Friday, July 25, 2014

ಸಾಲ್ಕಣಿಯ ಪೋರನಿಗೆ ಸಹಾಯ ಮಾಡಿ

(ರವಿಕೀರ್ತಿ ಹೆಗಡೆ)
ಅರವಿಂದ ವಿಶ್ವನಾಥ ಹೆಗಡೆ ಮತ್ತು ಭಾಗ್ಯಲಕ್ಷ್ಮಿ ಹೆಗಡೆಯವರ ಏಕೈಕ ಪುತ್ರ ರವಿಕೀರ್ತಿ ಹೆಗಡೆ. ಹಾಲುಗಲ್ಲದ ಹಸುಳೆಯ(2.5 ವರ್ಷ) ಬೋನ್ ಮಾರೋ ಎನ್ನುವ ಕಾಯಿಲೆ ಜೀವ ಹಿಂಡುತ್ತಿದೆ. ಪ್ರತಿ ಹನ್ನೆರಡು ದಿನಕ್ಕೊಮ್ಮೆ ಈ ಪೋರನಿಗೆ ಕೆಂಪು ಮತ್ತು ಬಿಳಿ ರಕ್ತ ನೀಡಬೇಕಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸಾಲ್ಕಣಿ ಬೇಣದಮನೆ ನಿವಾಸಿತರಾಗಿರುವ ಅರವಿಂದ ಹೆಗಡೆ ಮಗನ ಅನಾರೋಗ್ಯಕ್ಕಾಗಿ ಈಗಾಗಲೇ ಎರಡೂವರೆ ಲಕ್ಷ ರು. ಖರ್ಚು ಮಾಡಿದ್ದಾರೆ. ಹನ್ನೊಂದು ತಿಂಗಳಿನಿಂದ ಬಾಧಿಸುತ್ತಿರುವ ಕಾಯಿಲೆ ಯಾವುದು ಎಂದು ಅರಿಯುವುದಕ್ಕಾಗಿ ಶಿರಸಿಯಿಂದ ಹುಬ್ಬಳ್ಳಿ, ಹುಬ್ಬಳ್ಳಿಯಿಂದ ಮಂಗಳೂರು, ಮಂಗಳೂರಿನಿಂದ ಈಗ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ತಿಂಗಳಿಗೆ ಮೂರು ಸಾರಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂದರ್ಭದಲ್ಲಿ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯ ಬೋನ್ ಮಾರೋ ತಜ್ಞ ಡಾ.ಆಶಿಶ್ ದೀಕ್ಷಿತ ಅವರು ರೋಗ ಪತ್ತೆ ಮಾಡಿದ್ದಾರೆ. ಈ ಕುರಿತಂತೆ ಪ್ರಮಾಣಪತ್ರವನ್ನು ನೀಡಲಾಗಿದ್ದು ಇದರಲ್ಲಿ ಬೋನ್ ಮಾರೋ ಫೇಲ್ಯೂರ್ ಸಿಂಡ್ರೋಮ್ ಎಂದು ಗುರುತಿಸಲಾಗಿದೆ. ಈತನಿಗೆ ನಿರಂತರ ರಕ್ತವನ್ನು ಕೊಡಬೇಕು ಎಂದು ಸ್ಪಷ್ಟಪಡಿಸಿದ್ದಾರೆ.
ಅರವಿಂದ ಹೆಗಡೆಯವರು ಕೃಷಿಕರಾಗಿದ್ದಾರೆ. ಸಣ್ಣ ಹಿಡುವಳಿದಾರರಾಗಿರುವ ಇವರು ಮಗನ ಔಷಧೋಪಚಾರಕ್ಕಾಗಿ ಸಾಲ-ಸೋಲ ಮಾಡಿ ಹಣ ಒದಗಿಸುತ್ತಿದ್ದಾರೆ. ಎರಡು ತಿಂಗಳ ವರೆಗೆ ರಕ್ತ ವರ್ಗಾವಣೆ ಪ್ರಕ್ರಿಯೆ ನಿರಂತರವಾಗಿರಬೇಕು. ಆಗಲೂ ಚಿಕಿತ್ಸೆ ಫಲಕಾರಿಯಾಗದಿದ್ದರೆ ಈ ಮಗುವಿನ ರಕ್ತಸಂಬಂದಿ ವ್ಯಕ್ತಿಗಳ ಅಸ್ತಿಮಜ್ಜೆಯನ್ನು ಕಸಿ ಮಾಡಬೇಕಾಗುತ್ತದೆ. ಹೀಗೆ ಕಸಿ ಮಾಡಲು ಅಂದಾಜು 20 ಲಕ್ಷ ರು. ಖರ್ಚು ತಗುಲಬಹುದೆನ್ನುವ ಮಾಹಿತಿಯನ್ನು ತಜ್ಞ ವೈದ್ಯರು ನೀಡಿದ್ದಾರೆ. ಈಗಾಗಲೇ ನೀಡುವ ಚುಚ್ಚುಮದ್ದೊಂದಕ್ಕೆ 70 ಸಾವಿರ ರು.ವರೆಗೂ ವೆಚ್ಚ ತಗುಲಿದೆ. ಅರವಿಂದ ಹೆಗಡೆ ದಂಪತಿಯವರಿಗೆ ಮತ್ತೊಂದು ಮಗು ಜನಿಸಿತ್ತಾದರೂ ಅದು ಆಗಲೇ ತೀರಿಕೊಂಡಿದೆ.
ಕಳೆದ ವರ್ಷದ ಜೂನ್ ತಿಂಗಳಿನಲ್ಲಿ ಸಾಲ್ಕಣಿಯ ಸರ್ಕಾರಿ ಆಸ್ಪತ್ರೆಯಲ್ಲಿ ದಡಾರ ಚುಚ್ಚುಮದ್ದನ್ನು ಮಗುವಿಗೆ ಕೊಟ್ಟ ನಂತರ ಇದ್ದಕ್ಕಿದ್ದಂತೆ ಮೈಮೇಲೆ ನೀಲಿ ಕಲೆ ಕಾಣಿಸಿಕೊಳ್ಳಲು ಆರಂಭವಾಯಿತು. ಇದ್ದಕ್ಕಿದ್ದಂತೆ ಸುಸ್ತು ಹಾಗೂ ಮೈ ಬಿಳುಚಿಕೊಳ್ಳಲಾರಂಭಿಸಿತು. ಆಸ್ಪತ್ರೆಯ ಸಿಬ್ಬಂದಿಗಳನ್ನು ವಿಚಾರಿಸಿದಾಗ ಹಾರಿಕೆಯ ಉತ್ತರ ನೀಡಿದರು. ನಂತರ ಚಿಕಿತ್ಸೆಗಾಗಿ ಶಿರಸಿಯ ಮಕ್ಕಳ ತಜ್ಞರಾದ ಡಾ. ನೀರಲಗಿ ಮತ್ತು ಡಾ. ದಿನೇಶ ಹೆಗಡೆ ಅವರಲ್ಲಿ ತಪಾಸಣೆಗಾಗಿ ಕರೆದೊಯ್ದಾಗ ಪ್ರಾಥಮಿಕ ಚಿಕಿತ್ಸೆ ನೀಡಿದರು. ಆದರೆ ಪುನಃ ಪುನಃ ಮೈ ಬಿಳುಚಿಕೊಳ್ಳುವುದು, ಸುಸ್ತಾಗುವುದು, ನೀಲಿ ಕಲೆ ಕಾಣಿಸಿಕೊಳ್ಳುವುದು ಈ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳತೊಡಗಿದಾಗ ರಕ್ತವನ್ನೂ ನೀಡಲಾಗಿತ್ತು. ಕೊನೆಗೆ ಹೆಚ್ಚಿನ ತಪಾಸಣೆಗೆ ಹುಬ್ಬಳ್ಳಿಯ ಎಸ್ಡಿಎಂ ಗೆ ಕೊಂಡೊಯ್ಯಲಾಯಿತು. ಅಲ್ಲಿಂದ ಮಂಗಳೂರಿನ ನಿಟೆಯ ಕೆ. ಎಸ್. ಹೆಗಡೆ ಆಸ್ಪತ್ರೆಗೆ ಕರೆದೊಯ್ದು ಒಮ್ಮೆ ಬೋನ್ ಮಾರೋ ತಪಾಸಣೆ ಮಾಡಲಾಯಿತು. ಸಂಬಂಧಪಟ್ಟಂತೆ ಚಿಕಿತ್ಸೆಯನ್ನೂ ನೀಡಲಾಯಿತು. ಆದರೆ ಅದು ಫಲಕಾರಿಯಾಗದ ಕಾರಣ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ಕರೆದೊಯ್ದಾಗ ರೋಗ ಪತ್ತೆಯಾಗಿದ್ದು ಈಗ ನಿರಂತರ ಚಿಕಿತ್ಸೆ ನೀಡಲಾಗುತ್ತಿದೆ.
ಮಗುವಿಗೆ ಈಗಾಗಲೇ 45ಕ್ಕೂ ಹೆಚ್ಚಿನ ಸಾರಿ ರಕ್ತ ನೀಡಲಾಗಿದೆ. ವರ್ಗಾವಣೆ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಈಗಾಗಲೇ ಮೂರು ಬಾರಿ ಬೋನ್ ಮಾರೋ ತಪಾಸಣೆ ಮಾಡಿ ಚಿಕಿತ್ಸೆ ನಿಡಲಾಗಿದೆ. ಒಂದೊಂದು ತಪಾಸಣೆ ಹಾಗೂ ಚುಚ್ಚುಮದ್ದಿಗೂ 10 ರಿಂದ 12 ಸಾವಿರ ರು. ಖರ್ಚು ತಗುಲುತ್ತಿದೆ. ಈ ಪುಟಾಣಿಯ ರೋಗದ ಕುರಿತಂತೆ ಗ್ರಾ.ಪಂ ಅಧ್ಯಕ್ಷರು, ಜಿ.ಪಂ ಸದಸ್ಯರು ಪ್ರಮಾಣ ಪತ್ರ ನೀಡಿದ್ದಲ್ಲದೇ ಆರ್ಥಿಕ ಸಹಾಯಕ್ಕಾಗಿ ಶಿಫಾರಸು ಮಾಡಿದ್ದಾರೆ. ಅರವಿಂದ ಹೆಗಡೆಯವರ ದೂರವಾಣಿ ಸಂಖ್ಯೆ 08283-260319 ಮೊಬೈಲ್ ಸಂಖ್ಯೆ 9448965394 ಆಗಿದ್ದು ಇವರಿಗೆ, ಅಂದರೆ ಮಗುವಿನ ಚಿಕಿತ್ಸೆಗಾಗಿ ಆರ್ಥಿಕ ಸಹಾಯ ನೀಡಬಯಸುವವರು ಶಿರಸಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಖಾತೆ ಸಂಖ್ಯೆ 20115676399 (ಐಎಫೆಸ್ಸಿ ಕೋಡ್ 917) ಅಲ್ಲಿಗೆ ಜಮಾ ಮಾಡಬಹುದಾಗಿದೆ.

Wednesday, July 23, 2014

ಗಣಪಜ್ಜಿಯ ಹಾಡುಗಳು-4

                 ಹಳ್ಳಿಹಾಡುಗಳ ಸರದಾರಿಣಿ ದಿ.ಗಣಪಜ್ಜಿಯ ಬಗ್ಗೆ ಈಗಾಗಲೇ ಬಹುತೇಕ ಮಾಹಿತಿಗಳನ್ನು ನೀಡಿದ್ದೇನೆ. ಆಕೆಯ ಕುರಿತು ಹೇಳಿದ ಮಾಹಿತಿಗಳಷ್ಟೇ ಹೇಳುವ ಮಾಹಿತಿಗಳೂ ಇವೆ. ತನಗೆ ವಯಸ್ಸಾಗಿದ್ದರೂ ಕೂಡ ಎದುರಿಗೆ ಹರೆಯದ ಹುಡುಗರಿದ್ದರೆ ಅವರ ವಯಸ್ಸಿಗೆ ಏನು ಬೇಕೋ ಅದನ್ನೇ ಹೇಳುವಂತಹವಳು ಗಣಪಜ್ಜಿ. ಸ್ಥೂಲಕಾಯದ ಗಣಪಜ್ಜಿಯ ಹಸಿರು ಕಾಟನ್ ಸೀರೆ ಇನ್ನೂ ನನ್ನ ಕಣ್ಣಿನಲ್ಲಿ ಅಚ್ಚಳಿಯದೇ ಉಳಿದುಬಿಟ್ಟಿದೆ. ಅಂದಹಾಗೆ ಆಕೆ ಹೇಳಿದ ಮಜವಾದ ಹಾಡೊಂದನ್ನು ನಾನು ಇಲ್ಲಿ ಬರೆಯಲೇ ಬೇಕು. ಇಲ್ಲವಾದರೆ ಎಲ್ಲವನ್ನೂ ಹೇಳಿ ಬಹು ಅಮೂಲ್ಯವಾದುದನ್ನು ಮುಚ್ಚಿಟ್ಟಂತೆ ಆಗುತ್ತದೆ. ತಂಟೆ ಮಾಡುವ ಬಾಲಕನ ಗುಣಗಾನ ಮಾಡಿ ಆತನನ್ನು ವಾಪಾಸ್ ಕರೆತರುವ ತಾಯಿ, ಅಜ್ಜಿಯ ಹಾಡು ಇದೆ.

ಸಾರಿಸಿದೊಳವಿಕೆ ಸುಣ್ಣವ ಚೆಲ್ಲಿದ
ಧೂಳ್ ತಂದು ಪಸರಿಸಿದ |
ಕಾರುಣ್ಯ ರಂಗವಲ್ಯವ ಹಾಸ್ಯೋದೆ/ಆಗ್ಯೋದೆ
ನೋಡು ಬಾ ಎಂದ |

ಔಷೇಕಕೆ ಜಲವ ತಂದಿಟ್ಟರೆ
ಆಧ್ವಾನವ ಮಾಡಿದ |
ಪ್ರೀತಿಯಿಂದಲೆ ಗಂಧಾಕ್ಷತವಿಟ್ಟು
ಹೂ ತೊಳಸಿ ಮುಡಿದ |

ಹೂಗಿ ಮಿಡಿ ಬಿಡಿದಾ ಹಾಗಲು ತೊಂಡೆ
ಬೆರಳೊಳು ಕಿತ್ತ |
ದೂರ ಮಾಡುತ ಬಂದರೆ ನಾನಲ್ಲ
ಮತ್ಯಾರ ಮಗನೋ ಎಂದ |

ಹಪ್ಪಳ ಸಂಡಿಗೆ ಹರಗುವ ದಿನದಲಿ
ತಪ್ಪದೆ ತಾ ಬಂದ |
ಉಪ್ಪು ಸಾಕೋ, ಸಾಲದೋ ಎಂದು
ತಪ್ಪದೆ ತೆಗ ತಿಂದ |

ಇಂತ ಅಷ್ಟಾವಸ್ಥೆಯ ಮಾಡುವ ಬಾಲನ
ಅತ್ತ ಕರೆಯೆ ಗೋಪಿ |
-ಆಹ್... ಸರಳ ವಾಕ್ಯದಲ್ಲಿ ನಡೆದ ಘಟನೆಗಳನ್ನು ಹೇಳುವ ಪರಿಯನ್ನು ಗಮನಿಸಿ. ಗೊಂದಲವಿಲ್ಲದೇ ನೇರಾ ನೇರ, ಸುಲಭದಲ್ಲಿ ಹೇಳುವ ಹಳೆಯ ಹಾಡಿನ ಅಜ್ಜಿ ಕುತೂಹಲದ ಮೂಟೆ ಎಂದರೂ ತಪ್ಪಿಲ್ಲ ನೋಡಿ..
ಅಜ್ಜಿ ಮುಂದುವರಿದು ಹೇಳುತ್ತಾಳೆ-

ಮೆತ್ತಿಯ ಕ್ವಾಣೆಯ ಹುಗಶಿಡ ಮಕ್ಕಳ
ಒತ್ತಿ ಬೀಗವ ಹಾಕಿದ |
ಕೃಷ್ಣ ಕೃಷ್ಣ ತೆಗೆಯೋ ಎಂದರೆ
ನಿಮ್ ಗಂಡನ ಹೆಸರೇಳೆಂದ.. |

ಮೆತ್ತಿಯ ಮೇಲೆ ಹರಗಿದ ವಸ್ತ್ರವ
ಬತ್ತಿ ಎನುತ ಸಿಗಿದ..|
ಕೃಷ್ಣ ಕೃಷ್ಣ ಯಾರ ಎಂದರೆ
ಬೆಕ್ಕೇನ ಎಂದ |

ಇಂತ ಅಷ್ಟಾವಸ್ಥೆಯ ಮಾಡುವ ಬಾಲನ
ಅತ್ತ ಕರೆಯೆ ಗೋಪಿ |
-ಅಷ್ಟೆಲ್ಲ ಕಿಲಾಡಿ, ತಂಟೆ ಮಾಡುವ ಬಾಲಕನನ್ನು ಕೃಷ್ಣ ಎಂದು ಮುದ್ದಿನಿಂದ ಕರೆಯುವ ಪರಿಯನ್ನು ಗಮನಿಸಿ. ಮಗುವನ್ನು ದೇವರಿಗೆ ಹೋಲಿಸುತ್ತ, ಹುಸಿ ಮುನಿಸಿನಿಂದ ಹಾಡನ್ನು ಹಾಡುವ ಪರಿ ಬೆರಗನ್ನು ಮೂಡಿಸುತ್ತದೆ.
ಹಾಡು ಇನ್ನೂ ಮುಂದುವರಿಯುತ್ತದೆ..

ಆಡುವ ಮಕ್ಕಳ ಅಳಿಸಬೇಡೆಂದರೆ
ಬಾಯಿಂದೇಡಿಸಿದ | (ಏಡಿಸುವುದು (ಛೇಡಿಸುವುದು) ಎನ್ನುವ ಶಬ್ದ ನೆನಪು ಮಾಡಿಕೊಳ್ಳಿ)
ಒರಗಿದ ಮಕ್ಕಳ ಎಬಸಬೇಡೆಂದರೆ
ಬಟ್ಟಲ ಬಾರಿಸಿದ |

ಇಂತ ಅಷ್ಟಾವಸ್ಥೆಯ ಮಾಡುವ ಬಾಲನ
ಅತ್ತ ಕರೆಯೆ ಗೋಪಿ |

ತಮಾಷೆಯ ಈ ಹಾಡು ಇನ್ನೂ ಮುಂದೆ ಇದೆಯೋ ಇಲ್ಲವೋ ಗೊತ್ತಿಲ್ಲ. ಅಜ್ಜಿ ಹೇಳಿದ್ದಿಷ್ಟು. ಹವ್ಯಕರ ಆಡುಮಾತಿನ ಈ ಹಾಡು ಸೆಳೆಯುತ್ತದೆ. ಗಣಪಜ್ಜಿ ಇನ್ನೊಂದು ಹಾಡನ್ನು ಹೇಳಿದ್ದಾಳೆ. ಪೌರಾಣಿಕ, ಗಂಭೀರ ಹಾಡು ಕೂಡ ಸೆಳೆಯುತ್ತದೆ. ಮಣಿಕರ್ಣಿಕೆಯ ಜನ್ಮವೃತ್ತಾಂತ ಇಲ್ಲಿದೆ.

ಅತಿಭಕ್ತಿಯಿಂದಲೇ ಲೋಪಾಮುದ್ರೆಯು ತನ್ನ
ಪತಿಗೆ ವಂದಿಸಿ ಕಾಶೀ ಕಾಂಡದೊಳು ಉನ್ನತದ ಫಲ
ಯಾವುದದು ತನಗದು ಅರುಹಬೇಕೆನುತ,
ನಸು ನಗುತ ಮನದೊಳಗೆ ಅಗಸ್ತ್ಯರು
ಸತಿಯ ನೀಕೇಳಕ ಚಿತ್ತದಿ, ಪ್ರಥ್ವಿಯಲಿ
ಮಣಿಕರ್ಣಿಕುದಿಸಿದ ಕಥೆಯ ನಿಶ್ಚರಿಪೆ |

ಜಗದೇಕ ಬ್ರಹ್ಮ ಪ್ರಳಯದೊಳು ತಾನ್
ಒಡಗೂಡಿಕೊಂಡಿರಲು ಶಕ್ತಿಯೊಳು
ತ್ರಿಜಗಾಕ್ಷ ಅವ್ಯಾಕ್ಷ ಮಹಾ ತತ್ವದೊಳು
ಪುಟ್ಟಿದವು ತ್ರಿಜಗ ವ್ಯಾಪಕ ಮಾಯದಿಂದಲಿ
ಒಲುಶಿ ವಿಶ್ವೇಶ್ವರನ, ಶ್ರೀ ಜ್ಞಾನ ಶಕ್ತಿಯೊಳ್
ಹರಿಹರ ಬ್ರಹ್ಮೇಂದ್ರ ರೂಪಿನೊಳು
ಒಲಿದು ತೋರುವನ |

ವಿಷ್ಣು ನಾಮದಲಿಹ ಜಗವನು
ಉತ್ಪತ್ಯವನು ಮಾಡೆಂದರೆ, ಸತ್ಯವೆಂಬುದು
ಮುಕ್ತಿ ಕ್ಷೇತ್ರದಿ, ಸ್ವಾಮಿ ನಡೆತರಲು,
ಛತ್ರಕೋಪವ ಧರಿಸಿ ಅಂಗದೊಳು
ವಶ್ಚರಿಸಿ ಬಹುಜಲವು ತುಂಬೇ
ಬಹು ನಿಷ್ಟೆಯಲಿ ಜಪ ತಪವ ಮಾಡಿದ
ಯೋಗ ಮಾರ್ಗದಲಿ |

ಅರಸಗೆ ಅರವತ್ತು ಸಾವಿರ
ವರುಷ ಶ್ರೀಹರಿ ತಪವ ಚರಿಸಲು
ಪರಸಿವನು ನಡೆತಂದು ಸುಳಿಯಲು
ಮೌನದಿಂದಿಳಿಯೆ, ನಗುತ ನಾಮತ್ಸಕವ
ಚರಿಸಿಯೇ ಸ್ಮರಿಸುತಲೇ ಮೂರ್ತಿಯದು
ಸೆಳೆಯಲು ಮನಸು ಚಂಚಲವಾಗೆ
ಮಾಧವರರಿತು ಪೇಳಿದರು |

ಅಖಂಡ ವಿಪ್ರಶಾಂತ ಕರೆಯಲಿ
ಅಖಂಡ ಬ್ರಹ್ಮಾಂಡವನು ವಿವರದಿ
ಇಂಬಿಟ್ಟ ಬಹು ವಿಶ್ವರೂಪಿರಿ ವಿಶ್ವ ಪ್ರಕಾಶದಿ
ಚಂದ್ರಶೇಖರರೊಲಿದು ನಿಂತಿರೆ
ಇಂದಿನಾ ತಪ ಕೈಗೂಡಿತೆನುತಲಿ
ಕೊಂಡಾಡಿ ಹರಿ ನೋಡಿದನು
ಮನದಿಷ್ಟ ತಣಿದಂತೆ |

ಮಣಿಕರ್ಣಿಕೆ ಎಂಬ ವಿಧಾನವು
ಈ ಸ್ಥಳದೊಳಗುದ್ಭವವಾಗಲೆಂದರು
ಹರನಗುತ ಮಾಧವರೊಳರುಹಿದರು
ಮಧುರ ವಾಕ್ಯವು ಚಿನ್ಮಯನೆ 
ನೀನಾಡಿದ ವಾಕ್ಯವು ಸನ್ಮತವಾಯ್ತು 
ಯನ್ನ ಮನುಸಿಗೆ ಯನ್ನ ನಿನ್ನೆಯ
ಗಂಗೆ ಗೌರಿಯ ಬೇಧದಲ್ಲಿ
ತನ್ನ ಮನಸಿಗೆ ತಾರದ ಹರುಷದಲಿ
ಒಮ್ಮೆಯಲಿ ಸದ್ಭಕ್ತ ಜನರಲಿ
ಬ್ರಹ್ಮ ಪದವಿಯಲಿ ವಾಸವಾಗಿಹ
ಎಂದ ಮಾಧವನು |

ಆಶೀವರ್ಣೆಯಲಿ ಪಂಚ ಗಂಗೆಯು
ಎಡ ಎಡೆಗೆ ಮುನ್ನೂರಮೂರು ಕೋಟಿ ತೀರ್ಥವು
ಈ ಸ್ಥಳದೊಳಗೆ ಉದ್ಭವವಾಗಲೆಂದರು
ಹರ ನಗುತ ಮಾಧವನೊಳರುಹಿದರು
ಮಧುರ ವಾಕ್ಯದಲಿ |

ವಾರಣಾಸಿಗೆ ಬಂದ ಜನರಿಗೆ
ಬೇಡಿದಾ ಇಷ್ಢಾರ್ಥ ಈವಳು
ಭಾವಿಸುತಾ ಬಂದವರಿಗೆ
ಕುಲಕೋಟಿಗಳು ಪಾವನವೇ
ಸ್ನಾನ ಪಾನವ ಮಾಡಿದವರಿಗೆ
ಸಾಯುಜ್ಯ ಮುಕ್ತಿಯ ಈವಳು
ಸೋಮಶೇಖರ ವರವ ಪಾಲಿಸ
ರೆಂದ ಮಾಧವನು |
- ಎಂದು ಹಾಡು ಮುಗಿಯುತ್ತದೆ. ಈ ಹಾಡಿನಲ್ಲಿ ಮಧುರ ವಾಕ್ಯದಲಿ ಎನ್ನುವ ಸಾಲಿನಿಂದ ಈ ಮೊದಲೆ ಬರೆದಿದ್ದೆ. ಹಳೆಯ ಕಡತಗಳನ್ನು ತಿರುವಿ ಹಾಕುತ್ತಿದ್ದಾಗ ಹಾಡು ಪೂರ್ತಿಯಾಗಿ ಸಿಕ್ಕಿತು. ಅದನ್ನಿಲ್ಲಿ ಇಟ್ಟಿದ್ದೇನೆ. ಓದಿ ಸಂತಸಪಡಿ. ಗಣಪಜ್ಜಿಯ ಹಾಡಿನ ಒಂದು ಕಂತು ಇದು. ಇನ್ನುಳಿದ ಕಂತುಗಳು ಮಿತ್ರ ಸಂಜಯನ ಬಳಿ ಇದೆ. ಅವನ್ನು ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕಾಗಲೆಲ್ಲ ನಿಮ್ಮ ಮುಂದಿಡಲಾಗುತ್ತದೆ.

Tuesday, July 22, 2014

ಬೆಂಕಿ-ಪ್ರೀತಿ

ಬೆಂಕಿ ಬದುಕಿನ ನಡುವೆ
ಸುಳಿದು ಬರುತಿದೆ ಪ್ರೀತಿ
ದಹಿಸುತಿಹ ಮನದೊಳಗೆ
ಹಸಿರು ಮೆರೆಸಿದೆ ಪ್ರೀತಿ |

ಇಂದಿನಾ ದಿನ ಕೊನೆಗೆ
ಬೆಂಕಿ ಬಾಣಲೆಯಲಿದ್ದೆ
ಹೃದಯದೊಳಗಣ ನೂರು
ಚಿಂತೆ ಬೆರೆತು ಬದುಕಿದ್ದೆ |

ಮೂಡಿ ಮೊಳೆತಿದೆ ಪ್ರೀತಿ
ಇನ್ನು ಬಿಡು ವರ್ಷಹನಿ
ಸುಡುವ ಬೆಂಕಿಯೂ ಕೂಡ
ತಂಪು ತುಂಬುವ ಬಾನಿ |

ಇಂದಿನ ದಿನ ಕಳೆಯೆ
ನಾನು ನಾನಾಗುತಿಹೆ
ಬದುಕಿನಾ ಮಾರ್ಗದಲಿ
ಪ್ರೀತಿಯಾ ತಿಳಿದಿರುವೆ |

**

(ಈ ಕವಿತೆಯನ್ನು ಬರೆದಿರುವುದು 20-11-2006ರಂದು ದಂಟಕಲ್ಲಿನಲ್ಲಿ)

Monday, July 21, 2014

ಹನಿ ಮಿನಿ ಕವಿತೆ

ಗಂಡು-ಬೆಂಡು

ಮದುವೆಯ ಮುನ್ನ

ಗಂಡು ಸಿಡಿಗುಂಡು..!
ಮದುವೆಯ ನಂತರ
ಬರಿ ಬೆಂಡು ||

ಕಷ್ಟದ ಕೆಲಸ


ಮು.ಮಂ ಸಿದ್ದರಾಮಯ್ಯರ

ವಿವಿಧ ಭಂಗಿಯ ಪೋಟೋ
ತೆಗೆದುಕೊಳ್ಳುವುದು ಬಹಳ ಕಷ್ಟ ಮಾರಾಯ್ರೆ..
ಯಾಕಂದ್ರೆ ಅವರದ್ದು ಯಾವಾಗಲೂ
ನಿದ್ದೆಯದೇ ಭಂಗಿ..!

ನೀರೋನಂತೆ..


ರೋಂ

ಹತ್ತಿ ಉರಿಯುತ್ತಿದ್ದಾಗ
ನೀರೋ
ಪಿಟೀಲು ಬಾರಿಸುತ್ತಿದ್ದನಂತೆ..|
ರಾಜ್ಯ
ಅತ್ಯಾಚಾರದಲ್ಲಿ
ಬಳಲಿ ಬೆಂಡಾಗುತ್ತಿದ್ದಾಗ
ಮು.ಮಂ ಸಿದ್ದರಾಮಯ್ಯ
ನಿದ್ದೆ ಮಾಡುತ್ತಿದ್ದಾನಂತೆ..!!

ಹೋಲಿಕೆ


ಸಿದ್ದರಾಮಯ್ಯರ

ನಿದ್ದೆ ಪುರಾಣದ ನಡುವೆ
ಕೇಜ್ರಿವಾಲ ನೆನಪಾಗುವುದು
ಫುಟ್ ಬಾಲ್ ವಿಶ್ವಕಪ್ಪಿನ
ನಡುವೆ ಕ್ರಿಕೆಟ್
ಮ್ಯಾಚ್ ನೋಡಿದಂತೆ |

ಜಾರ್ಜಾವತಾರ


ನಮ್ಮ ಗೃಹ ಸಚಿವ ಜಾರ್ಜು

ಅತ್ಯಾಚಾರ ರಾಜ್ಯದಲ್ಲಿ
ಹೆಚ್ಚಾಗುತ್ತಿದ್ದರೂ
ಕ್ಯಾಮರಾದೆದುರು
ಕೊಡುತ್ತಿದ್ದಾರೆ ಪೋಜು..||

ಬನ್ನಿ ಕನಸುಗಳೆ

ಬನ್ನಿ ಕನಸುಗಳೆ ಎದೆಯ ಗೂಡಿಗೆ
ದೂರ ತೀರದಿಂದ |
ಬೆಂದ ಎದೆಗೆ ಹಲ ತಂಪು ನೀಡಿರಿ
ಮಳೆಯ ಹನಿಗಳಿಂದ ||

ಬನ್ನಿ ಕನಸುಗಳೆ ತಂಪು ತನ್ನಿರಿ
ದಡದ ಮೋಡದಿಂದ |
ಹೊಸತು ವಿಷಯಗಳ ಹಿಡಿದು ತನ್ನಿರಿ
ಆಚೆ ದಡಗಳಿಂದ ||

ನಿಮ್ಮ ನಡೆಗಳಲಿ ಚಿಮ್ಮಿ ಬರಲಿ ಹಲ
ನಲಿವು ಗುಡಿಗಳಿಂದ |
ಹೊಸತು ಕನಸಿಗೆ ಅರ್ಥ ಹೊಮ್ಮಲಿ
ಹಲವು ಪ್ರೀತಿಯಿಂದ ||

ಬೆಮದ ಹೃದಯವು ತುಂಬಿ ಹರಸಲಿ
ಮುಗ್ಧ ಮನಸಿನಿಂದ |
ರೌದ್ರ ಬಾಳಲಿ ಪ್ರೀತಿ ತುಂಬಲಿ
ಸಕಲ ಕನಸಿನಿಂದ ||


***
( ಈ ಕವಿತೆಯನ್ನು ಬರೆದಿರುವುದು 8-4-2006ರಂದು ದಂಟಕಲ್ಲಿನಲ್ಲಿ..)