(ಸೈಕಲ್ ರಿಕ್ಷಾ) |
ಹಾಯಾಗಿ ಮಲಗಿ ನಿದ್ರಿಸುತ್ತಿದ್ದ ಮಧುಮಿತಾ ಒಮ್ಮೆ ಬೆಚ್ಚಿ ಬಿದ್ದು ಎದ್ದಳು. ಆದರೆ ಆಕೆ ಅಷ್ಟರಲ್ಲಿ ಬಂಧಿಯಾಗಿದ್ದರು. ಸಲೀಂ ಚಾಚಾ ಅದೇನೋ ಬಯ್ಯುತ್ತಿದ್ದ. ಬೆಂಗಾಲಿ ಹಾಗೂ ಉರ್ದುವಾದ್ದರಿಂದ ವಿನಯಚಂದ್ರನಿಗೆ ಅರ್ಥವಾಗಲಿಲ್ಲ. ದರೋಡೆಕೋರರ ಗುಂಪು ಸೈಕಲ್ ರಿಕ್ಷಾವನ್ನು ಪರಿಶೀಲಿಸಿತು. ಅದರಲ್ಲಿದ್ದ ಬ್ಯಾಗನ್ನು ಹುಡುಕಿ ಅಲ್ಲಿದ್ದ ಹಣವನ್ನೂ, ಬೆಲೆ ಬಾಳುವ ವಸ್ತುಗಳನ್ನೂ ದೋಚಿಕೊಂಡಿತು. ವಿನಯಚಂದ್ರನಿಗೆ ಎರಡೇಟು ಹೊಡೆದು, ಹಗ್ಗದಿಂದ ಕಟ್ಟಿಹಾಕಿ ಮುಂದಕ್ಕೆ ಹೋದರು. ಸಲೀಂ ಚಾಚಾ ಕಷ್ಟಪಟ್ಟು ಕೈಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿ, ಮಧುಮಿತಾ ಹಾಗೂ ವಿನಯಚಂದ್ರನನ್ನೂ ಬಿಡಿಸಿದರು. ಸಲೀಂ ಚಾಚಾ ತಮ್ಮ ಜೀವ ಉಳಿದಿದ್ದಕ್ಕೆ ದೇವರಿಗೆ ಧನ್ಯವಾದ ಹೇಳಿದ. ಹೊಡೆಸಿಕೊಂಡಿದ್ದ ಹೊಡೆತದಿಂದ ವಿನಯಚಂದ್ರ ಸುಧಾರಿಸಿಕೊಳ್ಳುತ್ತಿದ್ದ.
ಮಧುಮಿತಾ `ಹಾಳಾದವರು.. ನಮ್ಮ ಎಲ್ಲ ಹಣವನ್ನೂ ಅಗತ್ಯ ವಸ್ತುಗಳನ್ನೂ ದೋಚಿಕೊಂಡು ಹೋದರು..' ಎಂದು ಹಿಡಿಶಾಪ ಹಾಕಿದಳು.
ಸಲೀಂ ಚಾಚಾ `ಪುಣ್ಯ.. ಅವರು ನಿನಗೇನೂ ಮಾಡಲಿಲ್ಲವಲ್ಲ..' ಎಂದರು. ನಿಧಾನವಾಗಿ ವಿನಯಚಂದ್ರ ಸುಧಾರಿಸಿಕೊಳ್ಳತೊಡಗಿದ.
ದರೋಡೆಕೋರರು ಏನೇನನ್ನು ಕದ್ದೊಯ್ದಿದ್ದಾರೆ ಎಂದು ಪರೀಕ್ಷೆ ಮಾಡತೊಡಗಿದರು. ಬ್ಯಾಗಿನಲ್ಲಿದ್ದ ಸಂಪೂರ್ಣ ಹಣವನ್ನು ಅವರು ಹೊತ್ತೊಯ್ದಿದ್ದರು. ಅಷ್ಟೇ ಅಲ್ಲದೇ ವಿನಯಚಂದ್ರದ ಅತ್ಯಮೂಲ್ಯ ಕಾಗದಪತ್ರಗಳನ್ನೂ ಒಯ್ದುಬಿಟ್ಟಿದ್ದರು. ಮೊಬೈಲ್ ಕೂಡ ಕಿತ್ತುಕೊಂಡು ಹೋಗಿದ್ದರು. ಮಧುಮಿತಾ ಆಭರಣ ಧರಿಸುವ ಹುಚ್ಚಿನವಳಲ್ಲವಾದ್ದರಿಂದ ಆಭರಣ ಒಯ್ದಿರಲಿಲ್ಲ. ವಿನಯಚಂದ್ರ ಹಾಗೂ ಮಧುಮಿತಾ ಭಾರತಕ್ಕೆ ಹೋಗಬೇಕೆಂದಿದ್ದರೆ ಬಾಂಗ್ಲಾದಲ್ಲಿ ಇನ್ನೂ ನೂರಾರು ಕಿ.ಮಿ ಸಾಗಬೇಕಿತ್ತು. ಕೈಯಲ್ಲಿದ್ದ ಹಣವೆಲ್ಲ ದರೋಡೆಕೋರರ ಪಾಲಾಗಿತ್ತು. ಹಣವಿಲ್ಲದೇ ಮುಂದೆ ಸಾಗುವುದು ಬಹಳ ದುಸ್ತರವಾಗಿತ್ತು. ಸುಧಾರಿಸಿಕೊಂಡ ವಿನಯಚಂದ್ರ ಸಲೀಂ ಚಾಚಾನ ಬಳಿ ಮುಂದೇನು ಮಾಡುವುದು ಎಂದು ಕೇಳಿದ. ಸಲೀಂ ಚಾಚಾ ಏನೇ ಮಾಡಿದರೂ ಪ್ರಯಾಣ ನಿಲ್ಲುವುದು ಬೇಡ. ಮುಂದಕ್ಕೆ ಹೋಗೋಣ ಎಂದರು. ವಿನಯಚಂದ್ರ ತನ್ನ ಗುರುತಿನ ಚೀಟಿಯ ಬಗ್ಗೆ ಅನುಮಾನ ಉಂಟಾಯಿತು. ಬ್ಯಾಗನ್ನು ಹುಡುಕಿದ. ದರೋಡೆಕೋರರು ವಿನಯಚಂದ್ರನ ಗುರುತಿನ ಚೀಟಿಯನ್ನೂ ಕಿತ್ತುಕೊಂಡು ಹೋಗಿದ್ದರು. ಭಾರತಕ್ಕೆ ಪೋನು ಮಾಡೋಣ ಎಂದುಕೊಂಡರೆ ಮೊಬೈಲ್ ಪೋನ್ ಕೂಡ ಹೊತ್ತುಕೊಂಡು ಹೋಗಿದ್ದರು.
ಸಲೀಂ ಚಾಚಾ ತಾನೇ ಸೈಕಲ್ ಚಲಾಯಿಸಲು ಆರಂಭಿಸಿದ. ಕೆಲವು ಗಂಟೆಗಳ ನಂತರ ಅಶೂಲಿಯಾ ಪಟ್ಟಣ ಸಿಕ್ಕಿತು. ಆಗ ಬೆಳಗಿನ ಜಾವ ಮೂಡುತ್ತಿತ್ತು. ಸಲೀಂ ಚಾಚಾ ಮೊದಲು ಅಶೂಲಿಯಾದಲ್ಲಿ ಉಳಿಯೋಣ ಎಂದು ಹೇಳಿದ್ದನಾದರೂ ಪ್ರಯಾಣ ಮುಂದುವರಿಸೋಣ ಎನ್ನುವ ನಿರ್ಧಾರ ಕೈಗೊಂಡಿದ್ದ. ಅಶೂಲಿಯಾದಿಂದ ಒಂದು ತಾಸಿನ ಅವಧಿಗೆ ಜಿರಾಬೋ ಪಟ್ಟಣ ಕೂಡ ಹಿಂದಕ್ಕೆ ಸರಿಯಿತು. ಕೊನೆಗೊಮ್ಮೆ ಜಿರಾಬೋದ ನಂತರ ಸಿಗುವ ಘೋಸ್ಬಾಗ್ ನಲ್ಲಿ ಉಳಿಯುವ ನಿರ್ಧಾಕ್ಕೆ ಸಲೀಂ ಚಾಚಾ ಬಂದಿದ್ದ. ಅಶೂಲಿಯಾ ಹಾಗೂ ಜಿರಾಬೋಗಳ ನಡುವೆ ಮಧ್ಯ ಮಧ್ಯ ಗದ್ದೆ ಬಯಲುಗಳಿದ್ದರೂ ಜಿರಾಬೋ ಘೋಸ್ಬಾಗ್ ಒಂದಕ್ಕೊಂದು ಕೂಡಿಕೊಂಡಿದ್ದವು. ಮಧ್ಯಮ ವರ್ಗದವರೇ ಹೆಚ್ಚಾಗಿದ್ದ ಪಟ್ಟಣ ಗೋಸ್ಬಾಗ್. ಗೋಸ್ಬಾಗ್ ತೆರಳುವ ವೇಳೆಗೆ ಪೂರ್ವದಲ್ಲಿ ಸೂರ್ಯ ಉದಯಿಸಿದ್ದ. ಮಧುಮಿತಾಳಿಗೆ ಹೊಟ್ಟೆ ಚುರುಗುಡುತ್ತಿತ್ತಾದರೂ ಹಸಿವಾಗಿದೆ ಎನ್ನಲು ಮುಜುಗರ. ಕೈಯಲ್ಲಿ ದುಡ್ಡಿಲ್ಲ. ಇದ್ದ ದುಡ್ಡನ್ನೆಲ್ಲ ದರೋಡೆಕೋರರು ಹೊತ್ತೊಯ್ದಿದ್ದರು. ಸಲೀಂ ಚಾಚಾನೇ ಮಧುಮಿತಾ ಹಾಗೂ ವಿನಯಚಂದ್ರನ ಬಳಿ ಹೊಟೆಲಿಗೆ ತೆರಳಿ ತಿಂಡಿ ತಿನ್ನೋಣ ಎಂದ. ಆದರೆ ವಿನಯಚಂದ್ರ ಹಾಗೂ ಮಧುಮಿತಾ ತಮಗೆ ಹಸಿವಿಲ್ಲ ಎಂದು ಹೇಳಿದರು. ಆದರೆ ಸಲೀಂ ಚಾಚಾನಿಗೆ ಅಸಲಿ ವಿಷಯ ತಿಳಿದಿತ್ತು. ತಕ್ಷಣವೇ ಕಣ್ಣು ಮಿಟುಕಿಸುತ್ತಾ `ಯಾಕೆ ದುಡ್ಡಿಲ್ಲ ಅಂತ ತಿಂಡಿ ಕೂಡ ತಿನ್ನೋದಿಲ್ಲವಾ? ಬನ್ನಿ ದುಡ್ಡಿದೆ..' ಎಂದು ಹೇಳಿದರು.
`ಚಾಚಾ.. ಇದ್ದ ದುಡ್ಡನ್ನೆಲ್ಲ ದರೋಡೆಕೋರರು ಹೊತ್ತುಕೊಂಡು ಹೋಗಿದ್ದಾರೆ. ದುಡ್ಡಿದೆ ಅನ್ನುತ್ತೀಯಲ್ಲಾ... ಹಹ್ಹಾ..' ಎಂದ ವಿನಯಚಂದ್ರ.
`ಅಯ್ಯೋ ಹುಚ್ಚಪ್ಪಾ... ತಾಳು..' ಎಂದವನೇ ಸಲೀಂ ಚಾಚಾ ಸೀದಾ ಸೈಕಲ್ ರಿಕ್ಷಾದ ಪ್ರಯಾಣಿಕರು ಕೂರುವ ಸೀಟನ್ನು ಹರಿಯಲಾರಂಭಿಸಿದ. ಸೀಟಿನ ಅಡಿಯಲ್ಲಿತ್ತು ದುಡ್ಡು. ಸಾವಿರ ಸಾವಿರ ಗಟ್ಟಲೆ ಹಣ. ವಿನಯಚಂದ್ರ ಹಾಗೂ ಮಧುಮಿತಾ ಇಬ್ಬರ ಕಣ್ಣಲ್ಲೂ ಅಚ್ಚರಿ. ಇದೇನು ಎಂಬಂತೆ ನೋಡಿದರು. ಸಲೀಂ ಚಾಚಾ `ಯಾವುದಕ್ಕೂ ಇರಲಿ ಎಂಬಂತೆ ಇಟ್ಟಿದ್ದೆ. ಯಾವಾಗಲೋ ಇಟ್ಟಿದ್ದೆ. ಅಂತೂ ಹೀಗೆ ಉಪಯೋಗಕ್ಕೆ ಬಂತು. ನೋಡು 10 ಸಾವಿರಕ್ಕೂ ಅಧಿಕ ಇದೆ. ನಮ್ಮ ಹಿರಿಯರು ಇಂತದ್ದಕ್ಕೆ ಆಪದ್ಧನ ಎಂದು ಹೇಳುವುದಲ್ಲವಾ?' ಎಂದರು. ಸಲೀಮ ಚಾಚಾನ ಮುಂದಾಲೋಚನೆ ಖುಷಿ ತಂದಿತು.
ಹತ್ತಿರದಲ್ಲೇ ಇದ್ದ ಹೊಟೆಲೊಂದಕ್ಕೆ ಹೋಗಿ ತಿಂಡಿ ತಿಂದರು. ಅಲ್ಲೊಂದು ಕಡೆ ರೂಮು ಮಾಡಿ ಕೊಂಚ ವಿಶ್ರಾಂತಿ ಪಡೆದುಕೊಂಡರು. ಮದ್ಯಾಹ್ನದ ಊಟ ಮುಗಿಸಿ ಸಂಜೆಯ ಉಟವನ್ನು ಕಟ್ಟಿಸಿಕೊಂಡು ಇಳಿ ಸಂಜೆಯಲ್ಲಿ ಪ್ರಯಾಣವನ್ನು ಮತ್ತೆ ಆರಂಭಿಸಿದರು. ಗೋಸ್ಭಾಗ್ ನಿಂದ ನರೋಸಿನ್ಹೋಪುರ ಮತ್ತೊಂದು ತಾಸಿನಲ್ಲಿ ಸಿಕ್ಕಿತು. ಬೆಂಗಾಲಿಯರು ಎಲ್ಲವನ್ನೂ ಓ ಎಂದು ಕರೆಯುತ್ತಾರೆ. ಭಾರತದ ಅಸ್ಸಾಂ ಬೆಂಗಾಲಿಗರ ಬಾಯಲ್ಲಿ ಅಸ್ಸೋಂ ಆಗುತ್ತದೆ. ನರಸಿಂಹಪುರ ನರೋಸಿಂಹೋಪುರವಾಗುತ್ತದೆ. ಬೆಂಗಾಲಿ ಭಾಷೆಯ ವಿಶಿಷ್ಟವೇ ಇದು. ನರೋಸಿಂಹೋಪುರ ಬೆಂಗಾಲಿಯ ಅತ್ಯಂತ ಪುರಾತನ ಪಟ್ಟಣಗಳಲ್ಲೊಂದು. ಢಾಕಾ-ಅಶೂಲಿಯಾ ಹೆದ್ದಾರಿಯ ಒಂದು ಪಾರ್ಶ್ವದಲ್ಲಿ ನರೋಸಿಂಹೋಪುರವಿದ್ದರೆ ಇನ್ನೊಂದು ಭಾಗದಲ್ಲಿ ಗದ್ದೆ ಬಯಲುಗಳು ವಿಸ್ತಾರವಾಗಿ ಹರಡಿಕೊಂಡಿದ್ದವು. ಸಲೀಂ ಚಾಚಾ ಹುರುಪಿನಿಂದ ಸೈಕಲ್ ಚಲಾಯಿಸುತ್ತಿದ್ದರು. ಮಧುಮಿತಾ ಹಾಗೂ ವಿನಯಚಂದ್ರ ಹಿಂದಿನ ಸೀಟಿನಲ್ಲಿ ಕುಳಿತಿದ್ದರು.
ಮತ್ತೆ ಕೆಲವು ಕಿಲೋಮೀಟರುಗಳ ಅಂತರದಲ್ಲಿ ಜಾಮ್ಗೋರಾ ಪಟ್ಟಣ ಸಿಕ್ಕಿತು. ಜಾಮ್ಗೋರಾ ನಗರಿ ಬೈಪೈಲ್ ಎಂಬ ಪಟ್ಟಣದ ಉಪನಗರಿ. ಸಾಕಷ್ಟು ವಿಸ್ತಾರವಾಗಿಯೂ ಇತ್ತು. ನಗರದಲ್ಲಿ ಜನಸಂಚಾರ ಜೋರಾಗಿತ್ತು. ರಾತ್ರಿಯಾದರೂ ಜನಸಾಮಾನ್ಯರು ಓಡಾಡುತ್ತಿದ್ದರು. ವಿನಯಚಂದ್ರ, ಸಲೀಂ ಚಾಚಾ ಹಾಗೂ ಮಧುಮಿತಾಳ ಮನಸ್ಸಿನಲ್ಲಿ ಆತಂಖ ದೂರವಾಗಿತ್ತು. ಬೈಪೈಲ್ ನಗರಿಯ ಗಲ್ಲಿಗಲ್ಲಿಗಳು ಸೆಳೆಯುವಂತಿದ್ದವು. ಮಧುಮಿತಾ ತಾನು ಹಿಂದೊಮ್ಮೆ ಈ ನಗರಿಯಲ್ಲಿ ಅಡ್ಡಾಡಿರುವುದಾಗಿ ತಿಳಿಸಿದಳು. ನಗರಿ ಅಭಿವೃದ್ಧಿಯಲ್ಲಿ ಮುಂದುವರಿದಂತೆ ಕಾಣಿಸಿತು. ಒಂದೆರಡು ಸೆಣಬಿನ ಕಾರ್ಖಾನೆಗಳೂ ಕಾಣಿಸಿದವು. ದೊಡ್ಡ ದೊಡ್ಡ ಕಟ್ಟಡಗಳು ಕಾಣಿಸಿದವು. ಬಾಂಗ್ಲಾದ ಮುಂದುವರಿದ ಪ್ರದೇಶದಲ್ಲಿ ಇದೂ ಒಂದು ಎನ್ನಬಹುದು.
ಮುಂದಕ್ಕೆ ಸಾಗಿದಂತೆ ನಬೀನಗರ-ಚಂದ್ರ ರಸ್ತೆ ಸಿಕ್ಕಿತು. ರಸ್ತೆಯಲ್ಲಿ ಬಲಕ್ಕೆ ಹೊರಳಿ ಮುಂದಕ್ಕೆ ಸಾಗಿತು ಸೈಕಲ್ ರಿಕ್ಷಾ. ಉದ್ದನೆಯ ಹೆದ್ದಾರಿಯಲ್ಲಿ ಸಾಳು ಸಾಲು ವಾಹನಗಳು ಸಾಗುತ್ತಿದ್ದವು. ರೊಯ್ಯಂನೆ ಓಡುವ ವಾಹನಗಳ ಹಾರನ್ ಶಬ್ದ ಕಿವಿಗೆ ರಾಚುತ್ತಿತ್ತು. ಬೈಪೈಲ್ ನಗರದಲ್ಲಿ ಸಾಕಷ್ಟು ಜನದಟ್ಟಣೆಯೂ ಇತ್ತು. ರಸ್ತೆ ರಸ್ತೆಗಳಲ್ಲಿ ಕೆಂಪುದೀಪವಿತ್ತು. ಈ ನಡುವೆ ವಿನಯಚಂದ್ರ ತಾನೇ ಸೈಕಲ್ ತುಳಿಯಲು ಮುಂದಾದ. ಸೈಕಲ್ ಏರಿದ. ಹಿಂದಿನ ಸೀಟಿಗೆ ಹೋಗಿ ಕುಳಿತ ಸಲೀಂ ಚಾಚಾ `ಬೇಟಿ.. ಈ ಹುಡುಗನಿದ್ದಾನಲ್ಲ ಬಹಳ ಒಳ್ಳೆಯವನು. ನಿನಗೆ ಒಳ್ಳೆಯ ಗಂಡನಾಗುತ್ತಾನೆ. ನೀನು ಇವನನ್ನು ಪ್ರೀತಿಸಿ ಒಳ್ಳೆಯ ಕೆಲಸವನ್ನು ಮಾಡಿದೆ. ಈತನಲ್ಲಿ ಒಳ್ಳೆಯ ಗುಣಗಳೇ ಇವೆ. ಕೆಟ್ಟವನಲ್ಲ. ಈತನ ಜೊತೆ ಚನ್ನಾಗಿ ಬಾಳು.. ನಿನ್ನ ಬದುಕು ಬಂಗಾರವಾಗುತ್ತದೆ..' ಎಂದರು.
ನಾಚಿಕೊಂಡ ಮಧುಮಿತಾ ಸುಮ್ಮನೆ ತಲೆಯಾಡಿಸಿದಳು. ವಿನಯಚಂದ್ರನ ಜೊತೆಗೆ ಬಾಳಿದಂತೆ, ಖುಷಿಯಿಂದ ಬದುಕಿದಂತೆ ಕನಸು ಕಾಣಲಾರಂಭಿಸಿದಳು. ಮುಂದೆ ಬರುವ ಕಷ್ಟದ ದಿನಗಳ ಅರಿವು ಆಕೆಗೆ ಇರಲಿಲ್ಲವಾದ್ದರಿಂದ ಆ ಕ್ಷಣ ಸ್ವರ್ಗದಂತೆ ಭಾಸವಾಯಿತು.
ಬೈಪೈಲ್ ನಗರ ದಾಟುತ್ತಿದ್ದಂತೆಯೇ ಮತ್ತೆ ಗದ್ದೆ ಬಯಲುಗಳು ಕಾಣಲಾರಂಭಿಸಿದವು. ಅಲ್ಲೊಂದು ಕಡೆ ಸೈಕಲ್ ರಿಕ್ಷಾ ನಿಲ್ಲಿಸಿ ಊಟಕ್ಕೆ ಮುಂದಾದರು. ರಸ್ತೆಯ ಪಕ್ಕದ ಗದ್ದೆ ಬಯಲಿನಲ್ಲಿ ಕುಳಿತು ಕಟ್ಟಿಸಿಕೊಂಡಿದ್ದ ಊಟವನ್ನು ಬಿಚ್ಚಿದರು. ಗದ್ದೆಯಿಂದ ಬೀಸಿ ಬರುತ್ತಿದ್ದ ಚಳಿಗಾಳಿ ಹಲ್ಲನ್ನು ಕಟಕಟಿಸುವಂತೆ ಮಾಡುತ್ತಿತ್ತು. ಊಟ ಮುಗಿಸಿ ನೀರು ಕುಡಿದು ಮತ್ತೆ ಸೈಕಲ್ ಬಳಿ ಹೋಗುವ ವೇಳೆಗೆ ಮಧುಮಿತಾಳಂತೂ ಚಳಿಯಿಂದ ಕಟಕಟಿಸಲು ಆರಂಭಿಸಿದ್ದಳು. ವಿನಯಚಂದ್ರ ಆಕೆಯನ್ನು ತಬ್ಬಿ ಹಿಡಿದು ಸೈಕಲ್ ಏರಿದ. ಸಲೀಂ ಚಾಚಾ ಸೈಕಲು ತುಳಿಯಲು ತೊಡಗಿದರು. ತನ್ನ ಕಾಲಮೇಲೆ ಮಧುಮಿತಾಳ ತಲೆಯನ್ನು ಇರಿಸಿಕೊಂಡು ನೇವರಿಸತೊಡಗಿದ. ಮಧುಮಿತಾಳಿಗೆ ಹಿತವಾಗಿತ್ತು. ಖುಷಿಯಿಂದ ನಸುನಕ್ಕಿದ್ದಳು. `ಯಾವ ಜನ್ಮದ ಪುಣ್ಯವೋ ಏನೋ.. ನೀ ನಂಗೆ ಸಿಕ್ಕಿದ್ದೀಯಾ ಗೆಳೆಯಾ.. ಬದುಕಿನಲ್ಲಿ ಏನೇನಾಗ್ತದೋ.. ನಾ ನಿನ್ ಜೊತೆಗಿರ್ತೀನಿ...' ಪಿಸುಗುಟ್ಟಿದಳು ಮಧುಮಿತಾ.
`ಹೀಗೆ ಇದ್ದು ಬಿಡೋಣ ಅನ್ನಿಸ್ತದೆ ಕಣೆ. ಈಗ ಕಷ್ಟವಿದೆ ನಿಜ. ಮುಂದಿನ ಬದುಕು ಸುಂದರವಾಗಿರಬಹುದು. ಆಶಾವಾದದಲ್ಲೇ ಬದುಕು ಸಾಧಿಸಬೇಕು. ಈ ಬಾಂಗ್ಲಾ ನಾಡನ್ನು ಒಮ್ಮೆ ದಾಟಿ ಬಿಡೋಣ ಮುಂದೆ ಒಳ್ಳೆಯ ದಿನಗಳು ನಮಗೆ ಸಿಗಬಹುದು. ನನ್ನ ಪ್ರೀತಿಯ ಕರ್ನಾಟಕ, ಅಲ್ಲಿ ಪಶ್ಚಿಮ ಘಟ್ಟದಲ್ಲಿ, ಮಲೆನಾಡಿನ ಗುಡ್ಡದ ತಪ್ಪಲಿನಲ್ಲಿ ಇರುವ ದೊಡ್ಡ ಮನೆಯಲ್ಲಿ ನಾನು-ನೀನು ರಾಜ ರಾಣಿಯರಂತೆ ಬದುಕೋಣ. ಜೊರಗುಡುವ ಮಳೆ, ಕೊರೆಯುವ ಚಳಿ, ಬೇಸಿಗೆಯ ಹಿತವಾತಾವರಣ ಅಲ್ಲಿದೆ. ಮನೆಯೆದುರು ಇರುವ ಅಡಕೆ ತೋಟಗಳು, ಹಿಂಭಾಗದಲ್ಲಿರುವ ದಟ್ಟ ಕಾಡು ಖಂಡಿತ ನಿನಗೆ ಇಷ್ಟವಾಗುತ್ತದೆ. ಇನ್ನು ನನ್ನ ಅಪ್ಪ-ಅಮ್ಮನ ಬಗ್ಗೆ ಹೇಳಲೇಬೇಕು. ನಾನು ಇಷ್ಟಪಟ್ಟಿದ್ದು ಅವರಿಗೂ ಖಂಡಿತ ಇಷ್ಟವಾಗುತ್ತದೆ. ನನ್ನ ಆಯ್ಕೆಗೆ ಅವರು ಎದುರಾಡಿಲ್ಲ. ಎದುರಾಡುವುದೀ ಇಲ್ಲ. ನಾನು ಈಗಾಲೇ ನಿನ್ನ ಬಗ್ಗೆ ಹೇಳಿದ್ದೇನೆ. ಖಂಡಿತ ಅವರು ನಮಗಾಗಿ ಕಾಯುತ್ತಿರುತ್ತಾರೆ. ಇನ್ನು ತಂಗಿಯಂತೂ ಪ್ರೀತಿಯಿಂದ ಆದರಿಸುತ್ತಾಳೆ..' ಎಂದ.
`ಹುಂ..' ಎಂದಳು ಮಧುಮಿತಾ. `ನಮ್ಮ ಮನೆಯ ಬಗ್ಗೆ ಬಹಳ ಕುತೂಹಲವಾಗ್ತಿದೆ ವಿನೂ.. ಆದರೆ ಅಲ್ಲಿಗೆ ಹೋಗಲಿಕ್ಕೆ ಇನ್ನೂ ಬಹಳ ಸವಾಲನ್ನು ಎದುರಿಸಬೇಕಿದೆ.. ಅಲ್ಲವಾ..' ಎಂದಳು ಮಧುಮಿತಾ.
ಸಲೀಂ ಚಾಚಾ ನಡುವೆ ಬಾಯಿ ಹಾಕಿ `ಏನೂ ಆಗೋದಿಲ್ಲ.. ನಿಮ್ಮನ್ನು ಭಾರತದ ಗಡಿಯೊಳಗೆ ಹಾಕುವುದೇ ನನ್ನ ಜವಾಬ್ದಾರಿ.. ಹೆದರಬೇಡಿ. ನಾನಿರುವ ತನಕ ನಿಮಗೇನೂ ಆಗುವುದಿಲ್ಲ..' ಎಂದ. ಚಾಚಾನ ಪ್ರೀತಿಗೆ ಜೋಡಿ ಹಕ್ಕಿಗಳು ಕಣ್ಣೀರಾಗುವುದೋಂದೇ ಬಾಕಿ. ಮನಸ್ಸಿನಲ್ಲಿಯೇ ಆತನಿಗೊಂದು ಧನ್ಯವಾದ ಹೇಳಿದರು. ಸೈಕಲ್ ಮುಂದಕ್ಕೆ ಸಾಗುತ್ತಲೇ ಇತ್ತು. `ಇದೋ ನೋಡಿ ಹೀಗೆ ಸಾಗಿದರೆ ಚಕ್ರೋಬೋರ್ತಿ (ಚಕ್ರವರ್ತಿ) ಅನ್ನುವ ಊರು ಸಿಗುತ್ತದೆ. ಮುಂದಕ್ಕೆ ಸಿಗುತ್ತದಲ್ಲ ಅದೇ ಪನೀಸೈಲ್. ಎಂತೆಂತ ಪ್ರದೇಶಗಳಿವೆ.. ನೋಡಿ..' ಎಂದು ಕತ್ತಲೆಯಲ್ಲಿಯೇ ಚಾಚಾ ಬೋರ್ಡನ್ನು ತೋರಿಸಿ ವಿವರಿಸುತ್ತಿದ್ದರೆ ಹಿಮದೆ ಕುಳಿತ ಜೋಡಿ ಹಕ್ಕಿಗಳು ಸುಮ್ಮನೆ ಕಣ್ತುಂಬಿಕೊಳ್ಳುತ್ತಿದ್ದವು. ಯಾವುದೋ ಕನಸಿನ ನಗರಿಯಲ್ಲಿ ರಥದ ಮೇಲೆ ಸಾಗಿದಂತೆ ಅವರಿಗೆ ಅನ್ನಿಸುತ್ತಿತ್ತು.
(ಮುಂದುವರಿಯುತ್ತದೆ..)