Sunday, August 10, 2014

ಬೆಂಗಾಲಿ ಸುಂದರಿ-20

        `ಒಳಗೆ ಬನ್ನಿ...' ಎಂದು ಸಲೀಂ ಚಾಚಾ ಮತ್ತೊಮ್ಮೆ ಕರೆದಾಗ ತುಸು ನಾಚಿಕೆಯಿಂದಲೇ ಒಳಗಡಿಯಿರಿಸಿದರು ವಿನಯಚಂದ್ರ ಹಾಗೂ ಮಧುಮಿತಾ. ಹಿಂದೆ ಒಂದೆರಡು ಸಾರಿ ಮಧುಮಿತಾ  ಸಲೀಂ ಚಾಚಾನ ಮನೆಗೆ ಬಂದಿದ್ದಳಾದರೂ ಸಲುಗೆಯಿರಲಿಲ್ಲ. ಆದ್ದರಿಂದ ಮುಜುಗರದಿಂದಲೇ ಹೆಜ್ಜೆ ಹಾಕಿದಳು. ಇವರು ಒಳಗೆ ಹೆಜ್ಜೆ ಇರಿಸಿದಂತೆಲ್ಲ ಒಂದಿಬ್ಬರು ಚಿಕ್ಕ ಚಿಕ್ಕ ಹುಡುಗರು ಓಡಿಬಂದು ಸಲೀಂ ಚಾಚಾನನ್ನು ತಬ್ಬಿಕೊಂಡರು. ಸಲೀಮ ಚಾಚಾ ತನ್ನ ಉದ್ದನೆಯ ಬಿಳಿ ನಿಲುವಂಗಿಯಿಂದ ಚಿಕ್ಕ ಚಾಕಲೇಟುಗಳನ್ನು ನೀಡಿದ ನಂತರ ಮನೆಗೆ ಹೊಸದಾಗಿ ಬಂದಿದ್ದ ವಿನಯಚಂದ್ರ ಹಾಗೂ ಮಧುಮಿತಾಳತ್ತ ಕುತೂಹಲದ ಕಣ್ಣು ಹಾಯಿಸುತ್ತ ಮನೆಯ ಒಳಗೆ ಓಡಿದರು. ಅಪರಿಚಿತರ ಕಡೆಗೆ ಭಯ ಹಾಗೂ ಬೆರಗೂ ಎರಡೂ ಇದ್ದಿದ್ದು ಮಕ್ಕಳ ಕಣ್ಣಿನಲ್ಲಿ ಸ್ಪಷ್ಟವಾಗಿತ್ತು.
            ವಿನಯಚಂದ್ರ ಹಾಗೂ ಮಧುಮಿತಾರಿಗೆ ಸಲೀಂ ಚಾಚಾ ಉಳಿಯಲಿಕ್ಕೊಂದು ಕೋಣೆಯನ್ನು ತೋರಿಸಿದರು. ಅಲ್ಲದೇ ತಮ್ಮ ಮನೆಯ ಸದಸ್ಯರನ್ನೂ ಪರಿಚಯಿಸಿದರು. ಸ್ವಲ್ಪ ಹೊತ್ತಿನ ನಂತರ ಮನೆಯ ಮಕ್ಕಳಿಗೆ ವಿನಯಚಂದ್ರ ಹಾಗೂ ಮಧುಮಿತಾಳಿಗೆ ಸಲುಗೆ ಬೆಳೆದ ಕಾರಣ ಹತ್ತಿ ಬಂದರು. ಇಬ್ಬರ ಮನಸ್ಸೂ ಕೊಂಚ ನಿರಾಳವಾಗಿತ್ತಾದರೂ ಮಧುಮಿತಾಳಿಗೆ ಬೆಳಿಗ್ಗೆ ನಡೆದಿದ್ದ ಘಟನೆ ಮಾಸಿರಲಿಲ್ಲ. ಆಗಾಗ ಬಿಕ್ಕುತ್ತಲೇ ಇದ್ದಳು. ವಿನಯಚಂದ್ರ ಆಕೆಯನ್ನು ಯಾವ ರೀತಿ ಸಮಾಧಾನ ಮಾಡಬೇಕು ಎನ್ನುವುದರಲ್ಲಿಯೇ ಸುಸ್ತಾಗಿದ್ದ. ಒಂದೇ ಘಳಿಗೆಯಲ್ಲಿ ಮನೆಯವರನ್ನೆಲ್ಲ ಕಳೆದುಕೊಂಡ ಕಾರಣ ಮಧುಮಿತಾ ಮೌನಕ್ಕೆ ಶರಣಾಗಿದ್ದಳು. ಮನಸ್ಸು ಮರುಗುತ್ತಿತ್ತು.
            ಸಲೀಂ ಚಾಚಾ ಒಳಗಿನಿಂದ ತಿಂಡಿಯನ್ನು ತಂದರು. ವಿನಯಚಂದ್ರನಿಗೆ ಒಮ್ಮೆ ಹಿಂಜರಿಕೆಯಾಯಿತು. ಅದನ್ನು ಗಮನಿಸಿದ ಸಲೀಂ ಚಾಚಾ `ಬೇಟಾ.. ಇದು ಅಪ್ಪಟ ಸಸ್ಯಾಹಾರ.. ಗೋಧಿ ರೊಟ್ಟಿ. ನಿಮಗೆ ತೊಂದರೆಯಾಗೋದಿಲ್ಲ.. ತಿನ್ನಿ.' ಎಂದ ನಂತರವೇ ವಿನಯಚಂದ್ರ ತಿನ್ನಲು ಮುಂದಾದದ್ದು. ಮಧುಮಿತಾಳಿಗೆ ತಿನ್ನಲು ಇಷ್ಟವಿರಲಿಲ್ಲ. ಒಂದೇ ರಾತ್ರಿಯಲ್ಲಿ ಅಪ್ಪ, ಅಮ್ಮ, ಸಹೋದರ, ಜೊತೆಗಾರರನ್ನೆಲ್ಲ ಕಳೆದುಕೊಂಡ ನಂತರದ ಶೂನ್ಯಭಾವ ಆಕೆಯನ್ನು ಆವರಿಸಿತ್ತು. ವಿನಯಚಂದ್ರನೇ ಒತ್ತಾಯ ಮಾಡಿ ಆಕೆಗೆ ತುತ್ತು ತಿನ್ನಿಸಿದ. ವಿನಯಚಂದ್ರನ ಭುಜಕ್ಕೆ ಒರಗಿಕೊಂಡೇ ತಿಂಡಿ ತಿಂದಳು ಮಧುಮಿತಾ. ಸಲೀಮ ಚಾಚಾ ಮನೆಯನ್ನೆಲ್ಲ ತೋರಿಸಿದ. ಚಾಚಾನಿಗೆ ಅದೇನು ಕೆಲಸವಿತ್ತೋ, ಮನೆಯ ಸದಸ್ಯರ ಬಳಿ ಮಾತನಾಡುತ್ತಿರುವಂತೆ ಹೇಳಿ ತಾನು ಹೊರಟ. ವಿನಯಚಂದ್ರನಿಗೆ ಅಪರಿಚಿತರ ಬಳಿ ಮಾತನಾಡುವುದು ಏನು ಎನ್ನಿಸಿತು. ಮಧುಮಿತಾಳನ್ನು ಸಲೀಮ್ ಚಾಚಾನ ಮಡದಿ ಸಂತೈಸತೊಡಗಿದ್ದಳು. ವಿನಯಚಂದ್ರ ಮಾಡಲು ಬೇರೆ ಕೆಲಸವಿಲ್ಲದೇ ಸಲೀಮ ಚಾಚಾನ ಮನೆಯ ಗೋಡೆಯ ಮೇಲಿದ್ದ ಚಿತ್ತಾರಗಳತ್ತ ದೃಷ್ಟಿ ಹಾಯಿಸತೊಡಗಿದ.
            ತನ್ನ ಹುಮ್ಮಸ್ಸಿನ ವಯಸ್ಸಿನಲ್ಲಿ ಸಲೀಂ ಚಾಚಾ ಅದೇನು ಉದ್ಯೋಗ ಮಾಡುತ್ತಿದ್ದನೋ. ಆದರೆ ಆತನ ಆಸಕ್ತಿಗಳು ಬಹಳ ಕುತೂಹಲವನ್ನು ಹುಟ್ಟುಹಾಕುವಂತಿದ್ದವು. ಗೋಡೆಯ ಮೇಲೆ ಬಳ್ಳಿ ಬಳ್ಳಿಗಳ ಸುಂದರ ಚಿತ್ರಣ.  ತನ್ನೂರಿನಲ್ಲಿ ಪ್ರಧಾನ ಬಾಗಿಲ ಪಕ್ಕದಲ್ಲಿ ಅಂತಹ ಬಳ್ಳಿಗಳನ್ನು ಚಿತ್ರಿಸುತ್ತಿದ್ದ ನೆನಪಾಯಿತು. ನಡು ನಡುವೆ ಉರ್ದು ಲಿಪಿಯಲ್ಲಿ ಬರೆಯಲಾಗಿತ್ತು. ಖುರ್-ಆನ್ ನ ವಾಕ್ಯಗಳಿರಬೇಕು ಎಂದುಕೊಂಡ. ನೆಲಕ್ಕೆಲ್ಲ ಟೈಲ್ಸ್ ಹಾಕಲಾಗಿತ್ತು. ಬಿಳಿಬಣ್ಣದ ಗೋಡೆಗಳು ಒಂಚೂರೂ ಮುಕ್ಕಾಗಿರಲಿಲ್ಲ. ಮುಟ್ಟಿದರೆ ತನ್ನ ಕೈಯ ಕೊಳೆಯೇ ಅಂಟುತ್ತವೆಯೇನೋ ಎನ್ನುವಷ್ಟು ಬಿಳುಪಾಗಿತ್ತು. ಶುಭ್ರವಾಗಿತ್ತು. ನೋಡುತ್ತಿದ್ದಾಗಲೇ ಸಲೀಮ ಚಾಚಾನ ಮೊಮ್ಮಕ್ಕಳು ಬಂದು ವಿನಯಚಂದ್ರನನ್ನು ಮುತ್ತಕೊಂಡವು. ವಿನಯಚಂದ್ರನನ್ನು ಆಟಕ್ಕೆ ಬರುವಂತೆ ಕರೆದವು. ಸಮಯ ಹೋಗಬೇಕಿತ್ತಲ್ಲ. ವಿನಯಚಂದ್ರ ಆ ಹುಡುಗರ ಜೊತೆಗೆ ಹುಡಗಾಟಕ್ಕಿಳಿದ.
           ಒಂದೊಪ್ಪತ್ತಿನ ನಂತರ ಸಲೀಮ ಚಾಚಾ ವಾಪಾಸು ಬಂದಿದ್ದರು. ಬಂದವರೇ ವಿನಯಚಂದ್ರನ ಬಳಿ `ಬೇಟಾ.. ನೀನು ಭಾರತಕ್ಕೆ ಮರಳಬೇಕಲ್ಲ. ಅದಕ್ಕೆ ನಾನು ಹಲವು ಜನರ ಬಳಿ ವಿಚಾರಿಸಿದೆ...' ಎಂದರು.
           `ಯಾಕೆ ಚಾಚಾ.. ವಿಮಾನವಿದೆಯಲ್ಲ.. ನಾನು ಅದರಲ್ಲೆ ಮರಳುತ್ತೇನೆ ಬಿಡಿ.. ಮಧುಮಿತಾಳನ್ನೂ ಕರೆದೊಯ್ಯುತ್ತೇನೆ..ಅವಳಿಗೆ ಏನೂ ತೊಂದರೆಯಾಗಲಿಕ್ಕಿಲ್ಲ. ಮಿತ್ರ ಸೂರ್ಯನ್ ಸಹಾಯ ಮಾಡುತ್ತೇನೆ ಎಂದು ಹೇಳಿದ್ದಾನೆ. ಅವನ ಬಳಿ ವಿಚಾರಿಸಿ ಮುಂಡುವರಿಯುತ್ತೇನೆ' ಎಂದ ಎಂದ ವಿನಯ ಚಂದ್ರ,
               `ವಿಮಾನ....' ಎಂದವರೇ ಒಮ್ಮೆಲೆ ನಕ್ಕ ಸಲೀಂ ಚಾಚಾ `ಬಾಂಗ್ಲಾದಲ್ಲಿ ಹಿಂಸಾಚಾರ ಹೆಚ್ಚಾದಂತೆ ವಿಮಾನ ನಿಲ್ದಾಣ ಮುಚ್ಚಲಾಗಿದೆ. ನಿಮ್ಮ ಕಬ್ಬಡ್ಡಿ ತಂಡದವರೂ ಭಾರತ ಸೇರಿದ್ದಾರೋ ಇಲ್ಲವೋ ಗೊತ್ತಿಲ್ಲ. ಆ ಬಗ್ಗೆ ಅನುಮಾನಗಳಿವೆ. ಸಾಧ್ಯವಾದರೆ ಭಾರತ ತಂಡದ ಬಗ್ಗೆ ವಿಚಾರಿಸು. ಅವರು ಗಲಾಟೆಯಲ್ಲಿ ಸಿಕ್ಕಿಬಿದ್ದು ಭಾನಗಡಿ ಆಗದಿದ್ದರೆ ಸಾಕು ನೋಡು. ಈಗ ನೀನು ಭಾರತ ಸೇರಬೇಕೆಂದರೆ ಒಂದೋ ಹಡಗಿನ ಮೂಲಕ ಹೋಗಬೇಕು. ಇಲ್ಲವಾದಲ್ಲಿ ಭೂ ಮಾರ್ಗದ ಮೂಲಕ ಹೋಗಬೇಕು. ಎರಡೂ ಸುಲಭದಲ್ಲಿಲ್ಲ..' ಎಂದರು.
            `ಯಾಕೆ ಚಾಚಾ.. ಭಾರತ-ಪಾಕಿಸ್ತಾನ ನಡುವೆ ಬಸ್ ಸಂಚಾರ ಇದೆಯಲ್ಲ.. ಹಾಗೆಯೇ ಭಾರತ-ಬಾಂಗ್ಲಾ ನಡುವೆ ಬಸ್ ಸಂಚಾರ ಇಲ್ಲವೇ? ..ಬಸ್ ಮೂಲಕ ಹೋದರೆ ಆಯ್ತು.' ಮುಗ್ಧವಾಗಿ ಕೇಳಿದ ವಿನಯಚಂದ್ರ.
            ನಸುನಕ್ಕ ಸಲೀಂ ಚಾಚಾ `ಮೊದಲ್ನೇನಾಗಿ ಹೇಳಬೇಕು ಅಂದರೆ ಭಾರತ-ಬಾಂಗ್ಲಾ ನಡುವೆ ಬಸ್ ಸಂಚಾರ ಇಲ್ಲ. ಭಾರತ ಹಾಗೂ ಪಾಕಿಸ್ತಾನದ ನಡುವೆ ರಾಜಕಾರಣಿಗಳಿಗೆ ತಮ್ಮ ಸಾಮರ್ಥ್ಯ ತೋರಿಸಲು ಏನಾದರೂ ಬೇಕಲ್ಲ. ಅದಕ್ಕೆ ಬಸ್ ಬಿಡಿಸುತ್ತಾರೆ. ರೈಲನ್ನೂ ಓಡಿಸುತ್ತಾರೆ. ಆದರೆ ಇದು ಬಾಂಗ್ಲಾದೇಶ. ಭಾರತಕ್ಕೆ ಬಾಂಗ್ಲಾದಿಂದ ಆಗಬೇಕಾದದ್ದು ಏನೂ ಇಲ್ಲವಲ್ಲ. ಹಾಗಾಗಿ ಇಲ್ಲಿಗೆ ಬಸ್ಸೂ ಇಲ್ಲ ರೈಲೂ ಇಲ್ಲ. ಇನ್ನೊಂದಂದ್ರೆ ಇಂತಹ ಹಿಂಸಾಚಾರದ ಸಂದರ್ಭದಲ್ಲಿ ಬಸ್ ಸಂಚಾರ ಏರ್ಪಡುತ್ತಾ? ಅದರಲ್ಲೂ ಭಾರತಕ್ಕೆ ಬಸ್ ಸಂಚಾರ ಊಹೂಂ.. ನಿಂತುಬಿಟ್ಟಿರುತ್ತದೆ.' ಎಂದರು ಸಲೀಂ ಚಾಚಾ.
            `ಮತ್ತೆ .. ಇನ್ನು ಹೇಗೆ ಭಾರತಕ್ಕೆ ಹೋಗೋದು..? ಇಲ್ಲಿ ಎಷ್ಟು ದಿನ ಅಂತ ಇರೋದು. ಗುರ್ತಿಲ್ಲ, ಪರಿಚಯ ಇಲ್ಲ. ನಮ್ಮ ಪರಿಸ್ತಿತಿ ಅತಂತ್ರವಾದಂತೆಯಾ? '
            `ಬೇಟಾ ನಾನು ಇರುವ ತನಕ ನೀವು ಹೇಗೆ ಅತಂತ್ರರಾಗುತ್ತೀರಿ? ಎಷ್ಟು ದಿನ ಇದ್ದರೂ ತೊಂದರೆಯಿಲ್ಲ. ನಮ್ಮ ಮನೆಯಲ್ಲಿ ಉಳಿದಕೊಳ್ಳಬಹುದು. ಭಾರತಕ್ಕೆ ಹೋಗಲೇಬೇಕು ಎನ್ನುವ ಸಂದರ್ಭದಲ್ಲಿ ನೋಡೋಣ. ಅದಕ್ಕಾಗಿ ಪ್ರಯತ್ನ ಮಾಡೋಣ. ಭಾರತಕ್ಕೆ ಹೋಗೋಕೆ ಪ್ರಮುಖ ಮಾರ್ಗವೊಂದಿದೆ. ಅದನ್ನು ಪ್ರಯತ್ನಿಸಬಹುದು. ಭಾರತದ ಗಡಿಗೆ ಹೋಗಿ.. ಅಲ್ಲಿ ಕದ್ದು ನುಸುಳೋದು.. ಅದರ ಬಗ್ಗೆಯೇ ನಾನು ವಿಚಾರಿಸಿಕೊಂಡು ಬಂದಿದ್ದು. ಇಂತಹ ಪರಿಸ್ಥಿತಿಯಲ್ಲಿ ಹಡಗು, ದೋಣಿಗಳಲ್ಲಿ ಕದ್ದು ಭಾರತಕ್ಕೆ ನುಸುಳುವುದು ಬಹಳ ಕಷ್ಟದ ಕೆಲಸ. ಭೂ ಮಾರ್ಗದಲ್ಲೇ ಪ್ರಯತ್ನಿಸಬೇಕು. ಬಾಂಗ್ಲಾ ದೇಶದಿಂದ ದಿನವಹಿ ಅದೆಷ್ಟೋ ಜನರು ಭಾರತಕ್ಕೆ ನುಸುಳುತ್ತಾರಲ್ಲ.. ನೀವೂ ಹಾಗೆಯೇ ನುಸುಳುವುದು. ಹೇಗಂದರೂ ನೀನು ಭಾರತದ ಕಬ್ಬಡ್ಡಿ ಆಟಗಾರ. ಭಾರತದ ಗಡಿಯೊಳಗೆ ಹೋದ ತಕ್ಷಣ ಅಲ್ಲಿನ ಮಿಲಿಟರಿ ಅಧಿಕಾರಿಗಳ ಬಳಿ ನಿನ್ನ ಬಗ್ಗೆ ಹೇಳಿದರೆ ಎಲ್ಲ ಸೌಕರ್ಯಗಳನ್ನು ಅವರೇ ಕಲ್ಪಿಸಿಕೊಡುತ್ತಾರೆ..' ಎಂದು ಸಲೀಂ ಚಾಚಾ ಸಲಹೆ ನೀಡಿದರು.
             ವಿನಯಚಂದ್ರನ ಕಣ್ಣಲ್ಲಿ ಬೆಳಕು ಮೂಡಿತು. ಆದರೆ ಮನದಲ್ಲಿ ಮೂಡಿದ್ದ ಬೆಳಕು ತಕ್ಷಣವೇ ಆರಿದಂತಾಯಿತು. ಹಿಂಸಾಪೀಡಿತ ರಾಷ್ಟ್ರದಲ್ಲಿ ಗಡಿ ಪ್ರದೇಶಕ್ಕೆ ತೆರಳುವುದು ಸುಲಭದ ಕೆಲಸವಂತೂ ಆಗಿರಲಿಲ್ಲ. ದೇಶದ ನಟ್ಟ ನಡುವೆ ಇದ್ದ ರಾಜಧಾನಿಯಿಂದ ಗಡಿ ಭಾಗಕ್ಕೆ ಏನಿಲ್ಲವೆಂದರೂ ಕನಿಷ್ಟ 300 ರಿಂದ 500 ಕಿ.ಮಿ ಪ್ರಯಾಣ ಮಾಡಬೇಕಿತ್ತು. ಅದು ಸುಲಭದ್ದಾಗಿರಲಿಲ್ಲ. ಹೀಗೆ ಪ್ರಯಾಣ ಮಾಡುವುದೆಂದರೆ ಬೆಂಕಿಯ ಮೇಲೆ ನಡೆದಂತೆ ಎಂಬುದು ವಿನಯಚಂದ್ರನ ಮನಸ್ಸಿನಲ್ಲಿ ಮೂಡಿದ ತಕ್ಷಣ ಆತನ ಮನಸ್ಸು ಒಮ್ಮೆ ಮಂಕಾಯಿತು.
            ವಿನಯಚಂದ್ರ ತಕ್ಷಣವೇ ತನ್ನ ಮೊಬೈಲನ್ನು ಸ್ವಿಚ್ ಆನ್ ಮಾಡಿದ. ತನ್ನ ಮೊಬೈಲಿಗೆ ಜಾಧವ್ ಹಾಗೂ ಸೂರ್ಯನ್ ರಿಂದ ನೂರಾರು ಕರೆಗಳು ಬಂದಿರುವ ಮೆಸೆಜುಗಳು ಗುಪ್ಪೆ ಗುಪ್ಪೆಯಾಗಿ ಬಂದು ಬಿದ್ದಿದ್ದವು. ಜಾಧವ್ ಅವರಿಗೆ ದೂರವಾಣಿ ಕರೆಮಾಡಿ ವಿಷಯ ಹೇಳಲು ಯತ್ನಿಸಿದ. ಪೋನ್ ಕನೆಕ್ಟ್ ಆಗಲಿಲ್ಲ. ಬಾಂಗ್ಲಾದೇಶದ ಫಾಸಲೆಯಲ್ಲಿ ಇದ್ದರೆ ಮೊಬೈಲ್ ಸಂಪರ್ಕಕ್ಕೆ ಸಿಗಬೇಕಿತ್ತು. ಆದರೆ ಅವರು ಭಾರತಕ್ಕೆ ಹೋಗಿ ತಲುಪಿದ್ದಾರೆ. ಆ ಕಾರಣದಿಂದಲೇ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದುಕೊಂಡ ವಿನಯಚಂದ್ರ. ಸೂರ್ಯನ್ ಮೊಬೈಲ್ ಕೂಡ ಅದೇ ರಾಗ ಹಾಡಿತ್ತು.
            ವಿನಯಚಂದ್ರ ಹಾಗೂ ಮಧುಮಿತಾ ಭಾರತದ ಗಡಿಯನ್ನು ನುಸುಳುವ ಬಗ್ಗೆ ತಯಾರಿ ಮಾಡಿಕೊಳ್ಳುವುದು ಸೂಕ್ತ ಎಂದು ಚಾಚಾ ಸಲಹೆ ನೀಡಿದ. ಭಾರತಕ್ಕೆ ತಲುಪಬೇಕೆಂದರೆ ಭೂಮಾರ್ಗದಲ್ಲಿ ಪ್ರಯಾಣ ಮಾಡುವುದು ಅನಿವಾರ್ಯ ಎಂದೂ ಸಲಿಂ ಚಾಚಾ ಹೇಳಿದ. ಎಷ್ಟೇ ಕಷ್ಟ ಬಂದರೂ ಇದ್ದುದರಲ್ಲಿ ಒಳ್ಳೆಯ ಮಾರ್ಗ ಇದು ಎಂದೂ ಹೇಳಿದ. ಸಲೀಂ ಚಾಚಾ ಪದೇ ಪದೆ ಭೂಮಾರ್ಗದ ಪ್ರಸ್ತಾಪವನ್ನು ಮಾಡಿದಾಗ ವಿನಯಚಂದ್ರನಿಗೆ ಸ್ವಲ್ಪ ಭರವಸೆ ಮೂಡಿತು. ಸಲೀಂ ಚಾಚಾ ಅಷ್ಟು ನಿರ್ದಿಷ್ಟವಾಗಿ ಹೇಳುತ್ತಿದ್ದಾನೆ ಎಂದಾದರೆ ಆತ ಖಂಡಿತವಾಗಿಯೂ ಭೂಮಾರ್ಗದ ಕುರಿತು ಯಾರ ಬಳಿಯೋ ಮಾತನಾಡಿರುತ್ತಾನೆ. ಆದ್ದರಿಂದ ಸಲೀಂ ಚಾಚಾನ ಸಹಾಯ ಕೇಳಬೇಕು ಹಾಗೂ ಅವನು ಹೇಳಿದಂತೆ ನಡೆಯಬೇಕು ಎಂದುಕೊಂಡ. ವಿನಯಚಂದ್ರ ಯಾವ ಮಾರ್ಗದ ಮೂಲಕ ಭಾರತದೊಳಗೆ ನುಸುಳುವುದು ಎನ್ನುವದನ್ನು ಚಾಚಾನ ಬಳಿ ಚರ್ಚಿಸಿದ.
           ಮಾತನಾಡಲು ಆರಂಭಿಸಿದ ಚಾಚಾ `ಬೇಟಾ.. ನಿನಗೆ ಭಾರತದೊಳಕ್ಕೆ ನುಸುಳಲು ನೂರಾರು ಮಾರ್ಗಗಳಿವೆ. ಪಶ್ಚಿಮ ಬಂಗಾಲದ ಗಡಿಯಲ್ಲಿ ನುಸುಳಬಹುದು. ಅಸ್ಸಾಂ ಗಡಿಯಲ್ಲಿ ಒಳಹೋಗಬಹುದು. ಅದಿಲ್ಲವಾದರೆ ಮೇಘಾಲಯ, ತ್ರಿಪುರಗಳ ಮೂಲಕವೂ ಭಾರತಕ್ಕೆ ತೆರಳಬಹುದು. ಆದರೆ ಯಾವುದು ಒಳ್ಳೆಯದು ಎನ್ನುವ ಆಯ್ಕೆ ನಿನ್ನದು..' ಎಂದರು.
           `ಗೊತ್ತಿಲ್ಲ ಚಾಚಾ.. ನನಗೆ ಏನೂ ತೋಚುತ್ತಿಲ್ಲ.. ನನಗೆ ಗಡಿ ನುಸುಳುವುದೂ ಗೊತ್ತಿಲ್ಲ. ಹಿಂಸಾ ಪೀಡಿತ ಸ್ಥಳಗಳಲ್ಲಿ ಓಡಾಡಿಯೂ ಗೊತ್ತಿಲ್ಲ. ಗಡಿ ನುಸುಳುವುದು ಸುಲಭದ ಕೆಲಸವೇ? ಭಾರತೀಯ ಸೈನ್ಯದವರು ಸದಾ ಕಾಲ ಕಾಯುತ್ತಿರುತ್ತಾರೆ. ಗಡಿ ನುಸುಳುವ ಸಂದರ್ಭದಲ್ಲಿ ನಾವು ಸಿಕ್ಕಿಬಿದ್ದರೆ ಏನು ಮಾಡುವುದು? ಅವರು ಕೊಲ್ಲಬಹುದು ಅಂಥವಾ ಬಂಧಿಸಬಹುದು ಅಲ್ಲವಾ? ನಮ್ಮ ಈ ಪ್ರಯತ್ನ ಯಶಸ್ವಿಯಾಗುತ್ತದೆ ಎಂದು ಹೇಗೆ ಹೇಳುತ್ತೀಯಾ?' ವಿನಯಚಂದ್ರ ಆತಂಕದಿಂದ ಕೇಳಿದ್ದ.
           `ಪಶ್ಚಿಮ ಬಂಗಾಲದಲ್ಲಿ ನುಸುಳಬಹುದು. ಆದರೆ ಇತ್ತೀಚೆಗೆ  ಆ ಭಾಗದಲ್ಲಿ ಉದ್ವಿಘ್ನ ಪರಿಸ್ಥಿತಿ ಇದೆಯಂತೆ. ಅಲ್ಲದೇ ಅಲ್ಲಿ ಕಟ್ಟುನಿಟ್ಟಿನ ಪಹರೆ ಕೂಡ ಹಾಕಲಾಗಿದೆ ಎಂದು ಹೇಳುತ್ತಾರೆ. ತ್ರಿಪುರಾ ಹಾಗೂ ಮೇಘಾಲಯದ ಮೂಲಕ ಹೋಗಬೇಕೆಂದಾದರೆ ಆ ಮಾರ್ಗದಲ್ಲಿ ಕಡಿದಾದ ಗುಡ್ಡಗಳಿವೆ. ಚಿತ್ತಗಾಂಗ್, ಮೇಘಾಲಯ, ತುರಾ ಗುಡ್ಡದ ಶ್ರೇಣಿಗಳನ್ನು ನೀವು ದಾಟಲೇಬೇಕು. ಬಹಳ ಕಷ್ಟ ಪಡಬೇಕಾಗುತ್ತದೆ. ಇವೆಲ್ಲವುಗಳಿಗಿಂತ ಅಸ್ಸಾಂ ಗಡಿಯಲ್ಲಿ ನುಸುಳುವುದೇ ಸುಲಭ. ಬಹುಶಃ ಭಾರತದಲ್ಲಿ ಅತ್ಯಂತ ಹೆಚ್ಚು ಬಾಂಗ್ಲಾದೇಶಿಯರು ನುಸುಳುವ ಜಾಗ ಎಂದರೆ ಅಸ್ಸಾಂ ಗಡಿಯೇ ಇರಬೇಕು. ಇಲ್ಲಿಂದ ನೀವು ಸುಲಭವಾಗಿ ಹೋಗಬಹುದು.. ನನಗೆ ಒಬ್ಬ ಏಜೆಂಟ್ ಗೊತ್ತಿದ್ದಾನೆ. ಬಾಂಗ್ಲಾದಿಂದ ಭಾರತಕ್ಕೆ ಯಾರಾದರೂ ನುಸುಳಬೇಕು ಎಂದಾದರೆ ಅವರನ್ನು ಭಾರತಕ್ಕೆ ಕಳಿಸುವ ಕೆಲಸ ಆತನದ್ದು. ಈಗ ನಾನು ಅವರನ್ನು ಭೇಟಿಯಾಗಿ ಬಂದಿದ್ದೇನೆ.. ಎಷ್ಟೋ ಜನ ಹೀಗೆ ಭಾರತದ ಗಡಿಯೊಳಕ್ಕೆ ನುಸುಳುತ್ತಿದ್ದಾರೆ. ನುಸುಳಲು ಕಾಯುತ್ತಲೂ ಇದ್ದಾರೆ. ಅವರಲ್ಲಿ ನೀವೂ ಕೂಡ ಇಬ್ಬರು. ಪ್ರಯತ್ನಿಸುವುದರಲ್ಲಿ ತಪ್ಪಿಲ್ಲ. ಗುಂಡು ಹೊಡೆಯಲಾರರು ಎನ್ನುವ ನಂಬಿಕೆ ನನಗಿದೆ. ಸಿಕ್ಕಿಬಿದ್ದರೆ ನೀನು ನಿನ್ನ ಎಲ್ಲ ವಿವರಗಳನ್ನು ಹೇಳಿದರಾಯಿತು. ಆಗ ಭಾರತದ ಸೈನ್ಯವೇ ನಿನ್ನ ಸಹಾಯಕ್ಕೆ ಧಾವಿಸಬಹುದು ಅಲ್ಲವಾ' ಎಂದರು ಸಲೀಮ ಚಾಚಾ.
            ಭಾರತಕ್ಕೆ ನುಸುಳಬೇಕೆಂದರೂ ಎಷ್ಟೆಲ್ಲ ಜಾಲಗಳು ಕೆಲಸ ನಿರ್ವಹಿಸುತ್ತವಲ್ಲ. ಏನೆಲ್ಲ ಸರ್ಕಸ್ ಮಾಡಬೇಕಾಗುತ್ತದಲ್ಲ ಎಂದುಕೊಂಡ ವಿನಯಚಂದ್ರ ತಾನು ಭಾರತೀಯನೇ ಆದರೂ ತನ್ನ ತಾಯ್ನೆಲ ಭಾರತಕ್ಕೆ ನುಸುಳಿ ಹೋಗುವಂತಹ ಪರಿಸ್ಥಿತಿ ಬಂದೊದಗಿತಲ್ಲ ಎಂಬ ಬಾವ ಕಾಡಿತು. ತನ್ನೊಳಗೆ ನಸುನಕ್ಕ. ಸೀದಾ ಮಧುಮಿತಾಳ ಬಳಿ ವಿಷಯವನ್ನು ತಿಳಿಸಿದ. ಆದರೆ ಆಕೆಯಿಂದ ಬಂದ ಉತ್ತರ ಮಾತ್ರ ವ್ಯತಿರಿಕ್ತವಾಗಿತ್ತು. ತನ್ನ ಕುಟುಂಬದ ಸದಸ್ಯರನ್ನೆಲ್ಲ ಕಳೆದುಕೊಂಡಿದ್ದ ಮಧುಮಿತಾ ಭಾರತಕ್ಕೆ ಬರಲು ಸುತಾರಾಂ ಒಪ್ಪಲಿಲ್ಲ. ವಿನಯಚಂದ್ರ ಒತ್ತಾಯ ಮಾಡುತ್ತಲೇ ಇದ್ದ. ಅದಕ್ಕೆ ಮಧುಮಿತಾ ನಕಾರಾತ್ಮಕವಾಗಿ ಉತ್ತರ ನೀಡುತ್ತಲೇ ಇದ್ದಳು. ವಿಷಯವನ್ನು ತಿಳಿದ ಸಲೀಂ ಚಾಚಾ ಬಂದು ಒಪ್ಪಿಸಿದ ನಂತರವೇ ಮಧುಮಿತಾ ಭಾರತಕ್ಕೆ ತೆರಳಲು ಒಪ್ಪಿಕೊಂಡಿದ್ದು. ಈ ಸಂದರ್ಭದಲ್ಲಿ ವಿನಯಚಂದ್ರನಿಗೆ ಸಲೀಂ ಚಾಚಾ ಒಬ್ಬ ಸಂತನಂತೆಯೂ, ಪ್ರೀತಿಯಿಂದ ಮೈದಡವುವ ಅಜ್ಜನಂತೆಯೂ, ಯಾವತ್ತೋ ಬಿಟ್ಟು ಹೋದ ಗೆಳೆಯನಂತೆಯೂ ಕಂಡ. ಮುಸ್ಲಿಂ ರಾಷ್ಟ್ರದಲ್ಲಿ ಹಿಂದೂಗಳಾದ ತಮ್ಮನ್ನು ಕಾಪಾಡಲು ಒಬ್ಬ ಮುಸ್ಲಿಂ ಎಷ್ಟೆಲ್ಲ ಸಹಾಯ ಮಾಡುತ್ತಾನೆ ಎಂದುಕೊಂಡ ವಿನಯಚಂದ್ರ. ಹೇಗಾದರೂ ಮಾಡಿ ತಮ್ಮನ್ನು ಭಾರತಕ್ಕೆ ಕಳಿಸಬೇಕೆಂದು ಪ್ರಯತ್ನಿಸುತ್ತಿರುವ ಸಲೀಂ ಚಾಚಾನ ಗುಣ ಇಷ್ಟವಾಯಿತು. ಬಹಳ ಸೆಳೆಯಿತು.

***
           ಇದಾದ ನಂತರ ಪ್ರತಿ ಕ್ಷಣ, ಪ್ರತಿ ಸಮಯದಲ್ಲೂ ಭಾರತಕ್ಕೆ ಹೇಗೆ ಹೋದರೆ ಚನ್ನ, ಯಾವ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಚರ್ಚೆ ಸಲೀಂ ಚಾಚಾನ ಮನೆಯಲ್ಲಿ ಆರಂಭವಾಯಿತು. ಪ್ರತಿಯೊಬ್ಬರೂ ತಮಗೆ ತಿಳಿದ ಅಂಶಗಳನ್ನು ತಿಳಿಸುತ್ತಿದ್ದರು. ಢಾಕಾದಿಂದ ಬ್ರಹ್ಮಪುತ್ರ ನದಿಗುಂಟ ಸಾಗಿ, ಅಲ್ಲಿಂದ ಸೀದಾ ಅಸ್ಸಾಂ ಗಡಿಗೆ ಹೋಗಿ ಒಳ್ಳೆಯ ಅವಕಾಶಕ್ಕಾಗಿ ಕಾಯುವುದು, ಚಿಕ್ಕ ಅವಕಾಶ ಸಿಕ್ಕ ತಕ್ಷಣ ಭಾರತಕ್ಕೆ ದಾಟಿಕೊಂಡು ಬಿಡುವುದು ಎನ್ನುವುದು ಎಲ್ಲರ ಸಲಹೆಯಾಗಿತ್ತು. ಪ್ರತಿಯೊಬ್ಬರೂ ಈ ಸಲಹೆಯನ್ನು ಒಪ್ಪಿಕೊಂಡಿದ್ದರು. ಇದಕ್ಕಾಗಿ ಎಲ್ಲ ತಯಾರಿಗಳನ್ನೂ ಕೈಗೊಳ್ಳಲಾಯಿತು. ಹಿಂಸಾಪೀಡಿತ ಬಾಂಗ್ಲಾದೇಶದಿಂದ ಭಾರತದ ಗಡಿಯವರೆಗೆ ತೆರಳುವುದು ಸುಲಭದ ಕೆಲಸವಾಗಿರಲಿಲ್ಲ. ಅದರಲ್ಲೂ ಹಿಂದೂಗಳಾಗಿದ್ದ ಇವರ ಬಗ್ಗೆ  ಚಿಕ್ಕ ಸಂದೇಹ ಬಂದರೂ ಸಾವನ್ನಪ್ಪುವುದು ಗ್ಯಾರಂಟಿಯಾಗಿತ್ತು. ತಲೆಮರೆಸಿಕೊಂಡು, ಮುಸ್ಲೀಮನಂತೆ ವೇಷ ಧರಿಸಿಕೊಂಡೋ ಅಥವಾ ಇನ್ಯಾವುದೋ ಬಗೆಯಲ್ಲಿ ಹೋಗುವುದು ಅನಿವಾರ್ಯವಾಗಿತ್ತು. ಅದಕ್ಕಾಗಿಯೇ ವಿನಚಂದ್ರ ಗಡ್ಡ ಬಿಡಲು ತೀರ್ಮಾನಮಾಡಿದ್ದ. ಪ್ರತಿದಿನ ಮಾಡುತ್ತಿದ್ದ ಶೇವಿಂಗನ್ನು ನಿಲ್ಲಿಸಿದ್ದ. ಮೂರನೇ ದಿನಕ್ಕೆಲ್ಲ ಸಾಕಷ್ಟು ಗಡ್ಡ ಬೆಳೆದಿತ್ತು. ಸಲೀಂ ಚಾಚಾ ವಿನಯಚಂದ್ರ ಮುಸ್ಲೀಮನಂತೆ ಕಾಣಲು ಏನೇನು ಬೇಕೋ ಅದೆಲ್ಲವನ್ನೂ ಮಾಡಿದ್ದರು.
             ಬಾಂಗ್ಲಾದ ಫಾಸಲೆಯಲ್ಲಿ ಇದ್ದಾಗ ವಿನಯಚಂದ್ರ ಹಾಗೂ ಮಧುಮಿತಾ ಇಬ್ಬರೂ ಮುಸ್ಲೀಂ ಹೆಸರನ್ನು ಇಟ್ಟುಕೊಳ್ಳಬೇಕು. ಇಬ್ಬರೂ ಗಂಡ ಹೆಂಡತಿಯರೆಂದು ಎಲ್ಲರ ಬಳಿಯೂ ಹೇಳಿಕೊಳ್ಳಬೇಕು ಎಂದು ಸಲೀಂ ಚಾಚಾನ ಮಗ ಸಲಹೆ ನೀಡಿದ್ದರು. ಎಲ್ಲರಿಗೂ ಈ ಸಲಹೆ ಹೌದೆನ್ನಿಸಿತ್ತು. ತಕ್ಷಣ ಆ ಕುರಿತು ಎಲ್ಲರೂ ಸಿದ್ಧತೆ ನಡೆಸಲಾರಂಭಿಸಿದರು. ಸಲೀಂ ಚಾಚಾ ವಿನಯಚಂದ್ರ ಹಾಗೂ ಮಧುಮಿತಾಳಿಗೆ ಮದುವೆ ಮಾಡಲು ನಿರ್ಧರಿಸಿದ್ದರು. ಈ ಬಗ್ಗೆ ವಿನಯಚಂದ್ರನಿಗೆ ತಿಳಿಸಿದಾಗ ಆತನಿಗೆ ಮನಸ್ಸಿನೊಳಗೆ ಖುಷಿಯಾಗಿತ್ತು. ಆದರೆ ಭಾರತದಲ್ಲಿ ತನ್ನ ಮನೆಯಲ್ಲಿ ಮಧುಮಿತಾಳನ್ನು ಮದುವೆಯಾಗಬೇಕು ಎಂದುಕೊಂಡಿದ್ದವನಿಗೆ ಬಾಂಗ್ಲಾದೇಶದ ರಾಜಧಾನಿ ಢಾಕಾದ ನಡುವಿನ ಯಾವುದೋ ಒಂದು ಮೂಲೆಯಲ್ಲಿ ತಂದೆ, ತಾಯಿ, ಬಂಧು, ಬಳಗ ಯಾರೂ ಇಲ್ಲದೇ ಮದುವೆಯಾಗಬೇಕಾಗುತ್ತದೆಯಲ್ಲಾ ಎನ್ನುವುದೂ ಕಾಡಿತು. ಮದುಮಿತಾಳ ಬಳಿ ಈ ವಿಷಯ ತಿಳಿಸಿದಾಗ ಆಕೆ ಆರಂಭದಲ್ಲಿ ಮಾತನಾಡಿರಲಿಲ್ಲ. ನಂತರ ಆಕೆ ಕೂಡ ವಿನಯಚಂದ್ರನ ಮನಸ್ಸಿನಲ್ಲಿ ಮೂಡಿದ್ದ ಅಂಶಗಳನ್ನೇ ತಿಳಿಸಿದಾಗ ವಿನಯಚಂದ್ರ ಒಮ್ಮೆ ಅಚ್ಚರಿ ಹೊಂದಿದ್ದ. ಎಷ್ಟು ಚನ್ನಾಗಿ ಆಲೋಚನೆ ಮಾಡುತ್ತಾಳಲ್ಲ ಇವಳು. ತನಗೆ ಅನುರೂಪಳು ಎಂದುಕೊಂಡ.
                ಕೊನೆಗೆ ಸಲೀಂ ಚಾಚಾ ನೆ `ಇಲ್ಲಿ ಮದುವೆಯ ಶಾಸ್ತ್ರ ಆಗಲಿ. ಭಾರತಕ್ಕೆ ಹೋದ ನಂತರ ಶಾಸ್ತ್ರೋಕ್ತವಾಗಿ ನಿಮಗೆ ಬೇಕಾದ ಹಾಗೆ ಮದುವೆಯಾಗಿ. ಇಲ್ಲಿ ತೋರಿಕೆಗಾದರೂ ಮದುವೆಯಾಗಲೇ ಬೇಕಾಗುತ್ತದೆ..' ಎಂದಾಗ ವಿಧಿಯಿಲ್ಲದೇ ಒಪ್ಪಿಕೊಳ್ಳಬೇಕಾಯಿತು. ಕೊನೆಗೆ ಸಲೀಂ ಚಾಚಾನೆ ಯಾವ ಯಾವುದೋ ಕಡೆಗೆ ತೆರಳಿ ಅದೇನೇನೋ ಶಾಸ್ತ್ರಗಳನ್ನು ಮಾಡಿಸಿದರು. ದರ್ಗಾಕ್ಕೂ ಕರೆದೊಯ್ದರು. ಅಲ್ಲೆಲ್ಲ ತಮಗೆ ಗೊತ್ತಿದ್ದ ಶಾಸ್ತ್ರಗಳ ಮೂಲಕ ಪೂಜೆಯನ್ನೂ ಮಾಡಿಸಿದರು. ಮಧುಮಿತಾ ದಿನದಿಂದ ದಿನಕ್ಕೆ ಗೆಲುವಾಗಿದ್ದಳು. ತಂದೆ, ತಾಯಿಗಳನ್ನು, ಬಂಧು ಬಳಗವನ್ನು ಕಳೆದುಕೊಂಡಿದ್ದ ನೋವು ನಿಧಾನವಾಗಿ ಮಾಸುತ್ತಿತ್ತು. ಅದೇ ಜಾಗದಲ್ಲಿ ವಿನಯಚಂದ್ರನ ಕಡೆಗೆ ಒಲವು ಇಮ್ಮಡಿಯಾಗುತ್ತಿತ್ತು. ಕಡೆಗೆ ಇನ್ನೊಂದು ವಾರದ ನಂತರ ಭಾರತಕ್ಕೆ ತೆರಳುವುದು ಎನ್ನುವುದು ನಿಶ್ಚಯವಾಯಿತು. ಅದಕ್ಕೆ ಕೊನೆಯ ಹಂತದ ತಯಾರಿಯನ್ನು ಕೈಗೊಳ್ಳಲಾಯಿತು.
            ಭಾರತದ ಗಡಿಯವರೆಗೆ ತೆರಳುವ ವರೆಗೆ ಬೇಕಾಗುತ್ತದೆ ಎನ್ನುವ ಕಾರಣಕ್ಕಾಗಿ ಸಲೀಂ ಚಾಚಾನ ಮನೆಯ ಸದಸ್ಯರು ಜೋಳದ ರೊಡ್ಡಿ, ಅದಕ್ಕೆ ಖಡಕ್ ಕಾರದ ಚಟ್ನಿ ಸೇರಿದಂತೆ ಹಲವಾರು ಅಗತ್ಯದ ವಸ್ತುಗಳನ್ನು ತಯಾರಿಸಿಕೊಟ್ಟಿದ್ದರು. ಸಲೀಂ ಚಾಚಾ ತಾನೂ ವಿನಯಚಂದ್ರ ಹಾಗೂ ಮಧುಮಿತಾಳ ಜೊತೆಗೆ ಭಾರತದ ಗಡಿಯವರೆಗೆ ಬಿಟ್ಟು ಬರುವುದಾಗಿ ತಯಾರಾಗಿದ್ದ. ಯಾರು ಬೇಡವೆಂದರೂ ಕೇಳದೇ ಹೊರಟು ನಿಂತಿದ್ದ. ತಾನು ಮಾತನಾಡಿದ್ದ ಏಜೆಂಟನನ್ನು ಕರೆದು ಪರಿಚಯಿಸಿ, ಭಾರತಕ್ಕೆ ಕರೆದುಕೊಂಡು ಹೋಗುವ ಬಗ್ಗೆ ತಿಳಿಸಿದ್ದ. ಸಲೀಂ ಚಾಚಾನ ಕಾರ್ಯವೈಖರಿ ನೋಡಿ ವಿನಯಚಂದ್ರನ ಮನಸ್ಸು ತುಂಬಿಬಂದಿತ್ತು. ಕಣ್ಣಂಚಿನಲ್ಲಿ ಹನಿ ಮೂಡಿದ್ದವು.

(ಮುಂದುವರಿಯುತ್ತದೆ..)

No comments:

Post a Comment