Tuesday, November 27, 2012

ಸಾಂತ್ವನ


ಅಂಗಾತ ಮಲಗಿದ್ದೆ..
ಬಹುಕಾಲದಿಂದ ಕರೆಗಟ್ಟಿ
ಉಳಿದಿದ್ದವು ಕಣ್ಣೀರು...|

ಸುಮ್ಮನೆ ಮಗ್ಗುಲಾಗಿ
ಹೊರಳಿದೆ.,,
ಬಲಗಣ್ಣಿನೊಳಗೆ ಜಿನುಗಿದ ನೀರು
ಸೀದಾ ಮೂಗಿನ ಮೇಲ್ಗಡೆಯಲ್ಲಿ
ಹಾದುಹೋಗಿ
ಎಡಗಣ್ಣಿನೊಳಗೆ ಬಿದ್ದಿತು...||

ಸುಮ್ಮನೆ
ಒಮ್ಮೆ ತಂಪಾಯಿತು
ಸಾಂತ್ವನ ಹೇಳಿತು..||


(ವಿ. ಸು. : ಒಂದು ಬೇಸರಿನ ಸಂಜೆಯಲಿ ಬರೆದ ಕವಿತೆ..2-2-2009ರಂದು ದಂಟಕಲ್ಲಿನಲ್ಲಿ ಬರೆದಿದ್ದು..)

Friday, November 23, 2012

ವಾಸಂತಿ ಕೆರೆಯಲ್ಲಿ ಮುರುಕು ಮರದ ದೋಣಿಯಲ್ಲಿ...

ವಾಸಂತಿ ಕೆರೆಯಲ್ಲಿ ಮುರುಕು ಮರದ ದೋಣಿಯಲ್ಲಿ...

    ಅಲ್ಲಿ ನೀರಿನ ಮಧ್ಯ ಬಿದ್ದ ಮದರ ಒಂದು ಅಗಲವಾದ ತುಂಡು. ಎಂದೋ, ಯಾರೋ ಹಚ್ಚಿದ ಬೆಂಕಿಗೆ ಅರ್ಧಂಬರ್ಧ ಸುಟ್ಟು ಕರಕಲಾಗಿ ಉಳಿದಿದ್ದು. ಬಾಲ್ಯದ ನಮ್ಮಂತ ತುಡುಗಿನ ಹುಡುಗರಿಗೆ ಅದೇ ದೋಣಿ, ತೆಪ್ಪ, ಆಟವಾಡುವ ದೋಣಿಮನೆ ಎಲ್ಲ.
    ನಮ್ಮ ಗ್ಯಾಂಗೋ ಭಾರಿ ಇತ್ತು ಬಿಡಿ. ಎಲ್ಲರಿಗಿಂತ ಕಿರಿಯ ನಾನು. ಕಾನಲೆಯ ಗಿರೀಶಣ್ಣ, ಗುರಣ್ಣ, ಯೋಗೀಶ ಭಾವ, ಶಶಿ ಭಾವ, ಹರೆಯಕ್ಕೆ ಕಾಲಿಟ್ಟು ಗಂಭೀರತನ ಮೈಮೂಡಿದ್ದರೂ ಆಗೊಮ್ಮೆ ಈಗೊಮ್ಮೆ ಗಣಪಣ್ಣ ಭಾವನೂ ನಮ್ಮ ಪುಂಡರಪೂಟಿಗೆ ಸೈ. ನಮ್ಮ ಕಿಲಾಡಿ ತುಂಟತನಕ್ಕೆಲ್ಲ ರಾಮಚಂದ್ರಮಾವ ಕಾವಲುಗಾರ.. ಮಂತ್ರಾಕ್ಷತೆಯನ್ನು ಮನಸಾರೆ ಕೊಡುವ ಸಹೃದಯಿ.
    ಒಂದು ಬೇಸಿಗೆಯಲ್ಲಿ ನಮ್ಮ ದಂಡು ಅಜ್ಜನಮನೆಯಾದ ಬರಬಳ್ಳಿಯಲ್ಲಿ ಬೀಡು ಬಿಟ್ಟಿತ್ತು. ನಮ್ಮ ಲಿಗಾಡಿತನಕ್ಕೆ ಯಾವಾಗಲೂ ಅಲ್ಲಿ ಬೀಡು ಬಿಡುತ್ತಿದ್ದ ಮಂಗಗಳ ಗ್ಯಾಂಗು ನಾಪತ್ತೆ.. ಕಾಗೆಗಳಿಗೂ ನೆಲೆಯಿಲ್ಲದಂತಾಗಿದ್ದವು. ಒಂದು ಶುಭ ಮದ್ಯಾಹ್ನದಲ್ಲಿ ಅಜ್ಜನಮನೆಯ ಜಮೀನಿನ ಅತ್ಯಂತ ಮೇಲ್ಭಾಗಕ್ಕೆ ನಾವೆಲ್ಲ ಹೋಗಿದ್ದೆವು. ಕೆರೆ ಈಸುವುದು ನಮ್ಮ ಪರಮ ಉದ್ದೇಶವಾಗಿದ್ದರೂ ರಾಮಚಂದ್ರಮಾವನ ಕಾವಲುಗಾರಿಕೆ ನಮಗೆ ಅಡ್ಡಿಯಾಗಿತ್ತು. ಕೊನೆಗೆ ಹಾಗೂ ಹೀಗೂ ಅವನ ಕಣ್ಣು ತಪ್ಪಿಸಿ ದೋಣಿಯಾಟ ಆಡುವ ಎಂದು ಎಲ್ಲರೂ ಮರದ ತುಂಡಿನ ಮೇಲೆ ಏರಿದೆವು. ಬೆಂಡಿನಂತಹ ದೋಣಿ ನಮ್ಮೆಲ್ಲರ ಭಾರವನ್ನು ಅನಾಮತ್ತಾಗಿ ಹೊತ್ತುಕೊಂಡಿತು. ನಮ್ಮ ಭಾರಕ್ಕದು ಒಮ್ಮೆ ಅಲುಗಾಡಿತಾದರೂ ಸಾಕಷ್ಟು ಉದ್ದವಾಗಿದ್ದರಿಂದ ಮುಳುಗುವ ಭಯ ಇರಲಿಲ್ಲ.
    ಇದ್ದವರ ಪೈಕಿ ಅತ್ಯಂತ ಕಿಲಾಡಿ ಎಂದು ಜನಮಾನಸದಲ್ಲಿ ಹಸಿರಾಗಿದ್ದ ಯೋಗೀಶ ಭಾವ ಅದೆಲ್ಲಿಂದಲೋ ಒಂದು ಉದ್ದನೆಯ ಗಳವನ್ನು ಹಿಡಿದು ತಂದೇಬಿಟ್ಟ. ತಂದವನಿಗೆ ಕೈ ಸುಮ್ಮನಿರಬೇಕಲ್ಲ.. ಹುಟ್ಟುಹಾಕಲು ಪ್ರಾರಂಭಿಸಿದ. ಮರದ ತುಂಡು ನಿಧಾನವಾಗಿ ಮುಂದಕ್ಕೆ ಸಾಗಿತು. ಆಗ ನನಗೆ ಎದೆಯಲ್ಲಿ ಶುರುವಾಯಿತಲ್ಲ ನಡುಗ.. ಅದೇನೋ ಡುಕಡುಕಿ. ನನಗೆ ಆಗ ಆರೋ ಏಳೋ ವರ್ಷ ಇರಬೇಕಷ್ಟೇ. ನಮ್ಮೂರಿನ ಅಘನಾಶಿನಿ ನದಿಯಲ್ಲಿ ನೀರು ಕಡಿಮೆಯಾಗಿ ಮಳ್ಳಂಡೆ ಮುಳುಗುವಷ್ಟು ನೀರಿದ್ದಾಗ ಕಲಿತಿದ್ದ ಅಥವಾ ಕಲಿಯಲು ಪ್ರಯತ್ನಿಸಿದ್ದ ಈಜೆಂಬುದು ಮಾತ್ರ ನನ್ನ ಪಾಲಿಗಿದ್ದ ಆಸರೆಯಾಗಿತ್ತು.
    ಭಾವ ಯೋಗೀಶನಂತೂ ಕೆರೆಯ ಮಧ್ಯಕ್ಕೆ ನಮ್ಮೆಲ್ಲರನ್ನು ಕರೆದೊಯ್ದವನೇ ಮದರ ದಿಮ್ಮಿಯ ಮೇಲೆ ನಿಂತು ಚಿಟ್ಟಾಣಿಯನ್ನು ನೆನಪಿಸಿಕೊಂಡವನಂತೆ ಧಿತ್ತೋಂ ನರ್ತನ ಶುರಹಚ್ಚಿಕೊಂಡೇ ಬಿಟ್ಟ. ಇನ್ನೇನು ಮಾಡೋದಪ್ಪಾ ಅನ್ನೋ ತಲೆ ಬಿಸಿ ನಮ್ಮೆಲ್ಲರದ್ದು. ಇದೆಲ್ಲಕ್ಕಿಂತಲೂ ನಮ್ಮೆಲ್ಲರನ್ನೂ ಭಯಕ್ಕೆ ಈಡು ಮಾಡಿದ್ದೆಂದರೆ ವಾಸಂತಿ ಕೆರೆಯ ದಂತ ಕಥೆಗಳು. ಅದ್ಯಾರದ್ದೂ ಬಾಳಂತಿಯ ಬಲಿ ಪಡೆದ ವಾಸಂತಿ ಕೆರೆ ನಮಗೆ ಅದೆಷ್ಟು ಖುಷಿ ಕೊಟ್ಟಿದ್ದರೂ ಆಗಾಗ ಭಯದ ಸೆಳಕನ್ನು ಮೂಡಿಸುತ್ತಿದ್ದುದಂತೂ ಹೌದು. ನನಗಂತೂ ಅವೆಲ್ಲವೂ ಒಮ್ಮೆಲೆ ನೆನಪಾಗಿ ಅಳಲು ಪ್ರಾರಂಭಿಸಿದೆ. ನಾನು ಅಳಲು ಶುರುಮಾಡಿದರೆ ಭಾವ ಯೋಗೀಶ ತನ್ನ ನರ್ತನವನ್ನು ಹೆಚ್ಚಿಸಿಯೇ ಬಿಟ್ಟ.
    ನನಗಂತೂ ಏನು ಮಾಡುವುದೋ ತೋಚಲೇ ಇಲ್ಲ. ತಗಳಪ್ಪಾ ಜಿಗಿದೇ ಬಿಟ್ಟೆ ನೋಡಿ ನೀರಿಗೆ.. ಧಬಲ್ ಅಂತ.. ಒಮ್ಮೆಲೆ ಯೋಗೀಶನಾದಿಯಾಗಿ ಎಲ್ಲರೂ ಕಕ್ಕಾಬಿಕ್ಕಿ. ವಿನಯನ ಕಥೆ ಮುಗೀತು....
    ಸಿನಿಮಾ ಸ್ಯಾಡ್ ಎಂಡಿಂಗ್ ಅಲ್ಲ ಮಾರಾಯ್ರೇ.. ಕ್ಲೈಮ್ಯಾಕ್ಸ್ ಅಭೀ ತೋ ಬಾಕಿ ಹೈ ಮೆರೆ ದೋಸ್ತೋ.. 
    ಆ ದಿನಗಳಿಂದಲೂ ನಾನು ಕುಳ್ಳನೇ. ಈಗ 5.7 ಅಡಿ ಇದ್ದೇನೆ. ಆಗ 4-4.5 ಇದ್ದಿರಬಹುದು. ನಾನು ಜಿಗಿದೇನೋ ಜಿಗಿದೆ. ಏನು ಮಾಡಿದರೂ ಕಾಲಿಗೆ ನೆಲ ಸಿಗೋದೇ ಇಲ್ಲ. ಒಮ್ಮೆ ಕಂತಿದೆ. ಬುಳುಕ್ಕನೆ ನೀರು ಕುಡಿದೆ. ಒಂದೆರಡು ಸಾರಿ ಕೆಮ್ಮಿದೆ. ಹಣೆಬರಹಕ್ಕೆ ಹೊನೆ ಯಾರ್ರೀ.. ನಾನು ಜಿಗಿದ ಸ್ಥಳದಲ್ಲಿ ಅನಾಮತ್ತು ಏಳು ಅಡಿ ಆಳ. ಈಗಾದರೆ ಎಂತಹ ಆಳವನ್ನಾದರೂ ಈಜಬಲ್ಲೆ. ಆಗ.. ??!!
    ಒಮ್ಮೆಲೆ ಯಮಧರ್ಮರಾಜನ್ನು ನೆನೆದೆ ನೋಡಿ.. ಎಲ್ಲಿತ್ತೋ ಯಮ ಶಕ್ತಿ.. ಕೈಕಾಲನ್ನು ವಿಚಿತ್ರವಾಗಿ ಬಡಿದು, ನೀರನ್ನು ಸೀಳಿ, ಎಮ್ಮೆಗಳು ಕುಪ್ಪಳಿಸುವಂತೆ ಕುಪ್ಪಳಿಸಿ ದಡ ತಲುಪುವ ಹೊತ್ತಿಗೆ, ಎದೆಯಲ್ಲಿ ಗಿಟಾರು ನೂರು.... ಇನ್ನು ಕೈಕಾಲುಗಳ ಸ್ಥಿತಿಯಂತೂ ಬೇಡವೇ ಬೇಡ ಬಿಡಿ.. ಡಗಡಗ ಅಲ್ಲಲ್ಲ.. ಗಡಗಡ.. ಅಷ್ಟರ ಹೊತ್ತಿಗೆ ನಮ್ಮ ದಂಡನ್ನು ಹುಡುಕಿಕೊಂಡು ಬಂದಿದ್ದ ರಾಮಚಂದ್ರಮಾವನ ಕಣ್ಣಿಗೆ ನಾನು ಬಿದ್ದಿದ್ದೆ. ನೋಡಿದ ತಕ್ಷಣವೇ ನಮ್ಮ ಭಾನಗಡಿ ಗೊತ್ತಾಗಿಯೇ ಬಿಟ್ಟಿತು. ಶುರುವಾಯಿತು ನೋಡಿ.. ಪುರುಷ ಸೂಕ್ತ.. ಸಹಿತ ಮಂಗಳಾರತಿ.. ಸಾಕಪ್ಪಾ ಸಾಕು... ಕೇಳಲಾರೆ..
    ನಾನಂತೂ ಹಾಗೋ ಹೀಗೋ ಹಾರಿ ಬಂದೆ.. ಮುಂದಿನ ಕಥೆ ಕೇಳಿ ಇನ್ನೂ ಗಮ್ಮತ್ತಾಗಿದೆ. ಯೋಗೀಶ ಭಾವ ತನ್ನ ಲಿಗಾಡಿತನವನ್ನು ಇಷ್ಟಕ್ಕೆ ಎಲ್ಲಿ ಬಿಡ್ತಾನೆ ಹೇಳಿ.. ಮುಂದುವರಿದ, ಮುಂದುವರಿದ.. ಕೆರೆಯ ಮಧ್ಯ ಒಂದು ಚಿಕ್ಕ ಬಂಡೆಯಂತದ್ದು ಇತ್ತು. ವಾಸ್ತವದಲ್ಲಿ ಅದೂ ಇನ್ನೊಂದು ಮರದ ದಿಮ್ಮಿ. ಯಾವಾಗಲೋ ಕೆರೆಯಲ್ಲಿ ಬಿದ್ದು ಗಟ್ಟಿಯಾಗಿ ನಡುಗಡ್ಡೆಯಂತಾಗಿ ಹೋಗಿತ್ತು. ಅಲ್ಲಿಯವರೆಗೂ ಮುಂದುವರಿದ. ಅಲ್ಲಿ ಗಿರೀಶಣ್ಣನ ಬಳಿ ಒಂದ್ನಿಮಿಷ ಇಲ್ಲಿ ಇಳಿ ಅಂದ. ಯಂತಕ್ಕಾ ಹೇಳಿ ಕೇಳಿದ್ದಕ್ಕೆ ತಡಿ ಈಗ ಬತ್ತಿ ಎಂದು ಹೇಳಿ ವಾಪಾಸು ಬಂದುಬಿಟ್ಟ.
    ಯೋಗೀಶ ಭಾವ ವಾಪಾಸು ದಡಕ್ಕೆ ಬಂದು ನಗಲು ಪ್ರಾರಂಭಿಸಿದಾಗಲೇ ಗಿರೀಶಣ್ಣನಿಗೆ ತಾನು ಪೆಚ್ಚಾಗಿದ್ದು ಅರಿವಿಗೆ ಬಂದಿದ್ದು. ಅವನಂತೂ ಜೋರಾಗಿ ಅಳಲು ಪ್ರಾರಂಭಿಸಿದ. ಕೊನೆಗೆ ಅಲ್ಲೇ ಇದ್ದ ರಾಮಚಂದ್ರ ಮಾವ ಯೋಗೀಶನನ್ನು ಹಿಡಿದು ನಾಲ್ಕೇಟು ಬಡಿದು ಗಿರೀಶಣ್ಣನನ್ನು ಕರೆದುಕೊಂಡುಬಂದ.
    ಬಾಲ್ಯದಲ್ಲಿ ನಡೆದ ಈ ಘಟನೆ ನನ್ನ ಮನದಾಳದಲ್ಲಿ ಅಚ್ಚಳಿಯದೇ ನಿಂತಿದೆ. ಇಲ್ಲಿ ಪುಂಡರಪೂಟು ಮಾಡಿದ ನಾವೆಲ್ಲ ಇದೀಗ ಎಲ್ಲೆಲ್ಲೋ ನೆಲೆ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದೇವೆ. ನಮ್ಮೆಲ್ಲರ ಪಾಲಿಗೆ ಸ್ವಿಮ್ಮಿಂಗ್ ಫೂಲ್ ಆಗಿದ್ದ ವಾಸಂತೀಕೆರೆ ತನ್ನ ಗೂಢ ಕಥೆಗಳ ಜೊತೆಗೆ ಗೂಢವಾಗಿಯೇ ಉಳಿದು ಹೋಗಿದೆ. ಎಲ್ಲಕ್ಕಿಂತಲೂ ಮಿಗಿಲಾಗಿ ಕಾಳಿನದಿಗೆ ಕಟ್ಟಲಾಗಿರುವ ಕೊಡಸಳ್ಳಿ ಡ್ಯಾಮಿನ ನೀರು ವಾಸಂತಿ ಕೆರೆಯನ್ನು ಆಪೋಶನ ಪಡೆದುಕೊಂಡುಬಿಟ್ಟಿದೆ.
    ತಮಾಶೆಯಾಗಿದ್ದರೂ ಅನೇಕ ಜೀವನ ಅಂಶಗಳನ್ನು ಕಟ್ಟಿಕೊಟ್ಟ ಈ ಘಟನೆ ಎಂದು ಮರೆಯಲಾರದಂತದ್ದು. ಜೊತೆಗೆ ವಾಸಂತೀ ಕೆರೆಯೂ. 

(ಬಾಲ್ಯದ ಅನುಭವದ ಕಣಜದಿಂದ ಇದು ಚಿಕ್ಕ ಬರಹ ಇದು..ಸ್ವಲ್ಪ ಕುತೂಹಲ, ಸ್ವಲ್ಪ ಬಾಲಿಶ, ಸ್ವಲ್ಪ ಕಾಮಿಡಿ... ಜೊತೆಗೊಂದು ಕ್ಲೈಮ್ಯಾಕ್ಸ್.. )

Wednesday, November 21, 2012

ಮೂರು ಹಾಯ್ಕುಗಳು...


ಅವನು ನಕ್ಕು ನಕ್ಕು..
ಕಣ್ಣೀರು ಹಾಕಿಬಿಟ್ಟ|

--

ಅವನು ಬೆಳಿಗ್ಗೆ ಮೆಸೇಜು ಕಳಿಸಿದ್ದ
ಯಾಕೋ.... ರಾತ್ರಿ ಬಂದಿದೆ..||

--

ಅವನು ಕನಸು ಕಾಣುವ ರೀತಿ ಕಂಡು
ಕನಸಿಗೇ ಬೇಸರ ಬಂದುಬಿಟ್ಟಿದೆ||


ಬೆಳಕಿನೆಡೆಗೆ

ಮತ್ತೊಂದು ಕವಿತೆ...


ಬೆಳಕಿನೆಡೆಗೆ


ಯಾಕೋ ಗೊತ್ತಿಲ್ಲ..|
ಈ ಬೆಳಗು ಮುಂಜಾವಿನಲಿ
ಹಾಡು ಗುನುಗಬೇಕೆನ್ನಿಸುತ್ತಿದೆ||

ಚುಮು ಚುಮು ಚಳಿಯಲ್ಲಿ,
ಸುರಿವ ಇಬ್ಬನಿಯ ಧಾರೆಯಲ್ಲಿ,
ನಸುಕ ಮುಸುಕಲ್ಲಿ
ಕುಣಿಯಬೇಕೆನ್ನಿಸುತ್ತಿದೆ||

ಹೊನ್ನ ಬಣ್ಣದ ಸೂರ್ಯ ಕಿರಣಕ್ಕೆ
ಕೈಯ ತಾಕಿಸಿ, ಮೆರೆದು
ಮನ ಮಣಿಯಬಯಸಿದೆ||

ಸುರಿವ ಇಬ್ಬನಿಯ ಧಾರೆಯ ತಾಳಕ್ಕೆ
ತಕಪಕನೆ ಹೆಜ್ಜೆ ಹಾಕಬೇಕೆನ್ನಿಸುತ್ತಿದೆ||

ಯಾಕೋ ಗೊತ್ತಿಲ್ಲ..|
ಮನಸು ಹೊಸತಾಗುತ್ತಿದೆ..
ನಸುಕು ಹರಿಯುತ್ತಿದೆ..||


ಮನದಿ ಕತ್ತಲೆಯೋಡಿ..
ಬಾಳ ಬಾಂದಳದಲ್ಲಿ ಹೊಸ ಸೂರ್ಯ ಮೂಡಿ
ಮತ್ತೆ ಮುಂಜಾವುದಯಿಸುತ್ತಿದೆ..|


ಇದನ್ನು ಬರೆದಿದ್ದು -ದಂಟಕಲ್ಲಿನಲ್ಲಿ 7-11-2007ರಂದು

Tuesday, November 13, 2012

ನಮ್ಮೂರ ಜಲಪಾತ...

ನಮ್ಮೂರ ಜಲಪಾತ...

ನಮ್ಮೂರಲ್ಲೆ ಏನೆಲ್ಲ ಇದೆ.. ಆದರೆ ಜಲಪಾತ ಇಲ್ಲವಲ್ಲ ಅನ್ನೋ ಕೊರಗಿತ್ತು...
ಮೊನ್ನೆ ಮನೆಗೆ ಹೋದಾಗ ಹಾಗೆಯೇ ಗುಡ್ಡ ಬೆಟ್ಟ ತಿರುಗಾಡಲು ಹೋಗಿದ್ದೆ...
ಆಗ ಕಂಡಿದ್ದು ಈ ಜಲಪಾತ...

ಇದನ್ನು ಜಲಪಾತ ಎನ್ನಬಹುದೋ..ದಬದಬೆ ಎನ್ನಬಹುದೋ.. ಅಥವಾ.. ಇಳಿಜಾರಕಲಲ್ಲಿ ನೀರು ಬೀಳ್ತದೆ ಅಷ್ಟೇ ಅನ್ನಬಹುದೋ.. ನಿಮಗೆ ಬಿಟ್ಟದ್ದು..
ನಾನಂತೂ ಅದಕ್ಕೆ ಕಲ್ಯಾಣೇಶ್ವರ ಜಲಪಾತ ಉರುಫ್ ಕಲ್ಲೆ ಜಲಪಾತ ಎಂದು ಕರೆದಿದ್ದೇನೆ...
ಹೀಗೆ ಕರೆಯಲೂ ಕಾರಣ ಇದೆ ನೋಡಿ..

ಈ ಜಲಪಾತ ಇರುವುದು ನಮ್ಮೂರಿನ ಹತ್ತಿರದ ಕುಚಗುಂಡಿ ಎಂಬ ಊರಿನ ಬಳಿ..
ಈ ಊರಿನಲ್ಲಿಯೇ ಕಲ್ಯಾಣೇಶ್ವರ ದೇವಾಲಯ ಇದೆ..
ನಮ್ಮೂರಿಗರು ಈ ದೇವಸ್ಥಾನಕ್ಕೇ ನಡೆದುಕೊಳ್ಳುತ್ತಾರೆ. 
ಅದಕ್ಕೆ ಕಲ್ಯಾಣೇಶ್ವರ ದೇವಾಲಯ ಅಥವಾ ಶಾರ್ಟ್ ಆಗಿ ಕಲ್ಲೆ ಜಲಪಾತ ಎಂದು ಕರೆದಿದ್ದೇನೆ..

ಇದು ತೀರಾ ದೊಡ್ಡ ಜಲಪಾತ ಅಲ್ಲ.. ಆದ್ದರಿಂದ ಈ ಜಲಪಾತ ಅಷ್ಟು ಎತ್ತರ ಉಂಟು, ಇಷ್ಟು ಎತ್ತರ ಉಂಟು ಎಂಬ ಕಲ್ಪನೆಗಳು ಬೇಡ..15-20 ಅಡಿಗಳ ಎತ್ತರ ಇರಬಹುದು ಅಷ್ಟೇ.. ಮಳೆಗಾಲದಿಂದ ಡಿಸೆಂಬರ್ ತನಕ ನೀರು ಇರ್ತದೆ...
ಆ ಮೇಲೆ ಹಳ್ಳದಲ್ಲಿ ನೀರಿದ್ದರೆ ಮಾತ್ರ ಜಲಪಾತದ ದರ್ಶನ ಭಾಗ್ಯ ಸಾಧ್ಯ...
ಇಲ್ಲವಾದಲ್ಲಿ ಬಂದ ದಾರಿಗೆ ಸುಂಕವಿಲಲ್ಲ..

ಜಲಪಾತದ ಎದುರು ದೊಡ್ಡ ಗುಂಡಿ ಇದೆ.. ಆಳವಿಲ್ಲ. ಈಜಬಹುದು..
ಕಲ್ಲಿನ ಹಾಸು ಇಲ್ಲವಾದ ಕಾರಣ... ಮಣ್ಣು ಮಣ್ಣು.. ಆದರೆ ನೀರು ಮಾತ್ರ ಕೊರೆಯುವಷ್ಟು ತಂಪು..
ಪಿಕ್ ನಿಕ್ಕಿಗೆ ಬರಬಹುದು..
ಎದುರಿಗೆ ಗುರು ಗೌಡನ ಮನೆ ಇದೆ..
ಕುಡಿಯಲು ನೀರು ಕೊಟ್ಟಾರು..

ಬರುವ ಬಗೆ : ಶಿರಸಿಯಿಂದ ಕಾನಸೂರು, 2 ಕಿ.ಮಿ ದೂರದ ಅಡಕಳ್ಳಿ.. ಅಡಕಳ್ಳಿಯ ಭೂತನಕಟ್ಟೆಯಿಂದ ದಂಟಕಲ್ ದಾರಿಯಲ್ಲಿ 4.5 ಕಿ.ಮಿ ದೂರ ಈ ಜಲಪಾತಕ್ಕೆ. ದಂಟಕಲ್ಗೆ ಬಂದು ಕುಚಗುಂಡಿ ಊರಿನ ಕುರಿತು ಕೇಳಿದರೆ ಯಾರಾದರೂ ದಾರಿ ತೋರಿಸಿಯಾರು.. ಕುಚಗುಂಡಿಯಲ್ಲಿ ಕಲ್ಲೇ ದೇವಸ್ಥಾನವನ್ನು ಹಾದು, ಗುರು ನಾಯ್ಕನ ಮನೆ ಹತ್ತಿರ ಬರಬೇಕು.. ಮರಲಮನೆ ಬಳಿ ಇದೆ ಈ ಜಲಪಾತ...ಇದು ಒಂದು ದಾರಿ..
ಇನ್ನೊಂದು : ಶಿರಸಿಯಿಂದ ಕಾನಸೂರು.. ಕಾನಸೂರಿನಿಂದ ಬಾಳೇಸರ ರಸ್ತೆಯಲ್ಲಿ ಕೋಡ್ಸರ.. ಕೋಡ್ಸರದಿಂದ ಕುಚಗುಂಡಿ ಅಥವಾ ದಂಟಕಲ್ ರಸ್ತೆಯ ಗುಂಟ 2 ಕಿ.ಮಿ ಬಂದರೆ ಮರಲ ಮನೆ ಘಟ್ಟ ಅಥವಾ ಮರಲಮನೆ ಮುರುಕಿ ಸಿಗ್ತದೆ.. ಅದರ ಕೆಳಗೆ ಒಂದು ಹಳ್ಳ ಹರಿದು ಹೋಗ್ತದೆ.. ಅದಕ್ಕೆ ಈ ಜಲಪಾತ ಆಗಿದೆ.. ರಸ್ತೆ ಪಕ್ಕವೇ ಕಾಣ್ತದೆ..
ಸರ್ವ ಋತು ರಸ್ತೆ ಇದೆ..
ಆದರೆ ಸರ್ವ ಋತುವಿನಲ್ಲೂ ನೀರು ಇರೋದಿಲ್ಲ..

ಊರು ಚಿಕ್ಕದು.. ಮುಗ್ದ ಜನ.. ಬಂದವರು ಮಲಿನ ಮಾಡದಿದ್ದರೆ ಊರಿನವರಿಗೆ ಸಂತಸ...
ಹೊರ ಜಗತ್ತಿಗೆ ಇದರ ಬಗ್ಗೆ ಗೊತ್ತಿರಲಿಲ್ಲ.. ಈಗ ನಾನೇ ಎಲ್ಲರಿಗೆ ತಿಳಿಸ್ತಾ ಇರೋದ್ರಿಂದ..
ಅಲ್ಲಿ ಮಲಿನವಾದರೆ ನಾನೇ ಹೊಣೆಗಾರನಾಗಬೇಕಾಗುತ್ತದೆ..
ಪ್ಲಾಸ್ಟಿಕ್ ಬೇಡ..
ಸುಮ್ಮನೆ ಹೋಗಿ ಎಂಜಾಯ್ ಮಾಡ್ಕೊಂಡು ಬನ್ನಿ...
ನಿಮ್ಮ ಕುತೂಹಲ ತಣಿಕೆಗೆ ಇದೋ ಪೋಟೋ ಹಾಕಿದ್ದೇನೆ.. ಹೋಗಲಿಕ್ಕಾಗದವರು ಇಲ್ಲೇ ನೋಡಿ ಖುಷಿ ಪಡಿ..