Wednesday, March 4, 2015

ಅಘನಾಶಿನಿ ಕಣಿವೆಯಲ್ಲಿ-14

              `ದೇವಸ್ತಾನಕ್ಕೆ ನಾನು ಹಾಗೂ ದೀಪು ಇಬ್ಬರೂ ಹೋಗಿದ್ವಿ. ದೇವಸ್ತಾನದಲ್ಲಿ ಸಿಕ್ಕಾಪಟ್ಟೆ ಜನ ಇದ್ದರು. ನಾನು ದೇವಸ್ತಾನದ ಒಳಕ್ಕೆ ಹೋದೆ. ಹಿಂದೆಯೇ ಉಳಿದುಕೊಂಡ ಪ್ರದೀಪ ಅದೆಲ್ಲೋ ತಪ್ಪಿಸಿಕೊಂಡುಬಿಟ್ಟ. ನಂತರ ದೇವಸ್ತಾನ, ಅಲ್ಲಿ ಇಲ್ಲಿ ಎಲ್ಲ ಕಡೆಗೆ ಹುಡುಕಿದೆ. ಬಹಳ ಹೊತ್ತು ಕಾದೆ. ಆದರೆ ಸಿಗಲಿಲ್ಲ. ಕೊನೆಗೆ ಬಸ್ ಸ್ಟಾಂಡಿಗೆ ಬಂದು ಇಲ್ಲಿ ಹುಡುಕಿದರೆ ಇಲ್ಲಿಯೂ ಇಲ್ಲ ಮಾರಾಯಾ.. ಎಲ್ಲಿಗೆ ಹೋಗಿಬಿಟ್ಟನೋ.' ಎಂದ ವಿನಾಯಕ.
             `ಹೌದಾ.. ಥೋ.. ಇದೊಂದು ಹೊಸ ತಲೆಬಿಸಿ ಬಂತಲಾ ಮಾರಾಯ... ಬಾ ಮೊದ್ಲು ಹುಡ್ಕನ.. ನಮಗೆಲ್ಲ ಶಿರಸಿ ಗೊತ್ತಿದ್ದು. ಅವಂಗೆ ಗೊತ್ತಿಲ್ಲೆ. ಎಲ್ಲಿ ಅಲೆದಾಡ್ತಾ ಇರ್ತ್ನೋ.. ಬನವಾಸಿ ರೋಡು ಹಿಡಿದು ಹೋದ್ನಾ ಎಂತದೇನ ಮಾರಾಯಾ.. ಥೋ..' ಎಂದು ಗೊಣಗಾಡುತ್ತ ಎಲ್ಲರ ಜೊತೆ ಸೇರಿ ಹುಡುಕಾಡತೊಡಗಿದ ವಿಕ್ರಮ.
             ಅರ್ಧ ತಾಸಿನ ಹುಡುಕಾಟದ ನಂತರ ಪ್ರದೀಪ ಸಿಕ್ಕ. ಅದ್ಯಾವುದೋ ಬಝಾರ ರಸ್ತೆಯಿಂದ ಬಸ್ ಸ್ಟಾಂಡ್ ಕಡೆಗೆ ನಡೆದುಕೊಂಡು ಬರುತ್ತಿದ್ದ. ಹುಡುಕುತ್ತಿದ್ದವರು ನಿರಾಳರಾದರು. `ಲೇ ಹಲ್ಕಟ್.. ಎಲ್ಲಿ ಹಾಳ್ ಬಿದ್ದು ಹೋಗಿದ್ಯಲೆ..' ಎಂದು ಬೈದ ವಿಕ್ರಮ
           `ಇಲ್ಲ ಮಾರಾಯಾ.. ದೇವಸ್ತಾನದಲ್ಲಿ ಸಿಕ್ಕಾಪಟ್ಟೆ ಜನ ಇದ್ದರು. ವಿನಾಯಕ ತಪ್ಪಿಹೋದ. ದೇವಸ್ತಾನದ ತುಂಬೆಲ್ಲ ಹುಡುಕಾಡಿದೆ. ಕಾಣಿಸಲಿಲ್ಲ. ನನ್ನನ್ನು ಹುಡುಕುತ್ತಾ ಇರಬೇಕು ಅಂತ ಎಲ್ಲ ಕಡೆ ಹುಡುಕಾಡುತ್ತ ಬಂದೆ. ಕೊನೆಗೆ ಬಸ್ ನಿಲ್ದಾಣದ ಬಳಿ ಇರಬೇಕು ಎಂದುಕೊಂಡು ಬಂದರೆ ಕಾಣಿಸಲಿಲ್ಲ ನೋಡು. ಎಲ್ಲಿ ಹೋದರೂ ಇಲ್ಲಿ ಬರ್ತಾರಲ್ಲಾ ಅಂದುಕೊಂಡು ನಾನೇ ಬರ್ತಾ ಇದ್ದಾಗ ಇದೋ ನೀವು ಸಿಕ್ಕಿದ್ರಿ ನೋಡಿ..' ಎಂದ ಪ್ರದೀಪ.
           ವಿಕ್ರಮನಿಗೆ ಪ್ರದೀಪ ಯಾಕೋ ಸುಳ್ಳು ಹೇಳುತ್ತಿದ್ದಾನೆ ಅನ್ನಿಸಿತು. ಅಲ್ಲದೇ ಅಪರಿಚಿತ ಪ್ರದೇಶದಲ್ಲಿ ಕಾಣೆಯಾದಾಗ ಇರಬೇಕಾದಂತಹ ಗಾಬರಿ, ಭಯ ಇತ್ಯಾದಿ ಭಾವನೆಗಳು ಪ್ರದೀಪನ ಮುಖದ ಮೇಲೆ ಇರಲಿಲ್ಲ. ವಿಕ್ರಮ ಇದನ್ನು ಗಮನಿಸಿದ್ದ. ಕೊನೆಗೊಮ್ಮೆ ಅವರೆಲ್ಲರೂ ಶಿರಸಿಯಿಂದ ವಾಪಾಸಾದರು.
           ಯಾರಿಗೂ ಮಾರಿಕಾಂಬಾ ದೇವಸ್ತಾನದ ರಸ್ತೆಯೇ ಬೇರೆ, ಪ್ರದೀಪ ಬಸ್ ಸ್ಟಾಂಡ್ ಕಡೆಗೆ ಆಗಮಿಸುತ್ತಿದ್ದ ಬಝಾರಿನ ರಸ್ತೆಯೇ ಬೇರೆ ಎನ್ನುವ ಅನುಮಾನ ಬರದೇ ಇರುವುದು, ಪ್ರದೀಪನನ್ನು ಹೆಚ್ಚಿಗೆ ವಿಚಾರಣೆ ನಡೆಸದೇ ಇರುವುದು ಕಥೆಯ ಮುಂದಿನ ಬಹುದೊಡ್ಡ ತಿರುವಿಗೆ ಕಾರಣವಾಗಿತ್ತು. ಪ್ರದೀಪ ಮಾತ್ರ ದೊಡ್ಡ ಸಮಸ್ಯೆಯಿಂದ ಪಾರಾದಂತಹ ಸಂತಸವನ್ನು ಅನುಭವಿಸಲು ಆರಂಭಿಸಿದ್ದ. ಆ ದಿನ ಎಪ್ರಿಲ್ 15 ನೇ ತಾರೀಕಾಗಿತ್ತು.

***

          ವಿಕ್ರಂ ಕೊನೆಗೊಂದು ದಿನ ವಿನಾಯಕನಿಗೆ ತಮ್ಮ ತಂಡ ಯಾವ ಕಾರಣಕ್ಕಾಗಿ ಶಿರಸಿ, ದಂಟಕಲ್ಲಿಗೆ ಆಗಮಿಸಿದೆ ಎನ್ನುವುದರ ಕಾರಣವನ್ನು ತಿಳಿಸಿದ. ವಿನಾಯಕ ಅದಕ್ಕೆ ಪ್ರತಿಯಾಗಿ ತನ್ನ ಸಹಾಯ ಯಾವಾಗಲೂ ಸಿಗುತ್ತದೆ. ಜೊತೆಯಲ್ಲಿ ಈ ವಿಷಯವನ್ನು ಮತ್ತಿನ್ಯಾರಿಗೂ ತಿಳಿಸುವುದಿಲ್ಲ ಎಂದೂ ಹೇಳಿದ.

****12****

            `ತಮಾ.. ದ್ಯಾವನ್ನ ಕರ್ಕಂಡು ಹೋಗಿ ನಿಂಗವೆಲ್ಲಾ ನಮ್ಮೂರ ಕಾನನ್ನು ಸುತ್ತಾಡ್ಕ್ಯಂಡ್ ಬರ್ರಾ...' ಎಂದು ಶ್ರೀಕಂಠ ಹೆಗಡೆಯವರು ಹೇಳಿದಾಗ ಎಲ್ಲರನ್ನೂ ಕರೆದುಕೊಂಡು ಕಾಡಿನ ಕಡೆಗೆ ಹೊರಟ ವಿನಾಯಕ ಶ್ರೀರಾಮಚಂದ್ರ ಕಪಿಗಳೊಡನೆ ಲಂಕೆಗೆ ಹೊರಟಂತೆ.
             ದ್ಯಾವ ತಂಡಕ್ಕೆ ಮುಂದಾಳು. ಇಡಿಯ ಮೈಗೊಂದು ಬಿಳಿಯ ನಿಲುವಂಗಿ, ಸೊಂಟಕ್ಕೊಂದು ಕೊಳಕಾದ ಪಂಚೆ ಇವಿಷ್ಟು ದ್ಯಾವನ ವಸ್ತವಿನ್ಯಾಸಗಳಾಗಿದ್ದವು. ಸೊಂಟಕ್ಕೊಂದು ಅಂಡುಗೊಕ್ಕೆ ಕಟ್ಟಿಕೊಂಡು ಅದಕ್ಕೆ ಕತ್ತಿಯನ್ನು ತೂಗು ಹಾಕಿದ್ದ. ದ್ಯಾವ ಮುಂದೆ ಮುಂದೆ ಹೋದಂತೆಲ್ಲ ಆ ಕತ್ತಿ ಲಟ ಲಟ ಎಂದು ಸದ್ದು ಮಾಡುತ್ತಿತ್ತಲ್ಲದೇ ದ್ಯಾವನ ಕಾಲಿಗೆ ಬಡಿಯುತ್ತಿತ್ತು. ಹೆಗಲ ಮೇಲೆ ಮಾರುದ್ದದ ಕೋಲನ್ನು ಹೊತ್ತು ನಡೆಯುತ್ತಿದ್ದ ದ್ಯಾವನಿಗೆ ಕನಿಷ್ಟ 50 ವರ್ಷಗಳಾಗಿವೆ. ಆತನ ಅಸಲೀ ವಯಸ್ಸು ಎಷ್ಟೆನ್ನುವುದು ಯಾರಿಗೂ ಗೊತ್ತಿಲ್ಲ. `ನಾನು ಚಿಕ್ಕವನಿದ್ದಾಗ ಹೇಗಿದ್ದನೋ.. ಈಗಲೂ ದ್ಯಾವ ಹಾಗೆಯೇ ಇದ್ದಾನೆ..' ಎಂದು ವಿನಾಯಕ ದ್ಯಾವನ ಬಗ್ಗೆ ಹೇಳಿಬಿಟ್ಟಿದ್ದ.
              ದ್ಯಾವನ ಬಳಿಯೇ ವಯಸ್ಸನ್ನು ಕೇಳಿದರೆ ಮೂರು ಮೂವತ್ತು ವಯಸ್ಸಾಯಿತು ಎನ್ನುತ್ತಾನೆ. ಮೂರು ಮೂವತ್ತು ಅಂದರೆ 90 ವರ್ಷ ವಯಸ್ಸಾಗಿರಬೇಕು. ತಮಾಷೆ ಮಾಡಬೇಡ ದ್ಯಾವ.. ನಿನ್ ವಯಸ್ಸೆಷ್ಟು ಎಂದು ಕೇಳಿದರೆ `ಅದನ್ನು ಕಟ್ಟಿಗ್ಯಂಡು ಎಂತಾ ಮಾಡ್ತೀರಿ ನೀವು ಹೇಳಿ..' ಎಂದು ಸಾಗಹಾಕುತ್ತಾನೆ. ಶ್ರೀಕಂಠ ಹೆಗಡೆಯವರು ಹೇಳಿದ ಪ್ರಕಾರ ದ್ಯಾವ ತನಗಿಂತ ದೊಡ್ಡವನು ಎಂಬುದು ಪಕ್ಕಾ. ವಯಸ್ಸು ಬಹಳ ಆಗಿದ್ದರೂ ಆತನ ತಲೆಗೂದಲು ನೆರೆತಿರಲಿಲ್ಲ. ಆತನ ಮೈಬಣ್ಣ  ಬಿಸಿಲಿನಲ್ಲಿ ಕೆಲಸ ಮಾಡಿ ಅದೆಷ್ಟು ಕಪ್ಪಗಾಗಿತ್ತೋ, ತಲೆಗೂದಲೂ ಕೂಡ ಅದೇ ರೀತಿ ಇತ್ತು. ಇಂತಹ ದ್ಯಾವ ಗ್ರಾಮೀಣ ಭಾಗದ ವಿಶ್ವಕೋಶ. ಕಾಡಿನ ಬಗ್ಗೆ ತಿಳಿದುಕೊಳ್ಳದ ವಿಷಯವೇ ಇಲ್ಲ. ಇಂತಹ ಮುಂದಾಳುಗಳನ್ನು ಹೊಂದಿದ್ದರೆ ಯಾರು ತಾನೆ ಕಾಡಿನಲ್ಲಿ ಭಯದಿಂದ ನಡೆಯುತ್ತಾರೆ?
             ದ್ಯಾವನ ಹಿಂದೆ ವಿಕ್ರಮ, ವಿನಾಯಕ, ವಿಷ್ಣು ಹಾಗೂ ಪ್ರದೀಪರು ವೀರ ಸೇನಾನಿಗಳಂತೆ ಮುಂದಕ್ಕೆ ಹೊರಟರು. ಈ ನಾಲ್ವರು ಗಂಭೀರವಾಗಿ ಮುಮದೆ ಸಾಗುತ್ತಿದ್ದರೆ ರಮ್ಯಾ, ಸ್ನೇಹ, ವಿಜೇತರ ಗುಂಪು ರಾಣೀವಾಸದ ಗುಂಪಿನಂತೆ ಕೇಕೆಯೊಂದಿಗೆ ಸಾಗುತ್ತಿತ್ತು. ಮುಂದಿದ್ದವರ ಸಾಲು ಯುದ್ಧಕ್ಕೆ ಹೊರಟವರಂತಿದ್ದರೆ ಹಿಂದಿದ್ದವರ ಸಾಲು ಯುದ್ಧಕ್ಕೆ ರಣಕಹಳೆಯನ್ನು ಊದುತ್ತಿದ್ದ ಹಾಗಿತ್ತು.
             `ಹೋಯ್.. ಸ್ವಲ್ಪ ಸುಮ್ಮಂಗ್ ಬನ್ನಿ ನೋಡ್ವಾ.. ಬರೀ ಕಚಾ ಪಚಾ ಹಲ್ಬಕಂತ ಬರ್ಬೇಡಿ.. ಅದೆಂತಾ ಗಲಾಟೆ ಮಾಡ್ಕಂತ ಬರ್ತೀರಿ..?' ಎಂದು ದ್ಯಾವ ಅಸಹನೆಯಿಂದ ಗದರಿದಾಗಲೇ ಮಹಿಳಾ ಮಣಿಗಳು ಸುಮ್ಮನಾಗಿದ್ದು.
              `ಕಾನ್ ನೋಡಕ್ಕೆ ಅಂತ ಬಮದ್ ಕಂಡು ಹಿಂಗ್ ಕೂಗ್ತಾ ಬರ್ತಾ ಇದ್ರೆ ಕಾಡ್ನಾಗೆ ಯಾವುದೇ ಪ್ರಾಣಿ ಇದ್ರೂ ಓಡಿ ಹೋಗ್ತದೆ. ನಿಮಗೆಂತ ಮಣ್ಣೂ ಸಿಗಾದಿಲ್ಲ ನೋಡಿ.. ಹಗಲ್ನಾಗೆ ಎಂತಾದ್ರೂ ಓಡಾಡ್ತಾ ಇದ್ರೆ ಅವೆಲ್ಲ ನಾಪತ್ತೆಯಾಗ್ತವೆ.. ಸ್ವಲ್ಪ ಸುಮ್ಮಂಗಿರಿ ನೋಡ್ವಾ..' ಎಂದು ಮತ್ತೊಮ್ಮೆ ಹೇಳಿದ ದ್ಯಾವ.
              `ದ್ಯಾವ ಇಲ್ಲಿ ಹುಲಿ ಉಂಟಾ..?' ಎಂದು ಕೇಳಿದಳು ವಿಜೇತಾ.
              `ಹೌದಮ್ಮಾ. ಈ ಕಾನಿನಾಗೆ ಮೂರು ಐತೆ. ಈಗ ಬ್ಯಾಸ್ಗೆ ಬಂತಲ್ರಾ.. ಹಂಗಾಗಿ ಕಣ್ಣಿಗ್ ಕಾಣೂದಿಲ್ಲಾ. ಮಳೆ ಮುಗದು ಚಳಿಗಾಲ ಬಂದ್ ತಕ್ಷಣ ಈ ಕಡೆಗೆ ಬರ್ತಾವೆ ನೋಡಿ. ಖಾಯಂ ಇಲ್ಲಿ ಇರೋದಿಲ್ಲ. ಮತ್ತೀಹಳ್ಳಿ, ನಿಲ್ಕುಂದ, ಭತ್ತಗುತ್ತಿಗೆ, ಹೆಗ್ಗರಣಿ ಹಿಂಗೆ ಸುತ್ತಾಡ್ತಾ ಇರ್ತಾವೆ. ಆದರೆ ಗಮಯಾ, ಹಂದಿ, ಬರ್ಕ, ಜಿಂಕೆ, ಮಿಕ ಇವೆಲ್ಲ ಐತೆ. ಆವಾಗಾವಾಗ ಕಾಣ್ತಾ ಇರ್ತದೆ ..' ಎಂದ ದ್ಯಾವ.
               `ನೀ ನೋಡಿದ್ಯಾ ಹುಲಿನಾ..?' ಎಂದು ಕೇಳಿದಳು ಆಕೆ.
               `ಹೌದಮ್ಮಾ.. ಸುಮಾರ್ ಸಾರಿ ಕಂಡೀನಿ. ನಾನು ಜೇನು ಕುಯ್ಯಾಕೆ ಹೋಗ್ತಿದ್ದಾಗೆಲ್ಲಾ ಕಾಣ್ತಿದ್ವು ಅವು..' ಎಂದ ಆತ.
                `ಆಗೆಲ್ಲಾ ನಿಂಗೆ ಭಯ ಆಗಿಲ್ವಾ..?'
                `ಹೋಗ್ರಮ್ಮಾ.. ನಾವ್ಯಾಕೆ ಹೆದರ್ಕಬೇಕು ಹುಲಿಗೆ.. ಹೆದರುವಂತದ್ದು ನಾವೇನಾದ್ರೂ ಮಾಡಿದ್ದೀವಾ ಹುಲಿ ಗೆ.. ಸುಮ್ಮ ಸುಮ್ಮನೆ ನಮ್ಮ ಮೇಲೆ ದಾಳಿ ಮಾಡಲಿಕ್ಕೆ ಹುಲಿಗೆ ತಲೆ ಹನ್ನೆರಡಾಣೆ ಆಗಿರ್ತದಾ? ನೋಡ್ರಮ್ಮಾ.. ಮನುಷ್ಯರಾದ್ರೆ ಸೊಕಾ ಸುಮ್ಮನೆ ಮೈಮೇಲೆ ಬರ್ತವೆ ಅನ್ನಬೌದು. ಆದರೆ ಹುಲಿ ಹಂಗಲ್ಲ ನೋಡಿ.. ನಾವೇನೂ ಮಾಡದೇ ಅದು ನಮ್ಮ ಮೈಮೇಲೆ ಏರಿ ಬರುವುದಿಲ್ಲ. ಅದರ ಪಾಡಿಗೆ ಅದು ಇರ್ತದೆ ನಮ್ಮ ಪಾಡಿಗೆ ನಾವಿರ್ತೇವೆ..' ಎಂದ ದ್ಯಾವ. ವಿಜೇತಾಳಿಗೆ ಅವನ ಮಾತು ಹೌದೆನ್ನಿಸಿತು.
               ನಂತರ ಮಾತುಗಳು ಕಾಡೆಮ್ಮೆ ಹಾಗೂ ಉಳಿದ ಪ್ರಾಣಿಗಳ ಬಗೆಗೆ ಸರಿಯಿತು. ವಿನಾಯಕ ತಾನು ಕಾಲೇಜು ಓದುತ್ತಿದ್ದ ಸಂದರ್ಭದಲ್ಲಿ ಕಾಲೇಜಿಗೆ ಹೋಗುವಾಗ ಪದೇ ಪದೆ ಕಾಡೆಮ್ಮೆ, ಜಿಂಕೆಗಳಿಗೆ ಎದುರಾ ಬದರಾಗುತ್ತಿದ್ದುದನ್ನು ಹೇಳಿದ. ಕೆಲವು ಸಾರಿ ಮನೆಯ ಪಕ್ಕದಲ್ಲಿಯೇ ಸೀಳುನಾಯಿಗಳ ಹಿಂಡು ಹಾದು ಹೋಗುತ್ತದೆ ಎನ್ನುವುದನ್ನೂ ಹೇಳಿದ. ಆತ ಕಾಡಿನ ಕತೆಗಳನ್ನು ವಿವರಿಸಿ ವಿವರಿಸಿ ಹೇಳುತ್ತಿದ್ದರೆ ಉಳಿದವರು ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿದ್ದರು.             

ಒಮ್ಮೆ ತಿರುಗಿ ನೋಡು

ಗೆಳತಿ ನೀನು ನನ್ನ ಕಡೆಗೆ
ಒಮ್ಮೆ ತಿರುಗಿ ನೋಡು
ಬದುಕಿ ನಾವು ಬಾಳಬೇಕು
ಸದಾ ಕಾಲ ಜೋಡು ||

ಸದಾ ಕಾಲ ಜೊತೆಗಿರಲಿ
ನಿನ್ನದೊಂದು ಕಿರುನಗು
ಕಳೆದು ಬಿಡಲಿ ಕಷ್ಟ ದು:ಖ
ಶತಮಾನದ ಬಿಗು ||

ಮುನ್ನಡೆಯುವ ಮುನ್ನ ನನ್ನ
ತಿರುಗಿ ನೋಡು ಗೆಳತಿ
ತುಂಬಿಕೊಂಡು ನಿಂತಿರುವೆ
ನನ್ನೊಳಗೆ ಪ್ರೀತಿ ||

ಹುಸಿಮುನಿಸ ಮರೆತು ಬಿಡು
ನಾನಿರುವೆ ಜೊತೆಗೆ
ಜೊತೆಗೆ ನೀನು ಹೆಜ್ಜೆ ಹಾಕು
ಮೆರೆದು ಬಿಡಲಿ ಒಸಗೆ ||

***
(ಈ ಕವಿತೆಯನ್ನು ಬರೆದಿರುವುದು 04-03-2014ರಂದು ಶಿರಸಿಯಲ್ಲಿ)

Monday, March 2, 2015

ದಾರಿ ಸಾಗುವಾಗ

ದೂರ ಸಾಗುವ ದಾರಿಯಲ್ಲಿ
ಹಿಂತಿರುಗಿ ನೋಡು ಗೆಳೆಯಾ
ಕಾಣುವವು ಕಳೆದ ಹಲವು
ಕಷ್ಟಗಳ ಪರೀಧಿ, ಛಲ, ಗೆಲುವು ||

ದೂರ ಸಾಗಿದಾಗ ಪಡೆದ ಗೆಲುವಿಗೆ
ಸಹಾಯ ಹಲವರದು
ಅವರ ಪ್ರೀತಿಯ ಕಾಣ್ಕೆ
ನಿನ್ನೀ ಗೆಲುವಿನ ಉಡುಗೊರೆ ||

ಗೆದ್ದು ಆಗಸವ ಮುಟ್ಟುವಾಗ
ಏರಿದೇಣಿಯ ಮರೆಯಬೇಡ..
ಕೊನೆಮುಟ್ಟಿ ಗೆದ್ದು ನಿಂತಾಗ
ಕಾಲಕೆಳಗಿನೇಣಿಯ ಒದೆಯಬೇಡ ||

ನೆನಪಿರಲಿ, ತಂದೆ-ತಾಯಿ ಪ್ರೀತಿ
ಬಿದ್ದಾಗಲೆತ್ತಿದವರ ನೆನಪು
ಕೈ ಹಿಡಿದು ನಡೆಸಿದವರು, ಜೊತೆ
ಸಾಕಿ ಬಾಳ ಸಲಹಿದವರು ||

ದೂರ ಸಾಗುವ ದಾರಿಯಲ್ಲಿ
ಎಲ್ಲರ ಜೊತೆ ಇರಲಿ ಗೆಳೆಯಾ.
ಜೊತೆ ಬಂದವರ ತೊರೆಯದೇ
ಅವರ ನೀ ಸಲಹು ಗೆಳೆಯಾ ||

****

(ಈ ಕವಿತೆಯನ್ನು ಬರೆದಿರುವುದು 05-10-2006ರಂದು ದಂಟಕಲ್ಲಿನಲ್ಲಿ)
(ಈ ಕವಿತೆಯನ್ನು ಆಕಾಶವಾಣಿ ಕಾರವಾರದಲ್ಲಿ ವಾಚನ ಮಾಡಲಾಗಿದೆ)

Sunday, March 1, 2015

ಹೊಸದಷ್ಟು ಹನಿಗಳು

ವೆಂಕಿಯ ಬೆಂಕಿ

ಭಾರತದ ಅದ್ಭುತ ಬೌಲರ್ ವೆಂಕಿ
ಅವನೆಂದರೆ ಪಾಕಿಸ್ತಾನಕ್ಕೆ ಬೆಂಕಿ |
ವೆಂಕಿಗೆ ಬಂದರೆ ಸಿಟ್ಟು
ಬೀಳುತ್ತಿತ್ತು ಅಮೀರ್ ಸೊಹೈಲ್ ವಿಕೆಟ್ಟು ||

ನಕ್ಷತ್ರಗಳ ಸುತ್ತುವಿಕೆ

ವಿಶ್ವದೆಲ್ಲೆಡೆಯಲ್ಲಿ
ನಕ್ಷತ್ರಗಳು ಸುತ್ತುತ್ತವೆ
ಎಂದು ವಿಜ್ಞಾನಿಗೆ ತಿಳಿದಿದ್ದು ಹೇಗೆ?
ಬಹುಶಃ ಅವನ ಹೆಂಡತಿ
ಲಟ್ಟಣಿಗೆಯಿಂದ ತಲೆಗೆ ಬಡಿದಾಗ
ಸುತ್ತಲೂ ನಕ್ಷತ್ರಗಳು ಸುತ್ತಿರಬೇಕು ||

ಮೊಡವೆ

ಮೊಡವೆ ಎಂದರೆ
ಹೆಣ್ಣು ಹುಡುಗಿಯ ಮೊಗದ
ಭಾವನೆಗಳು ಹೊರ ಹೋಗುವ
ಒಂದು way ||

ಬಸ್ಸಿನ ಪರಿಸ್ಥಿತಿ

ನಮ್ಮ ರಾಜ್ಯ ಸಾರಿಗೆಯ ಬಸ್ಸು
ಯಾವಾಗಲೂ ಹೋಗಲು ಬಯಸುತ್ತದೆ ಜೋರು |
ಆದರೆ ಏನು ಮಾಡಿದರೂ
ಸರಿಯಾಗಿ ಬೀಳುವುದೇ ಇಲ್ಲ ಇದರ ಗೇರು ||

ರೈತ

ರೈತನೆಂದರೆ ಬರೀ
ದುಡಿದು ಬೆಳೆಯುವವನಲ್ಲ |
ಕಾಲ ಬಂದಾಗ ಆತ
Riot ಕೂಡ
ಆಗಬಲ್ಲವ ಎಂದರ್ಥ ||


Saturday, February 28, 2015

ಮಲೆನಾಡಿನಲ್ಲೊಂದು ಅಪರೂಪದ ಕೆಂಡ ಹಾಯುವ ಕಾರ್ಯಕ್ರಮ

ಕೆಂಡದ ಮೇಲೆ ನಡೆಯುವುದು ಬಯಲು ಸೀಮೆಯಲ್ಲಿ ಸರ್ವೇ ಸಾಮಾನ್ಯ. ಜಾತ್ರೆಗಳಲ್ಲಿ ಕೆಂದ ಮೇಲೆ ನಡೆಯುವ ಕಾರ್ಯಕ್ರಮವನ್ನು ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ. ಮಲೆನಾಡಿನಲ್ಲಿ ಇದು ಅಪರೂಪ. ಇಂತಹ ಅಪರೂಪದ ಕಾರ್ಯಕ್ರಮ ಸಿದ್ದಾಪುರ ತಾಲೂಕಿನ ಸರಕುಳಿಯಲ್ಲಿ ನಡೆಯಿತು.
ಮೇಲಿನ ಸರಕುಳಿ ಗ್ರಾಮದಲ್ಲಿ ಪ್ರತಿ ವರ್ಷ ಗ್ರಾಮದೇವಿಯ ಸನ್ನಿಧಾನದಲ್ಲಿ ಪರಿವಾರ ದೇವತೆಗಳಿಗೆ ವಾರ್ಷಿಕ ಕಾರ್ಯಕ್ರಮಗಳು ನಡೆಯುತ್ತವೆ. ಈ ಹಿನ್ನೆಲೆಯಲ್ಲಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮುಂಜಾನೆ ಪರಿವಾರ ದೇವತೆಗಳ ಪೂಜೆಯಿಂದ ನಡೆದ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಇಡೀ ದಿನ ಮುಂದುವರಿದವು. ಮೇಲಿನ ಸರಕುಳಿಯಲ್ಲದೇ ತಟ್ಟೀಕೈ, ಕೆರೆಗದ್ದೆ, ಕಂಚೀಮನೆ, ತ್ಯಾರಗಲ್, ಗೋಳಿಕಟ್ಟಾ, ಮುಚುಗುಳಿ ಸೇರಿದಂತೆ ಸುತ್ತಮುತ್ತಲ ಗ್ರಾಮದ ಗ್ರಾಮಸ್ಥರು ಪಾಲ್ಗೊಂಡಿದ್ದರು.
                    ಕಳೆದ ಐದು ವರ್ಷಗಳಿಂದ ತಟ್ಟಿಕೈ ಬಳಿಯ ಮೇಲಿನ ಸರಕುಳಿ ಗ್ರಾಮದಲ್ಲಿ ಗ್ರಾಮದೇವಿಯ ವಾರ್ಷಿಕೋತ್ಸವದ ನಿಮಿತ್ತ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಕೆಂಡ ಹಾಯುವುದು ನಿಯಮಿತವಾಗಿ ನಡೆಯುತ್ತ ಬಂದಿದೆ. ಮಲೆನಾಡಿನಲ್ಲಿ ಅಪರೂಪ ಎನ್ನಿಸುವ ಕೆಂಡ ಹಾಯುವ ಕಾರ್ಯಕ್ರಮವನ್ನು ನೋಡುವ ಸಲುವಾಗಿಯೇ ಸುತ್ತಮುತ್ತಲ ಗ್ರಾಮಗಳಿಂದ ಸಾವಿರಾರು ಜನರು ಆಗಮಿಸುತ್ತಾರೆ. ಧಗ ಧಗನೆ ಉರಿಯುವ ಕೆಂಡದ ಮೇಲೆ ಯುವಕರು ನಡೆದುಕೊಂಡು ಹೋಗುತ್ತಿದ್ದರೆ ಸೇರಿದ್ದ ಜನರೆಲ್ಲ ದೇವರನ್ನು ಪ್ರಾರ್ಥಿಸುತ್ತ ನಿಲ್ಲುತ್ತಾರೆ. ದೇವರಿಗೆ ನಮಿಸಿ ತಮ್ಮನ್ನು ಕಷ್ಟಗಳಿಂದ ಪಾರುಮಾಡುವಂತೆ ಬೇಡಿಕೊಳ್ಳುತ್ತಾರೆ.
  ಪುರೋಹಿತರ ಸಾನ್ನಿಧ್ಯದಲ್ಲಿ ಚಂಡಿಕಾ ಪಾರಾಯಣ ನಡೆದ ನಂತರ ಮೇಲಿನ ಸರಕುಳಿ ಗ್ರಾಮದಲ್ಲಿಯೇ ಇರುವ 16 ದೇವ ಗಣಗಳನ್ನು ಊರಿನ ತುಂಬೆಲ್ಲ ಮೆರವಣಿಗೆಯ ಮೂಲಕ ಕೊಂಡೊಯ್ಯಲಾಯಿತು. ಸ್ಥಳೀಯ ಸುಬ್ರಹ್ಮಣ್ಯ ಕಟ್ಟೆಯ ಮೇಲೆ ದೇವರನ್ನು ಕೂರಿಸಿ ಹಲವಾರು ಧಾರ್ಮಿಕ ವಿಧಿ ವಿಧಾನಗಳನ್ನು ಕೈಗೊಳ್ಳಲಾಯಿತು. ನಂತರ ಕೆಂಡ ಹಾಯುವ ಸಲುವಾಗಿ ದೊಡ್ಡ ಕಟ್ಟಿಗೆಯ ರಾಶಿಗೆ ಅಗ್ನಿಸ್ಪರ್ಷ ಮಾಡಲಾಯಿತು. ಬೆಂಕಿಯ ಜ್ವಾಲೆ ಬಾನೆತ್ತರಕ್ಕೆ ಚಾಚುತ್ತಿರುವ ಸಂದರ್ಭದಲ್ಲಿಯೇ ಸಾರ್ವಜನಿಕ ಅನ್ನ ಸಂತರ್ಪಣೆ ಕಾರ್ಯಕ್ರಮಗಳೂ ನಡೆದವು.
ಅನ್ನ ಸಂತರ್ಪಣೆಯ ನಂತರ ಕೆಂಡ ಹಾಯುವ ಕಾರ್ಯಕ್ರಮ ನಡೆಯಿತು. ಮೆರವಣಿಗೆಯ ಸಂದರ್ಭದಲ್ಲಿ ದೇವರ ಗಣಗಳ ಮೂರ್ತಿಯನ್ನು ತಲೆಯ ಮೇಲೆ ಹೊತ್ತುಕೊಂಡು ಬಂದಿದ್ದ 16 ಜನ ಯುವಕರೂ ಸೇರಿದಂತೆ 20ಕ್ಕೂ ಅಧಿಕ ಜನರು ಉರಿಯುವ ಕೆಂಡದ ಮೇಲೆ ನಡೆದರು. ಉರಿವ ಕೆಂಡದ ಮೇಲೆ ನಡೆಯುವುದನ್ನು ಅದೆಷ್ಟೋ ಭಕ್ತರು ಕಣ್ತುಂಬಿಕೊಂಡರು. ಸ್ಥಳೀಯ ಗ್ರಾಮದೇವಿಯ ಮಹಿಮೆಯನ್ನು ಕೊಂಡಾಡಿದರು. ನಂತರ ಭಕ್ತರ ಶ್ರೇಯೋಭಿವೃದ್ಧಿಗಾಗಿ ಆಶ್ಲೇಷಾ ಬಲಿ ಹಾಗೂ ನಾಗಾರಾಧನೆ ಕಾರ್ಯಕ್ರಮಗಳು ನಡೆದವು. ನಡುರಾತ್ರಿ 2 ಗಂಟೆಯವರೆಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಮೇಲಿನ ಸರಕುಳಿಯಲ್ಲಿ ಕೆಂಡ ಹಾಯುವ ಕಾರ್ಯಕ್ರಮಕ್ಕೆ ಶತಮಾನಗಳ ಇತಿಹಾಸವಿದೆ. ಸ್ಥಳೀಯರ ಪ್ರಕಾರ ಹಿಂದೆ ಇದೇ ಊರಿನಲ್ಲಿ ಅದ್ಧೂರಿಯಾಗಿ ಕೆಂಡ ಹಾಯುವ ಕಾರ್ಯಕ್ರಗಳು ನಡೆಯುತ್ತಿದ್ದವಂತೆ.
                 ಗ್ರಾಮದೇವಿಗೆ ಭವ್ಯವಾದ ದೇವಸ್ಥಾನವಿದ್ದು ಮೂರ್ನಾಲ್ಕು ದಿನಗಳ ಕಾಲ ಅದ್ಧೂರಿ ಉತ್ಸವ ನಡೆಯುತ್ತಿತ್ತಂತೆ. ಆದರೆ ಕಾಲಾನಂತರದಲ್ಲಿ ದೇವಸ್ಥಾನ ಜೀರ್ಣವಾಯಿತು. ಕ್ರಮೇಣ ಗ್ರಾಮದಲ್ಲಿ ನಡೆಯುತ್ತಿದ್ದ ಉತ್ಸವಗಳೂ ನಿಂತು ಹೋದವು. ಆ ನಂತರ ಊರಿನಲ್ಲಿ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳಲು ಆರಂಭಿಸಿದವು. ಸಮಸ್ಯೆಗಳ ಪರಿಹಾರಾರ್ಥವಾಗಿ ಐದು ವರ್ಷಗಳ ಹಿಂದೆ ದೇವಸ್ಥಾನವನ್ನು ಮತ್ತೆ ಜೀರ್ಣೋದ್ಧಾರ ಮಾಡಲಾಗಿದೆ. ನಂತರ ನಿಯಮಿತವಾಗಿ ಕೆಂಡ ಹಾಯುವ ಕಾರ್ಯಕ್ರಮಗಳನ್ನೂ ನಡೆಸಿಕೊಂಡು ಬರಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಅದ್ಧೂರಿಯಾಗಿ ಉತ್ಸವ ನಡೆಸಲಾಗುತ್ತದೆ. ಎರಡು ದಿನಕ್ಕೂ ಹೆಚ್ಚಿನ ಕಾಲ ಕಾರ್ಯಕ್ರಮಗಳನ್ನು ಏರ್ಪಡಿಸುವ ಆಲೋಚನೆ ಇಟ್ಟುಕೊಳ್ಳಲಾಗಿದೆ ಎಂದು ಹೇಳುತ್ತಾರೆ.
ಕಷ್ಟಗಳ ಪರಿಹಾರಕ್ಕೆ, ಸಮಸ್ಯೆಗಳಿಂದ ಬಿಡುಗಡೆ ಪಡೆಯುವ ಸಲುವಾಗಿ ನಡೆಯುವ ಕೆಂಡ ಹಾಯುವ ಕಾರ್ಯಕ್ರಮ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೂರ್ನಾಲ್ಕು ಕಡೆಗಳಲ್ಲಷ್ಟೇ ನಡೆಯುತ್ತದೆ. ಕೆಂಡ ಹಾಯ್ದರೆ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ ಎನ್ನುವ ಕಾರಣಕ್ಕಾಗಿ ಈ ಆಚರಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಕೆಂಡ ಹಾಯುವವರು ವಿಶೇಷ ಆವೆಶಕ್ಕೂ ಒಳಗಾಗುತ್ತಾರೆ. ವಿಚಿತ್ರ ಅಭಿನಯ ಮಾಡುತ್ತ, ಸ್ವರಗಳನ್ನು ಹೊರಡಿಸುತ್ತಾ ಕೆಂಡವನ್ನು ಹಾಯುತ್ತಾರೆ. ಇಂತಹ ಅನೇಕ ಸಂಗತಿಗಳಿಗೆ ಸರಕುಳಿಯಲ್ಲಿ ನಡೆದ ಕಾರ್ಯಕ್ರಮ ಸಾಕ್ಷಿಯಾಯಿತು.

***

ನಮ್ಮ ಊರಿನಲ್ಲಿ ನಡೆಯುವ ಕೆಂಡ ಹಾಯುವ ಕಾರ್ಯಕ್ರಮ ಬಹು ವಿಶಿಷ್ಟವಾದುದು. ಇಲ್ಲಿ ಯುವಕರು ಮಾತ್ರ ಕೆಂಡ ಹಾಯುತ್ತಾರೆ. ಕೆಂಡ ಹಾಯುವವರಿಗೆ ವಿಶಿಷ್ಟವಾದ ನಿಯಮಗಳಿವೆ. ಯಾರು ಕೆಂಡ ಹಾಯುತ್ತಾರೋ ಅಂತಹ ವ್ಯಕ್ತಿಗಳು ಕನಿಷ್ಟ ಒಂದು ವಾರದಿಂದ ಮಾಂಸ ಹಾಗೂ ಮದ್ಯದಿಂದ ದೂರವಿರಬೇಕು. ಶುದ್ಧ ಸಸ್ಯಾಹಾರ ಸೇವನೆ ಮಾಡಬೇಕು. ತಣ್ಣೀರಿನ ಸ್ನಾನ ಕೈಗೊಳ್ಳಬೇಕು. ಧಾರ್ಮಿಕ ಪೂಜೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಯಾರು ಈ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡುವುದಿಲ್ಲವೋ ಅವರಿಗೆ ಶಿಕ್ಷೆಯಾಗುತ್ತದೆ ಎನ್ನುವ ನಂಬಿಕೆ ಇದೆ. ನಿಮಯ ಪಾಲನೆ ಮಾಡದಿರುವವರಿಗೆ ಕೆಂಡ ಹಾಯಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದಲೇ ಕೆಂಡ ಹಾಯುವ ಕಾರ್ಯಕ್ರಮ ಮಹತ್ವ ಪಡೆದುಕೊಂಡಿದೆ.
ವೆಂಕಟ್ರಮಣ ಅನಂತ ಗೌಡ
ಮೇಲಿನ ಸರಕುಳಿ