Thursday, January 31, 2013

ಅಬ್ಬ...ಆಲೆಮನೆ ಹಬ್ಬ..!!

ಅಬ್ಬ...ಆಲೆಮನೆ ಹಬ್ಬ..!! 

 ಒಂದು ಕಾಲವಿತ್ತು. ಆಲೆಮನೆ ಅಂದರೆ ಹಬ್ಬದ ವಾತಾವರಣವನ್ನೇ ಸೃಷ್ಟಿಸುವಂತಹ ಕಾಲ ಅದಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಆಲೆಮನೆ ಎಂಬುದು ತೀರಾ ಅಪರೂಪ ಎನ್ನುವಂತಾಗಿದೆ. ಆಲೆಮನೆ ಎಲ್ಲಿ ನಡೆಯುತ್ತಿದೆ ಎಂದು ಹುಡುಕಬೇಕಾದಂತಹ ಸ್ಥಿತಿ ಇಂದಿನದು.
    ಮಲೆನಾಡಿನಲ್ಲಿ ಕಬ್ಬುಬೆಳೆಸುವುದು ಸಾಹಸದ ಕೆಲಸ. ಅರಣ್ಯಗಳು ನಾಶವಾಗಿದ್ದರಿಂದ ಕಾಡುಪ್ರಾಣಿಗಳು ರೈತನ ಹೊಲಗದ್ದೆಗಳಿಗೆ ಮುಗಿ ಬೀಳುತ್ತಿವೆ. ಅದೇ ರೀತಿ ಕಬ್ಬಿನ ಗದ್ದೆಗಳಿಗೂ ಮಂಗ, ಕಾಡುಹಂದಿ, ಇಣಚಿ ಮುಂತಾದವುಗಳ ಕಾಟ. ಇವೆಲ್ಲವನ್ನೂ ಮೀರಿ ಕಬ್ಬು ಬೆಳೆದು ಆಲೆಮನೆ ಮಾಡೋಣವೆಂದರೆ ಕೂಲಿ ಕಾರ್ಮಿಕರ ಸಮಸ್ಯೆ. ಮತ್ತೊಂದೆಡೆ ಕಬ್ಬಿನ ಹಾಲನ್ನು ಬೇಯಿಸಿ ಬೆಲ್ಲ ತಯಾರಿಸಲು ಉರುವಲು ಸಮಸ್ಯೆ. ಉರುವಲು ತರಬೇಕೆಂದರೆ ಅರಣ್ಯ ಇಲಾಖೆಯವರ ಕಾಟ. ಹಾಗಾಗಿ ರೈತಾಪಿ ವರ್ಗ ಆಲೆಮನೆ ಸಹವಾಸದಿಂದಲೇ ದೂರ ಸರಿದಿದೆ. ಬೆಲ್ಲವನ್ನು ಕೊಂಡು ತರುವುದೇ ಸಲೀಸು ಎನ್ನುವ ಧೋರಣೆಯಿಂದಾಗಿ ಆಲೆಮನೆಗಳು ಮಾಯವಾಗುತ್ತಲಿವೆ. ಇನ್ನೊಂದೆಡೆ ಬೆಲ್ಲದ ದರ ವರ್ಷದಿಂದ ವರ್ಷಕ್ಕೆ ಏರುಮುಖದತ್ತ ಸಾಗಿದೆ.
    ಆಲೆಮನೆ ಈ ಪದವೇ ಸಾಕು ಮೈಮನಗಳನ್ನು ರೋಮಾಂಚನಗೊಳಿಸುತ್ತದೆ. ಕಬ್ಬು ಕಡಿದು ಅದನ್ನು ಗಾಣಕ್ಕೆ ಕೊಟ್ಟು ಹಾಲನ್ನು ಕುಡಿದು ಬೆಲ್ಲವನ್ನು ತಿಂದರೆ ಹಬ್ಬದ ಮೆರುಗು, ಮೆಲುಕು ಅನಿರ್ವಚನೀಯ. ಈಗ ಆಲೆಮನೆಯನ್ನು ಹಬ್ಬವನ್ನಾಗಿ ಮಾಡುವ ಮೂಲಕ ಅಚನಳ್ಳಿಯಲ್ಲಿ ಅದಕ್ಕೊಂದು ವಾಣಿಜ್ಯಾತ್ಮಕ ರೂಪವನ್ನು ನೀಡುತ್ತಿರುವುದು ವಿಶೇಷ.
    ಆಲೆಮನೆಯೆಂದಕೂಡಲೇ ಕಬ್ಬು, ಕಣೆ, ಬೃಹತ್ ಕೋಣಗಳು, ಅವನ್ನು ಓಡಿಸುವವನು, ವಾರಗಟ್ಟಲೆ ಕಬ್ಬು ಕಡಿಯುವ ಸಂಭ್ರಮ, ಕಬ್ಬಿನ ಹಾಲು ಸಂಗ್ರಹಣೆ, ಬಂದ ಅತಿಥಿಗಳಿಗೆಲ್ಲ ಅದನ್ನು ನೀಡುವುದು, ಬೆಲ್ಲ ತಯಾರಿಸುವುದು ಇತ್ಯಾದಿಗಳು ನೆನಪಾಗುತ್ತವೆ. ಬದಲಾದ ಸಂಗತಿಯಲ್ಲಿ ಈ ಆಲೆಮನೆ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಬೆಳೆದಿದೆ. ಕೂಲಿ ಕಾಮರ್ಿಕರ ಸಮಸ್ಯೆಯ ಕಾರಣ ವಾರಗಟ್ಟಲೆ ನಡೆಯುತ್ತಿದ್ದ ಆಲೆಮನೆಗಳು ಈಗ ಒಂದೆರಡು ದಿನಕ್ಕೆ ಇಳಿದುಬಿಟ್ಟಿವೆ. ಎಕರೆಗಟ್ಟಲೆ ಕಬ್ಬುಬೆಳೆಯುತ್ತಿದ್ದವರೀಗ ಒಂದೆರಡು ಗದ್ದೆಗಳಿಗೆ ಸೀಮಿತವಾಗಿದ್ದಾರೆ. ಹಳೆಯಕಾಲದ ಕೋಣನ ಕಣೆಯ ಜಾಗದಲ್ಲಿ ಆಧುನಿಕ ಯಂತ್ರದ ಮೂಲಕ ಓಡುವ ಕಣೆ ಬಂದಿದೆ. ಅದರ ಜೊತೆಗೆ ಬೆಲ್ಲ ತಯಾರಿಸುವ ಕೊಪ್ಪರಿಗೆಗೂ ಚಕ್ರಗಳು, ನಲ್ಲಿಗಳನ್ನು ಕೂಡ್ರಿಸುವ ಮೂಲಕ ಆಲೆಯಮನೆಗೆ ಮತ್ತಷ್ಟು ಆಧುನಿಕ ಮೆರಗನ್ನು ನೀಡಲಾಗಿದೆ.
            ಹಿಂದೆಲ್ಲ ಆಲೆಮನೆ ಬಂತೆಂದರೆ ಸುತ್ತಮುತ್ತಲ ಊರುಗಳಲ್ಲಿ ಸಂಭ್ರಮ ಸಡಗರ. ಯಾವುದೇ ಕಡೆಗಳಲ್ಲಿ ಆಲೆಮನೆ ಇದೆಯೆಂಬ ಸುದ್ದಿ ಕಿವಿಗೆ ಬಿದ್ದರೆ ಸಾಕು ತಂಡೋಪತಂಡವಾಗಿ ಬಂದು ಜನರು ಹಾಲುಕುಡಿದು ಕಬ್ಬನ್ನು ಪಡೆದು ಹೋಗುತ್ತಿದ್ದರು. ಎಷ್ಟೇ ಜನ ಬಂದರೂ ಮನೆಯವರು ಬೇಸರಿಸದೇ, ಸಿಟ್ಟಾಗದೇ ಕೇಳಿದಷ್ಟು ಹಾಲುಕೊಟ್ಟು ಕಳಿಸುತ್ತಿದ್ದರು. ಕಬ್ಬಿನ ಹಾಲು ಹಾಗೂ ಕಬ್ಬನ್ನು ಬೇರೆಯವರಿಗೆ ಹೆಚ್ಚು ಹೆಚ್ಚು ಕೊಟ್ಟಷ್ಟೂ ಮುಂದಿನ ವರ್ಷ ನಮ್ಮ ಬೆಳೆ ಜಾಸ್ತಿಯಾಗುತ್ತದೆ ಎಂಬ ಮಾತುಗಳನ್ನು ಹಿರಿಯರು ಆಡುತ್ತಿದ್ದರು. ಆದರೆ ಆಧುನಿಕ ದಿನಮಾನದಲ್ಲಿ ಅವೆಲ್ಲವೂ ಕಳೆದುಹೋಗಿ ಆಲೆಮನೆಯೆಂದರೆ ಸ್ವಂತ ಬಳಕೆಗಷ್ಟೇ ಎಂಬಂತಹ ವಾತಾವರಣ ನಿರ್ಮಾಣವಾಗತೊಡಗಿತ್ತು.
    ತುಂಡು ಹಿಡುವಳಿ, ಕಡಿಮೆ ಪ್ರಮಾಣದಲ್ಲಿ ಕಬ್ಬು ಬೆಳೆಯುವುದು ಇತ್ಯಾದಿಗಳ ಜೊತೆಗೆ ಒಂದೆರಡು ದಿನಗಳಲ್ಲಿ ಮುಗಿದುಹೋಗುವ ಆಲೆಮನೆಗಳಲ್ಲಿ  ಮೊದಲಿದ್ದ ಬಾಂಧವ್ಯದ ವಾತಾವರಣ ಕಾಣಲು ಸಾಧ್ಯವೇ ಇಲ್ಲ. ಅದಕ್ಕೆ ತಕ್ಕಂತೆ ಬೆಲ್ಲದ ಬೆಲೆ ಗಗನವನ್ನು ಮುಟ್ಟಿದಾಗ ಬೆಳೆಗಾರರು ಕಬ್ಬಿನ ಬೆಳೆಯನ್ನು ವಾಣಿಜ್ಯಾತ್ಮಕ ದೃಷ್ಟಿಯಿಂದ ನೋಡುವುದು ಹೆಚ್ಚಾಯಿತು. ಅದು ಅನಿವಾರ್ಯವೂ ಆಯಿತು. ಅದಕ್ಕೆ ತಕ್ಕಂತೆ ಮಾರ್ಪಾಡುಗಳೂ ಬಂದವು.
    ಇಂತಹ ದಿನಗಳಲ್ಲಿ ಆಲೆಮನೆಯನ್ನು ಹಬ್ಬವಾಗಿ ಮಾಡುವ ಆಲೋಚನೆಗೆ ಮುಂದಾಗಿದ್ದು ಅಚ್ಚನಳ್ಳಿಯ ಮಂಜುನಾಥ ಹೆಗಡೆ ಹಾಗೂ ಮಿತ್ರರು. ತುಂಡು ತುಂಡು ಕಬ್ಬು ಬೆಳೆಗಾರರು ಒಂದೆಡೆಗೆ ಸೇರಿ ಒಂದೆರಡು ದಿನಗಳ ಬದಲಾಗಿ ಹಿಂದಿನ ದಿನಮಾನದಲ್ಲಿದ್ದಂತೆ ವಾರಗಟ್ಟಲೆ ಆಲೆಮನೆಯನ್ನು ಮಾಡಿ, ಆಲೆಮನೆಗೆ ಪ್ರವಾಸಿಗರನ್ನು ಕರೆತಂದು, ಮಾಹಿತಿ ನೀಡಿ ಕಬ್ಬು ಟೂರಿಸಂ ಮಾಡುವ ಆಲೋಚನೆಯನ್ನು ರೂಪಿಸಿ ಅದನ್ನು ಯಶಸ್ವಿಯಾಗುವಂತೆ ಮಾಡಿದವರು ಮಂಜುನಾಥ ಹೆಗಡೆ.
    ಮಂಜುನಾಥ ಹೆಗಡೆಯವರ ಕನಸಿನ ಆಲೆಮನೆ ಹಬ್ಬಕ್ಕೆ ಬೆನ್ನೆಲುಬಾಗಿ ನಿಂತಿದ್ದು ಶಿರಸಿಯ ಕದಂಬ ಮಾರ್ಕೇಟಿಂಗ್ ಸೊಸೈಟಿ ಮತ್ತು ಅದರ ಅಧ್ಯಕ್ಷ ಶಂಭುಲಿಂಗ ಹೆಗಡೆ ನಡಗೋಡ. ಈ ಹಬ್ಬ ಜ.11ರಂದು ನಡೆದು ಜ.16ರಂದು ಮುಕ್ತಾಯಗೊಂಡಿತು. ಅಚನಳ್ಳಿ, ದೊಡ್ನಳ್ಳಿ ಹಾಗೂ ಸುತ್ತಮುತ್ತಲ ಊರುಗಳ ಕಬ್ಬು ಬೆಳೆಗಾರರು ಸೇರಿ ಮಾಡುತ್ತಿರುವ ಈ ಆಲೆಮನೆ ಹಬ್ಬಕ್ಕೆ ಶಿರಸಿಯ ಕದಂಬ ಸಂಸ್ಥೆ ಪ್ರವಾಸೋದ್ಯಮದ ಕಲ್ಪನೆ ನೀಡಿತು. ವಾಣಿಜ್ಯೀಕರಣವನ್ನಾಗಿ ಮಾರ್ಪಡಿಸಿತು. ಹಬ್ಬಕ್ಕೆ ಆಗಮಿಸುವವರು 100 ರು.ನ ಟಿಕೆಟ್ ಖರೀದಿ ಮಾಡುವುದು ಅಗತ್ಯ. ಹಣ ಕೊಟ್ಟು ಟಿಕೆಟ್ ಪಡೆದ ಪ್ರವಾಸಿಗರಿಗೆ ತಕ್ಕ ಆಥಿತ್ಯವನ್ನು ಮಾಡಲಾಗುತ್ತದೆ. ಜೊತೆಯಲ್ಲಿ ಕಬ್ಬು ಬೆಳೆಗಾರನಿಗೆ ಹೆಚ್ಚಿನ ವರಮಾನವನ್ನೂ ಕಲ್ಪಿಸುತ್ತದೆ.
    ಹಬ್ಬಕ್ಕೆ ಆಗಮಿಸಿದವರಿಗೆ ಕಬ್ಬಿನ ಹಾಲಿನ ಜೊತೆಗೆ ನೊರೆಬೆಲ್ಲ ನೀಡಲಾಗುತ್ತದೆ. ನೂರು ರು. ನೀಡಿ ಟಿಕೆಟ್ ತೆಗೆದುಕೊಂಡವರಿಗೆ ಒಂದು ತೊಡದೇವು ಪ್ಯಾಕೇಟ್, ಮಿರ್ಚಿ ಬಜೆ ಪ್ಯಾಕೆಟ್, ಖಾಂದಾ ಬಜೆ ಪ್ಯಾಕ್, ಗೋಬಿ ಮಂಚೂರಿ ಹಾಗೂ ವಿವಿಧ ಸ್ನಾಕ್ಸ್ಗಳ ಪ್ಯಾಕೇಟನ್ನು ನೀಡಲಾಗುತ್ತದೆ. ಇಷ್ಟೇ ಅಲ್ಲದೇ ಆಲೆಮನೆಯ ಹಬ್ಬದಲ್ಲಿ ಸಾದಾ ಕಬ್ಬಿನ ಹಾಲಿನ ಜೊತೆಗೆ ಶುಂಟಿಯ ಕಬ್ಬಿನ ಹಾಲು, ಕಿತ್ತಳೆ ಹಣ್ಣು, ದಾಲ್ಚಿನ್ನಿ, ಲವಂಗ, ಲಿಂಬೆ ಹಾಗೂ ಮಜ್ಜಿಗೆ ಹುಲ್ಲಿನ ಕಬ್ಬಿನ ಹಾಲುಗಳೂ ಸವಿಯಲು ಸಿಗುತ್ತದೆ. ಸಾದಾ ಹಾಲಿಗಿಂತ ಹಾಗೂ ಅದರಷ್ಟೇ ವಿಶಿಷ್ಟ ರುಚಿಯ ಅನುಭವ ನೀಡುವ ಈ ರೀತಿಯ ಆರೋಗ್ಯಪೂರ್ಣ ಸುವಾಸನೆಯುಕ್ತ ಹಾಲುಗಳನ್ನು ಯಾರಾದರೂ ಕುಡಿದಲ್ಲಿ ಅವುಗಳಿಗೆ ಮಾರುಹೋಗುವುದು ಖಂಡಿತ.
    ಬೆಂಗಳೂರು, ಉತ್ತರ ಭಾರತ, ಬಿಹಾರ ಕಡೆಗಳಿಂದ ಬರುವ ಪ್ರವಾಸಿಗರಿಗಾಗಿ ಆಲೆಮನೆಯ ಕುರಿತು ಸಮಗ್ರ ಮಾಹಿತಿ ನೀಡಲಾಯಿತು. ಅಲ್ಲದೇ ಆಗಮಿಸುವ ಪ್ರವಾಸಿಗರಿಗೆ ಆಲೆಮನೆ, ಕಬ್ಬಿನಿಂದ ಬೆಲ್ಲ ತಯಾರಿಸುವ ಬಗೆ, ಕಬ್ಬನ ಹಾಲಿನಿಂದ ತಯಾರಿಸಬಹುದಾದ ಉಪ ಉತ್ಪನ್ನಗಳು,  ಸೇರಿದಂತೆ ಕಬ್ಬನ್ನು ಬೆಳೆಯುವುದು ಹೇಗೆ ಈ ಮುಂತಾದ ಎಲ್ಲ ವಿವರಗಳಿಗೆ ಮಾಹಿತಿಯನ್ನೂ ನೀಡಲಾಯಿತು. ಅನುಭವ ಟೂರಿಸ್ಟ್ ಮುಂತಾದ ಸಂಸ್ಥೆಗಳವರು ಆಲೆಮನೆ ಹಬ್ಬಕ್ಕೆ ಪ್ರವಾಸಿಗರನ್ನು ಕರೆತಂದಿದ್ದರು ಎಂದು ಹಬ್ಬದ ರೂವಾರಿಗಳಲ್ಲೊಬ್ಬರಾದ ಮಂಜುನಾಥ ಹೆಗಡೆ ಮಾಹಿತಿ ನೀಡುತ್ತಾರೆ.

    ಕಳೆದ ವರ್ಷ ಆಲೆಮನೆ ನಡೆಸುತ್ತಿದ್ದ ವೇಳೆ ಈ ಆಲೆಮನೆಯನ್ನೂ ಹಬ್ಬವನ್ನಾಗಿ ಮಾಡಿ ಆಲೆಮನೆ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯ ಮಾಡುವ ಆಲೋಚನೆ ಹೊಳೆಯಿತು. ಅಲ್ಲದೇ ಇದನ್ನೂ ಪ್ರವಾಸಿಗರನ್ನು ಕರೆತರುವ ತಾಣವನ್ನಾಗಿ ಮಾಡಬಹುದು. ಈ ಮೂಲಕ ಆಲೆಮನೆ ಲುಕ್ಸಾನು ಉಂಟು ಮಾಡದೇ, ಪ್ರವಾಸಿಗರನ್ನು ಕರೆತರುವ ಮೂಲಕ ಸಂಪೂರ್ಣ ಪ್ರವಾಸೋದ್ಯಮ ಹಾಗೂ ವಾಣಿಜ್ಯೀಕರಣಗೊಳಿಸುವ ಆಲೋಚನೆ ಬಂದಿತು. ಅದರ ಫಲವಾಗಿಯೇ ಈ ಹಬ್ಬವನ್ನು ನಡೆಸುತ್ತಿದ್ದೇವೆ ಎಂದು ಮಂಜುನಾಥ ಹೆಗಡೆ ವಿವರಿಸುತ್ತಾರೆ.
    ಒಟ್ಟಿನಲ್ಲಿ ಆಲೆಮನೆಯನ್ನು ವಿಶ್ವಕ್ಕೆ ಪರಿಚಯಿಸುವ, ಆಲೆಮನೆಯ ಮೂಲಕ ಪ್ರವಾಸಿಗರನ್ನು ಕರೆತರುವ ಹಾಗೂ ಅದರಲ್ಲಿ ವಿವಿಧತೆಗಳನ್ನು ಬಳಕೆ ಮಾಡಿಕೊಂಡು ವಾಣಿಜ್ಯಾತ್ಮಕವಾಗಿ ಹಬ್ಬವನ್ನಾಗಿ ಮಾಡಿದ ಅಚ್ಚನಳ್ಳಿಯ ಮಂಜುನಾಥ ಹೆಗಡೆಯವರ ಆಲೆಮನೆ ಹಬ್ಬ ಇತರ ಕಬ್ಬಿನ ಬೆಳೆಗಾರರಿಗೂ ಸ್ಫೂತರ್ಿಯಾಗುವುದರಲ್ಲಿ ಸಂದೇಹವೇ ಇಲ್ಲ. ಜೊತೆಗೆ ಮುಂದಿನ ದಿನಗಳಲ್ಲಿ ಶುಗರ್ಕೇನ್ ಟೂರಿಸಂ ಆಗುವ ಎಲ್ಲ ಸಾಧ್ಯತೆಗಳನ್ನೂ ಆಲೆಮನೆ ಹಬ್ಬ ಹುಟ್ಟುಹಾಕಿದೆ. ಈ ಹಬ್ಬದ ಕುರಿತು ನಿಮ್ಮಲ್ಲೂ ಕುತೂಹಲ ಮೂಡಿದ್ದರೆ ಯಾಕೆ ತಡ.. ಇಂತಹ ಪರಿಕಲ್ಪನೆಯನ್ನು ನೀವೂ ಮಾಡಿ..ಆಲೆಮನೆಯ ಹಬ್ಬ ಆಚರಿಸಿ.. ಹೆಚ್ಚಿನ ಮಾಹಿತಿ ನೀಡಲು ಮಂಜುನಾಥ ಹೆಗಡೆ 9483613900, 9036418230 ಅಥವಾ ಎಂ. ಎಸ್. ಹೆಗಡೆ 9483998511 ಈ ದೂರವಾಣಿ ಸಂಖ್ಯೆಯ ಮೂಲಕ ಪಡೆದುಕೊಳ್ಳಬಹುದಾಗಿದೆ.

    ಆಲೆಮನೆ ಹಬ್ಬಕ್ಕೆ ಕದಂಬ ಮಾರ್ಕೇಟಿಂಗ್ ಸಂಸ್ಥೆ ಬೆನ್ನೆಲುಬಾಗಿ ನಿಂತಿದೆ. ಸಹಾಯ, ಸಹಕಾರ, ಸಲಹೆಗಳನ್ನು ನೀಡುವ ಜೊತೆಗೆ ಈ ಆಲೆಮನೆಯಲ್ಲಿ ತಯಾರಾದ ಬೆಲ್ಲವನ್ನು ಸಂಸ್ಥೆ ಕೊಂಡು ಮಾರಾಟ ಮಾಡುತ್ತದೆ. ಕಬ್ಬು ಬೆಳೆಗಾರರಿಗೆ ಬೆಲ್ಲದ ದರ ವಿತರಿಸಲಾಗುತ್ತದೆ. ಆಲೆಮನೆಯನ್ನು ಹೊರ ಪ್ರದೇಶಗಳ ಪ್ರವಾಸಿಗರಿಗೆ ಪರಿಚಯಿಸುವ ನಿಟ್ಟಿನಲ್ಲಿ ಇದೊಂದು ಹೊಸ ಪ್ರಯತ್ನ
ಶಂಭುಲಿಂಗ ಹೆಗಡೆ
ಕೆ.ಎಂ.ಎಫ್. ನಿರ್ದೇಶಕ

    ನಮ್ಮೂರಿನ ಆಲೆಮನೆಯನ್ನೂ ಉದ್ಯಮವನ್ನಾಗಿ ಮಾಡಿ, ಪ್ರವಾಸಿಗರನ್ನು ಆಕಷರ್ಿಸುವುದು ನಮ್ಮ ಉದ್ದೇಶ. ಕೇವಲ ಕಬ್ಬು ಬೆಳೆದು ಆಲೆಮನೆ ಮಾಡಿ ಮುಗಿಸುವುದರ ಬದಲಾಗಿ ಹೀಗೆ ವಿವಿಧತೆಯನ್ನು ಅನುಸರಿಸಿ ಆದಾಯ ಗಳಿಸಬಹುದು. ಕಬ್ಬು ಬೆಳೆಗಾರರಿಗೆ ಇದೊಂದು ಹೊಸ ಆಶಯ ಮೂಡಿಸಬಲ್ಲದು. ಜೊತೆಗೆ ಆಲೆಮನೆ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯ ಮಾಡಬಹುದಾಗಿದೆ.
ಮಂಜುನಾಥ ಹೆಗಡೆ

Saturday, January 5, 2013

ಸೇಡು




ಸುತ್ತೆಲ್ಲ ಹೂವಿನ ಹಾರ
ಮಲ್ಲಿಗೆಯ ದಂಡೆ
ಮೊದಲ ನಿಶೆಯ ನಶೆಯ ದಿನ..|
ಮಿಲನದ ಜೋಡಿಯ ಸುಖದ
ಹುಚ್ಚು ಖೋಡಿಯ ದೇಹದ
ಅಡಿ ಬಿದ್ದು ಹೂ ಹಾರ
ನಲುಗಿತು, ಸೊರಗಿತು,
ಬಾಡಿ ಸೋತಿತು..||


ವ್ಯಕ್ತಿ ಸತ್ತ, ವಸಂತಗಳಾಚೆ
ಜನ ನೆರೆದರು, ಅತ್ತರು
ಹುಯ್ಯಲಿಟ್ಟರು....
ಸತ್ತ ವ್ಯಕ್ತಿಯ ಎದೆಯ
ಮೇಲೆ ನಿಂತಿತು ಹೂ ಹಾರ..|
ಕುಣಿಯಿತು, ಮೆಟ್ಟಿತು,
ಹಾಡಿತು, ನಕ್ಕಿತು..||


ಸೇಡು ತೀರಿಸಿಕೊಂಡಿತು..||


ಬರೆದಿದ್ದು05-10-2008ರಂದು ದಂಟಕಲ್ಲಿನಲ್ಲಿ