Tuesday, January 5, 2016

ಹವ್ಯಕ ಮಾಣಿಯ ಲವ್ ಸ್ಟೋರಿ -3

ನಮ್ಮೂರ ರಾಘಣ್ಣಂಗೆ
ಇನ್ನೂ ನಲವತ್ತೈದು
ಪದೇ ಪದೇ ಲವ್ವು
ಮನಸ್ಸು ಇಪ್ಪತ್ತೈದು ||

ರಾಘಣ್ಣನ ಲವ್ವು ಒಂದೆರಡಲ್ಲ
ಲೀಸ್ಟಂತೂ ಒಂದು ಢಜನ್ನು
ವರ್ಷಕ್ಕೆ ಒಂದೊಂದು
ಪ್ರೇಮಕ್ಕೆ ಕಣ್ಣಿಲ್ಲ ಸೀಝನ್ನು ||

ಮೊದಲನೇ ಲವ್ವು ಫೇಲಾಗಿ ಹೋದಾಗ
ಕಣ್ಣಲ್ಲಿ ಬಂದಿತ್ತು ನೀರು
ಲವ್ವು ಫೇಲ್ಯೂರೆ ರೂಟೀನಾಗ್ ಹೋದಾಗ
ಕಂಡಿತ್ತು ಇಳಿಸಂಜೆಲ್ ಬಾರು ||

ರಾಘಣ್ಣ ಸೌಂಡ್ ಪಾರ್ಟಿ
ನಾಲ್ಕೆಕರೆ ಜಮೀನು
ಆದ್ರೂನು ಪ್ರೇಮ ಗಟ್ಟೀನೆ ಇಲ್ಲೆ
ಕಾರಣ ಇದೆ ಬೇಜಾನು ||

ಲವ್ವು ಫೇಲಾದ್ರೂ ರಾಘಣ್ಣ ಸೋತಿಲ್ಲ
ಮತ್ತೆ ಮತ್ತೆ ಹುಡುಕಾಟ
ಕಾಲೇಜು, ಬಸ್ ಸ್ಟಾಪು ಎಲ್ಲೆಂದರಲ್ಲಿ
ಕೂಸುಗಳಿಗೆ ಬರಿ ಕಾಟ ||

ಮೊಬೈಲ್ ಕರೆನ್ಸಿ, ಸತ್ಕಾರದಲ್ಲಿ ಊಟ
ಮಾಡ್ತಿದ್ದ ಸಾಕಷ್ಟು ಇನ್ವೆಸ್ಟು
ಪ್ರತಿ ಸಾರಿ ಲವ್ ಫೇಲಾಗಿ ಹೋದಾಗ
ಆಗ್ತಿತ್ತು ದುಡ್ಡು ವೇಸ್ಟು ||

****

(ಕವಿತೆ ಸರಣಿ ಮುಂದುವರಿಯುತ್ತದೆ)

Monday, January 4, 2016

ಅಘನಾಶಿನಿ ಕಣಿವೆಯಲ್ಲಿ-32

         ತಪ್ಪಿಸಿಕೊಂಡು ಹೋಗುತ್ತಿದ್ದ ಬಾಬುವನ್ನು ಹಿಡಿದಾಗಿತ್ತು. ಆದರೆ ಅವನ ಬಾಯಿ ಬಿಡಿಸಬೇಕಲ್ಲ. ಪ್ರದೀಪ ಬಾಬುವನ್ನು ಹಿಡಿದು ಎಳೆದುಕೊಂಡು ಕಾರಿಗೆ ತುಂಬಿಕೊಂಡ. ಬಾಬು ಮಾತ್ರ ಕಕ್ಕಾಬಿಕ್ಕಿಯಾಗಿದ್ದ. ನನ್ನನ್ನು ಬಿಟ್ಟು ಬಿಡಿ ಎಂದು ಕೂಗಿಕೊಳ್ಳುತ್ತಿದ್ದ. ಆಗಾಗ ತನ್ನನ್ನು ಹಿಡಿದುಕೊಂಡು ಬಂದ ಬಗ್ಗೆ ಪ್ರತಿಭಟನೆಯನ್ನೂ ಮಾಡುತ್ತಿದ್ದ. ಆದರೆ ಪ್ರದೀಪ ಮಾತ್ರ ಬಾಬು ತಪ್ಪಿಸಿಕೊಂಡು ಹೋಗದಂತೆ ಪಟ್ಟಾಗಿ ಹಿಡಿದುಬಿಟ್ಟಿದ್ದ.
          ಗಾಡಿಯಲ್ಲಿ ಬಾಬುನನ್ನು ಬಹುದೂರ ಹಾಕಿಕೊಂಡು ಹೋದವರು ಅಲ್ಲೊಂದು ಕಡೆ ನಿರ್ಜನ ಪ್ರದೇಶದಲ್ಲಿ ಗಾಡಿ ನಿಲ್ಲಿಸಿದರು. ನಿಲ್ಲಿಸಿದವರೇ ಬಾಬುವನ್ನು ಗಾಡಿಯಿಂದ ಹೊರಕ್ಕೆ ಎಳೆದು ನಾಲ್ಕೇಟು ಬಿಡಿದರು. ಆದರೆ ಬಾಬು ಇದನ್ನು ತಡೆದುಕೊಂಡ. ಮತ್ತಷ್ಟು ಹೊಡೆದು ಬಾಬುವಿನ ಕೆಲಸದ ಬಗ್ಗೆ ಕೇಳಲು ಆರಂಭಿಸಿದರು. ಆದರೆ ಬಾಬು ಬಾಯಿ ಬಿಡಲು ಸುತಾರಾಂ ತಯಾರಿರಲಿಲ್ಲ. ಪ್ರದೀಪ ಮಾತ್ರ ಕ್ಷಣಕ್ಷಣಕ್ಕೂ ಸಿಟ್ಟಾಗುತ್ತಿದ್ದ. ಬಾಬುವಿನ ಕೈಕಾಲು ಮುರಿದು ಬಿಡೋಣ ಎಂದುಕೊಂಡ. ಹೇಗಾದರೂ ಬಾಯಿಬಿಡಿಸೋಣ ಎಂದುಕೊಂಡ.
          ತಕ್ಷಣವೇ ವಿಜೇತಾ ವಿಕ್ರಮನ ಬಳಿ ಏನೋ ಹೇಳಿದಳು. ವಿಕ್ರಮ ಕೂಡಲೇ ಕಾರ್ಯಪ್ರವೃತ್ತನಾದ. ಗಾಡಿಯೊಳಗಿದ್ದ ಸಕ್ಕರ ಪ್ಯಾಕನ್ನು ತಂದ. ತಂದವನೇ ಬಾಬುವಿನ ಮೇಮೇಲೆ ಚೆಲ್ಲಿಬಿಟ್ಟ. ನಂತರ ಬಾಬುವನ್ನು ಹಿಡಿದುಕೊಂಡು ಹೋಗಿ ಪಕ್ಕದ ಮರವೊಂದಕ್ಕೆ ಕಟ್ಟಿ ಹಾಕಿದ. ಅಷ್ಟಕ್ಕೆ ಸುಮ್ಮನಿರದ ವಿಕ್ರಮ ಸಕ್ಕರೆಯ ನೀರನ್ನು ಮಾಡಿ ಚೆಲ್ಲಿಬಿಟ್ಟ. ಪ್ರತಿಯೊಬ್ಬರಿಗೂ ಕೂಡ ಇವನೇಕೆ ಹೀಗೆ ಮಾಡುತ್ತಿದ್ದಾನೆ ಎನ್ನುವ ಕುತೂಹಲ ಕಾಡದೇ ಇರಲಿಲ್ಲ. ಬಾಬು ಮಾತ್ರ ಮನಸ್ಸಿನೊಳಗೆ ನಗಲು ಆರಂಭಿಸಿದ್ದ. ತನ್ನನ್ನು ಬಾಯಿ ಬಿಡಿಸಲು ಸಾಧ್ಯವೇ ಇಲ್ಲ. ತಾನು ಗೆದ್ದಿದ್ದೇನೆ ಎಂದುಕೊಂಡ. ಆದರೆ ವಿಕ್ರಮ ತನ್ನ ಮೈಮೇಲೆ ಸಕ್ಕರೆ ಹಾಗೂ ಸಕ್ಕರೆ ನೀರನ್ನು ಯಾಕೆ ಚೆಲ್ಲಿದ ಎನ್ನುವುದು ಗೊತ್ತಾಗಲಿಲ್ಲ.
        ಅರೆಘಳಿಗೆ ಕಳೆದಿರಬಹುದು. ಬಾಬುವಿನ ಕಾಲಿನ ಬಳಿಯಲ್ಲಿ ಯಾಕೋ ಗುಳುಗುಳು ಆಗಲಾರಂಭಿಸಿತು. ನಂತರ ಸೂಜಿಯಿಂದ ಚುಚ್ಚಿದಂತಹ ಅನುಭವವಾಯಿತು. ಕಾಲನ್ನು ನೋಡಿಕೊಂಡ ಬಾಬು. ದೊಡ್ಡ ಗಾತ್ರದ ಕಪ್ಪಿರುವೆಯೊಂದು ಬಂದು ಕಾಲನ್ನು ಕಚ್ಚಲು ಆರಂಭಿಸಿತ್ತು. `ಹಾಳಾದ ಇರುವೆ.. ತಥ್.. ಹಾಳ್ ಬೀಳಲಿ..' ಎಂದು ಬೈದುಕೊಂಡು ತನ್ನ ಇನ್ನೊಂದು ಕಾಲಿನಿಂದ ಠಪ್ಪನೆ ಹೊಡೆದು ಇರುವೆಯನ್ನು ಕೊಂದು ಹಾಕಿದ.
         ಇಷ್ಟಾಗಿ ಕೆಲವೇ ಕ್ಷಣಗಳು ಕಳೆದಿರಬಹುದು ಕಾಲಿಗೆ ಮತ್ತೆ ಹಲವಾರು ಸೂಜಿಗಳಿಂದ ಚುಚ್ಚಿದಂತಹ ಅನುಭವ ಆಗತೊಡಗಿತ್ತು. ಒಮ್ಮೆ ನೋಡಿಕೊಂಡವನಿಗೆ ಮನಸ್ಸಿನ ಆಳದಲ್ಲಿ ಭಯದ ಛಾಯೆ ಮೂಡಿತು. ಸಾವಿರ ಸಾವಿರ ಸಂಖ್ಯೆಯ ಇರುವೆಗಳು ಬಾಬುವಿನ ಕಾಲನ್ನು ಮುತ್ತಲು ಆರಂಭಿಸಿದ್ದವು. ಕಾಲಿಗೆ ಸೀಮಿತವಾಗದೇ ಮತ್ತೂ ಮೇಲ ಮೇಲಕ್ಕೆ ಏರಲು ಆರಂಭಿಸಿದ್ದವು. ನೋಡ ನೋಡುತ್ತಿದ್ದಂತೆ ದೇಹದ ತುಂಬೆಲ್ಲ ಇರುವೆಗಳು ಮುತ್ತಿಕೊಂಡು ಕಚ್ಚಲು ಆರಂಭಿಸಿದ್ದವು. ವಿಜೇತಾ ಹೇಳಿದ ಸಲಹೆಯನ್ನು ಕೇಳಿ ಯಥಾವತ್ತಾಗಿ ಕಾರ್ಯರೂಪಕ್ಕಿಳಿಸಿದ್ದ ವಿಕ್ರಮ. ಆತ ಬಾಬುವಿನ ಮೈಮೇಲೆ ಸಕ್ಕರೆ ಹಾಗೂ ಸಕ್ಕರೆ ನೀರನ್ನು ಚಲ್ಲಿದ್ದು ಫಲ ನೀಡಲಾರಂಭಿಸಿತ್ತು. ಸಕ್ಕರೆಯ ವಾಸನೆಗೆ ಇರುವೆಗಳು ಮುತ್ತಿಕೊಂಡು ಬಂದಿದ್ದವು. ಬಾಬುವಿನ ಮೈಯನ್ನು ಏರಿ ಕಚ್ಚಲು ಆರಂಭಿಸಿದ್ದವು. ಬಾಬು ಮೊದ ಮೊದಲಿಗೆ ಇವರೇನೋ ತಮಾಷೆ ಮಾಡಲು ಆರಂಭಿಸಿದ್ದಾರೆ ಎಂದುಕೊಂಡಿದ್ದ. ಆದರೆ ಈಗ ಮಾತ್ರ ಅವರು ಮಾಡಿದ ಕೆಲಸದ ಪರಿಣಾಮ ಗೋಚರವಾಗತೊಡಗಿತ್ತು.
           ಇರುವೆಗಳು ಕಚ್ಚುವುದು ಜಾಸ್ತಿಯಾದಂತೆ ಬಾಬು ಅರಚಿಕೊಳ್ಳಲು ಆರಂಭಿಸಿದ. ಈ ನಡು ನಡುವೆ ಪ್ರದೀಪ ಬಾಬುವಿನ ದಂಧೆಯ ಬಗ್ಗೆ ಬಾಯಿ ಬಿಡುವಂತೆ ಹೇಳುತ್ತಲೇ ಇದ್ದ. ಅಷ್ಟರಲ್ಲಿ ವಿನಾಯಕ ಓಡಿ ಹೋಗಿ ಅದ್ಯಾವುದೋ ಸಳ್ಳೆ ಮರಕ್ಕೆ ಗೂಡು ಕಟ್ಟಿಕೊಂಡಿದ್ದ ಚೌಳಿ ಕೊಟ್ಟೆಯನ್ನು ತಂದು ಬಾಬುವಿನ ಮೈಮೇಲೆ ಎರಚಿಬಿಟ್ಟಿದ್ದ. ಬಾಬುವಿಗೆ ಕಪ್ಪಿರುವೆಗಳ ದಾಳಿಗೆ ಹೈರಾಣಾಗಿದ್ದವನು ಇದೀಗ ಸೌಳಿಗಳು ಕಚ್ಚುವುದನ್ನು ತಾಳಲಾರದೇ ಹುಯ್ಯಲಿಡಲು ಆರಂಭಿಸಿದ್ದ. ಕೊನೆಗೊಮ್ಮೆ ಹತಾಶನಾದ ಬಾಬು ತನ್ನನ್ನು ಬಿಟ್ಟು ಬಿಡಿ ಎಂದು ಬೇಡಿಕೊಳ್ಳಲು ಆರಂಭಿಸಿದ. ಇಷ್ಟೆಲ್ಲ ಆದರೂ ಪ್ರದೀಪನ ಪ್ರಶ್ನೆಗಳಿಗೆ ಮಾತ್ರ ಬಾಬು ಬಾಯಿ ಬಿಡಲು ಮುಂದಾಗಲಿಲ್ಲ.
          ಪ್ರದೀಪ ತನ್ನ ಕೆಲಸವನ್ನು ಬಿಡಲಿಲ್ಲ. ಹರಿತವಾದ ಚಾಕುವೊಂದನ್ನು ತಂದು ಬಾಬುವಿನ ಕಾಲನ್ನು ಚಕ್ಕನ್ನೆ ಗೀರಿದ. ಇರುವೆಗಳ ದಾಳಿಗೆ ಬಸವಳಿದಿದ್ದ ಬಾಬು ಈಗ ಮಾತ್ರ ಬೆಚ್ಚಿ ಬಿದ್ದಿದ್ದ. ಇರುವೆಗಳು ಪ್ರದೀಪ ಚಾಕಿವಿನಿಂದ ಗೀರಿದ್ದ ಜಾಗಕ್ಕೆ ದಾಳಿ ಮಾಡಿ ರಕ್ತ ಹೀರಲು ಆರಂಭಿಸಿದ್ದವು. ಪ್ರದೀಪ ಚಾಕಿವಿನಿಂದ ಇನ್ನೊಂದೆರಡು ಗೀರುಗಳನ್ನು ಮಾಡಿದ. ಗಾಯಕ್ಕೆ ಇರುವೆಗಳು ದಾಳಿ ಮಾಡುವುದೂ ಜಾಸ್ತಿಯಾದವು. ಕೊನೆಗೊಮ್ಮೆ ಬಾಬು `ಸಾಕು ನನ್ನುನ್ನು ಬಿಟ್ಟು ಬಿಡಿ.. ನಿಜ ಹೇಳ್ತೇನೆ..' ಎಂದು ಕೂಗಿಕೊಂಡ. ವಿಕ್ರಮ ಮರದ ಹಿಂದೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿದ್ದ. ಬಾಬು ಒಮ್ಮೆ ಥಕಥೈ ಎಂದು ಕುಣಿದು ಕುಪ್ಪಳಿಸಿ ಮೈಮೇಲೆ ಮುತ್ತಿಕೊಂಡಿದ್ದ ಇರುವೆಗಳನ್ನು ಕೊಡವಿಕೊಳ್ಳಲು ಆರಂಭಿಸಿದ್ದ.
            `ಈಗ್ಲಾದರೂ ಹೇಳು. ಇಲ್ಲವಾದರೆ ಮತ್ತೆ ಈ ಶಿಕ್ಷೆಯನ್ನು ಪುನರಾವರ್ತನೆ ಮಾಡಲಾಗುತ್ತದೆ..' ಕಂಚಿನ ಕಂಠದಲ್ಲಿ ಪ್ರದೀಪ ಹೇಳಿದ್ದ. ಬಾಬುವಿಗೆ ಮತ್ತೆ ನರಕ ದರ್ಶನ ಮಾಡುವುದು ಬೇಕಿರಲಿಲ್ಲ. ಹೇಳ್ತೇನೆ ಎಂದವನೇ ಪ್ರವರವನ್ನು ಹೇಳಿಕೊಳ್ಳಲು ಮುಂದಾಗಿದ್ದ. ಬಾಬು ಹೇಳುತ್ತಿದ್ದ ವಿವರಗಳನ್ನು ಕೇಳುತ್ತಿದ್ದಂತೆ ಮಲೆನಾಡಿನಲ್ಲಿ ಹಬ್ಬಿದ್ದ ಕತ್ತಲ ಲೋಕದ ಬೇರುಗಳು ನಿಧಾನವಾಗಿ ಬಿಚ್ಚಿಕೊಳ್ಳಲು ಆರಂಭವಾಗಿದ್ದವು. ಕಾಡಿನ ಉತ್ಪನ್ನಗಳನ್ನು ಕದ್ದು ಮಾರಾಟ ಮಾಡುವ ದಂಧೆ, ಮರಗಳ್ಳತನ, ಸ್ಮಗ್ಲಿಂಗ್, ಕಾಡಿನಲ್ಲಿ ಗಾಂಜಾ ಗಿಡಗಳನ್ನು ಬೆಳೆಯುವುದು ಇತ್ಯಾದಿ ಕರಾಳ ಕಥೆಗಳೆಲ್ಲ ಹೊರಬೇಳಲು ಆರಂಭವಾಗಿದ್ದವು. ಕೇಳುತ್ತಿದ್ದ ಪ್ರದೀಪ, ವಿಕ್ರಮ, ವಿಜೇತಾ, ವಿನಾಯಕ ಹಾಗೂ ಉಳಿದವರ ಮೈಮನಗಳೆಲ್ಲ ರೋಮಾಂಚನಗೊಳ್ಳು ಆರಂಭಗೊಂಡಿದ್ದವು.

(ಮುಂದುವರಿಯುತ್ತದೆ)

Thursday, December 17, 2015

ಮಾಸ್ತರ್ ಮಂದಿ-9

                 ಹೈಸ್ಕೂಲಿನಲ್ಲಿ ಇನ್ನೂ ಕೆಲವು ಶಿಕ್ಷಕರು ಕಲಿಸಿದ್ದಾರೆ. ಅವರ ಪೈಕಿ ಪ್ರಮುಖ ಎನ್ನಿಸುವ ಗ್ರೇಸ್ ಪ್ರೇಮಕುಮಾರಿ ಹಾಗೂ ದೈಹಿಕ ಶಿಕ್ಷಕರಾದ ಸಿ. ಆರ್. ಲಿಂಗರಾಜು ಅವರ ಬಗ್ಗೆ ಬರೆಯದಿದ್ದರೆ ಏನೋ ಕಳೆದುಕೊಂಡಂತೆ ಬಿಡಿ. ಜಿಪಿಕೆ ಎನ್ನುವ ಶಾರ್ಟ್ ಫಾರ್ಮಿನ ಪ್ರೇಮಕುಮಾರಿ ಮೇಡಂ ಕಾನಲೆ ಹೈಸ್ಕೂಲಿನ ಹೆಡ್ ಮಿಸ್ ಆಗಿದ್ದರು. ಲಿಂಗರಾಜು ಅವರು ಸಿ.ಆರ್.ಎಲ್. ಎಂಬ ಶಾರ್ಟ್ ಫಾರ್ಮನ್ನು ಪಡೆದುಕೊಂಡಿದ್ದರು. ಇವರ ಬಗ್ಗೆ ಹೇಳದೇ ಇದ್ದರೆ ಹೈಸ್ಕೂಲು ಬದುಕು ಅಪೂರ್ಣ ಎನ್ನಿಸಿಬಿಡುತ್ತದೆ.

ಗ್ರೇಸ್ ಪ್ರೇಮ್ ಕುಮಾರಿ :
ನಾನು ಎಂಟನೇ ಕ್ಲಾಸಿನಲ್ಲಿದ್ದಾಗ ಒಂದು ದಿನ ಇಂಗ್ಲೀಷ್ ಶಿಕ್ಷಕರಾದ ಬಿ. ಆರ್. ಎಲ್. ಅವರು ನಮ್ಮ ಹೈಸ್ಕೂಲಿನ ಹೆಡ್ ಮಾಸ್ತರ್ ಯಾರು ಎಂದು ಕೇಳಿದ್ದರು. ನಾವೆಲ್ಲ ಆಗ ಇನ್ ಛಾರ್ಜ್ ಕೆಲಸ ಮಾಡುತ್ತಿದ್ದ ಪರಶುರಾಮಪ್ಪ ಅವರ ಹೆಸರನ್ನು ಹೇಳಿದ್ದೆವು. ಕೂಡಲೇ ಹೇಳಿದ್ದ ಬಿಆರ್.ಎಲ್ ಪರಶುರಾಮಪ್ಪ ಖಾಯಂ ಹೆಡ್ ಮಾಸ್ತರ್ ಅಲ್ಲ. ನಮ್ಮ ಶಾಲೆಯ ಹೆಡ್ ಮಾಸ್ತರ್ ಹೆಸರು ಗ್ರೇಸ್ ಪ್ರೇಮ್ ಕುಮಾರಿ. ಅವರು ಬೇರೊಂದು ಶಾಲೆಗೆ ತಾತ್ಕಾಲಿಕವಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನಾರು ತಿಂಗಳಿನಲ್ಲಿ ಬರುತ್ತಾರೆ ಎಂದಿದ್ದರು. ಆದರೆ ಆರು ತಿಂಗಳು ಹೋಗಲಿ, ಗ್ರೇಸ್ ಪ್ರೇಮಕುಮಾರಿ ಮೇಡಂ ಶಾಲೆಗೆ ಬಂದಿದ್ದು ನಾನು ಒಂಭತ್ತನೇ ಕ್ಲಾಸಿನದ್ದಾಗ. ಗ್ರೇಸ್ ಪ್ರೇಮಕುಮಾರಿ ಮೇಡಮ್ ಕ್ರಿಶ್ಚಿಯನ್ನರಾಗಿದ್ದರು ಎನ್ನುವುದೇ ನಮಗೆಲ್ಲ ವಿಶೇಷ ಸಂಗತಿ. ಆದರೆ ಅವರು ಅದೆಷ್ಟು ಸುಂದರವಾಗಿ ಕನ್ನಡ ಅಕ್ಷರಗಳನ್ನು ಬರೆಯುತ್ತಿದ್ದರು ಎಂದರೆ ಆಹಾ. ಅವರು ಬೋರ್ಡಿನ ಮೇಲೆ ಬರೆಯುವುದೇ ಬಹಳ ಚೆಂದ. ಅಷ್ಟೇ ಚನ್ನಾಗಿ ಕನ್ನಡ ಮಾತನಾಡುತ್ತಿದ್ದರು. ಜಿಪಿಕೆ ಎಂಬ ಕಿರುನಾಮದಿಂದ ನಾವು ಅವರನ್ನು ಕರೆಯಬೇಕಿತ್ತು. ನಮಗೆ ಭಾರತಿ ಮೇಡಂ ಕನ್ನಡ ಕಲಿಸುವ ಅಧಿಕೃತ ಶಿಕ್ಷಕಿಯಾಗಿದ್ದರೂ ಗ್ರೇಸ್ ಪ್ರೇಮಕುಮಾರಿ ಮೇಡಂ ಕೂಡ ಕಲಿಸಲು ಬರುತ್ತಿದ್ದರು ಎನ್ನುವುದು ವಿಶೇಷವಾಗಿತ್ತು.
ಹೈಸ್ಕೂಲಿನಲ್ಲಿ ನಾನು ಕನ್ನಡ ಅಕ್ಷರವನ್ನು ಬಹಳ ಚನ್ನಾಗಿ ಬರೆಯುತ್ತಿದೆ. ಆ ಕಾರಣದಿಂದಲೇ ಪ್ರೇಮಕುಮಾರಿ ಮೇಡಮ್ ರಿಗೆ ನಾನು ಅಂದರೆ ವಿಶೇಷ ಅಕ್ಕರೆ. ಎಲ್ಲಾ ವಿಷಯಗಳಲ್ಲಿಯೂ ಕಾಲು-ಬಾಲ ಸೇರಿಸಿ ಉದ್ದಕ್ಕೆ ಬರೆಯುತ್ತಿದ್ದ ನಾನು ಕನ್ನಡದಲ್ಲಿ ಮಾತ್ರ ಎಷ್ಟಕ್ಕೆ ಬೇಕೋ ಅಷ್ಟಕ್ಕೆ ಬಹಳ ಸುಂದರವಾಗಿ ಬರೆಯುತ್ತಿದ್ದೆ. ಪರಿಣಾಮವಾಗಿ ಒಳ್ಳೆಯ ಅಂಕಗಳು ಬೀಳುತ್ತಿದ್ದವು. ಬರೆದರೆ ವಿನಯನ ಹಾಗೆ ಬರೆಯಬೇಕು ಎಂದು ಕ್ಲಾಸಿನಲ್ಲಿ ಹೇಳುತ್ತಿದ್ದುದು ಕೆಲವರ ಹೊಟ್ಟೆಯ ಕಿಚ್ಚಿಗೂ ಕಾರಣವಾಗಿತ್ತು. ಎಸ್.ಎಸ್.ಎಲ್.ಸಿಯಲ್ಲಿ ಇದ್ದಾಗ ನಾನು ಅನೇಕ ರಸಪ್ರಶ್ನೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದೆ. ಆ ಸಂದರ್ಭದಲ್ಲಂತೂ ನನ್ನನ್ನು ವಿಶೇಷವಾಗಿ ಕೊಂಡಾಡಿದ್ದರು.
ಒಂದು ದಿನ ಶಾಲೆಗೆ ಬಂದ ಗ್ರೇಸ್ ಪ್ರೇಮಕುಮಾರಿ ಮೇಡಂ ತಮ್ಮ ಕೊಠಡಿಗೆ ನನ್ನನ್ನು ಕರೆಸಿಕೊಂಡರು. ಕರೆಸಿದವರೇ `ನೋಡು ವಿನಯ್ ನಿನ್ನ ತಂದೆಯವರು ನನಗೆ ಸಿಕ್ಕಿದ್ದರು..' ಎಂದರು. ನನಗೆ ಒಮ್ಮೆ ಆಶ್ಚರ್ಯವಾಗಿತ್ತು. ನನ್ನ ಅಪ್ಪ ಅದ್ಯಾವ ಮಾಯೆಯಲ್ಲಿ ಇವರನ್ನು ಬೇಟಿಯಾಗಿ ಹೋಗಿದ್ದಾರೋ ಎಂಬ ಕುತೂಹಲ ಕಾಡಿತ್ತು.
`ನೋಡು ನೀನು ನಾಟಕ ಸೇರಿದಂತೆ ಎಲ್ಲ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಂತೆ. ತಿಳೀತಾ?' ಎಂದರು. ನಾನು `ಭಾಗವಹಿಸ್ತಾ ಇದ್ದೇನೆ ಮೇಡಂ..' ಅಂದೆ. `ನೋಡು ನಿನ್ನ ತಂದೆಯವರು ಇನ್ನೊಂದು ಮಾತನ್ನು ಹೇಳಿದ್ದಾರೆ. ನನ್ನ ಮಗನಿಗೆ ಎಷ್ಟ್ ಬೇಕಾದರೂ ಹೊಡೆಯಿರಿ. ತೊಂದರೆಯಿಲ್ಲ. ಆತನಿಗೆ ಹೊಡೆತಕ್ಕೆ ಏನೂ ಕಡಿಮೆ ಮಾಡಬೇಡಿ. ಆದರೆ ಚನ್ನಾಗಿ ಕಲಿಸಿ.. ಎಂದಿದ್ದಾರೆ. ಯಾಕ್ ಹಿಂಗಂದ್ರು? ನೀನಂತೂ ಚನ್ನಾಗಿ ಓದ್ತಾ ಇದ್ದೀಯಲ್ಲ..' ಎಂದರು ಪ್ರೇಮಕುಮಾರಿ ಮೇಡಂ.
ನನಗೆ ಅಪ್ಪನ ಗುಣ ಗೊತ್ತಿತ್ತಾದ್ದರಿಂದ ಸ್ವಲ್ಪ ಪೆಚ್ಚಾಗಿದ್ದರೂ ಏನೂ ಆಗಿಲ್ಲ ಎಂಬಂತೆ ಸುಮ್ಮನೇ ಇದ್ದೆ. ಮಗನಿಗೆ ಸಿಕ್ಕಾಪಟ್ಟೆ ಹೊಡೆದರೆ ಮಗ ಬುದ್ಧಿವಂತನಾಗುತ್ತಾನೆ ಎಂದುಕೊಂಡಿದ್ದ ಅಪ್ಪ ಪ್ರಾಥಮಿಕ ಶಾಲಾ ಶಿಕ್ಷಕರ ಬಳಿಯಲ್ಲೂ ಹೀಗೆಯೇ ಹೇಳಿದ್ದ. ಈಗಲೂ ಅದೇ ರೀತಿ ಹೇಳಿದ್ದ. ಆದರೆ ಒಬ್ಬ ತಂದೆ ತನ್ನ ಮಗನಿಗೆ ಹೊಡೆಯಿರಿ ಎಂದು ಹೇಳಿದ್ದು ಪ್ರೇಮಕುಮಾರಿ ಮೇಡಂ ಅವರಿಗೆ ಬಹಳ ಅಚ್ಚರಿಯನ್ನು ಹುಟ್ಟುಹಾಕಿತ್ತು. ಅವರಿಗೆ ಇದರಿಂದ ಬೇಜಾರೂ ಆಗಿತ್ತಂತೆ. ಕಾನಲೆ ಹೈಸ್ಕೂಲಿನಿಂದ ಬೀಳ್ಕೊಟ್ಟು ಹೋಗುವಾಗ ಮಾತಿನ ಮದ್ಯದಲ್ಲಿ ಹೇಳಿದ್ದರು. ನಂತರದ ದಿನಗಳಲ್ಲಿ ಅವರು ಯಾವ ಶಾಲೆಗೆ ಹೋದರೋ ಗೊತ್ತಿಲ್ಲ.
ಕನ್ನಡ ವಿಷಯದಲ್ಲಿ ಒಂದು ಶಬ್ದವನ್ನು ಕೊಟ್ಟು ನಿಮ್ಮ ವಾಕ್ಯದಲ್ಲಿ ಬರೆಯಿರಿ ಎಂದು ಹೇಳುತ್ತಾರೆ. ನಾನು ಆ ವಾಕ್ಯಗಳಿಗೆಲ್ಲ ನನ್ನದೇ ಶೈಲಿಯಲ್ಲಿ ಪಂಚ್ ವಾಕ್ಯಗಳನ್ನು ಬರೆದುಬಿಡುತ್ತಿದ್ದೆ. ಇದರಿಂದ ಪ್ರೇಮಕುಮಾರಿ ಮೇಡಂ ಬಹಳ ಸಂತೋಷಗೊಂಡು ವಿಶೇಷವಾಗಿ ಹೊಗಳಿದ್ದೂ ಇದೆ. ಹೀಗಿದ್ದಾಗ ಮೇಡಂ ಶಾಲೆಯಿಮದ ಬೀಳ್ಕೊಡುವ ದಿನ ಬಂದಿತ್ತು. ಉಳಿದ ಶಿಕ್ಷಕರು ಬಂದು ನನ್ನ ಬಳಿ ಮೇಡಂ ಬೀಳ್ಕೊಡುತ್ತಿದ್ದಾರೆ ಅವರ ಬಗ್ಗೆ ಮಾತನಾಡು ಎಂದರು. ನಾನು ಆಗೋದಿಲ್ಲ ಎಂದೆ. ಯಾಕೆ ಎಂದು ಬಹಳ ಸಾರಿ ಕೇಳಿದ್ದರೂ ಆಗೋದಿಲ್ಲ ಅಂದಿದ್ದೆ. ಉಳಿದವರು ಭಾವನಾತ್ಮಕವಾಗಿ ಮಾತನಾಡುವುದಿಲ್ಲ ಎಂದುಕೊಂಡರೋ ಏನೋ. ಆದರೆ ನಾನು ಮಾತ್ರ ಸ್ಟೇಜ್ ಫೀಯರ್ ಇದ್ದ ಕಾರಣ ಮಾತನಾಡಲೇ ಇಲ್ಲ ಬಿಡಿ. ಬೀಳ್ಕೊಡುಗೆ ಸಂದರ್ಭದಲ್ಲಿ ನನ್ನನ್ನೂ ಮಾತಿನ ಮಧ್ಯದಲ್ಲಿ ಉಲ್ಲೇಖ ಮಾಡಿದರು ಎನ್ನುವುದು ಇಂದಿಗೂ ನೆನಪಾಗುತ್ತಲೇ ಇದೆ.

ಸಿ. ಆರ್. ಲಿಂಗರಾಜು :
ಬುಲೆಟ್ ಬಸ್ಯಾ ಎಂಬ ಅಡ್ಡ ಹೆಸರನ್ನು ನಾವೇ ಲಿಂಗರಾಜ ಮಾಸ್ತರ್ರಿಗೆ ಇಟ್ಟಿದ್ದೆವು. ಸಿಆರ್.ಎಲ್ ಎಂಬ ಕಿರು ನಾಮಧೇಯದ ಲಿಂಗರಾಜ ಮಾಸ್ತರ್ರು ಭರ್ಜರಿ 6 ಅಡಿಯ ದೈತ್ಯಜೀವಿ. ಪ್ರತಿದಿನ ಶಾಲೆಗೆ ಬುಲೆಟ್ ತರುತ್ತಿದ್ದ ಅವರನ್ನು ನಾವು ಈ ಕಾರಣಕ್ಕಾಗಿಯೇ ಬುಲೆಟ್ ಬಸ್ಯಾ ಎಂದು ಕರೆಯುತ್ತಿದ್ದೆವು. ಶೀಘ್ರ ಕೋಪಿ ಹಾಗೂ ಉಗ್ರಕೋಪಿ ಮಾಸ್ತರ್ರು ಅವರು. ಮಾತೆತ್ತಿದರೆ `ಏನೋ ಬಡ್ಡೀ ಮಗನೇ..' ಎಂದೇ ಬಯ್ಯಲು ಶುರು ಮಡುತ್ತಿದ್ದ ಅವರ ಬಳಿ ಹೊಡೆತ ತಿನ್ನದೇ ಉಳಿದವರು ಕಡಿಮೆಯೇ. ನಾನು ಸುಮಾರು ಹೊಡೆತ ತಿಂದಿದ್ದೇನೆ. ಆದರೆ ಉಳಿದ ಹುಡುಗರಿಗಿಂತ ಸ್ವಲ್ಪ ಕಡಿಮೆಯೇ ಬಿಡಿ.
ನನ್ನ ದೋಸ್ತ ಪ್ರದೀಪನ ಬಗ್ಗೆ ಈಗಾಗಲೇ ಹೇಳಿದ್ದೇನೆ. ಸಿ.ಆರ್.ಎಲ್. ಅವರಿಂದ ಪ್ರದೀಪ ಹೊಡೆತ ತಿಂದಿದ್ದು ಜಾಸ್ತಿ. ಪ್ರತಿ ದಿನ ಪ್ರದೀಪನ ಬಳಿ ಲಿಂಗರಾಜಪ್ಪ ಮಾಸ್ತರ್ `ಲೇ ಭಟಾ.. ಗಾಳಿ ಶೆಳಕೆ ತಗಂಡ್ ಬಾರಲೇ..' ಅನ್ನುತ್ತಿದ್ದರು. ಪ್ರದೀಪ ಮೂರ್ನಾಲ್ಕು ಗಾಳಿ ಕೋಲುಗಳನ್ನು ತರುತ್ತಿದ್ದ. ತಂದ ತಪ್ಪಿಗೆ ಮೊದಲ ಹೊಡೆತ ಪ್ರದೀಪನಿಗೇ ಬೀಳುತ್ತಿತ್ತು. ಇನ್ನೊಬ್ಬ  ಗೆಳೆಯ ಪ್ರಶಾಂತನೂ ಇದಕ್ಕಿಂತ ಹೊರತಾಗಿರಲಿಲ್ಲ ಬಿಡಿ.
ಲಿಂಗರಾಜ ಮಾಸ್ತರ್ರು ನಮಗೆ ಕ್ರೀಡೆಗಳ ಬಗ್ಗೆ ಕಲಿಸಿದ್ದು ಕಡಿಮೆಯೇ ಬಿಡಿ. ಆದರೆ ಸಾಕಷ್ಟು ಮಣ್ಣು ಹೊರಿಸಿದ್ದು ಮಾತ್ರ ನಿಜ. ಡೆಂಬಲ್ಸ್ ಹಾಗೂ ಬೇರೆ ಬೇರೆ ದೈಹಿಕ ವ್ಯಾಯಾಮಗಳನ್ನು ನಾವು ಮಾಡಿದ್ದು ಕಡಿಮಯೇ ಬಿಡಿ. ಆದರೆ ನಾನು ಹೈಸ್ಕೂಲಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಹೈಸ್ಕೂಲಿಗೆ ಸಮರ್ಪಕ ರಸ್ತೆ ಇರಲಿಲ್ಲ. ನಮ್ಮ ಕೈಯಲ್ಲಿ ಮಣ್ಣು ಹೊರೆಸಿ ರಸ್ತೆಯನ್ನು ಮಾಡಿಸಿದರು ಲಿಂಗರಾಜ ಮಾಸ್ತರ್ರು.
ಅದ್ಯಾವಾಗ ಪಾಠ ಮಾಡುತ್ತಿದ್ದರೋ ನಮಗಂತೂ ನೆನಪಿಲ್ಲ ಬಿಡಿ. ಆದರೆ ದೈಹಿಕ ಶಿಕ್ಷಣ ವಿಷಯದ ಪರೀಕ್ಷೆಯಲ್ಲಿ ಮಾತ್ರ ವಿವಿಧ ಕ್ರೀಡೆಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳುತ್ತಿದ್ದರು. ಕಬ್ಬಡ್ಡಿ ಅಂಕಣದ ಅಳತೆ ಎಷ್ಟಿರಬೇಕು? ಕೋಕೋ ಅಂಕಣದ ಅಳತೆ ತಿಳಿಸಿ ಇತ್ಯಾದಿ. ನಿಜಕ್ಕೂ ಇವು ನಮಗೆ ಕಠಿಣ ಪ್ರಶ್ನೆಗಳೇ ಹೌದು. ಮೊದಲ ಪರೀಕ್ಷೆಯಲ್ಲಿ ನಾನು ಸುಳ್ಳೇ ಪಿಳ್ಳೆ ಉತ್ತರ ಬರೆದಿದ್ದೆ. ಆದರೆ ಅದರಲ್ಲಿ ಕೆಲವು ಸರಿಯಾಗಿದ್ದವು. 25ಕ್ಕೆ 9 ಅಂಕಗಳನ್ನು ಪಡೆದ ನಾನು ಪರೀಕ್ಷೆಯಲ್ಲಿ ಟಾಪರ್ ಆಗಿದ್ದೆ. ಆದರೆ ಆ ನಂತರ ಎಲ್ಲ ಕ್ರೀಡೆಗಳ ಅಂಕಣಗಳ ಅಳತೆಯನ್ನು ಸಮರ್ಪಕವಾಗಿ ತಿಳಿದುಕೊಂಡಿದ್ದೆ. ನಂತರದ ದಿನಗಳಲ್ಲಿ ತೀರಾ 9ರಷ್ಟು ಕಡಿಮೆ ಅಂಕಗಳು ಬೀಳಲಿಲ್ಲ ಬಿಡಿ. 16ಕ್ಕಿಂತ ಜಾಸ್ತಿಯಾಗಿದ್ದವು ಎನ್ನುವುದು ಸಮಾಧಾನ. ಇನ್ನೊಂದು ಮಜಾ ಸಂಗತಿ ಹೇಳಲೇಬೇಕು. ನನ್ನ ಪಕ್ಕದಲ್ಲಿ ದೋಸ್ತ ಪ್ರದೀಪ (ಭಟ್ಟ) ಹಾಗೂ ಇನ್ನೊಬ್ಬ ದೋಸ್ತ ಸುರೇಂದ್ರರು ಎಕ್ಸಾಂಗಳಲ್ಲಿ ಕೂರುತ್ತಿದ್ದರು. ಅಲ್ಪ ಸ್ವಲ್ಪ ಹೇಳಿಕೊಡುತ್ತಿದ್ದೆ. ನನಗಿಂತ ಒಂದೆರಡು ಅಂಕ ಕಡಿಮೆ ಬಿದ್ದು ಅವರು ಪರೀಕ್ಷೆಯಲ್ಲಿ ಪಾಸಾಗುತ್ತಿದ್ದರು. ಮೊದ ಮೊದಲು ನನ್ನ ಜೊತೆಗೆ ಲಿಂಗರಾಜ ಮಾಸ್ತರ್ರು ಅವರಿಬ್ಬರನ್ನೂ ಹೊಗಳುತ್ತಿದ್ದರು. ಆದರೆ ಕೊನೆ ಕೊನೆಗೆ ಮಾತ್ರ ಲಿಂಗರಾಜ ಮಾಸ್ತರ್ರಿಗೆ ನಮ್ಮ ಹಕೀಕತ್ತಿನ ವಾಸನೆ ಬಂದು ಪರೀಕ್ಷೆ ಮಾಡಿದ್ದರು. ದೋಸ್ತರಿಬ್ಬರೂ ಸಿಕ್ಕಿಬಿದ್ದು ಹೊಡೆತ ತಿಂದಿದ್ದರು. ನನಗೂ ಒಂದೆರಡು ಹೊಡೆತ ಬಿದ್ದಿತ್ತೆನ್ನಿ.
ಲಿಂಗರಾಜ ಮಾಸ್ತರ್ರೆಂದ ಕೂಡಲೇ ಮುಖ್ಯವಾಗಿ ನೆನಪಾಗುವುದು ಅವರು ಇತರ ಶಿಕ್ಷಕರೊಂದಿಗೆ ಮಾಡುತ್ತಿದ್ದ ಜಗಳ. ವನಮಾಲಾ ಮೇಡಂ, ವಿನೋದಾ ಮೇಡಂ, ಭಾರತಿ ಮೇಡಂ ಹೀಗೆ ಬೇರೆ ಬೇರೆ ಶಿಕ್ಷಕಿಯರ ಜೊತೆಗೆ ಸೊಕಾ ಸುಮ್ಮನೆ ಜಗಳ ಮಾಡುತ್ತಿದ್ದರು. ಆ ಮೇಡಮ್ಮುಗಳ ಕ್ಲಾಸಿನಲ್ಲಿ ಇವರು ಮಣ್ಣು ಹೊರಿಸುವ ಕೆಲಸ ಮಾಡಿದರೆ, ದೈಹಿಕ ಶಿಕ್ಷಣದ ಸಮಯದಲ್ಲಿ ಆ ಮೇಡಮ್ಮುಗಳು ತಮ್ಮ ತಮ್ಮ ಕ್ಲಾಸುಗಳನ್ನು ತೆಗೆದುಕೊಂಡು ಮುಯ್ಯಿ ತೀರಿಸಿಕೊಳ್ಳುತ್ತಿದ್ದ ನಿದರ್ಶನಗಳು ಅಚ್ಚಳಿಯದೇ ಮನಸ್ಸಿನಲ್ಲಿ ಉಳಿದಿವೆ.
ಆರು ಅಡಿಯ ಲಿಂಗರಾಜ ಮಾಸ್ತರ್ರರ ಗತ್ತು ಬಹಳ ಚನ್ನಾಗಿತ್ತು. ಎದೆಯುಬ್ಬಿಸಿ ನಡೆದು ಬರುತ್ತಿದ್ದ ಅವರು ತಮ್ಮ ನಿಲುವಿನಿಂದಲೇ ಎಲ್ಲರನ್ನೂ ಹೆದರಿಸುತ್ತಿದ್ದರು. ಬುಲೆಟ್ ಸದ್ದಂತೂ ನಮ್ಮ ಎದೆಯಲ್ಲಿ ನಡುಕವನ್ನು ತರುತ್ತಿತ್ತು. ಕ್ರೀಡಾಕೂಟಗಳು, ಪ್ರತಿಭಾ ಕಾರಂಜಿ ಇಂತಹ ಸಂದರ್ಭಗಳಲ್ಲೆಲ್ಲ ನಮ್ಮನ್ನು ಮುನ್ನಡೆಸಿ ಕರೆದೊಯ್ಯುತ್ತಿದ್ದ ಲಿಂಗರಾಜ ಮಾಸ್ತರ್ ನಮ್ಮನ್ನು ಎಷ್ಟು ಸುರಕ್ಷಿತವಾಗಿ ಕರೆದುಕೊಂಡು ಬರುತ್ತಿದ್ದರೆಂದರೆ ಬಹಳ ಗೌರವವನ್ನು ಮೂಡಿಸುತ್ತಿದ್ದರು.
ನಾನು SSLC ಯಲ್ಲಿದ್ದಾಗ ಮೊಟ್ಟ ಮೊದಲ ಬಾರಿಗೆ ಪ್ರತಿಭಾ ಕಾರಂಜಿ ನಡೆಯಿತು. ತಾಳಗುಪ್ಪದಲ್ಲಿ ನಡೆದ ಪ್ರತಿಭಾ ಕಾರಂಜಿಯಲ್ಲಿ ನಮ್ಮ ಹೈಸ್ಕೂಲು ಸಮಗ್ರ ವೀರಾಗ್ರಣಿ ಗಳಿಸಿಕೊಂಡಿತು. ಕ್ವಿಜ್ ಹಾಗೂ ಚಿತ್ರಕಲೆಯಲ್ಲಿ ಮೊದಲ ಬಹುಮಾನ ಪಡೆದಿದ್ದ ನಾನು ಚರ್ಚಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದೆ. ಸಿಕ್ಕಾಪಟ್ಟೆ ಖುಷಿಯಾಗಿದ್ದ ನಾನು ವಾಪಾಸು ಹೈಸ್ಕೂಲಿಗೆ ಬಂದರೆ ಲಿಂಗರಾಜ ಮಾಸ್ತರ್ರು ಸೀದಾ ಸ್ಟಾಫ್ ರೂಮಿಗೆ ಕಡೆದು ಚನ್ನಾಗಿ ನಾಲ್ಕೇಟು ಬಾರಿಸಿದರು. ಅರೇ ನಾನೇನು ಮಾಡಿದೆ ಎಂದು ಆಲೋಚಿಸುತ್ತಿದ್ದಾಗ ರಸಪ್ರಶ್ನೆಯ ವಿಷಯವನ್ನು ತೆಗೆದುಕೊಂಡರು. ನಾನು ಏನೇನು ತಪ್ಪು ಹೇಳಿದ್ದೇನೆ ಎನ್ನುವುದನ್ನೆಲ್ಲ ಎತ್ತಿ ಎತ್ತಿ ಹೇಳಿದರು. ಒಂದೊಂದು ತಪ್ಪು ಉತ್ತರಕ್ಕೂ ಒಂದೊಂದು ಹೊಡೆತ ಕೊಟ್ಟು ಇನ್ನು ಮುಂದೆ ಹೀಗೆ ತಪ್ಪು ಉತ್ತರ ಕೊಟ್ಟರೆ ನೋಡು ಸಿಗಿದು ಹಾಕಿ ಬಿಡ್ತೀನಿ ಹುಷಾರ್ ಎಂದು ಅಬ್ಬರಿಸಿದ್ದರು.
SSLCಯ ಕೊನೆಯ ದಿನಗಳಲ್ಲಿ ಲಿಂಗರಾಜ ಮಾಸ್ತರ್ರು ಬೇರೆ ಶಾಲೆಗೆ ವರ್ಗವಾಗಿದ್ದರು. ವಾರಕ್ಕೆ ಮೂರು ದಿನ ಕಾನಲೆ ಹೈಸ್ಕೂಲಿಗೆ ಬರುತ್ತಿದ್ದರು. ವಾರಕ್ಕೆ ಮೂರು ದಿನ ಬೇರೆ ಯಾವುದೋ ಹೈಸ್ಕೂಲಿಗೆ ಹೋಗಿ ಬರುತ್ತಿದ್ದರು. ಆ ಸಂದರ್ಭದಲ್ಲಿಯೇ ಇರಬೇಕು ನಾವು ಅವರನ್ನು ಮಿಸ್ ಮಾಡಿಕೊಳ್ಳಲು ಆರಂಭಿಸಿದ್ದು. ಪ್ರತಿದಿನ ಹೈಸ್ಕೂಲು ಆರಂಭದ ಸಂದರ್ಭದಲ್ಲಿ ಬುಲೆಟ್ ಸದ್ದಾಗದಿದ್ದರೆ ನಮಗೆ ಏನನ್ನೋ ಕಳೆದುಕೊಂಡ ಅನುಭವ ಆಗುತ್ತಿತ್ತು. ಇಂತಹ ನಿಲುವಿನ ಲಿಂಗರಾಜ ಮಾಸ್ತರ್ ಈಗ ಯಾವ ಶಾಲೆಯಲ್ಲಿದ್ದಾರೋ ಗೊತ್ತಿಲ್ಲ ಬಿಡಿ.

(ಮುಂದುವರಿಯುತ್ತದೆ..)              

Tuesday, December 15, 2015

ಬೇಗನೆ ಬಾರೋ ಕೊನೆಗೌಡಾ

ಬೇಗನೆ ಬಾರೋ ಕೊನೆಗೌಡಾ
ಆಳ್ ಹಿಡ್ಕಂಡ್ ಬಾರೋ ನಿಂನ್ ಸಂಗಡಾ ||

ಕೊನೆಯೆಲ್ಲ ಬೆಳೆದೋತು
ಹಣ್ಣಡಿಕೆ ಆಗೋತು
ಗೋಟಾಗಿ ಉದುರಿ ಹೋತು
ಬೇಗನೆ ಬಾರೋ ಕೊನೆಗೌಡಾ ||

ಯಂದಂತೂ ತುಂಡ್ ತ್ವಾಟ
ಜೊತೆಗಿದ್ದು ಮಂಗನ ಕಾಟ
ದಿನವಿಡಿ ತ್ವಾಟಕ್ಕೆ ಓಡಾಟ
ಬೇಗನೆ ಬಾರೋ ಕೊನೆಗೌಡಾ ||

ಕೇಳಿದಷ್ಟು ದುಡ್ ಕೊಡ್ತಿ
ಮಜ್ಜಿಗೆ ತಂಬ್ಳಿ ಮಾಡ್ಕೊಡ್ತಿ
ಕೈಖರ್ಚು ಹಾಕ್ಕೊಡ್ತಿ
ಬೇಗನೆ ಬಾರೋ ಕೊನೆಗೌಡ ||

ತೆರಿಯಡಿಕೆ ಮಾಡಡಾ
ಕೊನೆ ಉಗಿದು ಹಾಕಡಾ
ಅರ್ಧಕ್ಕೆ ಹೋಗಡಾ
ಬೇಗನೆ ಬಾರೋ ಕೊನೆಗೌಡಾ ||

ಮುರಿಯಾಳೂ ಬತ್ವಿಲ್ಲೆ
ಕೆಲಸಕ್ಕೆ ಸಿಕ್ತ್ವಿಲ್ಲೆ
ಆಳ್ ಲೆಕ್ಕದವ್ ಕಾಣ್ತ್ವಿಲ್ಲೆ
ಬೇಗನೆ ಬಾರೋ ಕೊನೆಗೌಡಾ ||

ಕೊನೆ ಕೊಯ್ದು ಮುಗಿದೋದ್ರೆ
ದೊಡ್ ತೊಂದ್ರೆ ತಪ್ಪಿ ಹೋಗ್ತು
ತಲೆ ಭಾರ ಇಳಿದೋಗ್ತು
ಬೇಗನೆ ಬಾರೋ ಕೊನೆಗೌಡಾ ||

ಅಡಿಕೆಗೆ ರೇಟ್ ಬಂಜಡಾ
ರೇಟ್ ಇದ್ದಾಗಲೇ ಕೊಟ್ಕಳವಡಾ
ಚಾಲಿ ಸುಲಿಯಲ್ ಆಳ್ ಬಂಜ್ವಡಾ
ಬೇಗನೆ ಬಾರೋ ಕೊನೆಗೌಡ ||

ಆಳನ್ನೂ ಕರ್ಕಂಡ್ ಬಾ
ಸರಿ ಸಮಯ ನೋಡ್ಕ್ಯಂಡ್ ಬಾ
ಬೇಗನೆ ಬಾರೋ ಕೊನೆಗೌಡಾ
ಆಳ್ ಹಿಡ್ಕಂಡ್ ಬಾರೋ ನಿನ್ ಸಂಗಡಾ ||

-ವಿನಯ ದಂಟಕಲ್

****
(ಇದು ಕೊನೆ ಕೊಯ್ಲಿನ ಸೀಸನ್ನು. ತೋಟದಲ್ಲಿ ಕೊನೆ ಹಣ್ಣಾಗಿದೆ. ಹಣ್ಣಡಿಕೆ ಉದುರಿ ಹೋಗ್ತಾ ಇದೆ. ಜೊತೆಗೆ ಮಂಗನ ಕಾಟ ಬೇರೆ. ಕೊನೆಗೌಡನನ್ನು ಹುಡುಕಿ ಹುಡುಕಿ ಅಡಿಕೆ ಬೆಳೆಗಾರರು ಸೋಲುತ್ತಿದ್ದಾರೆ. ಕೊನೆಗೌಡರ ದಿನದ ಪಗಾರು 800 ರು. ದಾಟಿದೆ. ಅಡಿಕೆಗೆ ರೇಟು ಬಂದಿದೆ ಎನ್ನುವ ಸುದ್ದಿ ಬೇರೆ ಕಿವಿಗೆ ಬಿದ್ದಿದೆ. ಹೀಗಿರುವಾಗ ಅಡಿಕೆ ಬೆಳೆಗಾರರು ಕೊನೆಗೌಡನ ಬಳಿ ಬೇಗ ಬಾ ಎಂದು ಪರಿ ಪರಿಯಾಗಿ ಕೇಳಿಕೊಳ್ಳುವ ಬಗೆಯೇ ಈ ಟಪ್ಪಾಂಗುಚ್ಚಿ ಕವಿತೆ. ನಿಮಗಿಷ್ಟವಾದರೆ ಅಭಿಪ್ರಾಯ ತಿಳಿಸಿ)

(ಈ ಕವಿತೆ ಬರೆದಿದ್ದು 15-12-2012ರಂದು ಶಿರಸಿಯಲ್ಲಿ)

ನನ್ನ ಪ್ರೀತಿಯ ಹಾಡು

ನನ್ನ ಪ್ರೀತಿಯ ಹಾಡು
ಕೇಳಲು ಬಲು ಸುಲಭ
ತಿಳಿದು ಪಡೆಯಲು ಅದುವೆ
ನಷ್ಟ ನೋಡು..||

ನನ್ನ ಪ್ರೀತಿಯ ಹಾಡು
ಇಂಪು ವಾದ್ಯದ ಬೀಡು
ಅರಿತು ನುಡಿಸಲು ಅದುವೆ
ಕಷ್ಟ ನೋಡು ||

ನನ್ನ ಪ್ರೀತಿಯ ಹಾಡು
ಬಹು ಅರ್ಥ, ಹಲ ಸೊಗಡು
ಬಲಿಯುವ ಮೊದಲೇ
ಬಿತ್ತು ನೋಡು ||

ನನ್ನ ಪ್ರೀತಿಯ ಹಾಡು
ಬಹಳ ಪ್ರೀತಿಯ ಗೂಡು
ಕಳೆದು ಹೋದೀತು ಅದುವೆ
ನಿತ್ಯ ನೋಡು ||

ನನ್ನ ಪ್ರೀತಿಯ ಹಾಡು
ಹಲವು ನೆನಪಿನ ಮಾಡು
ಮಾಡು ಮುರಿದೊಡೆ ಅದುವೆ
ಮಣ್ಣು ನೋಡು ||

****

(ಈ ಕವಿತೆಯನ್ನು ಬರೆದಿರುವುದು 05-04-2006ರಂದು ದಂಟಕಲ್ಲಿನಲ್ಲಿ)