Tuesday, September 6, 2016

ಸಂಪ್ರದಾಯದ ಹಾಡುಗಳಲ್ಲಿ ಗಣೇಶ ಚತುರ್ಥಿಯ ವರ್ಣನೆ

ಮನೆ ಮನೆಗಳಲ್ಲಿ ಗಣೇಶ ಚತುರ್ಥಿಯ ಸಂಭ್ರಮ-ಸಡಗರ ಮೇರೆ ಮೇರಿದೆ. ಎಲ್ಲ ಕಡೆಗಳಲ್ಲಿಯೂ ಗಣೇಶ ಚತುರ್ಥಿ ಹಬ್ಬದ ಆಚರಣೆಗೆ ಕ್ಷಣಗಣನೆ ಆರಂಭವಾಗಿದೆ. ಗಣೇಶ ಚತುರ್ಥಿಯ ಹಬ್ಬಕ್ಕೆ ಸಂಪ್ರದಾಯದ ಹಾಡುಗಳಲ್ಲಿ ವಿಶೇಷ ಅರ್ಥವನ್ನೇ ನೀಡಲಾಗಿದೆ. ಮಂಗಳಮೂರ್ತಿ ವಿನಾಯಕನ ಚತುರ್ಥಿಗೆ ತನ್ನದೇ ಆದ ಹೊಸ ಅರ್ಥವನ್ನು ಹಳ್ಳಿಗಳ ಸಂಪ್ರದಾಯದ ಹಾಡುಗಳು ನೀಡುವ ಮೂಲಕ ವಿಶೇಷ ಮೆರಗಿಗೂ ಕಾರಣವಾಗಿವೆ.
ಸಂಪ್ರದಾಯದ ಹಾಡುಗಳನ್ನು ಹಬ್ಬಗಳು ನಡೆಯುವ ಸಂದರ್ಭದಲ್ಲಿ ವಿಶೇಷವಾಗಿ ಹಾಡಲಾಗುತ್ತದೆ. ಎಲ್ಲಾ ಜಾತಿಗಳವರೂ ವಿಶೇಷವಾಗಿ ಹಾಡುವ ಸಂಪ್ರದಾಯದ ಹಾಡುಗಳು ಲಯಬದ್ಧವಾಗಿಯೂ, ಕಿವಿಗೆ ಇಂಪಾಗುವ ರೀತಿಯಲ್ಲಿಯೂ ಇರುತ್ತವೆ. ಜೊತೆಜೊತೆಯಲ್ಲಿ ಗಾಂವಟಿ ಶಬ್ದಗಳನ್ನು ಒಳಗೊಂಡಿದ್ದು ಸರಳ ಭಾಷೆಯಲ್ಲಿ ಮಹತ್ತರ ಅರ್ಥಗಳನ್ನು ಜಗತ್ತಗೆ ಸಾರಿ ಹೇಳುತ್ತವೆ. ಗಣೇಶ ಹಬ್ಬದ ಕುರಿತಂತೆಯೂ ಸಾಕಷ್ಟು ಸಂಪ್ರದಾಯದ ಹಾಡುಗಳು ಚಾಲ್ತಿಯಲ್ಲಿವೆ. ವಿಭಿನ್ನ ಕಥೆಗಳೂ ಇವೆ. ನಿಮ್ಮ ಮುಂದೆ ನೀಡಲಾಗುತ್ತಿರುವ ಈ ಸಂಪ್ರದಾಯದ ಹಾಡಿನಲ್ಲಿ ಶಿವ ಹಾಗೂ ಪಾರ್ವತಿಯರ ನಡುವಿನ ಸಂವಾದ ಬೆರಗುಗೊಳಿಸುತ್ತದೆ. ಪೂರ್ವಾರ್ಧ ಹಾಗೂ ಉತ್ತರಾರ್ಧ ಎಂಬ ಎರಡು ಪ್ರಮುಖ ಭಾಗಗಳಿದ್ದು ಪಾರ್ವತಿ ತನ್ನ ತವರು ಮನೆಗೆ ಹೋಗುವುದು, ಆಕೆಯನ್ನು ಮರಳಿ ಮನೆಗೆ ಕರೆದುಕೊಂಡು ಬರಲು ಶಿವ ತನ್ನ ಪುತ್ರನಾದ ಗಣಪನನ್ನು ಕಳಿಸುವುದು ಹಾಗೂ ಮರಳಿ ಬಂದ ನಂತರ ಪಾರ್ವತಿಯ ತವರು ಮನೆಯಲ್ಲಿ ಏನೇನಾಯಿತು ಎನ್ನುವುದನ್ನು ಶಿವ ಕೇಳಿ ತಿಳಿದುಕೊಳ್ಳುವ ಸನ್ನಿವೇಶಗಳನ್ನು ಒಳಗೊಂಡಿದೆ.
ಕನಸ ಕಂಡೆನು ರಾತ್ರಿ ಬೆನಕ ತಾನಾಡುವುದ ವನಜಾಕ್ಷಿ ಗೌರಿ ಪಿಡಿದೆತ್ತಿ
ಪಿಡಿದು ಮುದ್ದಾಡುವುದ ನಿನ್ನಿರುಳು ಕಂಡೆ ಕನಸನ್ನ...
ಎಂದು ಆರಂಭವಾಗುವ ಈ ಹಾಡಿನಲ್ಲಿ ಪಾರ್ವತಿಯ ತಂದೆ ಪರ್ವತರಾಜನ ಬಳಿ ಪರ್ವತರಾಜನ ಮಡದಿ ಮಗಳು ಹಾಗೂ ಮೊಮ್ಮಗನ ನೋಡುವ ಬಯಕೆಯನ್ನು ವ್ಯಕ್ತ ಪಡಿಸುತ್ತಾಳೆ. ರಾತ್ರಿ ಕನಸಿನಲ್ಲಿ ಪಾರ್ವತಿ ತನ್ನ ಪುತ್ರ ಗಣಪನನ್ನು ಎತ್ತಿ ಮುದ್ದಾಡಿದಂತೆ ಕನಸು ಬಿತ್ತು ಎನ್ನುತ್ತಾಳೆ. ನಂತರ ಮಡದಿಯ ಕೋರಿಕೆಗೆ ಅನುಗುಣವಾಗಿ ಪರ್ವತರಾಜ ಕೈಲಾಸಕ್ಕೆ ತೆರಳಿ ಶಿವ, ಪಾರ್ವತಿ ಹಾಗೂ ಗಣಪನನ್ನು ಕರೆಯುತ್ತಾನೆ. ಅದಕ್ಕೆ ಪ್ರತಿಯಾಗಿ ಪಾರ್ವತಿ ತಾನು ತವರಿಗೆ ತೆರಳುತ್ತೇನೆ ಎಂದು ವಿನಂತಿಸಿಕೊಳ್ಳುತ್ತಾಳೆ. ಆದರೆ ಅದಕ್ಕೆ ಪ್ರತಿಯಾಗಿ ಶಿವ ಪಾರ್ವತಿಯ ಬಳಿ `ನಿನ್ನ ತವರಿನ ಜನ ಬಡವರು. ಅಲ್ಲೇಕೆ ಹೋಗುತ್ತೀಯಾ..' ಎನ್ನುತ್ತಾನೆ.
ಚಿಕ್ಕ ಬೆನವಣ್ಣನು ಚಕ್ಕುಲಿಯ ಬೇಡಿದರೆ ನೆತ್ತಿಮೇಲೋಂದ ಸೊಣೆವರೋ..
ಶ್ರೀಗೌರಿ ನೀನಲ್ಲಿಗೆ ಹೋಗಿ ಫಲವೇನೂ..?
ಎಂದು ಹೇಳುತ್ತಾನೆ. ಅಂದರೆ ಪುಟ್ಟ ಬಾಲಕನಾದ ಗಣಪ ಚಕ್ಕುಲಿ ಸೇರಿದಂತೆ ವಿವಿಧ ಭಕ್ಷ್ಯಗಳನ್ನು ಬಯಸಿ ಕೇಳಿದರೆ ಬಡವರಾದ ನಿನ್ನ ತವರಿನ ಜನ ಅದನ್ನು ಕೊಡುವ ಬದಲು ತಲೆಯ ಮೇಲೆ ಮೊಟಕಿ ಸುಮ್ಮನಿರಿಸುತ್ತಾರೆ ಎಂದು ಶಿವ ತನ್ನ ಮಡದಿಯನ್ನು ಹಂಗಿಸುತ್ತಾನೆ.
ಇಂದು ಹೋದರೆ ನೀನು ಕಂದರನು ಬಿಟ್ಟೋಗು
ಇಂದಿಗೆ ಮೂರು ದಿನದಲ್ಲಿ, ಬರದಿದ್ದರೆ ಚಂದ್ರಶೇಖರನ ಕೊರಳಾಣೆ..
ಎಂದು ಶಿವ ಹೆಂಡಿತ ಬಳಿ ಹೇಳಿ ಮೂರೇ ದಿನದಲ್ಲಿ ಮರಳಿ ಕೈಲಾಸಕ್ಕೆ ಬಾ. ತವರಿಗೆ ಕರೆಯಲು ಬಂದಿರುವ ತಂದೆಯ ಜೊತೆ ಹೋಗಲು ಬಯಸಿದರೆ ಗಣಪನನ್ನು ಕೈಲಾಸದಲ್ಲಿಯೇ ಬಿಟ್ಟುಹೋಗು ಎಂದು ಆಜ್ಞಾಪಿಸುತ್ತಾನೆ. ನಂತರ ಪಾರ್ವತಿ ಗಣಪನನ್ನು ಕೈಲಾಸದಲ್ಲಿಯೇ ಬಿಟ್ಟು ತವರಿಗೆ ಹೋಗುತ್ತಾಳೆ. ಪಾರ್ವತಿ ತವರಿಗೆ ಹೋದ ನಂತರ ಶಿವನಿಗೆ ಕೈಲಾಸದಲ್ಲಿ ಏಕಾಅಂಗಿ ಭಾವ ಕಾಡುತ್ತದೆ. ಪಾರ್ವತಿ ತವರಿಗೆ ಹೋದ ಒಂದೇ ದಿನದಲ್ಲಿಯೇ ಒಂದು ವರ್ಷವಾದಂತೆ ಅನ್ನಿಸುತ್ತದೆ. ಬೇಸರಿಸಿದ ಶಿವ ಮರುದಿನವೇ ಗಣಪನ ಬಳಿ ಆತನ ಅಜ್ಜನಮನೆಗೆ ಹೋಗಿ ತಾಯಿಯನ್ನು ಕರೆದುಕೊಂಡು ಬಾ ಎಂದು ಆಜ್ಞಾಪಿಸುತ್ತಾನೆ.
ತಾಯಿಯನ್ನು ಕರೆದುಕೊಂಡು ಬರಲು ಭೂಲೋಕಕ್ಕೆ ಬರುತ್ತಿರುವ ಗಣಪನ ಕುರಿತು ತಿಳಿದ ಭೂಲೋಕ ವಾಸಿಗಳು ಗಣಪನ್ನು ದಾರಿ ಮಧ್ಯದಲ್ಲಿಯೇ ತಡೆದು ನಿಲ್ಲಿಸಿ ಸಕಲ ಭಕ್ಷ್ಯ ಭೋಜನಗಳನ್ನೂ ನೀಡುತ್ತಾರೆ. ಅವುಗಳನ್ನು ತಿಂದು ದೊಡ್ಡ ಹೊಟ್ಟೆಯನ್ನು ಮಾಡಿಕೊಂಡು ದಾರಿಯಲ್ಲಿ ಬರುತ್ತಿರುವಾಗ ಎಡವಿ ಬೀಳುವ ಗಣಪನ ಹೊಟ್ಟೆ ಒಡೆದು ಹೋಗುತ್ತದೆ. ಕೊನೆಗೆ ಆ ಹೊಟ್ಟೆಗೆ ಹಾವನ್ನು ಸುತ್ತುತ್ತಾನೆ ಎನ್ನುವುದು ಹಾಡಿನಲ್ಲಿ ಬರುವ ವಿವರಗಳು. ಆ ನಂತರದಲ್ಲಿ ಗಣಪನನ್ನು ನೋಡಿ ಚಂದ್ರ ನಗುವುದು ಹಾಗೂ ಚಂದ್ರನಿಗೆ ಶಾಪ ಕೊಡುವ ಕತೆಗಳೆಲ್ಲ ಪ್ರತಿಯೊಬ್ಬರಿಗೂ ತಿಳಿದಿದೆ. ನಂತರದಲ್ಲಿ ಪರ್ವತರಾಜನ ಅರಮನೆಗೆ ತೆರಳುವ ಗಣಪನಿಗೆ ವಿಶೇಷ ಪೂಜೆ ಮಾಡಿ ಸಕಲ ಭಕ್ಷ್ಯ ಭೋಜನಗಳನ್ನೂ ನೀಡಲಾಗುತ್ತದೆ. ಕೊನೆಯಲ್ಲಿ ಗಣಪ ತಾಯಿ ಪಾರ್ವತಿಯನ್ನು ಕರೆದುಕೊಂಡು ಕೈಲಾಸಕ್ಕೆ ಮರಳುತ್ತಾನೆ. ಪಾರ್ವತಿ ಕೈಲಾಸಕ್ಕೆ ಮರಳಿದ ನಂತರ ಆಕೆಯ ಬಳಿ ತವರಿನ ವಿಷಯ ಕೇಳಿ ಪರ್ವತರಾಜನ್ನು ಶಿವ ವ್ಯಂಗ್ಯವಾಗಿ ಆಡಿಕೊಳ್ಳುವ ಪರಿ ಸಂಪ್ರದಾಯದ ಹಾಡುಗಳನ್ನು ಸವಿವರವಾಗಿ ವರ್ಣನೆಯಾಗಿದೆ.
ಹೋದಾಗೇನನು ಕೊಟ್ಟುರ, ಬರುವಾಗೇನನು ಕೊಟ್ಟರು
ಮರೆಯದೇ ಹೇಳೆಂದ ಹರನು ತಾನು.. ಎಂದು ಶಿವ ಕುತೂಹಲದಿಂದ ಕೇಳುತ್ತಾನೆ. ಅಷ್ಟೇ ಅಲ್ಲದೇ ತನ್ನ ಪುತ್ರ ಗಣಪನ ಕುರಿತಂತೆ ಕೆಸವಿನೋಗವ ಬಡಕಲಾಗಿಹನೋ ಬೆನವಣ್ಣ ಎಂದೂ ಹೇಳುತ್ತಾನೆ. ಅಂದರೆ ಬಡವನಾದ ಪರ್ವತರಾಜ ಮನೆಯಲ್ಲಿ ಸರಿಯಾಗಿ ಆತಿಥ್ಯವನ್ನೇ ಮಾಡಿಲ್ಲ. ಪರಿಣಾಮವಾಗಿ ಗಣಪ ಬಡಕಲಾಗಿದ್ದಾನೆ ಎಂದು ಹಂಗಿಸುತ್ತಾನೆ. ಇದರಿಂದ ಪಾರ್ವತಿ ನೊಂದುಕೊಳ್ಳುತ್ತಾಳೆ. ತವರುಮನೆಯನ್ನು ಸಮರ್ಥನೆ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಾಳೆ. ಆಗ ಪಾರ್ವತಿಯ ಬಳಿ ತವರಿನಲ್ಲಿ ಯಾವ ರೀತಿ ಸತ್ಕರಿಸಿದರು ಎನ್ನುವುದನ್ನು ವಿವರಿಸುವಂತೆ ಕೇಳುತ್ತಾನೆ.
ಎಂದ ಮಾತನು ಕೇಳಿ ನೊಂದು ಹೇಳ್ದಳು ಗೌರಿ ಬಂಧು ಬಾಂಧವರೆಲ್ಲ ಸುಖದೊಳಿರಲಿ,
ತಂದೆ ಗಿರಿ ರಾಯನು ಹಿಂದಿನ ಹಿರಿಯನು ನಮ್ಮವರು ಬಡವರು ಇನ್ನೇನ ಕೊಟ್ಟಾರೆ ಎಂದು ತವರಿನ ಕುರಿತು ಹೇಳುತ್ತಾಳೆ.
ಬೆನವಣ್ಣಗೆ ಉಂಗುರ, ಬೆನವಣ್ಣಗೆ ಉಡಿದಾರ, ಬೆನವಣ್ಣಗೆ ಪಟ್ಟೆ ಪೀತಾಂಬ್ರವು,
ಕನಕದ ಕುಂಭದಲಿ ಬೆನಕನಿಗೆ ಭಕ್ಷ್ಯಗಳು ನಮ್ಮವರು ಬಡವರಿನ್ನೇನ ಕೊಟ್ಟಾರೆ..
ಆಸೇರು ಸಣ್ಣಕ್ಕಿ, ಮೂಸೇರು ದೊಡ್ಡಕ್ಕಿ, ನೂರ್ಸೇರು ಬೆಲ್ಲ-ತುಪ್ಪದ ಕೊಡಗಳು..
ಎಮ್ಮೆಯು ಕರ ಹಿಂಡು ಗೋವುಗಳು... ನಮ್ಮವರು ಬಡವರು ಇನ್ನೇನ ಕೊಟ್ಟಾರೆ.. ಎಂದು ತನ್ನ ತವರನ್ನು ಸಮರ್ಥನೆ ಮಾಡಕೊಳ್ಳುತ್ತಾಳೆ. ಕೊನೆಯಲ್ಲಿ ಶಿವ ಪಾಅರ್ವತಿಯ ಮಾತಿನಿಂದ ಸಮಾಧಾನಗೊಳ್ಳುತ್ತಾನೆ. ಅಲ್ಲದೇ ತಾನು ಹಂಗಿಸಿದ ಕಾರಣಕ್ಕಾಗಿ ಬೇಸರ ಮಾಡಿಕೊಂಡ ಪಾರ್ವತಿಯನ್ನು ಸಮಾಧಾನ ಮಾಡುತ್ತಾನೆ.
ಹೀಗೆ ಶಿವ-ಪಾರ್ವತಿಯರ ನಡುವಿನ ಸಂವಾದವನ್ನು ರಸವತ್ತಾಗಿ ಚಿತ್ರಿಸಿರುವ ಸಂಪ್ರದಾಯದ, ಆಡುಮಾತಿನ ಹಾಡುಗಳು ಹೊಸ ಹೊಸ ಶಬ್ದಗಳನ್ನು ಕಟ್ಟಿಕೊಡುತ್ತವೆ. ಹಳೆಯ ಸಂಪ್ರದಾಯಗಳು, ಭಕ್ಷ್ಯ-ಭೋಜನಗಳು, ಪುರಾಣದ ಕತೆಗಳನ್ನು ವಿಶಿಷ್ಟವಾಗಿ ಕಟ್ಟಿಕೊಡುತ್ತವೆ. ಜೊತೆ ಜೊತೆಯಲ್ಲಿ ದೈವಭಕ್ತಿಯನ್ನು ಜಾಗೃತಗೊಳಿಸುವ ಕೆಲಸ ಮಾಡುತ್ತವೆ. ಇಂತಹ ಅದೆಷ್ಟೋ ಸಂಪ್ರದಾಯದ ಹಾಡುಗಳು ವಿನಾಯಕನ ಚತುರ್ಥಿಯ ವೈಶಿಷ್ಟ್ಯವನ್ನು ಸಾರುತ್ತ ಇಂದಿಗೂ ಪ್ರಚಲಿತದಲ್ಲಿವೆ. ಹಬ್ಬದ ಸಡಗರಕ್ಕೆ ಇಂತಹ ಹಾಡುಗಳು ಮೆರಗು ಕೊಡುತ್ತವೆ.

-------------

(ಈ ಲೇಖನವು ವಿಶ್ವವಾಣಿ ಪತ್ರಿಕೆಯ ಉತ್ತರ ಕನ್ನಡ ಆವೃತ್ತಿಯಲ್ಲಿ ಸೆ.5ರಂದು ಪ್ರಕಟವಾಗಿದೆ)

No comments:

Post a Comment