|
(ಮಿರ್ಜಾಪುರದ ಬೀದಿ) |
ಮದುಮಿತಾ ಹಾಗೂ ವಿನಯಚಂದ್ರರಿಗೆ ಸಲೀಂ ಚಾಚಾ ಅಚ್ಚರಿಯೋ ಅಚ್ಚರಿ. ಢಾಕಾದ ಸಲೀಂ ಚಾಚಾ, ಹೈದರಾಬಾದಿನಿಂದ ಓಡಿಬಂದ ಸಲೀಂ ಚಾಚಾ ಬಾಂಗ್ಲಾ ದೇಶವನ್ನು ಅರ್ಥ ಮಾಡಿಕೊಂಡಿದ್ದ ಪರಿ ಬಹಳ ಬೆರಗನ್ನು ಮೂಡಿಸಿತ್ತು. ಢಾಕಾದಲ್ಲಿ ಸೈಕಲ್ ರಿಕ್ಷಾ ತುಳಿಯುತ್ತಿದ್ದ ಸಲೀಂ ಚಾಚಾ ಮಿರ್ಜಾಪುರದ ಗಲ್ಲಿಗಲ್ಲಿಗಳನ್ನು ತಿಳಿದುಕೊಂಡಿದ್ದನಲ್ಲ. ಮುಪ್ಪಿನ ವಯಸ್ಸಾಗಿದ್ದರೂ ಎಳವೆಯಂತೆ ಸೈಕಲ್ ತುಳಿಯುವ ಸಲೀಂ ಚಾಚಾನ ಬಗ್ಗೆ ಆಲೋಚಿಸಿದಷ್ಟೂ ಕುತೂಹಲ ಹುಟ್ಟುಹಾಕುತ್ತ ಹೋಗುತ್ತಿದ್ದ. ಈ ನಡುವೆಯೇ ವಿನಯಚಂದ್ರನ ಮನಸ್ಸಿನಲ್ಲಿ ಸಲೀಂ ಚಾಚಾ ಯಾತಕ್ಕಾಗಿ ಇಷ್ಟೆಲ್ಲ ಮಾಡುತ್ತಿದ್ದಾನೆ? ಒಳ್ಳೆಯದನ್ನು ಮಾಡುವ ನೆಪದಲ್ಲಿ ತಮ್ಮನ್ನು ಹಿಡಿದು ಹಾಕುವ ಹುನ್ನಾರ ನಡೆಸುತ್ತಿಲ್ಲವಷ್ಟೇ ಎಂದು ಆಲೋಚಿಸಿದ. ಸಹಾಯ ಮಾಡುವ ನೆಪದಲ್ಲಿ ನಮ್ಮನ್ನು ಯಾವುದೋ ಕೂಪಕ್ಕೆ ತಳ್ಳುತ್ತಿದ್ದಾನೆಯಾ ಎಂದೂ ಶಂಕೆ ಮೂಡಿತು. ಕೊನೆಗೆ ಖಂಡಿತ ಹಾಗೆ ಮಾಡಲಾರ. ಹಾಗೆ ಮಾಡುವುದೇ ಆಗಿದ್ದರೆ ಢಾಕಾದಲ್ಲೇ ತಮ್ಮನ್ನು ಹಿಂಸಾಚಾರಿಗಳ ವಶಕ್ಕೋ ಮತ್ಯಾರಿಗೋ ಕೊಟ್ಟು ಸುಮ್ಮನಾಗುತ್ತಿದ್ದ. ನಮ್ಮ ಪಾಲಿಗೆ ಸಲೀಂ ಚಾಚಾ ಆಪದ್ಭಾಂಧವನಂತೆ ಬಂದಿದ್ದಾನೆ. ಈಗ ಆತನ ಸಹಾಯ ನಮಗೆ ಬೇಕೇ ಬೇಕು. ಹೀಗಾಗಿ ಆತನನ್ನು ನಂಬುವುದು ಅನಿವಾರ್ಯ ಎಂದುಕೊಂಡ.
ಮನೆಯೊಳಗೆ ಹೋಗಿದ್ದ ಸಲೀಂ ಚಾಚಾ ಹತ್ತು ನಿಮಿಷದ ನಂತರ ಹೊರಗೆ ಬಂದಿದ್ದ. ಜೊತೆಯಲ್ಲಿ ಒಬ್ಬರನ್ನು ಕರೆತಂದಿದ್ದ. ಅವರ ಬಳಿ ಅದೇನು ಹೇಳಿದ್ದನೋ. ಮೊದಲ ನೋಟದಲ್ಲೇ ಆ ಮನೆಯ ಯಜಮಾನರು ಎಂಬುದು ಅರ್ಥವಾಯಿತು. ಸಲೀಂ ಚಾಚಾ ಆ ಮನುಷ್ಯನನ್ನು ಖಾದಿರ್ ಎಂದು ಪರಿಚಯಿಸಿದ. ಖಾದಿರ್ ಗೆ ವಿನಯಚಂದ್ರ ಹಾಗೂ ಮಧುಮಿತಾಳನ್ನು ಪರಿಚಯ ಮಾಡಿಸಿದ. ಖಾದಿರ್ ಇವರನ್ನು ತನ್ನ ಮನೆಯೊಳಗೆ ಕರೆದೊಯ್ದ. ಮನೆಯೊಳಗೆ ಹೋದ ತಕ್ಷಣ ಖಾದಿರ್ ಬಾಯಿ ಇವರಿಗೆ ಒಣದ್ರಾಕ್ಷಿ, ಗೋಡಂಬಿ, ಖರ್ಜೂರ ಸೇರಿದಂತೆ ಹಲವು ಬಗೆಯ ಹಣ್ಣುಗಳನ್ನು ತಂದಿಟ್ಟರು. ಸಲೀಂ ಚಾಚಾ ಖಾದಿರ್ ತನ್ನ ಹಳೆಯ ಸ್ನೇಹಿತನೆಂದೂ ತನ್ನಂತೆ ಭಾರತದಿಂದ ಹೊಟ್ಟೆಪಾಡಿಗೆ ಓಡಿಬಂದವನೆಂದೂ ತಿಳಿಸಿದ. ವಿನಯಚಂದ್ರ ಹಾಗೂ ಮಧುಮಿತಾ ಸಂತಸ ಪಟ್ಟರು.
ಮಾತಿಗೆ ನಿಂತ ಖಾದಿರ್ `ಮಿರ್ಜಾಪುರದಲ್ಲಿ ಇವತ್ತು ಬೆಳಿಗ್ಗೆಯಿಂದ ಹಿಂಸಾಚಾರ ಭುಗಿಲೆದ್ದಿದೆ. ಪುಂಡರ ಗುಂಪು ಕಂಡಕಂಡಲ್ಲಿ ದಾಳಿ ಮಾಡಿ, ಸಿಕ್ಕಿದ್ದನ್ನು ದೋಚುತ್ತಿದೆ. ಎಲ್ಲೆಂದರಲ್ಲಿ ಬೆಂಕಿ ಹಚ್ಚುತ್ತಿದೆ. ಎಲ್ಲೆಡೆ ಕರ್ಫ್ಯೂ ವಿಧಿಸಲಾಗಿದೆ. ಯಾವಾಗ ಸುಮ್ಮನಾಗುತ್ತೋ ಮಿರ್ಜಾಪುರ..' ಎಂದರು.
`ಅರೇ ನಮಗೆ ಕಾಣಿಸಲೇ ಇಲ್ಲವಲ್ಲ. ನಾವು ಆರಾಮಾಗಿ ಮಿರ್ಜಾಪುರ ಬಂದೆವು ನೋಡಿ..' ವಿನಯಚಂದ್ರ ಅಚ್ಚರಿಯಿಂದ ಹೇಳಿದ.
`ನನಗೂ ಅದೇ ಅಚ್ಚರಿಗೆ ಕಾರಣವಾಗಿದೆ. ಎಲ್ಲೆಡೆ ಗಲಾಟೆ ನಡೆಯುತ್ತಿದ್ದರೂ ಪುಂಡರ ಗುಂಪಿಗೆ ನೀವು ಸಿಗಲಿಲ್ಲವಲ್ಲ. ಪುಂಡರು ಹೋಗಲಿ ಪೊಲೀಸರಿಗೂ ನೀವು ಸಿಗಲಿಲ್ಲ ಎಂಬುದೇ ಅತ್ಯಾಶ್ಚರ್ಯ ನೋಡಿ.' ಖಾದಿರ್ ಹೇಳುತ್ತಿದ್ದರೆ ವಿನಯಚಂದ್ರ ತಮ್ಮ ಅದೃಷ್ಟವನ್ನು ನೆನೆದು ಖುಷಿಪಟ್ಟ. ಮಧುಮಿತಾ ಮಾತ್ರ ಆಲೋಚನಾ ಲಹರಿಯಲ್ಲಿ ಜಾರಿದ್ದಳು. ಯಾಕೋ ಏನೋ ತಾವು ಹೋದ ಕಡೆಯಲ್ಲೆಲ್ಲ ಹಿಂಸಾಚಾರ ನಡೆಯುತ್ತಿದೆ. ಬಿಟ್ಟೆನೆಂದರೂ ಬಿಡದೀ ಮಾಯೆ. ಯಾಕೆ ಹೀಗೆ. ತಮಗೆ ಶಾಂತಿ ದೊರಕುವುದೇ ಇಲ್ಲವೇ ಎಂದುಕೊಂಡಳು. ಸಲೀಂ ಚಾಚಾ ಅದಕ್ಕೆ ಸರಿಯಾಗಿ `ಬೇಟಿ ನೀವು ಭಾರತ ತಲುಪಿದರೆ ಮಾತ್ರ ನಿಮಗೆ ಶಾಂತಿ ಸಿಗುತ್ತದೇನೋ.. ಅಲ್ಲಿಯವರೆಗೂ ಉಸಿರುಕಟ್ಟಿ ಓಡುತ್ತಲೇ ಇರಬೇಕು. ಇವತ್ತು ಏಜೆಂಟ ನಮ್ಮನ್ನು ಭೆಟಿ ಮಾಡುತ್ತಾನೆ. ಸಂಜೆ ವೇಳೆಗೆ ನಾವು ಇಲ್ಲಿಮದ ಹೊರಡಲೇ ಬೇಕು. ಹಿಂಸಾಚಾರ ತಣ್ಣಗಾಗಿರಲಿ ಅಥವಾ ಗಲಭೆ ಹೆಚ್ಚಿಯೇ ಇರಲಿ. ನಾವು ನಿಲ್ಲುವಂತಿಲ್ಲ.. ತಿಳೀತಾ ಮಕ್ಕಳಾ' ಎಂದರು ಪ್ರೀತಿಯಿಂದ. ಪ್ರೇಮಿಗಳು ತಲೆಯಲ್ಲಾಡಿಸಿದರು.
ಇರುಕಾದ ಬಾಗಿಲಿನಿಂದ ಓಳಹೋಗುವಂತ ಮನೆ ಅದಾಗಿದ್ದರೂ ಖಾದಿರ್ ಭಾಯಿಯ ಮನೆ ವಿಶಾಲವಾಗಿತ್ತು. 50-60 ಜನ ಬೇಕಾದರೂ ಆರಾಮಾಗಿ ಇರಬಹುದಿತ್ತು. ಮನೆಯ ತುಂಬ ಜನವೋ ಜನ. ವಿನಯಚಂದ್ರ ಎಣಿಸಲು ನೋಡಿ ಸುಸ್ತಾಗಿದ್ದ. ಎಣಿಸಿದಂತೆಲ್ಲ ಜನರು ಜಾಸ್ತಿಯಾಗುತ್ತಿದ್ದಾರೋ ಹೇಗೆ ಎಂದನ್ನಿಸುತ್ತಿತ್ತು. ಮನೆಯ ಒಳ ಕೋಣೆಗಳಿಂದ ಮಧ್ಯ ವಯಸ್ಕರು, ಹಿರಿಯರು, ಮಕ್ಕಳು, ಮರಿಗಳು ಬರುತ್ತಲೇ ಇದ್ದರು. ಬಂದವರನ್ನೆಲ್ಲ ಖಾದರ್ ಈತ ತನ್ನ ಮಗ ಎಂದೋ, ಸೊಸೆ ಎಂದೋ, ಮೊಮ್ಮಗ ಎಂದೋ, ಇವಳು ಹೆಂಡತಿ ಎಂದೋ ಪರಿಚಯಿಸುತ್ತಲೇ ಇದ್ದ. ಖಾದಿರ್ ನ ಒಂದಿಬ್ಬರು ಮಡದಿಯರಂತೂ ಆತನದ್ದೇ ಹೆಣ್ಣುಮಕ್ಕಳಿಗಿಂತ ಚಿಕ್ಕವರಿದ್ದರು. ಬೆಪ್ಪಾಗಿ ವಿನಯಚಂದ್ರ ನೋಡುತ್ತಿದ್ದಾಗಲೇ ಸಲೀಂ ಚಾಚಾ `ಖಾದಿರ್ ಗೆ 12 ಜನ ಮಡದಿಯರು... ಮಕ್ಕಳ ಸಂಖ್ಯೆ ಎಷ್ಟು ಎನ್ನುವುದನ್ನು ಆತನ ಬಳಿಯೇ ಕೇಳಬೇಕು..' ಎಂದು ತಮಾಷೆ ಮಾಡಿ ಕಣ್ಣು ಮಿಟುಕಿಸಿದರು.
ಖಾದಿರ್ `38 ಮಕ್ಕಳು.. ಈ ವರ್ಷ ಇನ್ನೆರಡು ಸೇರ್ಪಡೆಯಾಗುತ್ತವೆ. 8 ಮೊಮ್ಮಕ್ಕಳು. ಒಬ್ಬ ಮರಿ ಮಗ ಇದ್ದಾನೆ.. ಎಲ್ಲ ಅಲ್ಲಾಹುವಿನ ಕೃಪೆ..' ಎಂದಾಗ ಮಾತ್ರ ವಿನಯಚಂದ್ರ ಸುಸ್ತಾಗಿ ಬೀಳುವುದೊಂದೇ ಬಾಕಿ. `ನಿಮ್ಮ ತಾಕತ್ತು ಭಾರಿ ಬಿಡಿ..' ಎಂದು ಹೇಳಿ ಸುಮ್ಮನಾದ ವಿನಯಚಂದ್ರ. ಮಧುಮಿತಾಳನ್ನು ನೋಡಿ ಕಣ್ಣುಮಿಟಿಕಿಸಿ `ನೋಡಿದೆಯಾ ಖಾದಿರ್ ಭಾಯಿಯ ತಾಕತ್ತು..' ಎಂದು ಪಿಸುಗುಟ್ಟಿದ. ಒಮ್ಮೆ ಕಣ್ಣರಳಿಸಿದ ಮಧುಮಿತಾ ವಿನಯಚಂದ್ರ ಹೇಳಿದ್ದು ಅರ್ಥವಾದ ತಕ್ಷಣ ನಾಚಿಕೊಂಡಳು.
ಆ ದಿನ ಹಾಗೆಯೇ ಕಳೆಯಿತು. ಆದರೆ ಮಿರ್ಜಾಪುರದಲ್ಲಿ ಹಿಂಸಾಚಾರ ಕಡಿಮೆಯಾಗುವ ಲಕ್ಷಣ ತೋರಲಿಲ್ಲ. ಸಲೀಂ ಚಾಚಾ ಏಜೆಂಟನಿಗಾಗಿ ಕಾಯುತ್ತಿದ್ದ. ಸಮಯ ಸರಿಯುತ್ತಿತ್ತಾದರೂ ಏಜೆಂಟನ ಪತ್ತೆಯಿರಲಿಲ್ಲ. ಮಿರ್ಜಾಪುರದಿಂದ ಅಂದು ಶತಾಯಗತಾಯ ಪಯಣ ಆರಂಭಿಸಲೇ ಬೇಕಿತ್ತು. ಏಜೆಂಟ ಬರದೇ ಇದ್ದರೆ ಏನು ಮಾಡುವುದು ಎಂಬ ಆಲೋಚನೆ ಎಲ್ಲರ ಮನಸ್ಸಿನಲ್ಲಿ ಮೂಡಿದರೂ ಸಲೀಂ ಚಾಚಾ `ಭಾರತದ ಗಡಿಯತ್ತ ಪ್ರಯಾಣ ಮಾಡುವ ದಾರಿ ನನಗೆ ಗೊತ್ತಿದೆ. ಏಜೆಂಟ ಬರಲಿ, ಅಥವಾ ಬರದೇ ಇರಲಿ.. ನೀವು ಸಾಗಬೇಕು. ನಿಮ್ಮನ್ನು ಅಲ್ಲಿಯವರೆಗೆ ನಾನು ಕಳಿಸಿ ಬರಲೇಬೇಕು..' ಎಂದ.
ಇಷ್ಟರ ನಡುವೆ ಮಾಡಲೇಬೇಕಾದ ಕೆಲವು ಕೆಲಸಗಳಿದ್ದವು. ಎಲ್ಲರ ಬಳಿ ಹಣ ಖರ್ಚಾಗಿತ್ತು. ಅಗತ್ಯ ವಸ್ತುಗಳನ್ನೆಲ್ಲ ನದೀ ತೀರದ ದರೋಡೆಕೋರರು ಕದ್ದೊಯ್ದಿದ್ದರು. ಹೀಗಾಗಿ ಅವನ್ನೆಲ್ಲ ಸಂಪಾದಿಸಬೇಕಿತ್ತು. ಅಥವಾ ಯಾರ ಬಳಿಯಾದರೂ ಪಡೆಯಬೇಕಿತ್ತು. ಖಾದಿರ್ ಈ ವಿಷಯವನ್ನು ಅರಿತ ತಕ್ಷಣ ಹಣ, ಆಹಾರ ಹಾಗೂ ಅಗತ್ಯ ವಸ್ತುಗಳನ್ನೆಲ್ಲ ಪೂರೈಸಿದ್ದ. ಇವೆಲ್ಲವುಗಳ ಜೊತೆಗೆ ಇನ್ನೊಂದು ಕೆಲಸ ಬಾಕಿ ಇತ್ತು. ಖಾದಿರ್ ಬಳಿ ಮಾತನಾಡಿದ ಸಲೀಂ ಚಾಚಾ ತಕ್ಷಣವೇ ವಿನಯಚಂದ್ರನನ್ನು ಮನೆಯಿಂದ ಹೊರಗೆ ಕರೆದೊಯ್ದ. ಮಿರ್ಜಾಪುರದ ನಿರ್ಮಾನುಷವೆನ್ನಿಸುವಂತಹ ಒಂದೆರಡು ಬೀದಿಗಳನ್ನು ಹಾದು ಅವರು ಸಾಗಿ ಅದೆಲ್ಲೋ ಒಂದು ದುಕಾನ್ ಎದುರು ನಿಂತರು. ಬೆಂಗಾಲಿ ಹಾಗೂ ಉರ್ದುವಿನಲ್ಲಿ ಬರೆದಿದ್ದ ಆ ಅಂಗಡಿ ಏನು ಎನ್ನುವುದು ವಿನಯಚಂದ್ರನಿಗೆ ಅರ್ಥವಾಗಲಿಲ್ಲ. ಮೇಲ್ನೋಟಕ್ಕೆ ಆಸ್ಪತ್ರೆಯೆಂಬಂತೆ ಕಂಡಿತು. ಆದರೆ ತನ್ನನ್ನೇಕೆ ಅಲ್ಲಿಗೆ ಸಲೀಂ ಚಾಚಾ ಕರೆತಂದಿದ್ದಾರೆ ಎನ್ನುವುದು ಗೊತ್ತಾಗಲಿಲ್ಲ.
ಆ ದುಕಾನ್ ಒಳಹೋದಗ ಮಾತ್ರ ಅದು ಆಸ್ಪತ್ರೆಯೆನ್ನುವುದು ವಿನಯಚಂದ್ರನಿಗೆ ಸ್ಪಷ್ಟವಾಯಿತು. ಆಗಲೇ ಸಲೀಂ ಚಾಚಾ `ಬೇಟಾ.. ಇದು ಬಾಂಗ್ಲಾ ದೇಶ. ನೀವು ಬಾಂಗ್ಲಾದಲ್ಲಿ ಇರುವಷ್ಟು ಕಾಲ ನಿಮ್ಮನ್ನು ರಕ್ಷಿಸುವ ಜವಾಬ್ದಾರಿ ನನ್ನದು. ಹೀಗಿರುವಾಗ ನನಗೇನಾದರೂ ಸಮಸ್ಯೆ ಆದರೆ ನೀವೇ ಬಾಂಗ್ಲಾ ನಾಡಿನಲ್ಲಿ ಸಂಚರಿಸಿ ಭಾರತ ತಲುಪಬೇಕು. ಇದಕ್ಕಾಗಿಯೇ ನಾನು ನಿನ್ನನ್ನು ಇಲ್ಲಿಗೆ ಕರೆತಂದಿದ್ದು..' ಎಂದ.
|
(ಮಿರ್ಜಾಪುರದ ಇನ್ನೊಂದು ನೋಟ) |
`ಇಲ್ಲಿಗೆ ಸರಿ.. ಇಲ್ಲೇನು ಮಾಡುವುದು..?' ವಿನಯಚಂದ್ರ ಅರ್ಥವಾಗದೇ ಕೇಳಿದ್ದ.
`ಎಷ್ಟೇ ಚಹರೆ ಬದಲಾಯಿಸಿದರೂ ಕೂಡ ಸಾಮಾನ್ಯವಾಗಿ ಮುಸ್ಲೀಮರು ಹಾಗೂ ಮುಸ್ಲೀಮರಲ್ಲದವರ ನಡುವೆ ವ್ಯತ್ಯಾಸ ಕಂಡು ಹಿಡಿಯಲು ಪ್ರಮುಖವಾಗಿ ಆತನಿಗೆ ಮುಂಜಿ ಆಗಿದೆಯೇ ಇಲ್ಲವೇ ಎಂದು ಪರೀಕ್ಷೆ ಮಾಡುತ್ತಾರೆ. ಮುಸ್ಲೀಮರಲ್ಲದವರಲ್ಲಿ ಮುಂಜಿ (ಖತ್ನಾ) ಮಾಡುವುದಿಲ್ಲ. ಯಾರು ಮುಂಜಿ ಮಾಡಿಸಿಕೊಂಡಿರುತ್ತಾನೋ ಆತ ಮುಸ್ಲೀಂ ಎಂದುಕೊಳ್ಳುತ್ತಾರೆ. ನೀನು ಸುರಕ್ಷಿತವಾಗಿರಬೇಕು ಎಂದಾದಲ್ಲಿ ನೀನು ಮುಂಜಿ ಮಾಡಿಸಿಕೊಳ್ಳಬೇಕು. ಮುಂಜಿ ಮಾಡಿಸಿಕೊಂಡರೆ ಬಾಂಗ್ಲಾದಲ್ಲಿ ಇರುವಷ್ಟು ಸಮಯ ನಿನಗೆ ಸಮಸ್ಯೆ ಇಲ್ಲ. ಮುಂದಿನ ಅಪಾಯವನ್ನು ತಪ್ಪಿಸಿಕೊಳ್ಳಲೋಸುಗ ಈ ಕಾರ್ಯ...ಅದಕ್ಕೆ ನಿನ್ನನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದು. ತಯಾರಾಗಬೇಕು ನೀನು ಅದಕ್ಕಾಗಿ. ಈ ವಿಷಯವನ್ನು ನಾನು ನಿನಗೆ ಮೊದಲೇ ಹೇಳಬಹುದಿತ್ತು. ಆದರೆ ಸುಮ್ಮನೆ ನೀನು ಗಾಬರಿಯಾಗಬಹುದು ಎಂದು ಹೇಳಲಿಲ್ಲ ಅಷ್ಟೇ' ಎಂದ ಸಲೀಂ ಚಾಚಾ.
`ಅಲ್ಲಾ ಚಾಚಾ.. ಮುಂಜಿ ಮಾಡಿಸಿಕೊಳ್ಳುವುದು ಅಂದರೆ...' ಚಿಕ್ಕಂದಿನಿಂದ ಆ ಕುರಿತು ಕೇಳಿದ್ದನಾದರೂ ಯಾವುದೇ ಮುನ್ಸೂಚನೆ ಇಲ್ಲದೇ ಸಲೀಂ ಚಾಚಾ ಮುಂಜಿ ಕುರಿತು ಪ್ರಸ್ತಾಪಿಸಿ ಈಗಿಂದೀಗಲೇ ಅದಕ್ಕೆ ತಯಾರಾಗು ಎಂದು ಹೇಳಿದ್ದರಿಂದ ಕೊಂಚ ಗಲಿಬಿಲಿಗೆ ಒಳಗಾಗಿದ್ದ ವಿನಯಚಂದ್ರ.
`ನಾವು ಜೀವನದಲ್ಲಿ ಅದೆಷ್ಟೋ ನೋವನ್ನು ಸಹಿಸಿಕೊಳ್ಳುತ್ತೇವೆ. ಅಂತವುಗಳ ಎದುರು ಈ ಮುಂಜಿ ಯಾವ ನೋವನ್ನೂ ಕೊಡುವುದಿಲ್ಲ. ನಮ್ಮಲ್ಲಿ ಚಿಕ್ಕ ಚಿಕ್ಕ ಮಕ್ಕಳಿಗೆ ಮುಂಜಿ ಮಾಡುತ್ತಾರೆ ಗೊತ್ತಾ. ಅವರೇ ಸಹಿಸಿಕೊಳ್ಳುತ್ತಾರೆ. ನೀನು ಬೆಳೆದವನು ನಿನಗೆ ಇದನ್ನು ಸಹಿಸಲು ಆಗುವುದಿಲ್ಲವೇ..?' ಎಂದು ಕೇಳಿದಾಗ ಮತ್ತೆ ಮುಜುಗರ ಪಟ್ಟುಕೊಂಡ ವಿನಯಚಂದ್ರ `ಥೋ ಚಾಚಾ.. ಉರಿ ಅಥವಾ ನೋವಿನ ಪ್ರಶ್ನೆಯಲ್ಲ. ನಾನು ಇಷ್ಟು ವರ್ಷಗಳವರೆಗೆ ಬೆಳೆಸಿಕೊಂಡು ಬಂದ ಕಟ್ಟುಪಾಡುಗಳು ಏನೆನ್ನುತ್ತಾವೆಯೋ ಎನ್ನುವ ಭಯ. ಎಂತದ್ದೇ ನೋವನ್ನೂ ನಾನು ಸಹಿಸಿಕೊಳ್ಳಬಲ್ಲೆ. ಆದರೆ ನಂಬಿಕೆಗಳು.. ನಮ್ಮ ಹಿಂದೂಗಳಲ್ಲಿ ಅದನ್ನು ಮಾಡಿಕೊಳ್ಳುವುದು ಅಪರಾಧ ಎನ್ನುವ ಭಾವನೆ ಇದೆ ಚಾಚಾ. ಖತ್ನಾ ಮಾಡಿಕೊಳ್ಳುವುದು ಎಂದರೆ ಧರ್ಮದಿಂದ ಹೊರಕ್ಕೆ ಹೋದ ಎಂಬಂತೆ ನೋಡುತ್ತಾರೆ ಚಾಚಾ' ಎಂದ ಗಲಿಬಿಲಿಯಿಂದ
`ಬದುಕಿ ಉಳಿದರೆ ತಾನೆ ನಂಬಿಕೆಗಳು, ಧರ್ಮ ಎಲ್ಲ. ಬದುಕಿ ಉಳಿಯುವುದೇ ಅಸಾಧ್ಯ ಎಂದಾದರೆ ನಂಬಿಕೆಗಳಿಗೂ ತಿಲಾಂಜಲಿ ಕೊಡಬೇಕು ಅಲ್ಲವೇ. ನಾವು ಬದುಕಿದರಷ್ಟೇ ನಮ್ಮ ನಂಬಿಕೆಗಳೂ ಜೀವಂತ ಇರುತ್ತವೆ.. ನೀನು ಮುಂಜಿ (ಖತ್ನಾ) ಮಾಡಿಕೊಳ್ಳುವುದು ಖಂಡಿತವಾಗಿಯೂ ತಪ್ಪಲ್ಲ. ನನಗೆ ತಿಳಿದ ಮಟ್ಟಿಗೆ ನಿಮ್ಮ ಧರ್ಮದಲ್ಲಿ ಎಲ್ಲೂ ಮುಂಜಿ ಮಾಡುವುದು ನಿಷಿದ್ಧ ಎಂದು ಹೇಳಿಲ್ಲ.. ಅಲ್ಲವೇ.. ಮತ್ಯಾಕೆ ಹಿಂಜರಿಕೆ.. ಇನ್ನೊಂದು ವಿಷಯ. ನೀನಾಗಿಯೇ ಹೇಳದ ಹೊರತು ನಿನಗೆ ಮುಂಜಿಯಾಗಿದೆ ಎಂದು ಯಾರಿಗೆ ಗೊತ್ತಾಗುತ್ತದೆ? ಸೊಕಾ ಸುಮ್ಮನೆ ನಿನ್ನ ಚೆಡ್ಡಿ ಬಿಚ್ಚಿ ಯಾರು ಅದನ್ನು ನೋಡುತ್ತಾ ಇರುತ್ತಾರೆ ಹೇಳು' ಎಂದ ಚಾಚಾ.
ಅರೆಘಳಿಗೆಯ ಆಲೋಚನೆಯ ನಂತರ ವಿನಯಚಂದ್ರ ಒಪ್ಪಿಕೊಂಡ. ಆ ಆಸ್ಪತ್ರೆಯ ಹಿರಿಯ ವೈದ್ಯನಾರೋ ವಿನಯಚಂದ್ರನನ್ನು ಒಳಗೆ ಕರೆದೊಯ್ದು ತೊಟ್ಟಿದ್ದ ಪೈಜಾಮಾ ಬಿಚ್ಚಿಸಿಯೇ ಬಿಟ್ಟ. ಒಂದೆರಡು ಕ್ಷಣದಲ್ಲಿಯೇ ಶಿಶ್ನ ಮುಂದೊಗಲನ್ನು ಕತ್ತರಿಸಿ ಮುಂಜಿ ಕಾರ್ಯವನ್ನು ಮುಗಿಸಿದ. ಈ ಕ್ಷಣದಲ್ಲಿಯೇ ವಿನಯಚಂದ್ರನ ಮನಸ್ಸಿನಲ್ಲಿ `ಸಲೀಂ ಚಾಚಾ ಯಾಕೋ ನಮ್ಮ ಮನಸ್ಸನ್ನು ಪರಿವರ್ತಿಸಿ ತನ್ನನ್ನು ಧರ್ಮಾಂತರ ಮಾಡಲು ಯತ್ನಿಸುತ್ತಿದ್ದಾನೆಯೇ? ಒಳ್ಳೆಯ ಮಾತುಗಳನ್ನು ಆಡಿ, ಒಳ್ಳೆಯವನಂತೆ ವರ್ತಿಸಿ ಸಹಾಯ ಮಾಡುವ ನೆಪದಲ್ಲಿ ತಮ್ಮನ್ನು ಆತನ ಧರ್ಮಕ್ಕೆ ಸೇರಿಸಿಕೊಳ್ಳಲು ಹುನ್ನಾರ ಮಾಡುತ್ತಿದ್ದಾನೆಯೇ? ಈ ಮುಂಜಿ ಕಾರ್ಯವೂ ಆತನ ಹುನ್ನಾರದ ಒಂದು ಭಾಗವೇ? ಯಾಕೋ ಮುಂದಿನ ದಿನಗಳಲ್ಲಿ ಹುಷಾರಾಗಿರಬೇಕು...' ಎಂದುಕೊಂಡ.
ಸಲೀಂ ಚಾಚಾ ಮುಂಜಿ ಮಾಡಿದ್ದ ವೈದ್ಯನಿಗೆ ದುಡ್ಡುಕೊಟ್ಟು ಹೊರಡಲು ಅನುವಾದ. ಆ ವೈದ್ಯ ಗಾಯಗೊಂಡ ಭಾಗಕ್ಕೆ ಹಚ್ಚಲು ಅದೇನೋ ಚಿಕ್ಕ ಟ್ಯೂಬಿನ ಮುಲಾಮನ್ನು ನೀಡಿದ. ವಿನಯಚಂದ್ರನಿಗೆ ಕತ್ತರಿಸುವಾಗ ಉರಿಯಾಗದಿದ್ದರೂ ಈಗ ಉರಿಯಾಗಲಾರಂಭಿಸಿತ್ತು. `ಚಲ್ ಬೇಟಾ.. ದೊಡ್ಡ ಕೆಲಸ ಮುಗಿಯಿತು. ಇನ್ನು ಯಾವುದೇ ಅಪಾಯವಿಲ್ಲ.. ಇನ್ನು ಯಾರೇ ಬಂದರೂ ಬಾಂಗ್ಲಾವಿರಲಿ ವಿಶ್ವದ ಯಾವುದೇ ಕಡೆ ನೀನು ಚಹರೆ ಬದಲಿಸಿಕೊಂಡಿದ್ದರೂ ಮುಸ್ಲೀಮನಲ್ಲ ಎಂದು ಹೇಳುವುದು ಕಷ್ಟ...' ಎಂದ. ವಿನಯಚಂದ್ರನಿಗೆ ಮತ್ತೊಮ್ಮೆ ಮನಸ್ಸು ಧಸಕ್ಕೆಂದಿತು. ಕತ್ತರಿ ಹಾಕಿದ್ದ ಜಾಗದಲ್ಲಿ ಉರಿ ಹೆಚ್ಚಾಗಿತ್ತು.
(ಮುಂದುವರಿಯುತ್ತದೆ...)