Friday, March 13, 2015

ಇತಿಹಾಸ ಹಾಗೂ ಪ್ರಕೃತಿಯ ವಿಸ್ಮಯ : ನಿಘೂಡ ಮಣ್ಣಿನ ಬೊಂಬೆಗಳು

ತರಹೇವಾರಿ ಮಣ್ಣಿನ ಗೊಂಬೆಗಳು, ಬೇರೆ ಬೇರೆ ರೀತಿಯ ಮಣ್ಣಿನ ಆಕೃತಿಗಳು, ನೀರಿನ ಹೂಜಿ, ಸ್ತ್ರೀ, ಕೊಡ, ಹೂದಾನಿ ಸೇರಿದಂತೆ ಬಗೆ ಬಗೆಯ ಮಡಿಕೆಯ ಚಿತ್ತಾರಗಳು. ಇವು ಶಿರಸಿ ತಾಲೂಕಿನ ಮುಷ್ಕಿ-ಶಿರಗುಣಿ ಸನಿಹದ ದೇವರ ಕಾಡಿನಲ್ಲಿ ಕಂಡಂತಹ ವಿಸ್ಮಯ.
ತಾಲೂಕಿನಲ್ಲಿ ಅನೇಕ ಕಡೆಗಳಲ್ಲಿ ಮಣ್ಣಿನ ಗೊಂಬೆಗಳು ಹಾಗೂ ಮಣ್ಣಿನ ವಿಚಿತ್ರ ಆಕೃತಿಗಳು ಸಿಗುತ್ತವೆ. ಮುಷ್ಕಿ-ಶಿರಗುಣಿ, ವಾನಳ್ಳಿ, ಜಡ್ಡೀಗದ್ದೆ, ಬಂಡಲ, ಸಾಲಕಣಿ ಅಲ್ಲದೇ ಸಿದ್ದಾಪುರ ತಾಲೂಕಿನ ಹಿತ್ತಲಕೈ ಈ ಮುಂತಾದ ಪ್ರದೇಶಗಳಲ್ಲಿ ಮಣ್ಣಿನ ಗೊಂಬೆಗಳು ಕಣ್ಣಿಗೆ ಬೀಳುತ್ತವೆ. ಈ ಗೊಂಬೆಗಳು ಸಿಗುವ ಪ್ರದೇಶದಲ್ಲಿ ಸೂರ್ಯನ ಕಿರಣಗಳು ಭೂಮಿಯನ್ನು ತಾಕದೇ ಇರುವಷ್ಟು ದಟ್ಟವಾದ ಕಾಡಿದೆ. ಸ್ಥಳೀಯರು ಇಂತಹ ಮಣ್ಣಿನ ಗೊಂಬೆಗಳು ಸಿಗುವ ಸ್ಥಳಕ್ಕೆ ದೇವರಿಗೆ ಸೇರಿದ ಪ್ರದೇಶ ಎಂದು ಕರೆಯುತ್ತಾರೆ. ಈ ಕಾಡಿನ ಜಾಗವನ್ನು ದೇವರ ಕಾನು ಎಂದೂ ಕರೆಯುತ್ತಾರೆ.
ಸ್ಥಳೀಯರ ಪ್ರಕಾರ ಇಂತಹ ಪ್ರದೇಶದಲ್ಲಿ ಪ್ರತಿ ವರ್ಷ ಮಡಿಕೆಗಳು ಏಳುತ್ತವಂತೆ. ವರ್ಷಂಪ್ರತಿ ಹೊಸ ಹೊಸ ಮಡಿಕೆ ಆಕೃತಿಗಳು ಮನ್ಣಿನ ಆಳದಿಂದ ಮೇಲೆ ಬರುತ್ತವಂತೆ. ಇಂತಹ ಆಕೃತಿಗಳನ್ನು ವರ್ಷಕ್ಕೊಮ್ಮೆ ಪೂಜೆ ಮಾಡಿ ನಂತರ ಅವನ್ನು ಒಂದೆಡೆ ಗುಡ್ಡದಂತೆ ಪೇರಿಸಿ ಇಡಲಾಗುತ್ತದೆ. ತಾಲೂಕಿನ ಶಿರಗುಣಿಯ ಬಳಿಯಲ್ಲಿ ಮಣ್ಣಿನ ಮಡಿಕೆಯ ವಿಚಿತ್ರ ಆಕೃತಿಗಳ ಗೊಂಬೆಗಳನ್ನೆಲ್ಲ ಒಂದೆಡೆ ಸೇರಿಸಿ ಚಿಕ್ಕದೊಂದು ದಿಬ್ಬವನ್ನೇ ಮಾಡಲಾಗಿದೆ. ಇಲ್ಲಿ ಎರಡು ದೈತ್ಯ ಹುತ್ತಗಳಿವೆ. ಈ ಹುತ್ತಗಳಿರುವ ಪ್ರದೇಶದಲ್ಲಿ ಮಡಿಕೆಗಳು ಉದ್ಭವವಾಗುತ್ತವೆ ಎಂದು ಸ್ಥಳೀಯರು ಹೇಳುತ್ತಾರೆ. ಹುತ್ತದ ರಕ್ಷಣೆಗಾಗಿ ಗುಡಿಯನ್ನು ನಿರ್ಮಾಣ ಮಾಡಲಾಗಿದೆ. ಸ್ಥಳೀಕವಾಗಿ ನಾಗರ ಬನ ಎಂದು ಕರೆಯಲಾಗುತ್ತಿದೆ. ಜೊತೆ ಜೊತೆಯಲ್ಲಿ ದೇವರ ವಿವಿಧ ಗಣಗಳು ಇಲ್ಲಿವೆ ಎಂದೂ ಹೇಳಲಾಗುತ್ತದೆ.
ಮಾರ್ಚ್ ತಿಂಗಳ ಕೊನೆಯ ಭಾಗ, ಎಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಇಂತಹ ಮಡಿಕೆಗಳು ಏಳುವ ಸ್ಥಳದಲ್ಲಿ ಸ್ಥಳೀಯರು ಪೂಜೆ ಮಾಡುತ್ತಾರೆ. ವಾರ್ಷಿಕವಾಗಿ ಮಾಡುವ ಇಂತಹ ಪೂಜೆಗಳಲ್ಲಿ ಹೊಸದಾಗಿ ಉದ್ಭವವಾದ ಮಣ್ಣಿನ ಮಡಿಕೆಗಳನ್ನು ಪೂಜೆ ಮಾಡಲಾಗುತ್ತದೆ. ಸುಗ್ಗಿ ಹಬ್ಬ ಎಂದೂ ಈ ಪೂಜೆಯನ್ನು ಕರೆಯಲಾಗುತ್ತದೆ. ಬೆಳೆಗಳನ್ನು ಕಾಪಾಡುವ ಸಲುವಾಗಿ ಇಂತಹ ಪೂಜೆಗಳನ್ನು ಕೈಗೊಳ್ಳಲಾಗುತ್ತದೆ ಎಂದು ಶಿರಗುಣಿ ಭಾಗದ ಜನಸಾಮಾನ್ಯರು ಹೇಳುತ್ತಾರೆ. ಪೂಜೆಯ ಸಂದರ್ಭದಲ್ಲಿ ಶುಚಿತ್ವಕ್ಕೆ ಹೆಚ್ಚಿನ ಗಮನವನ್ನು ನೀಡಲಾಗುತ್ತದೆ. ಸ್ಥಳೀಯರ ಪ್ರಕಾರ ಇಂತಹ ವಾರ್ಷಿಕ ಪೂಜೆಗೆ ಗಾಮನ ಹಬ್ಬ ಎಂದೂ ಕರೆಯಲಾಗುತ್ತದೆ.
ನೆಲದಿಂದ ತನ್ನಿಂದ ತಾನೆ ಮಣ್ಣಿನ ಮೂರ್ತಿಗಳು ಹುಟ್ಟಿ ಬರುತ್ತವೆ. ಇದು ವಿಸ್ಮಯವನ್ನು ಮೂಡಿಸುತ್ತದೆ. ವರ್ಷದ ಎಲ್ಲಾ ಸಮಯದಲ್ಲಿಯೂ ಮಣ್ಣಿನ ಆಕೃತಿಗಳು ಮೂಡಿ ಬರುತ್ತವೆ. ಹೀಗೆ ಮಣ್ಣಿನ ಮೂರ್ತಿಗಳು ಹುಟ್ಟಿ ಬರುವ ಪ್ರದೇಶದಲ್ಲಿ ದೇವರ ತಾಣಗಳನ್ನು ಮಾಡಲಾಗಿದೆ. ಶಿರಗುಣಿ ಭಾಗದಲ್ಲಿ ಮೂರ್ತಿಗಳು ಉದ್ಭವವಾಗುವ ಪ್ರದೇಶದಲ್ಲಿ ಚೌಡಿ, ನಾಗರು ಸೇರಿದಂತೆ ದೇವ-ದೇವತೆಗಳ 11 ಗಣಗಳಿವೆ ಎನ್ನುವುದು ನಂಬಿಕೆ. ನಮ್ಮಲ್ಲಿ ಪ್ರತಿ ವರ್ಷ ವಿಶೇಷ ಪೂಜೆ ಮಾಡಲಾಗುತ್ತದೆ. ನನ್ನ ಅರಿವಿಗೆ ಬಂದಂತೆ ಕನಿಷ್ಟ 40 ವರ್ಷಗಳಿಂದ ಈ ಪ್ರದೇಶದಲ್ಲಿ ಮಣ್ಣಿನ ಮೂರ್ತಿಗಳು ಹುಟ್ಟುತ್ತಿವೆ. ಒಂದೊಂದು ವರ್ಷ ಒಂದೊ ಎದರೋ ಮೂರ್ತಿಗಳು ಹುಟ್ಟಿದರೆ ಒಂದೊಂದು ವರ್ಷ ಆರೆಂಟು ಮಡಿಕೆಗಳು ಮೇಲೆ ಬರುತ್ತವೆ. ಆದರೆ ಈ ಮಡಿಕೆಯ ಆಕರತಿಗಳು ಹೇಗೆ ಹುಟ್ಟುತ್ತವೆ ಎನ್ನುವುದು ನಮಗೆ ಗೊತ್ತಿಲ್ಲ ಎಂದು ಮುಸ್ಕಿಯ ಎ. ವಿ. ಭಟ್ಟ ಅವರು ಹೇಳುತ್ತಾರೆ.
ಮಣ್ಣಿನ ಮಡಿಕೆಗಳು ಏಳುವ ಸ್ಥಳಕ್ಕೆ ಬೇರೆ ಬೇರೆ ಪ್ರದೇಶಗಳಲ್ಲಿ  ಬೇರೆ ಬೇರೆ ರೀತಿಯ ನಂಬಿಕೆಗಳಿವೆ. ಚೌಡಿಕಟ್ಟೆ, ನಾಗರಬನ, ಬೀರಪ್ಪನ ಕಟ್ಟೆ, ದೇವರ ಕಾನು ಹೀಗೆ ವಿವಿಧ ಹೆಸರುಗಳಿಂದ ಕರೆಯುವ ಈ ಸ್ಥಳಗಳ ಕುರಿತು ಇತಿಹಾಸಕಾರರಾದ ಲಕ್ಷ್ಮೀಶ ಹೆಗಡೆ ಅಧ್ಯಯನವನ್ನು ಮಾಡಿದ್ದಾರೆ. ಪರಿಸರ ಬರಹಗಾರ ಶಿವಾನಂದ ಕಳವೆ ಅವರು ಹಲವಾರು ಮಾಹಿತಿಗಳನ್ನು ಕಲೆಹಾಕಿದ್ದಾರೆ. ಇಂತಹ ದೇವರಕಾಡುಗಳನ್ನು ಉಳಿಸುವ ಸಲುವಾಗಿ ಪಶ್ಚಿಮ ಘಟ್ಟ ಕಾರ್ಯಪಡೆಯ ನಿಕಟಪೂರ್ವ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹಲವು ಕ್ರಮಗಳನ್ನು ಕೈಗೊಂಡಿರುವುದೂ ಉಲ್ಲೇಖನೀಯ.
ಆದರೆ ವಾಸ್ತವದಲ್ಲಿ ಇಂತಹ ಪ್ರದೇಶದಗಳಲ್ಲಿ ಮಣ್ಣಿನ ಮಡಿಕೆ ಹುಟ್ಟುತ್ತದೆ ಎನ್ನುವುದು ಸ್ಥಳೀಯರ ಕಲ್ಪನೆಯಾಗಿದೆ. ಇಂತಹ ಮಣ್ಣಿನ ಮಡಕೆಗಳಿಗೆ 2 ಶತಮಾನಗಳ ಇತಿಹಾಸವಿದೆ. ಹಿಂದೆ ಈ ಪ್ರದೇಶಗಳು ಜೈನರ ಆಳ್ವಿಕೆಯ, ಜೈನರು ಪೂಜೆ ಮಾಡುವ ಸ್ಥಳಗಳಾಗಿದ್ದವು. ಜೈನರು ಮಣ್ಣಿನಿಂದ ವಿವಿಧ ಮೂತರ್ಿಗಳನ್ನು ಮಾಡಿ ಪೂಜಿಸಿ ಆ ನಂತರದಲ್ಲಿ ಅವನ್ನು ಮಣ್ಣಿನಲ್ಲಿ ಹೂಳುತ್ತಿದ್ದರು. ಆದರೆ ಕಾಲ ಕ್ರಮೇಣ ಈ ಭಾಗದಲ್ಲಿ ಜೈನರ ಪ್ರಾಬಲ್ಯ ಕಡಿಮೆಯಾಯಿತು. ಮನ್ಣಿನಲ್ಲಿ ಹೂಳಿದ ಮೂತರ್ಿಗಳು ನಿಧಾನವಾಗಿ ಮಳೆಗಾಲದ ಸಂದರ್ಭದಲ್ಲಿ ಭೂಮಿಯಿಂದ ಮೇಲೆ ಬರಲು ಆರಂಭಿಸಿದವು. ಇದನ್ನೇ ಸ್ಥಳೀಯರು ಮಣ್ಣಿನ ಮೂತರ್ಿ ಹುಟ್ಟುವುದು ಎನ್ನುತ್ತಿದ್ದಾರೆ. ಇದರಲ್ಲೇನೂ ನಿಗೂಡತೆಯಿಲ್ಲ ಎಂದು ಇತಿಹಾಸಕಾರರಾದ ಲಕ್ಷ್ಮೀಶ ಹೆಗಡೆ ಸೋಂದಾ ಹೇಳುತ್ತಾರೆ.
***
ಮಣ್ಣಿನ ಮಡಿಕೆಗಳು ಏಳುವ ಸ್ಥಳಗಳು ಶಿರಸಿಯಲ್ಲಿ ಸಾಕಷ್ಟಿವೆ. ಸ್ಥಲೀಯರು ಇಂತಹ ಸ್ಥಳದಲ್ಲಿ ವಾಷರ್ಿಕವಾಗಿ ಪೂಜೆ ಮಾಡುತ್ತಾರೆ. ಇದನ್ನು ಗಾಮನ ಹಬ್ಬ ಎಂದು ಕರೆಯಲಾಗುತ್ತದೆ. ಮಳೆ ಹನಿ ಬಿದ್ದು ಮಣ್ಣಿ ಸಡಿಲವಾದಾಗ ನೆಲದಲ್ಲಿ ಹೂತಿಟ್ಟ ಗೊಂಬೆಗಳು ಮೇಲಕ್ಕೆ ಬರುತ್ತವೆ. ಇದನ್ನು ಸ್ಥಳೀಯರು ಮಡಿಕೆ ಏಳುವುದು ಎನ್ನುತ್ತಾರೆ ಅಷ್ಟೇ. ಈ ಗೊಂಬೆಗಳಿಗೆ 300-400 ವರ್ಷಗಳ ಇತಿಹಾಸವಿದೆ.
ಶಿವಾನಂದ ಕಳವೆ

***

(ಮಾ.13ರಂದು ಕನ್ನಡಪ್ರಭದ ಉತ್ತರ ಕನ್ನಡ ಆವೃತ್ತಿಯಲ್ಲಿ ಪ್ರಕಟವಾಗಿದೆ)

Thursday, March 12, 2015

ವ್ಯತ್ಯಾಸ

ನನ್ನ ಬಳಿ ದುಡ್ಡಿಲ್ಲದಿದ್ದಾಗ
ಅವಳು ಪ್ರೀತಿಸಲಿಲ್ಲ |
ದುಡ್ಡು ಮಾಡಿದ ಮೇಲೆ
ನನಗೆ ಆ ಪ್ರೀತಿ
ಬೇಕೆನ್ನಿಸಲಿಲ್ಲ ||

***

ಬಡತನವಿದ್ದಾಗ ಬಳಿಯಲ್ಲಿ
ಮಿತ್ರರಿದ್ದರು, ನಗುವಿತ್ತು.
ಹರುಷದ ಅಲೆ-ಅಲೆದಿತ್ತು..
ಜೊತೆಗಾರರಿದ್ದರು...
ಸಿರಿ ಬಂದ ನಂತರ ಮಾತ್ರ
ಬದುಕಿಗೆ ವ್ಯವಹಾರವೇ
ಜೊತೆಗಾರನಾಗಿತ್ತು.|

***

ಬಡತನದಲ್ಲಿ ಅರಳುವ
ಪ್ರೀತಿ-ಸಂಭಂಧಗಳು
ಸಿರಿತನದಲ್ಲಿ ಕಮರುತ್ತದೆ
ಅಥವಾ ಅರ್ಥ
ಕಳೆದುಕೊಂಡು ಬಿಡುತ್ತವೆ ||

***

(ಈ ಕವಿತೆಯನ್ನು ಬರೆದಿರುವುದು 07-10-2008ರಂದು ದಂಟಕಲ್ಲಿನಲ್ಲಿ)

Wednesday, March 11, 2015

ಅಂ-ಕಣ

ಲೈಟಾಗಿ ಒಂದ್ ಹನಿ..
ಮತ್ತೆ ಮತ್ತೆ
ಮಾತನಾಡಿದಂತೆಲ್ಲ
ಇನ್ನಷ್ಟು ಹತ್ತಿರ |


ಸುಮ್ಮನೊಂದು ಲೈನ್-
ಅವನು ಸ್ಟಾಂಡ್ ಹಾಕಿ ಹಾಕಿ... ಸ್ಟಾಂಡರ್ಡ್ ಮೆಂಟೇನ್ ಮಾಡಿ ಬಿಟ್ಟ...|


ಚಿಕ್ಕದೊಂದು ಕಥೆ :-

ಇಷ್ಟ ಇದೆ. ಬಹಳ ಕಣೋ..
ಆದ್ರೂ ಏನೋ ತಳಮಳ..
ಒಂದ್ ಕೆಲ್ಸಾ ಮಾಡು..
ನೀನು ಬೇರೆಯವರನ್ನು ನೋಡ್ಕೋ.. ನನ್ನನ್ನು ಬಿಟ್ ಬಿಡು..|

ಮತ್ತೊಂದ್ ಲೈನು :
ಕನಸಿಗೆ
ಇನ್ನೊಂಚೂರು
ಟೈಮ್ ಬೇಕಂತೆ...

ಸುಮ್ನೆ ತಲೆಹರಟೆ :-
ಅವನು ಕಾಲ್ ಮಾಡುವಾಗಲೆಲ್ಲಾ ಕಾಲರ್ ಎತ್ತುತ್ತಾನೆ...

ಅಪಾರ್ಥ :-
ರಸ್ತೆಯಲ್ಲಿ ನಿಂತುಕೊಂಡಿದ್ದೆ.. ರೀ.. ಎತ್ರಿ... ಎಂದೆ..
ಗುರಾಯಿಸಿದಳು..
ರೀ..ಮೇಡಂ.. ನಂಗೆ ಅರ್ಜೆಂಟಿದೆ.. ಬೇಗ ಎತ್ರೀ ಎಂದೆ..
ಯಾಕೋ ಹೆಂಗೈತಿ ಮೈಗೆ ಅಂದ್ಲು..
ಥೋ.. ಮೇಡಂ.. ನಂಗೆ ನೇಗನೇ ಹೋಗ್ಬೇಕು.. ತಾವು ಬೇಗನೆ ಎತ್ತಿದ್ರೆ ಚನ್ನಾಗಿತ್ತು ಅಂದೆ..
ಇನ್ನೇನು ಕಪಾಳಕ್ಕೆ ಬೀಳಬೇಕು ಎನ್ನುವಷ್ಟರಲ್ಲಿ
ರೀ ಮೇಡಂ.. ಬೈಕ್ ಎತ್ರೀ.. ಏನ್ ರಿ.. ಆವಾಗಿಂದ ಹೇಳ್ತಾ ಇದ್ದೀನಿ.. ಎತ್ತೋಕಾಗಲ್ವಾ.. ರಸ್ತೆಗೆ ಅಡ್ಡ ಹಾಕಿದ್ದೀರಲ್ರೀ.. ಎಂದೆ..
ಸರಿಯಾಗಿ ಹೇಳೋಕೇನಾಗಿತ್ತು ನಿಮಗೆ.. ಎಂದು ಬೈದಳು ಮೇಡಂ.. ಸುಮ್ಮನಾದರೆ..
ಜನ ಎಂತಾ ವಿಚಿತ್ರ ಅಲ್ಲಾ.. ಬರೀ ಅಪಾರ್ಥ ಮಾಡ್ಕೋತಾರೆ..||

Tuesday, March 10, 2015

ಬೆಳಕಿನಂತ ಹುಡುಗಿಗೊಂದು ಪತ್ರ -(ಪ್ರೇಮಪತ್ರ-15)

ನನ್ನೊಲವಿನ ಬೆಳಕೆ...,

               ಬಹುಶಃ  ಕ್ರಿಕೆಟಿನಲ್ಲಾಗಿದ್ದರೆ ಶತಕದ ಸಂಭ್ರಮ ಆಚರಣೆ ಮಾಡಬಹುದಿತ್ತು. ಆದರೆ ಇದು ಕ್ರಿಕೆಟ್ ಅಲ್ಲ. ನಮ್ಮದೇ ಬಹುಕು. ಹೌದು ನಾ ನಿನ್ನ ಬಳಿ ಮೊಟ್ಟ ಮೊದಲ ಸಾರಿ ಪ್ರೇಮದ ಕೋರಿಕೆಯನ್ನು ಇಟ್ಟ ನಂತರ ಬಹುಶಃ ಇದು ನೂರೋ ಅಥವಾ ಇನ್ನೂ ಜಾಸ್ತಿಯೋ ಆಗಿರಬೇಕು. ನನ್ನ ಕೋರಿಕೆ ಕಥೆ ಏನಾಯ್ತು ಎಂದು ಕೇಳಿದ್ದು. ಆಗೆಲ್ಲಾ ನೀನು ಹೇಳಿದ್ದೊಂದೇ ಮಾತು ನಂಗಿನ್ನೂ ಸಮಯ ಬೇಕು.
               ನಾನು ನಿನ್ನ ಮೊಟ್ಟಮೊದಲ ಬಾರಿಗೆ ನೋಡಿದ್ದು ಅದ್ಯಾವುದೋ ಸಮಾರಂಭವೊಂದರಲ್ಲಿ. ನೀನು ಹಾಗೂ ನಿನ್ನ ಗೆಳತಿಯರು ಸಮಾರಂಭದ ವೇದಿಕೆಯ ಮೇಲೆ ವಿವಿಧ ಜವಾಬ್ದಾರಿಗಳನ್ನು ಹೊತ್ತುಕೊಂಡು ಪಾತರಗಿತ್ತಿಯಂತೆ ಅತ್ತ ಇತ್ತ ಓಡಾಡುತ್ತಿದ್ದಿರಿ. ನಿನ್ನನ್ನು ನೋಡಿದವನೇ ನಾನು ಬಹುವೇ ಇಷ್ಟ ಪಟ್ಟಿದ್ದೆ. ನಿನ್ನ ಹೆಸರು ಏನಿರಬಹುದು? ನೀನು ಏನು ಮಾಡುತ್ತಿರಬಹುದು ಎಂದೆಲ್ಲಾ ಆಲೋಚಿಸಿ ನಿನ್ನ ಬಗ್ಗೆ ನನ್ನ ದೋಸ್ತರ ಬಳಿ ಕೇಳೋಣ ಎಂದುಕೊಳ್ಳುತ್ತಿದ್ದಾಗಲೇ ಕಾರ್ಯಕ್ರಮ ಆಯೋಜಿಸಿದ್ದವರು ನಿನ್ನ ಹೆಸರನ್ನು ಹೇಳಿದ್ದರು. ಬೆಳಕಿನಂತಹ ಹುಡುಗಿ ನೀನು ನನ್ನ ಮನಸ್ಸಿನಲ್ಲಿ ಆಗಲೇ ಗೂಡು ಕಟ್ಟಿದ್ದೆ.
               ಆ ನಂತರ ನಿನ್ನನ್ನು ನೋಡಬೇಕು, ಮಾತನಾಡಬೇಕು ಎಂದುಕೊಂಡು ನಾನು ಮಾಡಿದ ಕೆಲಸ ಅಷ್ಟಿಷ್ಟಲ್ಲ. ನನ್ನ ದೋಸ್ತರಿಗೆ ನಿನ್ನ ಪರಿಚಯವಿತ್ತಾದರೂ ನಾನು ನಿನ್ನನ್ನು ಪರಿಚಯ ಮಾಡಿಕೊಳ್ಳಬೇಕು ಎಂದುಕೊಂಡೆ. ಗೆಳೆಯರೆಲ್ಲ ಸೇರಿ ಅದೆಲ್ಲೋ ಜಲಪಾತವೊಂದಕ್ಕೆ ಪ್ರವಾಸವನ್ನೂ ಏರ್ಪಡಿಸಿ ನಿನ್ನನ್ನು ಕರೆದಿದ್ದರು. ಖುಷಿಯೆಂಬಂತೆ ನೀನು ಬಂದಿದ್ದೆ. ನನ್ನ ಮನಸ್ಸು ಅರಳಿತ್ತು. ಬಂದವಳನ್ನು ನಾನು ಪರಿಚಯ ಮಾಡಿಕೊಂಡಿದ್ದೆ. ಜಲಪಾತಕ್ಕೆ ಸುಮ್ಮನೆ ಪ್ರವಾಸ ಹೋಗಿದ್ದು ನಾವು. ಜಲಪಾತ ನೋಡಿದ ಖುಷಿಗಿಂತ ನಿನ್ನೊಡನೆ ಮಾತನಾಡಿದ್ದಕ್ಕೆ ಮತ್ತಷ್ಟು ಆನಂದವಾಗಿತ್ತು ನನಗೆ. ಆಗಲೇ ಅಲ್ಲವೇ ನಿನ್ನ ಬಳಿ ನಾನು ಮೊಬೈಲ್ ನಂಬರ್ ಪಡೆದಿದ್ದು.
              ಮೊಬೈಲ್ ನಂಬರ್ ಪಡೆದದ್ದೇನೋ ಆಯ್ತು. ಆಮೇಲೆ ದಿನವಿಡೀ ವಾಟ್ಸಾಪ್ ನಲ್ಲಿ ಚಾಟಿಂಗು ಆರಂಭವಾಯಿತು. ಮೊಬೈಲಿನಲ್ಲಿ ಮಾತು ಕತೆ ಮಧ್ಯ ರಾತ್ರಿಯವರೆಗೂ ಮುಂದುವರಿಯುತ್ತಿತ್ತು. ಆಗಲೇ ನನ್ನೊಳಗೆ ಚಿಗುರಿದ್ದ ನೀನೆಂಬ ಗಿಡ ಮತ್ತಷ್ಟು ಹೆಮ್ಮರವಾಗಲು ಆರಂಭಿಸಿದ್ದು. ಹೀಗಿದ್ದಾಗಲೇ ನನ್ನದೇ ದೋಸ್ತನೊಬ್ಬ ನಿನ್ನ ಬಳಿ ನಾನು ಇಷ್ಟ ಪಡುತ್ತಿರುವುದನ್ನು ಹೇಳಿದ್ದ. ನೀನು ಅಚ್ಚರಿಯಿಂದ ನನ್ನ ಬಳಿ ಕೇಳಿದ್ದೆ `ಯಾಕೆ? ಯಾಕೆ ನನ್ನನ್ನು ಇಷ್ಟಪಟ್ಟೆ' ಅಂತ.
           ನಿನ್ನ ಪ್ರಶ್ನೆಗೆ ನಾನು ಮೊದಲು ತಬ್ಬಿಬ್ಬಾಗಿದ್ದು ನಿಜ. ಆದರೆ ಕೊನೆಗೆ ಸಾವರಿಸಿಕೊಂಡು ನಿನ್ನನ್ನು ಇಷ್ಟ ಪಡಲು ಕಾರಣ ಹೇಳಿದ್ದೆ. ಮಾರುದ್ದದ ಮೆಸೇಜನ್ನು ನಾನು ಅನಾಮತ್ತು 15 ನಿಮಿಷಗಳ ಕಾಲ ಟೈಪ್ ಮಾಡಿ ಬರೆದಿದ್ದೆ. ಆಗೆಲ್ಲಾ ಎಷ್ಟು ಚಡಪಡಿಕೆಯಾಗಿತ್ತು ಗೊತ್ತಾ. ಆದರೆ ಎಲ್ಲವನ್ನೂ ನೀನು ಆವತ್ತೇನೋ ಕೇಳಿದ್ದೆ. ಆದರೆ ನನ್ನ ಪ್ರಶ್ನೆಗೆ ಮಾತ್ರ ಉತ್ತರವನ್ನೇ ಕೊಡಲಿಲ್ಲ.
          ಆ ದಿನದ ನಂತರ ನಾನು ನೀನು ಅದೆಷ್ಟು ಸಾರಿ ಭೇಟಿಯಾಗಿದ್ದೇವಲ್ಲ. ಮಾತನಾಡಿದ್ದೇವೆ. ಮೆಸೇಜ್ ಮಾಡಿಕೊಂಡಿದ್ದೇವೆ. ಪೋನಿನಲ್ಲಿ ಹರಟಿದ್ದೇವೆ. ಮೆಸೇಜ್ ಮಾಡದೇ ಮಿಸ್ ಮಾಡಿಕೊಂಡಿದ್ದೇವೆ. ನಾಟ್ ರೀಚೆಬಲ್ ಆಗಿ ಕಾಡಿಸಿಕೊಂಡಿದ್ದೇವೆ. ನಾನು ಪಿರಿ ಪಿರಿ ಊರು ತಿರುಗುವುದನ್ನು ನೋಡಿ ನಿನ್ನ ಕಾಲಿಗೆ ಚಕ್ರದ ಸುಳಿ ಇದೆಯೇನೋ ಮಾರಾಯಾ ಎಂದೆಲ್ಲ ಕೇಳಿದ್ದು ನನಗಿನ್ನೂ ಹಸಿ ಹಸಿರಾಗಿಯೇ ಇದೆ.
            ಬಹುಶಃ ನಾನು ನೀನು ಮಾತನಾಡಿದ್ದು ಅದೆಷ್ಟು ತಾಸುಗಲೋ. ನೀನು ಒಂದೊಂದು ಅಕ್ಷರವಾಗಿಯೂ ನನ್ನ ಬಳಿ ಉಲಿಯುತ್ತಿದ್ದರೆ ನಾನು ಇಂಚಿಂಚು ನಿನಗೆ ಶರಣಾಗುತ್ತಿದ್ದೆ. ಮನಸ್ಸಿನಲ್ಲಿ ನಿನ್ನದೇ ರೂಪವನ್ನು ಕೆತ್ತಿಕೊಳ್ಳುತ್ತಿದ್ದೆ. ಹಾಗೆ ನೋಡಿದರೆ ನೀನು ನನ್ನ ಬಳಿ ನಕ್ಕು ಮಾತನಾಡಿದ್ದು ಕಡಿಮೆ. ಗಂಭೀರವಾಗಿ ಮಾತನಾಡಿದ್ದೀಯಾ. ಕಾಡಿಸಿದಾಗಲೆಲ್ಲ ಗದರಿದ್ದೀಯಾ. ಆದರೆ ಇವೆಲ್ಲವೂ ನನಗೆ ಇಷ್ಟವಾಗಿದೆ. ನಿನ್ನ ನಗುವಿಗಿಂತಲೂ ಹೆಚ್ಚು ಆಪ್ತವಾಗಿಬಿಟ್ಟಿದೆ.
            ಮೊದಲ ಸಾರಿ ನಾನು ನಿನಗೆ ಪ್ರಪೋಸ್ ಮಾಡಿದ ನಂತರ ಅದೆಷ್ಟು ನೂರು ಸಾರಿ ಕೇಳಿದ್ದೇನೋ. ಮೊದಲ ಸಾರಿ ಉತ್ತರ ಹೇಳದಿದ್ದರೂ ನಂತರದ ದಿನಗಳಲ್ಲಿ ನೀನು ನನಗೆ ಸಮಯ ಬೇಕು ಮಾರಾಯಾ ಎಂದಿದ್ದೆ. ಮನಸ್ಸಿನಲ್ಲಿ ಗೊಂದಲದ ತರಂಗಗಳು ಎದ್ದಿವೆ. ಏನು ಹೇಳಬೇಕೋ ಕಾಣೆ ಎಂದು ಹೇಳಿದ್ದೆ. ಮುಂದಿನ ಬದುಕು ಯಾವ ರೀತಿಯಿರುತ್ತದೆಯೋ ಕಾಣೆ ಎಂದೂ ಹೇಳಿದ್ದೆ. ಅದಕ್ಕೆಲ್ಲ ನಾನು ನನ್ನ ನಿಲುಕಿಗೆ ಸಿಕ್ಕಂತೆ ಉತ್ತರ ವನ್ನು ಕೊಟ್ಟಿದ್ದೆ. ನಾನು ಪದೇ ಪದೆ ಕೇಳುತ್ತಲೇ ಇದ್ದೆ. ನೀನು ಟೈಂ ಕೊಡು ಮಾರಾಯಾ.. ಇದು ಬದುಕಿನ ವಿಷಯ. ಆಲೋಚನೆ ಮಾಡಿ ಹೇಳ್ತೇನೆ ಎಂದಿದ್ದೆ. ಸ್ವಾರ್ಥಿ ನಾನು.. ಆಲೋಚನೆ ಮಾಡಿ ಹೇಳು. ಎಷ್ಟು ಬೇಕಾದರೂ ಟೈಂ ತಗೋ. ಆದರೆ ನನ್ನ ಪ್ರಪೋಸಲ್ಲಿಗೆ ನೋ ಅನ್ನಬೇಡ ಎಂದೂ ಹೇಳಿದ್ದೆ ಅಲ್ವಾ.
              ಈಗಲೂ ನಾನು ಕೇಳುತ್ತಿದ್ದೇನೆ. ಮುಕ್ಕಾಲು ಪಾಲು ನೀನು ಇಷ್ಟವಾಗಿದ್ದೀಯಾ ಕಣೋ. ಆದರೆ ಕಾಲು ಭಾಗದಷ್ಟು ನನ್ನಲ್ಲೇ ಏನೋ ಅಳುಕು. ಅದೇನೆಂಬುದನ್ನು ಹೇಳಲಿಕ್ಕೆ ಆಗುತ್ತಿಲ್ಲ. ಮನೆಯವರ ಭಯವಾ? ಮುಂದಿನ ಬದುಕಿನ ಪ್ರಶ್ನೆಯಾ? ಗೊಂದಲವಿನ್ನೂ ಸ್ಪಷ್ಟವಾಗಿಲ್ಲ. ಒಮ್ಮೊಮ್ಮೆ ಒಂದೊಂದು ರೀತಿ ಅನ್ನಿಸುತ್ತಿದೆ. ನಾನಿನ್ನೂ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ ಮಾರಾಯಾ.. ನಂಗೆ ಯಾಕೋ ಇನ್ನೂ ಸ್ವಲ್ಪ ಸಮಯಬೇಕು ಅನ್ನಿಸ್ತಾ ಇದೆ ಅಂತಲೂ ಹೆಳಿದ್ದೆ. ನಾನು ಮತ್ತೆ ಮತ್ತೆ ಕಾಯುತ್ತಿದ್ದೇನೆ. ನೀನು ಒಂದು ಸಾರಿ ಹೂ ಅಂದು ಬಿಡುತ್ತಿದ್ದೀಯಾ ಎಂದುಕೊಂಡಿದ್ದೇನೆ.
            ನಿಜ ಹೇಳ್ತಾ ಇದ್ದೀನಿ ಬೆಳಕೇ.. ನಿನ್ನನ್ನು ನಾನು ಖಂಡಿತ ಚನ್ನಾಗಿ ನೋಡಿಕೊಳ್ಳುತ್ತೇನೆ. ಬದುಕಿನಲ್ಲಿ ನೋವು ಬರದಂತೆ ನೋಡಿಕೊಳ್ಳುತ್ತೇನೆ ಎಂದು ಹೇಳುವುದಿಲ್ಲ. ನೋವುಗಳು ಆಕಸ್ಮಿಕವಂತೆ. ಥಟ್ಟನೆ ಬಂದು ಕಾಡುತ್ತವೆ. ಆದರೆ ಇಂತಹ ನೋವಿನ ಕ್ಷಣದಲ್ಲಿ ನಾನು ನಿನ್ನ ಜೊತೆಗೆ ಇರುತ್ತೇನೆ. ಕೈಹಿಡಿದು ಜೊತೆಗೆ ಸಾಗುತ್ತೇನೆ. ನಾನು ಒಳ್ಳೆ ಜಾಬ್ ಹಿಡಿಯಬೇಕು ಎಂದಿದ್ದೆ. ಖಂಡಿತ ಗೆಳತಿ, ನಾನು ನಿನ್ನ ಪಾಲಿಗೆ ಏಣಿಯಾಗುತ್ತೇನೆ. ನೀನು, ನಿನ್ನ ಕುಟುಂಬ, ನಾನು ಹಾಗೂ ನನ್ನ ಕುಟುಂಬ ಒಟ್ಟಾಗಿ ಖುಷಿಯಿಂದ ಬಾಳು ನಡೆಸಬೇಕು ಎನ್ನುವ ಕನಸು ನನ್ನದು. ನನಗೆ ನನ್ನ ಕುಟುಂಬ ಬೇರೆ ಅಲ್ಲ. ನಿನ್ನ ಕುಟುಂಬವೂ ಬೇರೆಯಲ್ಲ. ನಿನ್ನ ಅಪ್ಪ ಅಮ್ಮ ನನಗೂ ಅಪ್ಪ ಅಮ್ಮನಂತೆ ಅಲ್ಲವಾ? ಎಂದು ನಾನು ಕೇಳಿದ್ದಿನ್ನೂ ಕಿವಿಯಲ್ಲಿ ಮತ್ತೆ ಮತ್ತೆ ನೆನಪಾಗುತ್ತಿದೆ.
                 ನಿನ್ನ ಹತ್ತಿರ ಮಾತಾಡಬೇಕು ಸಿಗು ಅಂದಿದ್ದೆ ನಾನು. ಅದೆಷ್ಟೋ ಸಾರಿ ನಿನ್ನ ಹತ್ತಿರ ಕೇಳಿಕೊಂಡ ನಂತರ ಸಿಗಲು ನೀನು ಒಪ್ಪಿದ್ದೆ. ಆದರೆ ನೀನು ಜೊತೆಯಲ್ಲಿದ್ದಾಗ ಮಾತ್ರ ಏನನ್ನೂ ಮಾತನಾಡಲಿಕ್ಕೆ ಆಗಿರಲೇ ಇಲ್ಲ. ಎಷ್ಟೆಲ್ಲ ಮಾತನಾಡುವುದು ಬಾಕಿ ಇತ್ತು. ಆದರೆ ನಿನ್ನೆದುರು ನನ್ನ ಮಾತು ಹೊರಡಲೇ ಇಲ್ಲ. ಸುಮ್ಮನೇ ಉಳಿದಿದ್ದೆ ನಾನು. ನೀನು ಮಾತನಾಡುತ್ತಿದ್ದರೆ ನಾನು ನಿನ್ನನ್ನು ನೋಡುತ್ತ ಕುಳಿತಿರುತ್ತಿದ್ದೆ. ಬಹುಶಃ ಈ ಪತ್ರ ಬರೆಯಲು ಅದೇ ಕಾರಣ ಇರಬೇಕು ನೋಡು. ನಾನು ಬಾಯಲ್ಲಿ ಆಡಲು ಸಾಧ್ಯವಾಗದ ಮಾತುಗಳನ್ನೆಲ್ಲ ಅಕ್ಷರ ರೂಪದಲ್ಲಿ ಇಡುತ್ತಿದ್ದೇನೆ.
                 ಮತ್ತೊಮ್ಮೆ.. ಮಗದೊಮ್ಮೆ ಹೇಳುತ್ತೇನೆ ಬೆಳಕೇ.. ನಾ ನಿನ್ನ ಇಷ್ಟಪಟ್ಟಿದ್ದೇನೆ. ಮನದಲ್ಲಿ ನಿನ್ನದೊಂದು ಗುಡಿ ಭದ್ರವಾಗಿ ಸ್ಥಾಪನೆಯಾಗಿಬಿಟ್ಟಿದೆ. ನಾವು ಮುಂದೆ ಅದೆಷ್ಟೋ ವಸಂತಗಳನ್ನು ಜೊತೆಯಾಗಿ ಬಾಳಬೇಕಿದೆ. ಒಟ್ಟಾಗಿ ಹೆಜ್ಜೆ ಹಾಕಬೇಕಿದೆ. ನಾನು ಮುಂದಿನ ಬದುಕಿನ ತುಂಬ ನಿನ್ನ ಜೊತೆಗೆ ಆಸರೆಯಾಗಿ ಇರುತ್ತೇನೆ. ನೀನು ನನಗೆ ಜೊತೆಯಾಗಿರು. ಕಷ್ಟದಲ್ಲಿ, ಸುಖದಲ್ಲಿ, ಶಾಂತಿ, ನೆಮ್ಮದಿಯಲ್ಲಿ ಇಬ್ಬರೂ ಒಟ್ಟಾಗಿ ಸಾಗೋಣ. ಒಲವಿನ ಜೊತೆಗೆ ಜೀವನ ನಡೆಸೋಣ. ಒಲವನ್ನು ಕೊಟ್ಟು, ಒಲವನ್ನು ಪಡೆದು ನಡೆಯೋಣ. ಬೆಳಕಿನ ಹುಡುಗಿ.. ನನ್ನ ಬಾಳಲ್ಲಿ ಎಂದಿಗೂ ಬೆಳಕಿನಂತಿರು. ಜೊತೆಯಾಗಿರು.
                   ನಂಗೆ ಸಮಯ ಬೇಕು ಅಂದಿದ್ದೆ.. ತಗೋ.. ಆಲೋಚನೆ ಮಾಡು.. ಯಾವುದೇ ಅಳುಕು ಬೇಡ. ಭಯ ಬೇ...ಡ.. ನಿನ್ನ ಜೊತೆಗೆ ನಾನಿದ್ದೇನೆ. ಸಮಸ್ಯೆಯನ್ನು ಒಟ್ಟಾಗಿ ಪರಿಹಾರ ಮಾಡೋಣ. ಜೊತೆಗೆ ಹೆಜ್ಜೆಹಾಕೋಣ. ಬೇಗನೆ ನನಗೆ ಉತ್ತರ ಕೊಡು. ಖುಷಿ ಖುಷಿಯಾಗಿ ಜೀವನ ಸವೆಸೋಣ. ಮತ್ತೆ ಮತ್ತೆ ಹಸಿರಾಗೋಣ. ಬೇಗ ುತ್ತರ ಕೊಡು. ನೀ ಕೊಡುವ ಉತ್ತರ ನನ್ನ ಪಾಲಿಗೆ ಹಸಿರಾಗಿರಲಿ, ಉಸಿರಾಗಿರಲಿ. ಬರಡು ಮಾಡದೇ ಇರಲಿ.

ಇಂತಿ ನಿನ್ನವನು
ವಿನಯವಂತ        

Saturday, March 7, 2015

ಮಿನಿ ಹನಿಗಳು

ಮಾರುತಿ ಕಾರು

ಹವ್ಯಕನಿಗೆ ಹಣ ಬರತೊಡಗಿದರೆ
ಕೊಳ್ಳುವನು ಮಾರುತಿ ಕಾರು |
ಹಣ ಖಾಲಿಯಾದರೆ ಮಾತ್ರ
ಕಾರು ಮಾರುತಿ ||

ಮಂತ್ರಿ ಭ್ರ(ನಿ)ಷ್ಟ

ಅವನೊಬ್ಬ ಮಂತ್ರಿ
ಪಕ್ಷಕ್ಕೆ ಬಹುನಿಷ್ಟ |
ಹಣದ ವಿಷಯದಲ್ಲಿ ಆತ
ಅಷ್ಟೇ  ಭ್ರಷ್ಟ ||

ಹಾಸ್ಯಕವಿ

ಅವನೊಬ್ಬ ಹಾಸ್ಯಕವಿ
ಅವನ ನಗೆ ಹನಿಗಳಿಗೆ
ಮಾತ್ರ, ನಗಿ ಎಂದು
ಹೇಳಬೇಕಷ್ಟೆ||

ಹಾವಿನ ವಿಷ

ಭೂಮಿಯ ಮೇಲೆ
ತೆವಳಿಯೂ ಕೂಡ
ಸಂಗ್ರಹಿಸಿದೆ ವಿಷ |
ಅದು ಯಮನ ಪಾಷ ||

ಬದಲಾವಣೆ

ಮೊದಲೊಮ್ಮೆ ಆಗಿತ್ತು
ಚಿನ್ನದ ಬೆಳೆ ವೆನಿಲ್ಲಾ |
ಈಗ ಅದು ಆಗಿದೆ
ಬೆಳೆದವನಿಗೆ ಏನಿಲ್ಲಾ ||