Friday, January 23, 2015

ಬಂಡಲದ ಬವಣೆ

ಬಂಡಲ ಬವಣೆ
ಭಾಗ-1

***

(ಇದು ದೈನಂದಿನ ಪರಿಸ್ಥಿತಿ)
ಶಿರಸಿ ತಾಲೂಕಿನ ಬಂಡಲ ಗ್ರಾಮ ಪಂಚಾಯತ ವ್ಯಾಪ್ತಿಯ ಹೆಬ್ರೆ ಗ್ರಾಮದ 7 ಹಳ್ಳಿಗಳ ಪರಿಸ್ಥಿತಿ ದೇವರಿಗೆ ಪ್ರೀತಿ ಎಂಬಂತಾಗಿದೆ. ರಸ್ತೆ, ವಿದ್ಯುತ್ ಸೇರಿದಂತೆ ಹಲವಾರು ಮೂಲಭೂತ ಸೌಕರ್ಯಗಳಿಂದ ಈ ಹಳ್ಳಿಗಳು ವಂಚಿತವಾಗಿದೆ. ಗ್ರಾಮಸ್ಥರು ಮೂಲಭೂತ ಸೌಕರ್ಯಕ್ಕಾಗಿ ಜನಪ್ರತಿನಿಧಿಗಳಿಗೆ ಮನವಿ ಅರ್ಪಿಸಿ ಹೈರಾಣಾಗಿದ್ದಾರೆ.
ಬಂಡಲ ಪಂಚಾಯತದ ಹೆಬ್ರೆ ಗ್ರಾಮ ಶಿರಸಿ ತಾಲೂಕಿನ ಅತಿ ದೊಡ್ಡ ಗ್ರಾಮ ಎನ್ನುವ ಖ್ಯಾತಿಯನ್ನು ಗಳಿಸಿದೆ. ಈ ಗ್ರಾಮದಲ್ಲಿರುವ ಗಾಡನಗದ್ದೆ, ಸಂಪೆಗದ್ದೆ, ಹೊಡಹಾಡನಗದ್ದೆ, ಬಿಳಿಜಡ್ಡಿ, ಯಡ್ಲಮನೆ, ದೇವಕಣಿ, ಹಡನಗದ್ದೆ ಈ ಮುಂತಾದ ಗ್ರಾಮಗಳು ನಾಗರಿಕ ಜಗತ್ತಿನ ಹಲವಾರು ಸೌಲಭ್ಯಗಳಿಂದ ವಂಚಿತವಾಗಿದೆ. ರಾಗಿಹೊಸಳ್ಳಿಯಿಂದ ಜಲಗದ್ದೆ-ಸಂಪೆಗದ್ದೆ ಮೂಲಕ ಬೆಣಗಾಂವ್ ಊರಿಗೆ ತೆರಳುವ ಮಾರ್ಗ ಮಧ್ಯದಲ್ಲಿರುವ ಈ ಗ್ರಾಮಗಳನ್ನು ತಲುಪಲು ಸಾಹಸ ಪಡಬೇಕಾದಂತಹ ಪರಿಸ್ಥಿತಿಯಿದೆ. ಈ ಹಳ್ಳಿಗಳಲ್ಲಿ ಕನಿಷ್ಟ 150 ಮನೆಗಳಿವೆ. 800-1000ಕ್ಕೂ ಅಧಿಕ ಜನರಿದ್ದಾರೆ. ಬಂಡಲ ಗ್ರಾಮ ಪಂಚಾಯತದಿಂದ 8 ಕಿ.ಮಿ, ರಾಗಿಹೊಸಳ್ಳಿಯಿಂದ 4 ಕಿ.ಮಿ ಹಾಗೂ ದೇವನಳ್ಳಿಯಿಂದ 13 ಕಿ.ಮಿ ದೂರದಲ್ಲಿ ಈ ಗ್ರಾಮಗಳಿವೆ. ಮರಾಠಿಗರು, ಗೌಡರು ಹಾಗೂ ಬ್ರಾಹ್ಮಣರು ಈ ಊರುಗಳಲ್ಲಿ ವಾಸ ಮಾಡುತ್ತಿದ್ದಾರೆ.
ದಟ್ಟ ಕಾನನ ಹಾಗೂ ಬೆಣ್ಣೆಹೊಳೆಯ ಸನಿಹದಲ್ಲೇ ಇರುವ ಈ ಹಳ್ಳಿಗಳಿಗೆ ತೆರಳಲು ಸರಿಯಾದ ರಸ್ತೆಯಿಲ್ಲ. ಕಚ್ಚಾರಸ್ತೆಯೊಂದಿದ್ದರೂ ಒದ್ದಾಡುತ್ತ ಸಂಚಾರ ಮಾಡಬೇಕಾದ ಪರಿಸ್ಥಿತಿ ಇದೆ. ಮೂರು ಕಡೆಗಳಲ್ಲಿ ಹಳ್ಳಗಳನ್ನು ದಾಟಬೇಕು. ಯಾವುದೇ ಹಳ್ಳಕ್ಕೆ ಸೇತುವೆಯಿಲ್ಲ. ಮಳೆಗಾಲದಲ್ಲಂತೂ ಈ ಹಳ್ಳಗಳು ಉಕ್ಕೇರಿ ಹರಿಯುತ್ತವೆ. ಇದರಿಂದಾಗಿ ಮಳೆಗಾಲದ ಆರು ತಿಂಗಳುಗಳ ಕಾಲ ಈ ಎಲ್ಲ ಊರುಗಳು ಹೊರ ಜಗತ್ತಿನ ಸಂಪರ್ಕವನ್ನು ಕಳೆದುಕೊಳ್ಳುತ್ತವೆ. ಅನಿವಾರ್ಯ ಕಾರಣಗಳಿಗೆ ಹೊರ ಪ್ರದೇಶಗಳಿಗೆ ತೆರಳಬೇಕೆಂದರೂ ಉಕ್ಕಿ ಹರಿಯುವ ಹಳ್ಳದಲ್ಲಿ ನೀರು ಕಡಿಮೆಯಾಗುವುದನ್ನು ಕಾಯಬೇಕಾಗುತ್ತದೆ. ಅಂದರೆ ಬೇಸಿಗೆ ಬರುವ ವರೆಗೆ ಸಂಪರ್ಕವನ್ನೇ ಕಡಿದುಕೊಳ್ಳುವಂತಾಗಿದೆ. ಮಳೆಗಾಲ ಪ್ರಾರಂಭವಾಯಿತೆಂದರೆ ಈ ಊರುಗಳು ದ್ವೀಪವಾಗುತ್ತವೆ. ಹಳ್ಳಗಳಿಗೆ ಸೇತುವೆಯಿಲ್ಲ. ಕಚ್ಚಾರಸ್ತೆಯಲ್ಲಿ ಓಡಾಡುವಂತಿಲ್ಲ. ಹಾಗಾದರೆ ದಿನವಹಿ ಇಲ್ಲಿರುವ ಸಾವಿರಾರು ಜನರು ಜೀವನ ಸಾಗಿಸುವುದಾದರೂ ಹೇಗೆ ಎನ್ನುವ ಪ್ರಶ್ನೆಗೆ ಜನಪ್ರತಿನಿಧಿಗಳಿಂದಲೂ ಉತ್ತರ ಸಿಗುತ್ತಿಲ್ಲ.
(ಹಳ್ಳದಲ್ಲಿ ಸರ್ಕಸ್ ಅನಿವಾರ್ಯ)
ಈ ಗ್ರಾಮಗಳಿಗೆ ತೆರಳುವ ಮಾರ್ಗ ಮಧ್ಯದಲ್ಲಿ ಮುಖ್ಯವಾಗಿ ಜಲಗದ್ದೆ ಹಳ್ಳ, ಸಂಪೆಗದ್ದೆ ಹಳ್ಳ ಹಾಗೂ ಬೆಣ್ಣೆಹೊಳೆಗಳು ಸಿಗುತ್ತವೆ. ಈ ಮೂರು ಹೊಳೆಗಳಿಗೂ ಸೇತುವೆ ನಿರ್ಮಾಣ ಅತ್ಯಾವಶ್ಯಕವಾಗಿದೆ. ಜಲಗದ್ದೆ ಹಳ್ಳಕ್ಕೆ 20 ಅಡಿ ಉದ್ದದ, 12 ಅಡಿ ಅಗಲದ ಸೇತುವೆ, ಸಂಪೆಗದ್ದೆ ಹಳ್ಳಕ್ಕೆ 20 ಅಡಿ ಉದ್ದದ, 12 ಅಡಿ ಅಗಲದ ಸೇತುವೆಯ ಅಗತ್ಯವಿದೆ. ಬೆಣ್ಣೆಹೊಳೆಗೆ 60 ಮೀಟರ್ ಉದ್ದದ ಸೇತುವೆ ನಿರ್ಮಾಣವಾಗಬೇಕಿದೆ. ಬಿಳಿಜಡ್ಡಿಯಲ್ಲಿ ಈಶ್ವರ ದೇವಸ್ಥಾನವಿದೆ. ಈ ಊರಿಗೆ ತೆರಳುವ ಮಾರ್ಗದಲ್ಲಿಯೂ ಹಳ್ಳವೊಂದಿದ್ದು ಅದಕ್ಕೂ ಮೋರಿ ನಿರ್ಮಾಣ ಆಗಬೇಕಾಗಿದೆ. ಜಲಗದ್ದೆ ಹಳ್ಳದಿಂದ ಬೆಣಗಾಂವ ಕೂಡು ರಸ್ತೆಯವರೆಗೆ 4 ಕಿ.ಮಿ ಅಂತರವಿದ್ದು ರಸ್ತೆ ಸುಧಾರಣೆಯನ್ನು ಮಾಡಬೇಕಾದ ಅಗತ್ಯವಿದೆ. ಸ್ಥಳೀಯರು ಮಳೆಗಾಲದಲ್ಲಿ ಜಲಗದ್ದೆ ಹಳ್ಳದ ವರೆಗೆ ಪ್ರಯಾಸಪಟ್ಟು ವಾಹನ ಚಾಲನೆ ಮಾಡಿಕೊಂಡು ಬರುತ್ತಾರೆ. ಮಳೆಗಾಲ ಸೇರಿದಂತೆ 6 ತಿಂಗಳುಗಳ ಕಾಲ ಅಗತ್ಯವಾದ ವಸ್ತುಗಳನ್ನು ಬೇಸಿಗೆಯಲ್ಲಿಯೇ ಸಂಗ್ರಹಿಸಿ ಇಟ್ಟುಕೊಳ್ಳುವುದೂ ಈ ಗ್ರಾಮಸ್ಥರ ಕೆಲಸವಾಗಿದೆ. ಮಳೆಗಾಲದ ಮಧ್ಯದಲ್ಲಿಯೇ ಯಾವುದಾದರೂ ವಸ್ತುಗಳು ಖಾಲಿಯಾದರೆ ಗ್ರಾ
ಪ್ರತಿ ವರ್ಷ ಸ್ಥಳೀಯರು 80ಕ್ಕೂ ಅಧಿಕ ಆಳು ಖರ್ಚು ಮಾಡಿ ರಸ್ತೆಯನ್ನು ದುರಸ್ತಿ ಮಾಡಿಕೊಳ್ಳುತ್ತಿದ್ದಾರೆ. ಪ್ರತಿವರ್ಷ ರಸ್ತೆ ದುರಸ್ತಿಗಾಗಿಯೇ 10 ಸಾವಿರ ರು.ಗೂ ಅಧಿಕ ಖರ್ಚು ತಗುಲುತ್ತಿದೆ. ರಸ್ತೆ ದುರಸ್ತಿ ಮಾಡಬೇಕಾಗಿದ್ದ ಗ್ರಾಮ ಪಂಚಾಯತ, ಸ್ಥಳೀಯ ಸಂಸ್ಥೆಗಳು ಈ ಕುರಿತು ಗಮನ ಹರಿಸುತ್ತಿಲ್ಲ. ತಮಗೆ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದೆ. ಇದರಿಂದಾಗಿ ಜನಸಾಮಾನ್ಯರು ಹೈರಾಣಾಗಿ ಹೋಗಿದ್ದಾರೆ. ಹಳ್ಳಗಳಿಗೆ ಮೋರಿ ನಿರ್ಮಾಣ ಮಾಡಬೇಕು, ತಸ್ತೆ ದುರಸ್ತಿ ಮಾಡಿಸಿ ರಸ್ತೆಯ ಇಕ್ಕೆಲಗಳಲ್ಲಿಯೂ ಕಾಲುವೆಯನ್ನು ಮಾಡಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ. ಆದರೆ ಸ್ಥಳೀಯರ ಆಗ್ರಹಕ್ಕೆ ಮಾತ್ರ ಯಾವುದೇ ಕಿಮ್ಮತ್ತು ಸಿಗುತ್ತಿಲ್ಲ. ಮೂಲಭೂತ ಸೌಕರ್ಯ ಒದಗಿಸುವವರು ನಿದ್ರಿಸುತ್ತ ಕಾಲತಳ್ಳುತ್ತಿದ್ದಾರೆ.

***

(ತಮಾಷೆನೇ ಅಲ್ಲಾ..)
ಜಲಗದ್ದೆ ಹಳ್ಳಕ್ಕೆ ಸೇತುವೆ ನಿರ್ಮಾಣ ಮಾಡಿಕೊಡಬೇಕು ಎಂದು ಎರಡು ದಶಕಗಳಿಂದ ಆಗ್ರಹಿಸುತ್ತ ಬಂದಿದ್ದೇವೆ. ಒಮ್ಮೆ ಈ ಸೇತುವೆ ನಿರ್ಮಾಣಕ್ಕೆ ರೂಪುರೇಷೆ ನಡೆದು ಪೈಪುಗಳನ್ನೂ ಹಾಕಲಾಗಿತ್ತು. ಆದರೆ ಅಸಮರ್ಪಕ ನಿರ್ವಹಣೆಯಿಂದಾಗಿ ಮಳೆಗಾಲದಲ್ಲಿ ಪೈಪುಗಳು ಕೊಚ್ಚಿಕೊಂಡು ಹೋಗಿದ್ದವು. ನಂತರ ಹಾಕಲಾಗಿದ್ದ ಪೈಪನ್ನೂ ತೆಗೆಯಲಾಗಿದೆ. ಇದೀಗ ಹಳ್ಳದ ಮೂಲಕ ಸಂಚಾರ ಮಾಡುವುದು ಅಸಾಧ್ಯ ಎನ್ನುವಂತಾಗಿದೆ. ಕೂಡಲೇ ಸಂಬಂಧಪಟ್ಟವರು ಸಮಸ್ಯೆಯನ್ನು ಪರಿಹರಿಸಬೇಕಾಗಿದೆ.
ಆನಂದು ಮರಾಠಿ
ದೇವಕಣಿ

**

ರಸ್ತೆ ಮಧ್ಯ ಸಿಗುವ ಯಾವ ಹಳ್ಳಗಳಿಗೂ ಸೇತುವೆಯಿಲ್ಲ. ಮಳೆಗಾಲದಲ್ಲಿ ಹಳ್ಳಗಳು ಉಕ್ಕೇರಿ ಹರಿಯುತ್ತವೆ. ಮಳೆಗಾಲದಲ್ಲಿ ಕನಿಷ್ಟ ಆರು ತಿಂಗಳುಗಳ ಕಾಲ ಈ ಎಲ್ಲ ಗ್ರಾಮಗಳು ಹೊರ ಜಗತ್ತಿನ ಸಂಪರ್ಕ ಕಳೆದುಕೊಳ್ಳುತ್ತವೆ. ಈ ಭಾಗದ ಜನಪ್ರತಿನಿಧಿಗಳು ನಮ್ಮ ಸಮಸ್ಯೆ ಪರಿಹರಿಸಲು ಮುಂದಾಗುತ್ತಿಲ್ಲ. ಮನವಿಗಳ ಮೇಲೆ ಮನವಿ ಸಲ್ಲಿಸಿ ಸಾಕಾಗಿದೆ. ನಮ್ಮ ಸಹನೆಯೂ ಬತ್ತಿಹೋಗಿದೆ. ಕೂಡಲೇ ಸಂಚಾರ ಸಮಸ್ಯೆ ಪರಿಹಾರ ಮಾಡದಿದ್ದಲ್ಲಿ ಉಗ್ರ ಹೋರಾಟವನ್ನೂ ಮಾಡಲಾಗುತ್ತದೆ.
ಗಜಾನನ ಭಟ್ಟ
ಸಂಪೆಗದ್ದೆ


****

ಬಂಡಲ ಬವಣೆ
ಭಾಗ-2

(ಮುರಿದಿದೆ ವಿದ್ಯುತ್ ಕಂಬ)
ಬಂಡಲ ಪಂಚಾಯತ ವ್ಯಾಪ್ತಿಯ ಊರುಗಳ ಮೂಲ ಸೌಲಭ್ಯಗಳ ಕುರಿತಂತೆ ಜನಪ್ರತಿನಿಧಿಗಳು ಈವರೆಗೂ ಬಂಡಲ್ ಬಿಟ್ಟಿದ್ದೇ ಹೆಚ್ಚು. ಸಂಪೆಗದ್ದೆ-ಬೆಣಗಾಂವ್ ರಸ್ತೆಯ ದುಸ್ಥಿತಿ ಉಂಟುಮಾಡುತ್ತಿರುವ ಸಮಸ್ಯೆ ಒಂದೆರಡಲ್ಲ. ಜಲಗದ್ದೆ ಹಳ್ಳಕ್ಕೆ ಸೇತುವೆ ನಿರ್ಮಾಣ ಮಾಡದ ಕಾರಣ ಹೆಬ್ರೆ ಗ್ರಾಮದ 7 ಹಳ್ಳಿಗಳ ಜನರು ನಿತ್ಯ ನರಕವನ್ನು ಅನುಭವಿಸುತ್ತಿದ್ದಾರೆ.
ಗಾಡನಗದ್ದೆ, ಸಂಪೆಗದ್ದೆ, ಹೊಸಹಾಡನಗದ್ದೆ, ಬಿಳಿಜಡ್ಡಿ, ದೇವಕಣಿ, ಯಡ್ಲಮನೆ, ಹಡನಗದ್ದೆ ಈ ಊರುಗಳ ಜನರು ಅಗತ್ಯ ವಸ್ತುಗಳನ್ನು ಕೊಳ್ಳಲು ರಾಗಿಹೊಸಳ್ಳಿಯನ್ನು ಅವಲಂಬಿಸಿದ್ದಾರೆ. 4-6 ಕಿ.ಮಿ ದೂರದಲ್ಲಿರುವ ರಾಗಿಹೊಸಳ್ಳಿಗೆ ಬರಬೇಕೆಂದರೆ ಕನಿಷ್ಟ 2 ಹಳ್ಳಗಳನ್ನು ದಾಟುವುದು ಅನಿವಾರ್ಯ. ಪ್ರಾಥಮಿಕ ಸಹಕಾರಿ ಸಂಘದ ಕೆಲಸಕ್ಕೆ, ಪಡಿತರ ಪಡೆಯಲು, ದವಸಧಾನ್ಯ ಕೊಳ್ಳಲು, ಬ್ಯಾಂಕ್ ವ್ಯವಹಾರ ಸೇರಿದಂತೆ ಅಗತ್ಯ ಕೆಲಸಗಳಿಗೆ ರಾಗಿಹೊಸಳ್ಳಿಗೆ ಬರಬೇಕು. ಈ ಊರುಗಳ ಮಕ್ಕಳು ಶಾಲೆಗೆ ಬರಬೇಕೆಂದರೂ ರಾಗಿಹೊಸಳ್ಳಿಗೇ ಆಗಮಿಸಬೇಕು. ಮಳೆಗಾಲದಲ್ಲಿ ಹಳ್ಳಗಳಲ್ಲಿ ನೀರು ಉಕ್ಕುವ ಕಾರಣ ಆರು ತಿಂಗಳುಗಳ ಕಾಲ ಈ ಗ್ರಾಮಗಳು ರಾಗಿಹೊಸಳ್ಳಿ ಹಾಗೂ ಹೊರ ಜಗತ್ತಿನ ಸಂಪರ್ಕದಿಂದ ವಂಚಿತವಾಗುತ್ತಿವೆ.
ವಿದ್ಯುತ್ ಸಮಸ್ಯೆ ಈ ಊರಿನ ಜ್ವಲಂತ ಸಮಸ್ಯೆಗಳಲ್ಲೊಂದು. ಮನಸ್ಸುಬಂದಾಗ ವಿದ್ಯುತ್ ಆಗಮಿಸುತ್ತದೆ. ಒಮ್ಮೆ ಹೋದ ವಿದ್ಯುತ್ ನಾಲ್ಕು-ಐದಿ ದಿನಗಳವರೆಗೆ ನಾಪತ್ತೆಯಾಗುತ್ತದೆ. ಮಳೆಗಾಲದಲ್ಲಂತೂ ವಿದ್ಯುತ್ ಸಮಸ್ಯೆಗೆ ಮುಕ್ತಿಯೇ ಇಲ್ಲ ಎನ್ನಬಹುದು. ದಟ್ಟ ಕಾಡಿನಲ್ಲಿ ಹಾದು ಹೋಗಿರುವ ವಿದ್ಯುತ್ ಮಾರ್ಗದ ಮೇಲೆ ಮಳೆಗಾಲದಲ್ಲಿ ಮರ ಮುರಿದು ಬೀಳುವುದು, ಕೊಂಬೆಗಳು ತುಂಡಾಗಿ ವಿದ್ಯುತ್ ತಂತಿಯ ಮೇಲೆ ಬೀಳುವುದರಿಂದಾಗಿ ಕಗ್ಗತ್ತಲೆ ಎನ್ನುವುದು ಸರ್ವೇಸಾಮಾನ್ಯ ಎನ್ನುವಂತಾಗಿದೆ. ಮಳೆಗಾಲದಲ್ಲಿ ಗಾಳಿ, ಮಳೆಯ ರಭಸಕ್ಕೆ ವಿದ್ಯುತ್ ಕಂಬಗಳು ಸಾಲು ಸಾಲಾಗಿ ಮುರಿದು ಬೀಳುತ್ತವೆ. ಮಳೆಗಾಲದ ಆರಂಭದಲ್ಲಿ ಈ ಕಾರಣದಿಂದಾಗಿ ವಿದ್ಯುತ್ ವ್ಯತ್ಯಯ ಉಂಟಾದರೆ ಮಳೆಗಾಲ ಕಳೆದು ಗ್ರಾಮಗಳಿಗೆ ತೆರಳುವ ಹಳ್ಳಗಳಲ್ಲಿ ಪ್ರವಾಹ ಕಡಿಮೆಯಾಗುವ ವರೆಗೂ ಈ ಕಂಬಗಳನ್ನು ಬದಲಾಯಿಸಲು, ತುಂಡಾದ ವಿದ್ಯುತ್ ತಂತಿಯನ್ನು ಸರಿಪಡಿಸಲು ಯಾರೂ ಆಗಮಿಸುವುದಿಲ್ಲ.
ಮುರಿದು ಬಿದ್ದ ವಿದ್ಯುತ್ ಕಂಬಗಳನ್ನು ಬದಲಾಯಿಸಲು ಹೆಸ್ಕಾಂ ಇಲಾಖೆಗೆ ಮನವಿ ಮಾಡಿಕೊಂಡರೂ ಬೆಲೆ ಸಿಗುತ್ತಿಲ್ಲ. ಊರಿಗೆ ತೆರಳುವ ಮಾರ್ಗ ಮಧ್ಯದ ಜಲಗದ್ದೆ ಹಳ್ಳ ಉಕ್ಕಿ ಹರಿಯುವ ಕಾರಣ  ಹೆಸ್ಕಾಂ ಇಲಾಖೆ ಹೊಸ ಕಂಬಗಳನ್ನು ಕಳಿಸಿದರೂ ವಾಹನವನ್ನು ಹಳ್ಳ ದಾಟಿಸಲಾಗದೇ ಕೈಚೆಲ್ಲುತ್ತಾರೆ. ಇದು ಕಳೆದ ನಾಲ್ಕೈದು ವರ್ಷಗಳಿಂದ ಪ್ರತಿ ಮಳೆಗಾಲದಲ್ಲಿ ಮರುಕಳಿಸುತ್ತಿರುವ ಸಮಸ್ಯೆಯಾಗಿದೆ. ಬೇಸಿಗೆಯಲ್ಲೂ ವಿದ್ಯುತ್ ವೋಲ್ಟೇಜ್ ಸಮಸ್ಯೆ ತೀವ್ರವಾಗಿದೆ. ಸಿಂಗಲ್ ಫೇಸ್ ಗಿಂತ ಹೆಚ್ಚಿನ ವಿದ್ಯುತ್ ಬಂದಿದ್ದೇ ಇಲ್ಲ. ಇದರಿಂದಾಗಿ ರೈತಾಪಿ ವರ್ಗ ಹೈರಾಣಾಗಿದೆ. ತಮ್ಮ ಬೆಳೆಗಳಿಗೆ ನೀರುಣಿಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ. ಮನೆಯಲ್ಲಿ ಮಿಕ್ಸರ್‌ಗಳಿದ್ದರೂ ಅವುಗಳ ಬಳಕೆಗೆ ಸಿಂಗಲ್ ಫೇಸ್ ವಿದ್ಯುತ್ ಸಾಕಾಗುವುದಿಲ್ಲ. ಹೆಸ್ಕಾಂ ಇಲಾಖೆಗೆ ಹಾಗೂ ರಸ್ತೆ ಸರಿಪಡಿಸದ ಜನಪ್ರತಿನಿಧಿಗಳಿಗೆ ಸಾರ್ವಜನಿಕರು ಹಿಡಿಶಾಪ ಹಾಕಿ ಸುಸ್ತಾಗಿದ್ದಾರೆ.
(ತಲೆ ಹೊರೆಯೇ ಅನಿವಾರ್ಯ)
ಈ ಗ್ರಾಮಗಳ ವ್ಯಾಪ್ತಿಯಲ್ಲಿ ಕಿರಿಯ ಪ್ರಾಥಮಿಕ ಶಾಲೆಯೊಂದಿತ್ತು. ಆದರೆ ರಸ್ತೆ ದುರವಸ್ಥೆಯ ಕಾರಣ ಈ ಶಾಲೆಗೆ ಶಿಕ್ಷಕರು ಆಗಮಿಸುವುದು ದುಸ್ತರವಾಗುತ್ತಿತ್ತು. ಮಕ್ಕಳ ಸಂಖ್ಯೆಯೂ ಕಡಿಮೆಯಿದ್ದ ಕಾರಣ ಕಿರಿಯ ಪ್ರಾಥಮಿಕ ಶಾಲೆಯನ್ನು ಮುಚ್ಚಲಾಗಿದೆ. ಇದೀಗ ಅನಿವಾರ್ಯವಾಗಿ 6 ಕಿ.ಮಿ ದೂರದ ರಾಗಿಹೊಸಳ್ಳಿ ಶಾಲೆಯನ್ನು ಅವಲಂಬಿಸುವುದು ಅನಿವಾರ್ಯವಾಗಿದೆ. ಇಲ್ಲವಾದಲ್ಲಿ 6 ಕಿ.ಮಿ ದೂರದ ಬೆಣಗಾಂವ್ ಹಿರಿಯ ಪ್ರಾಥಮಿಕ ಶಾಲೆಗೆ ತೆರಳಬೇಕು. ಪ್ರೌಢಶಾಲೆಗೆ ಹೋಗಬೇಕೆಂದರೆ ಕನಿಷ್ಟ 8 ಕಿ.ಮಿ ಸಾಗಲೇಬೇಕು. 8 ಕಿ.ಮಿ ದೂರದಲ್ಲಿರುವ ಬಂಡಲದ ಪ್ರೌಢಶಾಲೆ ಅಥವಾ 13 ಕಿ.ಮಿ ದೂರದಲ್ಲಿರುವ ದೇವನಳ್ಳಿಯ ಪ್ರೌಢಶಾಲೆಗೆ ತೆರಳಬೇಕಾದ ದುಸ್ಥಿತಿ ಈ ಗ್ರಾಮಗಳ ಮಕ್ಕಳದ್ದಾಗಿದೆ. ಮಳೆಗಾಲದಲ್ಲಿ ಉಕ್ಕೇರುವ ಹಳ್ಳ ದಾಟಲು ಯತ್ನಿಸಿ ಮಕ್ಕಳು ನೀರುಪಾಲಾಗುವ ಸಾಧ್ಯತೆಗೂ ತೀವ್ರವಾಗಿದೆ. ಈ ಬವಣೆಯನ್ನು ತಪ್ಪಿಸಬೇಕು, ಮಕ್ಕಳಿವೆ ವಿದ್ಯಾಭ್ಯಾಸ ನೀಡಬೇಕೆನ್ನುವ ಕಾರಣಕ್ಕಾಗಿ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು, ಸಂಬಂಧಿಕರ ಮನೆಗಳಲ್ಲಿಯೋ, ಪರಿಚಯಸ್ತರ ಮನೆಯಲ್ಲಿಯೋ ಮಕ್ಕಳನ್ನು ಬಿಟ್ಟು ಶಾಲೆ, ಪ್ರೌಢಶಾಲೆಗಳೀಗೆ ಕಳಿಸುತ್ತಿದ್ದಾರೆ.
ರಾಗಿಹೊಸಳ್ಳಿಯಲ್ಲಿ ಪೋಸ್ಟ್ ಇದೆ. ಇಲ್ಲಿ ಕೆಲಸ ಮಾಡುವ ಪೋಸ್ಟ್ ಮನ್ ಒಳ್ಳೆಯವರು. ಹೇಗಾದರೂ ಮಾಡಿ ಪತ್ರಗಳನ್ನು ಸಂಬಂಧಪಟ್ಟವರಿಗೆ ತಲುಪಿಸಬೇಕೆಂದು ಪ್ರಯತ್ನಿಸುತ್ತಾರೆ. ಆದರೆ ಅಸಮರ್ಪಕ ರಸ್ತೆ, ಮಳೆಗಾಲದಲ್ಲಿ ಉಕ್ಕೇರುವ ಹಳ್ಳ ಪೋಸ್ಟ್‌ಮನ್ ಗಳಿಗೂ ಸಮಸ್ಯೆಯನ್ನು ಒಡ್ಡುತ್ತಿದೆ. ಮಾಸಾಶನ, ಪತ್ರಗಳು ಸೇರಿದಂತೆ ತ್ವರಿತವಾಗಿ ವಿಲೇವಾರಿ ಮಾಡಬೇಕಾದ ಪತ್ರಗಳನ್ನು ನಿಗದಿತ ಸ್ಥಳಕ್ಕೆ ತಲುಪಿಬೇಕೆಂದರೆ ಈ ಊರಿನ ರಸ್ತೆಗಳು ಹಾಳಾಗಿರುತ್ತವೆ. ಇಲ್ಲವೇ ರಸ್ತೆ ಮಧ್ಯದಲ್ಲಿ ಮರಗಳು ಉರುಳಿ ಬಿದ್ದಿರುತ್ತವೆ. ಮಳೆಗಾಲದಲ್ಲಿ ಹಳ್ಳದಾಟುವುದು ಅಸಾಧ್ಯ ಎನ್ನುವಂತಾಗಿದೆ. ಹೀಗಾಗಿ ಅನಿವಾರ್ಯ ಸಂದರ್ಭಗಳಲ್ಲಿ ಪತ್ರಗಳು ನಿಗದಿತ ಸ್ಥಳ ತಲುಪಲು ವಿಳಂಬವಾಗಿದ್ದೂ ಇದೆ.
(ಸ್ಥಳೀಯರೇ ಮಾಡಿಕೊಂಡ ಕಾಲುಸಂಕ)
ಎಲ್ಲ ಸಮಸ್ಯೆಗಳಿಗೆ ಮೂಲ ಕಾರಣವಾಗಿರುವ ರಸ್ತೆಯನ್ನು ಸರಿಪಡಿಸಬೇಕು. 7 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಜಲಗದ್ದೆ ಹಳ್ಳಕ್ಕೆ ಸೇತುವೆ ನಿರ್ಮಾಣ ಮಾಡಬೇಕು. ತನ್ಮೂಲಕ ಈಗ ಉಂಟಾಗುತ್ತಿರುವ ಶಿಕ್ಷಣ, ವಿದ್ಯುತ್, ಪಡಿತರ, ಬ್ಯಾಂಕ್, ಪೋಸ್ಟ್ ಈ ಮುಂತಾದ ಎಲ್ಲ ಸಮಸ್ಯೆಗಳಿಗೂ ಪೂರ್ಣವಿರಾಮ ಹಾಕಬೇಕು ಎನ್ನುವುದು ಸ್ಥಳೀಯರ ಒತ್ತಾಯವಾಗಿದೆ. ಜನಪ್ರತಿನಿಧಿಗಳು ಈ ಸಮಸ್ಯೆಗೆ ಸ್ಪಂದಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗುತ್ತದೆ.

***

ರಸ್ತೆ ಸಮಸ್ಯೆಯ ಕಾರಣ ಕೆಲವೊಮ್ಮೆ 50ಕೆ.ಜಿ.ಗೂ ಅಧಿಕ ಭಾರದ ವಸ್ತುಗಳನ್ನು ತಲೆಯ ಮೇಲೆ ಹೊತ್ತುಕೊಂಡು ಬರಬೇಕಾಗುತ್ತದೆ. 5-6 ಕಿ.ಮಿ ನಡೆದು ಹಳ್ಳಗಳನ್ನು ದಾಟಿ, ಕಾಡಿನ ದಾರಿಯಲ್ಲಿ ಬರಬೇಕೆಂದರೆ ಹರಸಾಹಸವನ್ನೇ ಮಾಡಬೇಕು. ಸುತ್ತಮುತ್ತಲ ಊರುಗಳಿಗೆ ಅಗತ್ಯ ವಸ್ತುಗಳು ಲಭ್ಯವಾಗುವ ರಾಗಿಹೊಸಳ್ಳಿಗೆ ಮಳೆಗಾಲದಲ್ಲಿ ಹೋಗುವುದು ಬಹು ಕಷ್ಟದ ಕೆಲಸ
ಗಣಪತಿ ಮರಾಠಿ
ಯಡ್ಲಮನೆ

***

(ಇಂತಹ ರಸ್ತೆಗಳು ಇನ್ನೂ ಇದೆ..)
ಬೇಸಿಗೆಯಲ್ಲೂ ನಮ್ಮೂರಿನಲ್ಲಿ ವಿದ್ಯುತ್ ಸಮಸ್ಯೆ ಪರಿಹಾರವಾಗುವುದಿಲ್ಲ. ಯಾವಾಗಲೂ ಸಿಂಗಲ್ ಫೇಸ್ ವಿದ್ಯುತ್ ಇರುತ್ತದೆ. ಮಿಕ್ಸರ್ ಕೂಡ ಕೆಲಸ ಮಾಡುವುದಿಲ್ಲ. ಮಳೆಗಾಲದಲ್ಲಿ ಆರು ತಿಂಗಳುಗಳ ಕಾಲ ವಿದ್ಯುತ್ ನಾಪತ್ತೆ ಎನ್ನುವಂತಹ ಪರಿಸ್ಥಿತಿಯಿದೆ. ಕೂಡಲೇ ಈ ಸಮಸ್ಯೆಗಳನ್ನು ಪರಿಹಾರ ಮಾಡಬೇಕಾದ ಅಗತ್ಯವಿದೆ.
ಮಂಜುನಾಥ ಹೆಗಡೆ
ಗಾಡನಗದ್ದೆ

***

ಬಂಡಲ ಬವಣೆ
ಭಾಗ-3

ತಾಲೂಕಿನ ಬಂಡಲ ಪಂಚಾಯತದ ಹೆಬ್ರೆ ಗ್ರಾಮದ ಜಲಗದ್ದೆ ಮಜರೆಯಲ್ಲಿ ಆರೋಗ್ಯ ಸಮಸ್ಯೆ ತೀವ್ರವಾಗಿದೆ. ಇಲ್ಲಿನ ಜನಸಾಮಾನ್ಯರು ಖಾಯಿಲೆ ಬಿದ್ದರೆ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲು ಹರಸಾಹಸ ಪಡಬೇಕಾದಂತಹ ಸ್ಥಿತಿಯಿದೆ.
ಹೆಬ್ರೆ ಗ್ರಾಮದ ವ್ಯಾಪ್ತಿಯ ಸಂಪೆಗದ್ದೆ, ಗಾಡನಗದ್ದೆ, ಹೊಸಹಾಡನಗದ್ದೆ, ಯಡ್ಲಮನೆ, ದೇವಕಣಿ, ಬಿಳಿಜಡ್ಡಿ, ಹಡನಗದ್ದೆ ಈ ಎಲ್ಲ ಹಳ್ಳಿಗಳಲ್ಲಿ ವೃದ್ಧರು, ಖಾಯಿಲೆ ಪೀಡಿತರಿದ್ದಾರೆ. 40-50 ವೃದ್ಧರು ಹಾಗೂ 15-20ರಷ್ಟು ಕಾಯಿಲೆ ಪೀಡಿತರು ಇದ್ದಾರೆ. ಅಂಧರು, ಪಾರ್ಕಿನ್‌ಸನ್ ಖಾಯಿಲೆ ಪೀಡಿತರು, ಅಸ್ತಮಾ, ಸೇರಿದಂತೆ ಹಲವಾರು ಖಾಯಿಲೆಗಳಿಂದ ಬಳಲುತ್ತಿರುವವರೂ ಇದ್ದಾರೆ. ವಯೋಸಹಜ ಖಾಯಿಲೆಗಳನ್ನು ಅನುಭವಿಸುತ್ತಿರುವವರೂ ಹಲವು ಜನ. ಆದರೆ ಇವರನ್ನು ಆಸ್ಪತ್ರೆಗೆ ಕೊಂಡೊಯ್ಯುವುದೆಂದರೆ ಸಾಹಸ ಮಾಡಿದಂತೆಯೇ.
ಈ ಎಲ್ಲ ಊರುಗಳಿಗೆ ಹತ್ತಿರದ ಆಸ್ಪತ್ರೆಯೆಂದರೆ ಜಾನ್ಮನೆಯ ಪ್ರಾಥಮಿಕ ಆರೋಗ್ಯ ಕೇಂದ್ರ. ಜಾನ್ಮನೆಗೆ 20 ಕಿ.ಮಿ ಪ್ರಯಾಣ ಮಾಡಬೇಕು. ಇನ್ನುಳಿದಂತೆ ಹೆಗಡೇಕಟ್ಟಾ ಅಥವಾ ಕತಗಾಲಕ್ಕೆ ಪ್ರಯಾಣ ಮಾಡಬೇಕು. ಕತಗಾಲಕ್ಕೆ ಹಾಗೂ ಹೆಗಡೇಕಟ್ಟಾದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತೆರಳಬೇಕೆಂದರೆ ಕನಿಷ್ಟ 25 ಕಿ.ಮಿ ಪ್ರಯಾಣ ಮಾಡುವುದು ಅನಿವಾರ್ಯ. ತೀವ್ರ ಪ್ರಮಾಣದ ಖಾಯಿಲೆಗಳಾಗಿದ್ದರೆ 40 ಕಿ.ಮಿ ದೂರದಲ್ಲಿರುವ ಶಿರಸಿ ಅಥವಾ ಕುಮಟಾಕ್ಕೆ ಹೋಗಿ ಬರಲೇಬೇಕಾದ ಅನಿವಾರ್ಯತೆಯಿದೆ. ಇದರಿಂದಾಗಿ ಸ್ಥಳೀಯರು ಹೈರಾಣಾಗಿದ್ದಾರೆ.
(ಬರೀ ಕಾಡಿನ ದಾರಿ)
ಮಳೆಗಾಲ ಬಂತೆಂದರೆ ಈ ಊರುಗಳ ಜನಸಾಮಾನ್ಯರು, ವೃದ್ಧರು, ಖಾಯಿಲೆ ಪೀಡಿತರು ಜೀವಭಯದಿಂದ ಬದುಕಬೇಕಾಗುತ್ತದೆ. ಮಳೆಗಾಲದಲ್ಲಿ ಕಾಡುವ ಜ್ವರ ಮುಂತಾದ ಖಾಯಿಲೆಗಳಿಗೆ ಔಷಧಿ ಪಡೆಯಬೇಕೆಂದರೆ ಜಾನ್ಮನೆಗೋ, ಹೆಗಡೇಕಟ್ಟಾಕ್ಕೋ, ಶಿರಸಿಗೋ ಹೋಗಿ ಬರಬೇಕು. ಅಸಮರ್ಪಕ ರಸ್ತೆ ಸೌಕರ್ಯದ ಕಾರಣ ಮಳೆಗಾಲದಲ್ಲಿ ಈ ಊರುಗಳಿಗೆ ಯಾವುದೇ ವಾಹನಗಳೂ ಆಗಮಿಸುವುದಿಲ್ಲ. ಜಲಗದ್ದೆ ಹಳ್ಳ ಉಕ್ಕಿ ಹರಿಯುವ ಕಾರಣ ಊರಿಗೂ ಹೊರ ಜಗತ್ತಿಗೂ ಸಂಪರ್ಕ ಕಡಿದುಹೋಗುತ್ತದೆ. ಅಲ್ಲದೇ ದಟ್ಟಡವಿಯಲ್ಲಿ ರಸ್ತೆಗೆ ಅಡ್ಡಲಾಗಿ ಮರಗಳು ಉರುಳಿಬಿಳುತ್ತಿರುತ್ತದೆ. ಖಾಯಿಲೆ ಪೀಡಿತರನ್ನು ಇಂತಹ ಸಂದರ್ಭದಲ್ಲಿ ಕಂಬಳಿಯಲ್ಲಿ ಹೊತ್ತುಕೊಂಡು 4-5 ಕಿ.ಮಿ ನಡೆದು ಮುಖ್ಯ ರಸ್ತೆಗೆ ಬಂದು ಅಲ್ಲಿ ವಾಹನಗಳಿಗೆ ಕಾದು ನಂತರ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾದಂತಹ ದುಸ್ಥಿತಿ ಈ ಗ್ರಾಮಗಳಲ್ಲಿ ಇದೆ. ಬೇಸಿಗೆಯಲ್ಲಿಯೂ ಈ ಗ್ರಾಮಗಳ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ.
ಯಡ್ಲಮನೆ ಎಂಬಲ್ಲಿ ಒಂದೇ ಮನೆಯಲ್ಲಿ ಮೂವರು ಅಂಧರಿದ್ದಾರೆ. ತಂದೆ ಹಾಗೂ ಇಬ್ಬರು ಹೆಣ್ಣುಮಕ್ಕಳಿಗೆ ಕಣ್ಣು ಕಾಣಿಸುವುದಿಲ್ಲ. ಸರ್ಕಾರ ಇವರಿಗೆ ಅಂಗವಿಕಲರ ಮಾಸಾಶನವನ್ನು ನೀಡುತ್ತಿದೆ. ಆದರೆ ಇದನ್ನು ತೆಗೆದುಕೊಂಡು ಬರುವುದೇ ಪ್ರಾಯಾಸದ ಕೆಲಸವಾಗಿದೆ. ಮಾಸಾಶನ ಪಡೆಯಲು ಕನಿಷ್ಟ 4-5 ಕಿ.ಮಿ ನಡೆದುಕೊಂಡು ಹೋಗುವುದು ಅನಿವಾರ್ಯ. ಸರ್ಕಾರಕ್ಕೆ, ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತ, ರಸ್ತೆಯಲ್ಲಿ ಏಳುತ್ತ-ಬೀಳುತ್ತ ಮಾಸಾಶವನ್ನು ತೆಗೆದುಕೊಂಡು ಬರುತ್ತಿದ್ದಾರೆ.
ಈ ಗ್ರಾಮಗಳಲ್ಲಿನ ವೃದ್ಧರು ಹಾಗೂ ಖಾಯಿಲೆಪೀಡಿತರ ಕಡೆಗೆ ಜನಪ್ರತಿನಿಧಿಗಳು, ಆಳರಸರು ಕನಿಕರ ತೋರುತ್ತಿಲ್ಲ ಎನ್ನುವ ಆರೋಪ ವ್ಯಾಪಕವಾಗಿದೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ರಸ್ತೆ ಸುಧಾರಣೆಗೆ ಮುಂದಾಗುತ್ತಿಲ್ಲ, ಜಲಗದ್ದೆ ಹಳ್ಳಕ್ಕೆ ಸೇತುವೆ ನಿರ್ಮಾಣ ಮಾಡುತ್ತಿಲ್ಲ ಎಂದು ಹಿಡಿಶಾಪ ಹಾಕುತ್ತಿದ್ದಾರೆ. ಸರ್ಕಾರ ಆರೋಗ್ಯ ಭಾಗ್ಯವನ್ನು ಘೋಷಣೆ ಮಾಡಿದೆ. ಆದರೆ ಈ ಗ್ರಾಮಸ್ಥರ ಪಾಲಿಗೆ ಈ ಭಾಗ್ಯ ಸಿಗುತ್ತಿಲ್ಲ. ಮುಂದುವರಿದ ಕ್ಷೇತ್ರದ ಹಿಂದುಳಿದ ಪ್ರದೇಶದಲ್ಲಿ ಈ ಜನರಿದ್ದಾರೆ. ಸರ್ಕಾರ ಈ ಕುರಿತು ತ್ವರಿತವಾಗಿ ಕ್ರಮಕೈಗೊಳ್ಳಬೇಕಾಗಿದೆ.
(ವಾಹನ ರಿಪೇರಿ ಸ್ಥಳೀಯರದ್ದೇ..)
ಈ ಭಾಗದಲ್ಲಿ ಬೆಣ್ಣೆಹೊಳೆ ಹಾದು ಹೋಗಿದೆ. ಬೆಣ್ಣೆಹೊಳೆಯನ್ನು ದಾಟಲು ಸ್ಥಳೀಯರು ಕಾಲು ಸಂಕವನ್ನು ಮಾಡಿಕೊಂಡ್ಡಿದ್ದಾರೆ. ಮರ, ಬಿದಿರು, ಕಾಡುಬಳ್ಳಿಗಳಿಂದ ನಿರ್ಮಾಣ ಮಾಡಿರುವ ಕಾಲುಸಂಕ ಒಂದು ವರ್ಷದ ಅವಧಿಯಲ್ಲಿ ಹಾಳಾಗಿ ಹೋಗುತ್ತಿದೆ. ಪ್ರತಿ ಸಾರಿ ಮಳೆಗಾಲ ಆರಂಭವಾಗುವ ಮೊದಲು ಮತ್ತೆ ಕಾಲುಸಂಕ ನಿರ್ಮಾಣ ಮಾಡಿಕೊಳ್ಳುತ್ತಾರೆ. ಉಕ್ಕೇರಿ ಹರಿಯುತ್ತಿರುವ ಬೆಣ್ಣೆಹೊಳೆಯ ಸೇತುವೆಯನ್ನು ಈ ಕಾಲುಸಂಕದ ಸಹಾಯದಿಂದ ದಾಟುತ್ತಿದ್ದರೆ ಜೀವ ಕೈಗೆ ಬರುತ್ತದೆ. ಖಾಯಿಲೆ ಪೀಡಿತರನ್ನೂ ಈ ಕಾಲುಸಂಕದ ಮೇಲೆ ಕಂಬಳಿಯಲ್ಲೇ ಹೊತ್ತುಕೊಂಡು ಸಾಗುತ್ತಾರೆ. ಈ ಭಾಗದಲ್ಲಿ ಇಷ್ಟೆಲ್ಲ ಸಮಸ್ಯೆಗಳಿದ್ದರೂ ಜನಪ್ರತಿನಿಧಿಗಳು ಇವರ ಸಹಾಯಕ್ಕೆ ಬರುತ್ತುಲ್ಲ. ಇದು ಆಡಳಿತ ಯಂತ್ರ ಜಡ್ಡುಗಟ್ಟಿರುವುದಕ್ಕೆ ಸ್ಪಷ್ಟ ನಿದರ್ಶನ ಎನ್ನಬಹುದಾಗಿದೆ.

***

ನಮ್ಮ ಭಾಗದಲ್ಲಿ ವೃದ್ಧರು ಹಾಗೂ ಖಾಯಿಲೆ ಪೀಡಿತರ ಸಂಖ್ಯೆ ಸಾಕಷ್ಟಿದೆ. ಮಳೆಗಾಲ ಬಂತೆಂದರೆ ಭಯವಾಗುತ್ತದೆ. ಮಳೆಗಾಲದಲ್ಲಿ ಖಾಯಿಲೆಯಿಂದ ಹಾಸಿಗೆ ಹಿಡಿದರೆ ಔಷಧಿ ಮಾಡಿಸೋಣ, ಆಸ್ಪತ್ರೆಗೆ ಹೋಗೋಣ ಎಂದರೂ ಸಾಧ್ಯವಾಗುವುದಿಲ್ಲ. ರಸ್ತೆ ಸರಿಯಿಲ್ಲ. ಜಲಗದ್ದೆ, ಬಿಳಿಜಡ್ಡಿ ಹಳ್ಳಗಳಿಗೆ ಸೇತುವೆಯೇ ಇಲ್ಲ. ಉಕ್ಕೇರಿ ಹರಿಯುವ ಹಳ್ಳಗಳನ್ನು ದಾಟಲು ಸಾಧ್ಯವಾಗದೇ ಅಸಹಾಯಕರಾದ ಸನ್ನಿವೇಶ ಎಷ್ಟೋ ಸಾರಿ ಎದುರಾಗಿದೆ. ಕೂಡಲೇ ಸರ್ಕಾರ ಈ ಸಮಸ್ಯೆ ಪರಿಹಾರ ಮಾಡಬೇಕಿದೆ.
ಮಾಬ್ಲೇಶ್ವರ ಹೆಗಡೆ
ಬಿಳಿಜಡ್ಡಿ

***
(ರಸ್ತೆ ಮಧ್ಯ ಮರ ಬೀಳುವುದು ಇಲ್ಲಿ ಕಾಮನ್ನು)

ನಮ್ಮ ಭಾಗದ ಜನಪ್ರತಿನಿಧಿಗಳು ಚುನಾವಣೆ ಬಂತೆಂದರೆ ಸಾಕು ನಮ್ಮೂರಿನ ಕಡೆಗೆ ಮುಖ ಮಾಡುತ್ತಾರೆ. ಉಳಿದ ಸಮಯದಲ್ಲಿ ನಮ್ಮ ಸಮಸ್ಯೆಗಳು ಅವರ ಕಣ್ಣಿಕೆ ಕಾಣಿಸುವುದೇ ಇಲ್ಲ. ಸ್ಥಳೀಯರಿಂದ ಹಿಡಿದು ಎಲ್ಲ ಹಂತದ ಜನಪ್ರತಿನಿಧಿಗಳಿಗೆ ನಾವು ಮನವಿಗಳ ಮೇಲೆ ಮನವಿ ಸಲ್ಲಿಸುತ್ತಲೇ ಇದ್ದೇವೆ. ಪ್ರತಿಯೊಬ್ಬರೂ ಭರವಸೆ ನೀಡುತ್ತಲೇ ಇದ್ದಾರೆ. ನಮ್ಮ ಭಾಗದ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ.
ರತ್ನಾಕರ
ಯಡ್ಲಮನೆ

****

ಬಂಡಲ ಬವಣೆ
ಭಾಗ-4

ತಾಲೂಕಿನ ಬಂಡಲ ಪಂಚಾಯತದ ಜಲಗದ್ದೆಯ ಸುತ್ತಮುತ್ತಲ ಪ್ರದೇಶಗಳ ಸಮಸ್ಯೆಗಳು ಬಗೆದಷ್ಟೂ ಹೊರಬೀಳುತ್ತಿವೆ. ದೂರವಾಣಿ ಸಮಸ್ಯೆಯೂ ಈ ಗ್ರಾಮಗಳನ್ನು ಜ್ವಲಂತವಾಗಿ ಕಾಡುತ್ತಿದೆ. ಸಮಸ್ಯೆ ಪರಿಹಾರಕ್ಕಾಗಿ ಮನವಿಗಳ ಮೇಲೆ ಮನವಿ ಸಲ್ಲಿಸಿ ಸಾಕಾಗಿದೆ.
ಜಲಗದ್ದೆ ಗ್ರಾಮದ ಸುತ್ತಮುತ್ತಲ 7 ಗ್ರಾಮಗಳಲ್ಲಿ ಒಂದೋ ಎರಡೋ ಮನೆಗೆ ದೂರವಾಣಿ ಸಂಪರ್ಕ ಕಲ್ಪಿಸಲಾಗಿದೆ. ಉಳಿದ ಹಲವಾರು ಮನೆಗಳವರು ದೂರವಾಣಿ ಸಂಪರ್ಕ ಕಲ್ಪಿಸಬೇಕೆಂದು ಮನವಿ ಸಲ್ಲಿಸಿ ಸುಸ್ತಾಗಿದ್ದಾರೆ. ಆದರೆ ಈ ಮನವಿಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಬಂಡಲದಲ್ಲಿ ಬಿಎಸ್‌ಎನ್‌ಎಲ್ ಮೊಬೈಲ್ ಟವರ್ ಇದೆ. ಆದರೆ ಮೊಬೈಲ್ ಸಿಗ್ನಲ್ ಈ ಊರುಗಳಲ್ಲಿ ಸಿಗುವುದಿಲ್ಲ. ಕೆಲವು ಕಡೆಗಳಲ್ಲಿ ಮರದ ಮೇಲೆ ಏರಿ ನಿಂತರೆ ಸಿಗ್ನಲ್ ಸಿಗುತ್ತದೆ. ಒಂದಿಬ್ಬರು ಮರವನ್ನೇರಿ ಮೊಬೈಲಿನಲ್ಲಿ ಮಾತನಾಡುವ ಸಾಹಸವನ್ನೂ ಮಾಡಿದ್ದಾರೆ. ಈ ಭಾಗದ ದೂರವಾಣಿ ಸಮಸ್ಯೆ ಪರಿಹಾರ ಮಾಡಬೇಕು, ಮನವಿ ಸಲ್ಲಿಸಿದವರಿಗೆ ಸ್ಥಿರ ದೂರವಾಣಿ ಸಂಪರ್ಕ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
(ಬದುಕ ಕದಡಿದೆ ಬೆಣ್ಣೆಹೊಳೆ)
ಸಂಪೆಗದ್ದೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಾಹನ ಕೆಟ್ಟು ನಿಂತರೆ ಅದನ್ನು ಸರಿಪಡಿಸಲು ಯಾರೂ ಆಗಮಿಸುವುದಿಲ್ಲ. ಬೈಕ್ ಹಾಳಾದರೆ, ಪಂಚರ್ ಆದರೆ 6-7 ಕಿ.ಮಿ ದೂರದಿಂದ ವಾಹನ ಸರಿಪಡಿಸುವವರನ್ನು ಕರೆದುಕೊಂಡು ಬರಬೇಕು. ಸಮಯಕ್ಕೆ ಸರಿಯಾಗಿ ಅವರು ಸಿಗುವುದೂ ಇಲ್ಲ. ಇದರಿಂದಾಗಿ ಸ್ಥಳೀಯರೇ ವಾಹನಗಳನ್ನು ಕಷ್ಟಪಟ್ಟು ಸರಿಪಡಿಸಿಕೊಳ್ಳಲು ಆರಂಭಿಸಿದ್ದಾರೆ. ವಾಹನಗಳು ಹಾಳಾದಾಗ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುವುದು ಸರ್ವೇಸಾಮಾನ್ಯ ಎನ್ನುವಂತಾಗಿದೆ.
ತಾಲೂಕಿನ ಬಂಡಲ ಪಂಚಾಯತ ವ್ಯಾಪ್ತಿಯ ಹೆಬ್ರೆ ಗ್ರಾಮಕ್ಕೆ 1995-96ರಿಂದ 16,11,300 ರು. ವೆಚ್ಚದಲ್ಲಿ 56 ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ. ಆದರೆ ಜಲಗದ್ದೆ ಮಜರೆಯ 7 ಗ್ರಾಮಗಳಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಲಾಗಿಲ್ಲ. ಜಲಗದ್ದೆ ಮಜರೆಗೆ ಸಂಬಂಧಿಸಿದಂತೆ 2002-03ರಲ್ಲಿ ಜಲಗದ್ದೆ ಮೇಲಿನಕೇರಿ ರಸ್ತೆ ಸುಧಾರಣೆಗೆ ಸಂಬಂಧಿಸಿದಂತೆ 6250 ರು., 2011-12ರಲ್ಲಿ ಜಲಗದ್ದೆಯಲ್ಲಿ ಜಲಗದ್ದೆ ಕೇರಿ ಪಾದಚಾರಿ ರಸ್ತೆ ನಿರ್ಮಾಣಕ್ಕೆ 30,000 ರು., 2011-12ರಲ್ಲಿ ಜಲಗದ್ದೆ ಕೇರಿ ಪಾದಚಾರಿ ರಸ್ತೆ ನಿರ್ಮಾಣಕ್ಕೆ ಹೆಚ್ಚುವರಿ 40,000 ರು., 2012-13ರಲ್ಲಿ ಜಲಗದ್ದೆ ಕೇರಿ ರಸ್ತೆ ನಿರ್ಮಾಣಕ್ಕೆ 30,000 ರು., 2013-14ರಲ್ಲಿ ಜಲಗದ್ದೆ ರಸ್ತೆ ಸುಧಾರಣೆಗೆ ಮುಂದುವರದಿದ ಕಾಮಗಾರಿಯ ಹೆಸರಿನಲ್ಲಿ 10,000 ರು. ಮಂಜೂರು ಮಾಡಿ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಜಲಗದ್ದೆ ಮಜರೆಯ ಅಡಿಯಲ್ಲಿ ಜಲಗದ್ದೆಯನ್ನು ಹೊರತುಪಡಿಸಿ ಸಂಪೆಗದ್ದೆ, ಹಡನಗದ್ದೆ, ಬಿಳಿಜಡ್ಡಿ, ದೇವಕಣಿ, ಗಾಡನಗದ್ದೆ, ಯಡ್ಲಮನೆ ಈ ಊರುಗಳು ಬರುತ್ತವೆ. ಆದರೆ ಈ ಊರುಗಳಿಗೆ ತೆರಳುವ ರಸ್ತೆಗಳಿಗೆ ಒಂದೇ ಒಂದು ರು. ಖರ್ಚು ಮಾಡಲಾಗಿಲ್ಲ ಎನ್ನುವುದನ್ನು ಬಂಡಲ ಗ್ರಾಮ ಪಂಚಾಯತದ ದಾಖಲೆಗಳೇ ಮಾಹಿತಿ ನೀಡುತ್ತವೆ.
ಅಲ್ಲದೇ ಪಂಚಾಯತ ವ್ಯಾಪ್ತಿಯ ಯಟಗಾರ ಹಾಗೂ ಮುಂಡಗಾರಗಳಲ್ಲಿ ಜಿಲ್ಲಾ ಪಂಚಾಯತ ಹಾಗೂ ತಾಲೂಕಾ ಪಂಚಾಯತ ಅನುದಾನದ ಅಡಿಯಲ್ಲಿ ಕಾಲುಸಂಕ, ಕುಡಿಯುವ ನೀರು, ಝರಿ ನೀರು ಯೋಜನೆ, ರಸ್ತೆ ಸುಧಾರಣೆ, ರಸ್ತೆಯನ್ನು ಮೇಲ್ದರ್ಜೆಗೆ ಏರಿಸುವುದೂ ಸೇರಿದಂತೆ ಹಲವಾರು ಯೋಜನೆಗಳನ್ನು ಕೈಗೊಳ್ಳಲಾಗಿದೆ. ಆದರೆ ಸಂಪೆಗದ್ದೆ ಹಾಗೂ ಸುತ್ತಮುತ್ತಲ ಊರುಗಳಿಗೆ ಯಾವುದೇ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳದೇ ಇರುವುದನ್ನು ಗಮನಿಸಿದರೆ ಈ ಭಾಗದ ಜನಪ್ರತಿನಿಧಿಗಳು ಉದ್ದೇಶಪೂರ್ವಕವಾಗಿ ತಾರತಮ್ಯ ಮಾಡುತ್ತಿರುವುದು ಸ್ಪಷ್ಟವಾಗಿದೆ. ಈ ಗ್ರಾಮಗಳಲ್ಲಿನ ಸಮಸ್ಯೆಗಳ ಕುರಿತು ಸರಣಿ ಲೇಖನ ಪ್ರಕಟಿಸಲು ಆರಂಭಿಸಿದ ತಕ್ಷಣ ಎಚ್ಚೆತ್ತುಕೊಂಡಂತೆ ನಟನೆ ಮಾಡುತ್ತಿರುವ ಜನಪ್ರತಿನಿಧಿಗಳು ಇದೀಗ ಹಣ ಬಿಡುಗಡೆಯಾಗಿದೆ ಎಂದು ಹೇಳುತ್ತಿದ್ದಾರೆ.
(ಸ್ಥಳೀಯರ ನಿವಾಸ)
ಇದೀಗ ಪಂಚಾಯತ ವ್ಯಾಪ್ತಿಯ ಸಂಪೆಗದ್ದೆಯ ರಸ್ತೆ ಸುಧಾರಣೆಗೆ 40 ಸಾವಿರ ರು. ಮಂಜೂರಾಗಿದೆ. ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಇಂಜಿನಿಯರ್ ಸ್ಥಳ ಪರಿಶೀಲನೆ ಮಾಡಿಕೊಂಡು ಬಂದಿದ್ದಾರೆ. ಶೀಘ್ರದಲ್ಲಿಯೇ ರಸ್ತೆ ಸುಧಾರಣೆ ಕಾಮಗಾರಿ ಆರಂಭಿಸಲಾಗುತ್ತದೆ ಎಂದೂ ಭರವಸೆ ನೀಡಿದ್ದಾರೆ. ಕಳೆದ ಮೂರ್ನಾಲ್ಕು ವರ್ಷಗಳ ಅವಧಿಯಲ್ಲಿ ಜಲಗದ್ದೆ ಹಳ್ಳದಿಂದ ಸಂಪೆಗದ್ದೆ ರಸ್ತೆ ಸುಧಾರಣೆಗಾಗಿ ಹಣ ಬಿಡುಗಡೆಯಾಗಿತ್ತು. ಜಲಗದ್ದೆ ಹಳ್ಳಕ್ಕೆ ಸೇತುವೆ ನಿರ್ಮಾಣ ಸೇರಿದಂತೆ ಹಲವಾರು ಯೋಜನೆಗಳಿಗೂ ಅನುದಾನ ಬಂದಿತ್ತು. ಆ ಸಂದರ್ಭದಲ್ಲಿ ಸ್ಥಳೀಯ ತಾ.ಪಂ ಸದಸ್ಯರೋರ್ವರು ಸ್ಥಳೀಯರನ್ನು ಎತ್ತಿಕಟ್ಟುವ ಮೂಲಕ ಕಾಮಗಾರಿ ಕೈಗೊಳ್ಳಲು ಅಡ್ಡಗಾಲು ಹಾಕಿದರು. ಪರಿಣಾಮವಾಗಿ ರಸ್ತೆ ಸುಧಾರಣೆಗೆ ಮಂಜೂರಾಗಿದ್ದ ಹಣ ಬೇರೆ ಕಡೆಗೆ ವರ್ಗಾವಣೆಯಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ. ಈ ಸಾರಿ ಬಿಡುಗಡೆಯಾದ ಹಣವನ್ನೂ ಬೇರೆ ಕಡೆಗೆ ವರ್ಗಾವಣೆ ಮಾಡಬಾರದು ಎಂದು ಆಗ್ರಹಿಸುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿದೆ ಎಂದು ದಾಖಲೆಯಲ್ಲಿ ತೋರಿಸುವ ಮೊತ್ತ ಊರಿನ ಅಭಿವೃದ್ಧಿಗೆ ಅರೆಕಾಸು ಎಂಬಂತಾಗಿದೆ.
ಜನಪ್ರತಿನಿಧಿಗಳಾದವರು ತಮ್ಮ ಹೊಣೆಗಾರಿಕೆ ಮರೆತು, ಗ್ರಾಮ ಗ್ರಾಮಗಳ ನಡುವೆ ಜನರನ್ನು ಎತ್ತಿಕಟ್ಟಿ ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿರುವುದು ಶೋಭೆ ತರುವಂತಹ ಕೆಲಸವಲ್ಲ. ಮಾಡಿದ ತಪ್ಪನ್ನು ಮುಚ್ಚಿಕೊಳ್ಳಲು ಜನರನ್ನು ಕರೆಸಿ ಪ್ರತಿಭಟನೆಯನ್ನು ಮಾಡಿಸುವ ಇಂತಹ ಜನಪ್ರತಿನಿಧಿಗಳು ಇನ್ನುಮುಂದಾದರೂ ಎಚ್ಚೆತ್ತುಕೊಳ್ಳುತ್ತಾರೆಯೇ ಎಂಬುದನ್ನು ಕಾದುನೋಡಬೇಕಾಗಿದೆ.

***

(ದುರ್ಬಲ ಕಾಲುಸಂಕದಲ್ಲಿ ದುರ್ಭರ ಪಯಣ)
ಮೂರ್ನಾಲ್ಕು ಸಾರಿ ಜಲಗದ್ದೆ ಹಳ್ಳದಿಂದ ರಸ್ತೆ ಸುಧಾರಣೆಗೆ ಜಿ.ಪಂ ಹಾಗೂ ತಾ.ಪಂ ಅಡಿಯಲ್ಲಿ ಅನುದಾನ ಮಂಜೂರಾಗಿತ್ತು. ಆದರೆ ನಮ್ಮ ಭಾಗದ ಜನಪ್ರತಿನಿಧಿಗಳು ಆ ಅನುದಾನಕ್ಕೆ ಅಡ್ಡಗಾಲು ಹಾಕಿದರು. ಅಭಿವೃದ್ಧಿ ಮಾಡಿದ ಸ್ಥಳದಲ್ಲಿಯೇ ಮತ್ತೆ ಮತ್ತೆ ಅಭಿವೃದ್ಧಿ ಮಾಡುತ್ತ ಕಾಲತಳ್ಳುವ ಜನಪ್ರತಿನಿಧಿಗಳಿ ನಮ್ಮ ಬವಣೆ ಗೊತ್ತಿದ್ದರೂ ಜಾಣಕುರುಡರಂತೆ ವರ್ತನೆ ಮಾಡುತ್ತಿದ್ದಾರೆ.
ಮಂಜುನಾಥ ಭಟ್ಟ



***

ಬಂಡಲ ಬವಣೆ
ಭಾಗ-5


ಬಂಡಲ ಗ್ರಾಮ ಪಂಚಾಯತ ಅಭಿವೃದ್ಧಿ ಕೆಲಸದಲ್ಲಿ ಸಾಕಷ್ಟು ಹಿನ್ನಡೆಯಲ್ಲಿದೆ ಎನ್ನುವುದು ಅಲ್ಲಿಯ ಹಳ್ಳಿಗಳನ್ನು ಗಮನಿಸಿದಾಗ ಗೋಚರಿಸುತ್ತದೆ. ಈ ಪಂಚಾಯತಕ್ಕೆ ಸಂಬಂಧಪಟ್ಟ ಜನಪ್ರತಿನಿಧಿಗಳ ಬದ್ಧತೆಯೂ ಪ್ರಶ್ನಾರ್ಹವಾಗಿದೆ.
ಶಿರಸಿ-ಕುಮಟಾ ರಾಜ್ಯ ಹೆದ್ದಾರಿಯಲ್ಲಿರುವ ಬಂಡಲದ ಒಳ ಹೊಕ್ಕರೆ ಜನಪ್ರತಿನಿಧಿಗಳ ಬಂಢಾರವೇ ಬಯಲಾಗುತ್ತದೆ. ಇಲ್ಲಿಯ ಜನರ ನಿತ್ಯದ ಗೋಳನ್ನು ಆಲಿಸುವವರೇ ಇಲ್ಲ. ಪ್ರತಿಯೊಂದಕ್ಕೂ ಗೋಳಾಡುತ್ತಿರುವ ಜನರ ಬದುಕೇ ಮೂರಾಬಟ್ಟೆಯಾಗಿದೆ. ಪ್ರಾಥಮಿಕ ಸೌಕರ್ಯ ಕಲ್ಪಿಸಲು ಮೀನ-ಮೇಷ ಎಣಿಸುತ್ತಿರುವ ಜನಪ್ರತಿನಿಧಿಗಳು ತಾರತಮ್ಯ ಧೋರಣೆ ಅನುಸರಿಸುತ್ತಿದ್ದಾರೇನೋ ಅನ್ನಿಸಿದರೆ ತಪ್ಪಲ್ಲ. ರಾಜಕೀಯ ಧೋರಣೆಯಿಂದಾಗಿಯೇ ಸಾರ್ವಜನಿಕರು ತಮ್ಮ ಹಕ್ಕಾಗಿರುವ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಪಕ್ಷ ರಾಜಕಾರಣ ಮುಖಕ್ಕೆ ರಾಚುತ್ತದೆ. ಇನ್ನಾದರೂ ಜನಪ್ರತಿನಿಧಿಗಳು ಓಟಿಗಾಗಿ ಕೆಲಸಮಾಡುವ ಪರಿಪಾಠವನ್ನು ಬಿಡಬೇಕಾಗಿದೆ. ಬದಲಾಗಿ ಸಾರ್ವಜನಿಕರ ಹಿತರಕ್ಷಣೆಗೆ ಆದ್ಯತೆ ನೀಡಬೇಕಾಗಿದೆ.
ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಚುನಾವಣೆಯ ನಂತರ ಅಭಿವೃದ್ಧಿಯೇ ತಮ್ಮ ಮೂಲಮಂತ್ರ ಎಂದು ಪ್ರತಿಯೊಂದು ಪಕ್ಷದ ಧುರೀಣರೂ ಹೇಳುತ್ತಾರೆ. ಆದರೆ ವಾಸ್ತವದಲ್ಲಿ ಅದು ಕೇವಲ ಕಣ್ಣೊರೆಸುವ ಹೇಳಿಕೆ ಎನ್ನುವುದಕ್ಕೆ ಪ್ರತಿನಿತ್ಯವೂ ನಿದರ್ಶನ ಸಿಗುತ್ತಲೇ ಇರುತ್ತದೆ. ಇದಕ್ಕೆ ಬಂಡಲ ಪಂಚಾಯತವೊಂದೇ ನಿದರ್ಶನವಲ್ಲ. ಒಬ್ಬ ಪಂಚಾಯತ ಸದಸ್ಯನಿಂದ ಶಾಸಕ, ಸಂಸದ, ಸಚಿವರವರೆಗೂ ಇದೇ ರೀತಿಯ ರಾಜಕೀಯ ಲಾಭ-ಲೆಕ್ಖಾಚಾರದ ಪ್ರಚಾರವನ್ನು ಅಳೆದು ತೂಗಿಯೇ ಆಯಾ ಪ್ರದೇಶದ ಅನುದಾನವನ್ನು ಬಿಡುಗಡೆ ಮಾಡುತ್ತಿರುವುದು ಸಂಪ್ರದಾಯವಾಗಿದೆ. ಅದಕ್ಕೆ ಇನ್ನಾದರೂ ಕಡಿವಾಣ ಹಾಕಬೇಕು. ಈಗ ಬೇಕಾಗಿರುವುದು ಬಂಡಲ ಪಂಚಾಯತಕ್ಕೆ ದೊಡ್ಡ ಮೊತ್ತದ ಅನುದಾನವಾಗಿದೆ. ಸಾವಿರ ರು.ಗಳ ಅನುದಾನ ಯಾವುದಕ್ಕೂ ಸಾಕಾಗದು. ಸೇತುವೆ ನಿರ್ಮಾಣ, ರಸ್ತೆ ನಿರ್ಮಾಣ, ಪ್ರಾಥಮಿಕ ಆರೋಗ್ಯ ಕೇಂದ್ರ ಹೀಗೆ ಸಾಕಷ್ಟು ಕೆಲಸ, ಕಾರ್ಯಗಳು ಆಗಬೇಕಾಗಿದೆ.
(ಬಂಡಲ ಗ್ರಾ.ಪಂ ಕಟ್ಟಡ)
ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಬಂಡಲ ಪಂಚಾಯತದ ಹೆಬ್ರೆ ಹಾಗೂ ಸುತ್ತಮುತ್ತಲ ಪ್ರದೇಶ ಈ ಮೊದಲು ಅಂಕೋಲಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿತ್ತು. ಅಂಕೋಲಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದಾಗ ಕನಿಷ್ಟ ಮೂರು ಅವಧಿಯವರೆಗೆ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಚುನಾಯಿತರಾಗಿದ್ದರು. ಈಗ ಶಿರಸಿ-ಸಿದ್ದಾಪುರ ಕ್ಷೇತ್ರದ ವ್ಯಾಪ್ತಿಗೆ ಬಂದ ಮೇಲೆ ಕಾಗೇರಿಯವರು ಎರಡು ಸಾರಿ ಆಯ್ಕೆಯಾಗಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಾಗಿಯೂ ಆಡಳಿತ ನಡೆಸಿದ್ದಾರೆ. ಇದೀಗ ಕಾಗೇರಿಯವರು ಶಾಸಕರಾಗಿ ಹತ್ತಿರ ಹತ್ತಿರ 22 ವರ್ಷಗಳಾಗುತ್ತಿದೆ. ಸಂಪೆಗದ್ದೆ ಹಾಗೂ ಸುತ್ತಮುತ್ತಲ 7 ಗ್ರಾಮಗಳ ಗ್ರಾಮಸ್ಥರು ಕಳೆದ 22 ವರ್ಷಗಳಿಂದಲೂ ರಸ್ತೆ, ಸೇತುವೆಗಾಗಿ ಕಾಗೇರಿಯವರಿಗೆ ಮನವಿ ಸಲ್ಲಿಸುತ್ತಲೇ ಇದ್ದಾರೆ. ಶಾಸಕರಾಗಿ 2 ದಶಕಗಳಾಗುತ್ತ ಬಂದ ಸಂದರ್ಭದಲ್ಲಿ ಅದರ ಸವಿ ನೆನಪಿಗಾಗಿ ಸೇತುವೆ ನಿರ್ಮಾಣ ಮಾಡಿಕೊಡಿ ಎಂದೂ ಕೋರಿದ್ದಾರೆ. ಕಾಗೇರಿಯವರು ಈ ಕುರಿತು ಕಳೆದ 22 ವರ್ಷಗಳಿಂದ ರಸ್ತೆ ಸುಧಾರಣೆ ಮಾಡುವ ಭರವಸೆಯನ್ನು ನೀಡುತ್ತಲೇ ಇದ್ದಾರೆ. ಆದರೆ ಇದುವರೆಗೂ ಅವರ ಭರವಸೆ ಈಡೇರಿಲ್ಲ ಎನ್ನುವುದು ಸ್ಥಳೀಯರ ಆರೋಪವಾಗಿದೆ. ಆರ್. ವಿ. ದೇಶಪಾಂಡೆಯವರು ಕಳೆದ ನಾಲ್ಕು ದಶಕಗಳಿಂದ ಈ ಜಿಲ್ಲೆಯನ್ನು ಆಳುತ್ತಿದ್ದಾರೆ. ಇದೀಗ ರಾಜ್ಯದ ಪ್ರವಾಸೋದ್ಯಮ ಹಾಗೂ ಉನ್ನತ ಶಿಕ್ಷಣ ಸಚಿವರಾಗಿದ್ದಾರೆ. ಜಿಲ್ಲಾ ಉಸ್ತುವಾರಿಯ ಹೊಣೆಯನ್ನೂ ಹೊತ್ತಿದ್ದಾರೆ. ಹಿರಿಯ ರಾಜಕಾರಣಿ ದೇಶಪಾಂಡೆಯವರು ಬಂಡಲ ಗ್ರಾಮ ಪಂಚಾಯತಿಯ ಹೆಬ್ರೆ ಗ್ರಾಮದ ಸಂಪೆಗದ್ದೆ ಹಾಗೂ ಸುತ್ತಮುತ್ತಲ ಗ್ರಾಮಗಳ ಕತ್ತಲೆಯನ್ನು ಕಳೆಯಬೇಕಾಗಿದೆ.
(ಸ್ಥಳೀಯರ ಬವಣೆ)
ಸಂಸದ ಅನಂತಕುಮಾರ ಹೆಗಡೆಯವರೂ ಸಂಸದರಾಗಿ ಕನಿಷ್ಟ 20 ವರ್ಷಗಳಾಗುತ್ತಿದೆ. ಸಂಸದ ಅನಂತಕುಮಾರ ಹೆಗಡೆಯವರಿಗೂ ಸ್ಥಳೀಯರು ಮನವಿಯನ್ನು ಸಲ್ಲಿಸಿದ್ದಾರೆ. ಆದರೆ ಗ್ರಾಮ ಪಂಚಾಯತಿ ಮಟ್ಟದ ರಸ್ತೆ ಅಭಿವೃದ್ಧಿ ಕಾಮಗಾರಿಗಳೆಲ್ಲ ನನ್ನ ವ್ಯಾಪ್ತಿಗೆ ಬರುವುದಿಲ್ಲ. ದೊಡ್ಡ ದೊಡ್ಡ ಕಾರ್ಯಗಳಿದ್ದರೆ ಹೇಳಿ ಅದನ್ನು ಮಾಡಿಸೋಣ. ಚಿಕ್ಕಪುಟ್ಟ ಕೆಲಸಗಳು ಬೇಡ ಎಂದು ಹೇಳಿ ತಮ್ಮನ್ನು ಸಾಗಹಾಕಿದ್ದಾರೆ ಎಂದು ಸಂಪೆಗದ್ದೆ ಹಾಗೂ ಸುತ್ತಮುತ್ತಲ 6 ಗ್ರಾಮಗಳ ಗ್ರಾಮಸ್ಥರು ಹೇಳುತ್ತಾರೆ.
ನಾಲ್ಕೈದು ಗ್ರಾಮಗಳ ಜನರು ಬೈದರೂ ತಪ್ಪಿಲ್ಲ. ಹತ್ತೆಂಟು ಗ್ರಾಮಗಳ ಜನರು ಬೈಯುವುದನ್ನು ತಪ್ಪಿಸಿಕೊಳ್ಳುವಂತಹ ಕೆಲಸಗಳನ್ನು ತಾವು ಮಾಡುತ್ತಿದ್ದೇವೆ. ಅಭಿವೃದ್ಧಿ ಕಾರ್ಯಗಳು ಸದಾ ಚಾಲ್ತಿಯಲ್ಲಿದೆ ಎನ್ನುವುದನ್ನು ತೋರಿಸಲು ಗುದ್ದಲಿಪೂಜೆಗಳನ್ನು ನಡೆಸುತ್ತಲೇ ಇದ್ದೇವೆ. ಯಾವ ಸ್ಥಳದಲ್ಲಿ ಯಾವ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು ಎನ್ನುವುದನ್ನು ಹಿರಿಯ ಜನಪ್ರತಿನಿಧಿಗಳು ತಮಗೆ ಕಲಿಸಿಕೊಟ್ಟಿದ್ದಾರೆ ಎಂದು ಹೇಳಿಕೊಂಡು ಓಡಾಡುವ ಜನಪ್ರತಿನಿಧಿಗಳೂ ಇದ್ದಾರೆ. ಇಂತವರಿಂದಲೇ ಬಂಡಲ ಪಂಚಾಯತದ ಬವಣೆ ಇನ್ನಷ್ಟು ಹೆಚ್ಚಾಗಿದೆ. ಬಾಯಿ ಮಾತಿನಲ್ಲಿ ಅಭಿವೃದ್ಧಿಯ ಬಗ್ಗೆ ಹೇಳುವುದನ್ನು ಬಿಟ್ಟು ಯೋಜನೆಗಳನ್ನು ಅನುಷ್ಟಾನ ಮಾಡಿ ಜನರ ವಿಶ್ವಾಸ ಗಳಿಸುವುದು ಅತ್ಯಾವಶ್ಯಕವಾಗಿದೆ.
ಬಂಡಲ ಪಂಚಾಯತ ವ್ಯಾಪ್ತಿಯ ಹೆಬ್ರೆ ಗ್ರಾಮ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ರಸ್ತೆ ಸುಧಾರಣೆ, ಸೇತುವೆ ನಿರ್ಮಾಣಕ್ಕಾಗಿ ಜಿ.ಪಂ ಅಡಿಯಲ್ಲಿ ಅನುದಾನ ಮಂಜೂರಾಗಿದೆ. ಯಾವ ಪ್ರದೇಶಕ್ಕೆ ಹಣ ಹಾಕಿದರೆ ಸೂಕ್ತ ಎನ್ನುವುದನ್ನು ಪರಿಶೀಲನೆ ಮಾಡಲಾಗುತ್ತದೆ. ಸ್ಥಳ ಪರಿಶೀಲನೆಯ ನಂತರ ಅನುದಾನದ ಅಡಿಯಲ್ಲಿ ಯೋಜನೆ ಅನುಷ್ಟಾನವನ್ನು ಮಾಡಲಾಗುತ್ತದೆ ಎಂದು ಈ ಭಾಗದ ಜಿ.ಪಂ ಸದಸ್ಯ ಆರ್. ಡಿ. ಹೆಗಡೆ ಜಾನ್ಮನೆ ತಿಳಿಸಿದ್ದಾರೆ.
ಸಂಪೆಗದ್ದೆ ರಸ್ತೆ ಸುಧಾರಣೆ ಹಾಗೂ ಜಲಗದ್ದೆ ಹಳ್ಳಕ್ಕೆ ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ರಸ್ತೆ ಸುಧಾರಣೆ ನನ್ನ ಗಮನದಲ್ಲಿದೆ. ಈ ಕುರಿತು ಯಾವುದೇ ಹಣ ವರ್ಗಾವಣೆಯಾಗಿಲ್ಲ. ಸ್ಥಳೀಯರ ಬಳಿ ಚರ್ಚೆ ಮಾಡಿ ರಸ್ತೆ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸ್ಥಳೀಯ ತಾ.ಪಂ ಸದಸ್ಯ ಸಂತೋಷ ಗೌಡರ್ ಹೇಳಿದ್ದಾರೆ.

***

(ಈ ಎಲ್ಲ ಐದು ಭಾಗಗಳೂ ಕನ್ನಡಪ್ರಭದ ಉತ್ತರ ಕನ್ನಡದ ಪುರವಣಿಯಲ್ಲಿ ಅಭಿವೃದ್ಧಿಯೇ ಬಂಡಲ್ ಎನ್ನುವ ಶೀರ್ಷಿಕೆಯ ಅಡಿಯಲ್ಲಿ ಪ್ರಕಟಗೊಂಡಿದೆ.)

Wednesday, January 21, 2015

ಅಘನಾಶಿನಿ ಕಣಿವೆಯಲ್ಲಿ-9

                 ಮನೆಯಲ್ಲಾಗಲೇ ಇಬ್ಬರು ವಿಶೇಷ ವ್ಯಕ್ತಿಗಳ ಆಗಮನವಾಗಿತ್ತು. ಒಬ್ಬರು ವಿಕ್ರಮನ ಅಜ್ಜಿ ಮಹಾಲಕ್ಷ್ಮಿ. ಎರಡು ದಿನಗಳ ಹಿಂದೆ ಇವರು ತನ್ನ ತಮ್ಮ ಚಂದ್ರಶೇಖರನ ಮನೆಗೆ ಹೋಗಿದ್ದರು ಯಾವುದೋ ಕಾರ್ಯದ ನಿಮಿತ್ತ. ಮನೆಗೆ ಬಂದು ನಿಲ್ಲುತ್ತಿದ್ದಂತೆಯೇ ಮೊಮ್ಮಗನ ಆಗಮನ ಸುದ್ದಿ ಕೇಳಿ ಮುಖ ಊರಗಲವಾಗಿತ್ತು. ಮನೆಗೆ ಬಂದಿದ್ದ ಇನ್ನೊಬ್ಬ ವ್ಯಕ್ತಿ ವಿಕ್ರಮನ ಭಾವ ವಿನಾಯಕ. ವಿಕ್ರಮ ತಾನು ಬರುತ್ತಿದ್ದ ವಿಷಯವನ್ನು ಪೋನ್ ಮಾಡಿ ತಿಳಿಸಿದ್ದರಿಂದ ಸಕಾಲಕ್ಕೆ ಆಗಮಿಸಿದ್ದ.
                ವಿಕ್ರಮ ತನ್ನ ಅಜ್ಜಿಯನ್ನು ಪರಿಚಯಿಸುತ್ತಾ `ಇವರ ಜೊತೆ ಮಾತನಾಡುವುದೆಂದರೆ ಹಳೆಯ ಕಾಲದ ಾಚಾರ, ವಿಚಾರ, ನೆನಪು, ಬದುಕು, ತಲೆಮಾರುಗಳ ಲೋಕಕ್ಕೆ ಹೋದಂತೆ..' ಎಂದ. ನಂತರ ವಿಕ್ರಂ ವಿನಾಯಕನನ್ನು ಪರಿಚಯ ಮಾಡಿಸುತ್ತಾ `ಈತ ಒಬ್ಬ ಕವಿ. ಒಳ್ಳೆಯ ನಟ. ಜೊತೆಗೆ ಮಿಮಿಕ್ರಿ ಮಾಡಬಲ್ಲ. ಒಳ್ಳೆ ಕ್ರೀಡಾಪಟು ಕೂಡ ಹೌದು. ಜೊತೆಗೆ ಇವನಿಗೆ ಗ್ರಾಫಾಲಜಿ ಬರ್ತದೆ. ಓದೋ ಹುಚ್ಚು ಸ್ವಲ್ಪ ಹೆಚ್ಚು. ಜೊತೆಗೆ ಯಾರೇ ಒಳ್ಳೆಯ ವ್ಯಕ್ತಿಗಳಿರಲಿ ಅವರನ್ನು ಮಾತನಾಡಿಸಿ, ಗೆಳೆತನ ಮಾಡಿಕೊಳ್ಳುವುದು ಈತನ ಪ್ರಮುಖ ಕೆಲಸ. ಒಂದು ರೀತಿಯಲ್ಲಿ ಆಲ್ ರೌಂಡರ್ ಎಂದರೆ ತಪ್ಪಾಗಲಿಕ್ಕಿಲ್ಲ ನೋಡಿ..' ಎಂದ.
               `ಯೇ ವಿಕ್ರಮಾ.. ಎಂತೆಂತಾದ್ರೂ ಹೇಳಡದಾ.. ಇಲ್ದೋದ್ದು, ಅಲ್ದೋದ್ದು ಎಲ್ಲಾ ಎಂತಕ್ಕೆ ಹೇಳ್ತ್ಯಾ?.. ಥೋ..' ಎಂದು ವಿನಾಯಕ ವಿಕ್ರಮನ ವಿವರಣೆಯನ್ನು ಕೊಂಚ ವಿರೋಧಿಸಿದ. ಅಷ್ಟರಲ್ಲಿ ಮಧಗಯ ಬಾಯಿ ಹಾಕಿದ ಪ್ರದೀಪ `ನಿಮ್ ಗೆ ಗ್ರಾಫಾಲಜಿ ಗೊತ್ತಿದೆಯಾ? ಓಹ್.. ನಾನು ಸ್ವಲ್ಪ ಹುಷಾರಾಗಿರಬೇಕು...' ಎಂದ.
               `ಯಾಕಪ್ಪಾ..' ಎಂದು ಕೇಳಿದ ವಿಕ್ರಮನಿಗೆ `ಈತ ನನ್ನ ತರಲೆಗಳನ್ನೆಲ್ಲಾ ಕಂಡು ಹಿಡಿದುಬಿಟ್ಟರೆ?' ಎಂದಾಗ ಎಲ್ಲರೂ ಒಮ್ಮೆ ನಕ್ಕರು.
               ಆ ದಿನ ಹಾಗೇ ಮಾತನಾಡುತ್ತಾ ಮರುದಿನ ಯಾವುದಾದರೂ ಪ್ರದೇಶಗಳ ವೀಕ್ಷಣೆಗೆ ಹೋಗೋಣ ಎಂದುಕೊಂಡರು. ಸುತ್ತಮುತ್ತ ಏನಿದೆ ಎಂದುಕೊಂಡಾಗ `ಲಾಲಗುಳಿ ಜಲಪಾತ' ಹಾಗೂ `ಗಿರ ಗಿರ ಪತ್ಥರ್..' ಇದೆ ಎನ್ನುವುದು ತಿಳಿಯಿತು. ಅದನ್ನು ನೋಡಿ ಬನ್ನಿ ಎನ್ನುವ ಮಾತುಗಳನ್ನು ಮನೆಯ ಹಿರಿಯರು ಹೇಳಿದರು. ಸರಿಯೆಂದರು ಎಲ್ಲರೂ. ಮರುದಿನ ಹೋಗುವುದಕ್ಕೆ ತಯಾರಿ ಮಾಡಿಕೊಂಡು ಎಲ್ಲರೂ ಮಲಗಿದರು.

*****8*****

               ಮರುದಿನ ಎಪ್ರಿಲ್ 11. ಎಲ್ಲರೂ ನಸುಕಿನಲ್ಲೆದ್ದು ಹೊರಡಲು ಅನುವಾದರು. ಅಷ್ಟರಲ್ಲಾಗಲೇ ವಿಕ್ರಮನ ತಾಯಿ ಲಕ್ಷ್ಮಿ ಹಲಸಿನಕಾಯಿಯ ತೆಳ್ಳೇವನ್ನೂ ಮದ್ಯಾಹ್ನದ ಊಟಕ್ಕೆ ಸಾಕಷ್ಟು ತಿಂಡಿಗಳನ್ನೂ, ಪುಳಿಯೋಗರೆ, ಹಲಸಿನಕಾಯಿಯ ಪಲ್ಯ, ಪುಳಿಯೋಗರೆ, ಫಲಾವ್ ಗಳನ್ನೆಲ್ಲಾ ಮಾಡಿಕೊಟ್ಟರು. ಎಲ್ಲವನ್ನೂ ಕಾರಿಗೆ ತುಂಬಿಕೊಂಡರು. ಕಿರಿಯರ ನಡುವೆ ಹಿರಿಯರೇಕೆ ಎಂದು ಭಟ್ಟರು, ಲಕ್ಷ್ಮೀಬಾಯಿ ಹಾಗೂ ಮಹಾಲಕ್ಷ್ಮಮ್ಮ ತಾವು ಜಲಪಾತ ನೋಡಲು ಬರುವುದಿಲ್ಲ ಎಂದರು. ಅದೂ ಅಲ್ಲದೇ ತಮ್ಮದೇ ಮನೆಯ ಬಳಿ ಇರುವ ಈ ಸ್ಥಳಗಳನ್ನು ಅನೇಕ ಬಾರಿ ನೋಡಿದ್ದರಿಂದ ಮತ್ತೇಕೆ ಎಂದುಕೊಂಡರು.
             ಒಟ್ಟಿನಲ್ಲಿ ಅಲ್ಲಿಗೆ ಹೊರಟವರು ವಿಕ್ರಮ್, ವಿನಾಯಕ, ಪ್ರದೀಪ, ವಿಜೇತಾ ಹಾಗೂ ರಮ್ಯ. ಅಲ್ಲಿಗೆ ಹೊರಟಿದ್ದೇನೋ ಕಾರಿನಲ್ಲಿ. ಆದರೆ ವಿಕ್ರಮನಿಗೂ ಆ ಪ್ರದೇಶ ಹೊಸತೇ. ತಮ್ಮೂರಾದರೂ ತಾನು ಅಲ್ಲಿ ಅಡ್ಡಾಡಿದ್ದು ಅಷ್ಟರಲ್ಲೇ ಇದೆ. ಚಿಕ್ಕಂದಿನಲ್ಲಿ ಒಮದೆರಡು ಸಾರಿ ಹೋಗಿದ್ದನಾದರೂ ಈಗಲೂ ಮಾರ್ಗಗಲೆಲ್ಲ ಅಸ್ಪಷ್ಟವಾಗಿದೆ. ಈ ಕಾರಣಕ್ಕಾಗಿ ಆ ಪ್ರದೇಶದ ಒಳಹೊರಗನ್ನು ಬಲ್ಲ ಸ್ಥಳೀಯ ಸಿದ್ದಿ ವ್ಯಕ್ತಿಯೊಬ್ಬನನ್ನು ಕರೆದೊಯ್ದರು. ಅಂತಹ ದಟ್ಟ ಕಾಡಿನ ಮಧ್ಯದಲ್ಲಿ ಸಿದ್ಧಿಗಳು ಎಲ್ಲಿಂದ ಬಂದರೋ. ಶತ ಶತಮಾನಗಳಿಂದ ಅವರು ಇಲ್ಲಿಯೇ ಇರಬೇಕು. ಬಹುಶಃ ಬ್ರಿಟೀಷರೋ., ಮತ್ತಿನ್ಯಾರೋ ಕರೆತಂದಿದ್ದಾರೇನೋ..
             ಇವರ ಜೊತೆಗೆ ಮಾರ್ಗದರ್ಶಿಯಾಗಿ ಬಂದ ಸಿದ್ಧಿಯ ಹೆಸರು ರಾಬರ್ಟ ಸಿದ್ದಿ. ಆಗಾಗ  ಭಟ್ಟರ ಮನೆಗೆ ಕೆಲಸಕ್ಕೆ ಬರುತ್ತಿದ್ದವನು. ಇವರ ಜೊತೆಗೆ ಹೊರಡುವ ಮೊದಲು  ವಿಕ್ರಮನನ್ನು ನೋಡಿ `ಓಹ್... ನೀ ಯಾವತ್ತು ಬಂದ್ಯೋ..?' ಎಂದು ಕೇಳಿದವನಿಗೆ ವಿಕ್ರಮ ಎಲ್ಲವನ್ನೂ ಸವಿವರವಾಗಿ ಹೇಳಿದ್ದ. ಗಿರಗಿರ ಪಥ್ಥರ್ ಹಾಗೂ ಲಾಲಗುಳಿ ಜಲಪಾತ ತೋರಿಸಲು ಹೇಳಿದ್ದ.
`ಗಿರ್ ಗಿರ್ ಪತ್ಥರ್ ಗೆ ಹೋಗದೇನೋ ಸರಿ.. ಅಲ್ಲೋ ಬಟಾ.. ಲಾಲಗುಳಿಗ್ ಯಂತಕ್ ಹೊಂಟ್ಯೋ..? ಅಲ್ಲೆಂತ ಐತೆ ಬದ್ನೆಕಾಯಿ? ನೀರಿಲ್ಲ ಎಂತ ಇಲ್ಲ..' ಎಂದನಾದರೂ ಬರಲು ಒಪ್ಪಿಕೊಂಡಿದ್ದ.
             ದಾರಿಯಲ್ಲಿ ಸಿದ್ಧಿಗಳದ್ದೇ ಒಮದೆರಡು ಕಾಲೋನಿಗಳನ್ನು ಹಾದು ಹೋಗಿ, ಒಂದೆರಡು ದಾರಿಯನ್ನು ಬದಲಾಯಿಸಿದವರು ಕೊನೆಗೆ ನಾಲ್ಕೈದು ಕಿಲೋಮೀಟರ್ ಪ್ರಯಾಣಿಸಿದ ನಂತರ ವಾಹನ ನಿಲ್ಲಿಸಿದರು. ಅಲ್ಲಿಂದ ಕಾಲ್ನಡಿಗೆಯಲ್ಲಿ ತೆರಳಬೇಕಿತ್ತು. `ಇಲ್ಲಿಂದ ಗಿರ್ ಗಿರ್ ಪತ್ಥರ್ ಗೆ ಐದು ಕಿಲೋಮೀಟರ್.. ಎಲ್ಲ ನಡ್ಕೊಂಡೇ ಹೋಗಬೇಕು. ಗಾಡಿ ಹೋಗಾದಿಲ್ಲ..' ಎಂದ ರಾಬರ್ಟ ಸಿದ್ದಿ. ಎಲ್ಲ ಕಾರಿನಿಂದ ಇಳಿದರು. ರಾಬರ್ಟ ಮುಂದೆ ಹೆಜ್ಜೆ ಹಾಕಿದರೆ ಎಲ್ಲರೂ ಹಿಂಬಾಲಿಸಿದರು. ಹೋಗುತ್ತಿದ್ದ ಮಾರ್ಗವಂತೂ ಸೂರ್ಯನ ರಶ್ಮಿಗಳು ಭೂಮಿಗೆ ಬೀಳದಂತಿದ್ದ ದಟ್ಟಕಾನನ. ಗವ್ವ ಎನ್ನುವ ಅರಣ್ಯ. ಅಲ್ಲಲ್ಲಿ ಸಾಗುವಾನಿ ಪ್ಲಾಂಟೇಶನ್ನುಗಳು. ಸಿದ್ದಿ ವೇಗವಾಗಿ ಹೋಗುತ್ತಿದ್ದ. ಅವನ ವೇಗಕ್ಕೆ ವಿನಾಯಕನನ್ನು ಹೊರತು ಪಡಿಸಿ ಉಳಿದವರು ಸಾಗಲು ಕಷ್ಟಪಡಬೇಕಾಯಿತು.
              ದಾರಿ ಸಾಗಲೆಂದು ರಾಬರ್ಟನೊಡನೆ ಎಲ್ಲರೂ ಮಾತಿಗಿಳಿದರು. ಅಪರಿಚಿತರ ಬಳಿ ರಾಬರ್ಟ ಮೊದ ಮೊದಲಿಗೆ ಮಾತನಾಡಲು ಹಿಂಜರಿದನಾದರೂ ನಂತರ ಸರಾಗವಾಗಿ ಮಾತನಾಡತೊಡಗಿದ. ವಿಜೇತಾ ರಾಬರ್ಟನ ಬಳಿ `ನೀವೆಲ್ಲರೂ ಕ್ರಿಶ್ಚಿಯನ್ನರಾ..?' ಎಂದು ಕೇಳಿದಳು. ಅದಕ್ಕೆ ಪ್ರತಿಯಾಗಿ ರಾಬರ್ಟ `ಇಲ್ಲ.. ನಮ್ಮಲ್ಲಿ ಕೆಲವರು ಮುಸ್ಲಿಂರೂ, ಹಿಂದೂಗಳೂ ಇದ್ದಾರೆ..' ಎಂದ.
              `ನಾಗರೀಕತೆಯಿಂದ ಅದೆಷ್ಟೇ ದೂರದಲ್ಲಿದ್ದರೂ ಇಲ್ಲೂ ಕೂಡ ಧರ್ಮಗಳಿದೆಯಲ್ಲ ಮಾರಾಯಾ...' ಎಂದ ಪ್ರದೀಪನಿಗೆ ವಿಕ್ರಮ್ ವಿವರಣಾತ್ಮಕವಾಗಿ `ಅದು ಹಾಗಿರೋದಿಲ್ಲ ಪ್ರದೀಪ್.. ಮೂಲತಃ ಇವರು ಯಾವುದೇ ಜಾತಿಯನ್ನು ಅನುಸಿರಿಸದವರಲ್ಲ. ಯಾರೋ ಒಂದಿಷ್ಟು ಮಿಷನರಿಗಳು ಬಂದು ಹಣ ಕೊಡ್ತಾರೆ. ಹಲವರನ್ನು ತಮ್ಮ ಧರ್ಮಕ್ಕೆ ಸೇರಿಸಿಕೊಳ್ಳುತ್ತಾರೆ. ಮದರಸಾಗಳೂ, ಹಿಂದೂ ಸಂಘಟನೆಗಳೂ ಇಲ್ಲಿ ಹಿಂದೆ ಬಿದ್ದಲ್ಲ. ಹಾಗಾಗಿ ಇಲ್ಲಿ ಹೀಗಾಗಿದೆ...' ಎಂದ.
              `ಛೇ.. ಛೇ ಇದೆಂತಹ ವ್ಯವಸ್ಥೆನಪ್ಪಾ.. ಕಾಡಿನ ನಡುವೆ ಬದುಕುತ್ತಿರುವವರನ್ನು ಅವರ ಪಾಡಿಗೆ ಬಿಡುವುದೂ ಇಲ್ಲವಲ್ಲಾ..' ಎಂದು ತಲೆಕೊಡವಿದ ಪ್ರದೀಪ.
              `ನಿಮ್ಮ ಸ್ಥಿತಿಗತಿ ಈಗ ಹೇಗಿದೆ..?' ಎಂದು ಕೇಳಿದಳು ವಿಜೇತಾ.
              `ಅದೆಂತಾ ಹೇಳದೋ.. ಯಾರೋ ಒಂದು ಪಕ್ಷದವರು ಬಂದು ಮನೆ ಕಟ್ಟಿಕೊಟ್ಟರು. ಮೊದಲು ನಾವಿದ್ದ ಊರು ಅದೇನೋ ಹೆಸರಿತ್ತು. ಪಕ್ಷದವರು ಬಂದು ಮನೆ ಕಟ್ಟಿಸಿದ್ದಕ್ಕೆ ಆ ಪಕ್ಷದ ನಾಯಕನ ಹೆಸರನ್ನೇ ನಮ್ಮೂರಿಗೆ ಇಟ್ಟರು. ಈಗ ಅವರು ಕಟ್ಟಿಕೊಟ್ಟ ಮನೆ  ಹಾಗೂ ಊರಿಗೆ ಇಟ್ಟ ಹೆಸರು. ಇವೆರಡೇ ಇದ್ದಿದ್ದು. ಮತ್ತೆಂತದ್ದೂ ಇಲ್ವೋ. ದುಡಿಯೋದಿಕ್ಕೆ ಜಮೀನು ಇಲ್ಲ. ಕಾಡಂತೂ ಮುಟ್ಟಾಂಗಿಲ್ಲ. ಬಹಳ ತೊಂದರೆಲಿದ್ದಿದ್ದು..' ಎಂದು ಹಲುಬಿಕೊಂಡ ಸಿದ್ದಿ.
          ಅಷ್ಟರಲ್ಲಾಗಲೇ ಗಿರ ಗಿರ ಪತ್ಥರ್ ಬಂದಿತ್ತು. ಮಲೆನಾಡಿನ ದಟ್ಟ ಕಾಡಿನಲ್ಲಿ ಹಾದು ಬರುತ್ತಿದ್ದವರಿಗೆ ಇದ್ದಕ್ಕಿದ್ದಂತೆ ಮುಂದಿನ ಭಾಗವನ್ನು ಯಾರೋ ಕತ್ತರಿಸಿ ಇಟ್ಟಿದ್ದಾರೆಂಬಂತಹ ಭೂರಚನೆ. ಇದ್ದಕ್ಕಿದ್ದಂತೆ ಎದುರಿನ ಭೂಭಾಗವೇ ಇಲ್ಲ ಎನ್ನಿಸಿತ್ತು. ಗುಡ್ಡದ ತುದಿಗೆ ನಿಂತವರಿಗೆ ಕೆಳಗೆ ಹಸಿರು ಅರಣ್ಯಗಳು ಕಾಣಿಸಿದವು. ದೂರದಲ್ಲಿ ಕಪ್ಪಗೆ ಹರಿಯುತ್ತಿದ್ದ ಕಾಳಿ ನದಿ ಕಾಣಿಸಿತು. ಸುಂಯ್.. ಎನ್ನುವ ಶಬ್ದದೊಂದಿಗೆ ಬೀಸಿ ಬರುತ್ತಿದ್ದ ಗಾಳಿ.
             `ಇಲ್ಲಿ ಕಲ್ ಒಗಿಯೋ ಬಟಾ..' ಎಂದ ಸಿದ್ದಿ. `ಎಲ್ಲರೂ ಚಿಕ್ಕ ಚಿಕ್ಕ ಕಲ್ಲನ್ನು ಒಗೆದರು. ಆ ಕಲ್ಲು ನೇರವಾಗಿ ಕೆಳಕ್ಕೆ ಬೀಳಲಿಲ್ಲ. ಒಗೆದ ಕಲ್ಲು ಕ್ಷಣಕಾಲ ಗಾಳಿಯಲ್ಲಿ ಗಿರ ಗಿರನೆ ತಿರುಗಿ ನಿಧಾನವಾಗಿ ಕೆಳಕ್ಕಿಳಿಯತೊಡಗಿತು. ಆಗ ರಾಬರ್ಟ ಸಿದ್ದಿಯೆಂದ `ನೋಡಿ.. ಇಲ್ಲಿ ಕಲ್ಲು ಒಗೆದರೂ ಬೇಗ ಕೆಳಕ್ಕೆ ಹೋಗಾದಿಲ್ಲ. ನಿಧಾನಕ್ಕೆ ಗಿರ ಗಿರ ತಿರುಗ್ತಾ ತಿರುಗ್ತಾ ಕೆಳಕ್ಕೆ ಬೀಳ್ತದೆ.. ಗಾಳಿಯ ಒತ್ತಡಕ್ಕೆ ಹಿಂಗಾಗ್ತದೆ ಅಂತ ಯಾರೋ ಒಬ್ಬರು ಹೇಳಿದ್ದರು. ಇದೇ ಕಾರಣಕ್ಕೆ ಈ ಪ್ರದೇಶಕ್ಕೆ ಗಿರ ಗಿರ ಪತ್ಥರ್ ಅನ್ನುವ ಹೆಸರು ಬಂದಿದೆ..' ಎಂದ.
              ಹೆಸರಿಗೆ ತಕ್ಕ ಪ್ರದೇಶ ಎಂದುಕೊಂಡವರು ಸಾಕಷ್ಟು ಪೋಟೋಗಳನ್ನು ಹೊಡೆದುಕೊಂಡರು. ರಾಬರ್ಟ ಅಲ್ಲಿಯೇ `ನಂದೋಂದ್ ತಕಾಳಿ..' ಎಂದ. ಆತನ ಪೋಟೋವನ್ನೂ ತೆಗೆದುಕೊಂಡರು ಎಲ್ಲರೂ. ಅಷ್ಟರಲ್ಲಿ ಹಿಂದೆ ಪೊದೆಯಲ್ಲಿ ಏನೋ ಸದ್ದಾಯಿತು. ಪ್ರದೀಪ ಒಮ್ಮೆಲೆ ಎಚ್ಚರಿಕೆಯಿಂದ ನಡೆಯತೊಡಗಿದೆ. ಯಾರೋ ಇದ್ದಾರೆ. ಯಾರೋ ನಮ್ಮನ್ನು ಹಿಂಬಾಲಿಸುತ್ತಿದ್ದಾರೆ ಎನ್ನಿಸತೊಡಗಿತು ಆತನಿಗೆ. ರಾಬರ್ಟ ಸಿದ್ದಿ ಮಾತ್ರ `ಹಂದಿ.. ಹಂದಿ ಬಂದಿರಬೇಕು.. ಅದ್ಕೆ ಅಲ್ಲಿ ಸದ್ದಾಗ್ತದೆ..' ಎಂದ. ಎಲ್ಲರೂ ಸುಮ್ಮನಾದರು. ಪ್ರದೀಪ ಮಾತ್ರ ಸುಮ್ಮನಾಗಲಿಲ್ಲ. ಸದ್ದು ಬಂದ ಕಡೆಗೆ ಗಮನವನ್ನು ಇರಿಸಿದ್ದ.
              ಒಂದು ತಾಸಿನ ನಂತರ ಗಿರ ಗಿರ ಪತ್ಥರ್ ನಿಂದ ಎಲ್ಲರೂ ವಾಪಾಸಾದರು. ಮರಳಿ ಸಾಗಿ ಕವಲೊಡೆದ ಮಾರ್ಗದಲ್ಲಿ ಚಲಿಸಿ ಲಾಲಗುಳಿ ಜಲಪಾತದ ಕಡೆಗೆ ತೆರಳಿದರು. ಜಲಪಾತಕ್ಕಿಂತ ಒಂದೆರಡು ಕಿ.ಮಿ ದೂರದಲ್ಲೇ ಕಾರು ನಿಲ್ಲಿಸಿದರು. ಅಲ್ಲಿಂದ ನಡೆದು ಸಾಗಬೇಕಿತ್ತು. ಕೊಂಚ ದಾರಿ ಮಾಡಿಕೊಂಡು ಕೆಳಗಿಳಿದವರಿಗೆ ಹಾಲ್ನೊರೆಯಂತಹ ಜಲರಾಶಿ ಕಾಣಿಸಿತು. ಜಲಪಾತ ಅಷ್ಟೇನೂ ಎತ್ತರವಿರಲಿಲ್ಲ. ಜೋಗದಂತೆ, ಉಂಚಳ್ಳಿಯಂತೆ ಎತ್ತರದಿಂದ ಭೋರೆಂದು ಧುಮ್ಮಿಕ್ಕುವ ಜಲಪಾತ ಅದಾಗಿರಲಿಲ್ಲ. ಬದಲಾಗಿ ಬಂಡೆಯಿಂದ ಬಂಡೆಗೆ ಕೆಳಕ್ಕೆ ಜಿಗಿಯುತ್ತ ಸಾಗುತ್ತಿದ್ದ ಚಿಕ್ಕ ಚಿಕ್ಕ ಜಲಧಾರೆಗಳ ಸಂಗಮ ಅದಾಗಿತ್ತು. ಕಪ್ಪು ಕಾಳಿ ನದಿಯ ನೀರು ಕೆಳಕ್ಕೆ ಇಳಿಯುವ ಸಂದರ್ಭದಲ್ಲಿ ನೀರು ನೀರು ಮಥಿಸಿ ಬೆಳ್ಳಗೆ ಫಳಫಳಿಸುತ್ತಿದ್ದುದು ವಿಸ್ಮಯಕಾರಿಯಾಗಿತ್ತು.
                `ನೀರಿಗೆ ಇಳಿಬ್ಯಾಡ್ರೋ...' ಎಂದು ಎಚ್ಚರಿಕೆ ನೀಡಿದ ರಾಬರ್ಟ ಸಿದ್ದಿ. `ಯಾಕೆ..?' ಎಂದು ಕೇಳಿದರು ಎಲ್ಲರೂ. `ನೀರಿನಲ್ಲಿ ಸೆಳವು ಉಂಟು.. ಮತ್ತೆ ಈ ನೀರು ಚೊಲೋ ಇಲ್ರಾ.. ದಾಂಡೇಲಿ ಕಾಗದ ಕಾರ್ಖಾನೆ ನೀರು ಇದಕ್ಕೆ ಸೇರ್ತದೋ.. ಹಂಗಾಗಿ ನೀರು ಹಾಳಾಗದೆ.. ನೀವು ನೀರಿಗೆ ಇಳಿದರೆ ಮತ್ತೆಂತಾದ್ರೂ ರೋಗ ಬಂದರೆ.. ಅದಕ್ಕೆ ಹೇಳಿದ್ದು..' ಎಂದ ರಾಬರ್ಟ ಸಿದ್ದಿ. ಆದರೂ ಆ ಪರಿಸರ ಸುಂದರವಾಗಿತ್ತು.ಸಮುದ್ರದ ಕರೆಗೆ ಓಗೊಟ್ಟು ಓಡುವ ನದಿ ಕಮರಿಯನ್ನು ಲೆಕ್ಖಿಸದೇ ಇಳಿಯುವ, ಆಳಕ್ಕೆ ಬೀಳುವ ಪರಿ ಬಹು ಬೆರಗಿಗೆ ಕಾರಣವಾಗುತ್ತಿತ್ತು.
              ವಿಜೇತಾ, ವಿಕ್ರಮನ ಬಿಂಬಗ್ರಾಹಿಗಳು ಒಂದೆ ಸಮನೆ ಚಲಿಸತೊಡಗಿದ್ದವು. ರಮ್ಯ ಬಂಡೆಯಿಂದ ಬಂಡೆಗೆ ಜಿಗಿಯುವ ಚಿನ್ನಾಟಕ್ಕೆ ತೊಡಗಿಕೊಂಡಿದ್ದಳು. ಪ್ರದೀಪ `ಇಳಿದು ಬಾ ತಾಯೇ.. ಇಳಿದು ಬಾ..' ಎಂದು ಹಾಡುತ್ತಿದ್ದ. ಬಾವುಕ ಜೀವಿಯಾದ ವಿನಾಯಕನ ಕವಿಮನಸ್ಸು ಕವಿತೆಯ ಕಡೆಗೆ ತುಡಿಯುತ್ತಿತ್ತು. ಹೊಸದೊಂದು ಕವಿತೆಯನ್ನು ಕಟ್ಟಲು ಹಾತೊರೆಯುತ್ತಿತ್ತು. ತಕ್ಷಣವೇ ವಿನಾಯಕ ತಡಮಾಡದೇ
`ಹೊನ್ನ ಹೊಂಜೊನ್ನ ಧಾರೆ
ಇಳಿಯ ಮೇಲಣ ಸ್ವರ್ಗ ನೀರೆ,
ಇಳಿವ ನೀರೆಲ್ಲ ಅಮೃತಧಾರೆ
ಲಾಲಗುಳಿ.. ನೀನೇ ಮಿನುಗುತಾರೆ...'
ಎಂದು ದೊಡ್ಡದಾಗಿ ಹೇಳಿಬಿಟ್ಟ. ಒಮ್ಮೆಲೆ ಇದನ್ನು ಕೇಳಿದ ಎಲ್ಲರೂ ವಿನಾಯಕನ ಆಶುಕವಿತ್ವಕ್ಕೆ ತಲೆದೂಗಿದರು. ವಾಹ್.. ವಿನಾಯಕನ ಬೆನ್ನು ತಟ್ಟಿದರು.
            ನಂತರ ವಿನಾಯಕ, ವಿಕ್ರಮ ಹಾಗೂ ರಾಬರ್ಟ ನದಿಯಲ್ಲಿ ಈಜಲು ನೀರಿಗೆ ಇಳಿದರು. ಪ್ರದೀಪ ನೀರಿಗೆ ಇಳಿಯಲು ಹಿಂಜರಿದ. ನಂಗೆ ಈಜು ಬರೋದಿಲ್ಲ ಎಂದ. ಆದರೂ ಪಟ್ಟು ಬಿಡದ ಉಳಿದವರು ಪ್ರದೀಪನನ್ನು ನೀರಿಗೆ ಎಳೆದೇ ಬಿಟ್ಟರು. ಆದರೆ ನೀರಿಗಿಳದ ನಂತರ ಪ್ರದೀಪ ಈಜು ಬರದವರಂತೆ ಹೆದರಲಿಲ್ಲ. ಮುಳುಗಲಿಲ್ಲ. ಈಜಾಡಲಾರಂಭಿಸಿದ. ಕಾಳಿ ನದಿಗೆ ಸೆಳವು ಜಾಸ್ತಿ. ಒಮ್ಮೆಯಂತೂ ಸೆಳವಿದ್ದಲ್ಲಿಯೂ ಹೋಗಿ ಬಂದ. ಎಲ್ಲರ ಎಧೆ ಝಲ್ಲೆನ್ನುತ್ತಿದ್ದರೆ ಪ್ರದೀಪ ಆರಾಮಾಗಿ ಈಸುಬಿದ್ದು ಬಂದ. ಆಗ ಮಾತ್ರ ಎಲ್ಲರಿಗೂ ಅಚ್ಚರಿ. ಕೊನೆಗೆ ವಿಚಾರಿಸಿದಾಗ ಪ್ರದೀಪ ತನಗೆ ಈಜು ಗೊತ್ತಿದೆಯೆಂದೂ ಸಾಗರದ ಕೆಳದಿ ಕೆರೆಯಲ್ಲಿ ಈಜು ಕಲಿತವನೆಂದೂ ತಿಳಿಯಿತು. ಮೊದಲೇ ಎಲ್ಲರ ಮನಸ್ಸಿನಲ್ಲಿ ನಿಗೂಢತೆಯ ಛಾಯೆಯನ್ನು ಹುಟ್ಟಿಸಿದ್ದ ಪ್ರದೀಪ ಮತ್ತೊಮ್ಮೆ ನಿಘೂಢನಾದ. ಎಲ್ಲವನ್ನೂ ತಿಳಿದಿದ್ದರೂ ಏನೂ ಗೊತ್ತಿಲ್ಲ ಎನ್ನುವ ನಾಟಕವಾಡಿದ ಪ್ರದೀಪನ ಬಗ್ಗೆ ಪ್ರತಿಯೊಬ್ಬರೂ ಸಂಶಯಿಸುವಂತಾದ.
               ಸುಮಾರು ಹೊತ್ತಿನ ತನಕ ಈಜಾಡಿದವರಿಗೆ ಕೊನೆಗೊಮ್ಮೆ ಮನದಣಿಯಿತು. ನೀರಿನಿಂದೆದ್ದು ಕೊಂಡೊಯ್ದಿದ್ದ ಬುತ್ತಿಯನ್ನು ಬಿಚ್ಚಿ, ಹೊಟ್ಟೆ ತುಂಬ ತಿಂದು ನೀರು ಕುಡಿದು ವಿರಮಿಸಿದರು. ವಿಜೇತಾಳ ಕ್ಯಾಮರ ಕೆಲಸ ಮಾಡುತ್ತಲೇ ಇತ್ತು. ಜಲಪಾತದ ವಿವಿಧ ಕೋನಗಳು, ಅಲ್ಲಿನ ನಿಸರ್ಗದ ರಮ್ಯ ಚಿತ್ತಾರವನ್ನೆಲ್ಲ ಆಕೆ ಸೆರೆ ಹಿಡಿಯುತ್ತಿದ್ದಳು. ಕಾಳಿ ನದಿ ಸೃಷ್ಟಿ ಮಾಡಿದ್ದ ಬಗೆ ಬಗೆಯ ಕಲ್ಲಿನ ಚಿತ್ತಾರಗಳು ವಿಜೇತಾಳ ಕ್ಯಾಮರಾದಲ್ಲಿ ಬಂಧಿಯಾದವು. ಎಷ್ಟು ಚಿತ್ರಗಳನ್ನು ಕ್ಲಿಕ್ಕಿಸಿದರೂ ವಿಜೇತಾಳ ಕ್ಯಾಮರಾಕ್ಕೆ ದಣಿವಾಗಲಿಲ್ಲ ಬಿಡಿ.
               ಈ ಮಧ್ಯ ಪ್ರದೇಪ ತನ್ನ ವಿಚಿತ್ರ ಧ್ವನಿಯಲ್ಲಿ `ಇಳಿದು ಬಾ ತಾಯಿ ಇಳಿದು ಬಾ..' ಎಂದು ಗುನುಗುತ್ತಲೇ ಇದ್ದ. ರಾಬರ್ಟ ಸಿದ್ದಿ ಬಿದಿರಿನ ಗಳಗಳನ್ನು, ಬೇಟೆಗೆ ಜೀವಿಗಳನ್ನೂ ಹುಡುಕತೊಡಗಿದ್ದರೆ ರಮ್ಯ ನೀರಿನಲ್ಲಿ ಆಟವಾಡತೊಡಗಿದ್ದಳು. ವಿಕ್ರಮ ಒಂದೆಡೆ ಕುಳಿತು ತಾನು ಮಾಡಬೇಕಿದ್ದ ಕೆಲಸದ ಬಗ್ಗೆ ಆಲೋಚನೆ ಮಾಡುತ್ತಿದ್ದ. ವಿನಾಯಕನ ಕವಿಮನಸ್ಸು ಕವನದ ಜನ್ಮಕ್ಕೆ ಹಾತಿರೆಯುತ್ತಿತ್ತಾದರೂ ರಮ್ಯಳ ನೀರಾಟ ಅದಕ್ಕೆ ಭಂಗ ತಂದಿತು. ರಮ್ಯ ನೀರಾಡುತ್ತ ಆಡುತ್ತ ವಿನಾಯಕನಿ ನೀರು ಸೋಕಿದ್ದಳು. ವಿನಾಯಕನೂ ನೀರಾಟಕ್ಕೆ ಇಳಿದು ಬಿಟ್ಟಿದ್ದ.
              ಅಷ್ಟರಲ್ಲಿಯೇ ರಾಬರ್ಟ `ಹೋಯ್... ಯಾರೋ ಅದು.. ಹಂಗ್ ಓಡ್ತಿಯಲ್ಲೋ.. ನಿಲ್ಲೋ...' ಎಂದು ಕೂಗಿದ.
              ಎಲ್ಲರೂ ಗಡಬಡಿಸಿ ಎದ್ದು ಬಂದು ನೋಡುವಷ್ಟರಲ್ಲಿ ಒಬ್ಬಾತ ಓಡಿ ಹೋಗಿದ್ದ. ಕೊನೆಗೆ ಯೋಚಿಸಿದಾಗ ಮೊದಲು ಕಾಟ ಕೊಡುತ್ತಿದ್ದ ವ್ಯಕ್ತಿಯೇ ಈತ ಎನ್ನುವುದೂ ತಿಳಿಯಿತು. `ಆತ ಇಲ್ಲಿಗೂ ಬಂದನಾ..?' ಎಂದು ಗೊಣಗಿದ ವಿಕ್ರಮ್. `ಯಾರು..? ಏನು? ಯಾರಾತ..?' ವಿನಾಯಕನ ಪ್ರಶ್ನೆ. `ಯಾರಿಲ್ಲ ಬಿಡು.. ಇನ್ನೊಮ್ಮೆ ಹೇಳ್ತೀನಿ..' ಎಂದ ವಿಕ್ರಮ್.
               ಅಷ್ಟು ಹೊತ್ತಿಗೆ ಸಾಕಷ್ಟು ಸಮಯವೂ ಆಗಿದ್ದರಿಂದ ವಾಪಸ್ಸಾಗಲು ಮುಂದಾದರು. ವಾಪಸ್ಸಾಗುವ ಮುನ್ನ ಲಾಲಗುಳಿ ಜಲಪಾತಕ್ಕೊಂದು ಗುಡ್ ಬೈ ಹೇಳಿ ಕಣ್ಣೀರು ಮನೆಯ ಕಡೆಗೆ ಹಾದಿ ಹಿಡಿದರು.

(ಮುಂದುವರಿಯುತ್ತದೆ)             

Monday, January 19, 2015

ಹಕ್ಕಿಗಳೇ ಹಾರಿಬಿಡಿ

ಹಕ್ಕಿಗಳೇ ಹಾರಿಬಿಡಿ ಬಾನಂಗಳಕೆ
ರೆಕ್ಕೆ ಬಲಿತಿದೆ, ಪುಕ್ಕ ಬೆಳೆದಿದೆ ಹಾರಿಬಿಡಿ |

ಇನ್ನೇಸು ದಿನ ತಂದೆ ತಾಯ್ಗಳ ಹಂಗು?
ಕಾಯುತಿದೆ ಮುಂದೊಂದು ಗಮ್ಯ ಬಿಂದು.
ಜೊತೆಯೆಲ್ಲೋ ಉಂಟು ಸಂಗಾತಿ ಹಕ್ಕಿ
ಹಾರಿದರೇ ನವಪುಳಕ, ನೀ ಚುಕ್ಕಿ |

ತಂದೆ ರೆಕ್ಕೆ ದುರ್ಬಲ, ತಾಯ್ಗಣ್ಣು ಮಂಜು
ತಂದು ಹಾಕುವರಿಲ್ಲ, ನೋವೇ ನಂಜು.
ಹಕ್ಕಿಗಳೇ ಹಾರಿಬಿಡಿ, ಬೇಟೆ ಹಿಡಿ.
ಹಾದಿಯೊಳಗಣ ಕಷ್ಟ  ಮರೆತುಬಿಡಿ |

ಕಲಿವಾಗೊಮ್ಮೆ ಬಿದ್ದಿರಬಹುದು ಈಗ ಜಟ್ಟಿ
ಸರ್ವಾತ್ಮ ಜೀವದೊಳು ನೀನೇ ಜಟ್ಟಿ
ಹಕ್ಕಿ ಹದ್ದನು ನೀನು ಗೆಲ್ಲಬಲ್ಲೆ
ಗಮ್ಯತೆಯ ರಮ್ಯತೆಯ ಪಡೆಯಬಲ್ಲೆ |

***
(ಈ ಕವಿತೆಯನ್ನು 3-06-2006ರಂದು ದಂಟಕಲ್ ನಲ್ಲಿ ಬರೆಯಲಾಗಿದೆ)

(ಆಕಾಶವಾಣಿ ಕಾರವಾರದಲ್ಲಿ ವಾಚನ ಮಾಡಿದ್ದೇನೆ)

Friday, January 16, 2015

ಅಘನಾಶಿನಿ ಕಣಿವೆಯುಲ್ಲಿ-8

               `ಅಮಾ... ಆನು ವಿಕ್ರಮ.' ಎಂದು ಹೇಳಿದಾಗ ಆಕೆಯ ಮುಖವರಳಿತು. ಖುಷಿಯಿಂದ `ಏನೋ.. ನಂಬಲೆ ಆಯ್ದಿಲ್ಲೆ ನೋಡು.. ಇಷ್ಟು ಉದಯಪ್ಪಾಗ ಎಲ್ಲಿಂದ ಬಂದೆ? ಯಂಗ ಒಂದ್ ಸಾರಿ ಗೊತ್ತೇ ಆಯ್ಲೆ.. ಅರೇ.. ಕಾರು ತಯಿಂದೆ. ಯಾರದ್ದು? ಅರೇ ಕಾರಲ್ಲಿ ಯಾರಿದ್ದ?  ಬಾ ವಳಗ ಹೋಪನ. ಬಿಸಿ ಬಿಸಿ ದ್ವಾಸೆ ಮಾಡಿದ್ದೆ ಬಿಲ್ಯ. ಕಾರಲ್ಲಿದ್ದವರನ್ನೂ ಕರಿ. ನಿನ್ನಂತೂ ಕಾಂಬುಲೇ ಔತ್ಲ್ಯಲೇ..' ಎಂದು ಗ್ರಾಮ್ಯ ಭಾಷೆಯಲ್ಲಿ ವಿಕ್ರಮನಿಗೆ ಹೇಳಿದಳು ಆತನ ತಾಯಿ ಲಕ್ಷ್ಮೀಬಾಯಿ.
              `ಅಮಾ.. ಆನು ಈಗಷ್ಟೆ ಬೈಂದೆ. ಕಾರು ಯನ್ನ ಮ್ಯಾಲಿನ ಆಫೀಸರದ್ದು. ಕಾರಲ್ಲಿದ್ದವರು ಯನ್ನ ಪ್ರೆಂಡ್ಸು..' ಎಂದು ಹೇಳಿ ವಿಕ್ರಂ ಕಾರಿನ ಬಳಿ ತಾಯಿಯನ್ನು ಕರೆದೊಯ್ದ. ಕಾರಿನಲ್ಲಿದ್ದವರನ್ನು ಪರಿಚಯಿಸಿದ. ಎಲ್ಲರೂ ಕೈಯಲ್ಲಿದ್ದ ಮಣಭಾರದ ಲಗೇಜುಗಳನ್ನು ಹೊತ್ತು ಒಳಗೆ ಹೋದರು.
              ವಿಕ್ರಮನದು ಭವ್ಯ ಮನೆ. ಇಡಿ ಮನೆ ಮರದಿಂದಲೇ ಮಾಡಿದ್ದು. ಹಳೆಯ ಕಾಲದ ಮನೆ ಎಂದು ನೋಡಿದೊಡನೆ ಹೇಳಬಹುದಿತ್ತು. ಯಾವ ಶತಮಾನದಲ್ಲಿ ಮನೆಯನ್ನು ಕಟ್ಟಲಾಗಿತ್ತೋ. ಬೀಟೆ, ತೇಗಗಳ ಮರಗಳಿಂದಲೇ ಮಾಡಿದ್ದು ಸ್ಪಷ್ಟವಾಗಿತ್ತು. ಎಲ್ಲರೂ ಒಳಗೆ ಹೋಗುವ ವೇಳೆಗೆ ವಿಕ್ರಮನ ತಂಗಿ ರಮ್ಯ ಎದುರಾದಳು. ಆಕೆಯನ್ನು ಎಲ್ಲರಿಗೂ, ಎಲ್ಲರನ್ನೂ ಆಕೆಗೂ ಪರಿಚಯಿಸಿದ ವಿಕ್ರಂ. ಅಷ್ಟರಲ್ಲಿ ತಿಂಡಿ ತಯಾರಿದೆಯೆಂಬ ಅಮ್ಮನ ಬುಲಾವ್ `ಆಸ್ರಿಗೆ ಕುಡಿಯಲಾತು..' ಕೇಳಿಸತೊಡಗಿತು. ಎಲ್ಲರೂ ಮುಖ, ಕೂಕಾಲುಗಳನ್ನು ತೊಳೆದು ತಿಂಡಿ ತಿನ್ನಲು ಕುಳಿತರು. ಅವರಿಗೆ ಭರ್ಜರಿಯಾಗಿ ದೋಸೆಗಳ ಮೇಲೆ ದೋಸೆಯನ್ನು ಹಾಕಿದರು. ದೋಸೆಯ ರುಚಿ ಆಹ್...! ಜೊತೆಗೆ ಕಾಯಿ ಚಟ್ನಿ.. ಅದೆಷ್ಟು ದೋಸೆಗಳು ಉದರವನ್ನು ಸೇರಿದವೋ.
             ಅಂತೂ ತಿಂಡಿ ಮುಗಿಸುವ ವೇಳೆಗಾಗಲೇ ಬೆಳಗಿನ ಎಲ್ಲಾ ಸ್ನಾನ, ಸಂಧ್ಯಾವಂದನೆ, ದೇವರಪೂಜೆ ಇತ್ಯಾದಿ ಕೆಲಸ ಮುಗಿಸಿ ಯಾರದ್ದೋ ಮನೆಗೆ ಯಾವುದೋ ಕೆಲಸಕ್ಕೆ ಹೋಗಿದ್ದ ವಿಕ್ರಮನ ತಂದೆ ರಾಜಾರಾಮ ಭಟ್ಟರು ಮನೆಗೆ ಬಂದರು. ಬಂದವರು ವಿಕ್ರಮನನ್ನು ನೋಡಿ `ಮಾಣಿ.. ಈಗ ಬೈಂದ್ಯ..' ಎಂದವರಿಗೆ ವಿಕ್ರಮ್ ತಲೆಯಲ್ಲಾಡಿಸಿ ಏನನ್ನೋ ಹೇಳಲು ಬಾಯಿ ತೆರೆಯುವಷ್ಟರಲ್ಲಿ `ಓ ವಿಜೇತಾ.. ಓ ಪ್ರದೀಪ್.. ಅರಾಮಿದ್ರಾ? ಆಸ್ರಿಗೆ ಕುಡದಾತಾ?' ಎಂದೆಲ್ಲಾ ಕೇಳಿದಾಗ ವಿಕ್ರಮನಿಗೆ ಒಮ್ಮೆಗೇ ಆಶ್ಚರ್ಯ ಹಾಗೂ ದಿಗ್ಭ್ರಾಂತಿ. `ನಾನು ಸರ್ಪ್ರೈಸ್ ಕೊಡಬೇಕು ಎಂದು ಇವರ ಬಗ್ಗೆ ಹೇಳ್ದೇ ಇದ್ರೂ ಅಪ್ಪಯ್ಯನಿಗೆ ಹೇಗೆ ತಿಳಿಯಿತು?' ಎಂದು ಆಲೋಚಿಸುತ್ತಾ `ಅರೇ.. ಅಪ್ಪಯ್ಯಾ.. ಇವಿಬ್ರೂ ಇದೇ ಮೊದ್ಲು ನಿಂಗೆ ಸಿಕ್ತಾ ಇದ್ದ. ಆದ್ರೂ ನಿಂಗೆ ಹ್ಯಾಂಗೆ ಇವ್ರ ಬಗ್ಗೆ ಗೊತ್ತಾತು?' ಎಂದು ವಿಕ್ರಮ ಕೇಳಿದಾಗ ತಬ್ಬಿಬ್ಬಾಗುವ ಸರದಿ ಭಟ್ಟರದ್ದಾಯಿತು.
            ಆದರೂ ತಕ್ಷಣ ಸಾವರಿಸಿಕೊಂಡು `ಅಲ್ದಾ ನೀನು ಪತ್ರ ಬರೆದಿದ್ಯಲ.. ಅದ್ರಲ್ಲಿ ತಿಳಿಸಿದ್ದೆ. ಅದಕ್ಕಾಗಿ ಗೊತ್ತಾತು ಬಿಲ್ಯಾ..' ಎಂದರು. ಆದರೆ ವಿಕ್ರಂ `ನಾನು ಬರೆದ ಲೆಟರಿನಲ್ಲಿ ಈ ಬಗ್ಗೆ ತಿಳಿಸಿಯೇ ಇರಲಿಲ್ಲ. ಆದರೂ ಹೇಗೆ ತಿಳಿಯಿತು? ಇದರಲ್ಲೇನೋ ವಿಶೇಷತೆ, ನಿಘೂಡತೆ ಇದೆ..' ಅಂದುಕೊಂಡ. ನಂತರ ದೂರದ ಪಯಣಿಗರೆಲ್ಲ ರಾತ್ರಿ ನಿದ್ದೆಗೆಟ್ಟ ಆಯಾಸ ಪರಿಹಾರಕ್ಕಾಗಿ ಹಾಸಿಗೆಗೆ ತೆರಳಿದರು. ಅಲ್ಲಿಗೆ ಕಥೆಗೆ ಒಂದು ದೊಡ್ಡ ತಿರುವು ಸಿಕ್ಕಂತಾಗಿತ್ತು.
             ಹಾಗಾದರೆ ರಾಜಾರಾಮ ಭಟ್ಟರಿಗೆ ವಿಜೇತಾ, ಪ್ರದೀಪರ ಬಗ್ಗೆ ಹೇಗೆ ತಿಳಿಯಿತು? ಇವರಿಗೆ ಮೊದಲೇ ಈರ್ವರ ಪರಿಚಯ ಇತ್ತೇ? ಅಥವಾ ಬೇರೆ ಯಾರಾದರೂ ತಿಳಿಸಿದ್ದರೇ? ಇದು ಮಾತ್ರ ನಿಗೂಢವಾಗಿತ್ತು. ಜೊತೆಗೆ ವಿಕ್ರಮನನ್ನು ಹಿಂಬಾಲಿಸುತ್ತಿದ್ದ ನಿಗೂಢ ವ್ಯಕ್ತಿ ಇಲ್ಲಿಗೂ ಬಂದಿದ್ದ. ಆತ ಹೀಗೆ ವಿಕ್ರಮನ ಹಿಂಬಾಲಿಸಲು ಕಾರಣ ಏನು? ಇಷ್ಟೆಲ್ಲ ನಡೆದಿದ್ದಿ ಎಪ್ರಿಲ್ 10ರಂದು.

****

          ಮದ್ಯಾಹ್ನದ ವರೆಗಿನ ಗುಟುಕು ನಿದ್ದೆಗೆ ಎಲ್ಲರೂ ಕ್ರಿಯಾಶೀಲರಾದರು. ಊರಿನ ಪರಿಸರವನ್ನು ಆಸ್ವಾದಿಸಲು ಹೊರಗೆ ಹೊರಟರು. ವಿಕ್ರಂ, ವಿಜೇತಾ, ರಮ್ಯ, ಪ್ರದೀಪರು ಹೊರಟರೆಂದರೆ ಊರಿಗೆ ಊರೇ ಮತ್ತೆ ಮತ್ತೆ ನೋಡಲಾರಂಭಿಸಿತ್ತು. ಆದರೆ ಗುಸು ಗುಸು ಸುದ್ದಿ ಮಾತನಾಡುವಷ್ಟು ಮನೆಗಳು ಹತ್ತಿರದಲ್ಲಿ ಇಲ್ಲವಾದ ಕಾರಣ ಇವರು ಎಲ್ಲರ ಬಾಯಿಗೆ ಆಹಾರವಾಗುವುದು ತಪ್ಪಿತು. ಇದರ ಪರಿವಿಲ್ಲದ ಇವರು ಊರು, ಊರಿನ ಪರಿಸರ, ಊರ ತುದಿಯಲ್ಲಿರುವ ಕಾಳಿ ನದಿಯ ಉಪನದಿ ಇಲ್ಲೆಲ್ಲ ತಿರುಗಾಡಿದರು.
           ಮುಖ್ಯ ಸಂಗತಿಗಳನ್ನು ಬರೆದಿಟ್ಟುಕೊಳ್ಳುತ್ತಿದ್ದ ವಿಜೇತಾ ಆಗಾಗ ಸುಂದರ ಪೋಟೋಗಳನ್ನು ಕ್ಲಿಕ್ಕಿಸುತ್ತಿದ್ದಳು. ಪ್ರದೀಪನಿಗೆ ಇವುಗಳಲ್ಲಿ ಆಸಕ್ತಿ ಇಲ್ಲದ ಕಾರಣ ಆತ ಈ ಯಾವ ಕೆಲಸಗಳನ್ನೂ ನಡೆಸಲಿಲ್ಲ. ಆದರೂ ಎಲ್ಲಾ ಕಡೆ ಏನನ್ನೋ ಹುಡುಕುವಿಕೆಯ, ಕಳ್ಳದೃಷ್ಟಿಯ ಬೀರುತ್ತಿದ್ದ. ಆಗಾಗ ಬಾಯಲ್ಲಂತೂ `ರಮ್ಯ ಜೀವನ.. ಸಂಪೂರ್ಣ ವಿಧಿಯ ಕಲಾವಿಧಾನ...' ಎಂತಲೋ ಮತ್ಯಾವುದೋ ಸುಂದರ ಹಾಡುಗಳನ್ನು ಹಾಡುತ್ತ ಸಾಗುತ್ತಿದ್ದ. ವಿಕ್ರಮ ಎಲ್ಲವುಗಳಿಗೆ ವಿವರಣೆ ನೀಡುತ್ತಿದ್ದರೆ, ವಾಚಾಳಿ ರಮ್ಯ ಪ್ರತಿಯೊಂದರ ಬಗೆಗೂ ಸಾಕಷ್ಟು ಹರಟುತ್ತಿದ್ದಳು. ಕಾಡಿನ ನಡು ನಡುವಿನ ಗದ್ದೆಗಳು, ತೋಟ, ತೋಟದ ಮಧ್ಯ ಮಧ್ಯದಲ್ಲಿ ತೆಂಗಿನಮರಗಳು, ಮಾವು, ಹಲಸು ಮರಗಳು ಆ ಊರಿನ ಸೊಬಗಿಗೆ ತಾವೇನನ್ನೋ ಕೊಟ್ಟಿದ್ದೇವೆ ಎನ್ನುವಂತಿದ್ದವು. ಇವರು ಮುಖ್ಯವಾಗಿ ಒಂದು ದಾರಿಯನ್ನು ಹಿಡಿದು ಹೋಗಿದ್ದರು. ಕೊನೆಗೆ ಅಲ್ಲೊಂದು ಪುಟ್ಟ ಕಟ್ಟಡ ಕಂಡು ಬಂದಿತು. ಅದನ್ನು ತೋರಿಸಿದ ವಿಕ್ರಮ್ `ಇದೇ ನಾನು ಕಲಿತ ಪ್ರೈಮರಿ ಶಾಲೆ..' ಎಂದ.
             ಆ ಶಾಲೆ ಹಳ್ಳಿಗಾಡಿನ ನ್ಯೂನತೆಗಳನ್ನೇ ಮೈವೆತ್ತಿಕೊಂಡಂತಿತ್ತು. ಎಂದೋ ಹಾಕಲಾಗಿದ್ದ ಸಿಮೆಂಟು ಅಲ್ಲಲ್ಲಿ ಕಿತ್ತು ಹೋಗಿತ್ತು. ಅಲ್ಲಲ್ಲಿ ಹಂಚುಗಳು ಒಡೆದಿದ್ದವು. ಈ ಶಾಲೆ ಸರ್ಕಾರದ ದಿವ್ಯ ನಿರ್ಲಕ್ಷ್ಯದ ಕನ್ನಡಿಯಂತೆ ಕಂಡಿತು. ಇವರು ಹೋದ ದಿನ ಶಾಲೆಯಲ್ಲಿ ಸಾಕಷ್ಟು ವಿದ್ಯಾರ್ಥಿಗಳಿದ್ದರು. ಅದರೊಳಗೆ ದೊಡ್ಡದಾಗಿ ಓದಿ ಹೇಳುತ್ತಿದ್ದ ಮಾಸ್ತರರ ಧ್ವನಿ `ಬಾರ ಬಾರ ಆತೀ ಹೈ ಮುಝಕೋ.. ಮಧುರ ಯಾದ ಬಚಪನ ತೇರಿ...' ಎಂಬ ಸಾಲುಗಳೂ ಜೊತೆಗೆ ಹತ್ತೆಂಟು ಮಕ್ಕಳು ಇದೇ ಸಾಲನ್ನು ಪುನಃ ಉಚ್ಛಾರ ಮಾಡಿದ್ದೂ ಕೇಳುತ್ತಿತ್ತು.
             `ಈ ಶಾಲೆ ಹಲವು ವಿಶೇಷತೆಗಳಿವೆ. ಪ್ರತಿ ಮಳೆಗಾಲದಲ್ಲಿ ಶಾಲೆಗೆ ಅನಿರ್ದಿಷ್ಟಾವಧಿ ರಜಾ ಸಿಗುತ್ತದೆ. ಉಕ್ಕೇರಿ ಹಳ್ಳ-ಕೊಳ್ಳಗಳು ಊರಿಗೂ ಹೊರಜಗತ್ತಿಗೂ ಸಂಪರ್ಕವನ್ನು ಕಲ್ಪಿಸುತ್ತವೆ. ಯಲ್ಲಾಪುರದಿಂದ ನಮ್ಮೂರ ಶಾಲೆಗೆ ಪ್ರತಿದಿನ ಮಾಸ್ತರ್ರು ಬಂದು ಕಲಿಸಿ ಹೋಗುತ್ತಾರೆ. ತಮ್ಮದೊಂದು ಬೈಕ್ ತರುತ್ತಾರೆ. ಆದರೆ ಮಳೆಗಾಲದಲ್ಲಿ ಮಾತ್ರ ಅವರು ಶಾಲೆಗೆ ಬರುವುದು ತಪ್ಪುತ್ತದೆ. ಹಳ್ಳ-ಕೊಳ್ಳದ ನೀರಿನ ಸೆಳವು ಇಳಿದ ನಂತರವೇ ಮಾಸ್ತರ್ರು ಶಾಲೆಗೆ ಮರಳುವುದು. ಅಲ್ಲಿಯವರೆಗೂ ಮಕ್ಕಳಿಗೆ ಶಾಲೆ ನಡೆಯುವುದಿಲ್ಲ. ಸ್ಥಳೀಯವಾಗಿ ಪಿಯುಸಿ ಮುಗಿಸಿದವರಿದ್ದರೆ ಅವರು ಶಾಲೆಗೆ ಬಂದು ಮಕ್ಕಳಿಗೆ ಪಾಠ ಹೇಳುವ ಕೆಲಸವನ್ನು ಮಾಡುತ್ತಾರೆ.. ಇದು ಈ ಶಾಲೆಯ ವಿಶೇಷತೆಗಳು..' ಎಂದ ವಿಕ್ರಮ.
             ಮಧ್ಯದಲ್ಲಿ ಬಾಯಿ ಹಾಕಿದ ರಮ್ಯ. `ನಾವು ಶಾಲೆಗೆ ಹೋಗುತ್ತಿದ್ದ ದಿನಗಳು ಬಹಳ ಬೊಂಬಾಟ್.. ಅಣ್ಣ ಏಳನೇ ಕ್ಲಾಸಲ್ಲಿ ಓದುತ್ತಿದ್ದ. ನಾನು ಒಂದನೇ ಕ್ಲಾಸು.. ಸತೀಶ ಮಾಸ್ತರ್ರು ನಮ್ಮ ಮೊದಲ ಮಾಸ್ತರ್ರು.. ಆಮೇಜೆ ಜಿ. ಎಸ್. ಭಟ್ಟರು, ಅದಾದ ಮೇಲೆ ತಾರಕ್ಕೋರು, ಗಂಗಕ್ಕೋರು, ಗಡ್ಕರ್ ಮಾಸ್ತರ್ರು, ಹರೀಶ ಮಾಸ್ತರ್ರು ಎಲ್ಲಾ ನಮಗೆ ಕಲಿಸ್ತಿದ್ರು.. ಅವರೆಲ್ಲ ಎಷ್ಟು ಸ್ಟ್ರಿಕ್ಟ್ ಆಗಿದ್ದರು ಎಂದರೆ ನಾವೆಲ್ಲಾ ಗಡಗಡ.. ಸತೀಶ ಮಾಸ್ತರ್ರು, ಜಿ. ಎಸ್. ಭಟ್ಟರು ದೊಡ್ಡ ದೊಡ್ಡ ಬೆತ್ತಗಳಿಂದ ನಮಗೆ ಹೊಡೆಯುತ್ತಿದ್ದರೆ ನಮ್ಮ ಕೈ, ಬೆನ್ನ ಮೇಲೆ ಬಾಸುಂಡೆಗಳು ಬರುತ್ತಿದ್ದವು. ಇದ್ದವರ ಪೈಕಿ ಗಡ್ಕರ್ ಮಾಸ್ತರ್ರು ಪಾಪದವರು. ಯಾವಾಗಲೂ ನಗಿಸುತ್ತಿದ್ದರು. ಆದರೆ ಅಣ್ಣನಿಗೆ ಮಾತ್ರ ಅವರು ಅಂದರೆ ಕನಸಲ್ಲೂ ಕಾಡುತ್ತಾರೆ. ನಮಗೆಲ್ಲ ಮದ್ಯಾಹ್ನ ಆಟಕ್ಕೆ ಬಿಟ್ಟಿದ್ದಾಗ ಅಣ್ಣನಿಗೆ ಬುಲಾವ್ ನೀಡುತ್ತಿದ್ದ ಗಡ್ಕರ್ ಮಾಸ್ತರ್ರು ತಮ್ಮೊಡನೆ ಚೆಸ್ ಆಡಲು ಕೂರಿಸಿಕೊಳ್ಳುತ್ತಿದ್ದರು. ನಾವೆಲ್ಲ ಬಯಲಲ್ಲಿ ಆಡುತ್ತಿದ್ದರೆ ಪಾ..ಪ ಅಣ್ಣ ಆಸೆಗಣ್ಣಿನಿಂದ ನೋಡುತ್ತಿದ್ದ.. ಇನ್ನೊಂದ್ ಮಜಾ ಅಂದ್ರೆ  ಗಡ್ಕರ್ ಮಾಸ್ತರ್ರಿಗೆ ದೃಷ್ಟಿ ದೋಷ ಇತ್ತು. ಯಾವಾಗಲೂ ಚೆಸ್ಸಿನಲ್ಲಿ ಕಪ್ಪು ಕಾಯಿ ಅವರದ್ದೇ ಆಗಬೇಕಿತ್ತು. ಅಣ್ಣನದ್ದು ಬಿಳಿಯ ಕಾಯಿ. ಅಣ್ಣ ಕಡ್ಡಾಯವಾಗಿ ಸೋಲಲೇಬೇಕು. ಪಾ..ಪ ಅಣ್ಣನ ಪಚೀತಿ ಮಜವಾಗಿತ್ತು..' ಎಂದಾಗ ಎಲ್ಲರೂ ನಕ್ಕರು.
             ಹೀಗೆ ಮಾತುಗಳು ಸಾಗುತ್ತಿದ್ದಾಗ ಎಲ್ಲರೂ ತಮ್ಮ ತಮ್ಮ ಮರೆತ ಬಾಲ್ಯದ ನೆನಹುಗಳ ಕಡೆಗೆ ಸಾಗಿದಾಗ ಪ್ರದೀಪ ಒಮ್ಮೆಲೆ ನಸುನಕ್ಕ. `ಯಾಕಪ್ಪಾ..' ಎಂದು ಕೇಳಿದಾಗ ಪ್ರದೀಪ `ಅಯ್ಯೋ ನಮ್ ಹುಡ್ಗುಗೆ ನಾನು ಹೈಸ್ಕೂಲ್ನಲ್ ಇದ್ದಾಗ ಮೊಟ್ಟ ಮೊದಲ ಬಾರಿಗೆ ಲವ್ ಲೆಟರ್ ಬರೆದಿದ್ನಪ್ಪಾ.. ಅಯ್ಯೋ ಅದೊಂದು ಗೋಳಿನ ಕಥೆ ಬಿಡಿ...' ಎಂದು ತನ್ನ ಕಥೆಯನ್ನೆಲ್ಲ ಹೇಳಿದ. ಎಲ್ಲರೂ ನಕ್ಕರು.
         ಒಂದಷ್ಟು ಪ್ರದೇಶಗಳನ್ನು ವೀಕ್ಷಿಸುವ ವೇಳೆಗೆ ಆಗಲೇ ಸಕಲ ಜೀವನ ಚೈತನ್ಯಕ್ಕೆ ಕಾರಣಕರ್ತನಾದ ನೇಸರ ಪಶ್ಚಿಮದೆಡೆಗೆ ಹೊರಟಿದ್ದ. ಎಲ್ಲರೂ ಮರಳಿ ಮನೆಯತ್ತ ನಿಧಾನವಾಗಿ ಹೆಜ್ಜೆ ಹಾಕಿದರು. ಇವರೂ ಮನೆಯ ಕಡೆಗೆ ಮರಳಲು ಮುಂದಾದರು. ಹೆಜ್ಜೆ ಹಾಕಿದರು.
         ಅವರು ಸ್ವಲ್ಪ ದೂರ ಬಂದಿರಬಹುದು. ಅಷ್ಟರಲ್ಲೊಬ್ಬರು ವಯಸ್ಸಾದ ವ್ಯಕ್ತಿ ಆ ದಾರಿಯಲ್ಲಿ ಬಂದರು. ಸಾಕಷ್ಟಿದ್ದ ಕೆಂಪಡರಿದ್ದ ಅವರ ಪಂಚೆ ಇಳಿಸಂಜೆಯ ಕೆಂಬಣ್ಣಕ್ಕೆ ಮತ್ತಷ್ಟು ಕೆಂಪಡರಿತ್ತು. ಬಾಯ್ತುಂಬ ಬಡವರ ಅಮೃತವಾದ ಕವಳವನ್ನು ಮೆಲ್ಲುತ್ತಾ ಆಗಾಗ ತುಪ್ಪುತ್ತಾ, ಏನನ್ನೋ ಹುಡುಕುವ ರೀತಿಯಲ್ಲಿ ಆಗಾಗ ಸೂರ್ಯನ ಕಿರಣಗಳ ಮರೆಮಾಡಿ ಕಣ್ಣು ಕೀಲಿಸುತ್ತಾ ಬರುತ್ತಿದ್ದರು.
        ದೂರದಿಂದಲೇ ಆತನನ್ನು ಗುರುತಿಸಿದ ರಮ್ಯ `ನೋಡಿ ಅಲ್ಲಿ ಬರ್ತಾ ಇದ್ವಲಿ ಅವರೇ ರಾಮಕೃಷ್ಣ ಗಾಂವ್ಕಾರರು. ನಮ್ಮೂರಿನವರೇ.. ಇಲ್ಲೇ ಸ್ವಲ್ಪ ದೂರದಲ್ಲಿ ಅವರ ಮನೆಯಿದೆ...' ಎಂದು ಹೇಳುವ ವೇಳೆಗೆ ಅವರು ಹತ್ತಿರ ಬಂದು `ನೀವ್ಯಾರು? ನಿಂಗವ್ಕೆ ಯಲ್ಲಾತು? ಗುರ್ತು ಸಿಕ್ಕಿದ್ಲ್ಯಲೇ ಯಂಗ..' ಎಂದು ಕೇಳಿದಾಗ ವಿಕ್ರಮ್ `ನಾನು ಗಾಂವ್ಕಾರಜ್ಜ ವಿಕ್ರಮ. ರಾಜಾರಾಮ ಭಟ್ರ ಮಗ. ಇವೆಲ್ಲ ಯನ್ನ ಪ್ರೆಂಡ್ಸು..' ಎಂದ.
           ಅದಕ್ಕೆ ಗಾಂವ್ಕಾರರು `ಯೇ ನೀ ಮಂಗ್ಲೂರಲ್ಲಿದ್ಯಡ.. ಯಂತಾ ಮಾಡ್ತಾ ಅಲ್ಲಿ? ಯಲ್ಲಾ ಸುಡುಗಾಡು ನೌಕರಿ ಹೇಳ್ತ.. ಯಂತಾ ಮಾಡ್ತ್ವ ಏನ..' ಎಂದು ಹೇಳಿದಾಗ ವಿಕ್ರಮ್ ಒಂದೆರಡು ದೀರ್ಘ ವಾಕ್ಯಗಳ ಉತ್ತರ ಕೊಟ್ಟ.
            `ಈ ನಿನ್ನ ಗೆಳೆಯಂದಿಕ್ಕಳ್ನ ನೀ ಹೋಪೂದ್ರೊಳಗ ಯಮ್ಮನೆಗೆ ತೆಕಂಡು ಬಾ ಬಿಲ್ಯ..'ಎಂದು ಹೇಳಿ ತಮ್ಮ ಮನೆಗೆ ಆಮಂತ್ರಣವನ್ನು ನೀಡಿ ಹೊರಟು ಹೋದರು ಗಾಂವ್ಕಾರರು.
            ಗಾಂವ್ಕಾರರು ಹೋದ ನಂತರ ಅವರ ಬಗ್ಗೆ ವಿಕ್ರಮ್, ರಮ್ಯ ಇಬ್ಬರೂ ಹೆಚ್ಚಿನ ವಿವರಣೆ ನೀಡಿದರು. ಇವರ ಮಾತಿನಿಂದ `ಗಾಂವ್ಕಾರರದ್ದು ಚಿಕ್ಕ, ಸುಂದರ ಕುಟುಂಬವಾಗಿತ್ತು. ಸುಖ, ಶಾಂತಿ, ಸಂಪತ್ತು ತುಳುಕುತ್ತಿದ್ದ ಕಾಲದಲ್ಲಿ ಇದ್ದೊಬ್ಬ ಮಗ ಇದ್ದಕ್ಕಿದ್ದಂತೆ ಕಾಣೆಯಾದ. ಇನ್ನೂತನಕ ಆತನ ಸುಳಿವು ತಿಳಿಯದ ಕಾರಣ ಅದೇ ಚಿಂತೆಯಲ್ಲಿ ಕೊರಗುತ್ತಿದ್ದ ಗಾಂವ್ಕಾರರು ಪ್ರತಿಯೊಬ್ಬ ಯುವಕನಲ್ಲೂ ತನ್ನ ಕಳೆದುಹೋದ ಮಗನನ್ನು ಹುಡುಕುತ್ತಿದ್ದಾರೆ' ಎನ್ನುವ ವಿಷಯ ತಿಳಿದುಬಂದಿತು.
           ವಿಕ್ರಮ್ `ಗಾಂವ್ಕಾರರ ಮಗ ಒಳ್ಳೆಯ ಪ್ರತಿಭಾವಂತನಾಗಿದ್ದ. ಹಾಡು, ಚಿತ್ರಕಲೆ, ರಂಗೋಲಿ ಹಾಕುವುದು, ಮಿಮಿಕ್ರಿ ಇವುಗಳಲ್ಲೆಲ್ಲ ಎತ್ತಿದ ಕೈ ಆಗಿತ್ತು. ನನಗಿಂತ ಎರಡು ವರ್ಷ ಸೀನಿಯರ್. ಪಾಪ ಈಗ ಎಲ್ಲಿದ್ದಾನೋ..? ಹೇಗಿದ್ದಾನೋ..? ಅಥವಾ ಬದುಕಿದ್ದಾನೋ ಗೊತ್ತಿಲ್ಲ. ಪಾಪ.. ಈ ವೃದ್ಧ ತಂದೆ ತಾಯ್ಗಳ ದುಃಖ ಹೇಳತೀರದು..' ಎಂದ.
            ಈ ಬಗ್ಗೆ ಕೊಂಚ ಮರುಗುವಿಕೆ ಕೊರಗುವಿಕೆಯೆಲ್ಲ ನಡೆಯುವ ವೇಳೆಗೆ ಕತ್ತಲೆಯ ರಥ ಬೆಳಕ ಗಾಡಿಯನ್ನಟ್ಟಿ ಆಗಿತ್ತು. ಆ ಸಂದರ್ಭದಲ್ಲಿಯೇ ಇವರೆಲ್ಲ ಮನೆಯನ್ನು ತಲುಪಿದ್ದರು.

 (ಮುಂದುವರಿಯುತ್ತದೆ..)

Tuesday, January 13, 2015

ಶೇರು ಹನಿಗಳು

ಮುಖ್ಯಸ್ಥ

ಸಾಮಾಜಿಕ ಜಾಲತಾಣಗಳಲ್ಲಿ
ಕಂಡ ಕಂಡದ್ದನ್ನೆಲ್ಲ
ಶೇರ್ ಮಾಡುವವನನ್ನು
ಶೇರೂಗಾರ ಎನ್ನಬಹುದೆ?

ತೋಫಾ..

ಹಿಂದುಸ್ಥಾನದ ಬಗ್ಗೆ
ಪ್ರತಿಯೊಂದನ್ನೂ ಶೇರ್
ಮಾಡುವವನನಿಗೆ
ಶೇರ್-ಎ-ಹಿಂದುಸ್ಥಾನ್
ಬಿರುದನ್ನು ಕೊಡಬಹುದು |

ಹೀಗೂ ಉಂಟೇ

ಸಾಮಾಜಿಕ ಜಾಲತಾಣದಲ್ಲಿ
ಅತಿ ಹೆಚ್ಚು ಶೇರ್
ಮಾಡುವ ಅಪ್ಪಂದಿರಿಗೆ
ಶೇರ್ಪಾ ಎನ್ನಬಹುದು |

ಪ್ರತಿದಾಳಿ

ಶೇರ್ ಮಾಡುವ ವ್ಯಕ್ತಿ
ಶೇರ್ ಮಾಡುವ ಇನ್ನೊಬ್ಬ
ವ್ಯಕ್ತಿಯ ಜೊತೆ ಸ್ಪರ್ಧೆಗಿಳಿದು
ದಾಳಿ-ಪ್ರತಿದಾಳಿ
ನಡೆಸಿದರೆ
ಶೇರ್ ಗೆ ಸವ್ವಾ ಶೇರ್
ಎನ್ನಬಹುದು |