Monday, December 30, 2019

ಕತ್ತಲೆಕಾನು (ಕಥೆ ಭಾಗ- 2)


'ಮತ್ತೆ.. ಇನ್ನೇನು..?' ನಾನು ಕುತೂಹಲದಿಂದ ಕೇಳಿದೆ.
'ಇದು ಕತ್ತಲೆಕಾನು.. ಈ ಪ್ರದೇಶದ ಬಗ್ಗೆ ಸಾಕಷ್ಟು ಊಹಾಪೋಹಗಳಿವೆ. ಕತ್ತಲೆಕಾನು ಘಟ್ಟ ಹೆದರಿಸ್ತದೆ.. ಪ್ರಯಾಣಿಕರನ್ನ ಭೀತಿಗೆ ಒಡ್ಡುತ್ತವೆ. ಒಬ್ಬೊಬ್ಬರೇ ಹೋಗುವವರನ್ನ ಕತ್ತಲೆಕಾನಿನ ದೆವ್ವಗಳು ಅಡ್ಡಗಟ್ಟುತ್ತವೆ, ಕೈಹಿಡಿದು ಕಾಡಿನೊಳಕ್ಕೆ ಕರೆದೊಯ್ದುಬಿಡುತ್ತವೆ.. ಎಂಬ ಮಾತುಗಳಿವೆ..' ಎಂದರು..
'ಹ.. ಹ.. ನಾನು‌ ಇಂತದ್ದನ್ನ ನಂಬೋದಿಲ್ಲ ಬಿಡಿ..' ಎಂದೆ.
'ನಿಮಗೆ ಗೊತ್ತಿಲ್ಲ ಕತ್ತಲೆಕಾನಿನ ಕರಾಮತ್ತು. ಇಲ್ಲಿ ಬಹಳಷ್ಟು ವಿಚಿತ್ರ ಘಟನೆಗಳು ನಡೆದಿವೆ. ಯಾವುದೋ ಗಾಡಿಯವರು ಈ ಕಾರಣದಿಂದಲೇ ಬಿದ್ದು ಸತ್ತಿದ್ದೂ ಇದೆ. ಇನ್ನೂ ಹಲವರು ದೆವ್ವದ ಕಾಟದಿಂದ ಹೆದರಿ ವಾರಗಟ್ಟಲೆ ಕಾಲ ಚಳಿ ಜ್ವರದಿಂದ ಮಲಗಿದ್ದೂ ಇದೆ.. ಮತಿಭ್ರಮಣೆಗೆ ಒಳಗಾದವರೂ ಇದ್ದಾರೆ.. ಹೀಗಾಗಿ ಹೇಳ್ತಿದ್ದೇನೆ. ನಿಮ್ಮ ಒಳ್ಳೇದಕ್ಕೆ. ಸಾಧ್ಯವಾದಷ್ಟೂ ಈ ರಾತ್ರಿಯ ಪ್ರಯಾಣವನ್ನ ನಿಲ್ಲಿಸಿ.. ' ಎಂದರು.
'ನನಗೆ ಹೋಗಲೇಕು.. ಬಹಳ ಅನಿವಾರ್ಯತೆ ಇದೆ..' ಎಂದು ಅಲವತ್ತುಕೊಂಡೆ. ಕೊನೆಗೆ ಅವರೇ ಸಲಹೆ ನೀಡಿದರು, ' ಇವರೇ.., ನೀವು ಒಂದು ಕೆಲಸ ಮಾಡಿ ಈಗ ಹೋಗುವಾಗ ಒಬ್ಬರೇ ಹೋಗಬೇಡಿ. ಯಾರಾದರೂ ಸಿಗುತ್ತಾರೋ ನೋಡಿ. ಅದಿಲ್ಲವಾದರೆ ಯಾವುದಾದರೂ ಗಾಡಿ, ಬಸ್ಸು, ಲಾರಿ ಬಂದರೆ ಅದರ ಜತೆಗೇ ಹೋಗಿ. ಆವಾಗ ನೀವು ಒಬ್ಬಂಟಿಯಾಗಿ ಇರುವುದಿಲ್ಲ. ನಿಮ್ಮ ಜತೆ ಆ ವಾಹನ ಇರುವ ಕಾರಣ ಯಾವುದೇ ಆತಂಕವೂ ಇರುವುದಿಲ್ಲ.. ಸುರಳೀತವಾಗಿ ನೀವು ಸಾಗರ ತಲುಪಬಹುದು..' ಎಂದರು. ಅವರ ಸಲಹೆ ನನಗೆ ಒಪ್ಪಿಗೆಯಾಯಿತು. ಅವರಿಗೆ ಬಿಲ್ ಕೊಟ್ಟು, ರಸ್ತೆಗೆ ಬಂದು ಯಾವುದಾದರೂ ವಾಹನ ಬರಬಹುದು ಎಂದು ಕಾಯುತ್ತ ನಿಂತೆ. ಕೆಲ ಕಾಲ ಕಳೆದರೂ ಯಾವುದೇ ಗಾಡಿ ಬರಲಿಲ್ಲ.
ಕೊನೆಗೆ ಅದೆ ಹೊಟೆಲ್ ನ ಯಜಮಾನರು ಬಳಿ ಬಂದು ' ಒಂದು ಕೆಲಸ ಮಾಡಿ, ಇಲ್ಲಿಂದ ಸ್ವಲ್ಪ ದೂರ ಹೋದ ಮೇಲೆ ಗೇರುಸೊಪ್ಪಾ ಅಣೆಕಟ್ಟೆ ಕಾಣಿಸ್ತದೆ. ಅಲ್ಲಿಂದ ಸಾಗರ ಕಡೆಗೆ ವಾಹನಗಳು ಓಡಾಡುತ್ತಿರುತ್ತವೆ. ಅಲ್ಲಿಗೆ ಹೋದರೆ ನಿಮಗೆ ಅನುಕೂಲ ಆಗಬಹುದು ನೋಡಿ..' ಎಂದರು. ಅವರ ಸಲಹೆಯಂತೆ ನಾನು ಹೆದ್ದಾರಿಯಿಂದ ಗೇರುಸೊಪ್ಪಾ ಅಣೆಕಟ್ಟು ಕಾಣುವ ಸ್ಥಳದ ಕಡೆಗೆ ತೆರಳಿದೆ.
ಗೇರುಸೊಪ್ಪಾದಿಂದ ಅಣೆಕಟ್ಟೆಗೆ ಒಂದೆರಡು ಕಿಲೋಮೀಟರ್ ದೂರ. ನಾನು ಬಾಹುಬಲಿಯನ್ನೇರಿ ಅಲ್ಲಿಗೆ ತೆರಳಿದರೂ ಯಾವುದೇ ವಾಹನ ಬರಲಿಲ್ಲ. ಕೊನೆಗೆ ಗೇರುಸೊಪ್ಪೆ ಅಣೆಕಟ್ಟೆ ಎದುರು ಕೆಲ ಕಾಲ ನಿಂತೆ. ಆಗಲೂ ಯಾವುದೇ ವಾಹನ ಆ ರಸ್ತೆಗುಂಟ ಬರಲಿಲ್ಲ. ನನಗೋ ಸಮಯ ಸುಮ್ಮನೇ ಕಳೆದು ಹೋಗುತ್ತಿದೆಯಲ್ಲ ಎನ್ನಿಸಿದರೂ, ಆ ಹೊಟೆಲ್ ನ ಯಜಮಾನರು ಹೇಳಿದ ಮಾತುಗಳು ಕಿವಿಯಲ್ಲಿ ಗುಂಯೆನ್ನುತ್ತಿದ್ದವು.
ಕೊನೆಗೂ ಯಾವುದೇ ವಾಹನ ಬರಲಿಲ್ಲ. ನಾನು ಆದದ್ದಾಗಲಿ ಎಂದುಕೊಂಡು ಬಾಹುಬಲಿಯ ಕಿವಿ ಹಿಂಡಿ ನಿಧಾನವಾಗಿ ಮುಂದಕ್ಕೆ ಹೊರಟೆ.. ಕೆಲ ಹೊತ್ತಿನಲ್ಲಿಯೇ ಕತ್ತಲೆಕಾನು ಘಟ್ಟ ನನ್ನನ್ನು ಸ್ವಾಗತಿಸಿತು.
ಕಡುಗತ್ತಲೆಯ ನಡುವೆ ಏರು ಹಾದಿಯಲ್ಲಿ ನಾನು ನನ್ನ ಬಾಹುಬಲಿಯನ್ನೇರಿ ನಿಧಾನವಾಗಿ ಸಾಗುತ್ತಲೇ ಇದ್ದೆ. ರಸ್ತೆಯ ಇಕ್ಕೆಲಗಳಲ್ಲಿಯೂ ಇದ್ದ ದಟ್ಟ ಕಾಡು, ನೀರವ ಮೌನ ನನ್ನ ಮನದಾಳದಲ್ಲಿ ಭೀತಿಯ ಕಿರು ತೆರೆಯನ್ನು ಎಬ್ಬಿಸಿತು. ಆ ಮೂಲೆಯಲ್ಲಿ ಯಾವುದಾದರೂ ದೆವ್ವ ನನ್ನನ್ನ ಅಡ್ಡಗಟ್ಟಬಹುದಾ?, ಅದೋ ಆ ದೊಡ್ಡ ಮರದ ಪಕ್ಕದಿಂದ ಯಾವುದಾದರೂ ಕಾಳಿಂಗ ಸರ್ಪ ಧುತ್ತೆಂದು‌ ನನ್ನನ್ನು ತಡೆದು ನಿಲ್ಲಿಸಬಹುದಾ? ಅಗೋ ಅಲ್ಲಿ ಏನೋ ಬೆಳಕು ಕಂಡಂತಾಗುತ್ತದೆಯಲ್ಲ.. ಎಂದುಕೊಳ್ಳುತ್ತಲೇ ನಿಧಾನಕ್ಕೆ ಹೋಗುತ್ತಿದ್ದೆ. ರಸ್ತೆಯ ಪಕ್ಕದ ಮರಗಳ ಮೇಲೆ, ಬಳ್ಳಿಗಳ ಮೇಲೆ ಬಾಹುಬಲಿಯಿಂದ ಚಿಮ್ಮಿದ ಬೆಳಕು‌ ಬಿದ್ದು ತರಹೇವಾರಿ ಆಕೃತಿಯನ್ನು ಮೂಡಿಸುತ್ತಿತ್ತು. ಕಿರುಗಣ್ಣಿನಲ್ಲಿ, ವಾರೆಗಣ್ಣಿನಲ್ಲಿ ಅವನ್ನ ನೋಡುತ್ತ, ನೋಡಿಯೂ ನೋಡದಿದ್ದವನಂತೆ ನಟಿಸುತ್ತ ಮುಂದಕ್ಕೆ ಹೋದೆ.
ಕೆಲ ಹೊತ್ತಿನ ನಂತರ ನನ್ನ ಹಿಂಭಾಗದಲ್ಲಿ ದೊಡ್ಡ ಬೆಳಕು ಮೂಡಿದಂತಾಯಿತು. ಥಟ್ಟನೆ ಗಾಡಿಯ ಕನ್ನಡಿಯಲ್ಲಿ ಗಮನಿಸಿದಾಗ ಎರಡು ಬೃಹತ್ ಲೈಟುಗಳು ದೂರದಲ್ಲಿ ಬರುತ್ತಿದ್ದವು. ಯಾವುದೋ ವಾಹನ ಬಂತಿರಬೇಕು ಎಂದುಕೊಂಡು ನಾನು ಮತ್ತಷ್ಟು ನಿಧಾನವಾಗಿ ಸಾಗಿದೆ. ಭರ್ರನೆ ಬಂದ ಬೆಳಕು‌ ನನ್ನನ್ನು ದಾಟಿ ಮುಂದಕ್ಕೆ ಹೋಗುವ ವೇಳೆಗೆ ಅದೊಂದು ಮಿನಿ ಲಾರಿ ಎನ್ನುವುದು ನನ್ನ ಅರಿವಿಗೆ ಬಂದಿತು.
ಅಬ್ಬ ಅಂತೂ ನನಗೆ ಈ ಲಾರಿಯ ಜತೆಗೆ ಸಾಗುವ ಯೋಗ ಬಂತಲ್ಲ ಎಂದುಕೊಂಡೆ. ಲಾರಿಯ ಹಿಂಭಾಗದಲ್ಲಿಯೇ ಬೈಕನ್ನು ಓಡಿಸಿದೆ. ಕತ್ತಲೆಕಾನಿನ ಘಟ್ಟವನ್ನ ಏರಿದಂತೆಲ್ಲ ಚಳಿ ದಟ್ಟವಾಗತೊಡಗಿತು. ಅಲ್ಲಲ್ಲಿ ಮಂಜಿನ ತೆರೆಯೂ ಆವರಿಸತೊಡಗಿತು. ಚಳಿ ಹೆಚ್ಚಿದಂತೆಲ್ಲ ನಾನು ಲಾರಿಯ ಹತ್ತಿರ ಹತ್ತಿರಕ್ಕೆ ಹೋದೆ. ಲಾರಿಯಿಂದ ಬರುತ್ತಿದ್ದ ಹೊಗೆ ನನ್ನ‌ಮುಖಕ್ಕೆ ತಾಗುತ್ತಿತ್ತು. ತನ್ಮೂಲಕ ನನಗೆ ಚಳಿಯನ್ನು‌ ಕಡಿಮೆ ಮಾಡುತ್ತಿತ್ತು. ಲಾರಿಯ ಹಿಂಭಾಗದಲ್ಲಿಯೇ ಹೋದರೆ ಚಳಿ‌ ಕಡಿಮೆ ಎಂಬ ಸ್ವ ಅನುಭವ ಮತ್ತೊಮ್ಮೆ ದಟ್ಟವಾಯಿತು.
ಲಾರಿಯ ಹಿಂದು ಹಿಂದೆಯೇ ಹೋಗುತ್ತಿದ್ದರೂ ನನ್ನ ಕಣ್ಣು ಅಕ್ಕಪಕ್ಕದ ದಟ್ಟ ಕಾಡಿನ ಕಡೆಗೆ, ಶರಾವತಿಯ ಮೌನ ಕಣಿವೆಯ ಕಡೆಗೇ ಇತ್ತು. ಯಾವುದೋ ಕ್ಷಣದಲ್ಲಿ ರಸ್ತೆಗೆ ಅಡ್ಡ ಬರಬಹುದಾದ ದೊಡ್ಡ ಹೆಬ್ಬಾವನ್ನು ಎದುರಿಸಲು, ಎಂಟು, ಹತ್ತು ಅಡಿ ಉದ್ದದ‌ ಅಷ್ಟೇ ಎತ್ತರಕ್ಕೆ ನೆಟ್ಟಗೆ ನಿಲ್ಲಬಹುದಾದ ಕಾಳಿಂಗ ಸರ್ಪವನ್ನ ತಪ್ಪಿಸಿಕೊಳ್ಳುವುದು ಹೇಗೆ ಎಂಬ ಆಲೋಚನೆಯೇ ಆವರಿಸಿತ್ತು. ಇಂತಹ ಎಷ್ಟು ಕಾಡಲ್ಲಿ ನಾನು ಓಡಾಡಿಲ್ಲ ಎಂಬ ಹುಂಭ ಧೈರ್ಯ ಮನದಲ್ಲಿ ಮೂಡಿದ ಕೆಲವೇ ಕ್ಷಣ ದಲ್ಲಿಯೇ ನನಗರಿವಿಲ್ಲದಂತೆಯೇ ಬಾಯಲ್ಲಿ ಓಂ ಭೂರ್ಭುವ ಸ್ವಃ.. ಎಂದು ಗಾಯತ್ರಿ ಮಂತ್ರದ ಪಠಣವೂ ನಡೆಯಿತು. ಗಾಯತ್ರಿ ಮಂತ್ರ ಪಠಣ ನನ್ನೊಳಗೆ ಅದೇನೋ ಶಕ್ತಿ ತುಂಬುತ್ತಿದೆ ಎಂಬ ಅರೆಘಳಿಗೆಯಲ್ಲಿಯೇ ಲಾರಿಯೊಳಗಿಂದ ಅದ್ಯಾವುದೋ ತಮಿಳು ಸಿನಿಮಾದ ಹಾಡು ಅಲೆ ಅಲೆಯಾಗಿ ಕೇಳಿ ಬಂತು. ನಾನು ದೆವ್ವ-ಭೂತ, ಕಾಳಿಂಗಗಳ ಭ್ರಮೆಯಿಂದ ಅರೆಘಳಿಗೆ ಹೊರಬಂದೆ.
ನಾನೇ ನಿಧಾನವಾಗಿ ಹೋಗುತ್ತಿದ್ದೇನೆಯೇ? ಅಥವಾ ಈ ದಾರಿಯೇ ದೀರ್ಘವಾಗುತ್ತಿದೆಯಾ ಎನ್ನುವ ಭಾವನೆ ನನ್ನಲ್ಲಿ ಮೂಡಿತು. ಕಡುಗತ್ತಲ ರಾತ್ರಿಯಲ್ಲಿ ದಟ್ಟ ಮಂಜಿನ ನಡುವೆ ದೊಡ್ಡದೊಂದು ಲಾರಿ, ಹಿಂದೊಂದು ಬೈಕ್ ಸಾಗುತ್ತಲೇ ಇತ್ತು. ಕೆಲವೇ ಕ್ಷಣದ ನಂತರ ಕತ್ತಲೆಕಾನಿನ ತಿರುವುಗಳೆಲ್ಲ ಮುಗಿದು ಮಲೆಮನೆಯ ಫಾಸಲೆ ಆರಂಭವಾಯಿತು. ಅಲ್ಲೊಂದು ಕಡೆ ಒಂದಷ್ಟು ಕಟ್ಟೆಗಳೂ, ಯಾವಾಗಲೋ ಪೂಜೆ ಮಾಡಿದ್ದರೋ ಎಂಬಂತಹ ಕುರುಹುಗಳೂ ಕಂಡವು. ಪೂಜೆ ಮಾಡಿದ್ದರೋ ಅಥವಾ ಕೋಳಿ, ಕುರಿಯನ್ನು ಬಲಿಕೊಟ್ಟಿದ್ದರೋ.. ಅದು ದೇವರೋ ಅಥವಾ ಚೌಡಿ, ಮಾಸ್ತಿಯಂತಹ ಗಣಗಳೋ ಗೊತ್ತಾಗಲಿಲ್ಲ. ನನ್ನ ದೃಷ್ಟಿ ಲಾರಿಯ ಕಡೆಗೇ ಇತ್ತು. ಒಮ್ಮೆ ಈ ಘಟ್ಟವನ್ನು ಏರಿ ಮುಗಿದರೆ ಸಾಕು ಎಂದುಕೊಂಡು ನೆಟ್ಟ ನೋಟದಿಂದ ಲಾರಿಯನ್ನು ಹಿಂಬಾಲಿಸುತ್ತಿದ್ದೆ.
ಇನ್ನೇನು ಘಟ್ಟ ಮುಗಿಯಬೇಕಷ್ಟೇ, ನೋಡ ನೋಡುತ್ತಿದ್ದಂತೆ ಲಾರಿ ವೇಗವನ್ನು ಪಡೆದುಕೊಂಡಿತು. ನನ್ನ ಬಾಹುಬಲಿಗೂ ಹಾಗೂ ಆ ಲಾರಿಗೂ ನಡುವೆ ಇದ್ದ ಅಂತರ ಹತ್ತು ಮೀಟರ್ ಆಯಿತು.. ಹತ್ತು ಇಪ್ಪತ್ತಾಯಿತು.. ಇಪ್ಪತ್ತು ಐವತ್ತಾಯಿತು.. ನಾನು ಬಾಹುಬಲಿಯ ವೇಗ ಹೆಚ್ಚಿಸಲು ಆಲೋಚಿಸುತ್ತಿದ್ದಂತೆಯೇ ಮತ್ತಷ್ಟು ವೇಗ ಪಡೆದುಕೊಂಡ ಲಾರಿ ರಸ್ತೆಯಲ್ಲಿ ಕಾಣದಂತಾಗಿ
ಮಂಜಿನ ತೆರೆಯಲ್ಲಿ ಕಳೆದು ಹೋಯಿತು. ನಾನು ತಬ್ಬಿಬ್ಬಾದೆನಾದರೂ ಸಾವರಿಸಿಕೊಂಡು ಬಾಹುಬಲಿಯ ವೇಗ ಹೆಚ್ಚಿಸಿದೆ. ನನ್ನ ಬೈಕ್ ಎಂಭತ್ತರ ಗಡಿ ದಾಟಿ ನೂರು ಕಿಲೋಮೀಟರ್ ವೇಗ ಪಡೆದುಕೊಂಡಿತು. ಆದರೂ ಆ ಲಾರಿ ನನಗೆ ಸಿಗದಂತಾಯಿತು.
ಲಾರಿಯ ಡ್ರೈವರನ್ಯಾರೋ ಪಳಗಿದವನೇ ಇರಬೇಕು. ಅಥವಾ ಈ ರಸ್ತೆಯಲ್ಲಿ ಪದೇ ಪದೆ ಓಡಾಡಿ ಗೊತ್ತಿರುವವನೇ ಇರಬೇಕು. ಇಂತಹ ಕತ್ತಲೆಯಲ್ಲಿ, ಮಂಜಿನ ಪರದೆಯ ನಡುವೆಯೂ ವೇಗವಾಗಿ, ನನಗೆ ಸಿಗದಂತೆ ಹೋಗಿರಬೇಕೆಂದರೆ ಆತನ ಡ್ರೈವಿಂಗ್ ಕೈಚಳಕ ಇನ್ನೆಷ್ಟು ಚನ್ನಾಗಿರಬೇಡ? ಎಂದುಕೊಂಡೆ.
ಐದಾರು ಕಿಲೋಮೀಟರ್ ಹಾದು ಬಂದರೂ ಲಾರಿ ಕಾಣಿಸಲಿಲ್ಲ. ಇನ್ನಷ್ಟು ಮುಂದೆ ಸಾಗಿದೆ. ಹತ್ತು-ಹದಿನೈದು ನಿಮಿಷದ ಪ್ರಯಾಣದ ನಂತರ ಇದ್ದಕ್ಕಿದ್ದಂತೆ ಒಂದು ಚೆಕ್ ಪೋಸ್ಟ್ ಕಾಣಿಸಿತು. ಬೈಕ್ ವೇಗ ತಗ್ಗಿಸಿದೆ. ನಾಕಾ ಬಂದಿ ಹಾಕಲಾಗಿತ್ತು. ಅಲ್ಲಲ್ಲಿ ಬೆಳಕುಗಳು, ಅಂಗಡಿಗಳ ದೀಪಗಳೂ ಕಾಣಿಸಿದವು. ಅಲ್ಲೇ ಇದ್ದ ಅರಣ್ಯ ಇಲಾಖೆ ಗಾರ್ಡ್ ಒಬ್ಬ ನನ್ನ ಗಾಡಿಯನ್ನು ನೋಡಿ ಅನುಮಾನ ಪಟ್ಟುಕೊಂಡನಾದರೂ ನಿಧಾನವಾಗಿ ಬಂದು ಚೆಕ್ ಪೋಸ್ಟ್ ಬಾಗಿಲು ತೆರೆಯಲು ಮುಂದಾದ.
ನಾನು ಸೀದಾ ಹೋಗಿ ಅವನ ಬಳಿ ನಿಂತು, 'ಹೋಯ್, ಈಗ ಇದೇ ದಾರಿಯಲ್ಲಿ ಒಂದು ಲಾರಿ ಹೋಯ್ತಾ?' ಎಂದು ಕೇಳಿದೆ.
ಆತ ಮತ್ತೊಮ್ಮೆ ನನ್ನನ್ನು ವಿಚಿತ್ರವಾಗಿ ನೋಡಿ, 'ಲಾರಿ? ಎಂತ ಲಾರಿ?' ಎಂದ

(ಮುಂದುವರಿಯುವುದು)