Tuesday, July 22, 2014

ಬೆಂಕಿ-ಪ್ರೀತಿ

ಬೆಂಕಿ ಬದುಕಿನ ನಡುವೆ
ಸುಳಿದು ಬರುತಿದೆ ಪ್ರೀತಿ
ದಹಿಸುತಿಹ ಮನದೊಳಗೆ
ಹಸಿರು ಮೆರೆಸಿದೆ ಪ್ರೀತಿ |

ಇಂದಿನಾ ದಿನ ಕೊನೆಗೆ
ಬೆಂಕಿ ಬಾಣಲೆಯಲಿದ್ದೆ
ಹೃದಯದೊಳಗಣ ನೂರು
ಚಿಂತೆ ಬೆರೆತು ಬದುಕಿದ್ದೆ |

ಮೂಡಿ ಮೊಳೆತಿದೆ ಪ್ರೀತಿ
ಇನ್ನು ಬಿಡು ವರ್ಷಹನಿ
ಸುಡುವ ಬೆಂಕಿಯೂ ಕೂಡ
ತಂಪು ತುಂಬುವ ಬಾನಿ |

ಇಂದಿನ ದಿನ ಕಳೆಯೆ
ನಾನು ನಾನಾಗುತಿಹೆ
ಬದುಕಿನಾ ಮಾರ್ಗದಲಿ
ಪ್ರೀತಿಯಾ ತಿಳಿದಿರುವೆ |

**

(ಈ ಕವಿತೆಯನ್ನು ಬರೆದಿರುವುದು 20-11-2006ರಂದು ದಂಟಕಲ್ಲಿನಲ್ಲಿ)

Monday, July 21, 2014

ಹನಿ ಮಿನಿ ಕವಿತೆ

ಗಂಡು-ಬೆಂಡು

ಮದುವೆಯ ಮುನ್ನ

ಗಂಡು ಸಿಡಿಗುಂಡು..!
ಮದುವೆಯ ನಂತರ
ಬರಿ ಬೆಂಡು ||

ಕಷ್ಟದ ಕೆಲಸ


ಮು.ಮಂ ಸಿದ್ದರಾಮಯ್ಯರ

ವಿವಿಧ ಭಂಗಿಯ ಪೋಟೋ
ತೆಗೆದುಕೊಳ್ಳುವುದು ಬಹಳ ಕಷ್ಟ ಮಾರಾಯ್ರೆ..
ಯಾಕಂದ್ರೆ ಅವರದ್ದು ಯಾವಾಗಲೂ
ನಿದ್ದೆಯದೇ ಭಂಗಿ..!

ನೀರೋನಂತೆ..


ರೋಂ

ಹತ್ತಿ ಉರಿಯುತ್ತಿದ್ದಾಗ
ನೀರೋ
ಪಿಟೀಲು ಬಾರಿಸುತ್ತಿದ್ದನಂತೆ..|
ರಾಜ್ಯ
ಅತ್ಯಾಚಾರದಲ್ಲಿ
ಬಳಲಿ ಬೆಂಡಾಗುತ್ತಿದ್ದಾಗ
ಮು.ಮಂ ಸಿದ್ದರಾಮಯ್ಯ
ನಿದ್ದೆ ಮಾಡುತ್ತಿದ್ದಾನಂತೆ..!!

ಹೋಲಿಕೆ


ಸಿದ್ದರಾಮಯ್ಯರ

ನಿದ್ದೆ ಪುರಾಣದ ನಡುವೆ
ಕೇಜ್ರಿವಾಲ ನೆನಪಾಗುವುದು
ಫುಟ್ ಬಾಲ್ ವಿಶ್ವಕಪ್ಪಿನ
ನಡುವೆ ಕ್ರಿಕೆಟ್
ಮ್ಯಾಚ್ ನೋಡಿದಂತೆ |

ಜಾರ್ಜಾವತಾರ


ನಮ್ಮ ಗೃಹ ಸಚಿವ ಜಾರ್ಜು

ಅತ್ಯಾಚಾರ ರಾಜ್ಯದಲ್ಲಿ
ಹೆಚ್ಚಾಗುತ್ತಿದ್ದರೂ
ಕ್ಯಾಮರಾದೆದುರು
ಕೊಡುತ್ತಿದ್ದಾರೆ ಪೋಜು..||

ಬನ್ನಿ ಕನಸುಗಳೆ

ಬನ್ನಿ ಕನಸುಗಳೆ ಎದೆಯ ಗೂಡಿಗೆ
ದೂರ ತೀರದಿಂದ |
ಬೆಂದ ಎದೆಗೆ ಹಲ ತಂಪು ನೀಡಿರಿ
ಮಳೆಯ ಹನಿಗಳಿಂದ ||

ಬನ್ನಿ ಕನಸುಗಳೆ ತಂಪು ತನ್ನಿರಿ
ದಡದ ಮೋಡದಿಂದ |
ಹೊಸತು ವಿಷಯಗಳ ಹಿಡಿದು ತನ್ನಿರಿ
ಆಚೆ ದಡಗಳಿಂದ ||

ನಿಮ್ಮ ನಡೆಗಳಲಿ ಚಿಮ್ಮಿ ಬರಲಿ ಹಲ
ನಲಿವು ಗುಡಿಗಳಿಂದ |
ಹೊಸತು ಕನಸಿಗೆ ಅರ್ಥ ಹೊಮ್ಮಲಿ
ಹಲವು ಪ್ರೀತಿಯಿಂದ ||

ಬೆಮದ ಹೃದಯವು ತುಂಬಿ ಹರಸಲಿ
ಮುಗ್ಧ ಮನಸಿನಿಂದ |
ರೌದ್ರ ಬಾಳಲಿ ಪ್ರೀತಿ ತುಂಬಲಿ
ಸಕಲ ಕನಸಿನಿಂದ ||


***
( ಈ ಕವಿತೆಯನ್ನು ಬರೆದಿರುವುದು 8-4-2006ರಂದು ದಂಟಕಲ್ಲಿನಲ್ಲಿ..)

Saturday, July 19, 2014

ಹುಡುಗಿ I HATE YOU (ಪ್ರೇಮಪತ್ರ-13)

ಪ್ರೀತಿಯ ಹುಡುಗಿ
             ಹಾಗಂತ ಕರೆಯೋಕೆ ನಂಗೆ ಇಷ್ಟವಿಲ್ಲ. ಆದ್ರೂ ನಿನ್ನ ಜೊತೆಗಿನ ಕೊನೆಯ ಬರಹದ ವ್ಯವಹಾರವೋ ಎಂಬಂತೆ ಇದನ್ನು ಬರೆಯುತ್ತಾ ಇದ್ದೇನೆ. ಹಾಗಾಗಿ ಪ್ರೀತಿಯ ಗೆಳತಿ ಎನ್ನುವ ಸಂಬೋಧನೆಯೇ ಇರಲಿ.
             ಸ್ಪಷ್ಟವಾಗಿ, ನೇರಾ ನೇರವಾಗಿ ಹೇಳೋಕೆ ನಾನು ಪ್ರಯತ್ನ ಪಡ್ತೀನಿ..ಯಾವ್ದೋ.. ಜನ್ಮದ ನಂಟು-ಗಂಟು ಎಂಬಂತೆ ಆ ದಿನ ನಿನ್ನ ಪರಿಚಯವಾಯ್ತು. ನಿಂಗದು ಗೊತ್ತೇ ಇದೆ. ಎಲ್ಲಕ್ಕಿಂತ ಮೊದಲು ನಮ್ಮ ಮನಸ್ಸುಗಳಲ್ಲಿ ಮನೆ ಮಾಡಿದ್ದು ಸ್ನೇಹ. ಇದೂ ನಿಂಗೆ ತಿಳಿದೇ ಇದೆ. ಮಾತು-ಕತೆ-ಸ್ನೇಹ ಇವುಗಳೆಲ್ಲವೂ ಪ್ರೇಮದ ಮೊದಲ ಮೆಟ್ಟಿಲಂತೆ. ಆದರೆ ಇದು ಎಲ್ಲರಲ್ಲೂ ಅರಳಲಾರದು. ಇವುಗಳಿಗೆ ತಮ್ಮದೇ ಆದ ನಿರ್ದಿಷ್ಟ ಪರೀಧಿಯಿದೆ. ಬಾವನೆಗಳ ಬಂಧ-ಹಂದರವಿದೆ. ಆದಿನ ನಾ ನಿನ್ನ love ಮಾಡ್ತೀನಿ ಅಂದಾಗ ನೀನು ಅದೇ ಕ್ಷಣ ಒಪ್ಪಿಕೊಂಡುಬಿಟ್ಟಿದ್ದೆಯಲ್ಲ ಆಗ ನನಗೆ ಖುಷಿಯಾಗುವ ಬದಲು ಅಚ್ಚರಿಯಾಗಿತ್ತು. ಇದೇನಿದು ಯೋಚಿಸಿ ಹೇಳ್ತೀ ಅಂತ್ಲೋ, ಟೈಂ ಬೇಕು ಅಂತ್ಲೋ ಹೇಳುವಲ್ಲಿ ಓಕೆ ಅಂದಳಲ್ಲ.. ಎಂದುಕೊಂಡಿದ್ದೆ. ಆ ನಂತರ ಖುಷಿಯಾಗಿತ್ತು. ಆಗಲೇ ನನ್ನ ಮನದ ಮೂಸೆಯಲ್ಲಿ ಪ್ರೇಮಕಾವ್ಯ ಅರಳಿ, ನಿನ್ನದೇ ನೆನಪು ನೆರಳಲ್ಲಿ ಬೆಳೆದು, ನನ್ನದೇ ಆದ ಕನಸಿನ ಪ್ರಶ್ನೆಗಳಿಗೆ ಉತ್ತರವಾಗಿ ಖುಷಿಯೂ ಆಗಿಬಿಟ್ಟಿತ್ತು. ಆಗಲೇ ನಾ ನಿನ್ನ ಬಳಿಗೆ
ಗೆಳತೀ, ಯಾಕ್ಹೀಗೆ
ನೀ-ನೆಂಬ ಭೃಂಗವೆದೆಯ ಗೂಡಿಗೆ
ಕಿಂಡಿ ಕೊರೆದು ನಿನ್ನ
ನೆನಪನ್ನೇ ಭದ್ರವಾಗಿಸಿದೆಯಲ್ಲಾ..
ಎಂದು ಹೇಳಿ-ಕೇಳಿ ಉಲ್ಲಸಿತಗೊಂಡಿದ್ದೆ.
                ಅದೇ ಸಮಯದಲ್ಲಿ ನೀನೂ ಖುಷಿಯಿಂದ ನನಗೆ ಪ್ರೀತಿಯ ಓಲೆಯನ್ನು ಬರೆದು ನನ್ನ ಮನದ ಇಂಚಿಂಚಿನಲ್ಲೂ ಕಾಣದ, ಕಾಣುವ-ಕಾಡುವ ಗೆಳತಿಯಾಗಿ, ಕವನವಾಗಿ, ಕನಸಾಗಿಬಿಟ್ಟಿದ್ದೆ. ನಾನು I LOVE YOU ಅಂದಾಗಲೆಲ್ಲ I To Love You ಎಂದು ನೀನು ಹೇಳುತ್ತಿದ್ದ ಮಾತುಗಳು ಇನ್ನೂ ನನ್ನ ಕಿವಿಯಲ್ಲಿ ಗುಂಯ್ ಎನ್ನುತ್ತಲೇ ಇದೆ.
                ಆ ನಟರಾಜ ಟಾಕೀಸಿನಲ್ಲಿ ನಾನು ಮತ್ತು ನಿನ್ನ ಗೆಳತಿಯರ ಗುಂಪು ಕುಳಿತು ಮುಂಗಾರು ಮಳೆ ಸಿನೆಮಾ ನೋಡಿ ಮನದಣಿಯೆ ಆನಂದಿಸಿದ್ದು, ಕಾಲೇಜಿನ ಕ್ಯಾಂಪಸ್ಸಿನಲ್ಲಿ ಯಾರಿಗೂ ಕಾಣದಂತೆ ಕಣ್ಣಿನಲ್ಲೇ ಮಾತಾಡಿಕೊಂಡಿದ್ದು, ದೋಸ್ತನೊಬ್ಬನ ಅವ್ಯಕ್ತ ಪ್ರೀತಿಗೆ ಸಪೋರ್ಟ್ ಮಾಡಿದ್ದು, ಅದು ಸಕ್ಸಸ್ ಆಗಿದ್ದು, ನಾನು ತಂದ್ಕೊಡೋ ನವಿಲುಗರಿಗಾಗಿ ನೀನು ಕಾದು ಕುಳಿತಿದ್ದು, ಎಲ್ಲಕ್ಕಿಂತ ಮಿಗಿಲಾಗಿ ನಿನ್ನ birthday ಗೆ ನನ್ನದೇ ಮೊಟ್ಟ ಮೊದಲ phone call ಬರಬೇಕು ಎಂದಿದ್ದು, ನಾನು ಪೋನ್ ಮಾಡಿ ನಿಂಗೆ ಜನ್ಮದಿನದ ಹಾರಯಿಕೆಗಳನ್ನು ತಿಳಿಸಿದ್ದು ಇವೆಲ್ಲ ನಿಂಗೆ ಮರೆತಿಲ್ಲ ಅಂದ್ಕೊಂಡಿದ್ದೀನಿ. ನಂಗಂತೂ ಇವೆಲ್ಲ ಹಸಿ ಹಸಿ ನೆನಪುಗಳು. ಕಹಿ ಕಹಿ ಡಿಪ್ಪೆಂಡಾಲ್-ಎಂ ಮಾತ್ರೆಗಳು..
               ನಿಂಗೊತ್ತು ಗೆಳತಿ ನಾನು ನಿನ್ನ ಅದೆಷ್ಟು ಹಚ್ಕೊಂಡಿದ್ದೆ ಅಂತ. ನಿನ್ನನ್ನು ಅದ್ಯಾವ ಪರಿ ಇಷ್ಟಪಟ್ಟಿದ್ದೆ ಗೊತ್ತಾ.. ಆದ್ರೆ ನಾನು ಕೇಳೋದಿಷ್ಟ.. ನೀ ಯಾಕೆ ಹೀಗ್ಮಾಡಿದೆ ಅಂತ. ನಿನ್ನನ್ನು ಬದುಕಿನ ತುಂಬ ಆರಿಸಿ, ಆವರಿಸಿ ಮನದ ಗುಡಿಯೊಳಗೆ ತುಂಬಿಟ್ಟುಕೊಂಡಿದ್ದ ನಂಗೆ ಯಾಕೆ ನೀನು ಮೋಸ ಮಾಡ್ದೆ ಅಂತ ಅಷ್ಟೇ ನಾನು ಕೇಳ್ತಿರೋ ಪ್ರಶ್ನೆ.
               ಹೇಳ್ತೀನಿ ಕೇಳು, ಈಗ್ಗೆ ವಾರಗಳ ಹಿಂದಷ್ಟೇ ಮಿತ್ರನೊಬ್ಬಾತ ಬಂದು ನೀನು ನಂಜೊತೆ ಪ್ರೀತಿಯ ನಾಟಕ ಆಡ್ತಿರೋ ವಿಷಯ ಹೇಳ್ದಾಗ ಅವನಿಗೆ ನಾನು ಹೊಡೆಯೋಕೆ ಹೋಗ್ಬಿಟ್ಟಿದ್ದೆ. ಕೊನೆಗೆ ಆತ `ನೀ ಅಂದ್ಕೊಂಡಿರೋ ಹಾಗೆ ಅವಳು ನಿನ್ನ ಪ್ರೀತಿ ಮಾಡ್ತಿಲ್ಲ ಕಣೋ ದೋಸ್ತಾ.. ಅವಳು ಬೇರೊಬ್ಬನನ್ನು ಪ್ರೀತಿಸುತ್ತಿದ್ದಾಳೆ. ಆದರೆ ನಿಂಗೆ ಮಾತ್ರ ಮೋಸ ಮಾಡ್ತಿದ್ದಾಳೆ. ನಿನ್ನೆದುರು ಮಾತ್ರ ನಾಟಕವಾಡ್ತಿದ್ದಾಳೆ. ಡಬ್ಬಲ್ ಗೇಮ್ ಆಡ್ತಾ ಇದ್ದಾಳೆ ಕಣೋ ಅಂದಾಗ ನಂಗೆ ಒಂದ್ಸಾರಿ ಅಳು ಬಂದ್ಬಿಟ್ಟಿತ್ತು.
              ನಿಂಗೊತ್ತಲ್ಲ ಹುಡುಗಿ ನಾನ್ಯಾವತ್ತೂ ನನ್ನೊಳಗಿನ ನೋವನ್ನು ಬೇರೆ ಯಾರಬಳಿಯೂ ಹೇಳೋಲ್ಲ ಅಂತ. ನನ್ನೊಳಗೆ ಸಾವಿರ ನೋವಿನ ಗೊಂಚಲು, ಗೊಂಚಲುಗಳಿದ್ದರೂ ಕೂಡ ಎಲ್ಲರ ಎದುರು ನಗ್ತಾ ನಗ್ತಾ ಇದ್ದಿರ್ತೀನಲ್ಲಾ.. ಇದು ಬಹುಶಃ ನನಗಿಂತ್ಲೂ ಹೆಚ್ಚು ನಿಂಗೇ ಗೊತ್ತಿದೆ. ಜೊತೆಗೆ ನಾನು ಇನ್ನೊಬ್ಬರ ನೋವಿಗೆ ತತ್ತಕ್ಷಣ ಮಿಡಿಯುನೆನೆಂಬ ಸತ್ಯವೂ ನಿಂಗೊತ್ತು. ಆದರೆ ಗೆಳತಿ ನಂಗೀಗ ನಿನ್ನ ಮೋಸವನ್ನು ಯಾರ ಹತ್ತಿರವಾದರೂ ಹೇಳಿಕೊಳ್ಳಬೇಕು ಅನ್ನಿಸ್ತಿದೆ. ಯಾರ ಬಳಿ ಹೇಳಿಕೊಳ್ಳಲಿ..?
             ಹುಡುಗಿ, ನೀನು ಮೋಸ ಮಾಡ್ತಿದ್ದೀಯಾ ಅನ್ನೋದು ನನಗೆ ತಿಳಿದ ತಕ್ಷಣವೇ ನಾನು ಜಾಗೃತನಾದೆ. ನನ್ನೊಳಗಿನ ಪತ್ರಕರ್ತ ಚಿಗಿತುಕೊಂಡ. ತಕ್ಷಣವೇ ನಿನ್ನ ಮೋಸಗಾರಿಕೆಯನ್ನು, ಡಬ್ಬಲ್ ಗೇಮನ್ನು ಗೊತ್ತು ಮಾಡಿಕೊಂಡೆ. ಹುಡುಗಿ, ನಾನು ನಿನ್ನ ಆ ಇನ್ನೊಬ್ಬ ಲವ್ವರ್ ಇದ್ದಾನಲ್ಲ ಅವನ ಪರಿಚಯ ಮಾಡ್ಕೊಂಡಿದ್ದೀನಿ. ಮಿಗಿಲಾಗಿ ಆತನ ರೌಡಿ ಗ್ಯಾಂಗ್ ಕೂಡ ನನಗೆ ಪರಿಚಯವಾಗಿಬಿಟ್ಟಿದೆ. ನೀನು ಮಾಡ್ತಿದ್ದ ಮೋಸದ ಪ್ರತಿಯೊಂದು ಎಳೆ ಎಳೆಯನ್ನೂ ನಾನು ತಿಳ್ಕೊಂಡುಬಿಟ್ಟಿದ್ದೀನಿ ಗೊತ್ತಾ.
            ಕಾಲೇಜಿನ ಎಂಟರೆನ್ಸ್ ಬಳಿ ನೀನು-ಅವ್ನು ಮಾತನಾಡುತ್ತಿದ್ದಾಗಲೆಲ್ಲಾದ್ರೂ ನಾನು ದೂರದಿಂದ ಬರುತ್ತಿರುವುದು ಕಂಡರೆ ಸಾಕು ನಿನ್ನ ಗೆಳತಿಯರಿಂದ ಸಿಗ್ನಲ್ ಬರುತ್ತದಲ್ಲಾ ಅದೆಲ್ಲಾ ನಂಗೆ ಗೊತ್ತಿಲ್ಲ ಅಂದ್ಕೊಂಡ್ಯಾ?
            ಹಾಂ, ನಾ ಕೊಟ್ಟಿದ್ದ ನವಿಲುಗರಿನ ಎತ್ತಿ ಬಿಸಾಡಿಬಿಟ್ಟಿದ್ದೀಯಲ್ಲಾ.. ಅದೂ ನಂಗೆ ಗೊತ್ತಿದೆ. ಜೊತೆಗೆ ಅವನು ನಿಂಗೆ ಪ್ರೆಸೆಂಟ್ ಮಾಡಿದ್ದಾನಲ್ಲ ಕಪ್ಪು ಬಣ್ಣದ ವಿಚಿತ್ರ ಲಾಕೆಟ್. ಅದನ್ನು ನೀನು ಪ್ರತೀದಿನ ಹಾಕಿಕೊಮಡು ಬರುತ್ತಿರುವುದೂ ನನಗೆ ಗೊತ್ತಿದೆ.
             ಹುಂ, ಬಿಟ್ಟು ಬಿಡು ಅಂತ ನಾನು ಹೇಳೋದಿಲ್ಲ. ಹುಡುಗೀರಿಗೆ ಅದು ಭಾಳ ಕಷ್ಟವಾಗುತ್ತದಂತೆ.. ನಾನೇ ನಿನ್ನ ಮರೆತುಬಿಡ್ತೀನಿ. ನಿನ್ನ ಮೇಲಿದ್ದ ಪ್ರೀತಿಯ ಎಲ್ಲ ಮೊಳಕೆಗಳನ್ನೂ ಕೊಂದುಕೊಂಡು ಅಲ್ಲೊಂದು ಸ್ನೇಹದ ಬಸುರಿಗಿಡವನ್ನು ನೆಟ್ಟು ಬಿಡ್ತೀನಿ.
              ಮರೆತಿದ್ದೆ ಕಣೆ ಹುಡುಗಿ, ನಿನ್ನ ಡಬ್ಬಲ್ ಗೇಮ್ ನನಗೆ ಗೊತ್ತಾದರೂ ನಾನು ಸುಮ್ಮನಿದ್ದೀನಿ ಎನ್ನುವುದು ನಿನಗೆ ಅಚ್ಚರಿ ತಂದಿರಬೇಕಲ್ಲ. ನಿನ್ನ ಮೋಸಕ್ಕೆ ಪ್ರತಿಯಾಗಿ ನಾನು ಹಾಗೆ ಮಾಡ್ತೀನಿ, ಹೀಗೆ ಮಾಡ್ತೀನಿ ಎಂದು ಹಾರಾಡಿ, ಗಲಾಟೆ ಮಾಡಿ ಜಗಳಕ್ಕೆ ಇಳಿಯುವಂತಹ ಜಾಯಮಾನದವನು ನಾನಲ್ಲ. ನನಗೆ ಅಥವಾ ನನ್ನಲ್ಲಿರುವ ಸಂಸ್ಕಾರವೇ ಬೇರೆ. ಖಂಡಿತವಾಗಿಯೂ ಸಾಪ್ಟ್ ನಾನು. ಮೋಸ ಮಾಡಿದ್ದಿಯಲ್ಲಾ ಹುಡುಗಿ, ಮತ್ಯಾರಿಗೂ ಮಾಡಬೇಡ ಎಂದು ಹೇಳಿ ಸುಮ್ಮನೆ ಬಿಟ್ಟುಬಿಡುವಂತವನು ನಾನು. ಆದರೆ ನೀನು ಹೀಗೆ ಡಬ್ಬಲ್ ಗೇಮ್ ಆಡುವ ವಿಷಯ ಅವನಿಗೆ ಗೊತ್ತಾದ್ರೆ? ಆಗ ನಿನ್ನ ಪರಿಸ್ಥಿತಿ ಏನು ಗೊತ್ತಾ? ನಂಗೆ ಗೊತ್ತಾದಂತೆ ಅವನಿಗೆ ನಿನ್ನ ಮೋಸದ ವಿಷಯ ಆದಷ್ಟು ಗೊತ್ತಾಗದೇ ಇರಲಿ, ನೀನು ಚನ್ನಾಗಿರು ಎಂಬುದಷ್ಟೇ ನನ್ನ ಮನದೊಳಗಣ ಹಾರಯಿಕೆ.
             ಹಾಂ ಗೆಳತಿ. ಇದು ಖಂಡಿತ ಫಿಟ್ಟಿಂಗ್ ಇಡುವ ಬಗೆಯಲ್ಲ. ಆದರೂ ಹೇಳುತ್ತಿದ್ದೇನೆ ಕೇಳು. ನಾ ಕಂಡಂತೆ ನಿನ್ನ ಆ ಹುಡುಗನ ಒಂದಷ್ಟು ಗುಣಗಳು ನನ್ನರಿವಿಗೆ ಬಂದಿವೆ. ಅವನ್ನು ಹೇಳದಿದ್ದರೆ ಒಂದಷ್ಟು ದಿನಗಳ ಕಾಲ ಮನಸ್ಸಿಗೆ ಆರಾಧನೆಯಾಗಿದ್ದವಳಿಗೆ ಸತ್ಯವನ್ನು ಹೇಳದೇ ಬಿಟ್ಟೆನಲ್ಲ ಎನ್ನುವ ಬಾವ ಕಾಡದಿರುವುದಿಲ್ಲ. ಅವನು `ಶಿವ'ನಂತೆ ಕಡುಕೋಪಿ ನೆನಪಿರಲಿ. ಹಾಗೆಯೇ ಒಂದೆರಡು ಚಿಕ್ಕ ಚಿಕ್ಕ ಚಟಗಳೂ ಅಕ್ಕಪಕ್ಕದಲ್ಲಿವೆ. ಆದರೆ LOVE ಅಂದ್ರೆ ಆತನಿಗೆ ಜೀವ. ನನಗೆ ಮಾಡಿದಂತೆ ಅವನಿಗೆ ಮೋಸ ಮಾಡಬೇಡ. ಅವನಿಗೆ ಮೋಸ ಮಾಡಿದರೆ ಅವನು ನನ್ನಂತೆ ಸುಮ್ಮನಿರುವ ಭೂಪನಲ್ಲ. ಹಾಗಾಗಿ ಟೇಕ್ ಕೇರ್..
             ಕೊನೆಯದಾಗಿ ಹೇಳಲು ಬಹಳಷ್ಟು ವಿಷಯಗಳಿವೆ. ನೋಡ್ಲಿಕ್ಕೆ ಚನ್ನಾಗಿಲ್ಲ ಎಂದೋ ಅಥವಾ ಕೈಯಲ್ಲಿ ದುಡ್ಡಿಲ್ಲ ಎಂದೋ.. ಅಥವಾ ಕಥೆ-ಕವನಗಳು ಬದುಕು ಕಟ್ಟಿಕೊಡುವುದಿಲ್ಲ ಎಂದೋ ನೀನು ನನ್ನ ಪ್ರೀತಿಗೆ ಮೋಸ ಮಾಡಿರಬಹುದು. ಯಾಕ್ಹೀಗೆ ಅಂತ ನಾನು ಆ ಬಗ್ಗೆ ಕೇಳುವುದಿಲ್ಲ. ಆದರೆ ಒಂದ್ಮಾತು ನೆನಪಿನಲ್ಲಿ ಇಟ್ಟುಕೊ. ಬಹುಶಃ ಅವನೂ ಕೂಡ ನನ್ನಷ್ಟು ನಿಷ್ಕ್ಮಷವಾಗಿ ನಿನ್ನನ್ನು ಪ್ರೀತಿಸಿರಲಾರ, ಪ್ರೀತಿಸಲಾರ.
             ಆರೆ ನೋಡ್ತಿರು ಗೆಳತಿ,  ನಾನು ನಿನ್ನೆದುರಿಗೆ ಹೇಗೆ ಗೆಲುವುಗಳನ್ನು ಪಡೆಯುತ್ತ ಹೋಗ್ತೀನಿ ಅಂತ. ಕೊನೆಗೊಂದಿನ ಜಗತ್ತನ್ನೇ ನನ್ನ ಮುಷ್ಟಿಯಲ್ಲಿ ಹಿಡೀತಿನಿ. ಆಗ ನಿಂಗೆ ಅಯ್ಯೋ ಇಂಥವನನ್ನು ನಾನು ಪ್ರೀತಿಸುವ ನಾಟಕ ಮಾಡಿ ತಪ್ಪು ಮಾಡಿಬಿಟ್ಟೆ. ಅನ್ನೋ ಗಿಲ್ಟು ಕಾಡುತ್ತದಲ್ಲ ಆಗ ನಂಗೆ ಸಮಾಧಾನವಾಗುತ್ತದೆ. ನನ್ನ ತೆಕ್ಕೆಯಲ್ಲಿ ಇನ್ನೊಬ್ಬಳು ಸುಖವಾಗಿರುತ್ತಾಳೆ. ನಿನ್ನ ಮನಸ್ಸು ರೋಧಿಸುತ್ತಿರುತ್ತದೆ. ಆಗಲೇ ನನಗೆ ಖುಷಿಯಾಗುತ್ತದೆ. ನಿನ್ನ ಮೋಸಕ್ಕೆ ಪ್ರತಿಕಾರ ತೆಗೆದುಕೊಂಡ ನಿಟ್ಟುಸಿರು ಹೊರಬರುತ್ತದೆ.
           ಹುಂ.. ಆದರೂ ನಂಗ್ಯಕೋ ಮುಂಗಾರು ಮಳೆಯ ಪ್ರೀತಂ ತುಂಬಾ ನೆನಪಾಗ್ತಾ ಇದ್ದಾನೆ. ಅದರಲ್ಲೂ ಆತ ಹೇಳುವ `ತಲೆನ ಪರ ಪರ ಕೆರ್ಕೊಂಡ್ಬಿಟ್ಟೆ ಕಣ್ರಿ..' ಅನ್ನೋ ಡೈಲಾಗೇ ಮತ್ತೆ ಮತ್ತೆ ನೆನಪಿಗೆ ಬರ್ತಿದೆ.
           ಹುಂ ಹೋಗ್ಲಿಬಿಡು. ಸುಮ್ನೆ ತಲೆ ತಿಂತಾ ಇದ್ದೀನೋ. ನಾನೇ ಹಾಗೆ. ವಿಪರೀತ ಬರೆಯೋನು. ಬರೀತಾ ಬರೀತಾನೆ ಏನನ್ನು ಎಲ್ಲಿ ಹೇಳಬೇಕೋ ಅದನ್ನು ಇದ್ದ ಹಾಗೆ ಹೇಳ್ದೆ ಗೊಂದಲ ಗೊಂದಲ ಮಾಡಿಕೊಂಡು ತೊಳಲಾಡಿ ಬಿಡೋನು. ಬಹುಶಃ ನಿಂಗೆ ಪ್ರಪೋಸ್ ಮಾಡುವಾಗಲೂ ಅದೆಷ್ಟು ರೀತಿ ಯಾತನೆ-ರೋಮಾಂಚನ-ಭಯಗಳನ್ನು ಅನುಭವಿಸಿದ್ದೆನೋ. ಅದೆಲ್ಲ ಈಗ ನೆನಪೇ ಆಗುತ್ತಿಲ್ಲ.
           ಹಾಂ ಹುಡುಗಿ ನಾನು ನಿನ್ನ ಗೆಳೆತನವನ್ನು ಬಿಟ್ಟು ಬಿಡೋದಿಲ್ಲ. ಯಾಕೆ ಗೊತ್ತಾ ನಿನ್ನ ಜೊತೆಗೆ ಇದ್ದು ನಿನ್ನೆದುರೇ ಗೆಲುವುಗಳನ್ನು ನಂಗೆ ದಾಖಲಿಸುತ್ತ ಹೋಗಬೇಕಿದೆ. ನೀನು ಕೇಳಹುದು `ನನ್ನನ್ನು ನೀನು ಬಿಟ್ಟು ಬಿಡ್ತೀಯಾ. ಮುಂದೆ ಇನ್ನೊಬ್ಬಗಳನ್ನು ಲವ್ ಮಾಡ್ತೀಯಾ?' ಅಂತ. `ಇಲ್ಲ ನಾನು ಇನ್ನೊಬ್ಬಳನ್ನು ಖಂಡಿತವಾಗಿಯೂ ಲವ್ ಮಾಡೋಲ್ಲ. ಬದಲಾಗಿ ಒಳ್ಳೆಯ ಜಾಬ್ ಹಿಡಿದು, ಅಪ್ಪ ಅಮ್ಮ ಆಯ್ಕೆ ಮಾಡಿದ ಹುಡುಗಿಯನ್ನು ಮದ್ವೆ ಆಗ್ತೀನಿ. you know.. arrange marrage..!!'
           ಹೋ.. ನಗ್ತಾ ಇದ್ದೀಯಾ.. ನಗು ನಗು.. ಈಗ ನಗ್ತೀಯಾ. ನಂಗೆ ಕಣ್ಣೀರು ಬಂದ್ರೆ ನಿಂಗೆ ಖುಷಿ ಅಲ್ವಾ. ಬಿಡು. ಮುಂದೆ ನಾನು ಲೈಫಿನಲ್ಲಿ ನಗ್ತಾ ನಗ್ತಾ ಇರ್ತೀನಿ. ಆಗ ನೀನು ಅಳ್ತಾ ಇರ್ತೀಯಲ್ಲಾ ಆಗ ಆಗುತ್ತೆ ನನಗೆ ಖುಷಿ.
           ಕೊನೇದಾಗಿ ಹೇಳ್ತೀನಿ, ಈ ಬಗ್ಗೆ ನನ್ನ ಬಳಿ ಸಾರಿ ಕೇಳಬೇಡ. ಈಗ ಸಾರಿ ಕೇಳುವುದರಿಂದ ಯಾವುದೇ ಉಪಯೋಗವಿಲ್ಲ. ನೀನು ನನ್ನ ಹತ್ತಿರ ಬಂದು `ಸಾರಿ ಕಣೋ ನಂದು ತಪ್ಪಾಯ್ತು. ನಾ ನಿನ್ನೇ ಪ್ರೀತಿಸುತ್ತೀನಿ, still i love you...ಅಂದ್ರೂ ನಾನು ನಿನ್ನ ಪ್ರೀತಿಸೋದಿಲ್ಲ.
            ಮತ್ತೇನಿಲ್ಲ.. ನನ್ನಿಂದಾಗಿ ನಿನ್ನ ಬದುಕಿಗೆ ಅಷ್ಟೋ ಇಷ್ಟೋ ಗಾಸಿಪ್ಪು ಸಿಕ್ಕಿರಬಹುದು. ಅಥವಾ ಅದು ನಿನ್ನನ್ನು ಘಾಸಿ ಮಾಡಿರಬಹುದು. ಅದಕ್ಕಾಗಿ ನನ್ನದು ಸಾರಿ. ಇನ್ನು ನಾನು ನಿನ್ನ ಕನಸಲ್ಲಿ ಬಂದು ಕಾಡೋದಿಲ್ಲ. ನೀನೂ ಕೂಡ ಬಂದು ಕಾಡಬೇಡ. ಒಳ್ಳೆಯದಾಗಲಿ ನಿನಗೆ
ಕೊನೆಯದಾಗಿ `I HATE YOU'

ಇಂತಿ `ನಿನ್ನವ'ನಲ್ಲದ ದೋಸ್ತ
ಚಿರಂತ್

**
(ಇದನ್ನು ಬರೆದಿದ್ದು 1-09-2007ರಂದು ದಂಟಕಲ್ಲಿನಲ್ಲಿ)

Friday, July 18, 2014

ಪ್ರೀತಿ ಹುಟ್ಟಿದಾಗ

ಪ್ರೀತಿ ಹುಟ್ಟಿದಾಗ
ಹೃದಯ ನಲಿಯಿತು
ಮಿಡಿಯ ತೊಡಗಿತು
ಜೊತೆಗೆ ಕನಸ ಕಟ್ಟಿತು |

ಪ್ರೀತಿ ಮೂಡಿದಾಗ
ಎದೆ ಹಸಿರಾಯಿತು
ಬಾವ ಹೂವಾಯಿತು
ಮನವು ಕುಣಿದಾಡಿತು |

ಪ್ರೀತಿ ಕಣ್ದೆರೆದಾಗ
ತನುವು ಕೆಂಪಾಯಿತು
ದನಿಯು ಇಂಪಾಯಿತು
ಜೊತೆಗೆ ತಂಪಾಯಿತು |

ಪ್ರೀತಿ ಜನಿಸಿದಾಗ
ಕನಸು ಕಮಡಾಯಿತು
ನೋವು ನಲಿವಾಯಿತು
ಗೆಳತಿ ನಿನ್ನ ನೆಪಾಯಿತು. |

**

(ಈ ಕವಿತೆಯನ್ನು ಬರೆದಿರುವುದು 18-12-2005ರಂದು ದಂಟಕಲ್ಲಿನಲ್ಲಿ)