ಈಗಿನಂತೆಯೇ ಅದೂ ಕೂಡ ಬೆಟ್ಟಗಳಿಗೆ ಬೆಂಕಿ ಬೀಳುವ ಸಮಯ. ಅಲ್ಲೆಲ್ಲೋ ಬೆಟ್ಟಕ್ಕೆ ಬೆಂಕಿ ಬಿದ್ದು ಸುಟ್ಟು ಹೋಯ್ತಂತೆ, ಇಲ್ಲೆಲ್ಲೋ ಬೆಂಕಿ ಅವಘಡ ಆಯ್ತಂತೆ ಎಂಬ ಸುದ್ದಿಗಳು ಕಿವಿಗೆ ಬೀಳುತ್ತಿದ್ದ ಸಮಯವದು. ಆಗತಾನೆ ಹುಲ್ಲು ಒಣಗಿ ನಿಂತಿತ್ತು. ಬೆಟ್ಟ-ಗುಡ್ಡಗಳಲ್ಲೆಲ್ಲ ಒಣಗಿದ ಹುಲ್ಲುಗಳು ತಮ್ಮ ನೈಸರ್ಗಿಕ ಹಸಿರು ಬಣ್ಣವನ್ನು ಕಳೆದುಕೊಂಡು ಗಾಳಿಗೆ ತೂಗಾಡುತ್ತ-ತೊನೆದಾಡುತ್ತ ನಿಂತಿದ್ದವು. ಹೀಗಾಗಿ ಬೆಂಕಿ ಅವಘಡಗಳು ಹೆಚ್ಚುತ್ತಿದ್ದವು. ಇಂತಹ ಸುದ್ದಿಗಳನ್ನೆಲ್ಲ ಕೇಳುತ್ತಲೇ ನಾಗರಾಜ ತನ್ನ ಕಪ್ಪನೆಯ ಪಲ್ಸರ್ ಬೈಕ್ ತೆಗೆದುಕೊಂಡು ಶಿರಸಿಗೆ ಹೋಗಿದ್ದ. ಶಿರಸಿಯಲ್ಲಿ ಕೆಲಸ ಮುಗಿಸುವ ವೇಳೆಗಾಗಲೇ ಬಾನಂಚಿನಲ್ಲಿ ಸೂರ್ಯ ಇಳಿದು ಕತ್ತಲು ಆವರಿಸುತ್ತಿತ್ತು.
ರಾತ್ರಿಯ ಊಟಕ್ಕೆ ಸರಿಯಾಗಿ ಮನೆಯನ್ನು ತಲುಪಿಕೊಳ್ಳಬೇಕು ಎಂದುಕೊಳ್ಳುತ್ತಲೇ ಬೈಕ್ ಹತ್ತಿದ್ದ. ಗಿಡಮಾವಿನಕಟ್ಟೆಯನ್ನು ದಾಟಿ ಯಡಳ್ಳಿ ತಲುಪಬೇಕು ಎನ್ನುವಷ್ಟರ ವೇಳೆಗೆ ಆಗಲೇ ಎಲ್ಲಿಂದಲೋ ತೀವ್ರ ಸ್ವರೂಪದ ಗಾಳಿ ಬೀಸಿತ್ತು. ಗಾಳಿ ಬೀಸಿದಂತೆಲ್ಲ ದಟ್ಟ ಕಪ್ಪನೆಯ ಮೋಡ ಬಾನನ್ನು ತುಂಬಿಕೊಂಡಿತು. ʻಅರೆ ಮಳೆ ಬರಬಹುದಾ?ʼ ಎಂದುಕೊಂಡವನು ಮಳೆ ಬರುವ ಮೊದಲು ಮನೆ ತಲುಪಬೇಕು ಎಂದುಕೊಂಡು ಗಾಡಿಯ ಎಕ್ಸಲರೇಟರ್ ತಿರುಪಿದ. ಕಾನಗೋಡು ದಾಟಿ ಕಬ್ನಳ್ಳಿ ಕತ್ರಿ ಬರುತ್ತಿದ್ದಂತೆ ಜಿಟಿ ಜಿಟಿಯಾಗಿ ಶುರು ಹಚ್ಚಿಕೊಂಡ ಮಳೆ ಧೋ ಎನ್ನಲು ಶುರುವಾಯ್ತು. ಗಾಡಿ ಓಡಿಸುತ್ತಿದ್ದ ನಾಗರಾಜ ಗಾಡಿ ನಿಲ್ಲಿಸಿ ಬಸ್ ನಿಲ್ದಾಣದ ಒಳಕ್ಕೆ ಹೋಗಬೇಕು ಎಂದುಕೊಳ್ಳುತ್ತಿದ್ದಂತೆಯೇ ʻಓಹೋ ಇದು ಕಬ್ನಳ್ಳಿ ಕತ್ರಿ.. ಕಬ್ನಳ್ಳಿ ಕತ್ರಿಯಲ್ಲಿ ಬಸ್ ಸ್ಟಾಪ್ ಇಲ್ಲ..ʼ ಎನ್ನುವುದು ನೆನಪಾಯ್ತು.. ʻತಥ್..ʼ ಎಂದು ತಲೆಕೊಡವಿ, ಮಳೆಯಲ್ಲಿಯೇ ಗಾಡಿ ಓಡಿಸಿದ.
ಅಡ್ಕಳ್ಳಿ ಕತ್ರಿ ತಲುಪುವ ವೇಳೆಗೆ ಮಳೆ ತನ್ನ ಅಬ್ಬರವನ್ನು ನಿಲ್ಲಿಸಿ ಶಾಂತವಾಗುವ ಲಕ್ಷಣ ತೋರಿಸಿತ್ತು. ಕಲ್ಮಟ್ಟಿ ಹಳ್ಳ ಹತ್ತಿರಬಂದಂತೆಲ್ಲ ಮಳೆ ಸಂಪೂರ್ಣ ನಿಂತಿತ್ತು. ಮರಗಳಿಂದ ಬೀಳುವ ಹನಿಯ ಚಿಟ ಪಟ ಮಾತ್ರ ಇತ್ತು. ಅಡ್ಕಳ್ಳಿ ತಲುಪಿದಾಗಲಂತೂ ಮಳೆಯ ಸುಳಿವೇ ಇಲ್ಲ. ಮಳೆಯೇ ಬಂದಿಲ್ಲ ಎಂಬಂತೆ ನೆಲ ಒಣಗಿಕೊಂಡಿತ್ತು. ʻಹಾಳಾದ ಮಳೆ.. ನನಗೆ ತೊಂದ್ರೆ ಕೊಡುವ ಸಲುವಾಗಿಯೇ ಬಂತು..ʼ ಎಂದು ಬೈದುಕೊಂಡು ಬೈಕ್ ವೇಗ ಹೆಚ್ಚಿಸಿದ. ನೋಡನೋಡುತ್ತಿದ್ದಂತೆಯೇ ಮಾರಿಗದ್ದೆ ಬ್ರಿಜ್ ಕಾಣಿಸಿತು. ಅಘನಾಶಿನಿ ತೀರದ ಮಾರಿಗದ್ದೆ ಹೇಳಿ-ಕೇಳಿ ತಂಪಿನ ಜಾಗ. ಮಳೆಯಲ್ಲಿ ಒದ್ದೆಯಾಗಿದ್ದ ನಾಗರಾಜನಿಗೆ ಮಾರೀಗದ್ದೆ ಬ್ರಿಜ್ ಬಳಿ ಬಂದಂತೆಲ್ಲ ಚಳಿ ಶುರುವಾಯಿತು. ನಿಧಾನವಾಗಿ ಹಲ್ಲು ಕಟಕಟಿಸಲು ಶುರುವಾಯಿತು. ಮೊದಲು ಮನೆ ತಲುಪಿಕೊಂಡರೆ ಸಾಕು ಎಂದುಕೊಂಡ. ಹಿತ್ಲಕೈ ದಾಟಿ, ಗುಡ್ಡೇತೋಟ ಕ್ರಾಸ್ ದಾಟಿ ಇನ್ನೇನು ಗೋಳಿಕಟ್ಟಾ ಶಾಲೆಯ ಬಳಿ ಬರಬೇಕು, ರಸ್ತೆ ಪಕ್ಕದಲ್ಲಿ ಬೆಂಕಿ ಕಾಣಿಸಿತು. ಯಡಳ್ಳಿಯಲ್ಲಿ ಧೋ ಮಳೆ.. ಇಲ್ಲಿ ನೋಡಿದರೆ ಮಳೆಯ ಸುಳಿವೇ ಇಲ್ಲ. ಜೊತೆಗೆ ಬೆಟ್ಟಕ್ಕೆ ಬೆಂಕಿ ಬಿದ್ದಿದೆ ಎಂದುಕೊಳ್ಳುತ್ತಲೇ ಮುಂದಕ್ಕೆ ಸಾಗುತ್ತಿದ್ದವನಿಗೆ ಚಳಿ ಇನ್ನಷ್ಟು ಜಾಸ್ತಿಯಾದಂತೆನಿಸಿತು.
ಯಾವುದಕ್ಕೂ ಇಲ್ಲಿ ಬೈಕ್ ನಿಲ್ಲಿಸಿ ಸ್ವಲ್ಪ ಹೊತ್ತು ಬೆಂಕಿಗೆ ಮೈ ಒಡ್ಡಿ, ಒದ್ದೆ ಮೈಯನ್ನು ಒಣಗಿಸಿಕೊಂಡು ಹೋಗೋಣ ಎಂದು ಬೆಂಕಿಯ ಹತ್ತಿರಕ್ಕೆ ಹೋದ. ಅಂಗಿ, ಪ್ಯಾಂಟ್ ಎಲ್ಲ ಒದ್ದೆಯಾಗಿತ್ತು. ತೊಟ್ಟಿದ್ದ ಅಂಗಿಯನ್ನು ತೆಗೆದು ಸರಿಯಾಗಿ ಹಿಂಡಿದ್ದಲ್ಲದೇ ಕೊಡವಿ ಬೆಂಕಿಗೆ ಒಡ್ಡಿದ. ಒದ್ದೆ ಮೈಗೆ ಬೆಂಕಿಯ ಧಗೆ ತಾಗಿ ಹಿತವೆನ್ನಿಸಿತು. ಬೆಟ್ಟಕ್ಕೆ ಬೆಂಕಿ ಬಿದ್ದಿದ್ದು ತನ್ನ ಪಾಲಿಗೆ ಒಳ್ಳೆಯದೇ ಆಯಿತು ಎಂದು ಖುಷಿಯಾದ. ಹಾಗೆಯೇ ನೋಡುತ್ತಿದ್ದವನಿಗೆ ಅಲ್ಲಿಯೇ ಕಟ್ಟಿಗೆ ರಾಶಿ ಕಾಣಿಸಿತು.. ಪಾಪ ಯಾರೋ ಕಟ್ಟಿಗೆ ಸಂಗ್ರಹ ಮಾಡಿಟ್ಟಿದ್ದರು. ಸಂಪೂರ್ಣ ಕಟ್ಟಿಗೆಯ ರಾಶಿಗೆ ಬೆಂಕಿ ಬಿದ್ದೋಗಿದೆ, ಕಟ್ಟಿಗೆ-ಕುಂಟೆ ಎಲ್ಲ ಧಗಧಗನೆ ಉರಿಯುತ್ತಿದೆ ಎಂದುಕೊಂಡ. ಕೈಗೊಂದು ಬಡಿಗೆ ಸಿಕ್ಕಿತು, ಆ ಕಟ್ಟಿಗೆಯ ರಾಶಿಯ ಮೇಲೆ ರಪ್ಪನೆ ಬಡಿದ. ಕಿಡಿ ಹಾರಿತು. ಕಟ್ಟಿಗೆಯ ರಾಶಿಯನ್ನು ಬಡಿಗೆಯಿಂದ ಆಕಡೆಗೊಮ್ಮೆ-ಈ ಕಡೆಗೊಮ್ಮೆ ತಿರುವಿ ಹಾಕಿದೆ. ಬಿಂಕಿಯ ಜ್ವಾಲೆ ಇನ್ನಷ್ಟು ಹೆಚ್ಚಿದಂತಾಗಿ ನಾಗರಾಜನಿಗೆ ಮತ್ತಷ್ಟು ಹಿತವೆನ್ನಿಸಿತು.
ಮೈ, ಬಟ್ಟೆ ಎಲ್ಲ ಸರಿಯಾಗಿ ಒಣಗಿದೆ ಎಂಬ ತೃಪ್ತಿ ಸಿಕ್ಕಂತೆಯೇ ಮನೆಗೆ ಹೊರಟ ನಾಗರಾಜ. ಮನೆಯನ್ನು ತಲುಪುತ್ತಿದ್ದಂತೆಯೇ ನಾಗರಾಜನಿಗೆ ಅಪ್ಪಯ್ಯ ಎದುರಾದ. ʻಎಂತದ ತಮಾ, ಮಳೆಲ್ಲಿ ನೆನಕಂಡು ಬಂದಾಂಗೆ ಕಾಣಿಸ್ತಲ..ʼ ಎಂದ. ʻಹೌದಾ.. ಸಾಯ್ಲಿ.. ಶಿರಸಿಂದ ಹೊರಡಕಿದ್ರೆ ಎಲ್ಲ ಸರಿ ಇತ್ತಾ.. ಯಡಳ್ಳಿ ಹತ್ರ ಬರಕಿದ್ರೆ ಮಳೆ ಬಂತು.. ಅಡ್ಕಳ್ಳಿ ಕತ್ರಿ ತನಕ ಮಳೆಲಿ ನೆನಕಂಡು ಬಂದೆ..ʼ ಎಂದ.
ʻಓಹೋ ಹೌದನಾ...ʼ ಎಂದು ಅಪ್ಪಯ್ಯ ಹೇಳುತ್ತಿದ್ದಂತೆಯೇ ʻಗೋಳಿಕಟ್ಟಾ ಶಾಲೆ ಹತ್ರ ಬ್ಯಾಣಕ್ಕೆ ಬೆಂಕಿ ಬಿದ್ದಾಂಗ್ ಕಾಣಸ್ತು.. ಅಲ್ಲಿ ನಿಂತಕಂಡು ಮೈ ಒಣಗಿಸಿಕೊಂಡು ಬಂದೆ..ʼ ಎಂದ ನಾಗರಾಜ..
ʻಆಂ? ಎಲ್ಲಿ? ಗೋಳಿಕಟ್ಟಾ ಶಾಲೆ ಹತ್ರ?ʼ ಅಪ್ಪಯ್ಯ ಕೇಳಿದ್ದ..
ʻಹೌದಾ.. ಯಾರದ್ದೋ ಮನೆ ಕಟ್ಟಿಗೆ ರಾಶಿಗೆ ಬೆಂಕಿ ಬಿದ್ದೋಜು..ʼ ಎಂದ
ಹೌಹಾರಿದ ಅಪ್ಪಯ್ಯ ʻಯೇ.. ಏನಂದೆ? ಮಾರಾಯ್ನೇ.. ಆ ಬೆಂಕಿಯಲ್ಲಿ ಮೈ ಕಾಯಿಸಿಕೊಂಡು ಬಂದ್ಯಾ? ಥೋ... ಮೊದಲು ಸ್ನಾನ ಮಾಡು...ʼ ಎಂದ
ʻಎಂತಕ್ಕ? ಎಂತ ಆತಾ?ʼ
ʻಮಾರಾಯ್ನೇ ಆ ಊರಲ್ಲಿ ಒಬ್ಬವ ಸತ್ತೋಜ.. ಅವ್ನ ಸುಟ್ಟಿದ್ದಾಗಿತ್ತು ಆ ಬೆಂಕಿ. ಇವತ್ತು ಮದ್ಯಾಹ್ನ ಅಷ್ಟೇ ಸುಟ್ಟಿಕ್ ಬಂದಿದ್ದು ಅದು. ನಾನೂ ಹೋಗಿದ್ದಿ.. ನೀನು ಆ ಚಿತೆಯ ಬೆಂಕಿನ ಕಾಯ್ಸಿಕೊಂಡು ಬಂದೆಯಾ?..ʼ ಎಂದು ಅಪ್ಪಯ್ಯ ಹೇಳುತ್ತಿದ್ದಂತೆಯೇ ನಾಗರಾಜನ ಬೆನ್ನಲ್ಲಿ ಛಳಕ್ ಅಂದಂತಾಯ್ತು.. ಬೆನ್ನ ಹುರಿಯ ಆಳದಲ್ಲಿ ಹುಟ್ಟಿಕೊಂಡ ಚಳಿ ನಿಧಾನವಾಗಿ ಮಯ್ಯನ್ನೆಲ್ಲ ಆವರಿಸಿತು. ಚಿತೆಯ ಬೆಂಕಿಯ ಬಿಸಿಯಂತೆ ಮೈ ಕೂಡ ಕಾವೇರತೊಡಗಿತು. ಕಣ್ಣು ಕತ್ತಲಿಟ್ಟುಕೊಂಡಂತಾಯಿತು. ನಾಗರಾಜನಿಗೆ ಮುಂದೇನಾಯಿತು ಎನ್ನುವುದೇ ಗೊತ್ತಾಗಲಿಲ್ಲ..!
(ಸತ್ಯ ಘಟನೆ ಆಧಾರಿತ)
