Wednesday, August 13, 2014

ಬೆಂಗಾಲಿ ಸುಂದರಿ-21

(ಢಾಕಾ-ಅಶೂಲಿಯಾ ಹೆದ್ದಾರಿ ನಡುವೆ ಸಿಗುವ ನದಿಯಲ್ಲಿ ದೋಣಿಯ ಮೂಲಕ ಸಾಗುತ್ತಿರುವುದು)
         ಸಲೀಂ ಚಾಚಾನ ಮನೆಯಲ್ಲಿ ವಿನಯಚಂದ್ರ ಹಾಗೂ ಮಧುಮಿತಾ ಉಳಿದಕೊಂಡಿದ್ದು ನಾಲ್ಕೋ ಐದೋ ದಿನಗಳು ಅಷ್ಟೇ. ಸಲೀಂ ಚಾಚಾನ ಮನೆಯವರೆಲ್ಲ ಯಾವುದೋ ಜನ್ಮದ ನೆಂಟರೋ ಎನ್ನುವಷ್ಟು ಆಪ್ತರಾಗಿಬಿಟ್ಟಿದ್ದರು. ಅದ್ಯಾವ ಋಣಾನುಬಂಧವೋ ಏನೋ ಹಿಂದುಗಳೆಂದು ಗೊತ್ತಾದರೆ ಯಾವ ಕ್ಷಣದಲ್ಲಿ ದಾಳಿ ಮಾಡುತ್ತಾರೋ ಎನ್ನುವ ಭಯದ ನಡುವೆಯೂ ತಮ್ಮ ದೇಶದಲ್ಲಿ ಬದುಕಲು ಆಶ್ರಯ ಕೊಟ್ಟಿದ್ದರು. ತಮ್ಮದೇ ಮಕ್ಕಳೇನೋ ಎನ್ನುವಂತೆ ಸಲಹಿದ್ದರು. ಸುರಕ್ಷಿತ ಜಾಗಕ್ಕೆ ತಮ್ಮನ್ನು ಕಳಿಸಲೋಸುಗ ತಮ್ಮ ಪ್ರಾಣವನ್ನೇ ಒತ್ತಯಿಟ್ಟು ಕೆಲಸ ನಿರ್ವಹಿಸಿದ್ದರು. ಬಹುಶಃ ಸಲೀಂ ಚಾಚಾನ ಮನೆಯಲ್ಲಿ ಇಬ್ಬರು ಹಿಂದೂಗಳು ಆಶ್ರಯ ಪಡೆದಿದ್ದಾರೆ ಎಂದು ಹಿಂಸಾವಾದಿಗಳಿಗೆ ಗೊತ್ತಾಗಿದ್ದರೆ ಸಲೀಂ ಚಾಚಾನ ಕುಟುಂಬವೂ ಅಪಾಯಕ್ಕೆ ಈಡಾಗುತ್ತಿತ್ತು. ಆದರೆ ಅಂತಹ ಅಪಾಯವನ್ನು ಲೆಕ್ಕಿಸದೇ ತಮ್ಮ ಜೊತೆಗೆ ನಿಂತಿದ್ದ ಚಾಚಾನ ಕುಟುಂಬದ ಬಗ್ಗೆ ಇಬ್ಬರಲ್ಲೂ ಅಭಿಮಾನ ಮೂಡಿತು. ಅವರಿದ್ದ ಜಾಗದಿಂದ ಆಚೆಯ ಜಗತ್ತು ಉರಿದು ಬೀಳುತ್ತಿದ್ದರೂ ಕೂಡ ತಮ್ಮ ಕೂದಲೂ ಕೊಂಕದಂತೆ ಕಾಪಾಡಿದ್ದರು. ಪ್ರೀತಿಯನ್ನು ನೀಡಿದ್ದರು. ಮಧುಮಿತಾಳಂತೂ ತಂದೆ ತಾಯಿಗಳನ್ನು ಅರೆಕ್ಷಣದಲ್ಲಿ ಕಳೆದುಕೊಂಡು ಚಾಚಾನ ಮನೆಗೆ ಬಂದಿದ್ದಳು. ತಂದೆ-ತಾಯಿ-ಬಂಧು-ಬಳಗ ಕಳೆದುಹೋದ ಕಹಿ ನೆನಪು ಮಧುಮಿತಾಳನ್ನು ಕಾಡದಂತೆ ನೋಡಿಕೊಂಡಿದ್ದರು ಚಾಚಾನ ಕುಟುಂಬ. ಚಾಚಾನ ಕುಟುಂಬದ ಇಂತಹ ಕಾರ್ಯಕ್ಕೆ ಎಷ್ಟು ಋಣ ಸಂದಾಯ ಮಾಡಿದರೂ ಸಾಲದು ಎಂದುಕೊಂಡ ವಿನಯಚಂದ್ರ.
            ಅದೊಂದು ಸಂಜೆ ಸಲೀಂ ಚಾಚಾ ಭಾರತದ ಕಡೆಗೆ ತೆರಳುವ ಸಮಯ ಸನಿಹವಾಯ್ತು ಎಂದು ಘೋಷಿಸಿದರು. ಕೊನೆಯ ತಯಾರಿಗಳೆಲ್ಲ ಪೂರ್ಣಗೊಂಡಿದ್ದವು. ಚಾಚಾನ ಮನೆಯ ಸದಸ್ಯರುಗಳೆಲ್ಲ ತಮ್ಮ ಮನೆಯ ಜನರೇ ತಮ್ಮಿಂದ ದೂರವಾಗುತ್ತಿದ್ದಾರೋ ಎನ್ನುವಂತೆ ಕಣ್ಣಂಚಿನಲ್ಲಿ ನೀರು ತುಂಬಿಕೊಂಡು ಮಧುಮಿತಾ ಹಾಗೂ ವಿನಯಚಂದ್ರನನ್ನು ಕಳಿಸಿಕೊಡಲು ತಯಾರಾಗಿದ್ದರು. ಮಧುಮಿತಾಳ ಕಣ್ಣಿನಲ್ಲೂ ನೀರಿತ್ತು. ವಿನಯಚಂದ್ರ ಸುಮ್ಮನೆ ನೋಡುತ್ತಿದ್ದ. ಹೊರಗೆ ಸಂಪೂರ್ಣ ಕತ್ತಲಾಗಿತ್ತು. ಮಧುಮಿತಾ ಸಲೀಂ ಚಾಚಾನ ಮನೆಯ ಹಿರಿಯರಿಗೆಲ್ಲ ನಮಸ್ಕರಿಸಿ ಹೊರಡಲು ಅನುವಾದಳು. ವಿನಯಚಂದ್ರ ಎಲ್ಲರಿಗೂ ಕಣ್ಣಲ್ಲಿಯೇ ಕೃತಜ್ಞತೆಗಳನ್ನು ಹೇಳಿದ್ದ.
             ಹಿಂಸಾ ಪೀಡಿತ ಬಾಂಗ್ಲಾ ನಾಡಿನಲ್ಲಿ ಹಗಲು ಪ್ರಯಾಣಕ್ಕಿಂತ ರಾತ್ರಿ ಪ್ರಯಾಣ ಸುರಕ್ಷಿತ ಎಂದು ಆಲೋಚಿಸಿದ್ದ ಸಲೀಂ ಚಾಚಾ ಅದೇ ಕಾರಣಕ್ಕಾಗಿಯೇ ವಿನಯಚಂದ್ರ ಹಾಗೂ ಮಧುಮಿತಾಳನ್ನು ಹೊರಡಿಸಿದ್ದ. ರಾತ್ರಿಯಾಗುತ್ತಲೇ ಹೊರಟು ಬೆಳಕು ಮೂಡುವ ವರೆಗೂ ಪ್ರಯಾಣ ಮಾಡಬೇಕಿತ್ತು. ಬೆಳಿಗ್ಗೆ ಸುರಕ್ಷಿತ ಜಾಗವನ್ನು ಹಿಡಿದು ಉಳಿದುಕೊಳ್ಳಬೇಕಿತ್ತು. ಯಾರಿಗೂ ತಾವು ಹಿಂದುಗಳೆಂದು ಗೊತ್ತಾಗಬಾರದು ಎನ್ನುವ ಕಾರಣಕ್ಕಾಗಿ ವಿನಯಚಂದ್ರ ಹಾಗೂ ಮಧುಮಿತಾ ತಮ್ಮ ಚಹರೆಯನ್ನು ಬದಲಿಸಿಕೊಂಡಿದ್ದರು. ವಿನಯಚಂದ್ರ ತನ್ನನ್ನು ಅಹಮದ್ ಎಂದೂ ಮಧುಮಿತಾ ತನ್ನನ್ನು ರಜಿಯಾ ಎಂದೂ ಕರೆದುಕೊಂಡಿದ್ದರು. ಭಾರತದ ಗಡಿಯೊಳಗೆ ಹೋಗುವ ವರೆಗೂ ಈ ಹೆಸರಿನಲ್ಲಿಯೇ ತಮ್ಮನ್ನು ಎಲ್ಲರಿಗೂ ಪರಿಚಯ ಮಾಡಿಕೊಳ್ಳಬೇಕೆಂದು ಚಾಚಾ ಕಟ್ಟು ನಿಟ್ಟಾಗಿ ತಿಳಿಸಿದ್ದ. ಅಲ್ಲದೇ ಭಾರತದ ಗಡಿಯ ವರೆಗೆ ತಾನೂ ಬಂದು ಹೋಗುತ್ತೇನೆಂದು ಹೇಳಿದ್ದ.
                ವಿನಯಚಂದ್ರ ಸಲೀಂ ಚಾಚಾನ ಬಳಿ `ಚಾಚಾ.. ನಾವು ತೊಂದರೆಯಿಲ್ಲದೇ ತಲುಪುತ್ತೇವೆ. ನೀವು ಯಾಕೆ ತೊಂದರೆ ತೆಗೆದುಕೊಳ್ಳುತ್ತೀರಿ..' ಎಂದು ಹೇಳಿದರೂ ಕೇಳದೇ `ನಿಮ್ಮನ್ನು ಭಾರತದ ಗಡಿಯವರೆಗೆ ಸುರಕ್ಷಿತವಾಗಿ ತಲುಪಿಸುವ ಹೊಣೆ ನನ್ನದು. ನೀನು ಎಷ್ಟೇ ಬೇಡ ಎಂದರೂ ನಾನು ಬಂದೇ ಬರುತ್ತೇನೆ..ಸುಮ್ಮನೆ ಹೊರಡಿ' ಎಂದು ಪಟ್ಟಾಗಿ ಹೇಳಿದ್ದರು. ವಿನಯಚಂದ್ರ ಸುಮ್ಮನುಳಿದಿದ್ದ.
             ಕೆಲವರೇ ಹಾಗೆ ಹಚ್ಚಿಕೊಂಡರೆ ಮುಗಿಯಿತು. ಏನು ಮಾಡಿದರೂ ಬಿಡುವುದಿಲ್ಲ. ಹಾದಿ ತಪ್ಪುವ ಸಂದರ್ಭದಲ್ಲೆಲ್ಲ ಜೊತೆ ನಿಂತು ದಡ ಮುಟ್ಟಿಸುವ ಕೆಲಸವನ್ನು ಮಾಡುತ್ತಾರೆ. ಅಂತವರಲ್ಲೊಬ್ಬ ಸಲೀಂ ಚಾಚಾ. ಸರಿಯಾಗಿ ಕತ್ತಲಾದ ನಂತರ ಸಲೀಂ ಚಾಚಾ ವಿನಯಚಂದ್ರ ಹಾಗೂ ಮಧುಮಿತಾಳನ್ನು ಹೊರಡಿಸಿದ. ಹೊರ ಬಂದವನೇ ಆಚೆ ಈಚೆ ನೋಡಿ ಯಾರಿಗೂ ಅನುಮಾನ ಬಾರದಂತೆ ಕೆಲಸ ನಿರ್ವಹಿಸಿದ. ತನ್ನದೇ ಸೈಕಲ್ ರಿಕ್ಷಾದ ಮೂಲಕ ಹೊರಡಿಸಿದ ಸಲೀಂ ಚಾಚಾ. ತಮ್ಮ ತಮ್ಮ ವಸ್ತುಗಳನ್ನು ಚೀಲಕ್ಕೆ ತುಂಬಿಕೊಂಡಿದ್ದ ವಿನಯಚಂದ್ರ, ಮಧುಮಿತಾ ಸಲೀಂ ಚಾಚಾನ ಸೈಕಲ್ಲನ್ನೇರಿದರು. ಕತ್ತಲೆಯಲ್ಲಿಯೇ ಬೇಗ ಬೇಗನೆ ಸೈಕಲ್ ತುಳಿಯಲು ಆರಂಭಿಸಿದ. ಸಲೀಂ ಚಾಚಾನಲ್ಲಿ ಎಲ್ಲಿ ಅಡಗಿತ್ತೋ ದೈತ್ಯಶಕ್ತಿ. ದಿನದಿಂದ ದಿನಕ್ಕೆ ಯುವ ಹುಮ್ಮಸ್ಸು ಆತನಲ್ಲಿ ಮನೆ ಮಾಡುತ್ತಿದೆಯೇನೋ ಎನ್ನಿಸಿತ್ತು. ಇಳಿದನಿಯಲ್ಲಿ ಮಾತನಾಡುತ್ತ, ಬಹುಹೊತ್ತು ಮಾತಿಲ್ಲದೇ ಪಯಣ ಮುಂದಕ್ಕೆ ಸಾಗಿತು.
                 ಅಪಾಯದ ಪರಿಸ್ಥಿತಿಯಿರುವ ಕಾರಣ ಸಾಧ್ಯವಾದಷ್ಟೂ ಒಳ ರಸ್ತೆಯನ್ನು ಬಳಕೆ ಮಾಡಬೇಕಾಗಿತ್ತು. ಜೊತೆ ಜೊತೆಯಲ್ಲಿ ಸಾಕಷ್ಟು ಸುತ್ತುಬಳಸಿನ ಮಾರ್ಗದಲ್ಲಿಯೂ ಪ್ರಯಾಣ ಮಾಡಬೇಕಾಗಿ ಬಂದಿತು. ಯಾಕೋ ಮೊದಲ ಬಾರಿಗೆ ಸಲೀಂ ಚಾಚಾನಿಗೆ ಢಾಕಾದ ಬೀದಿಗಳು ಬಹು ವಿಸ್ತಾರವಾಗಿದೆಯೇನೋ ಎನ್ನಿಸಿತು. ಎಷ್ಟು ಸೈಕಲ್ ತುಳಿದರೂ ಢಾಕಾ ಮುಗಿಯುತ್ತಲೇ ಇಲ್ಲವಲ್ಲ ಎಂದೂ ಅನ್ನಿಸತೊಡಗಿತ್ತು. ಬೀದಿ ಬೀದಿಗಳಲ್ಲೆಲ್ಲ ಪೊಲೀಸ್ ಬ್ಯಾರಿಕೇಡ್ ಗಳು, ನಾಕಾಬಂದಿಗಳಿದ್ದವು. ಅಲ್ಲಲ್ಲಿ ಪೊಲೀಸರು ನಿಂತು ಪಹರೆ ಕಾಯುತ್ತಿದ್ದರು. ಅವರ ಕೈಯಲ್ಲಂತೂ ಕೊಲ್ಲುವ ಬಂದೂಕುಗಳು ಲೋಡಾಗಿ ಕಾಯುತ್ತಿದ್ದವು. ಹಿಂಸಾಚಾರಿ ಕಂಡರೆ ಸಾಕು ಬೇಟೆಯಾಡುವ ದಾಹವನ್ನು ಆ ಬಂದೂಕುಗಳು ಹೊಂದಿದ್ದಂತೆ ಕಾಣಿಸಿತು.
            ದಾರಿಯಲ್ಲಿ ಹಲವಾರು ಕಡೆಗಳಲ್ಲಿ ಪೊಲೀಸರು ಕಾಣಿಸಿದ್ದರೂ ಯಾರೊಬ್ಬರೂ ಇವರನ್ನು ತಡೆಯಲಿಲ್ಲ. ಢಾಕಾದಿಂದ ಇನ್ನೇನು ಹೊರಗೆ ಹೋಗಬೇಕು ಎನ್ನುವಂತಹ ಸಮಯದಲ್ಲಿ ಒಂದು ಕಡೆಯಲ್ಲಿ ಪೊಲೀಸ್ ತನಿಖಾ ಠಾಣೆಯಲ್ಲಿ ಸಲೀಂ ಚಾಚಾ ತುಳಿಯುತ್ತಿದ್ದ ಸೈಕಲ್ ರಿಕ್ಷಾವನ್ನು ತಡೆದು ನಿಲ್ಲಿಸಿಯೇ ಬಿಟ್ಟರು. ವಿನಯಚಂದ್ರ ಕೊಂಚ ಗಾಬರಿಗೊಂಡಿದ್ದ. ಮಧುಮಿತಾ ಕೂಡ ಗಾಬರಿಯಲ್ಲಿಯೇ ಇದ್ದಳು. ಆದರೆ ಸಲೀಂ ಚಾಚಾ ತಣ್ಣಗೆ ಕುಳಿತಿದ್ದ. ಹತ್ತಿರ ಬಂದ ಪೊಲೀಸನೊಬ್ಬ ಸೈಕಲ್ ರಿಕ್ಷಾವನ್ನು ಹಿಡಿದು `ಯಾರು ನೀವು..? ಎಲ್ಲಿಗೆ ಹೊರಟಿದ್ದೀರಿ..?' ಎಂದು ಗಡುಸಾಗಿ ಪ್ರಶ್ನಿಸಿದ. ಅದಕ್ಕೆ ಪ್ರತಿಯಾಗಿ ಸಲೀಂ ಚಾಚಾ ತಣ್ಣಗೆ ಉತ್ತರಿಸಿದ. ಆದರೆ ಪೊಲೀಸನಿಗೆ ಏನೋ ತೃಪ್ತಿಯಾದಂತೆ ಕಾಣಲಿಲ್ಲ. ಸೀದಾ ಸೈಕಲ್ಲಿನ ಹಿಂದಿನ ಸೀಟಿನತ್ತ ಬಂದು ಅದರಲ್ಲಿ ಕುಳಿತಿದ್ದ ವಿನಯಚಂದ್ರನ ಬಳಿ `ನಿನ್ನ ಹೆಸರೇನು..?' ಎಂದು ಗಡುಸಾಗಿಯೇ ಕೇಳಿದ್ದ.
           ಪೊಲೀಸಿನವನ ಗಡುಸು ಉತ್ತರಕ್ಕೆ ಒಮ್ಮೆ ಬೆದರಿದ ವಿನಯಚಂದ್ರನಿಗೆ ಏನು ಹೇಳಬೇಕೆಂದು ತೋಚಲೇ ಇಲ್ಲ. ಸಲೀಂ ಚಾಚಾ ಅದೇನೋ ತನ್ನ ಹೆಸರನ್ನು ಬದಲಾಯಿಸಿದ್ದ. ಆದರೆ ಆ ಹೆಸರು ನೆನಪಾಗಲೇ ಇಲ್ಲ. ಒಮ್ಮೆ ತಲೆ ಕೊಡವಿಕೊಂಡು ಆಲೋಚನೆ ಮಾಡಿದರೂ ಹೆಸರು ಮಾತ್ರ ನೆನಪಾಗಲಿಲ್ಲ. ಇದರಿಂದ ಮತ್ತಷ್ಟು ಭಯಗೊಂಡ ವಿನಯಚಂದ್ರ `ಬ್ಬೆ ಬ್ಬೆ ಬ್ಬೆ..' ಎಂದು ತೊದಲಿದ. ಒಮ್ಮೆ ಮಧುಮಿತಾಳನ್ನೂ ಇನ್ನೊಮ್ಮೆ ಸಲೀಂ ಚಾಚಾ ನನ್ನೂ ನೋಡಲಾರಂಭಿಸಿದ. ಇನ್ನು ಸುಮ್ಮನುಳಿದರೆ ಕುತ್ತಿಗೆಗೆ ಬರುತ್ತದೆ ಎಂದು ತಿಳಿದ ಸಲೀಂ ಚಾಚಾನೇ `ಅಹಮದ್..' ಎಂಬುದು ಆತನ ಹೆಸರು. ಅವನಿಗೆ ಸರಿಯಾಗಿ ಮಾತನಾಡಲು ಬರುವುದಿಲ್ಲ.' ಎಂದು ಬಿಟ್ಟ. ಪೊಲೀಸಿನವನಿಗೆ ಅದೇನೆನ್ನಿಸಿತೋ `ಠೀಕ್ ಹೈ..' ಎಂದು ವಾಪಸಾದ. ವಿನಯಚಂದ್ರನಿಗೆ ಹೋದ ಜೀವ ಮರಳಿದಂತಾಯಿತು.
              ಪೊಲೀಸಿನವನು ಅತ್ತ ಹೋಗುತ್ತಿದ್ದಂತೆಯೇ  ಸಲೀಂ ಚಾಚಾ `ಯಾಕ್ ಬೇಟಾ..? ಏನಾಯ್ತು? ಬಹಳ ಹೆದರಿ ಬಿಟ್ಟೆಯಾ?' ಎಂದು ಕೇಳಿದರು. ವಿನಯಚಂದ್ರ ಮಾತಾಡಲಿಲ್ಲ. ಸಲೀಂ ಚಾಚಾನೇ ಮುಂದುವರಿದು `ಅಬ್ಬ.. ಮಾತನಾಡದೇ ಇದ್ದರೆ ತೊಂದರೆಯಿಲ್ಲ. ಆದರೆ ಭಯದಲ್ಲಿ ಏನಾದರೂ ಬಾಯಿ ಬಿಟ್ಟಿದ್ದರೆ ಬಹಳ ತೊಂದರೆಯಾಗುತ್ತಿತ್ತು ನೋಡು. ಅಲ್ಲಾಹುವಿನ ದಯೆ.. ಹಾಗಾಗಲಿಲ್ಲ..' ಎಂದವನೇ ಮತ್ತೆ ಸೈಕಲ್ ತುಳಿಯಲು ಆರಂಭಿಸಿದ.
         ಕೆಲ ಹೊತ್ತಿನಲ್ಲಿಯೇ ಢಾಕಾದ ಕೊನೆಯ ಪ್ರದೇಶವಾದ `ಉತ್ತರಾ' ಎಂಬಲ್ಲಿಗೆ ಸೈಕಲ್ ಸವಾರಿ ಬಂದು ತಲುಪಿತು. ಪಕ್ಕದ ಟೋಂಗಿ ಎಂಬ ಪ್ರದೇಶವನ್ನು ಹಾದು ಬೆಳಗಾಗುವ ವೇಳೆಗೆ ಅಶೂಲಿಯಾ ಎನ್ನುವ ಪ್ರದೇಶವನ್ನು ತಲುಪಬೇಕೆಂಬುದು ಸಲೀಂ ಚಾಚಾನ ನಿರ್ಧಾರವಾಗಿತ್ತು. ರಾತ್ರಿಯಾದಂತೆಲ್ಲ ಢಾಕಾದ ನಗರಿಯ ಬೆಳಕು ಕಡಿಮೆಯಾಗತೊಡಗಿತು. ರಸ್ತೆಯಲ್ಲಿ ವಾಹನ ಸಂಚಾರವೇ ಇರಲಿಲ್ಲ. ಆಗೀಗ ಅಲ್ಲೊಂದು ಇಲ್ಲೊಂದು ವಾಹನಗಳು ರೊಯ್ಯನೆ ಹಾದು ಹೋಗುತ್ತಿದ್ದುದನ್ನು ಬಿಟ್ಟರೆ ಬಹುತೇಕ ದಾರಿ ನಿರ್ಜನವಾಗಿತ್ತು. ಸೈಕಲ್ ಮೇಲೆ ಮಧುಮಿತಾ ಆಗಲೇ ನಿದ್ದಗೆ ಜಾರಿಬಿಟ್ಟಿದ್ದಳು. ವಿನಯಚಂದ್ರ ಹಾಗೂ ಸಲೀಂ ಚಾಚಾ ಪಿಸು ದನಿಯಲ್ಲಿ ಮಾತನಾಡುತ್ತಾ ಮುಂದಕ್ಕೆ ಸಾಗುತ್ತಿದ್ದರು. ಮತ್ತೊಂದು ಅರ್ಧಗಂಟೆಯ ನಂತರ ಒಳದಾರಿಯನ್ನು ಬಿಟ್ಟು ಢಾಕಾ-ಅಶೂಲಿಯಾ ಹೆದ್ದಾರಿಯಲ್ಲಿ ಸಾಗುವ ಅನಿವಾರ್ಯತೆ ಉಂಟಾಯಿತು. ಸಲೀಂ ಚಾಚಾ ಅತ್ತ ತನ್ನ ಸೈಕಲ್ಲನ್ನು ತಿರುಗಿಸಿದ. ಹೆದ್ದಾರಿ ಕೂಡ ನಿರ್ಜನವಾಗಿತ್ತು. ಹೆದ್ದಾರಿಯ ಆರಂಭದಲ್ಲಿಯೇ ನದಿಯೊಂದು ಹರಿದಿತ್ತು. ಅದನ್ನು ದಾಟುವ ವೇಳೆಗಂತೂ ಚಳಿ ಗಾಳಿ ಬೀಸಿ ಬೀಸಿ ಬರಲಾರಂಭಿಸಿತು. ನದಿಯ ಮೇಲಿಂದ ಹಾದು ಬಂದ ತಂಗಾಳಿ ಮೈಯನ್ನು ಕೊರೆಯುತ್ತಿದೆಯೇನೋ ಅನ್ನಿಸಿತು. ನಿದ್ರೆ ಮಾಡುತ್ತಿದ್ದ ಮಧುಮಿತಾಳ ಮೇಲೆ ವಿನಯಚಂದ್ರ ಚಾದರವೊಂದನ್ನು ಹಾಕಿದ. ನಿದ್ದೆಗಣ್ಣಿನಲ್ಲಿಯೇ ಮಧುಮಿತಾ ಖುಷಿಪಟ್ಟಂತಾಯಿತು.
              ಢಾಕಾ-ಅಶೂಲಿಯಾ ರಸ್ತೆಯ ನಡುವಿನ ಗದ್ದೆ ಬಯಲುಗಳು ಕತ್ತಲೆಯಲ್ಲಿ ವಿಚಿತ್ರವಾಗಿ ಕಾಣುತ್ತಿದ್ದವು. ಆಕಾಶದ ಮಬ್ಬು ಬೆಳಕಿನಲ್ಲಿ ಗದ್ದೆಯ ಬಯಲುಗಳು, ಬಯಲಿನಾಚೆಯಲ್ಲಿ ಹರಿಯುತ್ತಿದ್ದ ನದಿಯೂ ವಿಚಿತ್ರವಾಗಿ ಕಾಣುತ್ತಿತ್ತು. ನೆಟ್ಟನೆ ರಸ್ತೆಯಲ್ಲಿ ಮೌನವಾಗಿ ಪ್ರಯಾಣ ಮಾಡುವುದು ಯಾಕೋ ಅಸಹನೀಯ ಎನ್ನಿಸುತ್ತಿತ್ತು. ಸಲೀಂ ಚಾಚಾನ ಜೊತೆಗೆ ಮಾತಾಡೋಣವೇ ಎಂದುಕೊಂಡರೂ ಮತ್ತಿನ್ನೇನಾದರೂ ಅಪಾಯ ಎದುರಾದರೆ ಎಂದುಕೊಂಡು ಸುಮ್ಮನಾದ ವಿನಯಚಂದ್ರ.
                  `ಚಾಚಾ.. ನಾನು ಸೈಕಲ್ ತುಳಿಯುತ್ತೇನೆ.. ಇಲ್ಲ ಅನ್ಬೇಡ ಪ್ಲೀಸ್..' ಕೊನೆಗೊಮ್ಮೆ ಅಸಹನೀಯ ಮೌನವನ್ನು ಬೇಧಿಸಿ ವಿನಯಚಂದ್ರ ಮಾತಾಡಿದ್ದ. ಚಾಚಾನಿಗೂ ಸೈಕಲ್ ತುಳಿದು ಸುಸ್ತಾಗಿತ್ತೇನೋ ಸೈಕಲ್ ತುಳಿಯಲು ಕೊಟ್ಟ. ವಿನಯಚಂದ್ರ ಹುಮ್ಮಸ್ಸಿನಿಂದ ಸೈಕಲ್ ತುಳಿಯುತ್ತಿದ್ದರೆ ಸಲೀಮ ಚಾಚಾ ಪಕ್ಕದ ಗದ್ದೆ ಬಯಲನ್ನು ತೋರಿಸುತ್ತಾ `ಬೇಟಾ ಈ ಗದ್ದೆ ಬಯಲುಗಳಿವೆಯಲ್ಲ ಇವುಗಳ ಹಿಂದೆ ಅದೆಷ್ಟೋ ಕ್ರೂರ ಕಥೆಗಳಿವೆ. ಕೇಳುತ್ತ ಹೋದರೆ ಕಣ್ಣೀರು ಬರುತ್ತದೆ.. ನಮ್ಮ ದೇಶದ ಸ್ವಾತಂತ್ರ್ಯ ಹೋರಾಟ, ಬ್ರಿಟೀಷರ ಆಕ್ರಮಣ, ಪದೇ ಪದೆ ನಡೆಯುತ್ತಿದ್ದ ಯುದ್ಧಗಳು, ಪಾಕಿಸ್ತಾನ ಬಾಂಗ್ಲಾ ಮೇಲೆ ಬೆನ್ನತ್ತಿ ಬಂದು ಇಲ್ಲಿನ ನೇತಾರರನ್ನು ಕೊಂದಿದ್ದು ಇದೇ ವಿಶಾಲ ಗದ್ದೆ ಬಯಲಿನಲ್ಲಿ ಎಂದ ಚಾಚಾ ಕೆಲಕಾಲ ಸುಮ್ಮನಾದ.
            ಚಾಚಾನಿಗೆ ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟದ ದಿನಗಳು ನೆನಪಾಗಿರಬೇಕು ಎಂದುಕೊಂಡ ವಿನಯಚಂದ್ರ. ಚಾಚಾ ಮುಂದುವರಿಸಿದ `ಪಾಕಿಸ್ತಾನ ತನ್ನದೇ ಭಾಗದ ನಾಡಾಗಿದ್ದರೂ ಮಿಲಿಟರಿ ಕಳಿಸಿ ದಾಳಿ ಮಾಡಿತಲ್ಲ. ಆಗ ನಾವು ನಲುಗಿದ್ದೇನು ಕಡಿಮೆಯೇ? ನಮ್ಮ ಈ ನಾಡಿನ ಹೆಣ್ಣುಮಕ್ಕಳನ್ನು ಎಳೆದೆಳೆದು ಅತ್ಯಾಚಾರ ಮಾಡುತ್ತಿದ್ದರೆ ನಾವು ಕುದ್ದು ಹೋಗಿದ್ದೆವು. ಆದರೆ ನಮ್ಮಲ್ಲಿ ಆಯುಧವಿರಲಿಲ್ಲ. ಮಾರಕ ಆಯುಧಗಳನ್ನು ಹೊಂದಿದ್ದ ಪಾಕಿಸ್ತಾನಿ ಯೋಧರು ರಣಕೇಕೆ ಹಾಕಿ ನಮ್ಮವರನ್ನು ಕೊಲ್ಲುತ್ತಿದ್ದರೆ ನಾವು ನಮ್ಮ ಜೀವ ಉಳಿಸಿಕೊಳ್ಳಲು ಓಡುತ್ತಿದ್ದೆವು. ರಕ್ಷಣೆಗೆ ಯಾರನ್ನು ಯಾಚಿಸುವುದು? ಎಲ್ಲಿ ಓಡುವುದು? ನಮ್ಮವರಲ್ಲಿ ಲಕ್ಷಾಂತರ ಜನರು ಭಾರತಕ್ಕೆ ಓಡಿ ಹೋದರು. ನಿಮ್ಮ ಭಾರತಕ್ಕೆ ನಿರಾಶ್ರಿತರ ಸಮಸ್ಯೆ ತಟ್ಟಿದಾಗಲೇ ನಿಮ್ಮ ಐರನ್ ಲೇಡಿ ಇಂದಿರಾಗಾಂಧಿ ಗುಟುರು ಹಾಕಿದ್ದು. ಅಬ್ಬಾ ಎಂತಾ ಹೆಂಗಸು ಆಕೆ. ಅದೆಷ್ಟು ಗಟ್ಟಿಗಿತ್ತಿ. ಗುಟುರು ಹಾಕಿದ್ದಷ್ಟೇ ಅಲ್ಲ. ಯುದ್ಧ ಸಾರಿ ಮಿಲಿಟರಿಯನ್ನು ಕಳಿಸಿ ಪಾಕಿಸ್ತಾನದ ಸೈನ್ಯವನ್ನು ಬಗ್ಗು ಬಡಿಯಿತಲ್ಲ. ಆ ಸಂದರ್ಭದಲ್ಲಿ ಬಾಂಗ್ಲೋದಯವಾಗಿದ್ದು. ಈಗಲೂ ನಮ್ಮಲ್ಲಿ ಶೇಖ್ ಮುಜೀಬುರ್ ರೆಹಮಾನ್ ರನ್ನು ನೆನೆಯುವಷ್ಟೇ ಇಂದಿರಾ ಗಾಂಧಿಯನ್ನೂ ನೆನೆಯುವವರೂ ಇದ್ದಾರೆ. ಆಕೆಯ ಮಿಲಿಟರಿ ಸೈನ್ಯದ ಎದುರು ಪಾಕಿಸ್ತಾನದ ಒಂದು ಲಕ್ಷ ಸೈನಿಕರು ಶರಣಾದರಲ್ಲ ಆಗ ನಾವೆಲ್ಲ ಚಪ್ಪಾಳೆ ಹೊಡೆದು ಸಂತೋಷ ಪಟ್ಟಿದ್ದೆವು. ಇಂತಹ ಹಲವಾರು ಘಟನೆಗಳು ಈ ಗದ್ದೆ ಬಯಲಿನಲ್ಲಿ ಜರುಗಿದೆ. ಇಂತಹ ಗದ್ದೆ ಬಯಲು ಬೇಸಿಗೆ ಹಾಗೂ ಚಳಿಗಾಲದಲ್ಲಿ ಭತ್ತದ ಕಣಜಗಳಾಗುತ್ತವೆ. ಆದರೆ ಮಳೆಗಾಲದಲ್ಲಿ ಮಾತ್ರ ಬ್ರಹ್ಮಪುತ್ರ ನದಿ ನೂರಾರು ಕಿ.ಮಿ ಅಗಲವಾಗಿ ಹರಿದು ಈ ಗದ್ದೆ ಬಯಲನ್ನು ಮುಳುಗಿಸಿ ಬಿಡುತ್ತದೆ. ಮಳೆಗಾಲವೆಂದರೆ ಇಲ್ಲಿ ನರಕ..'
           `ಈಗ ನೀನು ಆಚೀಚೆ ನೋಡಿದರೆ ಕತ್ತಲೇ ಕಾಣುತ್ತದೆ. ಆದರೆ ಈ ಸಮಯದಲ್ಲಿ ಅಲ್ಲೆಲ್ಲ ಭತ್ತದ ಬೆಳೆ ತುಂಬಿ ನಿಂತಿದೆ. ಈ ಭತ್ತದ ಗದ್ದೆಯ ನಡುವೆ ಬಾಂಗ್ಲಾ ರೈತರು ಮಾಳಗಳನ್ನು ಕಟ್ಟಿ ಬೆಳೆ ರಕ್ಷಣೆಗೆ ನಿಂತಿರುತ್ತಾರೆ. ಹಗಲಿನಲ್ಲಿ ಈ ದೃಶ್ಯ ನಿನಗೆ ಬಹಳ ರೋಮಾಂಚನವನ್ನು ನೀಡುತ್ತದೆ. ಬಾಂಗ್ಲಾ ರೈತರ ಜೀವನಾಧಾರವೇ ಈ ಗದ್ದೆ ಬಯಲುಗಳು. ಇಲ್ಲೂ ಕೂಡ ಜಮೀನ್ದಾರಿ ಪದ್ಧತಿ ಇದೆ. ಒಬ್ಬ ಜಮೀನ್ದಾರ ಸಾವಿರಾರು ಎಕರೆ ಇಟ್ಟುಕೊಂಡು ನೂರಾರು ರೈತರನ್ನು ಶೋಷಿಸುತ್ತಿರುತ್ತಾನೆ. ಇಲ್ಲಿ ಬೆಳೆ ರಕ್ಷಣೆಗೆ ನಿಂತಿರುವ ರೈತರು ತಮ್ಮ ಜಮೀನನ್ನೇ ರಕ್ಷಣೆ ಮಾಡುತ್ತಿದ್ದಾರೆ ಎಂದುಕೊಳ್ಳುವಂತಿಲ್ಲ. ಅವರು ರಕ್ಷಿಸುವ ಜಮೀನು ಅವರ ಜಮೀನುದಾರರದ್ದೂ ಆಗಿರುತ್ತದೆ. ತಲೆ ತಲಾಂತರದ ಜೀತದ ಪದ್ಧತಿ ಈಗಲೂ ಜೀವಂತವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಅಲ್ಲೊಬ್ಬ ಇಲ್ಲೊಬ್ಬ ಜಮೀನ್ದಾರ ಮಾತ್ರ ಇದ್ದಾನೆ. ಉಳಿದಂತೆ ಹೆಚ್ಚಿನ ಜಮೀನ್ದಾರರು ಕೊಲೆಯಾಗಿ ಹೋಗಿದ್ದಾರೆ. ಇಲ್ಲವೇ ಸರ್ಕಾರ ಕುತಂತ್ರ ಮಾಡಿ ಅವರ ಜಮೀನನ್ನು ತುಂಡು ತುಂಡು ಮಾಡಿಬಿಟ್ಟಿದೆ..'
            ಸಲೀಂ ಚಾಚಾ ವಿಸ್ತಾರವಾಗಿ ಹೇಳುತ್ತಲೇ ಇದ್ದರು. ವಿನಯಚಂದ್ರ ಕಿವಿಯಾಗಿದ್ದ. ಬಾಂಗ್ಲಾ ನಾಡಿನ ಚರಿತ್ರೆ, ಮಣ್ಣಿನ ಗುಣ, ಯುದ್ಧ ಇತ್ಯಾದಿಗಳೆಲ್ಲ ಬಿಚ್ಚಿಕೊಳ್ಳುತ್ತಿದ್ದವು. ಸಲೀಂ ಚಾಚಾ ಸೈಕಲ್ ರಿಕ್ಷಾ ಹೊಡೆಯುವವರೋ ಅಥವಾ ಇತಿಹಾಸಕಾರರೋ ಎನ್ನುವ ಆಲೋಚನೆ ವಿನಯಚಂದ್ರನ ಮನಸ್ಸಿನಲ್ಲಿ ಮೂಡಿದ್ದು ಸುಳ್ಳಲ್ಲ. ಅಷ್ಟರಲ್ಲಿ ಇನ್ನೊಂದು ಚಿಕ್ಕ ನದಿ ಅವರೆದುರು ಬಂದಿತು. ಅದಕ್ಕೊಂದು ಚಿಕ್ಕ ಸೇತುವೆ ಕೂಡ ಇತ್ತು. `ದೇಕೋ ಬೇಟಾ.. ಢಾಕಾದಿಂದ ಅಶೂಲಿಯಾಗೆ 25 ಕಿ.ಮಿ ಆಗುತ್ತದೆ. ಈ ದೂರದ ನಡುವೆ ನಾವು ಮೂರು ಸಾರಿ ನದಿ ದಾಟಬೇಕಾಗುತ್ತದೆ. ಆ ನದಿಗಳಲ್ಲಿ ಇದೂ ಒಂದು. ಈ ಕಿರು ನದಿಯಿದೆಯಲ್ಲ ಒಂದಾನೊಂದು ಕಾಲದಲ್ಲಿ ದೈತ್ಯವಾಗಿ ಹರಿಯುತ್ತಿತ್ತಂತೆ. ಆದರೆ ಕಾಲಕ್ರಮೇಣ ನದಿ ಪಥ ಬದಲಿಸಿದೆ. ಈ ಕವಲು ಚಿಕ್ಕದಾಗಿದೆ. ನಮಗೆ ಸಿಗುವ ಇನ್ನೊಂದು ಕವಲು ಬಹು ದೊಡ್ಡದು. ಆ ನದಿಯನ್ನು ದಾಟಿದ ನಂತರ ಅಶೂಲಿಯಾ. ಆದರೆ ಆ ಸೇತುವೆ ದಾಟುವುದು ನಮ್ಮ ಮುಂದಿರುವ ಪ್ರಮುಖ ಸವಾಲು. ಏಕೆಂದರೆ ಆ ಸೇತುವೆಯ ಸುತ್ತಮುತ್ತ ಕಳ್ಳಕಾಕರ ಹಾವಳಿಯಿದೆ. ದಾರಿಯಲ್ಲಿ ಹಾದು ಬರುವ ಪ್ರಯಾಣಿಕರನ್ನು ತಡೆದು ಅವರ ತಲೆಗೆ ಬಂದೂಕನ್ನು ಗುರಿಯಿಟ್ಟು ಕೈಯಲ್ಲಿರುವ ಹಣ, ಒಡವೆಗಳನ್ನೆಲ್ಲ ಕಿತ್ತುಕೊಳ್ಳುವುದು ಅವರ ಪ್ರಮುಖ ಕೆಲಸ. ನಾವು ಅವರನ್ನು ಹೇಗಾದರೂ ಮಾಡಿ ತಪ್ಪಿಸಿಕೊಂಡು ಹೋದರೆ ಬಹುದೊಡ್ಡ ಸಮಸ್ಯೆ ಕಡಿಮೆಯಾದಂತೆ. ಸರ್ಕಾರ ಇವರನ್ನು ಮಟ್ಟ ಹಾಕಲು ಪ್ರಯತ್ನಿಸಿ ಸೋತಿದೆ. ನಾವು ಈಗ ಎಚ್ಚರಿಕೆಯಿಂದ ಹೋಗಬೇಕು.. ಹುಷಾರು..' ಎಂದು ಚಾಚಾ ಹೇಳಿದರು. ವಿನಯಚಂದ್ರ ಸುಮ್ಮನೆ ಸೈಕಲ್ ತುಳಿಯುತ್ತಿದ್ದ.
             ತಂಗಾಳಿಯ ನಡುವೆ ಸೈಕಲ್, ಸೈಕಲ್ಲಿನಲ್ಲಿ ವಿನಯಚಂದ್ರ, ಮಧುಮಿತಾ, ಸಲೀಂ ಚಾಚಾ ಸಾಗುತ್ತಿದ್ದರು. ಸುತ್ತಲೂ ಕತ್ತಲಾವರಿಸಿತ್ತು. ಸಲೀಂ ಚಾಚಾ ಕೂಡ ಮಾತಾಡಿ ಮಾತಾಡಿ ಬೇಸರಗೊಂಡನೇನೋ. ಸುಮ್ಮನಾಗಿದ್ದ. ವಿನಯಚಂದ್ರ ತಂಗಾಳಿ ನಡುವೆಯೂ ಬೆವರುತ್ತ ಸೈಕಲ್ ತುಳಿಯುತ್ತಿದ್ದರೆ ಮಧುಮಿತಾ ಮಹಾರಾಣಿಯಂತೆ ಮಲಗಿ ನಿದ್ರಿಸುತ್ತಿದ್ದಳು. ವಿನಯ ಚಂದ್ರನಿಗೆ ಈ ಮೌನ, ಕಾರ್ಗತ್ತಲು, ಮುಂದೇನೋ ಕೆಟ್ಟ ಸಮಯವಿದೆ ಎನ್ನುವುದನ್ನು ಸಾರಿ ಹೇಳುತ್ತಿದ್ದಂತೆ ಅನ್ನಿಸಿತು. ಯಾವುದೋ ಅಪಾಯದ ಮುನ್ಸೂಚನೆಯಾಗಿ ಇಂತಹ ಶೂನ್ಯ ಮೌನ ಕಾಡುತ್ತಿದ್ದಂತೆ ಅನ್ನಿಸಿತು. ಸೈಕಲ್ ತುಳಿಯುತ್ತಿದ್ದರೂ ಅದೇನೋ ಚಟಪಡಿಕೆ ವಿನಯಚಂದ್ರನ ಮನಸ್ಸಿನಲ್ಲಿ ಆವರಿಸಿತು.

(ಮುಂದುವರಿಯುತ್ತದೆ..)            

No comments:

Post a Comment