Sunday, August 24, 2014

50000

 
      ಖಂಡಿತ ಇದು ಹಂಚಿಕೊಳ್ಳಲೇಬೇಕಾದಂತಹ ಖುಷಿಯ ಸಂಗತಿ. ಹೌದು ಅಘನಾಶಿನಿ ಬ್ಲಾಗ್ ವೀಕ್ಷಕರ ಸಂಖ್ಯೆ 50000 ತಲುಪಿದೆ. ಯಾರ್ಯಾರು ನನ್ನ ಬ್ಲಾಗ್ ವೀಕ್ಷಣೆ ಮಾಡಿ, ಮೆಚ್ಚುಗೆ ಸೂಚಿಸಿ ಪ್ರತಿಕ್ರಿಯೆ ನೀಡಿದ್ದೀರೋ ಅವರೆಲ್ಲರಿಗೂ ಧನ್ಯವಾದಗಳನ್ನು ಹೇಳಲೇ ಬೇಕಾದದ್ದು ನನ್ನ ಕರ್ತವ್ಯ.
           ನಾನು ಈ ಬ್ಲಾಗನ್ನು ಬರೆಯಲು ಆರಂಭಿಸಿದ್ದು 29-08-2009ರಂದು. ಅದಕ್ಕೂ ಮುನ್ನ ಬರೆಯುತ್ತಿದ್ದೆನಾದರೂ ಬ್ಲಾಗ್ ಲೋಕ ನನಗೆ ಅಪರಿಚಿತವಾಗಿತ್ತು. ಬ್ಲಾಗ್ ಲೋಕವೇನು ಕಂಪ್ಯೂಟರ್ ಎಂಬುದೇ ನನಗೆ ಅಪರಿಚತವಾಗಿತ್ತು ಎಂದರೆ ತಪ್ಪಾಗಲಿಕ್ಕಿಲ್ಲ. ಆಗ ತಾನೆ ಕಂಪ್ಯೂಟರ್ ಕಲಿತಿದ್ದ ಹೊಸತು, ದೋಸ್ತರ ಸಲಹೆಯ ಮೇರೆಗೆ ಆರ್ಕುಟ್ ಅಕೌಂಟ್ ಓಪನ್ ಮಾಡಿದ್ದೆ. ನಾನು ಬರೆಯುವುದರ ಬಗ್ಗೆ ತಿಳಿದಿದ್ದ ದೋಸ್ತರು ಬ್ಲಾಗ್ ಮಾಡು ಎಂದು ಸಲಹೆ ಕೊಟ್ಟರು. ಒಂದು ಬ್ಲಾಗ್ ಮಾಡಿ ಸುಮ್ಮನೆ ಇಟ್ಟಿದ್ದೆ. ನೆನಪಾದಾಗ ಒಂದೆರಡು ಕವಿತೆಯೋ ಖಯಾಲಿಯ ಬರಹಗಳನ್ನೋ ಬರೆಯುತ್ತಿದ್ದೆ. 2011ರ ವರೆಗೂ ನಾನು ಬರೆದಿದ್ದು 10-15 ಬರಹಗಳಷ್ಟೆ. ಆದರೆ 2012ರಿಂದ ನಾನು ಆಕ್ಟಿವ್ ಆಗಿ ಬ್ಲಾಗ್ ಲೋಕದಲ್ಲಿ ಬರವಣಿಗೆಯನ್ನು ಆರಂಭಿಸಿದೆ. ಅಲ್ಲಿಂದೀಚೆಗೆ ಅಜಮಾಸು 315 ಬರಹಗಳು ನನ್ನ ಬ್ಲಾಗಿನ ಗೋಡೆಯಲ್ಲಿ ಮೂಡಿವೆ.
           ಅಘನಾಶಿನಿ ಎಂಬುದು ನನ್ನ ಬ್ಲಾಗಿಗೆ ಇಟ್ಟ ಹೆಸರು. ಇದಕ್ಕೆ ಹಲವು ಕಾರಣಗಳಿದೆ. ನಾನು ಹುಟ್ಟಿ ಬೆಳೆದ ದಂಟಕಲ್ ಎಂಬ ಊರಿನ ಅಂಚಿನಲ್ಲಿ ಹರಿಯುವ ನದಿ ಅಘನಾಶಿನಿ. ನನ್ನ ಬರವಣಿಗೆಯ ಓಂಕಾರ ಆರಂಭವಾದದ್ದು ಇದೇ ಅಘನಾಶಿನಿಯ ದಡದ ಮೇಲೆ. ನನ್ನ ನೋವು, ಖುಷಿಯ ಸನ್ನಿವೇಶಗಳಿಗೆಲ್ಲ ಅಘನಾಶಿನಿಯೇ ಮೆಟ್ಟಿಲಾದದ್ದು. ಗೆದ್ದಾಗಲೂ ಸೋತಾಗಲೂ ಅಘನಾಶಿನಿ ನದಿಯ ದಡದ ಬಂಡೆಗಳ ಮೇಲೆ ನಿಂತಿದ್ದಿದೆ ನಾನು. ಇಂತಹ ಕಾರಣಕ್ಕಾಗಿಯೇ ನಾನು ನನ್ನ ಬ್ಲಾಗಿಗೆ ಅಘನಾಶಿನಿ ಎಂದೂ ಟ್ಯಾಗ್ ಲೈನ್ ನನ್ನು ನದಿ ಕಣಿವೆ ಹುಡುಗನ ಭಾವ ಭಿತ್ತಿ ಎಂದೂ ಬರೆದಿದ್ದು.
           ಅಘನಾಶಿನಿ ಎಂಬ ಹೆಸರಿನ ಮೂರು ಬ್ಲಾಗುಗಳಿವೆ. ಗಂಗಾಧರ ಹೆಗಡೆ ಅವರ ಅಘನಾಶಿನಿ, ಸಮನ್ವಯಾ ಅವರ ಅಘನಾಶಿನಿ ಹಾಗೂ ನನ್ನ ಅಘನಾಶಿನಿ ಬ್ಲಾಗುಗಳು. ಈ ಮೂರರ ಪೈಕಿ ಗಂಗಾಧರ ಹೆಗಡೆ ಅವರು ನಾನು ಬ್ಲಾಗ್ ಬರೆಯಲು ಆರಂಭಿಸಿದ ಸಮಯದಲ್ಲಿಯೇ ಅವರೂ ಬ್ಲಾಗನ್ನು ಬರೆಯಲು ಶುರು ಮಾಡಿದರು. ಸಮನ್ವಯಾ ಅವರು ಒಂದೆರಡು ವರ್ಷದ ಹಿಂದೆ ಬ್ಲಾಗ್ ಆರಂಭಿಸಿದರು. ಆದರೆ ನನ್ನ ಬ್ಲಾಗು ಉಳಿದ ಇಬ್ಬರು ಬರೆದ ಬ್ಲಾಗಿಗಿಂತ ಹೆಚ್ಚು ಜನರನ್ನು ತಲುಪಿದೆ ಎನ್ನುವ ಹೆಮ್ಮೆ ನನ್ನದು. ಹಾಗಂತ ಅವರದ್ದು ಚನ್ನಾಗಿಲ್ಲ ಎಂದೂ ನಾನು ಹೇಳುತ್ತಿಲ್ಲ. ಆದರೆ ಅವರಿಬ್ಬರೂ ಆಕ್ಟಿವ್ ಆಗಲೇ ಇಲ್ಲ. ನಾನು ಆಕ್ಟಿವ್ ಆಗಿ ಬರೆಯುತ್ತಲೇ ಇದ್ದೇನೆ ಅಷ್ಟೆ.
          ಇಂದಿಗೂ ನನಗೆ ನೆನಪಿದೆ. ನಾನು ಮೊಟ್ಟಮೊದಲು ಬರೆದಿದ್ದೊಂದು ಕವಿತೆ. ನಾನು ಓದಿದ್ದು ಕಾನಲೆಯ ಹೂಸ್ಕೂಲಿನಲ್ಲಿ. ನಾನು 8 ನೇ ಕ್ಲಾಸ್ ಇದ್ದಾಗ ಅಣ್ಣ ಗಿರೀಶನದ್ದೊಂದು ಚಿಕ್ಕ ಬರಹ ತರಂಗದಲ್ಲಿ ಪ್ರಕಟವಾಗಿತ್ತು. ಅದನ್ನು ನೋಡಿ ಖುಷಿಯಿಂದ ನಾನು ಒಂದು ಹನಿಗವಿತೆ ಬರೆದು ಕಳಿಸಿದ್ದೆ. ಅದೂ ಚಿಣ್ಣರ ಅಂಗಳವೋ, ಬಾಲವನವೋ ಏನೋ ಒಂದಕ್ಕೆ. ಮಕ್ಕಳ ಕವಿತೆ. ತರಂಗದವರು ಅದನ್ನು ಪ್ರಕಟವನ್ನೂ ಮಾಡಿಬಿಟ್ಟರು. ಅದಕ್ಕೆ ನನಗೆ 30 ರು. ಸಂಭಾವನೆಯೂ ಬಂದಿತು. ಆ ನಂತರ ಗುರಣ್ಣನಿಗೆ ಒಂದಷ್ಟು ದಿನ ಬರೆಯುವ ಹುಚ್ಚು ಹತ್ತಿತ್ತು. ಆತ ಡಿಗ್ರಿ ಓದುತ್ತಿದ್ದ. ಸಾಕಷ್ಟು ಹುಡುಗಿಯರನ್ನೂ ಪ್ರೀತಿಸುತ್ತಿದ್ದ. ಆ ಕಾರಣಕ್ಕಾಗಿ ಹಲವು ಕವಿತೆಗಳನ್ನೂ ಒಗಾಯಿಸುತ್ತಿದ್ದ. ಹೀಗಿದ್ದಾಗಲೇ ಕಾನ್ಲೆಯ ಗುಡ್ಡದ ನೆತ್ತಿಯಲ್ಲಿ ಕುಳಿತು ಒಂದು ನಮ್ಮ ಶಾಲೆಯ ಚಂದಿರ ಅಂತ ಒಂದು ಕವಿತೆ ಬರೆದಿದ್ದೆ. ಇಂದು ರೀತಿ ಅಲ್ಲಿ ನೋಡು ಚಂದ್ರ ಬಿಂಬ, ಇಲ್ಲಿ ನೋಡು ಲೈಟ್ ಕಂಬ ರೀತಿಯ ಕವಿತೆ. ಬರೆದವನೇ ಗುರಣ್ಣನಿಗೆ ತೋರಿಸಿದ್ದೆ. ಹಿಗ್ಗಾಮುಗ್ಗಾ ಬೈದಿದ್ದ. ನಾನು ಬೇಜಾರು ಮಾಡ್ಕೊಂಡಿದ್ದೆ.
           ಅದಾದ ನಂತರ `ಇದು ನನ್ನದು.' ಎನ್ನುವ ಕವಿತೆ ಬರೆದಿದ್ದು ಫಸ್ಟ್ ಪಿಯುಸಿಯಲ್ಲಿ ನಮ್ಮೂರಿನ ಹುಳ್ಕಿನ ಜಡ್ಡಿ ಗದ್ದೆಯ ಗೇರು ಮರದ ಮೇಲೆ ಕುಳಿತು. ಆ ಮೇಲೆ ನಾನು ಫಸ್ಟ್ ಪಿಯುಸಿಯಲ್ಲಿ ಸೂರನಕೇರಿಯ ಗಣೇಶಜ್ಜನ ಮನೆಯಲ್ಲಿ ಉಳಿದುಕೊಂಡು ನಾಣಿಕಟ್ಟಾ ಕಾಲೇಜಿಗೆ ಹೋಗುತ್ತಿದ್ದೆ. ನಾನು ಹಾಗೂ ಗಿರೀಶಣ್ಣ ಇಬ್ಬರೂ ಪತ್ರದ ಮೂಲಕ ಪತ್ರಿಕೆಯೊಂದನ್ನು ಮಾಡಿದ್ದೆವು. ಆತ ಸಹೃದಯಿ ಎನ್ನುವ ತಲೆಬರಹದ ಅಡಿಯಲ್ಲಿ 2.50 ರು. ಅಂತರ್ದೇಸಿ ಪತ್ರದಲ್ಲಿ ಥೇಟು ಒಂದು ಪತ್ರಿಕೆ ಯಾವ ರೀತಿ ವಿವಿಧ ಸುದ್ದಿ, ಲೇಖನ, ಕಥೆ, ಕವನಗಳನ್ನು ಹೊಂದಿರುತ್ತದೆಯೋ ಅದೇ ರೀತಿ ಬರೆದು ಕಳಿಸುತ್ತಿದ್ದ. ನಾನು ಚಿಂತಾಮಣಿ ಎನ್ನುವ ಹೆಸರಿನಲ್ಲಿ ಬರೆದು ಕಳಿಸುತ್ತಿದ್ದೆ. ಸರಿಸುಮಾರು 2 ವರ್ಷ ಈ ರೀತಿ ನಾವು ಬರೆದುಕೊಳ್ಳುತ್ತಿದ್ದೆವು. ಆ ದಿನಗಳಲ್ಲಿಯೇ ಇರಬೇಕು ನನ್ನ ಬರವಣಿಗೆ ಇನ್ನಷ್ಟು ಜೋರಾದದ್ದು. `ಅಘನಾಶಿನಿ ಕಣಿವೆಯಲ್ಲಿ..' ಅಂತ ಒಂದು ಕಾದಂಬರಿಯನ್ನು ಆ ದಿನಗಳಲ್ಲಿಯೇ ನಾನು ಬರೆಯಲು ಆರಂಭಿಸಿದ್ದು. ಆದರೆ ಆ ಕಾದಂಬರಿ ಇನ್ನೂ ಪೂರ್ಣಗೊಂಡಿಲ್ಲ..!
            ಪ್ರೈಮರಿ ಶಾಲೆಯ ದಿನಗಳಿಂದ ಓದುವುದು ನನ್ನ ಗೀಳು. ಅದರಲ್ಲೂ ತೇಜಸ್ವಿಯೆಂದರೆ ನನ್ನ ಪಂಚಪ್ರಾಣ. ತೇಜಸ್ವಿ ನನಗೆ ಮೊಟ್ಟಮೊದಲು ಓದಲು ಸಿಕ್ಕಿದ್ದು 4ನೇ ಕ್ಲಾಸಿನಲ್ಲಿ. ವಾರಕ್ಕೊಂದು ಪುಸ್ತಕ ತೆಗೆದುಕೊಂಡು ಓದುವ ಗೃಂಥಾಲಯ ಚಟುವಟಿಕೆಯ ಅಂಗವಾಗಿ ತೇಜಸ್ವಿಯವರ ಪರಿಸರದ ಕಥೆ ಸಿಕ್ಕಿತ್ತು. ಅದಾದ ಮೇಲೆ ಹಕ್ಕಿಗಳ ಬಗ್ಗೆ ಬರೆದ ಪುಸ್ತಕ ಹೀಗೆ ಹತ್ತು ಹಲವು. ಹೈಸ್ಕೂಲಿನಲ್ಲಿಯೂ ಅಷ್ಟೇ. ಸಿಕ್ಕ ಹಲವಾರು ಪುಸ್ತಕಗಳನ್ನು ಓದುತ್ತಿದ್ದೆ. ಕಾನ್ಲೆ ಪ್ರೈಮರಿ ಶಾಲೆ ಮಾಸ್ತರ್ ಚಿದಂಬರ ಅವರ ಬಳಿ ಹರಪೆ ಬಿದ್ದು ಶಿವರಾಮ ಕಾರಂತರ ಬಾಲ ವಿಜ್ಞಾನ ಸರಣಿಗಳನ್ನು ಓದಿದ್ದೆ. ನಂತರ ಪಿಯುಸಿಯಲ್ಲಿ ವಿ. ಎಸ್. ಹೆಗಡೆಯವರು ಕನ್ನಡ ಲೆಕ್ಚರ್. ಆ ದಿನಗಳಲ್ಲಿ ಹಲವಾರು ಪುಸ್ತಕಗಳನ್ನು ಒತ್ತಾಯವಾಗಿ ಓದಿಸುತ್ತಿದ್ದರು. ಕರ್ವಾಲೋವನ್ನು ಆ ದಿನಗಳಲ್ಲಿ 50ಕ್ಕೂ ಅಧಿಕ ಸಾರಿ ಓದಿದ್ದೆ. ಯಯಾತಿ, ಹಿಟ್ಟಿನಹುಂಜ, ತುಘ್ಲಕ್ ಹೀಗೆ ಹಲವಾರು ಪುಸ್ತಕಗಳು ನನ್ನ ಒಡನಾಡಿಯಾಗಿದ್ದವು. ಡಿಗ್ರಿಗೆ ಬಂದ ಮೇಲಂತೂ ಎರಡು ದಿನಕ್ಕೊಂದು ಕಾದಂಬರಿಯೋ, ಕವನ ಸಂಕಲನವೋ ನನಗೆ ಬೇಕಿತ್ತು. ಮಿತ್ರ ರಾಘವ, ಪೂರ್ಣಿಮಾ, ಚೈತ್ರಿಕಾ ಆದಿ ಬೇದೂರು, ನಾಗರಾಜ ಹೆಗಡೆ, ಕೃಷ್ಣಮೂರ್ತಿ ದೀಕ್ಷಿತ ಇವರ ಗೃಂಥಾಲಯ ಕಾರ್ಡುಗಳನ್ನು ಪಡೆದು ನಾನು ಪುಸ್ತಕಗಳನ್ನು ಓದುತ್ತಿದ್ದೆ. ಇವೇ ನನ್ನ ಬರವಣಿಗೆಯನ್ನು ರೂಪಿಸಿದಂತವುಗಳು ಎಂದರೆ ತಪ್ಪಾಗಲಿಕ್ಕಿಲ್ಲ.
           ಪಿಯುಸಿ ಮುಗಿದಿತ್ತು. ಮನೆಯಲ್ಲಿ ಮುಂದಕ್ಕೆ ಓದೋದು ಬೇಡವೇ ಬೇಡ ಎಂದು ಪಟ್ಟಾಗಿ ಕೂತಿದ್ದರು ಅಪ್ಪ. ಅಮ್ಮನಿಗೆ ಮಗ ಓದಲಿ ಎನ್ನುವ ಆಸೆಯಿತ್ತು. ಡಿಗ್ರಿ ಮಾಡೋದೇ ಸೈ. ಯಾವ ಡಿಗ್ರಿ ಮಾಡೋದು? ಮಾಮೂಲಿ ಹಿಸ್ಟರಿ, ಎಕನಾಮಿಕ್ಸು, ಪೊಲಿಟಿಕಲ್ ಸೈನ್ಸು ಮಾಡಿದರೆ ಏನೂ ಆಗೋದಿಲ್ಲ ಎಂದರು ಲಾಯರ್ ಗಣಪಣ್ಣ. ಸೋ ಇನ್ನೇನಪ್ಪಾ ಅಂತಿದ್ದಾಗ ಈಗ ವಿಜಯವಾಣಿಯಲ್ಲಿ ಕೆಲಸ ಮಾಡುತ್ತಿರುವ ಚಿಕ್ಕಮ್ಮ ಭಾರತಿ ಹೆಗಡೆ `ತಮಾ ನೀನು ಬರಿತ್ಯಲಾ.. ಯಾಕೆ ಜರ್ನಲಿಸಂ ಮಾಡ್ಲಾಗ?' ಎಂದದ್ದೇ ತಡ ಎಲ್ಲೆಲ್ಲಿ ಜರ್ನಲಿಸಂ ಕೋರ್ಸಿಗಳಿವೆ ಎನ್ನುವುದನ್ನು ಹುಡುಕಲಾರಂಭಿಸಿದ್ದೆ. ಶಿರಸಿ ಎಂ. ಎಂ. ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಜರ್ನಲಿಸಂ ಇತ್ತು. ಆಪ್ಷನಲ್ ಇಂಗ್ಲೀಷು ಪೊಲಿಟಿಕಲ್ ಸೈನ್ಸು ಜರ್ನಲಿಸಂಗ್ಗೆ ಜೈ ಎಂದು ಸೇರಿಕೊಂಡೆ. ಡಿಗ್ರಿ ಮೊದಲ ವರ್ಷದಲ್ಲಿ ನನ್ನ ಸೀನಿಯರ್ ಆಗಿದ್ದ ಸಂಜಯ ಭಟ್ಟ ಬೆಣ್ಣೆ, ಗಣೇಶ ಮುರೇಗಾರ್, ಅಶ್ವತ್ಥ ಹೆಗಡೆ, ಸುಭಾಷ ಧೂಪದಹೊಂಡ, ಚೈತ್ರಾ ಹೆಗಡೆ, ರೂಪಾ ಇವರೆಲ್ಲ `ತಮಾ ನೀನು ಡಿಗ್ರಿಯಲ್ಲಿ ಎಷ್ಟು ಬರೆಯುತ್ತಿಯೋ, ಅದೆಷ್ಟು ಬೈಲೈನ್ ಬರುತ್ತದೆಯೋ ಅದು ನಿನಗೆ ಮುಂದಿನ ನಿನ್ನ ವೃತ್ತಿ ಬದುಕಿಗೆ ಪೂರಕವಾಗುತ್ತದೆ.. ಮೂರು ವರ್ಷದಲ್ಲಿ ಇಂತಿಷ್ಟು ಬೈಲೈನ್ ಬರಬೇಕು ಎನ್ನುವ ಗುರಿ ಇಟ್ಟುಕೊ...' ಎಂದರು. ನಾನು ಮೂರು ವರ್ಷದಲ್ಲಿ `50' ಬೈಲೈನ್ ಬರಬೇಕೆಂಬ ಗುರಿ ಇಟ್ಟುಕೊಂಡೆ. ಬರೆದೆ ಬರೆದೆ. ಕನ್ನಡದ ಬಹುತೇಕ ಎಲ್ಲ ದಿನಪತ್ರಿಕೆ, ವಾರ ಪತ್ರಿಕೆ, ಮಂತ್ಲಿ, ಹದಿನೈದು ದಿನದ ಪತ್ರಿಗೆಳಿಗೆಲ್ಲ ಬರೆದೆ. ಹಲವು ಪತ್ರಿಕಗೆಳು ಪ್ರಕಟಿಸಿದವು. ಸಂಭಾವನೆಯನ್ನೂ ಕೊಟ್ಟವು. ಪರಿಣಾಮವಾಗಿ ಮೂರು ವರ್ಷದಲ್ಲಿ 100ಕ್ಕೂ ಅಧಿಕ ಬೈಲೈನ್ ಬಂದವು. ಖಂಡಿತವಾಗಿಯೂ ಈ ಬೈಲೈನ್ ಗಳು ನನ್ನ ವೃತ್ತಿ ಬದುಕಿಗೆ ಸಹಕಾರಿಯಾದವು.
           ಡಿಗ್ರಿ ಟೈಮಿನಲ್ಲಿ ಕಂಪ್ಯೂಟರ್ ಕಲಿತಿದ್ದೆನಾದರೂ ತೀರಾ ಬ್ಲಾಗ್ ಬರೆಯುವ ಹಂತ ಮುಟ್ಟಿರಲಿಲ್ಲ. ಡಿಗ್ರಿ ಮುಗಿಸಿ ಎಲ್ಲ ಪತ್ರಿಕಾ ಕಚೇರಿಗಳಿಗೂ ರೆಸೂಮ್ ಕಳಿಸಿ, ಹೊಟ್ಟೆ ಪಾಡಿಗೆ ಸಿದ್ದಾಪುರ ಕೆಡಿಸಿಸಿ ಬ್ಯಾಂಕಿನಲ್ಲಿ ಡಾಟಾ ಎಂಟ್ರಿ ಕೆಲಸ ಮಾಡುವ ಸಂದರ್ಭದಲ್ಲೇ ಆರ್ಕುಟ್ಟು, ಫೇಸ್ಬುಕ್ಕು, ಬ್ಲಾಗು ಶುರು ಮಾಡಿಕೊಂಡಿದ್ದು. ನಂತರ ಸಿದ್ದಾಪುರ ಎ.ಪಿಎಂ.ಸಿ.ಯಲ್ಲಿ ಡೈಲಿ ವೇಜಸ್ ಮೇಲೆ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿಯೇ ಅಘನಾಶಿನಿ ಹುಟ್ಟಿಕೊಂಡಿದ್ದು. ಅಲ್ಲಿಂದ ಮುಂದೆ ನಿಮಗೆ ಗೊತ್ತೇ ಇದೆ. ಮುಂದೆ ಬೆಂಗಳೂರಿನಲ್ಲಿ ಸಂಯುಕ್ತ ಕರ್ನಾಟಕ ಕರೆದು ಕೆಲಸ ಕೊಟ್ಟಿತು. ಅದಾದ ಮೇಲೆ ನಾನು ಉದಯವಾಣಿಗೆ ಹೋದೆ.
            2011 ನನ್ನ ಬದುಕಿನಲ್ಲಿ ದೊಡ್ಡ ತಿರುವು ಕೊಟ್ಟ ವರ್ಷ. ಬೆಂಗಳೂರಿನಲ್ಲಿ ಉದಯವಾಣಿಯಲ್ಲಿ ಸ್ಪೋರ್ಟ್ಸ್ ರಿಪೋರ್ಟರ್ ಆಗಿ ಲೈಫು ಲೈಟಾಗಿ ಓಡುತ್ತಿದೆ ಎನ್ನುವಾಗಲೇ ಬದುಕು ತಿರುವು ಕೊಟ್ಟಿತ್ತು. ಪರಿಣಾಮವಾಗಿ ಮನೆಗೆ ವಾಪಾಸು ಬಂದೆ. ಒಂದಾರು ತಿಂಗಳು ಸುಮ್ಮನೆ ಉಳಿದೆ. ಆಮೇಲೆ ಕನ್ನಡಪ್ರಭದಲ್ಲಿ ನನ್ನ ಕೆಲಸ ಶುರುವಾಯಿತು. ಈ ನನ್ನ ಹಾದಿಯಲ್ಲಿ ನನಗೆ ಮಾರ್ಗದರ್ಶನ ಮಾಡಿದವರು ಹಲವರು. ಖಂಡಿತವಾಗಿಯೂ ಅವರ ಬಗ್ಗೆ ನಾನು ಹೇಳಲೇಬೇಕು.
            ಪ್ರೈಮರಿಯ ತಾರಾ ಮೇಡಮ್ಮು, ಸೊಕಾ ಸುಮ್ಮನೆ ಕಾರಣವಿಲ್ಲದೇ ಹಂಗಿಸುತ್ತಿದ್ದ ಸಿ. ಎಂ. ಹೆಗಡೆರು, ಹೈಸ್ಕೂಲಿನಲ್ಲಿ ಇಂಗ್ಲೀಷು ಹೇಳಿಕೊಟ್ಟ ಬಿಆರೆಲ್ಲು, ಹಿಸ್ಟರಿಯನ್ನು ರೋಚಕವಾಗಿ ಕಲಿಸಿದ ಲಕ್ಷಪ್ಪ ಮಾಸ್ತರ್ರು, ಹೊಡೆತದ ಮೂಲಕ ಅಲ್ಪ ಸ್ವಲ್ಪ ವಿದ್ಯೆಯನ್ನು ತಲೆಗೆ ಹತ್ತುವಂತೆ ಮಾಡಿದ ಪಿಬಿಎನ್ನು, ಮುಷ್ಟಿಕಟ್ಟಿಕೊಂಡು ಬೆನ್ನಿಗೆ ಗುದ್ನ ನೀಡುತ್ತಿದ್ದ  ಕಟ್ಬಿಟಿನಕೆರೆ ಎಸ್ಸೆಚ್ಚು, ಕನ್ನಡವನ್ನು ಚನ್ನಾಗಿ ಕಲಿಸಿದರೂ `ನ' ದಿಂದ ಕೊನೆಗೊಳ್ಳುವ ಶಬ್ದವನ್ನು ನನನನ ಎಂದು ಉಚ್ಛರಿಸುತ್ತಿದ್ದ ಗ್ರೇಸ್ ಪ್ರೇಂ ಕುಮಾರಿ, ಪಿಯುಸಿಯ ರಾ. ಜಿ. ಭಟ್ಟರು, ದೇವೇಂದ್ರ ಮೂರ್ತಿಗಳು, ಪಿಯುಸಿ ಕೊನೆಯ ವರ್ಷದಲ್ಲಿ ನಾನು ಹಾಗೂ ಅವರ ನಡುವೆ ಜಗಳವಾಗಿದ್ದರೂ ನನ್ನ ಏಳಿಗೆಗೆ ಕಾರಣವಾದ ವಿ. ಎಸ್. ಹೆಗಡೆಯವರು, ಉಮಾಕಾಂತ ಶಾಸ್ತ್ರಿಗಳು ಕಲಿಸಿದ್ದು ಕಡಿಮಯೇನಲ್ಲ. ಡಿಗ್ರಿಯಲ್ಲಂತೂ ಹುಡುಗರಿಗೆ ಮಾತ್ರ ಸಿಕ್ಕಾಫಟ್ಟೆ ಬಯ್ಯುತ್ತಿದ್ದ ವಿಜಯನಳಿನಿ ರಮೇಶ್ ಮೇಡಮ್ಮು, ತಮಾಷೆಯಾಗಿ ಕಲಿಸುತ್ತಿದ್ದ ರಾಜು ಹೆಗಡೆಯವರು, ಪ್ರತಿದಿನ ಒಬ್ಬೊಬ್ಬರನ್ನಾಗಿ ಎದ್ದು ನಿಲ್ಲಿಸಿ ಇವತ್ತಿನ ಪೇಪರ್ ಓದಿಕೊಂಡು ಬಂದಿದ್ದೀರಾ? ಏನು ಬಂದಿದೆ ಹೇಳಿ ಎಂದು ಕೇಳಿ, ಕ್ಲಾಸಿನಲ್ಲಿ ಶಿಕ್ಷೆ ನೀಡುತ್ತಿದ್ದ ಸಚ್ಚಿದಾನಂದ ಹೆಗಡೆಯವರು, ಗೀತಾ ವಸಂತ ಮೇಡಮ್ಮು, ರಾಘವೇಂದ್ರ ಜಾಜಿಗುಡ್ಡೆ, ನಂತರದ ದಿನಗಳಲ್ಲಿ ವೃತ್ತಿಯಲ್ಲಿ ತೊಡಗಿಕೊಮಡಾಗ ತಿದ್ದಿದ ಹರಿಪ್ರಕಾಶ ಕೋಣೆಮನೆ, ಮುಂಜಾನೆ ಸತ್ಯ, ರವಿ ದೇವಳಿ, ಶಿವಪ್ರಕಾಶ್, ಉದಯವಾಣಿಯಲ್ಲಿದ್ದಾಗ ಅಕ್ಷರಗಳನ್ನು ತಿದ್ದಿದ ರಾಘವೇಂದ್ರ ಗಣಪತಿ, ರವಿ ಹೆಗಡೆ, ಈಗ ಕನ್ನಡಪ್ರಭದಲ್ಲಿ ನನ್ನನ್ನು ತಿದ್ದುತ್ತಿರುವ ವಿಶ್ವೇಶ್ವರ ಭಟ್ಟರು, ವಿಶ್ವಾಮಿತ್ರ ಹೆಗಡೆಯವರು ಎಲ್ಲರಿಂದಲೂ ನಾನು ಕಲಿತದ್ದು ಹಲವು. ಬಹುಶಃ ಅವರು ನನ್ನನ್ನು ತಿದ್ದದೇ ಇದ್ದಿದ್ದರೆ ನಾನು ಖಂಡಿತ ಹೀಗಿರುತ್ತಿರಲಿಲ್ಲ. ನಾನು ಹಾದಿ ತಪ್ಪಿದಾಗಲೆಲ್ಲ ಹೀಗಲ್ಲ.. ಹೀಗೆ ಎಂದು ಹೇಳಿದವರೇ ಎಲ್ಲರೂ. ಅವರೆಲ್ಲರಿಗೂ ನಾನು ಶರಣು.
           ಇದೀಗ ಬ್ಲಾಗಿನ ಬಗ್ಗೆ ಒಂಚೂರು ಹೇಳಲೇ ಬೇಕು. ಖಂಡಿತವಾಗಿಯೂ 50 ಸಾವಿರ ಜನರು ನನ್ನ ಬ್ಲಾಗ್ ವೀಕ್ಷಣೆ ಮಾಡುತ್ತಾರೆ ಎನ್ನುವುದು ಬ್ಲಾಗ್ ಆರಂಭಿಸಿದಾಗ ನನಗೆ ಅನ್ನಿಸಿರಲಿಲ್ಲ. ಸುಮ್ಮನೆ ನಾನು ಬರೆಯುತ್ತೇನೆ. ಆದರೆ ಅದನ್ನು ಎಷ್ಟು ಜನರು ನೋಡುತ್ತಾರೆ ಎಂದುಕೊಂಡಿದ್ದೆ. 2011ರಿಂದೀಚೆಗೆ 3 ವರ್ಷದಲ್ಲಿ ಅಜಮಾಸು 38ರಿಂದ 40 ಸಾವಿರ ಜನರು ಬ್ಲಾಗನ್ನು ನೋಡಿದ್ದಾರೆ. ಭಾರತವೊಂದೇ ಅಲ್ಲ ಅಮೆರಿಕಾ, ಜರ್ಮನಿ, ರಷ್ಯಾ, ಬಹರೈನ್, ಯುಎಇ, ಸಿಂಗಾಪುರ, ಬೊಲಿವಿಯಾ, ಉಕ್ರೇನ್, ಪೊಲಾಂಡ್, ಆಸ್ಟ್ರೇಲಿಯಾ ಹೀಗೆ ಹತ್ತು ಹಲವು ದೇಶಗಳವರು ಬ್ಲಾಗ್ ವೀಕ್ಷಣೆ ಮಾಡಿದ್ದಾರೆ. ನೂರಾರು ಜನರು ಮೆಚ್ಚುಗೆಯ ಅಭಿಪ್ರಾಯಗಳನ್ನೂ ತಿಳಿಸಿದ್ದಾರೆ. ಒಂದಿಷ್ಟು ಬರಹಗಳು ಭಾರಿ ಚರ್ಚೆಯನ್ನೂ ಕಂಡಿವೆ. ಅವುಗಳ ನಡುವೆ ಕಂಡೂ ಕಾಣದಂತಾಗಿ ಹೋಗಿದ್ದು ಇನ್ನೂ ಹಲವಾರು ಲೇಖನಗಳು, ಬರಹಗಳು.
          ಮೊಟ್ಟ ಮೊದಲು ಬರೆದ ಅಘನಾಶಿನಿ ಕಣೀವೆಯಲ್ಲಿ ಕಾದಂಬರಿಯನ್ನೇ ಇನ್ನೂ ಮುಗಿಸಿಲ್ಲ. ಅಂತದ್ದರಲ್ಲಿ ಬೆಂಗಾಲಿ ಸುಂದರಿ ಎನ್ನುವ ಕಾದಂಬರಿಯನ್ನು ಡೈರೆಕ್ಟಾಗಿ ಬ್ಲಾಗಲ್ಲಿ ಬರೆಯಲು ಆರಂಭಿಸಿದ್ದೇನೆ. ಅದೀಗ ಅರ್ಧಕ್ಕೂ ಅಧಿಕ ಮುಗಿದಿದೆ. ಒಳ್ಳೆಯ ಅಭಿಪ್ರಾಯಗಳು ಕೇಳಿ ಬಂದಿವೆ. ಖುಷಿಯ ಸಂಗತಿಯೆಂದರೆ ಎರಡು ಪ್ರಕಾಶನದವರು ನನ್ನ ಬರವಣಿಗೆಯ ಪುಸ್ತಕಗಳನ್ನು ಪ್ರಕಟಿಸುತ್ತೇನೆ ಎಂದು ಮುಂದೆ ಬಂದಿದ್ದಾರೆ. ಆದರೆ ನನಗೆ ಭಯವಾಗುತ್ತಿದೆ. ಪುಸ್ತಕಗಳನ್ನು ಪ್ರಕಟಿಸುವಷ್ಟು ದೊಡ್ಡವನಾಗಿದ್ದೀನಾ ನಾನು? ಇನ್ನೂ ಕೆಲವು ವರ್ಷದ ನಂತರ ಪುಸ್ತಕ ಪ್ರಟಿಸೋಣ ಎಂದುಕೊಂಡು ಪ್ರಕಾಶನದವರಿಗೆ ಉತ್ತರ ನೀಡಿಲ್ಲ. ಅವರು ಕೇಳುತ್ತಲೇ ಇದ್ದಾರೆ. ನಾನು ಒಪ್ಪಿಗೆ ನೀಡಲಾ, ಬೇಡವಾ ಎನ್ನುವ ಗೊಂದಲದಲ್ಲಿಯೇ ಇದ್ದೇನೆ.
          ನನ್ನ ಬರವಣಿಗೆಯಲ್ಲಿ ಮನೆಯಲ್ಲಿ ಬೆಂಬಲವಾಗಿ ನಿಂತವರು ಹಲವರು. ಮೊಟ್ಟಮೊದಲಿಗೆ ನೆನೆಯಬೇಕಾದದ್ದು ಅಮ್ಮನನ್ನು. ಅಮ್ಮನ ಒತ್ತಾಸೆಯೇ ನನಗೆ ಬರೆಯಲು ಪ್ರೇರೇಪಣೆ. ಮಾವ ಪ. ಗ. ಭಟ್ಟರ ಆಶೀರ್ವಾದವೂ ಇದೆ. ಅಪ್ಪ-ತಂಗಿಯರ ಪ್ರೀತಿ ಕೂಡ ಮರೆಯುವಂತಿಲ್ಲ. ಜೊತೆಯಲ್ಲಿ ಹಲವು ಸಾರಿ ನೇರಾ ನೇರ, ಮತ್ತೆ ಕೆಲವು ಸಾರಿ ವ್ಯಂಗ್ಯವಾಗಿ ಸಲಹೆಯನ್ನು ನೀಡಿ, ಪ್ರತಿಕ್ರಿಯೆ ಕೊಡುತ್ತಾರೆ. ಅವರನ್ನು ನೆನಪು ಮಾಡಿಕೊಳ್ಳದೇ ಹೇಗಿರಲಿ?
            ನನಗಂತೂ 50 ಸಾವಿರ ಜನರು ವೀಕ್ಷಣೆ ಮಾಡಿರುವುದು ಬಹಳ ಖುಷಿಯನ್ನು ತಂದಿದೆ. 5 ವರ್ಷದಲ್ಲಿ ಈ ಬೆಳವಣಿಗೆಗೆ ಕಾರಣವಾದ ಎಲ್ಲರಿಗೂ ನನ್ನ ಧನ್ಯವಾದಗಳು. ಮುಂದೆ ಕೂಡ ನಿಮ್ಮ ಪ್ರೀತಿ ಸದಾ ಹೀಗೆ ಇರಲಿ. ನಾನು ಕೆಟ್ಟದಾಗಿ ಬರೆದಿದ್ದರೆ ಮುಲಾಜಿಲ್ಲದೆ ತಿಳಿಸಿ. ಒಳ್ಳೆಯದಿದ್ದರೆ ಅಭಿಪ್ರಾಯ ತಿಳಿಸಿ. 1 ಲಕ್ಷ ಜನರು ವೀಕ್ಷಣೆ ಮಾಡಿದಾಗ ಮತ್ತೆ ನಾನು ಆ ಖುಷಿ ಹಂಚಿಕೊಳ್ಳಲು ಸಿಗುತ್ತೇನೆ. ನಿಮ್ಮ ಪ್ರೀತಿಯನ್ನು ಸದಾ ನಾನು ಬಯಸುತ್ತೇನೆ. ಮತ್ತೊಮ್ಮೆ ಧನ್ಯವಾದಗಳು.

No comments:

Post a Comment