Sunday, September 26, 2010

ಕೆಲವು ಹನಿಗಳು

ಕರ್ಮವೀರ ವಿಶೇಷಾಂಕ ಕ್ಕೆ ನೀಡಿರುವ ಕೆಲವು ಚುಟುಕಗಳು..
ನಿಮ್ಮ ಓದಿಗಾಗಿ.
ಅನಿಸಿಕೆ ತಿಳಿಸಿ..

11) ಹೃದಯದ ಸ್ಥಿತಿ
ನಲ್ಲೆ ನೀನು ಒಪ್ಪಿದರೆ
ಈ ಹೃದಯ ನಿನದು
ಆದರೆ ನೀನು ಒಪ್ಪದಿದ್ದರೆ
ಇದರ ಸ್ಥಿತಿ ಬರ್ಬಾದು !
       
12) ತಾಳಿ
ಹರೆಯಕ್ಕೆ,
ಯವ್ವನದೊಡಲಿಗೆ
ಸಿಕ್ಕ ಒಂದು
ಕಡಿವಾಣ.
ಗಂಡಿನ ಲಗಾಮು.

13) ಸೂರ್ಯ
ಭೂಮಿಯೊಡಲ
ಸಂಪತ್ತು ಹುಡುಕಲು
ದೇವರು ಬಿಡುವ
ಟಾರ್ಚು !

14)ಸ್ವಾತಂತ್ರ್ಯ ದಿನ
ದೇಶ
ಬ್ರಿಟೀಷರ ಕೈತಪ್ಪಿ
ರಾಜಕಾರಣಿಗಳ ಕೈ
ಅಪ್ಪಿದ ದಿನ !

15)ಚಂದ್ರ
ರಾತ್ರಿ ಭೂಮಿಗೆ
ನಿದ್ರೆಯ ಕೊಡದೇ,
ಕಾವಲು ನಿಂತು
ಲೈನ್ ಹೊಡೆಯುತ್ತಿರುವ ಭೂಪ !!

16)ಹನಿಗವಿ
ಯುವ ಕವಿಯಾದ ನಾನು
ಅವಳನ್ನು ಕಂಡಾಗಲೆಲ್ಲಾ
ಆಗುತ್ತೇನೆ ಠಟಿಜಥಿ ಕವಿ
ಹನಿ ಕವಿ ಹಾಗೂ `ಹನಿ' ಕವಿ !!

17).ಮದುವೆ
ಮದುವೆಯೆಂದರೆ
ಎರಡು ನಿಷ್ಪಾಪಿ
ಜೀವಿಗಳನ್ನು
ನರಕಕ್ಕೆ ಕಳಿಸುವ
ದಾರಿ!

18)ದೀಪಾವಳಿ
ಬಾಳನ್ನು ಬೆಳಗಿದೆ
ದೀಪಾವಳಿ!
ಸಂತಸ ಪಡುವವನ
ಕಿಸೆಯೊಳಗಣ ಹಣವಾಗಿದೆ
ದಿವಾಳಿ!!

19)ಕಾರಣ
ವಿಶ್ವಕ್ಕೆಲ್ಲ ಜಾಗತೀಕರಣ,
ಔದ್ಯೋಗೀಕರಣ, ಖಾಸಗೀಕರಣ,
ಸಾಮಾಜೀಕರಣ, ಆಧುನೀಕರಣ
ಹೀಗೆಲ್ಲ ಇದ್ದರೆ, ಭಾರತಕ್ಕೆ
ಒಂದೇ ಕಾರಣ, ರಾಜಕಾರಣ !!

20)ಗೋರ್ಮೆಟ್ ನೌಕರ
ಜನರ ಸೇವೆಯನ್ನು
ದನದ ಸೇವೆ
ಎಂದು ತಿಳಿದವ
ಸರಕಾರಿ ನೌಕರ!!

21)ಹುಚ್ಚು
ಭೂಮಿಯ ಮೇಲೆ
ಎಲ್ಲರಿಗೂ ಹಿಡಿದಿದೆ ಹುಚ್ಚು !
ಅದರಲ್ಲೂ ಮೆಗಾ
ಸೀರಿಯಲ್ ನೋಡುವವರಿಗೆ
ತುಸು ಹೆಚ್ಚು !!

22)ಚಂದ್ರನಲ್ಲಿ ಬಾವುಟ
ನಮ್ಮ ಜನ
ಚಂದ್ರನಿಗೂ ಕೊಟ್ಟರು ಕಾಟ!
ನೆಟ್ಟರು ಗೂಟ, ಜೊತೆಗೆ
ಅಮೆರಿಕೆಯ ಬಾವುಟ !!

23)ನಾಕ-ನರಕ
ನಾಕ ನಾಕ ಎನ್ನುತ್ತಿದ್ದ
ಜನರಿಗೆ ಅರ್ಥವಾಗಲಿಲ್ಲ,
ಜಗತ್ತಿನ ಅತಿದೊಡ್ಡ ನರಕವೆಂದರೆ
ಅದು ಅಮೆರಿಕ !!

24)(ವಾ)ನರ
ನರ, ನಾಗರಿಕತೆಯಲ್ಲಿ
ಸಿಲುಕಿ, ಆಧುನೀಕತೆಯಲ್ಲಿ
ಮುಂದುವರಿದು ಆಗುತ್ತಿದ್ದಾನೆ
ವಾನರ !!

25)ವಾಸ್ತವ
ದೂರದ ಗುಡ್ಡ
ಕಣ್ಣಿಗೆ ನುಣುಪು!
ಗೆಳತೀ ಹಾಗೇ ನಿನ್ನ
ಮುಖವೂ ಕೂಡ !!
ದೂರವಿದ್ದರಷ್ಟೇ
ಕಾಣುವುದು ನುಣುಪು !!!

26)ಮೊಡವೆ
ಮದುವೆಗೆ ಮುನ್ನ
ಹುಡುಗಿಯರ ಕಾಡುವ
ಅವರ ಸೊಕ್ಕನ್ನು ಮುರಿಯುವ
ಏಕೈಕ ಸಾಧನ ಮೊಡವೆ !!

27)ಜಮ್ಮು-ಕಾಶ್ಮೀರ
ಭಾರತದ ಅತ್ಯಂತ ಚೆಂದದ ಭಾಗ
ಜಮ್ಮು ಕಾಶ್ಮೀರ !
ಆದರೆ ಅಲ್ಲಿದೆ ಪ್ರತಿದಿನ ಗುಂಡಿನ
ನೆಗಡಿ, ಕೆಮ್ಮು, ದಮ್ಮು, ಜ್ವರ !!

Monday, September 13, 2010

ಏಕ ರೇಖಾ ಗಣಪ ಬಲು ಅಪರೂಪ

ವಿಘ್ನನಿವಾರಕ ಗಣೇಶನ ಚಿತ್ರವನ್ನು ಬಿಡಿಸುವವರು, ಮೂರ್ತಿ ಕೆತ್ತುವವರು ಬಹಳ ಮಂದಿ ಇದ್ದಾರೆ. ಆದರೆ ಕೇವಲ ಒಂದೇ ಸಾಲಿನ ಮೂಲಕ ಗಣೇಶನನ್ನು ಮೂಡಿಸುವ ಚಿತ್ರಕಾರರು ಸ್ವಲ್ಪ ವಿರಳವೆಂದೇ ಹೇಳಬಹುದು. ಈ ರೀತಿಯ ಅಪರೂಪದ ಚಿತ್ರ ಬಿಡಿಸುವುದು ಸವಾಲಿನ ಕೆಲಸವೇ ಸರಿ. ಇಂತಹ ಬಹು ಕಠಿಣ ಕಲೆಯನ್ನು ಒಲಿಸಿಕೊಂಡು ಚಿತ್ರವನ್ನು ರಚಿಸುವ ಕಲಾವಿದರೊಬ್ಬರಿದ್ದಾರೆ. ಅವರೇ ಸೈಯದ್ ಹುಸೈನಿ.
ಲಲಿತಕಲೆಯಲ್ಲಿ ಡಿಪ್ಲೊಮಾ ಮುಗಿಸಿರುವ ಇವರು ಏಕ ರೇಖೆಯಲ್ಲಿ ಗಣೇಶನನ್ನು ಚಿತ್ರಿಸುತ್ತಾರೆ. ಇವರ ಚಿತ್ರದಲ್ಲಿ ಗಣೇಶನ ಕಿರೀಟದಿಂದ ಇಲಿಯ ಬಾಲದವರೆಗೂ ಕೇವಲ ಒಂದೇ ರೇಖೆ ಇರುವುದು ವಿಶೇಷ. ಇದುವರೆಗೆ ಸುಮಾರು 100ಕ್ಕೂ ಹೆಚ್ಚು ಏಕರೇಖಾ ಗಣೇಶನ ಚಿತ್ರ ಬಿಡಿಸಿದ್ದಾರೆ.
ಹುಸೈನಿ ಮೊದಲ ಸಾರಿ ಚಿತ್ರ ಬಿಡಿಸಿದ್ದು ಮೂರನೇ ತರಗತಿಯಲ್ಲಿದ್ದಾಗ. ಆ ನಂತರ ಅವರು ಇದುವರೆಗೂ ಬಹಳಷ್ಟು ಚಿತ್ರಗಳನ್ನು ಬಿಡಿಸಿದ್ದಾರೆ. ಕನರ್ಾಟಕ ವಿಶ್ವವಿದ್ಯಾಲಯದಲ್ಲಿ ಲಲಿತಕಲೆಯಲ್ಲಿ ಪದವಿ ಮುಗಿಸಿರುವ ಇವರಿಗೆ ಚಿತ್ರ ಬಿಡಿಸುವುದು ನೀರು ಕುಡಿದಷ್ಟು ಸುಲಭ.
ಇವರು ಸುಮಾರು 3000ಕ್ಕೂ ಹೆಚ್ಚು ಏಕರೇಖಾ ಚಿತ್ರವನ್ನು ಬಿಡಿಸಿದ್ದಾರೆ. ಕೇವಲ ಗಣೇಶನ ಚಿತ್ರವನ್ನಷ್ಟೇ ಅಲ್ಲ, ಕುದುರೆ ಮುಂತಾದ ಹಲವು ಚಿತ್ರಗಳನ್ನು, ಹಲವು ವ್ಯಕ್ತಿಗಳ ಭಾವ ಚಿತ್ರಗಳನ್ನೂ ರಚಿಸಿದ್ದಾರೆ.
ಏಳೆಂಟು ವರ್ಷಗಳ ಹಿಂದೆ ಗಣೇಶನ ಚಿತ್ರ ಬಿಡಿಸಲು ಪ್ರಾರಂಭಿಸಿದ ಇವರಿಗೆ ಇಂದು ಏಕರೇಖಾ ಗಣೇಶನ ಚಿತ್ರ ಬಿಡಿಸಲು ಕನಿಷ್ಟ ಅರ್ಧ ಗಂಟೆ ಸಾಕು. ಕೆಲವೊಮ್ಮೆ ಕೆಲವು ಚಿತ್ರ ಬಿಡಿಸಲು ದಿನಗಟ್ಟಲೆ ಸಮಯವನ್ನು ತೆಗೆದುಕೊಂಡಿದ್ದೂ ಇದೆ. ಹುಸೈನಿ ಪ್ರಾರಂಭದಲ್ಲಿ ಗಣೇಶನ ಆಯಿಲ್ ಪೇಂಟ್ ಹಾಗೂ ಇತರೆ ಚಿತ್ರಗಳನ್ನು ಬಿಡಿಸುತ್ತಿದ್ದರು. ಆ ನಂತರ ಒಂದು ದಿನ ಗಣೇಶನ ಚಿತ್ರವನ್ನು ಏಕರೇಖೆಯಲ್ಲಿ ಬಿಡಿಸುವ ಆಲೋಚನೆ ಮೂಡಿತು. ಆ ನಂತರ ಕೆಲವು ದಿನಗಳು ಪ್ರಯತ್ನಿಸಿ ಚಿತ್ರ ಬಿಡಿಸಲು ಪ್ರಾರಂಭಿಸಿದರು.
ಚಿಕ್ಕಂದಿನಲ್ಲಿ ಹುಸೈನಿ ಅವರ ತಾಯಿ ಉಲ್ಲನ್ನಿನ ಸ್ವೆಟರ್ ಹಾಕುವ ವೇಳೆ ಇವರು ಆ ಉಲ್ಲನ್ನಿನ ಉಂಡೆಯ ಜೊತೆ ಆಟವಾಡುತ್ತಿದ್ದರು. ಅಷ್ಟೇ ಅಲ್ಲದೆ ಅದರಿಂದ ವಿವಿಧ ಚಿತ್ರಗಳನ್ನು ನೆಲದ ಮೇಲೆ ಮೂಡಿಸುತ್ತಿದ್ದರು. ಇದೇ ಅವರ ಏಕ ರೇಖಾ ಚಿತ್ರಕ್ಕೆ ಸ್ಫೂರ್ತಿ ನೀಡಿತು. ನಂತರ ಅವರ ತಾಯಿ ಹುಸೈನಿ ಅವರ ಕಲೆಗೆ ನೀರೆರೆದು ಪೋಷಿಸಿದರು.
ಚಿಕ್ಕಂದಿನಿಂದಲೆ ಒಲಿದುಬಂದ ಕಲೆಯನ್ನು ಬೆಳೆಸಿಕೊಂಡ ಇವರು ಹಲವು ರೀತಿಯ ಚಿತ್ರಗಳನ್ನು ಬಿಡಿಸಿದ್ದರೂ ಹೆಸರು ಗಳಿಸಿದ್ದು ಏಕರೇಖೆಯ ಗಣಪನ ಚಿತ್ರಗಳ ಮೂಲಕ. ಕಷ್ಟದ ಕಲೆಯಲ್ಲೂ ವಿಭಿನ್ನತೆ ಮೆರೆದ ಇವರು, ನಿಂತಿರುವ ಗಣೇಶ, ಕುಳಿತ ಏಕದಂತ, ಇಲಿಯ ಮೇಲೆ ಗಣೇಶನ ಸವಾರಿ, ನೃತ್ಯ ಮಾಡುತ್ತಿರುವ ಗಣಪ-ಹೀಗೆ ಹಲವು ಬಗೆಯ ಗಣಪನ ಚಿತ್ರಗಳನ್ನು ಬಿಡಿಸಿದ್ದಾರೆ.
ಚಿತ್ರ ಬಿಡಿಸುವುದೇ ಇವರ ವೃತ್ತಿ. ಅವರು ಬಿಡಿಸಿರುವ ಅದೆಷ್ಟೋ ಚಿತ್ರಗಳು ಉತ್ತಮ ಬೆಲೆಗೆ ಮಾರಾಟವಾಗಿವೆ.
ಕೇವಲ ಚಿತ್ರ ಬಿಡಿಸುವುದು ಮಾತ್ರ ಇವರ ಕೆಲಸವಲ್ಲ. ಪೇಪರ್ ಕಟಿಂಗ್ನಲ್ಲೂ ಇವರದ್ದು ಎತ್ತಿದ ಕೈ. ಬಗೆಬಗೆಯ ನಮೂನೆ ಗಳು, ಹಲವು ಆಕಾರಗಳು ಇವರ ಕೈಯಲ್ಲಿ ಅರಳಿವೆ. ಇವರ ಕೈಗೆ ಕುಂಚ ಸಿಕ್ಕರೆ ಹೇಗೆ ಗೆರೆಗಳು ಮಾತನಾಡುತ್ತವೆಯೋ ಹಾಗೆಯೆ ಖಾಲಿ ಪೇಪರ್ ಹಾಗೂ ಕತ್ತರಿ ಸಿಕ್ಕರೆ ಸಾಕು ಅವು ಜೀವ ತಳೆಯುತ್ತವೆ.
ಬೆಂಗಳೂರಿನ ಜಯನಗರದಲ್ಲಿ ವಾಸ ಮಾಡುತ್ತಿರುವ ಹುಸೈನಿ ಏಕರೇಖೆಯ ಚಿತ್ರಕಲೆ ಹಾಗೂ ಪೇಪರ್ ಕ್ರಾಫ್ಟ್ ಬಗ್ಗೆ ಹಲವು ಕಡೆ ತರಬೇತಿ, ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆಗಳನ್ನು ನೀಡಿದ್ದಾರೆ. 34 ವರ್ಷದ ಹುಸೈನಿ ಮೂಲತಃ ಮಂಡ್ಯ ಜಿಲ್ಲೆಯ ಶಿವನಸಮುದ್ರದವರು.
ಅಂಚೆಕುಂಚ ಪ್ರಶಸ್ತಿಯನ್ನು ನಾಲ್ಕು ಸಾರಿ ಮುಡಿಗೇರಿಸಿ ಕೊಂಡಿರುವ ಹುಸೈನಿ 2009ರಲ್ಲಿ ಜಪಾನ್ ಹಬ್ಬದಲ್ಲೂ ಭಾಗವಹಿಸಿ ಬಂದಿದ್ದಾರೆ. ಬೆಂಗಳೂರು, ಮೈಸೂರು, ಉಡುಪಿ, ಧಾರವಾಡ ಮುಂತಾದ ಕಡೆಗೆಲ್ಲ ಇವರು ಏಕವ್ಯಕ್ತಿ ಪ್ರದರ್ಶನ ಗಳನ್ನು ನೀಡಿದ್ದಾರೆ. ಹುಸೈನಿ ಅವರನ್ನು 9845153277. ಈ ಸಂಖ್ಯೆ ಮೂಲಕ ಸಂಪರ್ಕಿಸಬಹುದು.