Friday, October 10, 2014

ಇನ್ನೊಂದಿಷ್ಟು ಹನಿಗವಿತೆಗಳು

ಕೀರ್ತನದ ಪರಿಣಾಮ

ಅದೊಂದು ಕಾರ್ಯಕ್ರಮ ಕೀರ್ತನ
ಮಾಡುತ್ತಿದ್ದರು ಅಲ್ಲಿ ಗಾಯನ |
ನೋಡಿದರೆ ಕುಳಿತವರ ಮುಖ
ಹೋಗುವಂತಿತ್ತು ಪ್ರಾಣ ||

**

ಬೇಗ-ಭಾಗ

ದೇಶದಲ್ಲಿ ಹುಡುಕಿದರೀಗ
ಸಿಗುವುದು ತುಂಡುನೋಟಿನ ಭಾಗ |
ಜೊತೆಗೆ ಕಾಣುವುದು ನಕಲಿಯ
ತೆಲಗಿ, ರೋಶನ್ ಬೇಗ ||

(ಕರೀಂ ಲಾಲಾ ತೆಲಗಿಯ ನಕಲಿ ಛಾಪಾ ಕಾಗದದ ಹಗರಣದ ಸಂದರ್ದಭಲ್ಲಿ ಬರೆದಿದ್ದು)

**

ಮಚ್ಚು-ಹುಚ್ಚು

ಇತ್ತಿಚಿನ
ಕನ್ನಡದ ಚಲನಚಿತ್ರಗಳಲ್ಲಿ
ಹೆಚ್ಚುತ್ತಿದೆ ಲಾಂಗು-ಮಚ್ಚು |
ಹಾಗಾಗಿ ನೋಡಿದವನಿಗೆ
ಹಿಡಿಯುತ್ತಿದೆ ಹುಚ್ಚು ||

**

ಹುಚ್ಚು

ಭೂಮಿಯ ಮೇಲೆ
ಎಲ್ಲರಿಗೂ ಹಿಡಿದಿದೆ ಹುಚ್ಚು |
ಅದರಲ್ಲೂ, ಮೆಗಾ
ಸೀರಿಯಲ್ ನೋಡುವವರಿಗೆ
ತುಸು ಹೆಚ್ಚು ||

**

ಕಾಸು-ಲಾಸು

ಒಂದಾನೊಂದು ಕಾಲದಲ್ಲಿ
ಸಿಗುತ್ತಿತ್ತು ವೆನಿಲ್ಲಾ ಬೆಳೆದರೆ
ಕಾಸು |
ಈಗೇನಿದ್ದರೂ ಬರೀ ಲಾಸು ||

***

Thursday, October 9, 2014

ಬೆಂಗಾಲಿ ಸುಂದರಿ-30

(ಏಲೆಂಗಾದ ರೆಸಾರ್ಟ್)
             ಎಲ್ಲವೂ ಕೆಲವೇ ತಾಸುಗಳ ಅವಧಿಯಲ್ಲಿ ನಡೆದುಹೋಗಿದ್ದವು. ತಾಸುಗಳ ಹಿಂದಷ್ಟೇ ಜೊತೆಯಲ್ಲಿದ್ದ ಸಲೀಂ ಚಾಚಾ ಸಾವನ್ನಪ್ಪಿದ್ದ. ಅಷ್ಟೇ ಅಲ್ಲದೇ ಅಗ್ನಿಯಲ್ಲಿ ಲೀನವಾಗಿದ್ದ. ಮಧುಮಿತಾ ಹಾಗೂ ವಿನಯಚಂದ್ರರಿಗೆ ಇದು ಅರಗಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಮೌನವಾಗಿ ಮುಂದ ಮುಂದಕ್ಕೆ ನಡೆಯುತ್ತಲೇ ಇದ್ದರು. ಹೀಗೆ ನಡೆಯುತ್ತಿದ್ದಾಗಲೇ ಯಾವಾಗಲೂ ಕತ್ತಲಾವರಿಸಿತ್ತು. ಅದೂ ಕೂಡ ಅವರ ಗಮನಕ್ಕೆ ಬಂದಿರಲಿಲ್ಲ. ಸಲೀಂ ಚಾಚಾನ ಸಾವು ಇಬ್ಬರ ಮನದಲ್ಲಿ ತರಂಗಗಳನ್ನು ಎಬ್ಬಿಸಿದ್ದವು. ಯಾಕೋ ಅವರಿಗೆ ತಮ್ಮ ಜೀವನವೇ ಬೇಡ ಎನ್ನಿಸತೊಗಿತ್ತು. ಆದರೂ ಮುಂದಕ್ಕೆ ಸಾಗುತ್ತಲೇ ಇದ್ದರು.
             ಅಲ್ಲಿದೆ ನಮ್ಮನೆ... ಎಂಬಂತೆ ನಡೆಯುತ್ತಿದ್ದವರಿಗೆ ನಿಧಾನವಾಗಿ ತಾಂಗೈಲ್ ನಗರಿ ಹಿಂದಕ್ಕೆ ಸಾಗಿತು. ತಾಸು ತಾಸುಗಳ ಕಾಲ ನಡೆದರೂ ಸಲೀಂ ಚಾಚಾ ನೆನಪಿನಲ್ಲಿ ಆದ್ದರಿಂದ ಹಸಿವಾಗಲಿಲ್ಲ. ನೀರಡಿಕೆ ಕೂಡ ಆಗಲಿಲ್ಲ. ಹೆದ್ದಾರಿಯಲ್ಲಿ ವಾಹನಗಳೂ ಇರಲಿಲ್ಲ. ಕತ್ತಲೆ ಗವ್ವೆನ್ನುತ್ತಿತ್ತು. ಕತ್ತಲೆಯಲ್ಲಿ ಇವರಿಬ್ಬರೇ ನಡೆದುಕೊಂಡು ಹೋಗುತ್ತಿದ್ದರು. ಸಲೀಂ ಚಾಚಾನ ಶಕ್ತಿ ಇವರಿಬ್ಬರಲ್ಲಿ ಆಹ್ವಾನಗೊಂಡಿದೆಯೋ ಎಂಬಂತೆ ನಡೆಯುತ್ತಲೇ ಇದ್ದರು. ಹಗಲಿನಲ್ಲಿ ಕಾದಿದ್ದ ಟಾರು ರಸ್ತೆಯಿಂದ ಧಗೆ ಹೊರ ಸೂಸುತ್ತಿದ್ದುದು ಇಬ್ಬರ ಮೈಗೂ ಅನುಭವಕ್ಕೆ ಬರುತ್ತಿತ್ತು. ಅಕ್ಕಪಕ್ಕದ ಗದ್ದೆ ಬಯಲಿನ ತಂಗಾಳಿ ಇವರ ಮನಸ್ಸನ್ನು, ಮೈಯನ್ನು ತಂಪುಮಾಡಲು ಯತ್ನಿಸಿತಾದರೂ ವಿಫಲವಾಯಿತು ಎನ್ನಬಹುದು.
              ಕೆಲ ಹೊತ್ತಿನ ನಂತರ ತಾಂಗೈಲ್ ನಿಂದ ಹಾದು ಬಂದ ಮುಖ್ಯ ರಸ್ತೆಯೊಂದು ಸಿಕ್ಕಿತು. ಅದನ್ನು ಹಾದು ಮುಂದಕ್ಕೆ ಸಾಗಿದರು. ಹಿಂತಿರುಗಿ ನೀಡಿದರೆ ಬಾನಿನ ತುಂಬ ತಾಂಗೈಲ್ ನಗರದ ಬೆಳಕು ಪ್ರತಿಫಲನವಾಗುತ್ತಿತ್ತು. ಮಧುಮಿತಾ ಕಣ್ಣೊರೆಸಿಕೊಂಡಳು. ವಿನಯಚಂದ್ರ ಮೌನಿಯಾಗಿದ್ದವನು ಇದ್ದಕ್ಕಿದ್ದಂತೆ `ಮಧು..' ಎಂದ. ಆಕೆ ಹೂಂ ಅಂದಳು.
             `ಸಲೀಂ ಚಾಚಾನನ್ನು ಸೊಕಾಸುಮ್ಮನೆ ಅನುಮಾನಿಸಿಬಿಟ್ಟೆ. ಛೇ.. ನಮಗಾಗಿ, ನಮ್ಮ ಪ್ರೀತಿಗಾಗಿ, ನಾವು ಭಾರತವನ್ನು ತಲುಪಬೇಕು ಎನ್ನುವ ಕಾರಣಕ್ಕಾಗಿ ಆತ ಏನೆಲ್ಲ ಮಾಡಿದ. ಆದರೆ ನಾನು ಅವೆಲ್ಲವನ್ನೂ ಅನುಮಾನದಿಂದಲೇ ನೋಡಿದೆ. ನಮಗಾಗಿ ಮಾಡುತ್ತಿದ್ದ ಕಾರ್ಯದಲ್ಲೆಲ್ಲ ನಾನು ಆತನ ಸ್ವಾರ್ಥವಿದೆಯೇನೋ ಎಂದುಕೊಂಡೆ. ನನ್ನನ್ನು ಧರ್ಮಾಂತರ ಮಾಡುತ್ತಾನಾ ಎಂದೆಲ್ಲ ಅಂದುಕೊಂಡೆ. ಛೇ.. ನನಗೀಗ ನಾಚಿಕೆಯಾಗುತ್ತಿದೆ.. ಎಂತಹ ಮನುಷ್ಯನನ್ನು ಕಳೆದುಕೊಂಡುಬಿಟ್ಟೆವಲ್ಲ..' ಎಂದ. ಮಧುಮಿತಾ ಮಾತಾಡಲಿಲ್ಲ.
            `ಆತ ನಮಗಾಗಿ ಎಂತೆಂತಹ ಕಾರ್ಯವನ್ನು ಮಾಡಿದ್ದ. ತನ್ನ ಮನೆ-ಮಠವನ್ನು ಬಿಟ್ಟು ಬಂದಿದ್ದ. ನಮ್ಮನ್ನು ಭಾರತಕ್ಕೆ ತಲುಪಿಸುವುದೇ ಆತನ ಪರಮಗುರಿ ಎನ್ನುವಂತೆ ಕೆಲಸ ಮಾಡಿದ್ದ. ಆತನಿಗೆ ಯಾಕಾದರೂ ನಮ್ಮ ಮೇಲೆ ಇಷ್ಟೆಲ್ಲ ಪ್ರೀತಿಯೋ. ನಮಗಾಗಿಯೇ ಎಲ್ಲವನ್ನೂ ಮಾಡಿದ. ಕೊನೆಗೆ ಪ್ರಾಣವನ್ನೂ ತ್ಯಾಗ ಮಾಡಿದನಲ್ಲ. ನಾವ್ಯಾರು ಅಂತ ಆತ ಹೀಗೆ ಮಾಡಿದ? ಮನಸ್ಸು ತಲ್ಲಣಿಸಿದೆ ಮಧು. ಏನು ಹೇಳಬೇಕು ಎನ್ನುವುದೇ ಗೊತ್ತಾಗುತ್ತಿಲ್ಲ...' ಎಂದ ವಿನಯಚಂದ್ರ. ಮಧುಮಿತಾ ಸುಮ್ಮನೇ ಇದ್ದಳು.
           `ಮಾತಾಡು ಮಧು.. ನನಗೆ ಈ ಮೌನ, ಚಾಚಾನ ಸಾವು ಯಾಕೋ ಭಯವನ್ನು ತರುತ್ತಿದೆ. ಮನಸ್ಸಿನಲ್ಲಿ ಹೇಳಿಕೊಳ್ಳಲಾಗದ ಯಾತನೆ..' ಎಂದ ವಿನಯಚಂದ್ರ.
            `ಏನು ಮಾತಾಡಲಿ ವಿನೂ.. ಸಲೀಂ ಚಾಚಾ ಸತ್ತಿದ್ದನ್ನೇ ಮತ್ತೆ ಮತ್ತೆ ಹೇಳಿ ಮತ್ತಷ್ಟು ದುಃಖವನ್ನು ಉಂಟುಮಾಡುವುದಾ? ಛೇ.. ಆತ ಸಾಯಬಾರದಿತ್ತು ಅಂದುಕೊಳ್ಳುವುದಾ? ಏನು ಹೇಳಬೇಕು ಅಂತ ಅರ್ಥವೇ ಆಗುತ್ತಿಲ್ಲ. ಸಲೀಂ ಚಾಚಾನನ್ನು ಕಳೆದುಕೊಂಡು ನೀನು ಇಷ್ಟು ದುಃಖಿಸುತ್ತಿದ್ದೀಯಾ.. ಆದರೆ ನಾನು ಕಳೆದ 15 ದಿನಗಳ ಅಂತರದಲ್ಲಿ ಅಪ್ಪ-ಅಮ್ಮ-ಬಂಧು-ಬಳಗ ಕಳೆದುಕೊಂಡೆ. ಕೊನೆಗೆ ಆಪ್ತವಾಗಿದ್ದ ಸಲೀಂ ಚಾಚಾನನ್ನೂ ಕಳೆದುಕೊಂಡೆ. ನಾನು ಏನುಮಾಡಬೇಕು ಅಂತಲೇ ತಿಳಿಯುತ್ತಿಲ್ಲ ವಿನೂ.. ನನಗೆ ಆಪ್ತರಾದವರೆಲ್ಲ ಸಾಯುತ್ತಾರಾ ಅನ್ನುವ ಭಯ ಮೂಡತೊಡಗಿದೆ. ನೀನು ಆಪ್ತವಾಗಿದ್ದೀಯಾ.. ನಿನಗೂ ಏನಾದರೂ ಆಗುತ್ತದೆಯಾ ಎನ್ನುವ ಬಾವನೆ ನನ್ನ ಮನಸ್ಸಿನಲ್ಲಿ ಕಾಡುತ್ತಿದೆ. ಎಲ್ಲರೂ ದೂರಾಗಿದ್ದಾರೆ. ನೀನು ದೂರಾಗುವುದಿಲ್ಲ ತಾನೆ..' ಎಂದವಳೇ ಮಧುಮಿತಾ ನಡೆಯುತ್ತಿದ್ದವಳು ವಿನಯಚಂದ್ರನ ಸನಿಹಕ್ಕೆ ಬಂದು ಕೈ ಹಿಡಿದುಕೊಂಡಳು. ಬಾಂಗ್ಲಾದ ಬಾನಿನಲ್ಲಿ ಯಾವಾಗಲೋ ಮೂಡಿದ್ದ ಕರಿ ಮೋಡ ಇನ್ನೊಂದು ಮೋಡಕ್ಕೆ ಢಿಕ್ಕಿ ಹೊಡೆದು ದೊಡ್ಡದೊಂದು ಮಿಂಚಿನೊಂದಿಗೆ ದಢಾರ್ ಎಂಬ ಶಬ್ದವನ್ನು ಮಾಡಿತು. ಮಳೆ ಬರುತ್ತದೆಯಾ ಎಂದುಕೊಂಡರು. ದೂರದಲ್ಲೆಲ್ಲೋ ಮಳೆ ಬಂದಿದೆ ಎನ್ನುವುದಕ್ಕೆ ಸಾಕ್ಷಿಯಾಗಿ ಆಗೀಗ ಸುಳಿದು ಬರುತ್ತಿದ್ದ ಗಾಳಿ ಮಣ್ಣಿನ ವಾಸನೆಯನ್ನು ಹೊತ್ತು ತರುತ್ತಿತ್ತು.
           ಗಕ್ಕನೆ ನಿಂತ ವಿನಯಚಂದ್ರ ತನ್ನ ಕೈಯಿಂದ ಅವಳನ್ನು ಭದ್ರವಾಗಿ ಹಿಡಿದು `ಏನೂ ಆಗುವುದಿಲ್ಲ ಬಿಡು ಮಧು. ಏನೇ ಆದರೂ ನಾನು ನಿನ್ನನ್ನು ಬಿಟ್ಟು ಹೋಗುವುದಿಲ್ಲ. ಕೈಬಿಡುವುದಿಲ್ಲ. ನಿನ್ನ ಜೊತೆಗೆ ಬದುಕುತ್ತೇನೆ. ನಿನಗಾಗಿಯೇ ಬದುಕುತ್ತೇನೆ. ಯಾರೇ ಎದುರಾದರೂ ಹೋರಾಡುತ್ತೇನೆ. ನೀನು ಭಯ ಪಡಬೇಡ ಮಧು. ಸಮಾಧಾನ ಮಾಡಿಕೋ. ದೂರವಾದವರನ್ನು ಕಷ್ಟಪಟ್ಟಾದರೂ ಮರೆಯಲೇಬೇಕು. ಇವತ್ತಿದ್ದವರು ನಾಳೆ ಇರುತ್ತಾರೆ ಅಂತ ಹೇಳಿಲಿಕ್ಕೆ ಬರುವುದೇ ಇಲ್ಲ. ಈಗಿದ್ದವರು ಇನ್ನರೆಘಳಿಗೆಯಲ್ಲಿ ಇರ್ತಾರೆ ಅಂತನ್ನೋಕೂ ಆಗೋದಿಲ್ಲ. ಚಾಚಾನೇ ಇದಕ್ಕೆ ನಿದರ್ಶನ. ನಾವು ಜಗ್ಗದೇ ಕುಗ್ಗದೇ ಸಾಗೋಣ.. ಸಲೀಂ ಚಾಚಾ ಭಾರತವನ್ನು ಸುರಳೀತವಾಗಿ ತಲುಪುವಂತೆ ತಿಳಿಸಿದ್ದಾನೆ. ನಾವು ಮಾತುಕೊಟ್ಟಿದ್ದೇವೆ. ಆತನ ಕೊನೆಯ ಆಸೆಯೂ ಅದೇ. ಅದನ್ನು ಪೂರೈಸೋಣ. ಗುರಿ ತಲುಪುವ ವರೆಗೆ ಸಾಗೋಣ.. ಗೆಲ್ಲೋಣ..' ಎಂದ. ಮಧುಮಿತಾಳಲ್ಲಿ ಹೊಸಭರವಸೆಯ ಕಿರಣ ಮೂಡಿದಂತಾಯಿತು.
          ಮತ್ತೆ ನಡೆಯಲು ಆರಂಭಿಸಿದರು. ಒಂದೆರಡು ತಾಸು ನಡೆದ ನಂತರ ನಿಧಾನವಾಗಿ ಆಯಾಸವಾಗತೊಡಗಿತು. ಹೊಟ್ಟೆಯಲ್ಲಿನ ಹಸಿವು ಗಮನಕ್ಕೆ ಬಂದಿತು. ಸಂಜೆ ಏನೂ ತಿಂದಿಲ್ಲ ಎನ್ನುವುದು ಅರಿವಾಯಿತು. ಅಲ್ಲೇ ರಸ್ತೆಯ ಪಕ್ಕಕ್ಕೆ ಸಾಗಿ ಗದ್ದೆಯ ಬದುವಿನ ಮೇಲೆ ಕುಳಿತರು ಇಬ್ಬರೂ. ಚೀಲದಲ್ಲಿದ್ದ ರೊಟ್ಟಿಯನ್ನೂ ತಿಂದು ನೀರು ಕುಡಿದರು. ಹೊಟ್ಟೆಗೆ ತಿಂಡಿ ಬಿದ್ದ ಮೇಲೆ ಚಳಿಯ ಅರಿವಾಯಿತು. ದೇಹಕ್ಕೆ ಸುಸ್ತಾಗಿತ್ತು. ಮನಸಿಗೆ ನೋವಾಗಿತ್ತು. ಆ ರಾತ್ರಿ ಅಲ್ಲಿಯೇ ಮಲಗಿ ವಿಶ್ರಾಂತಿ ಪಡೆಯಲು ಇಬ್ಬರೂ ನಿರ್ಧಾರ ಮಾಡಿದರು. ವಿನಯಚಂದ್ರ ಬೆಳೆದಿದ್ದ ಗದ್ದೆಯಲ್ಲೇ ಉತ್ತಮ ಜಾಗವೊಂದನ್ನು ಹುಡುಕಿದ. ಅಲ್ಲಿ ತಾವು ತಂದಿದ್ದ ಚೀಲವನ್ನೇ ತಲೆದಿಂಬಿನಂತೆ ಹಾಕಿ ಮಧುಮಿತಾಳಿಗೆ ಮಲಗಲು ಜಾಗ ಮಾಡಿಕೊಟ್ಟ. ಪಕ್ಕದಲ್ಲೇ ತಾನೂ ಮಲಗಿದ.
          ಮಲಗಿದವರಿಗೆ ನಿದ್ದೆ ಹತ್ತಿರ ಸುಳಿಯಲಿಲ್ಲ. ಮೋಡಕಟ್ಟಿದ ಆಕಾಶ ಯಾವಾಗಲೋ ತಿಳಿಯಾಗಿತ್ತು. ಆಕಾಶದಲ್ಲಿ ನಕ್ಷತ್ರಗಳು ಮಿನುಗುತ್ತಿದ್ದವು. ಕೆಲವು ಹಸಿರು ಬಣ್ಣವನ್ನು ಮಿಣುಕು ಮಿಣುಕಿಸುತ್ತಿದ್ದರೆ ಮತ್ತೆ ಕೆಲವು ಕೆಂಪು ಬಣ್ಣವನ್ನು ಸೂಸುತ್ತಿದ್ದವು. ಸಲೀಂ ಚಾಚಾನ ಸಾವನ್ನು ಮರೆಸಲು ಯತ್ನಿಸಿದ ವಿನಯಚಂದ್ರ ನಕ್ಷತ್ರವನ್ನು ನೋಡುತ್ತ ಮಧುಮಿತಾಳ ಬಳಿ `ನೋಡು ಅದು ಸೀರಿಯಸ್ ನಕ್ಷತ್ರ. ಎಷ್ಟು ಹಸಿರಾಗಿ ಹೊಳೆಯುತ್ತಿದೆ ಅಲ್ಲವಾ?.. ಅಗೋ ಅಲ್ಲಿ ನೋಡು.. ಆ 8 ನಕ್ಷತ್ರಗಳನ್ನೇ ಗಮನವಿಟ್ಟು ನೋಡು. ಚಿಟ್ಟೆಯ ಆಕಾರ ಹೊಂದಿದೆ. ಎಷ್ಟು ಚನ್ನಾಗಿ ಕಾಣುತ್ತದೆ ಅಲ್ಲವಾ..' ಎಂದ. ಆಕೆಯೂ ಹೂಂ ಅಂದಳು. ಅಂಗಾತವಾಗಿ ಮಲಗಿ ನಕ್ಷತ್ರ ನೋಡುವುದರಲ್ಲಿ ಎಂತಾ ಖುಷಿಯಿದೆ ಎನ್ನಿಸಿತು. ಬಾಲ್ಯದಲ್ಲಿ ಹೀಗೆ ಮಾಡುತ್ತಿದ್ದೆವಲ್ಲವಾ ಎಂದೂ ವಿನಯಚಂದ್ರನ ಮನಸ್ಸಿನಲ್ಲಿ ಅನ್ನಿಸಿತು. ಯಾವ ಕ್ಷಣದಲ್ಲಿ ನಿದ್ರೆಯೆಂಬ ಮಾಯಾಂಗನೆ ಆವರಿಸಿದ್ದಳೋ ಇಬ್ಬರಿಗೂ ಅರಿವಾಗಿರಲಿಲ್ಲ.

**
 
(ಏಲೆಂಗಾದ ಬಸ್ ನಿಲ್ದಾಣ)
      ಕಣ್ಣು ಬಿಟ್ಟೊಡನೆ ಆಗಲೇ ಸೂರ್ಯ ಬಾನಿನಲ್ಲಿ ಏರಿ ಬಂದಿದ್ದ. ವಿನಯಚಂದ್ರ ಬೇಗನೆ ಎದ್ದು ಗದ್ದೆಯ ಬಳಿ ನೀರಿದೆಯಾ ಎಂದು ಹುಡುಕಿ ಹೋಗಿದ್ದ. ಮಧುಮಿತಾ ಮಲಗಿದ್ದವಳು ಧಡಕ್ಕನೆ ಎದ್ದಳು. ಒಮ್ಮೆ ಹಿತವಾಗಿ ಮೈಮುರಿದವಳಿಗೆ ಮೈಮೇಲೆ ಜರ್ಕಿನ್ ಇರುವುದು ಗೊತ್ತಾಯಿತು. ರಾತ್ರಿ ಯಾವುದೋ ಜಾವದಲ್ಲಿ ಚಳಿಯಾಗಿದ್ದಾಗ ವಿನಯಚಂದ್ರ ತನ್ನ ಜರ್ಕಿನ್ ತೆಗೆದು ಹೊದೆಸಿರಬೇಕು ಎಂದುಕೊಂಡಳು. ಅದೇ ಕ್ಷಣದಲ್ಲಿ ಈತನಿಗೆ ತಾನೆಂದರೆ ಎಷ್ಟು ಅಕ್ಕರೆಯಲ್ಲವಾ ಎನ್ನಿಸಿತು. ಮನಸ್ಸಿನಲ್ಲಿ ವಿನಯಚಂದ್ರನ ಕಡೆಗೆ ಸಂತಸ, ಸಂಭ್ರಮ ಎರಡೂ ಮೂಡಿತು. ತಾನು ಈತನನ್ನು ಪ್ರೀತಿಸಿ, ತನ್ನ ಊರು, ನೆಲ, ದೇಶವನ್ನೇ ಬಿಟ್ಟು ಹೋಗುತ್ತಿರುವುದಕ್ಕೆ ಹೆಮ್ಮೆಯೂ ಆಯಿತು.
          ಕೆಲ ಕ್ಷಣದಲ್ಲಿ ವಿನಯಚಂದ್ರ ಮರಳಿ ಬಂದಿದ್ದ. ಖಾಲಿಯಾಗಿದ್ದ ನೀರಿನ ಬಾಟಲಿ ತುಂಬ ನೀರನ್ನು ತಂದಿದ್ದ. ಬ್ರಹ್ಮಪುತ್ರಾ ನದಿಯನ್ನು ಸೇರುವ ಯಾವುದೋ ಉಪನದಿಯ ನೀರು ಬಹಳ ಹಿತವಾಗಿತ್ತು. ಮನದಣಿಯೆ ಇಬ್ಬರೂ ಕುಡಿದು, ಪ್ರಾತರ್ವಿಧಿಗಳನ್ನು ಮುಗಿಸಿ, ತಂದಿದ್ದ ತಿಂಡಿಯನ್ನು ತಿಂದು ಮತ್ತೆ ಹೆಜ್ಜೆ ಹಾಕಲು ಅನುವಾದರು. ತಾವು ತಂದಿದ್ದ ತಿಂಡಿ ಇನ್ನೆರಡು ದಿನಕ್ಕೆ ಸಾಕು ಎನ್ನುವುದನ್ನು ವಿನಯಚಂದ್ರ ಗಮನಿಸಿದ್ದ. ಮುಂದೆ ಯಾವುದಾದರೂ ಪಟ್ಟಣ ಸಿಕ್ಕಾಗ ಅಲ್ಲಿ ತಿಂಡಿಗೆ ವ್ಯವಸ್ಥೆಯನ್ನು ಮಾಡಿಕೊಂಡು ಪ್ರಯಾಣ ಮಾಡಬೇಕು ಎಂದುಕೊಂಡ. ಮುಂಜಾವಿನ ತಿಳಿಬಿಸಿಲಿನ ಜೊತೆಯಲ್ಲಿ ಮತ್ತೆ ಪ್ರಯಾಣ ಶುರುವಾಯಿತು.
            ಮೂರ್ನಾಲ್ಕು ತಾಸು ಬಿಡುವಿಲ್ಲದೇ ನಡೆದರು. ಈ ಅವಧಿಯಲ್ಲಿ ಒಂದೇ ಒಂದು ವಾಹನ ಅವರಿಗೆ ಸಿಗಲಿಲ್ಲ. ರಸ್ತೆಯ ಇಕ್ಕೆಲಗಳಲ್ಲಿ ಗದ್ದೆಯ ಬಯಲಿನಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಿದ್ದರು. ಅವರನ್ನು ನೋಡಿದ ವಿನಯಚಂದ್ರ `ಅಬ್ಬಾ.. ಅಂತೂ ಇಲ್ಲಿ ಜನರಿದ್ದಾರಲ್ಲ ಥ್ಯಾಂಕ್ ಗಾಡ್..' ಅಂದುಕೊಂಡ. ಬಿಸಿಲೇರುವವರೆಗೆ 15 ಕಿ.ಮಿ ಪ್ರಯಾಣ ಮಾಡಿದ್ದರು. ನಡೆದು ರೂಢಿ ತಪ್ಪಿದ್ದವರು ಮತ್ತೊಮ್ಮೆ ಕಾಲ್ನಡಿಗೆ ಮಾಡಲು ಆರಂಭಿಸಿದ್ದರಿಂದ ಕಾಲು ವಿಪರೀತ ನೋಯಲಾರಂಭಿಸಿತ್ತು. ಇಬ್ಬರಿಗೂ ಇನ್ನು ನಡೆಯಲಾರೆ ಎನ್ನಿಸತೊಡಗಿತ್ತು. ಆದರೂ ಹೆಜ್ಜೆಹಾಕುತ್ತಲೇ ಇದ್ದರು. ಅಲ್ಲೊಂದು ಕಡೆಗೆ ಬಸ್ ತಂಗುದಾಣ ಸಿಕ್ಕಿತು. ಅಲ್ಲಿ ಕೊಂಚ ಹೊತ್ತು ಕುಳಿತರು.
            ಕುಳಿತಿದ್ದವರಿಗೆ ಇದ್ದಕ್ಕಿದ್ದಂತೆ ಯಾವುದೋ ವಾಹನ ಬರುತ್ತಿರುವ ಸದ್ದು ಕೇಳಿಸಿತು. ಇಬ್ಬರ ಮನಸ್ಸಿನಲ್ಲೂ ಗೊಂದಲ. ಯಾವ ವಾಹನ ಬಂದಿರಬಹುದು? ನಿನ್ನೆ ನಡೆದಂತೆ ಪುಂಡರು, ಹಿಂಸಾಚಾರಿಗಳು ವಾಹನದಲ್ಲಿ ಬಂದರೆ ಏನು ಮಾಡುವುದು? ಅವರದಲ್ಲದಿದ್ದರೆ ಏನು ಮಾಡುವುದು ಎಂದುಕೊಂಡರು. ಇಬ್ಬರೂ ಒಂದುಕ್ಷಣ ಓಡಿ ತಪ್ಪಿಸಕೊಳ್ಳಬೇಕಾ ಅಥವಾ ವಾಹನ ನಿಲ್ಲಿಸಿ ಅವರಲ್ಲಿ ಮುಂದಿನ ಊರಿಗೆ ಕರೆದುಕೊಂಡು ಹೋಗುವಂತೆ ಕೇಳಬೇಕಾ ಎಂಬುದು ಸ್ಪಷ್ಟವಾಗಲಿಲ್ಲ. ಮಧುಮಿತಾಳನ್ನು ಮರೆಯಲ್ಲಿ ನಿಲ್ಲುವಂತೆ ಹೇಳಿದ ವಿನಯಚಂದ್ರ ರಸ್ತೆ ಪಕ್ಕದಲ್ಲಿ ವಾಹನಕ್ಕಾಗಿ ಕಾಯುತ್ತ ನಿಂತ. ವಾಹನ ಹತ್ತಿರ ಬಂದಾಗ ಅದೊಂದು ಕಾರು ಎನ್ನುವುದು ಸ್ಪಷ್ಟವಾಯಿತು.
           ಏನಾದರಾಗಲಿ ಎಂದುಕೊಂಡು ಕಾರಿಗೆ ಕೈಮಾಡಿಯೇ ಬಿಟ್ಟ ವಿನಯಚಂದ್ರ. ಇವರ ಅದೃಷ್ಟಕ್ಕೆ ಕಾರಿನವನು ನಿಲ್ಲಿಸಯೇಬಿಟ್ಟ. ನಿಲ್ಲಿಸಿದವನು `ಏನು..' ಎಂಬಂತೆ ಸನ್ನೆ ಮಾಡಿದ. ಹರಕುಮುರುಕು ಹಿಂದಿಯಲ್ಲಿ `ಏಲೆಂಗಾಕ್ಕೆ ಲಿಫ್ಟ್ ಬೇಕಿತ್ತು..' ಅಂದ. ಕಾರಿನವನು ಒಪ್ಪಿದ. ತಕ್ಷಣವೇ ಮಧುಮಿತಾಳನ್ನೂ ಕರೆದು ಕಾರಿನಲ್ಲಿ ಕೂರಿಸಿ ತಾನೂ ಕುಳಿತುಕೊಂಡ. ಕಾರು ಮುಂದಕ್ಕೆ ಸಾಗಿತು.
          ಸಾಗಿದಂತೆಲ್ಲ ಮಾತಿಗೆ ನಿಂತ ಕಾರಿನವನು `ಎಲ್ಲಿಗೆ, ಯಾಕೆ ಹೋಗುತ್ತಿದ್ದೀರಿ..' ಎಂದೆಲ್ಲ ವಿಚಾರಿಸಿದ. ಅದಕ್ಕೆ ಪ್ರತಿಯಾಗಿ ವಿನಯಚಂದ್ರ ತಾವು ಹೊಸದಾಗಿ ಮದುವೆಯಾಗಿರುವವರೆಂದೂ ಏಲೆಂಗಾದಿಂದ ಮುಂದಕ್ಕೆ ಜಮುನಾ ನದಿಯನ್ನು ದಾಟಿಸಿ ಅವಳನ್ನು ನದಿಯಾಚೆಗಿನ ಪ್ರದೇಶವನ್ನು ತೋರಿಸುವ ಸಲುವಾಗಿ ಹೊರಟಿದ್ದೆಂದೂ ತಿಳಿಸಿದ. ಅದನ್ನು ಒಪ್ಪಿದಂತೆ ಕಂಡ ಕಾರಿನ ಚಾಲಕ ತಾನು ಏಲೆಂಗಾದಿಂದ ಮುಂದೆ ಶೋಲಾಕುರಾಕ್ಕೆ ಹೊರಟಿದ್ದೇನೆ. ನಿಮ್ಮನ್ನು ಏಲೆಂಗಾದಲ್ಲಿ ಬಿಡುತ್ತೇನೆ. ಅಲ್ಲಿ ಯಾವುದಾದರೂ ವಾಹನ ಸಿಗಬಲ್ಲದು ಎಂದ. ಜೊತೆಯಲ್ಲಿಯೇ ಈಗ ಬಾಂಗ್ಲಾದೇಶದ ಪರಿಸ್ಥಿತಿ ಸರಿಯಿಲ್ಲ ಎನ್ನುವುದು ಮತ್ತೆ ಹೇಳಬೇಕಿಲ್ಲವಲ್ಲ. ನಿನ್ನೆ ತಾನೇ ತಾಂಗೈಲ್ ನಗರಿಯಲ್ಲಿ 25ಕ್ಕೂ ಅಧಿಕ ಕೊಲೆಗಳು ಸಂಭವಿಸಿದೆ. ಹುಷಾರಾಗಿ ಹೋಗಿ ಎಂದು ಹೇಳುವುದನ್ನೂ ಮರೆಯಲಿಲ್ಲ. ಅರ್ಧಗಂಟೆಯವ ಅವಧಿಯಲ್ಲಿ ಏಲೆಂಗಾಕ್ಕೆ ಅವರು ತಲುಪಿದರು. ಏಲೆಂಗಾ ಬಸ್ ನಿಲ್ದಾಣದ ಬಳಿ ಇವರನ್ನು ಬಿಟ್ಟು ಕಾರಿನವನು ಮುಂದಕ್ಕೆ ಸಾಗಿದ. ವಿನಯಚಂದ್ರ ಕಾರಿನವನಿಗೆ ಹಣ ನೀಡಲು ಹೋದ. ಆದರೆ ಹಣ ಪಡೆಯದೇ ಇರುವುದು ವಿನಯಚಂದ್ರನ ಮನಸ್ಸಿನಲ್ಲಿ ಅಚ್ಚರಿಯನ್ನು ಮೂಡಿಸಿತು. ಬಸ್ ನಿಲ್ದಾಣದಲ್ಲಿ ಬಸ್ಸು ಬರುತ್ತದೆಯಾ ಎಂದು ಇವರಿಬ್ಬರೂ ಕಾಯುತ್ತ ಕುಳಿತರು. ಏಲೆಂಗಾ ಪಟ್ಟಣವೂ ನಿರ್ಮಾನುಷವಾಗಿತ್ತು. ಯಾವುದೇ ವಾಹನಗಳ ಸುಳಿವಿರಲಿಲ್ಲ. ಮಧುಮಿತಾ ಅಲ್ಲೇ ಒಂದು ಕಡೆ ಯಾರೋ ಒಬ್ಬರ ಬಳಿ ಮಾತಿಗೆ ನಿಂತಳು.
         ನಂತರ ವಿನಯಚಂದ್ರನ ಬಳಿ ಬಂದ ಮಧುಮಿತಾ `ಹಿಂಸಾಚಾರದ ಕಾರಣ ಬಸ್ ಸಂಚಾರವನ್ನು ನಿಲ್ಲಿಸಲಾಗಿದೆಯಂತೆ. ಯಾವುದಾದರೂ ಖಾಸಗಿ ವಾಹನಗಳಿದ್ದರೆ ಅದರಲ್ಲಿ ಪ್ರಯಾಣ ಮಾಡುವುದು ಒಳ್ಳೆಯದು ಎಂದು ತಿಳಿಸಿದರು..' ಎಂದಳು. ವಿನಯಚಂದ್ರ ಖಾಸಗಿ ವಾಹನ ಹುಡುಕಲು ತೊಡಗಿದ. ಯಾವುದೇ ವಾಹನಗಳೂ ಕಾಣಿಸಲಿಲ್ಲ. ಬಸ್ ನಿಲ್ದಾಣದಿಂದ ಹೊರಕ್ಕೆ ಬಂದರು. ಹೆದ್ದಾರಿಗುಂಟ ಸಾಗುವುದೇ ಸಮಂಜಸ ಎಂದೆನ್ನಿಸಿ ಮುಂದಕ್ಕೆ ಹೊರಟರು. ಸೂರ್ಯ ನಿಧಾನವಾಗಿ ಪಶ್ಚಿಮದ ಕಡೆಗೆ ಮುಖಮಾಡಿದ್ದ. ಹೆದ್ದಾರಿಗುಂಟ ಮತ್ತೆ ನಡೆಯಲು ಆರಂಭಿಸಿದ ಇವರಿಗೆ ಯಾವುದೇ ವಾಹನಗಳು ಸಿಗುವ ಲಕ್ಷಣಗಳು ಕಾಣಲಿಲ್ಲ.

(ಮುಂದುವರಿಯುತ್ತದೆ)

ಕನಸಿನ ಕನ್ಯೆ ನಿನ್ನ ನೋಡಿ.. (ಪ್ರೇಮಪತ್ರ-14)

(ಚಿತ್ರ : ವಿನಾಯಕ ಹೆಗಡೆ)
ಓಹ್ ಗೆಳತಿ..

        ನಿಜವಾ ಇದು. ನನ್ನೆದುರು ನಿಂತಿದ್ದು ನೀನೇ ಹೌದಾ ಎಂದು ಮತ್ತೆ ಮತ್ತೆ ಪರೀಕ್ಷೆ ಮಾಡಿಕೊಂಡು ಪತ್ರಿಸುತ್ತಿದ್ದೇನೆ ಗೆಳತಿ. ಕನಸಲ್ಲ. ಸತ್ಯ ಎನ್ನುವುದು ರುಜುವಾತಾದಾಗ ನನಗಾದ ರೋಮಾಂಚನ ಬಣ್ಣಿಸಲು ಪದಗಳು ಸಾಲುತ್ತಿಲ್ಲ.
         ಗೆಳತಿ, ನೀನು ನನ್ನ ಪರಿಚಯವಾಗಿದ್ದು ಹೇಳಿಯೇಬಿಡುತ್ತೀನಿ. ಇಲ್ಲವಾದರೆ ಏನೋ ಬಾಕಿ ಉಳಿಸಿದ ಹಾಗೆ ಆಗುತ್ತದೆ ನೋಡು. ಆವತ್ತು ಇದ್ದಕ್ಕಿದ್ದಂತೆ ನನಗೆ ಮಿಸ್ ಕಾಲ್ ಬಂದಿತ್ತು. ನಾನು ಅದಕ್ಕೆ ತಿರುಗಿ ಪೋನ್ ಮಾಡಿದ್ದಾಗ `ಹಲೋ..' ಎಂದಿದ್ದು ನೀನೇ ಅಲ್ಲವಾ.. ಅದೆಂತಹ ಇಂಪಾದ ಮಾತು ನಿನ್ನದು. ನಾನು ಪೋನ್ ಮಾಡುತ್ತಿದ್ದವನು ಒಮ್ಮೆ ಸುಮ್ಮನಾಗಿಬಿಟ್ಟಿದ್ದೆ. ನೀನೆ ಮುಂದುವರಿದು `ಯಾರಿದು ಮಾತಾಡ್ರೀ..' ಎಂದಿದ್ದೆ. ಕೊನೆಗೆ ನಾನು ನಿನ್ನ ಬಳಿ `ಮೊಸ್ ಕಾಲು ಕೊಟ್ಟವರು ನೀವು. ನನ್ನ ಬಳಿ ಯಾರು ಅಂತ ಕೇಳಿದರೆ ಹೇಗೆ..?' ಎಂದಿದ್ದೆ. ನಿನಗೆ ಆಗ ಸಿಟ್ಟು ಬಂದಿತ್ತೋ, ಗೊಂದಲವಾಗಿತ್ತೋ ನನಗೆ ನೆನಪಿಲ್ಲ. ಕೊನೆಗೆ ನೀನು `ಹೇಯ್ ನೀವು ಅವರಲ್ಲವಾ...' ಎಂದಿದ್ದೆ. ನಾನು ಹೌದು ಎಂದಾಗ `ನಿಮ್ಮ ಬರವಣಿಗೆಗೆ ನಾನು ಬಹಳ ಫಿದಾ ಆಗಿಬಿಟ್ಟಿದ್ದೇನೆ. ನಿಮ್ ಕಥೆ ಚನ್ನಾಗಿದೆ ಕಣ್ರೀ ಎಂದಿದ್ದೆ..' ಅಲ್ಲವಾ. ಆಗಲೇ ನಿನ್ನ ಇಂಪಾದ ಮಾತಿಗೆ ನಾನು ಮರುಳಾಗಿದ್ದೆ. ಹೆಸರೇನು ಅಂತ ಕೇಳಿದಾಗ `ಪಾರಿಜಾತ..' ಅಂದಿದ್ದೆ. ನಾನು ಬೆರಗಿನಿಂದ `ಅಂತಹ ಹೆಸರು ಇಡ್ತಾರಾ..' ಎಂದು ಬೆಪ್ಪಾಗಿ ಕೇಳಿದ್ದೆ. ನೀನು ಪ್ರತಿಯಾಗಿ `ಯಾಕೆ ಇಡಬಾರದು..?' ಎಂದಿದ್ದೆ. ನಿನ್ನ ಹೆಸರು ನನಗೆ ಆಗಲೇ ಆಪ್ತವಾಗಿತ್ತು. ಇಷ್ಟವಾಗಿತ್ತು.
          ಆ ನಂತರ ನೀನು ಪದೇ ಪದೆ ಪೋನ್ ಮಾಡುವುದು, ಅದೂ ಇದೂ ಸುದ್ದಿ ಹೇಳುವುದು ನಡೆದೇ ಇತ್ತು. ನೀನು ಪೋನ್ ಮಾಡಿದಾಗಲೆಲ್ಲ ನಾನು ಖುಷಿಯಿಂದಲೇ ಉತ್ತರ ನಿಡುತ್ತಿದ್ದೆ. ಹರಟೆ ಹೊಡೆಯುತ್ತಿದ್ದೆ. ಕೊನೆ ಕೊನೆಗಂತೂ ನಿನ್ನ ಪೋನ್ ಯಾವಾಗ ಬರುತ್ತದೆಯೋ ಎಂದು ಕಾಯುತ್ತ ಕುಳಿತುಬಿಡುತ್ತಿದ್ದೆ. ಹೀಗೆ ನೀನು ನನ್ನನ್ನು ಆವರಿಸಿಕೊಂಡಿದ್ದು ಎಂದರೆ ತಪ್ಪಿಲ್ಲ ನೋಡು. ಆಮೇಲೆ ಆಮೇಲೆ ನೀನಿಲ್ಲದ ಜಗತ್ತೇ ಇಲ್ಲ ಅನ್ನಿಸತೊಡಗಿದ್ದು ಸುಳ್ಳಲ್ಲ.
ನೀನೆಂದರೆ ನನ್ನೊಳಗೆ ಏನೋ ಒಂದು ಸಂಚಲನ
ನಾ ಬರೆಯದ ಕವಿತೆಗಳ.. ನೀನೆ ಒಂದು ಸಂಕಲನ
             ಈ ಹಾಡು ನನ್ನ ಪಾಲಿಗೆ ಪರಮಾಪ್ತ. ಪದೇ ಪದೆ ನಾನು ಈ ಹಾಡನ್ನು ಗುನುಗುತ್ತ ಇರುತ್ತೇನೆ. ನಿನ್ನ ಜೊತೆಗೆ ಸಖ್ಯ ಬೆಳೆದ ನಂತರ ನಾನು ಈ ಈ ಹಾಡನ್ನು ಅದೆಷ್ಟು ಸಹಸ್ರ ಸಾರಿ ಹಾಡಿದ್ದೆನೋ ಲೆಕ್ಖವಿಲ್ಲ ಬಿಡು. ನಿನ್ನ ನೆನಪಾದಾಗಾಲೆಲ್ಲ ಈ ಹಾಡು ತನ್ನಿಂದ ತಾನೇ ನನ್ನ ಬಾಯಲ್ಲಿ ಗುನುಗುತ್ತದೆ. ಮನಸ್ಸು ತನ್ನಿಂದ ತಾನೇ ರೋಮಾಂಚನಗೊಳ್ಳುತ್ತದೆ.
             ಮೊನ್ನೆ ತಾನೆ ನೀನು ಹೇಳಿದ್ದೆ ಸಿಗಬೇಕು ಮಾರಾಯಾ.. ಅಂತ. ನಾನು ಮತ್ತಷ್ಟು ಖುಷಿಯಾಗಿದ್ದೆ ಆಗ. ನೀನು ಬಂದಿದ್ದು, ಮಾತಾಡಿಸಿದ್ದು, ನಿನ್ನ ಜೊತೆಗೆ ಕಾಫಿಡೇಯಲ್ಲಿ ಕಾಫಿ ಕುಡಿದಿದ್ದು ಎಲ್ಲವೂ ನನಗೆ ಕನಸಂತೆ ಇದೆ. ಎದುರಿಗೆ ಬಂದ ನೀನು ನನಗೆ ಒಮ್ಮೆ ಸ್ವರ್ಗದಿಂದಿಳಿದ ದೇವತೆಯಂತೆ ಕಂಡಿದ್ದೆ. ನೀನು ಎದುರು ಬಂದು ಮಾತನಾಡಿಸುತ್ತಿದ್ದಾಗಲಂತೂ ನನಗೆ ಅದು ಕನಸಾ, ನನಸಾ ಎನ್ನುವುದು ತಿಳಿಯಲಿಲ್ಲ. ಪೆಚ್ಚಾಗಿ ನಿಂತು ನೋಡುತ್ತಲೇ ಇದ್ದೆ. ನೀನು ಬಂದು ಒಂದೆರಡು ಸಾರಿ ಹಾಯ್ ಅಂದಾಗ ನನಗೆ ತಿಳಿದೇ ಇರಲಿಲ್ಲ. ಕೊನೆಗೊಮ್ಮೆ ವಾಸ್ತವಕ್ಕೆ ಬಂದಿದ್ದೆ. ನನ್ನ ಪಾಲಿನ ಕನಸಿನ ಕನ್ಯೆ ನೀನು. ನೀನು ಎದುರಿಗೆ ಬಂದಿದ್ದು ನನಗೆಷ್ಟು ಖುಷಿಕೊಟ್ಟಿತು ಗೊತ್ತಾ? ಅದೇ ಕಾರಣಕ್ಕೆ ಬಹು ದಿನಗಳ ನಂತರ ನಾನು ಮತ್ತೊಮ್ಮೆ ಬರವಣಿಗೆಗೆ ಕುಳಿತಿದ್ದು.
            ಈಗ ತಾನೇ ಮಳೆ ಬಂದಿ ನಿಂತಿದೆ. ಧೋ ಎಂದು ಮೂರ್ನಾಲ್ಕು ತಾಸು ಮಳೆ ಸುರಿದಿತ್ತು. ಗುಡುಗು, ಸಿಡಿಲು ಕೂಡ ಅಬ್ಬರಿಸಿತ್ತು.  ಅಪರೂಪಕ್ಕೆ ಕರೆಂಟ್ ಇರಲಿಲ್ಲ. ಮನಸ್ಸು ಕೂಡ ಮೌನವಾಗಿತ್ತು. ಮನಸೋಇಚ್ಛೆ ಸುರಿದ ಮಳೆ ನಿಂತ ಮೇಲೆ ನಿನ್ನ ನೆನಪು ಮತ್ತಷ್ಟು ಜೋರಾಗುತ್ತಿದೆ. ಮಳೆ ಸುರಿದ ನಂತರವೂ ಹನಿಗಳು ಪಟಪಟಿಸುತ್ತಿವೆ. ಈ ಕ್ಷಣ ನೀನು ನನ್ನ ಜೊತೆಗಿದ್ದಿದ್ದರೆ ಸುಮ್ಮನೆ ಒಂದು ವಾಕ್ ಮಾಡಬಹುದಿತ್ತು. ಕೈ ಕೈ ಹಿಡಿದು ಬಹುದೂರ ಸಾಗಬಹುದಿತ್ತು. ಖಾಲಿ ಪೀಲಿ ಕಥೆಗಳನ್ನೋ, ಸುಳ್ಳೆ ಪಿಳ್ಳೆ ಸುದ್ದಿಗಳನ್ನೂ ಖುಷಿಯಿಂದ ಹಂಚಿಕೊಳ್ಳಬಹುದಿತ್ತು ಅನ್ನಿಸುತ್ತಿದೆ.
            ನಿಜ ಹೇಳಿಬಿಡುತ್ತೇನೆ ಗೆಳತಿ.. ನೀನು ನನ್ನ ಬರಹಗಳ, ಕವಿತೆಗಳ ಅಭಿಮಾನಿಯೇ ಇರಬಹುದು. ಆದರೆ ನಾನು ಬರೆಯದೇ ಅನೇಕ ವಸಂತಗಳೇ ಕಳೆದಿದ್ದವು ನೋಡು. ನಿನ್ನ ಸಖ್ಯ ಬೆಳೆದ ನಂತರವೇ ನಾನು ಮತ್ತೊಮ್ಮೆ ಬರವಣಿಗೆಯತ್ತ ಮುಖಮಾಡಿದ್ದು. ಇವತ್ತಂತೂ ಬಹಳ ಕವಿತೆಗಳು ಮನದಲ್ಲಿ ಮೂಡುತ್ತಿವೆ. ಬೇಡ ಬೇಡ ಎಂದರೂ ಮನಸಿನೊಳಗಳ ಬಾವಗಳು ಅಕ್ಷರದ ರೂಪವನ್ನು ತಾಳಿ ಹೊರಬರುತ್ತಿವೆ.
             ಇದನ್ನು ನಾನು ಪ್ರೇಮವೆನ್ನಲಾ? ಅಥವಾ ಸ್ನೇಹಕ್ಕಿಂತ ಮಿಗಿಲಾದ ಇನ್ನೊಂದು ರೂಪವೆನ್ನಲಾ. ಗೊಂದಲದಲ್ಲಿದ್ದೇನೆ. ನೀನು ನನ್ನನ್ನು ಭೇಟಿ ಮಾಡಿ ಹೋದ ಅರ್ಧಗಂಟೆಯಲ್ಲೇ ಮತ್ತೆ ಪೋನ್ ಮಾಡಿ ಮಾತಾಡಿದೆಯಲ್ಲ. ನನ್ನ ಮನದ ಹಕ್ಕಿಗೆ ಮತ್ತೆ ರೆಕ್ಕೆ ಬಲಿತಂತಾಗಿದೆ. ಖುಷಿಯಿಂದ ಬಾನನ್ನು ಮುಟ್ಟುವ ಸಡಗರ ತುಂಬಿಕೊಂಡಿದೆ.
              ಕಾಲೇಜು ದಿನಗಳಲ್ಲಿ ನನ್ನಿಂದ ಅನೇಕ ಜನರು ಪ್ರೇಮಪತ್ರ ಬರೆಸಿಕೊಂಡು ಹೋಗಿದ್ದಾರೆ. ಹಲವರ ಪ್ರೇಮ ಸಕ್ಸಸ್ಸಾಗಿದೆ. ಮತ್ತೆ ಕೆಲವರು ನಾನು ಬರೆದುಕೊಟ್ಟ ಪ್ರೇಮಪತ್ರ ಕೊಟ್ಟು ಬೈಸಿಕೊಂಡವರೂ ಇದ್ದಾರೆ. ಒಂದಕ್ಷರ ನೆಟ್ಟಗೆ ಬರೆಯಲಿಕ್ಕೆ ಬರದವನು ಉದ್ದದ, ಚೆಂದದ ಪ್ರೇಮಪತ್ರ ಹೇಗೆ ಬರೆದುಕೊಟ್ಟ ಎಂದು ಅನುಮಾನ ಮೂಡಿ ವಿಚಾರಿಸಿದ್ದರು. ನಾನು ಬರೆದುಕೊಟ್ಟಿದ್ದು ಗೊತ್ತಾಗಿತ್ತು. ಪಾ..ಪ. ಅವರ ಪ್ರೇಮದ ಸೌಧ ಉದುರಿ ಬಿದ್ದಿತ್ತು. ಎಂತಾ ತಮಾಷೆ ಅಲ್ಲವಾ? ಇಷ್ಟಾದರೂ ಆ ದಿನಗಳಲ್ಲಿ ನಾನು ನನಗೆ ಅಂತ ಯಾರಿಗೂ ಪ್ರೇಮಪತ್ರ ಬರೆದೇ ಇರಲಿಲ್ಲ ನೋಡು. ಯಾರಿಗೂ ಬರೆಯಬೇಕು ಅನ್ನಿಸಲಿಲ್ಲ. ಇಷ್ಟವೂ ಆಗಿರಲಿಲ್ಲ. ಕಾಲೇಜು ಮುಗಿದ ನಂತರ ಇದೀಗ ನೀನು ಇಷ್ಟವಾಗಿದ್ದೀಯ. ನನಗಾಗಿ ಪತ್ರ ಬರೆಯುತ್ತಿದ್ದೇನೆ. ವಿಚಿತ್ರವೆನ್ನಿಸುತ್ತಿರುವುದು ಪ್ರೇಮಪತ್ರ ಬರೆಯುವ ಶೈಲಿ ಬದಲಾಗಿರುವ ಕಾರಣಕ್ಕೆ. ಆಗ ಬರೆಯುತ್ತಿದ್ದ ಶೈಲಿಗೂ ಈಗಿನದ್ದಕ್ಕೂ ಅಜಗಜಾಂತರ ವ್ಯತ್ಯಾಸವಾಗಿದೆ. ಅದ್ಯಾರದ್ದೋ ಪ್ರೇಮ ಕ್ಲಿಕ್ಕಾಗಲಿ ಎನ್ನುವ ಕಾರಣಕ್ಕೆ ನಾನು ಬರೆದುಕೊಡುತ್ತಿದ್ದ ಪತ್ರಗಳು ಬಹಳ ಚನ್ನಾಗಿ ಇರುತ್ತಿದ್ದವು. ಆದರೆ ನನಗಾಗಿ ಬರೆದುಕೊಳ್ಳುತ್ತಿರುವ ಈ ಪತ್ರ ಅದೆಷ್ಟು ಸಾರಿ ಬರೆದರೂ ಅಪೂರ್ಣ ಎನ್ನಿಸುತ್ತಿದೆ. ಅದೇನೋ ಕೊರತೆಯಾಗಿದೆ ಎಂದುಕೊಳ್ಳುತ್ತಿದ್ದೇನೆ. ಅದಕ್ಕಾಗಿಯೇ ಬರೆದು ಬರೆದು ನಾಲ್ಕಾರು ಸಾರಿ ಹರಿದು ಹಾಕಿದ್ದೇನೆ. ಈ ಪತ್ರವೂ ನನಗಷ್ಟು ತೃಪ್ತಿ ಕೊಟ್ಟಿಲ್ಲ. ಆದರೂ ನಿನಗೆ ಕಳಿಸುತ್ತಿದ್ದೇನೆ.
             ನೀನು ನನಗೆ ಬಹಳ ಇಷ್ಟವಾಗಿದ್ದೀಯಾ ಗೆಳತಿ. ನಿನ್ನ ನಡೆ, ನುಡಿಗಳು ಬಹಳ ಆಪ್ತವಾಗಿದೆ. ಮೇಲ್ನೋಟಕ್ಕೆ ಮನಸ್ಸು ನಿಷ್ಕಲ್ಮಷವೇನೋ ಅನ್ನಿಸುತ್ತಿದೆ. ನಿನ್ನ ನುಗುವಿದೆಯಲ್ಲ. ಅದಕ್ಕೆ ನಾನು ದಾಸನಾಗಿಬಿಟ್ಟಿದ್ದೇನೆ. ಕೆಲವರಿಗೆ ನಗು ಅದೆಷ್ಟು ಭೂಷಣ ಅಲ್ಲವಾ? ನಿನಗೆ ಅದು ಒಂದು ತೂಕ ಹೆಚ್ಚೇ ಎನ್ನಬಹುದೇನೋ. ನಾನು ನಿನ್ನನ್ನು ಇಷ್ಟಪಟ್ಟಿದ್ದೇನೆ. ನಿನ್ನ ಭಾವನೆಗಳನ್ನು ತಿಳಿಸು ಅಂತ ನೇರಾನೇರ ಹೇಳಿಬಿಡುತ್ತೇನೆ ಗೆಳತಿ. ಗೊಂದಲ ಬೇಡ ಎನ್ನುವ ಕಾರಣಕ್ಕೆ ಈ ನಿರ್ಧಾರ.
ನಿನ್ನ ಭಾವವ ನಾನು ತಿಳಿಯೆ
ಮನದ ತುಂಬ ನೀನೇ ಇರುವೆ...
ಎಂದು ಹಾಡುವಂತಾಗಿದೆ... ಗೆಳತಿ.. ಹೆಚ್ಚು ಕಾಯಿಸಬೇಡ. ನಿನ್ನೊಳಗೆ ನನ್ನೆಡೆಗೆರುವ ವಿಷಯ ಅರುಹಿಬಿಡು. ನಾನು ಪತ್ರ ಬರೆದೆ ಅಂತ ನೀನೂ ಬರೆಯಬೇಕಿಲ್ಲ ಗೆಳತಿ. ಆಧುನಿಕ ಜಗತ್ತಿನ ಮುಂದುವರಿದ ಯಾವುದಾದರೊಂದು ಮಾರ್ಗದ ಮೂಲಕ ಹೇಳಿದರೂ ಸಾಕು. ಪೋನ್ ಮಾಡು, ಮೆಸೇಜ್ ಮಾಡು.
          ಈ ಪತ್ರವನ್ನು ನೋಡಿ ನೀನು ಸಿಟ್ಟಾಗುವುದಿಲ್ಲ ಎನ್ನುವುದು ನನಗೆ ಗೊತ್ತು. ಆದರೆ ಇಂತವನ ಮನಸ್ಸಿನಲ್ಲಿ ಹೀಗೆಲ್ಲ ಭಾವನೆಗಳು ತುಂಬಿದೆಯಾ ಎಂದುಕೊಳ್ಳುತ್ತೀಯೇನೋ. ಆದರೆ ಇದ್ದಿದ್ದನ್ನು ನೇರವಾಗಿ ಹೇಳುವ ಸ್ವಭಾವ ನನ್ನದು. ನನ್ನ ಮನದೊಳಗಣ ವಿಷಯಗಳನ್ನು ನೇರಾನೇರ ನಿನ್ನ ಮುಂದೆ ಅರುಹಿದ್ದೇನೆ. ನಿಜಕ್ಕೂ ಈ ಸಾಲುಗಳನ್ನೆಲ್ಲ ಬರೆಯುವಾಗ ನಾಣು ಪಟ್ಟ ಪಾಡು ಅಷ್ಟಿಷ್ಟಲ್ಲ. ಹೀಗೆ ಬರೆಯಲಾ, ಹಾಗೆ ಬರೆಯಲಾ ಎಂದೆಲ್ಲ ಆಲೋಚಿಸಿದ್ದೆ. ಹೇಗ್ಹೇಗೋ ಬರೆಯಬೇಕು, ಬರೆಯಬಹುದು ಎಂದುಕೊಂಡಿದ್ದೆ. ಆದರೆ ಬರೆಯಲು ಕುಳಿತಾಗ ಮಾತ್ರ ಅವೆಲ್ಲ ಮರೆತೇ ಹೋಗಿದ್ದವು ನೋಡು. ಏನೇನೋ ಅಂದುಕೊಂಡಿದ್ದ ನಾನು ಮತ್ತಿನ್ನೇನನ್ನೋ ಬರೆದುಬಿಟ್ಟಿದ್ದೇನೆ. ಆದರೆ ಬೇಸರಿಸಬೇಡ ಗೆಳತಿ. ಪೂರ್ತಿ ಓದುತ್ತೀಯಾ ಎನ್ನುವ ನಂಬಿಕೆ ನನ್ನಲ್ಲಿದೆ.
          ಮೊಬೈಲು, ಮೆಸೇಜು. ಇಂಟರ್ನೆಟ್ಟು, ಫೇಸ್ಬುಕ್ಕು, ವಾಟ್ಸಾಪುಗಳ ಕಾಲದಲ್ಲಿ ಇವನೆಂತ ಪತ್ರ ಬರೆಯುತ್ತಿದ್ದಾನೆ ಎಂದುಕೊಳ್ಳಬೇಡ. ನಿನಗೆ ಅಕ್ಷರಗಳು ಇಷ್ಟ ಎನ್ನುವುದು ನನಗೆ ಗೊತ್ತಿದೆ. ಮುಂದುವರಿದ ಆ ಎಲ್ಲ ತಂತ್ರಜ್ಞಾನಗಳಲ್ಲಿ ಭಾವನೆಗಳನ್ನು ಬಿತ್ತರಿಸುವುದು ಕಷ್ಟ. ಬರಹಕ್ಕೆ, ಪತ್ರಕ್ಕೆ ಮಾತ್ರ ಅಂತಹ ತಾಕತ್ತಿದೆ. ಬೇಸರಿಸಬೇಡ ಗೆಳತಿ.
          ನಿನಗೆ ನಾನು ಇಷ್ಟವಾದರೆ ನನ್ನಂತಹ ಸಂತಸದ ಬಾನಾಡಿ ಇನ್ನೊಬ್ಬನಿಲ್ಲ ಎಂದುಕೊಳ್ಳುತ್ತೇನೆ. ನೀನು ನನ್ನನ್ನು ತಿರಸ್ಕರಿಸಿದರೂ ಬೇಜಾರೇನೂ ಆಗುವುದಿಲ್ಲ. ನನ್ನಂತವನನ್ನು ಪ್ರೀತಿಸುವ ಅರ್ಹತೆ ನಿನಗಿಲ್ಲ. ನನ್ನನ್ನು ನೀನು ಕಳೆದುಕೊಂಡೆ ಎಂದುಕೊಳ್ಳುತ್ತೇನೆ. ಬೇಗ ಉತ್ತರಿಸು ಗೆಳತಿ. ನಿನ್ ಉತ್ತರ ಧನಾತ್ಮಕವಾಗಿರಲಿ ಎನ್ನುವ ಆಶಯ ನನ್ನದು.

ಇಂತಿ
ಜೀವನ್

ನಿರೀಕ್ಷೆ


ಹಸಿದ ಜೀವಿಗಷ್ಟು ಆಹಾರ
ವಿರಹಿಗೆ ಪ್ರೀತಿ
ಎಲ್ಲೆಲ್ಲೂ ಪ್ರತೀಕ್ಷೆ
ಬಾಳ ಪಯಣದಲ್ಲೆಲ್ಲ ನಿರೀಕ್ಷೆ ||

ಬೆಂದ ಭುವಿಯೊಡಲಿಗಷ್ಟು ಮಳೆ
ನಿರಭ್ರ ಮೌನಕ್ಕೆರಡು ಉಲಿ
ಮಕ್ಕಳಿಲ್ಲದ ಮನದ ಬಯಕೆ
ಪ್ರತಿಯೊಂದೂ ನಿರೀಕ್ಷೆ ||

ಜೀವಸಂಕುಲದೊಡಲಿಗೆ ನಿಶೆ ಕಳೆಯೋ ವೇಳೆ
ಆ ಅರ್ಕನಾಗಮನದ
ತಿಳಿಬಿಸಿಲ ಹೊಂಬೆಳಕ ಆಸೆ
ಜೀವಿಸುವೊಲು ನಿರೀಕ್ಷೆ ||

ಬಾಳ ಪಯಣದ ಪಥದಿ
ಕಷ್ಟಗಳೆದುರಾಗಿರಲು
ಮೆಟ್ಟಿ ನಿಲ್ವೆನೆಂಬ ಛಲದಿ
ಗೆಲುವೆನೆಂಬ ನಿರೀಕ್ಷೆ ||

ಭಕುತನಾ ಹಲ ಭಕುತಿ
ದೇವ ಕೇಳುವನೆನೋ
ಎದುರು ಮೂಡುವನೇನೋ
ಎನುವುದೊಂದು ನಿರೀಕ್ಷೆ ||

ಕೆಟ್ಟ ಮಗ ಹಿಡಿದ
ಹಾದಿ ಸರಿಯಾಗಲು
ಹೆತ್ತೊಡಲು ಬಯಸೋ 
ಹಿತವೇ ನಿರೀಕ್ಷೆ  ||

***
(ಈ ಕವಿತೆಯನ್ನು ಬರೆದಿರುವುದು 03-07-2006ರಂದು ದಂಟಕಲ್ಲಿನಲ್ಲಿ)

Wednesday, October 8, 2014

ಬೆಂಗಾಲಿ ಸುಂದರಿ-29


          ಬೆಳೆದು ನಿಂತ ಪೈರಿನ ನಡುವೆ ಅಡಗಿ ಕೂರುವುದು ಸುಲಭದ ಕೆಲಸವಾಗಿರಲಿಲ್ಲ. ಮಧುಮಿತಾಳಂತೂ ಭಯದಿಂದ ಥರಗುಟ್ಟುತ್ತಿದ್ದಳು. ಭಯದಿಂದ ವಿನಯಚಂದ್ರನನ್ನು ಯಾವ ರೀತಿ ಹಿಡಿದುಕೊಂಡಿದ್ದಳೆಂದರೆ ವಿನಯಚಂದ್ರ ತತ್ತರಿಸಿದ್ದ. ಪೊಲೀಸರು ಅಲ್ಲೇ ಇದ್ದಾರಾ? ಹೋದರಾ ಒಂದೂ ಗೊತ್ತಾಗಲಿಲ್ಲ. ಗುಂಡು ಸಿಡಿದ ಸದ್ದು ಕೇಳಿಸಿತ್ತು, ಹೆದರಿಸಲು ಹೊಂದು ಹೊಡೆದರಾ? ಅಥವಾ ಗುಂಡು ಯಾರಿಗಾದರೂ ತಗುಲಿದೆಯಾ? ತಮ್ಮಿಬ್ಬರಿಗೂ ಏನೂ ಆಗಿಲ್ಲ. ಜೊತೆಯಲ್ಲಿ ಬಂದಿದ್ದ ಸಲೀಂ ಚಾಚಾ ಮಾತ್ರ ಕಾಣುತ್ತಿಲ್ಲ. `ಓಡಿ...' ಎಂದು ಸಲೀಂ ಚಾಚಾ ಹೇಳಿದ್ದಷ್ಟೇ. ಹಿಂದಕ್ಕೆ ತಿರುಗಿ ನೋಡದೇ ಓಡಿದ್ದೆವಲ್ಲ.  ಓಡುವ ಭರದಲ್ಲಿ ಆತ ಓಡಿದನೇ, ಪೊಲೀಸರ ಕೈಗೆ ಸಿಕ್ಕಿಕೊಂಡನೇ ಒಂದೂ ಗಮನಿಸಲಿಲ್ಲವಲ್ಲ. ಛೇ.. ಆತ ತಪ್ಪಿಸಿಕೊಂಡರೆ ಸಾಕಿತ್ತು ಎಂದುಕೊಂಡರು ಮಧುಮಿತಾ ಹಾಗೂ ವಿನಯಚಂದ್ರರು.
             ಪೊಲೀಸರು ಬಂದಿದ್ದೇನೋ ಸರಿ. ಆದರೆ ಅವರೇ ನಮ್ಮನ್ನು ಬೆನ್ನಟ್ಟಿದರು? ಅವರು ನಮ್ಮನ್ನು ಬೆನ್ನಟ್ಟಿದ್ದೇ ಹೌದಾ? ಗುಂಡು ಹಾರಿಸಿದ್ಯಾಕೆ? ಎಂಬುದು ಬಗೆಹರಿಯಲಿಲ್ಲ. ಬಹುಶಃ ಹಿಂಸಾಚಾರಿಗಳನ್ನು ಪೊಲೀಸರು ಹುಡುಕುತ್ತ ಸಾಗಿರಬೇಕು. ಅವರ ಕಣ್ಣಿಗೆ ದಾರಿಯಲ್ಲಿ ನಡೆಯುತ್ತ ಬಂದಿದ್ದ ನಾವು ಕಾಣಿಸಿರಬೇಕು. ನಮ್ಮ ಚಲನವಲನದ ಮೇಲೆ ಕಣ್ಣಿಟ್ಟು ಬರುತ್ತಿದ್ದ ಪೊಲೀಸರಿಗೆ ನಮ್ಮಲ್ಲಿ ಅದೇನೋ ಅನುಮಾನ ಮೂಡಿಸುವ ಅಂಶಗಳು ಕಾಣಿಸಿರಲೇಬೇಕು. ಸಲೀಂ ಚಾಚಾ `ಓಡಿ..' ಹೇಳದೇ ಇದ್ದಿದ್ದರೆ ತಮ್ಮ ಮೇಲೂ ಗುಂಡು ಹಾರಿಸುತ್ತಿದ್ದರೇನೋ. ಅಥವಾ ನಾವು ಓಡಿದ್ದನ್ನು ಕಂಡೇ ಗುಂಡು ಹಾರಿಸಿದರೋ. ಯಾಕೋ ಆಲೋಚಿಸಿದಷ್ಟೂ ಗೋಜಲು ಗೋಜಲಾಗುತ್ತಲೇ ಸಾಗಿತ್ತು. ಹದಿನೈದು ನಿಮಿಷ ಕಾದರು. ಈ ಕಾಯುವಿಕೆಯೆನ್ನುವುದು ಬಿಸಿಲಿಗೆ ಕಾದಿದ್ದ ಬಂಡೆಗಲ್ಲಿನ ಮೇಲೆ ನಿಂತ ಅನುಭವವನ್ನು ನೀಡಿತ್ತು. ಅಡಗಿ ಕುಳಿತವರಿಗೆ ಚಡಪಡಿಕೆ ಶುರುವಾಗಿತ್ತು. ಅಡಗಿ ಕುಳಿತಲ್ಲಿಂದ ರಸ್ತೆ ಸರಿಯಾಗಿ ಕಾಣುತ್ತಿರಲಿಲ್ಲ. ರಸ್ತೆಯಲ್ಲಿ ವಾಹನ ಹೋದ ಸದ್ದೂ ಕೇಳುತ್ತಿರಲಿಲ್ಲ.
            ವಿನಯಚಂದ್ರ ನಿಧಾನವಾಗಿ ಎದ್ದು ಬೆಳೆದಿದ್ದ ಪೈರಿನ ನಡುವಿನಿಂದ ಇಣುಕಿದ. ರಸ್ತೆಯಲ್ಲಿ ಯಾರೂ ಕಾಣಲಿಲ್ಲ. ಪೊಲೀಸರು ಹೋಗಿದ್ದಾರೆನ್ನಿಸಿತು. ಮಧುಮಿತಾಳಿಗೆ ಸನ್ನೆ ಮಾಡಿ ಹೆಜ್ಜೆಯ ಮೇಲೆ ಹೆಜ್ಜೆಯನ್ನಿಡುತ್ತಾ ಕಳ್ಳ ಬೆಕ್ಕಿನಂತೆ ಮುಂದಕ್ಕೆ ಬಂದ. ರಸ್ತೆಯ ಹತ್ತಿರ ಹತ್ತಿರಕ್ಕೆ ಬಂದಂತೆಲ್ಲ ಯಾರೂ ಇಲ್ಲದ್ದು ಸ್ಪಷ್ಟವಾಯಿತು. ನಿರಾಳವಾದ. ಮುಂದಕ್ಕೆ ಸಾಗಿದ. ಮಧುಮಿತಾ ಹಿಂಬಾಲಿಸಿದಳು. ರಸ್ತೆಯನ್ನು ಬಳಸಿದರೆ ಅಲ್ಲಿ ಯಾರೂ ಇರಲಿಲ್ಲ. ಸಲೀಂ ಚಾಚಾನಿಗಾಗಿ ಹುಡುಕಿದ. ಕಾಣಲಿಲ್ಲ. ದೊಡ್ಡದಾಗಿ `ಚಾಚಾ..' ಎಂದು ಕೂಗಿದ. ಮಧುಮಿತಾಳೂ ಸಲೀಂ ಚಾಚಾನ ಹೆಸರು ಹಿಡಿದು ಕೂಗಲಾರಂಭಿಸಿದ್ದಳು. ಮಾರುತ್ತರ ಬರಲಿಲ್ಲ. ಅರೇ ಚಾಚಾ ಎಲ್ಲಿಗೆ ಹೋದ? ಪೊಲೀಸರು ಆತನನ್ನು ಹೊತ್ತೊಯ್ದರೇ? ಎನ್ನುವ ಅನುಮಾನವೂ ಮೂಡಿ ಮನಸ್ಸಿನಲ್ಲಿ ಭಯದ ಛಾಯೆ ಆವರಿಸಿತು. ಆದರೂ ಹುಡುಕುವುದನ್ನು ಬಿಡಲಿಲ್ಲ.
        ರಸ್ತೆಯ ಇನ್ನೊಂದು ಪಾರ್ಶ್ವದಲ್ಲಿಯೂ ಗದ್ದೆಗಳು ಬೆಳೆದು ನಿಂತಿದ್ದವು. ಮಧುಮಿತಾ ಆ ಕಡೆಯಲ್ಲಿ ಹುಡುಕಾಟ ನಡೆಸಲು ಹೋದಳು. ಕೆಲ ಕ್ಷಣಗಳ ನಂತರ ದೊಡ್ಡಾದಗಿ ಚೀರಿದ ಮಧುಮಿತಾ ವಿನಯಚಂದ್ರನನ್ನು ಕರೆದಳು. ಸಲೀಂ ಚಾಚಾನಿಗಾಗಿ ಹುಡುಕಾಟ ನಡೆಸುತ್ತಿದ್ದ ವಿನಯಚಂದ್ರ ಗಡಬಡಿಸಿ ಓಡಿಬಂದ. ನೋಡಿದರೆ ಗದ್ದೆಯ ಒಐರಿನ ನಡುವೆ ಸಲೀಂ ಚಾಚಾ ಬಿದ್ದುಕೊಂಡಿದ್ದ. ತೊಟ್ಟುಕೊಂಡಿದ್ದ ಬಟ್ಟೆ ರಕ್ತಸಿಕ್ತವಾಗಿತ್ತು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಲೀಂ ಚಾಚಾನನ್ನು ಕಂಡಾಕ್ಷಣವೇ ವಿನಯಚಂದ್ರ ಹಾಗೂ ಮಧುಮಿತಾ ಕಂಪಿಸತೊಡಗಿದ್ದರು.
         ವಿನಯಚಂದ್ರ ಸಲೀಂ ಚಾಚಾನನ್ನು ಪರೀಕ್ಷಿಸಿ ನೋಡತೊಡಗಿದ. ಪೊಲೀಸರು ಹೊಡೆದ ಗುಂಡು ಸಲೀಂ ಚಾಚಾನ ಹೊಟ್ಟೆಯನ್ನು ತೂರಿಕೊಂಡು ಹೋಗಿತ್ತು. ಕರುಳಿದ್ದ ಜಾಗದಲ್ಲಿ ದೊಡ್ಡದೊಂದು ರಂಧ್ರವಾಗಿ ಅಲ್ಲಿಂದ ನೆತ್ತರು ಸೋರಿ ಹೋಗಲು ಆರಂಭಿಸಿತ್ತು. ಪರೀಕ್ಷಿಸಿ ನೋಡಿದಾಗ ಸಲೀಂ ಚಾಚಾ ಸತ್ತಿಲ್ಲ ಎನ್ನುವುದು ಗಮನಕ್ಕೆ ಬಂದಿತು. ಆತನಿಗೆ ಗುಂಡು ತಗುಲಿತ್ತು. ಪ್ರಜ್ಞೆ ತಪ್ಪಿತ್ತು. ಅಪಾರ ರಕ್ತಸ್ರಾವ ಆಗಿತ್ತು. ತಕ್ಷಣವೇ ಮಧುಮಿತಾ ತನ್ನ ಚೀಲದಲ್ಲಿದ್ದ ನೀರನ್ನು ತೆಗೆದು ಸಲೀಂ ಚಾಚಾನ ಮುಖಕ್ಕೆ ಚಿಮುಕಿಸಿದಳು. ವಿನಯಚಂದ್ರ ರಣ ಬಿಸಿಲಿನಲ್ಲೂ ತಣ್ಣಗಾಗುತ್ತಿದ್ದ ಆತನ ಪಾದಗಳನ್ನು ನೀವುತ್ತಿದ್ದ. ಕೊಂಚ ಹೊತ್ತಿನ ಬಳಿಕ ಸಲೀಂ ಚಾಚಾನಿಗೆ ಪ್ರಜ್ಞೆ ಮರಳಿತು. ಆದರೆ ಚಾಚಾನಿಗೆ ಮಾತನಾಡಲು ಶಕ್ತಿಯೇ ಇರಲಿಲ್ಲ. ಒಂದೆರಡು ಸಾರಿ ಏನೋ ಹೇಳಲು ಪ್ರಯತ್ನಿಸಿದನಾದರೂ ನಾಲಿಗೆ ಹೊರಳಲಿಲ್ಲ. ನಿತ್ರಾಣನಾಗಿದ್ದ ಸಲೀಂ ಚಾಚಾ ಮಾತನಾಡಲು ಕಷ್ಟಪಡುತ್ತಿದ್ದ. ಮಧುಮಿತಾ ನೀರನ್ನು ಕುಡಿಸಿ ಚಾಚಾನಿಗೆ ಗಾಳಿ ಹಾಕಿದಳು. ಕೆಲ ಸಮಯದ ಬಳಿಕೆ ಸಲೀಂ ಚಾಚಾ ಮಾತನಾಡುವಷ್ಟು ಶಕ್ತಿ ಪಡೆದುಕೊಂಡ.
         `ಬೇಟಾ.. ಈಗ ಗುಂಡು ಹೊಡೆದರಲ್ಲ ಅವರು ಪೊಲೀಸರೇ ಅಲ್ಲ. ಮುಂದೆ ಯಾವುದೋ ಕಡೆ ಪುಂಡಾಟಿಕೆ ನಡೆಯುತ್ತಿದೆ. ಹಿಂಸಾಚಾರ ಜೋರಾಗಿದೆ. ಈ ಗುಂಪು ಅಲ್ಲಿಂದಲೇ ಬಂದಿದೆ. ಪುಂಡರ ಗುಂಪು ಪೊಲೀಸರ ರೀತಿ ವೇಷ ಹಾಕಿಕೊಂಡು ಬಂದಿದೆ. ದೂರದಿಂದ ನಾನು ಇವರನ್ನು ಪೊಲೀಸರು ಎಂದೇ ತಿಳಿದಿದ್ದೆ. ಆದರೆ ತೀರಾ ಹತ್ತಿರಕ್ಕೆ ಬಂದಾಗಲೇ ಇವರು ಪೊಲೀಸರಲ್ಲ ಎನ್ನುವುದು ಅರ್ಥವಾಯಿತು. ಆ ಗುಂಪಿನ ನಡವಳಿಕೆ ಅಸಹಜವಾಗಿತ್ತು. ಪೊಲೀಸರ ಬಳಿ ಇರುವ ಬಂದೂಕಿಗಿಂತ ಇವರ ಬಂದೂಕು ಬೇರೆ ರೀತಿಯಿತ್ತು. ಬಣ್ಣವೂ ಅಷ್ಟೇ ದೂರದಿಂದ ಮಾತ್ರ ಪೊಲೀಸರ ಬಟ್ಟೆ. ಆದರೆ ಹತ್ತಿರದಿಂದ ನೋಡಿದರೆ ಅದರ ಬಣ್ಣವೇ ಬೇರೆ. ಆ ಕಾರಣದಿಂದಲೇ ನಾನು ನಿಮ್ಮ ಬಳಿ ಓಡಿ ಎಂದು ಹೇಳಿದೆ. ನೀವು ಓಡಿ ತಪ್ಪಿಸಿಕೊಂಡಿರಿ. ನಾನೂ ಓಡಿ ತಪ್ಪಿಸಿಕೊಳ್ಳುತ್ತಿದ್ದ ಸಂದರ್ಭದಲ್ಲೇ ಅವರು ಗುಂಡು ಹಾರಿಸಿದರು. ನನ್ನ ದುರಾದೃಷ್ಟ ಗುಂಡು ತಗುಲಿತು..' ಎಂದು ಹೇಳಿದವನಿಗೆ ಮತ್ತೆ ಸುಸ್ತಾಗಿ ಕೆಲಕಾಲ ಸುಮ್ಮನಾದ.
           ವಿನಯಚಂದ್ರ `ಛೇ.. ದ್ರೋಹಿಗಳು...' ಎಂದು ಸಿಡುಕಿದ.
          `ನನ್ನ ಹೊಟ್ಟೆಗೆ ಗುಂಡುಬಿದ್ದಿದೆ. ನಾನು ಖಂಡಿತ ಉಳಿಯುವುದಿಲ್ಲ. ಸಾವು ನನ್ನ ಕಣ್ಣ ಮುಂದೆ ಸುಳಿದಾಡುತ್ತಿದೆ. ನಾನು ಸತ್ತ ತಕ್ಷಣ ನನ್ನ ಬಗ್ಗೆ ತಲೆ ಕೆಡಿಸಿಕೊಳ್ಳದೇ ನೀವು ಮುಂದುವರಿಯಿರಿ. ಭಾರತ ತಲುಪುವವರೆಗೂ ಪ್ರಯಾಣ ಮಾಡುತ್ತಲೇ ಇರಿ. ನಿಮಗೆ ನಾನು ಇಲ್ಲದಿದ್ದರೂ ತೊಂದರೆಯಿಲ್ಲ. ಹೋಗುವ ಮಾರ್ಗದ ಬಗ್ಗೆ ತಿಳಿಸಿದ್ದೇನೆ. ಆ ಪ್ರಕಾರವಾಗಿ ಸಾಗಿ. ಯಾವುದೇ ಅಪಾಯ ಎದುರಾದರೂ ಅದನ್ನು ಎದುರಿಸಿ. ಅಪಾಯ ದೊಡ್ಡದಾಗಿತ್ತೋ ಅದನ್ನು ಪರಿಹಾರ ಮಾಡುವಂತಹ ಶಾರ್ಟ್ ಕಟ್ಟುಗಳನ್ನು ಹುಡುಕಿ ಸಾಗಿ. ನಿಮ್ಮನ್ನು ಭಾರತಕ್ಕೆ ತಲುಪಿಸುವ ಹೊಣೆಗಾರಿಕೆ ನನ್ನದಾಗಿತ್ತು. ಆದರೆ ನಾನು ಅರ್ಧದಲ್ಲಿಯೇ ನಿಮ್ಮನ್ನು ಕೈಬಿಡುವಂತಾಗುತ್ತಿದೆ. ನೀವು ಮುಂದಕ್ಕೆ ಹೋಗಿ ಭಾರತ ಮುಟ್ಟಿದರೆ ನಾನು ನಿರಾಳ. ಸತ್ತ ನಂತರ ಆತ್ಮವೆನ್ನುವುದು ಇದ್ದರೆ ಆಗ ಶಾಂತಗೊಳ್ಳುತ್ತದೆ...' ಎಂದ ಸಲೀಂ ಚಾಚಾ. ಮಾತುಗಳು ತೊದಲಲು ಆರಂಭಗೊಂಡಿದ್ದವು.
           `ಚಾಚಾ.. ಇಲ್ಲ.. ನೀನು ಸಾಯೋದಿಲ್ಲ. ನಿನ್ನನ್ನು ಉಳಿಸಿಕೊಳ್ಳುತ್ತೇವೆ. ನಾವು ತಾಂಗೈಲ್ ನ ಹೊರ ವಲಯದಲ್ಲೇ ಇದ್ದೇವೆ. ಇಲ್ಲೇ ಎಲ್ಲಾದರೂ ಆಸ್ಪತ್ರೆ ಇದ್ದೇ ಇರುತ್ತದೆ. ನಿನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗುತ್ತೇವೆ..' ಎಂದು ವಿನಯಚಂದ್ರ ಹೇಳಿದವನೇ ಸಲೀಂ ಚಾಚಾನನ್ನು ಎತ್ತುಕೊಳ್ಳಲು ಮುಂದಾದ. ಆಗ ಸನ್ನೆಯ ಮೂಲಕವೇ ಬೇಡ ಎಂದ ಸಲೀಂ ಚಾಚಾ.
             `ಬೇಟಾ.. ಬೇಡ. ಉಪಯೋಗವಿಲ್ಲ. ನೀನೆಷ್ಟೇ ಶತಪ್ರಯತ್ನ ಮಾಡಿದರೂ ನಾನು ಬದುಕುವುದಿಲ್ಲ. ನೀನು ನನ್ನನ್ನು ಹೊತ್ತುಕೊಂಡು ಹೋಗುವುದು, ಹತ್ತಾರು ಕಿಲೋಮೀಟರ್ ಅಲೆಯುವುದು, ಆಸ್ಪತ್ರೆ ಹುಡುಕುವುದು, ಆಸ್ಪತ್ರೆಯಲ್ಲಿ ವೈದ್ಯರೋ, ಅವರಿಗೆ ಏನಾದರೂ ಸಬೂಬು ಹೇಳುವುದು.. ಇವೆಲ್ಲ ಸಾಧ್ಯವಾಗದ ಮಾತು. ನನ್ನೊಳಗಿನ ರಕ್ತವೆಲ್ಲ ಬಸಿದುಹೋಗಿದೆ. ಖಂಡಿತ ಇನ್ನು ಹೆಚ್ಚು ಸಮಯ ನಾನು ಬದುಕಲಾರೆ. ನನ್ನ ಸಾವು ಸ್ಪಷ್ಟವಾಗಿದೆ. ನಾನು ಸಾಯುವುದು ಮುಖ್ಯವಲ್ಲ. ನೀವು ಬದುಕುವುದು ಬಹುಮುಖ್ಯ. ನಾನು ಸತ್ತ ವಿಷಯ ನನ್ನ ಕುಟುಂಬಕ್ಕೆ ತಿಳಿದರೆ ಕೆಲಕಾಲ ದುಃಖ ಪಡುತ್ತಾರೆ. ತೊಂದರೆಯಿಲ್ಲ. ನೀವು ಭಾರತ ತಲುಪಿ ಚನ್ನಾಗಿ ಬದುಕಿದರೆ ಅದರಂತಹ ಸಂತಸದ ವಿಷಯ ಇನ್ನೊಂದಿಲ್ಲ. ಬೇಟಾ ನಿಮಗೆ ನಾನು ಮಗುವಾಗಿ ಹುಟ್ಟುತ್ತೇನೆ. ಆಮೇಲೆ ನೀವು ನನ್ನನ್ನು ಚನ್ನಾಗಿ ನೋಡಿಕೊಳ್ಳಬಹುದಂತೆ. ನನ್ನ ಬ್ಯಾಗಿನಲ್ಲಿ ಮ್ಯಾಪ್ ಇದೆ. ತಿಂಡಿ ಇದೆ. ನೀರು ಸೇರಿದಂತೆ ಅಗತ್ಯ ವಸ್ತುಗಳು, ಇದೆ. ಕೊಂಚ ಹಣವೂ ಇದೆ. ನಿಮಗೆ ಅದು ಉಪಯೋಗಕ್ಕೆ ಬರುತ್ತದೆ. ಅವನ್ನು ತೆಗೆದುಕೊಳ್ಳಿ. ಸಾಗುವ ಮಾರ್ಗವಂತೂ ಗೊತ್ತಿದೆಯಲ್ಲ ಬೇಟಾ...' ಎಂದ ಸಲೀಂ ಚಾಚಾ.
         `ಚಾಚಾ.. ಬೇಡ.. ಸಾಯುವ ಮಾತಾಡ ಬೇಡ. ಈ ಬೆಂಗಾಲಿ ನಾಡಿನಲ್ಲಿ ನಮಗೆ ನಿನ್ನನ್ನು ಬಿಟ್ಟರೆ ಬೇರೆ ಯಾರೂ ಇಲ್ಲ ಚಾಚಾ...' ಎಂದಳು ಮಧುಮಿತಾ.
          `ಬೇಟಿ.. ಇಲ್ಲ ಬೇಟಿ. ನೀವು ಪ್ರೇಮಿಗಳು. ಒಬ್ಬರನ್ನೊಬ್ಬರು ಇಷ್ಟಪಟ್ಟವರು. ನಾಳಿನ ಒಳ್ಳೆಯ ಭವಿಷ್ಯಕ್ಕಾಗಿ ಇಂದು ಹೋರಾಟವನ್ನು ಮಾಡುತ್ತಿರುವವರು. ನಿಮ್ಮ ಈ ಹೋರಾಟದ ಮಾರ್ಗದಲ್ಲಿ ನಾನು ಒಂದು ಮೆಟ್ಟಿಲು ಅಂದುಕೊಳ್ಳಿ. ಆವತ್ತು ನಾನು ಹೇಳಿದ್ದೆ ನಾನು ಸತ್ತಾದರೂ ನಿಮ್ಮನ್ನು ಭಾರತ ತಲುಪುವಂತೆ ಮಾಡುತ್ತೇನೆ ಅಂತ. ಆದರೆ ನಾನು ಸಾಯುತ್ತಿದ್ದೇನೆ. ನಿಮ್ಮನ್ನು ಭಾರತ ತಲುಪಿಸಲಾಗುತ್ತಿಲ್ಲ. ಛೇ.. ಮುಂದೆ ನಿಮ್ಮ ಬದುಕು ಚನ್ನಾಗಿ ಇದ್ದರೆ ನನ್ನನ್ನು ಮರೆಯಬೇಡಿ. ನಾನು ನಿಮಗಾಗಿ ಸಾವನ್ನಪ್ಪಿದ್ದೆ ಎನ್ನುವುದು ನೆನಪಾದರೆ ಸಾಕು ನಾನು ಧನ್ಯನಾಗುತ್ತೇನೆ..' ಎಂದು ಸಲೀಂ ಚಾಚಾ ಸುಮ್ಮನಾದ.
           ಸಲೀಂ ಚಾಚಾನ ಪ್ರಾಣಪಕ್ಷಿ ಹಾರಿಹೋಯಿತೆ ಎಂದುಕೊಂಡ ವಿನಯಚಂದ್ರ. ಆತ ಸಾವನ್ನಪ್ಪಿರಲಿಲ್ಲ. ಆದರೆ ನಿತ್ರಾಣಗೊಂಡಿದ್ದ ಆತನ ಬಾಯಿಂದ ಮಾತುಗಳು ಹೊರಬರದಂತಾಗಿದ್ದವು. ಕಣ್ಣುಗಳನ್ನು ಮುಚ್ಚಿ-ತೆರೆದು ಮಾಡುತ್ತಿದ್ದ. ಇನ್ನರೆಘಳಿಗೆಯಲ್ಲಿ ಆತ ಸಾಯುತ್ತಾನೆ ಎನ್ನುವುದು ನಿಕ್ಕಿಯಾಗಿತ್ತು. ಇದ್ದಕ್ಕಿದ್ದಂತೆ ಸಲೀಂ ಚಾಚಾನ ಕಣ್ಣುಗಳು ಉಜ್ವಲ ದೀಪದಂತೆ ಕಾಣತೊಡಗಿತು. ಅದೆಷ್ಟು ಹೊಳಪಾಗಿ ಕಾಣಿಸಿತೆಂದರೆ ಮಧುಮಿತಾ ಹಾಗೂ ವಿನಯಚಂದ್ರ ಒಮ್ಮೆ ಬೆರಗು ಪಟ್ಟುಕೊಂಡರು. ಮತ್ತೊಂದು ನಿಮಿಷದಲ್ಲಿಯೇ ಸಲೀಂ ಚಾಚಾನ ದೇಹ ನಿಶ್ಚಲವಾಯಿತು. ಎದೆಬಡಿತ ಸ್ಥಬ್ಧವಾಯಿತು. ಕೈಕಾಲುಗಳು ತಣ್ಣಗಾದವು. ಉಸಿರಾಟ ನಿಂತುಹೋಯಿತು. ಸಲೀಂ ಚಾಚಾ ಪ್ರಾಣಬಿಟ್ಟಿದ್ದ.
            ಮಧುಮಿತಾ ಹಾಗೂ ವಿನಯಚಂದ್ರ ಇಬ್ಬರೂ ರೋಧಿಸತೊಡಗಿದ್ದರು. ಇಬ್ಬರಲ್ಲಿಯೂ ಅಳುವಿನ ಅಣೆಕಟ್ಟೆ ಒಡೆದಂತಾಗಿತ್ತು. ಅಣ್ಣನಲ್ಲ, ತಮ್ಮನಲ್ಲ, ಮಾವನಲ್ಲ, ಸಂಬಂಧಿಯೂ ಅಲ್ಲ.. ಹೋಗಲಿ ಊರಿನವನಾ ಅದೂ ಅಲ್ಲ. ಪರಿಚಯಸ್ಥನಂತೂ ಅಲ್ಲವೇ ಅಲ್ಲ. ಯಾವುದೋ ನಾಡಿನಿಂದ ಬಂದ ನನಗೆ ಯಾವುದೋ ನಾಡಿನಲ್ಲಿ ಯಾರಿಂದಲೋ ಪರಿಚಯವಾದವನು ಸಲೀಂ ಚಾಚಾ. ಅಂತವನು ನನ್ನನ್ನು ಭಾರತ ತಲುಪಿಸಬೇಕು, ನಮ್ಮ ಪ್ರೇಮ ಗೆಲ್ಲಬೇಕು ಎಂದು ಜೊತೆಗೆ ಬಂದನಲ್ಲ. ತನ್ನ ಮಕ್ಕಳು, ಹೆಂಡತಿಯರು, ಕುಟುಂಬ, ಮನೆ, ಜಮೀನು ಎಲ್ಲವನ್ನೂ ಬಿಟ್ಟು ಭಾರತಕ್ಕೆ ಕಳಿಸಲು ಜೊತೆಗೂಡಿ ಬಂದಿದ್ದನಲ್ಲ. ಇಂತಹ ಚಾಚಾನನ್ನು ಅನುಮಾನಿಸಿದೆನಲ್ಲ. ಧರ್ಮಾಂತರ ಮಾಡುತ್ತಿದ್ದಾನೆ ಎಂದುಕೊಂಡೆನಲ್ಲ. ಛೇ. ಎಂದುಕೊಂಡ ವಿನಯಚಂದ್ರ.
            ವಿನಯಚಂದ್ರನ ಮನಸ್ಸಿನಲ್ಲಿದ್ದ ದುಃಖ ಅಸಹನೆಯ ರೂಪವನ್ನು ತಾಳಿತ್ತು. ಏನನ್ನು ಕಂಡರೂ ಸಿಟ್ಟು ಬರಲು ಆರಂಭಿಸಿತ್ತು. ಮಧುಮಿತಾ ಅಳುತ್ತಲೇ ಇದ್ದಳು. ಸಲೀಂ ಚಾಚಾನ ದೇಹ ನಿಶ್ಚಲವಾಗಿ ಬಿದ್ದಿತ್ತು. ತಕ್ಷಣ ಸಲೀಂ ಚಾಚಾನ ದೇಹವನ್ನು ಮಣ್ಣು ಮಾಡಲು ಸಾಧ್ಯವಾ ಎಂದು ಸುತ್ತಮುತ್ತ ನೋಡಿದ ವಿನಯಚಂದ್ರ. ಮಣ್ಣು ಮಾಡಲು ಅಗತ್ಯವಾದ ಹತ್ಯಾರ ಸಿಗಲಿಲ್ಲ. ಕಾಲಬುಡದಲ್ಲಿದ್ದ ಮಣ್ಣನ್ನು ಕೈಯಲ್ಲಿ ಬಗೆಯಲು ಸಾಧ್ಯವಾ ಎಂದೂ ಪ್ರಯತ್ನಿಸಿದ. ಕೆಲಕಾಲ ಹಾಗೆ ಮಾಡಿ ಕೈತುಂಬಾ ಗಾಯಮಾಡಿಕೊಂಡ. ಕೊನೆಗೊಮ್ಮೆ ಸಲೀಂ ಚಾಚಾನ ನಿಶ್ಚಲ ದೇಹವನ್ನು ಹೊತ್ತುಕೊಂಡು ಅದೇ ಬೈರು ಬೆಳೆದಿದ್ದ ಗದ್ದೆಯ ನಡುವೆ ತೆಗೆದುಕೊಂಡು ಹೋಗಿ ಒಂದು ಕಡೆ ಮಲಗಿಸಿದ. ನಂತರ ಸುತ್ತಲ ಪೈರನ್ನು ಕಿತ್ತು ತಂದು ಸಲೀಂ ಚಾಚಾನ ದೇಹದ ಮೇಲೆ ಹರವಿದ. ಅರ್ಧಗಂಟೆಯ ನಂತರ ಆತನ ದೇಹ ಸಂಪೂರ್ಣವಾಗಿ ಪೈರಿನಿಂದ ಮುಚ್ಚಿತ್ತು. ಸುತ್ತಲ ಗದ್ದೆಗೆ ಬೆಂಕಿ ತಾಗದಂತೆ ಎಚ್ಚರ ವಹಿಸಿ ಸಲೀಂ ಚಾಚಾನನನು ಮುಚ್ಚಿದ್ದ ಪೈರು ರಾಶಿಗೆ ಬೆಂಕಿ ಹಾಕಿದ ವಿನಯಚಂದ್ರ.
          `ಕ್ಷಮಿಸು ಚಾಚಾ.. ನೀನು ನನಗೆ ನಂಬಿಕೆಯ ಪಾಠಗಳನ್ನು ಹೇಳಿದ್ದೆ. ನಾವು ಹೇಗೆ ಬೆಳೆಸಿಕೊಳ್ಳುತ್ತೇವೆಯೋ ಆಗೆ ನಮ್ಮ ನಂಬಿಕೆಗಳು ಬೆಳೆದುನಿಲ್ಲುತ್ತವೆ ಎಂದಿದ್ದ. ನಿಮ್ಮ ಧರ್ಮದ ಪ್ರಕಾರ ಸತ್ತವರನ್ನು ಹೂಳಬೇಕು. ಆದರೆ ನಾನು ನಿನ್ನ ಧರ್ಮದವನಲ್ಲ. ನನ್ನ ನಂಬಿಕೆ ಬೇರೆ. ನಿನ್ನ ದೇಹವನ್ನು ಅಗ್ನಿಗೆ ಅರ್ಪಿಸುತ್ತಿದ್ದೇನೆ. ಸಾಧ್ಯವಿದ್ದರೆ ನಿನ್ನ ದೇಹವನ್ನು ನಾನು ಹೂತು ಹಾಕುತ್ತಿದ್ದೆ. ಆದರೆ ನಾನು ಎಷ್ಟು ಪ್ರಯತ್ನ ಪಟ್ಟರೂ ಒಂದಡಿ ಆಳದ ಗುಂಡಿಯನ್ನೂ ನನ್ನ ಬಳಿ ತೋಡಲು ಸಾಧ್ಯವಾಗಲಿಲ್ಲ. ನಿನ್ನ ಧರ್ಮದ ನಂಬಿಕೆಯನ್ನು ನಾನು ಹಾಳು ಮಾಡಿದ್ದೇನೆ. ಆದರೆ ನನಗೆ ಇದು ಅನಿವಾರ್ಯವಾಗಿತ್ತು. ಚಾಚಾ.. ಕ್ಷಮಿಸಿಬಿಡು. ನನಗೆ ಬೇರೆ ಮಾರ್ಗವೇ ಇರಲಿಲ್ಲ...' ಎಂದ ವಿನಯಚಂದ್ರ.
          ಚಾಚಾನ ದೇಹ ನಿಧಾನವಾಗಿ ಅಗ್ನಿಯಲ್ಲಿ ಭಸ್ಮವಾಗುತ್ತಿತ್ತು. ದೂರದಿಂದ ನೋಡುತ್ತಿದ್ದ ವಿನಯಚಂದ್ರನ ಮೂಗಿಗೆ ಚಾಚಾನ ದೇಹ ಸುಟ್ಟ ವಾಸನೆ ಬಡಿಯುತ್ತಿತ್ತು. ಮಧುಮಿತಾ ಅತ್ತು ಅತ್ತು ವಿನಯಚಂದ್ರನ ಭುಜಕ್ಕೆ ಒರಗಿ ನಿಂತಿದ್ದಳು. ಇಷ್ಟುಹೊತ್ತೂ ಕಿಡಿಕಾರುತ್ತಿದ್ದನೋ ಎಂಬಂತಿದ್ದ ಸೂರ್ಯ ನಿಧಾನವಾಗಿ ಬಾನಂಚಿಗೆ ಜಾರುತ್ತಿದ್ದ. ಸೂರ್ಯನ ಸವಾಲು ಸೋತಿತೋ ಎನ್ನುವಂತಿತ್ತು. ಚಾಚಾನ ಚೀಲವನ್ನು ಹೊತ್ತುಕೊಂಡ ವಿನಯಚಂದ್ರ. ಒಂದೇ ದಿನದಲ್ಲಿ ಹಲವು ಆಘಾತಗಳು ಸಂಭವಿಸಿದ್ದವು. ಮೊದಲು ಚಾಚಾನ ಸೈಕಲ್ ರಿಕ್ಷಾ ಹಿಂಸಾಚಾರಿಗಳ ಪುಂಡಾಟಕ್ಕೆ ಬೆಂಕಿಗೆ ಆಹುತಿಯಾಗಿತ್ತು. ಇದೀಗ ಸಲೀಂ ಚಾಚಾ ಕೂಡ ಸತ್ತಿದ್ದ. ಆತನ ದೇಹಕ್ಕೆ ವಿನಯಚಂದ್ರನೇ ಅಗ್ನಿಸ್ಪರ್ಷ ಮಾಡಿದ್ದ. ವಿನಯಚಂದ್ರನಿಗೆ ಸೈಕಲ್ ರಿಕ್ಷಾ ಹಾಗೂ ಸಲೀಂ ಚಾಚಾನ ನಡುವೆಯಿದ್ದ ಅವಿನಾಭಾವ ಸಂಬಂಧ ಒಮ್ಮೆ ಮನಸ್ಸಿನಲ್ಲಿ ಮೂಡಿತು. ಮಧುಮಿತಾಳನ್ನು ಹಿಡಿದುಕೊಂಡು ನಿಧಾನವಾಗಿ ಮುಂದಕ್ಕೆ ನಡೆಯತೊಡಗಿದ. ನಡೆಯಬೇಕಿದ್ದ ದಾರಿ ಇನ್ನೂ ಸಾಕಷ್ಟಿತ್ತು. ನಡೆದಂತೆಲ್ಲ ದೀರ್ಘವಾಗುತ್ತಿದೆಯೋ ಅನ್ನಿಸಿತು.

(ಮುಂದುವರಿಯುತ್ತದೆ...)