Wednesday, March 25, 2015

ಅಘನಾಶಿನಿ ಕಣಿವೆಯಲ್ಲಿ-15


             ಕಾನನದ ಮಡಿಲಿನ ತುಂಬಾ ಓಡಾಡಿ ಮನ ಹಿಗ್ಗಾಗಿಸಿಕೊಂಡ ಆ ಸೈನ್ಯ ಮತ್ತೊಮ್ಮೆ ಅಘನಾಶಿನಿ ತೀರದತ್ತ ಹೊರಟರು. `ಅಯ್ಯ.. ಇವರ್ಯಾಕೆ ನಿಮಿಷಕ್ಕೊನ್ನಮ್ನಿ ಆಡ್ತಾವ್ರೆ..' ಅಂದುಕೊಂಡ ದ್ಯಾವ. ಮತ್ತೆ ತೀರವನ್ನು ತಲುಪಿದ ನಂತರ ದ್ಯಾವ ಪ್ರತಿಯೊಬ್ಬರಿಗೂ ತೆಪ್ಪವನ್ನು ಮಾಡುವುದು ಹೇಗೆ ಎನ್ನುವುದನ್ನು ವಿವರಿಸಿದ. ಬಿದಿರನ್ನು ಅಳತೆಯ ಪ್ರಕಾರ ಕಡಿದು, ಜೋಡಿಸಿ, ಬೈನೆ ಹಗ್ಗದಿಂದ ಕಟ್ಟಿ ಫಟಾ ಫಟ್ ತೆಪ್ಪ ತಯಾರಿಸಿದ್ ದ್ಯಾವ. ದ್ಯಾವನ ಕೈಚಳಕವನ್ನು ಪ್ರತಿಯೊಬ್ಬರೂ ವಿಸ್ಮಯದಿಂದ ಕಣ್ತುಂಬಿಕೊಂಡರು.
               `ದ್ಯಾವಾ.. ಮರಕಡೀಲಿಕ್ಕೆ ಅಂತ ದಡೆ ಮಾಡ್ತಾರಂತಲ್ಲ.. ಅದನ್ನು ತೋರ್ಸು.. ಹೆಂಗಿರ್ತದೆ ಅಂತ ನೋಡಬೇಕು..' ಎಂದ ವಿಕ್ರಂ ದ್ಯಾವನ ಬಳಿ.
             `ಹ್ವಾಯ್.. ನಿಮ್ದು ಯಾವ್ ಊರು ಹೇಳಿ .. ' ಎಂದ ದ್ಯಾವ.
            `ಯಲ್ಲಾಪುರ ಮಾರಾಯಾ.. ಯಾಕ್ ಕೇಳ್ತಾ ಇದ್ದೀಯೋ..' ಎಂದ ವಿಕ್ರಂ.
             `ಅಲ್ಲಾ ಯಲ್ಲಾಪುರದವರು ಅಂತೀರಾ ನೀವ್ ದಡೆ ನೋಡಿಲ್ಲಾ ಅಂದ್ರೆ ನಗು ಬರ್ತೈತಿ. ನೀವ್ ಮಜಾ ಇದ್ದೀರಿ ಬಿಡಿ..' ಎಂದ ದ್ಯಾವ. `ಇಲ್ಲಾ ಮಾರಾಯಾ.. ಚಿಕ್ಕಂದಿನಿಂದ ಪೇಟೆಯ ಕಡೆಯಲ್ಲಿ ಬೆಳೆದೆ ನೋಡು.. ಅದಕ್ಕೆ ದಡೆಯ ಬಗ್ಗೆ ಗೊತ್ತಿಲ್ಲ. ಮೊನ್ನೆ ಯಾರೋ ಹೇಳ್ತಾ ಇದ್ರು. ಅದಕ್ಕೆ ನೋಡುವ ಆಸೆಯಾಗ್ತಾ ಇದೆ.. ತೋರ್ಸೋ ಮಾರಾಯಾ..' ಎಂದ ವಿಕ್ರಂ
          ನಂತರ ಗಾಭರಿ ಪಟ್ಟುಕೊಂಡ ದ್ಯಾವ `ಅಲ್ಲಾ..  ಹೊಳೆಯಾಗೆ ಮೀನ್ ಹಿಡಯೋದ್ ತೋರ್ಸಿ ಅಂದ್ರೆ ತೂರುಸ್ತೀನಿ. ಜೇನು ಕೊಯ್ಯೋದು ತೋರ್ಸು ಅಂದ್ರೂ ಸೈ. ನಿಮಗೆಂತಕ್ಕೆ ಹುಚ್ಚು? ಮರ ಕೊಯ್ಯೋ ದಡೆ ನೋಡ್ತೀನಿ ಅಂತೀರಲ್ರೋ.. ಯಾಕ್ರೋ..ದಡೆ ತೋರ್ಸೋದು ಅಂದ್ರೆ ಸುಲಭದಾಗೆ ಐತಿ ಅಂದ್ಕೊಂಡ್ರಾ? ಸುಲಭ ಅಲ್ಲ ನೋಡಿ ಅದು.. ಭಯಂಕರ ಕಷ್ಟ ಉಂಟು.. ನೀವ್ ಹೇಳಿದ್ ಆಗೋದಿಲ್ಲೇಳಿ' ಎಂದು ಕೇಳಿದ್ದ ಆತ.
           `ದ್ಯಾವಾ.. ಪ್ಲೀಸ್ ಕಣೋ.. ತೋರ್ಸು.. ನಾನೂ ನೋಡಿಲ್ಲ..' ಎಂದು ಹೇಳಿದಳು ವಿಜೇತಾ.
           `ನಿಮ್ ಗೆ ಗೊತ್ತಾಗೂದಿಲ್ಲ ನೋಡಿ.. ದಡೆ ನೋಡಾಕ್ ಹೋಗೋದು ಅಂದ್ರೆ ಕಡ್ ಜೇನ್ ಹಲ್ಲೆಗೆ ಕೈ ತಡವಿಕೊಂಡ ಹಂಗೆ. ಭಾರಿ ಸಾಹಸ ಮಾಡಬೇಕು.. ನೀವೋ ವಟಾ ವಟಾ ಅಂತ ಮಾತಾಡ್ತಾ ಇರ್ತೀರಿ.. ಸುಮ್ಮನಿದ್ದರೆ ಏನಾದರೂ ಮಾಡಬೌದಿತ್ತು. ಇನ್ನು ಅಲ್ಲಿ ಯಾರ್ಯಾರು ಮರ ಕಡೀತಾ ಇರ್ತಾರೋ.. ಕೇರಳದ ಮಲಬಾರಿಗಳು, ಸಾಬ್ರು, ನಮ್ಮೂರ್ನವ್ವೇ ಒಂದಷ್ಟ್ ಮರಗಳ್ಳರು.. ಹಿಂಗೆ ಬಹಳಷ್ಟ್ ಮಂದಿ ಇರ್ತಾರೆ ನೋಡಿ. ನೆತ್ತಿ ಸುಡೋ ಬಿಸಿಲ್ನಾಗೂ ಟೈಟ್ ಆಗಿ ಮರ ಕಡಿತಾ ಇರ್ತಾರೆ. ಹೆಂಗೆಂಗೋ ಇರ್ತಾರೆ ಮಾರಾಯ್ರಾ.. ಅದನ್ನ ಹೇಳೋದ್ ಕಷ್ಟ. ನಾವ್ ನೋಡಾಕ್ ಹೋಗೋದು, ನಮ್ ಮ್ಯಾಗೆ ಗಲಾಟೆಗೆ ಬರೋದು.. ಅದು ಗಲಾಟೆಗೆ ನಿಲ್ಲದೇ ಮತ್ತಿನ್ನೇನೋ ಆಗೋದು.. ಇದೆಲ್ಲಾ ಬ್ಯಾಡ್ರಾ.. ಅವ್ರು ಕೊಲ್ಲೋದಕ್ಕೂ ಹೇಸಾದಿಲ್ಲ ನೋಡಿ.. ನಿಮ್ಮನ್ನ ಕರೆದುಕೊಂಡ್ ಹೋಗಿದ್ದು ನಾನು ಅಂತ ಗೊತ್ತಾದ್ರೆ ಸಾಕು.. ನನ್ನ ಹೆಣಾ ಉರುಳ್ತಾವೆ.. ಗೊತ್ತೈತಾ.. ಸುಮ್ಕಿರಿ..' ಎಂದು ಹೇಳಿದ ದ್ಯಾವ. ದ್ಯಾವನ ಮಾತಿನಿಂದ ಆ ಊರಿನ ಸುತ್ತಮುತ್ತಲ ನಡೆಯುತ್ತಿದ್ದ ಕರಾಳ ದಂಧೆಗಳ ಒಂದು ಪುಟ ತೆರೆದುಕೊಂಡಂತೆ ಅನ್ನಿಸುತ್ತಿತ್ತು. ಕೆಲವರ ಮನದಲ್ಲಿ ಭೀತಿಯ ಸೆಳಕು ಮೂಡಿತು.
             `ಹೆ. ಹೆ.. ಹೋಗೋ ದ್ಯಾವಾ.. ನಾವೆಂತಾ ಸುಮ್ಮನಿದ್ದು ಬಿಡ್ತೀವಾ.. ನಮ್ಮ ಮೇಲೆ ಅವರೇನಾದ್ರೂ ಬಂದ್ರು ಅಂತಾದ್ರೆ ನಾವೂ ತಿರುಗಿ ಬಿದ್ದರಾಯ್ತು.. ಹೊಡೆದಾಟವಾದರೂ ಸೈ.. ನಾವ್ ಇಷ್ಟೆಲ್ಲ ಜನ ಇಲ್ವಾ ದಾಂಢಿಗರು..' ಎಂದ ಪ್ರದೀಪ ತಮಾಷೆಯಾಗಿ.
             ಅದಕ್ಕೆ ಒಂದು ಸಾರಿ ನಕ್ಕ ದ್ಯಾವ `ನಿಮ್ಗೆ ತಮಾಷ್ಗಿ.. ಎಂತಾ ಗೊತ್ತೈತ್ರಾ ನಿಮ್ಗೆ.. ನಾಟಾ ಕೊಯ್ಯುವವರ ಸುದ್ದಿ..? ಬ್ಯಾರಿಗಳು ಅವ್ರು. ಅವರ ಉಸಾಬರಿಗೆ ಹೋಗೋದು ಒಂದೇ.. ನಮ್ ಶಿಖಾರಿ ನಾವ್ ಮಾಡ್ಕೊಳೋದೂ ಒಂದೆ ನೋಡಿ.. ಈಗೊಂದ್ ಇಪ್ಪತ್ ವರ್ಷದ ಹಿಂದೆ ಸಿರ್ಸಿ ಹತ್ರಕ್ಕೆ ಹೆಗಡೆಕಟ್ಟೆ ಐತಲ್ರಾ.. ಅದರ ಬುಡುಕೆ ಒಬ್ಬ ರೇಂಜರ್ನೇ ಜೀಪ್ ಹತ್ತಿಸಿ ಸಾಯಿಸಿದ್ದರು. ಅಂತ ಪಾರೆಸ್ಟ್ ಅಧಿಕಾರಿನೇ ಕೊಂದು ದಕ್ಕಿಸಿಕೊಂಡವರೆ.. ನಮ್ಮನ್ನ ಸುಮ್ಕೆ ಬಿಡ್ತಾರಾ..? ನಿಮಗೆ ಮಾಡಾಕ್ ಹ್ವಾರ್ಯ ಇಲ್ಲ ಅಂದ್ರೆ ಹೇಳಿ ಕಬ್ಬಿಗ್ ಮಣ್ ಹಾಕೂದ್ ಐತಿ.. ಎಲ್ಲಾ ಸೇರಿ ಮಾಡ್ವಾ.. ಸೇರೆಗಾರ್ಕೆ ನಾ ಮಾಡ್ತೆ.. ನಿಮ್ಗೆ ಸಂಬಳಾ ನೂ ಕೋಡ್ತೆ..' ಎಂದು ಗಂಭೀರವಾಗಿ ಉತ್ತರಿಸಿದ್ದ ದ್ಯಾವ.
              `ಹೋಗ್ಲಿ ಬಿಡೋ ದ್ಯಾವ.. ಅಷ್ಟೆಲ್ಲಾ ತೊಂದ್ರೆ ಉಂಟು ಅಂತಾದ್ರೆ ಈಗ ಬ್ಯಾಡಾ.. ಮತ್ಯಾವಾಗ್ಲಾದ್ರೂ ತೋರಿಸಬೌದಂತೆ.. ಈಗ್ ಎಲ್ಲಾ ಮನೆಗೆ ಹೋಗೋಣ ನಡೀರಿ..' ಎಂದ ವಿಕ್ರಮ. ಎಲ್ಲರೂ ಹೊರಡಲು ಅನುವಾದರು. `ಈಗಲ್ಲಾ.. ನೀವ್ ಯಾವಾಗ್ ತೋರ್ಸಾಕೆ ಬನ್ನಿ ಅಂದ್ರೂ ನಾ ಬರೋದಿಲ್ರೋ.. ನಂಗೆಂತಕ್ಕೆ ಬೇಕ್ರಾ ಬೆಂಕಿ ಜೊತೆ ಆಟ..' ಎಂದು ಕಡ್ಡಿ ಮುರಿದಂತೆ ಹೇಳಿದ ದ್ಯಾವ. ಎಲ್ಲರೂ  ಮೌನವಾಗಿ ಮನೆಯ ಕಡೆ ಹೆಜ್ಜೆ ಹಾಕಿದರು.

***

                 ಈ ಊರಿನ ಸುತ್ತ ಅನೇಕ ಚಿತ್ರ ವಿಚಿತ್ರ ಹೆಸರಿನ ಊರುಗಳಿವೆ. ಮುತ್ತಮೂರ್ಡು, ಅಡಕಳ್ಳಿ, ಕೋಡಶಿಂಗೆ, ಸಂಕದಮನೆ, ಹೊಸಮನೆ, ಬೇಣದಗದ್ದೆ, ಹಿತ್ತಲಕೈ ಹೀಗೆ ವಿಶಿಷ್ಟ, ವಿಚಿತ್ರ ಹೆಸರಿನ ಊರುಗಳು. ಊರಿನ ತುಂಬಾ ಕಾಡು. ಊರು ಊರುಗಳ ನಡುವೆಯೂ ಕಾಡು. ದೊಡ್ಡದೊಂದು ಗುಡ್ಡ. ಗುಡ್ಡದ ತಪ್ಪಲಲ್ಲಿ ಮನೆಗಳು. ಯಾವುದೇ ಊರಿನಲ್ಲೂ 20ಕ್ಕಿಂತ ಹೆಚ್ಚಿನ ಮನೆಗಳಿಲ್ಲ. ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗಬೇಕೆಂದರೂ ಕನಿಷ್ಟ 2 ಕಿ.ಮಿ ನಡೆದಾಡಲೇ ಬೇಕು. ಒಂದು ಪಕ್ಕದಲ್ಲಿ ಅಘನಾಶಿನಿ ನದಿ. ಇನ್ನುಳಿದಂತೆ ಎಲ್ಲ ದಿಕ್ಕುಗಳಲ್ಲಿಯೂ ದಟ್ಟ ಕಾಡಿನಿಂದ ಕೂಡಿದ ಗುಡ್ಡ, ಬೆಟ್ಟ. ನಡು ನಡುವೆ ಅಡಿಕೆಯ ತೋಟಗಳು. ತುಣುಕು ತುಣುಕು ಗದ್ದೆಗಳ ಸಾಲುಗಳು. ಈ ಭಾಗದ ಕಾಡಂತೂ ಬೀಟೆ, ತೇಗ, ಹುನಾಲು, ಜಂಬೆ, ಮತ್ತಿಗಳಂತಹ ಬೆಲೆಬಾಳುವ ಮರಗಳ ತೊಟ್ಟಿಲು. ನಮ್ಮೂರಲ್ಲಿರೋದು ಆರೇ ಮನೆಗಳು ನೋಡಿ. ಊರಿನಲ್ಲಿ ಬಹುತೇಕರು ಕೃಷಿಕರು. ಹೊಸ ತಲೆಮಾರಿನ ಜನ ಊರಿನಿಂದ ಹೊರಗೆ ಉದ್ಯೋಗಕ್ಕಾಗಿ ಹೋಗುತ್ತಿದ್ದಾರೆ  ಎಂದು ತನ್ನೂರಿನ ಬಗ್ಗೆ ವಿವರಣೆ ನೀಡಿದ ವಿನಾಯಕ.
                 `ಮತ್ತೇನಾದ್ರೂ ವಿಶೇಷ ಇದೆಯಾ ವಿನಾಯಕ್..' ಅಂದ ಪ್ರದೀಪ.
                 `ಇದೆ. ಶೇಡಿಮಣ್ಣು ಅಂತೊಂದು ಅಪರೂಪದ ಮಣ್ಣು ನಮ್ಮೂರಿನಲ್ಲಿ ಸಿಗುತ್ತೆ. ಶೇಡಿ ಮಣ್ಣಿನ ಗುಡ್ಡವೇ ಇಲ್ಲಿದೆ. ಅದೇ ಕಾರಣಕ್ಕೆ ನಮ್ಮೂರನ್ನು ಶೇಡಿ ದಂಟಕಲ್ ಎಂದೂ ಕರೆಯಲಾಗುತ್ತದೆ. ಇನ್ನೂ ವಿಶೇಷತೆಗಳಿವೆ. ನಮ್ಮೂರಲ್ಲಿ ಈಗ್ಗೆ 50-60 ವರ್ಷಗಳ ಹಿಂದೆ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿತ್ತು. ಇನ್ನೂ ಒಂದ್ ವಿಶೇಷತೆ ಇದೆ ನೋಡಿ. ನಮ್ಮೂರಿನಲ್ಲಿ ಅನಂತ ಭಟ್ಟನ ಅಪ್ಪೆ ಎನ್ನುವ ಮಿಡಿಮಾವು ಸಿಗುತ್ತದೆ. ಈ ಅಪ್ಪೆ ಮಿಡಿ ಜಗತ್ತಿನಲ್ಲಿಯೇ ಅತ್ಯುತ್ಕೃಷ್ಟ ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ. ಈ ಅಪ್ಪೆ ಮಿಡಿ ನಮ್ಮೂರಿನಲ್ಲಿ ಸಿಗುತ್ತದೆ. ತಳಿ ಉಳಿಸಿದ ಖ್ಯಾತಿ ನಮ್ಮೂರಿನದ್ದು.. ಇದೊಂಥರಾ ಅಪರೂಪದ ಊರು..' ಎಂದ ವಿನಾಯಕ.
                `ಓಹ್.. ಅನಂತ ಭಟ್ಟನ ಅಪ್ಪೆ ಮಿಡಿಯ ಬಗ್ಗೆ ಯಾವಾಗಲೋ ಓದಿದ್ದೆ. ಕಳವೆಯವರು ಇದರ ಬಗ್ಗೆ ಬರೆದ ಹಾಗೆ ನೆನಪು. ಆಮೇಲೆ ದಕ್ಷಿಣ ಕನ್ನಡದ ಕೋಟಕ್ಕೆ ಯಾವುದೋ ಸುದ್ದಿಗೆ ಹೋಗಿದ್ದೆ. ಅಲ್ಲಿ ಶಿವರಾಮ ಕಾರಂತರ ಅಣ್ಣ ಕೋ. ಲ. ಕಾರಂತರ ಮನೆಯಿದೆ. ಫಾರ್ಮೊಂದಿದೆ. ಅಲ್ಲಿ ಅನಂತ ಭಟ್ಟನ ಅಪ್ಪೆ ಮರಗಳನ್ನು ಕಂಡಿದ್ದೆ. ಆಗ ಯಾರೋ ಈ ಊರಿನ ಸುದ್ದಿ ಹೇಳಿದ್ದ ನೆನಪು.. ವಾವ್.. ಸಖತ್ತಾಗಿದೆ. ಏನೆಲ್ಲಾ ವಿಶೇಷತೆಗಳು ನೋಡಿ. ವಿನಾಯಕ್ ನಾಳೆನೇ ಈ ಎಲ್ಲ ವಿಶೇಷತೆಗಳನ್ನು ನಮಗೆ ತೋರಿಸಿ..' ಎಂದಳು ವಿಜೇತಾ.
                 `ಓಹ್.. ಖಂಡಿತ.. ನಿಮಗೆಲ್ಲ ಇದನ್ನು ತೋರಿಸುತ್ತೇನೆ. ನಮ್ಮೂರಿಗೆ ಬಂದವರಿಗೆ ನಮ್ಮೂರಿನ ವಿಶೇಷತೆಗಳನ್ನು ತೋರಿಸದಿದ್ದರೆ ಹೇಗೆ ಹೇಳಿ..' ಎಂದ ವಿನಾಯಕ.
                 ಎಲ್ಲರೂ ಹೂಂ ಎಂದರು. ಎಲ್ಲ ಪುಂಗವರಿಗೆ ಊರಿನ ಬಗ್ಗೆ ಇದ್ದ ಕುತೂಹಲ ದುಪ್ಪಟ್ಟಾಯಿತು. ಜೊತೆಗೆ ಅಪ್ಪಟ ಮಲೆನಾಡಿನೊಳಗೆ ಹುದುಗಿರುವ ಊರೊಂದರ ವೈಶಿಷ್ಟ್ಯತೆಗಳ ಬಗ್ಗೆ ಕುತೂಹಲ ಮೂಡಿತು.
                ಮಲೆನಾಡೇ ಹಾಗೆ. ನಿಗೂಢ, ಅಬೇಧ್ಯ. ಇದೊಂಥರಾ ಸೊಕ್ಕಿದ ಕಾಡಾನೆಯಂತೆ. ಯಾರ ಅಂಕೆಗೂ ಸಿಲುಕದು. ಜಂಬಂಧ ಹೆಣ್ಣಿನಂತೆ ಯಾರನ್ನೂ ಗಮನಿಸುವುದಿಲ್ಲ. ಯಾರಿಗೂ ಸಲಾಂ ಹೊಡೆಯುವುದಿಲ್ಲ. ಪಟ್ಟಾಗಿ ಹೊರಟು ಎಷ್ಟು ಒಳಹೋಗಲು ಪ್ರಯತ್ನ ಪಟ್ಟರೂ ಒಳಹೋಗಲು ಸಾಧ್ಯವೇ ಇಲ್ಲ ಅನ್ನುವಷ್ಟು ಜಿಗ್ಗು. ಮೈ ಕೈ, ಬಟ್ಟೆ ಕಿತ್ತು ಬಿಡುವಷ್ಟು ಮುಳ್ಳು, ತರಚು. ಬಿಡಿಸಲಾಗದ ಸಿಕ್ಕು ಸಿಕ್ಕು ಗಂಟೆ. ಏನು ಇಲ್ಲದಾಗ ಸುಮ್ಮನೆ ತೆರೆದುಕೊಳ್ಳುವ ಜಾಗ. ವೈಚಿತ್ರ್ಯ-ವೈಶಿಷ್ಟ್ಯ. ಇಂಥ ಮಲೆನಾಡಿಗೆ ಬಂದು ಕಾಲಿಟ್ಟಿದೆ, ಒಳಹೊಕ್ಕಿದೆ. ನಿಧಾನವಾಗಿ ಸಿಕ್ಕು ಸಿಕ್ಕಾಗುತ್ತಿದೆ. ಜಡಕಾಗುತ್ತಿದೆ. ಸದ್ದಿಲ್ಲದೇ ಈ ಗುಂಪು ಒಳಕ್ಕೆ ಹೋಗಿ ಸಿಲುಕಿಕೊಳ್ಳುತ್ತಿದೆ. ಮುಂದೇನು? ವಾಪಾಸು ಬರುತ್ತಾರೆಯೇ? ಎಲ್ಲವೂ ಆಲೋಚನೆ ಮಾಡಿದಷ್ಟೂ ನಿಗೂಢ, ವಿಸ್ಮಯ.

(ಮುಂದುವರಿಯುತ್ತದೆ)

No comments:

Post a Comment