Friday, November 27, 2015

ಅಘನಾಶಿನಿ ಕಣಿವೆಯಲ್ಲಿ -29

`ಯಾರು ನೀನು?' ಹುಚ್ಚನ ಮಾತಿಗೆ ತಕ್ಷಣವೇ ಪ್ರತಿಕ್ರಿಯೆ ನೀಡಿದ್ದ ಪ್ರದೀಪ.
`ನಾನು ಯಾರು ಬೇಕಾದರೂ ಆಗಿರಲಿ. ಅದು ಮುಖ್ಯವಲ್ಲ. ನಿಮ್ಮ ಕೆಲಸ ಏನಿದೆಯೋ ಅದರ ಕಡೆಗೆ ಗಮನ ಹರಿಸಿಕೊಳ್ಳಿ.. ನಾನು ಹುಚ್ಚ ಎಂದಷ್ಟೇ ನಿಮ್ಮ ಗಮನದಲ್ಲಿರಲಿ. ಅದು ಸಾಕು ಬಿಡಿ..' ಎಂದ ಆ ಹುಚ್ಚ.
`ಇದು ಯಾಕೋ ಸರಿ ಕಾಣುತ್ತಿಲ್ಲ. ನೀನು ಯಾರು? ನಮ್ಮ ಕೆಲಸದ ಬಗ್ಗೆ ನೀನೇಕೆ ಹೇಳುತ್ತಿದ್ದೀಯಾ?' ಈ ಸಾರಿ ಉತ್ತರ ನೀಡುವ ಸರದಿ ವಿಕ್ರಮನದ್ದಾಗಿತ್ತು.
`ಆಗಲೇ ಹೇಳಿದೆನಲ್ಲ. ನಾನು ಹುಚ್ಚ. ನೀವೇ ನನ್ನನ್ನು ಉಂಚಳ್ಳಿ ಜಲಪಾತದ ಒಡಲಿನಿಂದ ಕಾಪಾಡಿಕೊಂಡು ಬಂದಿದ್ದೀರಲ್ಲ. ನೋಡಿ ನಾನು ಯಾರು ಬೇಕಾದರೂ ಆಗಿರಲಿ. ನಿಮಗೆ ತೊಂದರೆ ಕೊಡುವವನು ನಾನಲ್ಲ. ನಿಮಗೆ ಸಹಾಯ ಮಾಡುವುದು ನನ್ನ ಮುಖ್ಯ ಕೆಲಸ. ನನ್ನಿಂದ ನಿಮಗೆ ಯಾವ ರೀತಿಯ ಸಹಾಯ ಬೇಕು ಎನ್ನುವುದನ್ನು ನೀವು ಹೇಳಿ. ಹೇಳದಿದ್ದರೂ ತೊಂದರೆಯೇನಿಲ್ಲ ಬಿಡಿ..' ಎಂದ ಹುಚ್ಚ.
ಎಲ್ಲರಿಗೂ ಒಮ್ಮೆ ಅಚ್ಚರಿ. ಈತ ನಿಜವಾಗಿಯೂ ಹುಚ್ಚನೇ? ಅಥವಾ ಹುಚ್ಚನ ವೇಷದಲ್ಲಿರುವ ಯಾವುದಾದರೂ ವ್ಯಕ್ತಿಯೋ? ನಮ್ಮ ಮೇಲೆ ನಿಗಾ ವಹಿಸುವ ಸಲುವಾಗಿ ಯಾರಾದರೂ ಬೆನ್ನು ಬಿದ್ದಿದ್ದಾರೋ ಹೇಗೆ ಎನ್ನುವ ಆಲೋಚನೆಗಳೆಲ್ಲ ಮನಸ್ಸಿನಲ್ಲಿ ಮೂಡಿದವು. ಅಷ್ಟರಲ್ಲಿಯೇ ಇನ್ನೊಂದು ಘಟನೆ ನಡೆದು ಹೋಗಿತ್ತು. `ನೋಡಿ ನಿಮ್ಮೆದುರು ಇರುವ ಸವಾಲು ಸಣ್ಣದಲ್ಲ. ಹುಷಾರಾಗಿರಿ. ನೀವು ಈಗಾಗಲೇ ಸಿಂಹದ ಬಾಯಿಗೆ ಕೈ ಹಾಕಿದ್ದೀರಿ. ಈಗಾಗಲೇ ಒಬ್ಬನ ಸಾವಿಗೆ ಕಾರಣರಾಗಿದ್ದೀರಿ. ಶತ್ರು ಸುಮ್ಮನೇ ಇರುವುದಿಲ್ಲ. ನಿಮ್ಮೆದುರು ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದಾನೆ. ಪ್ರತಿಯೊಬ್ಬರೂ ಎಚ್ಚರದಿಂದ ಇರಿ. ಭಯ ಬೇಡ. ನಿಮ್ಮ ಚಲನವಲನಗಳನ್ನು ನಾನು ಸಾಧ್ಯವಾದಷ್ಟೂ ಗಮನಿಸುತ್ತಲೇ ಇರುತ್ತೇನೆ.' ಎಂದು ಹೇಳಿದ ಹುಚ್ಚ ಇದ್ದಕ್ಕಿದ್ದಂತೆ ಗಾಡಿಯಿಂದ ಕೆಳಗೆ ಜಿಗಿದೇ ಬಿಟ್ಟ.
ಹುಚ್ಚ ಗಾಡಿಯಿಂದ ಕೆಳಗೆ ಜಿಗಿಯಬಹುದು ಎನ್ನುವುದನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ. ವಾಹನ ಚಾಲನೆ ಮಾಡುತ್ತಿದ್ದ ವಿನಾಯಕ ಹಟಾತ್ತನೆ ಗಾಡಿ ಬ್ರೇಕ್ ಹಾಕಿದ. ಗಾಡಿಯಲ್ಲಿ ಕುಳಿತಿದ್ದವರೆಲ್ಲ ಒಮ್ಮೆ ಮುಗ್ಗರಿಸಿಬಿದ್ದರು. ಪ್ರದೀಪ ಕೂಡ ಹುಚ್ಚನ ಹಿಂದೆ ಅವನಷ್ಟೇ ವೇಗವಾಗಿ ಗಾಡಿಯಿಂದ ಜಿಗಿದಿದ್ದ. ಅವನ ಹಿಂದೆ ವಿಕ್ರಮ ಕೂಡ ಇಳಿದಿದ್ದ. ಹುಚ್ಚನ ಬಗ್ಗೆ ಬಹಳ ಅಚ್ಚರಿಯಾಗಿತ್ತು. ಆತನನ್ನು ಹಿಡಿಯುವುದು ವಿಕ್ರಮ ಹಾಗೂ ಪ್ರದೀಪನ ಉದ್ದೇಶವಾಗಿತ್ತು. ಆದರೆ ವಾಹನದಿಂದ ಜಿಗಿದಿದ್ದ ಹುಚ್ಚ ಪಕ್ಕದ ಕಾಡೊಳಕ್ಕೆ ನುಗ್ಗಿ ಮರೆಯಾಗಿ ಬಿಟ್ಟಿದ್ದ. ಪ್ರದೀಪ ಹಾಗೂ ವಿಕ್ರಮ ಕೂಡ ಹುಚ್ಚನಷ್ಟೇ ವೇಗವಾಗಿ ಕಾಡೊಳಗೆ ನುಗ್ಗಿದ್ದರೂ ಅರೆಘಳಿಗೆಯಲ್ಲಿ ಆತ ತಪ್ಪಿಸಿಕೊಂಡು ಬಿಟ್ಟಿದ್ದ. `ಛೇ.. ಸ್ವಲ್ಪದರಲ್ಲಿ ತಪ್ಪಿಸಿಕೊಂಡ..' ಎಂದು ಗೊಣಗಿದ ಪ್ರದೀಪ.
`ಇಂವ ಯಾರು ಮಾರಾಯಾ. ನಮ್ಮ ಕೆಲಸದ ಬಗ್ಗೆ ಅಷ್ಟು ನಿಖರವಾಗಿ ಹೇಳ್ತಾ ಇದ್ದ. ಇಂವ ಹುಚ್ಚ ಅಂತೂ ಅಲ್ಲ. ಕಾಡುಗಳ್ಳರ ಬಗ್ಗೆ ಸರ್ಕಾರ ಏನಾದರೂ ವಿಶೇಷ ಅಧಿಕಾರಿಯನ್ನು ನೇಮಕ ಮಾಡಿದೆಯಾ? ಅವನು ಇವನೇನಾ? ನಮ್ಮ ಕಾರ್ಯದ ಬಗ್ಗೆ ಎಷ್ಟು ಸಲೀಸಾಗಿ ಹೇಳ್ತಾ ಇದ್ದ. ಒಂದ್ ಸಾರಿ ಎಷ್ಟ್ ಆಶ್ಚರ್ಯ ಆಗಿತ್ತು ಮಾರಾಯಾ..' ಎಂದ ವಿಕ್ರಮ.
`ಹುಂ. ನಂಗೂ ಹಂಗೆ ಅನ್ನಿಸ್ತಾ ಇದ್ದು. ಖಂಡಿತ ಇಂವ ಹುಚ್ಚನಂತೂ ಅಲ್ಲ. ನೋಡು ಏನೇ ಆಗಲಿ, ಇಂವ ಯಾರೇ ಆಗಿರಲಿ, ಇನ್ನುಮುಂದೆ ನಾವು ಬಹಳ ಹುಷಾರಾಗಿ ಇರಬೇಕು. ಅಷ್ಟೇ ಅಲ್ಲ, ನಮ್ಮ ಕೆಲಸವನ್ನು ಇನ್ನಷ್ಟು ತ್ವರಿತವಾಗಿ ಮಾಡಿ ಮುಗಿಸಬೇಕು. ಇಲ್ಲ ಅಂದರೆ ಸಲ್ಲದ ಸಮಸ್ಯೆಯನ್ನು ತಲೆಯ ಮೇಲೆ ಎಳೆದುಕೊಂಡಂತೆ ಆಗುತ್ತದೆ..' ಎಂದ ಪ್ರದೀಪ.
`ಹೌದು. ನನಗೂ ಹಾಗೆಯೇ ಅನ್ನಿಸುತ್ತಿದೆ. ಅಷ್ಟೇ ಅಲ್ಲ ಈ ಕೆಲಸವನ್ನು ಯಾಕಾದರೂ ಶುರು ಹಚ್ಚಿಕೊಂಡೆನೋ ಎಂದೂ ಅನ್ನಿಸಲು ಆರಂಭಿಸಿದೆ ನೋಡು. ಒಂದು ಸಾರಿ ಕೆಲಸ ಮುಗಿದರೆ ಸಾಕು. ಅಷ್ಟಾಗಿಬಿಟ್ಟಿದೆ...' ವಿಕ್ರಮ ನಿಟ್ಟುಸಿರಿನಿಂದ ಹೇಳಿದ್ದ.
`ಮುಗಿಸೋಣ. ಬೇಗನೇ ಮುಗಿಸಿಬಿಡೋಣ. ಏನ್ ಬೇಕಾದರೂ ಆಗಲಿ..' ಎಂದ ವಿಕ್ರಮ.
ವಾಪಾಸು ಕಾರಿನ ಬಳಿ ಬಂದಕೂಡಲೇ ವಿನಾಯಕ `ಏನಾಯ್ತು? ಸಿಕ್ಕಿದ್ನಾ ಅವ?' ಎಂದು ಕೇಳಿದ. ಇಬ್ಬರೂ ಇಲ್ಲ ಎಂದು ತಲೆಯಲ್ಲಾಡಿಸಿದರು. ಅಷ್ಟರಲ್ಲಿ ಮಧ್ಯದಲ್ಲಿ ಬಾಯಿ ಹಾಕಿದ ರಮ್ಯ `ಅಂವ ಯಾರು? ನಿಮ್ಮ ಕೆಲಸದ ಬಗ್ಗೆ ಏನೋ ಹೇಳಿದನಲ್ಲ. ನಿಜ ಹೇಳಿ. ನೀವು ಯಾವ ಉದ್ದೇಶದಿಂದ ಈ ಕಡೆಗೆ ಬಂದಿದ್ದೀರಿ? ನಿಮಗೆ ಶತ್ರುಗಳು ಇರಲು ಸಾಧ್ಯವಾ? ಆ ಹುಚ್ಚ ಶತ್ರುಗಳ ಬಗ್ಗೆ ಎಚ್ಚರಿಕೆಯಿಂದ ಇರಿ ಎಂದನಲ್ಲ. ಅದರ ಅರ್ಥ ಏನು? ಏನೋ ಮುಚ್ಚಿಡುತ್ತಿದ್ದೀರಿ.. ಹೇಳೀ..' ಎಂದಳು.
`ಏನು ಇಲ್ಲ ಮಾರಾಯ್ತಿ. ಈ ಮರಗಳ್ಳರ ಬಗ್ಗೆ ಹೇಳಿದ್ದು ಆತ. ದಂಟಕಲ್ಲಿನಲ್ಲಿ ಮರ ಕಡಿಯುತ್ತಿದ್ದ ಒಬ್ಬಾತನ ಸಾವಿಗೆ ನಾವು ಕಾರಣರಾದೆವಲ್ಲ. ಅದಕ್ಕೆ ನಮ್ಮ ವಿರುದ್ಧ ಸೇಡು ತೀರಿಸಿಕೊಳ್ಳಲು ಮರಗಳ್ಳರು ಸಜ್ಜಾಗಿದ್ದಾರಂತೆ. ಇದನ್ನೇ ಅವನು ಹೇಳಿದ್ದು..' ವಿಕ್ರಮ ಸಮಜಾಯಿಶಿ ನೀಡಿದ.
`ಅವ ಹುಚ್ಚ. ನಿಮ್ಮ ಬಗ್ಗೆ ಅವನಿಗೆ ಗೊತ್ತಿಲ್ಲ. ಅವ ಯಾಕೆ ನಿಮ್ಮ ಬಳಿ ಬಂದು ಹೇಳಬೇಕು? ಅವನಿಗೆ ನಿಮ್ಮ ಬಳಿ ಹೇಳುವುದರಿಂದ ಆಗುವ ಲಾಭ ಏನು?..?' ರಮ್ಯ ಪಟ್ಟು ಬಿಡದೇ ಕೇಳಿದ್ದಳು.
ನಡುವೆ ಬಾಯಿ ಹಾಕಿದ ವಿನಾಯಕ `ನಿಂಗ್ ಗೊತ್ತಾಗ್ತಿಲ್ಲೆ ಸುಮ್ಮಂಗ್ ಕುತ್ಕ ನೋಡನ. ಅಂವ ಹುಚ್ಚ ಇದ್ದಿಕ್ಕು ಅಥವಾ ಹುಚ್ಚ ಅಲ್ಲದೇ ಇದ್ದಿಕ್ಕು. ಮರಗಳ್ಳರ ಪತ್ತೆಗೆ ಸರ್ಕಾರ ಯಾರನ್ನಾದರೂ ನೇಮಕ ಮಾಡಿಕ್ಕು. ಆ ಅಧಿಕಾರಿಯೇ ಈ ರೀತಿ ಮಾರು ವೇಷದಲ್ಲಿ ಓಡಾಟ ನಡೆಸುತ್ತಿರಬಹುದು. ಆತನಿಗೆ ನಮ್ಮೂರಿನಲ್ಲಿ ಮರಗಳ್ಳರ ಮೇಲೆ ಹಲ್ಲೆ ನಡೆದು, ಒಬ್ಬ ಕಳ್ಳ ನಾಟಾ ಸಾಗಣೆದಾರ ಸತ್ತಿರುವ ಬಗ್ಗೆ ಗೊತ್ತಾಗಿರಲಕ್ಕು. ನಮ್ಮ ಬಗ್ಗೆ ಮಾಹಿತಿ ಕಲೆ ಹಾಕಿರಲಕ್ಕು. ಅದಕ್ಕೆಂತಕ್ ಈ ಥರ ತಲೆಕೆಡಿಸ್ಕಳ್ತೆ?' ಎಂದು ದಬಾಯಿಸಿದ. ರಮ್ಯ ಏನೋ ಹೇಳಲು ಮುಂದಾದವಳು ಹಾಗೆಯೇ ಸುಮ್ಮನಾದಳು.
ಪ್ರತಿಯೊಬ್ಬರಲ್ಲೂ ಹಲವಾರು ಪ್ರಶ್ನೆಗಳಿದ್ದವು. ಯಾವುದನ್ನೂ ಕೇಳಿದರೂ ಸ್ಪಷ್ಟ ಉತ್ತರ ಸಿಗುತ್ತದೆ ಎನ್ನುವ ನಿಂಬಿಕೆ ಇಲ್ಲವಾದ್ದರಿಂದ ಪ್ರತಿಯೊಬ್ಬರ ಪ್ರಶ್ನೆಗಳೂ ಬಾಯಿಂದ ಹೊರಗೆ ಬರಲೇ ಇಲ್ಲ. ಪ್ರತಿಯೊಬ್ಬರೂ ಮೌನವಾಗಿಯೇ ಕಾರಿನಲ್ಲಿ ಕುಳಿತಿದ್ದರು. ವಿನಾಯಕ ಮುಂದಕ್ಕೆ ಕಾರನ್ನು ಚಾಲನೆ ಮಾಡಿದ.
ದಾರಿ ಮಧ್ಯದಲ್ಲಿ ಕೆಲ ದಿನಗಳ ಹಿಂದೆ ಮರಗಳ್ಳರಿಗೂ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳಿಗೂ ಜಟಾಪಟಿ ನಡೆದ ಸ್ಥಳ ಬಂದಿತು. ಅಲ್ಲೊಂದು ಕಡೆ ನಿರ್ಮಾಣ ಮಾಡಲಾಗಿದ್ದ ಚೆಕ್ ಪೋಸ್ಟ್ ಕಿತ್ತು ಹೋಗಿತ್ತು. ಅದನ್ನು ನೋಡಿಕೊಂಡು ಮುಂದಕ್ಕೆ ನಡೆದರು. ಒಂದಿಬ್ಬರು ಅರಣ್ಯ ಇಲಾಖೆಯ ಕಾವಲುಗಾರರು ಮಿಕಿ ಮಿಕಿ ನೋಡುತ್ತ ನಿಂತಿದ್ದರಷ್ಟೇ. ಮರಳಿ ದಂಟಕಲ್ಲನ್ನು ತಲುಪುವ ವೇಳೆಗೆ ಸೂರ್ಯ ಆಗಲೇ ಬಾನಂಚಿಗೆ ಜಾರಿದ್ದ.

(ಮುಂದುವರಿಯುತ್ತದೆ)

Monday, November 2, 2015

ಅಘನಾಶಿನಿ ಕಣಿವೆಯಲ್ಲಿ -28

              ವಿಕ್ರಮ ಸಧ್ಯದಲ್ಲಿಯೇ ಪ್ರಪೋಸ್ ಮಾಡಬಹುದು ಎನ್ನುವ ನಿರೀಕ್ಷೆಯಿತ್ತು. ಆದರೆ ಹೀಗೆ ಉಂಚಳ್ಳಿ ಜಲಪಾತದಲ್ಲಿ ಪ್ರಪೋಸ್ ಮಾಡುತ್ತಾನೆ ಎನ್ನುವುದನ್ನು ವಿಜೇತಾ ನಿರೀಕ್ಷಿಸಿರಲಿಲ್ಲ. ತಕ್ಷಣವೇ ಒಪ್ಪಿಕೊಂಡು ಬಿಡಲಾ ಎಂದು ಆಲೋಚಿಸಿದಳು ವಿಜೇತಾ. ಆದರೆ ವಿಕ್ರಮನನ್ನು ಸ್ವಲ್ಪ ಆಟ ಆಡಿಸೋಣ, ತಕ್ಷಣಕ್ಕೆ ಒಪ್ಪಿಕೊಳ್ಳಬಾರದು ಎಂದುಕೊಂಡಳು. `ನೀನು ನನ್ನ ಲವ್ ಮಾಡ್ತಾ ಇದ್ಯಾ? ಜೋಕ್ ಮಾಡ್ತಾ ಇದ್ದೀಯಾ ಅಥವಾ ತಮಾಷೆಯಾ?' ಎಂದು ಕೇಳಿದಳು ವಿಜೇತಾ.
            `ತಮಾಷೆಯಲ್ಲ. ಇದು ನಿಜ. ಬೇಗ ಹೇಳು ಪ್ಲೀಸ್. ಏನೇ ಇರಲಿ, ನಿನ್ನ ನಿರ್ಧಾರ ತಕ್ಷಣ ತಿಳಿಸು..' ವಿಕ್ರಮ ಗೋಗರೆಯುವ ರೀತಿಯಲ್ಲಿ ಹೇಳಿದ.
             `ನಿಜವಾಗಿಯೂ ನನಗೆ ಆಶ್ಚರ್ಯ ಆಗ್ತಾ ಇದ್ದು ನೋಡು. ಖಂಡಿತ ನೀನು ಈ ರೀತಿ ಆಲೋಚನೆ ಮಾಡ್ತೀಯಾ ಅಂತ ಅಂದ್ಕೊಂಡಿರ್ಲಿಲ್ಲ..'
             `ಅಂದರೆ.. ನಿಂಗೆ ಇಷ್ಟ ಇಲ್ಲವಾ..?' ಎಂದು ಕೇಳಿದ ವಿಕ್ರಮ ಧ್ವನಿಯಲ್ಲಿ ನಿರಾಸೆಯ ಪದರವಿತ್ತು.
            `ಉಹೂಂ. ಇಷ್ಟವಿಲ್ಲ ಅಂತ ಹೇಳಲಾರೆ. ಹಾಗಂತ ಹೂ ಅನ್ನೋದಕ್ಕೂ ಆಗ್ತಾ ಇಲ್ಲ. ಸ್ವಲ್ಪ ಗೊಂದಲ. ನನಗೆ ಆಲೋಚನೆ ಮಾಡೋಕೆ ಸ್ವಲ್ಪ ಟೈಂ ಬೇಕು. ಇನ್ನೊಂದೆರಡು, ಮೂರು ದಿನಗಳಲ್ಲಿ ಹೇಳಲಾ?' ಕೇಳಿದಳು ವಿಜೇತಾ.
           `ಹೂಂ. ಆದರೆ ಬೇಗ ಹೇಳು ಪ್ಲೀಸ್. ಕಾಯುವಿಕೆ ಕಷ್ಟ..' ಎಂದವನು ಪೂರ್ತಿಯಾಗಿ ಶರಣಾದನೋ ಎಂಬಂತಿದ್ದ.
            ಅಷ್ಟರಲ್ಲಿ ಜಲಪಾತದ ಬುಡದ ಗುಂಡಿಯಲ್ಲಿ ಈಸು ಬಿದ್ದಿದ್ದ ವಿನಾಯಕ ಮೇಲಕ್ಕೆ ಬಂದು ವಿಕ್ರಮನ ಬಳಿ `ಏನಪ್ಪಾ.. ಏನ್ ವಿಷ್ಯ. ಹೇಳಿದ್ಯಾ? ಹಣ್ಣೋ.. ಕಾಯೋ..' ಎಂದ.
             ವಿಜೇತಾಳಿಗೆ ಒಮ್ಮೆಲೆ ಅಚ್ಚರಿ. ಅರೇ ಈ ವಿಷ್ಯ ಎಲ್ಲರಿಗೂ ಗೊತ್ತಿದೆಯಲ್ಲ. ನನಗೆ ಮಾತ್ರ ಗೊತ್ತಿರಲಿಲ್ಲ. ಅನುಮಾನ ಇತ್ತಾದರೂ ಎಲ್ಲರಿಗೂ ಗೊತ್ತಾಗಿರಬಹುದು ಎಂದುಕೊಂಡಿರಲಿಲ್ಲವಲ್ಲ ಎಂದುಕೊಂಡಳು. `ಯಾಕಪ್ಪಾ.. ಏನಾಯ್ತು.. ಸಪ್ಪಗಿದ್ದೀಯಾ..' ವಿನಾಯಕ ವಿಕ್ರಮನನ್ನು ಛೇಡಿಸಿದ.
            `ನಾನು ಹೇಳೋದನ್ನೆಲ್ಲ ಹೇಳಿದ್ದಿ ನೋಡಿ ವಿನು. ಸ್ವಲ್ಪ ಟೈಂ ಬೇಕು ಅಂತ ಹೇಳಿದ್ದು. ಇಷ್ಟು ದಿನ ಕಾದು ಕುಳಿತಿದ್ದಿ. ಇನ್ನೊಂದೆರಡು ದಿನ ಕಾಯೋದು ಕಷ್ಟವಾ?..' ವಿಕ್ರಮ ಹೇಳಿದ. ನಾಚಿದ ವಿಜೇತಾ ದೂರದಲ್ಲಿ ನೀರಾಟವಾಡುತ್ತಿದ್ದ ರಮ್ಯಳ ಬಳಿ ಹೋಗಿ ಕುಳಿತುಕೊಂಡಳು.
            ಪ್ರದೀಪ, ವಿಷ್ಣು ಕೂಡ ಈಸು ಬಿದ್ದವರು ಮೇಲೆದ್ದು ಬಂದು ಬಿಸಿಲಿಗೆ ಮೈಯೊಡ್ಡಿ ನಿಂತರು. ವಿಕ್ರಮ ಹಾಗೂ ವಿನಾಯಕ ಇಬ್ಬರೂ ಮಾತನಾಡುತ್ತಲೇ ಉಂಚಳ್ಳಿ ಜಲಪಾತದ ಛಾಯಾಚಿತ್ರಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯಲು ಆರಂಭಿಸಿದರು.
ಜಲಪಾತದ ಇತಿಹಾಸವೂ ವಿಶಿಷ್ಟವಾಗಿದೆ. ಜಲಪಾತವನ್ನು ಬ್ರಿಟೀಷ್ ಅಧಿಕಾರಿ ಜಾರ್ಜ್ ಲೂಷಿಂಗ್ ಟನ್ ಎಂಬಾತ ಪತ್ತೆ ಹಚ್ಚಿದ ಕಾರಣಕ್ಕಾಗಿ ಲೂಷಿಂಗ್ ಟನ್ ಜಲಪಾತ ಎನ್ನುವ ಹೆಸರನ್ನೂ ಪಡೆದುಕೊಂಡಿದೆ. ಪಶ್ಚಿಮ ಘಟ್ಟದ ತುದಿಯಿಂದ ಕರಾವಳಿಯತ್ತ ಓಡುವ ನದಿ ಭೊರ್ಗರೆಯುತ್ತ ಇಳಿಯುವುದನ್ನು ನೋಡುವುದೇ ಚಂದ. ಈ ಸಂದರ್ಭದಲ್ಲಿ ಉಂಟಾಗುವ ಸಪ್ಪಳಕ್ಕೆ ಕಿವಿ ಕಿವುಡಾಗುವಂತಾಗುತ್ತದೆ. ಈ ಕಾರಣದಿಂದಲೇ ಇದನ್ನು ಕೆಪ್ಪ ಜೋಗ ಎಂದೂ ಕರೆಯಲಾಗುತ್ತದೆ. ಪ್ರತಿ ವರ್ಷ ಮಳೆಗಾಲದಲ್ಲಿ ಜಲಪಾತ ಚೈತನ್ಯದಿಂದ ಮನಸೆಳೆಯುತ್ತದೆ.
               ಬೋರ್ಘರೆಯುವ ನದಿ ಮಾಡುವ ಸಪ್ಪಳ ಮೂರ್ನಾಲ್ಕು ಕಿ.ಮಿ ದೂರದ ವರೆಗೂ ಕೇಳುತ್ತದೆ. ಗೋಕರ್ಣದ ಆತ್ಮಲಿಂಗದ ಆಕಾರದಲ್ಲಿ ಕಣಿವೆಯಾಳಕ್ಕಿಳಿಯುವ ಜಲಪಾತದ ಚಿತ್ರಣ ಮೈಮನಸ್ಸನ್ನು ಆವರಿಸುತ್ತದೆ. ಜಲಪಾತದ ಎರಡೂ ಕಡೆಗಳಲ್ಲಿರುವ ದೈತ್ಯ ಘಟ್ಟಗಳು, ಬಾನೆತ್ತರಕ್ಕೆ ಚಾಚಿ ನಿಂತ ಮರಗಳು ಜಲಪಾತಕ್ಕೆ ಶೋಭೆಯನ್ನು ನೀಡುತ್ತವೆ. ದಟ್ಟಕಾನನದ ನಡುವೆ ಸೌಂದರ್ಯದ ಖನಿಯಾಗಿ ಬೆಡಗು ಮೂಡಿಸುತ್ತಿರುವ ಜಲಪಾತಕ್ಕೆ ಪ್ರವಾಸಿಗರು ಸಹಸ್ರ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಬೆಂಗಳೂರು, ಮಂಡ್ಯ, ಹಾಸನ, ಕೋಲಾರ, ಮೈಸೂರು, ಚಿಕ್ಕಮಗಳೂರು, ಬಿಜಾಪುರ, ಬಳ್ಳಾರಿ, ಚಿತ್ರದುರ್ಗ, ರಾಯಚೂರು, ಮಹಾರಾಷ್ಟ್ರದ ರತ್ನಗಿರಿ, ಕೊಲ್ಲಾಪುರ, ಪೂಣಾ ಹೀಗೆ ರಾಜ್ಯ ಹಾಗೂ ಹೊರ ರಾಜ್ಯದ ಪ್ರವಾಸಿಗರು ಜಲಪಾತದ ವೀಕ್ಷಣೆಗೆ ಆಗಮಿಸುತ್ತಾರೆ. ವಿಕ್ರಮ ಹಾಗೂ ಗೆಳೆಯರು ಜಲಪಾತ ನೋಡಲು ಹೋಗಿದ್ದಾಗ ಮಾತ್ರ ಸಾಕಷ್ಟು ಜನರಿರಲಿಲ್ಲ. ಅಲ್ಲೊಬ್ಬರು, ಇಲ್ಲೊಬ್ಬರು ಇದ್ದರು ಅಷ್ಟೇ.
              `ಹಸಿವಾಗ್ತಾ ಇದೆ. ಕಟ್ಟಿಸಿಕೊಂಡು ಬಂದಿರುವ ಫಲಾವ್ ನ ಎಲ್ಲಾ ತೆಗಿರಿ..' ಎಂದು ರಮ್ಯ ಕೂಗಿದವಳೇ ದೊಡ್ಡದೊಂದು ಬಂಡೆಯ ಮೇಲೆ ಏರಿ ತಿಂಡಿ ತಿನ್ನಲು ತಯಾರಾಗಿಬಿಟ್ಟಳು. ಉಳಿದವರಿಗೂ ಅದೇ ಸರಿ ಎನ್ನಿಸಿ ರಮ್ಯಳನ್ನು ಹಿಂಬಾಲಿಸಿದರು. ಮದ್ಯಾಹ್ನದ ವೇಳೆಗೆಲ್ಲಾ ಉಂಚಳ್ಳಿ ಜಲಪಾತವನ್ನು ವೀಕ್ಷಣೆ ಮಾಡಿ, ಆ ಭಾಗದಲ್ಲಿ ಸಂಚಾರ ಮಾಡಿದವರು ಮದ್ಯಾಹ್ನದ ನಂತರ ಜಲಪಾತದ ಬುಡದಿಂದ ಮೇಲಕ್ಕೆ ಬಂದರು. ಅಷ್ಟರಲ್ಲಿ ಜಲಪಾತದ ವೀಕ್ಷಣಾ ಗೋಪುರದಲ್ಲಿ ಚಿಕ್ಕದೊಂದು ಗಲಾಟೆಯೆ ನಡೆದಿತ್ತು.
              ಮಾನಸಿಕ ಅಸ್ವಸ್ತ ವ್ಯಕ್ತಿಯೊಬ್ಬ ಆ ಭಾಗದಲ್ಲಿ ಕೆಲ ದಿವಸಗಳಿಂದ ಓಡಾಡುತ್ತಿದ್ದ. ಉಂಚಳ್ಳಿ ಜಲಪಾತದ ಭಾಗದಲ್ಲಿ ಓಡಾಟ ಮಾಡುತ್ತಿದ್ದ ವ್ಯಕ್ತಿ ಅಲ್ಲಿಗೆ ಆಗಮಿಸುವ ಪ್ರವಾಸಿಗರ ಬಳಿ ಊಟ, ತಿಂಡಿಯನ್ನು ಪಡೆದುಕೊಂಡಿದ್ದ. ಕೆಲ ದಿನಗಳ ಕಾಲ ಸುಮ್ಮನೆ ಇದ್ದ ಆ ವ್ಯಕ್ತಿ ನಂತರದ ದಿನಗಳಲ್ಲಿ ಅಲ್ಲಿಗೆ ಆಗಮಿಸುವ ಪ್ರವಾಸಿಗರನ್ನು ಕೆಕ್ಕರಿಸಿ ನೋಡುವುದು, ತೊಂದರೆ ಕೊಡುವುದು ಈ ಮುಂತಾದ ಕೆಲಸಗಳನ್ನು ಮಾಡಲು ಆರಂಭಿಸಿದ. ಇದರಿಂದ ಪ್ರವಾಸಿಗರು ಬೇಸತ್ತಿದ್ದರು. ಸ್ಥಳೀಯರಿಗೆ ಈ ಕುರಿತು ಹೇಳಲಾಗಿ ಒಂದೆರಡು ಸಾರಿ ಮಾನಸಿಕ ಅಸ್ವಸ್ತ ವ್ಯಕ್ತಿಯನ್ನು ಪಕ್ಕದೂರಿಗೆ ಗಡಿಪಾರು ಮಾಡಿ ಬಂದಿದ್ದರು. ಆದರೆ ಹೀಗೆ ಗಡಿಪಾರು ಮಾಡಿ ಬಂದ ಒಂದೆರಡು ದಿನಗಳ ಒಳಗಾಗಿ ಆ ವ್ಯಕ್ತಿ ಮತ್ತೆ ಅಲ್ಲಿ ಪ್ರತ್ಯಕ್ಷನಾಗುತ್ತಿದ್ದ.
          ಮೂರ್ನಾಲ್ಕು ಸಾರಿ ಈ ರೀತಿ ನಡೆದ ನಂತರ ಆ ವ್ಯಕ್ತಿ ಜಲಪಾತ ವೀಕ್ಷಣೆಗೆ ಆಗಮಿಸಿದ್ದ ಪ್ರವಾಸಿಗರೊಬ್ಬರ ಜೊತೆ ಅಸಹ್ಯವಾಗಿ ವರ್ತನೆ ಮಾಡಿದ್ದ. ಇದರಿಂದ ಸಿಟ್ಟಿಗೆದ್ದ ಪ್ರವಾಸಿಗರು ಆತನ ಮೇಲೆ ಹಲ್ಲೆ ಮಾಡಿದ್ದರು. ಪರಿಣಾಮವಾಗಿ ಗಲಾಟೆ ನಡೆದಿತ್ತು. ಮಾನಸಿಕ ಅಸ್ವಸ್ತ ವ್ಯಕ್ತಿ ಹೊಡೆತ ತಾಳಲಾಗದೇ ಕೂಗಾಡುತ್ತಿದ್ದ. ಜೊತೆ ಜೊತೆಯಲ್ಲಿಯೇ ಅವಾಚ್ಯ ಶಬ್ದಗಳಿಂದ ನಿಂದನೆಯನ್ನೂ ಮಾಡುತ್ತಿದ್ದ. ಇದನ್ನು ನೋಡಿದ ಪ್ರದೀಪ ಗಲಾಟೆಯನ್ನು ಬಿಡಿಸಲು ಮುಂದಾದ. ಸಿಟ್ಟಿಗೆದ್ದವರನ್ನು ಸಮಾಧಾನ ಮಾಡಿದ. ಅಷ್ಟೇ ಅಲ್ಲದೇ ಹುಚ್ಚನನ್ನು ಹಿಡಿದುಕೊಂಡು ಬಂದ. ಬಂದವನೇ ಅವನನ್ನು ವಿಕ್ರಮನ ಕಾರಿನಲ್ಲಿ ಕೂರಿಸಿದ.
           ವಿಕ್ರಮನಿಗೆ ಇದು ಅಸಹ್ಯ ಎನ್ನಿಸಿತು. ಯಾರೋ ಹುಚ್ಚನನ್ನು ತಂದು ಗಾಡಿಯಲ್ಲಿ ಕೂರಿಸಿದನಲ್ಲ ಎನ್ನಿಸಿತು. ಸಿಟ್ಟಿನಿಂದ ಪ್ರದೀಪನ ಬಳಿ ಕೂಗಾಡಲು ಆರಂಭಿಸಿದ. `ಇದೆಂತ ಹುಚ್ಚಾಟ ನಿಂದು? ಅವನನ್ನು ಗಾಡಿಯಲ್ಲಿ ಹತ್ತಿಸಿದ್ದು. ಛೇ. ಮೊದ್ಲು ಇಳಿಸು..' ಎಂದ.
            `ಇಲ್ಲ ಮಾರಾಯಾ.. ಅವನನ್ನು ಬೇರೆ ಎಲ್ಲಾದರೂ ಕರೆದುಕೊಂಡು ಹೋಗಿ ಬಿಡೋಣ. ಅಥವಾ ಯಾವುದಾದರೂ ಮಾನಸಿಕ ತಜ್ಞರ ಬಳಿ ಕರೆದುಕೊಂಡು ಹೋಗಿ ಬಿಡೋಣ. ಇಲ್ಲಿದ್ದರೆ ಅವನನ್ನು ಹೊಡೆದು ಕೊಂದೇ ಬಿಡುತ್ತಾರೆ. ಸರಿಯಲ್ಲ ಅದು. ಮಾನವೀಯತೆಯೂ ಅಲ್ಲ. ಮೊದಲು ಬೇರೆ ಎಲ್ಲಾದರೂ ಬಿಡೋಣ.. ನಡಿ. ಗಾಡಿ ಚಾಲೂ ಮಾಡು..' ಎಂದ.
              ಅಸಮಧಾನದಿಂದಲೇ ವಿಕ್ರಮ ಗಾಡಿಯನ್ನು ಚಾಲೂ ಮಾಡಿದ. ಗೊಣಗುತ್ತಲೇ ಉಳಿದವರೂ ಹತ್ತಿಕೊಂಡರು. ಉಂಚಳ್ಳಿ ಜಲಪಾತದಿಂದ ಅಂಕುಡೊಂಕಿನ ಹಾದಿಯಲ್ಲಿ ಮರಳಲು ಆರಂಭಿಸಿದರು. `ಏ.. ಏನ್ರೋ.. ನಿಮಗೆ ಮಾಡಲಿಕ್ಕೆ ಬೇರೆ ಕೆಲ್ಸಾ ಇಲ್ಲವಾ? ಹೋಗಿ ಹೋಗಿ ಈ ಕಾಡಿಗೆ ಬಂದು ಕಳ್ಳರನ್ನು ಹುಡುಕಲು ಹೊರಟಿದ್ದೀರಾ? ತಲೆ ಸರಿ ಉಂಟಾ? ಎಚ್ಚರ ತಪ್ಪಿದರೆ ಮರಗಳ್ಳರ ಗುಂಪು ನಿಮ್ಮನ್ನು ಕಡಿದು ಹಾಕಿ ಬಿಡಬಹುದು. ಹುಷಾರು..' ಎಂದು ಇದ್ದಕ್ಕಿದ್ದಂತೆ ಆ ಹುಚ್ಚ ಮಾತನಾಡಿದಾಗ ಒಮ್ಮೆಗೆ ಕಾರಲ್ಲಿದ್ದವರು ಬೆಚ್ಚಿ ಬಿದ್ದರು.

(ಮುಂದುವರಿಯುತ್ತದೆ..)

Thursday, October 29, 2015

ಸಜ್ಜನರೊಡನೆ.. ಸಜ್ಜನಘಡದ ಕಡೆಗೆ -3

           ಆಟೋದಲ್ಲಿ ಲಗೆಜ್ ಹೇರುವ ಜಾಗದಲ್ಲಿ ನಾನು ಕುಳಿತಿದ್ದೆ. ಉಸಿರು ಕಟ್ಟುತ್ತಿತ್ತು. ಆಟೋ ಓಡಿಸುತ್ತಿದ್ದ ಚಾಲಕನ ಬಳಿ ಸಂಜಯ ಮಾತಿಗೆ ನಿಂತಿದ್ದ. ಸಜ್ಜನಘಡಕ್ಕೆ ಹೋಗುವುದು ಹೇಗೆ ಎಂಬ ವಿವರಗಳನ್ನು ಕೇಳಲು ಆರಂಭಿಸಿದ್ದ. ಸಜ್ಜನಘಡಕ್ಕೆ ಬಸ್ ವ್ಯವಸ್ಥೆ ಬಹಳ ಕಡಿಮೆ ಇದೆಯೆಂದೂ, ಯಾವುದಾದರೂ ಖಾಸಗಿ ವಾಹನಗಳನ್ನು ಮಾಡಿಕೊಂಡು ಹೋಗಬಹುದೆಂದೂ ಆಟೋ ಚಾಲಕ ತಿಳಿಸಿದ. ಮಾತಿಗಿಳಿದಿದ್ದ ಸಂಜಯ ಆತನ ಹೆಸರು ನೀಲೇಶ ಮಂತ್ರಿ ಎಂಬುದನ್ನು ಕೇಳಿ ತಿಳಿದುಕೊಂಡ. ಸಂಜಯ ಆಟೋವನ್ನು ಮಾಡಿಸಿಕೊಂಡು ಹೋದರೆ ಹೇಗೆ ಎನ್ನುವ ಬಗ್ಗೆ ಪ್ರಶಾಂತ ಭಾವನ ಬಳಿ ಕೇಳಿದ. ರೇಟು ಎಷ್ಟಾಗಬಹುದು ಎನ್ನುವ ಚರ್ಚೆ ನಡೆಯಲಾಗಿ ಕೊನೆಗೊಮ್ಮೆ ಆಟೋ ಮಾಡಿಸಿಕೊಂಡು ಹೋಗೋಣ ಎಂದು ಎಲ್ಲರೂ ಒಪ್ಪಿಕೊಂಡರು. 600 ರು. ಗೆ ಮಾತಾಯಿತು.
          ಸತಾರಾ ನಗರಕ್ಕೆ ಬಂದು ಆಟೋ ನಿಲ್ಲಿಸಿ, ಆಟೋದಲ್ಲಿದ್ದ ಎಲ್ಲರನ್ನೂ ಇಳಿಸಿದ ಆಟೋ ದ್ರೈವರ್ ನಮ್ಮನ್ನು ಕೂರಿಸಿಕೊಂಡು ಪೆಟ್ರೂಲ್ ಬಂಕಿನತ್ತ ಸಾಗಿದ. ಬಂಕಿನಲ್ಲಿ ಪೆಟ್ರೂಲ್ ತುಂಬಿಸಿಕೊಂಡವನೇ ನಮ್ಮ ಬಳಿ ದುಡ್ಡು ಕೇಳಿದಾಗ ಒಮ್ಮೆಲೆ ನಮಗೆ ಪಿಗ್ಗಿ ಬಿದ್ದೆವೇನೋ ಅನ್ನುವ ಅನುಮಾನ. ಆದರೆ ಆತನ ಆಟೋವನ್ನು ನಾವು ಇಳಿಯುವ ಕೆಲಸ ಮಾತ್ರ ಮಾಡಲಿಲ್ಲ. ಹಾಗಾಗಿ ಎಲ್ಲೋಗ್ತಾನೆ ನೋಡೋಣ ಎನ್ನುವ ಧೈರ್ಯ ನಮ್ಮಲ್ಲಿ ಮೂಡಿತು.
           ಬೆಳಗಿನ ಜಾವ 5 ಗಂಟೆ ಆಗಿದ್ದ ಕಾರಣ ಸತಾರಾದಲ್ಲಿ ಯಾವುದೇ ಪೆಟ್ರೋಲ್ ಬಂಕುಗಳು ಬಾಗಿಲು ತೆರೆದಿರಲಿಲ್ಲ. ಸತಾರಾ ನಗರಿಯಲ್ಲಿ ಒಂದೆರಡು ಕಡೆಗಳಲ್ಲಿ ಸುತ್ತಾಡಿಸಿದ ಆಟೋ ಡ್ರೈವರ್. ಆಮೇಲೆ ಮಾತು ಶುರು ಮಾಡಿದ ನೋಡಿ. ಇನ್ನು ಸಜ್ಜನಘಡಕ್ಕೆ ಹೋಗುವ ವರೆಗೆ ಅವನ ಬಾಯಲ್ಲಿನ ವಿಷಯವನ್ನೇ ಹೇಳುತ್ತೇನೆ.
          `ಇದು ನೋಡಿ ಸತಾರಾದ ಕ್ರಿಕೆಟ್ ಸ್ಟೇಡಿಯಂ. ಇಲ್ಲಿ ರಣಜಿ ಪಂದ್ಯಗಳು ಜಾಸ್ತಿ ನಡೆಯುತ್ತವೆ.'
          `ಈ ಸತಾರಾ ಇದೆಯಲ್ಲ, ಮಹಾರಾಷ್ಟ್ರದ ದೊಡ್ಡ ಜಿಲ್ಲೆಗಳಲ್ಲಿ ಇದೂ ಒಂದು. ಎಲ್ಲ ಸೌಲಭ್ಯಗಳೂ ಇಲ್ಲಿದೆ. ಸತಾರಾದ ಸುತ್ತಮುತ್ತ ಒಟ್ಟೂ ಏಳು ದೊಡ್ಡ ದೊಡ್ಡ ಬೆಟ್ಟಗಳಿವೆ. ಇವನ್ನು ತಾರಾ ಎಂದು ಕರೆಯುತ್ತಾರೆ. ಏಳು ನಕ್ಷತ್ರಗಳಿರುವ ಈ ಊರಗೆ ಒಂದಾನೊಂದು ಕಾಲದಲ್ಲಿ ಸಾತ್ ತಾರಾ ಎಂದು ಕರೆಯುತ್ತಿದ್ದರಂತೆ. ಇದೇ ಈಗ ಸತಾರಾ ಆಗಿದೆ. ಇದೋ ನೋಡಿ, ಈಗ ಸರಿಯಾಗಿ ಕಾಣುವುದಿಲ್ಲ. ಪೂರ್ತಿ ಬೆಳಕಾಗಲಿ. ಇಲ್ಲೊಂದು ದೈತ್ಯ ಗುಡ್ಡವಿದೆ. ಗುಡ್ಡದ ಮೇಲೊಂದು ಕೋಟೆ. ಅದನ್ನು ಅಜಿಂಕ್ಯತಾರಾ ಎಂದು ಕರೆಯಲಾಗುತ್ತದೆ. ಈ ಸುತ್ತಮುತ್ತಲ ಪ್ರದೇಶಗಳೆಲ್ಲ ಹಿಂದೂ ಸಾಮ್ರಾಟ ಶಿವಾಜಿ ಓಡಾಡಿದ ನಾಡು. ಇಲ್ಲೆಲ್ಲ ಶಿವಾಜಿಯ ಖುರಪುಟದ ಸದ್ದುಗಳಿವೆ..' ಎಂದು ಆಟೋ ಡ್ರೈವರ್ ಹಿಂದಿ ಹಾಗೂ ಮರಾಠಿ ಮಿಶ್ರಿತ ಭಾಷೆಯಲ್ಲಿ ಹೇಳುತ್ತಲೇ ಇದ್ದ. ನಾವು ಮೌನವಾಗಿ ಕೇಳುತ್ತಿದ್ದರೂ ಮಧ್ಯಮದ್ಯದಲ್ಲಿ, ಗೊಂದಲ ಬಗೆಹರಿಸಿಕೊಳ್ಳುತ್ತಿದ್ದೆವು.
            ಸತಾರಾದ ಬಾನಿನಲ್ಲೀ ಸೂರ್ಯ ಇನ್ನೂ ಹುಟ್ಟಿರಲಿಲ್ಲ. ಮೋಡಗಳು ಸಾಕಷ್ಟು ದಟ್ಟೈಸಿದ್ದರೂ ಮಳೆ ಸುರಿಯುವ ಲಕ್ಷಣಗಳಿರಲಿಲ್ಲ. ಗುಡ್ಡ ಹತ್ತಿ, ಇಳಿದು ಆಟೋ ಸಾಗುತ್ತಲೇ ಇತ್ತು. ಇದ್ದಕ್ಕಿದ್ದಂತೆ ಸುರಂಗವೊಂದು ನಮ್ಮೆದುರು ಕಾಣಿಸಿತು. ಹಾದು ಹೋಗುತ್ತಿದ್ದಂತೆಯೇ ಆಟೋ ಡ್ರೈವರ್ ಬೆಳ್ಳಂಬೆಳಿಗ್ಗೆ ನನಗೆ ಸಮರ್ಥ ರಾಮದಾಸರನ್ನು ದರ್ಶನ ಮಾಡುವ ಭಾಗ್ಯವನ್ನು ನೀವು ಕರುಣಿಸಿದ್ದೀರಿ. ಪ್ರತಿದಿನ 4 ಗಂಟೆಗೆ ಎದ್ದು ನಾನು ಬಾಡಿಗೆ ಹೊಡೆಯಲು ಆರಂಭಿಸುತ್ತೇನೆ. ಆದರೆ ಅಪರೂಪಕ್ಕೆ ಮಾತ್ರ ಇಂತಹ ಅವಕಾಶ ನಮಗೆ ಲಭ್ಯವಾಗುತ್ತದೆ. ನಾನು ಇವತ್ತು ಧನ್ಯನಾಗಿದ್ದೇನೆ. ನಿಮ್ಮಬಳಿ ತಲಾ 50 ರು. ನಂತೆ ಜಾಸ್ತಿ ಪಡೆದುಕೊಂಡಿದ್ದೆನೆ ಎನ್ನುವುದು ನನಗೆ ಗೊತ್ತಿದೆ. ಆದರೆ ಇದು ಅನಿವಾರ್ಯ. ನಾನು ಈ ಕಾರಣದಿಂದಾಗಿ ನಿಮಗೆ ಒಂದು ತೋಫಾ ಕೊಡಲು ಇಷ್ಟ ಪಡುತ್ತೇನೆ..' ಎಂದ ಆಟೋ ಡ್ರೈವರ್.
            ಸೀದಾ ಚಹಾ ಅಂಗಡಿಯೊಂದರ ಬಳಿ ನಿಲ್ಲಿಸಿದ ಆತ. ನಿಲ್ಲಿಸಿದವನೇ ಪ್ರತಿಯೊಬ್ಬರಿಗೂ ಬಿಸ್ಸಿ ಬಿಸಿ ಚಹಾ ಆರ್ಡರ್ ಮಾಡಿದ. ಬೆಲ್ಲದ ಚಹ ಬಹಳ ಹಿತವಾಗಿತ್ತು. ಆಟೋದಿಂದ ಆಳಿಸಿದವನೇ ಒಮ್ಮೆ ಹಿಂತಿರುಗಿ ನೋಡಿ ಎಂದ. ನೋಡಿದೆವು. ಆಹ್, ಎಂತ ಸುಂದರ ದೃಶ್ಯ ಅದು. ದೊಡ್ಡದೊಂದು ಸುರಂಗ. ಸುರಂಗದ ನಡುವೆ ಕಾಣುತ್ತಿದ್ದ ಸತಾರಾದ ಮನೆ ಮನೆಗಳು. ಮನೆಮನೆಗಳಲ್ಲಿ ಬೆಳಗಿಸಿದ್ದ ವಿದ್ಯುತ್ ದೀಪಗಳು. ಅದೆಂತಹ ಆಕರ್ಷಕ. ಅದೆಂತಹ ಸೊಬಗು. ನಾವೆಲ್ಲ ಅದೆಷ್ಟು ಪೋಟೋಗಳನ್ನು ತೆಗೆಸಿಕೊಂಡೆವೋ. ಚಹಾ ಕುಡಿದಾದ ನಂತರ ಮತ್ತೆ ನಮ್ಮ ಪಯಣ ಸಾಗಿತು.
            `ನಮ್ಮವರೂ ಇದ್ದಾರೆ ಅದೆಲ್ಲೋ ದೂರ ದೂರದ ಸ್ಥಳಗಳಂತೆ, ಅಲ್ಲೆಲ್ಲಿಗೋ ಹೋಗುತ್ತಾರಂತೆ. ಆದರೆ ನೀವು ನೋಡಿ ದೂರದ ಕರ್ನಾಟಕದಿಂದ ನಮ್ಮ ಪ್ರದೇಶ ಅದರಲ್ಲೂ  ಮುಖ್ಯವಾಗಿ ಸ್ವಾಮಿ ಸಮರ್ಥರು ನಡೆದಾಡಿದ ಸ್ಥಳವನ್ನು ನೋಡಲು ಬಂದಿದ್ದೀರಿ. ನಮ್ಮವರಿಗೆ ಇದು ಗೊತ್ತೇ ಇಲ್ಲ. ಸ್ವಾಮಿ ಸಮರ್ಥರಾಮದಾಸರ ಸ್ಥಳದ ಬಗ್ಗೆ ಯಾರೂ ಗಮನ ಕೊಡುವುದೇ ಇಲ್ಲ. ನಮ್ಮವರಿಗೆ ನಮ್ಮದರ ಬಗ್ಗೆ ಅಸಡ್ಡೆ. ಆದರೆ ನಿಮ್ಮನ್ನು ನೋಡಿ ನನಗೆ ಬಹಳ ಸಂತೋಷವಾಗುತ್ತಿದೆ. ನಿಜಕ್ಕೂ ನೀವು ಪುಣ್ಯಪುರುಷರು. ನಿಮಗೆ ನಮಸ್ಕಾರಗಳನ್ನು ತಿಳಿಸಲೇಬೇಕು. ನೀವು ಅಲ್ಲಿಂದ ಬಂದಿದ್ದೀರಿ. ಬೆಳ್ಳಂಬೆಳಿಗ್ಗೆ ದೇಗುಲ ದರ್ಶನಕ್ಕೆ ಕಾರಣರಾಗುತ್ತಿದ್ದೀರಿ. ನಿಮಗೆ ನಾನೊಂದು ವ್ಯೂ ಪಾಯಿಂಟನ್ನು ತೋರಿಸುತ್ತೇನೆ. ಇದು ನನ್ನ ಇನ್ನೊಂದು ತೋಫಾ..' ಎಂದು ಆಟೋ ಡ್ರೈವರ್ ಮಾತನಾಡುತ್ತಲೇ ಇದ್ದ.
            ನಾವು ಅಷ್ಟರಲ್ಲಿ ಮಹಾಭಲೇಶ್ವರ, ರಾಯಘಡದ ಬಗ್ಗೆ ಕೇಳಿದೆವು. `ಮಹಾಭಲೇಶ್ವರದಲ್ಲೇನಿದೆ ಮಣ್ಣು. ನಿಜ. ಅಲ್ಲಿ ನೋಡುವಂತದ್ದು ಸಾಕಷ್ಟಿದೆ. ಆದರೆ ಎಲ್ಲವೂ ದುಬಾರಿ. ಆದರೆ ಸತಾರಾದಲ್ಲಿ ಹಾಗಲ್ಲ. ಸಜ್ಜನಘಡದಲ್ಲಂತೂ ಎಲ್ಲವೂ ಫ್ರಿ. ಊಟ, ವಸತಿ ಎಲ್ಲವೂ ಕೊಡುತ್ತಾರೆ. ಮಹಾಭಲೇಶ್ವರ ನೋಡುವುದು ಬೇಡ. ಸುಮ್ಮನೆ ನಿಮಗೆ ದುಡ್ಡು ಜಾಸ್ತಿಯಾಗಿದ್ದರೆ ಹೋಗಿ ಬನ್ನಿ ಅಷ್ಟೆ. ರಾಯಘಡವನ್ನು ನೋಡಬಹುದು. ಶಿವಾಜಿ ಮಹಾರಾಜರ ರಾಜಧಾನಿ ಅದು. ಚನ್ನಾಗಿದೆ ಎಂದು ಆತ ಉತ್ತರಿಸಿದ್ದ. ಆತನ ಉತ್ತರ ಕೇಳಿದ ನಾವು ರಾಯಘಡ ಹಾಗೂ ಮಹಾಭಲೇಶ್ವರವನ್ನು ನೋಡಿ ಬರುವ ಆಲೋಚನೆಯನ್ನು ಕೈಬಿಟ್ಟೆವು.
           ಶಿವಾಜಿ ಮಹಾರಾಜರು ಆರಂಭದಲ್ಲಿ ರಾಯಘಡವನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡರಂತೆ. ಆ ನಂತರ ಅವರಿಗೆ ಸಜ್ಜನಘಡದಲ್ಲಿ ಸ್ವಾಮಿ ಸಮರ್ಥ ರಾಮದಾಸರು ಇರುವ ಬಗ್ಗೆ ಮಾಹಿತಿ ಸಿಕ್ಕಿತಂತೆ. ರಾಮದಾಸರನ್ನು ಭೇಟಿಯಾಗಬೇಕು ಎಂದು ಶಿವಾಜಿ ಮಹಾರಾಜ್ ಕುದುರೆಯನ್ನೇರಿ ಬಂದರಂತೆ. ಸಿಟ್ಟು ಹಾಗೂ ಅಹಂಕಾರದಿಂದ ಸಜ್ಜನಘಡವನ್ನು ಏರಿ ಬಂದ ಸಂದರ್ಭದಲ್ಲಿ ಸಮರ್ಥ ರಾಮದಾಸರು ಧ್ಯಾನ ಹಾಗೂ ಪೂಜೆಯಲ್ಲಿ ನಿರತರಾಗಿದ್ದರಂತೆ. ಶಿವಾಜಿ ಬಂದು ಸಮರ್ಥ ರಾಮದಾಸರ ಎದುರು ಗತ್ತಿನಿಂದ ಕುಳಿತರಂತೆ. ಆದರೆ ರಾಮದಾಸರು ಅದನ್ನು ಗಮನಿಸಿಯೂ ಗಮನಿಸದಂತೆ ಉಳಿದರಂತೆ. ಕೊನೆಗೆ ಶಿವಾಜಿ ನಮಸ್ಕಾರ ಮಾಡಿ ಆಶಿರ್ವಾದ ಬೇಡಿದರಂತೆ. ಕೊನೆಗೆ ಸಮರ್ಥ ರಾಮದಾಸರು ಅತ್ಯಂತ ಮಿದುವಾದ ಕಲ್ಲನ್ನು ಹೊತ್ತುಕೊಂಡು ಬಾ. ಹುಡುಕಿ ತಾ. ಆಗ ಆಶಿರ್ವಾದ ಮಾಡುತ್ತೇನೆ. ಹಿಂದೂ ಸಾಮ್ರಾಟನಾಗುತ್ತೀಯಾ ಎಂದರಂತೆ. ಕೊನೆಗೆ ಶಿವಾಜಿ ಮಹಾರಾಜರು ಬಹಳ ಹುಡುಕಿ ಕೊನೆಗೊಂದು ಮೃದು ಕಲ್ಲನ್ನು ಹೊತ್ತು ತಂದರಂತೆ. ಆ ಕಲ್ಲನ್ನು ನೋಡಿದ ರಾಮದಾಸರು ಕೈಯಲ್ಲಿ ಮುಟ್ಟಿ `ಇದು ಗಟ್ಟಿಯಾಗಿದೆ. ಇನ್ನೂ ಮಿದುವಾದ ಕಲ್ಲನ್ನು ತನ್ನಿ..' ಎಂದರಂತೆ. ಕೊನೆಗೆ ಹುಡುಕಿ ತಂದಾಗ ಮತ್ತೆ ಇದೇ ಘಟನೆ ಪುನರಾವರ್ತನೆ ಆಯಿತಂತೆ. ಕೊನಗೊಮ್ಮೆ ಶಿವಾಜಿ ಮಹಾರಾಜರು ದಿಕ್ಕೆಟ್ಟು ಸೋತಂತಾಗಿ ಸಜ್ಜನಘಡಕ್ಕೆ ತೆರಳಿ ಸ್ವಾಮಿ ರಾಮದಾಸರ ಚರಣದಲ್ಲಿ ಶರಣಾದರಂತೆ. ಆಗ ಸಮರ್ಥ ರಾಮದಾಸರು ಹೇಳಿದ್ದೆಂದರೆ `ಮೃದುವಾದ ಕಲ್ಲು ಎಂದರೆ ಏನೆಂದುಕೊಂಡೆ ಮಹಾರಾಜಾ. ನೀನೇ ಮೃದುವಾದ ಕಲ್ಲು. ನೀನು ಕಲ್ಲಿನಷ್ಟು ಕಠಿಣ. ಆದರೆ ಸಿಟ್ಟು ಹಾಗೂ ಅಹಂಕಾರವನ್ನು ಬಿಟ್ಟು ಮೃದುವಾಗಿ ಬಾ ಎಂದು ಹೇಳಿದ್ದೆನಷ್ಟೇ ಎಂದು ಹೇಳಿದಾಗ ಶಿವಾಜಿ ಮಹಾರಾಜರ ಕಣ್ಣಿನಲ್ಲಿ ಆಶ್ರುಧಾರೆ ಸುರಿಯಲಾರಂಭಿಸಿತಂತೆ. ಆ ಕ್ಷಣದಲ್ಲಿ ಸಮರ್ಥ ರಾಮದಾಸರು ಶಿವಾಜಿ ಮಹಾರಾಜರ ತಲೆಯ ಮೇಲೆ ಕೈ ಇಟ್ಟು ಹಿಂದೂ ಸಾಮ್ರಾಟನಾಗಿ ಲೋಕವಿಖ್ಯಾತನಾಗಿ. ವಿಜಯೀಭವ ಎಂದು ಹರಸಿದರಂತೆ. ನಂತರದ ದಿನಗಳಲ್ಲಿ ಶಿವಾಜಿ ಮಹಾರಾಜ ಯಾವರೀತಿ ವಿಖ್ಯಾತಿ ಗಳಿಸಿದ ಎನ್ನುವುದು ಇತಿಹಾಸ ಎಂದು ಆಟೋ ಡ್ರೈವರ್ ದೀರ್ಘವಾಗಿ ಹೇಳಿದಾಗ ನಮಗೆ ಒಮ್ಮೆಲೆ ಮೈಯೆಲ್ಲ ಪುಳಕವಾಯಿತು. ನಾವು ಆಟೋ ಡ್ರೈವರ್ ಜೊತೆ ಬಂದಿದ್ದೇವೋ ಅಥವಾ ಸತಾರಾದ ಸಮಗ್ರ ಮಾಹಿತಿಯನ್ನು ತಿಳಿದುಕೊಂಡು ಬಂದಿರುವ ಗೈಡ್ ಜೊತೆ ಬಂದಿದ್ದೇವೋ ಎನ್ನುವ ಅನುಮಾನವೂ ನಮ್ಮನ್ನು ಕಾಡಿತು. 600 ರು. ಕೊಟ್ಟಿದ್ದಕ್ಕೂ ಅನ್ಯಾಯವಾಗಲಿಲ್ಲ ಎಂದುಕೊಂಡೆವು.
          `ಶಿವಾಜಿ ಮಹಾರಾಜರು ನಂತರದ ದಿನಗಳಲ್ಲಿ ಸಜ್ಜನಘಡಕ್ಕೆ ದೊಡ್ಡದೊಂದು ದ್ವಾರವನ್ನು ಕಟ್ಟಿಸಿದರು. ಕೋಟೆಯೊಂದನ್ನು ನಿರ್ಮಾಣ ಮಾಡಿದರು. ಅಷ್ಟೇ ಅಲ್ಲ. ಅಲ್ಲಿ ಒಂದೆರಡು ದೇಗುಲಗಳ ಕಟ್ಟಡವನ್ನೂ ಕಟ್ಟಿಸಿದರು. ಇದೇ ಸಜ್ಜನಘಡದಲ್ಲಿಯೇ ಮಾಫಳಾ ಯುವಕರ ಜೊತೆ ಸೇರಿ ರಕ್ತ ತರ್ಪಣ ನೀಡಿ ಹಿಂದೂ ರಕ್ಷಣೆಗೆ ಶಿವಾಜಿ ಪಣ ತೊಟ್ಟಿದ್ದು. ಒಮ್ಮೆ ನೀವು ಈ ನಾಡಿನಲ್ಲಿ ಶಿವಾಜಿ ಮಹಾರಾಜ ಕುದುರೆಯ ಮೇಲೆ ಹೋಗುತ್ತಿದ್ದುದನ್ನು ಕಲ್ಪನೆ ಮಾಡಿಕೊಳ್ಳಿ ಎಂದ. ನಮಗೆ ಮೈಯೆಲ್ಲ ಒಮ್ಮೆಗೆ ರೋಮಾಂಚನ.
           ನಿಧಾನವಾಗಿ ಬೆಳಗಾಗುತ್ತಿತ್ತು. ಆಕಾಶದೆತ್ತರದ ದೂರದಲ್ಲೊಂದು ಬೆಳಕಿನ ಬಿಂಬವನ್ನು ತೋರಿಸಿದ ಆಟೋ ಡ್ರೈವರ್ ಅದೋ ನೋಡಿ ಅಲ್ಲಿಯೇ ಸಜ್ಜನ ಘಡ ಇದೆ. ನಾವು ಅದನ್ನು ಏರಬೇಕು ಎಂದ. ಕತ್ತನ್ನು ಎತ್ತಿ ನೋಡಿ ಹಿತವಾಗಿ ನೋವು ಮಾಡಿಕೊಂಡೆವು. ಸತಾರಾದಿಂದ 17 ಕಿ.ಮಿ ದೂರದಲ್ಲಿರುವ ಸಜ್ಜನಘಡಕ್ಕೆ ಹೋಗುವ ಸಲುವಾಗಿ ಆಟೋ ಏರಿದ್ದ ನಾವು ಅಂಕುಡೊಂಕಿನ ದಾರಿಯಲ್ಲಿ ಸಾಗುತ್ತಲೇ ಇದ್ದೆವು. ಬೆಳಗಿನ ಮುಂಜಾವು ನಮ್ಮನ್ನು ಹಿತವಾಗಿ ಚುಂಬಿಸುತ್ತಿತ್ತು. ಮಂಜಿನ ಹನಿಗಳು ಮುತ್ತಿಕ್ಕುತ್ತಿದ್ದವು. ಅಲ್ಲಿಯೇ ಇದ್ದ ಮಿಲಿಟರಿ ಕ್ಯಾಂಪನ್ನು ನೀಲೇಶ ಮಂತ್ರಿ ತೋರಿಸಿದ. ಮರಾಠಾ ಪ್ಲಟೂನ್ ಇಲ್ಲಿಯೇ ತಯಾರಾಗುತ್ತದೆ. ಇಲ್ಲಿ ತರಬೇತಿ ಪಡೆದವರು ಪ್ರತಿಯೊಬ್ಬರೂ ಸೈನ್ಯಕ್ಕೆ ಆಯ್ಕೆಯಾಗುತ್ತಾರೆ ಎಂದು ಹೆಮ್ಮೆಯಿಂದ ಹೇಳಿದ. ನಮಗೂ ಹೆಮ್ಮೆ ಎನ್ನಿಸಿ ಎದೆಯುಬ್ಬಿತು.

(ಮುಂದುವರಿಯುತ್ತದೆ)

Wednesday, October 21, 2015

ಸಜ್ಜನರೊಡನೆ.. ಸಜ್ಜನಘಡದ ಕಡೆಗೆ - 2

          ಹುಬ್ಬಳ್ಳಿಯಿಂದ ಧಾರವಾಡಕ್ಕೆ ಬಂದಿದ್ದರೂ ರೈಲು ವೇಗವಾಗಿ ಸಾಗುತ್ತಿರಲಿಲ್ಲ. ಲೋಂಡಾ, ಅಳ್ನಾವರ, ಖಾನಾಪುರ ಮೂಲಕ ಬೆಳಗಾವಿಗೆ ಹೋಗುತ್ತಿತ್ತು ರೈಲು. ಖಾಲಿ ಖಾಲಿ ರೈಲು. ನಾನು, ಸಂಜಯ ಹಾಗೂ ಪ್ರಶಾಂತ (ನಿರಂತರ ಚಲನೆಯಲ್ಲಿರುವ ಖ್ಯಾತಿಯ) ಸಾಕಷ್ಟು ಹಲುಬಿಕೊಳ್ಳುತ್ತ ಸಾಗಿದೆವು. ನಮ್ಮ ಪಕ್ಕದಲ್ಲಿ ಒಂಟಿ ಸೀಟಿನಲ್ಲಿ ಒಬ್ಬಾತ ಗಡವನಂತನು ಬಂದು ಕುಳೀತುಕೊಂಡಿದ್ದ. ಆತನಿಗೆ ಆಗಲೇ ನಿದ್ದೆ. ಬಾಯಿಂದಂತೂ ಸಪ್ತಸ್ವರಗಳೂ ಸಮ್ಮಿಳಿತವಾಗಿ ಗೊರ್.. ಎನ್ನುತ್ತ ಬರುತ್ತಿದ್ದವು.
           ಧಾರವಾಡ ಕಳೆದ ನಂತರ ನಿಧಾನವಾಗಿ ವಾತಾವರಣ ಬದಲಾಗತೊಡಗಿತು. ಪ್ರಶಾಂತ ಭಾವ ತನ್ನ ಮೊಬೈಲಿನಲ್ಲಿದ್ದ ಹಲವು ಆಪ್ ಗಳನ್ನು ನನ್ನ ಮೊಬೈಲಿಗೆ ರವಾನೆ ಮಾಡತೊಡಗಿದ. ಜಿಪಿಎಸ್, ಅದು, ಇದು ಎಂಬಂತೆ ಬಹಳಷ್ಟು ಆಪುಗಳು ನನ್ನ ಮೊಬೈಲಿಗೆ ಬಂದವು. ರೈಲಿಗೆ ವೇಗವಿನ್ನೂ ಸಿಕ್ಕಿರಲಿಲ್ಲ. ಬರಬರುತ್ತ ಹಸಿರು ಹೆಚ್ಚಾಯಿತು. ಅಳ್ನಾವರ ಬರುವ ಮುನ್ನ ನಾಲ್ಕೈದು ಕಿಲೋಮೀಟರ್ ದೂರ ಉತ್ತರ ಕನ್ನಡ ಜಿಲ್ಲೆಯಲ್ಲಿ ರೈಲು ಮಾರ್ಗ ಹಾದು ಹೋಗಿದೆ. ನಾನು ಪ್ರಶಾಂತ ಹಾಗೂ ಸಂಜಯನ ಬಳಿ ಈ ವಿಷಯವನ್ನು ಹೇಳಿ ವಾದಿಸಿದೆ. ಅವರು ಸಾಧ್ಯವೇ ಇಲ್ಲ ಎಂದು ಹೇಳಿದರೆ ನಾನು ಇದೆ ಎಂದು ಹೇಳುತ್ತಿದೆ. ನನ್ನ ಬಳಿ ಸೂಕ್ತ ಸಾಕ್ಷ್ಯ ಹಾಗೂ ದಾಖಲೆಗಳಿರದಿದ್ದ ಕಾರಣ ಸುಮ್ಮನಾದೆ.
           ಎಲ್ಲೋ ಮಳೆ ಬಿದ್ದಿರಬೇಕು. ನಾವು ಹೋರಟಿದ್ದು ಮಳೆಗಾಲವಾದರೂ ಹಾಗನ್ನಿಸುತ್ತಿರಲಿಲ್ಲ. ರಭಸದಿಂದ ಸುರಿಯಬೇಕಿದ್ದ ಮಳೆ ನಾಪತ್ತೆಯಾಗಿತ್ತು. ಆಗೊಮ್ಮೆ ಈಗೊಮ್ಮೆ ತುಂತುರು ಮಳೆ ಮಾಲೆ ಮಾಲೆಯಾಗಿ ಇಳಿಯುತ್ತಿತ್ತು. ದಾರಿಯಲ್ಲಿ ಕಾಣುವ ನದಿ, ಹಳ್ಳ, ತೊರೆಗಳಲ್ಲೆಲ್ಲ ನೀರಿದೆಯೇ ಎಂದು ಇಣುಕುತ್ತಿದ್ದೆವು. ಯಾವುದೋ ಒಂದೆರಡು ಹೊಳೆ ಹಳ್ಳಗಳು ತುಂಬಿ ಹರಿಯುತ್ತಿದ್ದವು. ಅಜಮಾಸು 5 ಅಥವಾ ಇನ್ನೂ ಜಾಸ್ತಿ ಗಂಟೆಯೇನೋ, ಅಳ್ನಾವರ ಹಾಗೂ ಲೋಂಡಾಗಳನ್ನು ದಾಟಿದ ನಮ್ಮ ಚುಕುಬುಕು ರೈಲು ಖಾನಾಪುರಕ್ಕೂ ಬಂದಿತು. 15 ನಿಮಿಷಕ್ಕೊಮ್ಮೆಯೋ ಅಥವಾ 30 ನಿಮಿಷಕ್ಕೆ ಒಮ್ಮೆ ಎಂಬಂತೆಯೋ ನಿಂತು ನಿಂತು ಸಾಗುತ್ತಿದ್ದ ರೈಲು ನಿಧಾನಕ್ಕೆ ರಶ್ಶಾಗತೊಡಗಿತು.
           ಸಂಜಯ ತನ ಡಿಎಸ್.ಎಲ್.ಆರ್ ಕ್ಯಾಮರಾಕ್ಕೆ ಆಗಲೇ ಕೆಲಸ ಕೊಟ್ಟಿದ್ದ. ನಾನು ಹಾಗೂ ಪ್ರಶಾಂತ ಭಾವ ಸಾಧ್ಯವಾದಷ್ಟು ಪೋಟೋಗಳನ್ನು ಮೊಬೈಲಿನಲ್ಲಿಯೇ ಕ್ಲಿಕ್ಕಿಸಿಕೊಂಡೆವು. ಬಾಯಲ್ಲಿ ಬಾ ಮಳೆಯೇ ಬಾ.. ಎಂಬ ಹಾಡೂ ಗುನುಗುತ್ತಿತ್ತು. ದಾರಿಯಲ್ಲಿ ಎಲ್ಲೋ ಒಂದೆರಡು ಕಡೆಗಳಲ್ಲಿ ರೈಲುಗಳು ಅಡ್ಡಾದವು. ವೇಗದ ರೈಲುಗಳು ದಡದಡನೆ ಸಾಗುತ್ತಿದ್ದರೆ ಪಕ್ಕದಲ್ಲಿಯೇ ನಿಂತ ನಾವು ಪೋಟೋ ಕ್ಲಿಕ್ಕಿಸಿ ಹಿತವಾಗಿ ಬೆಚ್ಚಿದ್ದೆವು.
            ಈ ನಡುವೆ ಇನ್ನೊಂದು ವಿಷಯ ಹೇಳಲೇಬೇಕು ನೋಡಿ. ಧಾರವಾಡ ದಾಟಿ ರೈಲು ಮುಂದೆ ಹೋಗುತ್ತಿದ್ದಂತೆ ಟಿಸಿ ಬಂದು ತಪಾಸಣೆಗೆ ಇಳಿದ. ನಾನು ಹಾಗೂ ಸಂಜಯ ಟಿಕೆಟ್ ಕೊಟ್ಟು ನಮ್ಮ ಗುರುತಿನ ಚೀಟಿಯನ್ನು ನೀಡಿದೆವು. ಪ್ರಶಾಂತ ಭಾವನ ಬಳಿ ಗುರುತಿನ ಚೀಟಿ ತೋರಿಸು ಎಂದರೆ ಚೀಟಿ ಎಲ್ಲಿದೆ? ವೋಟಿಂಗ್ ಕಾರ್ಡ್, ರೇಶನ್ ಕಾರ್ಡ್, ಆಧಾರ್ ಕಾರ್ಡುಗಳ ಝೆರಾಕ್ಸ್ ತಂದಿದ್ದ. ಟಿಸಿ ವರಾತ ಶುರುಮಾಡಿದ. ಒರಿಜಿನಲ್ ದಾಖಲೆಗಳನ್ನು ತೋರಿಸಿ, ಝೆರಾಕ್ಸ್ ಬೇಡ ಎಂದ. ಎಷ್ಟು ಹುಡುಕಿದರೂ ಒರಿಜಿನಲ್ ಸಿಗಲಿಲ್ಲ.
           ಕೊನೆಗೆ 500 ರು. ದಂಡ ಕಟ್ಟಬೇಕಾಗುತ್ತದೆ ಎನ್ನಲು ಆರಂಭಿಸಿದ. ಸಂಜಯ ಟಿಸಿ ಬಳಿ ಮಾತಿಗೆ ನಿಂತ. ರೈಲ್ವೆ ರೂಲ್ಸು, ರೆಗ್ಯುಲೇಶನ್ನುಗಳನ್ನೆಲ್ಲ ಪಟಪಟನೆ ಮಾತನಾಡಿದ. ಹೀಗಿದ್ದಾಗಲೇ ಟಿಸಿ ಪ್ರಶಾಂತ ಭಾವನ ಬಳಿ ನೀವೇನು ಕೆಲಸ ಮಾಡುತ್ತಿದ್ದೀರಿ ಎಂದ. ಭಾವ ಕೃಷಿ ಎಂದು ಉತ್ತರಿಸಿದ. ಸಂಜಯನೂ ಕೃಷಿ ಮಾಡುತ್ತಿದ್ದೇನೆ ಎಂದ. ನನ್ನ ಬಳಿಯೂ ಕೇಳಿದ. ಕೊನೆಗೆ ನಾನು ಪತ್ರಕರ್ತ ಎಂದೆ. ಎಲ್ಲಿ ನಿನ್ನ ಕಾರ್ಡ್ ತೋರಿಸು ನೋಡೋಣ ಎಂದ. ಕಾರ್ಡ್ ನೋಡಿದವನೇ ಸ್ವಲ್ಪ ಅನುಮಾನ ಮಾಡಿದ. ಮೊದಲೇ ಹೇಳಿದ್ದರೆ ಆಗುತ್ತಿರಲಿಲ್ಲವಾ ಎಂದ. ನಾನು ಮಿಕಿ ಮಿಕಿ ನೋಡಿದೆ. ಇನ್ನೊಮ್ಮೆ ಬರುವಾಗ ಝೆರಾಕ್ಸ್ ಅಲ್ಲ. ಎಲ್ಲ ಒರಿಜಿನಲ್ ದಾಖಲೆಗಳನ್ನೇ ತನ್ನಿ ಎಂದು ಹೇಳಿ ಹೊರಟುಹೋದ.
           `ಮಾರಾಯಾ.. ನೀನು ಪತ್ರಕರ್ತ ಹೇಳಕಾಗಿತ್ತಿಲ್ಲೆ. ಟಿಸಿ ಎಂತಾ ಮಾಡ್ತ ನೋಡ್ಲಾಗಿತ್ತು..' ಎಂದು ಸಂಜಯ ಹೇಳಿದ. `ಸುಮ್ನೆ ಎಂತಾ 500 ರು. ಕೊಡ್ತಿದ್ರಾ ಮಾರಾಯಾ..' ಎಂದೆ. ಹೌದೆನ್ನಿಸಿರಬೇಕು ಸುಮ್ಮನಾದರು.
              ರೈಲಿನಲ್ಲಿ ಹೋಗುತ್ತಿದ್ದ ನಮಗೆ ಇದ್ದಕ್ಕಿದ್ದಂತೆ ಆಲೋಚನೆಯೊಂದು ಮೂಡಿತು. ಯಾವಾಗಲೂ ನಾವು ಜೊತೆಗೂಡಿದರೆ ಎಲ್ಲಾದರೂ ಹೋಗಬೇಕು ಎನ್ನಿಸಿದರೆ ತಕ್ಷಣಕ್ಕೆ ಹೊರಟುಬಿಡುತ್ತೇವೆ. ಸಜ್ಜನಘಡಕ್ಕೂ ಹೀಗೆಯೇ. ದಿಢೀರ್ ನಿರ್ಧಾರ ಮಾಡಿ ಹೊರಟಿದ್ದೇ. ರೈಲಿನಲ್ಲಿ ಹೋಗುವಾಗ ಪ್ರಶಾಂತ ಭಾವ ಇದ್ದಕ್ಕಿದ್ದಂತೆ `ಹೋಯ್.. ಉತ್ತರ ಭಾರತಕ್ಕೆ ಹೊರಟು ಬಿಡೋಣ್ವಾ..?' ಎಂದ. ನಾನು ಹಾಗೂ ಸಂಜಯ ಇಬ್ಬರೂ ಇಂತದ್ದೇ ಮನೋಭಾವದವರು. ಹೋ.. ಹೋಗೋಣ ಎಂದು ತಯಾರಾದೆವು. `ನೋಡೋಣ. ಮೊದಲು ಸಜ್ಜನಘಡಕ್ಕೆ ಹೋಗಿ ಆ ನಂತರ ಆಲೋಚನೆ ಮಾಡೋಣ..' ಎಂದ ಪ್ರಶಾಂತ ಭಾವ. ನಾವು ತಲೆಯಲ್ಲಾಡಿಸಿದೆವು.
                   ಬೆಳಗಾವಿ ತಲುಪುವ ವೇಳೆಗೆ ಸೂರ್ಯನೂ ಬಾನಂಚಿನಲ್ಲಿ ರಥವನ್ನು ಹೋಡಿ ಹೋಗಿದ್ದ. ಬೆಳಗಾವಿ ತಲುಪುವ ವೇಳೆ ರೈಲಿನಲ್ಲಿ ಸುಮಾರು ಜನವೋ ಜನ. ಅಲ್ಲಿಂದ ಮುಂದಕ್ಕೆ ರೈಲು ಚಲಿಸಿದಂತೆಲ್ಲ ನಿಧಾನವಾಗಿ ಕತ್ತಲು ಆವರಿಸಿತು. ಗೋಕಾಕ ರೋಡ್, ಘಟಪ್ರಭಾ, ಚಿಕ್ಕೋಡಿ ಕ್ರಾಸ್ ಈ ಮುಂತಾದ ಪ್ರದೇಶಗಳನ್ನು ದಾಟಿದ ರೈಲು ಕೊನೆಗೊಮ್ಮೆ ಮಹಾರಾಷ್ಟ್ರಕ್ಕೆ ಕಾಲಿಟ್ಟಿತು. ಮಹಾರಾಷ್ಟ್ರಕ್ಕೆ ಬಂದಿದ್ದೇವೆ ಎನ್ನುವುದರ ಕುರಹಾಗಿ ನಮ್ಮ ಮೊಬೈಲ್ ರೋಮಿಂಗ್ ಏರಿಯಾದಲ್ಲಿದೆ ಎನ್ನುವುದನ್ನು ಸಾರಿ ಸಾರಿ ಹೇಳುತ್ತಿತ್ತು.
             ಅದೇ ಸಂದರ್ಭದಲ್ಲಿ ರಾತ್ರಿಯ ಊಟ ಮಾಡಬೇಕಿತ್ತು. ಪ್ರಶಾಂತ ಭಾವ ಇಡ್ಲಿಯನ್ನು ಕಟ್ಟಿಸಿಕೊಂಡು ಬಂದ. ಗಡದ್ದಾಗಿ ತಿಂದೆವು. ಮಲಗಿ ನಿದ್ರಿಸೋಣವೇ? ಎಂದುಕೊಂಡರೆ ನಿದ್ದೆ ಬರಲೊಲ್ಲದು. ಮರುದಿನ ಮುಂಬಯಿಯಲ್ಲಿ ಎಫ್.ಡಿ.ಎ ಎಕ್ಸಾಂ ಇದ್ದ ಕಾರಣ ಒಂದಷ್ಟು ಯುವಕರು ನಾವಿದ್ದಲ್ಲಿ ಬಂದು ಕುಳಿತರು. ಬಂದವರೇ ಹರಟೆಗೆ ಕುಳಿತರು.
                 ನಿಧಾನಕ್ಕೆ ನಮ್ಮನ್ನು ನಿದ್ದೆ ಆವರಿಸುತ್ತಿತ್ತು. ಆ ಹುಡುಗರೂ ಮರಾಠಿ ಹಾಗೂ ಹಿಂದಿಯಲ್ಲಿ ಮಾತನಾಡುತ್ತಿದ್ದರು. ಅವರಲ್ಲೊಬ್ಬನಿಗೆ ಅಲ್ಪ ಸ್ವಲ್ಪ ಕನ್ನಡ ಬರುತ್ತಿತ್ತು. ಅವರೊಂದಿಗೆ ಸಾಕಷ್ಟು ಸಮಯ ಹರಟೆ ಹೊಡೆದೆವು. ಕೊನೆಗೊಮ್ಮೆ ಸಾಂಗ್ಲಿ ಹಾಗೂ ಮಿರಜನ್ನು ದಾಟಿದ ರೈಲು ಮುಂದಕ್ಕೆ ಸಾಗಿತು. ರಾತ್ರಿಯಾಗಿ ಬಹಳ ಹೊತ್ತು ಸಂದಿತ್ತು. ಕೊನೆಗೂ ಒಮ್ಮೆ ನಮ್ಮ ನಿಗದಿತ ಗಮ್ಯ ಸಿಕ್ಕಿತು. ಮಧ್ಯರಾತ್ರಿ 12.10ರ ವೇಳೆಗೆ ನಾವು ಇಳಿಯಬೇಕಿದ್ದ ಸತಾರಾ ಹತ್ತಿರ ಬಂದಿತು. ಲಗುಬಗೆಯಿಂದ ಇಳಿದೆವು.
            ಇಳಿದವರು ಹೋಗುವುದೆಲ್ಲಿ? ಸತಾರಾ ರೈಲ್ವೆ ನಿಲ್ದಾಣದಿಂದ ಬಸ್ ನಿಲ್ದಾಣಕ್ಕೆ ಅಥವಾ ಮುಖ್ಯ ಪೇಟೆಗೆ ಅಜಮಾಸು 8-10 ಕಿಮಿ ದೂರವಿದೆ. ರಾತ್ರಿ ಯಾವುದೇ ವಾಹನ ಸಂಚಾರ ಇರುವುದಿಲ್ಲ. ಯಾವುದಾದರೂ ಹೊಟೆಲಿಗೋ, ಲಾಡ್ಜಿಗೋ ಹೋಗಿ ಉಳಿಯೋಣ ಎಂದರೆ ಅದು ಸಾಧ್ಯವಿಲ್ಲದ ಮಾತು ಬಿಡಿ. ಕೊನೆಗೊಮ್ಮೆ ಅಲ್ಲಿಯೇ ಬಿಸ್ಸಿ ಬಿಸಿ ಕಾಫಿ ಕುಡಿದೆವು. ರೈಲ್ವೆ ನಿಲ್ದಾಣದಲ್ಲಿಯೇ ಮಲಗಿ ನಿದ್ರಿಸೋಣ ಎಂದುಕೊಂಡೆವು. ಪ್ರಶಾಂತ ಭಾವ ನಿಲ್ದಾಣದಲ್ಲಿಯೇ ಇದ್ದ ಪೊಲೀಸರ ಬಳಿ ಮಾತನಾಡಲು ಆರಂಭಿಸಿದ. ಪೊಲೀಸರು ಹೇಳಿದ ಪ್ರಕಾರ ಸಜ್ಜನಘಡ ಸತಾರಾದಿಂದ 18 ಕಿಮಿ ದೂರದಲ್ಲಿತ್ತು. ದಿನಕ್ಕೆ 3 ಬಸ್ಸುಗಳು ಹೋಗುತ್ತಿದ್ದವು. ಯಾವುದಾದರೂ ವಾಹನ ಮಾಡಿಕೊಂಡು ಹೋಗಬೇಕಿತ್ತು. ಅಲ್ಲದೇ ಸತಾರಾ ರೈಲ್ವೆ ನಿಲ್ದಾಣದಿಂದ ಸತಾರಾ ನಗರಕ್ಕೆ ಹೋಗಲು ಬೆಳಗಿನವರೆಗೆ ಯಾವುದೇ ವಾಹನ ಸೌಲಭ್ಯ ಇಲ್ಲ ಹಾಗೂ ರಾತ್ರಿ ಜಪ್ಪಯ್ಯ ಅಂದರೂ ಯಾವುದೇ ಹೊಟೆಲಿನವರು ಉಳಿಯಲು ರೂಮು ಕೊಡುವುದಿಲ್ಲ. ಆದ್ದರಿಂದ ರೈಲ್ವೆ ನಿಲ್ದಾಣದಲ್ಲಿಯೇ ಮಲಗಿಕೊಳ್ಳಿ ಎಂದರು.
          ನಿಲ್ದಾಣದಲ್ಲಿದ್ದ ಎರಡು ಸೀಟಿನ ಮೇಲೆ ನಾನು, ಸಂಜಯ ಹಾಗೂ ಪ್ರಶಾಂತ ಭಾವ ಅಡ್ಡಾದೆವು. ಪಕ್ಕದಲ್ಲಿಯೇ ದೊಡ್ಡದೊಂದು ಮರವಿತ್ತು. ಅದರ ತುಂಬಾ ಹಕ್ಕಿಗಳಿದ್ದವು. ರಪ್ಪನೆ, ಪಿಚ್ಚನೆ ಹಿಕ್ಕೆಯನ್ನು ಹಾಕುತ್ತಿದ್ದವು. ಅದು ನಮ್ಮ ಮುಖ ಹಾಗೂ ಮೈಮೇಲೆ ಬೀಳುತ್ತಿತ್ತು. ಅದನ್ನು ತಪ್ಪಿಸಿಕೊಳ್ಳಬೇಕು ಎಂದು ಮುಖಕ್ಕೆ ಟವೆಲ್ ಹೊದ್ದುಕೊಂಡು ಮಲಗಿದೆವು. ಸ್ವಲ್ಪ ಸಮಯದಲ್ಲಿ ಅಲ್ಲಿಯೇ ಇದ್ದ ಪೊಲೀಸರು ಮತ್ತೆ ನಮ್ಮನ್ನು ಎಬ್ಬಿಸಿದರು. ಎಬ್ಬಿಸಿದವರೇ ಪಕ್ಕದಲ್ಲಿದ್ದ ಪ್ರವಾಸಿ ಬಂಗಲೆ ತೋರಿಸಿ ಅಲ್ಲಿ ಹೋಗಿ ಮಲಗಿಕೊಳ್ಳಿ, ಯಾವುದೇ ತೊಂದರೆ ಇಲ್ಲ ಎಂದರು.
            ಪ್ರವಾಸಿ ಬಂಗಲೆಯೆಂದರೆ ಮಲಗಲಿಕ್ಕೆ ಬಹಳ ಅವಕಾಶ ಇರುತ್ತದಲ್ಲ ಎಂದುಕೊಂಡು ಖುಷಿಯಿಂದ ಹೋದವರಿಗೆ ನಿರಾಸೆ ಕಾದಿತ್ತು. ಅಲ್ಲೇನಿದೆ ಮಣ್ಣು. ದೊಡ್ಡದೊಂದು ರೂಮು ಬಿಟ್ಟರೆ ಇನ್ನೇನೋ ಇಲ್ಲ. ಪಕ್ಕದಲ್ಲಿ ಎರಡು ಬಾಂಕುಗಳಿದ್ದವು. ಬಾಂಕಿನ ಮೇಲಿನ ಭಾಗದಲ್ಲಿ ಪ್ರಶಾಂತ, ಮಧ್ಯ ಭಾಗದಲ್ಲಿ ಸಂಜಯ ಹಾಗೂ ಕೆಳಭಾಗದಲ್ಲಿ ನಾನು ಮಲಗುವುದೆಂದು ತೀರ್ಮಾನವಾಯಿತು. ಆಗಲೇ 1.30 ದಾಟಿ 2 ಗಂಟೆಯತ್ತ ಗಡಿಯಾರ ಚಲಿಸುತ್ತಿತ್ತು. ಸೊಳ್ಳೆ ಕಾಟ ಬೇರೆ. ಬಾಂಕಿನ ಮೇಲೆ ಬಿದ್ದುಕೊಂಡೆವು. ಪ್ರಶಾಂತ ಭಾವ ಹಾಗೂ ಸಂಜಯನಿಗೆ ನಿದ್ದೆ ಬಂದಿತ್ತೇನೋ. ನನಗೆ ಮಾತ್ರ ಏನು ಮಾಡಿದರೂ ನಿದ್ದೆ ಹತ್ತಿರ ಸುಳಿಯುತ್ತಿಲ್ಲ. ಬಾಂಕಿನ ಮೇಲೆ ಹೊರಳಾಡಿದೆ. ಸೊಳ್ಳೆಗಳು ಕೂಡ ಮೈಮೇಲೆ ದಾಳಿ ಮಾಡುತ್ತಿದ್ದೆವು.ಸ್ವಲ್ಪ ನಿದ್ದೆ ಜೊಂಪು ಬಂದಂತಾಗಿತ್ತು. ಪ್ರಶಾಂತಭಾವ ಎಬ್ಬಿಸಿದ್ದ. 4.30 ಆಗುತ್ತಿತ್ತು. ಮುಖ ತೊಳೆದ ಶಾಸ್ತ್ರ ಮಾಡಿದವರೇ ಸತಾರಾ ಬಸ್ ನಿಲ್ದಾಣಕ್ಕೆ ಹೋಗಬೇಕು ಎಂದುಕೊಂಡೆವು.
          5 ಗಂಟೆಯಿಂದ ವಾಹನ ಓಡಾಡಲು ಆರಂಭವಾಗುತ್ತದೆ ಎಂದು ಪೊಲೀಸ ಹೇಳಿದ್ದ ನೆನಪು. ರೈಲ್ವೆ ನಿಲ್ದಾಣದಿಂದ ಹೊರಗೆ ಬಂದು ನೋಡಿದರೆ ಯಾವ ದಿಕ್ಕಿನಲ್ಲಿ ಸಾಗಬೇಕು ಎನ್ನುವುದರ ಕುರಿತು ಅಂತ-ಪಾರವೇ ಹರಿಯುತ್ತಿಲ್ಲ. ಕತ್ತಲೆಯಲ್ಲಿ ಒಂದು ದಾರಿಯಲ್ಲಿ ಹೋದೆವು. ಯಾಕೋ ಆ ದಾರಿ ಸರಿಯಲ್ಲ ಎನ್ನಿಸಿತು. ಮತ್ತೊಂದು ದಾರಿಯನ್ನು ಹಿಡಿದೆವು. ಆ ದಾರಿಯೂ ತಪ್ಪು ಎಂದೆನ್ನಿಸಿ ವಾಪಾಸು ಬಂದೆವು. ಕೊನೆಗೊಮ್ಮೆ ನಾನು ಮತ್ತೆ ಜಿಪಿಎಸ್ ಹಾಕಿ ನೋಡಿ ನಾವು ಹೋಗಬೇಕಿದ್ದ ದಾರಿಯನ್ನು ಹುಡುಕಿದೆ. ಮೂರ್ನಾಲ್ಕು ದಾರಿ ಕಾಣಿಸಿತು. ಮತ್ತೆ ಗೊಂದಲ. ಕೊನೆಗೆ ಯಾವುದೋ ಒಂದು ದಾರಿ ಕಾಣಿಸಿ, ಏನಾದರಾಗಲಿ ಇದರಲ್ಲಿಯೇ ಹೋಗೋಣ ಎಂದುಕೊಂಡು ಹೊರಟೆವು.
           1 ಕಿಮಿ ನಡೆದ ನಂತರ ನಮಗೆ ಸತಾರಾ-ಫಂಡರಾಪುರ ಹೈವೆ ಸಿಕ್ಕಿತು. ಎಲ್ಲಾದರೂ ಬಸ್ ನಿಲ್ದಾಣವನ್ನು ಹುಡುಕೋಣ ಎಂದುಕೊಂಡವರಿಗೆ ಪಕ್ಕದಲ್ಲಿಯೇ ಇದ್ದ ಬಸ್ ನಿಲ್ದಾಣ ಕಾಣಿಸಿತು. ಅಲ್ಲಿಗೆ ಹೋದರೆ ಆರೆಂಟು ಜನ ಆಗಲೇ ಸೇರಿದ್ದರು. ಒಂದೆರಡು ಆಟೋಗಳು ಹಾದು ಹೋದವು. ನಿಲ್ಲಿಸಲಿಲ್ಲ. ಕೊನೆಗೊಂದು ಆಟೋ ಬಂದಿತು. ಬರುವಾಗಲೇ ಅರ್ಧ ತುಂಬಿದ್ದ ಆಟೋದ ಬಳಿ ನಾವು ಹೋದೆವು. ನಿಲ್ಲಿಸಿದ ಪುಣ್ಯಾತ್ಮ, ನಾವು ಮೂವರು ಬರುತ್ತೇವೆ ಎಂದೆವು. ಜಾಗ ಸಾಲುತ್ತಿಲ್ಲ ಎನ್ನಿಸಿತು. ಕೊನೆಗೆ ಹೇಗು ಹೇಗೋ ಗುದ್ಯಾಡಿ ಆಟೋ ಹತ್ತಿದ್ದಾಯಿತು. ಓಲಾಡುತ್ತ ಸತಾರಾ ನಗರಿಯತ್ತ ಆಟೋ ಸಾಗಿತು.

(ಮುಂದುವರಿಯುತ್ತದೆ)

ನಾವು ಹವ್ಯಕರು-4

ನಾವು ಹವ್ಯಕರು ನಾವು ಹವ್ಯಕರು
ಪ್ರೀತಿಯ ಕರು..||
ಆಕಳು ಸಾಕಿ, ಅಡಿಕೆಯ ಬೆಳೆದು
ದುಡಿಯುವವರು ನಾವು ಹವ್ಯಕರು ||

ಯಾಲಕ್ಕಿ, ವೆನಿಲ್ಲಾ, ಕಾಳುಮೆಣಸು ಎಲ್ಲಾ
ಬಾಳೆಯ ಜೊತೆಗೆ ತೆಂಗಿನ ಬೆಳೆ
ಅಡಿಕೆ, ಕೊಕ್ಕೋ, ಭತ್ತದ ಗದ್ದೆಯ
ನಾವು ಹವ್ಯಕರು ||

ಉತ್ತರಕ್ಕೆ ಸ್ವರ್ಣವಲ್ಲಿ,
ದಕ್ಷಿಣಕ್ಕೆ ರಾಮಚಂದ್ರಾಪುರ
ಮಧ್ಯದಲ್ಲೊಂದು ನೆಲೆಮಾವು
ನಾವು ಹವ್ಯಕರು ||

ಹಬ್ಬ ಹರಿದಿನಗಳಲ್ಲಿ ನಗು
ಸೊಸೈಟಿ ಸಾಲದಲ್ಲಿ ಬಿಗು
ದಿನಂಪ್ರತಿ ನಗ್ತಾ ಇರುವ
ನಾವು ಹವ್ಯಕರು ||

ಓದಿನಲ್ಲಿ ಜೋರು, ಭಟ್ಟತನಿಕೆಯಲ್ಲಿ ಮುಂದು
ಸಾಪ್ಟ್ ವೇರ್ ಉದ್ಯೋಗದ ಜೊತೆ ಅರ್ಚಕರು
ಎಲ್ಲೆಲ್ಲು ಹವ್ಯಕರು
ನಾವು ಪ್ರೀತಿಯ ಕರು ||

-----

(ಈ ಹವಿಗವಿತೆ ಬರೆದಿದ್ದು 21-10-2015ರಂದು ಶಿರಸಿಯಲ್ಲಿ)
(ನಾವು ಹವ್ಯಕರು ಸರಣಿಯ 4ನೇ ಕವಿತೆ ಇದು. ಈ ಹಿಂದೆ ಬರೆದಿದ್ದ ಮೂರು ಕವಿತೆಗಳೂ ಬಹಳ ಚನ್ನಾಗಿದೆ ಎಂದು ಪ್ರತಿಯೊಬ್ಬರೂ ಹೇಳಿ, ಆದರಿಸಿದ್ದರಿಂದ ಖುಷಿಯಾಗಿ ನಾಲ್ಕನೆ ಕವಿತೆ ಬರೆದಿದ್ದೇನೆ ಎಂದರೆ ತಪ್ಪಾಗಲಿಕ್ಕಿಲ್ಲ. ಇದೂ ಕೂಡ ಟಪ್ಪಾಂಗುಚ್ಚಿ. ಸುಮ್ನೆ ತಮಾಷೆಗೆ ಬರೆದಿದ್ದಾದರೂ ಹೇಳಿರುವ ವಿಷಯ ಕಟು ವಾಸ್ತವ. ಓದಿ, ಖುಷಿಪಡಿ)