರ ತೋಟದ ಕಡೆಗೆ ಹೊರಳಿದ್ದವು. ಅಲ್ಲಿಯ ವರೆಗೆ ಹೆಜ್ಜೆ ಜಾಡು ಹಿಡಿದು ಹೊರಟಿದ್ದ ನಾವು ಹುಲಿ ಇಲ್ಲೆ ಎಲ್ಲೋ ಹೊರಳಿ ನದಿ ದಾಟಿದೆ ಎಂದುಕೊಂಡು ವಾಪಾಸಾದೆವು. ಮನೆಗೆ ಬಂದು ಅಪ್ಪನ ಬಳಿ ವಿಷಯ ಹೇಳಿದೆ. `ಹಂದಿ ಗ್ವಾಲೆ ಇದ್ದರೆ ಹುಲಿ ಯಾವತ್ತಿಗೂ ಅದನ್ನು ಬೆನ್ನಟ್ಟುವುದಿಲ್ಲ. ಒಂಟಿ ಹಂದಿ ಇದ್ದರೆ ಮಾತ್ರ ಅದನ್ನು ಬೆನ್ನಟ್ಟುತ್ತದೆ..' ಎಂದ. ನನಗೂ ಹಂದಿಯ ಹೆಜ್ಜೆಗಳು ಎರಡು ಜೊತೆ ಮಾತ್ರ ಇದ್ದಂತೆ ಕಾಣಿಸಿ ಒಂಟೀ ಹಂದಿಯನ್ನು ಹುಲಿ ಬೆನ್ನಟ್ಟಿದೆ ಎಂಬ ನಿರ್ಧಾರಕ್ಕೆ ಬಂದೆ.
               ಮನೆಯಲ್ಲಿ ನಂತರ ಹುಲಿಯದ್ದೇ ಮಾತು. ನಮ್ಮೂರಿನವರಿಗೆಲ್ಲ ಹುಲಿ ಕೂಗಿದ ಸದ್ದು ಕೇಳಿಸಿತ್ತಂತೆ. ದಂಟಕಲ್ ಸುಬ್ಬಣ್ಣನ ಮನೆಯ ಹತ್ತಿರ ಹುಲಿ ಬಂದಿದೆ. ಬಹುಶಃ ಕೊಟ್ಟಿಗೆಗೆ ಬಂದು ದನಕ್ಕೆ ತೊಂದರೆ ಕೊಟ್ಟಿರಬೇಕು ಎಂದು ನಮ್ಮೂರಿನವರು ಮಾತಾಡಿಕೊಂಡಿದ್ದರಂತೆ. ಆದರೆ ಮನೆಯ ಹತ್ತಿರ ಬಂದಿದ್ದ ಹುಲಿ ಕೂಗಿದ್ದು ಬಿಟ್ಟರೆ ಬೇರೆ ಯಾವುದೇ ಭಾನಗಡಿ ಮಾಡಿರಲಿಲ್ಲ. ನಮ್ಮ ಮನೆಯಲ್ಲಿ ಎಲ್ಲ ನಿಟ್ಟುಸಿರಾಗಿದ್ದರು. ಸಂಜೆ ಅಘನಾಶೀನಿಯನ್ನು ದಾಟಿ ಪಕ್ಕದ ಊರಿಗೆ ಕಾರ್ಯ ನಿಮಿತ್ತ ಹೋಗಿದ್ದೆ. ಅಲ್ಲೂ ಕೂಡ ಹುಲಿ ಬಂದಿರುವ ವಿಷಯ ಮಾತಾಡುತ್ತಿದ್ದರು.
               ಪ್ರತಿ ವರ್ಷ ನಮ್ಮೂರಿನಲ್ಲಿ ಒಮ್ಮೆ ಅಥವಾ ಎರಡು ಮೂರು ಸಾರಿ ಹುಲಿ ಕಾಣಿಸಿಕೊಳ್ಳುತ್ತದೆ. ನಾನು ಶಾಲೆಗೆ ಹೋಗುವ ಸಂದರ್ಭದಲ್ಲಿ ಒಂದೆರಡು ಸಾರಿ ಹುಲಿರಾಯನ ದರ್ಶನ ಮಾಡಿದ್ದೆ. ಆದರೆ ಹುಲಿರಾಯ ಇಷ್ಟು ಹತ್ತಿರದಲ್ಲಿ ಗರ್ಜನೆ ಮಾಡಿದ್ದು ಕೇಳಿರಲಿಲ್ಲ. ನಮ್ಮೂರ ಫಾಸಲೆಯಲ್ಲಿ ಚಿಟ್ಟು ಚಿರತೆ, ಕಪ್ಪು ಚಿರತೆಗಳೆಲ್ಲ ಆಗೀಗ ಬಂದು ಹಾಯ್ ಎನ್ನುತ್ತವೆ. ಗಮಿಯಗಳಂತೂ ನಮ್ಮೂರಿನ ಗದ್ದೆಯನ್ನು ತಮ್ಮ ಮೈದಾನ ಮಾಡಿಕೊಂಡಿವೆ. ಹಂದಿಗಳಿಗಂತೂ ನಮ್ಮೂರಿನ ಬಾಳೆಯ ಗಡ್ಡೆಗಳು ಸಿಕ್ಕಿಲ್ಲ ಎಂದರೆ ಅದೇನನ್ನೋ ಕಳೆದುಕೊಂಡೆವು ಎಂಬಂತೆ ವರ್ತಿಸುತ್ತವೆ.
ಇಂತಹ ವನ್ಯ ಪ್ರಾಣಿಗಳಿರುವಲ್ಲಿ ಬೇಟೆಗಾರರೂ ಇದ್ದಾರೆ. ಕಳೆದ ವರ್ಷ ಹೇರೂರಿನ ಕೆಲವರು ಕಾಡೆಮ್ಮೆ ಬೇಟೆ ಮಾಡಿದ್ದರು. ಅದು ಸಾಕಷ್ಟು ಸುದ್ದಿಯೂ ಆಗಿತ್ತು. ಈ ವರ್ಷದ ಚಳಿಗಾಲದಲ್ಲಿ ಹುಲಿರಾಯ ಬಂದಿರಲಿಲ್ಲ. ಹುಲಿರಾಯನ ಹಾಯಿಸಾಲಿನಲ್ಲಿ ನಮ್ಮೂರು ಬಿಟ್ಟಿತೇನೋ ಎಂದುಕೊಂಡಿದ್ದೆ. ಆದರೆ ಹುಲಿರಾಯ ನಮ್ಮ ಮನೆಯ ಅಂಗಳಕ್ಕೆ ಬಂದು ಹಾಯ್ ಹೇಳಿದ್ದ. ಅಷ್ಟೇ ಅಲ್ಲ ತನ್ನ ಮುಂದಿನ ಪೀಳಿಗೆಯನ್ನೂ ಕರೆತಂದು ನನ್ನ ಮನೆಯನ್ನು ತೋರಿಸಿದ್ದ.
                 ಹಿಂದೆ ನಮ್ಮೂರಿನಲ್ಲಿ ಸಿಕ್ಕಾಪಟ್ಟೆ ಹುಲಿಗಳಿದ್ದವಂತೆ. ನಮ್ಮೂರಿನ ಹಿರಿಯರಾಗಿದ್ದ ದಿ. ಗಣಪತಿ ಗಣೇಶ ಹೆಗಡೆಯವರು ತಮ್ಮ ಯವ್ವನದ ದಿನಗಳಲ್ಲಿ ಮೂರು ಹುಲಿಗಳನ್ನು ಗುಂಡಿಕ್ಕಿ ಕೊಂದಿದ್ದರಂತೆ. ನಂತರದ ದಿನಗಳಲ್ಲಿ ಹುಲಿ ಸಂತತಿಯೂ ಕಡಿಮೆಯಾಗಿತ್ತು. ಆಗೊಮ್ಮೆ ಈಗೊಮ್ಮೆ ಹುಲಿಗಳು ಬಂದಿದ್ದರೂ ದಾಂಡೇಲಿಯ ಕಾಡಿನಿಂದ ಬಂದಿರಬೇಕು ಎಂದಕೊಂಡಿದ್ದೇವೆ. ಈ ವರ್ಷ ದಾಂಡೇಲಿ-ಅಣಶಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಒಂದೆರಡು ಕಡೆಗಳಲಿ ಬೆಂಕಿ ಬಿದ್ದಿದೆ. ನೀರು ಬತ್ತಿದೆ. ಆಹಾರವೂ ಕಡಿಮೆಯಾಗಿರಬೇಕು. ಹೀಗಾಗಿ ಹುಲಿ ತನ್ನ ಮರಿಯ ಜತೆಗೂಡಿ ಆಹಾರ ಹುಡುಕಿ ಬಂದಿರಬೇಕು. ಹೀಗೆ ಬಂದ ಹುಲಿ ನಮ್ಮೂರ ಕಡೆಗೆ ಹೆಜ್ಜೆ ಹಾಕಿರಬೇಕು. ಹುಲಿ ಬಂದಿದ್ದರಿಂದ ನಮ್ಮ ಮನೆಯಲ್ಲಿ ಭಯವಾಗಿದ್ದರೂ, ನನಗೆ ಖುಷಿಯಾಗಿದೆ. ನಶಸುತ್ತಿರುವ ಹುಲಿ ನನ್ನ ಮನೆಯಂಗಳಕ್ಕೆ ಬಂದು ಗರ್ಜನೆ ಮಾಡಿದ್ದು, ನಾನಿದ್ದಿನಿ ಕಣೋ.. ಎಂದಂತೆ ಭಾಸವಾಗಿದ್ದು ನನಗೆ ಖುಷಿಯನ್ನು ಕೊಟ್ಟಿದೆ. ಮುಂದೆ ಹುಲಿ ಬಂದರೆ ಹೆಂಗಾದರೂ ಮಾಡಿ ಪೋಟೋ ಹೊಡ್ಕಳ್ಳಬೇಕು ಎಂಬ ಭಾವನೆ ಬಲವಾಗುತ್ತಿದೆ.




ಈ ಚಿತ್ರದಲ್ಲಿ ಕಾಡುಹಂದಿಯ ಹಾಗೂ ಹುಲಿಯ ಹೆಜ್ಜೆಗಳಿವೆ.
ಇದರಲ್ಲಿ ಹುಲಿಯ ಹೆಜ್ಜೆಯ ಚಿತ್ರಗಳನ್ನು ನನ್ನ ಮನೆಯ ಅಂಗಳದಲ್ಲಿ ತೆಗೆದಿದ್ದು.
ಕಾಡುಹಂದಿಯ ಹೆಜ್ಜೆಗಳ ಚಿತ್ರಗಳನ್ನು ಮನೆಯಿಂದ 200 ಮೀಟರ್ ದೂರದಲ್ಲಿ ತೆಗೆದಿದ್ದು.
 

Sunday, March 5, 2017

ಈಕೆಗೆ ಅಮಿತಾಬ್ ಬಚ್ಚನ್ರ ಭಾಗಬನ್ ಪ್ರೇರಣೆ/ವಿಕಲ ಚೇತನರಿಗಾಗಿ ಮಿಡಿದ ಅಂಗವಿಕಲೆ

ಈಕೆಗೆ ಅಮಿತಾಬ್ ಬಚ್ಚನ್ರ ಭಾಗಬನ್ ಪ್ರೇರಣೆ
ವಿಕಲ ಚೇತನರಿಗಾಗಿ ಮಿಡಿದ ಅಂಗವಿಕಲೆ



 ಈಕೆಗೆ ನಡೆದಾಡಲು ಬರುವುದಿಲ್ಲ. ಗಾಲಿಖುಚರ್ಿಯ ಮೇಲೆ ಸದಾಕಾಲ ಓಡಾಡಿ ಬದುಕು ನಡೆಸುತ್ತಿರುವಾಕೆ. ಇಂತಹ ವಿಕಲಚೇತನ ಮಹಿಳೆ ತನ್ನಂತೆಯೇ ಬದುಕು ನಡೆಸುತ್ತಿರುವವರ ನೆರವಿಗೆ ನಿಲ್ಲುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾಳೆ. ಕಾಲಿಲ್ಲದವರಿಗೆ ಊರುಗೋಲಾಗುವ ಕನಸನ್ನು ಹೊತ್ತಿದ್ದಾಳೆ. ಅವಳೇ ಶಿರಸಿಯ ಮುಸ್ಲಿಂ ಗಲ್ಲಿಯ ನಿವಾಸಿ ಸೀಮಾ ಶುಂಟಿ.
 38 ವರ್ಷ ವಯಸ್ಸಿನ ಸೀಮಾ ಶುಂಟಿ ಬಡತನದಲ್ಲಿಯೇ ಬೆಳೆದವಳು. ಶಿರಸಿಯ ಅಬ್ದುಲ್ ಸತ್ತಾರ್ ಹಾಗೂ ಖೈರುನ್ನಿಸಾ ದಂಪತಿಗಳ ಐವರು ಹೆಣ್ಣುಮಕ್ಕಳ ಪೈಕಿ ಮೂರನೆಯವಳು. ಮದುವೆಯಾಗುವ ವರೆಗೂ ಎಲ್ಲರಂತೆಯೇ ಆರಾಮವಾಗಿ ಇದ್ದ ಸೀಮಾ ಶುಂಟಿ ವಿವಾಹವಾದ ಬಳಿಕ ಕಾಲಿನ ಸ್ವಾಧೀನ ಕಳೆದುಕೊಂಡರು. ಈಕೆಗೆ ಎದುರಾದ ಅಂಗವೈಕಲ್ಯವನ್ನೇ ಮುಂದಿಟ್ಟುಕೊಂಡು, ಮದುವೆಯಾದ ವ್ಯಕ್ತಿ ಸೀಮಾಳಿಗೆ ಡೈವಸರ್್ ನೀಡಿದ. ಎದ್ದು ಓಡಾಡಲು ಆಗದಂತಹ ಪರಿಸ್ಥಿತಿ, ಕಾಡುವ ಬಡತನ, ಬೆನ್ನಲ್ಲಿ ಜನಿಸಿದ ಇಬ್ಬರು ತಂಗಿಯರಿಗೂ ಕಾಡಿದ ಅಂಗವೈಕಲ್ಯ, ಎದ್ದು ಓಡಾಡಲಾಗದಂತಹ ತಂದೆ. ಹೀಗೆ ಹಲವು ರೀತಿಯಲ್ಲಿ ನೋವನ್ನು ಉಂಡ ಸೀಮಾ ಇದೀಗ ಎನ್ಜಿಒ ಆರಂಭಿಸಿ ಅಂಗವೈಕಲ್ಯಕ್ಕೆ ಒಳಗಾದವರ ಬದುಕನ್ನು ಹಸನು ಮಾಡುವ ಪ್ರಯತ್ನದಲ್ಲಿ ತೊಡಗಿಕೊಂಡಿದ್ದಾರೆ.



ನಿಖಾ, ಡೈವೋಸರ್್, ಅಧಿಕಾರಿಗಳ ಕಿರುಕುಳ :
 ಸೀಮಾಅ ಶುಂಟಿಯನ್ನು ರೇವಣಕಟ್ಟಾದ ವ್ಯಕ್ತಿಯೋರ್ವರು 2000ದಲ್ಲಿ ಮದುವೆಯಾದರು. ಮದುವೆಯಾದ ಒಂದೇ ತಿಂಗಳಿಗೆ ಸೀಮಾ ಅವರ ಕಾಲುಗಳು ಶಕ್ತಿ ಕಳೆದುಕೊಂಡವು. ಹೀಗಿದ್ದಾಗಲೇ ಸೀಮಾಅ ಅವರನ್ನು ಮದುವೆಯಾದ ವ್ಯಕ್ತಿ ತಲಾಖ್ ನೀಡಿದ. ಇದರಿಂದ ತನ್ನ ಬದುಕು ಬೀದಿಗೆ ಬಿದ್ದಿತು ಎಂದುಕೊಂಡಾಕೆಗೆ ಆಕೆಯ ಛಲವೇ ಕೈಹಿಡಿದಿದೆ. ಮದುವೆಗೂ ಮೊದಲು ಎಸ್ಎಸ್ಎಲ್ಸಿ ಓದಿದಾಕೆ ನಂತರದಲ್ಲಿ ಪೋಸ್ಟಲ್ ಸವರ್ೀಸ್ ಮೂಲಕ ಪಿಯುಸಿ ಹಾಗೂ ಪದವಿಯನ್ನೂ ಮುಗಿಸಿದ್ದಾಳೆ. ಅಷ್ಟೇ ಅಲ್ಲದೇ ಎಂಬ್ರಾಯ್ಡರಿ, ಹೊಲಿಗೆ, ಕಂಪ್ಯೂಟರ್ ತರಬೇತಿಯನ್ನೂ ಮಾಡಿಕೊಂಡಳು. ತರಬೇತಿಯನ್ನು ಪಡೆದುಕೊಂಡ ಸೀಮಾ ಶುಂಠಿ ಅದೆಷ್ಟೋ ವಿದ್ಯಾಥರ್ಿಗಳಿಗೆ ತರಬೇತಿಯನ್ನೂ ನೀಡುವ ಮೂಲಕ ವಿದ್ಯಾಥರ್ಿಗಳ ಬದುಕಿಗೆ ಬೆಳಕಾಗುವ ಕಾರ್ಯ ಕೈಗೊಂಡರು.
 ಬಡತನವಿದ್ದರೂ ಹೊಲಿಗೆ ಹಾಗೂ ಇತ್ಯಾದಿ ಕಾರ್ಯಗಳ ಮೂಲಕ ಮನೆಯನ್ನು ನೋಡಿಕೊಳ್ಳುತ್ತಿದ್ದ ತನಗೆ ಕಾರವಾರದ ಮಹಿಳಾ ಮತ್ತು ಸಮಾಜಕಲ್ಯಾಣ ಇಲಾಖೆಯ ಅಧಿಕಾರಿಯೋರ್ವರು ಕೊಟ್ಟ ಕಿರುಕುಳವೇ ಛಲ ಹುಟ್ಟಲು ಕಾರಣ ಎನ್ನುವ ಸೀಮಾ ಶುಂಠಿ ಅವರು ತನಗೆ ಕಿರುಕುಳ ನೀಡದೇ ಇದ್ದಲ್ಲಿ ತನ್ನಲ್ಲಿ ಛಲವೇ ಹುಟ್ಟುತ್ತಿರಲಿಲ್ಲ. ತನ್ನಂತೆಯೇ ಇರುವ ವಿಕಲಚೇತನರಿಗೆ ಸಹಾಯ ಮಾಡುವ ಕನಸು ಕಾಣಲು ಸಾಧ್ಯವಾಗುತ್ತಲೇ ಇರಲಿಲ್ಲ ಎನ್ನುತ್ತಾರೆ.


ಗುರುಕುಲ ಆರಂಭಕ್ಕೆ ಭಾಗಬನ್ ಪ್ರೇರಣೆ :
 ವಿಕಲಚೇತನರಿಗೆ ಸಹಾಯ ಮಾಡುವ ಸಲುವಾಗಿ ಸೀಮಾ ಶುಂಠಿ ಅವರು ಇದೀಗ ಗುರುಕುಲ ಎನ್ನುವ ಎನ್ಜಿಓ ಆರಂಭಸಿದ್ದಾರೆ. ತಮ್ಮ ಸ್ವಯಂಸೇವಾ ಸಂಸ್ಥೆಯ ಮೂಲಕ ಕಾಲಿಲ್ಲದವರಿಗೆ, ಅಪಘಾತದಲ್ಲಿ ಕಾಲು ಕಳೆದುಕೊಂಡವರಿಗೆ ಗಾಲಿಖುಚರ್ಿ, ಊರುಗೋಲು, ತ್ರಿಚಕ್ರ ಬೈಕ್/ಸೈಕಲ್, ಕೃತಕ ಕಾಲು ಸೇರಿದಂತೆ ಹಲವು ಸೌಕರ್ಯಗಳನ್ನು ಒದಗಿಸಿಕೊಡುವ ಕನಸನ್ನು ಹೊತ್ತಿದ್ದಾರೆ. ಅದಲ್ಲದೇ ಅಧಿಕಾರಿಗಳಿಂದ ಆಗುವ ಕಿರುಕುಳಗಳನ್ನು ತಪ್ಪಿಸುವ ನಿಟ್ಟಿನಲ್ಲಿಯೂ ಪ್ರಯತ್ನ ಮಾಡಲಿದ್ದಾರೆ. ಗುರುಕುಲ ಎಂಬ ಸ್ವಯಂಸೇವಾ ಸಂಸ್ಥೆಯ ಕನಸು ಹುಟ್ಟಿಕೊಳ್ಳುವುದಕ್ಕೂ ಒಂದು ವಿಶಿಷ್ಟ ಕನಸು ಇದೆ ಎನ್ನುವುದನ್ನು ಸೀಮಾ ಶುಂಠಿ ಹೇಳಲು ಮರೆಯುವುದಿಲ್ಲ.
 ಬದುಕಿನಲ್ಲಿ ಕಷ್ಟದ ದಿನಗಳನ್ನು ಎದುರಿಸುತ್ತಿದ್ದ ಸಂದರ್ಭದಲ್ಲಿ ಟಿವಿಯಲ್ಲಿ ಒಮ್ಮೆ ಅಮಿತಾಬ್ ಭಚ್ಚನ್ ಅವರ ಭಾಗಬನ್ ಸಿನೆಮಾವನ್ನು ನೋಡಿದೆ. ಆ ಸಿನೆಮಾದಲ್ಲಿ ಅಮಿತಾಬ್ ಬಚ್ಚನ್ ವಿಕಲಚೇತನರಿಗಾಗಿ ಸ್ವಯಂಸೇವಾ ಸಂಸ್ಥೆಯನ್ನು ಆರಂಭಿಸಿ ಸೇವೆ ಮಾಡುತ್ತಾರೆ. ನನಗೂ ಕೂಡ ಹಾಗೆಯೇ ಸ್ವಯಂ ಸೇವಾ ಸಂಸ್ಥೆಯನ್ನು ಆರಂಬಿಸಬೇಕು ಎನ್ನಿಸಿತು. ಹೀಗಾಗಿ ಗುರುಕುಲ ಎಂಬ ಸ್ವಯಂಸೇವಾ ಸಂಸ್ಥೆಯನ್ನು ಆರಂಭಿಸಿದ್ದೇನೆ. ಈ ಸ್ವಯಂ ಸೇವಾ ಸಂಸ್ಥೆಯು ಫೆ.24ರಂದು ಉದ್ಘಾಟನೆಯಾಗಲಿದೆ ಎಂದು ಸೀಮಾ ಶುಂಠಿ ಹೇಳಿದ್ದಾರೆ.
 ಸ್ವತಃ ವಿಕಲಚೇತನ ವ್ಯಕ್ತಿಯಾಗಿದ್ದರೂ ಕೂಡ ತನ್ನಂತೆಯೇ ವಿಕಲಾಂಗರಾದವರಿಗೆ ಸಹಾಯ ಮಾಡುವ ಉದ್ದೇಶದಿಂದ ಸ್ವಯಂಸೇವಾ ಸಂಸ್ಥೆ ಆರಂಭಿಸುತ್ತಿರುವುದು ಇತರರಿಗೆ ಮಾದರಿಯಾಗಿದೆ. ತಾನು ಅಧಿಕಾರಿಗಳಿಂದ ಕಿರುಕುಳ ಅನುಭವಿಸಿದರೂ ಕೂಡ ಉಳಿದ ವಿಕಲ ಚೇತನರು ತನ್ನಂತೆ ಸಮಸ್ಯೆ ಎದುರಿಸಬಾರದು ಎನ್ನುವ ಕಾರಣದಿಂದ ಸ್ವಯಂಸೇವಾ ಸಂಸ್ಥೆ ಆರಂಭಿಸಿ ಕಾಲಿಲ್ಲದವರಿಗೆ ಆಸರೆಯಾಗುವ ಪ್ರಯತ್ನ ಮಾಡಿರುವುದು ಪ್ರತಿಯೊಬ್ಬರಿಗೂ ಸ್ಪೂತರ್ಿದಾಯಕರಾಗಿದ್ದಾರೆ.




-------

 ಸ್ವಯಂಸೇವಾ ಸಂಸ್ಥೆ ಆರಂಭದ ಕನಸನ್ನು ಇಟ್ಟುಕೊಂಡ ಸೀಮಾ ಶುಂಠಿಗೆ ಪ್ರಾರಂಭದಲ್ಲಿ ಯಾರಿಂದಲೂ ಸಹಕಾರ ದೊರೆಯಲೇ ಇಲ್ಲ. ಐವರು ಸದಸ್ಯರನ್ನು ಪ್ರಾರಂಭದಲ್ಲಿ ಸೇರಿಸಿಕೊಂಡಿದ್ದರೂ ದಿನಕಳೆದಂತೆ ಒಬ್ಬೊಬ್ಬರಾಗಿ ದೂರ ಸರಿದರು. ಆದರೂ ಫಲ ಬಿಡದೇ ಒಬ್ಬಂಟಿಯಾಗಿಯೇ ಕೆಲಸ ಮಾಡಿದವರು ಸೀಮಾ ಶುಂಠಿ. ಸರಕಾರದ ಯಾವುದೇ ಸೌಲಭ್ಯವನ್ನು ಪಡೆದುಕೊಳ್ಳದೇ ಇತರರಿಗೆ ಮಾದರಿಯಾಗುವಂತಹ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾಳೆ. ಈಕೆಯ ಕಾರ್ಯ ಉಳಿದವರಿಗೆ ಅನುಕರಣೀಯ.



Monday, February 27, 2017

ಅಕ್ಷರಸ್ಥರ ವಿಕೃತಿಗೆ ಜಲ್ಲೆಯ ಪ್ರವಾಸಿ ತಾಣಗಳು ಬಲಿ

ಪ್ರವಾಸಿ ತಾಣಗಳ ಗೋಡೆಗಳ ಮೇಲೆ ಪ್ರವಾಸಿಗರಿಂದ ಚಿತ್ತಾರ

ಶೀರ್ಷಿಕೆ ಸೇರಿಸಿ
 ಅಕ್ಷರಸ್ಥರ ವಿಕೃತಿಗೆ ಜಿಲ್ಲೆಯ ಪ್ರವಾಸಿತಾಣಗಳು ಬಲಿಯಾಗುತ್ತಿವೆ. ಪ್ರವಾಸಕ್ಕಾಗಿ ಆಗಮಿಸುತ್ತಿರುವವರ ``ಕೈ ಚಳಕ'ಕಕ್ಕೆ ಜಿಲ್ಲೆಯ ಹೆಸರಾಂತ ಪ್ರವಾಸಿ ತಾಣಗಳು ಅಂದ ಕಳೆದುಕೊಳ್ಳುತ್ತಿವೆ.
 ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಶಿವಗಂಗಾ ಜಲಪಾತ, ಗಣೇಶ ಪಾಲ, ಯಲ್ಲಾಪುರ ತಾಲೂಕಿನ ಮಾಗೋಡ ಜಲಪಾತ, ಸಿದ್ದಾಪುರ ತಾಲೂಕಿನ ಉಂಚಳ್ಳಿ ಜಲಪಾತ, ಜೋಯಿಡಾ ತಾಲೂಕಿನ ಆಕಳಗವಿ, ಪಂಚಲಿಂಗ ಗವಿ, ಮಹಾಮನೆ ಗವಿ, ಅಂಕೋಲಾ, ಕುಮಟಾ, ಹೊನ್ನಾವರ ತಾಲೂಕಿನ ಪ್ರವಾಸಿ ತಾಣಗಳು ಅತ್ಯಂತ ಹೆಚ್ಚಿನ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತವೆ. ದಿನಂಪ್ರತಿ ಸಾವಿರಾರು ಜನರು ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ನಿದರ್ಶನಗಳೂ ಇದೆ. ಜಿಲ್ಲೆಯ ಆದಾಯಕ್ಕೆ ಇಂತಹ ಪ್ರವಾಸಿ ತಾಣಗಳ ಕೊಡುಗೆಯೂ ಹೇರಳವಾಗಿದೆ. ಆದರೆ ಹೀಗೆ ಆಗಮಿಸುವ ಪ್ರವಾಸಿಗರ ಕಿತಾಪತಿಯಿಂದಾಗಿ ಪ್ರವಾಸಿ ಸ್ಥಳಗಳು ತಮ್ಮ ಅಂದವನ್ನು ಕಳೆದುಕೊಳ್ಳುತ್ತಿವೆ.
 ಉತ್ತರ ಕನ್ನಡ ಜಿಲ್ಲೆಯ ಹೆಚ್ಚಿನ ಪ್ರವಾಸಿ ತಾಣಗಳ ಗೋಡೆಗಳ ಮೇಲೆ ಪ್ರವಾಸಿಗರು ಬರೆದ ವಿವಿಧ ಬರಹಗಳು ಕಣ್ಣಿಗೆ ಬೀಳುತ್ತಿವೆ. ಹೆಸರುಗಳನ್ನು ಕೆತ್ತುವ, ತಮ್ಮ ಹೆಸರುಗಳ ಜೊತೆಗೆ ತಾವು ಪ್ರೇಮಿಸುತ್ತಿರುವವರ ಹೆಸರನ್ನು ಬರೆಯುವ, ತಮ್ಮ ಊರುಗಳ ಹೆಸರುಗಳನ್ನು ಬರೆದಿಡುವ, ದೂರವಾಣೀ ಸಂಕ್ಯೆಗಳನ್ನು ನಮೂದು ಮಾಡುವ ಬರಹಗಳೂ ಹೆಚ್ಚಾಗಿವೆ. ವಿಕಾರ ಚಿತ್ರಗಳು ಹಾಗೂ ಅಶ್ಲೀಲ ಬರಹಗಳೂ ಕೂಡ ಪ್ರವಾಸಿ ತಾಣಗಳ ಗೋಡೆಗಳಲ್ಲಿ ರಾರಾಜಿಸುತ್ತಿವೆ. ಇದರಿಂದ ಪ್ರವಾಸಿ ತಾಣಗಳಿಗೆ ಆಗಮಿಸುವ ಸಭ್ಯ ಪ್ರವಾಸಿಗರು ಮೂಗು ಮುರಿಯುವವಂತಾಗಿದೆ.
 ಉಂಚಳ್ಳಿ ಜಲಪಾತದ ವೀಕ್ಷಣಾ ಗೋಪುರಗಳಿರಲಿ, ಮಾಗೋಡು ಜಲಪಾತದ ವೀಕ್ಷಣಾ ಮಂದಿರಗಳಿರಲಿ, ಅರಣ್ಯದ ನಡುವೆಯೇ ಇರುವ ಶಿವಪುರದಂತಹ ಊರುಗಳ ತೂಗುಸೇತುವೆಗಳ ಕಂಬಗಳ ಮೇಲೂ ಪ್ರವಾಸಿಗರ ಇಂತಹ ಬರಹಗಳು ಕಾಣಸಿಗುತ್ತಿವೆ. ಉತ್ತರ ಕನರ್ಾಟಕದ ಪ್ರವಾಸಿಗರು ಆಗಮಿಸುವ ಪ್ರದೇಶಗಳಲ್ಲಿ ಇಂತಹ ಬರಹಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುತ್ತಿದೆ. ಅಲ್ಲದೇ ಉತ್ತರ ಕನರ್ಾಟಕದ ಊರುಗಳ ಹೆಸರುಗಳೇ ಗೋಡೆಗಳ ಮೇಲೆ ವಿಕಾರರೂಪದಲ್ಲಿ, ಸುಣ್ಣದಲ್ಲಿಯೋ, ಆಯಿಲ್ ಪೇಂಟ್ಗಳಲ್ಲಿಯೋ, ಕಲ್ಲಿನ ಮೂಲಕ ಕೆತ್ತಿಯೋ ಬರೆಯಲಾಗುತ್ತಿದೆ.
 ಜೋಯಿಡಾ ತಾಲೂಕಿನ ದಟ್ಟ ಅಅರಣ್ಯದ ನಡುವೆ ಆಕಳಗವಿ, ಮಹಾಮನೆ ಗವಿ, ಪಂಚಲಿಂಗ ಗವಿಗಳಿದೆ. ಈ ಪ್ರದೇಶಗಳಲ್ಲಿ ದೈತ್ಯ ಗುಹೆಗಳು, ಅವುಗಳ ನಡುವೆ ಶಿವಲಿಂಗಗಳಿದೆ. ಈ ತಾಣಗಳಿಗೆ ಉತ್ತರ ಕನರ್ಾಟಕದ ಪ್ರವಾಸಿಗರು ಪ್ರತಿದಿನ ಸಾವಿರ ಸಾವಿರ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಐತಿಹಾಸಿಕ ಸ್ಥಳವಾದ ಯಾಣದಂತೆಯೇ ಭವ್ಯ ಶಿಲಾ ಪರ್ವತದ ಸಾಲುಗಳು ಇಲ್ಲಿದೆ. ಆದರೆ ಈ ಶಿಲಾ ಸಾಲುಗಳ ಮೇಲೆ ಬಿಳಿಯ ಅಕ್ಷರಗಳಲ್ಲಿ ಸಾವಿರ ಸಾವಿರ ಹೆಸರುಗಳು, ಊರುಗಳು ಬರೆಯಲ್ಪಟ್ಟು ಅಸಹ್ಯವನ್ನು ಮೂಡಿಸುತ್ತಿದೆ. ಪ್ರವಾಸಿಗರ ವಿಕ್ರತ ಮನಸ್ಸುಗಳಿಗೆ ಇವು ಸಾಕ್ಷಿಯಾಗಿ ನಿಂತಿವೆ. ಆಕಳ ಗವಿಯಲ್ಲಿನ ಹಾಲು ಬಣ್ಣದ ಶಿವಲಿಂಗದ ರಚನೆಯ ಮೇಲೂ ಕೂಡ ಯಾವುದೋ ಪ್ರವಾಸಿ ತನ್ನ ಹೆಸರನ್ನು ಕೆತ್ತಿರುವುದು ಕೂಡ ಪ್ರವಾಸಿಗರ ದುಬರ್ುದ್ಧಿಯನ್ನು ಎತ್ತಿ ತೋರಿಸುತ್ತಿದೆ. ಅಲ್ಲದೇ ಪ್ರವಾಸಿಗರು ಕಷ್ಟಪಟ್ಟು ಹೋಗುವಂತಹ ಸ್ಥಳ ಎನ್ನಿಸಿಕೊಂಡಿರುವ ಶಿವಪುರದ ತೂಗುಸೇತುವೆಯ ಕಮಾನಿನ ಮೂಲೂ ಕೈಚಳಕವನ್ನು ಪ್ರವಾಸಿಗರು ಮೂಡಿಸಿದ್ದಾರೆ. ಅಷ್ಟೇ ಅಲ್ಲ ಪ್ರವಾಸಿ ತಾಣಗಳಲ್ಲಿನ ಮರಗಳ ಮೇಲೂ ಕೂಡ ಹೆಸರುಗಳನ್ನು ಕೆತ್ತಲಾಗಿದೆ. ಚಿತ್ರ ವಿಚಿತ್ರ ಚಿನ್ಹೆಗಳು ರಾರಾಜಿಸುತ್ತಿವೆ.
 ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಬರೆದಿರುವ ಇಂತಹ ಬರಹಗಳ ಬಗ್ಗೆ ಪ್ರವಾಸಿಗರೇ ಮೂಗು ಮುರಿಯುತ್ತಾರೆ. ಪ್ರವಾಸಿ ತಾಣಗಳ ಗೋಡೆಗಳ ಮೇಲೆ ಬರೆದು ಅದರ ಅಂದವನ್ನು ಹಾಳುಗೆಡವುವ ಬದಲು ಪರೀಕ್ಷಾ ಸಂದರ್ಭದಲ್ಲಿ ಉತ್ತರ ಪತ್ರಕೆಗಳಲ್ಲಿ ಇಷ್ಟು ಚನ್ನಾಗಿ ಬರೆದಿದ್ದರೆ ಒಳ್ಳೆಯ ಅಂಕಗಳನ್ನು ಗಳಿಸಿಕೊಳ್ಳಬಹುದಿತ್ತು ಎನ್ನುವುದು ಜೋಯಿಡಾ ತಾಲೂಕಿನ ಆಕಳಗವಿಗೆ ಆಗಮಿಸಿದ್ದ ಪ್ರವಾಸಿಯೊಬ್ಬರ ಅಭಿಪ್ರಾಯವಾಗಿದೆ. ಪ್ರವಾಸಿ ತಾಣಗಳ ಗೋಡೆಗಳ ಮೇಲೆ ಬರೆಯುವುದನ್ನು ತಡೆಯುವುದಕ್ಕಾಗಿ ಪ್ರವಾಸೋದ್ಯಮ ಇಲಾಖೆ ಹಾಗೂ ಸ್ಥಳೀಯ ಆಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅಗತ್ಯವಿದೆ ಎನ್ನುವ ಅಭಿಪ್ರಾಯ ಕೂಡ ಪ್ರವಾಸಿಗರಿಂದಲೇ ಕೇಳಿ ಬಂದಿದೆ.
 ಪ್ರವಾಸಿಗರ ದಾಂಧಲೆಯಿಂದ ಹೈರಾಣಾದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ತಾರಗಾರ ಗ್ರಾಮದ ಜನರು ತಮ್ಮೂರಿನ ಫಾಸಲೆಯಲ್ಲಿರುವ ಅಜ್ಜಿಗುಂಡಿ ಜಲಪಾತಕ್ಕೆ ಪ್ರವಾಸಿಗರ ಆಗಮನವನ್ನು ನಿಷೇಧಿಸಿದ್ದಾರೆ. ಇಂತಹ ಕ್ರಮಗಳು ಇನ್ನಷ್ಟು ಪ್ರವಾಸಿ ತಾಣಗಳಲ್ಲಿ ನಡೆದರೂ ಅಚ್ಚರಿ ಪಡಬೇಕಿಲ್ಲ. ಈ ನಿಟ್ಟಿನಲ್ಲಿ ಪ್ರವಾಸಿಗರೂ ಕೂಡ ತಮ್ಮದೇ ಆದ ಹೊಣೆಗಾರಿಕೆಯನ್ನು ಮೆರೆಯಬೇಕಿದೆ. ಪ್ರವಾಸಿ ತಾಣಗಳ ಅಂದವನ್ನು ಕಾಪಾಡುವ ಅಗತ್ಯವಿದೆ. ಪ್ರವಾಸೋದ್ಯಮ ಇಲಾಖೆ ಪ್ರವಾಸಿ ತಾಣಗಳಲ್ಲಿ ಅಭಿವೃದ್ಧಿ ಕಾಅರ್ಯಗಳನ್ನು ಕೈಗೊಳ್ಳುವುದರ ಜೊತೆಗೆ ಇಂತಹವುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಜರೂರತ್ತಿದೆ. ಪ್ರವಾಸಿ ತಾಣಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ಮುಂದಾಗಬೇಕೆಂಬ ಆಆಶಯ ಎಲ್ಲರದ್ದಾಗಿದೆ.


--------
 ಪ್ರವಾಸಿ ತಾಣಗಳ ಗೋಡೆಗಳ ಮೇಲೆ ವಿಕಾರವಾಗಿ ಬರೆಯುವುದು ಸರಿಯಲ್ಲ. ಇದು ಸಹಿಸಲು ಅಸಾಧ್ಯ. ಪ್ರತಿ ಪ್ರವಾಸಿ ತಾಣದಲ್ಲಿಯೂ ಕೂಡ ಪ್ರವಾಸೋದ್ಯಮ ಇಲಾಖೆ ಹಾಗೂ ಸ್ಥಳೀಯ ಆಡಳಿತ ಜಂಟಿಯಾಗಿ ಯಾರಾದರೂ ಒಬ್ಬರನ್ನು ನೇಮಿಸಬೇಕು. ಪ್ರವಾಸಿ ಸ್ಥಳಕ್ಕೆ ಆಗಮಿಸಿ ತಾಣಗಳ ಗೋಡೆಗಳ ಮೇಲೆ ಬರೆಯುವವರನ್ನು ಗುರುತಿಸಿ, ಹಿಡಿದು ಅಂತಹ ವ್ಯಕ್ತಿಗಳ ಮೇಲೆ ದಂಡವನ್ನು ಹಾಕುವ ಕೆಲಸವನ್ನು ನೇಮಿಸಲ್ಪಟ್ಟ ವ್ಯಕ್ತಿಯು ಮಾಡುವ ಅಗತ್ಯವಿದೆ. ಜೊತೆಯಲ್ಲಿ ಯಾರು ಬರೆಯುತ್ತಾರೋ ಅಅಂತವರಿಂದಲೇ ಅದನ್ನು ಅಳಿಸುವ ಕೆಲಸವನ್ನೂ ಮಾಡಬೇಕು. ಹೀಗಾದಾಗ ಮಾತ್ರ ಪ್ರವಾಸಿ ತಾಣಗಳ ಗೋಡೆಗಳನ್ನು ಅಂದಗೆಡಿಸುವವರನ್ನು ತಡೆಯಬಹುದಾಗಿದೆ. ಪ್ರವಾಸಿ ತಾಣಗಳನ್ನು ಉಳಿಸಬಹುದಾಗಿದೆ.
ವಿಜಯ ರಾಥೋಡ
ಬೆಳಗಾವಿ
ಪ್ರವಾಸಿ