Saturday, August 1, 2015

ಮಾಸ್ತರ್ ಮಂದಿ-4

ರಮೇಶ ಗಡ್ಕರ್ :
                  ಆರ್ ವೈ ಗಡ್ಕರ್ ಮಾಸ್ತರ್ರ ಬಗ್ಗೆ ಏನಂತ ಹೇಳುವುದು, ಏನಂತ ಬಿಡುವುದು? ರಮೇಶ ಗಡ್ಕರ್ ಎಂಬ ಹೆಸರಿನ ಮಾಸ್ತರ್ರು ಜಿ. ಎಸ್. ಭಟ್ಟರು ಅಪಘಾತತದಲ್ಲಿ ತೀರಿಕೊಂಡ ತರುವಾಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಡ್ಸಿಂಗೆ, ಅಡ್ಕಳ್ಳಿಗೆ ಬಂದವರು. ಶಾಲೆಗೆ ಪೂರ್ಣಾವದಿ ಹೆಡ್ಮಾಸ್ತರ್ರಾಗಿ ಬಂದವರೆಂದರೆ ಇವರೇ ಮೊದಲಿಗರೇನೋ. ಗಡ್ಕರ್ ಮಾಸ್ತರ್ ನಮ್ಮ ಶಾಲೆಗೆ ಬರುವಾಗ ಶಾಲೆಗೆ ಪ್ರಮುಖವಾಗಿ ಇದ್ದುದು ಒಂದೇ ಕೋಣೆ. ಬಂದವರೇ ಶಾಲೆಗೆ ಇದ್ದ ಬಹುದೊಡ್ಡ ಕೋಣೆಯನ್ನು ಭಾಗ ಮಾಡಿ ಎರಡು ಕೋಣೆ ಮಾಡಿಸಿದರು. ಅಷ್ಟೇ ಅಲ್ಲ ಸಕ್ಕ ಪಕ್ಕ ಇನ್ನೂ ಎರಡು ಹೊಸ ಕೋಣೆಗಳನ್ನು ಕಟ್ಟಿಸಲು ಕಾರಣರಾದರು.
            ಗಡ್ಕರ್ ಮಾಸ್ತರ್ರು ಅಂದ ತಕ್ಷಣ ನನಗೆ ಪ್ರಮುಖವಾಗಿ ನೆನಪಾಗುವುದು ಅವರ ಹ್ಯಾಂಡ್ ರೈಟಿಂಗ್. ಬಹಳ ಸುಂದರವಾಗಿ ಬರೆಯುತ್ತಿದ್ದ ಅವರ ಅಕ್ಷರಗಳು ಇನ್ನೂ ನನ್ನ ಕಣ್ಣ ಮುಂದೆ ಇದೆ. ಶಾಲೆಯ ಎಲ್ಲ ಬೋರ್ಡುಗಳ ಮೇಲೂ ಸುಂದರ ಅಕ್ಷರಗಳನ್ನು ಬರೆದರು. ಮಕ್ಕಳ ಸಂಖ್ಯೆ, ಶಿಕ್ಷಕರ ಸಂಖ್ಯೆ, ನುಡಿಮುತ್ತು, ಅಮರವಾಣಿ, ತಿಥಿ-ಪಂಚಾಂಗ, ಮ್ಯಾಪ್ ಇವುಗಳನ್ನೆಲ್ಲ ಅದೆಷ್ಟು ಸುಂದರವಾಗಿ ಬರೆದರೆಂದರೆ ಇಂದಿಗೂ ಅವುಗಳ ನೆನಪಾಗುತ್ತಿರುತ್ತವೆ. ಗಡ್ಕರ್ ಮಾಸ್ತರ್ರು ಎಂದ ಕೂಡಲೇ ನನಗೆ ಮೊಟ್ಟ ಮೊದಲು ನೆನಪಾಗುವುದು ಎಂದರೆ ಒಂದು ದಿನ ಶಾಲೆಯಲ್ಲಿ ಪ್ರಾರ್ಥನೆ ಮುಗಿದ ತಕ್ಷಣ ಪ್ರತಿಯೊಬ್ಬರ ಎಣಿಕೆ ನಡೆಯುತ್ತಿತ್ತು. ಎತ್ತರ ಪ್ರಕಾರ ನಿಲ್ಲ ಬೇಕಿದ್ದವರು ಒಂದು, ಎರಡು, ಮೂರು ಎಂದು ಸರಣಿಯಲ್ಲಿ ಹೇಳಬೇಕಿತ್ತು. ನನ್ನ ಮುಂದೆ 10-15 ಕುಳ್ಳರು ನಿಂತಿದ್ದರು. ಅವರೆಲ್ಲ ಎಣಿಕೆ ಮುಗಿಸಿ ನನ್ನ ಬಳಿ ಬಂದಿತು. ಮಳೆ-ಗಾಳಿಯ ಸಮಯ. ನಾನು ಎಣಿಕೆ ಮಾಡುವುದನ್ನು ಬಿಟ್ಟು ದಿಕ್ಕು ನೋಡುತ್ತಿದ್ದೆ. ಭಾರಿ ಗಾಳಿ ಬೀಸುತ್ತಿತ್ತಲ್ಲ ಭೂತಪ್ಪನ ಕಟ್ಟೆಯ ಮಾವಿನಮರದ ಕೊಂಬೆಗಳು ಸಿಕ್ಕಾಪಟ್ಟೆ ಓಲಾಡುತ್ತಿದ್ದವು. ಅವನ್ನು ನೋಡುತ್ತ ಮರ ಈಗ ಬೀಳುತ್ತದೆ, ಆಗ ಬೀಳುತ್ತದೆ ಎಂದು ಕಾಯುತ್ತ ನಿಂತಿದ್ದೆ. ಹಾಗೆ ನೋಡುತ್ತಿದ್ದವನು ನಾನು ನನ್ನ ಸಂಕ್ಯೆಯನ್ನು ಗಟ್ಟಿ ಹೇಳಲು ಮರೆತಿದ್ದೆ. ಗಡ್ಕರ್ ಮಾಸ್ತರ್ರು ಸೀದಾ ಹತ್ತಿರ ಬಂದವರೇ ನನ್ನ ಬುರ್ಡೆ ಮೇಲೆ ರಪ್ಪನೆ ಬಡಿದು ಎಲ್ಲಿ ನೋಡಾಕ್ ಹತ್ತೀಯೋ ಎಂದು ಗನಾಕೆ ಬೈದರು. ನಾನು ಒಮ್ಮೆ ಕುಮುಟಿ ಬಿದ್ದಿದ್ದೆ.
           ಆಮೇಲೆ ಐದನೇ ಕ್ಲಾಸಿಗೆ ಬಂದಾಗ ಮಾತ್ರ ಅವರ ಜೊತೆ ಹತ್ತಿರದಿಂದ ಒಡನಾಡುವ ಭಾಗ್ಯ ನನಗೆ ಸಿಕ್ಕಿತು. ಐದನೇ ಕ್ಲಾಸಿನಿಂದ ಏಳನೆತ್ತಿವರೆಗೆ ಗಡ್ಕರ ಮಾಸ್ತರ್ರೇ ನನಗೆ ಹಿಂದಿ ಕಲಿಸಿದವರು. `ಬಾರ ಬಾರ ಆತೀ ಹೈ ಮುಝಕೋ.. ಮಧುರ ಯಾದ ಬಚಪನ್ ತೇರಿ..' ಎಂಬ ಹಾಡನ್ನು ಗಡ್ಕರ್ ಮಾಸ್ತರ್ರು ತಲೆ ಹಾಗೂ ಕಾಲನ್ನು ಕುಣಿಸುತ್ತಾ ಹೇಳುತ್ತಿದ್ದರೆ ನಾವೆಲ್ಲ ತಲ್ಲೀನರಾಗುತ್ತಿದ್ದೆವು. ಯಾವ ಪರೀಕ್ಷೆಗಳಲ್ಲಿ ಅದೆಷ್ಟು ಮಾರ್ಕ್ಸ್ ಬೀಳುತ್ತಿತ್ತೋ ಗೊತ್ತಿಲ್ಲ. ಹಿಂದಿಯಲ್ಲಿ ಮಾತ್ರ 25ಕ್ಕೆ 20ರ ಮೇಲೆ ಪಕ್ಕಾ ಬೀಳುತ್ತಿತ್ತು. ಅಷ್ಟು ಚನ್ನಾಗಿ ಕಲಿಸುತ್ತಿದ್ದರು ಅವರು.
            ಗಡ್ಕರ್ ಮಾಸ್ತರ್ ಎಂದ ಕೂಡಲೇ ಅದೊಂದು ಘಟನೆ ನನ್ನ ಕಣ್ಣೆದುರು ಸದಾ ನೆನಪಿಗೆ ಬರುತ್ತದೆ. ಒಮ್ಮೆ ಹರೀಶ ಮಾಸ್ತರ್ರು ನಮಗೆ ವಿಜ್ಞಾನ ವಿಷಯವನ್ನು ಕಲಿಸುತ್ತಿದ್ದರು. ಅದ್ಯಾವುದೋ ಪ್ರಯೋಗವನ್ನು ಕೈಗೊಂಡಿದ್ದರು. ಗಂಧಕದ ನೀರನ್ನೋ ಅಥವಾ ಆಸಿಡ್ ಮಿಶ್ರಿತ ನೀರನ್ನೋ ಬಳಸಿ ವಿಜ್ಞಾನದ ಪ್ರಯೋಗ ಮಾಡಿದ್ದರು. ಆದರೆ ಪ್ರಯೋಗ ಮುಗಿಸಿದ ನಂತರ ಅದನ್ನು ಒಗೆಯುವುದನ್ನು ಬಿಟ್ಟು ಒಂದು ಚೊಂಬಿನಲ್ಲಿ ಹಾಕಿ ಹಾಗೇ ಇಟ್ಟಿದ್ದರು. ಗಡ್ಕರ್ ಮಾಸ್ತರ್ರು ಕವಳ ಹಾಕುತ್ತಿದ್ದರು. ಕವಳ ಹಾಕಿದ ನಂತರ ಬಾಯಿಯನ್ನು ತೊಳೆಯುವುದು ಅವರ ಹವ್ಯಾಸ. ಅವರು ಹಿಂದೆ ನೋಡಲಿಲ್ಲ ಮುಂದೆ ನೋಡಲಿಲ್ಲ. ಪ್ರಯೋಗಕ್ಕೆ ಬಳಕೆ ಮಾಡಿ ಹಾಗೇ ಇಟ್ಟಿದ್ದ ರಾಸಾಯನಿಕ ಮಿಶ್ರಿತ ನೀರನ್ನು ಬಾಯಿಗೆ ಹಾಕಿಯೇ ಬಿಟ್ಟರು. ಯಾಕೋ ನೀರು ಎಂದಿನಂತೆ ಇಲ್ಲವಲ್ಲ ಎಂದು ಅವರಿಗೆ ಅನ್ನಿಸಿತು. ತಕ್ಷಣ ತುಪ್ಪಿದರು. ಹರೀಶ ನಾಯ್ಕರೇ ನೀರು ಹಾಳಾಗಿದೆಯಾ? ಎಂದರು. ಆಗಲೇ ಹರೀಶ ನಾಯ್ಕರಿಗೆ ಅನುಮಾನ ಬಂದು ಯಾವ ನೀರು ಕುಡಿದಿದ್ದೀರಿ ಎಂದರು. ತಕ್ಷಣ ಗಡ್ಕರ್ ಮಾಸ್ತರ್ರು ವಿಷಯ ಹೇಳಿದ್ದರು. ಆಗ ಹೌಹಾರಿದ್ದ ಹರೀಶ ಮಾಸ್ತರ್ರು ರಾಸಾಯನಿಕ ಮಿಶ್ರಿತ ನೀರಿನ ವಿಷಯ ಹೇಳಿದ್ದರು.
             ಗಡ್ಕರಿ ಮಾಸ್ತರ್ರು ಬಾಯನ್ನು ಮುಕ್ಕಳಿಸಿದ್ದವರು ಒಂದು ಗುಟುಕನ್ನೂ ಕುಡಿದು ಬಿಟ್ಟಿದ್ದರಂತೆ. ಯಾವಾಗ ಹರೀಶ ಮಾಸ್ತರ್ರಿಂದ ರಾಸಾಯನಿಕ ವಿಷಯವನ್ನು ತಿಳಿದರೋ ಆಗ ಒಮ್ಮೆ ಕುಸಿದು ಕುಳಿತ ರಮೇಶ ಗಡ್ಕರ್ ಮಾಸ್ತರ್ರು ಅಳುವುದೊಂದು ಬಾಕಿ. ತಾರಕ್ಕೋರು, ಸಿ. ಎಂ. ಹೆಗಡೇರು ಹತ್ತಿರ ಬಂದು ಸಮಾಧಾನ ಹೇಳುತ್ತಿದ್ದರೂ ಕೇಳುವ ಮನಸ್ಸಿರಲಿಲ್ಲ. ಏನೋ ಆಯಿತು ಎಂದುಕೊಂಡರು. ತಕ್ಷಣವೇ ಅವರನ್ನು ಕಾನಸೂರಿನ ಬೆಳ್ಳೇಕೇರಿ ಡಾಕ್ಟರ್ ಬಳಿ ಕರೆದೊಯ್ದು ಚಿಕಿತ್ಸೆ ನೀಡಲಾಯಿತು. ಸುದೈವದಿಂದ ಗಡ್ಕರ್ ಮಾಸ್ತರ್ರಿಗೆ ಏನೂ ಆಗಿರಲಿಲ್ಲ. ಬಹುಶಃ ಈಗಿನ ಮಾಸ್ತರ್ರುಗಳಾದರೆ ಇದೇ ನೆಪ ಎಂದುಕೊಂಡು ವಾರಗಟ್ಟಲೆ ರಜಾ ಹಾಕುತ್ತಿದ್ದರೇನೋ. ಆದರೆ ಗಡ್ಕರ್ ಮಾಸ್ತರ್ರು ಹಾಗೆ ಮಾಡಲಿಲ್ಲ. ಆಸ್ಪತ್ರೆಯಿಂದ ಮತ್ತೆ ಶಾಲೆಗೆ ವಾಪಾಸು ಬಂದು ಪಾಠ ಕಲಿಸುವಲ್ಲಿ ನಿರತರಾಗಿದ್ದರು. ಮರುದಿನ ಗಡ್ಕರ್ ಮಾಸ್ತರ್ರನ್ನು ಶ್ಲಾಘಿಸಿ ಸಿರಸಿಯಿಂದ ಬರುವ `ಲೋಕಧ್ವನಿ' ಪತ್ರಿಕಯಲ್ಲಿ ವರದಿಯೊಂದು ಪ್ರಕಟಗೊಂಡಿತ್ತು.
             ಶಾಲೆಯಲ್ಲಿದ್ದ ವಿದ್ಯಾರ್ಥಿಗಳಲ್ಲಿ ನಾಲ್ಕು ತಂಡ ಮಾಡಿ ನಾಲ್ವರು ಮಾಸ್ತರ್ರು ಅವರನ್ನು ಹಂಚಿಕೊಂಡು ವಿವಿಧ ರಚನಾತ್ಮಕ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕೆಂದು ಚಿಂತಿಸಿ ಅದನ್ನು ಕಾರ್ಯರೂಪಕ್ಕೆ ತಂದವರು ಗಡ್ಕರ್ ಮಾಸ್ತರ್ರು. ನಾನು ಗಡ್ಕರ್ ಮಾಸ್ತರ್ರ ತಂಡಕ್ಕೆ ಸೇರಿದ್ದೆ. ತಾರಕ್ಕೋರ ತಂಡಕ್ಕೆ ಸೆರಿದ್ದರೆ ಚನ್ನಾಗಿತ್ತು ಎನ್ನುವುದು ನನ್ನ ಮನದಾಳದ ಆಸೆಯಾಗಿದ್ದರೂ ಗಡ್ಕರ್ ಮಾಸ್ತರ್ ತಂಡಕ್ಕೆ ಸೇರಿದ್ದರಿಂದ ಬೇಜಾರೇನೂ ಆಗಿರಲಿಲ್ಲ.
            ಗಡ್ಕರ್ ಮಾಸ್ತರ್ ವಾಲೀಬಾಲ್ ಆಡುವ ರೀತಿ ನಮ್ಮೆಲ್ಲರಿಗೆ ತಮಾಷೆಯ ವಿಷಯವಾಗಿತ್ತು. ಸರ್ವೀಸ್ ಮಾಡುವಾಗ ಅವರು ಮಾಡುತ್ತಿದ್ದ ವಿಚಿತ್ರ ಆಕ್ಷನ್ ನಮ್ಮೆಲ್ಲರಲ್ಲಿ ನಗುವನ್ನು ಉಕ್ಕಿಸುತ್ತಿತ್ತು. ನಾವೆಲ್ಲರೂ ನೇರವಾಗಿ ನಿಂತುಕೊಂಡು ನೆಟ್ ದಾಟಿಸಿ ಸರ್ವೀಸ್ ಮಾಡುತ್ತಿದ್ದರೆ ಗಡ್ಕರ್ ಮಾಸ್ತರ್ ಮಾತ್ರ ನೆಟ್ ಗೆ ವಿರುದ್ಧ ದಿಕ್ಕಿನಲ್ಲಿ ತುದಿಗಾಲಿನಲ್ಲಿ ಕುಳಿತುಕೊಳ್ಳುತ್ತಿದ್ದರು. ಇದ್ದಕ್ಕಿದ್ದಂತೆ ರಪ್ಪನೆ ತಿರುಗಿ ಕುಪ್ಪಳಿಸಿದಂತೆ ಮಾಡಿ ಸರ್ವೀಸ್ ಮಾಡುತ್ತಿದ್ದರು. ವಾಲೀಬಾಲ್ ಸೀದಾ ನೆಟ್ ದಾಟಿ ರೊಯ್ಯಂನೆ ಬಂದು ಬೀಳುತ್ತಿತ್ತು. ಮೊದ ಮೊದಲು ಇದು ನಮ್ಮೆಲ್ಲರಿಗೆ ತಮಾಷೆಯನ್ನು ತಂದಿದ್ದರೂ ಕೊನೆ ಕೊನೆಗೆ ಇದೂ ಒಂದು ಆಟದ ತಂತ್ರ ಎನ್ನುವುದು ಅರಿವಾಗಿ ಹೆಮ್ಮೆಯುಂಟಾಗಿತ್ತು.
             ಗಡ್ಕರ್ ಮಾಸ್ತರ್ ಎಂದರೆ ಸಾಕು ನನಗೆ ಎಲ್ಲಕ್ಕಿಂತ ಹೆಚ್ಚು ನೆನಪಿನಲ್ಲಿರುವುದು ಚೆಸ್. ನನಗೆ ಚೆಸ್ ಆಟವನ್ನು ಶಾಸ್ತ್ರೋಕ್ತವಾಗಿ ಕಲಿಸಿದವರು ಇವರೇ ಎಂದರೆ ತಪ್ಪಾಗಲಿಕ್ಕಿಲ್ಲ. ನಾನು ಐದು ವರ್ಷದವನಿದ್ದಾಗ ಚಿಕ್ಕಪ್ಪ ಮಹೇಶ ನನಗೆ ಮೊದಲು ಚೆಸ್ ಕಲಿಸಿದ್ದ. ಆ ನಂತರ ಅಪ್ಪನ ಬಳಿ ಹರಪೆ ಬಿದ್ದು ನಾನು ಚೆಸ್ ಬೋರ್ಡನ್ನು ತಂದುಕೊಂಡಿದ್ದೆ. ಪುರಸೊತ್ತಾದಾಗಲೆಲ್ಲ ಅಮ್ಮನ ಜೊತೆ ಚೆಸ್ ಆಡುತ್ತಿದ್ದೆ. ಅಮ್ಮನನ್ನು ಚೆಸ್ಸಿನಲ್ಲಿ ಸೋಲಿಸುವ ಮೂಲಕ ನಮ್ಮನೆಯಲ್ಲಿ ಚೆಸ್ ಲೋಕದಲ್ಲಿ ನಾನೇ ಅನಭಿಷಿಕ್ತ ದೊರೆಯಾಗಿ ಮೆರೆಯುತ್ತಿದ್ದೆ. ಈ ವಿಷಯ ನನ್ನ ಕ್ಲಾಸ್ ಮೇಟ್ ಮಹೇಶ ಎಂಬಾತನಿಗೆ ತಿಳಿದುಹೋಗಿತ್ತು. ಆತ ಒಂದು ದಿನ ಶಾಲೆಯಲ್ಲಿ ಚೆಸ್ ಆಡಲು ನನ್ನನ್ನು ಕರೆಸಿ ಹೀನಾಯವಾಗಿ ಸೋಲಿಸಿದ್ದ. ಅಷ್ಟರ ನಂತರ ನನ್ನ ಚೆಸ್ ಪ್ರತಾಪದ ಪುಂಗಿ ಬಂದಾಗಿತ್ತು.
             ರಮೇಶ ಗಡ್ಕರ್ ಮಾಸ್ತರ್ ಜೊತೆಗೆ ಮುತ್ಮೂರ್ಡ್ ಶಾಲೆಗೆ ಕಲಿಸಲು ಹೋಗುವ ರಮೇಶ ನಾಯ್ಕರು ಖಾಯಂ ಆಗಿ ಚೆಸ್ ಆಡುತ್ತಿದ್ದರು. ರಮೇಶ ನಾಯ್ಕರು ಬರದೇ ಇದ್ದ ದಿನ ಮಹೇಶನ ಜೊತೆಗೆ ಚೆಸ್ ಆಡುತ್ತಿದ್ದರು. ಶಾಲೆಯಲ್ಲಿ ಆಟಕ್ಕೆ ಬಿಡುತ್ತಿದ್ದ ಸಮಯದಲ್ಲಿ ಮಹೇಶ ರಮೇಶ ನಾಯ್ಕರ ಜೊತೆ ಚೆಸ್ ಆಡಿದರೆ ಊಟದ ಗ್ಯಾಪಿನಲ್ಲಿ ರಮೇಶ ನಾಯ್ಕರು ಚೆಸ್ ಆಡುತ್ತಿದ್ದರು. ಯಾವುದೋ ಒಂದು ದಿನ ಮಹೇಶನಿಗೆ ಏನಾಗಿತ್ತೋ? ನನ್ನ ಮೇಲೆ ಸಿಟ್ಟು ಬಂದಿತ್ತೇನೋ. `ಸಾರ್.. ವಿನಯ ಭಯಂಕರ ಚೊಲೋ ಚೆಸ್ ಆಡ್ತಾನೆ..' ಎಂದುಬಿಟ್ಟಿದ್ದ. ಗಡ್ಕರ್ ಮಾಸ್ತರ್ `ಹೌದಾ.. ಬಾ ಆಡೋಣ..' ಎಂದಿದ್ದರು. ಅಂದಿನಿಂದ ನಾನು ಅವರ ಜೊತೆ ಖಾಯಂ ಚೆಸ್ ಆಡುವವನಾಗಿಬಿಟ್ಟೆ. ಪರಿಣಾಮವಾಗಿ ಆಟದ ವಿರಾಮಕ್ಕೆ ಆಡಲು ಹೋಗಲು ನನಗೆ ಆಗುತ್ತಲೇ ಇರಲಿಲ್ಲ. ಆ ಸಮಯದಲ್ಲಿ ಗಡ್ಕರ್ ಮಾಸ್ತರ್ ಜೊತೆ ಚೆಸ್ ಆಡಬೇಕಿತ್ತು. ಕೊನೆ ಕೊನೆಗೆ ನನಗೆ ಅಳು ಬರುವಷ್ಟು ಮಟ್ಟಕ್ಕೆ ಇದು ಮುಟ್ಟಿತ್ತು. ನನ್ನನ್ನು ಚೆಸ್ ಆಡಲು ತಗಲುಹಾಕಿದ ಮಹೇಶ ಮಾತ್ರ ಆಟಕ್ಕೆ ಹೋಗುತ್ತಿದ್ದನಷ್ಟೇ ಅಲ್ಲದೇ ಸಮಾ ಮಾಡಿದೆ ಎಂದು ನಗುತ್ತಿದ್ದ.
            ರಮೇಶ ಮಾಸ್ತರ್ರು ಚೆಸ್ ಆಡುವ ರೀತಿಯೂ ವಿಚಿತ್ರವಾಗಿತ್ತು. ಚೆಸ್ ಆಡುವ ಸಂದರ್ಭದಲ್ಲಿ ಅವರು ಯಾವಾಗಲೂ ಕಪ್ಪು ಕಾಯಿಗಳನ್ನೇ ಇಟ್ಟುಕೊಳ್ಳುತ್ತಿದ್ದರು. ನಾನು ಯಾವಾಗಲೂ ಬಿಳಿಯಕಾಯಿಯನ್ನು ಇಟ್ಟುಕೊಳ್ಳಬೇಕಿತ್ತಲ್ಲದೇ ನಿಯಮದ ಪ್ರಕಾರ ನಾನೇ ಆಟವನ್ನು ಆರಂಭಿಸಬೇಕಿತ್ತು. ಬಹಳ ಚನ್ನಾಗಿ ಆಡುತ್ತಿದ್ದ ರಮೇಶ ಗಡ್ಕರ್ ಆಟದ ಎದುರು ಸೋಲೆಂಬುದು ಕಟ್ಟಿಟ್ಟ ಬುತ್ತಿಯಾಗಿತ್ತು. ಹೀಗಿರುವಾಗ ಒಂದು ದಿನ ಆಲೋಚನೆಯೊಂದು ಬಂದಿತು. ಆಲೋಚನೆ ಎನ್ನುವುದಕ್ಕಿಂತ ಬೇಸರ ಎಂದರೆ ಉತ್ತಮ. ದಿನಾ ಬಿಳಿಯ ಕಾಯಿಯಲ್ಲಿ ಚದುರಂಗವನ್ನು ಆಡಿ ಆಡಿ ಬೇಸರವಾಗಿ ಅದೊಂದು ದಿನ ಕಪ್ಪು ಕಾಯಿಯನ್ನು ನನಗೆ ಕೊಡಿ ಎಂದರೆ. ಗಡ್ಕರ್ ಮಾಸ್ತರ್ ಒಪ್ಪಲಿಲ್ಲ. ಕೊನೆಗೆ ಹರಪೆ ಬಿದ್ದು ಕಪ್ಪು ಕಾಯಿ ಪಡೆದುಕೊಂಡೆ. ವಿಚಿತ್ರವೆಂದರೆ ಆ ದಿನ ನಾನು ಪಂದ್ಯಗಳನ್ನು ಗೆದ್ದೆ. ಒಂದಾದ ಮೇಲೆ ಒಂದರಂತೆ ಗೆದ್ದೆ. ಆ ದಿನ ರಮೇಶ ಮಾಸ್ತರ್ರಿಗೆ ಸಿಕ್ಕಾಪಟ್ಟೆ ಸಿಟ್ಟು ಬಂದಿತ್ತು. ಪಾಠದ ಸಮಯದಲ್ಲಿ ನನಗೆ ಹಿಡಿದು ಬಡಿದೂ ಬಿಟ್ಟಿದ್ದರು. ಕೊನೆಗೆ ಗೊತ್ತಾಗದ್ದೆಂದರೆ ರಮೇಶ ಮಾಸ್ತರ್ರ ವೀಕ್ ನೆಸ್ ಕಪ್ಪು ಕಾಯಿಯಲ್ಲಿತ್ತು. ಕಪ್ಪು ಕಾಯಿಯ ಗಾಢ ಬಣ್ಣ ಎದ್ದು ಕಾಣುತ್ತಿದ್ದ ಕಾರಣದಿಂದಾಗಿ ಅವರು ಯಾವಾಗಲೂ ಅದೇ ಕಾಯಿಯನ್ನು ಇಟ್ಟುಕೊಳ್ಳುತ್ತಿದ್ದರು. ಅಪ್ಪಿತಪ್ಪಿ ಬಿಳಿ ಕಾಯಿಯನ್ನು ಇಟ್ಟುಕೊಂಡರೋ ಅವರ ದೃಷ್ಟಿದೋಷದ ಕಾರಣ ಗೊಂದಲ ಪಟ್ಟುಕೊಂಡು ಪಂದ್ಯ ಸೋಲುತ್ತಿದ್ದರು. ರಮೇಶ ಮಾಸ್ತರ್ರ ಈ ಗೊಂದಲವನ್ನು ಮಹೇಶನ ಬಳಿಗೆ ಯಾವಾಗ ಹೇಳಿದೆನೋ ಆ ದಿನದಿಂದ ಮಹೇಶ ಮತ್ತೆ ಗಡ್ಕರ್ ಮಾಸ್ತರ್ರ ಜೊತೆ ಚೆಸ್ ಆಡಲು ತೊಡಗಿದ್ದ ಎನ್ನುವುದು ವಿಶೇಷವಾಗಿತ್ತು.
           ಆರ್. ವೈ. ಗಡ್ಕರ್ ಮಾಸ್ತರ್ ಚೆಸ್ ಆಡುವಾಗ ಸಾಕಷ್ಟು ತಮಾಷೆಯನ್ನೂ ಮಾಡುತ್ತಿದ್ದರು. ಚೆಸ್ ಆಟದ ಕುದುರೆಗಳನ್ನು ನಮ್ಮೂರಿನ ಕಡೆಗೆ ಮುಖ ಮಾಡಿ ನಿಲ್ಲಿಸಿ `ನೋಡೋ ವಿನಯಾ.. ನನ್ ಕುದುರೆ ನಿಮ್ಮೂರ್ ಕಡೆ ಮುಖ ಮಾಡೈತಿ. ಗ್ಯಾರಂಟಿ ನಿನ್ ಸೋಲ್ಸಿ ನಿಮ್ಮೂರಿಗೆ ಹೊತ್ಕಂಡ್ ಹೊಕ್ಕೈತಿ..' ಎನ್ನುತ್ತಿದ್ದರು. ಇಂತಹ ಮಾಸ್ತರ್ ಜೊತೆ ಚೆಸ್ ಆಡಿದ ಕಾರಣದಿಂದಲೇ ನಾನು ಕೊನೆಗೆ ನನ್ನ ಕಾಲೇಜು ಬದುಕಿನಲ್ಲಿ ಚೆಸ್ ಟೀಂ ಕ್ಯಾಪ್ಟನ್ ಆಗಿದ್ದೆ. ಅಷ್ಟೇ ಅಲ್ಲದೇ ಕೊನೆಗೊಂದು ದಿನ ಯುನಿವರ್ಸಿಟಿ ಬ್ಲೂ ಆಗಿಯೂ ಹೊರಹೊಮ್ಮಿದ್ದೆ. ಇಂತಹದ್ದಕ್ಕೆ ಕಾರಣವಾದ ಗಡ್ಕರ್ ಮಾಸ್ತರ್ರಿಗೆ ಸಲಾಂ.
              ನಾನು 7ನೇ ಕ್ಲಾಸ್ ಪಾಸಾಗಿ ಬರುವ ವೇಳೆಗೆ ಟಿಸಿ ತರಬೇಕಿತ್ತಲ್ಲ ಆಗ ಶಾಲಾಭಿವೃದ್ಧಿ ನಿಧಿಗಾಗಿ 100 ರು. ಪಡೆದುಕೊಂಡಿದ್ದು ಇನ್ನೂ ನೆನಪಿದೆ. ತೋಂಡಿ ಪರೀಕ್ಷೆಯಲ್ಲಿ ಅಪರೂಪಕ್ಕೆಂಬಂತೆ ಎಲ್ಲರಿಗಿಂತ ಜಾಸ್ತಿ ಮಾರ್ಕ್ಸ್ ಪಡೆದುಕೊಂಡಾಗ ಬುರ್ಡೆಗೆ ಒಂದೇಟು ಕೊಟ್ಟು `ಯಾವಾಗ್ಲೂ ಹಿಂಗೆ ಓದಾಕ್ ಏನಾಕೈತ್ಲೇ ನಿಂಗೆ..' ಎಂದು ಬೈದಿದ್ದೂ ನೆನಪಿನಲ್ಲಿದೆ. ಇಂತಹ ಗಡ್ಕರ್ ಮಾಸ್ತರ್ರನ್ನು ನಾನು ಹೆಚ್ಚೂ ಕಡಿಮೆ ಮರೆತೇ ಬಿಟ್ಟಿದ್ದೆ. ತೀರಾ ಇತ್ತೀಚೆಗೆ ಹೊನ್ನಾವರದ ಬಿಇಒ ಕಚೇರಿಯಲ್ಲಿ ಯಾವುದೋ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಅವರು ನಿವೃತ್ತಿ ಹೊಂದಿದರು ಎನ್ನುವ ಸುದ್ದಿಯನ್ನು ಕೇಳಿದಾಗ ಮಾತ್ರ ಮನಸ್ಸು ಕಲ್ಲವಿಲಗೊಂಡಿತ್ತು. ಅಷ್ಟೇ ಅಲ್ಲದೇ ನನ್ನ ಪ್ರಾಥಮಿಕ ಶಾಲಾ ದಿನಗಳು, ಗಡ್ಕರ್ ಮಾಸ್ತರ್ ಜೊತೆಗಿನ ಒಡನಾಟ ನೆನಪಾಗಿತ್ತು. ಇಂತಹ ಗುರುಗಳನ್ನು ನಾನು ಹೇಗೆ ಮರೆಯಲಿ?

(ಮುಂದುವರಿಯುತ್ತದೆ)

No comments:

Post a Comment