(PHOTO CLICK : VINAY DANTKAL) |
ಶಿರಸಿಯಲ್ಲಿ ಅಧಿದೇವತೆ ಮಾರಿಕಾಂಬೆ ನೆಲೆ ನಿಂತ ಬಗ್ಗೆ ಕೂಡ ಅನೇಕ ಕಥೆಗಳಿವೆ. ಹಾಡುಗಳ ರೂಪದಲ್ಲಿಯೂ ಕೂಡ ಈ ಕತೆ ತಲೆಮಾರಿನಿಮದ ತಲೆಮಾರಿಗೆ ಹರಿದು ಬಂದಿರುವುದು ವಿಶೇಷ. ಉತ್ತರ ಕನ್ನಡದ ವಿಶೇಷ ಜಾನಪದ ಕಲೆಯಾದ ಡೊಳ್ಳು ಕುಣಿತ, ಬೇಡರ ವೇಷ ಈ ಮುಂತಾದ ಸಂದರ್ಭದಲ್ಲಿಯೂ ಕೂಡ ಮಾರಿಕಾಂಬೆಯ ಬಗೆಗಿರುವ ಸಾಂಪ್ರದಾಯದ ಹಾಡುಗಳು ಕೇಳಿ ಬರುತ್ತವೆ. ಜಾನಪದ ನೃತ್ಯವನ್ನು ಮಾಡುವಾಗ ತಾಯಿ ಮಾರಿಕಾಂಬೆಯನ್ನು ಭಜಿಸುವುದೂ ಕೂಡ ವಾಡಿಕೆಯಾಗಿದೆ.
ಕುಣಿತೀನ ಅಂತ ಕಾಲಗೆಜ್ಜೆ ಕಟ್ಟಿಕೊಂಡೆ
ಕುಣಿಯಾಕ ಕಾಲು ಬರುವಲ್ವೋ ಮಾರೆವ್ವ
ಕಾಲಿಗೆ ಮತಿಯ ಕೊಡಿಸವ್ವ, ಮಾರವ್ವ...
ಎನ್ನುವ ಹಾಡೊಂದು ಡೊಳ್ಳು ಕುಣಿತದ ಸಂದರ್ಭದಲ್ಲಿ ಕೇಳಿ ಬರುತ್ತದೆ. ದೇವಿಯ ಜಾತ್ರೆಯ ಸಂದರ್ಭದಲ್ಲಿ ಡೊಳ್ಳು ಬಾರಿಸುವವರು ಹಾಗೂ ಕಥೆ ಹೇಳುವ ಕುರುಬರು ಈ ಹಾಡುಗಳನ್ನು ಹೇಳುತ್ತಾರೆ. ಹಾಡಿನ ಮೂಲವೇ ಮಾರಿಕಾಂಬೆಯನ್ನು ಪ್ರಸನ್ನಳಾಗು ಎನ್ನುವಂತೆ ಬೇಡಿಕೊಳ್ಳುತ್ತಾರೆ. ಲಯಬದ್ಧವಾಗಿ ಹಾಡಲ್ಪಡುವ ಈ ಹಾಡಿಗೆ ತಕ್ಕಂತೆ ಡೊಳ್ಳು ಕುಣಿತಗಾರರು ಹೆಜ್ಜೆ ಹಾಕುವುದೂ ಕೂಡಡ ವಿಶೇಷ. ಇದಲ್ಲದೇ ಮಾರಿಕಾಂಬಾ ದೇವಿಯನ್ನು ಇನ್ನೂ ಅನೇಕ ರೀತಿಯಿಂದ ಸ್ತುತಿಸಲಾಗುತ್ತದೆ.
ಆದಿ ಮಾಯಾ ರೂಪದಿ | ಪ್ರಣವದಿ ಸೇರಿ |
ಭೇದ ಭೇದಾಕಾರದಿ ||
ಮೇದಿನಿಯೊಳವತರಿಸಿ ಭಕ್ತರ | ನಾದರಿಸಿ
ತ್ರೈ ಮೂತರ್ಿಯವರ |
ವೇದಶಾಸ್ತ್ರದೊಳೊಲಿದು ನೀಗತಿ|| ಆದಿ
ಮಂಗಳೆ ಜಯತು
ಶ್ರೀಮಹ | ದೇವಿಗಾರತಿ ಎತ್ತಿರೆ ||
ಎಂಬಂತಹ ದೇವಿಗೆ ಪೂಜೆ ಕೈಗೊಳ್ಳುವ ಹಾಡುಗಳೂ ಕೂಡ ಜನಜನಿತದಲ್ಲಿದೆ. ಮಾರಿಕಾಂಬೆ ದೇವಿ ಭೂಮಿಗೆ ಅವತರಿಸಿ ಬಂದಿರುವುದು, ದೇವಿ ಭಕ್ತರನ್ನು ಉದ್ಧರಿಸುವುದು ಹಾಗೂ ದೇವಿಯನ್ನು ಪ್ರಸನ್ನಗೊಳಿಸುವ ಬಗ್ಗೆ ಇಂತಹ ಗೀತೆಗಳಲ್ಲಿ ವರ್ಣನೆ ಮಾಡಲಾಗಿದೆ. ಅಲ್ಲದೇ ವೇದಶಾಸ್ತ್ರ ಪುರಾಣಗಳಲ್ಲಿ ದೇವಿಯ ಬಗ್ಗೆ ವರ್ಣನೆ ಮಾಡುವುದರ ಬಗ್ಗೆ ಗೀತೆ ಹೇಳುತ್ತದೆ.
ನಾ ಬರೋ ದಾರಿಯ ದೊರು ಮೆಟ್ಟಿ ಕುಂಕುಮ
ಚೆಲ್ಲಿ
ರಾಗುವೇ ಬಿದ್ದಿದೆಯೊ ರಣದಲ್ಲಿ || ಶಿರಸಿಯ
ಭೂಮಿಯ ದೇವತೆಯ ತಳದಲ್ಲಿ ||
ಈ ಹಾಡಿನಲ್ಲಿ ಶಿರಸಿಯ ಮಾರಮ್ಮನನ್ನು ಭೂಮಿದೇವಿ ಎಂದೇ ಸ್ತುತಿ ಮಾಡಲಾಗಿದೆ. ಅಲ್ಲದೇ ಮಾರಮ್ಮನನ್ನು ಸಾಕ್ಷಾತ್ ಪಾರ್ವತಿ ದೇವಿ ಎಂದೇ ವರ್ಣನೆ ಮಾಡಿರುವುದು ವಿಶೇಷ. ಜಾತ್ರೆಯ ದಾರಿಯಲ್ಲಿ ಬರುವಾಗ ಶಿರಸಿಯ ಮಾರಮ್ಮನಿಗೆ ಕರಿಮಣಿ, ಕುಂಕುಮಗಳನ್ನು ಅಪರ್ಿಸಿದ ರಾಶಿಯನ್ನು ಭಕ್ತೆಯರ ದಂಡು ಕಂಡ ತಕ್ಷಣ ಇಂತಹ ವರ್ಣನೆಯ ಹಾಡುಗಳನ್ನು ಹಾಡುತ್ತಾರೆ ಎಂಬ ನಂಬಿಕೆಯಿದೆ.
ಸೋದಿಗ್ಹೋದೋರಿಗೇ, ಸೂಡಿದ್ಹೂಗು ಬಾಡದೇ
ಅಂಗಾಂಗೆ ಮುಳ್ಳೂ ಮುರಿಯದೇ || ಬಂದರೇ
ಸಿರುಸೀ ಸೇವಮ್ಮನಾ ಹರಕೀಯೇ
ಸಿರುಸೀ ಸೇವಮ್ಮನ್ ಹರಕೀಯೇನಂದೀರೋ
ಕೋಣನ ಮೇನೇ ಕುರಿಕೋಳೀ ||
ಹಿಂದೆ ಮಾರಿಕೋಣನನ್ನು ಕಡಿಯು ಕಾಲದಲ್ಲಿ ಕಟ್ಟಿ ರೂಢಿಯಾಗಿದ್ದ ಹಾಡು ಇದು. ಜನಸಾಮಾನ್ಯರ ಹರಕೆ ಕುರಿ ಕೋಳಿಗಳನ್ನು ಬಲಿ ಕೊಡುವುದು. ಇಲ್ಲಿ ಸೋದೆಗೆ ಹೋದವ ಗರತಿಯ ಗಂಡ ಎಂಬ ಅರ್ಥವನ್ನು ನೀಡುತ್ತದೆ. ಈ ಕಾರಣದಿಂದ ಇಲ್ಲಿ ಒಬ್ಬನನ್ನೇ ಬಹುವಚನದಿಂದ ಕರೆಯಲಾಗುತ್ತದೆ. ಶಿರಸಿಯಲ್ಲಿ ಮಾರಮ್ಮನ ಭಕ್ತ-ಭಕ್ತೆಯರಾದ ಅಸಾದಿಗಳು ಮಾರಮ್ಮನ ಹಬ್ಬದಲ್ಲಿ ದೇವಸ್ಥಾನದ ಮುಂದೆ ದೇವಿಯನ್ನು ಹಾಡಿನ ಮೂಲಕ ಹೊಗಳುತ್ತಾರೆ. ವಿಶೇಷವೆಂದರೆ ದೇವಿಯನ್ನು ಇವರು ಹಾಡಿನ ಮೂಲಕವೇ ಬಯ್ಗುಳವನ್ನೂ ಮಾಡುತ್ತಾರೆ.
ಶಿರಸಿಯಲ್ಲಿ ಮಾರಮ್ಮ ನೆಲೆ ನಿಂತ ಬಗ್ಗೆಯೂ ಕೂಡ ಹಲವು ಹಾಡುಗಳು ಪ್ರಚಲಿತದಲ್ಲಿದೆ. ಅಸಾದಿಗಳು ಕೈಯಲ್ಲಿ ಹಲಗೆಯನ್ನು ಹಿಡಿದು ಶಿರಸಿಯ ತುಂಬ ಹಾಡು ಹೇಳುತ್ತಾ ತಿರುಗುವುದು ವಿಶೇಷ. ತನ್ನ ಗಂಡನನ್ನೇ ಕೊಂದು, ನಂತರ ಕೆಂಡದಲ್ಲಿ ಧುಮುಕಿ ಮಹಾಸತಿಯಾಗಿ ದೇವತೆಯಾದ ಛಲಗಾತಿ ಶಿರಸಿಯ ಮಾರಮ್ಮ. ಇಂತಹ ಮಾರಮ್ಮನನ್ನು ಮಹಿಷಾಸುರ ಮಧರ್ಿನಿಯಾದ ಪಾರ್ವತಿಗೂ ಹೋಲಿಕೆ ಮಾಡಲಾಗುತ್ತದೆ. ಮಾರಮ್ಮನನ್ನು ಇಲ್ಲಿ ಸಿರುಸಿಯ ಸೇವಮ್ಮ ಎಂದು ಕರೆಯುವುದೂ ಕೂಡ ವಿಶೇಷ.
ಬಂಡಿಗಾಲಿಯ ಮೇನೇ ಬಂದಳಾ ದುರುಗಮ್ಮಾ
ಗೆಂಡದಾ ಕಿಡಿಯೇ ಉದುರತ್ತೆ || ದುರುಗಮ್ಮಾ
ಬಂದಳೀ ರಾಜಿ ಬೆಳಗುತ್ತೆ ||
ಎಂಬ ಹಾಡಿನಲ್ಲಿ ಬಂಡಿ ಹಬ್ಬ ಮಾಡುವ ಕಾಲದಲ್ಲಿ ಅಮ್ಮನವರ ಮೂತರ್ಿಯನ್ನು ನಾಲ್ಕು ಗಾಲಿಗಳುಳ್ಳ ಸಣ್ಣ ಬಂಡಿಯ ಮೇಲೆ ಮೆರವಣಿಗೆ ಮಾಡುತ್ತಿದ್ದ ದೃಶ್ಯವನ್ನು ನೆನಪಿಸುತ್ತದೆ. ಇಲ್ಲಿ ಗೆಂಡದಾ ಎಂದರೆ ಕೆಂಡದ ಕಿಡಿಯೇ ಎನ್ನುವ ಅರ್ಥವಿದೆ. ಅಂದರೆ ದೇವಿಯ ಮುಂಭಾಗದಲ್ಲಿ ಕೆಂಡ ಹಾಯುವ ಸಂಪ್ರದಾಯವನ್ನು ಹಾಡಿನಲ್ಲಿ ಬಿಂಬಿಸುತ್ತದೆ. ಅಲ್ಲದೇ ಅಪರೂಪದ ಸಂಪ್ರದಾಯಗಳನ್ನೂ ಕೂಡ ಇಂತಹ ಹಾಡುಗಳು ವಿವರಿಸುತ್ತ ಹೋಗುವುದು ವಿಶೇಷ.
ಜಾನಪದ ಹಾಡುಗಳು ಮಾರಿಕಾಂಬಾ ಜಾತ್ರೆಯ ಸಂದರ್ಭದಲ್ಲಿ ಭಕ್ತಾದಿಗಳು ಕೈಗೊಳ್ಳಲೇ ಬೇಕಾದ ಹಲವಾರು ವಿಶೇಷ ಕಾರ್ಯಗಳ ಬಗ್ಗೆಯೂ ತಿಳಿಸುತ್ತದೆ. ದೇವಿಯ ಜಾತ್ರೆಗೆ ಬಂದವರು ಕಳ್ಳತನ-ಸುಲಿಗೆ ಇತ್ಯಾದಿಗಳನ್ನು ಮಾಡಬಾರದು ಎಂದೂ ಹಾಡಿನಲ್ಲಿಯೇ ಸೂಚ್ಯವಾಗಿ ಹೇಳಲಾಗುತ್ತದೆ. ಅಲ್ಲದೇ ಕಳ್ಳತನ-ದರೋಡೆ ಮಾಡಿದರೆ ಯಾವ ರೀತಿ ದೇವಿಯ ಕೋಪಕ್ಕೆ ಒಳಗಾಗಬಹುದು ಎನ್ನುವುದನ್ನೂ ಎಚ್ಚರಿಕೆಯ ರೀತಿಯಲ್ಲಿ ಹಾಡುವುದು ವಿಶೇಷ.
ಹಾಳ ಮಾಡಬನ್ನೀ ಹನ್ನೆರಡ ರಾಜ್ಯವಾ
ದೂಳ ಮಾಡ ಬನ್ನಿ ಸಿರಸೀಯ || ಸೇವಮ್ಮನ
ಬಂಡಾರ ಸಿಕ್ಕಿದರೂ ಬಿಡಬೇಡೀ
ಆದರೆ ಅವಳ ವಾಲೆ ಸಿಕಿದರೂ ತರಬೇಡಿ ||
ಎನ್ನುವ ಮಾತಿನಲ್ಲಿಯೇ ಎಷ್ಟೆಲ್ಲ ಅರ್ಥಗಳಿವೆ ಎನ್ನುವುದುದನ್ನು ಗಮನಿಸಬೇಕು. ಇಲ್ಲಿ ಬಂಡಾರ ಸಿಕ್ಕರೂ ಕೂಡ ಅದನ್ನು ತೆಗೆದುಕೊಂಡು ಬನ್ನಿ ಎಂದು ಹೇಳಲಾಗುತ್ತದೆ. ದೇವಿಗೆ ಹೇಗೆ ಬೇಕಾದರೂ ಭಕ್ತಿಯನ್ನು ತೋರಿಸಿ ಆದರೆ ದೇವಿಯ ಚಿನ್ನ, ಒಡವೆಗಳ ಕಡೆಗೆ ಮಾತ್ರ ಕಣ್ಣು ಹಾಕಬೇಡಿ ಎನ್ನುವ ಎಚ್ಚರಿಕೆಯನ್ನೂ ಹಾಕಲಾಗುತ್ತದೆ. ಇಷ್ಟೇ ಅಲ್ಲದೇ ಶಿರಸಿಯ ಮಾರಿಕಾಂಬೆಯ ಕುರಿತು ಅನೇಕ ಕಥೆಗಳೂ ಕೂಡ ವಿವಿಧ ಬಗೆಯಲ್ಲಿ ಹಾಡಿನ ಮೂಲಕ ಹೇಳಲಾಗುವುದು ವಿಶೇಷ.
ಹವ್ಯಕರಿರಲಿ, ಲಂಬಾಣಿಗಳಿರಲಿ, ಗೌಳಿ, ಕುಣಬಿಗಳು ಸೇರಿದಂತೆ ವಿವಿಧ ಜಾತಿಗಳಿರಲಿ ಈ ಎಲ್ಲ ಜನಾಂಗದವರೂ ಕೂಡ ಬೇರೆ ಬೇರೆ ದಾಟಿಯಲ್ಲಿ, ರಾಗದಲ್ಲಿ ಹಲವಾರು ಸಂಪ್ರದಾಯದ ಹಾಡುಗಳನ್ನು ಹಾಡುತ್ತಾರೆ. ಇವರೆಲ್ಲ ಹಾಡುವ ಕ್ರಮ ಬೇರೆ ಬೇರೆಯಾದುದು. ಅಕ್ಕಿ ಕುಟ್ಟುವಾಗ, ರಾಗಿ ಬೀಸುವಾಗ, ಮಜ್ಜಿಗೆ ಕಡೆಯುವ ಸಂದರ್ಭ ಹೀಗೆ ಹಲವಾರು ಸಂದರ್ಭದಲ್ಲಿ ಹಾಡಲಾಗುವ ಈ ಹಾಡುಗಳಲ್ಲೆಲ್ಲ ಶಿರಸಿಯ ಮಾರಿಕಾಂಬೆಯ ಬಗ್ಗೆ ವರ್ಣನೆಯೇ ತುಂಬಿದೆ. ಜಾತಿ ಜನಾಂಗದವರು ವಿಶೇಷವಾಗಿ ಬಳಕೆ ಮಾಡುವ ನುಡಿಗಟ್ಟಿನಲ್ಲಿಯೇ ಹಾಡುಗಳನ್ನು ಹಾಡುವುದು ವಿಶೇಷ. ತಮಗೆ ತಿಳಿದಿರುವ ಭಾಷೆಯಲ್ಲಿ ದೇವಿಯ ಕುರಿತು ಹಾಡಿ ದೇವಿಯನ್ನು ಒಲಿಸಿಕೊಳ್ಳವು ಜನಪದರ ರೀತಿಯೇ ವಿಶಿಷ್ಟವಾದುದು. ಗ್ರಾಮೀಣ ಭಾಗದವರ, ಜನಪದರ ಇಂತಹ ವಿದ್ಯೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ