Sunday, July 17, 2016

ಅಘನಾಶಿನಿ ತೀರದ ಜನರ ನಿದ್ದೆಗೆಡಿಸಿದ ನದಿ ತಿರುವು ಹುನ್ನಾರ

ಮತ್ತೆ ಬಂದ ನದಿ ತಿರುವು ಗುಮ್ಮ

ಇನ್ನೆಲ್ಲಿ ಈ ಸೊಬಗು??
ಜಿಲ್ಲೆಯ ಮೇಲೆ ಸದಾ ಒಂದಿಲ್ಲೊಂದು ನದಿ ಯೋಜನೆಗಳ ಗುಮ್ಮ ಕಾಡುತ್ತಲೇ ಇದೆ. ಅಂತಹ ನದಿ ಯೋಜನೆಗಳ ಯಾದಿಯಲ್ಲಿ ಹೊಸದಾಗಿ ಅಘನಾಶಿನಿ ನದಿ ತಿರುವು ಕೇಳಿ ಬರಲು ಆರಂಭಿಸಿದೆ. ಹೊಸ ಯೋಜನೆ ಜನಸಾಮಾನ್ಯರ ನೆಮ್ಮದಿಯನ್ನು ಕದಡಿದೆ.
ಜಿಲ್ಲೆ ಯೋಜನೆಗಳ ಭಾರದಲ್ಲಿ ಈಗಾಗಲೇ ನಲುಗಿದೆ. ಕೈಗಾ ಅಣುವಿದ್ಯುತ್ ಸ್ಥಾವರ, ಕೊಂಕಣ ರೈಲ್ವೆ, ಸೀಬರ್ಡ್, ಕೊಡಸಳ್ಳಿ ಅಣೆಕಟ್ಟು, ಸೂಪಾ ಡ್ಯಾಂ ಸೇರಿದಂತೆ ಹತ್ತು ಹಲವು ಯೋಜನೆಗಳು ಉತ್ತರ ಕನ್ನಡ ಜಿಲ್ಲೆಯ ಜನರ ನೆಮ್ಮದಿಯನ್ನು ಕದಡಿ ಹಾಕಿದೆ. ಇಷ್ಟರ ಜೊತೆಗೆ ಆಗಾಗ ಸದ್ದು ಮಾಡುವ ಕಿರು ಜಲವಿದ್ಯುತ್ ಯೋಜನೆಗಳ ಪ್ರಸ್ತಾಪ ಕೂಡ ಜಿಲ್ಲೆಯ ಜನರನ್ನು ಹಿಂಡುತ್ತಿವೆ. ವರದಾ ಹಾಗೂ ಶಾಲ್ಮಲಾ ನದಿ ಜೋಡಣೆ ಕೂಡ ಕೆಲ ಕಾಲ ಸದ್ದು ಮಾಡಿತ್ತು. ಇದೀಗ ಉತ್ತರ ಕನ್ನಡ ಜಿಲ್ಲೆಯ ಇನ್ನೊಂದು ಪ್ರಮುಖ ನದಿ ಎನ್ನಿಸಿಕೊಂಡಿರುವ ಅಘನಾಶಿನಿ ನದಿ ತಿರುವು ಯೋಜನೆ ಸದ್ದು ಮಾಡಲು ಆರಂಭಿಸಿದೆ.
ಅಘನಾಶಿನಿ ನದಿ ತಿರುವು ಕುರಿತಂತೆ ಸರಕಾರ ನೀರಾವರಿ ತಜ್ಞರ ಹಾಗೂ ಅಧಿಕಾರಿಗನ್ನೊಳಗೊಂಡ ಸಮಿತಿಯೊಂದನ್ನು ರಚನೆ ಮಾಡಿದೆ. ತನ್ಮೂಲಕ ಉತ್ತರ ಕನ್ನಡದ ಲಕ್ಷಕ್ಕೂ ಅಧಿಕ ಜನರ ನೆಮ್ಮದಿಯನ್ನು ಕೆಡಿಸಲು ಪೀಠಿಕೆ ಆರಂಭವಾಗಿದೆ. ಅಘನಾಶಿನಿ ನದಿಗೆ ಜೀವವೈವಿಧ್ಯ ಜಗತ್ತಿನಲ್ಲಿ ಉನ್ನತ ಸ್ಥಾನವಿದೆ. ಅಪರೂಪದ ಅಪ್ಪೆಮಿಡಿಗಳು, ಸಿಂಹ ಬಾಲದ ಲಂಗೂರ್, ಅಳಿವಿನ ಅಂಚಿನಲ್ಲಿರುವ ನೀರುನಾಯಿಗಳು, ಕರಾವಳಿ ತೀರದಲ್ಲಿ ಚಿಪ್ಪುಗಳು, ಅಪರೂಪದ ಮೀನುಗಳು ಸೇರಿದಂತೆ ಸಸ್ಯ ಹಾಗೂ ಜೀವ ಸಂಕುಲಗಳಿವೆ. ಇನ್ನೂ ಅದೆಷ್ಟೋ ಪ್ರಬೇಧಗಳು ಅಘನಾಶಿನಿ ನದಿಯನ್ನು ಅವಲಂಬಿಸಿ ಜೀವನ ನಡೆಸುತ್ತಿವೆ. ಅಘನಾಶಿನಿ ನದಿ ತಿರುವು ಯೋಜನೆಯಿಂದ ಈ ಪ್ರಬೇಧಗಳು, ಸಸ್ಯ ಸಂಕುಲಗಳು ನಾಶವಾಗಬಹುದಾಗಿದೆ.
ಶಿರಸಿ ನಗರದ ಶಂಕರಹೊಂಡ ಹಾಗೂ ತಾಲೂಕಿನ ಮಂಜುಗುಣಿಯಲ್ಲಿ ಪ್ರಮುಖ ಕವಲುಗಳ ಮೂಲಕ ಜನ್ಮ ತಳೆಯುವ ಅಘನಾಶಿನಿ ನದಿ ನಂತರದಲ್ಲಿ ಸಿದ್ದಾಪುರ, ಕುಮಟಾ ತಾಲೂಕುಗಳಲ್ಲಿ ಹರಿದು ತದಡಿಯಲ್ಲಿ ಸಮುದ್ರವನ್ನು ಸೇರುತ್ತದೆ. ಹೀಗೆ ಸಮುದ್ರ ಸೇರುವ ಮೊದಲು 98 ಕಿ.ಮಿ ದೂರ ಹರಿಯುವ ಅಘನಾಶಿನಿ ನದಿಯ ನೀರು ಪ್ರಮುಖವಾಗಿ ಶಿರಸಿ, ಕುಮಟಾ ಹಾಗೂ ಹೊನ್ನಾವರಗಳಿಗೆ ಕುಡಿಯುವ ನೀರು ಸೇರಿದಂತೆ ಎಲ್ಲ ರೀತಿಯ ಅಗತ್ಯಗಳಿಗೆ ಬಳಕೆಯಾಗುತ್ತಿದೆ. ಬೆಣ್ಣೆಹೊಳೆ, ಚಂಡಿಕಾ ಹೊಳೆ, ಬೀಳಗಿಹೊಳೆಗಳು ಅಘನಾಶಿನಿ ನದಿಯ ಪ್ರಮುಖ ಉಪನದಿಗಳಾಗಿದ್ದು, 2146 ಚಕಿಮಿ ಪ್ರದೇಶಗಳು ನದಿಯ ಜಲಾನಯನ ಪ್ರದೇಶವಾಗಿದೆ. ಈ ಅಘನಾಶಿನಿ ನದಿಯ ನೀರನ್ನು ಜೂಗ-ಕಾರ್ಗಲ್, ನಂತರದಲ್ಲಿ ಈ ನೀರನ್ನು ಹಾಸನದ ಮೂಲಕ ಬೆಂಗಳೂರಿಗೆ ಕೊಂಡೊಯ್ಯಬೇಕು ಎಂದು 2013ರ ಸಪ್ಟೆಂಬರ್ ತಿಂಗಳಿನಲ್ಲಿ ನೇಮಿಸಲಾಗಿದ್ದ ತ್ಯಾಗರಾಜ್ ಕಮಿಟಿ ವರದಿ ಮಾಡಿತ್ತು.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಲಿಂಗನಮಕ್ಕಿ ಅಣೆಕಟ್ಟಿಗೆ ಅಘನಾಶಿನಿ ನದಿಯಿಂದ 50 ಟಿಎಂಸಿ ನೀರನ್ನು ಒಯ್ಯಬೇಕು ಹಾಗೂ ತದನಂತರದಲ್ಲಿ ಪಂಪ್ ಮೂಲಕ ನೀರನ್ನು ಲಿಂಗನಮಕ್ಕಿ ಅಣೆಕಟ್ಟೆಯಿಂದ ಮೇಲೆತ್ತಿ ಹಾಸನ ಮಾರ್ಗವಾಗಿ ಬೆಂಗಳೂರು ಮಹಾನಗರಕ್ಕೆ ಕೊಂಡೊಯ್ಯಬೇಕು ಎನ್ನುವ ಯೋಜನೆಯನ್ನು ವರದಿಯಲ್ಲಿ ಹೇಳಲಾಗಿತ್ತು. ಇಷ್ಟೇ ಅಲ್ಲದೇ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಜನರಿಗೆ ನೀರು ಒದಗಿಸಲು ಅಘನಾಶಿನಿ ನದಿ ಹಾಗೂ ಲಿಂಗನಮಕ್ಕಿ ಅಣೆಕಟ್ಟೆಯಲ್ಲಿ ಸಂಗ್ರಹವಾಗುವ ಶರಾವತಿ ನದಿಯ ನೀರನ್ನು ಬಳಕೆ ಮಾಡಬೇಕು ಎನ್ನುವ ವಾದವನ್ನು ಮಂಡನೆ ಮಾಡಿತ್ತು. ಆದರೆ ಈ ನದಿ ತಿರುವಿಗೆ ಸಂಬಂಧಿಸಿದಂತೆ ಈಗಾಗಲೇ ವಿರೋಧ ಆರಂಭವಾಗಿದೆ.
ಕಳೆದ ಬೇಸಿಗೆಯಲ್ಲಿ ಅಘನಾಶಿನಿ ನದಿ ಬರದ ಬೇಗೆಗೆ ಮೊಟ್ಟ ಮೊದಲ ಬಾರಿಗೆ ಬತ್ತಿ ಹೋಗಿತ್ತು. ಈ ಕುರಿತಂತೆ `ವಿಶ್ವವಾಣಿ' ಸಮಗ್ರ ವರದಿ ಮಾಡಿತ್ತು. ತದ ನಂತರದಲ್ಲಿ ಬತ್ತಿದ ಅಘನಾಶಿನಿಯಲ್ಲಿ ಸಾವನ್ನಪ್ಪುತ್ತಿರುವ ನೀರುನಾಯಿಗಳ ಬಗೆಗೂ ಕೂಡ ಸರಣಿ ವರದಿ ಮಾಡಿತ್ತು. ಇಂತಹ ಹಲವಾರು ಸಮಸ್ಯೆಗಳು ನದಿಗೆ ಎದುರಾಗಿರುವ ಸಂದರ್ಭದಲ್ಲಿಯೇ ಅಘನಾಶಿನಿ ನದಿಯನ್ನು ತಿರುವು ಮಾಡುವ ಯೋಜನೆ ಪ್ರಸ್ತಾಪವಾಗುತ್ತಿದೆ. 420 ಕಿ.ಮಿ ದೂರದ ಬೆಂಗಳೂರು ನಗರವಾಸಿಗಳ ದಾಹವನ್ನು ತಣಿಸುವ ಸಲುವಾಗಿ ಮಲೆನಾಡಿನ, 1 ಲಕ್ಷ ಜನರ ಜೀವನಾಡಿಯಾಗಿರುವ ಅಘನಾಶಿನಿ ನದಿ ತಿರುವು ಮಾಡುವ ಹುನ್ನಾರ ನಡೆದಿದೆ. ಈ ಹುನ್ನಾರವನ್ನು ಆರಂಭದಲ್ಲಿಯೇ ತಡೆಯುವ ಸಲುವಾಗಿ ಈಗಾಗಲೇ ಜನಾಂದೋಲನಗಳು ರೂಪುಗೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಅಘನಾಶಿನಿ ಕಣಿವೆಯ ಜನಸಾಮಾನ್ಯರು ನದಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ಹೆಜ್ಜೆಹಾಕಲಿದ್ದಾರೆ.

-------

(ವಿಶ್ವವಾಣಿ ಪತ್ರಿಕೆಯಲ್ಲಿ ಜು.17, 2016ರಂದು ಪ್ರಕಟವಾಗಿದೆ)

No comments:

Post a Comment