Thursday, May 28, 2015

ಮಾಸ್ತರ್ ಮಂದಿ-2

ಗಂಗಾ ನಾಯ್ಕ :
           ನಾನು ಒಂದು ಹಾಗೂ ಎರಡನೇ ಕ್ಲಾಸ್ ಓದುತ್ತಿದ್ದ ಸಂದರ್ಭದಲ್ಲಿಯೇ ನಮ್ಮ ಶಾಲೆಗೆ ಶಿಕ್ಷಕಿಯಾಗಿ ಬಂದವರು ಗಂಗಾ ನಾಯ್ಕ ಅವರು. ಗಂಗಾ ನಾಯ್ಕ ಅವರು ನಮ್ಮ ಶಾಲೆಗೆ ಬರುವ ವೇಳೆಗೆ ಕುಳ್ಳೀಶ್ವರ ನಾಯ್ಕ ಅವರು ಶಾಲೆಯಿಂದ ವರ್ಗಾವಣೆಯಾಗಿ ಹೋಗಿದ್ದರೆಂದೇ ಹೇಳಬಹುದು. ಒಂದು ಅಥವಾ ಎರಡು ವರ್ಷ ಇವರು ನಮ್ಮ ಶಾಲೆಯಲ್ಲಿದ್ದರು. ನಾನು 2ನೇ ಕ್ಲಾಸಿನಲ್ಲಿದ್ದಾಗ ನನಗೆ ಕಲಿಸಿದ ನೆನಪು. 
                  ಇವರು ಶಿಕ್ಷಕರಾಗಿದ್ದ ಸಂದರ್ಭದಲ್ಲಿ ಒಂದು ಘಟನೆ ಇನ್ನೂ ನೆನಪಿದೆ. ಆಗ ನಮ್ಮೂರಿನಲ್ಲಿ ಆಲೆಮನೆಯ ಸಂಭ್ರಮ. ನಮ್ಮ ಮನೆಯದ್ದೇ ಆಲೆಮನೆ ನಡೆಯುತ್ತಿತ್ತು ಎನ್ನಬಹುದು. ನಮ್ಮೂರಿನಿಂದ ಐದಾರು ಜನರು ಶಾಲೆಗೆ ಬರುತ್ತಿದ್ದೆವು. ನಮಗೆಲ್ಲರಿಗೂ ಆಲೆಮನೆಗೆ ಹೋಗುವ ಆಸೆ. ಆದರೆ ಆಲೆಮನೆಗೆ ಹೋಗಬೇಕು ಎಂದು ಹೇಳಿದರೆ ಶಾಲೆಗೆ ರಜಾ ಕೊಡುತ್ತಿರಲಿಲ್ಲ. ಈ ಕಾರಣದಿಂದಲೇ ನಾವೆಲ್ಲ ಸೇರಿ ಐಡಿಯಾ ಮಾಡಿದ್ದೆವು. ನಮ್ಮೂರಿನ ಎಲ್ಲರೂ ಒಂದಲ್ಲ ಒಂದು ನೆಪ ಹೂಡಿ ರಜಾ ಕೇಳಲು ಹೊರಟೆವು. ಇದ್ದವರಲ್ಲಿಯೇ ನಾನು ಚಿಕ್ಕವನು. ನಾನೇ ಮೊದಲು ರಜಾ ಕೇಳಲು ಹೋದೆ. ನಮ್ಮ ಮನೆಯಲ್ಲಿ ಅದೇನೋ ಪೂಜೆ ಇದೆ. ಹಾಗಾಗಿ ಶಾಲೆಯಿಂದ ಸ್ವಲ್ಪ ಬೇಗನೆ ಕಳಿಸಿಕೊಡಿ ಎಂದು ಗಂಗಕ್ಕೋರ ಹತ್ತಿರ ಕೇಳಿಕೊಂಡೆ. ನಾನು ಪುಟ್ಟ ಪುಟ್ಟಗೆ, ಕುಳ್ಳಗಿದ್ದೆನಲ್ಲ. ಅದೇನೆನ್ನಿಸಿತೋ ಏನೋ. ಕಳಿಸಿಕೊಡಲು ಒಪ್ಪಿದರು. ನಾನು ಖುಷಿಯಿಂದ ಹೋಗಲು ತಯಾರಾದೆ. ಆದರೆ ದುರದೃಷ್ಟಕ್ಕೆ ನಮ್ಮೂರಿನ ಉಳಿದ ಯಾರಿಗೂ ರಜಾವನ್ನೇ ಕೊಡಲಿಲ್ಲ. ಅವರ್ಯಾರೂ ಬರಲಿಲ್ಲ-ನಾನೊಬ್ಬನೇ ಯಾಕೆ ಮನೆಗೆ ಹೋಗುವುದು ಎಂದುಕೊಂಡೆ. ಜೊತೆಗೆ ನಮ್ಮೂರಿಗೆ ಹೋಗುವ ದಾರಿ ಕಾಡಿನ ದಾರಿ. ನನಗೆ ಆಗ ಸಿಕ್ಕಾಪಟ್ಟೆ ಹೆದರಿಕೆ ಬೇರೆ. ಹಾಗಾಗಿ ಹೋಗದೇ ಉಳಿದಕೊಂಡು ಬಿಟ್ಟೆ.
               ನಾನು ಮನೆಗೆ ಹೋಗದೇ ಶಾಲೆಯಲ್ಲಿ ಉಳಿದುಕೊಂಡಿದ್ದು ಹಾಗೂ ಮನೆಗೆ ಹೋಗಲು ಸುಳ್ಳು ಹೇಳಿದ ವಿಚಾರ ಅದ್ಹೇಗೆ ಗೊತ್ತಾಯಿತೇನೋ. ಅಥವಾ ನನ್ನ ಹಾಗೆ ಮನೆಗೆ ಬರಲು ರಜಾ ಸಿಗದ ನಮ್ಮೂರಿನ ಹುಡುಗರೇ ಹೇಳಿಬಿಟ್ಟಿದ್ದರೇನೋ ಗೊತ್ತಿಲ್ಲ. ಕ್ಲಾಸ್ ರೂಮಿಗೆ ಬಂದವರೇ `ವಿನಯ ಮನೆಗೆ ಹೋದನಾ?' ಎಂದು ಕೇಳಿದರು. ನಾನು ಹೋಗದೇ ಇರುವ ವಿಚಾರವನ್ನು ಉಳಿದ ಹುಡುಗರು ಹೇಳಿದರು. ಆಗ ಕೊಟ್ಟರು ನೋಡಿ ಏಟನ್ನಾ.. ಯಪ್ಪಾ ಯಪ್ಪಾ.. ದಡಾ ಬಡಾ ಹೊಡೆದರು. `ಸುಳ್ ಹೇಳ್ತಿಯೇನೋ.. ಇನ್ನೊಂದ್ ಸಾರಿ ಹಿಂಗೆ ಮಾಡು. ನಿನ್ ಚರ್ಮ ಸುಲಿದು ಬಿಡ್ತೇನೆ..' ಎಂದು ಬೈದರು. ನಾನು ಅತ್ತು ಅತ್ತು ಬಾಡಿದ್ದು ಇನ್ನೂ ನೆನಪಿನಲ್ಲಿದೆ. ಗಂಗಕ್ಕೋರು ಎಂದರೆ ನನಗೆ ನೆನಪಿದ್ದಿದ್ದು ಇಷ್ಟೇ ನೋಡಿ.
             ಇನ್ನೊಬ್ಬರು ಅಕ್ಕೋರಿದ್ದರು. ಅವರ ಹೆಸರು ಬಹುಶಃ ಸುಮಿತ್ರಕ್ಕೋರು ಇರಬೇಕು. ಕೊಂಕಣಿಗರು. ಮೂರು ತಿಂಗಳೋ ನಾಲ್ಕು ತಿಂಗಳೋ ಕಳಿಸಲು ಬಂದಿದ್ದರು. ಅವರ ಬಗ್ಗೆ ಹೆಚ್ಚಿಗೆ ಏನೂ ವಿಶೇಷವಿಲ್ಲ. ಕಲಿಸಲು ಬಂದವರಿಗೆ ಮದುವೆಯಾಯಿತು. ನಮ್ಮೂರಿನ ಬಳಿಯೇ ಈಗಲೂ ಇದ್ದಾರೆ ಅವರು. ಇಂವ ನನ್ನ ಸ್ಟೂಡೆಂಟ್ ಆಗಿದ್ದ ಎಂದು ಈಗಲೂ ನೆನಪು ಮಾಡಿಕೊಳ್ಳುತ್ತಾರೆ. ಆದರೆ ಅವರ ಬಳಿ ಹೆಸರು ಕೇಳಲು ಮುಜುಗರವಾಗಿ ಸುಮ್ಮನೇ ಇದ್ದೇನೆ.

ಜಿ. ಎಸ್. ಭಟ್ಟ್:
             ಗಣೇಶ ಭಟ್ಟರು ಎಂಬ ಹೆಸರಿನ ಈ ಮಾಸ್ತರ್ರಂತೂ ಯಾವತ್ತಿಗೂ ಮರೆಯೋಕಾಗೋದಿಲ್ಲ ಬಿಡಿ. ಜಿ. ಎಸ್. ಭಟ್ರು ಎನ್ನುವ ಹೆಸರನ್ನು ಕೇಳಿದ ತಕ್ಷಣ ನಾವೆಲ್ಲ ಭಯಂಕರ ಹೆದರುತ್ತಿದ್ದ ಕಾಲವೊಂದಿತ್ತು. ಅವರ ಹೊಡೆತ, ಅವರ ಸಿಟ್ಟು ಅಯ್ಯಪ್ಪಾ ಯಾರಿಗೂ ಬೇಡ. ಜಿ. ಎಸ್. ಭಟ್ಟರು ಶಾಲೆಗೆ ಬರುವಾಗ ಒಂದು ಡಜನ್ ಕೋಲುಗಳನ್ನು ಹೊಡೆತಕ್ಕಾಗಿಯೇ ತರುತ್ತಾರೆ ಎನ್ನುವ ಮಾತುಗಳೂ ಇದ್ದವು. ಡಜನ್ ಕೋಲುಗಳು ಖಾಲಿಯಾಗಿ ಶಾಲೆಯ ಆವರಣದಲ್ಲಿದ್ದ ಗಾಳಿ ಶೆಳಕೆ, ಹುಳಸೇ ಬರಲುಗಳನ್ನೆಲ್ಲ ಮತ್ತಷ್ಟು ಮುರಿದು ತರಲು ಆಜ್ಞಾಪಿಸುತ್ತಿದ್ದರು. ಅವರ ಸಿಟ್ಟಿಗೆ ಬಲಿ ಬೀಳದವರು ಯಾರೂ ಇರಲಿಲ್ಲ ನೋಡಿ. ನಾನು ಅವರ ಬಳಿ ಅದೆಷ್ಟೋ ಹೊಡೆತ ತಿಂದಿದ್ದೇನೆ. ಮೂ, ಕೈ, ಕಾಲುಗಳ ಮೇಲೆಲ್ಲ ಬಾಸುಂಡೆ ಬಂದಿದ್ದಿದೆ.
               ನನಗಿಂತ ಎರಡು ತರಗತಿಗಳ ಮೇಲೆ ಒಬ್ಬ ಹುಡುಗನಿದ್ದ. ಆತನ ಬ್ಯಾಚಿನಲ್ಲಿದ್ದ ಹುಡುಗರೆಲ್ಲ ಭಯಂಕರ ಪುಂಡು ಪೋಕರಿಗಳು. ಗಣಪತಿ ಎಂಬ ಹೆಸರಿನ ಆ ಹುಡುಗ ದೂರದಿಂದ ನನಗೆ ಸಂಬಂಧಿಕನೂ ಆಗಬೇಕು. ಆ ದಿನಗಳಲ್ಲಿ ಆತ ಸಿಕ್ಕಾಪಟ್ಟೆ ತಂಟೆ ಮಾಡುತ್ತಿದ್ದ. ಗಲಾಟೆಯಲ್ಲಿ ಎತ್ತಿದ ಕೈ ಆಗಿತ್ತು. ಭಾನಗಡಿಗೆ ಹೆಸರುವಾಸಿಯೂ ಆಗಿದ್ದ. ಸದಾ ಸುಮ್ಮನಿರಲು ಆಗದ ಆತ ಏನಾದರೂ ಒಂದು ಕಿತಾಪತಿ ಮಾಡುತ್ತಲೇ ಇರುತ್ತಿದ್ದ. ಶಾಲೆಗೆ ಕಳ್ಳ ಬೀಳುವುದು, ಮಾರ್ಕ್ಸ್ ಕಾರ್ಡಿನ ಮೇಲೆ ನಕಲಿ ಸಹಿ ಝಾಡಿಸುವುದು, ಸುಳ್ಳಿನ ಸರಮಾಲೆಗಳನ್ನು ಪೋಣಿಸುವುದು ಇತ್ಯಾದಿಗಳೆಲ್ಲ ಆತನಿಗೆ ನೀರು ಕುಡಿದಷ್ಟು ಸುಲಭವಾಗಿತ್ತು. ಇಂತಹ ಗಣಪತಿಗೆ ಜಿ. ಎಸ್. ಭಟ್ಟರು ಸಿಂಹಸ್ವಪ್ನವಾಗಿದ್ದರು.
               ನಮ್ಮೂರಿನಲ್ಲೇ ಇನ್ನೊಬ್ಬ ಹುಡುಗನಿದ್ದ. ನನಗಿಂತ ಮೂರ್ನಾಲ್ಕು ವರ್ಷ ದೊಡ್ಡವನು. ನಮ್ಮೂರಿನ ಒಬ್ಬರ ಮನೆಯಲ್ಲಿ ಉಳಿದುಕೊಂಡು ಶಾಲೆಗೆ ಹೋಗುತ್ತಿದ್ದ. ಆತ ಓದಿನಲ್ಲಿ ಅಷ್ಟು ಚುರುಕಾಗಿರಲಿಲ್ಲ. ಆದರೆ ತಂಟೆ ಮಾಡುವುದರಲ್ಲಿ ಎತ್ತಿದ ಕೈ. ಅವನಿಗೂ ಕೂಡ ಜಿ. ಎಸ್. ಭಟ್ಟರೆಂದರೆ ಭಯಂಕರ ಭಯ. ಶ್ರೀಪಾದ ಎನ್ನುವುದು ಆತನ ಹೆಸರು. ಗಣಪತಿ ಹಾಗೂ ಶ್ರೀಪಾದನ ಪಾಲಿಗೆ ಗಣೇಶ ಭಟ್ಟರು ವಿಲನ್ನು. ಈ ಜಿ. ಎಸ್. ಭಟ್ಟರು ಹೇಗಾದರೂ ಸತ್ತು ಹೋದರೆ ಚನ್ನಾಗಿತ್ತು ಎಂದು ಬೈದುಕೊಂಡು ಶಾಪ ಹೊಡೆಯುವಷ್ಟು ಭಟ್ಟರ ಮೇಲೆ ಸಿಟ್ಟಿತ್ತು.
               ಹೀಗಿದ್ದಾಗಲೇ ಗಣೇಶ ಭಟ್ಟರು ಹೊಸದೊಂದು ಬೈಕನ್ನು ಕೊಂಡಿದ್ದರು. ಬೈಕ್ ಪೂಜೆ ಮಾಡಿಸಬೇಕಲ್ಲ. ಹಿರಿಯ ಪ್ರಾಥಮಿಕ ಶಾಲೆ ಅಡ್ಕಳ್ಳಿ-ಕೋಡ್ಸಿಂಗೆಯ ಎದುರಿಗೆ ದೊಡ್ಡದೊಂದು ಭೂತಪ್ಪನ ಕಟ್ಟೆಯಿದೆ. ಹೊಸ ವಸ್ತುಗಳು, ಹೊಸ ವಾಹನ ಹೀಗೆ ಏನೆ ಇದ್ದರೂ ಅಲ್ಲಿ ಪೂಜೆ ಮಾಡಿಸುವುದು ವಾಡಿಕೆ. ಜಿ. ಎಸ್. ಭಟ್ಟರೂ ಕೂಡ ಹೊಸ ಬೈಕನ್ನು ಅಲ್ಲಿ ಪೂಜೆ ಮಾಡಿಸಿದ್ದರು. ಬೈಕ್ ಪೂಜೆ ಮಾಡಿದ್ದವನು ಅವರಿಂದ ಸಿಕ್ಕಾಪಟ್ಟೆ ಹೊಡೆತ ತಿನ್ನುವ ಗಣಪತಿ. ಭಟ್ಟರ ದುರಾದೃಷ್ಟವೋ ಗೊತ್ತಿಲ್ಲ ಪೂಜೆ ಮಾಡಿಸುವ ಸಂದರ್ಭದಲ್ಲಿ ಕಾಯಿ ಒಡೆಯಲಾಯಿತು. ಒಡೆದ ಕಾಯಿಯಲ್ಲಿ ಒಂದು ಕಾಯಿ ಕೊಳೆತು ಹೋಗಿತ್ತು. ಅದೆಂತಹ ಅಪಶಕುನವೋ ಗೊತ್ತಿಲ್ಲ. ಭಟ್ಟರು ಬೇರೆ ಕಾಯಿ ತಂದು ಒಡೆಸಿದ್ದರು.
                ಅದಾದ ನಂತರ ನಾವು ಶಾಲೆಯಲ್ಲಿ ಪ್ರಾರ್ಥನೆಗೆ ನಿಂತಾಗಲೆಲ್ಲ ಜಿ. ಎಸ್. ಭಟ್ಟರ ಬೈಕಿನ ಸದ್ದಾಗುತ್ತದೆಯೋ ಎಂದು ಆಲಿಸುತ್ತಿದ್ದೆವು. ಪ್ರಾರ್ಥನೆ ಮುಗಿಯುವ ವೇಳೆಗೆ ಬೈಕಿನ ಸದ್ದಾಗದಿದ್ದರೆ ಅವರು ಬಂದಿಲ್ಲ ಎಂದು ನಿಟ್ಟುಸಿರು ಬಿಡುತ್ತಿದ್ದೆವು. ಬೈಕು ಬಂತೋ ನಮ್ಮ ಜೀವ ಕೈಗೆ ಬರುತ್ತಿತ್ತು. ದೇವರೇ ಇವತ್ತು ಜಿ. ಎಸ್. ಭಟ್ಟರು ಶಾಲೆಗೆ ಬರದಿದ್ದರೆ ಸಾಕಪ್ಪಾ ಎಂದು ಬೇಡಿಕೊಳ್ಳುತ್ತಿದ್ದುದೂ ಇದೆ. ಭಟ್ಟರದ್ದು ಅದೆಂತಹ ಸಿದ್ಧಾಂತವಾಗಿತ್ತೋ ಏನೋ. ಪಾಠವನ್ನು ಮಾತ್ರ ಬಹಳ ಚನ್ನಾಗಿ ಕಲಿಸುತ್ತಿದ್ದರು. ಆದರೆ ನನಗೆ ಮಾತ್ರ ಅವರು ಪಾಠಕ್ಕಿಂತ ಹೆಚ್ಚಿಗೆ ಹೊಡೆತವನ್ನೇ ನೀಡಿದ್ದಾರೆ ಎಂದರೆ ತಪ್ಪಿಲ್ಲ. ಅವರು ನನಗೆ ಹೊಡೆದಾಗಲೂ ನಾನು ಹೆದರಿರಲಿಲ್ಲ. ಆದರೆ ನನ್ನ ಜೊತೆಗೆ ಬರುತ್ತಿದ್ದ ಗಣಪತಿ ಹಾಗೂ ಶ್ರೀಪಾದನ ಮೈಮೇಲಿನ ಬಾಸುಂಡೆಗಳು, ರಕ್ತ ಜಿನುಗುವ ಹೊಡೆತದ ಗಾಯಗಳನ್ನು ನೋಡಿದಾಗಲೆಲ್ಲ ಸಿಕ್ಕಾಪಟ್ಟೆ ಹೆದರಿದ್ದೂ ಇದೆ.
             ಹೊಡೆತ ತಪ್ಪಿಸಿಕೊಳ್ಳಬೇಕು ಎನ್ನುವ ಕಾರಣಕ್ಕಾಗಿ ಗಣಪತಿ ಅನೇಕ ಸಾರಿ ಶಾಲೆ ತಪ್ಪಿಸುತ್ತಿದ್ದ. ಆದರೆ ಮರುದಿನ ಮಾತ್ರ ಸಿಕ್ಕಾಪಟ್ಟೆ ಹೊಡೆತ ಬೀಳುತ್ತಿತ್ತು. ಮನೆಯಲ್ಲಿ ಶಾಲೆಗೆ ಹೋಗುತ್ತೇನೆ ಎಂದು ಹೇಳುತ್ತಿದ್ದ ಗಣಪತಿ (ನಾವೆಲ್ಲ ಅವನನ್ನು ಗಪ್ಪತಿ ಎನ್ನುತ್ತಿದ್ದೆವು. ಮುಂದೆ ಅವನ ಬಗ್ಗೆ ಬಹಳ ಬರೆಯಲಿಕ್ಕಿದೆ. ಬೇರೆ ಕಂತಿನಲ್ಲಿ ಬರೆಯುತ್ತೇನೆ) ನಮ್ಮ ಜೊತೆಗೆ ಅರ್ಧ ದಾರಿಯ ವರೆಗೆ ಬರುತ್ತಿದ್ದ. ನಮ್ಮೂರಿನಿಂದ ಶಾಲೆಗೆ ಹೋಗುವ ದಾರಿಯಲ್ಲಿ ದೊಡ್ಡದೊಂದು ಕಾಡು ಸಿಗುತ್ತದೆ. ಗಪ್ಪತಿ ಆ ಕಾಡಿನ ಜಾಗ ಬಂದ ತಕ್ಷಣ ಕಾನೊಳಗೆ ನುಸುಳಿ ಬಿಡುತ್ತಿದ್ದ. ಶಾಲೆಗೆ ಕಳ್ಳ ಬೀಳುತ್ತಿದ್ದ ಆತ ನಮ್ಮ ಬಳಿ ಮಾತ್ರ ಮನೆಯಲ್ಲಿ ಹೇಳಬೇಡ ಎಂದು ಹೇಳುತ್ತಿದ್ದ. ಶಾಲೆಯಲ್ಲಿ ಹಾಗೂ ಮನೆಯಲ್ಲಿ ಆತ ಕಳ್ಳಬೀಳುತ್ತಿದ್ದ ವಿಷಯವನ್ನು ಯಾರಿಗೂ ತಿಳಿಸದಂತೆ ಮ್ಯಾನೇಜ್ ಮಾಡಬೇಕಿತ್ತು ನಾವು. ಶಾಲೆಯಿಂದ ಮರಳುವ ವೇಳೆಗೆ ಆ ಕಾಡಿನ ಜಾಗಕ್ಕೆ ಬಂದ ನಾವು ಆತನ ಹೆಸರು ಹೇಳಿ ದೊಡ್ಡದಾಗಿ ಕೂಗು ಹಾಕಿದಾಗ ಕಾಡಿನೊಳಗಿಂದ ಓಡಿ ಬರುತ್ತಿದ್ದ. `ಗಪ್ಪತಿ ಎಂತಾ ಮಾಡ್ತದ್ಯಲೇ ಕಾಡೊಳಗೆ..' ಎಂದು ನಾವು ಕೇಳಿದರೆ ನಿದ್ದೆ ಮಾಡ್ತಿದ್ದೆ ಮಾರಾಯಾ ಎನ್ನುತ್ತಿದ್ದ.
              ಒಮ್ಮೆ ಹೀಗಾಯಿತು. ನಾಲ್ಕಾರು ದಿನ ಕಳ್ಳಬಿದ್ದಿದ್ದ ಗಪ್ಪತಿ. ಜಿ. ಎಸ್. ಭಟ್ಟರು ಪ್ರತಿದಿನ ನಮ್ಮ ಬಳಿ ಗಪ್ಪತಿ ಶಾಲೆಗೆ ಬರಲಿಲ್ಲವಾ ಎಂದು ಕೇಳುತ್ತಿದ್ದರು. ನಾವು ಅದೇನೋ ನೆಪ ಹೇಳುತ್ತಿದ್ದೆವು. ಅದೊಂದು ದಿನ ಭಟ್ಟರಿಗೆ ಅನುಮಾನ ಬಂದಿತು. ನನ್ನ ಹಿಡಿದು ದನಕ್ಕೆ ಬಡಿಯುವ ಹಾಗೆ ಬಡಿಯಲು ಆರಂಭಿಸಿದರು. ನಾನು ಹೊಡೆತದ ಉರಿಯನ್ನು ತಾಳಲಾರದೇ ಗಪ್ಪತಿ ಕಾಡಿನಲ್ಲಿ ಕದ್ದು ಕೂರುವ ವಿಚಾರವನ್ನು ಬಾಯಿ ಬಿಟ್ಟಿದ್ದೆ. ಸಿಟ್ಟಿನಿಂದ ಮತ್ತಷ್ಟು ಬಡಿದ ಜಿ. ಎಸ್. ಭಟ್ಟರು ನನ್ನನ್ನು ಸೀದಾ ಎಳೆದುಕೊಂಡು ಹೋದರು. ಅದೇ ಕಾಡಿನ ಬಳಿ ಹತ್ತಿರ ಬಂದ ತಕ್ಷಣ ಗಪ್ಪತಿಯ ಹೆಸರನ್ನು ದೊಡ್ಡದಾಗಿ ಕೂಗು ಎಂದರು. ನಾನು ಕೂಗಿದೆ. ಗಪ್ಪತಿ ಕಾಡಿನಿಂದ ಹೊರಗೆ ಬಂದ. ಬಂತ ತಕ್ಷಣವೇ ಜಿ. ಎಸ್. ಭಟ್ಟರ ಕೈಗೆ ಸಿಕ್ಕಿಬಿದ್ದ. ಅಲ್ಲಿಂದ ಗಪ್ಪತಿಗೆ ಹೊಡೆಯಲು ಆರಂಭಿಸಿದ ಜಿ. ಎಸ್. ಭಟ್ಟರು ಶಾಲೆಯ ವರೆಗೂ ಹೊಡೆಯುತ್ತಲೇ ಹೋಗಿದ್ದರು. ಆಮೇಲಿಂದ ಗಪ್ಪತಿ ಕಾಡಿನಲ್ಲಿ ಕದ್ದು ಕೂರುವುದು ಬಂದಾಗಿತ್ತು. ಕೆಲ ದಿನಗಳ ವರೆಗೆ ಗಪ್ಪತಿ ನನ್ನ ಬಳಿ ಮಾತಾಡುವುದನ್ನೂ ಬಿಟ್ಟು ಬಿಟ್ಟಿದ್ದ.
             ಹೀಗಿದ್ದಾಗ ಒಂದು ದಿನ ನಮಗೆ ಸುದ್ದಿ ಬಂದಿತ್ತು. ಶಿರಸಿ-ಕುಮಟಾ ರಸ್ತೆಯ ಹನುಮಂತಿ ಬಳಿ ಎಕ್ಸಿಡೆಂಟ್ ಆಯ್ತಂತೆ. ಜಿ. ಎಸ್. ಭಟ್ಟರಿಂದ ಬೈಕಿಗೆ ಹಿಂದಿನಿಂದ ಬಂದ ಬಸ್ಸೊಂದು ಡಿಕ್ಕಿ ಹೊಡೆಯಿತಂತೆ. ಡಿಕ್ಕಿ ಹೊಡೆದ ರಭಸಕ್ಕೆ ಜಿ. ಎಸ್. ಭಟ್ಟರು ಸ್ಥಳದಲ್ಲೇ ಸತ್ತು ಹೋದರಂತೆ ಎಂಬ ಸುದ್ದಿ ಬಂದಿತು. ಶಾಲೆಗೆ ನಾನು ಬರುವ ವೇಳೆಗೆ ಎಲ್ಲರೂ ಹೊರಗೆ ಕುಂತಿದ್ದರು. ಒಂದೆರಡು ಶಿಕ್ಷಕಿಯರು ಆಗಲೇ ಅಳುತ್ತಿದ್ದರು. ಕೊನೆಗೆ ಪೂರ್ತಿಯಾಗಿ ಗೊತ್ತಾಗಿದ್ದೇನೆಂದರೆ ಬ್ರೇಕ್ ಫೈಲ್ ಆದ ಕೆಎಸ್ಸಾರ್ಟಿಸಿ ಬಸ್ಸೊಂದು ಜಿ. ಎಸ್. ಭಟ್ಟರ ಬೈಕಿಗೆ ಹಿಂದಿನಿಂದ ಢಿಕ್ಕಿ ಹೊಡೆದಿತ್ತು. ಮಧುವೆ ಮಾಡಿಕೊಳ್ಳಬೇಕು ಎಂದು ಹೆಣ್ಣು ನೋಡಲು ಹೊರಟಿದ್ದ ಜಿ. ಎಸ್. ಭಟ್ಟರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಢಿಕ್ಕಿಯಾದ ರಭಸಕ್ಕೆ ಬೈಕಿನಿಂದ ಚಿಮ್ಮಿ ಬಿದ್ದಿದ್ದ ಜಿ. ಎಸ್. ಭಟ್ಟರ ಎದೆಯ ಮೇಲೆ ಬಸ್ಸಿನ ಹಿಂದಿನ ಚಕ್ರ ಹತ್ತಿ ಹೋದ ಪರಿಣಾಮ ಭಟ್ಟರು ಅಪ್ಪಚ್ಚಿಯಾಗಿ ಬಿಟ್ಟಿದ್ದರು. ಭಟ್ಟರ ಜೊತೆಗೆ ಹೋಗುತ್ತಿದ್ದ ಅಡಕಳ್ಳಿಯ ವಿ. ಆರ್. ಹೆಗಡೆ ಎನ್ನುವವರು ಕೂದಲೆಳೆಯ ಅಂತರದಲ್ಲಿ ಬಚಾವಾಗಿದ್ದರು. ಆದರೂ ಅವರಿಗೆ ಅನೇಕ ಕಡೆಗಳಲ್ಲಿ ಮೂಳೆ ಮುರಿತ ಉಂಟಾಗಿತ್ತು. ಆದಿನ ನನಗೆ ಅದೇಕೋ ಸಿಕ್ಕಾಪಟ್ಟೆ ಅಳು ಬಂದಿತ್ತು.
          ಮೌನ ಆಚರಿಸಿದ್ದರು. ಶಾಲೆಗೆ ರಜಾ ಕೊಟ್ಟಿದ್ದರು. ನಾನು ಬೇಜಾರಿನಲ್ಲಿಯೇ ವಾಪಾಸ್ ಬರುತ್ತಿದ್ದ ವೇಳೆ ಜೊತೆಯಲ್ಲಿದ್ದ ಶ್ರೀಪಾದ ಹಾಗೂ ಗಪ್ಪತಿ ಮಾತ್ರ ಕುಣಿದು ಕುಪ್ಪಳಿಸಿದ್ದರು. ಜಿ. ಎಸ್. ಭಟ್ಟರು ಗೋತಾ ಜೊ. ಎಸ್. ಭಟ್ಟರು ಗೋತಾ ಎಂದು ಕುಣಿಯುತ್ತ ಹೋಗುತ್ತಿದ್ದುದು ಇನ್ನೂ ನನ್ನ ಕಣ್ಣೆದುರಿಗಿದೆ. ಆ ದಿನಗಳಲ್ಲಿಯೇ ಕೆಲವು ಸುದ್ದಿಗಳೂ ನನ್ನ ಕಿವಿಗೆ ಬಿದ್ದಿದ್ದವು. ಎಷ್ಟು ಸತ್ಯವೋ, ಅದೆಷ್ಟು ಸುಳ್ಳೋ ಗೊತ್ತಿಲ್ಲ. ಭಟ್ಟರು ಹೊಸ ಬೈಕ್ ತೆಗೆದುಕೊಂಡಾಗ ಭೂತಪ್ಪನ ಕಟ್ಟೆಗೆ ಕಾಯಿ ಒಡೆಸಿದ್ದರು ಎಂದಿದ್ದೆನಲ್ಲ. ಅದು ಕೊಳೆತು ಹೋಗಿತ್ತು ಎಂದೂ ಹೇಳಿದ್ದೆನಲ್ಲ. ಆ ಕಾರಣಕ್ಕಾಗಿಯೇ ಬೈಕ್ ಎಕ್ಸಿಡೆಂಟ್ ಆಗಿತ್ತು ಎಂದು ಅನೇಕರು ಮಾತನಾಡಿಕೊಂಡರು. ಅನೇಕರು ಗಪ್ಪತಿಯ ಬಗ್ಗೆಯೂ ಮಾತನಾಡಿಕೊಂಡು. ಪ್ರತಿ ದಿನ ಭೂತಪ್ಪನ ಕಟ್ಟೆಯಲ್ಲಿ ಜಿ. ಎಸ್. ಭಟ್ಟರು ಸತ್ತು ಹೋಗಲಿ ಎಂದು ಬೇಡಿಕೊಳ್ಳುತ್ತಿದ್ದ, ಹೂವನ್ನು ತಂದು ಭೂತಪ್ಪನಿಗೆ ಹಾಕುತ್ತಿದ್ದ. ಅದೇ ಕಾರಣಕ್ಕೆ ಜಿ. ಎಸ್. ಭಟ್ಟರು ಎಕ್ಸಿಡೆಂಟ್ ನಲ್ಲಿ ಸತ್ತುಹೋದರು ಎಂದು ಅನೇಕ ಜನ ಮಾತನಾಡಿಕೊಂಡರು. ಅನೇಕ ದಿನಗಳ ಕಾಲ ಈ ಸುದ್ದಿ ಅನೇಕರ ಬಾಯಲ್ಲಿಯೂ ಹರಿದಾಡುತ್ತಿತ್ತು. ಆದರೆ ನಿಧಾನವಾಗಿ ಜಿ. ಎಸ್. ಭಟ್ಟರೂ ಮರೆತು ಹೋದರು. ಗಪ್ಪತಿ ಬಗ್ಗೆ ಇದ್ದ ಗಾಸಿಪ್ ಕೂಡ ಮರೆತು ಹೋಗಿತ್ತು. ಆದರೆ ನನಗೆ ಕಲಿಸಿದ ಮಾಸ್ತರ್ ಮಂದಿಯ ನೆನಪು ಮಾಡಿಕೊಳ್ಳುವ ಸಂದರ್ಭದಲ್ಲಿ ಮಾತ್ರ ಈ ಎಲ್ಲ ಘಟನೆಗಳೂ ನನ್ನ ನೆನಪಿನ ಖಜಾನೆಯಲ್ಲಿ ಅಚ್ಚಳಿಯದೇ ಉಳಿದುಕೊಂಡು ಬಿಟ್ಟಿವೆ.

(ಮುಂದುವರಿಯುತ್ತದೆ)

ಶಕ್ತಿವಂತ

ಓ ಮನುಜ
ಈ ಜೀವಕ್ಕುಂಟು ಕೊನೆ
ಜೀವನವಲ್ಲ ಎಂದಿಗೂ ಶಾಶ್ವತ |

ಓ ಮನುಜ ತಿಳಿದಿರುವೆ ನೀನು
ಈ ಭೂಮಿಯಲ್ಲಿ ತಾನೇ ಶಕ್ತಿವಂತನೆಂದು
ಆದರೆ ನೀನು ಮುಂದೆ
ಆಗುವುದನ್ನು ಅರಿಯಬಲ್ಲೆಯಾ?

ಎಲ್ಲೋ ಒಂದೆರಡು ಸಂಶೋಧನೆ ಮಾಡಿ
ಹೊಸದನ್ನು ಹುಡುಕಿದ ಮಾತ್ರಕ್ಕೆ
ನೀನಾಗುವೆಯಾ ಬುದ್ಧಿವಂತ, ಶಕ್ತಿವಂತ?

ನೆನಪಿರಲಿ ಕೇಳು ಮನುಜ
ನನಗಿಂತ, ನಿನಗಿಂತ, ಎಲ್ಲರಿಗಿಂತ
ದೊಡ್ಡವನು, ಶಕ್ತಿವಂತ ಇರುವನು
ಈ ಜಗದೊಳಗೆ.
ಅವನು ಮುನಿದರೆ ಸುಖವಿಲ್ಲ
ಬದುಕಿಲ್ಲ ತಿಳಿ ಮನುಜ
ಅದ ಮರೆತು ನೀನು
ಎಂದೂ ಹೇಳಬೇಡ
ತಾನೇ

ಶಕ್ತಿವಂತನೆಂದು
ಗಟ್ಟಿಗನೆಂದು
ಶಕ್ತಿವಂತನೆಂದು
ಸೃಷ್ಟಿಕರ್ತ ಬ್ರಹ್ಮನೆಂದು..|||

***

(ಈ ಕವಿತೆಯನ್ನು ಬರೆದಿರುವುದು 19-05-2004ರಂದು ಕಾನಲೆಯಲ್ಲಿ)

Monday, May 25, 2015

ಕೋಗಿಲೆಯ ಕೂಗು

ಅದೆಲ್ಲೋ ದೂರದಿ
ವನಸಿರಿಯ ಮಧ್ಯದಿ
ಕೂಗುತಿಹುದು ಕೋಗಿಲೆ ||

ವಸಂತದ ಚೈತ್ರದಿ
ಸುಂದರ ಮಾಮರದಿ
ಉಲಿಯುತಿಹುದು ಕೋಗಿಲೆ ||

ಕುಹೂ ಕುಹೂ ನಾದದಿ
ನನ್ನ ಈ ಹೃದಯದ
ಮಿಡಿತವನ್ನು ಕೇಳೆಲೆ ||

ಮಾಮರದ ಮಧ್ಯದಿ
ಚಿಗುರೆಲೆಯ ಪಕ್ಕದಿ
ಹಾಡುತಿಹುದು ಕೋಗಿಲೆ ||

ಮಾವು ಚಿಗುರಿ ಹೂಬಿಡುವ
ಸುಂದರ ಚಣದಲಿ
ಉಲಿಯುತಿಹುದು ಕೋಗಿಲೆ ||

ಕೋಗಿಲೆಯ ಕೂಗಿನಿಂ
ಹೃದಯ ವೀಣೆ ಮಿಡಿಯಲಿ
ಜೀವ ಪುಳಕವಾಗಲಿ ||

**********

(ಈ ಕವಿತೆಯನ್ನು ಬರೆದಿರುವುದು 09-09-2004ರಂದು ದಂಟಕಲ್ಲಿನಲ್ಲಿ)

Sunday, May 24, 2015

ಮಾಸ್ತರ್ ಮಂದಿ-1

              ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಶಿಕ್ಷಕರು ಬಹುಮುಖ್ಯ ಪಾತ್ರವನ್ನು ವಹಿಸುತ್ತಾರೆ. ವ್ಯಕ್ತಿಯ ಬದುಕನ್ನು ರೂಪಿಸುವವರು ಶಿಕ್ಷಕರು ಎಂದರೆ ತಪ್ಪಾಗಲಿಕ್ಕಿಲ್ಲ. ನನ್ನ ಬದುಕಿನಲ್ಲಿ ಅದೆಷ್ಟೋ ಶಿಕ್ಷಕರು ಬಂದು ಹೋಗಿದ್ದಾರೆ. ಬಿನ್ನೆತ್ತಿಯಿಂದ ಹಿಡಿದು ಕಾಲೇಜು ಕೊನೆಯ ವರ್ಷದ ವರೆಗೆ 50ಕ್ಕೂ ಹೆಚ್ಚು ಜನ ನನ್ನ ಬದುಕನ್ನು ರೂಪಿಸಿದವರು. ಅವರ ಬಗ್ಗೆ ಒಂದಿಷ್ಟು ಮಾತು ನಾನು ಹೇಳಿಕೊಳ್ಳಲೇಬೇಕು. ನನಗೆ ನೆನಪಿರುವಷ್ಟು ಶಿಕ್ಷಕರ ಬಗ್ಗೆ ಹೇಳುತ್ತೇನೆ. ಈ ಶಿಕ್ಷಕರು ನನ್ನ ಪಾಲಿಗೆ ಸಿಹಿಯೂ ಆಗಿದ್ದಾರೆ, ಕಹಿಯೂ ಆಗಿದ್ದಾರೆ. ಅಂತವರ ಬಗ್ಗೆ ನೆನಪು ಮಾಡಿಕೊಳ್ಳುವ ಲೇಖನ ಇದು. ಬರೆಯುತ್ತ ಸಾಗುತ್ತೇನೆ. ಕಂತುಗಳ ಲೆಕ್ಕವಾದರೂ ಆದೀತು.

ಸತೀಶ ಮಾಸ್ತರ್ರು :
                     ನನಗೆ ನೆನಪಿರುವಂತೆ ಸತೀಶ ಮಾಸ್ತರ್ರು ನನ್ನ ಶಾಲಾ ಜೀವನದ ಮೊಟ್ಟ ಮೊದಲ ಮಾಸ್ತರ್ರು. ಬಿನ್ನೆತ್ತಿಯಿಂದ ಹಿಡಿದು ಒಂದನೇ ಕ್ಲಾಸಿನಲ್ಲಿ ಕಲಿಸಿದ ಈ ಮಾಸ್ತರ್ರ ನೆನಪು ಅಸ್ಪಷ್ಟವಾಗಿದೆ. 4ನೇ ವರ್ಷದಿಂದ ಬಿನ್ನೆತ್ತಿಗೆ ಹೋಗಲು ಶುರು ಮಾಡಿದ್ದ ನಾನು 6ನೇ ವರ್ಷದ ವರೆಗೂ ಬಿನ್ನೆತ್ತಿಯಲ್ಲೇ ಉಳಿದುಕೊಳ್ಳಲು ಈ ಮಾಸ್ತರ್ರೇ ಪ್ರಮುಖ ಕಾರಣ. ಎಲ್ಲ ಹುಡುಗರಿಗಿಂತ ಕುಳ್ಳಗೆ ಕಾಣುತ್ತಿದ್ದ ನಾನು 6 ವರ್ಷವಾದರೂ 4 ವರ್ಷದ ಹುಡುಗರಂತೆ ಕುಳ್ಳಗೇ ಇದ್ದೆ. ಪ್ರತಿವರ್ಷ ಅವರು ನನ್ನನ್ನು ತಲೆಯ ಮೇಲಿನಿಂದ ಕೈಯನ್ನು ಉದ್ದ ಹಿಡಿದು ಕಿವಿಯನ್ನು ಮುಟ್ಟು ಎನ್ನುತ್ತಿದ್ದರು. ಆದರೆ ನನ್ನ ಕೈ ಕಿವಿಗೆ ತಲುಪುತ್ತಿರಲಿಲ್ಲ. ಇನ್ನೂ ಸಮಾ ವರ್ಷವಾಗಿಲ್ಲ ಎಂದು ಹೇಳಿ ನನ್ನನ್ನು 1ನೇ ಕ್ಲಾಸಿಗೆ ಸೇರಿಸಿಕೊಳ್ಳಲು ಹಿಂದೇಟು ಹಾಕಿದವರು ಈ ಮಾಸ್ತರ್ರು.
                    ಈ ಮಾಸ್ತರ್ರು ನಾನು ಕಲಿಯುತ್ತಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಡ್ಕಳ್ಳ-ಕೋಡ್ಸಿಂಗೆಯಿಂದ ರಸ್ತೆ ಮಾರ್ಗದ ಮೂಲಕ ಅನಾಮತ್ತು 6 ಕಿಮಿ ದೂರದ ಕೋಡ್ಸರದಲ್ಲಿ ಉಳಿದುಕೊಳ್ಳುತ್ತಿದ್ದರು. ಒಳ ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ 3 ಕಿ.ಮಿ ನಡೆದು ಪ್ರತಿದಿನ ಶಾಲೆಗೆ ಬರುತ್ತಿದ್ದ ಸತೀಶ ಮಾಸ್ತರ್ರು ಕಪ್ಪಗಿದ್ದರು. ಥಟ್ಟನೆ ನೋಡಿದರೆ ಸಿನಿಮಾ ನಟ, ಹಿರಿಯ ಐಎಎಸ್ ಅಧಿಕಾರಿ ಕೆ. ಶಿವರಾಮು ಅವರನ್ನು ನೆನಪಿಸುವಂತಿದ್ದರು ಅವರು. ಮೂರ್ನಾಲ್ಕು ವರ್ಷ ನಮ್ಮೂರ ಶಾಲೆಯಲ್ಲಿ ಕಲಿಸಿದ್ದರೇನೋ. ಆದರೆ ನಾನು 1ನೇ ಕ್ಲಾಸಿಗೆ ಬರುವ ವೇಳೆಗೆ ಅವರು ವರ್ಗವಾಗಿ ಹೋಗಿದ್ದರು.
                   ಸತೀಶ ಮಾಸ್ತರ್ರು ನಮ್ಮೂರ ಶಾಲೆಗೆ ಕಲಿಸಲು ಬರುವ ವೇಳೆಗೆ ಇಡೀ ಶಾಲೆಯಲ್ಲಿ 120ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರು. ಒಬ್ಬರೇ ಶಿಕ್ಷಕರಿದ್ದರು. ಆಗ ನಮ್ಮೂರಿನಲ್ಲಿ ಎಸ್ಎಸ್ಎಲ್ಸಿ ಓದಿ ಮುಗಿಸಿದ್ದ ನನ್ನ ಅತ್ತೆಯಂದಿರು ಇಬ್ಬರನ್ನು ಪಾರ್ಟ್ ಟೈಮಿಗೆ ಕಲಿಸಲು ಬರುವಂತೆ ಹೇಳಿದ್ದು ಇನ್ನೂ ನೆನಪಿದೆ. ಬಿನ್ನೆತ್ತಿ ಓದಲು ಬರುತ್ತಿದ್ದ ನನಗೆ ನನ್ನ ಅತ್ತೆಯಂದಿರು ಶಿಕ್ಷಕಿಯರಾಗಿ ಕಲಿಸುತ್ತಿದ್ದರು. ಸುಧತ್ತೆ ಹಾಗೂ ಶಾಂತಲತ್ತೆ ಎಂಬ ಹೆಸರಿನ ಅವರನ್ನು ನಾನು ಶಾಲೆಯಲ್ಲಿಯೂ ಸುಧತ್ತೆ ಹಾಗೂ ಶಾಂತಲತ್ತೇ ಎಂದೇ ಕರೆಯುತ್ತಿದ್ದೆ. ಒಂದಿನ ಈ ಅತ್ತೆಯರು ನನ್ನನ್ನು ಕರೆದು `ಶಾಲೆಯಲ್ಲಿ ಅತ್ತೆ ಅನ್ನಬೇಡ. ಟೀಚರ್ ಎಂದು ಕರಿ. ನೆಂಟಸ್ತನ ಏನಿದ್ದರೂ ಮನೆಯಲ್ಲಿ ನೋಡಿಕೊ..' ಎಂದು ಹೇಳಿದ್ದಿನ್ನೂ ನನ್ನ ನೆನಪಿನಲ್ಲಿ ಸ್ಪಷ್ಟವಾಗಿಯೇ ಇದೆ. ಬಹುಶಃ ಅತ್ತೆಯರು ಹೀಗೆ ಹೇಳಿದ ನಂತರವೇ ನಮ್ಮ ನೆಂಟರು ಯಾರಾದರೂ ಮಾಸ್ಟರಾಗಿ ನನಗೆ ಕಲಿಸಲು ಬಂದರೆ ಶಾಲೆಯಲ್ಲಿ ಅವರನ್ನು ಸರ್ ಎಂದು ಸಂಬೋಧನೆ ಮಾಡಬೇಕು, ಮನೆಯಲ್ಲಿ ಮಾತ್ರ ನೆಂಟರಾಗಿ ಕಾಣಬೇಕು ಎಂಬುದು ಅರಿವಾದದ್ದು. ಇಂತಹ ಅತ್ತೆಯರಿಗೆ ಸರಿಯಾಗಿ ಸಂಬಳ ಕೊಡಲಿಲ್ಲ ಎಂದು ಅತ್ತೆಯರ ಅಪ್ಪ ಸತೀಶ ಮಾಸ್ತರ್ರ ಬಳಿ ಜಗಳ ಕಾಯ್ದಿದ್ದು ಇನ್ನೂ ನನ್ನ ನೆನಪಿನಲ್ಲಿ ಉಳಿದುಕೊಂಡಿದೆ.
                  ಇಂತಹ ಮಾಸ್ತರ್ರು ನಮ್ಮೂರ ಶಾಲೆಯಿಂದ ಟ್ರಾನ್ಸಫರ್ ಆಗುವ ವೇಳೆಗೆ ಕುಳ್ಳೀಶ್ವರ ಮಾಸ್ತರ್ರು ಶಿಕ್ಷಕರಾಗಿ ಬಂದಿದ್ದರು. ಅವರಲ್ಲದೇ ಅನಸೂಯಕ್ಕೋರು, ಗಣೇಶ ಭಟ್ಟರು ಮಾಸ್ತರ್ರಾಗಿ ಬಂದಿದ್ದು ನನಗಿನ್ನೂ ನೆನಪಿದೆ. ಆ ಸಂದರ್ಭದಲ್ಲಿಯೇ ತಾರಕ್ಕೋರು ಕೂಡ ನಮ್ಮ ಶಾಲೆಗೆ ಅಕ್ಕೋರಾಗಿ ಬಂದಿದ್ದರು.
                  ಸತೀಶ ಮಾಸ್ತರ್ರ ಕಾಲದಲ್ಲೇ ನನ್ನ ಬದುಕಿನಲ್ಲೊಂದು ಮಜವಾದ ಸಂಗತಿ ಜರುಗಿತ್ತು. ಅದಿನ್ನೂ ನನ್ನ ನೆನಪಿನಲ್ಲಿ ಹಸಿಯಾಗಿದೆ. ನಾನು ಆವತ್ತೊಂದಿನ ಅದೇನೋ ನೆಪವನ್ನು ಹೂಡಿ ಶಾಲೆಗೆ ಹೋಗಿರಲಿಲ್ಲ. ನನ್ನ ಗ್ರಹಚಾರಕ್ಕೆ ಆ ದಿನವೇ ಶಾಲೆಯಲ್ಲಿ ಕ್ರೀಡಾಕೂಟವನ್ನು ಮಾಡಿಬಿಟ್ಟಿದ್ದರು. ನಾನು ಭಾಗವಹಿಸುವ ಹುಮ್ಮಸ್ಸಿನಲ್ಲಿದ್ದೆನಾದರೂ ಕಳ್ಳಬಿದ್ದ ಕಾರಣ ಭಾಗವಹಿಸವುದು ತಪ್ಪಿ ಹೋಗಿತ್ತು. ಆಮೇಲೆ ನಾನು ನನ್ನನ್ನು ಹಳಿದುಕೊಂಡು ಸುಮ್ಮನಾಗಿದ್ದೆ ಮರೆತೂ ಹೋಗಿತ್ತು. ಕೊನೆಗೊಂದು ದಿನ ಶಾಲಾ ವಾರ್ಷಿಕೋತ್ಸವ ಬಂದಿತ್ತು. ಆಗ ಇದ್ದಕ್ಕಿದ್ದಂತೆ ಮೈಕಿನಲ್ಲಿ ನನ್ನ ಹೆಸರನ್ನು ಕರೆದಾಗ ಮಾತ್ರ ನಾನು ಬೆಚ್ಚಿ ಬಿದ್ದಿದ್ದೆ. ಕ್ರೀಡಾಕೂಟದಲ್ಲಿ ನನಗೂ ಒಂದು ಬಹುಮಾನ ಬಂದಿತ್ತು. ಆಟದಲ್ಲಿ ಭಾಗವಹಿಸಿದ್ದಕ್ಕಾಗಿ ಸಮಾಧಾನಕರ ಬಹುಮಾನ ನನಗೆ ಪ್ರಾಪ್ತವಾಗಿತ್ತು. ಅರ್ರೇ ಶಾಲೆಗೆ ಹೋಗದ ನಾನು ಬಹುಮಾನ ಪಡೆದುಕೊಂಡಿದ್ದೆ ಎನ್ನುವುದು ಮಾತ್ರ ಬಹಳ ತಮಾಷೆಯ ವಿಷಯವಾಗಿತ್ತು. ಕೊನೆಗೆ ಗೊತ್ತಾಗಿದ್ದೇನೆಂದರೆ ಶಾಲೆಯ ಪ್ರತಿಯೊಂದು ವಿದ್ಯಾರ್ಥಿಗಳಿಗೂ ಕೂಡ ಆಟದಲ್ಲಿ ಭಾಗವಹಿಸಲಿ, ಭಾಗವಹಿಸದೇ ಇರಲಿ, ಯಾವುದೇ ತಾರತಮ್ಯ ಮಾಡದೇ ಪ್ರಶಸ್ತಿ ಪತ್ರ ನೀಡಬೇಕು ಎಂದು ಸತೀಶ ಮಾಸ್ತರ್ರು ಆಲೋಚಿಸಿದ್ದರಂತೆ. ಅದಕ್ಕೆ ತಕ್ಕಂತೆ ಅವರು ನಡೆದುಕೊಂಡಿದ್ದರು. ನನಗೆ ಪ್ರಶಸ್ತಿ ಬಂದಿತ್ತು.
               ಇಂತಹ ಸತೀಶ ಮಾಸ್ತರ್ರು ಶಾಲೆಯಲ್ಲಿ ಕಲಿಸುತ್ತಿದ್ದ ಸಂದರ್ಭದಲ್ಲಿ ಶಾಲಾ ವಾರ್ಷಿಕೋತ್ಸವ ಬಹಳ ಅದ್ಧೂರಿಯಾಗಿ ನಡೆಯುತ್ತಿತ್ತು. ರಾತ್ರಿಯಿಂದ ಬೆಳಗಿನವರೆಗೂ ವಾರ್ಷಿಕೋತ್ಸವದ ನಿಮಿತ್ತ ಕಾರ್ಯಕ್ರಮಗಳು ನಡೆಯುತ್ತಿದ್ದವು. ಒಂದು ಸಾರಿ ಘಾಟಿ ಮುದುಕಿ ಎನ್ನುವ ನಾಟಕವೂ ನಡೆದಿತ್ತು. ಅದರಲ್ಲಿ ಮಾಸ್ತರ್ರು ಪಾತ್ರ ಮಾಡಿದ್ದರು. ಅವರ ಮನೋಜ್ಞ ನಟನೆಗೆ ಬಹಳಷ್ಟ ಬಹುಮಾನಗಳು ಬಂದಿದ್ದು ನೆನಪಿನಲ್ಲಿದೆ. ಆಗಲೇ ಸ್ಟೇಜ್ ಹತ್ತಿದ್ದ ನಾನು ನಾಲ್ಕೈದು ಡ್ಯಾನ್ಸುಗಳನ್ನೂ ಮಾಡಿದ್ದೆ. ನಮ್ಮೂರಿನ, ನನ್ನದೇ ವಾರಗೆಯ ಕೂಸು ರಂಜನಾ `ಭಾಳ ಒಳ್ಳೇಯೋರ್ ನಮ್ಮಿಸ್ಸು,, ಏನ್ ಕೇಳಿದ್ರೂ ಯೆಸ್ ಯೆಸ್ಸು..' ಎನ್ನುವ ಹಾಡಿಗೆ ಸ್ಟೇಜಿನ ಮೇಲೆ ಹೋಗಿ ಪಕ್ಕದಲ್ಲಿ ನಿಂತಿದ್ದ ಶಿಕ್ಷಕರನ್ನು ನೋಡಿ ಡ್ಯಾನ್ಸ್ ಮಾಡಿದ್ದಿನ್ನೂ ನನ್ನ ನೆನಪಿನಲ್ಲಿ ಉಳಿದುಕೊಂಡಿದೆ.
               ಆ ವಾರ್ಷಿಕೋತ್ಸವದ ದಿನವೇ ನಾನು ಮೊಟ್ಟ ಮೊದಲ ಬಾರಿಗೆ ಉಲ್ಕಾಪಾತವನ್ನು ನೋಡಿದ್ದು. ತಾರಕೆಯೊಂದು ಆಗಸದಲ್ಲಿ ಸೊಯ್ಯನೆ ಹಾರಿ ಹೋಗಿ ಉರಿದು ಭಸ್ಮವಾಗಿತ್ತು. ಅದನ್ನು ನೋಡುತ್ತಿದ್ದ ನನ್ನ ಮಿತ್ರ ಮಹೇಶ ಎಂಬಾತ, ನೋಡು ಈಶ್ವರ ತನ್ನ ಮೂರನೇ ಕಣ್ಣನ್ನು ಬಿಟ್ಟಿದ್ದಾನೆ. ಯಾರನ್ನೋ ಸುಟ್ಟು ಹಾಕಿದ್ದ ನೋಡು ಎಂದು ಹೇಳಿದ್ದು ಇನ್ನೂ ನೆನಪಿನಲ್ಲಿಯೇ ಇದೆ.
                 ಸತೀಶ ಮಾಸ್ತರ್ರಿದ್ದಾಗಲೇ ನಮ್ಮೂರ ಶಾಲೆ ಮೊಟ್ಟ ಮೊದಲ ಬಾರಿಗೆ ಕಾನಸೂರು ಕೇಂದ್ರ ಶಾಲಾ ಮಟ್ಟದಲ್ಲಿ ವೀರಾಗ್ರಣಿ ಪ್ರಶಸ್ತಿ ಬಾಚಿಕೊಂಡಿತ್ತು. ಅಷ್ಟಲ್ಲದೇ ಹೆಗ್ಗರಣಿಯಲ್ಲಿ ನಡೆಯುತ್ತಿದ್ದ ವಲಯ ಮಟ್ಟದಲ್ಲೂ ವೀರಾಗ್ರಣಿಯಾಗಿ ಸಿದ್ದಾಪುರ ತಾಲೂಕಾ ಮಟ್ಟದಲ್ಲೂ ಭಾಗವಹಿಸಿತ್ತು. ಅವರಿದ್ದಾಗಲೇ ಆರಡಿ ಎತ್ತರದ ರವಿ ಹಾಗೂ ಆತನ ತಮ್ಮ ಹರೀಶ ಎಂಬಿಬ್ಬರು 100 ಮೀಟರ್, 200 ಮೀಟರ್, 500 ಮೀಟರ್ ಸೇರಿದಂತೆ ಓಟದ ಎಲ್ಲಾ ವಿಭಾಗದಲ್ಲಿ ಪ್ರಶಸ್ತಿಯನ್ನು ಬಾಚಿಕೊಂಡು ಬಂದಿದ್ದರು. ನನಗೆ ಇವರು ಆಗ ಬಹಳ ವಿಸ್ಮಯದ ವ್ಯಕ್ತಿಗಳಾಗಿ ಕಂಡಿದ್ದರು. ಶಾಲೆಗೆ ಪ್ರಶಸ್ತಿ ತಂದುಕೊಟ್ಟ ಇವರ ಮೇಲೆ ಭಯಂಕರ ಹೆಮ್ಮೆ ಮೂಡಿತ್ತು. ಇಂತಹ ಪ್ರಶಸ್ತಿ ಬಾಚಿಕೊಂಡು ಬಂದಿದ್ದ ಈ ಸಹೋದರರು ಕೊನೆಗೊಂದು ದಿನ ಸತೀಶ ಮಾಸ್ತರ್ರ ಕೈಯಲ್ಲಿ ಕಳ್ಳ ಎನ್ನುವ ಬಿರುದನ್ನೂ ಪಡೆದುಕೊಂಡಿದ್ದು ಮಾತ್ರ ಅಚ್ಚರಿಗೆ ಕಾರಣವಾಗಿತ್ತು.
             ಶಾಲೆಯಲ್ಲಿ ಏನೋ ಒಂದು ಕಳುವಾಗಿತ್ತಂತೆ. ಅದಕ್ಕೆ ಸರಿಯಾಗಿ ಎಲ್ಲರನ್ನೂ ಪ್ರಶ್ನಿಸಿದ್ದರು ಸತೀಶ ಮಾಸ್ತರ್ರು. ಆದರೆ ಹರೀಶ ಹಾಗೂ ರವಿ ಮಾತ್ರ ಸರಿಯಾಗಿ ಉತ್ತರ ಹೇಳಿರಲಿಲ್ಲ. ಅದಕ್ಕೆ ಪ್ರತಿಯಾಗಿ ಸತೀಶ ಮಾಸ್ತರ್ರು ಸಿಕ್ಕಾಪಟ್ಟೆ ಹೊಡೆದು ಹಾಕಿದ್ದರು. ನನಗಿನ್ನೂ ಸತೀಶ ಮಾಸ್ತರ್ರು ಆರು ಅಡಿ ಎತ್ತರದ ರವಿಯನ್ನು ಹೊಡೆಯುತ್ತಿದ್ದುದು ಹಾಗೂ ಆತ ದಿನವಿಡೀ ಅಳುತ್ತಿದ್ದುದು ನೆನಪಿನಲ್ಲಿದೆ.
               ಹೀಗಿದ್ದಾಗ ಒಂದು ದಿನ ನಮ್ಮ ಶಾಲೆಯಲ್ಲೊಂದು ಗಲಾಟೆ ನಡೆದು ಹೋಗಿತ್ತು. 7ನೇ ತರಗತಿ ವಿದ್ಯಾರ್ಥಿಗಳಿಗೆ ಸತೀಶ ಮಾಸ್ತರ್ರು ಸ್ಪೆಷಲ್ ಕ್ಲಾಸ್ ತೆಗೆದುಕೊಳ್ಳುತ್ತಿದ್ದರು. ಅದೊಂದು ದಿನ ಅವರು ಶಾಲೆಗೆ ಬರಲು ಲೇಟಾಗಿತ್ತು. ಅದೇ ಸಂದರ್ಭದಲ್ಲಿ ಒಬ್ಬ ಹುಡುಗ ಹುಡುಗಿಯೊಬ್ಬಳಿಗೆ ಪ್ರಪೋಸ್ ಮಾಡಿಬಿಟ್ಟಿದ್ದ. 7ನೇ ತರಗತಿಯಲ್ಲೇ ಲವ್ ನಡೆದಿತ್ತು. ಆ ಹುಡುಗಿ ಅದೇನು ಹೇಳಿದಳೋ. ಬಹುಶಃ ಯೆಸ್ ಅಂದಿರಬೇಕು. ಹುಡುಗ ನಾಯ್ಕರ ಪೈಕಿ. ಹುಡುಗಿ ಬ್ರಾಹ್ಮಣರವಳು. 7ನೇ ತರಗತಿಯ ಲವ್ ಗಲಾಟೆಗೆ ಕಾರಣವಾಗಿತ್ತು. ಅದ್ಹೇಗೆ ಸತೀಶ ಮಾಸ್ತರ್ರಿಗೆ ಗೊತ್ತಾಯಿತೋ. ಶಾಲೆಗೆ ಬಂದವರೇ ಹುಡುಗ, ಹುಡುಗಿ, ಅವರ ಲವ್ವಿಗೆ ಸಹಾಯ ಮಾಡಿದವರು, ಅವರ ಕ್ಲಾಸಿನವರು ಎಲ್ಲರನ್ನೂ ನಿಲ್ಲಿಸಿ ಹೊಡೆತದ ಮೇಲೆ ಹೊಡೆತ ಕೊಟ್ಟಿದ್ದರು. ಸತತ ಮೂರು ದಿನ ಹೊಡೆದಿದ್ದು ನೆನಪಿದೆ. ಶಾಲೆಯಲ್ಲಿ ಸಿಕ್ಕಾಪಟ್ಟೆ ಕಿಲಾಡಿ ಎನ್ನುವ ಬಿರುದನ್ನು ಗಳಿಸಿಕೊಂಡಿದ್ದ ನನಗೆ ಮೂರು ದಿನಗಳ ಸತೀಶ ಮಾಸ್ತರ್ರ ಪ್ರತಾಪ ನೊಡಿ 15 ದಿನ ಪುಂಗಿ ಬಂದಾಗಿತ್ತು.
                ಕೊನೆಗೊಂದು ದಿನ ಸತೀಶ ಮಾಸ್ತರ್ರ ವರ್ಗಾವಣೆಯಾಗಿತ್ತು. ಅವರು ಅದೆಷ್ಟೇ ರುದ್ರ ಪ್ರತಾಪ ತೋರಿಸಲಿ, ಸಿಟ್ಟು ಮಾಡಲಿ, ಪ್ರೀತಿಯನ್ನು ತೋರಿಸಲಿ, ನಮ್ಮಲ್ಲಿ ಅದೇನೋ ಬಂಧ ಬೆಳೆದು ಬಿಟ್ಟಿತ್ತು. ಶಾಲೆ ಬಿಟ್ಟು ಹೋಗುವಾಗ ಮಾತ್ರ ಪ್ರತಿಯೊಬ್ಬರಿಗೂ ಒಂದೊಂದು ಲೋಟವನ್ನು ಕೊಡುಗೆಯಾಗಿ ಕೊಟ್ಟು ಹೋಗಿದ್ದರು. ಪ್ರೀತಿಯ ವಿದ್ಯಾರ್ಥಿಗಳಿಗೆ ಸತೀಶ ಮಾಸ್ತರ್ರ ನೆನಪಿನ ಕಾಣಿಕೆ ಎಂದು ಬರೆದ ಚೂಪಿ ಮುಕುಳಿಯ ಸ್ಟೀಲ್ ಲೋಟ ಮೊನ್ನೆ ಮೊನ್ನೆ ಮೊನ್ನೆಯ ವರೆಗೂ ನನ್ನ ಬಳಿ ಇತ್ತು. ಇಂತಹ ಸತೀಶ ಮಾಸ್ತರ್ರು ಈಗ ಎಲ್ಲಿದ್ದಾರೋ? ಏನು ಮಾಡುತ್ತಿದ್ದಾರೋ ಗೊತ್ತಿಲ್ಲ. ಮೊದಲ ಶಿಕ್ಷಕರು ಸದಾ ನೆನಪಿನಲ್ಲಿದ್ದಾರೆ.

ಅನಸೂಯಕ್ಕೋರು :
             ಅನಸೂಯಕ್ಕೋರಿಗೆ ನಾವು ಯಾವತ್ತೂ ಅನಸೂಯಕ್ಕೋರು ಎಂದು ಕರೆದಿದ್ದೇ ಇಲ್ಲ. ಹೆಡ್ಡಕ್ಕೋರು ಎಂದು ಅಡ್ಡ ಹೆಸರಿನಲ್ಲಿ ಕರೆದೇ ರೂಢಿ. ನಾನು ಬಿನ್ನೆತ್ತಿಯಲ್ಲಿದ್ದಾಗ ಅನಸೂಯಕ್ಕೋರು ನನಗೆ ಕಲಿಸಲು ಬಂದಿದ್ದರು. ಇವರ ಬಗ್ಗೆ ಹೆಚ್ಚೇನೂ ನನಗೆ ಗೊತ್ತಿಲ್ಲ ಬಿಡಿ. ಬಿನ್ನೆತ್ತಿಯಾಗಿದ್ದ ಕಾರಣ ನಾನು ಬಹಳ ಶಾಲೆಗೆ ಕಳ್ ಬೀಳುತ್ತಿದ್ದೆ. ಆವಾಗೆಲ್ಲಾ ಜೊತೆಯಲ್ಲಿದ್ದ ಹುಡುಗರು ಹೆಡ್ಡಕ್ಕೋರು ಹೊಡಿತ್ರು ತಡಿ ಎಂದು ಹೇಳುತ್ತಿದ್ದುದು ನೆನಪಿನಲ್ಲಿರುತ್ತಿತ್ತು. ಆದರೆ ಬಿನ್ನೆತ್ತಿಯಾದ ಕಾರಣ ಅವರು ಮಾಫಿ ಮಾಡುತ್ತಿದ್ದರು.
                  ಇಂತಹ ಸಂದರ್ಭದಲ್ಲಿಯೇ ಬಯಲು ಸೀಮೆಯ ಒಬ್ಬ ಹುಡುಗ ನನ್ನ ಗೆಳೆಯನಾಗಿ ಸಿಕ್ಕಿದ್ದ. ಅವನ ಹೆಸರೂ ವಿನಯನೇ.  ಹಳೆಯ ಶಾಲೆಯಲ್ಲಿ ಇದ್ದಿದ್ದು 2 ರೂಮುಗಳಾಗಿದ್ದವು. ಜೊತೆಗೆ ಹಾಲು ಡೇರಿ ಎಂದು ಕರೆಯುವ ಒಂದು ಔಟ್ ಹೌಸ್ ಶಾಲೆಯಿಂದ ಸ್ವಲ್ಪ ದೂರದಲ್ಲಿತ್ತು. ಬಿನ್ನೆತ್ತಿ, ಒಂದನೇ ಕ್ಲಾಸ್ ಹಾಗೂ 2ನೇ ಕ್ಲಾಸಿನ ಮಕ್ಕಳು ಈ ಔಟ್ ಹೌಸಿನಲ್ಲಿ ಉಳಿದುಕೊಳ್ಳಬೇಕಿತ್ತು. ಸರಿ ಸುಮಾರು 40 ಜನರಿದ್ದೆವೇನೋ. ಒಂದು ದಿನ ನಾನು ಹಾಗೂ ದೋಸ್ತ ವಿನಯ, ಅಡಕಳ್ಳಿಯ ವಿಜಯ ಔಟ್ ಹೌಸ್ ಶಾಲೆಯಲ್ಲಿ ಕುಳಿತಿದ್ದೆವು. ಎಲ್ಲರೂ ಪಾಠ ಕೇಳುತ್ತಿದ್ದರೆ ನಾವು ಮಾತ್ರ ಸುತ್ತ ಮುತ್ತ ಇದ್ದ ಮರ, ಬೆಟ್ಟ ಗುಡ್ಡ ನೋಡುತ್ತಿದ್ದೆವು. ಆಗಲೇ ಶಾಲೆಗೆ ಹೊಂದಿಕೊಂಡಂತೆ ಇದ್ದ ಮರವೊಂದರ ಮೇಲೆ ದೊಡ್ಡದೊಂದು ಹಾವಿರುವುದು ನಮ್ಮ ಕಣ್ಣಿಗೆ ಬಿದ್ದು ಬಿಟ್ಟಿತ್ತು. ದೊಡ್ಡದಾಗಿ ಗಲಾಟೆ ಎಬ್ಬಿಸಿದೆವು. ಗಲಾಟೆಯಿಂದಾಗಿ ಒಮ್ಮೆಲೆ ಎಲ್ಲರಿಗೆ ದಿಗ್ಭ್ರಮೆ. ಕೊನೆಗೆ ಸತೀಶ ಮಾಸ್ತರ್ರು ಯಾರನ್ನೋ ಕರೆಸಿ ಆ ಹಾವನ್ನು ಕೊಲ್ಲಿಸಿದ್ದು ನೆನಪಿನಲ್ಲಿದೆ. ಈ ಘಟನೆಯ ನಂತರ ಔಟ್ ಹೌಸಿನಲ್ಲಿ ಎಲ್ಲರಿಗೂ ಕಲಿಸುವ ಕಾರ್ಯಕ್ಕೆ ಪುಲ್ ಸ್ಟಾಪ್ ಬಿದ್ದಿತ್ತು. ನಾವೆಲ್ಲ ಕಿಕ್ಕಿರಿದು ತುಂಬಿದ್ದ ಶಾಲೆಯ ಮುಖ್ಯ ಕೊಠಡಿಗೆ ವಾಪಾಸಾಗಿದ್ದೆವು.

ಈಶ್ವರ ನಾಯ್ಕರು :
            ಈಶ್ವರ ನಾಯ್ಕರು ಸತೀಶ ಮಾಸ್ತರು ಕಲಿಸುತ್ತಿದ್ದ ಸಂದರ್ಭದಲ್ಲಿಯೇ ಶಾಲೆಗೆ ಬಂದವರು. ಕೇವಲ 5 ಅಡಿ ಎತ್ತರ ಇದ್ದ ಈ ಮಾಸ್ತರ್ರನ್ನು ಎಲ್ಲರೂ ಕುಳ್ಳೀಶ್ವರ ಮಾಸ್ತರ್ರು ಎಂದೇ ಕರೆಯುತ್ತಿದ್ದರು. ಅವರಿಗೆ ಹೀಗೆ ಕರೆಯುವುದಕ್ಕೂ ಮಜವಾದ ಕಾರಣವಿದೆ. ಈಗಿನಂತೆ ಆಗಲೂ ಮಾಸ್ತರ್ರು ಮಕ್ಕಳ, ಜನರ ಗಣತಿ ಮಾಡಲೇಬೇಕಿತ್ತು. ದಂಟಕಲ್ಲಿಗೆ ಬಂದಿದ್ದ ಈ ಶ್ವರ ಮಾಸ್ತರ್ರನ್ನು ನೋಡಿ ನನ್ನ ಪಕ್ಕದ ಮನೆಯ ಅತ್ತೆಯರು ಸಿಕ್ಕಾಪಟ್ಟೆ ಗೋಳು ಹೊಯ್ದುಕೊಂಡಿದ್ದರು. ಆಗಷ್ಟೇ ಹೈಸ್ಕೂಲನ್ನು ಮುಗಿಸಿದ್ದ ಅತ್ತೆಯರು ಈಶ್ವರ ಮಾಸ್ತರ್ರು ಕುಳ್ಳಗಿದ್ದಾರೆ ಎಂಬುದನ್ನೇ ದೊಡ್ಡ ಜೋಕ್ ಮಾಡಿ ನಗಲು ಆರಂಭಿಸಿದ್ದರು. ಇದರಿಂದಾಗಿ ಅವಮಾನ ಪಟ್ಟುಕೊಂಡಿದ್ದ ಮಾಸ್ತರ್ರು ನೊಂದುಕೊಂಡು ವಾಪಸಾಗಿದ್ದರು. ಆ ದಿನದ ನಂತರ ಈಶ್ವರ ನಾಯ್ಕರ ಪ್ರಸ್ತಾಪ ಬಂದಾಗಲೆಲ್ಲ ಕುಳ್ಳೀಶ್ವರ ಮಾಸ್ತರ್ರು ಎಂದೇ ಕರೆಯುವುದು ರೂಢಿಯಾಗಿತ್ತು.
               ಈ ಈಶ್ವರ ಮಾಸ್ತರ್ರು ಇದ್ದ ಸಂರ್ಭದಲ್ಲಿಯೇ ಒಂದು ಘಟನೆ ನಡೆಯಿತು. ಶಾಲೆಯಲ್ಲಿ ಎಲ್ಲರೂ ಕ್ರಿಕೆಟ್ ಹುಚ್ಚಿಗೆ ಬಲಿಯಾಗಿದ್ದ ಸಂದರ್ಭದಲ್ಲಿ ಸತೀಶ ಮಾಸ್ತರ್ರು ನಮ್ಮಲ್ಲಿ ಪುಟ್ ಬಾಲ್ ಹುಚ್ಚನ್ನು ಬೆಳೆಸಲು ಮುಂದಾಗಿದ್ದರು. ಎಲ್ಲ ಹುಡುಗರನ್ನೂ ಎದುರಿಗೆ ನಿಲ್ಲಿಸಿ ಪುಟ್ ಬಾಲ್ ಕೊಟ್ಟು ಬಿಟ್ಟಿದ್ದರು. ಎಲ್ಲರ ಜೊತೆ ನಾನೂ ಹುರುಪಿನಿಂದ ಆಡಲು ಶುರು ಮಾಡಿದ್ದೆ. ಹೀಗಿದ್ದಾಗಲೇ ದತ್ತಾತ್ರೆಯ ಎಂಬ ದೈತ್ಯ ಹುಡುಗನೊಬ್ಬ ಜೋರಾಗಿ ಓಡಿಬಂದು ನನಗೆ ಢಿಕ್ಕಿ ಹೊಡೆದು ಬಿಟ್ಟಿದ್ದ. ಢಿಕ್ಕಿ ಹೊಡೆದ ರಭಸಕ್ಕೆ ನಾನು ಹಾರಿ ಹೋಗಿ ದೊಪ್ಪನೆ ಬಿದ್ದಿದ್ದೆ. ಬಿದ್ದ ಹೊಡೆತಕ್ಕೆ ಕಲ್ಲಿಗೆ ಜೋರಾಗಿ ನನ್ನ ತಲೆ ಬಡಿದು ಬಿಟ್ಟಿತ್ತು. ಬಡಿದ ರಭಸಕ್ಕೆ ತಲೆ ಒಡೆದು ಬಳಬಳನೆ ರಕ್ತ ಸುರಿಯಲು ಆರಂಭವಾಗಿತ್ತು. ತಕ್ಷಣವೇ ಹೆದರಿದ ಸತೀಶ ಮಾಸ್ತರ್ರು ಆಟವನ್ನು ಖೈದು ಮಾಡಿದ್ದರು. ಓಡಿ ಹೋದ ಕುಳ್ಳೀಶ್ವರ ಮಾಸ್ತರ್ರು ತಾವು ಚಾ ಮಾಡಲು ಬಳಕೆ ಮಾಡುತ್ತಿದ್ದ ಚಾಸೊಪ್ಪನ್ನು ತಂದು ಗಾಯಗೊಂಡ ನನ್ನ ತಲೆಗೆ ಹಾಕಿದ್ದರು. ರಕ್ತ ಬರುವುದು ನಿಂತಿತ್ತು. ಈಗಲೂ ನನ್ನ ತಲೆಯ ಮೇಲೆ ಚಿಕ್ಕಂದಿನ ಆ ಗಾಯ ಹಾಗೇ ಉಳಿದುಕೊಂಡಿದೆ. ಆ ಗಾಯದ ಕಲೆಯನ್ನು ಮುಟ್ಟಿಕೊಂಡಾಗೆಲ್ಲ ಸತೀಶ ಮಾಸ್ತರ್ರು, ಕುಳ್ಳೀಶ್ವರ ಮಾಸ್ತರ್ರು, ಪುಟಬಾಲ್ ಆಟ ಹಾಗೂ ನನಗೆ ಢಿಕ್ಕಿ ಹೊಡೆದ ದತ್ತಾತ್ರೇಯ ನೆನಪಾಗುತ್ತಿರುತ್ತಾರೆ.

(ಮುಂದುವರಿಯುತ್ತದೆ)

ಚುಟುಕು-ಗುಟುಕು

ದೂರದಿಂದ ಹಕ್ಕಿಯೊಂದು
ತನ್ನ ಮರಿಯ ಮನದಿ ನೆನೆದು
ಚಿಕ್ಕ ಗುಡುಕು ನೀಡಲೆಂದು
ಹಾರಿ ಬಂದಿತು ||

ಕಾಡಿನಲ್ಲಿ ಬೇಟೆಯರಸಿ
ನದಿಗಳಲ್ಲಿ ಮೀನು ಹುಡುಕಿ
ಮರಿಯ ಹಸಿವು ತಣಿಸಲೆಂದು
ಗುಟುಕು ತಂದಿತು ||

ಮರಿಯು ತಾನು ದಾಹದಿಂದ
ತಾಯ ತಾನು ಬೇಗ ಕರೆಯೆ
ಮರಿಯ ಧ್ವನಿಯ ತಾನು ಕೇಳಿ
ಓದಿ ಬಂದಿತು ||

ತಾನು ತಂದ ಬೇಟೆಯನ್ನು
ಚಿಕ್ಕ ಪುಟ್ಟ ಮರಿಗೆ ನೀಡಿ
ತನ್ನ ಮರಿಯ ಹಸಿವು ನೀಗಿ
ಖುಷಿಯ ಹೊಂದಿತು ||

ಈ ದೃಶ್ಯ ಕವಿಗೆ ಕಂಡು
ಕವಿಯ ಹೃದಯ ಪುಳಕಗೊಂಡು
ಕವನವೊಂದು ಹೊರಗೆ ಬರಲು
ತವಕಗೊಂಡಿತು ||

ಕವಿಯು ಬರೆದ ನಾಲ್ಕು ಸಾಲೆ
ಬಾವ ತುಂಬಿ ಹಾಡಿದಾಗ
ಬರೆದ ಬರಹವದು ಆಗ
ಕವನವಾಯಿತು ||

**********

(ಈ ಕವಿತೆಯನ್ನು ಬರೆದಿರುವುದು 26-11-2004ರಂದು ನಾಣೀಕಟ್ಟಾದಲ್ಲಿ)
(ಪಿಯುಸಿ ಓದುತ್ತಿದ್ದ ಸಂದರ್ಭ. ಆಗಷ್ಟೇ ಕವಿತೆಗಳನ್ನು ಬರೆಯಲು ಆರಂಭ ಮಾಡಿದ್ದೆ. ಒಂದಿಷ್ಟು ಬಾಲಿಶ ಕವಿತೆಗಳನ್ನು ಬರೆದು ವಗಾಯಿಸಿದ್ದೆ. ಅದನ್ನು ದೋಸ್ತರು ಕಂಡು ನನಗೆ ಕವಿಯೆಂಬ ಪಟ್ಟವನ್ನೂ ಕಟ್ಟಿಬಿಟ್ಟಿದ್ದರು. ಈ ವಿಷಯ ನಮ್ಮ ಕನ್ನಡ ಉಪನ್ಯಾಸಕರಾದ ವಿ. ಎಸ್. ಹೆಗಡೆಯವರ ಕಿವಿಗೂ ಬಿದ್ದಿತ್ತು. ನನ್ನ ಕವಿತೆ ಯಾವ ರೀತಿ ಇರಬಹುದು ಎಂಬುದನ್ನು ಪರೀಕ್ಷೆ ಮಾಡಲು ಬಹುಶಃ ಇಟ್ಟರೇನೋ ಅನ್ನಿಸುತ್ತಿದೆ. ಒಂದು ಕವನ ಬರೆಯುವ ಸ್ಪರ್ಧೆ ಇಟ್ಟರು. ಹಕ್ಕಿಯ ಚಿತ್ರವೊಂದನ್ನು ಇಟ್ಟರು. ಗುಟುಕು ನೀಡುತ್ತಿದ್ದ ಹಕ್ಕಿಯ ಚಿತ್ರ ಅದು. ಅದನ್ನು ನೋಡಿ ಕವಿತೆ ಬರೆಯಬೇಕಿತ್ತು. ಎಲ್ಲರಿಗಿಂತ ಲೇಟಾಗಿ ಬಂದು ಕವಿತೆ ಬರೆಯಲು ಕುಳಿತು ಏನೋ ಬರೆದು ಕೊಟ್ಟು ಬಂದಿದ್ದೆ. ಮಜಾ ಅಂದರೆ ನನ್ನ ಕವಿತೆಗೆ ಮೊದಲ ಸ್ಥಾನ ಬಂದಿತ್ತು. ನನ್ನ ಕವಿತೆ ಚನ್ನಾಗಿರಲಿಲ್ಲ ಎಂದುಕೊಂಡಿದ್ದೆ. ಮೊದಲ ಪ್ರಶಸ್ತಿ ಬಂದ ನಂತರ ಅನ್ನಿಸಿದ್ದೆಂದರೆ ಉಳಿದವರೆಲ್ಲರೂ ನನಗಿಂತ ಕೆಟ್ಟದಾಗಿ ಬರೆದಿದ್ದರು ಎನ್ನುವುದು. ಅದೇ ಕವಿತೆ ಇಲ್ಲಿದೆ ನೋಡಿ. 2004-05ನೇ ಸಾಲಿನ ಕವಿತಾ ರಚನೆ ಸ್ಪರ್ಧೆಯಲ್ಲಿ ಮೊಟ್ಟಮೊದಲ ಬಹುಮಾನ ತಂದುಕೊಟ್ಟ ಕವಿತೆ)