Saturday, February 27, 2016

ದ್ವೀಪ

ನದಿ ಮದ್ಯದೊಳಗಿಹೆ
ನಾನೊಂದು ದ್ವೀಪ
ಆಚೀಚೆಕಡೆಯಿಂದ ಅಲೆಗಳು
ಬಂದು ಬಡಿಯುತ್ತಿವೆ ಪಾಪ |

ಎಡ-ಬಲದ ಅಲೆಗಳು ಮುತ್ತಿ
ದಡದಲ್ಲೆಲ್ಲ ಗಾಯ
ಅತ್ತಿತ್ತ ಹುಯ್ದಾಡಿ, ಮನಸೆಲ್ಲ ಮಣ್ಣಾಗಿ
ಕಳೆದು ಹೋಗುತ್ತಿದೆ ಪ್ರಾಯ |

ಒಮ್ಮೊಮ್ಮೆ ಬಂದೂಕು
ಮತ್ತೊಮ್ಮೆ ಖಡ್ಗ
ಕುಡಿದಷ್ಟೂ ಆರದ ದಾಹ
ನಾನೊಬ್ಬ ಕುಡುಕ |

ಆಗೀಗ ಎಲ್ಲೆಲ್ಲೂ ಹರ ಹರ ಮಹಾದೇವ
ನಡು ನಡುವೆ ಕೇಳುತಿದೆ ಲಾಲ್ ಸಲಾಂ
ಗೌಜಿ ಗದ್ದಲದ ನಡುವೆ ನೆನಪಾಗಲಾರರು
ನೇತಾಜಿ, ಆಜಾದ್, ಗಾಂದಿ, ಕಲಾಂ |

ಬರಲೊಂದು ಪ್ರವಾಹ
ಹೊಸ ನೀರ ಸೆಳೆದು
ಕೊಚ್ಚಿ ಹೋಗಲಿ ಇಂದೇ
ಹಳೆ ಕೊಳೆಯು ತೊಳೆದು  |

Tuesday, February 16, 2016

ಅಂತ್ಯೋದಯ

ಕದವ ತೆರೆದು ಹಾರು ಹೊಡೆದು
ಮನವ ಬಯಲು ಮಾಡಿದೆ
ಉಸಿರನೆಳೆದುಕೊಳುವ ಮೊದಲು
ಪ್ರೀತಿ ಧೂಳು ಸೇರಿದೆ |

ಕಡ್ಡಿ ದಡ್ಡಿ ಹೆಕ್ಕಿ ತಂದು
ಪ್ರೀತಿ ಗೂಡು ಕಟ್ಟಿದೆ
ಒಳಗೆ ಹೆಜ್ಜೆ ಇಡುವ ಮೊದಲು
ಗಿಡುಗ ಕದ್ದು ಕುಳಿತಿದೆ |

ಇರುಳ ಕನಸ ಹಗಲು ನೆನೆದು
ಹಿಡಿಯ ಹೋದೆನು
ಹುಚ್ಚು ಒಲವು ಬೆನ್ನೂಳಿರಿಯೆ
ಬೆಚ್ಚಿ ಬಿದ್ದೆನು |

ಕೊಟ್ಟಿದ್ದೆಷ್ಟೋ ಪಡೆದುದೆಷ್ಟೊ
ಮರೆತೇ ಹೋಗಿದೆ
ಪ್ರೇಮದ ಜಮಾ-ಖರ್ಚು
ಸಾಲ-ದಂತಿದೆ|

****

(ಈ ಕವಿತೆಯನ್ನು ಬರೆದಿರುವುದು ಫೆ.15, 2016ರಂದು ಶಿರಸಿಯಲ್ಲಿ)