Friday, September 12, 2014

ಸಾಗುವ ಬಾ ಜೊತೆಗಾರ

ಸಾಗುವ ಬಾ ಜೊತೆಗಾರ
ಮೆರೆವ ಮರೀಚಿಕೆಯ
ಮರುಳು ಗಾಡಿನ ನಾಡೊಳಗೆ |

ತಲೆಯ ಮೇಲೆ ಸುಡುವ
ರಣ ಬಿಸಿಲು, ಬಸವಳಿಕೆ
ಬಾಯಾರಿಕೆ, ಜೊತೆಗಿರುವ
ಕಷ್ಟ-ನಕ್ಷತ್ರಿಕರು |

ಸಾಗುವ ಬಾ ಜೊತೆಗಾರ.
ಅಳುಕಿಲ್ಲ, ಬಳುಕಿಲ್ಲ
ಕೊನೆಗಾಣದ ರವೆ ರವೆಯ
ಮರಳ ಕಣ ಕಣವ
ಪಾದದಿಂದೊದ್ದು ಸಾಗುವಾ,
ಗಮ್ಯ ತಲುಪುವಾ |

ಹಲ್ಕಿರಿಯುವ ನೆರಳು
ಸಾವ ಸೆಳವು,
ಹಾಗೆಯೇ ಇರಲಿ ಬಿಡು |
ಮೆರೆವ ಮರುಳು
ಮರಳು ದಿಬ್ಬವ
ಮರೆತು ಬಿಡು |

ನಾನು ನೀನಷ್ಟೇ
ಜೊತೆಗಾರರು ಕೊನೆತನಕ.
ಅಳುಕ ಬೇಡ ನೀ,
ಸ್ವರ್ಗದ ಮೆಟ್ಟಿಲೇರುವವರೆಗೆ
ಧರ್ಮರಾಜನ ಜೊತೆಗೊಂದು
ಶ್ವಾನವಿತ್ತಲ್ಲವೇ ಹಾಗೆ
ನನ್ನೊಡನೆ ನೀನು |

ಬಿಡಿಸದ ಬಂಧ, ನಂಟು
ಗಟ್ಟೀ ಛಲ, ದಿಟ್ಟತನ
ಸಾಗುವ ಬಾ ಜೊತೆಗಾರ |

**

(ಈ ಕವಿತೆಯನ್ನು ಬರೆದಿರುವುದು 04-02-2007ರಂದು ದಂಟಕಲ್ಲಿನಲ್ಲಿ)

No comments:

Post a Comment