Saturday, July 5, 2014

ಬೆಂಗಳೂರು ಬೈಟ್ಸ್..

(ರಾತ್ರಿ ವೇಳೆ ಬೆಂಗಳೂರು ಜಗಮಗ)
ಘಟನೆ-1
      ನಾನು ಬೆಂಗಳೂರಿಗೆ ಬಂದ ಹೊಸತು. ಉದ್ಯೋಗಕ್ಕಾಗಿ ಬೆಂಗಳೂರನ್ನು ಅಲೆಯುತ್ತಿದ್ದೆ. ಓದಿದ್ದು ಜರ್ನಲಿಸಂ ಆದರೂ ಹೋದ ತಕ್ಷಣ ಜಾಬ್ ಸಿಕ್ಕಿಬಿಡುತ್ತದೆಯೇ? ಎಲ್ಲ ಪೇಪರ್ ಹಾಗೂ ಟಿ.ವಿ. ಆಫೀಸುಗಳ ಅಡ್ರೆಸ್ ಡೌನ್ ಲೋಡ್ ಮಾಡಿಕೊಂಡು ಎಲ್ಲ ಆಫೀಸುಗಳಿಗೂ ರೆಸ್ಯೂಂ ಕೊಟ್ಟು ಬರುತ್ತಿದ್ದೆ. ಬಂದ ಆರಂಭದಲ್ಲಿ ನಾನು ಉಳಿದುಕೊಂಡಿದ್ದು ನನ್ನ ದೊಡ್ಡಮ್ಮನ ಮಗ ಗುರುಪ್ರಸಾದನ ಮನೆಯಲ್ಲಿ. ಆತ ಮನೆ ಮಾಡಿದ್ದೋ ಪೀಣ್ಯದ ಒಳಗಿರುವ ತಿಗಳರ ಪಾಳ್ಯದಲ್ಲಿ. ಮೆಜೆಸ್ಟಿಕ್ಕಿನಿಂದ ಅನಾಮತ್ತು 16-18 ಕಿ.ಮಿ ದೂರ. ನಾನು ಪೀಣ್ಯಕ್ಕೆ ಬಂದು, ಅಲ್ಲಿಂದ ಜಾಲಳ್ಳಿ ಕ್ರಾಸ್ ಮಾರ್ಗವಾಗಿ ಮೆಜೆಸ್ಟಿಕ್ಕೋ ಅಥವಾ ಇನ್ಯಾವುದೋ ಸ್ಥಳಕ್ಕೆ ಹೋಗುತ್ತಿದ್ದೆ. ನನಗೆ ಅಪ್ಪಿತಪ್ಪಿಯೂ ಸುಂಕದಕಟ್ಟೆ ಮೂಲಕ ಪೀಣ್ಯಕ್ಕೆ ಬರಲು ಇನ್ನೊಂದು ಮಾರ್ಗವಿದೆ ಎನ್ನುವುದು ಗೊತ್ತಿಲ್ಲ. ಒಂದು ದಿನ ಯಾವುದೋ ಆಫೀಸಿಗೆ ಹೋದವನು ಗುರಣ್ಣನ ಮನೆಗೆ ಮರಳುತ್ತಿದ್ದೆ. ಬಂದಿದ್ದು ಕೆ. ಆರ್. ಮಾರ್ಕೇಟಿಗೆ. ಅಲ್ಲಿ ಪೀಣ್ಯ 2 ಸ್ಟೇಜ್ ಬಸ್ಸು ಕಂಡಿತು ಹತ್ತಿ ಕುಳಿತೇಬಿಟ್ಟೆ. ಆ ಬಸ್ಸು ಮೈಸೂರು ರೋಡು, ಅಲ್ಲಿ ಇಲ್ಲಿ ಅಂತ ಸುತ್ತಾಡಿಕೊಂಡು ಸುಮ್ಮನಳ್ಳಿ ಸರ್ಕಲ್ ದಾಟಿ ಬಂದಿತು. ನನಗೆ ಜಾಲಹಳ್ಳಿ ಕ್ರಾಸ್ ರಸ್ತೆ ಬಿಟ್ಟರೆ ಬೇರೆ ಗೊತ್ತಿಲ್ಲದ ಕಾರಣ ಎಲ್ಲೋ ಬಂದು ಬಿಟ್ಟೆನಲ್ಲ ಎಂದುಕೊಂಡೆ. ಕಂಡಕ್ಟರ್ ನನ್ನು ಕೇಳಲು ಮರ್ಯಾದಿ. ಸುಮ್ಮನೆ ಕುಳಿತಿರುವುದನ್ನು ಬಿಟ್ಟು ಸುಂಕದ ಕಟ್ಟೆಯಲ್ಲಿ ಇಳಿದೆ. ಇನ್ನೇನು ಮಾಡುವುದು? ಮತ್ತೆ ಅಲ್ಲಿ ಮೆಜೆಸ್ಟಿಕ್ಕಿಗೆ ಹೋಗುವ ಬಸ್ಸನ್ನು ಹತ್ತಿ ಅಲ್ಲಿಂದ ಜಾಲಹಳ್ಳಿ ಕ್ರಾಸ್ ಮೂಲಕ ಪೀಣ್ಯಕ್ಕೆ ಹೋದೆ. ಆ ದಿನ ಮಾತ್ರ ನಾನು ಕೊಂಕಣವನ್ನು ಸುತ್ತಿ ಸುತ್ತಿ ಮೈಲಾರಕ್ಕೆ ಬಂದ ಅನುಭವ. ಪುಣ್ಯಕ್ಕೆ ಡೈಲಿ ಪಾಸ್ ಇದ್ದ ಕಾರಣ ದುಡ್ಡಿಗೆ ಚಕ್ರ ಬೀಳಲಿಲ್ಲ ಅನ್ನಿ. ಈಗಲೂ ಬೆಂಗಳೂರು ಅಂದ ತಕ್ಷಣ ಈ ಘಟನೆ ನೆನಪಾಗುತ್ತಿರುತ್ತದೆ.

ಘಟನೆ -2
       ಬೆಂಗಳೂರಿಗೆ ಹೋದ ಮೊದ ಮೊದಲಲ್ಲಿ ನನ್ನ ಹನೆ ಬರಹವೋ ಅಥವಾ ನಾನು ಅರ್ಜೆಂಟು ಮಾಡಿಕೊಳ್ಳುವುದು ಜಾಸ್ತಿಯೋ ಕಾರಣಗಳು ಗೊತ್ತಿಲ್ಲ. ನೋಡದೇ ಮಾಡದೇ ಬಸ್ಸು ಹತ್ತುವುದಕ್ಕೇನೋ ಎಲ್ಲ ಬಸ್ಸುಗಳೂ ನನ್ನನ್ನು ಕೆ. ಆರ್. ಮಾರ್ಕೇಟಿಗೆ ಕರೆದುಕೊಂಡು ಹೋಗಿ ಬಿಡುತ್ತಿದ್ದವು. ನಾನು ಬಹಳಷ್ಟು ಸಾರಿ ಪ್ರಯತ್ನಿಸಿದರೂ ಮೆಜೆಸ್ಟಿಕ್ಕಿಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಯಾವುದೇ ಬಸ್ಸು ಮಾರ್ಕೇಟಿಗೆ ಒಯ್ದು ನನ್ನನ್ನು ಬಿಡುತ್ತಿತ್ತು. ಇಲ್ಲೂ ಸಹ ಬೇರೆಯವರನ್ನು ಕೇಳಲು ಮುಜುಗರ ಪಟ್ಟುಕೊಂಡ ನಾನು ಪದ್ಮನಾಭ ನಗರಕ್ಕೆ ಹೋಗುವ ಒಂದು ಬಸ್ಸನ್ನು ಹತ್ತಿ ಕುಳಿತೆ. ಅಲ್ಲಿಗೆ ಹೋಗಿ ಅಲ್ಲಿಂದ ಮೆಜೆಸ್ಟಿಕ್ ಬೋರ್ಡು ಕಾಣುವ ಬಸ್ಸನ್ನು ಹತ್ತಿ ವಾಪಾಸು ಬರುವುದು ನನ್ನ ಐಡಿಯಾ. ಸರಿ ಬಸ್ಸು ಸೀದಾ ಪದ್ಮನಾಭ ನಗರಕ್ಕೆ ಹೋಯಿತು. ಅಲ್ಲಿ ಇಳಿದೆ. ಇಳಿದವನೇ ಎದುರಿಗೆ ಯಾವುದೋ ಬಸ್ಸು ಹೋಗುತ್ತಿತ್ತು ಬೋರ್ಡು ನೋಡಿದೆ. `ಕೆಂ.ಬ.ನಿ.' ಅಂತ ಇತ್ತು. ಓಡಿ ಬಂದು ಹತ್ತಲು ಯತ್ನಿಸಿದೆ ಆಗಲಿಲ್ಲ. ಕೊನೆಗೆ ಕೆಂ.ಬ.ನಿ.ಯನ್ನು ಬಾಯಲ್ಲಿ ಉರು ಹೊಡೆದುಕೊಂಡೆ. ಮುಂದೊಂದು ಬಸ್ ಬಂತು. ಆಗ ನನಗೆ ಮೆಜೆಸ್ಟಿಕ್ ನೆನಪಾಗಲಿಲ್ಲ. ಬದಲಾಗಿ `ಕೆಂ.ಬ.ನಿ. ಗೆ ಹೋಗುತ್ತಾ ಸಾರ್..'  ಎಂದು ಕಂಡಕ್ಟರ್ ಬಳಿ ಕೇಳಿದೆ. ಆತ ನನ್ನನ್ನು ಫುಲ್ ವೀಕ್ಷಣೆ ಮಾಡಿ ಸುಮ್ಮನಾದ. ನಾನು ಮತ್ತೆ ಕೇಳಿದೆ. ಆತ ಹಂಗಂದ್ರೆ ಯಾವುದು? ಎಲ್ಲಿ ಬರುತ್ತೆ ಅಂದ. ಥತ್... ಕೆಂ.ಬ.ನಿ. ಹೋಗೋದು ಹೆಂಗಪ್ಪಾ ಎಂದುಕೊಂಡೆ. ಕೊನೆಗೆ ಅದ್ಯಾವುದೋ ಬಸ್ಸಿಗೆ ಮೆಜೆಸ್ಟಿಕ್ ಅಂತ ಬೋರ್ಡಿತ್ತು. ಅದನ್ನು ಹತ್ತಿ ಬರುವ ವೇಳೆಗೆ ಕೆಂಬನಿ ಕಣ್ಣಲ್ಲಿ ಕಂಬನಿ ತರಿಸುವುದೊಂದು ಬಾಕಿ

ಘಟನೆ-3
         ಕೆಲಸಕ್ಕೆ ಸೇರಿ ಒಂದೆರಡು ತಿಂಗಳಾಗಿತ್ತೇನೋ. ರಾತ್ರಿ ಆಫೀಸು ಮುಗಿಸಿಕೊಂಡು ರೂಮಿಗೆ ಬರಬೇಕು. ರೂಮಿದ್ದುದು ಹೆರೋಹಳ್ಳಿಯಲ್ಲಿ. 11 ಗಂಟೆಯ ನಂತರ ಮೆಜೆಸ್ಟಿಕ್ಕಿಗೆ ಬಂದರೆ ಅಲ್ಲಿಂದ ಹೆರೋಹಳ್ಳಿ ಮಾರ್ಗದಲ್ಲಿ ತೆರಳುವ ಬಸ್ಸುಗಳೇ ಇರುತ್ತಿರಲಿಲ್ಲ. ಕೊನೆಗೆ ವಿಜಯನಗರ ಬಸ್ಸಿಗೆ ಹೋಗಿ ಟೋಲ್ ಗೇಟಿನಲ್ಲಿ ಇಳಿದು ಮಾರ್ಕೇಟ್ ಕಡೆಯಿಂದ ಬರುವ ಬಸ್ಸಿಗೆ ಹತ್ತಬೇಕಿತ್ತು. ಹತ್ತಿ ಹೋದೆ. ಅದ್ಯಾವುದೋ ಪುಣ್ಯಾತ್ಮ ಸುಂಕದಕಟ್ಟೆಯಿಂದ ಹೆರೋಹಳ್ಳಿ ವರೆಗೆ ಬೈಕಿನಲ್ಲಿ ನನ್ನನ್ನು ಕರೆದುಕೊಂಡು ಹೋದ. ಹೆರೋಹಳ್ಳಿಯ ಬಸ್ ಸ್ಟಾಪ್ ಬಳಿ ಇಳಿದು ನೂರು ಮೀಟರ್ ದೂರಕ್ಕೆ ಸಾಗಿದರೆ ನಮ್ಮ ರೂಂ. ರೂಮೆಂದರೆ ರೂಮಲ್ಲ. ಅದೊಂದು ಔಟ್ ಹೌಸ್ ಎನ್ನಬಹುದು. ದೊಡ್ಡದೊಂದು ಕಂಪೌಂಡು. ಕಂಪೌಂಡಿನ ಸುತ್ತಮುತ್ತ ಹಲಸು, ಹುಣಸೆ ಮರಗಳು. ನಮ್ಮ ಓನರ್ ಶಿವಣ್ಣ ದೂರದ ಸಂಬಂಧಿ. ನಮ್ಮ ಕಂಪೌಂಡಿನೊಳಗೆ ಶಿವಣ್ಣ ಬಾಳೆಗಿಡಗಳು ಹಾಗೂ ಹಲಸಿನ ಮರಗಳನ್ನು ಬೆಳೆದಿದ್ದ. ಇದರಿಂದಾಗಿ ಸಹಜವಾಗಿಯೇ ಆ ಮನೆಗೆ ಒಂದು ಭೀತಿ ಆವರಿಸಿಕೊಂಡಿತ್ತು. ನಾನು ಬೈಕಿಳಿದು ರೂಮಿನ ಕಡೆಗೆ ಬರುತ್ತಿದ್ದೆ.  ಪಲ್ಸರ್ ಬೈಕಿನಲ್ಲಿ ಮೂವರು ಬಂದರು. ಬಂದವರೇ ನನ್ನ ಬಳಿ `ಹೇರೋಹಳ್ಳಿಗೆ ಹೋಗೋದು ಹೇಗೆ ಸಾ..' ಎಂದರು. ನಾನು ದೋಸ್ತರಿಗೆ, ಗೆಳತಿಯರಿಗೆಲ್ಲ ಮೆಸೇಜ್ ಮಾಡುತ್ತ ಬರುತ್ತಿದ್ದವನು ಇದೇ ಹೇರೋಹಳ್ಳಿ ಎಂದೆ. ಹೌದಾ ಎಂದರು. ಕೊನೆಗೆ ಆಂದ್ರಹಳ್ಳಿ ಹೇಗೆ ಎಂದರು. ಅವರು ಬಂದಿದ್ದು ಆಂದ್ರಹಳ್ಳಿ ಕಡೆಯಿಂದ ಎನ್ನುವುದು ಸ್ಪಷ್ಟವಾಗಿತ್ತು. ನನಗೆ ಅನುಮಾನವಾಗಿ ನಾನು ಅವರನ್ನು ನೋಡುತ್ತಿದ್ದಂತೆಯೇ ಬೈಕಿನಿಂದ ಇಳಿದ ಇಬ್ಬರಲ್ಲಿ ಒಬ್ಬಾತ ಬಂದು ನನ್ನನ್ನು ಹಿಂದಿನಿಂದ ಹಿಡಿದುಕೊಂಡ. ಒಬ್ಬಾತ ಮುಂದೆ ಬಂದ. ನನಗೆ ಗಾಭರಿ, ಭಯ. ಎಲ್ಲೋ ಸಿಕ್ಕಿ ಹಾಕಿಕೊಂಡೆನಲ್ಲ ಅಂತ. ರೂಮಿನಲ್ಲಿ ದೋಸ್ತ ಕಮಲಾಕರನಿದ್ದ. ಕೂಗಿದೆ. ಕೇಳಿಸಲಿಲ್ಲವೇನೋ. ಅವರು ನನ್ನನ್ನು ಹಿಡಿದುಕೊಂಡಿದ್ದರು. ಹೈಸ್ಕೂಲಿಗೆ ಹೋಗುವಾಗ ಗುರಣ್ಣನ ಒತ್ತಾಯಕ್ಕೆ ಮಣಿದು ಕುಂಗ್ ಫು ಕ್ಲಾಸಿಗೆ ಹೋಗಿದ್ದೆ. ಹಾಳಾದ್ದು ಇವರು ನನ್ನನ್ನು ಹಿಡಿದುಕೊಂಡಿದ್ದಾಗ ಕುಂಗ್ ಫು ನೆನಪಾಗಲೇ ಇಲ್ಲ. ಹಿಡಿದುಕೊಂಡು ಏನು ಮಾಡುತ್ತಿದ್ದರೋ ಗೊತ್ತಿಲ್ಲ. ನಾನು ಫುಲ್ ಕೊಸರಾಡಿದೆ. ಕೊಸರಾಡಿದ ಹೊಡೆತಕ್ಕೆ ನನ್ನ ಸೊಂಟದಲ್ಲಿದ್ದ ಬೆಲ್ಟು ಕಿತ್ತು ಬಂದಿತು. ಆತ ಬೆಲ್ಟನ್ನು ಹಿಒಡಿದುಕೊಂಡಿದ್ದ. ತಕ್ಷಣವೇ ನಾನು ಬ್ಯಾಗನ್ನು ಎಸೆದು ಓಡಿದೆ ಓಡಿದೆ.. ಓಡಿಯೇ ಓಡಿದೆ. ಬೈಕಿನ ಮೇಲೆ ಹಿಂಬಾಲಿಸಿ ಬರಲು ಯತ್ನಿಸಿದರು. ಅಷ್ಟರಲ್ಲಿ ಯಾವುದೋ ಬೈಕು ಬಂದ ಕಾರಣ ಅವರು ವಾಪಾಸಾದರು. ಮತ್ತೂ ಹದಿನೈದು ನಿಮಿಷದ ನಂತರ ನಾನು ಸುಧಾರಿಸಿಕೊಂಡು ವಾಪಾಸು ಬಂದು ನಿಧಾನಕ್ಕೆ ಯಾರಾದರೂ ಇದ್ದಾರಾ ಎಂದು ನೋಡಿಕೊಂಡು ರೂಪಿನೊಳಗೆ ಹೋದರೆ ಕಮಲಾಕರ ಜಸ್ಟ್ ಎದ್ದು ಕುಳಿತುಕೊಂಡಿದ್ದ. ನಾನು ಗಾಬರಿಯಾಗಿದ್ದನ್ನು ನೋಡಿ `ಎಂತಾ ಆತಲೆ..' ಎಂದ. ನಾನು ಹೇಳಿದೆ. `ಹೌದಾ.. ನಂಗೆ ಏನೋ ಧ್ವನಿ ಕೇಳಿಸಿತ್ತು. ಆದರೆ ಏನೋ ಎಲ್ಲೋ ಇರಬೇಕು ಎಂದುಕೊಂಡು ಸುಮ್ಮನೆ ಇದ್ದೆ..' ಎಂದ. ತಲೆ ರಿಮ್ಮೆಂದಿತು.
      ನನಗೆ ಈಗಲೂ ಅವರು ಯಾಕೆ ನನ್ನ ಮೇಲೆ ದಾಳಿ ಮಾಡಿದ್ದರು ಅರ್ಥವಾಗಿಲ್ಲ. ಕೈಯಲ್ಲಿದ್ದ ಮೊಬೈಲಿಗೋ ಅಥವಾ ನನ್ನ ಬಳಿ ದುಡ್ಡಿದೆ ಎಂದೋ ದಾಳಿ ಮಾಡಿದ್ದರೇನೋ. ಫುಲ್ ಟೈಟಾಗಿದ್ದರು. ಆದರೆ ದೇವರು ದೊಡ್ಡವನು ನಾನು ಬಚಾವಾಗಿದ್ದೆ. ಬೆಂಗಳೂರೆಂಬ ನಗರಿ ನೆನಪಾದಾಗ ಈ ಘಟನೆಯೂ ನನ್ನನ್ನು ಕಾಡುತ್ತಲೇ ಇರುತ್ತದೆ.

ಘಟನೆ-4
        ನಾನು ಇದ್ದ ರೂಮಿನ ಬಗ್ಗೆ ಮೇಲೆ ತಿಳಿಸಿದೆನಲ್ಲ. ಅದಕ್ಕೆ ಏಳಡಿಯ ದೊಡ್ಡ ಕಂಪೌಂಡು.  ಅದರೊಳಗೆ ಎರಡು ರೂಮುಗಳ ಮನೆ. ಕನಿಷ್ಟ 8 ಜನ ಆರಾಮಾಗಿ ಉಳಿಯುವಂತಹದ್ದು. ಆ ಕಂಪೌಂಡಿನೊಳಗೆ ನಾವು ಕ್ರಿಕೆಟ್ ಆಡುತ್ತಿದ್ದೆವು. ಅಷ್ಟು ದೊಡ್ಡದಿತ್ತು ಕಂಪೌಂಡ್ ಒಳಗೆ ಜಾಗ. ಅದರೊಳಗೆ ಬಾಳೆ ಗಿಡಗಳಿದ್ದವು, ಸೀತಾಫಲ, ಹಲಸಿನ ಗಿಡಗಳೂ ಇದ್ದವು. ವೆನಿಲ್ಲಾವನ್ನೂ ಹಾಕಿದ್ದರು ನಮ್ಮ ಓನರ್ ಶಿವಣ್ಣ. ನಾನು, ಕಮಲಾಕರ, ರಾಘವ, ಮೋಹನ, ಕಿಟ್ಟು ಅಲ್ಲಿ ಮೊದಲಿಗೆ ಉಳಿದುಕೊಂಡಿದ್ದೆವಾದರೂ ಕೊನೆಯಲ್ಲಿ ನಾನು ಹಾಗೂ ಕಮಲಾಕರ ಇಬ್ಬರೇ ಉಳಿಯುವಂತಾಗಿತ್ತು. ವೆನಿಲ್ಲಾ, ಸೀತಾಫಲ, ಹಲಸಿನ ಫಸಲನ್ನು ನೋಡಿಕೊಂಡು ಉಳಿಯುವ ಕರಾರಿನ ಮೇರೆಗೆ ಶಿವಣ್ಣನ ಔಟ್ ಹೌಸಿನಲ್ಲಿ ಉಳಿದಿದ್ದ ನಾವು ಅದಕ್ಕೆ ಪ್ರತಿಯಾಗಿ ಯಾವುದೇ ಬಾಡಿಗೆಯನ್ನು ನೀಡುತ್ತಿರಲಿಲ್ಲ. ನಮ್ಮ ವಟ್ ಹೌಸಿನ ಪಕ್ಕದ ಫಾರ್ಮ್ ಹೌಸಿನಲ್ಲಿದ್ದ ತಿಪ್ಪೇಶನ ಮನೆಯ ಬಾವಿಯಿಂದ ಹೇರಳ ನೀರು ಸಿಗುತ್ತಿತ್ತು. ತಿಂಗಳಿಗೆ 50 ರು. ದರ ನಿಗದಿ ಮಾಡಿದ್ದ. ಆತನಿಗೆ ಮಸ್ಕಾ ಹೊಡೆದು ಎರಡು ತಿಂಗಳಿಗೆ 50 ರು. ಕೊಟ್ಟು ನಾವು ನೀರು ಬಿಡಿಸಿಕೊಳ್ಳುತ್ತಿದ್ದೆವು. ಬೆಂಗಳೂರು ನಗರಿ ಬೆಳೆಯುತ್ತಿದ್ದ ಸ್ಥಳ ನಾವಿದ್ದ ಏರಿಯಾ ಎಂದರೂ ತಪ್ಪಿಲ್ಲ. ಅರ್ಧಮರ್ಧ ಕಾಲಿ ಜಾಗಗಳಿದ್ದವು. ಹೆಚ್ಚಿನವು ಸೈಟುಗಳಾಗಿದ್ದವು. ನಮ್ಮ ರೂಮಿನ ಬಳಿ ಒಬ್ಬ ವಯಸ್ಸಾದ ವ್ಯಕ್ತಿ ಬರುತ್ತಿದ್ದರು. ಅವರಿಗೆ ನಾವು ತಾತಪ್ಪ ಎಂದು ಕರೆಯುತ್ತಿದ್ದೆವು. ಅವರು ಬರುತ್ತಿದ್ದುದು ಎಲ್ಲೋ ಖಾಲಿ ಎಸ್ಟೇಟನ್ನು ನೋಡಿ ಟಾಯ್ಲೆಟ್ ಮಾಡುವುದಕ್ಕಾಗಿ. ಬಂದವರು ಅಪರೂಪಕ್ಕೊಮ್ಮೆ ನಮ್ಮ ಬಳಿ ಮಾತನಾಡುತ್ತಿದ್ದರು. ಉದ್ದಕ್ಕೆ ಕಪ್ಪಗಿದ್ದ ಆತನ ದೇಹದಲ್ಲಿ ತಲೆಗೂದಲು ಹಾಗು ಕುರುಚಲು ಗಡ್ಡ ಇವಷ್ಟೇ ಬೆಳ್ಳಗಿದ್ದವು. ತಮಿಳು ಮೂಲದವನಿರಬೇಕು. ಒಂದಿನ ಬಂದವನೇ ನಮ್ಮ ಕಂಪೌಂಡಿನಲ್ಲಿ ಬಿಟ್ಟಿದ್ದ ಹಲಸಿನ ಹಣ್ಣನ್ನು ಕೊಡಲು ಸಾಧ್ಯವೇ ಎಂದು ಕೇಳಿದ. ನಾನು ಕೊಡಲು ಒಪ್ಪಲಿಲ್ಲ. ಎರಡು ಮೂರು ದಿನಗಳ ಕಾಲ ಪದೇ ಪದೆ ಕೇಳಿದ. ನಾನು ಶಿವಣ್ಣನನ್ನು ಕೇಳಿ ಕೊಡಬೇಕು ಎನ್ನುತ್ತಲೇ ಇದ್ದೆ. ಕೊನೆಗೊಮ್ಮೆ ರಾತ್ರಿಯ ವೇಳೆ ಆ ತಾತಪ್ಪ ಹಲಸಿನ ಹಣ್ಣನ್ನು ಕದ್ದೊಯ್ಯಲು ಕಂಪೌಂಡ್ ಜಿಗಿದು ಬಂದಿದ್ದ. ಕಮಲಾಕರನ ಬಳಿ ಸಿಕ್ಕಿ ಹಾಕಿಕೊಮಡು ಬಿಟ್ಟ. ಕಮಲಾಕರ ದೊಡ್ಡ ರಾಡನ್ನು ಎತ್ತಿಕೊಂಡು ಹೊಡೆಯುವುದೊಂದು ಬಾಕಿ ಇತ್ತು. ಕೊನೆಗೆ ಆ ತಾತಪ್ಪ ಹೇಳಿದ್ದಿಷ್ಟು `ಈ ಜಮೀನೆಲ್ಲಾ ನಂದೇ ಆಗಿತ್ರೀ.. ಈಗ ಹತ್ತು ವರ್ಷಗಳ ಹಿಂದೆ ಇವನ್ನೆಲ್ಲ ಮಾರಾಟ ಮಾಡಿಬಿಟ್ಟೆ. ನಿಮ್ ಓನರ್ರು ನನ್ನ ಬಳಿ ತೆಗೆದುಕೊಂಡಿದ್ದು ಈ ಜಮೀನನ್ನು. ಪಕ್ಕದ ತಿಪ್ಪೇಶಿ ಇರುವ ಜಮೀನೂ ನನ್ನದೇ ಆಗಿತ್ತು. ಆರು ಎಕರೆ ಜಮೀನಿತ್ತು ನಂದು. ಈಗ ಏನೂ ಇಲ್ಲ. ಸ್ಲಮ್ ಏರಿಯಾದಲ್ಲಿ ಮಲಗಿಕೊಳ್ತಾ ಇದ್ದೀನಿ. ಈ ಜಮೀನು ನೋಡಿದಾಗೆಲ್ಲ ನನ್ನ ಹೊಟ್ಟೆಯಲ್ಲಿ ಬೆಂಕಿ ಹಾಕಿದ ಹಂಗಾಗ್ತದ್ರೀ. ಈ ಹಲಸಿನ ಹಣ್ಣನ್ನು ನನಗೆ ಕೊಡೋದಿಲ್ಲ ಅಂತ ನೀವು ಹೇಳ್ತೀರಿ. ಆದರೆ ಈ ಹಲಸಿನ ಗಿಡ ನೆಟ್ಟಿದ್ದು ನಾನೇ. ಆದರೆ ಅದನ್ನು ಈಗ ನಾನು ಕೊಯ್ಯುವ ಹಂಗಿಲ್ಲ.. ಛೇ..' ಎಂದುಕೊಂಡು ಹಲುಬಿದ. ಒಂದಾನೊಂದು ಕಾಲದಲ್ಲಿ ಜಮೀನಿನ ಒಡೆಯನಾಗಿದ್ದಾತ ತಕ್ಷಣಕ್ಕೆ ದುಡ್ಡು ಬರ್ತದೆ ಎನ್ನುವ ಕಾರಣಕ್ಕಾಗಿ ಇದ್ದ ಬದ್ದ ಜಮೀನನ್ನು ಮಾರಾಟ ಮಾಡಿ ಬಕ್ಕಾ ಬಾರಲು ಬಿದ್ದದ್ದ. ಆತನ ಬದುಕು ಮುಂಡಾಮೋಚಿತ್ತು. ಆತನ ಹಿಂದಿನ ಬದುಕಿಗೂ ಈಗಿನ ಬದುಕಿಗೂ ತಾಳೆ ಹಾಕಿ ನೋಡಲು ಪ್ರಯತ್ನಿಸಿದೆ. ನನ್ನ ಅರಿವಿಗೆ ನಿಲುಕಲಿಲ್ಲ. ಹಾಳಾಗಿ ಹೋಗು ಎಂದು ಒಂದು ಹಲಸಿನ ಹಣ್ಣನ್ನು ಕೊಟ್ಟು ಮತ್ತೆ ಇತ್ತ ಕಡೆ ಬರಬೇಡ ಎಂದು ತಾಕೀತು ಮಾಡಿ ಕಳಿಸಿದ್ವಿ.
          `ಮರುದಿನ ಮತ್ತೊಂದು ಹಲಸಿನ ಕಾಯಿ ಮರದಿಂದ ಕಾಣೆಯಾಗಿತ್ತು.'

ಘಟನೆ-5
        ಸಂಯುಕ್ತ ಕರ್ನಾಟಕದಲ್ಲಿ ಕೆಲಸಕ್ಕೆ ಸೇರಿದ ಹೊಸತು. ಆ ಆಫೀಸಿದ್ದ ಜಾಗ ರಿಚ್ ಮಂಡ್ ಟೌನ್. ಬೆಂಗಳೂರಿನ ಶ್ರೀಮಂತ ಸ್ಥಳಗಳಲ್ಲಿ ಅದೊಂದು. ಎತ್ತ ನೋಡಿದರತ್ತ ದೊಡ್ಡ ದೊಡ್ಡ ಬಿಲ್ಡಿಂಗುಗಳು. ಒಂದು ಭಾಗದಲ್ಲಿ ದಿ ಪೆವಿಲಿಯನ್ ಹೊಟೆಲ್ಲು, ಇನ್ನೊಂದು ಕಡೆಯಲ್ಲಿ ದಿವಾಕರ ಭವನ, ಮತ್ತೊದಂದು ಕಡೆಯಲ್ಲಿ ದೊಡ್ಡದೊಂದು ಆರ್ಕೇಡು. ಒಟ್ಟಿನಲ್ಲಿ ಸಖತ್ ಏರಿಯಾ ಎಂದುಕೊಂಡು ಕೆಲಸ ಮಾಡುತ್ತಿದ್ದೆ. ಕೆಲಸಕ್ಕೆ ಸೇರಿದ ನಾಲ್ಕೇ ದಿನದಲ್ಲಿ ಆ ಏರಿಯಾದ ಸಮಸ್ಯೆ ನನಗೆ ಅರ್ಥವಾಗತೊಡಗಿತು. ಮದ್ಯಾಹ್ನದ ಊಟ ಮಾಡಬೇಕೆಂದರೆ ಎಲ್ಲೂ ಹೊಟೆಲುಗಳೇ ಇಲ್ಲ. ಇದ್ದೊಂದು ಹೊಟೆಲಿನಲ್ಲಿ ಇಡ್ಲಿ ಸಿಗುತ್ತದೆ. ಆದರೆ ಊಟ ಸಿಗುತ್ತಿಲ್ಲ. ನಾನು ಬೆರೆ ಪಕ್ಕಾ ವೆಜ್ಜು. ವೆಜ್ಜ್ ಹೊಟೆಲ್ ಇಲ್ಲವೇ ಇಲ್ಲ. ಒಂದು ದಿನ ಪೂರ್ತಿ ಆ ಭಾಗದಲ್ಲಿ ಹೊಟೆಲ್ ಹುಡುಕುವುದಕ್ಕಾಗಿ ಸಮಯ ಹಾಳು ಮಾಡಿದ್ದೆ. ಕೊನೆಗೆ ಅಲ್ಲೊಂದು ಜ್ಯೂಸ್ ಸೆಂಟರ್ ಸಿಕ್ಕಿತ್ತು. ಬೇಕೆಂದರೆ ಅಲ್ಲಿ ಬ್ರೆಡ್ ರೋಸ್ಟ್, ತರಹೇವಾರಿ ಜ್ಯೂಸುಗಳನ್ನು ಕೊಡುತ್ತಿದ್ದರು. ಬರ್ಗರುಗಳು, ಪಿಜ್ಜಾಗಳು ಹೇರಳವಾಗಿ ಸಿಗುತ್ತಿದ್ದವು. ಆ ಜ್ಯೂಸ್ ಸೆಂಟರಿಗೆ ಬರುವವರೆಲ್ಲರೂ ಅವನ್ನು ಬಿಟ್ಟು ಬೇರೆ ತಿಂದೇ ಗೊತ್ತಿಲ್ಲವೇನೋ ಎನ್ನುವಂತಿದ್ದರು. ಬರೀ ಪಪ್ಸುಗಳನ್ನು ತಿಂದೇ ಬದುಕುತ್ತಾರೋ ಎನ್ನುವಂತವರು. ನಾನು ಒಮದೆರಡು ದಿನ ಅವರಂತೆ ಪಪ್ಸ್, ಪಿಜ್ಜಾ ತಿಂದು ಆಪಲ್ ಜ್ಯೂಸನ್ನೋ, ಚಿಕ್ಕೂ ಜ್ಯೂಸನ್ನೋ ಕುಡಿದು ಬದುಕು ನಡೆಸಲು ಯತ್ನಿಸಿದೆ. ಊಹೂಂ ಯಾಕೋ ಒಗ್ಗಲಿಲ್ಲ. ಬಿಟ್ಟುಬಿಟ್ಟೆ.
          ಅದೊಂದು ದಿನ ಅದೇ ಜ್ಯೂಸ್ ಸೆಂಟರಿನ ಬಾಜಿನಲ್ಲಿ ಬಹಳಷ್ಟು ಜನರು ಗುಂಪುಕಟ್ಟಿಕೊಂಡಿದ್ದರು. ಹೈ ಫೈ ಏರಿಯಾ ಗಲಾಟೆ ಗಿಲಾಟೆ ಎಲ್ಲ ನಡೆಯುವುದು ಅಸಾಧ್ಯ. ಆದರೆ ಇಲ್ಯಾಕೆ ಹೀಗೆ ಜನ ಸೇರಿದ್ದಾರೆ ಎನ್ನುವ ಕುತೂಹಲದಿಂದ ನಾನು ಇಣುಕಿದೆ. ಒಬ್ಬಾಕೆ ಹೆಂಗಸು. ಭಿಕ್ಷೆ ಬೇಡುತ್ತಿದ್ದವಳು. ಮಗುವನ್ನೆತ್ತಿಕೊಂಡು ಬಿದ್ದಿದ್ದಾಳೆ. ಎಚ್ಚರತಪ್ಪಿ ಹೋಗಿದೆ. ಕೆಲ ಹೊತ್ತು ಆಕೆಯ ಸುದ್ದಿಗೆ ನಾನೂ ಸೇರಿದಂತೆ ಯಾರೂ ಹೋಗಿರಲಿಲ್ಲ. ಕೊನೆಗೆ ಯಾರೋ ಒಬ್ಬಾಕೆ ಅರ್ಧ ಪ್ಯಾಂಟನ್ನು ಹಾಕಿಕೊಂಡಿದ್ದವಳು ಅವಳ ಬಳಿ ಹೋಗಿ ಅವಳನ್ನು ಹಿಡಿದೆತ್ತಿ ನೀರನ್ನು ಹಾಕಿ ತಟ್ಟಿದಳು. ಸ್ವಲ್ಪ ಹೊತ್ತಿನ ನಂತರ ಆಕೆಗೆ ಎಚ್ಚರ ಬಂತು. ಮಡಿಲಿನಲ್ಲಿದ್ದ ಮಗು ಕಿಟಾರನೆ ಕಿರುಚುತ್ತಿತ್ತು. ಯಾರೋ ಜ್ಯೂಸ್ ಸೆಂಟರಿಗೆ ಹೋಗಿ ಒಂದು ಪಪ್ಸನ್ನು ತಂದುಕೊಟ್ಟರು. ಆಗ ಆ ಭಿಕ್ಷುಕಿ ಹೇಳಿದ್ದು `ಮುರು ದಿನದಿಂದ ಊಟ ಮಾಡಿರಲಿಲ್ಲ. ಅದಕ್ಕೆ ಹೀಗಾಯಿತು. ನನಗೆ ಊಟ ಇದ್ದರೆ ಕೊಡಿ. ಈ ಪಪ್ಸ್ ಬೇಡ..' ಎಲ್ಲರೂ ಆಕೆಯನ್ನೇ ದಿಟ್ಟಿಸುತ್ತ, ಮಿಕಿ ಮಿಕಿ ನೋಡುತ್ತ ನಿಟ್ಟುಸಿರು ಬಿಡುತ್ತ ಹೋದರು. `ಇಲ್ಲಿ ಪಿಜ್ಜಾ ಬರ್ಗರ್ ಬಿಟ್ಟರೆ ಊಟ ಸಿಗೋದಿಲ್ಲ ಕಣಮ್ಮಾ..' ಎನ್ನಬೇಕು ಎಂದುಕೊಂಡೆ. ಮಾತು ಗಂಟಲಿಂದ ಹೊರ ಬೀಳಲಿಲ್ಲ. ಸುಮ್ಮನೆ ಅಲ್ಲಿಂದ ಜಾರಿಕೊಂಡು ಬಂದುಬಿಟ್ಟಿದ್ದೆ.

ಘಟನೆ-6
          ಈ ಘಟನೆ ಮುಜುಗರ ಎನ್ನಿಸಬಹುದು. ಆದರೆ ಹೇಳಲೆಬೇಕು. ನಮ್ಮ ರೂಮಿನಿಂದ ಕೂಗಳತೆ ದೂರದಲ್ಲಿ ಒಂದು ಶೆಡ್ ಇತ್ತು. ಸಿಮೆಂಟಿನ ಶೀಟ್ ಹಾಕಿದ್ದ ಹೋಲೋಬ್ಲಾಕ್ ಕಲ್ಲಿನಿಂದ ಮಾಡಿದ್ದ ಶೆಡ್ ಅದು. ಅಲ್ಲಿ ಒಂದು ಜೋಡಿ ವಾಸ ಮಾಡುತ್ತಿತ್ತು. ಒಂದು ಪ್ರೈಮರಿ ಶಾಲೆಗೆ ಹೋಗುವ  ಹುಡುಗಿ ಹಾಗೂ ಇನ್ನೊಂದು ಎರಡು ವರ್ಷಕ್ಕೂ ಕಡಿಮೆ ವಯಸ್ಸಿನ ಮಗು ಅಲ್ಲಿತ್ತು. ಪ್ರೈಮರಿ ಶಾಲೆಗೆ ಹೋಗುವ ಹುಡುಗಿ ನೋಡಲು ಆಕರ್ಷಕವಾಗಿದ್ದಳು. ನಾವು ಯುವಕರು. ಆಕೆಯನ್ನು ಛೇಡಿಸುವುದು, ಮಾತನಾಡಲು ಪ್ರಯತ್ನಿಸುವುದು ಮಾಡುತ್ತಲೇ ಇದ್ದೆವು. ನನ್ನ ರೂಮ್ ಮೇಟುಗಳು ಆಕೆಯನ್ನು ನೊಡಲು ಹವಣಿಸುತ್ತಿದ್ದರು. ಒಂದೆರಡು ಸಾರಿ ಕನಸಲ್ಲೂ ಅವರಿಗೆ ಅವಳು ಕಾಣಿಸಿಕೊಂಡಿರಬೇಕು. `ಲೇ.. ಅವ್ಳು ನೋಡೋ ಎಷ್ಟು ಚನ್ನಾಗಿದ್ದಾಳೆ.. ಸೂಪರ್ ಫಿಗರ್ ಮಗಾ.. ಆ ಬಾಡಿ ನೋಡು.. ಓಹ್..' ಎಂದುಕೊಂಡು ಮನಸ್ಸಲ್ಲಿ ಮಂಡಿಗೆ ತಿನ್ನುತ್ತಿದ್ದರು. ನಮಗೆಲ್ಲ ಬಹಳ ವಿಚಿತ್ರವೆನ್ನಿಸಿದ್ದು ಪ್ರೈಮರಿ ಶಾಲೆಗೆ ಹೋಗುವ ಆ ಹುಡುಗಿ ಬೆಳೆದಿದ್ದ. ಹದಿ ಹರೆಯದಲ್ಲಿ ಬೆಳೆಯಬೇಕಿದ್ದ ಅಂಗಾಂಗಗಳೆಲ್ಲ ಪ್ರೈಮರಿಯಲ್ಲೇ ಬೆಳೆದಿದ್ದವು. `ಸಿಟಿ ಮೇಲಿನ ಹುಡುಗೀರು ಬಹಳ ಬೇಗನೆ ಬೆಳೆದು ಬಿಡ್ತಾರಮ್ಮಾ..' ಎಂದು ಕಮಲೂ ಬಹುದಿನಗಳಿಂದ ಮನಸ್ಸಿನಲ್ಲಿ ಸಿದ್ಧಪಡಿಸಿಕೊಂಡಿದ್ದ ಪಿಎಚ್ಡಿಯನ್ನು ಒಂದು ದಿನ ಮಂಡಿಸಿದ್ದ. ವಯಸ್ಸು ಚಿಕ್ಕದಾಗಿದ್ದರೂ ಹೀಗೇಕೆ ಎನ್ನುವ ಕೆಟ್ಟ ಕುತೂಹಲ ನಮ್ಮನ್ನು ಕಾಡದೇ ಬಿಡಲಿಲ್ಲ. ಕೊನೆಗೊಂದು ದಿನ ಆ ಹುಡುಗಿ ಮಾತಿಗೆ ಸಿಕ್ಕಳು. ನಾನು ಕುತೂಹಲದಿಂದ ಮನೆಯಲ್ಲಿ ಯಾರ್ಯಾರು ಇದ್ದಾರೆ ಎಂದು ಕೇಳಿದೆ. ಅದಕ್ಕವಳು `ಅಮ್ಮ.. ಚಿಕ್ಕಪ್ಪ.. ಇದ್ದಾರೆ..' ಎಂದಿದ್ದಳು. ನಾನು `ಅಪ್ಪ..?' ಎಂದು ಕೇಳಿದ್ದೆ. `ಇಲ್ಲ.. ಅಮ್ಮ ಈಗ ಚಿಕ್ಕಪ್ಪನ ಜೊತೆಗೆ ವಾಸ ಮಾಡುತ್ತಿದ್ದಾರೆ. ಅಪ್ಪನನ್ನು ಬಿಟ್ಟು ಬಂದಿದ್ದಾರೆ.' ಎಂದಳು. ನನಗೆ ಮಾತೇ ಹೊರಡಲಿಲ್ಲ. ಕೊನೆಗೆ ಆಕೆಯ ತಮ್ಮನ ಬಗ್ಗೆ ಕೇಳಿದಾಗ ಆ ಮಗು ಚಿಕ್ಕಪ್ಪನದ್ದು. ಚಿಕ್ಕಪ್ಪ ಹಾಗೂ ಅಮ್ಮನಿಗೆ ಹುಟ್ಟಿದ್ದೆಂದೂ ತಿಳಿಸಿದಳು. ನನ್ನಲ್ಲಿ ಮಾತುಗಳಿರಲಿಲ್ಲ. ಇದಾಗಿ ಹಲವು ದಿನಗಳ ನಂತರ ಆ ಮನೆಯಲ್ಲಿ ಒಂದು ದಿನ ಗಲಾಟೆ. ಕುತೂಹಲದಿಂದ ನೋಡಿದರೆ ಆ ಮನೆಯ ಚಿಕ್ಕಪ್ಪ ಈ ಹುಡುಗಿಗೆ ಲೈಂಗಿಕವಾಗಿ ಕಿರುಕುಳ ನೀಡುತ್ತಿದ್ದರಂತೆ. ಒಂದೆರಡು ವರ್ಷಗಳಿಂದ ಈ ರೀತಿ ನಿರಂತರವಾಗಿ ಕಿರುಕುಳ ನೀಡುತ್ತ ಬರುತ್ತಿದ್ದುದು ಆ ದಿನ ಆ ಹುಡುಗಿಯ ತಾಯಿಗೆ ಗೊತ್ತಾಗಿತ್ತು. ಕಮಲೂ ಹೊಸದೊಂದು ಥಿಯರಿ ಮಂಡಿಸಿದ್ದ. `ಆ ಚಿಕ್ಕಪ್ಪ ಆಕೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾರಣದಿಂದಲೇ ಆಕೆ ಚಿಕ್ಕ ವಯಸ್ಸಿನಲ್ಲಿಯೇ ಆ ರೀತಿ ಬೆಳೆದಿದ್ದಳು.. ಈಗ ಗೊತ್ತಾಯ್ತಾ..' ಎಂದಿದ್ದ.  ಈಗ ಆ ಹುಡುಗಿ ಪಿಯುಸಿ ಓದುತ್ತಿದ್ದಾಳೆ. ಆಕೆಯ ಅಮ್ಮ ಚಿಕ್ಕಪ್ಪನನ್ನು ಬಿಟ್ಟಿದ್ದಾಳೋ ಇಲ್ಲವೋ ಗೊತ್ತಿಲ್ಲ.

ಘಟನೆ -7
          ರೂಮಿನಲ್ಲಿ ಒಂದು ರಾತ್ರಿ ಇದ್ದಕ್ಕಿದ್ದಂತೆ ಎಚ್ಚರಾಯಿತು. ನಮ್ಮ ರೂಮಿನ ಪಕ್ಕದಲ್ಲಿ ದಡಾ ಬಡಾ ಸದ್ದು. ಏನನ್ನೋ ಅಗೆದಂತೆ, ಕಿತ್ತು ಒಗೆದಂತೆಲ್ಲ ಸದ್ದು. ಆಲಿಸಿದೆ. ರೂಮಿನ ಹೊರಗೆ ಒಂದು ಭಾಗದಿಂದ ಕೇಳಿಬರುತ್ತಿತ್ತು. `ನಂಗ್ಯಾಕೆ..?' ಎಂದುಕೊಂಡು ಸುಮಾರು ಹೊತ್ತು ಹಾಸಿಗೆಯಲ್ಲೇ ಹೊರಳಾಡಿ ಮಲಗಲು ಯತ್ನಿಸಿದೆ. ಗಂಟೆಗಟ್ಟಲೆ ಆದರೂ ಸದ್ದು ಕೇಳುತ್ತಲೇ ಇತ್ತು. ಕುತೂಹಲ ಹೆಚ್ಚಿತು. ಸುಮ್ಮನೆ ಹೋಗಿ ಕಂಪೌಂಡ್ ಹತ್ತಿ ಹಲಸಿನ ಮರದ ನಡುವಿನಿಂದ ಇಣುಕಿದೆ. ಹತ್ತೊ ಹದಿನೈದೋ ಜನರ ಗುಂಪು ಪಕ್ಕದ ಸೈಟಿನಲ್ಲಿ ಅರ್ಧಮರ್ಧ ಕಟ್ಟಿದ್ದ ಮನೆಯೊಂದನ್ನು ಕೆಡವಿ ಹಾಕುತ್ತಿದ್ದರು. ಯಾರೋ ಏನೋ.. ಮನೆ ಸರಿಯಾಗಿರಲಿಲ್ಲ ಅದಕ್ಕೆ ಕೆಡವಿ ಹಾಕುತ್ತಿರಬೇಕು ಎಂದುಕೊಂಡು ಸದ್ದು ಮಾಡದಂತೆ, ಯಾರಿಗೂ ಗೊತ್ತಾಗದಂತೆ ಇಳಿದು ಬಂದು ಮಲಗಿದೆ.
            ಹೆರೋಹಳ್ಳಿಯ ಯೋಗೀಶ ಎಂಬಾತ ನಮಗೆ ಆಗ ಪರಿಚಯದಲ್ಲಿದ್ದ ಆ ಭಾಗದ ರೌಡಿ ಶೀಟರ್. ಆತ ರೂಮಿಗೆ ಬಂದಿದ್ದ. ಆತನ ಬಳಿ ರಾತ್ರಿ ನಾನು ನೋಡಿದ ಸಂಗತಿಯನ್ನು ತಿಳಿಸಿದೆ. ಆತ `ಅರೇ ಇಷ್ಟು ಬೇಗ ಆ ಮನೆ ಕೆಡವಿಬಿಟ್ರಾ..?' ಎಂದ. ಯಾಕೆ ನಿಂಗೆ ಗೊತ್ತಿತ್ತಾ ಎಂದು ಕೇಳಿದೆ. ಅದಕ್ಕವನು `ಇದೆಲ್ಲ ರಿಯಲ್ ಎಸ್ಟೇಟ್ ಕೆಲಸ ಮಾರಾಯಾ.. ಆ ಜಾಗದ ಬಗ್ಗೆ ರಿಯಲ್ ಎಸ್ಟೇಟ್ ಉದ್ಯಮಿಗಳ ಮೇಲೆ ಕಣ್ಣಿತ್ತು. ಆ ಜಾಗವನ್ನು ಯಾರೋ ಕೊಂಡುಕೊಂಡು ಮನೆ ಕೆಲಸವನ್ನೂ ಆರಂಭಿಸಿಬಿಟ್ಟಿದ್ದರು. ಆದರೆ ಆ ಉದ್ಯಮಿಗೆ ಅದು ಇಷ್ಟ ಇರಲಿಲ್ಲ. ಹಲವು ಸಾರಿ ಹಲವು ರೀತಿಯಿಂದ ಆ ಜಾಗ ಬಿಟ್ಟು ಹೋಗು ಎಂದು ಹೇಳಿದ್ದರೂ ಮನೆ ಮಾಲಿಕ ಕೇಳಿರಲಿಲ್ಲ. ರಾಜಿ ಪಂಚಾಯ್ತಿಕೆಗೆ ನನ್ನ ಬಳಿಯೂ ಬಂದಿತ್ತು. ಆದರೆ ಇಬ್ಬರ ನಡುವೆ ರಾಜಿಯಾಗಿರಲಿಲ್ಲ. ಕೊನೆಗೆ ರಿಯಲ್ ಎಸ್ಟೇಟ್ ಉದ್ಯಮಿ ಜನರನ್ನು ಬಿಟ್ಟು ರಾತ್ರೋ ರಾತ್ರಿ ಮನೆ ಕೀಳಿಸಿಬಿಟ್ಟ. ಬೆಂಗಳೂರಲ್ಲಿ ಇದೆಲ್ಲ ಕಾಮನ್ನು ಬಿಟ್ಹಾಕು.. ಇದಕ್ಕೆಲ್ಲ ತಲೆ ಕೆಡಿಸ್ಕೋಬೇಡ. ಬಾ ಕ್ರಿಕೆಟ್ ಆಡೋಣ.. ಬಾಲ್ ಹಾಕು..' ಎಂದಿದ್ದ.
            ನನ್ನ ಮನಸ್ಸಿನಲ್ಲಿ ಮತ್ತೆ ಭಾವನೆಗಳ ತರಂಗಗಳು ಎದ್ದಿದ್ದವು.

***

(ಬೆಂಗಳೂರಿನಲ್ಲಿದ್ದಾಗ ನನ್ನೆದುರು ಘಟಿಸಿದ ಹಾಗೂ ನಾನೂ ಒಂದು ಭಾಗವಾದ ಏಳು ಘಟನೆಗಳನ್ನು ನಿಮ್ಮೆದುರು ಇಟ್ಟಿದ್ದೇನೆ. ಕೆಲವು ಫನ್ನಿ, ಮತ್ತೆ ಕೆಲವು ವಿಷಾದಕರವಾದುದು. ಹೆಚ್ಚಿನ ಸಾರಿ ನಾನು ಏನೂ ಮಾಡಲು ಸಾಧ್ಯವಾಗಲಿಲ್ಲವಲ್ಲಾ ಎಂದುಕೊಂಡು ಸುಮ್ಮನಾದಂತವುಗಳು. ಬೇಜಾರು ಮಾಡಿಕೊಂಡಂತಹ ಘಟನೆಗಳು.. ನನ್ನ ಅನುಭವಗಳನ್ನು ನಿಮ್ಮ ಮುಂದೆ ಹಂಚಿಕೊಳ್ಳುವ ಪ್ರಯತ್ನ ಇದು. ಇನ್ನೂ ಹಲವು ಅನುಭವಗಳಿವೆ. ಮುಂದಿನ ದಿನಗಳಲ್ಲಿ ಅದನ್ನು ನಿಮ್ಮ ಮುಂದೆ ಇರಿಸುವ ಪ್ರಯತ್ನ ಮಾಡಲಾಗುವುದು.)

No comments:

Post a Comment