Sunday, July 2, 2023

ಪಾರು (ಕಥೆ ಭಾಗ-2 )

ಬರಬಳ್ಳಿ ಗುಡ್ಡ ಬೆಟ್ಟಗಳ ನಡುವೆ ಅರಳಿನಿಂತ ಊರು ಎನ್ನುವುದನ್ನು ಆಗಲೇ ಹೇಳಿದೆನಲ್ಲ. ವಿಶಾಲ ಜಾಗದಲ್ಲಿ 400 ರಷ್ಟು ಕುಟುಂಬಗಳು ಕೃಷಿಯನ್ನು ಪ್ರಧಾನ ಉದ್ಯೋಗವನ್ನಾಗಿ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಅಡಿಕೆ ಇವರ ಜೀವನದ ಆಧಾರವಾಗಿದ್ದರೆ, ಜಮೀನಿನಲ್ಲಿ ಬೆಳೆಯುವ ಬೃಹತ್ ಗಾತ್ರದ ತೆಂಗು ಇವರ ಬದುಕಿನ ಆಹಾರವನ್ನು ಪೂರೈಸುತ್ತಿತ್ತು.

ದೂರದಲ್ಲಿ ಕರಿಬಣ್ಣದ ಕಾಳಿ ಹರಿದು ಹೋಗುತ್ತಿತ್ತು. ಊರಿಗೂ ಕಾಳಿ ನದಿಗೂ ನಡುವೆ ವಿಶಾಲವಾದ ಗದ್ದೆ ಬಯಲಿತ್ತು. ಬೈಲುಗದ್ದೆ ಎಂದೇ ಕರೆಸಿಕೊಂಡ ಈ ಗದ್ದೆಯ ಬಯಲು ಸಾತೊಡ್ಡಿ ಹಳ್ಳದಿಂದ ಕಳಚೆಯ ತನಕವೂ ಇತ್ತು. ಇಲ್ಲಿ ಪ್ರಮುಖವಾಗಿ ಭತ್ತವನ್ನು ಬೆಳೆಯುತ್ತಿದ್ದರು.

ಗಣಪತಿ ಭಟ್ಟರು, ಚಿದಂಬರ, ನಾರಾಯಣ, ಶಂಕರ ಮುಂತಾದ ತನ್ನ ಜತೆಗಾರರ ಜೊತೆಗೆ ಈ ವಿಸ್ತಾರವಾದ ಬಯಲುಗಡ್ಡೆಯನ್ನು ದಾಟಿದರು. ಸೀದಾ ಕಾಳಿ ನದಿಯ ತೀರಕ್ಕೆ ಬಂದರು.

ಚಿಕ್ಕ ಚಿಕ್ಕ ನದಿಗಳನ್ನು ಸುಲಭವಾಗಿ ದಾಟಬಹುದು. ಆದರೆ ದೊಡ್ಡ ದೊಡ್ಡ ನದಿಗಳನ್ನು ದಾಟುವುದು ಸುಲಭವಲ್ಲ. ಆಳವಾಗಿ ಹಾಗೂ ವೇಗವಾಗಿ ಹರಿಯುವ ಈ ನದಿಯನ್ನು ದಾಟಲು ದೋಣಿಯ ಅವಲಂಬನೆ ಅತ್ಯಗತ್ಯ. ಆದರೆ ಕೆಲವು ನದಿಗಳಲ್ಲಿ ಕೆಲವು ಕಡೆ ನದಿಯ ಹರಿವು ಬೇರೆ ರೀತಿಯಲ್ಲಿರುತ್ತವೆ. ಎಲ್ಲ ಕಡೆಗಳಲ್ಲಿ ಆಳವಾಗಿ ಹರಿಯುವ ನದಿಯು ಭೌಗೋಲಿಕ ರಚನೆಗೆ ಅನುಗುಣವಾಗಿ ತನ್ನ ಅಳವನ್ನು ಕಳೆದುಕೊಂಡು ವಿಸ್ತಾರವಾಗಿ ಹರಿಯುತ್ತವೆ. ಇಂತಹ ಸ್ಥಳಗಳಲ್ಲಿ ಸೆಳವು ಕೂಡ ಕಡಿಮೆ ಇರುತ್ತದೆ. ಇಂತಹ ಜಾಗವನ್ನು ಪಾರು ಎಂದು ಕರೆಯುತ್ತಾರೆ.

ಕಾಳಿ ನದಿಯಲ್ಲಿಯೂ ಹಲವು ಕಡೆಗಳಲ್ಲಿ ನದಿಯನ್ನು ದಾಟಲು ಅನುಕೂಲವಾಗುವಂತೆ ಪಾರುಗಳಿದ್ದವು. ಶಾಟ ಶತಮಾನಗಳಿಂದ ಸ್ಥಳೀಯರು ಇಂತಹ ಪಾರುಗಳನ್ನು ದಾಟಿ ನದಿಯ ಇನ್ನೊಂದು ತೀರಕ್ಕೆ ಹೋಗುತ್ತಿದ್ದರು. ಗಣಪತಿ ಭಟ್ಟರು ಅವರ ಜತೆಗಾರರ ಜೊತೆಗೆ ನಸುಕಿನಲ್ಲಿ ಈ ಪಾರಿನ ಜಾಗಕ್ಕೆ ಬಂದರು.

ಕರಿ ಕಾಳಿಯಲ್ಲಿನ ಪಾರನ್ನು ಕೆಲವು ನಿಮಿಷಗಳ ಅಂತರದಲ್ಲಿ ದಾಟಿ ನದಿಯಾಚೆಗಿನ ಪ್ರದೇಶಕ್ಕೆ ತೆರಳಿದ್ದರು. ಭಟ್ಟರ ಬಳಗ ಇನ್ನೂ ಹೋಗುವ ದೂರ ಬಹಳಷ್ಟಿತ್ತು. ಮುಂದಿನ ಒಂದು ತಾಸುಗಳ ನಡಿಗೆಯ ಮೂಲಕ ಕೊಡಸಳ್ಳಿಯನ್ನು ಹಾದು ಹೋಗಿದ್ದರು.

ಸೂರ್ಯ ಬಾನಂಚಿನಲ್ಲಿ ಮೂಡಿ ಮೊದಲ ಕಿರಣಗಳು ಭೂಮಿಗೆ ಬೀಳುವ ವೇಳೆಗಾಗಲೇ ಗಣಪತಿ ಭಟ್ಟರ ಬಳಗ ಬೀರ್ಕೋಲ್ ತಲುಪಿಯಾಗಿತ್ತು.

``ಇಲ್ಲಿಂದಾಚೆಗೆ ಹೆಬ್ಬಗುಳಿ, ದೇವಕಾರು, ಬಾಳೆಮನೆ.. ಆಮೇಲೆ ಸೋಮವಾರ ಸಂತೆ ಬಯಲು.. ಅಲ್ಲಿಂದ ಸ್ವಲ್ಪದೂರ ಹೋದರೆ ಬಸ್ಸು ಸಿಕ್ತು.. ಆಮೇಲೆ ನೇಸರ ನೆತ್ತಿಗೇರುವ ಹೊತ್ತಿಗೆಲ್ಲ ಕಾರವಾರ ಹೋಗುಲಾಗ್ತು..'' ಎಂದು ತಮ್ಮ ತಮ್ಮಲ್ಲೇ ಮಾತಾಡಿಕೊಳ್ಳುತ್ತ ಹೊರಟವರು ತಮ್ಮೂರಿನಿಂದ ಆಗಲೇ ಹತ್ತಾರು ಕಿಲೋಮೀಟರ್ ದೂರವನ್ನು ಸವೆಸಿದ್ದರು.

ಸೋಮವಾರ ಸಂತೆಯನ್ನು ತಲುಪುವ ವೇಳೆಗಾಗಲೇ ಅಲ್ಲಿ ನಿಂತಿದ್ದ ಕೆಂಪುಬಸ್ಸು ಎರಡು ಸಾರಿ ಪೊಂ ಪೊಂ ಎಂದು ಸದ್ದು ಮಾಡಿ ಹೋರಾಡಲು ಅನುವಾಗಿತ್ತು. ತುಸು ಓಡುತ್ತಲೇ ಬಸ್ಸನ್ನೇರಿದರು.

``ವಾಪಾಸ್ ಬರಕಿದ್ರೆ ದೇವಕಾರು ಗೌಡಂದಿಕ್ಕಳ ಮನೆಗೆ ಹೋಗಿ ಬರುವ. ನಮ್ಮನೆ ಬೆಳ್ಳಿ, ಕೆಂಪಿ, ಕೆಂಚಿ, ಸರಸು ಎಲ್ಲ ಎಂತ ಮಾಡ್ತಿದ್ದು ನೋಡ್ಕಂಡು ಬರುವ'' ಎಂದು ಭಟ್ಟರು ಶಂಕರನ ಬಳಿ ಹೇಳಿದ್ದರು.

``ಗಣಪಣ್ಣ, ಗೌಡಂದಿಕ್ಕಳ ಬಳಿ ಎಷ್ಟು ದನ ಹೊಡೆದುಹಾಕಿದ್ಯೋ..'' ಶಂಕರ ಕೇಳಿದ್ದ.

``ನಿತ್ಯ ಪೂಜೆಗೆ ಎರಡು ಕಾಲ್ನಡೆ ಇಟಕಂಡು, ಬಾಕಿ ಎಲ್ಲ ದೇವಕಾರು ಬಯಲಿಗೆ ಹೊಡೆದಿಕ್ಕಿದೆ ನೋಡು'' ಭಟ್ಟರು ಉತ್ತರ ನೀಡಿದ್ದರು.

ಜಾನುವಾರುಗಳನ್ನು ಸಾಕಿ ಸಲಹುವ ನಿಟ್ಟಿನಲ್ಲಿ ಬರಬಳ್ಳಿಗೂ, ದೇವಕಾರು, ಹೆಬ್ಬಗುಳಿ ಹಾಗೂ ಕೈಗಾಕ್ಕೂ ವಿಶೇಷ ಸಂಬಂಧವಿತ್ತು. ಪ್ರತಿ ಬೇಸಿಗೆಯ ವೇಳೆಗೆ ಕೈಗಾ, ಹೆಬ್ಬಗುಳಿ ಹಾಗೂ ದೇವಕಾರಿನ ಗೌಡರು ಭುಜದ ಮೇಲೆ ದೊಡ್ಡ ಬಡಿಗೆಯನ್ನು ಕಟ್ಟಿಕೊಂಡು ಅದರ ಊದ್ದಕ್ಕೆ ವಿವಿಧ ಗಾತ್ರಗಳ ಮಡಿಕೆಯನ್ನು ತ್ತೋಗುಬಿಟ್ಟುಕೊಂಡು ಬರುತ್ತಿದ್ದರು. ಬರಬಳ್ಳಿ ಹಾಗೂ ಸುತ್ತಲಿನ ಊರುಗಳಲ್ಲಿ ಈ ಮಡಿಕೆಗಳನ್ನು ಮಾರಾಟ ಮಾಡುತ್ತಿದ್ದರು. ಅದರ ಜೊತೆಗೆ ವಿವಿಧ ಬಗೆಯ ತರಕಾರಿ, ಮೆಣಸು, ಮದ್ದುಗಳನ್ನು ಕೂಡ ತಂದು ಮಾರಾಟ ಮಾಡಿ ಕೊಂಚ ಕಾಸು ಮಾಡಿಕೊಳ್ಳುತ್ತಿದ್ದರು. 

ವಾಪಸು ಹೋಗುವಾಗ ಬರಬಳ್ಳಿಗರ ಮಲೆನಾಡು ಗಿಡ್ಡ ತಳಿಯ ರಾಸುಗಳನ್ನು ಹೊಡೆದುಕೊಂಡು ಹೋಗುತ್ತಿದ್ದರು. ಈ ದನಗಳು ಮುಂದಿನ ಆರು-ಎಂಟು ತಿಂಗಳುಗಳ ಕಾಲ ದೇವಕಾರು, ಹೆಬ್ಬಗುಳಿ, ಕೈಗಾ ಗೌಡರುಗಳ ಕೊಟ್ಟಿಗೆಯಲ್ಲಿ ಜೀವನ ಸವೆಸಬೇಕಿತ್ತು. ಅವುಗಳನ್ನು ನೋಡಿಕೊಳ್ಳುವ ಜೊತೆಗೆ ಈ ದನಗಳ ಸಂತಾನೋತ್ಪತ್ತಿ ಕಾರ್ಯ ಮಾಡಿಸಿ, ಅವುಗಳು ಕರು ಹಾಕುವ ತನಕದ ಕಾರ್ಯ ಈ ಗೌಡರದ್ದಾಗಿತ್ತು. ಇದಕ್ಕೆ ಪ್ರತಿಯಾಗಿ ಬರಬಳ್ಳಿಗರು ದುಡ್ಡು ಕೊಡುತ್ತಿದ್ದರು. ಅಲ್ಲದೆ ಗಂಡುಗರು ಹುಟ್ಟಿದರೆ ಅದನ್ನು ಉಚಿತವಾಗಿ ಗೌಡರಿಗೆ ನೀಡುತ್ತಿದ್ದರು. ಹೆಣ್ಣು ಕರು ಹಾಕಿದರೆ ವಿಶೇಷ ಬಳುವಳಿ ಕೂಡ ಸಿಗುತ್ತಿತ್ತು. ಇದರ ಜೊತೆಗೆ ಈ ಜಾನುವಾರುಗಳ ಸಗಣಿ, ಗೊಬ್ಬರಗಳು ಗೌಡರ ಪಾಲಿಗೆ ವಿಶೇಷ ಆದಾಯ ತರುತ್ತಿದ್ದವು. ತಮ್ಮ ತೋಟಕ್ಕೆ ಇವುಗಳನ್ನು ಬಳಸುವ ಜೊತೆಗೆ ಗೊಬ್ಬರ ಮಾರಾಟ ಮಾಡಿ ಆದಾಯವನ್ನು ಮಾಡಿಕೊಳ್ಳುತ್ತಿದ್ದರು.

ಇಷ್ಟಲ್ಲದೆ ಬರಬಳ್ಳಿಗರ ಎತ್ತುಗಳು, ಹೋರಿಗಳನ್ನೂ ಈ ಗೌಡರು ಸಾಕುತ್ತಿದ್ದರು. ಬೇಸಿಗೆ ವೇಳೆಗೆ ಬರಬಳ್ಳಿಗೆ ಎಡತಾಕುವ ಗೌಡರುಗಳು ಬಯಲುಗದ್ದೆಯನ್ನು ಹೂಡುವ ಕಾರ್ಯವನ್ನೂ ಕೈಗೊಳ್ಳುತ್ತಿದ್ದರು. ಹೀಗೆ ಬರಬಳ್ಳಿಗರ ಪಾಲಿಗೆ ಕೈಗಾ, ಹೆಬ್ಬಗುಳಿ, ದೇವಕಾರು ಗ್ರಾಮದ ನಿವಾಸಿಗಳು ಅನಿವಾರ್ಯವಾಗಿದ್ದರು. ಆ ಗ್ರಾಮಗಳವರಿಗೆ ಬರಬಳ್ಳಿಯವರೂ ಕೂಡ ಅಷ್ಟೇ ಅಗತ್ಯವಾಗಿದ್ದರು. ಪರಸ್ಪರ ಸಹಕಾರ ಶತ ಶತಮಾನಗಳಿಂದ ಬೆಳೆದುಬಂದಿತ್ತು.

ಗುಡ್ಡೆ ಗಣಪತಿ ಭಟ್ಟರ ಹತ್ತಾರು ಕಾಲ್ನಡೆಗಳನ್ನು ದೇವಕಾರಿನ ಗೌಡನೊಬ್ಬ ಹೊಡೆದುಕೊಂಡು ಹೋಗಿದ್ದ. ಹೀಗಾಗಿ ಭಟ್ಟರ ಮನೆಯಲ್ಲಿ ನಿತ್ಯ ಪೂಜೆಗೆ ಹಾಲು, ಹೈನಿಗಾಗಿ ಒಂದೆರಡು ಆಕಳುಗಳು ಮಾತ್ರ ಇದ್ದವು. ಭಟ್ಟರದ್ದೇ ಎಡಿಎ ಒಂದು ಎತ್ತಿನ ಜೋಡಿಯೂ ದೇವಕಾರಿನ ಬಯಲು ಸೇರಿತ್ತು. ಕಾರವಾರದಿಂದ ವಾಪಸು ಬರುವಾಗ ದೇವಕರಿಗೆ ತೆರಳಿ ತಮ್ಮ ಮನೆಯ ರಾಸುಗಳನ್ನು ನೋಡಿ ಬರಬೇಕು ಎಂದು ಭಟ್ಟರು ಅಂದುಕೊಂಡಿದ್ದರು. ಆದರೆ ಹೀಗೆ ಭಟ್ಟರು ದೇವಕರಿಗೆ ಹೋಗಿ ಬರಬೇಕು ಎಂದು ನಿಶ್ಚಯಿಸಿದ್ದೆ ಅವರ ಬದುಕಿನಲ್ಲಿ ಎಂದೂ ಮರೆಯಲಾಗದ ಅಪರೂಪದ ಘಟನೆಗೆ ಸಾಕ್ಷಿಯಾಗಲಿತ್ತು..


(ಮುಂದುವರಿಯುತ್ತದೆ..)