Tuesday, January 14, 2025

ಮಾಳ ಹಾಗೂ ಹುಲಿ


ಬರಬಳ್ಳಿಯ ಗುಡ್ಡೆಮನೆ ಹೆಸರಿಗೆ ತಕ್ಕಂತೆ ಗುಡ್ಡದ ಮೇಲ್ಭಾಗದಲ್ಲಿರುವ ಮನೆ. ಅಲ್ಲಿಂದ ಕೂಗಳತೆ ದೂರದಲ್ಲಿ ವಾಸಂತಿ ಕೆರೆ. ಅದರ ಸುತ್ತಮುತ್ತಲೆಲ್ಲ ದಟ್ಟ ಕಾನನ. ಗುಡ್ಡೆಮನೆಯ ಜಮೀನು ವಾಸಂತಿ ಕೆರೆಯ ಕೆಳಭಾಗದಲ್ಲೇ ಇತ್ತು.


ವಾಸಂತಿ ಕೆರೆಯಿಂದ ಇನ್ನೊಂದು ದಿಕ್ಕಿನಲ್ಲಿ ಕೊಂಚ ದೂರದಲ್ಲಿಯೇ ಕಬ್ಬಿನ ಗದ್ದೆ ಮಾಡಲು ವಿಶ್ವೇಶ್ವರ ಮಾವ ಮುಂದಾಗಿದ್ದ. ಕಬ್ಬಿನ ಗದ್ದೆಗಾಗಿ ಬೀಜ ಹಾಕಿ, ಸರಿಯಾಗಿ ಮಣ್ಣು ಹಾಕಿ ಬಹುತೇಕ ಕೆಲಸ ಮುಗಿಸಿದ್ದ.

ಕಬ್ಬಿನಗದ್ದೆಗೆ ಹಂದಿಗಳ ಕಾಟ ವಿಪರೀತ. ಹಂದಿಗಳ ಗ್ವಾಲೆ ಕಬ್ಬಿನ ಗದ್ದೆಗೆ ದಾಳಿ ಕೊಟ್ಟರೆ ಮುಗಿದೇ ಹೋಯ್ತು ಸಂಪೂರ್ಣ ತಿಂದು ಹಾಳು ಮಾಡಿಬಿಡುತ್ತವೆ. ಹಂದಿಗಳಿಂದ ಕಬ್ಬಿನಗದ್ದೆ ರಕ್ಷಣೆಯೇ ದೊಡ್ಡ ಕೆಲಸ. ಕಬ್ಬಿನಗದ್ದೆಯನ್ನು ಉಳಿಸಿಕೊಳ್ಳಬೇಕೆಂಬ ಕಾರಣಕ್ಕಾಗಿಯೇ ವಿಶ್ವೇಶ್ವರ ಮಾವ ಮಾಳವೊಂದನ್ನು ಕಟ್ಟಿ ಅದರ ಮೇಲೆ ರಾತ್ರಿ ಉಳಿದು ಕಬ್ಬಿನಗದ್ದೆಯನ್ನು ಕಾಯುವ ಕೆಲಸ ಮಾಡುತ್ತಿದ್ದ. ಹಂದಿಗಳು ಬಂದರೆ ಛೂ ಹಾಕಿ ಕೂಗಿ ಅವುಗಳನ್ನು ಓಡಿಸುವ ಕಾರ್ಯ ಮಾಡುತ್ತಿದ್ದ.

ಆ ಮಳೆಗಾಲಕ್ಕೂ ಪೂರ್ವದಲ್ಲಿ ಅಮ್ಮ ತನ್ನ ಮೊದಲ ಹೆರಿಗೆಗೆ ತವರಿಗೆ ಬಂದಿದ್ದಳು. ಮಳೆಗಾಲ ಅದಾಗ ತಾನೇ ಕಳೆದಿತ್ತು. ಇನ್ನೇನು ಚಳಿಯೊಡೆಯುವ ಸಮಯ. ಅಕ್ಟೋಬರ್‌ ಮೊದಲ ವಾರವಿರಬೇಕು. ಎಂದಿನಂತೆ ಲಾಟೀನು ಹಿಡಿದು ವಿಶ್ವೇಶ್ವರ ಮಾವ ಮಾಳಕ್ಕೆ ಹೋಗಿದ್ದ. ಮನೆಯಲ್ಲಿ ಅಜ್ಜಿ ಹಾಗೂ ಅಮ್ಮ ಇಬ್ಬರೇ ಉಳಿದಿದ್ದರು. ಮಾಳಕ್ಕೆ ಹೋಗುವಾಗ ಲಾಟೀನನ್ನು ಹಿಡಿದು ಹೋಗಿದ್ದ ಮಾವ ಮಾಳದ ಕೆಳಗೆ ಸಣ್ಣದಾಗಿ ಬೆಂಕಿಯನ್ನು ಹಾಕಿ, ಮಾಳವನ್ನು ಏರಿ, ಮಾಳಕ್ಕೆ ಲಾಟೀನನ್ನು ನೇತುಹಾಕಿ ಮಲಗಿದ್ದ. ಚಳಿ ತೀವ್ರವಾಗಿಯೇ ಬೀಳತೊಡಗಿತ್ತು.

ಮಧ್ಯರಾತ್ರಿ ಇದ್ದಕ್ಕಿದ್ದಂತೆ ಮಾವನಿಗೆ ಎಚ್ಚರವಾಯಿತು. ಇಡಿಯ ಮಾಳವೇ ಅಲ್ಲಾಡುತ್ತಿದ್ದ ಅನುಭವ. ಅರೇ ಭೂಮಿ ಕಂಪಿಸುತ್ತಿದೆಯೇ? ಇದೇನಾಗುತ್ತಿದೆ? ಮಾಳವೇಕೆ ಅಲ್ಲಾಡುತ್ತಿದೆ ಎಂಬ ಭಾವನೆ ಮನದಲ್ಲಿ ಮೂಡಿತ್ತು. ನಿಧಾನವಾಗಿ ಮಾಳದ ಮೇಲಿನಿಂದ ಕೆಳಕ್ಕೆ ಹಣಕಿದ. ಕೆಳಗೆ ನೋಡಿದವನೇ ಒಮ್ಮೆಲೆ ಹೌಹಾರಿದ. ಮಾಳದ ಮೇಲೆ ಕುಳಿತವನು ಒಮ್ಮೆಲೆ ಬೆವರಲಾರಂಭಿಸಿದ್ದ. ಆತನ ಜೀವ ಭಾಯಿಗೆ ಬಂದಂತಾಗಿತ್ತು. ಕೆಳಗಡೆ ಎಂಟಡಿ ಉದ್ದದ ದೈತ್ಯ ಪಟ್ಟೆಹುಲಿ ಮಾಳದ ಕಂಬಕ್ಕೆ ಶೇಡಿ ನಿಂತಿತ್ತು. ಕೆಳಗಡೆ ಸಣ್ಣದಾಗಿ ಉರಿಯುತ್ತಿದ್ದ ಬೆಂಕಿಯನ್ನೇ ನೋಡುತ್ತಿತ್ತು.

ಉದ್ದದ ಪಟ್ಟೆಹುಲಿ ನೋಡಿದ ತಕ್ಷಣ ಮಾವನ ಮಾತು ಬಂದಾಗಿತ್ತು. ಕೂಗಿಕೊಳ್ಳಲು ಯತ್ನಿಸಿದರೂ ಬಾಯಿಂದ ಧ್ವನಿಯೇ ಹೊರಬರುತ್ತಿಲ್ಲ. ಎಂಟಡಿ ಎತ್ತರದ ಹುಲಿ ಜಿಗಿದರೆ ಸಾಕು ತಾನು ಅದರ ಬಾಯಿಗೆ ಆಹಾರವಾಗಬಹುದು, ಅಥವಾ ಮಾಳದ ಕಂಬಕ್ಕೆ ಸ್ವಲ್ಪವೇ ಗಟ್ಟಿಯಾಗಿ ಶೇಡಿದರೆ ಸಾಕು ಮಾಳವೇ ಉದುರಿ ಬೀಳಬಹುದು ʻಬರಬಳ್ಳಿ ಗಣಪ ಕಾಪಾಡಪ್ಪಾ..ʼ ಎಂದು ಮನಸ್ಸಿನಲ್ಲಿ ಬೇಡಿಕೊಂಡ. ಕೊರೆಯುವ ಚಳಿಯಿದ್ದರೂ ಯಾವಾಗಲೋ ಅದು ಹಾರಿಹೋದಂತಾಗಿತ್ತು. ಮೈ-ಮನಸ್ಸುಗಳಲ್ಲೆಲ್ಲ ಭಯದ ಬೆವರು ಕಿತ್ತು ಬರುತ್ತಿತ್ತು. ಒಂದು ಸಾರಿ ಜೀವ ಉಳಿದರೆ ಸಾಕು, ಮತ್ತೆ ಕಬ್ಬಿನ ಗದ್ದೆಯೂ ಬೇಡ, ಮಾಳದ ಸಹವಾಸವೂ ಬೇಡ ಎಂದುಕೊಂಡ.

ಮನೆಯ ದಿಕ್ಕಿಗೆ ಮುಖ ಮಾಡಿ ಮಾಳದಿಂದಲೇ ನೋಡಿದವನಿಗೆ ಮಿಣುಕು ಬೆಳಕು ಕಾಣಿಸಿದಂತಾಯಿತು. ಒಮ್ಮೆ ಗಟ್ಟಿಯಾಗಿ ಕೂಗಿಬಿಡಲೇ? ಕೂಗಿದರೆ ಅಬ್ಬೆಯಾದರೂ, ತಂಗಿ ಗಂಗುವಾದರೂ ಬರಬಹುದೇ? ಎಂದುಕೊಂಡ. ತಾನು ಕೂಗಿ, ಅವರ ಇರವನ್ನು ಅರಿತ ಹುಲಿ ಅತ್ತ ಕಡೆ ಧಾವಿಸಿದರೆ? ಅಬ್ಬೆಗೆ ಸರಿಯಾಗಿ ಕಿವಿ ಕೇಳಿಸುವುದಿಲ್ಲ, ತಂಗಿ ತುಂಬಿದ ಗರ್ಭಿಣಿ. ಹುಲಿ ದಾಳಿ ಮಾಡುವುದು ಹಾಗಿರಲಿ, ಒಮ್ಮೆ ಗಟ್ಟಿಯಾಗಿ ಘರ್ಜಿಸಿ ಏನಾದರೂ ಅನಾಹುತ ಆದರೆ ಏನು ಮಾಡುವುದು ಭಗವಂತಾ? ಎಂದುಕೊಂಡ.

ಆದರೂ ಧೈರ್ಯ ಮಾಡಿ ಅಬ್ಬೆಯನ್ನೂ- ಗಂಗುವನ್ನೂ ಕರೆದ. ಮನೆಯ ಕಡೆಯಿಂದ ಮಾರುತ್ತರ ಬರಲಿಲ್ಲ. ಆದರೆ ಮಾಳದ ಕೆಳಗಿದ್ದ ಹುಲಿ ಮಾವನ ಕೂಗಿಗೆ ಗಮನ ನೀಡಿಲ್ಲದಿರುವುದು ಸಮಾಧಾನ ತಂದಿತ್ತು. ಮತ್ತೆ ಕರೆದ ಆಗಲೂ ನಿಶ್ಯಬ್ಧ. ಹುಲಿಯೂ ಆರಾಮಾಗಿ ನಿಂತಿತ್ತು. ಅದಾದ ನಂತರ ಧೈರ್ಯದಿಂದ ಕೂಗಿದ. ಆರೆಂಟು ಸಾರಿ ಕೂಗಿ ಕೂಗಿ ಕರೆದರೂ ಮನೆಯ ಕಡೆಯಿಂದ ಉತ್ತರ ಬರದೇ ಇದ್ದಾಗ ನಿಟ್ಟುಸಿರು ಬಿಟ್ಟ ವಿಶ್ವೇಶ್ವರ ಮಾವ ಹುಲಿಯಿಂದ ಪಾರಾಗುವುದು ಹೇಗೆ ಎಂದು ಆಲೋಚಿಸಲು ಶುರುಮಾಡಿದ.

ಕೈಯಲ್ಲಿ ಕುಡಗೋಲು ಇತ್ತಾದರೂ ದೈತ್ಯ ವ್ಯಾಘ್ರನ ಮೇಲೆ ದಾಳಿ ಮಾಡಿ, ಹುಲಿಯನ್ನು ಕೊಲ್ಲುವುದು ಹಾಗೂ ತಾನು ಬದುಕುವುದು ಸಾಧ್ಯವೇ? ಹುಲಿಯ ಆಯದ ಜಾಗಕ್ಕೆ ಪೆಟ್ಟು ಬೀಳಬೇಕು, ಒಂದೇ ಹೊಡೆತಕ್ಕೆ ಹುಲಿ ಸತ್ತು ಬೀಳಬೇಕು, ಅಷ್ಟಾದಾಗ ಮಾತ್ರ ತಾನು ಜೀವ ಸಹಿತ ಇರಲು ಸಾಧ್ಯ. ಹೊಡೆತ ತಪ್ಪಿದರೆ? ಹುಲಿಗೆ ಗಾಯವಾಗಿಬಿಟ್ಟರೆ? ಮುಗಿಯಿತಲ್ಲ ಕಥೆ ಎಂದುಕೊಂಡ. ಕುಡಗೋಲಿನಿಂದ ದಾಳಿ ಮಾಡುವ ಯೋಜನೆ ಕೈಬಿಟ್ಟ.

ಅಷ್ಟರಲ್ಲಿ ಆರಾಧ್ಯದೈವ ಬಲಮುರಿ ಗಣಪತಿಯೇ ದಾರಿ ತೋರಿಸಿದರೆ ಮಾಳದ ಮಾಡಿಗೆ ನೇತು ಹಾಕಿದ್ದ ಕಂದೀಲು ನೆನಪಾಯಿತು. ಮಾಳ ಅಲ್ಲಾಡಿದಂತೆಲ್ಲ ಕಂದೀಲು ಕೂಡ ಹೊಯ್ದಾಡುತ್ತಿತ್ತಾದರೂ, ಅದರಲ್ಲಿ ಸಣ್ಣದಾಗಿ ಉರಿಯುತ್ತಿದ್ದ ಬೆಳಕು ಆರಿರಲಿಲ್ಲ. ಕೂಡಲೇ ಲಾಟೀನನ್ನು ಹಿಡಿದ. ಅತ್ತ ಇತ್ತ ನೋಡಿದವನಿಗೆ ಮಾಳದ ಮಾಡಿಗೆ ಹಾಕಿದ್ದ ಮಡ್ಲು ಹೆಡ (ತೆಂಗಿನ ಟೊಂಗೆ) ಕಾಣಿಸಿತು. ಅದನ್ನು ಎಳೆದು ಬೆಂಕಿ ಕೊಟ್ಟೇ ಬಿಟ್ಟ. ಒಮ್ಮೆಲೆ ದೊಡ್ಡ ಸೂಡಿಯಷ್ಟು ದೊಡ್ಡದಾದ ಬೆಂಕಿ ಕಾಣಿಸಿಕೊಂಡಿತು. ಅದನ್ನು ಸೀದಾ ಮಾಳದ ಮೇಲೆ ಇಟ್ಟ. ಬೆಂಕಿ ಹೊತ್ತಿಕೊಂಡಂತೆಯೇ ಮತ್ತಷ್ಟು ಮಡ್ಲನ್ನು ತೆಗೆದು ಉರಿ ಜ್ವಾಲೆಯನ್ನು ದೊಡ್ಡದು ಮಾಡಿದ. ಬೆಂಕಿ ದೊಡ್ಡದಾದಂತೆಲ್ಲ ಮಾಳದ ಅಡಿಯಲ್ಲಿದ್ದ ಹುಲಿ ಬಿತ್ತು. ಎಲ್ಲೋ ಅದರ ಮೈಮೇಲೆ ಕೂಡ ಕಿಡಿ ಬಿದ್ದಿರಬೇಕು. ಸಣ್ಣದಾಗಿ ಮುಲುಕಿ ಅಲ್ಲಿಂದ ಕಾಲ್ಕಿತ್ತಿತು. ಮಾವ ನಿರಾಳನಾಗಿದ್ದ. ಆದರೆ ಬೆಂಕಿಯನ್ನು ನಂದಿಸುವ ಧೈರ್ಯ ಆತನಿಗೆ ಆಗಿರಲಿಲ್ಲ. ಮಾಳಕ್ಕೆ ಹಾಕಿದ್ದ ತೆಂಗಿನ ಗರಿ ಖಾಲಿಯಾಗುವವರೆಗೂ ಉರಿ ಒಟ್ಟುತ್ತಲೇ ಇದ್ದ.

ಮೂಡಣದಲ್ಲಿ ನೇಸರ ಮೂಡುವ ಹೊತ್ತಾಗುವ ವರೆಗೂ ಬೆಂಕಿಯನ್ನು ಹಾಕುತ್ತಲೇ ಇದ್ದ ಮಾವ. ಕಣ್ಣು ಕೆಂಪಗಾಗಿತ್ತು. ಕೂದಲು ಕೆದರಿ ಹೋಗಿತ್ತು. ಮಾಳದ ಮಾಡಿನ ತೆಂಗಿನ ಗರಿಗಳೆಲ್ಲ ಸಂಪೂರ್ಣ ಖಾಲಿಯಾಗಿತ್ತು. ಇನ್ನು ಮಾಳದ ಕಡೆಗೆ ಬರಲಾರೆ ಎಂದು ದೃಢ ನಿರ್ಧಾರ ಮಾಡಿ ಮಾಳ ಇಳಿದು ಮನೆಗೆ ಹೋಗಿ ಅಮ್ಮಕ್ಕಜ್ಜಿಗೂ ಗಂಗುವಿಗೂ ನಡೆದ ವಿಷಯವನ್ನು ಹೇಳಿದ. ಅವರಿಬ್ಬರೂ ನಡೆದಿದ್ದನ್ನು ಕೇಳಿ ನಡುಗಿ ಹೋಗಿದ್ದರು. ಸಧ್ಯ ಜೀವ ಉಳಿಯಿತಲ್ಲ ಎಂಬ ಸಮಾಧಾನ ಅವರದ್ದಾಗಿತ್ತು. ʻಮೊದ್ಲು ಮೊಠಕ್ಕೆ ಹೋಗಿ ದೇವರಿಗೆ ನಮಸ್ಕಾರ ಮಾಡಿ ಬಾ..ʼ ಅಮ್ಮಕ್ಕಜ್ಜಿ ಹೇಳಿದ್ದರು. ಮಾವ ಸ್ನಾನ ಮುಗಿಸಿ ಗಣಪನ ದೇಗುಲದ ಕಡೆಗೆ ಮುಖ ಮಾಡಿದ್ದ.