Wednesday, April 1, 2015

ಜಲಪಾತದ ಒಡಲಿನಲ್ಲಿ ನಡೆದ ಕವಿಗೋಷ್ಟಿ

(ಶಿರ್ಲೆ ಜಲಪಾತ)
ಒಂದೆಡೆ ಜಲಪಾತದ ಜುಳು ಜುಳು ನಿನಾದ ಕಿವಿಗಪ್ಪಳಿಸುತ್ತಿದ್ದರೆ ಮತ್ತೊಂದು ಕಡೆ ಕವಿಗಳ ಪ್ರೇಮ ಕವಿತೆಗಳ ವಾಚನ ಕಿವಿಗೆ ತಂಪನ್ನು ನೀಡುತ್ತಿತ್ತು. ಇದು ನಡೆದಿದ್ದು ಯಲ್ಲಾಪುರ ತಾಲೂಕಿನ ಶಿರಲೆ ಜಲಪಾತದಲ್ಲಿ ನಡೆದ ಕವಿತೆ ಬಳಗದ ಕವಿಗೋಷ್ಟಿಯಲ್ಲಿ.
ವಾಟ್ಸಾಪ್ ಮೂಲಕ ಪರಿಚಿತರಾದ ಕವಿಗಳು ತಮ್ಮ ತಮ್ಮಲ್ಲಿ ಸಮಾನಾಸಕ್ತರನ್ನು ಜೊತೆ ಸೇರಿಸಿಕೊಂಡು ಕವಿತೆ ಬಳಗವನ್ನು ಮಾಡಿಕೊಂಡು ರಚನಾತ್ಮಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದಾರೆ. ರಚನಾತ್ಮಕ ಕಾರ್ಯಕ್ರಮಗಳಿಗೆ ಮುನ್ನುಡಿ ಎನ್ನುವಂತೆ ಜಲಪಾತದಲ್ಲಿ ಕವಿಗೋಷ್ಟಿ ನಡೆಯಿತು. ಪ್ರೇಮಕವಿ ಎಂದೇ ಖ್ಯಾತಿಯನ್ನು ಗಳಿಸಿಕೊಂಡಿರುವ ಕೆ. ಎಸ್. ನರಸಿಂಹ ಸ್ವಾಮಿ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಕವಿಗೋಷ್ಟಿಯಲ್ಲಿ ಪಾಲ್ಗೊಂಡಿದ್ದ ಕವಿಗಳು ತಾವು ಬರೆದ ಪ್ರೇಮ ಕವಿತೆಗಳನ್ನು ವಾಚನ ಮಾಡಿದರು.
ಯಾವುದೋ ವೇದಿಕೆಯಲ್ಲಿ, ಸಬೆ ಸಮಾರಂಭಗಳಲ್ಲಿ, ಉತ್ಸವಗಳಲ್ಲಿ ಕವಿಗೋಷ್ಟಿಗಳು ನಡೆಯುತ್ತವೆ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಯೂ ಕವಿಗೋಷ್ಟಿಗಳು ನಡೆಯುವುದು ಸಾಮಾನ್ಯಲಾದರೆ ಪ್ರಕೃತಿಯ ಮಡಿನಿಲ್ಲಿ, ನಿಸರ್ಗದ ನಟ್ಟ ನಡುವೆ ಇರುವ ಜಲಪಾತದ ಎದುರು ಕವಿಗೋಷ್ಟಿ ನಡೆಯುವುದು ಹೊಸ ಕಲ್ಪನೆ. ಇಂತಹ ಹೊಸದೊಂದು ಕಾರ್ಯಕ್ರಮಕ್ಕೆ ಕವಿತೆ ಬಳಗ ನಾಂದಿ ಹಾಕಿಕೊಟ್ಟಂತಾಗಿದೆ. ಹೊಸ ಹೊಸ ಕವಿತೆಗಳಿಗೆ ವಿಶೇಷ ಪ್ರಾಧ್ಯಾನ್ಯತೆ ಕೊಟ್ಟು ನಡೆದ ಕವಿಗೋಷ್ಟಿ ಯಶಸ್ವಿಯಾಯಿತು. ಜಲಪಾತದಲ್ಲಿ ನಡೆದ ಕವಿಗೋಷ್ಟಿ ಹೊಸತನವನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಯಿತು. ಕವಿಗೋಷ್ಟಿಯಲ್ಲಿ ಶಿರಸಿ, ಸಿದ್ದಾಪುರ, ಯಲ್ಲಾಪುರ, ಕುಮಟಾ, ಮುಂಡಗೋಡ, ಬೆಂಗಳೂರು, ಬೆಳಗಾವಿ ಈ ಮುಂತಾದ ಪ್ರದೇಶಗಳಿಂದ ಆಗಮಿಸಿದ್ದ ಕವಿಗಳು, ಕವಿತೆಗಳು ಆಗಮಿಸಿದ್ದವು.
(ಬೆಣ್ಣೆ ಭಟ್ಟರಿಂದ ಕವಿತಾ ವಾಚನ)
ಕವಿತೆ ಬಳಗ ಹಮ್ಮಿಕೊಂಡಿದ್ದ ಕವಿಗೋಷ್ಟಿಯನ್ನು ಕೃಷಿ ಸಂಶೋಧಕ ಡಾ. ರವಿ ಭಟ್ಟ ಬರಗದ್ದೆ ಅವರು ಪ್ರೇಮಕವಿ ಕೆ. ಎಸ್. ನರಸಿಂಹಸ್ವಾಮಿ ಅವರ ಕವಿತೆಯನ್ನು ಓದುವ ಮೂಲಕ ಉದ್ಘಾಟಿಸಿದರು. ಸಾಮಾಜಿಕ ಜಾಲತಾಣದಲ್ಲಿ ಹಟ್ಟಿಕೊಂಡ ಕವಿತೆ ಬಳಗ, ತನ್ನ ಆರಂಭಿಕ ದಿನಗಳಿಂದಲೂ ವಿಶಿಷ್ಟತೆಗಳಿಂದ ಹೆಸರನ್ನು ಪಡೆದುಕೊಂಡಿದೆ. ಇದೀಗ ಜಲಪಾತದಲ್ಲಿ ಕವಿಗೋಷ್ಟಿಯನ್ನು ಹಮ್ಮಿಕೊಳ್ಳುವ ಮತ್ತೊಂದು ವಿಶಿಷ್ಟತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಕವಿ ಟಿ. ಆರ್. ಪ್ರಕಾಶ ಭಾಗ್ವತ ಅವರು ಮಾತನಾಡಿ ಹೊಸ ಕವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕವಿತೆ ಬರೆಯುವುದಕ್ಕೆ ಮುಂದಾಗುತ್ತಿದ್ದಾರೆ. ಇದು ಸಂತಸದ ಸಂಗತಿ. ಹಿರಿಯ ಕವಿಗಳಲ್ಲಿ ಅದೆಷ್ಟೋ ಭಿನ್ನಾಭಿಪ್ರಾಯಗಳನ್ನು ನಾವು ಕಂಡಿದ್ದೇವೆ. ಕನ್ನಡ ಸಾಹಿತ್ಯದ ದಿಗ್ಗಜ ಕವಿಗಳೆಂದೇ ಗುರುತಿಸಿಕೊಂಡವರೂ ಕೂಡ ಪರಸ್ಪರ ಕಿತ್ತಾಡಿಕೊಂಡಿದ್ದನ್ನು ಕಂಡಿದ್ದೇವೆ. ಆದರೆ ಇಂದಿನ ತಲೆಮಾರಿನ ಕವಿಗಳು, ಯುವ ಸಾಹಿತಿಗಳು ಪರಸ್ಪರ ಕಿತ್ತಾಡಿಕೊಳ್ಳುತ್ತಿಲ್ಲ. ಒಬ್ಬರಿಗೆ ಇನ್ನೊಬ್ಬರು ಬೆಂಬಲವಾಗಿ ನಿಲ್ಲುತ್ತಿದ್ದಾರೆ. ಪರಸ್ಪರ ಸಹಕಾರವನ್ನು ಕೊಡುತ್ತಿದ್ದಾರೆ. ಅದೇ ರೀತಿ ಯುವ ಕವಿಗಳು ಭಾವಗೀತೆಗಳನ್ನು ಬರೆಯಲು ಮುಂದಾಗಬೇಕಾದ ಅಗತ್ಯವಿದೆ. ಭಾವಗೀತೆಗಳು ಜನಮಾನಸವನ್ನು ತಟ್ಟುತ್ತವೆ. ಬಾವಗೀತೆಗಳ ಮೂಲಕ ಕವಿತೆ ಯಶಸ್ವಿಯಾದಾಗ ಕಾವ್ಯ ಸಾರ್ಥಕ ಎನ್ನಿಸಿಕೊಳ್ಳುತ್ತವೆ. ಹಳೆಯ ತಲೆಮಾರಿನ ಭಾವಗೀತೆಗಳನ್ನು ಬರೆಯುವ ಕವಿಗಳ ನಂತರ ಉಂಟಾಗಿರುವ ಶೂನ್ಯವನ್ನು ಹೊಸ ಕವಿಗಳು ತುಂಬಿಕೊಡಬೇಕಾದ ಅಗತ್ಯವಿದೆ. ನಾವು ಇಂದು ನಿಸರ್ಗ ಹಾಗೂ ಸಾಮಾಜಿಕ ಸಮಾನತೆಗಳನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಈ ಕುರಿತು ಕಾವ್ಯ ಪ್ರಪಂಚ ಹೆಚ್ಚು ಸಂವೇದನಾಶೀಲವಾಗುವ ಅಗತ್ಯವಿದೆ ಎಂದು ಹೇಳಿದರು.
(ಸಂಚಾಲಕ ನಾಗರಾಜ ವೈದ್ಯರ ಮಾತು)
ಪ್ರಾಸ್ತಾವಿಕವಾಗಿ ಮಾತನಾಡಿದ ಕವಿತೆ ಬಳಗದ ಸಂಚಾಲಕ ನಾಗರಾಜ ವೈದ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಕವಿತೆ ಬಳಗದಲ್ಲಿದ್ದ ಕವಿಗಳ್ನು ಭೌತಿಕವಾಗಿ ಒಂದೆಡೆ ಸೇರಿಸುವುದು ಈ ಕವಿಗೋಷ್ಟಿಯ ಹಿಂದಿರುವ ಪ್ರಮುಖ ಕಾರಣ. ಸಾಮಾಜಿಕ ಜಾಲತಾಣಗಳಲ್ಲಿ ಕವಿತೆಗಳ ಮೂಲಕ ಸಿಗುತ್ತಾರೆ. ಆದರೂ ದೂರವಿದ್ದುಬಿಡುತ್ತಾರೆ. ಅಂತವರನ್ನು ಒಂದೆಡೆ ಸೇರಿಸಿ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳವುದು ಪ್ರಮುಖ ಉದ್ದೇಶ. ಈ ಉದ್ದೇಶ ಇಂದು ಸಫಲವಾಗಿದೆ ಎಂದರು.
ಉಪನ್ಯಾಸಕ, ಬರಹಗಾರ ರಾಜು ಹೆಗಡೆ ಅವರು ಸಾಂದರ್ಭಿಕವಾಗಿ ಮಾತನಾಡಿ ಕವಿತೆಯನ್ನು ವಾಚನ ಮಾಡಿದರು. ನಾಗರಾಜ ವೈದ್ಯ -ಪ್ರೇಮದ ಹತ್ತು ಹನಿಗಳು, ಸಂಜಯ ಭಟ್ಟ ಬೆಣ್ಣೆ - ಮಧುಕುಟಿಗ, ಸಿಂಧುಚಂದ್ರ - ಪ್ರೇಮವೆಂದರೆ ಇದೇನಾ, ಶರೀಪ ಹಾಸರ್ಿಕಟ್ಟಾ - ಬಾ ಮುತ್ತು ಚೆಂಡೇ, ಗಣಪತಿ ಬಾಳೆಗದ್ದೆ-ಅವಳು, ಎನ್. ವಿ. ಮಂಜುನಾಥ-ಅವನ ನೆನಪಿಗಾಗಿ, ಮಾನಸಾ ಹೆಗಡೆ-ಪುಟ್ಟ ಬೊಗಸೆಯ ಪದಗಳು, ವಿನಯ ದಂಟಕಲ್-ಒಮ್ಮೆ ತಿರುಗಿ ನೋಡು, ಚೈತ್ರಿಕಾ ಹೆಗಡೆ-ಮತ್ತೆ ಮಳೆ ಹೊಯ್ಯುತಿದೆ, ರಾಜು ಹೆಗಡೆ-ಒಂದು ಕವನ ವಾಚನ, ಪ್ರಕಾಶ ಭಾಗ್ವತ-ಬಾರದಿರು ಹಾಲಿರುಳೆ ಎನ್ನುವ ಕವಿತೆಗಳನ್ನು ವಾಚನ ಮಾಡಿದರು.
ಕವಿಗೋಷ್ಟಿಯಲ್ಲಿ ಕೇವಲ ಕವಿಗಳು ಮಾತ್ರ ಪಾಲ್ಗೊಳ್ಳದೇ `ಶಿರ್ಲೆ`ಯ ಸ್ಥಳೀಕರು, ಅನೇಕ ಪರ ಊರಿನ ಕಾವ್ಯಾಸಕ್ತರು ಪಾಲ್ಗೊಂಡಿದ್ದರು. ಯುವ ಕವಿಗಳ ಪ್ರೇಮ ಕವಿತೆಗಳಿಗೆ ಮೆಚ್ಚುಗೆ ಸೂಸಿ, ತಲೆದೂಗಿದರು. ಬರಹಗಾರ ಸಂಜಯ ಭಟ್ಟ ಬೆಣ್ಣೆ ಅವರು ಕಾರ್ಯಕ್ರಮ ನಡೆಸಿಕೊಟ್ಟರು.


***
(ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾಗಿದೆ)

Wednesday, March 25, 2015

ಅಘನಾಶಿನಿ ಕಣಿವೆಯಲ್ಲಿ-15


             ಕಾನನದ ಮಡಿಲಿನ ತುಂಬಾ ಓಡಾಡಿ ಮನ ಹಿಗ್ಗಾಗಿಸಿಕೊಂಡ ಆ ಸೈನ್ಯ ಮತ್ತೊಮ್ಮೆ ಅಘನಾಶಿನಿ ತೀರದತ್ತ ಹೊರಟರು. `ಅಯ್ಯ.. ಇವರ್ಯಾಕೆ ನಿಮಿಷಕ್ಕೊನ್ನಮ್ನಿ ಆಡ್ತಾವ್ರೆ..' ಅಂದುಕೊಂಡ ದ್ಯಾವ. ಮತ್ತೆ ತೀರವನ್ನು ತಲುಪಿದ ನಂತರ ದ್ಯಾವ ಪ್ರತಿಯೊಬ್ಬರಿಗೂ ತೆಪ್ಪವನ್ನು ಮಾಡುವುದು ಹೇಗೆ ಎನ್ನುವುದನ್ನು ವಿವರಿಸಿದ. ಬಿದಿರನ್ನು ಅಳತೆಯ ಪ್ರಕಾರ ಕಡಿದು, ಜೋಡಿಸಿ, ಬೈನೆ ಹಗ್ಗದಿಂದ ಕಟ್ಟಿ ಫಟಾ ಫಟ್ ತೆಪ್ಪ ತಯಾರಿಸಿದ್ ದ್ಯಾವ. ದ್ಯಾವನ ಕೈಚಳಕವನ್ನು ಪ್ರತಿಯೊಬ್ಬರೂ ವಿಸ್ಮಯದಿಂದ ಕಣ್ತುಂಬಿಕೊಂಡರು.
               `ದ್ಯಾವಾ.. ಮರಕಡೀಲಿಕ್ಕೆ ಅಂತ ದಡೆ ಮಾಡ್ತಾರಂತಲ್ಲ.. ಅದನ್ನು ತೋರ್ಸು.. ಹೆಂಗಿರ್ತದೆ ಅಂತ ನೋಡಬೇಕು..' ಎಂದ ವಿಕ್ರಂ ದ್ಯಾವನ ಬಳಿ.
             `ಹ್ವಾಯ್.. ನಿಮ್ದು ಯಾವ್ ಊರು ಹೇಳಿ .. ' ಎಂದ ದ್ಯಾವ.
            `ಯಲ್ಲಾಪುರ ಮಾರಾಯಾ.. ಯಾಕ್ ಕೇಳ್ತಾ ಇದ್ದೀಯೋ..' ಎಂದ ವಿಕ್ರಂ.
             `ಅಲ್ಲಾ ಯಲ್ಲಾಪುರದವರು ಅಂತೀರಾ ನೀವ್ ದಡೆ ನೋಡಿಲ್ಲಾ ಅಂದ್ರೆ ನಗು ಬರ್ತೈತಿ. ನೀವ್ ಮಜಾ ಇದ್ದೀರಿ ಬಿಡಿ..' ಎಂದ ದ್ಯಾವ. `ಇಲ್ಲಾ ಮಾರಾಯಾ.. ಚಿಕ್ಕಂದಿನಿಂದ ಪೇಟೆಯ ಕಡೆಯಲ್ಲಿ ಬೆಳೆದೆ ನೋಡು.. ಅದಕ್ಕೆ ದಡೆಯ ಬಗ್ಗೆ ಗೊತ್ತಿಲ್ಲ. ಮೊನ್ನೆ ಯಾರೋ ಹೇಳ್ತಾ ಇದ್ರು. ಅದಕ್ಕೆ ನೋಡುವ ಆಸೆಯಾಗ್ತಾ ಇದೆ.. ತೋರ್ಸೋ ಮಾರಾಯಾ..' ಎಂದ ವಿಕ್ರಂ
          ನಂತರ ಗಾಭರಿ ಪಟ್ಟುಕೊಂಡ ದ್ಯಾವ `ಅಲ್ಲಾ..  ಹೊಳೆಯಾಗೆ ಮೀನ್ ಹಿಡಯೋದ್ ತೋರ್ಸಿ ಅಂದ್ರೆ ತೂರುಸ್ತೀನಿ. ಜೇನು ಕೊಯ್ಯೋದು ತೋರ್ಸು ಅಂದ್ರೂ ಸೈ. ನಿಮಗೆಂತಕ್ಕೆ ಹುಚ್ಚು? ಮರ ಕೊಯ್ಯೋ ದಡೆ ನೋಡ್ತೀನಿ ಅಂತೀರಲ್ರೋ.. ಯಾಕ್ರೋ..ದಡೆ ತೋರ್ಸೋದು ಅಂದ್ರೆ ಸುಲಭದಾಗೆ ಐತಿ ಅಂದ್ಕೊಂಡ್ರಾ? ಸುಲಭ ಅಲ್ಲ ನೋಡಿ ಅದು.. ಭಯಂಕರ ಕಷ್ಟ ಉಂಟು.. ನೀವ್ ಹೇಳಿದ್ ಆಗೋದಿಲ್ಲೇಳಿ' ಎಂದು ಕೇಳಿದ್ದ ಆತ.
           `ದ್ಯಾವಾ.. ಪ್ಲೀಸ್ ಕಣೋ.. ತೋರ್ಸು.. ನಾನೂ ನೋಡಿಲ್ಲ..' ಎಂದು ಹೇಳಿದಳು ವಿಜೇತಾ.
           `ನಿಮ್ ಗೆ ಗೊತ್ತಾಗೂದಿಲ್ಲ ನೋಡಿ.. ದಡೆ ನೋಡಾಕ್ ಹೋಗೋದು ಅಂದ್ರೆ ಕಡ್ ಜೇನ್ ಹಲ್ಲೆಗೆ ಕೈ ತಡವಿಕೊಂಡ ಹಂಗೆ. ಭಾರಿ ಸಾಹಸ ಮಾಡಬೇಕು.. ನೀವೋ ವಟಾ ವಟಾ ಅಂತ ಮಾತಾಡ್ತಾ ಇರ್ತೀರಿ.. ಸುಮ್ಮನಿದ್ದರೆ ಏನಾದರೂ ಮಾಡಬೌದಿತ್ತು. ಇನ್ನು ಅಲ್ಲಿ ಯಾರ್ಯಾರು ಮರ ಕಡೀತಾ ಇರ್ತಾರೋ.. ಕೇರಳದ ಮಲಬಾರಿಗಳು, ಸಾಬ್ರು, ನಮ್ಮೂರ್ನವ್ವೇ ಒಂದಷ್ಟ್ ಮರಗಳ್ಳರು.. ಹಿಂಗೆ ಬಹಳಷ್ಟ್ ಮಂದಿ ಇರ್ತಾರೆ ನೋಡಿ. ನೆತ್ತಿ ಸುಡೋ ಬಿಸಿಲ್ನಾಗೂ ಟೈಟ್ ಆಗಿ ಮರ ಕಡಿತಾ ಇರ್ತಾರೆ. ಹೆಂಗೆಂಗೋ ಇರ್ತಾರೆ ಮಾರಾಯ್ರಾ.. ಅದನ್ನ ಹೇಳೋದ್ ಕಷ್ಟ. ನಾವ್ ನೋಡಾಕ್ ಹೋಗೋದು, ನಮ್ ಮ್ಯಾಗೆ ಗಲಾಟೆಗೆ ಬರೋದು.. ಅದು ಗಲಾಟೆಗೆ ನಿಲ್ಲದೇ ಮತ್ತಿನ್ನೇನೋ ಆಗೋದು.. ಇದೆಲ್ಲಾ ಬ್ಯಾಡ್ರಾ.. ಅವ್ರು ಕೊಲ್ಲೋದಕ್ಕೂ ಹೇಸಾದಿಲ್ಲ ನೋಡಿ.. ನಿಮ್ಮನ್ನ ಕರೆದುಕೊಂಡ್ ಹೋಗಿದ್ದು ನಾನು ಅಂತ ಗೊತ್ತಾದ್ರೆ ಸಾಕು.. ನನ್ನ ಹೆಣಾ ಉರುಳ್ತಾವೆ.. ಗೊತ್ತೈತಾ.. ಸುಮ್ಕಿರಿ..' ಎಂದು ಹೇಳಿದ ದ್ಯಾವ. ದ್ಯಾವನ ಮಾತಿನಿಂದ ಆ ಊರಿನ ಸುತ್ತಮುತ್ತಲ ನಡೆಯುತ್ತಿದ್ದ ಕರಾಳ ದಂಧೆಗಳ ಒಂದು ಪುಟ ತೆರೆದುಕೊಂಡಂತೆ ಅನ್ನಿಸುತ್ತಿತ್ತು. ಕೆಲವರ ಮನದಲ್ಲಿ ಭೀತಿಯ ಸೆಳಕು ಮೂಡಿತು.
             `ಹೆ. ಹೆ.. ಹೋಗೋ ದ್ಯಾವಾ.. ನಾವೆಂತಾ ಸುಮ್ಮನಿದ್ದು ಬಿಡ್ತೀವಾ.. ನಮ್ಮ ಮೇಲೆ ಅವರೇನಾದ್ರೂ ಬಂದ್ರು ಅಂತಾದ್ರೆ ನಾವೂ ತಿರುಗಿ ಬಿದ್ದರಾಯ್ತು.. ಹೊಡೆದಾಟವಾದರೂ ಸೈ.. ನಾವ್ ಇಷ್ಟೆಲ್ಲ ಜನ ಇಲ್ವಾ ದಾಂಢಿಗರು..' ಎಂದ ಪ್ರದೀಪ ತಮಾಷೆಯಾಗಿ.
             ಅದಕ್ಕೆ ಒಂದು ಸಾರಿ ನಕ್ಕ ದ್ಯಾವ `ನಿಮ್ಗೆ ತಮಾಷ್ಗಿ.. ಎಂತಾ ಗೊತ್ತೈತ್ರಾ ನಿಮ್ಗೆ.. ನಾಟಾ ಕೊಯ್ಯುವವರ ಸುದ್ದಿ..? ಬ್ಯಾರಿಗಳು ಅವ್ರು. ಅವರ ಉಸಾಬರಿಗೆ ಹೋಗೋದು ಒಂದೇ.. ನಮ್ ಶಿಖಾರಿ ನಾವ್ ಮಾಡ್ಕೊಳೋದೂ ಒಂದೆ ನೋಡಿ.. ಈಗೊಂದ್ ಇಪ್ಪತ್ ವರ್ಷದ ಹಿಂದೆ ಸಿರ್ಸಿ ಹತ್ರಕ್ಕೆ ಹೆಗಡೆಕಟ್ಟೆ ಐತಲ್ರಾ.. ಅದರ ಬುಡುಕೆ ಒಬ್ಬ ರೇಂಜರ್ನೇ ಜೀಪ್ ಹತ್ತಿಸಿ ಸಾಯಿಸಿದ್ದರು. ಅಂತ ಪಾರೆಸ್ಟ್ ಅಧಿಕಾರಿನೇ ಕೊಂದು ದಕ್ಕಿಸಿಕೊಂಡವರೆ.. ನಮ್ಮನ್ನ ಸುಮ್ಕೆ ಬಿಡ್ತಾರಾ..? ನಿಮಗೆ ಮಾಡಾಕ್ ಹ್ವಾರ್ಯ ಇಲ್ಲ ಅಂದ್ರೆ ಹೇಳಿ ಕಬ್ಬಿಗ್ ಮಣ್ ಹಾಕೂದ್ ಐತಿ.. ಎಲ್ಲಾ ಸೇರಿ ಮಾಡ್ವಾ.. ಸೇರೆಗಾರ್ಕೆ ನಾ ಮಾಡ್ತೆ.. ನಿಮ್ಗೆ ಸಂಬಳಾ ನೂ ಕೋಡ್ತೆ..' ಎಂದು ಗಂಭೀರವಾಗಿ ಉತ್ತರಿಸಿದ್ದ ದ್ಯಾವ.
              `ಹೋಗ್ಲಿ ಬಿಡೋ ದ್ಯಾವ.. ಅಷ್ಟೆಲ್ಲಾ ತೊಂದ್ರೆ ಉಂಟು ಅಂತಾದ್ರೆ ಈಗ ಬ್ಯಾಡಾ.. ಮತ್ಯಾವಾಗ್ಲಾದ್ರೂ ತೋರಿಸಬೌದಂತೆ.. ಈಗ್ ಎಲ್ಲಾ ಮನೆಗೆ ಹೋಗೋಣ ನಡೀರಿ..' ಎಂದ ವಿಕ್ರಮ. ಎಲ್ಲರೂ ಹೊರಡಲು ಅನುವಾದರು. `ಈಗಲ್ಲಾ.. ನೀವ್ ಯಾವಾಗ್ ತೋರ್ಸಾಕೆ ಬನ್ನಿ ಅಂದ್ರೂ ನಾ ಬರೋದಿಲ್ರೋ.. ನಂಗೆಂತಕ್ಕೆ ಬೇಕ್ರಾ ಬೆಂಕಿ ಜೊತೆ ಆಟ..' ಎಂದು ಕಡ್ಡಿ ಮುರಿದಂತೆ ಹೇಳಿದ ದ್ಯಾವ. ಎಲ್ಲರೂ  ಮೌನವಾಗಿ ಮನೆಯ ಕಡೆ ಹೆಜ್ಜೆ ಹಾಕಿದರು.

***

                 ಈ ಊರಿನ ಸುತ್ತ ಅನೇಕ ಚಿತ್ರ ವಿಚಿತ್ರ ಹೆಸರಿನ ಊರುಗಳಿವೆ. ಮುತ್ತಮೂರ್ಡು, ಅಡಕಳ್ಳಿ, ಕೋಡಶಿಂಗೆ, ಸಂಕದಮನೆ, ಹೊಸಮನೆ, ಬೇಣದಗದ್ದೆ, ಹಿತ್ತಲಕೈ ಹೀಗೆ ವಿಶಿಷ್ಟ, ವಿಚಿತ್ರ ಹೆಸರಿನ ಊರುಗಳು. ಊರಿನ ತುಂಬಾ ಕಾಡು. ಊರು ಊರುಗಳ ನಡುವೆಯೂ ಕಾಡು. ದೊಡ್ಡದೊಂದು ಗುಡ್ಡ. ಗುಡ್ಡದ ತಪ್ಪಲಲ್ಲಿ ಮನೆಗಳು. ಯಾವುದೇ ಊರಿನಲ್ಲೂ 20ಕ್ಕಿಂತ ಹೆಚ್ಚಿನ ಮನೆಗಳಿಲ್ಲ. ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗಬೇಕೆಂದರೂ ಕನಿಷ್ಟ 2 ಕಿ.ಮಿ ನಡೆದಾಡಲೇ ಬೇಕು. ಒಂದು ಪಕ್ಕದಲ್ಲಿ ಅಘನಾಶಿನಿ ನದಿ. ಇನ್ನುಳಿದಂತೆ ಎಲ್ಲ ದಿಕ್ಕುಗಳಲ್ಲಿಯೂ ದಟ್ಟ ಕಾಡಿನಿಂದ ಕೂಡಿದ ಗುಡ್ಡ, ಬೆಟ್ಟ. ನಡು ನಡುವೆ ಅಡಿಕೆಯ ತೋಟಗಳು. ತುಣುಕು ತುಣುಕು ಗದ್ದೆಗಳ ಸಾಲುಗಳು. ಈ ಭಾಗದ ಕಾಡಂತೂ ಬೀಟೆ, ತೇಗ, ಹುನಾಲು, ಜಂಬೆ, ಮತ್ತಿಗಳಂತಹ ಬೆಲೆಬಾಳುವ ಮರಗಳ ತೊಟ್ಟಿಲು. ನಮ್ಮೂರಲ್ಲಿರೋದು ಆರೇ ಮನೆಗಳು ನೋಡಿ. ಊರಿನಲ್ಲಿ ಬಹುತೇಕರು ಕೃಷಿಕರು. ಹೊಸ ತಲೆಮಾರಿನ ಜನ ಊರಿನಿಂದ ಹೊರಗೆ ಉದ್ಯೋಗಕ್ಕಾಗಿ ಹೋಗುತ್ತಿದ್ದಾರೆ  ಎಂದು ತನ್ನೂರಿನ ಬಗ್ಗೆ ವಿವರಣೆ ನೀಡಿದ ವಿನಾಯಕ.
                 `ಮತ್ತೇನಾದ್ರೂ ವಿಶೇಷ ಇದೆಯಾ ವಿನಾಯಕ್..' ಅಂದ ಪ್ರದೀಪ.
                 `ಇದೆ. ಶೇಡಿಮಣ್ಣು ಅಂತೊಂದು ಅಪರೂಪದ ಮಣ್ಣು ನಮ್ಮೂರಿನಲ್ಲಿ ಸಿಗುತ್ತೆ. ಶೇಡಿ ಮಣ್ಣಿನ ಗುಡ್ಡವೇ ಇಲ್ಲಿದೆ. ಅದೇ ಕಾರಣಕ್ಕೆ ನಮ್ಮೂರನ್ನು ಶೇಡಿ ದಂಟಕಲ್ ಎಂದೂ ಕರೆಯಲಾಗುತ್ತದೆ. ಇನ್ನೂ ವಿಶೇಷತೆಗಳಿವೆ. ನಮ್ಮೂರಲ್ಲಿ ಈಗ್ಗೆ 50-60 ವರ್ಷಗಳ ಹಿಂದೆ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿತ್ತು. ಇನ್ನೂ ಒಂದ್ ವಿಶೇಷತೆ ಇದೆ ನೋಡಿ. ನಮ್ಮೂರಿನಲ್ಲಿ ಅನಂತ ಭಟ್ಟನ ಅಪ್ಪೆ ಎನ್ನುವ ಮಿಡಿಮಾವು ಸಿಗುತ್ತದೆ. ಈ ಅಪ್ಪೆ ಮಿಡಿ ಜಗತ್ತಿನಲ್ಲಿಯೇ ಅತ್ಯುತ್ಕೃಷ್ಟ ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ. ಈ ಅಪ್ಪೆ ಮಿಡಿ ನಮ್ಮೂರಿನಲ್ಲಿ ಸಿಗುತ್ತದೆ. ತಳಿ ಉಳಿಸಿದ ಖ್ಯಾತಿ ನಮ್ಮೂರಿನದ್ದು.. ಇದೊಂಥರಾ ಅಪರೂಪದ ಊರು..' ಎಂದ ವಿನಾಯಕ.
                `ಓಹ್.. ಅನಂತ ಭಟ್ಟನ ಅಪ್ಪೆ ಮಿಡಿಯ ಬಗ್ಗೆ ಯಾವಾಗಲೋ ಓದಿದ್ದೆ. ಕಳವೆಯವರು ಇದರ ಬಗ್ಗೆ ಬರೆದ ಹಾಗೆ ನೆನಪು. ಆಮೇಲೆ ದಕ್ಷಿಣ ಕನ್ನಡದ ಕೋಟಕ್ಕೆ ಯಾವುದೋ ಸುದ್ದಿಗೆ ಹೋಗಿದ್ದೆ. ಅಲ್ಲಿ ಶಿವರಾಮ ಕಾರಂತರ ಅಣ್ಣ ಕೋ. ಲ. ಕಾರಂತರ ಮನೆಯಿದೆ. ಫಾರ್ಮೊಂದಿದೆ. ಅಲ್ಲಿ ಅನಂತ ಭಟ್ಟನ ಅಪ್ಪೆ ಮರಗಳನ್ನು ಕಂಡಿದ್ದೆ. ಆಗ ಯಾರೋ ಈ ಊರಿನ ಸುದ್ದಿ ಹೇಳಿದ್ದ ನೆನಪು.. ವಾವ್.. ಸಖತ್ತಾಗಿದೆ. ಏನೆಲ್ಲಾ ವಿಶೇಷತೆಗಳು ನೋಡಿ. ವಿನಾಯಕ್ ನಾಳೆನೇ ಈ ಎಲ್ಲ ವಿಶೇಷತೆಗಳನ್ನು ನಮಗೆ ತೋರಿಸಿ..' ಎಂದಳು ವಿಜೇತಾ.
                 `ಓಹ್.. ಖಂಡಿತ.. ನಿಮಗೆಲ್ಲ ಇದನ್ನು ತೋರಿಸುತ್ತೇನೆ. ನಮ್ಮೂರಿಗೆ ಬಂದವರಿಗೆ ನಮ್ಮೂರಿನ ವಿಶೇಷತೆಗಳನ್ನು ತೋರಿಸದಿದ್ದರೆ ಹೇಗೆ ಹೇಳಿ..' ಎಂದ ವಿನಾಯಕ.
                 ಎಲ್ಲರೂ ಹೂಂ ಎಂದರು. ಎಲ್ಲ ಪುಂಗವರಿಗೆ ಊರಿನ ಬಗ್ಗೆ ಇದ್ದ ಕುತೂಹಲ ದುಪ್ಪಟ್ಟಾಯಿತು. ಜೊತೆಗೆ ಅಪ್ಪಟ ಮಲೆನಾಡಿನೊಳಗೆ ಹುದುಗಿರುವ ಊರೊಂದರ ವೈಶಿಷ್ಟ್ಯತೆಗಳ ಬಗ್ಗೆ ಕುತೂಹಲ ಮೂಡಿತು.
                ಮಲೆನಾಡೇ ಹಾಗೆ. ನಿಗೂಢ, ಅಬೇಧ್ಯ. ಇದೊಂಥರಾ ಸೊಕ್ಕಿದ ಕಾಡಾನೆಯಂತೆ. ಯಾರ ಅಂಕೆಗೂ ಸಿಲುಕದು. ಜಂಬಂಧ ಹೆಣ್ಣಿನಂತೆ ಯಾರನ್ನೂ ಗಮನಿಸುವುದಿಲ್ಲ. ಯಾರಿಗೂ ಸಲಾಂ ಹೊಡೆಯುವುದಿಲ್ಲ. ಪಟ್ಟಾಗಿ ಹೊರಟು ಎಷ್ಟು ಒಳಹೋಗಲು ಪ್ರಯತ್ನ ಪಟ್ಟರೂ ಒಳಹೋಗಲು ಸಾಧ್ಯವೇ ಇಲ್ಲ ಅನ್ನುವಷ್ಟು ಜಿಗ್ಗು. ಮೈ ಕೈ, ಬಟ್ಟೆ ಕಿತ್ತು ಬಿಡುವಷ್ಟು ಮುಳ್ಳು, ತರಚು. ಬಿಡಿಸಲಾಗದ ಸಿಕ್ಕು ಸಿಕ್ಕು ಗಂಟೆ. ಏನು ಇಲ್ಲದಾಗ ಸುಮ್ಮನೆ ತೆರೆದುಕೊಳ್ಳುವ ಜಾಗ. ವೈಚಿತ್ರ್ಯ-ವೈಶಿಷ್ಟ್ಯ. ಇಂಥ ಮಲೆನಾಡಿಗೆ ಬಂದು ಕಾಲಿಟ್ಟಿದೆ, ಒಳಹೊಕ್ಕಿದೆ. ನಿಧಾನವಾಗಿ ಸಿಕ್ಕು ಸಿಕ್ಕಾಗುತ್ತಿದೆ. ಜಡಕಾಗುತ್ತಿದೆ. ಸದ್ದಿಲ್ಲದೇ ಈ ಗುಂಪು ಒಳಕ್ಕೆ ಹೋಗಿ ಸಿಲುಕಿಕೊಳ್ಳುತ್ತಿದೆ. ಮುಂದೇನು? ವಾಪಾಸು ಬರುತ್ತಾರೆಯೇ? ಎಲ್ಲವೂ ಆಲೋಚನೆ ಮಾಡಿದಷ್ಟೂ ನಿಗೂಢ, ವಿಸ್ಮಯ.

(ಮುಂದುವರಿಯುತ್ತದೆ)

Tuesday, March 17, 2015

ಅಂ-ಕಣ-3

ಸುಮ್ನೇ ಕೇಳಕಂಡಿದ್ದು :-
ಸಮಾಜಕ್ಕೆ ಬುದ್ಧಿ ಹೇಳೋ ಪತ್ರಕರ್ತರಿಗೆ ಹಳ್ಳಿ ದಾರಿ ಕಾಣಿಸುತ್ತಿಲ್ಲ..
ಇನ್ನು ಈ ಜಮಾನಾದ ಯುವಕರಿಗೆ ಕಾಣಿಸುತ್ತಾ?

ಪ್ರಶ್ನೋತ್ತರ ಕಾಂಡ
ನಾನು ಹೇಳಿದೆ :
ಹಳೆಯ ಕವಿತೆ ಮತ್ತೆ ಸಿಕ್ಕಿದೆ
ನೆನಪಾಗಿದೆ
ಅವಳು ಕೇಳಿದ್ದು :
ಯಾರವಳು ಕವಿತಾ?

ಸರಣಿ-ಸರಪಣಿ
ಮೂರು ವರ್ಷದ ಹಿಂದೆ ದಾಂಡೇಲಿಯಲ್ಲಿ ಎಸಿಎಫ್ ಮದನ ನಾಯ್ಕ
ಒಂದೂವರೆ ವರ್ಷದ ಹಿಂದೆ ಪೊಲೀಸ್ ಅಧಿಕಾರಿ ಬಂಡೆ..
ಇದೀಗ ಡಿ. ಕೆ. ರವಿ.
ಇನ್ನೆಷ್ಟು ಬಲಿ ಬೇಕು ಪ್ರಾಮಾಣಿಕರದ್ದು?
ಇಷ್ಟೆಲ್ಲ ಬಲಿಯಾಗುತ್ತಿದ್ದರೂ ನಿದ್ದೆರಾಮಯ್ಯ ಇನ್ನೂ ಎದ್ದಿಲ್ಲವಲ್ಲ..

ಪಾದಯಾತ್ರೆ ಪುರಾಣ
2012ರ ವಿಧಾನಸಭಾ ಚುನಾವಣೆಗೂ ಮುನ್ನ ಬಳ್ಳಾರಿ ಸರಿಯಿಲ್ಲ ಅಂತ ನಿದ್ದೆರಾಮಯ್ಯ ಪಾದಯಾತ್ರೆ ಮಾಡಿದರು.
ಇದೀಗ ನಿದ್ದೆರಾಮಯ್ಯರ ನೇತೃತ್ವದಲ್ಲಿ ಕರ್ನಾಟಕವೇ ಸರಿಯಿಲ್ಲವಲ್ಲ..
ಹೇಳಿ ಎಲ್ಲಿಗೆ ಪಾದಯಾತ್ರೆ ಮಾಡೋಣ?

ಸಿಕ್ಕಾಪಟ್ಟೆ ಅಸಮಧಾನ:
ಬಳ್ಳಾರಿಗರ ಕಂಡು
ತೊಡೆತಟ್ಟಿ ನಿಂತಿದ್ದ ನಿದ್ದೆರಾಮಯ್ಯ
ಬೆಂಗಳೂರನ್ನೇ ಕಂಡು
ತೊಡೆಮುರಿದು ಬಿದ್ದಿದ್ದಾನೆ |

Monday, March 16, 2015

ಒಲವಿನ ಪಯಣ

ನೀನು ನನ್ನ ಬಾಳಿಗೆ
ಅರಿವಿನ ಮುನ್ನುಡಿ
ನಿನ್ನ ಕಣ್ಣು ನನ್ನ ಪಾಲಿ-
ಗೆಂದೂ ಒಂದು ಕನ್ನಡಿ ||

ಕಣ್ಣ ರೆಪ್ಪೆಯಾಗಿ ನಾನು
ನಿನ್ನನೆಂದೂ ಕಾಯುವೆ
ಒಲವ ಧಾರೆ ಸುರಿಸುತಿರಲು
ನಿನ್ನ ಜೊತೆಗೆ ಬಾಳುವೆ ||

ನಿನ್ನ ಬಿಂಬ ನನ್ನ ಮನಕೆ
ತಂಗಾಳಿಯಂತೆ ತಂಪು
ನಿನ್ನ ದನಿಯು ಕಿವಿಗೆ ಸೂಕಿ
ಹೃದಯದೊಳಗೆ ಇಂಪು ||

ನಾನು-ನೀನು ಒಂದೆ ಜೀವ
ಒಲವೆಂದೂ ಒಜ್ಜೆ
ಜೊತೆ ಜೊತೆಯಲಿ ಒಂದಾಗಿ
ಹಾಕೋಣ ಹೆಜ್ಜೆ ||

***
(ಈ ಕವಿತೆಯನ್ನು ಬರೆದಿರುವುದು ಮಾ.16, 2015ರಂದು ಶಿರಸಿಯಲ್ಲಿ)

Friday, March 13, 2015

ಅಂ-ಕಣ-2

ಅವಳಿಗಳಿಗೆ ಇಡುವ ಹೊಸ ತರಹದ ಹೆಸರು
ಹೊಸ ಹೆಸರಿನ ಫ್ಯಾಷನ್ ಹೀಗೂ ಇರ್ತವೆ ನೋಡಿ

ನಂದನಾ-ನಿಂದನಾ

ಸುಮ್ಮನೆ ಒಂದು ಲೈನ್, ತೀರಾ ಬುದ್ಧಿಜೀವಿ ಅಂದ್ಕೋಬೇಡಿ..

ಕೆಲವು ಪ್ರಶ್ನೆಗಳಿಗೆ ಉತ್ತರ ಬರುವುದಿಲ್ಲ ಎನ್ನುವುದು ಗೊತ್ತಿದ್ದರೂ
ಮತ್ತೆ ಮತ್ತೆ ಕೇಳುತ್ತಲೇ ಇರುತ್ತೇವೆ.
ಕೇಳಿಕೊಳ್ಳುತ್ತಲೇ ಇರುತ್ತೇವೆ ||

ಹೀಗೊಂದ್ ಪಂಚಿಂಗ್ ಲೈನ್ :

ನಿನ್ನ ಕಣ್ಣು ಬಹಳ ಚನ್ನಾಗಿದೆ.. ಕಣೇ ಗೆಳತಿ..
ನನ್ನ ಕಣ್ಣೇ ಬಿದ್ದು ಬಿಟ್ಟಾತು,,||

ಮತ್ತೊಂದ್ ಸ್ವಲ್ಪ ತಮಾಷೆ :

ದನಗಳಲ್ಲಿ ಒಳ್ಳೆಯ ದನ
ವಂ-ದನ
ಮನುಷ್ಯರಲ್ಲಿ ಒಳ್ಳೆಯ ದನ
ಚಂ-ದನ ||

ಒಂಚೂರು ದೇಶಪ್ರಮೇದ ಹನಿ :

ದೇಶದ ಗಡಿ
ಬಿಡಿಯಲ್ಲಿ ಸದಾ
ಭಾನಗಡಿಯಾದರೂ
ಗಂಡಾಗುಂಡಿಯಾಗುತ್ತಿದ್ದರೂ
ಉಗ್ರರು ದಾಂಗುಡಿ ಇಡುತ್ತಿದ್ದರೂ
ಜೀವ ಪಣಕ್ಕೊಡ್ಡಿ
ಕಾಯುವನು ಯೋಧ ||