Tuesday, September 30, 2014

ವರ್ಷದ ಹರ್ಷ

ಅಬ್ಬರದ ಮಳೆ..
ಬಾನು ಬೊಬ್ಬಿರಿದಿದೆ..

ಗುಡುಗು ಢುಂ ಢುಂ
ಸಿಡಿಲು ಛಟ್ ಛಟ್...

ಮಳೆಹನಿಯ ಚಿಟಪಟ
ಮನದ ತುಂಬ ನರ್ತನ

ಹಸಿರು, ಜಗಕೆ ಚೇತನ
ಮಳೆ ನೀಡಿದೆ ಹೊಸತನ 

ಗುಡುಗಿನ ಅಬ್ಬರಕೆ
ಮೈಮನ ರೋಮಾಂಚನ

ಸಿಡಿಲಿನ ಧೀಶಕ್ತಿಗೆ
ಲೋಕವೆಲ್ಲ ಝಲ್ಲಣ..

ನದಿತೊರೆಗಳು ತುಂಬಿದೆ
ಕೆಂಪು ನೀರು ಹರಿದಿದೆ

ಹಸಿರು ಚಿಗುರು ಮೊಳೆತಿದೆ
ಹೂ ಹಕ್ಕಿ ನಲಿದಿದೆ.

ಮತ್ತೆ ಪ್ರೀತಿ ಮೊಳೆತಿದೆ
ವರ್ಷಧಾರೆ ಸುರಿದಿದೆ

ಮಳೆಯೆಂದರೆ ಚೇತನ
ಮಳೆಯಿಂದಲೇ ಜೀವನ |

***

(ಈ ಕವಿತೆ ಬರೆದಿದ್ದು ಸೆ.30, 2014ರಂದು)
(ಇವತ್ತು ಸುರಿಯುತ್ತಿರುವ ಮಳೆ ನೋಡಿ ಸುಮ್ಮನೆ ಗೀಚಿದ್ದು)

ಆಡೋಣ ಬಾ

ಆಡೋಣ ಬಾ
ಅಕ್ಷರಗಳ ಜೊತೆಗೊಮ್ಮೆ ಆಡೋಣ ಬಾ |

ಶಬ್ದ ಶಬ್ದಗಳ ಮಿಲನ
ಕೂಡಿ ಕಳೆವ ತನನ
ಆಡೋಣ ಬಾ, ಅಕ್-ಶರದ ಜೊತೆಗೊಮ್ಮೆ |

ಪದಗಳ ಕಟ್ಟೋಣ, ಹೊಸ
ಅರ್ಥ ವಿನ್ಯಾಸ ಹುಡುಕೋಣ,
ಕವನ ಕಟ್ಟೋಣ, ಹಾಡೋಣ
ಆಡೋಣ ಬಾ, ಅಕ್ಷರ-ರದ ಜೊತೆಗೊಮ್ಮೆ |

ಅಕ್ಷರವ ಅರಿಯೋಣ
ಒಳಹುಗಳೊಡಲ ತಿಳಿಯೋಳ
ಬಾ ಅ-ಕ್ಷರಗಳ ಜೊತೆಗೊಮ್ಮೆ ಆಡೋಣ |

ಕವಿ ವರ ಬೇಂದ್ರೆಯಂತೆ
ಕುವೆಂಪುರಂತೆ, ಆಡೋಣ
ಅಕ್ಷರದ ಆಟದಿಂದಲೇ
ಸಾಧನೆಯ ಶಿಖರವೇರೋಣ |

ಬಾ ಆಡೋಣ
ಅಕ್ಷರಗಳ ಜೊತೆಗೊಮ್ಮೆ |

***
(ಈ ಕವಿತೆ ಬರೆದಿರುವುದು 05-08-2006ರಂದು ದಂಟಕಲ್ಲಿನಲ್ಲಿ )

Monday, September 29, 2014

ಎರಡು ಹನಿ ಪ್ರೇಮ ಕಥೆಗಳು

(ಚಿತ್ರ : ವಿನಾಯಕ ಹೆಗಡೆ)
ಚಂದಮಾಮ

`ನಾನು ನಿಂಗೋಸ್ಕರ ಬಾನಿನ ಚಂದಮಾಮನನ್ನೇ ಕೈಯಲ್ಲಿ ಹಿಡಿದು ತಂದುಕೊಡುತ್ತೇನೆ...' ಅದೊಂದು ಸಿನಿಮಾದಲ್ಲಿ ಹೀರೋ ಹೇಳುತ್ತಿದ್ದಂತೆ ಅವಳು ಕೇಳಿದಳು `ನೀನೂ ನಂಗೋಸ್ಕರ ಚಂದಮಾಮನನ್ನು ತರುತ್ತೀಯಾ..?'
ನಾನೆಂದೆ `ಊಹೂಂ..' ಅವಳ ಕಣ್ಣಲ್ಲಿ ಹನಿಗೂಡಿತ್ತು... ಅದು ಭೂಮಿಗಿಳಿಯುವ ಮೊದಲೇ ಹೇಳಿದ್ದೆ..
`ಚಂದಮಾಮನನ್ನು ತರುವುದು ಅಸಾಧ್ಯ ಎನ್ನೋದು ನಿಂಗೂ ಗೊತ್ತು ನಂಗೂ ಗೊತ್ತು... ಅದರ ಬದಲು ಒಂದು ಕೆಲಸ ಮಾಡೋಣ.. ನಾನು-ನೀನು ಇಬ್ಬರೂ ಸೇರಿ ಚಂದಮಾಮನ ನಾಡಿಗೊಂದು ಯಾನ ಮಾಡೋಣ... ಅಲ್ಲಿ ನಾನು ನೀನು ಇಬ್ಬರೇ ಇದ್ದುಬಿಡೋಣ...' ಎಂದೆ.
ಕಣ್ಣೀರು ಇಂಗಿ ಆನಂದಭಾಷ್ಪ ಸುರಿದಿತ್ತು. ಬೆಚ್ಚಗೆ ಅವಳು ತಬ್ಬಿಕೊಂಡಿದ್ದಳು..

***

ಪ್ಯಾಂಟು-ಪ್ರೀತಿ

`ಪ್ರೀತಿ ಅಂದರೆ ಜೀನ್ಸ್ ಪ್ಯಾಂಟಿನ ಥರಾ ಕಣೋ..'  ಅವಳಂದಳು
`ಯಾಕೆ..ಹಾಗೆ..?' ನಾನು ಕೇಳಿದೆ..
`ಜೀನ್ಸ್ ಪ್ಯಾಂಟ್ ನೋಡು ಎಷ್ಟು ರಫ್ & ಟಫ್. ಅಂತ.. ಎಷ್ಟೇ ಸಾರಿ ಹಾಕಿದ್ರೂ ಹಾಳಾಗೋಲ್ಲ. ಕೊಳಕಾದ್ರೂ ತೊಂದ್ರೆ ಇಲ್ಲ.. ಮತ್ತೆ ಮತ್ತೆ ಹಾಕ್ಕೋಬಹುದು.. ಒಂಥರಾ ಖುಷಿ ಕೊಡುತ್ತೆ... ಪ್ರೀತಿ ಕೂಡ ಹಾಗೇ ಅಲ್ವಾ..' ಅವಳೆಂದಳು..
`ಆದ್ರೆ ಜೀನ್ಸು ಹರಿಯಬಾರದ ಜಾಗದಲ್ಲೇ ಹರಿಯುತ್ತಲ್ಲೇ...ಅದಕ್ಕೆ ಹೊಲಿಗೆ ಕೂಡ ಬಹಳ ಕಷ್ಟ ಮಾರಾಯ್ತಿ..' ಎಂದೆ..
`ತೂ.. ಹೋಗೋ' ಎಂದಳು..
`ಪ್ರೀತಿ ಅಂದರೆ ಫಾರ್ಮಲ್ಸ್ ಪ್ಯಾಂಟ್ ಥರಾ ಕಣೆ...' ಅಂದೆ.
`ಓಹೋ...' ಅಂದವಳು `ಹೇಗೆ..?' ಅಂದಳು..
`ಆ ಪ್ಯಾಂಟುಗಳು ಎಷ್ಟು ಡೀಸೆಂಟ್ ಅಲ್ವಾ..? ನೋಡಿದ ತಕ್ಷಣ ಏನೋ ಗೌರವ ಮೂಡುತ್ತದೆ. ಮತ್ತೆ ಮತ್ತೆ ಫಾರ್ಮಲ್ಸ್ ಹಾಕಬೇಕು ಎನ್ನಿಸುತ್ತದೆ...' ಎಂದೆ.
`ಆದರೆ..' ಎಂದ ಅವಳು `ನನ್ನಂತಹ ಮಾಸ್ ನವರಿಗೆ ಫಾರ್ಮಲ್ಸ್ ಇಷ್ಟ ಆಗೋದಿಲ್ಲ ಕಣೋ..' ಎಂದಳವಳು..
ನಾನು ಆಲೋಚಿಸಿದೆ.. ಕೊನೆಗೆ ಹೇಳಿದೆ.
`ಬಿಡು.. ಪ್ರೀತಿ ಜೀನ್ಸ್ ಬೇಕಾದರೂ ಆಗಿರಲಿ.. ಫಾರ್ಮಲ್ಸ್ ಬೇಕಾದರೂ ಆಗಿರಲಿ. ಆಯ್ಕೆ ನಮ್ಮದೇ ಅಲ್ಲವಾ..? ಎರಡನ್ನೂ ಪ್ರಯತ್ನಿಸಿದರಾಯಿತು..' ಎಂದೆ.. ಕಣ್ಣುಮಿಟುಕಿಸಿದೆ..
ಒಮ್ಮೆ ಕೈಯನ್ನು ಚಿವುಟಿದಳು..
ಹಾಯ್ ಎಂದೆ.. ನಕ್ಕಳು..

***

Sunday, September 28, 2014

ಖುಷಿಯಾಗಿರಲಷ್ಟು ಹನಿ ಚುಟುಕಗಳು

ಹೆಂಡ(ತಿ)

ಹೆಂಡಕ್ಕೂ ಹೆಂಡತಿಗೂ
ಏನಂತೆ ವ್ಯತ್ಯಾಸ ?
ಹೆಂಡ `ಕಿಕ್' ಕೊಟ್ಟರೆ
ಹೆಂಡತಿಯೋ ಕಿಕ್ (kick)
ಮಾಡುತ್ತಾಳೆ |

ವ(ವಾ)ಯಸ್ಸು

ನನ್ನನ್ನು ಸೆಳೆದಿದ್ದು
ಅವಳ ಸುಂದರ voiceಊ|
ಜೊತೆಗೆ ಅವಳ ವಯಸ್ಸೂ ||

ದಿನಕರ ದೇಸಾಯಿಗೆ

ನಮ್ಮೂರ ಕವಿ ದಿನಕರ
ಅವರ ಚುಟುಕುಗಳೆಂದೂ ಅಮರ |
ಚಿಕ್ಕದಾದರೂ ಬಲು ಸವಿಯಂತೆ ಚುಟುಕು
ಎತ್ತಿ ತೋರುವುದದು ಸಮಾಜದ ಹುಳುಕು ||

NUMBER ONE

ಎಲ್ಲರೂ ಹೇಳ್ತಾರೆ
ಅಮೇರಿಕ NUMBER ONE |
ಆದರೆ ಅಮೆರಿಕಾವನ್ನೂ
ಹೆದರಿಸ್ತಿದ್ದ ಬಿನ್ ಲಾಡೆನ್ ||

ಕನಸು

ಆತ ಹೇಳುತ್ತಿದ್ದ
ನಿನ್ನೆ ನನ್ನ ಬಳಿ
`ಐಶ್ವರ್ಯ ಬಂದು ಮುತ್ತು
ಕೊಡೆಂದಳು, ಮುತ್ತು
ಕೊಡಲು ಹವಣಿಸಿದಾಗಲೇ
ನನಗೆ ಎಚ್ಚರಾಯಿತು' |

Saturday, September 27, 2014

ಗುಲಾಬಿ

(ಚಿತ್ರ ಕೃಪೆ : ಅಮಿತ್ ಕಾನಡೆ)

ಬಾಗಿಲೊಳು ಅಂಗಳದಿ
ಹೂ ಗುಲಾಬಿ ಅರಳಿತ್ತು |
ಸೂರ್ಯ ರಶ್ಮಿಯ ಎದುರು
ಅರಳಿ ನಿಂತಿತ್ತು ||

ಕಂಪಿಲ್ಲ-ನಗುತಿತ್ತು
ಹೂವು ನಲಿದು |
ಒಡಲೊಳಗೆ ಮುಳ್ಳಿತ್ತು
ಒಲವು ಕರೆದು ||

ಹೂ ಚೆಲುವು ಮೆರೆದಿದೆ
ಲೋಕ ತುಂಬ |
ಹೊಸ ಕಾಂತಿ ಹೊಂದಿದೆ
ಹಗಲ ತುಂಬ ||

ಬಣ್ಣಗಳು ನೂರಾರು
ಒಡಲು ಒಂದೇ |
ಹೂ ರಾಶಿ ನೂರಿರಲಿ
ಈ ಚೆಲುವೇ ಮುಂದೆ ||

***
(ಈ ಕವಿತೆ ಬರೆದಿರುವುದು 06-02-2006ರಂದು ದಂಟಕಲ್ಲಿನಲ್ಲಿ )