Saturday, October 3, 2015

ಅಘನಾಶಿನಿ ಕಣಿವೆಯಲ್ಲಿ-26

             ಉಂಚಳ್ಳಿ ಜಲಪಾತದ ಮಾರ್ಗದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೂ, ಮರಗಳ್ಳರಿಗೂ ನಡೆದಿದ್ದ ಕಣ್ಣಾಮುಚ್ಚಾಲೆಯ ಘಟನೆಗೂ, ದಂಟಕಲ್ಲಿನಲ್ಲಿ ನಡೆದಿದ್ದ ಮರಗಳ್ಳರ ಮೇಲಿನ ದಾಳಿಯ ನಡುವೆಯೂ ಏನೋ ಸಂಬಂಧ ಇರಬೇಕು ಎಂದು ತರ್ಕಿಸುತ್ತಿದ್ದ ಪ್ರದೀಪ. ಮರಗಳ್ಳರು ಹಲವು ಕಡೆಗಳಲ್ಲಿದ್ದರೂ ಸಾಮಾನ್ಯವಾಗಿ ಯಾರಾದರೂ ಮರಗಳ್ಳತನ ಮಾಡುತ್ತಿದ್ದ ಸಂದರ್ಭದಲ್ಲಿ ಕಣ್ಣಿಗೆ ಕಾಣಿಸಿದರೆ ಓಡಿ ಹೋಗುತ್ತಾರೆ. ಆದರೆ ಈ ಎರಡೂ ಘಟನೆಗಳಲ್ಲಿ ಮರಗಳ್ಳರು ಮೈಮೇಲೆ ಏರಿ ಬಂದಿದ್ದರು. ಜನಸಾಮಾನ್ಯರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ಮೇಲೆ ಧಾಳಿ ನಡೆಸಲು ಪ್ರಯತ್ನಿಸಿದ್ದರು. ಈ ಹಿನ್ನೆಲೆಯಲ್ಲಿ ದಾಳಿಗೆ ಮುಂದಾದ ಮರಗಳ್ಳರು ಖಂಡಿತ ಒಂದೇ ಗುಂಪಿಗೆ ಸೇರಿರಬೇಕು. ಖಂಡಿತ ಈ ಮರಗಳ್ಳರನ್ನು ಯಾವುದೋ ವ್ಯಕ್ತಿ ಅಥವಾ ಯಾವುದೋ ತಂಡ ನಿರ್ವಹಣೆ ಮಾಡುತ್ತಿರಬೇಕು. ಮರಗಳ್ಳರಿಗೆ ಎಲ್ಲೋ ಖಂಡಿತ ತರಬೇತಿಯೂ ಸಿಗುತ್ತಿರಬೇಕು ಎಂದು ಪ್ರದೀಪ ಆಲೋಚಿಸಿದ್ದ. ಮುಂದಿನ ದಿನಗಳಲ್ಲಿ ಪ್ರದೀಪನ ಆಲೋಚನೆಗೆ ಪೂರಕವಾಗಿ ಘಟನೆಗಳು ನಡೆಯಲಿದ್ದವು.
             ಉಂಚಳ್ಳಿ ಜಲಪಾತಕ್ಕೆ ಹೋಗಬೇಕು ಎಂದು ನಿರ್ಧಾರ ಮಾಡಿಕೊಂಡಿದ್ದವರು ಅನಿರೀಕ್ಷಿತವಾಗಿ ನಡೆದ ಮರಗಳ್ಳರ ಮೇಲಿನ ಹಲ್ಲೆಯ ಘಟನೆಯಿಂದ ತಮ್ಮ ಯೋಜನೆಯನ್ನು ಬದಲಾಯಿಸಿಕೊಳ್ಳಬೇಕಾಯಿತು. ಮರಗಳ್ಳರು ಹಗೆಯನ್ನು ಸಾಧಿಸಬಹುದು ಎಂದು ಆಲೋಚನೆ ಮಾಡಿಕೊಂಡಿದ್ದ ಇವರು ಕಾಲಕಾಲಕ್ಕೆ ತಮ್ಮ ಯೋಜನೆಗಳನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ ಎನ್ನುವುದನ್ನೂ ಮನಗಂಡಿದ್ದರು. ಅದು ಅನಿವಾರ್ಯವೂ ಆಗಿತ್ತು.
                ಮರುದಿನದಿಂದಲೇ ರಾಮುವಿನ ಧಾಳಿಯಿಂದ ಗಾಯಗೊಂಡಿದ್ದ ವ್ಯಕ್ತಿಯನ್ನು ಹುಡುಕುವ ಕೆಲಸ ಆರಂಭವಾಯಿತು. ಆರೋಗ್ಯ ಗಣತಿಯ ನೆಪವನ್ನು ಮಾಡಿಕೊಂಡು ವಿಕ್ರಮ, ಪ್ರದೀಪ, ವಿನಾಯಕ, ವಿಜೇತಾ, ವಿಷ್ಣು ಇವರೆಲ್ಲ ತಲಾ ಎರಡೆರಡು ತಂಡಗಳಂತೆ ಒಂದೊಂದು ಊರಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಲು ಆರಂಭಿಸಿದರು. ದಂಟಕಲ್ಲಿನ ಸುತ್ತಮುತ್ತ ಇರುವ ಊರುಗಳಿಗೆಲ್ಲ ಹೋಗಲಾಯಿತು. ಕೊನೆಗೊಮ್ಮೆ ಬೇಣದಗದ್ದೆಯ ಆಚೆಗೆ ಇರುವ ಹೊಸಗದ್ದೆ ಎಂಬಲ್ಲಿ ಬಾಸು ಗೌಡ ಎಂಬಾತನ ಮನೆಯಲ್ಲಿ ಬಾಸು ಗೌಡನ ಕಾಲಿಗೆ ಗಾಯವಾಗಿರುವ ವಿಷಯ ಪತ್ತೆಯಾಯಿತು. ಮನೆಯ ಮಾಡಿನ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಜಾರಿಬಿದ್ದು ಹಗರು ದಬ್ಬೆ ಬಡಿದು ಗಾಯವಾಗಿದೆ ಎಂದು ಬಾಸು ಗೌಡನ ಮನೆಯಲ್ಲಿ ಸಬೂಬನ್ನು ಹೇಳಿದರು. ಬಾಸು ಗೌಡನೂ ಸ್ಥಳದಲ್ಲಿದ್ದ. ಆತನ ಕಾಲಿಗೆ ಗಾಯವಾಗಿತ್ತು. ಗಾಯಕ್ಕೆ ಬ್ಯಾಂಡೇಜ್ ಸುತ್ತಲಾಗಿತ್ತು. ಮುಂಜಾನೆಯೇ ಎದ್ದು ಯಾವುದೋ ಆಸ್ಪತ್ರೆಗೆ ಹೋಗಿ ಬಂದಿರಬೇಕು ಎಂದುಕೊಂಡರು.
            ಬಾಸು ಗೌಡನ ಮನೆಯನ್ನು ಸೂಕ್ಷ್ಮವಾಗಿ ಪರೀಕ್ಷೆ ಮಾಡಿದಾಗ ಎಲ್ಲಿಯೂ ಮಾಡು ನಿರ್ಮಾಣ ಮಾಡಿದಂತಹ ಕುರುಹು ಸಿಗಲಿಲ್ಲ. ಆತ ಸುಳ್ಳು ಹೇಳಿದ್ದು ಸ್ಪಷ್ಟವಾಗಿತ್ತು. ಮರುದಿನದಿಂದಲೇ ಆತನ ಮೇಲೆ ಕಣ್ಣಿಡಬೇಕು ಎಂದುಕೊಂಡರು ಎಲ್ಲರೂ. ಆತ ಎಲ್ಲೆಲ್ಲಿ ಹೋಗುತ್ತಾನೆ? ಏನು ಮಾಡುತ್ತಾನೆ ಎನ್ನುವುದನ್ನು ಸೂಕ್ಷ್ಮವಾಗಿ ತಿಳಿದುಕೊಳ್ಳಬೇಕು ಎಂದುಕೊಂಡರು.
               ಬಾಸು ಗೌಡ ಮರಗಳ್ಳತನ ಮಾಡುತ್ತಿದ್ದಾನೆ ಎನ್ನುವುದು ಸ್ಪಷ್ಟವಾದ ಮೇಲೆ ಆತನ ಹಿನ್ನೆಲೆಯನ್ನು ತಿಳಿದುಕೊಳ್ಳಲು ವಿಕ್ರಮನ ತಂಡ ಪ್ರಯತ್ನಿಸಿತು. ಬಹಳ ಕಡೆಗಳಲ್ಲಿ ವಿಚಾರಿಸಿದಾಗ ಬಾಸು ಗೌಡ ಮೂಲತಃ ಈ ಕಡೆಯವನಲ್ಲವೆಂದೂ ತೀರ್ಥಹಳ್ಳಿಯಿಂದ ಬಂದವನೆಂದೂ ತಿಳಿಯಿತು. ಬಂದ ಹೊಸತರಲ್ಲಿ ಅವರಿವರ ಮನೆಯಲ್ಲಿ ಕೆಲಸ ಮಾಡುತ್ತಿದ್ದನೆಂಬುದೂ ತಿಳಿಯಿತು. ನಂತರ ಇದ್ದಕ್ಕಿದ್ದಂತೆ 407 ವಾಹನವನ್ನು ಕೊಂಡಾಗ ಮಾತ್ರ ಪ್ರತಿಯೊಬ್ಬರೂ ಬಾಸು ಗೌಡನ ಬಗ್ಗೆ ಹುಬ್ಬೇರಿಸಿದ್ದರು. ಆತ 407 ವಾಹನವನ್ನು ಕೊಂಡುಕೊಂಡ ಮೂರು ದಿನಗಳಲ್ಲಿಯೇ ಪೊಲೀಸರು ಬಾಸು ಗೌಡನನ್ನು ಬಂಧಿಸಿದಾಗ ಮಾತ್ರ ಬಾಸು ಗೌಡನ ಅಸಲೀ ಮುಖ ಹೊರಬಂದಿತ್ತು. ಸುತ್ತಮುತ್ತಲ ಊರುಗಳಲ್ಲಿ ಬಾಸುಗೌಡ ವೆನಿಲ್ಲಾ ಕಳ್ಳತನ ಮಾಡುತ್ತಿದ್ದ ಎನ್ನುವುದು ಪೊಲೀಸರ ಬಂಧನದ ನಂತರವೇ ಜಗಜ್ಜಾಹೀರಾಗಿತ್ತು. ವೆನಿಲ್ಲಾ ಕದ್ದು ಕದ್ದು ಸಾಕಷ್ಟು ಹಣ ಮಾಡಿಕೊಂಡು ಕೊನೆಗೊಮ್ಮೆ 407 ವಾಹನವನ್ನು ಕೊಂಡಿದ್ದ. ಬಾಸುಗೌಡನ ಪೋಟೋ ಇಂದಿಗೂ ಪೊಲೀಸ್ ಠಾಣೆಯಲ್ಲಿ ಇದೆ ಎಂದು ಒಂದಿಬ್ಬರು ಮಾಹಿತಿ ನೀಡಿದ್ದರು. ಇಂತಹ ಬಾಸುಗೌಡನನ್ನು `ಪಾಪ..' ಹೋಗಲಿ ಬಿಡಿ ಎಂದುಕೊಂಡು ಬೇಣದಗದ್ದೆಯ ಸುಬ್ರಹ್ಮಣ್ಯ ಹೆಗಡೆ ಬೇಲು ಕೊಡಿಸಿ ಬಿಡುಗಡೆ ಮಾಡಿಸಿದ್ದರಂತೆ.
             ಬಿಡುಗಡೆಯಾದ ಮೇಲೆ ಸಾಚಾತನ ತೋರಿಸಿದ ಬಾಸು ಗೌಡ ತನ್ನ 407 ವಾಹನದಲ್ಲಿ ಅವರಿವರಿಗೆ ಮನೆ ಕಟ್ಟುವ ಕೆಂಪು ಕಲ್ಲುಗಳನ್ನು, ಜಲ್ಲಿ, ಮರಳುಗಳನ್ನು ತಂದುಕೊಡುವ ಕೆಲಸ ಮಾಡತೊಡಗಿದ. ಮೂರ್ನಾಲ್ಕು ವರ್ಷ ಕಳೆದ ಮೇಲೆ ಸಣ್ಣ ಪ್ರಮಾಣದ ರೌಡಿಯಿಸಂ ಕೆಲಸಕ್ಕೂ ಬಾಸು ಗೌಡ ಇಳಿದಿದ್ದ. ಜನರಿಂದ ಮುಂಗಡ ಹಣ ಪಡೆದುಕೊಳ್ಳುವುದು, ಅದಕ್ಕೆ ಪ್ರತಿಯಾಗಿ ಸೆಕೆಂಡ್ ಗುಣಮಟ್ಟದ ಕಲ್ಲುಗಳನ್ನು ಸರಬರಾಜು ಮಾಡುವ ಕಾರ್ಯ ಮಾಡುತ್ತಿದ್ದ. ಇದಕ್ಕೆ ಪ್ರತಿಯಾಗಿ ಜನಸಾಮಾನ್ಯರು ಗಲಾಟೆ ಮಾಡಿದರೆ ತಂದು ಹಾಕಿದ್ದ ಕಲ್ಲನ್ನು ಬಲಾತ್ಕಾರವಾಗಿ ಎತ್ತಿಕೊಂಡು ಬರುವ ಕೆಲಸವನ್ನೂ ಮಾಡುತ್ತಿದ್ದ. ಈ ಕುರಿತಂತೆ ಒಂದೆರಡು ಸಾರಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣವೂ ದಾಖಲಾಗಿತ್ತು. ಆದರೆ ಹಣದ ಪ್ರಭಾವ ಹಾಗೂ ರೌಡಿಯಿಸಮ್ಮಿನ ಕಾರಣದಿಂದ ಅಂತಹ ಪ್ರಕರಣ ಮುಚ್ಚಿಹಾಕುವ ಕಾರ್ಯದಲ್ಲಿ ಬಾಸು ಗೌಡ ಯಶಸ್ವಿಯಾಗುತ್ತಿದ್ದ. ಇಂತಹ ಬಾಸುಗೌಡ ಮರಗಳ್ಳತನ ಮಾಡುತ್ತಿದ್ದ ಎನ್ನುವುದು ಈಗ ಆಗಿರುವ ಗಾಯದಿಂದ ಗೊತ್ತಾದಂತಾಗಿತ್ತು. ರಾಮು ಮಾಡಿದ ದಾಳಿಯಿಂದಾಗಿ ಬಾಸು ಗೌಡನ ಇನ್ನೊಂದು ಮುಖ ಜಗತ್ತಿಗೆ ತಿಳಿದಂತಾಗಿತ್ತು. ಪ್ರದೀಪ ಈ ಎಲ್ಲ ಮಾಹಿತಿಗಳನ್ನು ಪಡೆದುಕೊಂಡು ಆಲೋಚನೆಯಲ್ಲಿ ಬಿದ್ದಿದ್ದ.
             ಮರಗಳ್ಳತನ ಮಾಡಿ ಗಾಯಗೊಂಡಿರುವವನು ಬಾಸು ಗೌಡನಾದರೆ ತನ್ನ ಕೈಯಲ್ಲಿ ಹೊಡೆತ ತಿಂದು ಸಾವನ್ನಪ್ಪಿದವನು ಯಾರು ಎನ್ನುವುದು ಪ್ರದೀಪನ ತಲೆಯಲ್ಲಿ ಕೊರೆಯಲಾರಂಭಿಸಿತ್ತು. ಬಾಸುಗೌಡ ಪಕ್ಕದ ಊರಿನವನೇ ಆಗಿದ್ದರೂ ಸತ್ತವನು ಎಲ್ಲಿಯವನು? ಪಕ್ಕದ ಊರಿನವನಾಗಿದ್ದರೆ ಗೊತ್ತಾಗಬೇಕಿತ್ತಲ್ಲ. ಯಾರೂ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಬಂದಿಲ್ಲ. ಬೇರೆ ಕಡೆಯಿಂದ ಬಂದವನೇ ಎಂದು ಆಲೋಚಿಸಿದ. ಸುತ್ತಮುತ್ತ ಮಾಹಿತಿ ಸಂಗ್ರಹಿಸಿದಾಗ ಇಬ್ಬರಿಗೆ ಹಾರ್ಟ್ ಎಟ್ಯಾಕ್ ಆಗಿ ಆಸ್ಪತ್ರೆಯಲ್ಲಿದ್ದಾರೆ ಎನ್ನುವ ಮಾಹಿತಿ ಸಿಕ್ಕಿತ್ತು. ಒಬ್ಬರಿಗೆ ಬ್ರೈನ್ ಟ್ಯೂಮರ್ ಆಗಿ ಮಂಗಳೂರಿನ ಆಸ್ಪತ್ರೆಗೆ ಎರಡು ದಿನಗಳ ಹಿಂದೆ ಕರೆದೊಯ್ಯಲಾಗಿದೆ ಎನ್ನುವ ಮಾಹಿತಿಯೂ ಸಿಕ್ಕಿತ್ತು. ಇವರ್ಯಾರೂ ಅಲ್ಲ. ಬೇರೆ ಇನ್ಯಾರು ಸತ್ತಿರಬಹುದು ಎಂದು ಪ್ರದೀಪ ಆಲೋಚನೆ ಮಾಡಲಾರಂಭಿಸಿದ್ದ.

***

              ಒಂದೆರಡು ದಿನಗಳಲ್ಲಿ ಏನೆಲ್ಲ ನಡೆದು ಹೋದವಲ್ಲ ಎಂದುಕೊಂಡ ವಿಕ್ರಮ. ಪ್ರದೀಪನಿಂದ ಸುಮ್ಮ ಸುಮ್ಮನೇ ಯಾವುದೋ ಸಮಸ್ಯೆ ಉದ್ಭವವಾಗಿರಬಹುದೇ ಎಂದೂ ಆತನ ಮನದಲ್ಲಿ ಮೂಡಿತು. ಪ್ರದೀಪ ಖಂಡಿತವಾಗಿಯೂ ಸಾಮಾನ್ಯನಲ್ಲ. ಈತ ಬೇರೇನೋ ಇರಬೇಕು ಎನ್ನುವ ಶಂಕೆ ಮತ್ತಷ್ಟು ಬಲವಾಯಿತು. ಅಷ್ಟರಲ್ಲಿ ಅವನ ಬಳಿಗೆ ಬಂದ ವಿಜೇತಾ `ವಿಕ್ಕಿ.. ಉಂಚಳ್ಳಿ ಜಲಪಾತಕ್ಕೆ ಹೋಗಿ ಬರೋಣವಾ? ಯಾಕೋ ಮನಸ್ಸೆಲ್ಲ ಒಂಥರಾ ಆಗಿದೆ. ಸ್ವಲ್ಪ ಮನಸ್ಸಿಗೆ ರಿಲ್ಯಾಕ್ಸ್ ಸಿಗುತ್ತೇನೋ ಅಂತ..' ಎಂದಳು.
             `ಖಂಡಿತ. ನಾನೂ ಅದನ್ನೇ ಹೇಳೋಣ ಅಂದುಕೊಂಡಿದ್ದೆ. ನೀನು ಹೇಳಿದ್ದು ಚೆನ್ನಾಯಿತು ನೋಡು. ಎಲ್ಲರಿಗೂ ಹೇಳುತ್ತೇನೆ. ಇವತ್ತೇ ಹೋಗಿ ಬರೋಣ..' ಎಂದು ತಯಾರಾಗಲು ಅನುವಾದ ವಿಕ್ರಮ.
              `ಬೇಗ.. ' ಅವಸರಿಸಿದಳು ವಿಜೇತಾ.
               ಕೆಲವೇ ಸಮಯದಲ್ಲಿ ಎಲ್ಲರಿಗೂ ಸುದ್ದಿ ತಿಳಿದು ಪ್ರತಿಯೊಬ್ಬರೂ ತಯಾರಾದರು. ವಿಕ್ರಮ ಕಾರನ್ನು ತೆಗೆದಿದ್ದ. ವಿನಾಯಕ, ವಿಷ್ಣು, ಪ್ರದೀಪ, ವಿಜೇತಾ, ವಿಕ್ರಮ ಹಾಗೂ ವಿನಾಯಕನ ತಂಗಿಯರು ತಯಾರಾಗಿ ಕಾರನ್ನೇರಿದ್ದರು. ದಂಟಕಲ್ಲಿನಿಂದ ಒಂದು ತಾಸಿನ ಅಂತರದಲ್ಲಿ ಯಲುಗಾರ, ಹೊಸಗದ್ದೆ, ಹೇರೂರು, ಹೆಗ್ಗರಣೆ ಈ ಮುಂತಾದ ಊರುಗಳನ್ನು ದಾಟಿ ಉಂಚಳ್ಳಿ ಜಲಪಾತದ ಬಳಿ ತೆರಳಿದರು.
              ಅಘನಾಶಿನಿ ನದಿಯಿಂದ ಸೃಷ್ಟಿಯಾಗುವ ಈ ಜಲಪಾತವನ್ನು ಲೂಷಿಂಗ್ಟನ್ ಜಲಪಾತ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಶಿರಸಿಯಿಂದ 30 ಕಿಲೋಮೀಟರ್ ಅಂತರದಲ್ಲಿರುವ ಈ ಜಲಪಾತದ ಎತ್ತರ 116 ಮೀಟರ್. 1845ರಲ್ಲಿ ಉತ್ತರ ಕನ್ನಡದಲ್ಲಿ ಸರ್ವೇ ಕಾರ್ಯ ನಿರ್ವಹಿಸುತ್ತಿದ್ದ ಬ್ರಿಟೀಷ್ ಅಧಿಕಾರಿ ಜೆ. ಡಿ. ಲೂಷಿಂಗ್ಟನ್ ಈ ಜಲಪಾತವನ್ನು ಕಂಡುಹಿಡಿದ ಎಂಬ ಮಾಹಿತಿಯಿದೆ. ಆದ್ದರಿಂದ ಈ ಜಲಪಾತವನ್ನು ಲೂಷಿಂಗ್ಟನ್ ಜಲಪಾತ ಎಂದು ಕರೆಯುತ್ತಾರೆ. ಈ ಜಲಪಾತದ ನೀರು ಬೀಳುವಾಗ ಭಾರಿ ದೊಡ್ಡ ಶಬ್ದ ಉಂಟುಮಾಡುತ್ತದೆ. ಆ ಕಾರಣದಿಂದ ಸ್ಥಳೀಯರು ಈ ಜಲಪಾತವನ್ನು `ಕೆಪ್ಪ ಜೋಗ' ಎಂದು ಕರೆಯುತ್ತಾರೆ. ವರ್ಷದ ಎಲ್ಲ ಕಾಲದಲ್ಲಿಯೂ ಈ ಜಲಪಾತದ ದರ್ಶನ ಲಭ್ಯ. ಮಳೆಗಾಲದಲ್ಲಂತೂ ಇದು ರುದ್ರರಮಣೀಯ.
              ಬೇಸಿಗೆಯಾದ್ದರಿಂದ ಜಲಪಾತದಲ್ಲಿ ನೀರು ಅಷ್ಟಾಗಿ ಇರಲಿಲ್ಲ. ಆದರೆ ಜಲಪಾತ ಬಹಳ ಸುಂದರವಾಗಿ ಕಾಣುತ್ತಿತ್ತು. ಕಾರಿನಿಂದ ಇಳಿದವರು ಓಡಿದಂತೆ ಸಾಗಿದರು. ವೀಕ್ಷಣಾ ಗೋಪುರದ ಬಳಿ ನಿಂತು ಜಲಪಾತ ನೋಡಿದವರಿಗೆ ಸಮಯ ಸರಿದಿದ್ದೇ ಗೊತ್ತಾಗಲಿಲ್ಲ. ಜಲಪಾತಕ್ಕೆ ಮಳೆಗಾಲದ ಅಬ್ಬರ ಇರಲಿಲ್ಲ. ಕಲಕಲಕಿಸುತ್ತ ಇಳಿದು ಬರುತ್ತಿದ್ಧಳು ಅಘನಾಶಿನಿ. ಮಳೆಗಾಲದಲ್ಲಿ ಅಬ್ಬರದಿಂದ ಸದ್ದು ಮಾಡುತ್ತಿದ್ದವಳು ಇವಳೇ ಹೌದಾ ಎನ್ನುವಷ್ಟು ಸೌಮ್ಯ. ಒಂದೇ ನೋಟಕ್ಕೆ ಎಲ್ಲರ ಮನಸ್ಸನ್ನು ಕದ್ದು ಬಿಟ್ಟಿದ್ದಳು.
           'ಕೆಳಗೆ ಹೋಗಬಹುದಾ?' ಕೇಳಿದ್ದಳು ವಿಜೇತಾ.

(ಮುಂದುವರಿಯುತ್ತದೆ)

No comments:

Post a Comment