Wednesday, September 17, 2014

ಚಿತ್ರ-ವಿಚಿತ್ರ

ಪಪ್ಪುವಿನ ಬಯಕೆ

ಮೋದಿಯ ಫ್ಯಾನಿಗೆ
ಬಿರುಗಾಳಿಗೆ ಬಲಿಯಾಗಿ
ಪಪ್ಪೂ ಅಳಲು
`ನನಗೂ ಕಮಲ ಬೇಕು...'

***
ಆಗ್ರಹ

ನಮ್ಮೂರ ಹಾಲು ಡೇರಿ ಸಂಘದ ಚುನಾವಣೆಯಲ್ಲಿ ರಂಗಣ್ಣಂಗೆ ಗೆಲುವು..
`ಇದು ಮೋದಿ ವೈಫಲ್ಯದ ಪರಮಾವಧಿ. ಕೂಡಲೇ ಪಿ. ಎಂ. ಸ್ಥಾನಕ್ಕೆ ರಾಜಿನಾಮೆ ಕೋಡಬೇಕು' : ಪಪ್ಪೂ

***

ಕಲಿ

ಯಾರೇ ಕೂಗಾಡಲಿ..
ಊರೇ ಹೋರಾಡಲಿ
ವಾಟಾಳ ಮಾತ್ರ
ಗಂಡುಗಲಿ |

***

ಚಿತ್ರನಟ

ಅಂಬರೀಶ್ ಚಿತ್ರದ ಹೆಸರು
ಮಂಡ್ಯದ ಗಂಡು
ಕುಮಾರಣ್ಣನ ಮಗ ನಿಖಿಲ
ಸಿನಿಮಾ ಹೀರೋ ಆದರೆ
ಚಿತ್ರದ ಹೆಗಡೆ
ಹಾಸನದ ಗುಂಡು |

**

ಲೈಕ್ ಪ್ರಿಯ

ಬಾಕ್ಸಿಂಗ್ ಚತುರ
ಮೈಕ್ ಟೈಸನ್..
ಲೈಕ್ ಒತ್ತುವ ಚತುರ
ಲೈಕ್ ಟೈಸನ್ |

Monday, September 15, 2014

ಸುಮ್ನೆ ತಮಾಷೆಗೆ

ಸುಮ್ನೆ ತಮಾಷೆಗೆ
ಪಗ್ ನಾಯಿಯ ಹಚ್ ಪುರಾಣ

ಕ್ಯೂಟ್ ಕ್ಯೂಟ್ ಪಗ್ ನಾಯಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ.
ಹಚ್ ಜಾಹಿರಾತಿಗೆ ಬಂದು ಎಲ್ಲರ ಮನಗೆದ್ದ ಪಗ್ ನಾಯಿಯನ್ನು ಹಚ್ ನಾಯಿ ಎಂದೇ ಕರೆಯುತ್ತಾರೆ.
ಇಂತಹ ಹಚ್ ನಾಯಿಯ ಮುಖ ಎಷ್ಟು ಚನ್ನಾಗಿದೆಯಲ್ಲ.
ಕುಳ್ಳು ಆಕಾರ, ಕಪ್ಪು ಮೂತಿ, ಊದ್ದ ನಾಲಿಗೆ ಸದಾ ಹೊರಚಾಚಿರುತ್ತದೆ. 
ನನಗೆ ಹಚ್ ನಾಯಿಯ ಮುಖ ಕಂಡಾಗಲೆಲ್ಲ ಮುಖಾ ಮುಖಿ ಡಿಕ್ಕಿಯಾದ ಟಾಟಾ ಏಸೋ ಅಥವಾ ಮಾರುತಿ ಓಮ್ನಿಯೋ ಕಂಡಂತೆ ಕಾಣುತ್ತದೆ. ಆ ವಾಹನಗಳು ಢಿಕ್ಕಿಯಾದರೆ ಹಚ್ ನಾಯಿಯ ಕುತ್ತಿಗೆಯಲ್ಲಿ ದಪ್ಪ ದಪ್ಪ ರೋಮ ಇರುತ್ತದಲ್ಲ ಹಾಗೆ ಇರುತ್ತದೆ ಎನ್ನಿಸುತ್ತದೆ.

ಈ ಹಚ್ ನಾಯಿಯ ಕಣ್ಣು ನೋಡಿದ್ದೀರಾ..
ಯಾವಾಗಲೂ ಟೆನ್ಶನ್ ಮಾಡಿಕೊಂಡೇ ಇದೆಯೇನೋ ಎಂಬಂತೆ, ಬೆದರಿದಂತೆ, ಗೊಂದಲದಲ್ಲಿ ಇದ್ದಂತೆ ಕಾಣುತ್ತದೆ.
ಆಕ್ಚುಲಿ ಇದಕ್ಕೊಂದು ಕಾರಣವೂ ಇದೆ. ಮಜವಾಗಿದೆ ಹೇಳ್ತೀನಿ ಕೇಳಿ.
ಹಚ್ ನಾಯಿ ಯುವಕ-ಯುವತಿಯರ ಪರಮ ಪ್ರಿಯ ನಾಯಿ.
ಹುಡುಗಿಯರು ಈ ಹಚ್ ನಾಯಿಯನ್ನು ಕರೆದುಕೊಂಡು ಹೋಗುತ್ತಿರುತ್ತಾರೆ ಎನ್ನಿ.
ಆಗೆಲ್ಲ ಹುಡುಗರು ಹುಡುಗಿಯರನ್ನು ಕಿಚಾಯಿಸುವುದು, ಲೈನ್ ಹೊಡೆಯುವುದು ಮಾಡುತ್ತಾರಲ್ಲ.. ಅದಕ್ಕೆ ಪ್ರತಿಯಾಗಿ ಹುಡುಗಿಯರ ರಿಯಾಕ್ಷನ್ನೂ ಇರುತ್ತದಲ್ಲ..
ಇದನ್ನೆಲ್ಲ ಗಮನಿಸಿ `ಛೇ.. ಇವರನ್ನು ಹೇಗೆ ಸಂಭಾಳಿಸುವುದು ಮಾರಾಯ್ರೆ.. ನಾನೇ ನೋಡ್ಬೇಕಲ್ಲ..' ಎಂದ್ಕೊಂಡ ಪರಿಣಾಮವೇ ಹಚ್ ನಾಯಿಯ ಕಣ್ಣು ಹಾಗಿಗಿರುವುದು.
ಹುಡುಗರು ಹಚ್ ನಾಯಿಯನ್ನು ಕರೆದೊಯ್ಯುತ್ತಿದ್ದರೂ ಅದರ ಕಣ್ಣು ಅದೇ ರೀತಿ ಇರುತ್ತದೆ. ಯಾಕೆ ಗೊತ್ತಾ.
ಈ ಹುಡುಗರು ಸುಮ್ಮನಿರದೇ ಹುಡುಗಿರನ್ನು ಕಿಚಾಯಿಸುವುದು, ಲೈನ್ ಹೊಡೆಯೋದು, ಚುಡಾಯಿಸೋದು ಮಾಡ್ತಾರಲ್ಲಾ.. ಈ ಹುಡುಗರನ್ನು ಹೇಗೆ ಸಂಭಾಳಿಸೋದಪ್ಪಾ.. ಇಷ್ಟು ಕೆಟ್ಟದಾಗಿ ಬಿಹೇವ್ ಮಾಡ್ತಾರೆ.. ಇವರ ಜೊತೆಗೆ ಹೋಗ್ತೀರೋ ನನ್ನ ಮರ್ಯಾದೆನೂ ತೆಗೀತಾರಲ್ಲಪ್ಪಾ.. ಇವರಿಗೆ ಹೇಗೆ ಒಳ್ಳೆ ಬುದ್ಧಿ ಹೇಳೋದು ಎಂದುಕೊಳ್ಳುವ ಹಚ್ ನಾಯಿಯ ಕಣ್ಣು ಮತ್ತಷ್ಟು ಗಲಿಬಿಲಿ ಗೊಳ್ಳುತ್ತದೆ. ಅಗಲವಾಗಿ ಕಣ್ಣನ್ನು ಬಿಡುತ್ತದೆ.



***
ಸೆಲ್ಲು

ಕೆಲವು ಪಕ್ಷಗಳಲ್ಲಿ ಈಗ ಅಲ್ಪಸಂಖ್ಯಾತ ಸೆಲ್ ಗಳು ಇವೆ.
ಯಾವ ಪ್ರಮಾಣದಲ್ಲಿ ಈ ಅಲ್ಪ ಸಂಖ್ಯಾತ ಸೆಲ್ ಇವೆ ಎಂದರೆ ಈ ಸೆಲ್ಲುಗಳಿಗೆ ಬೋಪರಾಕ್ ಹಾಕುವಷ್ಟು.
ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ಹಿಂದೂಗಳ ಕುರಿತು ಪಕ್ಷಗಳು ಅಲ್ಪ ಸಂಖ್ಯಾತ ಸೆಲ್ಲುಗಳನ್ನು ತೆರೆಯಬಹುದು.
ಈಗಿನ ವೇಗ ನೋಡಿದರೆ ಆ ದಿನಗಳು ದೂರವಿಲ್ಲವೇನೋ ಅನ್ನಿಸುತ್ತದೆ.

***

ಫರ್ಮಾನು

ವೋಡಾ..... ಪೋನ್ ಬಳಕೆದಾರರಿಗೆ ಹೀಗೊಂದು ಫರ್ಮಾನು ಹೊರಡಿಸಿದರೆ ಹೇಗಿರುತ್ತದೆ?

`ಹಚ್ ನಾಯಿಗೆ ಹಚ್ಯಾ ಎಂದು ಕನ್ನಡದಲ್ಲಿ ಬರೆಯುವುದನ್ನು ನಿಷೇಧಿಸಲಾಗಿದೆ..'
`ಇಂಗ್ಲೀಷಿನಲ್ಲಿಯೇ ಹಚ್ ನಾಯಿಯನ್ನು ಬಯ್ಯತಕ್ಕದ್ದು..'

@@@@@

Sunday, September 14, 2014

ಬೆಂಗಾಲಿ ಸುಂದರಿ-25

(ಮಿರ್ಜಾಪುರದ ಬೀದಿ)
           ಮದುಮಿತಾ ಹಾಗೂ ವಿನಯಚಂದ್ರರಿಗೆ ಸಲೀಂ ಚಾಚಾ ಅಚ್ಚರಿಯೋ ಅಚ್ಚರಿ. ಢಾಕಾದ ಸಲೀಂ ಚಾಚಾ, ಹೈದರಾಬಾದಿನಿಂದ ಓಡಿಬಂದ ಸಲೀಂ ಚಾಚಾ ಬಾಂಗ್ಲಾ ದೇಶವನ್ನು ಅರ್ಥ ಮಾಡಿಕೊಂಡಿದ್ದ ಪರಿ ಬಹಳ ಬೆರಗನ್ನು ಮೂಡಿಸಿತ್ತು. ಢಾಕಾದಲ್ಲಿ ಸೈಕಲ್ ರಿಕ್ಷಾ ತುಳಿಯುತ್ತಿದ್ದ ಸಲೀಂ ಚಾಚಾ ಮಿರ್ಜಾಪುರದ ಗಲ್ಲಿಗಲ್ಲಿಗಳನ್ನು ತಿಳಿದುಕೊಂಡಿದ್ದನಲ್ಲ. ಮುಪ್ಪಿನ ವಯಸ್ಸಾಗಿದ್ದರೂ ಎಳವೆಯಂತೆ ಸೈಕಲ್ ತುಳಿಯುವ ಸಲೀಂ ಚಾಚಾನ ಬಗ್ಗೆ ಆಲೋಚಿಸಿದಷ್ಟೂ ಕುತೂಹಲ ಹುಟ್ಟುಹಾಕುತ್ತ ಹೋಗುತ್ತಿದ್ದ. ಈ ನಡುವೆಯೇ ವಿನಯಚಂದ್ರನ ಮನಸ್ಸಿನಲ್ಲಿ ಸಲೀಂ ಚಾಚಾ ಯಾತಕ್ಕಾಗಿ ಇಷ್ಟೆಲ್ಲ ಮಾಡುತ್ತಿದ್ದಾನೆ? ಒಳ್ಳೆಯದನ್ನು ಮಾಡುವ ನೆಪದಲ್ಲಿ ತಮ್ಮನ್ನು ಹಿಡಿದು ಹಾಕುವ ಹುನ್ನಾರ ನಡೆಸುತ್ತಿಲ್ಲವಷ್ಟೇ ಎಂದು ಆಲೋಚಿಸಿದ. ಸಹಾಯ ಮಾಡುವ ನೆಪದಲ್ಲಿ ನಮ್ಮನ್ನು ಯಾವುದೋ ಕೂಪಕ್ಕೆ ತಳ್ಳುತ್ತಿದ್ದಾನೆಯಾ ಎಂದೂ ಶಂಕೆ ಮೂಡಿತು. ಕೊನೆಗೆ ಖಂಡಿತ ಹಾಗೆ ಮಾಡಲಾರ. ಹಾಗೆ ಮಾಡುವುದೇ ಆಗಿದ್ದರೆ ಢಾಕಾದಲ್ಲೇ ತಮ್ಮನ್ನು ಹಿಂಸಾಚಾರಿಗಳ ವಶಕ್ಕೋ ಮತ್ಯಾರಿಗೋ ಕೊಟ್ಟು ಸುಮ್ಮನಾಗುತ್ತಿದ್ದ. ನಮ್ಮ ಪಾಲಿಗೆ ಸಲೀಂ ಚಾಚಾ ಆಪದ್ಭಾಂಧವನಂತೆ ಬಂದಿದ್ದಾನೆ. ಈಗ ಆತನ ಸಹಾಯ ನಮಗೆ ಬೇಕೇ ಬೇಕು. ಹೀಗಾಗಿ ಆತನನ್ನು ನಂಬುವುದು ಅನಿವಾರ್ಯ ಎಂದುಕೊಂಡ.
           ಮನೆಯೊಳಗೆ ಹೋಗಿದ್ದ ಸಲೀಂ ಚಾಚಾ ಹತ್ತು ನಿಮಿಷದ ನಂತರ ಹೊರಗೆ ಬಂದಿದ್ದ. ಜೊತೆಯಲ್ಲಿ ಒಬ್ಬರನ್ನು ಕರೆತಂದಿದ್ದ. ಅವರ ಬಳಿ ಅದೇನು ಹೇಳಿದ್ದನೋ. ಮೊದಲ ನೋಟದಲ್ಲೇ ಆ ಮನೆಯ ಯಜಮಾನರು ಎಂಬುದು ಅರ್ಥವಾಯಿತು. ಸಲೀಂ ಚಾಚಾ ಆ ಮನುಷ್ಯನನ್ನು ಖಾದಿರ್ ಎಂದು ಪರಿಚಯಿಸಿದ. ಖಾದಿರ್ ಗೆ ವಿನಯಚಂದ್ರ ಹಾಗೂ ಮಧುಮಿತಾಳನ್ನು ಪರಿಚಯ ಮಾಡಿಸಿದ. ಖಾದಿರ್ ಇವರನ್ನು ತನ್ನ ಮನೆಯೊಳಗೆ ಕರೆದೊಯ್ದ. ಮನೆಯೊಳಗೆ ಹೋದ ತಕ್ಷಣ ಖಾದಿರ್ ಬಾಯಿ ಇವರಿಗೆ ಒಣದ್ರಾಕ್ಷಿ, ಗೋಡಂಬಿ, ಖರ್ಜೂರ ಸೇರಿದಂತೆ ಹಲವು ಬಗೆಯ ಹಣ್ಣುಗಳನ್ನು ತಂದಿಟ್ಟರು. ಸಲೀಂ ಚಾಚಾ ಖಾದಿರ್ ತನ್ನ ಹಳೆಯ ಸ್ನೇಹಿತನೆಂದೂ ತನ್ನಂತೆ ಭಾರತದಿಂದ ಹೊಟ್ಟೆಪಾಡಿಗೆ ಓಡಿಬಂದವನೆಂದೂ ತಿಳಿಸಿದ. ವಿನಯಚಂದ್ರ ಹಾಗೂ ಮಧುಮಿತಾ ಸಂತಸ ಪಟ್ಟರು.
          ಮಾತಿಗೆ ನಿಂತ ಖಾದಿರ್ `ಮಿರ್ಜಾಪುರದಲ್ಲಿ ಇವತ್ತು ಬೆಳಿಗ್ಗೆಯಿಂದ ಹಿಂಸಾಚಾರ ಭುಗಿಲೆದ್ದಿದೆ. ಪುಂಡರ ಗುಂಪು ಕಂಡಕಂಡಲ್ಲಿ ದಾಳಿ ಮಾಡಿ, ಸಿಕ್ಕಿದ್ದನ್ನು ದೋಚುತ್ತಿದೆ. ಎಲ್ಲೆಂದರಲ್ಲಿ ಬೆಂಕಿ ಹಚ್ಚುತ್ತಿದೆ. ಎಲ್ಲೆಡೆ ಕರ್ಫ್ಯೂ ವಿಧಿಸಲಾಗಿದೆ. ಯಾವಾಗ ಸುಮ್ಮನಾಗುತ್ತೋ ಮಿರ್ಜಾಪುರ..' ಎಂದರು.
          `ಅರೇ ನಮಗೆ ಕಾಣಿಸಲೇ ಇಲ್ಲವಲ್ಲ. ನಾವು ಆರಾಮಾಗಿ ಮಿರ್ಜಾಪುರ ಬಂದೆವು ನೋಡಿ..' ವಿನಯಚಂದ್ರ ಅಚ್ಚರಿಯಿಂದ ಹೇಳಿದ.
           `ನನಗೂ ಅದೇ ಅಚ್ಚರಿಗೆ ಕಾರಣವಾಗಿದೆ. ಎಲ್ಲೆಡೆ ಗಲಾಟೆ ನಡೆಯುತ್ತಿದ್ದರೂ ಪುಂಡರ ಗುಂಪಿಗೆ ನೀವು ಸಿಗಲಿಲ್ಲವಲ್ಲ. ಪುಂಡರು ಹೋಗಲಿ ಪೊಲೀಸರಿಗೂ ನೀವು ಸಿಗಲಿಲ್ಲ ಎಂಬುದೇ ಅತ್ಯಾಶ್ಚರ್ಯ ನೋಡಿ.' ಖಾದಿರ್ ಹೇಳುತ್ತಿದ್ದರೆ ವಿನಯಚಂದ್ರ ತಮ್ಮ ಅದೃಷ್ಟವನ್ನು ನೆನೆದು ಖುಷಿಪಟ್ಟ. ಮಧುಮಿತಾ ಮಾತ್ರ ಆಲೋಚನಾ ಲಹರಿಯಲ್ಲಿ ಜಾರಿದ್ದಳು. ಯಾಕೋ ಏನೋ ತಾವು ಹೋದ ಕಡೆಯಲ್ಲೆಲ್ಲ ಹಿಂಸಾಚಾರ ನಡೆಯುತ್ತಿದೆ. ಬಿಟ್ಟೆನೆಂದರೂ ಬಿಡದೀ ಮಾಯೆ. ಯಾಕೆ ಹೀಗೆ. ತಮಗೆ ಶಾಂತಿ ದೊರಕುವುದೇ ಇಲ್ಲವೇ ಎಂದುಕೊಂಡಳು. ಸಲೀಂ ಚಾಚಾ ಅದಕ್ಕೆ ಸರಿಯಾಗಿ `ಬೇಟಿ ನೀವು ಭಾರತ ತಲುಪಿದರೆ ಮಾತ್ರ ನಿಮಗೆ ಶಾಂತಿ ಸಿಗುತ್ತದೇನೋ.. ಅಲ್ಲಿಯವರೆಗೂ ಉಸಿರುಕಟ್ಟಿ ಓಡುತ್ತಲೇ ಇರಬೇಕು. ಇವತ್ತು ಏಜೆಂಟ ನಮ್ಮನ್ನು ಭೆಟಿ ಮಾಡುತ್ತಾನೆ. ಸಂಜೆ ವೇಳೆಗೆ ನಾವು ಇಲ್ಲಿಮದ ಹೊರಡಲೇ ಬೇಕು. ಹಿಂಸಾಚಾರ ತಣ್ಣಗಾಗಿರಲಿ ಅಥವಾ ಗಲಭೆ ಹೆಚ್ಚಿಯೇ ಇರಲಿ. ನಾವು ನಿಲ್ಲುವಂತಿಲ್ಲ.. ತಿಳೀತಾ ಮಕ್ಕಳಾ' ಎಂದರು ಪ್ರೀತಿಯಿಂದ. ಪ್ರೇಮಿಗಳು ತಲೆಯಲ್ಲಾಡಿಸಿದರು.
            ಇರುಕಾದ ಬಾಗಿಲಿನಿಂದ ಓಳಹೋಗುವಂತ ಮನೆ ಅದಾಗಿದ್ದರೂ ಖಾದಿರ್ ಭಾಯಿಯ ಮನೆ ವಿಶಾಲವಾಗಿತ್ತು. 50-60 ಜನ ಬೇಕಾದರೂ ಆರಾಮಾಗಿ ಇರಬಹುದಿತ್ತು. ಮನೆಯ ತುಂಬ ಜನವೋ ಜನ. ವಿನಯಚಂದ್ರ ಎಣಿಸಲು ನೋಡಿ ಸುಸ್ತಾಗಿದ್ದ. ಎಣಿಸಿದಂತೆಲ್ಲ ಜನರು ಜಾಸ್ತಿಯಾಗುತ್ತಿದ್ದಾರೋ ಹೇಗೆ ಎಂದನ್ನಿಸುತ್ತಿತ್ತು. ಮನೆಯ ಒಳ ಕೋಣೆಗಳಿಂದ ಮಧ್ಯ ವಯಸ್ಕರು, ಹಿರಿಯರು, ಮಕ್ಕಳು, ಮರಿಗಳು ಬರುತ್ತಲೇ ಇದ್ದರು. ಬಂದವರನ್ನೆಲ್ಲ ಖಾದರ್ ಈತ ತನ್ನ ಮಗ ಎಂದೋ, ಸೊಸೆ ಎಂದೋ, ಮೊಮ್ಮಗ ಎಂದೋ, ಇವಳು ಹೆಂಡತಿ ಎಂದೋ ಪರಿಚಯಿಸುತ್ತಲೇ ಇದ್ದ. ಖಾದಿರ್ ನ ಒಂದಿಬ್ಬರು ಮಡದಿಯರಂತೂ ಆತನದ್ದೇ ಹೆಣ್ಣುಮಕ್ಕಳಿಗಿಂತ ಚಿಕ್ಕವರಿದ್ದರು. ಬೆಪ್ಪಾಗಿ ವಿನಯಚಂದ್ರ ನೋಡುತ್ತಿದ್ದಾಗಲೇ ಸಲೀಂ ಚಾಚಾ `ಖಾದಿರ್ ಗೆ 12 ಜನ ಮಡದಿಯರು... ಮಕ್ಕಳ ಸಂಖ್ಯೆ ಎಷ್ಟು ಎನ್ನುವುದನ್ನು ಆತನ ಬಳಿಯೇ ಕೇಳಬೇಕು..' ಎಂದು ತಮಾಷೆ ಮಾಡಿ ಕಣ್ಣು ಮಿಟುಕಿಸಿದರು.
         ಖಾದಿರ್ `38 ಮಕ್ಕಳು.. ಈ ವರ್ಷ ಇನ್ನೆರಡು ಸೇರ್ಪಡೆಯಾಗುತ್ತವೆ. 8 ಮೊಮ್ಮಕ್ಕಳು. ಒಬ್ಬ ಮರಿ ಮಗ ಇದ್ದಾನೆ.. ಎಲ್ಲ ಅಲ್ಲಾಹುವಿನ ಕೃಪೆ..' ಎಂದಾಗ ಮಾತ್ರ ವಿನಯಚಂದ್ರ ಸುಸ್ತಾಗಿ ಬೀಳುವುದೊಂದೇ ಬಾಕಿ. `ನಿಮ್ಮ ತಾಕತ್ತು ಭಾರಿ ಬಿಡಿ..' ಎಂದು ಹೇಳಿ ಸುಮ್ಮನಾದ ವಿನಯಚಂದ್ರ. ಮಧುಮಿತಾಳನ್ನು ನೋಡಿ ಕಣ್ಣುಮಿಟಿಕಿಸಿ `ನೋಡಿದೆಯಾ ಖಾದಿರ್ ಭಾಯಿಯ ತಾಕತ್ತು..' ಎಂದು ಪಿಸುಗುಟ್ಟಿದ. ಒಮ್ಮೆ ಕಣ್ಣರಳಿಸಿದ ಮಧುಮಿತಾ ವಿನಯಚಂದ್ರ ಹೇಳಿದ್ದು ಅರ್ಥವಾದ ತಕ್ಷಣ ನಾಚಿಕೊಂಡಳು.
                 ಆ ದಿನ ಹಾಗೆಯೇ ಕಳೆಯಿತು. ಆದರೆ ಮಿರ್ಜಾಪುರದಲ್ಲಿ ಹಿಂಸಾಚಾರ ಕಡಿಮೆಯಾಗುವ ಲಕ್ಷಣ ತೋರಲಿಲ್ಲ. ಸಲೀಂ ಚಾಚಾ ಏಜೆಂಟನಿಗಾಗಿ ಕಾಯುತ್ತಿದ್ದ. ಸಮಯ ಸರಿಯುತ್ತಿತ್ತಾದರೂ ಏಜೆಂಟನ ಪತ್ತೆಯಿರಲಿಲ್ಲ. ಮಿರ್ಜಾಪುರದಿಂದ ಅಂದು ಶತಾಯಗತಾಯ ಪಯಣ ಆರಂಭಿಸಲೇ ಬೇಕಿತ್ತು. ಏಜೆಂಟ ಬರದೇ ಇದ್ದರೆ ಏನು ಮಾಡುವುದು ಎಂಬ ಆಲೋಚನೆ ಎಲ್ಲರ ಮನಸ್ಸಿನಲ್ಲಿ ಮೂಡಿದರೂ ಸಲೀಂ ಚಾಚಾ `ಭಾರತದ ಗಡಿಯತ್ತ ಪ್ರಯಾಣ ಮಾಡುವ ದಾರಿ ನನಗೆ ಗೊತ್ತಿದೆ. ಏಜೆಂಟ ಬರಲಿ, ಅಥವಾ ಬರದೇ ಇರಲಿ.. ನೀವು ಸಾಗಬೇಕು. ನಿಮ್ಮನ್ನು ಅಲ್ಲಿಯವರೆಗೆ ನಾನು ಕಳಿಸಿ ಬರಲೇಬೇಕು..' ಎಂದ.
                   ಇಷ್ಟರ ನಡುವೆ ಮಾಡಲೇಬೇಕಾದ ಕೆಲವು ಕೆಲಸಗಳಿದ್ದವು. ಎಲ್ಲರ ಬಳಿ ಹಣ ಖರ್ಚಾಗಿತ್ತು. ಅಗತ್ಯ ವಸ್ತುಗಳನ್ನೆಲ್ಲ ನದೀ ತೀರದ ದರೋಡೆಕೋರರು ಕದ್ದೊಯ್ದಿದ್ದರು. ಹೀಗಾಗಿ ಅವನ್ನೆಲ್ಲ ಸಂಪಾದಿಸಬೇಕಿತ್ತು. ಅಥವಾ ಯಾರ ಬಳಿಯಾದರೂ ಪಡೆಯಬೇಕಿತ್ತು. ಖಾದಿರ್ ಈ ವಿಷಯವನ್ನು ಅರಿತ ತಕ್ಷಣ ಹಣ, ಆಹಾರ ಹಾಗೂ ಅಗತ್ಯ ವಸ್ತುಗಳನ್ನೆಲ್ಲ ಪೂರೈಸಿದ್ದ. ಇವೆಲ್ಲವುಗಳ ಜೊತೆಗೆ ಇನ್ನೊಂದು ಕೆಲಸ ಬಾಕಿ ಇತ್ತು. ಖಾದಿರ್ ಬಳಿ ಮಾತನಾಡಿದ ಸಲೀಂ ಚಾಚಾ ತಕ್ಷಣವೇ ವಿನಯಚಂದ್ರನನ್ನು ಮನೆಯಿಂದ ಹೊರಗೆ ಕರೆದೊಯ್ದ. ಮಿರ್ಜಾಪುರದ ನಿರ್ಮಾನುಷವೆನ್ನಿಸುವಂತಹ ಒಂದೆರಡು ಬೀದಿಗಳನ್ನು ಹಾದು ಅವರು ಸಾಗಿ ಅದೆಲ್ಲೋ ಒಂದು ದುಕಾನ್ ಎದುರು ನಿಂತರು. ಬೆಂಗಾಲಿ ಹಾಗೂ ಉರ್ದುವಿನಲ್ಲಿ ಬರೆದಿದ್ದ ಆ ಅಂಗಡಿ ಏನು ಎನ್ನುವುದು ವಿನಯಚಂದ್ರನಿಗೆ ಅರ್ಥವಾಗಲಿಲ್ಲ. ಮೇಲ್ನೋಟಕ್ಕೆ ಆಸ್ಪತ್ರೆಯೆಂಬಂತೆ ಕಂಡಿತು. ಆದರೆ ತನ್ನನ್ನೇಕೆ ಅಲ್ಲಿಗೆ ಸಲೀಂ ಚಾಚಾ ಕರೆತಂದಿದ್ದಾರೆ ಎನ್ನುವುದು ಗೊತ್ತಾಗಲಿಲ್ಲ.
              ಆ ದುಕಾನ್ ಒಳಹೋದಗ ಮಾತ್ರ ಅದು ಆಸ್ಪತ್ರೆಯೆನ್ನುವುದು ವಿನಯಚಂದ್ರನಿಗೆ ಸ್ಪಷ್ಟವಾಯಿತು. ಆಗಲೇ ಸಲೀಂ ಚಾಚಾ `ಬೇಟಾ.. ಇದು ಬಾಂಗ್ಲಾ ದೇಶ. ನೀವು ಬಾಂಗ್ಲಾದಲ್ಲಿ ಇರುವಷ್ಟು ಕಾಲ ನಿಮ್ಮನ್ನು ರಕ್ಷಿಸುವ ಜವಾಬ್ದಾರಿ ನನ್ನದು. ಹೀಗಿರುವಾಗ ನನಗೇನಾದರೂ ಸಮಸ್ಯೆ ಆದರೆ ನೀವೇ ಬಾಂಗ್ಲಾ ನಾಡಿನಲ್ಲಿ ಸಂಚರಿಸಿ ಭಾರತ ತಲುಪಬೇಕು. ಇದಕ್ಕಾಗಿಯೇ ನಾನು ನಿನ್ನನ್ನು ಇಲ್ಲಿಗೆ ಕರೆತಂದಿದ್ದು..' ಎಂದ.
(ಮಿರ್ಜಾಪುರದ ಇನ್ನೊಂದು ನೋಟ)
         `ಇಲ್ಲಿಗೆ ಸರಿ.. ಇಲ್ಲೇನು ಮಾಡುವುದು..?' ವಿನಯಚಂದ್ರ ಅರ್ಥವಾಗದೇ ಕೇಳಿದ್ದ.
         `ಎಷ್ಟೇ ಚಹರೆ ಬದಲಾಯಿಸಿದರೂ ಕೂಡ ಸಾಮಾನ್ಯವಾಗಿ ಮುಸ್ಲೀಮರು ಹಾಗೂ ಮುಸ್ಲೀಮರಲ್ಲದವರ ನಡುವೆ ವ್ಯತ್ಯಾಸ ಕಂಡು ಹಿಡಿಯಲು ಪ್ರಮುಖವಾಗಿ ಆತನಿಗೆ ಮುಂಜಿ ಆಗಿದೆಯೇ ಇಲ್ಲವೇ ಎಂದು ಪರೀಕ್ಷೆ ಮಾಡುತ್ತಾರೆ. ಮುಸ್ಲೀಮರಲ್ಲದವರಲ್ಲಿ ಮುಂಜಿ (ಖತ್ನಾ) ಮಾಡುವುದಿಲ್ಲ. ಯಾರು ಮುಂಜಿ ಮಾಡಿಸಿಕೊಂಡಿರುತ್ತಾನೋ ಆತ ಮುಸ್ಲೀಂ ಎಂದುಕೊಳ್ಳುತ್ತಾರೆ. ನೀನು ಸುರಕ್ಷಿತವಾಗಿರಬೇಕು ಎಂದಾದಲ್ಲಿ ನೀನು ಮುಂಜಿ ಮಾಡಿಸಿಕೊಳ್ಳಬೇಕು. ಮುಂಜಿ ಮಾಡಿಸಿಕೊಂಡರೆ ಬಾಂಗ್ಲಾದಲ್ಲಿ ಇರುವಷ್ಟು ಸಮಯ ನಿನಗೆ ಸಮಸ್ಯೆ ಇಲ್ಲ. ಮುಂದಿನ ಅಪಾಯವನ್ನು ತಪ್ಪಿಸಿಕೊಳ್ಳಲೋಸುಗ ಈ ಕಾರ್ಯ...ಅದಕ್ಕೆ ನಿನ್ನನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದು. ತಯಾರಾಗಬೇಕು ನೀನು ಅದಕ್ಕಾಗಿ. ಈ ವಿಷಯವನ್ನು ನಾನು ನಿನಗೆ ಮೊದಲೇ ಹೇಳಬಹುದಿತ್ತು. ಆದರೆ ಸುಮ್ಮನೆ ನೀನು ಗಾಬರಿಯಾಗಬಹುದು ಎಂದು ಹೇಳಲಿಲ್ಲ ಅಷ್ಟೇ' ಎಂದ ಸಲೀಂ ಚಾಚಾ.
         `ಅಲ್ಲಾ ಚಾಚಾ.. ಮುಂಜಿ ಮಾಡಿಸಿಕೊಳ್ಳುವುದು ಅಂದರೆ...' ಚಿಕ್ಕಂದಿನಿಂದ ಆ ಕುರಿತು ಕೇಳಿದ್ದನಾದರೂ ಯಾವುದೇ ಮುನ್ಸೂಚನೆ ಇಲ್ಲದೇ ಸಲೀಂ ಚಾಚಾ ಮುಂಜಿ ಕುರಿತು ಪ್ರಸ್ತಾಪಿಸಿ ಈಗಿಂದೀಗಲೇ ಅದಕ್ಕೆ ತಯಾರಾಗು ಎಂದು ಹೇಳಿದ್ದರಿಂದ ಕೊಂಚ ಗಲಿಬಿಲಿಗೆ ಒಳಗಾಗಿದ್ದ ವಿನಯಚಂದ್ರ.
          `ನಾವು ಜೀವನದಲ್ಲಿ ಅದೆಷ್ಟೋ ನೋವನ್ನು ಸಹಿಸಿಕೊಳ್ಳುತ್ತೇವೆ. ಅಂತವುಗಳ ಎದುರು ಈ ಮುಂಜಿ ಯಾವ ನೋವನ್ನೂ ಕೊಡುವುದಿಲ್ಲ. ನಮ್ಮಲ್ಲಿ ಚಿಕ್ಕ ಚಿಕ್ಕ ಮಕ್ಕಳಿಗೆ ಮುಂಜಿ ಮಾಡುತ್ತಾರೆ ಗೊತ್ತಾ. ಅವರೇ ಸಹಿಸಿಕೊಳ್ಳುತ್ತಾರೆ. ನೀನು ಬೆಳೆದವನು ನಿನಗೆ ಇದನ್ನು ಸಹಿಸಲು ಆಗುವುದಿಲ್ಲವೇ..?' ಎಂದು ಕೇಳಿದಾಗ ಮತ್ತೆ ಮುಜುಗರ ಪಟ್ಟುಕೊಂಡ ವಿನಯಚಂದ್ರ `ಥೋ ಚಾಚಾ.. ಉರಿ ಅಥವಾ ನೋವಿನ ಪ್ರಶ್ನೆಯಲ್ಲ. ನಾನು ಇಷ್ಟು ವರ್ಷಗಳವರೆಗೆ ಬೆಳೆಸಿಕೊಂಡು ಬಂದ ಕಟ್ಟುಪಾಡುಗಳು ಏನೆನ್ನುತ್ತಾವೆಯೋ ಎನ್ನುವ ಭಯ. ಎಂತದ್ದೇ ನೋವನ್ನೂ ನಾನು ಸಹಿಸಿಕೊಳ್ಳಬಲ್ಲೆ. ಆದರೆ ನಂಬಿಕೆಗಳು.. ನಮ್ಮ ಹಿಂದೂಗಳಲ್ಲಿ ಅದನ್ನು ಮಾಡಿಕೊಳ್ಳುವುದು ಅಪರಾಧ ಎನ್ನುವ ಭಾವನೆ ಇದೆ ಚಾಚಾ. ಖತ್ನಾ ಮಾಡಿಕೊಳ್ಳುವುದು ಎಂದರೆ ಧರ್ಮದಿಂದ ಹೊರಕ್ಕೆ ಹೋದ ಎಂಬಂತೆ ನೋಡುತ್ತಾರೆ ಚಾಚಾ' ಎಂದ ಗಲಿಬಿಲಿಯಿಂದ
          `ಬದುಕಿ ಉಳಿದರೆ ತಾನೆ ನಂಬಿಕೆಗಳು, ಧರ್ಮ ಎಲ್ಲ. ಬದುಕಿ ಉಳಿಯುವುದೇ ಅಸಾಧ್ಯ ಎಂದಾದರೆ ನಂಬಿಕೆಗಳಿಗೂ ತಿಲಾಂಜಲಿ ಕೊಡಬೇಕು ಅಲ್ಲವೇ. ನಾವು ಬದುಕಿದರಷ್ಟೇ ನಮ್ಮ ನಂಬಿಕೆಗಳೂ ಜೀವಂತ ಇರುತ್ತವೆ.. ನೀನು ಮುಂಜಿ (ಖತ್ನಾ) ಮಾಡಿಕೊಳ್ಳುವುದು ಖಂಡಿತವಾಗಿಯೂ ತಪ್ಪಲ್ಲ. ನನಗೆ ತಿಳಿದ ಮಟ್ಟಿಗೆ ನಿಮ್ಮ ಧರ್ಮದಲ್ಲಿ ಎಲ್ಲೂ ಮುಂಜಿ ಮಾಡುವುದು ನಿಷಿದ್ಧ ಎಂದು ಹೇಳಿಲ್ಲ.. ಅಲ್ಲವೇ.. ಮತ್ಯಾಕೆ ಹಿಂಜರಿಕೆ.. ಇನ್ನೊಂದು ವಿಷಯ. ನೀನಾಗಿಯೇ ಹೇಳದ ಹೊರತು ನಿನಗೆ ಮುಂಜಿಯಾಗಿದೆ ಎಂದು ಯಾರಿಗೆ ಗೊತ್ತಾಗುತ್ತದೆ? ಸೊಕಾ ಸುಮ್ಮನೆ ನಿನ್ನ ಚೆಡ್ಡಿ ಬಿಚ್ಚಿ ಯಾರು ಅದನ್ನು ನೋಡುತ್ತಾ ಇರುತ್ತಾರೆ ಹೇಳು' ಎಂದ ಚಾಚಾ.
          ಅರೆಘಳಿಗೆಯ ಆಲೋಚನೆಯ ನಂತರ ವಿನಯಚಂದ್ರ ಒಪ್ಪಿಕೊಂಡ. ಆ ಆಸ್ಪತ್ರೆಯ ಹಿರಿಯ ವೈದ್ಯನಾರೋ ವಿನಯಚಂದ್ರನನ್ನು ಒಳಗೆ ಕರೆದೊಯ್ದು ತೊಟ್ಟಿದ್ದ ಪೈಜಾಮಾ ಬಿಚ್ಚಿಸಿಯೇ ಬಿಟ್ಟ. ಒಂದೆರಡು ಕ್ಷಣದಲ್ಲಿಯೇ ಶಿಶ್ನ ಮುಂದೊಗಲನ್ನು ಕತ್ತರಿಸಿ ಮುಂಜಿ ಕಾರ್ಯವನ್ನು ಮುಗಿಸಿದ.  ಈ ಕ್ಷಣದಲ್ಲಿಯೇ ವಿನಯಚಂದ್ರನ ಮನಸ್ಸಿನಲ್ಲಿ `ಸಲೀಂ ಚಾಚಾ ಯಾಕೋ ನಮ್ಮ ಮನಸ್ಸನ್ನು ಪರಿವರ್ತಿಸಿ ತನ್ನನ್ನು ಧರ್ಮಾಂತರ ಮಾಡಲು ಯತ್ನಿಸುತ್ತಿದ್ದಾನೆಯೇ? ಒಳ್ಳೆಯ ಮಾತುಗಳನ್ನು ಆಡಿ, ಒಳ್ಳೆಯವನಂತೆ ವರ್ತಿಸಿ ಸಹಾಯ ಮಾಡುವ ನೆಪದಲ್ಲಿ ತಮ್ಮನ್ನು ಆತನ ಧರ್ಮಕ್ಕೆ ಸೇರಿಸಿಕೊಳ್ಳಲು ಹುನ್ನಾರ ಮಾಡುತ್ತಿದ್ದಾನೆಯೇ? ಈ ಮುಂಜಿ ಕಾರ್ಯವೂ ಆತನ ಹುನ್ನಾರದ ಒಂದು ಭಾಗವೇ? ಯಾಕೋ ಮುಂದಿನ ದಿನಗಳಲ್ಲಿ ಹುಷಾರಾಗಿರಬೇಕು...' ಎಂದುಕೊಂಡ.
          ಸಲೀಂ ಚಾಚಾ ಮುಂಜಿ ಮಾಡಿದ್ದ ವೈದ್ಯನಿಗೆ ದುಡ್ಡುಕೊಟ್ಟು ಹೊರಡಲು ಅನುವಾದ. ಆ ವೈದ್ಯ ಗಾಯಗೊಂಡ ಭಾಗಕ್ಕೆ ಹಚ್ಚಲು ಅದೇನೋ ಚಿಕ್ಕ ಟ್ಯೂಬಿನ ಮುಲಾಮನ್ನು ನೀಡಿದ. ವಿನಯಚಂದ್ರನಿಗೆ ಕತ್ತರಿಸುವಾಗ ಉರಿಯಾಗದಿದ್ದರೂ ಈಗ ಉರಿಯಾಗಲಾರಂಭಿಸಿತ್ತು. `ಚಲ್ ಬೇಟಾ.. ದೊಡ್ಡ ಕೆಲಸ ಮುಗಿಯಿತು. ಇನ್ನು ಯಾವುದೇ ಅಪಾಯವಿಲ್ಲ.. ಇನ್ನು ಯಾರೇ ಬಂದರೂ ಬಾಂಗ್ಲಾವಿರಲಿ ವಿಶ್ವದ ಯಾವುದೇ ಕಡೆ ನೀನು ಚಹರೆ ಬದಲಿಸಿಕೊಂಡಿದ್ದರೂ ಮುಸ್ಲೀಮನಲ್ಲ ಎಂದು ಹೇಳುವುದು ಕಷ್ಟ...' ಎಂದ. ವಿನಯಚಂದ್ರನಿಗೆ ಮತ್ತೊಮ್ಮೆ ಮನಸ್ಸು ಧಸಕ್ಕೆಂದಿತು. ಕತ್ತರಿ ಹಾಕಿದ್ದ ಜಾಗದಲ್ಲಿ ಉರಿ ಹೆಚ್ಚಾಗಿತ್ತು.

(ಮುಂದುವರಿಯುತ್ತದೆ...)

Saturday, September 13, 2014

ಹರಟೆ

ಒಂದು ಇತಿಹಾಸ

ಇತ್ತೀಚೆಗೆ ಪರಿಚಯದವರ ಜೊತೆಗೆ ಮಾತನಾಡುತ್ತಿದ್ದೆ.
ಅವರೊಂದು ಇಂಟರೆಸ್ಟಿಂಗ್ ವಿಷಯವನ್ನು ತಿಳಿಸಿದರು.

ಶಿರಸಿ ತಾಲೂಕಿನ ಕರೂರಿನಲ್ಲಿ ಒಂದು ಕೋಟೆಯಿರುವ ವಿಷಯ ನನಗೆ ಬಾಲ್ಯದಿಂದಲೇ ತಿಳಿದಿದೆ.
ದಿನದಿಂದ ದಿನಕ್ಕೆ ಈ ಕೋಟೆ ನನ್ನಲ್ಲಿ ಅಪಾರ ಕುತೂಹಲವನ್ನೂ ಹುಟ್ಟುಹಾಕಿತ್ತು.
ಅದನ್ನು ನೋಡಬೇಕು ಎಂದುಕೊಂಡು ಎಂದು ಹಲವು ಸಾರಿ ಕರೂರಿನ ಕಡೆಗೆ ಪಯಣ ಬೆಳೆಸಿದ್ದೆ.
ಆದರೆ ಕಾರಣಾಂತರಗಳಿಂದ ಆಗಲಿಲ್ಲ.
ನಮ್ಮ ಮಾತು ಕರೂರಿನ ಗೌಡರಾಳ್ವಿಕೆಯ ಕಡೆಗೆ ಸರಿಯಿತು.
ಕರೂರಿನ ಗೌಡರು ಸೋದೆಯ ಅರಸರ ಸಾಮಂತರು ಎಂದು ತಿಳಿಸಿದರು ಅವರು.
ಅವರ ಕೋಟೆ ಸೋಂದಾ ಕೋಟೆಯಂತೆ ಇದೆ ಎನ್ನುವ ಮಾಹಿತಿ ತಿಳಿಸಿ ಕೋಟೆಯ ಸುತ್ತ ಮಾಸ್ತಿಗಲ್ಲುಗಳು, ವೀರಗಲ್ಲುಗಳೂ ಇವೆ. ಸ್ಥಳೀಯವಾಗಿ ಪ್ರಭುದೇವರು, ಆಂಜನೇಯನ ಗುಡಿಯನ್ನು ನಿರ್ಮಾಣ ಮಾಡಿದ್ದು ಇವರೇ ಎಂಬ ಮಾಹಿತಿಯನ್ನು ಅವರು ನೀಡಿದರು. 
ನನಗೆ ಕುತೂಹಲಗೊಂಡು ಕೇಳಿದೆ. 
ನನ್ನೂರಿನಿಂದ ಕರೂರು ನಾಲ್ಕು ಕಿ.ಮಿ.
ಕರೂರಿನ ದಿಕ್ಕಿನಲ್ಲಿ ಸಮಾ ವಿರುದ್ಧವಾಗಿ ನಾಲ್ಕು ಕಿ.ಮಿ ಹೋದರೆ ಬಾಳೂರು.
ಅಲ್ಲೂ ಒಂದು ಕೋಟೆಯಿತ್ತು. ಅಲ್ಲೂ ಗೌಡರ ಆಳ್ವಿಕೆಯಿತ್ತು. ಈಶ್ವರ, ಸುಬ್ರಹ್ಮಣ್ಯ, ಗಣಪತಿಯ ದೇವಾಲಯ ಕಟ್ಟಿಸಿದವರು ಅವರು. ಹೆಸರಾಂತ ಗುಡ್ಡೇತೋಟದ ಕೋಟೆ ವಿನಾಯಕನ ದೇವಾಲಯ ಕಟ್ಟಿದ್ದು ಇದೇ ಗೌಡರು.
ನನ್ನೂರು ಬಾಳೂರು ಗೌಡರ ಆಳ್ವಿಕೆಗೆ ಬರುತ್ತಿತ್ತೋ ಅಥವಾ ಕರೂರು ಗೌಡರ ಅಧೀನಕ್ಕೆ ಬರುತ್ತಿತ್ತೋ ಎಂಬುದು ನನ್ನೊಳಗಿನ ಕುತೂಹಲವಾಗಿ ಅವರ ಬಳಿ ಕೇಳಿದೆ.
ಅದಕ್ಕವರು ಗೊತ್ತಿಲ್ಲ ಎಂದರು. ಕೊನೆಗೆ ಯಾರದ್ದೇ ಆಳ್ವಿಕೆಗೆ ಬರಲಿ. ಸೋದೆ ಅರಸರ ಸಾಮಂತರು ಇವರಾದ ಕಾರಣ ಸೋದೆ ಅರಸರ ಅಧೀನಕ್ಕೆ ಬರುತ್ತದೆ ಎಂದರು. ನಾನು ಹುಂ ಎಂದು ಸುಮ್ಮನಾದೆ.

ಕರೂರು ಅರಸರ ಬಗ್ಗೆ ಇನ್ನೊಂದು ವಿಷಯವನ್ನು ಅವರು ತಿಳಿಸಿದರು.
ಕರೂರು ಅರಸ ತನ್ನ ಮಗಳನ್ನು ಆಂದ್ರಪ್ರದೇಶದ ನಾಗಾರ್ಜುನಕೊಂಡಕ್ಕೆ ಮದುವೆ ಮಾಡಿಕೊಟ್ಟಿದ್ದನಂತೆ.
ಕರೂರು ಅರಸನ ಮಗಳ ಮನೆತನದವರು ಇಂದಿಗೂ ಇದ್ದಾರಂತೆ ಎಂದರು.
ನನಗೆ ಅಚ್ಚರಿಯಾಯಿತು. ಅವರನ್ನು ಹುಡುಕಿ ಹೋಗುವ ಸಾಹಸ ಮಾಡುವ ತುಡಿತ ಹುಟ್ಟಿತು.
ಸುಮ್ಮನೇ ಕೇಳಿದೆ.
`ಅಲ್ಲಾ ಮಾರಾಯ್ರೆ.. ಈಗ ಬಸ್ಸು ಕಾರುಗಳಿವೆ. ಅವುಗಳ ಮೇಲೆ  ಕರೂರಿನಿಂದ ಅಜಮಾಸು 500 ಕಿ.ಮಿ ದೂರವಿರುವ ನಾಗಾರ್ಜುನ ಕೊಂಡಕ್ಕೆ ಹೋಗಿ ಹುಡುಕಿ ಅದ್ಹೇಗೆ ಮಗಳನ್ನು ಕೊಟ್ಟರು? ಅಲ್ಲ ಅವರು ಕುದುರೆ ಮೇಲೆ ಹೋದರು ಕನಿಷ್ಟ ಒಂದು ವಾರ ಬೇಕಲ್ಲ. ಇನ್ನು ನಡೆದುಕೊಂಡು ಹೋದರೆ ಒಂದು ತಿಂಗಳೇ ಬೇಕು. ನಡುವೆ ಕೃಷ್ಣಾ, ತುಂಗಭದ್ರಾ ನದಿಗಳು ಸಿಗುತ್ತವೆ. ಆಗ ಆ ನದಿಗಳು ಈಗಿನದ್ದಕ್ಕಿಂತ ಹೆಚ್ಚು ಅಬ್ಬರಿಸುತ್ತ ಹರಿಯುತ್ತಿದ್ದವು. ಅದನ್ನು ಹೇಗೆ ದಾಟಿದರು? ಅಲ್ಲ ಕರೂರಿನ ಗೌಡರು ನಾಗಾರ್ಜುನ ಕೊಂಡದ ವರೆಗೆ ಹೋಗಿ ತಮ್ಮ ಮಗಳಿಗೆ ಅನುರೂಪ ಗಂಡನ್ನು ಹುಡುಕಿ, ಆ ಗಂಡು ಅಲ್ಲಿಂದ ಇಲ್ಲಿಗೆ ಬಂದು ಹೆಣ್ಣು ನೋಡಿ, ಮದುವೆ ನಿಶ್ಚಯಿಸಿ, ಮದುವೆಯಾಗಿ ಮತ್ತೆ ಮರಳಿ ಹೋಗಲು ಏನಿಲ್ಲವೆಂದರೂ ಕನಿಷ್ಟ ಮೂರ್ನಾಲ್ಕು ತಿಂಗಳೇ ಬೇಕಾಗಿರಬಹುದಲ್ಲವೇ? ಇನ್ನು ತಂದೆ-ತಾಯಿ ಮಗಳನ್ನು ನೋಡಲು ಹೋಗಬೇಕು ಅಥವಾ ಮಗಳು ತವರಿಗೆ ಮರಳಬೇಕು ಎಂದರೆ ಮತ್ತೆ ತಿಂಗಳುಗಟ್ಟಲೆ ಪಯಣ ನಡೆಯಲೇಬೇಕು.. ಎಂತಾ ಕಾಲ ಮಾರಾಯ್ರೆ..' ಎಂದೆ.
ಅವರೂ ಹೌದು.. ಎಂದು ವಿಸ್ಮತರಾದರು.

ಕೊನೆಗೆ ಮೊನ್ನೆ ಇದೇ ವಿಷಯವನ್ನು ಶಿರಸಿಯ ಇತಿಹಾಸ ತಜ್ಷ ಲಕ್ಷ್ಮೀಶ ಹೆಗಡೆ ಅವರ ಮುಂದಿಟ್ಟೆ.
ಅವರು ಹೇಳಿದ್ದು `ಅಲ್ಲ ಗಂಡನ್ನು ಹುಡುಕಿಕೊಂಡು ಕರೂರು ಗೌಡರು ನಾಗಾರ್ಜುನ ಕೊಂಡಕ್ಕೆ ಹೋದರು ಅಂತ ಹೇಗೆ ಭಾವಿಸುತ್ತೀರಿ? ಸೋದೆ ಅರಸರಿಗೆ ನಾಗಾರ್ಜುನ ಕೊಮಡದ ಅರಸರ ಮಿತ್ರರಿದ್ದು ಕರೂರು-ನಾಗಾರ್ಜುನಕೊಂಡದ ನಡುವೆಯೆಲ್ಲೋ ಭೇಟಿಯಾಗಿ, ಸ್ನೇಹ ಬೆಳೆದು ಕರೂರು ಅರಸರು ಮಗಳ ಮದುವೆ ಪ್ರಸ್ತಾಪ ಮಾಡಿರಬಹುದಲ್ಲ.. ಹಾಗೆಯೇ ಅಲ್ಲಿಂದಲೇ ಬಂದು ಮದುವೆ ಮಾಡಿಕೊಂಡು ಹೋಗಿರಬಹುದು..' ಎಂದರು.
ನನಗೆ ಹೌದಲ್ಲ ಅನ್ನಿಸಿತಾದರೂ ಅರಸರ ಮಗಳು ತವರಿಗೆ ಬರುವುದು ಹಾಗೂ ಕರೂರು ಅರಸರು ನಾಗಾರ್ಜುನ ಕೊಂಡಕ್ಕೆ ಮಗಳ ನೋಡುವುದನ್ನು ಹೋಗುವುದರ ಬಗ್ಗೆ ಕೇಳಿದೆ.
ಅದಕ್ಕವರು `ಆಗ ಕುದುರೆಗಳೇ ಸಂಚಾರಕ್ಕೆ ಬಳಕೆಯಾಗುತ್ತಿದ್ದವು. ಕುದುರೆಗಳು ನಮ್ಮ ಕಾರುಗಳಿಗಿಂತ ವೇಗವಾಗಿ ಓಡಬಲ್ಲ ತಾಕತ್ತು ಹೊಂದಿವೆ. ಈಗಿನದಕ್ಕಿಂತ ಮೂರ್ನಾಲ್ಕು ದಿನಗಳು ವಿಳಂಬವಾಗಿ ಆಗಿನ ಪ್ರಯಾಣ ಇರುತ್ತಿತ್ತು. ತೀರಾ ತಿಂಗಳುಗಟ್ಟಲೆ ಪ್ರಯಾಣ ನಡೆಯುವುದಿಲ್ಲ.. ಕುದುರೆಗಳು ಸಲೀಸಾಗಿ ನದಿ ದಾಟುತ್ತವೆ..' ಎಂದರು. ಅವರ ಉತ್ತರ ನನಗೆ ಸಮಾಧಾನ ತಂದಿತ್ತು.


ಆದರೆ ನಾಗಾರ್ಜುನ ಕೊಂಡದಲ್ಲಿ ಇರುವ ಕರೂರು ಗೌಡರ ಮಗಳ ಕುಟುಂಬಸ್ಥರನ್ನು ಹುಡುಕುವ ಹಂಬಲ ಮನಸ್ಸಿನಲ್ಲಿ ಮೂಡುತ್ತಿದೆ. ನಾಗಾರ್ಜುನ ಕೊಂಡ ಸೆಳೆಯುತ್ತಿದೆ. 

********


`ಅಣಾ ನಾನೊಂದು ಧಾರವಾಹಿ ಮಾಡೋಣ ಅಂತಿದ್ದೇನೆ' ಎಂದಳು ತಂಗಿ.
`ಎಂತದ್ದೇ ಅದು?' ಎಂದೆ ನಾನು.
`ವಿನಯನ ಲೈಫ್ ಸ್ಟೋರಿ ಅಂತ ಮಾಡೋಣ ಅಂದುಕೊಂಡಿದ್ದೇನೆ' ಎಂದಳವಳು.
`ಶಿ.. ಬ್ಯಾಡ.. ನನ್ ಲೈಫ್ ಸ್ಟೋರಿ ಅಷ್ಟು ಇಂಟರೆಸ್ಟಿಂಗ್ ಆಗಿಲ್ಲ. ಟಿ.ಆರ್.ಪಿ. ಬರೋದಿಲ್ಲ.. ಬ್ಯಾಡ..ಬಿಡು' ಎಂದೆ.
`ಅಯ್ಯೋ.. ಮಾರಾಯಾ.. ಯಾರಂದಿದ್ದು ನಿನ್ ಲೈಫ್ ಸ್ಟೋರಿ ಅದರಲ್ಲಿ ಇರ್ತದೆ ಅಂತ?' ಎಂದಳು ಅವಳು.
`ಮತ್ತೆ... ನನ್ ಹೆಸರು ಇಟ್ಟಿದ್ದೀಯಲ್ಲೆ...' ಎಂದೆ.
`ಅಯ್ಯೋ ಮಾರಾಯಾ.. ಹೆಸರಷ್ಟೇ ವಿನಯನ ಲೈಫ್ ಸ್ಟೋರಿ ಅಂತ. ಕಥೆಯಲ್ಲೆಲ್ಲೂ ನೀನು ಬರೋದಿಲ್ಲ. ನಿನಗೆ ಸಂಬಂಧಿಸಿದ್ದೂ ಅಲ್ಲ. ಒಂದು ಕೌಟುಂಬಿಕ ಧಾರವಾಹಿ ಅದು. ಸುಮ್ನೆ ನೆಪಕ್ಕಷ್ಟೆ ನಿನ್ ಹೆಸರು.' ಎಂದಳವಳು.
ನಾನು ಪೆಚ್ಚಾಗಿ ನೋಡುತ್ತಿದ್ದಾಗಲೇ ಅವಳು ಮುಂದುವರಿಸಿದಳು `ಅಲ್ಲಾ.. ಈಗಿನ ಎಷ್ಟೋ ಸಿನಿಮಾಗಳನ್ನು ನೋಡು ಕತೆಗೂ ಟೈಟಲ್ಲಿಗೂ ಸಂಬಂಧವೇ ಇರೋದಿಲ್ಲ. ಎಂತದ್ದೋ ಕಥೆ ಇನ್ನೆಂತದ್ದೋ ಹೆಸರು. ಹಂಗೆ ಈ ಧಾರವಾಹಿ ಕೂಡ. ಹೆಸರಷ್ಟೇ ನಿಂದು. ಕಥೆ ಇನ್ನೇನೋ. ನಿಂಗೆ ಬೇಜಾರಾಗ್ತದೆ ಅಂತಾದ್ರೆ ಎಲ್ಲಾದರೂ ಧಾರವಾಹಿಯ ಒಂದೆರಡು ಸಾಲಲ್ಲಿ ನಿನ್ನ ಲೈಫು ಅನ್ನೋ ಒಂದೆರಡು ಸಾಲಿನ ಡೈಲಾಗು ಸೇರಿಸಿಬಿಡ್ತೀನಿ.. ಥೇಟು ಈಗಿನ ಕನ್ನಡ ಸಿನೆಮಾಗಳಲ್ಲಿ ಬರೋ ಥರಾ..' ಎಂದಳು.
ನಾನು ಪೆಚ್ಚಾದೆ. ತಂಗಿ ನಕ್ಕಳು..!



********


ವಾದ್ರಾ ಬಿಸಿನೆಸ್. :

2004ರಿಂದ2014ರ ನಡುವೆ ಪಂಜಾಬಿನಲ್ಲಿ ನಾನು ತಗೊಂಡಿದ್ದ ನೂರಾರು ಎಕರೆ ಜಮೀನಿತ್ತು.
ನನ್ನಲ್ಲಿ ಸಿಕ್ಕಾಪಟ್ಟೆ ಅಕೌಂಟ್ಸ್ ಇತ್ತು ಆದ್ರೂ ದುಡ್ಡು ಬೇಕಿತ್ತು.
ತಕ್ಷಣ ನನ್ನ ಮೊಬೈಲಿನಲ್ಲಿ ನನ್ನ ಜಮೀನಿನ ಐದಾರು ಪೋಟೋ ತೆಗೆದೆ.
ಮೋಬೈಲಿನಲ್ಲಿ OLX appsನ ಡೌನ್ ಲೊಡ್ ಮಾಡದೆ.
ಪೋಟೋ ಅಪ್ಲೋಡ್ ಮಾಡದರೆ `ಬಿಟ್ಟಿ ಜಮಿನು ಬೇಕಾದವ್ರು ತಗೋಳಿ..' ಅಂತ ಕ್ಯಾಚಿ ಟೈಟಲ್ ಕೊಟ್ಟೆ
ಶೇರ್ ಮಾಡದೆ.. ನಾನ್ ಶೇರ್ ಮಾಡಿದ ಅರ್ಧ ಗಂಟೇಲೆ ಹೆಸರಾಂತರಿಂದ, ಖ್ಯಾತನಾಮರಿಂದ, ವಿದೇಶಿಯರಿಂದೆಲ್ಲ ಪೋನ್ಸ್ ಬರೋಕೆ ಶುರುವಾಯ್ತು.
ಒಂದಿಬ್ಬರು ಒಳ್ಳೆ ರೇಟಿಗೆ ಜಮೀನು ತಗೋಳೋಕೆ ತಯಾರಾಗಿದ್ರು.
ನಾನು ಅವರಿಗೆ ಕೂಡಲೇ ಜಮೀನು ಮಾರಿಬಿಟ್ಟೆ.
ಬಂದ ದುಡ್ಡಲ್ಲಿ ಅರ್ಧ ಅತ್ತೆಗೆ ಕೊಟ್ಟೆ.

ಈ ನಡುವೆ ಹೆಂಗೆ ಮಾರಾಟ ಮಾಡ್ಬೇಕು ಗೊತ್ತಾ?
OLX..!!

Friday, September 12, 2014

ಸಾಗುವ ಬಾ ಜೊತೆಗಾರ

ಸಾಗುವ ಬಾ ಜೊತೆಗಾರ
ಮೆರೆವ ಮರೀಚಿಕೆಯ
ಮರುಳು ಗಾಡಿನ ನಾಡೊಳಗೆ |

ತಲೆಯ ಮೇಲೆ ಸುಡುವ
ರಣ ಬಿಸಿಲು, ಬಸವಳಿಕೆ
ಬಾಯಾರಿಕೆ, ಜೊತೆಗಿರುವ
ಕಷ್ಟ-ನಕ್ಷತ್ರಿಕರು |

ಸಾಗುವ ಬಾ ಜೊತೆಗಾರ.
ಅಳುಕಿಲ್ಲ, ಬಳುಕಿಲ್ಲ
ಕೊನೆಗಾಣದ ರವೆ ರವೆಯ
ಮರಳ ಕಣ ಕಣವ
ಪಾದದಿಂದೊದ್ದು ಸಾಗುವಾ,
ಗಮ್ಯ ತಲುಪುವಾ |

ಹಲ್ಕಿರಿಯುವ ನೆರಳು
ಸಾವ ಸೆಳವು,
ಹಾಗೆಯೇ ಇರಲಿ ಬಿಡು |
ಮೆರೆವ ಮರುಳು
ಮರಳು ದಿಬ್ಬವ
ಮರೆತು ಬಿಡು |

ನಾನು ನೀನಷ್ಟೇ
ಜೊತೆಗಾರರು ಕೊನೆತನಕ.
ಅಳುಕ ಬೇಡ ನೀ,
ಸ್ವರ್ಗದ ಮೆಟ್ಟಿಲೇರುವವರೆಗೆ
ಧರ್ಮರಾಜನ ಜೊತೆಗೊಂದು
ಶ್ವಾನವಿತ್ತಲ್ಲವೇ ಹಾಗೆ
ನನ್ನೊಡನೆ ನೀನು |

ಬಿಡಿಸದ ಬಂಧ, ನಂಟು
ಗಟ್ಟೀ ಛಲ, ದಿಟ್ಟತನ
ಸಾಗುವ ಬಾ ಜೊತೆಗಾರ |

**

(ಈ ಕವಿತೆಯನ್ನು ಬರೆದಿರುವುದು 04-02-2007ರಂದು ದಂಟಕಲ್ಲಿನಲ್ಲಿ)