Tuesday, June 2, 2015

ಮಾಸ್ತರ್ ಮಂದಿ-3

ಸೀಮಾ ಟೀಚರ್ :
                   ನಿಜಕ್ಕೂ ಈ ಟೀಚರ್ ರ ಪೂರ್ಣ ಹೆಸರು ನನಗೆ ಗೊತ್ತಿಲ್ಲ. ಕೆಲವರು ಸೀಮಾ ನಾಯ್ಕ ಎಂದು ಹೇಳಿದರೆ ಮತ್ತೆ ಕೆಲವರು ಸೀಮಾ ಮೇಡಮ್ ಕ್ರಿಶ್ಚಿಯನ್ನರು ಎಂದೂ ಹೇಳಿದ್ದಾರೆ. ಅವರ ಪೂರ್ಣ ಹೆಸರು ಏನೇ ಆಗಿರಲಿ ಅದು ಬಿಡಿ. ಆದರೆ ಅವರ ಬಳಿ ನಾನು ಕಲಿತಿದ್ದು 15 ದಿನಗಳಿರಬೇಕು ಅಷ್ಟೇ. ಸೀಮಕ್ಕೋರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಡಕಳ್ಳಿಯಲ್ಲಿ ನನಗೆ ಟೀಚರ್ ಆಗಿ ಬಂದಿರಲಿಲ್ಲ. ಬದಲಾಗಿ ನಮ್ಮೂರಿನಲ್ಲಿದ್ದ ಕಿರಿಯ ಪ್ರಾಥಮಿಕ ಶಾಲೆ ದಂಟಕಲ್-ಮುತ್ಮೂರ್ಡು ಶಾಲೆಗೆ ಬಂದಿದ್ದರು. ಶಿರಸಿಯಲ್ಲಿ ಉಳಿದುಕೊಂಡಿದ್ದ ಇವರು ಕಾನಸೂರಿಗೋ, ಅಡ್ಕಳ್ಳಿ ಕತ್ರಿಗೋ ಬಂದು ಅಲ್ಲಿಂದ 4 ಕಿ.ಮಿ ದೂರದ ದಂಟಕಲ್ ಶಾಲೆಗೆ ಅಜೋ ಎಂದು ನಡೆದುಕೊಂಡು ಬರುತ್ತಿದ್ದುದು ನನಗಿನ್ನೂ ನೆನಪನಲ್ಲಿದೆ. ಇವರು ನನಗಿಂತ ನನ್ನ ತಂಗಿಗೆ ಕಲಿಸಿದ ಶಿಕ್ಷಕಿ ಎಂದರೆ ತಪ್ಪಿಲ್ಲ ನೋಡಿ.
                ದಂಟಕಲ್ ಶಾಲೆಗೆ ಏಕೈಕ ಶಿಕ್ಷಕರು. ಈ ಶಾಲೆಯಲ್ಲಿ ಮಕ್ಕಳೆಷ್ಟಿದ್ದಾರೆ ಮಹಾ ಎಂದುಕೊಳ್ಳಬೇಡಿ. ಮ್ಯಾಕ್ಸಿಮಮ್ 10 ಮಕ್ಕಳು. ಇಂತಹ ಶಾಲೆ ನಾನು ಮೂರರಲ್ಲೋ ಅಥವಾ ನಾಲ್ಕರಲ್ಲೋ ಇದ್ದಾಗ ಪುನಾರಂಭ ಮಾಡಿತ್ತು. ಗಾಂಧಿ ಶತಾಬ್ದಿ ಕಾಲದಲ್ಲಿ ನಿರ್ಮಾಣಗೊಂದ ಶಾಲೆ ಎನ್ನುವ ಖ್ಯಾತಿ ಪುನಾರಂಭಕ್ಕೆ ಕಾರಣವಾಗಿತ್ತು. ಶಾಲೆ ಆರಂಭಗೊಂಡ ಹೊಸತರಲ್ಲಿ ಒಂದಿಬ್ಬರು ತಾತ್ಕಾಲಿಕ ಶಿಕ್ಷಕರಿದ್ದರು. ಆದರೆ ಕೊನೆಗೆ ಬಂದವರು ಮಾತ್ರ ಸೀಮಕ್ಕೋರು. ಆ ದಿನಗಳಲ್ಲಿ ನನ್ನದೇ ವಾರಗೆಯ ಪಕ್ಕದ ಮನೆಯ ರಂಜನಾ ಎನ್ನುವಾಕೆ ಈ ಶಾಲೆಗೆ ಹೋಗುತ್ತಿದ್ದಳು. ಜೊತೆಗೆ ನನ್ನ ತಂಗಿ, ತಂಗಿಯ ವಾರಗೆಯ ನಂದನ ಎನ್ನುವಾತನೂ ಇದೇ ಶಾಲೆಯ ವಿದ್ಯಾರ್ಥಿಯಾಗಿದ್ದ. ಹೀಗಾಗಿ ನಾನು ಅಡಕಳ್ಳಿ ಶಾಲೆಗೆ ಹೋಗುವುದನ್ನು ನಿಲ್ಲಿಸಿ ನಮ್ಮೂರ ಶಾಲೆಗೆ ಹೋಗಲು ಆರಂಭಿಸಿದ್ದೆ. ಸರಿಸುಮಾರು 15ದಿನ ನಾನು ಈ ಶಾಲೆಗೆ ಹೋಗಿದ್ದೆ ಎನ್ನಿಸುತ್ತದೆ. ಕೊನೆಗೊಂದು ದಿನ ಅಡಕಳ್ಳೀ ಶಾಲೆಯ ಗಡ್ಕರ್ ಮಾಸ್ತರ್ ಬಂದು ನಿನ್ನ ಟಿಸಿ ತೆಗೆದುಕೊಂಡು ಹೋಗಲು ನಿನ್ನ ತಂದೆಗೆ ತಿಳಿಸು ಎಂದು ಹೇಳಿದ್ದರು. ನಾನು ಅಪ್ಪನ ಬಳಿ ಹೋಗಿ ಹೀಗೆ ಹೇಳಿದ್ದೆ. ಕೊನೆಗೆ ನನ್ನ ಅಪ್ಪನೇ ಓದಿನ ನಡುವೆ ಶಾಲೆ ಬದಲಾಯಿಸುವುದು ಬೇಡ. ಮುಂದೆ ಸಮಸ್ಯೆಯಾಗುತ್ತದೆ ಎಂದು ಹೇಳಿದ್ದರು. ನಾನು ಮರಳಿ ಅಡ್ಕಳ್ಳಿ ಶಾಲೆಗೆ ಹೋಗಲು ಆರಂಭಿಸಿದ್ದೆ. ಸೀಮಕ್ಕೋರು ನಂತರ ನಾನು ಶಾಲೆಯಿಂದ ಮರಳಿ ಮನೆಗೆ ಬರುವಾಗಲೆಲ್ಲ ಸಿಗುತ್ತಿದ್ದರು. ಬಹಳ ಸುಂದರವಾಗಿಯೂ ಇದ್ದರು ಎನ್ನಿ. ಇಂತಿಪ್ಪ ಅಕ್ಕೋರು ಕೊನೆಗೊಂದು ದಿನ ಬೇರೆ ಶಾಲೆಗೆ ವರ್ಗಾವಣೆಯಾಗಿ ಹೋದರು. ಮತ್ತೆ ಶಾಲೆಗೆ ಶಿಕ್ಷಕರಿಲ್ಲದೇ ಅನೇಕ ದಿನಗಳ ಕಾಲ ಯಾರು ಯಾರೋ ತಾತ್ಕಾಲಿಕವಾಗಿ ಕಲಿಸಲು ಬರುತ್ತಿದ್ದುದೂ ನೆನಪಿನಲ್ಲಿದೆ.

ತಾರಾ ಹೆಗಡೆ :
            ನಾನು ಇಂದಿಗೂ ನೆನಪು ಮಾಡಿಕೊಳ್ಳುವ ಶಿಕ್ಷಕರ ಪೈಕಿ ತಾರಕ್ಕೋರು ಒಬ್ಬರು. ನಾನು ಎರಡನೇ ಕ್ಲಾಸಿನಲ್ಲಿದ್ದಾಗ ಅಡ್ಕಳ್ಳಿ ಶಾಲೆಗೆ ವರ್ಗಾವಣೆಯಾಗಿ ಬಂದಿದ್ದವರು ತಾರಕ್ಕೋರು. ಮೊದಲು ಯಾವ ಶಾಲೆಗೆ ಇದ್ದರೋ ಗೊತ್ತಿಲ್ಲ. ನಮ್ಮ ಶಾಲೆಗೆ ಬರುವ ವೇಳೆಗೆ ನನ್ನ ಪರಿಸ್ಥಿತಿ ಮಾತ್ರ ಅತ್ಯಂತ ಹೀನಾಯವಾಗಿತ್ತು ಎಂದರೆ ತಪ್ಪಾಗಲಿಕ್ಕಿಲ್ಲ ನೋಡಿ. ಯಾರೇ ಶಿಕ್ಷಕರು ಬಂದರೂ ನನಗೆ ಯಥಾನುಶಕ್ತಿ ಹೊಡೆಯುತ್ತಿದ್ದರು. ಶಿಕ್ಷಕರ ಪಾಲಿಗೆ ನಾನು ಹೊಡೆತ ತಿನ್ನುವ ಹುಡುಗನಾಗಿದ್ದೆ. ಪ್ರತಿದಿನ ಹೊಡೆತ ಬೀಳುತ್ತಿತ್ತು. ಕೊನೆಗೊಂದು ದಿನ ತಾರಕ್ಕೋರು ನಮ್ಮ ಶಾಲೆಗೆ ಬಂದರು. ನಮ್ಮ ಕ್ಲಾಸಿನ ಜವಾಬ್ದಾರಿ ಅವರಿಗೆ ಸೇರಿತು. ಅಂದಿನಿಂದ ನನಗೆ ಹೊಡೆತ ಬೀಳುವುದು ಕೆಲಕಾಲ ತಪ್ಪಿತು ಎನ್ನಬಹುದು ನೋಡಿ.
              ತಾರಕ್ಕೋರೊಬ್ಬರೇ ಇರಬೇಕು ನನ್ನ ಪ್ರೈಮರಿ ಜೀವನದಲ್ಲಿ ನನ್ನನ್ನು ಪ್ರೀತಿಯಿಂದ ಕಂಡವರು. ನನಗೂ ಭಾವನೆಯಿದೆ. ನನ್ನ ಮಾತನ್ನೂ ಯಾರಾದರೂ ಕೇಳುತ್ತಾರೆ ಎನ್ನಿಸಿದ್ದು ತಾರಕ್ಕೋರು ಬಂದಮೇಲೆಯೇ. ಬಹುಶಃ ಅತ್ಯಂತ ತುಂಟತನದಿಂದ ಕೂಡಿದ್ದ ನನ್ನನ್ನು ಪ್ರೀತಯಿಂದ ಮಾತನಾಡಿಸಿ ನನ್ನಲ್ಲಿ ಅಲ್ಪಸ್ವಲ್ಪ ಬದಲಾವಣೆ ಮಾಡಿದವರು ಎಂದರೆ ಅದು ತಾರಕ್ಕೋರೇ ಎಂದರೆ ಖಂಡಿತ ತಪ್ಪಲ್ಲ. ನಾಲ್ಕೈದು ವರ್ಷ ಅವರೇ ನನಗೆ ಕಲಿಸಿದವರು. ಅವರ ಪ್ರೀತಿಗೆ, ಆದರಕ್ಕೆ ನಾನು ಇಂದಿಗೂ ಋಣಿಯಾಗಿದ್ದೇನೆ.
             ಶಾಲೆಗಳೆಂದರೆ ಓದು, ಕಲಿಕೆ, ಅರ್ಧಗಂಟೆ ಆಟ, ಹೊಡೆತ ಇತ್ಯಾದಿಗಳೇ ಎಂದುಕೊಂಡಿದ್ದ ನಮಗೆ ತಾರಕ್ಕೋರು ಬಂದ ನಂತರ ಶಾಲೆಯಲ್ಲಿ ರಚನಾತ್ಮಕ ಕೆಲಸಗಳು ನಡೆಯುತ್ತವೆ ಎನ್ನುವುದು ಅರಿವಿಗೆ ಬಂದಿತು. ಪ್ರತಿ ಶನಿವಾರ ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮಾಡುತ್ತಿದ್ದರು. ಶಾಲೆಯ ಎಲ್ಲ ವಿದ್ಯಾರ್ಥಿಗಳನ್ನೂ ದೊಡ್ಡ ಕೋಣೆಗೆ ಕರೆದುಕೊಂಡು ಬಂದು ಸಾಂಸ್ಕೃತಿಕ ಕಾರ್ಯಕ್ರಮ ನಡೆಸುತ್ತಿದ್ದರು. ಪ್ರತಿಯೊಬ್ಬ ವಿದ್ಯಾರ್ಥಿಯೂ ಹಾಡು, ಡ್ಯಾನ್ಸು, ಮಿಮಿಕ್ರಿ, ಕಥೆ ಹೇಳುವುದು ಹೀಗೆ ಏನುಬೇಕಾದರೂ ಮಾಡಬಹುದಿತ್ತು. ಯಾರೂ ತಪ್ಪಿಸಿಕೊಳ್ಳುವಂತಿಲ್ಲ ಎನ್ನುವುದು ಕಡ್ಡಾಯವಾಗಿತ್ತು. ಆ ದಿನಗಳಲ್ಲಿ ನಾನು ಸಿಕ್ಕಾಪಟ್ಟೆ ಹಾಡು ಹೇಳುತ್ತಿದ್ದೆ. ಮಿಮಿಕ್ರಿ ಮಾಡುತ್ತಿದೆ. ಯಾವುದೋ ಕಥೆಗಳನ್ನೆಲ್ಲ ಹೇಳುತ್ತಿದೆ. ಕ್ರಿಕೆಟ್ ಆಟಗಾರರು ಹೇಗೆ ಆಡುತ್ತಾರೆ ಎನ್ನುವುದನ್ನೆಲ್ಲ ಥೇಟು ಆಟಗಾರರಂತೆ ಮಾಡಿ ತೋರಿಸುತ್ತಿದೆ. ಪ್ರತಿ ಶನಿವಾರ ಒಳ್ಳೆಯ ಕಾರ್ಯಕ್ರಮ ಕೊಟ್ಟವನಿಗೆ ಚಾಕಲೇಟ್ ಒಂದನ್ನು ಪ್ರೈಜ್ ಆಗಿ ಕೊಡುತ್ತಿದ್ದರು. ಇಂತಹ ಚಾಕಲೇಟನ್ನು ಮೂರೋ ನಾಲ್ಕೋ ತೆಗೆದುಕೊಂಡಿದ್ದೇನೆ ನೋಡಿ. ಕೊನೆಗೊಂದು ದಿನ ನಮ್ಮದೇ ಶಾಲೆಗೆ ಶಿಕ್ಷಕರಾಗಿ ಬಂದ ಸಿ. ಎಂ. ಹೆಗಡೆಯವರು `ಅಕ್ಕೋರೆ ನೀವು ಕಲ್ಚರಲ್ಲು ಅದೂ ಇದೂ ಕಾರ್ಯಕ್ರಮ ಮಾಡಿ ಮಕ್ಕಳ ತಲೆ ಹಾಳು ಮಾಡಬೇಡಿ. ನಮಗೂ ಸುಮ್ಮನೆ ತೊಂದರೆ. ಯಾಕ್ ಹಿಂಗಿದ್ದೆಲ್ಲ ಮಾಡ್ತೀರಿ. ಮಕ್ಕಳು ಓದಿಕೊಳ್ಳಲಿ..' ಎಂದು ಜಗಳ ಮಾಡಿದ ನಂತರ ಶನಿವಾರದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತೆರೆ ಬಿದ್ದಿತ್ತು.
              ತಾರಕ್ಕೋರು ಮದ್ಯಾಹ್ನದ ಬಿಡುವಿನಲ್ಲಿ ನಿದ್ದೆ ಮಾಡುತ್ತಿದ್ದರು. ಆಗೆಲ್ಲ ನಾವು ಸದ್ದಿಲ್ಲದೇ ಕ್ಲಾಸಿನ ಒಳಕ್ಕೆ ಹೋಗಿ ಏನಾದರೂ ಕಿಲಾಡಿ ಮಾಡಿ ಬರುತ್ತಿದ್ದೆವು. ನಾವು ಕಿಲಾಡಿ ಮಾಡುವುದು ತಾರಕ್ಕೋರಿಗೆ ಗೊತ್ತಿದ್ದರೂ ಸುಮ್ಮನೆ ಇರುತ್ತಿದ್ದರು. ಇಂತಹ ತಾರಕ್ಕೋರು ಆಗಾಗ ತಾವು ತಂದಿದ್ದ ತಿಂಡಿಯನ್ನೂ ನಮಗೆ ನೀಡುತ್ತಿದ್ದರು. ತಾರಕ್ಕೋರು ಎಂದ ಕೂಡಲೇ ಇನ್ನೊಂದು ಪ್ರಮುಖ ಘಟನೆ ನೆನಪಿಗೆ ಬರುತ್ತದೆ ನೋಡಿ. ಕ್ಲಾಸು ಎಷ್ಟು ಎನ್ನುವುದು ಸರಿಯಾಗಿ ನೆನಪಿನಲ್ಲಿ ಇಲ್ಲ. ಶಾಲೆಗಳ ನಡುವಿನ ಕ್ರೀಡಾಕೂಟಕ್ಕಾಗಿ ನಾವು ಕಾನಸೂರಿಗೆ ಹೋಗಬೇಕಿತ್ತು. ನಾನು ಹೋಗಿದ್ದೆ. ಆಗೆಲ್ಲ ಉಲ್ಟಾ ಪಲ್ಟಾ ಎನ್ನುವ ಹೆಸರಿನ ಬಡೆಸೊಪ್ಪಿನ ಮಸಾಲಾ ಮಿಕ್ಸ್ ಬಹಳ ಹೆಸರುವಾಸಿಯಾಗಿತ್ತು. ನಾವೆಲ್ಲ ತಿನ್ನುವುದಕ್ಕಾಗಿ ಅದನ್ನು ಕೊಳ್ಳುತ್ತಿರಲಿಲ್ಲ. ಬದಲಾಗಿ ಅದಕ್ಕೊಂದು ಕ್ರಿಕೆಟ್ ಆಟಗಾರರ ಸ್ಟಿಕ್ಕರ್ ಪ್ರೀ ಬರುತ್ತಿತ್ತು. ಅದಕ್ಕಾಗಿ ಕೊಳ್ಳುತ್ತಿದ್ದೆವು. ಆ ದಿನಗಳಲ್ಲಿ ನಾನು ಹೇಗೋ ಒಂದಿಷ್ಟು ದುಡ್ಡನ್ನು ಸಂಗ್ರಹ ಮಾಡಿ ಇಟ್ಟುಕೊಂಡಿದ್ದೆ. ಅದರಲ್ಲಿ ಒಂದು 10ರು. ನೋಟನ್ನು ತೆಗೆದುಕೊಂಡು ಹೋಗಿ ಇಡೀ 10 ರೂಪಾಯಿಗೆ ಉಲ್ಟಾ ಪಲ್ಟಾ ಕೊಂಡುತಂದಿದ್ದೆ.
                        ಆಗ 10 ರು. ಅಂದರೆ ಈಗಿನ 100 ರು.ಗೆ ಸಮಾ ಬಿಡಿ. ನಾನು ಇಡೀ 10 ರು. ಗೆ ಉಲ್ಟಾ ಪಲ್ಟಾ ಕೊಂಡಿದ್ದು ಉಳಿದೆಲ್ಲ ವಿದ್ಯಾರ್ಥಿಗಳಿಗೂ ಗೊತ್ತಾಗಿಬಿಟ್ಟಿತ್ತು. ಅವರು ಸೀದಾ ಬಂದವರೇ ತಾರಕ್ಕೋರ ಬಳಿ ನಾನು ಮಾಡಿದ ಘನ ಕಾರ್ಯವನ್ನು ಹೇಳಿಯೇ ಬಿಟ್ಟರು. ತಾರಕ್ಕೋರಿಂದ ಬುಲಾವ್ ಬಂದಿತು. ನಾನು ಕೊಂಡಿದ್ದ ವಿಷಯವನ್ನು ಅವರೇ ಹೇಳಿ ಅಷ್ಟೊಂದು ದುಡ್ಡು ಎಲ್ಲಿಂದ ಬಂತು ಹೇಳು ಎಂದವರೇ ಹೊಡೆಯಲು ಬೆತ್ತ ಎತ್ತಿದರು. ನಾನು ಹೆದರುತ್ತಲೇ ನಾನು ದುಡ್ಡು ಸಂಗ್ರಹ ಮಾಡಿ ಇಟ್ಟುಕೊಂಡಿದ್ದೆ. ಅದರಲ್ಲಿಯೇ ಇವನ್ನು ತೆಗೆದುಕೊಂಡಿದ್ದು ಎಂದಿದ್ದೆ. ಅದಕ್ಕೆ ಪ್ರತಿಯಾಗಿ `ಹೌದಾ? ನೀನೆ ಸಂಗ್ರಹ ಮಾಡಿಕೊಂಡಿದ್ದಾ? ಹಣ ಸಂಗ್ರಹ ಒಳ್ಳೆಯ ಕೆಲಸ. ಗುಡ್. ಆದರೆ ಸಂಗ್ರಹ ಮಾಡಿದ್ದನ್ನ ಹೀಗೆ ಸೊಕಾ ಸುಮ್ಮನೆ ಹಾಳು ಮಾಡಬೇಡ ತಿಳೀತಾ..?' ಎಂದು ಸಮಾಧಾನದಿಂದ ಹೇಳಿದ್ದು ನನಗೆ ಬಹಳ ಸಂತೋಷ ತಂದಿತ್ತು. ಆದರೆ ಅಕ್ಕೋರ ಬಳಿ ಚಾಡಿ ಹೇಳಿದವರಿಗೆ ಇದು ಬಹಳ ಇರಿಸು ಮುರುಸು ಎಂಬಂತಾಗಿತ್ತು.
                 ಅದೇ ಹುಡುಗರು ಸೀದಾ ಹೋಗಿ ನನ್ನ ಅಪ್ಪನ ಬಳಿಯೂ ಚಾಡಿ ಹೇಳಿಬಿಟ್ಟಿದ್ದರು. ಕೆಂಪು ಕಣ್ಣು ಬಿಡುತ್ತಾ ಬಂದಿದ್ದ ಅಪ್ಪ ಸೀದಾ ತಾರಕ್ಕೋರ ಬಳಿ ಬಂದಿದ್ದ. ತಾರಕ್ಕೋರ ಎದುರು ನನ್ನನ್ನು ಬಯ್ಯಲು ಆರಂಭಿಸಿದ್ದ ಅಪ್ಪ ಸಿಕ್ಕಾಪಟ್ಟೆ ಕೂಗಾಡಿದ್ದ. ತಾರಕ್ಕೋರು ನಾನು ಹಣವನ್ನು ಕೂಡಿಟ್ಟಿದ್ದನ್ನು ಹೇಳಿದರೂ ಅಪ್ಪನ ಸಿಟ್ಟು ಕಡಿಮೆಯಾಗಿರಲಿಲ್ಲ. ಕೊನೆಗೆ ಮನೆಗೆ ಹೋದ ನಂತರ ಅಪ್ಪನೇ `ತಮಾ ಎಲ್ಲಿ ಇಟ್ಟಿದ್ದೆ ನೀನು ದುಡ್ಡು ಸಂಗ್ರಹ ಮಾಡಿ. ಯಂಗೂ ತೋರ್ಸು..' ಎಂದಿದ್ದ. ನಾನು ತೋರಿಸಿದ್ದೆ. ಮರುದಿನ ಬೆಳಗಾಗುವ ವೇಳೆಗೆ ನಾನು ಸಂಗ್ರಹ ಮಾಡಿದ್ದ ದುಡ್ಡು ಮಾತ್ರ ಇರಲೇ ಇಲ್ಲ. ಎಲ್ಲವೂ ಅಪ್ಪನ ಓಸಿ ಆಟಕ್ಕೆ ಬಲಿಯಾಗಿದ್ದವು. ಈಗಲೂ ಅಪ್ಪ ತಾನು ಆ ದಿನ ಮಾಡಿದ್ದನ್ನು ನೆನಪು ಮಾಡಿಕೊಂಡು `ತಮಾ ನಾ ಹಾಂಗ್ ಮಾಡಕಾಗಿತ್ತಿಲ್ಲೆ ಆವತ್ತು..' ಎನ್ನುತ್ತಿರುತ್ತಾನೆ. ಆಗ ತಾರಕ್ಕೋರು ನನಗೆ ನೆನಪಾಗುತ್ತಾರೆ.
                ಅದೊಂದು ದಿನ ಆಟದ ಸಮಯದಲ್ಲಿ ನಾವೆಲ್ಲ ಕ್ರಿಕೆಟ್ ಆಡುತ್ತಿದ್ದೆವು. ಅದೇನು ಅನ್ನಿಸಿತೋ ತಾರಕ್ಕೋರು ತಾನೂ ಕ್ರಿಕೆಟ್ ಆಡುತ್ತೇನೆ ಎಂದು ಬಂದೇ ಬಿಟ್ಟರು. ತಾರಕ್ಕೋರು ಬಂದಿದ್ದು ನೋಡಿ ಅಲ್ಲೇ ಇದ್ದ ಇನ್ನೋರ್ವ ಶಿಕ್ಷಕ ಸಿ. ಎಂ. ಹೆಗಡೆಯವರೂ, ಹರೀಶ ನಾಯ್ಕರೂ ಬಂದರು. ನಾನು ಬ್ಯಾಟಿಂಗಿಗೆ ಇಳಿದಿದ್ದೆ. ನನ್ನ ಬ್ಯಾಟಿಂಗಿಗೆ ಎಲ್ಲಿ ಚಕ್ರ ಬಂದು ಬಿಡುತ್ತದೆಯೋ ಎಂದುಕೊಂಡು ಢವ ಢವ ಗುಡುತ್ತಲೇ ಇದ್ದೆ. ಬಂದವರೇ ತಾರಕ್ಕೋರು ನಾನ್ ಸ್ಟ್ರೈಕರ್ ಎಂಡ್ ನಲ್ಲಿ ಬ್ಯಾಟಿಂಗಿಗೆ ನಿಂತರು. ಅಯ್ಯೋ ನಾನು ತಾರಕ್ಕೋರ ಜೊತೆ ಬ್ಯಾಟಿಂಗಿಗೆ ನಿಲ್ಲಬೇಕಾ? ನಾನು ರನ್ ಹೊಡೆದರೆ ಅವರ ಕೈಲಿ ಓಡಲು ಆಗುತ್ತದೆಯೇ ಎನ್ನುವ ಆಲೋಚನೆ ಮೂಡಿತು. ಅದಕ್ಕೆ ಸರಿಯಾಗಿ ಸಿ. ಎಂ. ಹೆಗಡೆಯವರು ಬೌಲಿಂಗಿಗೆ ನಿಂತರು. ಹರೀಶ ನಾಯ್ಕರು ಕೀಪಿಂಗಿಗೆ ಬಂದರು. ಸಿ. ಎಂ. ಹೆಗಡೆಯವರಿಗೂ ನನಗೂ ಎಣ್ಣೆ-ಸೀಗೆಕಾಯಿ. ಆಟಕ್ಕೆ ಬರುವ ಮೊದಲೇ ಎಲ್ಲರ ಬಳಿಯೂ ವಿನಯ ಬ್ಯಾಟಿಂಗ್ ಮಾಡುತ್ತಿದ್ದಾನೆ. ತಡೀರೋ ನಾನು ಬೌಲಿಂಗ್ ಮಾಡ್ತೆ ಎಂದು ಹೇಳಿದ್ದರು ಅಷ್ಟೇ ಅಲ್ಲ ನನ್ನನ್ನು ಬೌಲ್ಡ್ ಮಾಡುತ್ತೇನೆ ಎಂದೂ ಹೇಳಿಬಿಟ್ಟಿದ್ದರು.
                  ಯಾವಾಗಲೂ ನನಗೆ ಹೊಡೆಯುವ, ನನ್ನ ವಿರುದ್ಧ ಸಿಟ್ಟು ಮಾಡುವ ಮಾಸ್ತರ್ರು ಬೌಲಿಂಗಿಗೆ ಬಂದಿದ್ದಾರೆ. ಒಮ್ಮೆಯಾದರೂ ಅವರ ಮರ್ಯಾದೆಯನ್ನು ತೆಗೆಯಬೇಡವೇ ಎಂದುಕೊಂಡೆ ನಾನು. ಏನಾದರಾಗಲಿ ಅವರಿಗೆ ಔಟಾಗಬಾರದು ಎಂದುಕೊಂಡೆ. ಅದಕ್ಕೆ ಸರಿಯಾಗಿ ಬೌಲ್ ಮಾಡಿದರು. ಮೊದಲ ಬಾಲಿಗೆ ಬೌಂಡರಿ ಹೊಡೆದೆ. ಎರಡನೇ ಬಾಲಿಗೂ ಹೊಡೆದೆ. ನಾನು ಎರಡು ಬೌಂಡರಿ ಹೊಡೆದಿದ್ದೇ ತಡ ಮಾಸ್ತರಿಗೆ ಸಿಟ್ಟು ಏರಿಬಿಟ್ಟಿತು. ಮೂರನೇ ಬಾಲನ್ನು ಸಿಟ್ಟಿನಿಂದಲೇ ಹಾಕಿದರು. ನಾನು ಅಷ್ಟೇ ಸಿಟ್ಟಿನಿಂದ ಹೊಡೆದೆ. ನನ್ನ ತಾಕತ್ತನ್ನೆಲ್ಲ ಹಾಕಿ ಹೊಡೆದಿದೆ. ಆದರೆ ಚೆಂಡು ಮಾತ್ರ ವೇಗವಾಗಿ ಹೋಗಿ ನಾನ್ ಸ್ಟ್ರೈಕರ್ ಎಂಡಿನಲ್ಲಿ ಬ್ಯಾಟ್ ಹಿಡಿದುಕೊಂಡಿದ್ದ ತಾರಕ್ಕೋರಿಗೆ ಬಡಿಯಿತು. ಬಡಿದ ಹೊಡೆತಕ್ಕೆ ದಬಾರನೆ ಬಿದ್ದರು. ಬಿದ್ದವರೇ ಅಳಲು ಆರಂಭಿಸಿದರು. ನನಗೆ ಮಾತ್ರ ಸಿಕ್ಕಾಪಟ್ಟೆ ಗಾಬರಿಯಾಯಿತು. ಅಕ್ಕೋರಿಗೆ ಹೊಡೆದುಬಿಟ್ಟೆನಲ್ಲ ಎಂದು ಮನಸ್ಸಿನಲ್ಲಿ ಕಾಡಿತು. ಅಕ್ಕೋರು ಸುಧಾರಿಸಿಕೊಳ್ಳಲು ಬಹಳ ಹೊತ್ತು ಬೇಕಾಯಿತು. ಅಷ್ಟರಲ್ಲಿ ಅಕ್ಕೋರಿಗೆ ನಾನು ಬಾಲ್ ಹೊಡೆದೆ ಎನ್ನುವ ಕಾರಣಕ್ಕಾಗಿ ಸಿ. ಎಂ. ಹೆಗಡೆ ಮಾಸ್ತರ್ರು ದಬಾ ದಬಾ ನಾಲ್ಕೇಟು ಹೊಡೆದೂ ಆಗಿತ್ತು. ಅವರು ಹೊಡೆದ ಏಟಿನ ಹಿಂದೆ ನಾನು ಬೌಂಡರಿ ಹೊಡೆದಿದ್ದರ ವಿರುದ್ಧ ಸೇಡು ತೀರಿಸಿಕೊಳ್ಳಬೇಕು ಎನ್ನುವ ರೊಚ್ಚೂ ಕೂಡ ಇತ್ತು ಎನ್ನಿ. ಸಿ. ಎಂ. ಹೆಗಡೆಯವರ ಹೊಡೆತದ ಸದ್ದಿನ ನಡುವೆ ತಾರಕ್ಕೋರು ವಿನಯಂದೆಂತಾ ತಪ್ಪಿಲ್ಲೆ. ಅವಂಗೆ ಎಂತಕ್ ಹೊಡಿತ್ರಿ ಎಂದು ಹೇಳುತ್ತಿದ್ದುದು ಮಾತ್ರ ಯಾರ ಕಿವಿಗೂ ಬೀಳಲೇ ಇಲ್ಲ.
                ಇಷ್ಟಾದ ಮೇಲೂ ಈ ಅಕ್ಕೋರಿಗೆ ನಾನು ಎಂದರೆ ಅಕ್ಕರೆಯಾಗಿತ್ತು. ನಾನು ಯಾವಾಗಲೂ ಹೋಂವರ್ಕ್ ಮಾಡುವಲ್ಲಿ ಕಳ್ಳಬೀಳುತ್ತಿದ್ದೆ. ಪ್ರತಿದಿನ ಏನಾದರೂ ಪಿಳ್ಳೆನೆವ ಹೇಳುತ್ತಿದ್ದೆ. ಆಗೆಲ್ಲ ಪಾಪ ಅಕ್ಕೋರು ನನಗೆ ಹೊಡೆಯದೇ ಸುಮ್ಮನೇ ಬಿಡುತ್ತಿದ್ದರು. ನಾವು ಒಂದೂ ತಪ್ಪಿಲ್ಲದೇ ಬರೆಯಬೇಕು ಎನ್ನುವ ಕಾರಣಕ್ಕಾಗಿ ಉಕ್ತಲೇಖನ ಬರೆಸುತ್ತಿದ್ದರು. ವಿಶೇಷವಾಗಿ ಇಂಗ್ಲೀಷ್ ಶುದ್ಧಬರಹವನ್ನೂ ಬರೆಸುತ್ತಿದ್ದರು. ಇವರು ಹೀಗೆ ಬರೆಸಿದ್ದರ ಮಹತ್ವ ನಮಗೆ ಆಗ ಆಗಿರಲಿಲ್ಲ. ಈಗ ಪತ್ರಿಕೋದ್ಯಮ ವೃತ್ತಿಗೆ ಕಾಲಿಟ್ಟಮೇಲೆ ಅವರು ಬರೆಸುತ್ತಿದ್ದುದರ ಮಹತ್ವ ಅರಿವಾಗುತ್ತಿದೆ. ತಪ್ಪಿಲ್ಲದೇ ಬರೆಯುವುದರ ಹಿಂದಿನ ಮಹತ್ವ ಗೊತ್ತಾಗುತ್ತಿದೆ.
              ಜಿ. ಎಸ್. ಭಟ್ಟರು ಸತ್ತಾಗ ಮಕ್ಕಳಂತೆ ರೋಧಿಸಿದ್ದ ತಾರಕ್ಕೋರು, ಆಗಿನ್ನೂ ಅಂಬೆಗಾಲೂ ಇಡದಷ್ಟು ಚಿಕ್ಕದಾಗಿದ್ದ ಮಗಳನ್ನು ಶಾಲೆಗೆ ಕರೆದುಕೊಂಡು ಬಂದಾಗ ನೋಡೋ ವಿನಯ ನನ್ ಮಗಳು ಎಂದು ತೋರಿಸಿದ್ದ ಅಕ್ಕೋರು, ನಾನು ದೊಡ್ಡದೊಂದು ಪ್ಲಾಸ್ಟಿಕ್ ಕವರಿನಲ್ಲಿ ನೂರಕ್ಕೂ ಹೆಚ್ಚು ಪೇರಲೇ ಹಣ್ಣನ್ನು ಕಿತ್ತುಕೊಂಡು ಹೋದಾಗ ಇಷ್ಟೆಲ್ಲ ನಂಗೆ ಹೇಳಿ ತಂದ್ಯನಾ ವಿನಯಾ. ಒಂದೆರಡು ಸಾಕಾಗಿತ್ತಾ. ಇದೆಲ್ಲ ತಗಂಡು ಹೋಗಿ ಮಾರ್ಕೇಟಲ್ಲಿ ಮಾರಾಟ ಮಾಡವನಾ. ಥೋ ಮಾರಾಯಾ ಎಂದು ಹೇಳಿದ ತಾರಕ್ಕೋರು. ಶಾಲೆಗೆ ಕಳ್ಳಬಿದ್ದಾಗಲೆಲ್ಲ ಪಾಪ ಎಂದು ಸುಮ್ಮನೇ ಬಿಟ್ಟ ಅಕ್ಕೋರು, ತುಂಟತನಗಳನ್ನೆಲ್ಲ ಸಹಿಸಿಕೊಂಡಿದ್ದ ಅಕ್ಕೋರು, ಎಲ್ಲದಕ್ಕೂ ಹೊಡೆತವೇ ಅಂತಿಮ ತೀರ್ಪಲ್ಲ ಎಂದುಕೊಂಡು ಅಕ್ಕರೆಯಿಂದ ಕಾಣುತ್ತಿದ್ದ ಅಕ್ಕೋರು ನಮ್ಮ ಶಾಲೆಯಿಂದ ವರ್ಗವಾದಾಗ ಮಾತ್ರ ನಾನು ಬಿಕ್ಕಿ ಬಿಕ್ಕಿ ಅತ್ತಿದ್ದೆ. ಎರಡು ದಿನ ಶಾಲೆಗೆ ಹೋಗಿರಲಿಲ್ಲ. ಈಗಲೂ ಅಕ್ಕೋರು ಆಗಾಗ ಕಾಣುತ್ತಿರುತ್ತಾರೆ. ಅವರು ಕಂಡಾಗಲೆಲ್ಲ ನಿಲ್ಲಿಸಿ ನಮಸ್ಕರಿಸೋಣ ಎನ್ನಿಸುತ್ತದೆ. ಆದರೆ ಹಾಗೆ ಮಾಡದೇ ನಾನು ಸುಮ್ಮನೇ ಇದ್ದೇನೆ. ತಾರಕ್ಕೋರಿಗೆ ಸಲಾಂ.

ರಮೇಶ ನಾಯ್ಕ :
          ದಂಟಕಲ್ ಶಾಲೆಗೆ ಟೀಚರ್ರಾಗಿದ್ದ ಸೀಮಕ್ಕೋರು ವರ್ಗವಾದ ನಂತರ ಬಂದವರೇ ರಮೇಶ ಮಾಸ್ತರ್ರು. ಇವರು ನನಗೆ ಎಂದೂ ಕಲಿಸಿದವರಲ್ಲ. ಆದರೆ ಆಗೀಗ ಜೊತೆಗೆ ಮಾತಾಡುತ್ತಿದ್ದರು. ಕ್ರಿಕೆಟ್ ಆಡುತ್ತಿದ್ದರು. ಚಸ್ ಕೂಡ ಆಡುತ್ತಿದ್ದರು. ಈ ಮಾಸ್ತರ್ರು ಎಂದಕೂಡಲೇ ತಂಗಿ ಸುಪರ್ಣ `ಕರೀ ರಮೇಶ ಮಾಸ್ತರ್ರು' ಎಂದು ಕರೆಯುತ್ತಿದ್ದುದು ಇನ್ನೂ ನೆನಪಿನಲ್ಲಿದೆ. ನೋಡಲಿಕ್ಕೆ ಒಂದು ಹಳೆಯ ಸಿನೆಮಾ ಹೀರೋ ಥರ ಇದ್ದರೂ ಬಹಳ ಕಪ್ಪಾಗಿದ್ದರು. ಗಡ್ಡ ಬಿಟ್ಟಿದ್ದರು. ನಮ್ಮ ಶಾಲೆಯ ಪಕ್ಕದಲ್ಲೇ ಇದ್ದ ಕ್ವಾಟ್ರಸ್ ಒಂದರಲ್ಲಿ ಉಳಿದುಕೊಂಡಿದ್ದರು. ನಮ್ಮ ಶಾಲೆಯ ಶಿಕ್ಷಕರಾಗಿದ್ದ ಹರೀಶ ಮಾಸ್ತರ್ರ ಜೊತೆಯಲ್ಲಿದ್ದರು. ನಮ್ಮ ಶಾಲೆಯ ಹೆಡ್ ಮಾಸ್ತರ್ರಾಗಿ ಬಂದಿದ್ದ ರಮೇಶ ಗಡಕರ್ ಮಾಸ್ತರ್ರ ಜೊತೆ ಚೆಸ್ ಆಡುತ್ತಿದ್ದರು. ಇವಿಷ್ಟು ಮಾತ್ರ ರಮೇಶ ನಾಯ್ಕರ ಬಗೆಗಿದ್ದ ನೆನಪುಗಳು ನೋಡಿ. ಈಗ ಅವರು ಎಲ್ಲಿದ್ದಾರೋ ಗೊತ್ತಿಲ್ಲ.

ನೆನಪುಗಳು

ನೆನಪುಗಳು ಮಧುರ
ಕನಸುಗಳು ಮಧುರ |

ಅದೊಂದು ದಿನ ಏಕಾಂತದಿ
ನಾ ಬಲು ಬೇಸರಗೊಂಡಿದ್ದಾಗ
ನನಗೆ ನೆನಪಾಗಿದ್ದು ನೀನೆ |

ನಿನ್ನ ಜೊತೆಯಲಿ ನಾನು
ಎಲ್ಲ ಕಡೆ ತಿರುಗಿದ್ದು
ಈಗ ನೆನಪಾಯ್ತು ಬೇಗ |

ನಿನ್ನೊಡನೆ ನಡೆವಾಗ
ಹಲವು ನುಡಿ ನುಡಿವಾಗ
ಕಳೆದ ಕ್ಷಣವದೇ ಚಂದ |

ನಿನ್ನ ಧ್ವನಿಯನು ಕೇಳಿ
ನಾ ಪುಳಕಗೊಂಡಾಗ
ಮುಗುಳ್ನಗು ಸೂಸಿದ್ದು ನೀನೆ |

ಕನಸು ಕಾಣುವ ಸಮಯ
ಮಡದಿಯಾ ಧ್ವನಿ ಕೇಳಿ
ಬೆಚ್ಚಿ ಬಿದ್ದಿದ್ದು ಮಾತ್ರ ಈಗ ||

****

(ಈ ಕವಿತೆ ಬರೆದಿರುವುದು 10-02-2005ರಂದು ದಂಟಕಲ್ಲಿನಲ್ಲಿ)

Sunday, May 31, 2015

ಅಂತರಾಳ

ಮಾರುತ್ತೇನೆ ರಾತ್ರಿಗಳನು
ನಾನೊಬ್ಬಳು ವೇಶ್ಯೆ
ಹಂಚುತ್ತೇನೆ ಸುಖದ ಗಳಿಗೆ
ಬಾಕಿ ಉಳಿದ ವಿಷಯೆ|

ದಿನ ದಿನವೂ ಮಾಘಸ್ನಾನ
ಜೀವ ಹೃದಯ ತತ್ತರ
ಪುರುಷ ಕೆರಳಿ ಕಾಮ ಅರಳಿ
ಬತ್ತುತಿದೆ ನೆತ್ತರ |

ಒಲವಿಗಿಲ್ಲಿ ಜಾಗವಿಲ್ಲ
ನಿತ್ಯ ಪುರುಷ ನೂತನ
ಹಗಲಿಗೆಂದೂ ಬೆಲೆಯೇ ಇಲ್ಲ
ಇರುಳುಗುದುರೆ ನರ್ತನ |

ಜಾತಿಯಿಲ್ಲ ಬೇಧವಿಲ್ಲ ನನ್ನ
ಪಾಲಿಗೊಂದೇ ಎಲ್ಲರು
ಬದುಕು ಹೀರಿ ಮಾಡಿ ಸೂರೆ
ಛೀ ಥೂ ಎಂದರು|

ಸುಖವ ಮಾರುತ್ತೇನೆ ಬನ್ನಿ
ನೋವನೆಂದು ಮರೆಯಿರಿ
ನಾನು ಬಳಲಿ ನೀವು ಅರಳಿ
ಚರಮ ಸುಖವ ಪಡೆಯಿರಿ |

***

(ಈ ಕವಿತೆಯನ್ನು ಬರೆದಿರುವುದು ಮೇ.31, 2015ರಂದು ಶಿರಸಿಯಲ್ಲಿ)

Saturday, May 30, 2015

ಬಾಲ್ಯ-ನೆನಪು

ಜೀವನದ ಕೊನೆಯ
ಪುಟದಲ್ಲಿದ್ದ ಆತನಿಗೆ
ಅಂದು ನೆನಪಾಯ್ತು
ತನ್ನ ಅಂದದ ಬಾಲ್ಯ ||

ಕಳೆದ ಹೋಗಿರುವ
ನೂರಾರು ಕನಸುಗಳ
ಬಾಲ್ಯದ ಚೇಷ್ಟೆಗಳ
ನೆನೆದಾತ ಹಿಗ್ಗಿದ ||

ಬಾಲ್ಯದಲಿ ಅಂದು
ಮರಕೆ ಕಲ್ಲು ಹೊಡೆದಿದ್ದು
ಕಿಟಕಿ ಗಾಜು ಒಡೆದಿದ್ದು
ನೆನೆನೆದು ನಕ್ಕ ||

ಅಂದು ಆ ಶಾಲೆಯಲಿ
ಆ ದುಷ್ಟ ಮಾಸ್ತರರು
ರೋಲು ದೊಣ್ಣೆಲಿ ಹೊಡೆದ
ವಿಷಯವನು ನೆನೆದ ||

ಬಾಲ್ಯದ ತುಂಟತನ
ಕೆಲವುಸಲ ಮೊಂಡುತನ
ಹಟಮಾರಿ ತನಗಳನು
ಕ್ಷಣ ಕ್ಷಣವೂ ನೆನೆದ ||

ಬಾಲ್ಯ ಮಾತ್ರ ನೆನಪು
ಸನಿಹವಿದೆ ಸಾವು
ಬದುಕು ತಿರುಗುವುದಿಲ್ಲ
ಎಂದವನೇ ಬೆದರಿದ ||

ಅಯ್ಯೋ| ಎಲ್ಲಿ ಹೋಯ್ತು ಬಾಲ್ಯ
ಆ ಕ್ಷಣವದು ಅಮೂಲ್ಯ
ಇನ್ನು ಬಾರದು ತನಗೆ
ಎಂದಾತ ಕೊರಗಿದ ||

***

(ಈ ಕವಿತೆಯನ್ನು ಬರೆದಿರುವುದು 09-02-2005ರಂದು ದಂಟಕಲ್ಲಿನಲ್ಲಿ)

Thursday, May 28, 2015

ಮಾಸ್ತರ್ ಮಂದಿ-2

ಗಂಗಾ ನಾಯ್ಕ :
           ನಾನು ಒಂದು ಹಾಗೂ ಎರಡನೇ ಕ್ಲಾಸ್ ಓದುತ್ತಿದ್ದ ಸಂದರ್ಭದಲ್ಲಿಯೇ ನಮ್ಮ ಶಾಲೆಗೆ ಶಿಕ್ಷಕಿಯಾಗಿ ಬಂದವರು ಗಂಗಾ ನಾಯ್ಕ ಅವರು. ಗಂಗಾ ನಾಯ್ಕ ಅವರು ನಮ್ಮ ಶಾಲೆಗೆ ಬರುವ ವೇಳೆಗೆ ಕುಳ್ಳೀಶ್ವರ ನಾಯ್ಕ ಅವರು ಶಾಲೆಯಿಂದ ವರ್ಗಾವಣೆಯಾಗಿ ಹೋಗಿದ್ದರೆಂದೇ ಹೇಳಬಹುದು. ಒಂದು ಅಥವಾ ಎರಡು ವರ್ಷ ಇವರು ನಮ್ಮ ಶಾಲೆಯಲ್ಲಿದ್ದರು. ನಾನು 2ನೇ ಕ್ಲಾಸಿನಲ್ಲಿದ್ದಾಗ ನನಗೆ ಕಲಿಸಿದ ನೆನಪು. 
                  ಇವರು ಶಿಕ್ಷಕರಾಗಿದ್ದ ಸಂದರ್ಭದಲ್ಲಿ ಒಂದು ಘಟನೆ ಇನ್ನೂ ನೆನಪಿದೆ. ಆಗ ನಮ್ಮೂರಿನಲ್ಲಿ ಆಲೆಮನೆಯ ಸಂಭ್ರಮ. ನಮ್ಮ ಮನೆಯದ್ದೇ ಆಲೆಮನೆ ನಡೆಯುತ್ತಿತ್ತು ಎನ್ನಬಹುದು. ನಮ್ಮೂರಿನಿಂದ ಐದಾರು ಜನರು ಶಾಲೆಗೆ ಬರುತ್ತಿದ್ದೆವು. ನಮಗೆಲ್ಲರಿಗೂ ಆಲೆಮನೆಗೆ ಹೋಗುವ ಆಸೆ. ಆದರೆ ಆಲೆಮನೆಗೆ ಹೋಗಬೇಕು ಎಂದು ಹೇಳಿದರೆ ಶಾಲೆಗೆ ರಜಾ ಕೊಡುತ್ತಿರಲಿಲ್ಲ. ಈ ಕಾರಣದಿಂದಲೇ ನಾವೆಲ್ಲ ಸೇರಿ ಐಡಿಯಾ ಮಾಡಿದ್ದೆವು. ನಮ್ಮೂರಿನ ಎಲ್ಲರೂ ಒಂದಲ್ಲ ಒಂದು ನೆಪ ಹೂಡಿ ರಜಾ ಕೇಳಲು ಹೊರಟೆವು. ಇದ್ದವರಲ್ಲಿಯೇ ನಾನು ಚಿಕ್ಕವನು. ನಾನೇ ಮೊದಲು ರಜಾ ಕೇಳಲು ಹೋದೆ. ನಮ್ಮ ಮನೆಯಲ್ಲಿ ಅದೇನೋ ಪೂಜೆ ಇದೆ. ಹಾಗಾಗಿ ಶಾಲೆಯಿಂದ ಸ್ವಲ್ಪ ಬೇಗನೆ ಕಳಿಸಿಕೊಡಿ ಎಂದು ಗಂಗಕ್ಕೋರ ಹತ್ತಿರ ಕೇಳಿಕೊಂಡೆ. ನಾನು ಪುಟ್ಟ ಪುಟ್ಟಗೆ, ಕುಳ್ಳಗಿದ್ದೆನಲ್ಲ. ಅದೇನೆನ್ನಿಸಿತೋ ಏನೋ. ಕಳಿಸಿಕೊಡಲು ಒಪ್ಪಿದರು. ನಾನು ಖುಷಿಯಿಂದ ಹೋಗಲು ತಯಾರಾದೆ. ಆದರೆ ದುರದೃಷ್ಟಕ್ಕೆ ನಮ್ಮೂರಿನ ಉಳಿದ ಯಾರಿಗೂ ರಜಾವನ್ನೇ ಕೊಡಲಿಲ್ಲ. ಅವರ್ಯಾರೂ ಬರಲಿಲ್ಲ-ನಾನೊಬ್ಬನೇ ಯಾಕೆ ಮನೆಗೆ ಹೋಗುವುದು ಎಂದುಕೊಂಡೆ. ಜೊತೆಗೆ ನಮ್ಮೂರಿಗೆ ಹೋಗುವ ದಾರಿ ಕಾಡಿನ ದಾರಿ. ನನಗೆ ಆಗ ಸಿಕ್ಕಾಪಟ್ಟೆ ಹೆದರಿಕೆ ಬೇರೆ. ಹಾಗಾಗಿ ಹೋಗದೇ ಉಳಿದಕೊಂಡು ಬಿಟ್ಟೆ.
               ನಾನು ಮನೆಗೆ ಹೋಗದೇ ಶಾಲೆಯಲ್ಲಿ ಉಳಿದುಕೊಂಡಿದ್ದು ಹಾಗೂ ಮನೆಗೆ ಹೋಗಲು ಸುಳ್ಳು ಹೇಳಿದ ವಿಚಾರ ಅದ್ಹೇಗೆ ಗೊತ್ತಾಯಿತೇನೋ. ಅಥವಾ ನನ್ನ ಹಾಗೆ ಮನೆಗೆ ಬರಲು ರಜಾ ಸಿಗದ ನಮ್ಮೂರಿನ ಹುಡುಗರೇ ಹೇಳಿಬಿಟ್ಟಿದ್ದರೇನೋ ಗೊತ್ತಿಲ್ಲ. ಕ್ಲಾಸ್ ರೂಮಿಗೆ ಬಂದವರೇ `ವಿನಯ ಮನೆಗೆ ಹೋದನಾ?' ಎಂದು ಕೇಳಿದರು. ನಾನು ಹೋಗದೇ ಇರುವ ವಿಚಾರವನ್ನು ಉಳಿದ ಹುಡುಗರು ಹೇಳಿದರು. ಆಗ ಕೊಟ್ಟರು ನೋಡಿ ಏಟನ್ನಾ.. ಯಪ್ಪಾ ಯಪ್ಪಾ.. ದಡಾ ಬಡಾ ಹೊಡೆದರು. `ಸುಳ್ ಹೇಳ್ತಿಯೇನೋ.. ಇನ್ನೊಂದ್ ಸಾರಿ ಹಿಂಗೆ ಮಾಡು. ನಿನ್ ಚರ್ಮ ಸುಲಿದು ಬಿಡ್ತೇನೆ..' ಎಂದು ಬೈದರು. ನಾನು ಅತ್ತು ಅತ್ತು ಬಾಡಿದ್ದು ಇನ್ನೂ ನೆನಪಿನಲ್ಲಿದೆ. ಗಂಗಕ್ಕೋರು ಎಂದರೆ ನನಗೆ ನೆನಪಿದ್ದಿದ್ದು ಇಷ್ಟೇ ನೋಡಿ.
             ಇನ್ನೊಬ್ಬರು ಅಕ್ಕೋರಿದ್ದರು. ಅವರ ಹೆಸರು ಬಹುಶಃ ಸುಮಿತ್ರಕ್ಕೋರು ಇರಬೇಕು. ಕೊಂಕಣಿಗರು. ಮೂರು ತಿಂಗಳೋ ನಾಲ್ಕು ತಿಂಗಳೋ ಕಳಿಸಲು ಬಂದಿದ್ದರು. ಅವರ ಬಗ್ಗೆ ಹೆಚ್ಚಿಗೆ ಏನೂ ವಿಶೇಷವಿಲ್ಲ. ಕಲಿಸಲು ಬಂದವರಿಗೆ ಮದುವೆಯಾಯಿತು. ನಮ್ಮೂರಿನ ಬಳಿಯೇ ಈಗಲೂ ಇದ್ದಾರೆ ಅವರು. ಇಂವ ನನ್ನ ಸ್ಟೂಡೆಂಟ್ ಆಗಿದ್ದ ಎಂದು ಈಗಲೂ ನೆನಪು ಮಾಡಿಕೊಳ್ಳುತ್ತಾರೆ. ಆದರೆ ಅವರ ಬಳಿ ಹೆಸರು ಕೇಳಲು ಮುಜುಗರವಾಗಿ ಸುಮ್ಮನೇ ಇದ್ದೇನೆ.

ಜಿ. ಎಸ್. ಭಟ್ಟ್:
             ಗಣೇಶ ಭಟ್ಟರು ಎಂಬ ಹೆಸರಿನ ಈ ಮಾಸ್ತರ್ರಂತೂ ಯಾವತ್ತಿಗೂ ಮರೆಯೋಕಾಗೋದಿಲ್ಲ ಬಿಡಿ. ಜಿ. ಎಸ್. ಭಟ್ರು ಎನ್ನುವ ಹೆಸರನ್ನು ಕೇಳಿದ ತಕ್ಷಣ ನಾವೆಲ್ಲ ಭಯಂಕರ ಹೆದರುತ್ತಿದ್ದ ಕಾಲವೊಂದಿತ್ತು. ಅವರ ಹೊಡೆತ, ಅವರ ಸಿಟ್ಟು ಅಯ್ಯಪ್ಪಾ ಯಾರಿಗೂ ಬೇಡ. ಜಿ. ಎಸ್. ಭಟ್ಟರು ಶಾಲೆಗೆ ಬರುವಾಗ ಒಂದು ಡಜನ್ ಕೋಲುಗಳನ್ನು ಹೊಡೆತಕ್ಕಾಗಿಯೇ ತರುತ್ತಾರೆ ಎನ್ನುವ ಮಾತುಗಳೂ ಇದ್ದವು. ಡಜನ್ ಕೋಲುಗಳು ಖಾಲಿಯಾಗಿ ಶಾಲೆಯ ಆವರಣದಲ್ಲಿದ್ದ ಗಾಳಿ ಶೆಳಕೆ, ಹುಳಸೇ ಬರಲುಗಳನ್ನೆಲ್ಲ ಮತ್ತಷ್ಟು ಮುರಿದು ತರಲು ಆಜ್ಞಾಪಿಸುತ್ತಿದ್ದರು. ಅವರ ಸಿಟ್ಟಿಗೆ ಬಲಿ ಬೀಳದವರು ಯಾರೂ ಇರಲಿಲ್ಲ ನೋಡಿ. ನಾನು ಅವರ ಬಳಿ ಅದೆಷ್ಟೋ ಹೊಡೆತ ತಿಂದಿದ್ದೇನೆ. ಮೂ, ಕೈ, ಕಾಲುಗಳ ಮೇಲೆಲ್ಲ ಬಾಸುಂಡೆ ಬಂದಿದ್ದಿದೆ.
               ನನಗಿಂತ ಎರಡು ತರಗತಿಗಳ ಮೇಲೆ ಒಬ್ಬ ಹುಡುಗನಿದ್ದ. ಆತನ ಬ್ಯಾಚಿನಲ್ಲಿದ್ದ ಹುಡುಗರೆಲ್ಲ ಭಯಂಕರ ಪುಂಡು ಪೋಕರಿಗಳು. ಗಣಪತಿ ಎಂಬ ಹೆಸರಿನ ಆ ಹುಡುಗ ದೂರದಿಂದ ನನಗೆ ಸಂಬಂಧಿಕನೂ ಆಗಬೇಕು. ಆ ದಿನಗಳಲ್ಲಿ ಆತ ಸಿಕ್ಕಾಪಟ್ಟೆ ತಂಟೆ ಮಾಡುತ್ತಿದ್ದ. ಗಲಾಟೆಯಲ್ಲಿ ಎತ್ತಿದ ಕೈ ಆಗಿತ್ತು. ಭಾನಗಡಿಗೆ ಹೆಸರುವಾಸಿಯೂ ಆಗಿದ್ದ. ಸದಾ ಸುಮ್ಮನಿರಲು ಆಗದ ಆತ ಏನಾದರೂ ಒಂದು ಕಿತಾಪತಿ ಮಾಡುತ್ತಲೇ ಇರುತ್ತಿದ್ದ. ಶಾಲೆಗೆ ಕಳ್ಳ ಬೀಳುವುದು, ಮಾರ್ಕ್ಸ್ ಕಾರ್ಡಿನ ಮೇಲೆ ನಕಲಿ ಸಹಿ ಝಾಡಿಸುವುದು, ಸುಳ್ಳಿನ ಸರಮಾಲೆಗಳನ್ನು ಪೋಣಿಸುವುದು ಇತ್ಯಾದಿಗಳೆಲ್ಲ ಆತನಿಗೆ ನೀರು ಕುಡಿದಷ್ಟು ಸುಲಭವಾಗಿತ್ತು. ಇಂತಹ ಗಣಪತಿಗೆ ಜಿ. ಎಸ್. ಭಟ್ಟರು ಸಿಂಹಸ್ವಪ್ನವಾಗಿದ್ದರು.
               ನಮ್ಮೂರಿನಲ್ಲೇ ಇನ್ನೊಬ್ಬ ಹುಡುಗನಿದ್ದ. ನನಗಿಂತ ಮೂರ್ನಾಲ್ಕು ವರ್ಷ ದೊಡ್ಡವನು. ನಮ್ಮೂರಿನ ಒಬ್ಬರ ಮನೆಯಲ್ಲಿ ಉಳಿದುಕೊಂಡು ಶಾಲೆಗೆ ಹೋಗುತ್ತಿದ್ದ. ಆತ ಓದಿನಲ್ಲಿ ಅಷ್ಟು ಚುರುಕಾಗಿರಲಿಲ್ಲ. ಆದರೆ ತಂಟೆ ಮಾಡುವುದರಲ್ಲಿ ಎತ್ತಿದ ಕೈ. ಅವನಿಗೂ ಕೂಡ ಜಿ. ಎಸ್. ಭಟ್ಟರೆಂದರೆ ಭಯಂಕರ ಭಯ. ಶ್ರೀಪಾದ ಎನ್ನುವುದು ಆತನ ಹೆಸರು. ಗಣಪತಿ ಹಾಗೂ ಶ್ರೀಪಾದನ ಪಾಲಿಗೆ ಗಣೇಶ ಭಟ್ಟರು ವಿಲನ್ನು. ಈ ಜಿ. ಎಸ್. ಭಟ್ಟರು ಹೇಗಾದರೂ ಸತ್ತು ಹೋದರೆ ಚನ್ನಾಗಿತ್ತು ಎಂದು ಬೈದುಕೊಂಡು ಶಾಪ ಹೊಡೆಯುವಷ್ಟು ಭಟ್ಟರ ಮೇಲೆ ಸಿಟ್ಟಿತ್ತು.
               ಹೀಗಿದ್ದಾಗಲೇ ಗಣೇಶ ಭಟ್ಟರು ಹೊಸದೊಂದು ಬೈಕನ್ನು ಕೊಂಡಿದ್ದರು. ಬೈಕ್ ಪೂಜೆ ಮಾಡಿಸಬೇಕಲ್ಲ. ಹಿರಿಯ ಪ್ರಾಥಮಿಕ ಶಾಲೆ ಅಡ್ಕಳ್ಳಿ-ಕೋಡ್ಸಿಂಗೆಯ ಎದುರಿಗೆ ದೊಡ್ಡದೊಂದು ಭೂತಪ್ಪನ ಕಟ್ಟೆಯಿದೆ. ಹೊಸ ವಸ್ತುಗಳು, ಹೊಸ ವಾಹನ ಹೀಗೆ ಏನೆ ಇದ್ದರೂ ಅಲ್ಲಿ ಪೂಜೆ ಮಾಡಿಸುವುದು ವಾಡಿಕೆ. ಜಿ. ಎಸ್. ಭಟ್ಟರೂ ಕೂಡ ಹೊಸ ಬೈಕನ್ನು ಅಲ್ಲಿ ಪೂಜೆ ಮಾಡಿಸಿದ್ದರು. ಬೈಕ್ ಪೂಜೆ ಮಾಡಿದ್ದವನು ಅವರಿಂದ ಸಿಕ್ಕಾಪಟ್ಟೆ ಹೊಡೆತ ತಿನ್ನುವ ಗಣಪತಿ. ಭಟ್ಟರ ದುರಾದೃಷ್ಟವೋ ಗೊತ್ತಿಲ್ಲ ಪೂಜೆ ಮಾಡಿಸುವ ಸಂದರ್ಭದಲ್ಲಿ ಕಾಯಿ ಒಡೆಯಲಾಯಿತು. ಒಡೆದ ಕಾಯಿಯಲ್ಲಿ ಒಂದು ಕಾಯಿ ಕೊಳೆತು ಹೋಗಿತ್ತು. ಅದೆಂತಹ ಅಪಶಕುನವೋ ಗೊತ್ತಿಲ್ಲ. ಭಟ್ಟರು ಬೇರೆ ಕಾಯಿ ತಂದು ಒಡೆಸಿದ್ದರು.
                ಅದಾದ ನಂತರ ನಾವು ಶಾಲೆಯಲ್ಲಿ ಪ್ರಾರ್ಥನೆಗೆ ನಿಂತಾಗಲೆಲ್ಲ ಜಿ. ಎಸ್. ಭಟ್ಟರ ಬೈಕಿನ ಸದ್ದಾಗುತ್ತದೆಯೋ ಎಂದು ಆಲಿಸುತ್ತಿದ್ದೆವು. ಪ್ರಾರ್ಥನೆ ಮುಗಿಯುವ ವೇಳೆಗೆ ಬೈಕಿನ ಸದ್ದಾಗದಿದ್ದರೆ ಅವರು ಬಂದಿಲ್ಲ ಎಂದು ನಿಟ್ಟುಸಿರು ಬಿಡುತ್ತಿದ್ದೆವು. ಬೈಕು ಬಂತೋ ನಮ್ಮ ಜೀವ ಕೈಗೆ ಬರುತ್ತಿತ್ತು. ದೇವರೇ ಇವತ್ತು ಜಿ. ಎಸ್. ಭಟ್ಟರು ಶಾಲೆಗೆ ಬರದಿದ್ದರೆ ಸಾಕಪ್ಪಾ ಎಂದು ಬೇಡಿಕೊಳ್ಳುತ್ತಿದ್ದುದೂ ಇದೆ. ಭಟ್ಟರದ್ದು ಅದೆಂತಹ ಸಿದ್ಧಾಂತವಾಗಿತ್ತೋ ಏನೋ. ಪಾಠವನ್ನು ಮಾತ್ರ ಬಹಳ ಚನ್ನಾಗಿ ಕಲಿಸುತ್ತಿದ್ದರು. ಆದರೆ ನನಗೆ ಮಾತ್ರ ಅವರು ಪಾಠಕ್ಕಿಂತ ಹೆಚ್ಚಿಗೆ ಹೊಡೆತವನ್ನೇ ನೀಡಿದ್ದಾರೆ ಎಂದರೆ ತಪ್ಪಿಲ್ಲ. ಅವರು ನನಗೆ ಹೊಡೆದಾಗಲೂ ನಾನು ಹೆದರಿರಲಿಲ್ಲ. ಆದರೆ ನನ್ನ ಜೊತೆಗೆ ಬರುತ್ತಿದ್ದ ಗಣಪತಿ ಹಾಗೂ ಶ್ರೀಪಾದನ ಮೈಮೇಲಿನ ಬಾಸುಂಡೆಗಳು, ರಕ್ತ ಜಿನುಗುವ ಹೊಡೆತದ ಗಾಯಗಳನ್ನು ನೋಡಿದಾಗಲೆಲ್ಲ ಸಿಕ್ಕಾಪಟ್ಟೆ ಹೆದರಿದ್ದೂ ಇದೆ.
             ಹೊಡೆತ ತಪ್ಪಿಸಿಕೊಳ್ಳಬೇಕು ಎನ್ನುವ ಕಾರಣಕ್ಕಾಗಿ ಗಣಪತಿ ಅನೇಕ ಸಾರಿ ಶಾಲೆ ತಪ್ಪಿಸುತ್ತಿದ್ದ. ಆದರೆ ಮರುದಿನ ಮಾತ್ರ ಸಿಕ್ಕಾಪಟ್ಟೆ ಹೊಡೆತ ಬೀಳುತ್ತಿತ್ತು. ಮನೆಯಲ್ಲಿ ಶಾಲೆಗೆ ಹೋಗುತ್ತೇನೆ ಎಂದು ಹೇಳುತ್ತಿದ್ದ ಗಣಪತಿ (ನಾವೆಲ್ಲ ಅವನನ್ನು ಗಪ್ಪತಿ ಎನ್ನುತ್ತಿದ್ದೆವು. ಮುಂದೆ ಅವನ ಬಗ್ಗೆ ಬಹಳ ಬರೆಯಲಿಕ್ಕಿದೆ. ಬೇರೆ ಕಂತಿನಲ್ಲಿ ಬರೆಯುತ್ತೇನೆ) ನಮ್ಮ ಜೊತೆಗೆ ಅರ್ಧ ದಾರಿಯ ವರೆಗೆ ಬರುತ್ತಿದ್ದ. ನಮ್ಮೂರಿನಿಂದ ಶಾಲೆಗೆ ಹೋಗುವ ದಾರಿಯಲ್ಲಿ ದೊಡ್ಡದೊಂದು ಕಾಡು ಸಿಗುತ್ತದೆ. ಗಪ್ಪತಿ ಆ ಕಾಡಿನ ಜಾಗ ಬಂದ ತಕ್ಷಣ ಕಾನೊಳಗೆ ನುಸುಳಿ ಬಿಡುತ್ತಿದ್ದ. ಶಾಲೆಗೆ ಕಳ್ಳ ಬೀಳುತ್ತಿದ್ದ ಆತ ನಮ್ಮ ಬಳಿ ಮಾತ್ರ ಮನೆಯಲ್ಲಿ ಹೇಳಬೇಡ ಎಂದು ಹೇಳುತ್ತಿದ್ದ. ಶಾಲೆಯಲ್ಲಿ ಹಾಗೂ ಮನೆಯಲ್ಲಿ ಆತ ಕಳ್ಳಬೀಳುತ್ತಿದ್ದ ವಿಷಯವನ್ನು ಯಾರಿಗೂ ತಿಳಿಸದಂತೆ ಮ್ಯಾನೇಜ್ ಮಾಡಬೇಕಿತ್ತು ನಾವು. ಶಾಲೆಯಿಂದ ಮರಳುವ ವೇಳೆಗೆ ಆ ಕಾಡಿನ ಜಾಗಕ್ಕೆ ಬಂದ ನಾವು ಆತನ ಹೆಸರು ಹೇಳಿ ದೊಡ್ಡದಾಗಿ ಕೂಗು ಹಾಕಿದಾಗ ಕಾಡಿನೊಳಗಿಂದ ಓಡಿ ಬರುತ್ತಿದ್ದ. `ಗಪ್ಪತಿ ಎಂತಾ ಮಾಡ್ತದ್ಯಲೇ ಕಾಡೊಳಗೆ..' ಎಂದು ನಾವು ಕೇಳಿದರೆ ನಿದ್ದೆ ಮಾಡ್ತಿದ್ದೆ ಮಾರಾಯಾ ಎನ್ನುತ್ತಿದ್ದ.
              ಒಮ್ಮೆ ಹೀಗಾಯಿತು. ನಾಲ್ಕಾರು ದಿನ ಕಳ್ಳಬಿದ್ದಿದ್ದ ಗಪ್ಪತಿ. ಜಿ. ಎಸ್. ಭಟ್ಟರು ಪ್ರತಿದಿನ ನಮ್ಮ ಬಳಿ ಗಪ್ಪತಿ ಶಾಲೆಗೆ ಬರಲಿಲ್ಲವಾ ಎಂದು ಕೇಳುತ್ತಿದ್ದರು. ನಾವು ಅದೇನೋ ನೆಪ ಹೇಳುತ್ತಿದ್ದೆವು. ಅದೊಂದು ದಿನ ಭಟ್ಟರಿಗೆ ಅನುಮಾನ ಬಂದಿತು. ನನ್ನ ಹಿಡಿದು ದನಕ್ಕೆ ಬಡಿಯುವ ಹಾಗೆ ಬಡಿಯಲು ಆರಂಭಿಸಿದರು. ನಾನು ಹೊಡೆತದ ಉರಿಯನ್ನು ತಾಳಲಾರದೇ ಗಪ್ಪತಿ ಕಾಡಿನಲ್ಲಿ ಕದ್ದು ಕೂರುವ ವಿಚಾರವನ್ನು ಬಾಯಿ ಬಿಟ್ಟಿದ್ದೆ. ಸಿಟ್ಟಿನಿಂದ ಮತ್ತಷ್ಟು ಬಡಿದ ಜಿ. ಎಸ್. ಭಟ್ಟರು ನನ್ನನ್ನು ಸೀದಾ ಎಳೆದುಕೊಂಡು ಹೋದರು. ಅದೇ ಕಾಡಿನ ಬಳಿ ಹತ್ತಿರ ಬಂದ ತಕ್ಷಣ ಗಪ್ಪತಿಯ ಹೆಸರನ್ನು ದೊಡ್ಡದಾಗಿ ಕೂಗು ಎಂದರು. ನಾನು ಕೂಗಿದೆ. ಗಪ್ಪತಿ ಕಾಡಿನಿಂದ ಹೊರಗೆ ಬಂದ. ಬಂತ ತಕ್ಷಣವೇ ಜಿ. ಎಸ್. ಭಟ್ಟರ ಕೈಗೆ ಸಿಕ್ಕಿಬಿದ್ದ. ಅಲ್ಲಿಂದ ಗಪ್ಪತಿಗೆ ಹೊಡೆಯಲು ಆರಂಭಿಸಿದ ಜಿ. ಎಸ್. ಭಟ್ಟರು ಶಾಲೆಯ ವರೆಗೂ ಹೊಡೆಯುತ್ತಲೇ ಹೋಗಿದ್ದರು. ಆಮೇಲಿಂದ ಗಪ್ಪತಿ ಕಾಡಿನಲ್ಲಿ ಕದ್ದು ಕೂರುವುದು ಬಂದಾಗಿತ್ತು. ಕೆಲ ದಿನಗಳ ವರೆಗೆ ಗಪ್ಪತಿ ನನ್ನ ಬಳಿ ಮಾತಾಡುವುದನ್ನೂ ಬಿಟ್ಟು ಬಿಟ್ಟಿದ್ದ.
             ಹೀಗಿದ್ದಾಗ ಒಂದು ದಿನ ನಮಗೆ ಸುದ್ದಿ ಬಂದಿತ್ತು. ಶಿರಸಿ-ಕುಮಟಾ ರಸ್ತೆಯ ಹನುಮಂತಿ ಬಳಿ ಎಕ್ಸಿಡೆಂಟ್ ಆಯ್ತಂತೆ. ಜಿ. ಎಸ್. ಭಟ್ಟರಿಂದ ಬೈಕಿಗೆ ಹಿಂದಿನಿಂದ ಬಂದ ಬಸ್ಸೊಂದು ಡಿಕ್ಕಿ ಹೊಡೆಯಿತಂತೆ. ಡಿಕ್ಕಿ ಹೊಡೆದ ರಭಸಕ್ಕೆ ಜಿ. ಎಸ್. ಭಟ್ಟರು ಸ್ಥಳದಲ್ಲೇ ಸತ್ತು ಹೋದರಂತೆ ಎಂಬ ಸುದ್ದಿ ಬಂದಿತು. ಶಾಲೆಗೆ ನಾನು ಬರುವ ವೇಳೆಗೆ ಎಲ್ಲರೂ ಹೊರಗೆ ಕುಂತಿದ್ದರು. ಒಂದೆರಡು ಶಿಕ್ಷಕಿಯರು ಆಗಲೇ ಅಳುತ್ತಿದ್ದರು. ಕೊನೆಗೆ ಪೂರ್ತಿಯಾಗಿ ಗೊತ್ತಾಗಿದ್ದೇನೆಂದರೆ ಬ್ರೇಕ್ ಫೈಲ್ ಆದ ಕೆಎಸ್ಸಾರ್ಟಿಸಿ ಬಸ್ಸೊಂದು ಜಿ. ಎಸ್. ಭಟ್ಟರ ಬೈಕಿಗೆ ಹಿಂದಿನಿಂದ ಢಿಕ್ಕಿ ಹೊಡೆದಿತ್ತು. ಮಧುವೆ ಮಾಡಿಕೊಳ್ಳಬೇಕು ಎಂದು ಹೆಣ್ಣು ನೋಡಲು ಹೊರಟಿದ್ದ ಜಿ. ಎಸ್. ಭಟ್ಟರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಢಿಕ್ಕಿಯಾದ ರಭಸಕ್ಕೆ ಬೈಕಿನಿಂದ ಚಿಮ್ಮಿ ಬಿದ್ದಿದ್ದ ಜಿ. ಎಸ್. ಭಟ್ಟರ ಎದೆಯ ಮೇಲೆ ಬಸ್ಸಿನ ಹಿಂದಿನ ಚಕ್ರ ಹತ್ತಿ ಹೋದ ಪರಿಣಾಮ ಭಟ್ಟರು ಅಪ್ಪಚ್ಚಿಯಾಗಿ ಬಿಟ್ಟಿದ್ದರು. ಭಟ್ಟರ ಜೊತೆಗೆ ಹೋಗುತ್ತಿದ್ದ ಅಡಕಳ್ಳಿಯ ವಿ. ಆರ್. ಹೆಗಡೆ ಎನ್ನುವವರು ಕೂದಲೆಳೆಯ ಅಂತರದಲ್ಲಿ ಬಚಾವಾಗಿದ್ದರು. ಆದರೂ ಅವರಿಗೆ ಅನೇಕ ಕಡೆಗಳಲ್ಲಿ ಮೂಳೆ ಮುರಿತ ಉಂಟಾಗಿತ್ತು. ಆದಿನ ನನಗೆ ಅದೇಕೋ ಸಿಕ್ಕಾಪಟ್ಟೆ ಅಳು ಬಂದಿತ್ತು.
          ಮೌನ ಆಚರಿಸಿದ್ದರು. ಶಾಲೆಗೆ ರಜಾ ಕೊಟ್ಟಿದ್ದರು. ನಾನು ಬೇಜಾರಿನಲ್ಲಿಯೇ ವಾಪಾಸ್ ಬರುತ್ತಿದ್ದ ವೇಳೆ ಜೊತೆಯಲ್ಲಿದ್ದ ಶ್ರೀಪಾದ ಹಾಗೂ ಗಪ್ಪತಿ ಮಾತ್ರ ಕುಣಿದು ಕುಪ್ಪಳಿಸಿದ್ದರು. ಜಿ. ಎಸ್. ಭಟ್ಟರು ಗೋತಾ ಜೊ. ಎಸ್. ಭಟ್ಟರು ಗೋತಾ ಎಂದು ಕುಣಿಯುತ್ತ ಹೋಗುತ್ತಿದ್ದುದು ಇನ್ನೂ ನನ್ನ ಕಣ್ಣೆದುರಿಗಿದೆ. ಆ ದಿನಗಳಲ್ಲಿಯೇ ಕೆಲವು ಸುದ್ದಿಗಳೂ ನನ್ನ ಕಿವಿಗೆ ಬಿದ್ದಿದ್ದವು. ಎಷ್ಟು ಸತ್ಯವೋ, ಅದೆಷ್ಟು ಸುಳ್ಳೋ ಗೊತ್ತಿಲ್ಲ. ಭಟ್ಟರು ಹೊಸ ಬೈಕ್ ತೆಗೆದುಕೊಂಡಾಗ ಭೂತಪ್ಪನ ಕಟ್ಟೆಗೆ ಕಾಯಿ ಒಡೆಸಿದ್ದರು ಎಂದಿದ್ದೆನಲ್ಲ. ಅದು ಕೊಳೆತು ಹೋಗಿತ್ತು ಎಂದೂ ಹೇಳಿದ್ದೆನಲ್ಲ. ಆ ಕಾರಣಕ್ಕಾಗಿಯೇ ಬೈಕ್ ಎಕ್ಸಿಡೆಂಟ್ ಆಗಿತ್ತು ಎಂದು ಅನೇಕರು ಮಾತನಾಡಿಕೊಂಡರು. ಅನೇಕರು ಗಪ್ಪತಿಯ ಬಗ್ಗೆಯೂ ಮಾತನಾಡಿಕೊಂಡು. ಪ್ರತಿ ದಿನ ಭೂತಪ್ಪನ ಕಟ್ಟೆಯಲ್ಲಿ ಜಿ. ಎಸ್. ಭಟ್ಟರು ಸತ್ತು ಹೋಗಲಿ ಎಂದು ಬೇಡಿಕೊಳ್ಳುತ್ತಿದ್ದ, ಹೂವನ್ನು ತಂದು ಭೂತಪ್ಪನಿಗೆ ಹಾಕುತ್ತಿದ್ದ. ಅದೇ ಕಾರಣಕ್ಕೆ ಜಿ. ಎಸ್. ಭಟ್ಟರು ಎಕ್ಸಿಡೆಂಟ್ ನಲ್ಲಿ ಸತ್ತುಹೋದರು ಎಂದು ಅನೇಕ ಜನ ಮಾತನಾಡಿಕೊಂಡರು. ಅನೇಕ ದಿನಗಳ ಕಾಲ ಈ ಸುದ್ದಿ ಅನೇಕರ ಬಾಯಲ್ಲಿಯೂ ಹರಿದಾಡುತ್ತಿತ್ತು. ಆದರೆ ನಿಧಾನವಾಗಿ ಜಿ. ಎಸ್. ಭಟ್ಟರೂ ಮರೆತು ಹೋದರು. ಗಪ್ಪತಿ ಬಗ್ಗೆ ಇದ್ದ ಗಾಸಿಪ್ ಕೂಡ ಮರೆತು ಹೋಗಿತ್ತು. ಆದರೆ ನನಗೆ ಕಲಿಸಿದ ಮಾಸ್ತರ್ ಮಂದಿಯ ನೆನಪು ಮಾಡಿಕೊಳ್ಳುವ ಸಂದರ್ಭದಲ್ಲಿ ಮಾತ್ರ ಈ ಎಲ್ಲ ಘಟನೆಗಳೂ ನನ್ನ ನೆನಪಿನ ಖಜಾನೆಯಲ್ಲಿ ಅಚ್ಚಳಿಯದೇ ಉಳಿದುಕೊಂಡು ಬಿಟ್ಟಿವೆ.

(ಮುಂದುವರಿಯುತ್ತದೆ)