Wednesday, October 7, 2015

ಅಘನಾಶಿನಿ ಕಣಿವೆಯಲ್ಲಿ-27

             ಉಂಚಳ್ಳಿ ಜಲಪಾತವನ್ನು ನೋಡುವುದೇ ಒಂದು ಸೊಬಗು. ಥಟ್ಟನೆ ನೋಡಿದರೆ ಗೋಕರ್ಣದ ಆತ್ಮಲಿಂಗದ ಆಕಾರದಲ್ಲಿ ಕಾಣುವ ಜಲಪಾತದ ಚೆಲುವಿಗೆ ಸಾಟಿಯಿಲ್ಲ ಬಿಡಿ. ದೂರದಿಂದಲೇ ಭೋರೆಂದು ಸದ್ದು ಮಾಡುವ ಜಲಪಾತಕ್ಕೆ ಸರ್ವ ಕಾಲದಲ್ಲಿಯೂ ಪ್ರವಾಸಿಗರು ದಂಡು ದಂಡಾಗಿ ಆಗಮಿಸುತ್ತಾರೆ. ವಿಕ್ರಮ ಹಾಗೂ ತಂಡಕ್ಕೆ ಜಲಪಾತದ ಬುಡಕ್ಕೆ ತಲುಪುವ ತವಕ ಮತ್ತಷ್ಟು ಹೆಚ್ಚಿತು. ಜಲಪಾತ ವೀಕ್ಷಣೆಗೆ ಹಾಕಲಾಗಿದ್ದ ಸಿಮೆಂಟ್ ಮೆಟ್ಟಿಲುಗಳನ್ನು ಇಳಿದು ಪಕ್ಕದಲ್ಲಿಯೇ ಜರುಗಿ ಜಲಪಾತದ ಬುಡಕ್ಕೆ ಇಳಿಯಲಾರಂಭಿಸಿದರು. ಎಪ್ರಿಲ್ ತಿಂಗಳಾದ್ದ ಕಾರಣ ಜಲಪಾತದಲ್ಲಿ ಸಾಕಷ್ಟು ನೀರು ಇರಲಿಲ್ಲ. ಸೀದಾ ಜಲಪಾತ ಬೀಳುವ ಪ್ರದೇಶಕ್ಕೆ ತೆರಳಿ, ಜಲಪಾತದ ನೀರಿಗೆ ತಲೆಕೊಟ್ಟು ನಿಲ್ಲಬಹುದಾಗಿತ್ತು.
         ಅರ್ಧಗಂಟೆಯ ಸಮಯದಲ್ಲಿ ಜಲಪಾತದ ಬುಡಕ್ಕೆ ತಲುಪಿದ್ದರು. ದೊಡ್ಡ ದೊಡ್ಡ ಕಲ್ಲು ಬಂಡೆಗಳನ್ನು ದಾಟಿ ನೀರು ಬೀಳುತ್ತಿದ್ದ ಪ್ರದೇಶಕ್ಕೆ ಹೋದವರಿಗೆ ಆಸೆ ತಡೆಯಲಿಲ್ಲ. ಸೀದಾ ತೊಟ್ಟಿದ್ದ ಬಟ್ಟೆ ಯನ್ನು ಲೆಕ್ಕಿಸದೇ ಜಲಪಾತದ ನೀರಿಗೆ ತಲೆ ಕೊಟ್ಟರು. ದೊಡ್ಡದೊಂದು ನೀರಿನ ಗುಂಡಿಯನ್ನು ಈಜಲು ವಿನಾಯಕ ಮುಂದಾದ. ವಿಷ್ಣು ಹಾಗೂ ಪ್ರದೀಪ ಕೂಡ ವಿನಾಯಕನನ್ನು ಹಿಂಬಾಲಿಸಿದರು. ವಿಜೇತಾಳನ್ನು ಹೊರತುಪಡಿಸಿ ಉಳಿದೆಲ್ಲ ಹೆಂಗಳೆಯರು ಜಲಪಾತ ಬೀಳುತ್ತಿದ್ದ ಜಾಗಕ್ಕೆ ಸುತ್ತು ಬಳಸಿನ ಹಾದಿಯಲ್ಲಿ ಸಾಗಿ ತಲೆಕೊಟ್ಟು ನಿಂತರು. ಕ್ಷಣ ಕ್ಷಣಕ್ಕೂ ರೋಮಾಂಚನ ಅನುಭವಿಸಿದ ಇವರೆಲ್ಲರ ಬಾಯಿಂದ ಹಾ... ಹೋ... ಎನ್ನುವ ಕೂಗು ಉಂಚಳ್ಳಿ ಜಲಪಾತದ ಕಣಿವೆಯಿಂದ ಅಲೆ ಅಲೆಯಾಗಿ ಕೇಳುತ್ತಿತ್ತು. ಜಲಪಾತದ ಸದ್ದಿಗೆ ಪೈಪೋಟಿ ನೀಡುವಂತಿತ್ತು ಇವರ ಕೂಗು.
         ವಿಕ್ರಮ ಹಾಗೂ ವಿಜೇತಾ ಇಬ್ಬರೇ ದೂರದಲ್ಲಿ ಕಲ್ಲು ಬಂಡೆಯ ಮೇಲೆ ಕುಳಿತು ನೀರಿಗೆ ತಲೆ ಕೊಟ್ಟವರ ಹಾಗೂ ಜಲಪಾತದ ಗುಂಡಿಯಲ್ಲಿ ಈಸು ಬಿದ್ದಿದ್ದವರನ್ನು ನೋಡುತ್ತಿದ್ದರು. ವಿನಾಯಕ ಇದ್ದಕ್ಕಿದ್ದಂತೆ ವಿಜೇತಾಳ ಬಳಿ `ನಾನು ಒಂದು ವಿಷಯ ಕೇಳಲಾ..?' ಎಂದ.
          `ಹುಂ.. ಕೇಳು.. ನೀನು ಏನನ್ನಾದರೂ ಕೇಳಲು ನನ್ನ ಪರ್ಮಿಷನ್ ಬೇಕಾ? ಇವತ್ತೇನು ಹೊಸ ರೀತಿ ಕೇಳ್ತಾ ಇದ್ದೀ..?' ಎಂದಳು ವಿಜೇತಾ.
          `ಇದು ಸಾಮಾನ್ಯ ವಿಷಯ ಅಲ್ಲ. ಸ್ವಲ್ಪ ಬೇರೆಯ ವಿಷಯ. ಕೇಳಲೋ.. ಬೇಡವೋ ಅಂತ..' ಎಂದ ವಿಕ್ರಮ.
          `ಇದೊಳ್ಳೆ ಕಥೆ ನಿಂದು. ನನ್ನ ಹತ್ರ ಕೇಳೋಕೆ ಮುಜುಗರವಾ? ನಿಂದೊಳ್ಳೆ ಕಥೆ ಮಾರಾಯಾ.. ಸುಮ್ನೆ ಕೇಳು..'
           `ಹೆಂಗ್ ಕೇಳೋದು ಅಂತ ಗೊತ್ತಾಗ್ತಾ ಇಲ್ಲ.. ಯಾಕೋ ಸ್ವಲ್ಪ ನರ್ವಸ್ ಆಗಿದ್ದೇನೆ ನೋಡು..'
           `ಹೆಂಗೆ ಅಂದ್ರೆ..? ಬಾಯಲ್ಲಿ ಕೇಳು ಮಾರಾಯಾ.. ನೀನು ನರ್ವಸ್ ಆಗೋದಾ? ದಿ ಗ್ರೇಟ್ ಕರಾಟೆ ಚಾಂಪಿಯನ್ ನರ್ವಸ್ ಆಗೋದು ಅಂದ್ರೆ ಏನ್ ತಮಾಷೆನಾ? ಅಂತದ್ದೇನಪ್ಪಾ ವಿಷಯ..' ತಮಾಷೆ ಮಾಡಿದಳು ವಿಜೇತಾ.
            `ತಮಾಷೆ ಮಾಡ್ಬೇಡ ಪ್ಲೀಸ್.. ಹೆಂಗ್ ಕೇಳೋದು ಅಂತ ನಂಗೆ ಗೊತ್ತಾಗ್ತಿಲ್ಲ. ಮತ್ತೆ.. ನೀನು ಯಾರನ್ನಾದರೂ ಲವ್ ಮಾಡಿದ್ಯಾ?'
             ಇದ್ದಕ್ಕಿದ್ದಂತೆ ಸ್ವಲ್ಪ ಗಂಭೀರವಾದ ವಿಜೇತಾ ಒಮ್ಮೆ ವಿಕ್ರಮನನ್ನು ತೀಕ್ಷ್ಣವಾಗಿ ನೋಡಿದಳು. ನಂತರ ಇದು ತಮಾಷೆಯಿರಬೇಕು ಎಂದುಕೊಂಡು `ಹು.. ಮಾರಾಯಾ.. ಪಿಯುಸಿಯಲ್ಲಿ ಇರಬೇಕಾದರೆ ಒಬ್ಬ ಹುಡುಗ ಪ್ರಪೋಸ್ ಮಾಡಿದ್ದ ನೋಡು. ಒಳ್ಳೆಯ ಹುಡುಗ. ಆದರೆ ಹೇಳಿಕೊಳ್ಳಲು ಸಂಕೋಚ ಪಟ್ಟುಕೊಂಡಿದ್ದ. ಆತ ಹೆದರಿ ಹೆದರಿ ಹೇಳಿಕೊಂಡಿದ್ದ. ನಾನು ಸಿಟ್ಟಿನಿಂದಲೇ ಆತನಿಗೆ ಉತ್ತರ ಕೊಟ್ಟಿದ್ದೆ. ಆ ನಂತರ ಯಾಕೋ ಇಷ್ಟವಾಗಿದ್ದ ಆತ. ಆತನ ಪ್ರಪೋಸಲ್ ಗೆ ಒಪ್ಪಿಗೆ ಸೂಚಿಸಬೇಕು ಅಂತ ನಾನು ಅವನನ್ನು ಹುಡುಕಿ ಹೊರಟಿದ್ದೆ. ಆದರೆ ಆ ನಂತರ ಅಂವ ಏನಾದನೋ ಗೊತ್ತಿಲ್ಲ ನೋಡು.. ನಾಪತ್ತೆಯಾಗಿದ್ದ. ಆಮೇಲಿ ಡಿಗ್ರಿ ಓದುವಾಗ ಒಂದಿಬ್ಬರು ಲವ್ ಮಾಡ್ತೀಯಾ ಅಂತ ಕೇಳಿದ್ದರು. ನನಗೆ ಇಷ್ಟವಾಗಿರಲಿಲ್ಲ.. ರಿಜೆಕ್ಟ್ ಮಾಡಿದ್ದೆ.. ಹೌದು.. ಈಗ ಈ ಪ್ರಶ್ನೆ ಯಾಕೆ ಕೇಳಿದ್ದು..?'
            `ಹಿಂಗೆ ಸುಮ್ನೆ ಕೇಳಿದ್ದು ನೋಡು.. ಯಾಕೋ ನೀನು ಯಾರನ್ನಾದರೂ ಲವ್ ಮಾಡ್ತಿರಬಹುದಾ ಎಂಬ ಕುತೂಹಲ ಕಾಡಿತು. ಅದ್ಕೆ ಕೇಳಿದೆ ಅಷ್ಟೆ..' ವಿಕ್ರಮ ಉತ್ತರಿಸಿದ್ದ.
             `ಸುಮ್ನೆ ಎಲ್ಲಾ ಕೇಳೊ ವ್ಯಕ್ತಿಯಲ್ಲವಲ್ಲ ನೀನು.. ಏನೋ ಕಾರಣ ಇರಬೇಕು ನೋಡು. ಯಾವುದಾದರೂ ಪ್ರಪೋಸಲ್ ಬಂದಿದೆಯಾ? ಅಥವಾ ಜಾತಕ ಗೀತಕ ಬಂದಿದೆಯಾ.. ಹೇಳು ಮಾರಾಯಾ... ತಲೆಯಲ್ಲಿ ಹುಳ ಬಿಡಬೇಡ..' ವಿಜೇತಾ ಹೇಳಿದ್ದಳು.
             `ಏ ಏನಿಲ್ಲ. ಸುಮ್ನೆ ಕೇಳಿದೆ..'
             `ಹೇಳೋ ಮಾರಾಯಾ.. ನನ್ನನ್ನು ಯಾರಾದರೂ ಲವ್ ಮಾಡ್ತಾರಾ.. ನಾನು ಸಧ್ಯಕ್ಕೆ ಖಾಲಿ ಇದ್ದೇನೆ ನೋಡು.. ಯಾರಾದರೂ ನಿನ್ನ ಬಳಿ ಕೇಳಿದ್ದರೆ ಡೈರೆಕ್ಟಾಗಿ ಬಂದು ಕೇಳೋಕೆ ಹೇಳು.. ಇಷ್ಟ ಆದರೆ ಥಟ್ಟನೆ ಒಪ್ಪಿಕೊಂಡು ಬಿಡ್ತೀನಿ ನೋಡು..' ಮತ್ತೆ ತಮಾಷೆಯಾಗಿ ಹೇಳಿದ್ದಳು ವಿಜೇತಾ.
             `ಅಯ್ಯಯ್ಯೋ.. ಯಾರೂ ಹೇಳಿಲ್ಲ ನನ್ನ ಹತ್ರ. ನಾನೇ ಸುಮ್ಮನೆ ಕೇಳಿದೆ ನೋಡು..' ವಿಕ್ರಮ ತೊದಲಿದ.
             `ಇಲ್ಲ ಇದರಲ್ಲಿ ಏನೋ ಇದೆ. ನೀನು ಸುಮ್ಮನೆ ಕೇಳಿಲ್ಲ ಬಿಡು. ಯಾರಪ್ಪಾ ಅದು ನನ್ನ ಬಗ್ಗೆ ವಿಚಾರಿಸಿದ್ದು? ಯಾರಾದರೂ ನನ್ನ ಲವ್ ಮಾಡ್ತಾ ಇದ್ದಾರಾ ಹೇಗೆ? ನೀನೇನಾದ್ರೂ ಲವ್ ಮಾಡ್ತಾ ಇದ್ದೀಯಾ ಹೇಗೆ? ಹಂಗೇನಾದ್ರೂ ಇದ್ರೆ ಡೈರೆಕ್ಟ್ ಆಗಿ ಹೇಳ್ ಬಿಡು ಮಾರಾಯಾ.. ಮತ್ತಿನ್ಯಾರಾದ್ರೂ ಮನಸ್ಸಿನೊಳಗೆ ತೂರಿಕೊಳ್ಳುವ ಮೊದಲು ನಿಂಗೆ ಒಕೆ ಅಂತ ಹೇಳಿ ಬಿಡ್ತೀನಿ..' ಡೈರೆಕ್ಟ್ ಶೂಟ್ ಮಾಡಿದ್ದಳು ವಿಜೇತಾ. ಅವಳ ಮಾತಿನಲ್ಲಿ ತಮಾಷೆಯ ಸೆಳಕಿದ್ದರೂ ಸೀರಿಯಸ್ ಅಂಶಗಳು ಸಾಕಷ್ಟಿದ್ದವು.
            ವಿಕ್ರಮ ಬೆವೆತು ಹೋಗಿದ್ದ. ಏನು ಹೇಳಬೇಕು ಎನ್ನುವುದು ಆತನಿಗೆ ಗೊತ್ತಾಗಲಿಲ್ಲ. ಪರಿಚಯವಾದ ದಿನದಿಂದಲೇ ವಿಕ್ರಮನಿಗೆ ಮಾಡಿದರೆ ಇಂತಹ ಹುಡುಗಿಯನ್ನು ಲವ್ ಮಾಡಬೇಕು ಎನ್ನಿಸಿದ್ದು ಸುಳ್ಳಲ್ಲ. ಯಾಕೋ ಮೊದಲ ಸಂದರ್ಶನದ ದಿನದಂದೆ ವಿಜೇತಾ ವಿಕ್ರಮನಿಗೆ ಇಷ್ಟವಾಗಿ ಬಿಟ್ಟಿದ್ದಳು.ನಂತರದ ದಿನಗಳಲ್ಲಿ ವಿಕ್ರಮನಿಗೆ ಆಕೆ ಮತ್ತಷ್ಟು ಹತ್ತಿರವಾಗಿದ್ದಳು. ಹತ್ತಿರವಾದಂತೆಲ್ಲ ಪ್ರೀತಿಯ ಸಸಿ ಮೊಳಕೆಯೊಡೆದು ಹೆಮ್ಮರವಾಗಿತ್ತು. ವಿಕ್ರಮ ಕೂಡ ಆ ಸಸಿಗೆ ಪೋಷಣೆ ನೀಡಿ ಎದೆಯಲ್ಲಿ ಬೆಚ್ಚಗೆ ಕಾಪಾಡಿಕೊಂಡಿದ್ದ.
            ಕೆಲವು ದಿನಗಳಿಂದ ತನ್ನ ಮನದ ಅಭಿಲಾಷೆಯನ್ನು ಹೇಳಬೇಕು ಎಂದುಕೊಳ್ಳುತ್ತಿದ್ದ ವಿಕ್ರಮ. ಅದಕ್ಕೆ ಸರಿಯಾದ ಸಮಯ ಹಾಗೂ ಸಂದರ್ಭ ಒದಗಿ ಬಂದಿರಲಿಲ್ಲ. ತಾನು ಹೇಳಿಕೊಳ್ಳಬೇಕು ಅಂದಾಗಲೆಲ್ಲ ಜೊತೆಯಲ್ಲಿ ಮತ್ಯಾರೋ ಇರುತ್ತಿದ್ದರು. ಹೇಗಾದರೂ ಮಾಡಿ ಹೇಳಿಕೊಳ್ಳಬೇಕು ಎಂದುಕೊಂಡವನಿಗೆ ನೆನಪಾದದ್ದು ಉಂಚಳ್ಳಿ ಜಲಪಾತ. ಅಲ್ಲಿಗೆ ಹೋದಾಗ ತನ್ನ ಮನಸ್ಸಿನ ಭಾವನೆಯನ್ನು ವಿಜೇತಾಳಿಗೆ ಹೇಳಬೇಕು ಎಂದುಕೊಂಡಿದ್ದ ವಿಕ್ರಮ. ಎಲ್ಲರನ್ನೂ ಎಲ್ಲಾದರೂ ಸಾಗಹಾಕಿ ಅವಳೆದು ತನ್ನ ಅಂತರಂಗವನ್ನು ತೋಡಿಕೊಳ್ಳಬೇಕು ಎಂದುಕೊಂಡವನಿಗೆ ಇದುವರೆಗೆ ತಾನು ಬಯಸಿದಂತೆಯೇ ಎಲ್ಲವೂ ಆಗಿತ್ತು. ಜಲಪಾತಕ್ಕೆ ಬಂದಿದ್ದವರೆಲ್ಲಿ ಉಳಿದವರು ಅವರವರ ಲೋಕದಲ್ಲಿದ್ದರು. ವಿಜೇತಾ ಹಾಗೂ ವಿಕ್ರಮ ಇಬ್ಬರೆ ಜೊತೆಯಲ್ಲಿ ಕುಳಿತು ಮಾತನಾಡುತ್ತಿದ್ದರು. ಆದರೆ ವಿಕ್ರಮನಿಗೆ ಮಾತ್ರ ಮನದಾಳದ ಭಾವನೆಗಳನ್ನು ಏನೂ ಮಾಡಿದರೂ ಹೇಳಿಕೊಳ್ಳಲು ಆಗುತ್ತಿಲ್ಲ. ಇದು ಆತನಿಗೆ ಅಚ್ಚರಿಯನ್ನು ತಂದಿತ್ತು.
          ವಿಜೇತಾಳೇ ನೇರವಾಗಿ ಕೇಳುತ್ತಿದ್ದಾಳೆ. ಆದರೆ ತನಗೆ ಮಾತ್ರ ಹೇಳಿಕೊಳ್ಳಲು ಆಗುತ್ತಿಲ್ಲ. ಯಾಕೆ ಈ ಥರಾ? ಎಂದುಕೊಂಡ ವಿಕ್ರಮ. ಅವಳೇ ಕೇಳುತ್ತಿದ್ದಾಗ ತನಗೆ ಹೌದು ನಿನ್ನನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳಲು ಆಗುತ್ತಿಲ್ಲವಲ್ಲ. ಯಾಕೋ ಈ ಪ್ರೇಮ ಎನ್ನುವುದು ಸುಲಭವಲ್ಲ ಅನ್ನಿಸಿತು ಅವನಿಗೆ. ಕರಾಟೆಯಲ್ಲಿ ತನ್ನೆದುರು ಹತ್ತಾರು ಜನರು ಏಕಕಾಲಕ್ಕೆ ಮುಗಿ ಬೀಳಲಿ ಅವರನ್ನು ಮಣ್ಣುಮುಕ್ಕಿಸುತ್ತೇನೆ. ಆದರೆ ಇವಳಿಗೆ ಪ್ರೇಮದ ವಿಷಯ ತಿಳಿಸುವುದು ಹೇಗೆ? ಎಂದ.
           `ಹೇಯ್.. ಎಂತಾ ಆಲೋಚನೆ ಮಾಡ್ತಾ ಇರೋದು.. ಯಾರು ಕೇಳಿದ್ದು ಹೇಳು ಮಾರಾಯಾ..' ಎಂದು ವಿಜೇತಾ ತಿವಿದಾಗಲೇ ವಿಕ್ರಮ ವಾಸ್ತವಕ್ಕೆ ಮರಳಿದ್ದು.
            `ಏನ್ ಹೇಳೋದು ಅಂತ ಗೊತ್ತಾಗ್ತಾ ಇಲ್ಲೆ. ನಿನ್ ಬಗ್ಗೆ ವಿಷಯ ಗೊತ್ತಾಗಬೇಕಿತ್ತು, ನೀನು ಯಾರನ್ನಾದರೂ ಪ್ರೀತಿಸ್ತಾ ಇದ್ಯಾ ಅನ್ನೋದು ತಿಳಿದುಕೊಳ್ಳಬೇಕು ಅನ್ನೋದು ನಿಜ. ಆದರೆ...' ನಿಲ್ಲಿಸಿದ ವಿಕ್ರಮ
             `ಎಂತ ಆದರೆ.. ಒಗಟಾಗಿ ಮಾತನಾಡಬೇಡ. ಸ್ವಲ್ಪ ಬಿಡಿಸಿ ಹೇಳು ಮಾರಾಯಾ..'
              `ನಂಗೇ ಬೇಕಾಗಿತ್ತು...ಅದ್ಕೆ ಕೇಳಿದ್ದು..' ತೊದಲಿದ ವಿಕ್ರಮ.
               `ಅಂದರೆ ಎಂತ? ಸ್ವಲ್ಪ ಬಿಡಿಸಿ ಹೇಳೋ ಮಾರಾಯಾ.. ನಿಂಗೆಂತಾ ಬೇಕಾಗಿದ್ದು. ನಿಂಗ್ ನನ್ನ ವಿಷ್ಯ ಗೊತ್ತಿದ್ದಿದ್ದೇ. ಆದರೆ ಮತ್ತೆಂತಕ್ ಕೇಳ್ತಾ ಇದ್ದಿದ್ದು..?' ಕಾಡಿಸಿದಳು ವಿಜೇತಾ. ಅವಳಿಗೆ ಸ್ವಲ್ಪ ಅನುಮಾನ ಬರಲು ಆರಂಭವಾಗಿತ್ತು. ವಿಕ್ರಮನೇ ತನ್ನನ್ನು ಲವ್ ಮಾಡುತ್ತಿರಬಹುದಾ? ಕೆಲ ದಿನಗಳಿಂದ ಮನಸ್ಸಿನಲ್ಲಿ ಮೂಡಿದ್ದ ಅನುಮಾನದ ಸೆಲೆಯೊಂದು ದೊಡ್ಡದಾದಂತೆ ಭಾಸವಾಯಿತು.
              `ಹುಂ.. ನಾನು ನಿನ್ನ ಪ್ರೀತಿಸ್ತಾ ಇದ್ದೆ. ಆದರೆ ಹೇಳ್ಕಳೋದು ಹೆಂಗೆ ಅಂತ ಒದ್ದಾಡ್ತಿದ್ದೆ ನೋಡು. ಹೇಳೋಕೂ ಆಗದೇ, ನನ್ನಲ್ಲೇ ಇಟ್ಟುಕೊಳ್ಳೋದಕ್ಕೂ ಆಗದೇ ಪರಿತಪಿಸುತ್ತಿದ್ದೆ. ನಾನು ನಿನ್ನ ಪ್ರೀತಿಸ್ತಾ ಇದ್ದೇನೆ. ನೀನು ನನ್ನ ಪ್ರೀತಿಸ್ತೀಯಾ? ನಿನ್ನ ಮನಸ್ಸಿನಲ್ಲಿ ನನಗೆ ಸ್ವಲ್ಪ ಜಾಗ ಕೊಡ್ತೀಯಾ..?' ಹೇಗೋ ಧೈರ್ಯ ಮಾಡಿಕೊಂಡು ವಿಕ್ರಮ ಕೇಳಿಯೇ ಬಿಟ್ಟಿದ್ದ.
               ವಿಜೇತಾ ಅವಾಕ್ಕಾಗಿದ್ದಳು. ವಿಜೇತಾಳ ಮನಸ್ಸಿನಲ್ಲಿ ಚಿಕ್ಕದೊಂದು ಅನುಮಾನದ ಸೆಲೆಯಿತ್ತಾದರೂ ವಿಕ್ರಮ ಇಷ್ಟು ನೇರಾ ನೇರ ಕೇಳುತ್ತಾನೆ ಎಂದುಕೊಂಡಿರಲಿಲ್ಲ. ಇನ್ನಷ್ಟು ದಿನಗಳ ನಂತರ ಕೇಳಬಹುದು ಎಂದುಕೊಂಡಿದ್ದಳೇನೋ. ವಿಕ್ರಮ ಕೇಳಿದರೆ ಏನು ಹೇಳಬೇಕು ಎನ್ನುವುದು ವಿಜೇತಾಳಿಗೆ ಗೊತ್ತಿರಲಿಲ್ಲ. ಸುಮ್ಮನೆ ಕಾಡಿಸುತ್ತಿದ್ದಳಾದರೂ ಆಕೆಯಲ್ಲಿಯೇ ಸ್ಪಷ್ಟ ಭಾವನೆ ಇನ್ನೂ ಇರಲಿಲ್ಲ. ಆಲೋಚಿಸತೊಡಗಿದಳು ವಿಜೆತಾ.

(ಮುಂದುವರಿಯುತ್ತದೆ)

No comments:

Post a Comment