Tuesday, October 21, 2014

ದೀಪ ಬೆಳಗೋಣ

ಬನ್ನಿ ದೀಪವ ಬೆಳಗೋಣ
ಕತ್ತಲೆಯನೋಡಿಸೋಣ |

ನೂರು ಕಾಲದ ಜಡವ
ದೂರಕೆ ತಳ್ಳೋಣ
ಹೊಸ ಚೈತನ್ಯದ ಬತ್ತಿಯ
ದೀಪ ಬೆಳಗೋಣ |

ಗಾಡಾಂಧಕಾರವನು
ತೊಡೆದು ಹಾಕೋಣ
ಹೊಸ ಮಾನವತೆಯ ತತ್ವ
ಬೆಳಗಿ ಬೆಳಗೋಣ |

ಪ್ರೀತಿಯ ಹೊಸ
ತೇರನೆಳೆಯೋಣ
ಕಾರುಣ್ಯದ ಹೊಸ
ಬೀಜ ಬಿತ್ತೋಣ |

ನಮ್ಮೊಳಗಣ ತಮವ
ದಮನ ಮಾಡೋಣ
ಹೊಸ ಸತ್ವ ನವ ಚೈತ್ರ
ಎತ್ತಿ ಹಿಡಿಯೋಣ |

ದೀಪ ಬೆಳಗೋಣ
ಬನ್ನಿ ದೀಪವಾಗೋಣ
ಕತ್ತಲೆಯ ಬದುಕಿಗೆ
ಬೆಳಕ ತುಂಬೋಣ |

Monday, October 20, 2014

ಬೆಂಗಾಲಿ ಸುಂದರಿ-34

(ಬೋಗ್ರಾದ ಕಾಲುಸಂಕ)
              ಬೋಗ್ರಾದಲ್ಲಿ ಕಾಲಿಡುವ ವೇಳೆಗೆ ಸಾಕಷ್ಟು ಕತ್ತಲಾಗಿತ್ತು. ಬೋಗ್ರಾದಿಂದ ಮುಂದಕ್ಕೆ ಸಾಗುವ ಬಗ್ಗೆ ವಿನಯಚಂದ್ರ ಹಾಗೂ ಮಧುಮಿತಾ ಯಾವುದೇ ಆಲೋಚನೆ ನಡೆಸಿರಲಿಲ್ಲ. ಬೋಗ್ರಾದಲ್ಲೇ ಉಳಿಯಬೇಕೆ, ಅಥವಾ ತಕ್ಷಣವೇ ಮುಂದಕ್ಕೆ ಸಾಗಬೇಕೆ ಎನ್ನುವುದೂ ಸ್ಪಷ್ಟವಾಗಿರಲಿಲ್ಲ. ಇಬ್ಬರಿಗೂ ಸಾಕಷ್ಟು ಆಯಾಸವಾಗಿತ್ತು. ಹೆಜ್ಜೆ ಕಿತ್ತಿಡಲೂ ಆಗದಷ್ಟು ನಿತ್ರಾಣರಾಗಿದ್ದರು. ಮುಂದಕ್ಕೆ ಪ್ರಯಾಣ ಮಾಡುವ ಮನಸ್ಸು ಇಬ್ಬರಲ್ಲೂ ಇರಲಿಲ್ಲ. ಹಾಗೆಂದು ಅಲ್ಲೇ ಉಳಿಯೋಣವೆಂದರೆ ಕೈಯಲ್ಲಿನ ದುಡ್ಡು ಕೂಡ ಬಹಳ ಕಡಿಮೆ ಪ್ರಮಾಣದಲ್ಲಿತ್ತು. ಬೋಗ್ರಾದಲ್ಲಿ ರೂಮು ಮಾಡಿ ಉಳಿದರೆ ಮುಂದಿನ ಪ್ರಯಾಣಕ್ಕೆ ತೊಂದರೆಯಾಗುವ ಸಾಧ್ಯತೆಗಳು ಅಧಿಕವಾಗಿದ್ದವು. ಮಧುಮಿತಾಳ ಬಳಿ ವಿನಯಚಂದ್ರ ಕೇಳುವ ಮೊದಲೆ ಆಕೆಯೇ ಇಲ್ಲಿಯೇ ಉಳಿದುಬಿಡೋಣ ಎಂದಳು. ವಿನಯಚಂದ್ರ ಹೂಂ ಅಂದಿದ್ದ.
             ಬೋಗ್ರಾ ಪಟ್ಟಣದಲ್ಲಿ ರೂಮುಗಳ ದರ ಸಾಕಷ್ಟು ಹೆಚ್ಚಾಗಿದ್ದ ಕಾರಣ ಉಳಿಯಲು ಒಂದೆರಡು ಕಡೆಗೆ ಜಾಗ ಹುಡುಕಾಟ ನಡೆಸಿದರು. ಆದರೆ ಎಲ್ಲೂ ಇವರಿಗೆ ಅಗತ್ಯವಾದ ಸ್ಥಳ ದೊರಕಲಿಲ್ಲ. ಕೊನೆಗೆ ಅನಿವಾರ್ಯವಾಗಿ ಬೋಗ್ರಾದ ಪಾರ್ಕೊಂದರಲ್ಲಿ ರಾತ್ರಿ ಕಳೆಯುವ ನಿರ್ಧಾರಕ್ಕೆ ಬಂದರು. ಸನಿಹದ ಹೊಟೆಲೊಂದರಲ್ಲಿ ಊಟದ ಶಾಸ್ತ್ರ ಮುಗಿಸಿ ಉದ್ಯಾನದ ಬಳಿ ಬಂದರೆ ಬಾಗಿಲು ಹಾಕಿತ್ತು. ಒಬ್ಬ ಕಾವಲುಗಾರ ಪಾರ್ಕನ್ನು ಕಾಯುತ್ತ ನಿಂತಿದ್ದ. ಉದ್ಯಾನದೊಳಗೆ ಬಿಡಲು ಆತ ಖಂಡಿತ ಒಪ್ಪಲಿಕ್ಕಿಲ್ಲ ಎಂದುಕೊಂಡರು. ಕೊನೆಗೆ ವಿನಯಚಂದ್ರ ಹಾಗೂ ಮಧುಮಿತಾ ಇಬ್ಬರೂ ಆತನ ಕಣ್ಣು ತಪ್ಪಿಸಿ ಪಕ್ಕದಲ್ಲೆಲ್ಲೋ ಹಾದು ಬಂದು ಉದ್ಯಾನದ ಗೋಡೆಯನ್ನು ಹಾರಿ ಒಳಹೊಕ್ಕರು. ಅಲ್ಲೊಂದು ಕಡೆಗೆ ಮರದ ಅಡಿಯಲ್ಲಿ ಕುಳಿತರು. ಆ ರಾತ್ರಿ ಅಲ್ಲೇ ಉಳಿದು ಮರುದಿನ ಮುಂದಿನ ಪ್ರಯಾಣ ನಡೆಸಬೇಕಿತ್ತು.
             ಮರದ ಅಡಿಯಲ್ಲಿ ಕುಳಿತ ವಿನಯಚಂದ್ರನ ಕಾಲಿನ ಮೇಲೆ ಮಧುಮಿತಾ ಮಲಗಿದಳು. ತಿಳಿ ಬೆಳದಿಂಗಳು ಹಿತವಾಗಿತ್ತು. ಮರದ ಎಲೆಗಳ ನಡುವೆ ಆಗೀಗ ಇಣುಕುತ್ತಿದ್ದ ಬೆಳದಿಂಗಳ ಕಿರಣಗಳು ಇಬ್ಬರ ಮುಖದ ಮೇಲೆ ಕಣ್ಣಾಮುಚ್ಚಾಲೆ ಆಡುತ್ತಿದ್ದವು. ತುಸುವೇ ಬೀಸುತ್ತಿದ್ದ ತಂಗಾಳಿ ಮನಸ್ಸಿನಲ್ಲಿ ಉಲ್ಲಾಸವನ್ನು ಉಂಟುಮಾಡುತ್ತಿತ್ತು. ದೂರದಿಂದ ನೋಡಿದರೆ ಸ್ವರ್ಗದ ದೇವದಂಪತಿಗಳು ಬಂದು ಉದ್ಯಾನದಲ್ಲಿ ಕುಳಿತು ರಸನಿಮಿಷಗಳನ್ನು ಕಳೆಯುತ್ತಿದ್ದಾರೇನೋ ಎನ್ನಿಸುವಂತಿತ್ತು. ಮಧುಮಿತಾ ಖುಷಿಯಲ್ಲಿದ್ದಳು. ವಿನಯಚಂದ್ರ ಕೀಟಲೆಯ ಮೂಡಿನಲ್ಲಿದ್ದ.
            `ಈ ರಾತ್ರಿ ದೀರ್ಘವಾಗಲಿ ಅನ್ನಿಸುತ್ತಿದೆ ವಿನೂ..' ಎಂದಳು ಮಧುಮಿತಾ.
            `ಹೌದು.. ನನಗೂ ಹಾಗೇ ಅನ್ನಿಸುತ್ತಿದೆ.. ನೀನು ಜೊತೆಗೆ ಇದ್ದರೆ ಹಿತವೆನ್ನಿಸುತ್ತಿದೆ.. ಈ ರಾತ್ರಿ ಹೀಗೇ ಇರಲಿ ದೇವರೆ.. ಅಂದುಕೊಳ್ಳುತ್ತಿದ್ದೇನೆ ಕಣೇ..' ಅಂದ ವಿನಯಚಂದ್ರ.
            `ಮತ್ತೆ ಭಾರತ ತಲುಪೋದು ಕ್ಯಾನ್ಸಲ್ಲಾ..?' ಎಂದು ತಮಾಷೆ ಮಾಡಿದಳು ಮಧುಮಿತಾ.
            ವಿನಯಚಂದ್ರ `ಓಹೋ..  ನನಗೇ ಕಾಲೆಳೆಯೋದಾ?' ಎಂದ. ಕಾಲ ಮೇಲೆ ಮಲಗಿದ್ದ ಮಧುಮಿತಾಳನ್ನು ತನ್ನೆರಡೂ ಕೈಗಳಿಂದ ಬಾಚಿ ತಬ್ಬಿ ಹಿಡಿದು ತುಟಿಗಳ ಮೇಲೆ ತುಟಿಯನ್ನೊತ್ತಿ ಹಿತವಾಗಿ ಮುತ್ತು ಕೊಟ್ಟ. `ಥೂ... ಬಿಡು ಮಾರಾಯಾ..' ಎಂದಳಾದಳೂ ಮಧುಮಿತಾ ವಿನಯಚಂದ್ರನ ತಬ್ಬುಗೆಯನ್ನು ಹಿತವಾಗಿ ಅನುಭವಿಸಿದಳು. ಹಾಗೇ ಮತ್ತೊಮ್ಮೆ ಮುತ್ತನ್ನು ಕೊಟ್ಟ ವಿನಯಚಂದ್ರ. ಮಧುಮಿತಾ ಹಿತವಾಗಿ ನಾಚಿದಳು.
             ಹೀಗೇ ಅದೆಷ್ಟು ಹೊತ್ತು ಜೊತೆಯಲ್ಲಿದ್ದರೋ. ರಾತ್ರಿಯ ಬೀದಿ ನಾಯಿಗಳ ವಿಕಾರವಾದ ಕೂಗಿಗೆ ಬೆಚ್ಚಿ ಎಚ್ಚೆತ್ತರು. ವಿನಯಚಂದ್ರ ಒಮ್ಮೆ ಸರಿದು ಕುಳಿತ. ಕೊನೆಗೆ ವಿನಯಚಂದ್ರ ಮಧುಮಿತಾಳ ಬಳಿ `ಈಗ ನೀನು ಮಲಗಿ ನಿದ್ರಿಸು. ನಾನು ಕಾವಲು ಕಾಯುತ್ತಿರುತ್ತೇನೆ. ನಂತರ ನಾನು ಮಲಗುತ್ತೇನೆ..' ಎಂದ. ಮಧುಮಿತಾ ಮಲಗಿ ನಿದ್ರಿಸಿದಳು. ಕಣ್ಣಮುಚ್ಚಿದಾಗ ಹೊಸದೊಂದು ಕನಸಿನ ಲೋಕ ತೆರೆದುಕೊಳ್ಳತೊಡಗಿತು. ಅವಳನ್ನು ಹಾಗೆಯೇ ನೋಡುತ್ತ ಕುಳಿತುಬಿಟ್ಟ. ಅದೇಕೋ ಅವನಿಗೆ ಗೊತ್ತಿಲ್ಲದಂತೆ ಕಣ್ಣಿನಿಂದ ನೀರು ಬರಲು ಆರಂಭವಾಗಿತ್ತು. ತನಗೆ ಇಂತಹ ಬಂಗಾರದ ಹುಡುಗಿ ಸಿಕ್ಕಳು ಎನ್ನುವ ಆನಂದಕ್ಕಾ ಅಥವಾ ಇಂತಹ ಹುಡುಗಿ ಇಷ್ಟೆಲ್ಲ ಪಾಡು ಪಡಬೇಕಾಯಿತಲ್ಲ ಎನ್ನುವ ದುಃಖಕ್ಕಾ ಒಂದೂ ಗೊತ್ತಾಗಲಿಲ್ಲ.

**

        `ಅಲ್ಲಾ.. ವಿಶ್ವಕಪ್ ಮುಗಿದು ಇಷ್ಟು ವರ್ಷ ಆಗೋತು. ಇನ್ನೂ ವಿನಯಚಂದ್ರ ಮನೆಗೆ ಬಂಜ್ನಿಲ್ಲೆ. ಎತ್ಲಾಗಿ ಹೋದ. ಎಂತಾದ್ರೂ ಗೊತ್ತಾಜಾ? ಒಂಚೂರು ವಿಚಾರ ಮಾಡಕಾಗಿತ್ತು. ನೀವು ನೋಡಿದ್ರೆ ತನಗೆ ಸಂಬಂಧವೇ ಇಲ್ಲ ಅನ್ನೋ ಹಂಗೆ ಇದ್ರಲಿ ಥೋ.. ' ಎಂದು ವಿನಯಚಂದ್ರನ ಅಮ್ಮ ಸುಶೀಲಮ್ಮ ತಮ್ಮ ಯಜಮಾನರ ಬಳಿ ಸಿಡಿಮಿಡಿಗುಡಲು ಆರಂಭಿಸಿದ್ದಳು.
         ಶಿವರಾಮ ಹೆಗಡೆಯವರೂ ಹಲವು ಸಾರಿ ಮಗನ ಬಗ್ಗೆ ವಿಚಾರಿಸಿದ್ದರು. ತಮಗೆ ತಿಳಿದವರೆಂದರೆ ಚಿದಂಬರ ಮಾತ್ರ ಆಗಿದ್ದರು. ಅವರ ಬಳಿ ವಿನಯಚಂದ್ರನ ಬಗ್ಗೆ ಕೇಳಿದಾಗ `ವಿನಯಚಂದ್ರ ವಿಶ್ವಕಪ್ ಮುಗಿದ ತಕ್ಷಣ ಭಾರತಕ್ಕೆ ಹಿಂದಿರುಗಿದ ಭಾರತ ತಂಡದ ಜೊತೆಗೆ ವಾಪಾಸು ಬಂದಿಲ್ಲ. ಬಾಂಗ್ಲಾದಲ್ಲಿ ಯಾವುದೋ ಹುಡುಗಿಯನ್ನು ಪ್ರೀತಿಸಿದ್ದು, ಅವಳಿಗೆ ಏನೋ ಸಮಸ್ಯೆಯಾಗಿದ್ದು, ಅವಳನ್ನು ಭಾರತಕ್ಕೆ ಕರೆದುಕೊಂಡು ಬರುವುದಾಗಿ ಹೇಳಿ ಹೋಗಿದ್ದಾನೆ..' ಎಂದು ತಿಳಿಸಿದ್ದರು.
                  `ಈ ಮಾಣಿ ಯಾವಾಗ್ಲೂ ಹಿಂಗೆಯಾ.. ಥೋ.. ಯಾವ ಹುಡುಗಿ ಹುಡುಕಿ ಲವ್ ಮಾಡಿದ್ನೋ.. ಅದು ಯಾವ ರೀತಿಯ ಹುಡುಗೀನೋ.. ಅವಳ ಹಿಂದೆ ಇಂವ ಹೋಜಾ.. ಇವನ ಬುದ್ದಿಗೆ ಎಂತಾ ಆಗಿಕ್ಕು ಹೇಳಿ..' ಎಂದು ಬೈದುಕೊಂಡಿದ್ದರು ಶಿವರಾಮ ಹೆಗಡೆಯವರು. ಪತ್ರಕರ್ತನಾಗಿದ್ದ ಸಂಜಯನ ನೆನಪಾಗಿ ಆತನ ಬಳಿ ಮಾತನಾಡೋಣ ಎಂದುಕೊಂಡರಾದರೂ ಸಂಜಯನ ಮೊಬೈಲ್ ನಂಬರ್ ಸಕಾಲಕ್ಕೆ ಸಿಗದೇ ಸುಮ್ಮನಾದರು.
         ಮಗ ವಾಪಾಸು ಬಂದಿಲ್ಲ ಎನ್ನುವುದಕ್ಕಿಂತಲೂ ಯಾವುದೋ ಹುಡುಗಿಯನ್ನು ಪ್ರೀತಿಸಿ ಅವಳಿಗಾಗಿ ಭಾರತ ತಂಡವನ್ನೂ ಬಿಟ್ಟು ಬಾಂಗ್ಲಾದಲ್ಲೇ ಉಳಿದಿದ್ದಾನಲ್ಲ ಎನ್ನುವುದು ಮನದಾಳದಲ್ಲಿ ಅಸಮಧಾನಕ್ಕೆ ಕಾರಣವಾಗಿತ್ತು, ಆದರೆ ಬಾಂಗ್ಲಾ ನಾಡಿನಲ್ಲಿ ಹಿಂಸಾಚಾರ ತೀವ್ರವಾಗಿದೆ ಎನ್ನುವುದು ಕೇಳಿದಾಗ ಮಾತ್ರ ಮನಸ್ಸಿನಲ್ಲಿ ಕಳವಳ ಉಂಟಾಗಿತ್ತು. ಯಾವುದೋ ಕೂಪಕ್ಕೆ ಬಿದ್ದನೆ ಮಗರಾಯ ಎಂದೂ ಆಲೋಚಿಸಿದರು. ಬಾಂಗ್ಲಾ ನಾಡಿನಿಂದ ಅದೊಂದು ದಿನ ಮಗ ಪೋನ್ ಮಾಡಿದಾಗ ಕೊಂಚ ನಿರಾಳರಾಗಿದ್ದರು ಹೆಗಡೆಯವರು. ಪೋನ್ ಮಾಡಿದಾಗಲೇ ಬೈದುಬಿಡಬೇಕು ಎಂದುಕೊಂಡಿದ್ದರಾದರೂ ಮಗ ಯಾವ ಸಮಸ್ಯೆಯಲ್ಲಿ ಸಿಲುಕಿದ್ದಾನೋ ಎಂದುಕೊಂಡು ಸುಮ್ಮನಾಗಿದ್ದರು. ಇದೀಗ ಮಡದಿ ಸುಶೀಲಾ ಕುಂತಲ್ಲಿ, ನಿಂತಲ್ಲಿ ಸಿಡಿಮಿಡಿ ಮಾಡಲು ಆರಂಭಿಸಿದಾಗ ಮಾತ್ರ ಮಗನ ಬಗ್ಗೆ ಮಾಹಿತಿ ಪಡೆದು ಬರಲೇ ಬೇಕು ಎಂದು ತಮ್ಮ ಜೀಪನ್ನು ಹೊರತೆಗೆದಿದ್ದರು.
         ನಗರಕ್ಕೆ ಬಂದವರೇ ಸೀದಾ ಚಿದಂಬರ ಅವರನ್ನು ಭೇಟಿಯಾದ ಹೆಗಡೆಯವರು ಮಗನ ಬಗ್ಗೆ ಮತ್ತೆ ಕೇಳಿದ್ದರು. ಅದಕ್ಕೆ ಪ್ರತಿಯಾಗಿ ಚಿದಂಬರ ಅವರು `ವಿನಯಚಂದ್ರನ ಬಗ್ಗೆ ಭಾರತ ಕಬ್ಬಡ್ಡಿ ತಂಡದ ಮುಖ್ಯ ಕೋಚ್ ಜಾಧವ್ ಅವರು ಬಹಳ ತಲೆಕೆಡಿಸಿಕೊಂಡಿದ್ದಾರೆ. ತಂಡ ಬಿಟ್ಟು ಬಾಂಗ್ಲಾದಲ್ಲೇ ಉಳಿದ ಆತನ ಬಗ್ಗೆ ಸಿಟ್ಟಾಗಿದ್ದ ಅವರು ಬಹಳ ಕೂಗಾಡಿದರು. ನನ್ನ ಬಳಿಯೂ ಆತನ ವಿರುದ್ಧ ಕೂಗಾಡಿದ್ದರು. ನಾನು ಅವರ ಬಳಿ ಏನೋ ಹೇಳಲು ಹೋಗಿದ್ದೆ. ಆದರೆ ನನ್ನ ಮಾತನ್ನು ಕೇಳಿರಲಿಲ್ಲ. ಇದೀಗ ಸ್ವಲ್ಪ ಸಮಾಧಾನಗೊಂಡಿರುವ ಅವರು ಬಾಂಗ್ಲಾ ನಾಡಿನಲ್ಲಿ ವಿನಯಚಂದ್ರನನ್ನು ಹುಡುಕಲು ಭಾರತ ಸರ್ಕಾರಕ್ಕೆ ಹೇಳಿ ಕ್ರಮ ಕೈಗೊಂಡಿದ್ದಾರೆ. ಬಾಂಗ್ಲಾ ನಾಡಿನಲ್ಲಿ ಟಿವಿ ಜಾಹಿರಾತು ನೀಡಲಾಗಿದೆ. ಅಲ್ಲಿನ ಸರ್ಕಾರಕ್ಕೂ ತಿಳಿಸಲಾಗಿದೆ.. ಆದರೆ ಇದುವರೆಗೂ ವಿನಯಚಂದ್ರ ಎಲ್ಲಿದ್ದಾನೆ ಎನ್ನುವುದು ಪತ್ತೆಯಾಗಿಲ್ಲವಂತೆ..' ಎಂದರು.
          `ಅಲ್ಲಾ.. ಅಂವ ಸಿಕ್ಕಿದ್ನಿಲ್ಲೆ ಹೇಳ್ತಾ ಇದ್ದಿರಿ ನೀವು.. ಮುಂದೆಂತದು ಕಥೆ.? ಮಗ ಕೈಬಿಟ್ಟು ಹೋಗ್ತ್ನಿಲ್ಲೆ ಅಲ್ದಾ? ಅಲ್ಲಾ ಆ ಬಾಂಗ್ಲಾದೇಶದಲ್ಲಿ ಬೇರೆ ಹಿಂಸಾಚಾರ ಸಿಕ್ಕಾಪಟ್ಟೆ ಆಗೋಜಡಾ. ಏನಾದರೂ ಭಾನಗಡಿ ಆದರೆ ಎಂತಾ ಮಾಡವು ಹೇಳಿ' ಎಂದು ಆತಂಕದಿಂದ ಕೇಳಿದ್ದರು ಶಿವರಾಮ ಹೆಗಡೆಯವರು.
          `ಹಂಗೇನೂ ಆಗೋದಿಲ್ಲ ಬಿಡಿ ಹೆಗಡೇರೆ. ಏನೂ ಆಗಿರಲಿಕ್ಕಿಲ್ಲ. ನಿಮ್ಮ ಮಗನ ಬಗ್ಗೆ ನಿಮಗೆ ನಂಬಿಕೆಯಿಲ್ಲವಾ? ನನಗಂತೂ ಆತನ ನಂಬಿಕೆಯಿದೆ. ಆತ ಏನು ಮಾಡುವುದಿದ್ದರೂ ಒಳ್ಳೆಯದಕ್ಕಾಗಿ ಅನ್ನೋದು ನಿಮಗೆ ಗೊತ್ತಿಲ್ಲವಾ? ಈಗಲೂ ಆತ ಏನೋ ಒಳ್ಳೆಯ ಕಾರಣಕ್ಕೇ ಬಾಂಗ್ಲಾದಲ್ಲಿ ಉಳಿದುಕೊಂಡಿದ್ದಾನೆ. ಅಲ್ಲಿದ್ದಾಗಲೇ ಹಿಂಸಾಚಾರ ತೀವ್ರವಾಗಿದೆ. ವಾಪಾಸು ಬರಲು ಏನೋ ಸಮಸ್ಯೆಯಾಗಿದೆ. ತೊಂದರೆ ಪಡಬೇಡಿ. ಆತನೇ ಹೇಗಾದರೂ ಮಾಡಿ ವಾಪಾಸು ಬರುತ್ತಾನೆ. ನಮ್ಮ ಸರ್ಕಾರವೂ ಪ್ರಯತ್ನ ಮಾಡುತ್ತಿದೆ.. ಅವನಿಗೆ ಏನೂ ಆಗಿರುವುದಿಲ್ಲ' ಎಂದರು ಚಿದಂಬರ.
          ಈಗ ಸ್ವಲ್ಪ ಸಮಾಧಾನ ಪಟ್ಟುಕೊಂಡ ಶಿವರಾಮ ಹೆಗಡೆಯವರು `ಹಂಗಂಬ್ರಾ.. ಹಂಗಾದ್ರೆ ಸರಿ. ಆನು ತಲೆಬಿಸಿ ಮಾಡ್ಕ್ಯತ್ನಿಲ್ಲೆ.. ಆದ್ರೂ ನೀವು ಒಂಚೂರು ಏನಾದ್ರೂ ಮಾಡಲೆ ಆಗ್ತಾ ನೋಡಿ..ನಿಮ್ಮನ್ನು ಬಿಟ್ಟರೆ ಮತ್ತೆ ಯಾರತ್ರ ಹೇಳಕಳವು ಹೇಳಿ ಗೊತ್ತಾಜಿಲ್ಲೆ ನೋಡಿ. ಯಮ್ಮನೆದು ನಾಲ್ಕೈದು ದಿನ ಆತು ಮಗನ ಬಗ್ಗೆ ವಿಚಾರ ಮಾಡಿ ವಿಚಾರ ಮಾಡಿ ಹೇಳಿ. ಬರೀ ಕೊಟಗುಡಿತಾ ಇದ್ದು. ಅದ್ಕಾಗಿ ಓಡಿ ಬಂದಿ ನೋಡಿ' ಎಂದರು. `ಖಂಡಿತ' ಎಂದ ಚಿದಂಬರ್ ಹೆಗಡೇರಿಂದ ಬೀಳ್ಕೊಟ್ಟರು. ಹೆಗಡೇರು ಅಡಿಕೆಯ ವಕಾರಿಗೆ ಬರುವಷ್ಟರಲ್ಲಿ ಪರಿಚಯಸ್ಥರೊಬ್ಬರು ಸಿಕ್ಕಿದವರೇ `ಹ್ವಾಯ್.. ಶಿವರಾಮಣ್ಣ.. ನಿಮ್ ಮಗ ಅದೆಂತದ್ದೋ ವಿಶ್ವಕಪ್ ಗೆದ್ನಡಾ.. ಅದ್ಯಾವುದೋ ದೇಶಕ್ಕೆ ಹೋಗಿದ್ನಲಿ.. ಬಂದ್ನನ್ರೋ..?' ಎಂದು ಕೇಳಿಬಿಟ್ಟರು.
         `ಕಬ್ಬಡ್ಡಿ ವಿಶ್ವಕಪ್ಪು ಅದು. ವಿಶ್ವಕಪ್ ಗೆದ್ದಿದ್ದು. ಬಾಂಗ್ಲಾ ದೇಶಕ್ಕೆ ಹೋಜಾ.. ಅಲ್ಲೆಂತದ್ದೋ ಸಮಸ್ಯೆ ಆಜು.. ಸಧ್ಯದಲ್ಲೇ ಬರ್ತಾ..ಒಂದೆರಡು ಮೂರ್ ದಿನಾ ಆಗಲಕ್ಕು ಬಪ್ಪಲೆ' ಎಂದರು ಹೆಗಡೆಯವರು.
           `ಬಾಂಗ್ಲಾ ದೇಶಕ್ಕನ್ರಾ.. ಅಲ್ಲಿಗೆ ಎಂತಕ್ಕೆ ಹೋಜಾ ಹೇಳಿ.. ಅಲ್ಲಿ ಸಿಕ್ಕಾಪಟ್ಟೆ ಗಲಾಟೆನಡಾ.. ಹಿಂಸಾಚಾರ ಭುಗಿಲೆಜ್ಜಡಾ.. ಹಿಂದೂಗಳನ್ನಂತೂ ಕಂಡಕಂಡಲ್ಲಿ ಕೊಂದು ಹಾಕ್ತಾ ಇದ್ವಡಾ.. ಥೋ ಮಾರಾಯ್ರಾ.. ಎಂತಾ ನಮನಿ ಮಾಡ್ಕಂಡು ಬಿಟ್ನರಾ ಅಂವಾ..ಮಗ ಪೋನ್ ಗೀನ್ ಮಾಡಿದಿದ್ನಾ?' ಎಂದುಬಿಟ್ಟರು ಅವರು.
                ಚಿದಂಬರ ಅವರನ್ನು ಭೇಟಿ ಮಾಡಿ ಮಾತನಾಡಿದ ನಂತರ ಹೆಗಡೆಯವರ ಮನಸ್ಸಿನಲ್ಲಿ ತಣ್ಣಗಾಗಿದ್ದ ದುಗುಡ ಮತ್ತೆ ಹೆಚ್ಚಾಯಿತು. ತಕ್ಷಣವೇ ಅವರು ವಕಾರಿಯಲ್ಲಿ ಅಗತ್ಯದ ಕೆಲಸವನ್ನು ಬಿಟ್ಟು ಅದೇ ನಗರಕ್ಕೆ ಆ ದಿನವಷ್ಟೇ ಆಗಮಿಸಿದ್ದ ಸ್ಥಳೀಯ ಶಾಸಕರು ಹಾಗೂ ಸಂಸದರನ್ನು ಭೇಟಿ ಮಾಡಲು ಹೊರಟರು.
            ಶಾಸಕರ ಭೇಟಿಯಾಗಿ ಅವರು ವಿನಯಚಂದ್ರನನ್ನು ಹುಡುಕುವ ಭರವಸೆಯನ್ನು ನೀಡಿದ್ದು ಆಯಿತು. ಸಂಸದರನ್ನು ಭೇಟಿ ಮಾಡಲು ತೆರಳಿದ ಹೆಗಡೆಯವರಿಗೆ ಒಂದು ತಾಸಿನ ಕಾಯುವಿಕೆಯ ನಂತರ ಸಂಸದರ ದರ್ಶನವಾಯಿತು. ಶಿವರಾಮ ಹೆಗಡೆಯವರು ತಮ್ಮ ಮಗನ ಪ್ರವರವನ್ನು ಹೇಳಿದ ತಕ್ಷಣ ಸಂಸದರು `ಓಹೋ.. ಅಂವ ನಿಮ್ಮ ಮಗನಾ? ಕಪ್ಪು ಗೆದ್ದ ವಿಷಯ ತಿಳಿದಿದ್ದೆ. ನಮ್ಮ ಕ್ಷೇತ್ರದವನೇ ಅಂತ ಗೊತ್ತಿತ್ತು. ಕೊನೆಗೆ ಕಾಣೆಯಾಗಿರುವ ಬಗ್ಗೆ ಮಾಹಿತಿಯೂ ಬಂದಿತ್ತು. ನೀವೇನೂ ತಲೆಬಿಸಿ ಮಾಡ್ಕೋಬೇಡ್ರಿ ಹೆಗಡೇರೆ. ನಾವು ನಿಮ್ಮ ಮಗನನ್ನು ಹುಡುಕುತ್ತೇವೆ. ನಮ್ಮ ಸರ್ಕಾರ ಅದರ ಬಗ್ಗೆ ಈಗಾಗಲೇ ಕ್ರಮ ಕೈಗೊಳ್ಳುತ್ತಲೂ ಇದೆ. ಬಾಂಗ್ಲಾ ನಾಡಿನಲ್ಲಿ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ.. ನೀವು ಆರಾಮಾಗಿರಿ. ನಿಮ್ ಜೊತಿಗೆ ನಾವ್ ಇದೆವೆ' ಎಂದರು. ಸಮಾಧಾನ ಪಟ್ಟುಕೊಂಡ ಶಿವರಾಮ ಹೆಗಡೆರು ಮನೆಯತ್ತ ಮುಖ ಮಾಡಿದರು.
          ಮನೆಗೆ ಬರುವ ವೇಳೆಗೆ ಇವರ ದಾರಿಯನ್ನೇ ಕಾಯುತ್ತಿದ್ದರೋ ಎಂಬಂತೆ ಸುಶೀಲಮ್ಮ ಎದುರು ಬಂದರು. ಯಜಮಾನರಿಗೆ ಮಜ್ಜಿಗೆಯನ್ನು ಕುಡಿಯಲು ಕೊಟ್ಟವರೇ `ಎಂತಾ ಆತಡಾ..? ವಿನಯಚಂದ್ರ ಯಾವಾಗ ಬತ್ನಡಾ?' ಎಂದು ಕೇಳಿದರು.  ಶಿವರಾಮ ಹೆಗಡೆಯವರು ತಕ್ಷಣ ರೇಗಿದವರೇ `ಮಗ ಬತ್ನೇ... ಅವಂಗೆ ಎಂತದ್ದೂ ಆಗ್ತಿಲ್ಲೆ.. ತಲೆ ತಿನ್ನಡಾ ಮಾರಾಯ್ತಿ.. ಅರಾಮ್ ಇದ್ನಡಾ. ಎಲ್ಲರೂ ಅವನ ಹುಡುಕಾಟದಲ್ಲೇ ಇದ್ವಡಾ ಮಾರಾಯ್ತಿ' ಎಂದವರೇ ಎದ್ದು ತೋಟದ ಕಡೆಗೆ ಸಾಗಿದರು. ಮಗ ಬರುತ್ತಾನೋ ಇಲ್ಲವೋ ಎನ್ನುವುದು ಸ್ಪಷ್ಟವಾಗದ ಕಾರಣ ಗೊಂದಲದಲ್ಲಿಯೇ ಮನೆಯೊಳಗೆ ತೆರಳಿದರು ಸುಶೀಲಮ್ಮ.

***

          ವಿನಯಚಂದ್ರ ರಾತ್ರಿ ಯಾರಿಗೂ ಹೇಳದಂತೆ ಹೊಟೆಲನ್ನು ಬಿಟ್ಟು ಹೋಗಿದ್ದಾನೆ ಎನ್ನುವುದನ್ನು ತಿಳಿದವರೇ ಜಾಧವ್ ಅವರು ಎಲ್ಲರ ಮೇಲೂ ಬೈದಾಡಿಬಿಟ್ಟಿದ್ದರು. ಎದುರಿಗೆ ಸಿಕ್ಕವರ ಮೇಲೆಲ್ಲ ರೇಗಾಡಿದ್ದ ಜಾಧವ್ ಅವರು ವಿನಯಚಂದ್ರನ ಪರಮಾಪ್ತನಾಗಿದ್ದ ಸೂರ್ಯನ್ ಗೆ ಏಟು ಹಾಕುವುದೊಂದು ಬಾಕಿ. ತಕ್ಷಣವೇ ಸುತ್ತಮುತ್ತಲೆಲ್ಲ ಹುಡುಕಾಡಲು ಯತ್ನಿಸಿದ್ದರಾದರೂ ವಿನಯಚಂದ್ರನ ಪತ್ರವನ್ನು ಓದಿದ ನಂತರ ಕೊಂಚ ತಣ್ಣಗಾಗಿದ್ದರು. ಮನಸ್ಸಿನಲ್ಲಿ ಸಿಟ್ಟು ಸಾಕಷ್ಟಿತ್ತು. ಆದರೆ ಅನಿವಾರ್ಯವಾಗಿದ್ದ ಕಾರಣ ಭಾರತ ತಂಡವನ್ನು ಕರೆದುಕೊಂಡು ವಾಪಾಸಾಗಿದ್ದರು. ಭಾರತಕ್ಕೆ ಬಂದಾಗಿನಿಂದಲೂ ಅವರು ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಯಿತು. ವಿನಯಚಂದ್ರ ಕಾಣೆಯಾಗಿರುವುದು ತಂಡದ ಹಿರಿಯರಿಗೆ, ಅಮೆಚೂರ್ ಕಬ್ಬಡ್ಡಿ ಅಧಿಕಾರಿಗಳಿಗೆ ತಿಳಿದಿತ್ತು. ಅವರೂ ಜಾಧವ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ವಿನಯಚಂದ್ರ ಕಾಣೆಯಾಗಿರುವುದು ಜಾಧವ್ ಅವರ ಹೊಣೆಗೇಡಿತನ ಎಂದು ಗೂಬೆ ಕೂರಿಸುವ ಯತ್ನವನ್ನೂ ಮಾಡಿದ್ದರು. ಕೆಲವರು ಜಾಧವ್ ಕಾಲೆಳೆಯಲು ಶುರುಮಾಡಿದ್ದರು. ಅವನ್ನೆಲ್ಲ ಸಹಿಸಿಕೊಂಡಿದ್ದ ಜಾಧವ್ ಸದ್ದಿಲ್ಲದೇ ವಿನಯಚಂದ್ರನ್ನನು ಹುಡುಕಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದರು.
          ಭಾರತದ ಸರ್ಕಾರದ ರಾಜಕಾರಣಿಗಳನ್ನು ಭೇಟಿಯಾಗಿ ವಿನಯಚಂದ್ರನನ್ನು ಹುಡುಕಿಸುವ ಪ್ರಯತ್ನ ಕೈಗೊಂಡಿದ್ದರು. ಭಾರತದ ಪ್ರಧಾನಮಂತ್ರಿ ಸಚಿವಾಲಯವೂ ತಕ್ಷಣವೇ ಸ್ಪಂದಿಸಿ ಬಾಂಗ್ಲಾ ದೇಶದಾದ್ಯಂತ ವಿನಯಚಂದ್ರನನ್ನು ಹುಡುಕುವ ಪ್ರಯತ್ನ ಕೈಗೊಂಡಿತ್ತು. ಆದರೆ ಬಾಂಗ್ಲಾದೇಶದಲ್ಲಿ ಹಿಂಸಾಚಾರ ತೀವ್ರವಾಗಿರುವ ಕಾರಣ ವಿನಯಚಂದ್ರ ಪತ್ತೆಯಾಗಿರಲಿಲ್ಲ. ವಿನಯಚಂದ್ರನ ಸುದ್ದಿ ಇರದ ಕಾರಣ ಆತ ಬದುಕಿದ್ದಾನೋ ಇಲ್ಲವೋ ಎನ್ನುವ ಅನುಮಾನ ಕೂಡ ವ್ಯಕ್ತವಾಗುತ್ತಿತ್ತು. ಆದರೆ ಜಾಧವ್ ಅವರು ಮಾತ್ರ ವಿನಯಚಂದ್ರ ಬದುಕಿದ್ದಾರೆ. ಎಲ್ಲೋ ಇದ್ದಾನೆ. ಭಾರತಕ್ಕೆ ಬರುತ್ತಾನೆ ಎನ್ನುವ ನಂಬಿಕೆಯಲ್ಲಿದ್ದರು. ಆದರೆ ಆತನ ಬಗ್ಗೆ ಮಾಹಿತಿ ಸಿಗದಿದ್ದ ಕಾರಣ ಮನಸ್ಸಿನಲ್ಲಿ ಕಳವಳವನ್ನು ಹೊಂದಿದ್ದರು.
         ಕಬ್ಬಡ್ಡಿ ಪಂದ್ಯಾವಳಿಯಲ್ಲಿ ದೋಸ್ತನಾಗಿದ್ದ ಸೂರ್ಯನ್ ಪಾಡು ಜಾಧವ್ ಅವರಿಗಿಂತ ಹೊರತಾಗಿರಲಿಲ್ಲ. ಭಾರತಕ್ಕೆ ಬಂದವನೇ ತನ್ನ ತಮಿಳುನಾಡು ರಾಜ್ಯದಲ್ಲಿ ತನ್ನ ಸಂಬಂಧಿಕರೊಬ್ಬರು ರಾಜಕಾರಣಿಯಾಗಿರುವ ಕಾರಣ ಅವರ ಮೂಲಕ ವಿನಯಚಂದ್ರನನ್ನು ಹುಡುಕುವ ಪ್ರಯತ್ನ ನಡೆಸಿದ್ದ, ವಿನಯಚಂದ್ರನ ಜೊತೆಗೆ ಮಧುಮಿತಾಳೂ ಇದ್ದಾಳೆ ಎನ್ನುವುದು ಆತನಿಗೆ ಗೊತ್ತಿತ್ತಾದ್ದರಿಂದ ಅವಳ ಕುಟುಂಬವನ್ನಾದರೂ ಸಂಪರ್ಕಿಸುವ ಪ್ರಯತ್ನ ನಡೆಸಿದ್ದ. ಕೊನೆಗೊಮ್ಮೆ ಹಿಂಸಾಚಾರಕ್ಕೆ ಮಧುಮಿತಾಳ ತಂದೆ ತಾಯಿಗಳು, ಬಂದುಬಳಗ ಸಾವನ್ನಪ್ಪಿದೆ ಎಂಬುದು ತಿಳಿದಾಗ ಮಾತ್ರ ತೀವ್ರ ದುಃಖಕ್ಕೀಡಾಗಿದ್ದ. ಮಧುಮಿತಾ ಹಾಗೂ ವಿನಯಚಂದ್ರ ಏನಾದರೂ ಎನ್ನುವುದು ಸೂರ್ಯನ್ ಗೆ ತಿಳಿಯದೇ ಕಳವಳ ಹೊಂದಿದ್ದ. ಕೊನೆಗೊಮ್ಮೆ ವಿನಯಚಂದ್ರ ಪೋನ್ ಮಾಡಿದ್ದಾಗ ಮಾತ್ರ ಕೊಂಚ ನಿರಾಳನಾಗಿದ್ದ. ಆತ ಬದುಕಿದ್ದಾನಲ್ಲ ಎಂಬ ಸಮಾಧಾನವಿತ್ತು. ಆದರೆ ಭಾರತಕ್ಕೆ ಅವರನ್ನು ಕರೆತರುವುದು ಹೇಗೆ ಎನ್ನುವ ಚಿಂತೆ ಮನದಲ್ಲಿ ಮನೆಮಾಡಿತ್ತು.

(ಮುಂದುವರಿಯುತ್ತದೆ..)

ಬಾನ ಬಾಂದಳದಲ್ಲಿ

ಬಾನ ಬಾಂದಳದಲ್ಲಿ ಚುಕ್ಕಿಗಳ ನಗುವಿಲ್ಲ
ಅಕ್ಕರದ ಬದುಕಿನಲಿ ತಿಳಿಬೆಳಕೇ ಇಲ್ಲ |

ಬುಡ ಬಯಲಿನ ಕೊನೆ ತುಂಬ
ಕರಿ ಮೋಡವೇ ಉಂಟು
ಹುಡುಕಿ ಹುಡುಕಿದರೇನು
ಬೆಳಕೇ ಇಲ್ಲ. ಜೊತೆಗೆ ಬದುಕೇ ಇಲ್ಲ |

ಬಾಳ ಬದುಕಿನ ತುಂಬ
ಕನಸಿಲ್ಲ-ನನಸಿಲ್ಲ
ಹಾಲು ಹಾದಿಯ ತುಂಬ
ಅಳುವೆ ಎಲ್ಲ, ಜೊತೆಗೆ ನಗುವೆ ಇಲ್ಲ |

ಎಷ್ಟು ಹುಡುಕಿದರೇನು
ನೋವೊಂದೆ ಜೊತೆಗುಂಟು
ನಗುವ ನೀಡಲು ಚುಕ್ಕಿ ಹಿಂಡೇ ಇಲ್ಲ
ಚುಕ್ಕಿಯಿಲ್ಲ ಜೊತೆಗೆ ಶಶಿಯೂ ಇಲ್ಲ ||

***
(ಈ ಕವಿತೆಯನ್ನು ಬರೆದಿರುವುದು 09-05-2007ರಂದು ದಂಟಕಲ್)

Sunday, October 19, 2014

ಮಂಕಾಳಕ್ಕನ ಕವಿತೆ-2

ಮಂಕಾಳಕ್ಕ ಮುದಿ ಮುದಿ ಜೀವ
ಬದುಕಿನ ಮೇಲೆ ಆಸೆ
ಮನೆ ತುಂಬ ಆಳು ಕಾಳು
ಆಗೋದಿಲ್ಲ ಹಿರಿಸೊಸೆ |

ಕಿರಿಮಗ ಅಂದ್ರೆ ಮಂಕಾಳಕ್ಕಂಗೆ
ಬಹಳ ಪ್ರಾಣ ಪ್ರಾಣ
ಉಳಿದ ಮಕ್ಕಳು ಹೆಂಗೇ ಇದ್ದರೂ
ಹೆಗ್ಗಣ ಮಗನೇ ಜಾಣ |

ಮಂಕಾಳಕ್ಕನ ಕನ್ನಡಕದ ದಾರ
ಕಪ್ಪಗಿರಲೇ ಬೇಕು
ಹೊಟ್ಟಿಗಿಲ್ಲ, ಬಟ್ಟೆಗಿಲ್ಲ ಬಂಗಾರ
ಒಪ್ಪಗಿರಲೇ ಬೇಕು |

ಮಂಕಾಳಕ್ಕನ ಅವತಾರ ಕಂಡು
ಗಂಡ ತಂಡಾಗಿದ್ದ
ಮಂಕಾಳಕ್ಕನ ಬಾಯಿಗೆ ಹೆದರಿ
ಮಾತು ಮರ್ತೋಗಿದ್ದ |

ಪಂಕ್ತಿಬೇಧ ಅವಳಿಗಿಷ್ಟ
ಎಲ್ಲರ ಮೇಲೆ ದರ್ಬಾರು
ಮನೆ ತುಂಬ ಓಡಾಡ್ತಾ
ನಡೆಸ್ತಾ ಇತ್ತು ಕಾರ್ಬಾರು |

ಮಂಕಾಳಕ್ಕನ ಕಸಲೆಯಂತೂ
ತಡೆಯಲೆ ಸಾಧ್ಯವೇ ಇಲ್ಲೆ
ಅವಳ ಅವತಾರ ಜೋರಿತ್ತು
ತಡೆಯಲೆ ಆಗ್ತಿತ್ತಿಲ್ಲೆ. |

ಮಂಕಾಳಕ್ಕ ಸತ್ತಿದ್ಮೇಲೆ
ಊರ ತುಂಬ ಸಡಗರ
ಕರಿ ಮೋಡ ಕದಗೋದಾಂಗೆ
ಖುಷಿಯಾಗಿತ್ತು ಅಬ್ಬರ |

**
(ಮಂಕಾಳಕ್ಕ ಎಂಬ ನಾನು ಕಂಡ ಅಪರೂಪದ ವ್ಯಕ್ತಿಯ, ವ್ಯಕ್ತಿಯ ಗುಣಗಾನ, ವ್ಯಕ್ತಿ ಚಿತ್ರಣ.. ನಾಕಂಡಂತೆ ಅವಳಿದ್ದ ಪರಿ ಈ ಕವಿತೆ.. ಮೊದಲೊಂದು ಭಾಗ ಬರೆದಿದ್ದೆ.. ಬಾಕಿ ಉಳಿದ ಭಾಗ ಇಲ್ಲಿದೆ.)
(ಈ ಕವಿತೆ ಬರೆದಿದ್ದು 19-10-2014ರಂದು ಶಿರಸಿಯಲ್ಲಿ)

Friday, October 17, 2014

ಸುಖ

(ಚಿತ್ರ ಕೃಪೆ : ಅವಧಿ ಮ್ಯಾಗಝಿನ್)
ನೋಡಿದ
ಅವ
ಎದೆ ಝಲ್ಲೆಂದಿತು |

ಕಾಡಿದ
ಅವ
ಮನಸು ತಲ್ಲಣಿಸಿತು |

ಮುಟ್ಟಿದ
ಅವ
ಹೃದಯ ಹೂವಾಯಿತು |

ತಟ್ಟಿದ
ಅವ
ಕನಸು ನೂರಾಯಿತು |

ಮುತ್ತಿದ
ಅವ
ಅಂಕೆ ತಪ್ಪಿತು |

ತಬ್ಬಿದ
ಅವ
ಮನ ಹಬ್ಬಿತು |

ಆಡಿದ
ಅವ
ದೇಹ ನಲಿಯಿತು |

ಓಡಿದ
ಅವ
ನೆನಪು ನರಳಿತು |

ಮರೆಯಾದ
ಅವ
ದುಃಖ ಹೊಳೆಯಾಯಿತು |

ಅಡಗಿದ
ಅವ
ಕನಸು ಕಣ್ಣಲ್ಲಿ ಚೀರಿತು |

ಮರಳಿದ
ಅವ
ಮತ್ತೆ ಜೀವ ಬಂದಿತು ||


**
(ಈ ಕವಿತೆ ಬರೆದಿದ್ದು 17-10-2014ರಂದು ಶಿರಸಿಯಲ್ಲಿ)