Saturday, March 29, 2014

ಮರುಕಳಿಸಿತು ಇತಿಹಾಸ (ಕಥಾ ಸರಣಿ ಭಾಗ-4)

       ವಸಂತಗಳುರುಳಿದ್ದವು. ಜಾತ್ರೆಯಲ್ಲಿ ಸಿಕ್ಕು ಕಣ್ಣ ಹನಿಯೊಂದಿಗೆ ವಾಣಿಯನ್ನು ಬೀಳ್ಕೊಟ್ಟಿದ್ದ ವಿನಾಯಕನಿಗೆ ಮತ್ತೆ ನೆನಪಾಗಿರಲಿಲ್ಲ. ತಾನಿಲ್ಲದೆಯೂ ಆಕೆ ಚನ್ನಾಗಿದ್ದಾಳಲ್ಲ ಎಂಬ ಭಾವನೆ ವಿನಾಯಕನಲ್ಲಿ ವಾಣಿಯನ್ನು ಮರೆಸುವಂತೆ ಮಾಡಿತ್ತು. ಬೆಂಗಳೂರಿನ ಸಾಪ್ಟ್ ವೇರ್ ಕಂಪನಿಯೊಂದು ವಿನಾಯಕನನ್ನು ಕೆಲಸಕ್ಕಾಗಿ ಕೈಬೀಸಿ ಕರೆದಿತ್ತು. ವಿನಾಯಕನೂ ಕೆಲವನ್ನು ರಪಕ್ಕನೆ ಬಾಚಿಕೊಂಡಿದ್ದ. ಸಂಬಳ ಐವತ್ತರು ಸಹಸ್ರಗಳ ಮೇಲೆ ಎಣಿಸಲೂ ಆರಂಭಿಸಿದ್ದ. ಹೀಗಿದ್ದಾಗಲೇ ವಿನಾಯಕನ ಮನೆಯಲ್ಲಿ ಆತನ ಮದುವೆಯ ಕುರಿತು ಮಾತನಾಡತೊಡಗಿದ್ದರು. ಮನೆಯವರು ಹುಡುಗಿಯನ್ನು ಹುಡುಕಲಿ ಎಂದು ವಿನಾಯಕನೂ ಸುಮ್ಮನುಳಿದಿದ್ದ. ಒಳ್ಳೆಯವಳಾಗಿ ತನ್ನ ಗುಣಗಳನ್ನು ಇಷ್ಟಪಟ್ಟು ಚನ್ನಾಗಿದ್ದರೆ ಸಾಕು. ಅಂತಹ ಹುಡುಗಿಯನ್ನು ಒಪ್ಪಿಕೊಳ್ಳೋಣ ಎಂಬ ನಿರ್ಧಾರಕ್ಕೆ ವಿನಾಯಕ ಬಂದಿದ್ದ.
                   ವಿನಾಯಕ ಸಾಫ್ಟ್ ವೇರ್ ಕಂಪನಿಯ ಕೆಲಸಗಾರನಾಗಿದ್ದ ಕಾರಣ ಸಾಕಷ್ಟು ಜಾತಕಗಳೂ ಬಂದಿದ್ದವು. ಅವುಗಳಲ್ಲಿ ಹಲವು ವಿನಾಯಕನ ಜಾತಕದೊಂದಿಗೆ ಹೊಂದಿಕೆಯಾಗುತ್ತಿದ್ದವು. ಹೊಂದಿಕೆಯಾಗುವ ನಾಲ್ಕೈದು ಜಾತಕಗಳೊಂದಿಗೆ ಬಂದಿದ್ದ ಹುಡುಗಿಯರ ಪೋಟೋಗಳನ್ನು ವಿನಾಯಕನಿಗೆ ಕಳಿಸಲಾಯಿತು. ವಿನಾಯಕ ಅವೆಲ್ಲವನ್ನೂ ನೋಡಿದ. ಅವುಗಳಲ್ಲಿ ಮೂರು ಹುಡುಗಿಯರು ವಿನಾಯಕನಿಗೆ ಇಷ್ಟವಾಗಲಿಲ್ಲ. ನಾಲ್ಕನೆಯ ಹುಡುಗಿ ಚನ್ನಾಗಿದ್ದಳು. ಐದನೆಯವಳು ನಾಲ್ಕನೆಯವಳಷ್ಟು ಚನ್ನಾಗಿರದಿದ್ದರೂ ಲಕ್ಷಣವಾಗಿದ್ದಳು. ಕೊನೆಗೆ ಸಾಕಷ್ಟು ಅಳೆದು-ತೂಗಿ ಐದನೆಯವಳಿಗೆ ಗ್ರೀನ್ ಸಿಗ್ನಲ್ ಕೊಟ್ಟ. ಶುಭದಿನವೊಂದರಂದು ವಿನಾಯಕನ ಮದುವೆ ಆ ಹುಡುಗಿಯ ಜೊತೆಗೆ ತನ್ನ ಹಳ್ಳಿಮನೆಯಲ್ಲಿ ನಡೆಯಿತು. ನಂತರದ ದಿನಗಳು ವಿನಾಯಕನಿಗೆ ಬಹಳ ಸಂತಸವನ್ನು ನೀಡುವಂತವಾಗಿದ್ದವು.

***
                  ಅರ್ಚನಾಳ ಮನೆಯಲ್ಲೂ ಗಂಡು ನೋಡುತ್ತಿದ್ದರು. ಹುಡುಗ ಸಾಫ್ಟ್ ವೇರ್ ಕೆಲಸದಲ್ಲಿಯೇ ಇರಬೇಕು ಎನ್ನುವುದು ಮನೆಯ ಹಿರಿಯರ ಆಸೆಯಾಗಿದ್ದ ಕಾರಣ ಹೆಚ್ಚಿನ ಆಯ್ಕೆಗಳಿರಲಿಲ್ಲ. ಒಂದೆರಡು ಸಂಬಂಧಗಳು ಬಂದಿದ್ದರೂ ಅರ್ಚನಾ ಅವುಗಳನ್ನು ಒಪ್ಪಿಕೊಂಡಿರಲಿಲ್ಲ. ಕೊನೆಗೊಂದು ದಿನ ವಿನಾಯಕನ ಜಾತಕ ಬಂದಾಗ ಪೋಟೋ ನೋಡಿದವಳೇ ಇಷ್ಟಪಟ್ಟು ಬಿಟ್ಟಿದ್ದಳು. ಹೀಗಾಗಿ ವಿನಾಯಕ-ಅರ್ಚನಾಳ ಮದುವೆ ಅದ್ಧೂರಿಯಾಗಿ ಜರುಗಿತ್ತು.
                  ಹಳ್ಳಿ ಹುಡುಗಿ ಅರ್ಚನಾ ಪದವಿಯ ವರೆಗೆ ಓದಿದ್ದಾಳೆ. ನಗರಜೀವನ ಹೊಸದಾಗಿದ್ದರೂ ಆಕೆಗದು ಆಕರ್ಷಣೀಯವಾಗಿರುವ ಕಾರಣ ಬೇಗನೆ ಹೊಂದಿಕೊಂಡಳು. ಮದುವೆಯಾದ ನಾಲ್ಕೇ ದಿನದಲ್ಲಿ ವಿನಾಯಕ ಹಾಗೂ ಅರ್ಚನಾ ದಂಪತಿಗಳು ಬೆಂಗಳೂರು ವಾಸಿಯಾಗಿಬಿಟ್ಟರು. ಬೆಂಗಳೂರು ಸೇರಿದ ಕೆಲವೇ ವಾರಗಳಲ್ಲಿ ಅರ್ಚನಾಳಿಗೂ ಒಳ್ಳೆಯ ಕಂಪನಿಯೊಂದರಲ್ಲಿ ಜಾಬ್ ಸಿಕ್ಕಿತು. ನಂತರ ಇವರ ಬದುಕು ಯಾಂತ್ರೀಕೃತವಾಗತೊಡಗಿತು. ವಾರದಲ್ಲಿ ಐದು ದಿನ ಬಿಡುವಿಲ್ಲದ ಕೆಲಸ. ಉಳಿದೆರಡು ದಿನ ಪಂಜರದಿಂದ ಹಾರಿಬಿಟ್ಟಂತೆ ಬದುಕು. ಪುರಸೊತ್ತು ಸಿಗುವ ಎರಡು ದಿನಗಳಲ್ಲಿ ಏನು ಮಾಡೋಣ, ಏನು ಮಾಡಬಾರದು ಎನ್ನುವ ಗೊಂದಲ. ಮೊದ ಮೊದಲು ಈ ಕೆಲಸ-ಬಿಡುವಿಲ್ಲದ ಓಟ ಅರ್ಚನಾ ಹಾಗೂ ವಿನಾಯಕರಿಗೆ ಖುಷಿಕೊಟ್ಟವಾದರೂ ನಂತರದ ದಿನಗಳಲ್ಲಿ ಇಬ್ಬರಲ್ಲೂ ಏನೋ ಅಸಹನೆ ಕಾಡಲು ಆರಂಭವಾಯಿತು. ಯಾಂತ್ರೀಕೃತ ಬದುಕಿನಲ್ಲಿ ಏನನ್ನೋ ಕಳೆದುಕೊಳ್ಳುತ್ತಿದ್ದೇವೆ ಎಂಬ ಭಾವನೆ ದಟ್ಟವಾಗತೊಡಗಿತು. ಇದನ್ನು ಮರೆಸಲೋ ಎಂಬಂತೆ ವೀಕೆಂಡಿನಲ್ಲಿ ಸಿನೆಮಾ, ಟೂರು, ಪೋಟೋಗ್ರಫಿ, ಟ್ರೆಕ್ಕಿಂಗ್ ಹೀಗೆ ಹಲವು ವಿಧದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲಾರಂಭಿಸಿದರು.
                  ಆದರೆ ದಿನಗಳೆದಂತೆ ಟೂರು ಬೋರಾಗತೊಡಗಿತು, ಸಿನೆಮಾ ಗಳು ಬಾಲಿಶವೆನ್ನಿಸತೊಡಗಿದವು. ಕ್ಲಿಕ್ಕಿಸುತ್ತಿದ್ದ ಪೋಟೋಗಳೆಲ್ಲ ಬಣ್ಣಕಳೆದುಕೊಂಡಂತೆ ಬಾಸವಾಗಲಾರಂಭಿಸಿದವು. ಟ್ರೆಕ್ಕಿಂಗೂ ಮನಸ್ಸನ್ನು ಆವರಿಸಲಿಲ್ಲ. ಕೆಲಸದ ಕಾರಣವೋ ಎಂಬಂತೆ ಸಂಸಾರವೂ ಯಾಂತ್ರೀಕೃತವಾಗಲಾರಂಭಿಸಿದ್ದವು.  ಸಂಸಾರದಲ್ಲಿ ಎಲ್ಲ ಇದ್ದರೂ ಏನೂ ಇಲ್ಲ ಎನ್ನುವಂತಾಗಲಾರಂಭಿಸಿತ್ತು. ಗಂಡ-ಹೆಂಡತಿಯರಾಗಿ ಬದುಕು ನಡೆಡುತ್ತಿದ್ದರಾದರೂ ಹೊತ್ತಲ್ಲದ ಹೊತ್ತಿನಲ್ಲಿ ಕೆಲಸಕ್ಕೆ ಹೊರಡಬೇಕು. ಜಗತ್ತು ನಗುತ್ತ ಓಡಾಡುವ ಹೊತ್ತಿನಲ್ಲಿ ಬಂದು ಮನೆ ಸೇರಿ ನಿದ್ದೆ ಮಾಡಬೇಕು, ಎಲ್ಲ ಬೆಚ್ಚಗೆ ಗೂಡಿನಲ್ಲಿ ಇರುವ ಸಮಯದಲ್ಲಿ ಇವರು ಮಾತ್ರ ಯಾವುದೋ ಕಾಂಕ್ರೀಟು ಕೋಣೆಯಲ್ಲಿ ಕಂಪ್ಯೂಟರಿನ ಮುಂದೆ ಕೆಲಸವನ್ನು ಮಾಡುತ್ತ, ಹಣೆಬರಹವನ್ನು ಹಳಿಯುತ್ತ ಕೂರಬೇಕು. ತಿಂಗಳ ಆರಂಭದಲ್ಲಿ ಶ್ರೀಮಂತರಂತೆ ಅಡ್ಡಾಡುತ್ತ, ತಿಂಗಳಾಂತ್ಯದಲ್ಲಿ ಬಡತನದ ಬೇಗೆಯಲ್ಲಿ ಬೇಯುತ್ತ, ಪ್ರೆಸ್ಟಿಜ್ ಪ್ರಶ್ನೆಯಾಗಿ ದುಬಾರಿ ಜೀವನದಲ್ಲೇ ಬದುಕುತ್ತ ಹೈರಾಣಾದರು.
                 ಇಂತಹ ಸಮಯದಲ್ಲೇ ವಿನಾಯಕ ಅನೇಕ ಸಾರಿ ಈ ಹಾಳಾದ ಕೆಲಸವನ್ನು ಬಿಟ್ಟು ತಮ್ಮೂರಿಗೆ ವಾಪಾಸಾಗಿಬಿಡಲಾ ಎಂದುಕೊಂಡಿದ್ದಿದೆ. ಆದರೆ ಒಂದು ಚಕ್ರಕ್ಕೆ ಸಿಕ್ಕಿಬಿದ್ದಾಗ ಏನೆಂದರೂ ಬದಲಾವಣೆ ಕಷ್ಟ. ವರ್ಷಗಳೆರಡು ಉರುಳಿದವು. ಕೊನೆಗೊಮ್ಮೆ ಇಬ್ಬರೂ ಬೆಂಗಳೂರಿನ ಬದುಕಿಗೆ ಶರಣು ಹೊಡೆದು ತಮ್ಮೂರಿಗೆ ವಾಪಾಸಾಗಲು ಒಂದು ಬಲವಾದ ನೆಪ ಸಿಕ್ಕೇಬಿಟ್ಟಿತು. ಅರ್ಚನಾ ತಾಯಿಯಾಗಿದ್ದಳು.  ಮುದ್ದಾದ ಕೂಸಿಗೆ ವಿನಾಯಕ ಅಪ್ಪನಾಗಿದ್ದ. ಕೂಸಿನ ನಗು, ಕೂಸಿನ ಸೆಳೆತ, ಕೂಸಿನ ಪ್ರೀತಿ ವಿನಾಯಕ-ಅರ್ಚನಾರನ್ನು ಹಳ್ಳಿಯ ಕಡೆಗೆ ಎಳೆದುಕೊಂಡು ಬಂದಿತ್ತು. ಅಷ್ಟರಲ್ಲಿ ಸಂಪಾದನೆಯೂ ಸಾಕಷ್ಟಾದ್ದರಿಂದ ಇನ್ನು ಬೆಂಗಳೂರು ಸಾಕು ಎನ್ನುವ ನಿರ್ಧಾರವನ್ನು ಮಾಡಿಯೇ ವಿನಾಯಕ-ಅರ್ಚನಾ ದಂಪತಿಗಳು ರಾತ್ರಿಯೇ ಇಲ್ಲದ ಊರನ್ನು ಬಿಟ್ಟು ಬಂದಿದ್ದರು. ಅಲ್ಲೊಂದು ಕಡೆಗೆ ಜಮೀನನ್ನು ಕೊಂಡು ಹಳ್ಳಿಗನಾಗಿ ಬದುಕಲು ತೀರ್ಮಾನಿಸಿದ್ದರು.

***
               ವಿನಾಯಕ ಕೂಸು ಹುಟ್ಟಿದ ಘಳಿಗೆಯಲ್ಲಿ ಹೆಸರಿಗೆ ಆಲೋಚನೆ ಮಾಡಿದ್ದ. ಅರ್ಚನಾಳೂ ಯಾವ ಹೆಸರಿಡಬೇಕೆಂದು ಆಲೋಚಿಸಿದ್ದಳು. ಅದ್ಯಾವುದೋ ಘಳಿಗೆಯಲ್ಲಿ ವಿನಾಯಕನಿಗೆ ಹೊಣೆದ ಹೆಸರು `ವಾಣಿ..'. ಈ ಹೆಸರು ಹೊಳೆದಿದ್ಯಾಕೆ ಎನ್ನುವ ಕಾರಣ ವಿನಾಯಕನಿಗೆ ಅರಿವಾಗಲಿಲ್ಲ. ವಾಣಿಯ ಹೆಸರೇ ಮತ್ತೆ ನೆನಪಾಗಿದ್ದಕ್ಕೆ ವಿನಾಯಕ ತನ್ನೊಳಗೆ ತಾನು ವಿಸ್ಮಿತನೂ ಆಗಿದ್ದ. ಬೆಂಗಳೂರಿನಲ್ಲಿದ್ದಷ್ಟು ದಿನಗಳೂ ವಾಣಿ ನೆನಪಾಗಿರಲಿಲ್ಲ. ಮರಳಿ ಊರಿಗೆ ಬಂದಾಗ ನೆನಪಾದಳೇ ಎಂದುಕೊಂಡ. ಇಷ್ಟೆಲ್ಲ ದಿನಗಳು ಕಳೆದಿದ್ದರೂ ವಾಣಿಯ ಬಗೆಗಿನ ಭಾವನೆ ಹಾಗೂ ಆಕೆಯ ನೆನಪು ತನ್ನಲ್ಲಿನ್ನೂ ಶಾಶ್ವತವಾಗಿದೆಯಲ್ಲ ಎಂದುಕೊಂಡ. ಮೊದಲ ಪ್ರೇಮವೇ ಹೀಗಿರಬೇಕು. ಎಷ್ಟು ಕಷ್ಟಪಟ್ಟು ಮರೆತರೂ ಮರೆಯಲೊಲ್ಲದು. ಮತ್ತೆ ಮತ್ತೆ ನೆನಪಾಗಿ ಬದುಕಿನ ತಿರುವಿನಲ್ಲೆಲ್ಲೋ ಧುತ್ತನೆ ಪ್ರತ್ಯಕ್ಷವಾಗಿ ಅಚ್ಚರಿಯ ಕಚಗುಳಿಯನ್ನಿತ್ತು, ಬೆಚ್ಚಿ ಬೀಳಿಸುತ್ತದೆ. ಹುಚ್ಚು ಹಿಡಿಸುತ್ತದೆ ಎಂದುಕೊಂಡ. ವಾಣಿಯ ಹೆಸರೇ ಮಗಳಿಗಿರಲಿ. ಮಗಳಲ್ಲಿ ವಾಣಿಯನ್ನು ಕಾಣುತ್ತೇನೆ ಎಂದುಕೊಂಡ. ತನ್ನೂರಿನ ತೋಟದ ನಡುವಿನಿಂದ ಹಾದು ಬಂದ ತಂಗಾಳಿಯೊಂದು ಆತನ ಮುಖದ ಮೇಲೆ ನರ್ತನ ಮಾಡಿದಂತೆ ಸುಳಿದಾಡಿ ಸುಮ್ಮನೆ ಸರಿದುಹೋದಂತಾಯಿತು. ವಿನಾಯಕನ ಮನಸ್ಸು ತಂಪಾಗಿತ್ತು.
                ವಿನಾಯಕ ಹಾಗೂ ವಾಣಿ ಮತ್ತೊಮ್ಮೆ ಹುಟ್ಟಿ ಬಂದಿದ್ದರು. ಇತಿಹಾಸ ಮತ್ತೊಮ್ಮೆ ಮರುಕಳಿಸಿ ನಕ್ಕಿತ್ತು. ಮತ್ತೆ ಹುಟ್ಟಿದ ವಾಣಿ-ವಿನಾಯಕರ ನಡುವೆಯಾದರೂ ಪ್ರೇಮ ಹುಟ್ಟಲಿ.. ಅದು ಸುಖಾಂತ್ಯವಾಗಲಿ ಎಂದು ಹಾರೈಸಿತ್ತು.

**
(ನಮಸ್ಕಾರ
ನಾನು ಈ ಕಥೆಯ ಮೊದಲ ಭಾಗವನ್ನು ಬರೆಯುವಾಗ ಖಂಡಿತ ಇಷ್ಟು ಮುಂದುವರಿಯುತ್ತದೆ ಎಂದುಕೊಂಡಿರಲಿಲ್ಲ. ಮೊದಲ ಭಾಗಕ್ಕೆ ಒಳ್ಳೆಯ ರೆಸ್ಪಾನ್ಸ್ ನೀಡಿದ ಕಾರಣ ಎರಡನೇ ಭಾಗಕ್ಕೆ ಮುಂದುವರಿಯಿತು. ನಂತರ ಇದೇ ಮೂರಾಗಿ ಇದೀಗ ನಾಲ್ಕಕ್ಕೆ ಬಂದು ನಿಂತಿದೆ. ಖಂಡಿತ ಇದೇ ಕೊನೆಯ ಭಾಗ. ಇನ್ನು ಮುಂದುವರಿಸಲಾರೆ. ಈ ಕಥೆಯ ಮೊದಲ ಭಾಗ ಖಂಡಿತ ನಡೆದಿದ್ದು. ಆದರೆ ಉಳಿದ ಭಾಗಗಳು ಮಾತ್ರ ಕಲ್ಪನೆ. ಸ್ವಲ್ಪ ಎಳೆದಿದ್ದು ಹೆಚ್ಚಾಗಿರಬಹುದು.. ಹೇಳಿದ ವಿಷಯವೇ ಮತ್ತೆ ಮತ್ತೆ ಬಂದು ಕಿರಿಕಿರಿಯಾಗಿರಬಹುದು. ಖಂಡಿತ ಇದು ನೆನಪುಗಳೊಂದಿಗೆ ಆಟವಾಡಿದ ಕಥೆ ಎಂದುಕೊಳ್ಳಬಹುದು. ಕಾಡುವ ಮೊದಲ ಪ್ರೇಮದ ಕುರಿತಾದ ಕಥೆ. ಸಲಹೆ ನೀಡಿ ಸೂಚನೆಗಳನ್ನು ಕೊಟ್ಟಿದ್ದಕ್ಕೆ ಮತ್ತೊಮ್ಮೆ ಧನ್ಯವಾದ ಹೇಳಲೇ ಬೇಕು.
ಥ್ಯಾಂಕ್ಯೂ )

ಕಲ್ಪನಾ

ಆಕೆಯೊಂದು ಕಲ್ಪನಾ ಕಾವ್ಯ |

ಅಂಗೈ ಮುಷ್ಟಿಯೊಳಗೆ ಇಡಿಯ
ಆಗಸವ ಹಿಡಿಯ ಬಯಸಿದಾಕೆ.. |
ಕಲ್ಲು ಮಣ್ಣುಗಳ ನಡುವೆ
ಸುಮ್ಮನೆ ಅರಳಿದಾಕೆ ..|
ಬಡತನವೇ ಒಡಮೂಡಿದಂತಿಹ
ನಿಘೂಡ ಹಳ್ಳಿಯೊಳು ಜನಿಸಿದಾಕೆ
ನಮ್ಮ ಕಲ್ಪನಾ |

ಹೊಸ ಉತ್ಸಾಹದ ಚಿಲುಮೆ ಚಿಮ್ಮಿ
ಚೆಲ್ಲುವಾಕೆ ಕಲ್ಪನಾ..|
ನಮ್ಮ ನಿಮ್ಮೊಳಗಣ ಮೂರ್ತ-
ಅಮೂರ್ತ ಕನಸು ಕಲ್ಪನಾ,
ಅಂದೊಮ್ಮೆ ಆಗಸಕ್ಕೆ ಹಾರಿ
ಆಗಸವ ಅಂಗೈಯೊಳಗೆ ಹಿಡಿದು
ಮಿನುಗಿದಳು ಕಲ್ಪನಾ |

ಕಾವ್ಯವಾಗಲೇ ಕವನವಾಯಿತು
ಸುಂದರ ಹಾಡಾಯಿತು..
ಕಲ್ಪನೆ ವಾಸ್ತವವಾಯಿತು |

ಆಗಸದ ಚಂದ್ರ ನಕ್ಷತ್ರಗಳೊಳಗೆ
ಅರಳಿ ನಿಂತಳು ಕಲ್ಪನಾ..
ಆಗಸಕ್ಕೇರಿದ ಕಲ್ಪನಾ
ಮರಳಿ ಭುವಿಗೆ ಬಂದು
ಭುವಿ ಭಾರತದ ಕನಸು ಕಂಡು
ಚುಂಬಿಸಬಯಸಿದಳು |
ಬಯಸಿದಾಗಸವೇ ಬೆಂಕಿ
ಮಳೆಯಂತಾಯ್ತು |
ವಾಸ್ತವ ಕಹಿಯಾಯ್ತು |

ರಂಗಿನ ಲೋಕದಲ್ಲಿ ವಿಹಾರ
ಮಾಡಬಯಸಿದ್ದಳು ಕಲ್ಪನಾ
ರಂಗು ರಂಗಾಗಿದ್ದಳು ಕಲ್ಪನಾ |
ರಂಗಿನ ರಂಗಮಂಚವೇ ಹಾವಾಯಿತು |

ಚಿಟ್ಟೆಯಂತಾದ ಕಲ್ಪನಾ
ಆ ಬೆಂಕಿಯೊಳು ಕರಕಲಾಗಿ
ಸುಟ್ಟು-ಬೆಂದು-ಸೀದು ಹೋದಳು...

ಮತ್ತೊಮ್ಮೆ ಕಲ್ಪನೆ
ವಾಸ್ತವವಾಯಿತು |
ಕಲ್ಪನಾ ಮಿನುಗುತಾರೆಯಾದಳು |

(ಈ ಕವಿತೆಯನ್ನು ಬರೆದಿದ್ದು 3.04.2007ರಂದು ದಂಟಕಲ್ಲಿನಲ್ಲಿ)

Thursday, March 27, 2014

ಮರೆತೆನೆಂದರೂ..(ಕಥಾ ಸರಣಿ ಭಾಗ-3)

         `ಯೇ ವಾಣಿ.. ಮಗಂಗೆ ನಕ್ಷತ್ರರಿತ್ಯಾ   ಅಕ್ಷರದ ಹೆಸರು ಇಡಲೆ ಅಡ್ಡಿಲ್ಲೆ ಹೇಳಿ ಭಟ್ರು ಹೇಳ್ತಾ ಇದ್ರು.. ಎಂತಾ ಹೇಳಿ ಹೆಸರು ಇಡಲಕ್ಕು.? ಎಂತಾದ್ರೂ ನೆನಪು ಮಾಡ್ಕಂಜ್ಯಾ..? ಅಚ್ಚೆಮನೆ ತಂಗಿ ಹತ್ರ ಹೆಸರಿನ ಪುಸ್ತಕ ತಗಂಡುಬಪ್ಪಲೆ ಹೇಳಿದಿದ್ಯಲೆ. ಯಾವುದಾದ್ರೂ ಚೊಲೋ ಹೆಸ್ರು ಇದ್ರೆ ಆರ್ಸು ನೋಡನಾ.. ' ಎಂದು ವಾಣಿಯ ಗಂಡ ಹೇಳಿದಾಗ ವಾಣಿಗೆತಟ್ಟನೆ ನೆನಪಾದ ಹೆಸರು ವಿನಾಯಕ.
                  ಮದುವೆಯಾಗಿ ಮಗುವಿನ ತಾಯಿಯಾದರೂ ಈ ಹೆಸರು ಮರೆಯುತ್ತಿಲ್ಲವಲ್ಲ ಎಂದುಕೊಂಡಳು ವಾಣಿ. ಜಾತ್ರೆಯಲ್ಲಿ ಸಿಕ್ಕು ಮಾತನಾಡಿದ ನಂತರ ವಿನಾಯಕನ ಕುರಿತು ಒಂದೆ ಒಂದು ನೆನಪಿನ ಸಾಲು ಕೂಡ ವಾಣಿಯ ಮನಸ್ಸಿನಲ್ಲಿ ಹಾಯ್ದಿರಲಿಲ್ಲ. ಜಾತ್ರೆಯ ಜನಜಂಗುಳಿಯಲ್ಲಿ ಕಣ್ಣಂಚಿನಲ್ಲಿ ಮೂಡಿದ್ದ ಹನಿ ನೀರನ್ನು ಮನೆಯವರಿಗೂ ಕಾಣದಂತೆ ಒರೆಸಿಕೊಂಡು ನಿಟ್ಟುಸಿರುವ ಬಿಟ್ಟಿದ್ದಳು. ಹೋಗುವ ಮುನ್ನ ಕೊನೆಯ ಸಾರಿ ಮಾತನಾಡಬೇಕಿತ್ತು ಎಂದು ಜಾತ್ರೆಯಲ್ಲಿ ಅನ್ನಿಸಿತ್ತಾದರೂ ಅದಕ್ಕೆ ಅವಕಾಶವನ್ನೇ ನೀಡದಂತೆ ವಿನಾಯಕನ ದೋಸ್ತರು ಆತನನ್ನು ದೂರಕ್ಕೆ ಕರೆದೊಯ್ದಿದ್ದರು.
                  ಆ ನಂತರದ ದಿನಗಳಲ್ಲಿ ವಾಣಿಗೆ ವಿನಾಯಕ ನಿಜಕ್ಕೂ ಮರೆತು ಹೋಗಿದ್ದ. ದಿನಕಳೆದಂತೆಲ್ಲ ವಾಣಿ ಮನೆಯ-ಸಂಸಾರದ ಒತ್ತಡಗಳಲ್ಲಿ ಸಿಲುಕಿದ್ದಳು. ವಿನಾಯಕನನ್ನು ನೆನಪು ಮಾಡಿಕೊಳ್ಳಲೂ ಪುರಸೊತ್ತು ಸಿಗುತ್ತಿರಲಿಲ್ಲ. ಮನಸ್ಸಿನ ತುಂಬ ನೆನಪಾಗಿ ಕಾಡಿದ್ದ, ಮದುವೆಯ ನಂತರವೂ ಮತ್ತೆ ಮತ್ತೆ ಕನಸಾಗಿದ್ದ ಹುಡುಗ ಈ ನಡುವೆ ಬಾ ಎಂದರೂ ಕನಸಿನಲ್ಲಿ ಬರುತ್ತಿರಲಿಲ್ಲ. ಕಾಡುತ್ತಿರಲಿಲ್ಲ. ವಿನಾಯಕನಿಗೆ ಜಾಗಕೊಟ್ಟಿದ್ದ ಹೃದಯದಲ್ಲಿ ತನ್ನ ಗಂಡನನ್ನು ನಿಧಾನವಾಗಿ ಕೆತ್ತಿಕೊಳ್ಳುತ್ತಿದ್ದಳು. ವಿನಾಯಕ ಸ್ಮೃತಿ ಪಟಲದಿಂದ ಮರೆಯಾಗುತ್ತಿದ್ದ.
                  ಹೀಗೆ ದಿನಕಳೆದಾಗ ಅದ್ಯಾವ ಮಾಯೆಯಲ್ಲಿ ತಾನು ತನ್ನೊಡಲಲ್ಲಿ ಇನ್ನೊಂದು ಜೀವವನ್ನು ಹೊತ್ತುಕೊಂಡಿದ್ದೆ ಎನ್ನುವುದು ವಾಣಿಗೆ ಮಾಯೆಯಂತಾಗಿತ್ತು. ಅದ್ಯಾವುದೋ ಶುಭ ಗಳಿಗೆಯಲ್ಲಿ ತನ್ನೊಳಗೆ ಇನ್ನೊಂದು ಜೀವ ಮೊಳೆಯಲು ಕಾತರವಾಗಿತ್ತು. ಗರ್ಭದೊಳಗಿನ ಶಿಶು ಬೆಳೆದಂತೆಲ್ಲ ವಾಣಿ ಮನದೊಳಗೆ ಖುಷಿಯನ್ನು ಅನುಭವಿಸಿದ್ದಳು. ಅದ್ಯಾವುದೋ ತಿಂಗಳಲ್ಲಿ ಒಡಲೊಳಗಿನ ಜೀವ ಚಲನೆಯನ್ನೂ ಪಡೆದುಕೊಂಡಿತು. ಗರ್ಭಗುಡಿಯೊಳಗೆ ಆಡಹತ್ತಿತು. ಬೆಳೆದು ಒಡಲಿನ ಗೋಡೆಯನ್ನು ಫುಟಬಾಲಿನಂತೆ ಒದೆಯಲು ಆರಂಭಿಸಿದಾಗ ಹುಟ್ಟುವ ಮಗು ಗಂಡೇ ಆಗಿರಲಿ ಎಂದು ಆಶಿಸಿಕೊಂಡಿದ್ದಳು. ಗಂಡ ಹಲವು ಸಾರಿ ಸ್ಕ್ಯಾನಿಂಗ್ ಮಾಡಿಸಿಕೊಂಡು ಹುಟ್ಟಲಿರುವ ಮಗು ಗಂಡೋ ಹೆಣ್ಣೋ ನೋಡಿಸೋಣ ಎಂದಿದ್ದಾಗ ವಾಣಿ ಮೊಟ್ಟ ಮೊದಲ ಬಾರಿಗೆ `ಅದು ತಪ್ಪು ಕಣ್ರಿ. ಬದುಕಿನಲ್ಲಿ ಕೆಲವು ಸಾರಿಯಾದರೂ ಕುತೂಹಲ ಇರಲಿ. ಮಗು ಗಂಡಾಗಲಿ ಅಥವಾ ಹೆಣ್ಣಾಗಲಿ.. ಈಗ ಅದರ ಪರೀಕ್ಷೆ ಬೇಡವೇ ಬೇಡ..' ಎಂದು ಹೇಳಿದ್ದಳು. ಹೀಗೆ ಹೇಳಿದ ನಂತರ ವಾಣಿಗೆ ಸಿಕ್ಕಾಪಟ್ಟೆ ಆತ್ಮವಿಶ್ವಾಸ ಬಂದಿತ್ತು.
                  ಬಹುಶಃ ವಾಣಿ ಹೀಗೆ ಹೇಳಿದಳು ಎಂದು ಗೊತ್ತಾದ ನಂತರವೇ ಆಕೆಯ ಅತ್ತೆಯ ಸಿಡಿಮಿಡಿ ಹೆಚ್ಚಾಗಿದ್ದಿರಬೇಕು. ಸುಮ್ಮನೆ ಇದನ್ನು ಗಮನಿಸಿದ್ದ ವಾಣಿ ಮಾತಾಡಲು ಹೋಗಿರಲಿಲ್ಲ. `ವಾಣಿಗೆ ಗಂಡು ಮಗುವೇ ಹುಟ್ಟಬೇಕು. ಹೆಣ್ಣು ಬೇಡವೇ ಬೇಡ..' ಎಂದು ಆಗಾಗ ಅತ್ತೆ ಹೇಳುತ್ತಿದ್ದ ಮಾತು ಕೇಳಿ ವಾಣಿ ಮನಸ್ಸಿನೊಳಗೆ ಕುದ್ದುಹೋಗಿದ್ದರೂ ಅದನ್ನು ಅವರೆದುರು ಆಡಿರಲಿಲ್ಲ.
                 ನವ ವಸಂತಗಳು ತುಂಬಿ ಅದೊಂದು ಶುಭದಿನ ಒಡಲೊಳಗಿನ ಭುವಿಗಿಳಿದಿತ್ತು. `ಗಂಡು ಮಗು..' ಎಂದು ವೈದ್ಯರು ಹೇಳಿದ್ದೇ ತಡ ಮೊದಲಿಗೆ ನಿಟ್ಟುಸಿರು ಬಿಟ್ಟ ವಾಣಿ ತನ್ನ ಆರಾಧ್ಯದೈವ ವರದಮೂರ್ತಿ ಗಣಪತಿಗೆ ಮನಸಾರೆ ವಂದಿಸಿದ್ದಳು. `ಯಮ್ಮನೆದಕ್ಕೆ ಅಂತೂವಾ ಗಂಡೇ ಹುಟ್ಟಿದ್ದು.. ಕೂಸು ಹುಟ್ಟಿದ್ರೆ ಆನಂತೂ ಅದನ್ನ ಮನೆಯೊಳಗೆ ಸೇರಿಸ್ತಿದ್ನಿಲ್ಲೆ..' ಎಂದು ಅತ್ತೆ ಕೊಂಕು ನುಡಿದಿದ್ದು ಕೇಳಿದ್ದರೂ ಕೇಳಿಸದಂತಿದ್ದಳು ವಾಣಿ. ಮಗು ಬೆಳ್ಳಗಿತ್ತು. ಗುಂಡಗಿತ್ತು. ನಕ್ಕರೆ ಮುತ್ತು ಉದುರುವಂತಿದ್ದವು. ವಾಣಿ ಹಾಗೂ ಆಕೆಯ ಗಂಡನಿಗೆ ಸ್ವರ್ಗವೇ ಧರೆಗಿಳಿದು ಬಂದಂತಿತ್ತು.
                 ನಂತರದ ದಿನಗಳು ಕನಸಿನಂತೆ ಕಳೆದವು. ಸೂತಕದ ಶಾಸ್ತ್ರದ ಕೊನೆಯ ದಿನ ಮಗುವಿಗೆ ನಾಮಕರಣ ಮಾಡಬೇಕು. ಮನೆಗೆ ಬಂದಿದ್ದ ಪುರೋಹಿತ ಭಟ್ಟರು ಪಂಚಗವ್ಯ ಕುಡಿಸಿ ಶುದ್ಧಿ ಮಾಡಿ ಪಂಚಾಂಗ ತೆಗೆದು `ವ' ಅಕ್ಷರ ಬರುತ್ತದೆ. ವ ಅಕ್ಷರದ ಹೆಸರನ್ನಿಡಿ ಎಂದು ಹೇಳಿದಾಗ ವಾಣಿಗೆ ತಟ್ಟನೆ ನೆನಪಾಗಿದ್ದು ವಿನಾಯಕ. ತನಗ್ಯಾಕೆ ಈ ಹೆಸರೇ ನೆನಪಾಯಿತು ಎಂದು ಅನೇಕ ಸಾರಿ ಆಲೋಚಿಸಿದ್ದಳು ವಾಣಿ. ವಿನಾಯಕನನ್ನು ಮರೆತು ಆಗಲೇ ಬಹಳ ಸಮಯ ಘಟಿಸಿ ಹೋಗಿದೆ. ಆದರೂ ಆತನೇ ಯಾಕೆ ನೆನಪಾಗಬೇಕು. ಆ ಹೆಸರೇ ಯಾಕೆ ಕಣ್ಮುಂದೆ ಸುಳಿಯಬೇಕು..? ಬಿಟ್ಟೆನೆಂದರೂ ಆತನ ಹೆಸರು ಮತ್ತೆ ಮತ್ತೆ ನೆನಪಾಗುತ್ತಿದೆ ಎಂದಾದರೆ ವಿನಾಯಕನ ಬಗ್ಗೆ ನನ್ನ ಮನಸ್ಸಿನಲ್ಲಿ ಇನ್ನೂ ಸ್ಥಾನವಿದೆಯಾ..? ಎಂದೆಲ್ಲ ಆಲೋಚಿಸಿದ್ದರೂ ಗಂಡನ ಬಳಿ ಅದೇ ಹೆಸರನ್ನು ಸೂಚಿಸಿದ್ದಳು.
                 `ವಿನಾಯಕ... ವಿನಾಯಕ.. ವಿನಾಯಕ...' ಎಂದು ಮಗುವಿನ ಬಲಗಿವಿಯಲ್ಲಿ ಮೂರು ಸಾರಿ ಹೆಸರು ಉಚ್ಛರಿಸುವುದರ ಜೊತೆಗೆ ವಿನಾಯಕ ಎಂಬ ಹೆಸರನ್ನು ಮಗು ಪಡೆದುಕೊಂಡಿತ್ತು.

***
               `ಇದೆಂತಾ ಮಳ್ಳು ಹುಚ್ಚು ನಿಂಗೆ..? ಮಗು ಹುಟ್ಟುವುದಕ್ಕೂ ಮುನ್ನ ಅದರ ಲಿಂಗ ಪರೀಕ್ಷೆ ಮಾಡಲಾಗ. ಹುಟ್ಟೋ ಮಗು ಗಂಡೋ ಹೆಣ್ಣೋ ಹೇಳಿ ಪರೀಕ್ಷೆ ಮಾಡಿಸಿದ್ದ ಹೇಳಿ ಗೊತ್ತಾದರೆ ಜೈಲಿಗೆ ಹೋಗಕಾಗ್ತು. ಗಂಡು ಹುಟ್ಟಲಿ, ಹೆಣ್ಣು ಹುಟ್ಟಲಿ. ಯಂದೆ ಮಗು ಅಲ್ದ. ಹುಟ್ಟ ಮಗುವಿನ ಮೇಲೆ, ವಾಣಿಯ ಮೇಲೆ ಎಂತೆಂತಾದ್ರೂ ಆರೋಪ ಹೊರಸಿದ್ರೆ ಸರಿಯಿರ್ತಿಲ್ಲೆ ನೋಡು..' ಎಂದು ಸುಧೀರ ಮೊಟ್ಟ ಮೊದಲು ತನ್ನ ತಾಯಿಯ ಎದುರು ಮಾತನಾಡಿದ್ದ.
               ನಾಲ್ಕೆಕರೆ ಜಮೀನಿನ ಒಡೆಯ ಸುಧೀರ ಹೆಗಡೆ. ಆತನಿಗೆ ವಾಣಿಯ ಜಾತಕ ಬಂದಾಗ ಮೊದಲಿಗೆ ಪೋಟೋ ನೋಡಬೇಕು. ಕೂಸು ಚನ್ನಾಗಿದ್ದರೆ ಮದುವೆಗೆ ಒಪ್ಪಿಕೊಳ್ಳುತ್ತೇನೆ ಎಂದು ಖಡಾಖಂಡಿತವಾಗಿ ಹೇಳಿದ್ದ. ಕೊನೆಗೆ ವಾಣಿಯ ಪೋಟೋವನ್ನು ನೋಡಿದ್ದ. ಚನ್ನಾಗಿದ್ದಾಳೆ ಕೂಸು. ಬಿ.ಕಾಂ ಓದಿದ್ದಾಳೆ ಎಂದಾಗ ಮಾತ್ರ ಸುಧೀರನ ಮನಸ್ಸಿನಲ್ಲಿ ಕೊಂಚ ಅಳುಕು ಉಂಟಾಗಿದ್ದು ನಿಜ. ಓದಿದ ಹುಡುಗಿ. ಕಾಮರ್ಸ್ ಕಾಲೇಜಿನವಳು. ಆ ಕಾಲೇಜಿನ ಹುಡುಗಿಯರು ಸ್ವಲ್ಪ ಜೋರಿರುತ್ತಾರೆ ಎಂದು ಕೇಳಿ ತಿಳಿದಿದ್ದ ಸುಧೀರ ಕೊನೆಗೊಮ್ಮೆ ಮದುವೆಗೆ ಒಪ್ಪಿಕೊಂಡಿದ್ದ. ಶಿರಸಿಯಲ್ಲಿ ಕೆಲಸದಲ್ಲಿದ್ದವನಿಗೆ ವಾಣಿಯ ಕುರಿತು ಅಲ್ಲಿ ಇಲ್ಲಿ ವಿಚಾರಿಸಿದಾಗ ಮಾಹಿತಿ ನೀಡಿದವರು ಅನೇಕ ಜನರಿದ್ದರು. ಆತ ಹಲವರ ಬಳಿ ವಾಣಿಯ ಬಗ್ಗೆ ಕೇಳಿದ್ದ. ಅವರೆಲ್ಲರೂ ಕೂಸಿನ ಒಳ್ಳೆಯ ಗುಣಗಳ ಬಗ್ಗೆ ಹೇಳಿದ್ದರು. ಆದರೆ ಯಾರೂ ಕೂಡ ವಾಣಿ ಹಾಗೂ ವಿನಾಯಕರ ಬಗ್ಗೆ ಹೇಳಿರಲಿಲ್ಲ. ಹುಡುಗಿ ಒಳ್ಳೆಯವಳು ಎಂಬುದು ಗೊತ್ತಾದ ತಕ್ಷಣ ಮದುವೆಗೆ ಒಪ್ಪಿಕೊಂಡುಬಿಟ್ಟಿದ್ದ.
               ಸ್ವರ್ಗದಲ್ಲಿ ನಡೆಯಿತು ಎಂಬಂತೆ ಮದುವೆಯಾಗಿತ್ತು. ಮದುವೆಯಾದ ನಂತರ ಶುಭಗಳಿಗೆಯಲ್ಲಿ ವಾಣಿ ಮನೆಯೊಳಗೆ ಕಾಲಿಟ್ಟಿದ್ದಳು. ಮೊದ ಮೊದಲು ವಾಣಿಯ ಮನಸ್ಸಿನಲ್ಲಿ ಅದೇನು ಬೇಜಾರೋ. ಅದೇನೋ ಆಲೋಚನೆ ಮಾಡುತ್ತ ಕುಳಿತಿರುತ್ತಿದ್ದಳು. ಆಕೆಯ ಅನ್ಯಮನಸ್ಕತೆಗೆ ಕಾರಣವನ್ನರಿಯದ ಸುಧೀರ ಮದುವೆಯಾಗಿ ಬಂದ ಹೊಸತಾದ ಕಾರಣ ಹೀಗೆ ಎಂದುಕೊಂಡಿದ್ದ. ವಾಣಿಯ ಜೊತೆಗೆ ಹೆಚ್ಚು ಹೆಚ್ಚು ಬೆರೆಯಲು ಯತ್ನಿಸುತ್ತಿದ್ದ. ಆದರೆ ಶಿರಸಿಯಲ್ಲಿ ಮಾಡುತ್ತಿದ್ದ ಶೇರ್ ಮಾರ್ಕೇಟ್ ಬಿಸಿನೆಸ್ ಲಾಭದಲ್ಲಿತ್ತು. ಅದು ಲಾಭದತ್ತ ಮುಖ ಮಾಡಿದಂತೆಲ್ಲ ಮನೆಗೆ ಬರುವುದು ಲೇಟಾಗುತ್ತಿತ್ತು. `ಛೇ.. ವಾಣಿಯೆಷ್ಟು ಬೇಜಾರು ಮಾಡಿಕೊಳ್ಳುತ್ತಾಳೋ..' ಎಂದು ಅನೇಕ ಸಾರಿ ಅಂದುಕೊಂಡಿದ್ದ ಸುಧೀರ. `ಖಂಡಿತ ಇವತ್ತು ಮನೆಗೆ ಬೇಗನೇ ಹೋಗಿ ವಾಣಿಯ ಜೊತೆಗೆ ಪ್ರೀತಿಯಿಂದ ಮಾತನಾಡಬೇಕು. ಮುದ್ದುಮಾಡಿ ರಮಿಸಬೇಕು... ' ಎಂದು ಹಗಲು ಹೊತ್ತಿನಲ್ಲೆಲ್ಲ ಎಂದುಕೊಳ್ಳುತ್ತಿದ್ದ ಸುಧೀರನಿಗೆ ರಾತ್ರಿ ಮಾತ್ರ ಏನು ಮಾಡಿದರೂ ಲೇಟಾಗಿ ಹೋಗುತ್ತಿತ್ತು. ತಥ್.. ಎಂದು ತನ್ನನ್ನೇ ತಾನು ಬೈದುಕೊಂಡು  ಮನೆಗೆ ಹೋಗುವ ವೇಳೆಗೆ ಗಂಡನಿಗಾಗಿ ಕಾಯುತ್ತಿರುವ ವಾಣಿಯ ಬಾಡಿದ ಮುಖ ಕಾಣುತ್ತಿತ್ತು. ತನಗರಿವಿಲ್ಲದಂತೆ ಮನಸ್ಸಿನಲ್ಲಿ ಪಾಪಪ್ರಜ್ಞೆ ಮೂಡಿದಂತಾದರೂ ಸುಧೀರ ಅಸಹಾಯಕನಾಗಿದ್ದ.
              `ಹಗಲಿಡಿ ಅದೇನು ಮಾಡುತ್ತಾಳೋ ಪಾ..ಪ. ಹೊತ್ತು ಕಳೆಯುವ ಕಷ್ಟ ಗೊತ್ತಿದೆ. ಮನೆಯಲ್ಲಿ ಆಳುಗಳಿಗೆ ಬರವಿಲ್ಲ. ಆದರೆ ಅವರಿಗೆಲ್ಲ ಅಡುಗೆ ಸೇರಿದಂತೆ ಎಲ್ಲ ರೀತಿಯ ಕಾರ್ಯಗಳನ್ನು ಕೈಗೊಳ್ಳುವುದು ವಾಣಿಯ ಕೆಲಸ. ಅದಕ್ಕೆಲ್ಲ ಎಷ್ಟು ಕಷ್ಟ ಪಡುತ್ತಾಳೋ.. ವಾರಕ್ಕೊಂದು ದಿನವಾದರೂ ಲಕ್ಷ್ಮೀ ಟಾಕೀಸಿಗೆ ಹೋಗಿ ಹೊಚ್ಚ ಹೊಸ ಸಿನೆಮಾ ತೋರಿಸಿಕೊಂಡು ಬರೋಣ ಎಂದರೆ ಬಿಡುವೇ ಸಿಗುತ್ತಿಲ್ಲ. ಮನೆಯಲ್ಲಿ ಅಲ್ಪಸ್ವಲ್ಪ ಸಮಯ ಸಿಕ್ಕರೂ ಜಮೀನಿನ ದೇಖರಿಕೆ ನೋಡಿಕೊಳ್ಳಬೇಕು. ಇಂತಹ ಹಲವು ಹಳವಂಡಗಳ ನಡುವೆ ಹೆಂಡತಿಯನ್ನು ಮರೆಯುತ್ತಿದ್ದೇನಾ..?' ಎಂದು ಸುಧೀರ ರಾತ್ರಿ ಊಟಕ್ಕೆ ಕುಳಿತಾಗ ಯೋಚಿಸುತ್ತಿದ್ದ. ಮೌನವಾಗಿ ಬಡಿಸುವ ವಾಣಿಯ ಕುರಿತು ಮರುಕವಾಗುತ್ತಿತ್ತು. ಊಟ ಮುಗಿಯುವ ವೇಳೆಗೆ ಹಾಸಿಗೆಯ ಕಡೆಗೆ ಹೋಗಬೇಕು. ನಿಜವಾಗಿಯೂ ಹೇಳಬೇಕೆಂದರೆ ಹಾಸಿಗೆಯಲ್ಲಿ ಮಾತ್ರ ವಾಣಿ ಹಾಗೂ ಸುಧೀರ ಗಂಡ-ಹೆಂಡಿರಾಗುತ್ತಿದ್ದರು. ಉಳಿದಂತೆ ಗಂಡ ಎಂಬ ಪಾತ್ರದಲ್ಲಿ ಅವನಿರುತ್ತಿದ್ದ. ಹೆಂಡತಿ ಎಂಬ ಪಾತ್ರದಲ್ಲಿ ಅವಳಿರುತ್ತಿದ್ದಳು. ಬದುಕು ಯಾಂತ್ರೀಕರಣದಂತಾಗಿಬಿಟ್ಟಿತ್ತು.
                ಈ ನಡುವೆ ಆಯಿ ವಾಣಿಗೆ ಇಲ್ಲ ಸಲ್ಲದ ಕಿರಿ ಕಿರಿಗಳನ್ನು ನೀಡುತ್ತಿದ್ದಾಳೆ ಎಂಬುದು ಅದ್ಹೇಗೋ ಗೊತ್ತಾದ ನಂತರ ಸುಧೀರ ತನ್ನನ್ನು ತಾನು ಅಲ್ಪ ಸ್ವಲ್ಪ ಬದಲಾವಣೆ ಮಾಡಿಕೊಳ್ಳಲು ಯತ್ನಿಸಿ ಅದರಲ್ಲಿ ಯಶಸ್ವಿಯೂ ಆಗಿದ್ದ. ಅದರ ಫಲವಾಗಿಯೇ ಆತ ವಾಣಿಯನ್ನು ಶಿರಸಿ ಮಾರಿಕಾಂಬಾ ಜಾತ್ರೆಗೆ ಕರೆದೊಯ್ದಿದ್ದ. ಜಾತ್ರೆಯ ಕಲರವವಿರಬೇಕು. ವಾಣಿ ಹೂವಿನಂತಾಗಿದ್ದಳು. ಬಲೂನಿನಂತೆ ಹಾರಾಡಿದ್ದಳು. ಅಲ್ಲೊಂದು ಕಡೆ ಅದ್ಯಾರೋ ದೋಸ್ತರ ದಂಡಿರಬೇಕು. ಕಾಲೇಜಿನವರಂತೆ ಸಿಕ್ಕಾಗ ಮಾತ್ರ ವಾಣಿ ಮೌನಿಯಾಗಿದ್ದಳು. ತನಗೆ ಪರಿಚಯ ಮಾಡಿಸಿದ್ದಳು. ಅದ್ಯಾರೋ ಹುಡುಗನ ಬಳಿ ಮಾತನಾಡಿದ್ದಳು. ತನ್ನನ್ನೂ ಪರಿಚಯ ಮಾಡಿಸಿದ್ದಳು. ಈ ಹುಡುಗರ ದಂಡು ಸಿಗುವ ಮುನ್ನ ಖುಷಿ ಖುಷಿಯಾಗಿದ್ದ ವಾಣಿ ಆ ನಂತರ ಇದ್ದಕ್ಕಿದ್ದಂತೆ ತನ್ನನ್ನು ಅಲ್ಲಿಂದ ಕರೆದೊಯ್ದದ್ದು, ಕಣ್ಣಿನಂಚಿನಲ್ಲಿ ಮೂಡಿದ್ದ ನೀರನ್ನು ಒರೆಸಿಕೊಂಡಿದ್ದು. ನಂತರ ಜಾತ್ರೆಯ ತುಂಬೆಲ್ಲ ಮೌನವಾಗಿದ್ದನ್ನು ಕಂಡಾಗ ಮಾತ್ರ ಸುಧೀರ ಕುಸಿದುಹೋಗಿದ್ದ. ಖುಷಿಪಟ್ಟುಕೊಂಡು ಇರಬೇಕಿದ್ದ ಹುಡುಗಿಯನ್ನು ಮದುವೆಯಾಗಿ ತಾನು ಕೂಡಿ ಹಾಕಿಬಿಟ್ಟೆನೆ? ಮದುವೆಗೂ ಮುನ್ನ ವಾಣಿ ಬಹಳ ಖುಷಿಯಿಂದಿದ್ದಳು. ಅವಳನ್ನು ಆದರಿಸುವ, ಇಷ್ಟಪಡುವ ಗೆಳೆಯರ ದಂಡು ಬಹಳ ದೊಡ್ಡದಿತ್ತು. ತಾನು ಮದುವೆಯಾಗುವ ಮೂಲಕ ಹಾರುವ ಹಕ್ಕಿಯನ್ನು ತಂದು ಪಂಜರದಲ್ಲಿ ಕೂಡಿಟ್ಟೆನಾ..? ಯಾಕೋ ತಪ್ಪು ಮಾಡಿದೆ ಎಂದೆಲ್ಲ ಆಲೋಚಿಸಿದ್ದ ಸುಧೀರ.  ವಾಣಿಯ ಕಣ್ಣೀರಿನ ನಿಜವಾದ ಕಾರಣ ಗೊತ್ತಾಗದಿದ್ದರೂ ತನ್ನ ನೇರಕ್ಕೆ ಆಲೋಚನೆ ಮಾಡಿದ್ದ ಸುಧೀರ. ಏನಾದರಾಗಲಿ ವಾಣಿಗಾಗಿಯೇ ದಿನದಲ್ಲಿ ಒಂದಷ್ಟು ದಿನವನ್ನು ಮೀಸಲಿರಿಸಬೇಕು ಎನ್ನುವ ನಿರ್ಧಾರವನ್ನು ಸುಧೀರ ತೆಗೆದುಕೊಂಡು ಅದರಂತೆಯೇ ನಡೆದುಕೊಳ್ಳ ಹತ್ತಿದ್ದನ್ನು ವಾಣಿಯೂ ಗಮನಿಸಿದ್ದಳು.
                ಇದ್ದಕ್ಕಿದ್ದಂತೆ ಒಂದು ದಿನ ವಾಣಿ ತನ್ನಲ್ಲಿ ಇನ್ನೊಂದು ಜೀವ ಮೊಳೆತಿದೆ ಎಂದಾಗ ಸುಧೀರ ಬಾನಿಗೆ ಜಿಗಿದಿದ್ದ. ಆ ನಂತರವಂತೂ ದೈನಂದಿನ ಶೇರ್ ಮಾರ್ಕೇಟಿನ ಕೆಲಸವನ್ನು ಬದಿಗೊತ್ತಿ ಹೆಂಡತಿಯ ಜೊತೆಗೆ ಕಳೆಯತೊಡಗಿದ್ದ. ಹುಟ್ಟುವ ಮಗು ಹಾಗಿರುತ್ತದೆ, ಹೀಗಿರುತ್ತದೆ ಎಂದೆಲ್ಲ ಕನಸನ್ನು ಕಟ್ಟಲಾರಂಭಿಸಿದ್ದ. ಗಂಡು ಮಗುವೇ ಹುಟ್ಟಲಿ ದೇವರೆ ಎಂದೂ ಆಗಾಗ ಬೇಡಿಕೊಳ್ಳುತ್ತಿದ್ದ. ಹೀಗಿದ್ದಾಗಲೇ ಒಂದಿನ ಇದ್ದಕ್ಕಿದ್ದಂತೆ ಆಯಿ ಬಂದು `ಯೇ ತಮಾ.. ವಾಣಿಯ ಹೊಟ್ಟೆಲಿರೋ ಮಗು ಕೂಸಾ..? ಮಾಣಿಯಾ ಹೇಳಿ ನೋಡಿಸ್ಕ್ಯಂಡು ಬರಕಾಗಿತ್ತಲಾ.. ಮಾಣಿಯಾದ್ರೆ ಅಡ್ಡಿಲ್ಯಾ.. ಕೂಸಾದ್ರೆ ಬ್ಯಾಡದಾ..' ಎಂದು ಹೇಳಿದ್ದಳು. ಸುಧೀರನೂ ಹುಂ ಎಂದು ವಾಣಿಯ ಬಳಿ ಬಂದು ಕೇಳಿದ್ದ. ಆಗ ವಾಣಿ ಸಿಟ್ಟಿನಿಂದ ಬೇಡವೇ ಬೇಡ ಎಂದಿದ್ದಳು. ಅದಕ್ಕೆ ಪ್ರತಿಯಾಗಿ ಸುಧೀರ ಆಯಿಯನ್ನು ಎದುರುಹಾಕಿಕೊಂಡು ಮಾತನಾಡಿದ್ದ. ವಾಣಿಗೆ ಸುಧೀರ ಆಯಿಯ ಬಳಿ ಹೇಳಿದ್ದ ಮಾತನ್ನು ಕೇಳಿದ ನಂತರ ಗಂಡನ ಕುರಿತು ಮೂಡಿದ್ದ ಅಭಿಮಾನ ಇಮ್ಮಡಿಸಿತ್ತು.
                ವಾಣಿಗೆ ಒಂಭತ್ತು ತಿಂಗಳು ತುಂಬಿದಾಗಲೇ ಸುಧೀರ ನಿಂತಲ್ಲಿ ನಿಲ್ಲಲಿಲ್ಲ ಕೂತಲ್ಲಿ ಕೂರಲಿಲ್ಲ ಎನ್ನುವಂತಾಗಿದ್ದ. ಶುಭಗಳಿಗೆಯಲ್ಲಿ ವಾಣಿ ಹಡೆದಳು. ಹುಟ್ಟಿದ ಮಗು ಗಂಡಾಗಿತ್ತು. ಹರಕೆ ಹೊತ್ತುಕೊಂಡಿದ್ದ ಪರಿಣಾಮ ಹೀಗಾಗಿದೆ ಎಂದುಕೊಂಡ ಸುಧೀರ. ನಂತರದ ದಿನಗಳೆಲ್ಲ ಕನಸಿನಂತೆ ಕಳೆದುಹೋದವು. ಭಟ್ಟರು ಪಂಚಾಂಗ ನೋಡಿದವರೇ ವ ಅಕ್ಷರದ ಹೆಸರನ್ನು ಇಡಬೇಕು ಎಂದಾಗ ಮಾತ್ರ ಆಲೋಚನೆಗೆ ಬಿದ್ದಿದ್ದ ಸುಧೀರ. ಶಾಲೆಗೆ ಸೇರಿಸಿದರೆ ಅನುಕೂಲವಾಗುತ್ತದೆ ಎಂಬ ಕಾರಣಕ್ಕಾಗಿ ಅ ಅಕ್ಷರದಿಂದ ಆರಂಭವಾಗುವ ಹೆಸರನ್ನಿಡಬೇಕು ಎಂದಾಗ ಭಟ್ಟರು ವ ಅಕ್ಷರವನ್ನು ಸೂಚಿಸಿದ್ದರು. ಈ ಕುರಿತು ಆಲೋಚನೆಗೆ ಬಿದ್ದಿದ್ದರೂ ವ ಅಕ್ಷರದಿಂದ ಶುರುವಾಗುವ ಹೆಸರನ್ನಿಡುವುದೇ ಸೂಕ್ತ ಎಂದುಕೊಂಡ ಸುಧೀರ. ತಕ್ಷಣವೇ ಫೇಸ್ ಬುಕ್ಕಿಗೆ ತೆರಳಿ ತನ್ನ ಗೋಡೆಯಲ್ಲಿ `ವ..' ಅಕ್ಷರದಿಂದ ಆರಂಭವಾಗುವ ಗಂಡು ಮಗುವಿನ ಹೆಸರನ್ನು ಸೂಚಿಸಿ. ತನ್ನ ಮಗುವಿಗೆ ಇಡಬೇಕು ಎಂದೂ ಸ್ಟೇಟಸ್ ಅಪ್ ಡೇಟ್ ಮಾಡಿ ಬಂದಿದ್ದ. ಹೀಗೆ ಅಪ್ ಡೇಟ್ ಮಾಡಿದ್ದ ಅರ್ಧ ಗಂಟೆಯಲ್ಲಿ ವ ಅಕ್ಷರದ ವಿಚಿತ್ರ, ವಿಕ್ಷಿಪ್ತ, ವಿಲಕ್ಷಣ ಹೆಸರುಗಳನ್ನೆಲ್ಲ ಫೇಸ್ ಬುಕ್ ಮಂದಿ ಬರೆದು ಬಿಸಾಡಿದ್ದರು. ಅದನ್ನು ನೋಡಿ ಸುಮ್ಮನಾಗಿದ್ದ ಸುಧೀರ ಹೆಂಡತಿಯ ಬಳಿ ಬಂದು `ವ' ಅಕ್ಷರದ ವಿಷಯ ತಿಳಿಸಿದ್ದ ತಕ್ಷಣ ಆಕೆ ಆಲೋಚಿಸಿ ವಿನಾಯಕ ಎಂದಿದ್ದಳು.
                 ವ ಅಕ್ಷರದಿಂದ ಎಷ್ಟೆಲ್ಲ ಮಾಡರ್ನ್ ಹೆಸರುಗಳಿವೆ. ವಿನಾಯಕ ಎಂಬುದು ಹಳೆಯದಾಗಿಲ್ಲವಾ..? ಎಂದು ವಾಣಿಯ ಬಳಿ ಕೇಳಬೇಕೆನ್ನುವಷ್ಟರಲ್ಲಿ ವಾಣಿಯೇ `ವರದಮೂರ್ತಿ ಗಣಪತಿಯ ಬಳಿ ಗಂಡು ಮಗು ಹುಟ್ಟಿದರೆ ನಿನ್ನ ಹೆಸರನ್ನು ಇಡುತ್ತೇನೆ ಎಂದುಕೊಂಡಿದ್ದೆ.. ಅದಕ್ಕೆ ಹಳೆಯದಾದರೂ ಪರವಾಗಿಲ್ಲ ಈ ಹೆಸರನ್ನಿಟ್ಟಿದ್ದೇನೆ..' ಎಂದು ಹೇಳಿದ್ದಳು.
                 ವಾಣಿಗೆ ಮತ್ತೆ ವಿನಾಯಕ ನೆನಪಾಗಿದ್ದ. ಸುಧೀರ ವಿನಾಯಕನ ಹೆಸರನ್ನೇ ಮಗುವಿನ ಕಿವಿಯಲ್ಲಿ ಉಚ್ಛರಿಸಿದ್ದ.

***

Wednesday, March 26, 2014

ಪ್ರೇಮಪತ್ರ (ಕಥೆ)

 `ಪ್ರೀತಿಯ ಜಯಾಳಿಗೆ..
ನಿನ್ನ ಕಂಡ್ರೆ ನಂಗೆ ಒಂಥರಾ ಆಕ್ತು. ಮನಸೆಲ್ಲಾ ಹೂವಿನಂಗೆ ಹಾರಾಡಲೆ ಹಿಡಿತು. ನಿನ್ನ ಉದ್ದ ಜಡೆ, ಆಗಾಗ ನೀನು ಹರಡಿಕೊಂಡು ಬರುವ ಕೂದಲು, ಹೈಸ್ಕೂಲಿಗೆ ಬಪ್ಪಕೀದ್ರೆ ಆನು ನೋಡ್ತಾ ಇದ್ದಿ ಹೇಳಿ ಗೊತ್ತಿದ್ರೂ ನನ್ನ ನೋಡದೇ ಸತಾಯಿಸದು ಈ ಮುಂತಾದ ಹಲವಾರು ಕಾರಣಗಳೇ ನನ್ನನ್ನು ಸೆಳೆದಿದ್ದು.
             ಸುಮಾರ್ ದಿನದಿಂದ ಆನು ನಿಂಗೆ ಹೇಳವು ಅಂದ್ ಕಂಡಿದ್ದಿದ್ದಿ. ನಿನ್ನನ್ನು ನೋಡವು ಹೇಳಿ ನಿಮ್ಮನೆ ಹತ್ರನೂ ಬಂದಿದ್ದಿದ್ದಿ. ನಿನ್ ಅಪ್ಪಯ್ಯ ಅಲ್ಲಿ ಕಂಡ ತಕ್ಷಣ ಆನು ಹಂಗೆ ಓಡ್ ಬಂದ್ ಬಿಟ್ಟಿದ್ದಿ. ನನ್ನ ಮನಸ್ಸಿನ ಭಾವನೆ ನಿಂಗೆ ಹೇಳದು ಹೆಂಗೆ ಹೇಳಿ ಆಲೋಚನೆ ಮಾಡ್ತಾ ಇದ್ದಾಗಲೇ ಪಕ್ಕದ ಮನೆಯ ನವೀನ ಹಾಗೂ ರಾಜೇಂದ್ರ ಯನ್ನ ಹತ್ರ ಪತ್ರ ಬರಿ ಹೇಳಿದ್ದ ಅದಕ್ಕೆ ಆನು ಬರೀತಾ ಇದ್ದಿ.
              ನಾನು ಬಹಳ ದಿನಗಳಿಂದ ನಿನ್ನನ್ನು ಇಷ್ಟ ಪಟ್ಟಿದ್ದಿ. ಆದರೆ ಹೇಳ್ ಕ್ಯಂಬಲೆ ಒಂಥರಾ ಆಗ್ತಾ ಇತ್ತು. ಈ ಪತ್ರದ ಮೂಲಕ ನನ್ನ ಮನಸಿನ ಭಾವನೆಗಳನ್ನು ನಿನ್ ಹತ್ರಕ್ಕೆ ಹೇಳ್ತಾ ಇದ್ದಿ...

....

          ಇಷ್ಟು ಬರೆದಿದ್ದ ಪತ್ರವೊಂದು ಗಂಗೆಯ ಕೈಗೆ ಸಿಕ್ಕಾಗ ಇದ್ಯಾರ ಕೆಲಸವಿರಬಹುದು ಎನ್ನುವ ಆಲೋಚನೆ ಮೂಡಿದ್ದಂತೂ ಸತ್ಯ. ಮನೆಯಲ್ಲಿ ನಾಲ್ಕು ಜನ ಮೈದುನರಿದ್ದ. ನಾಲ್ವರಲ್ಲಿ ಹೈಸ್ಕೂಲಿಗೆ ಹೋಗುವ ಮೈದುನರು ಇಬ್ಬರು. ಅವರಲ್ಲಿ ಯಾರೋ ಒಬ್ಬರು ಯಾವುದೋ ಹುಡುಗಿಗೆ ಪತ್ರ ಬರೆದಿದ್ದಾರೆ ಎಂದುಕೊಂಡಳು ಗಂಗೆ.
           ಹೀಗೆ ಒಂದು ದಿನ ಬಟ್ಟೆ ತೊಳೆದು ವಸ್ತ್ರ ಒಣಗಿಸಲು ಮೇಲ್ಮೆತ್ತಿಗೆ ಹೋಗಿದ್ದಾಗ ಗಂಗತ್ತಿಗೆಯ ಕೈಗೆ ಆ ಪತ್ರ ಸಿಕ್ಕಿತ್ತು. ಪತ್ರವನ್ನು ಓದಿದ ತಕ್ಷಣ ಯಾರ ಕೆಲಸ ಇರಬಹುದು ಇರು ಎನ್ನುವುದು ಗಂಗೆಗೆ ಗೊತ್ತಾಗಿರಲಿಲ್ಲ. ಜೊತೆಗಿದ್ದ ವಸುಮತಿ ಪತ್ರವನ್ನು ನೋಡಿ `ಇದು ನಾಗಣ್ಣಯ್ಯನ ಅಕ್ಷರ.. ಅಂವ ಯಾರಿಗೋ ಪತ್ರ ಬರದ್ದಾ..' ಎಂದಾಗಲೇ ನಾಗೇಶ ಹೀಗೂ ಮಾಡುತ್ತಾನೆ ಎನ್ನುವುದರ ಅರಿವಾಗಿದ್ದು. ನಾಗೇಶನ ಪ್ರೇಮ ಪುರಾಣ ಬೆಳಕಿಗೆ ಬಂದಿದ್ದು.
              ತನ್ನ ಪ್ರೇಮಪುರಾಣ ಗಂಗತ್ತಿಗೆಗೆ ತಿಳಿದುಹೋಗಿದೆ ಎಂಬ ಸಂಗತಿ ಗೊತ್ತಾದಾಗಿನಿಂದ ನಾಗೇಶ ಮೊಸರಲ್ಲಿ ಕಲ್ಲು ಹುಡುಕುವ ಕಾರ್ಯವನ್ನು ಆರಂಭಿಸಿದ್ದ. ಪಕ್ಕದ ಮನೆಯ ಇಬ್ಬರು ಓರಗೆಯ ಹುಡುಗರ ಜೊತೆಗೆ ಸೇರಿಕೊಂಡು ತೋಟದ ಗುಡ್ಡೆಯ ಜಯಾಳಿಗೆ ಪತ್ರಬರೆಯುವ ಮೂಲಕ ತಮ್ಮ ಪೌರುಷ ಪ್ರದರ್ಶನ ಮಾಡಿದ್ದ ನಾಗೇಶ.  ಹುಮ್ಮಸ್ಸಿನಲ್ಲಿ ಹಾಗೂ ಪಕ್ಕದ ಮನೆಯ ಇಬ್ಬರ ಬೆಂಬಲಕ್ಕೆ ಪ್ರತಿಯಾಗಿ ಬರೆದಿದ್ದ ಪತ್ರವನ್ನು ಕೊಡುವ ಧೈರ್ಯ ನಾಗೇಶನಿಗೆ ಇರದಿದ್ದ ಕಾರಣ ಮೇಲ್ಮೆತ್ತಿಯ ಟ್ರಂಕಿನ ಮೇಲೆ ಪತ್ರ ಕುಳಿತಿತ್ತು. ಅರ್ಧಮರ್ಧ ಬರೆದ ನಂತರ ಅದನ್ನು ಮುಂದುವರಿಸಿ ಮುಕ್ತಾಯಗೊಳಿಸುವ ಬಗೆಯನ್ನೂ ತಿಳಿಯದೇ ಹಾಗೆ ಬಿಟ್ಟಿದ್ದ ಆತ.
                  ನಾಗೇಂದ್ರ ಇಂತದ್ದೊಂದು ಕೆಲಸಕ್ಕೆ ಕೈಹಾಕಿರುವ ವಿಷಯವನ್ನು ಗಂಗೆ ತನ್ನ ಯಜಮಾನ ಸುಬ್ರಾಯಂಗೆ ತಿಳಿಸಲೇಬೇಕು. ಇಲ್ಲದಿದ್ದರೆ ಮನೆಯ ಮಾನವನ್ನು ನಾಗೇಶ ಹರಾಜು ಮಾಡಿಬಿಡುತ್ತಾನೆ ಎಂದುಕೊಂಡ ಆಕೆ ಸಂಜೆ ಮನೆಯವರಿಗೆ ವಿಷಯವನ್ನು ತಿಳಿಸಿದ್ದಳು. ಅದಕ್ಕೆ ಪ್ರತಿಯಾಗಿ ಸುಬ್ರಾಯ `ಹೌದಾ..? ನಾಗೇಶ ಹಿಂಗೆ ಮಾಡಿದ್ದು ಖರೆ ಹೌದಾ..?' ಎಂದು ಕೇಳಿ ಸುಮ್ಮನಾಗಿದ್ದ.

**

                ಯಲ್ಲಾಪುರ ಕಡೆಯ ಗಂಗೆ ಶಿರಸಿ ಕಡೆಗೆ ಮದುವೆಯಾಗಿ ಬಂದ ಸಂದರ್ಭದಲ್ಲಿ ಹವ್ಯಕರಲ್ಲಿ ಹೆಣ್ಣು ಹೆಚ್ಚಾಗಿತ್ತು. ಅವಿಭಕ್ತ ಕುಟುಂಬ ಹಾಗೂ ಸ್ವಲ್ಪ ದೂರದ ಸೀಮೆ. ಆದರೂ ಪರವಾಗಿಲ್ಲ ಸಾಕಷ್ಟು ಆಸ್ತಿಯಿದೆ. ಒಳ್ಳೆಯ ಜನ ಎನ್ನುವ ಕಾರಣಕ್ಕೆ ಗಂಗೆಯ ಮನೆಯವರು ಶಿರಸಿ ಸೀಮೆಗೆ ಮದುವೆ ಮಾಡಿಕೊಟ್ಟಿದ್ದರು. ಗಂಗೆಯ ಗಂಡ ಸುಬ್ರಾಯ, ಮಾವ ವಿಶ್ವೇಶ್ವರ, ಸುಬ್ರಾಯನ ಐದು ಜನ ತಮ್ಮಂದಿರು, ಆರು ಜನ ಅಕ್ಕತಂಗಿಯರೆಲ್ಲ ಮದುವೆಯಾಗಿ ಆರು ತಿಂಗಳವರೆಗೆ ಗಂಗೆಗೆ ಬಹಳ ಒಳ್ಳೆಯವರಂತೆ ಕಂಡಿದ್ದರು. ಆದರೆ ಆ ನಂತರದ ದಿನಗಳಲ್ಲಿಯೇ ಮನೆಯ ಸದಸ್ಯರೆಲ್ಲರ ದುರ್ಗುಣಗಳು ಒಂದೊಂದಾಗಿ ಹೊರಬರತೊಡಗಿತ್ತು.
              ನಾಗೇಶ ಆಗ ಹೈಸ್ಕೂಲು ಓದುತ್ತಿದ್ದ ಮಾಣಿ. ಆಗ ತಾನೆ ಪಿಯುಸಿಗೆ ಬರಲು ಹಾತೊರೆಯುತ್ತಿದ್ದ. ಸರಿಯಾಗಿ ಓದಿದ್ದರೆ ಪಿಯುಸಿ ಮೆಟ್ಟಿಲನ್ನು ಹಾರಾಡುತ್ತ ಹತ್ತಬಲ್ಲ ಸಾಮರ್ಥ್ಯವಿದ್ದ ನಾಗೇಶ ಜಯಾಳ ಹಿಂದೆ ಬಿದ್ದ ಪರಿಣಾಮ ಆರು ವಿಷಯಗಳಲ್ಲಿ ಮೂರರಲ್ಲಿ ಫೇಲಾಗಿದ್ದ. ಪರಿಣಾಮ ತನ್ನ ಓದಿಗೂ ನಮಸ್ಕಾರ ಹೇಳಿದ್ದ. ಓದು ಮುಗಿದ ನಂತರ ಈತ ಬರೆದ ಪತ್ರ ಗಂಗತ್ತಿಗೆಯ ಕೈಗೆ ಸಿಕ್ಕಿಬಿದ್ದಿತ್ತು. ಮನೆಯಲ್ಲಿ ಎಲ್ಲಾದರೂ ಹೇಳಿಬಿಟ್ಟರೆ ಎನ್ನುವ ಭಯ ಆತನನ್ನು ಆವರಿಸಿದ ಪರಿಣಾಮ ಗಂಗತ್ತಿಗೆಯ ಉಳಿದ ಕೆಲಸಗಳಲ್ಲಿ ತಪ್ಪು ಹುಡುಕಿ ಸುಮ್ಮನಿರಿಸಲು ಪ್ರಯತ್ನ ಮಾಡಿದ್ದ.
              ಪ್ರೇಮಪತ್ರ ಪ್ರಕರಣ ಇಡೀ ಊರಿನಲ್ಲಿ ನಾಲ್ಕೈದು ದಿನ ಎಲ್ಲರ ಬಾಯಲ್ಲೂ ನಲಿದಾಡುತ್ತಿತ್ತು. ನಾಗೇಶ ಎಲ್ಲಾದರೂ ರಂಪಾಟ ಮಾಡಿಬಿಟ್ಟರೆ ಎನ್ನುವ ಕಾರಣಕ್ಕಾಗಿ ಊರಿನವರೆಲ್ಲ ಸುಮ್ಮನಿದ್ದರು. ತನ್ನ ಪ್ರೇಮಪುರಾಣ ಗಂಗೆಯಿಂದಾಗಿಯೇ ಲೋಕಾರ್ಪಣೆಯಾಯಿತು ಎನ್ನುವುದು ನಾಗೇಶನ ಸಿಟ್ಟು. ಹೇಗಾದರೂ ತೀರಿಸಿಕೊಳ್ಳಬೇಕೆಂದುಕೊಳ್ಳುತ್ತಿದ್ದ ನಾಗೇಶ.

***
           ದೊಡ್ಡಮನೆ ವಿಶ್ವೇಶ್ವರ ಭಾವ ತೀರಿಕೊಂಡಿದ್ದು ಸುಬ್ರಾಯ ಮನೆಯ ಯಜಮಾನನಾಗಲು ಪ್ರಮುಖ ಕಾರಣವಾಯಿತು. ವಯಸ್ಸಿನಲ್ಲಿ ಹಿರಿಯ ಹಾಗೂ ಮನೆಯ ಹಿರೇ ಅಣ್ಣ ಎನ್ನುವ ಕಾರಣಕ್ಕಾಗಿ ಸುಬ್ರಾಯ ಯಜಮಾನ್ತನಿಗೆ ವಹಿಸಿಕೊಂಡಿದ್ದ. ಮೊದ ಮೊದಲಿಗೆ ಎಲ್ಲ ಸುರಳೀತವೇ ಇತ್ತು. ಆದರೆ ಮೊದಲಿಗೆ ವರಾತ ಆರಂಭಿಸಿದವನೇ ನಾಗೇಶ. ಗಂಗೆಗೆ ಇದು ಗೊತ್ತಾಗಿದ್ದು. ಮನೆಯಲ್ಲಿ ಎಲ್ಲರದ್ದೂ ಒಂದು ದಾರಿಯಾದರೆ ನಾಗೇಶನದ್ದೇ ಇನ್ನೊಂದು ದಾರಿಯೆಂಬಂತಾಗಿತ್ತು. ಬೆಳಗಿನ ಆಸರಿಗೆಯನ್ನು ಎಲ್ಲರೂ ಕುಡಿದು ಗದ್ದೆಯೋ-ತೋಟವೋ ಎಂಬಂತೆ ತಮ್ಮ ತಮ್ಮ ಕೆಲಸಕ್ಕೆ ಹೋದರೆ ಎಲ್ಲರಿಗಿಂತ ತಡವಾಗಿ ಬಂದು ತಿಂಡಿ ತಿನ್ನಲು ಕುಳಿತುಕೊಳ್ಳುವ ನಾಗೇಶ ಅದು ಸರಿಯಿಲ್ಲ ಇದು ಸರಿಯಿಲ್ಲ ಎಂದು ಸೊಖಾ ಸುಮ್ಮನೆ ಹೇಳತೊಡಗಿದಾಗಲೇ ಗಂಗೆಗೆ ನಾಗೇಶ ವಿಚಿತ್ರವಾಗಿ ಆಡುತ್ತಿದ್ದಾನೆ ಎನ್ನಿಸಿದ್ದು.
             ಇಷ್ಟಕ್ಕೆ ನಿಲ್ಲದ ನಾಗೇಶ ತಾಯಿ ಮಹಾಕಾಳಕ್ಕನ ಬಳಿ ಚಾಡಿ ಮಾತನ್ನು ಹೇಳಲು ಆರಂಭಿಸಿದಾಗ ಗಂಗೆ ಮೊದಲ ಬಾರಿಗೆ ಆಸ್ಫೋಟಿಸಿ ನಾಗೇಶ ಹಾಗೂ ಮಹಾಕಾಳಕ್ಕನ ಬಳಿ ಜಗಳಕ್ಕೆ ನಿಂತಿದ್ದಳು. ಆದರೆ ಮಹಾಕಾಳಕ್ಕ-ನಾಗೇಶರ ಎದುರು ಒಬ್ಬಂಟಿ ಗಂಗೆ ಸೋತು ಸುಮ್ಮನಾಗಿದ್ದಳು. ಆದರೆ ಆ ನಂತರ ಮಾತು ಮಾತಿಗೆ ಜಗಳ, ಕಿರಿ ಕಿರಿ ಹೆಚ್ಚಿ ಕೊನೆಗೊಮ್ಮೆ ಗಂಗೆ ಇನ್ನು ಈ ಮನೆಯಲ್ಲಿರುವುದು ಅಸಾಧ್ಯ. ಮನೆ ಪಾಲಾಗೋದೇ ಸೈ ಎನ್ನುವ ನಿರ್ಧಾರಕ್ಕೂ ಬಂದಿದ್ದಳು. ಪ್ರೇಮಪತ್ರ ಪ್ರಕರಣವೊಂದು ಮನೆಯ ಒಡೆಯುವ ವರೆಗೂ ಬಂದು ನಿಂತಿದ್ದು ವಿಚಿತ್ರವಾಗಿತ್ತು.


***

          ಗಂಗೆ ಬಯಸಿದರೆ ಮನೆ ಪಾಲಾಗಬೇಕಲ್ಲ. ಗಂಗೆಯ ಹಾಗೂ ಮನೆಯ ಯಜಮಾನ ಸುಬ್ರಾಯನೂ ಪಾಲಿನ ಕುರಿತು ಮಾತಾಡಿದಾಗ ಮಾತ್ರ ಒಂದು ನಿರ್ಣಯ ಸಾಧ್ಯವಿದೆ. ಹೀಗಿದ್ದಾಗ ಒಂದಿನ ಸುಬ್ರಾಯನ ಎದುರಿಗೆ ಗಂಗೆಯ ವಿರುದ್ಧ ಚಾಡಿ ಹೇಳಲು ಬಂದ ನಾಗೇಶ. ಸುಬ್ರಾಯನಿಗೂ ಒಳಗಿಂದೊಳಗೆ ಈ ವಿಷಯ ತಿಳಿದಿದ್ದ ಕಾರಣ ಮೊದ ಮೊದಲು ಸುಮ್ಮನಿದ್ದ. ಆದರೆ ಈ ಸಾರಿ ಸುಬ್ರಾಯನಿಂದಲೂ ಸುಮ್ಮನಿರಲು ಆಗಲಿಲ್ಲ.
          `ಎಂತದಾ ನಿನ್ ಹೆಂಡ್ತಿ ಹೇಳಿ ನೀನು ವಹಿಸ್ಕಂಡು ಬರ್ತ್ಯನಾ..?' ನಾಗೇಶ ಸುಬ್ರಾಯನಿಗೆ ಮಾರುತ್ತರ ನೀಡಿದ್ದ.
          `ನಿನ್ ಹಣೆಬರಹ ಯಂಗೆ ಗೊತ್ತಿದ್ದಾ.. ನೀ ಎಂತಕ್ಕೆ ಹಿಂಗೆ ಚಾಡಿ ಹೇಳ್ತಾನೂ ಇದ್ದೆ ಹೇಳೂ ಯಂಗೆ ಗೊತ್ತಿದ್ದು.. ಹೇಳವನಾ..?' ಎಂದು ಸುಬ್ರಾಯ ಗುಡುಗಿದಾಗ ತಬ್ಬಿಬ್ಬಾಗಿದ್ದ ನಾಗೇಶ ಬಾಲಮುಚ್ಚಿಕೊಂಡ ಕುನ್ನಿಯಂತಾಗಿ ಸುಮ್ಮನೆ ಹೋಗಿದ್ದ.
       
***

         ಮನೆಯಲ್ಲಿ ಸ್ಥಿರಾಸ್ತಿ ಪಾಲು ಮಾಡುವ ಸಲುವಾಗಿ ಪಂಚರು ಸೇರಿದ್ದರು. ನಾಗೇಶ ಮತ್ತೆ ಪುನಃ ತನ್ನ ಹಳೆಯ ವರಾತ ಆರಂಭಿಸಿದ. `ಸುಬ್ಬಣ್ಣಯ್ಯ ಮಾಡ್ತಾ ಇದ್ದಿದ್ದು ಸರಿಯಿಲ್ಲೆ.. ಗಂಗತ್ತಿಗೆ ಅವನ ಮನಸ್ಸಿನಲ್ಲಿ ಹಚ್ಚಿಕೊಟ್ಟಿದ್ದಕ್ಕೆ ಹಿಂಗೆ ಮಾಡ್ತಾ ಇದ್ದ...' ಎಂದು ಮಾತನಾಡಲು ಆರಂಭಿಸಿದ.
          ಸುಬ್ರಾಯನಿಗೆ ಇನ್ನು ತಡೆದುಕೊಳ್ಳುವುದು ಅಸಾಧ್ಯ ಎಂಬಂತಾಯಿತು. `ಸುಮ್ಮಂಗಿರಾ ಕಂಡಿದ್ದಿ.. ಆ ಜಯಂಗೆ ಅಲ್ದನಾ ನೀ ಪತ್ರ ಬರೆದಿದ್ದಿದ್ದು. ಅದನ್ನು ಹುಗಸಿಟ್ಟಿದಿದ್ಯಲಾ ಮ್ಯಾಲ್ ಮೆತ್ತಿಗೆ. ಅದು ಯಮ್ಮನೇದರ ಕೈಗೆ ಸಿಕ್ಚು ಹೇಳೆ ಅಲ್ದನಾ ನಿಂಗೆ ಸಿಟ್ಟು ಬಂದಿದ್ದು. ಅಲ್ದಾ.. ಪತ್ರ ಬರೆದ ಮೇಲೆ ಅದನ್ನ ದಾಢಸಿಕ್ಯಂಬಲೆ ಆಕ್ತಿಲ್ಲೆ ಹೇಳಾದ್ರೆ ಪತ್ರ ಎಂತಕ್ಕೆ ಬರಿಯವಾ..? ಹೋಗ್ಲಿ ಬರೆದಿದ್ದಾದ್ರೂ ಅದನ್ನ ಸರಿಯಾದ ಜಾಗದಲ್ಲಿ ಇಡವಾ ಬ್ಯಾಡದಾ.. ಹೋಗಿ ಹೋಗಿ ಎಲ್ಲಾರೂ ಓಡಾಡೋ ಜಾಗದಲ್ಲಿ ಇಟ್ರೆ ಹಿಂಗಾಗದೆ ಇನ್ನೆಂತಾ ಆಕ್ತಾ..? ಸುಮ್ ಸುಮ್ನೆ ಇನ್ನೊಬ್ಬರ ಬಗ್ಗೆ ಹೇಳಕಿಂತಾ ಮೊದಲು ನೀನು ಸರಿ ಆಲೋಚನೆ ಮಾಡ್ಕ್ಯ..' ಎಂದ.
           ಪಂಚರು ಸ್ಥಿರಾಸ್ತಿಗಳನ್ನು ಪಾಲು ಮಾಡಿ, ಚರಾಸ್ತಿಯ ಲೆಕ್ಖಹಾಕಲು ಆರಂಭಿಸಿದ್ದರು.

Saturday, March 22, 2014

ನಿರಾಸೆಯ ಕವನ

ನಿರಾಸೆಯಲ್ಲಿ ಸೈನಾ?
ನಾ ಉಸಿರು ಕಟ್ಟಿ ಓಡಿ ಮುಟ್ಟಿದ
ಬೆಟ್ಟದ ತುದಿಯಲ್ಲಿ ಏನಿದೆ?
ಬಟ್ಟ ಬಯಲು !
ಓಡಿ ತಲುಪಿದ್ದಷ್ಟೇ ಬಂತು |

ನಾಗರೀಕತೆಯ ಮೆಟ್ಟಿಲೇರಿ
ಪುಟ್ಟ ನಗು ಕಟ್ಟಿ, ನೆಟ್ಟ
ನರನಾದರೇನು ಬಂತು?
ಬಿಡಲೊಲ್ಲ ವಾನರ
ಬದಲಾಗಲು ಪ್ರಯತ್ನಿಸಿದ್ದಷ್ಠ ಬಂತು |

ಮರೀಚಿಕೆ ಮೆರೆಯುವ ಮರಳು
ಗಾಡಿನ ಬಯಲು ನಾಡಿನಲ್ಲಿ
ನಡೆದಿದ್ದಷ್ಟೇ ಬಂತು |
ಕೊನೆಯಾಗದ ಉಸುಕು.
ಸುಮ್ಮನೆ ಹಾದಿ ಸಾಗಿದ್ದಷ್ಟೇ ಬಂತು |

ಉಕ್ಕಿ ಹರಿಯುವ ನದಿ ನೀರೊಳು
ಮಂತ್ರಘೋಷದೊಳು ಹವನ-
ಹೋಮವ ಮಾಡಿದರೇನು ಬಂತು ?
ಉರಿಯಲೊಲ್ಲ ಸಮಿಧ |
ಕಿಚ್ಚಿಗೆ ಪ್ರಯತ್ನಿಸಿದ್ದಷ್ಟೇ ಬಂತು |

ಕರಿ ಕಲ್ಲು ಬಂಡೆಯ ನೆತ್ತಿಯಲಿ
ನೀರ ಧುಮ್ಮೆಂದು ಸುರಿದರೆ
ಏನು ಬಂತು ?
ಕುಡಿಯದು ನೀರ ಕಲ್ಲು |
ನೆತ್ತಿಯಲಿ ಸುರಿದಿದ್ದಷ್ಟೇ ಬಂತು |

ನಿರಾಸೆಯೇ ಮೆರೆದ ಬದುಕಿನೊಳು
ಆಸೆಯ ಬಿಸಿಲ್ಗುದುರೆ ಏರಿ ಸಾಧನೆಯ
ಜೊತೆ ಓಡಿದ್ದಷ್ಟೇ ಬಂತು |
ಸಿಗಲೊಲ್ಲದು ಗುರಿ-ಗೆಲುವು |
ಓಡಿ ಸುಸ್ತಾಗಿದ್ದೇ ಬಂತು |

ಎಲ್ಲ ಅರಿತಾಗ ಮೆರೆದು ನಿಂತಿದ್ದು
ಅನುಭವವೆಂಬ ನಿಘಂಟು|
ಸಾಧಿಸುವ ಛಲದ ಗಂಟು |
ಗಂಟಿದ್ದರೆ ಕುಂಟನ್ನೂ ಗೆದ್ದು
ಮುದ್ದು ಗೆಲುವನ್ನು ಪಡೆಯಬಹುದು ||

**
(ಈ ಕವಿತೆಯನ್ನು ಬರೆದಿದ್ದು 5-01-2007ರಂದು ದಂಟಕಲ್ಲಿನಲ್ಲಿ)
(ಈ ಕವಿತೆಯ ಮೊದಲಿನ ಪ್ಯಾರಾ ನೇಮಿಚಂದ್ರರದ್ದು. ಅವರ ಬರಹದಿಂದ ಸ್ಪೂರ್ತಿಯಾಗಿ ಬರೆದದ್ದು. ನಿರಾಸೆಯ ಕೋಡಿಯಲ್ಲಿ ಸಿಲುಕಿದ್ದಾಗ ಬರೆದ ನಿರಾಸೆಯ ಕವಿತೆ )

Thursday, March 20, 2014

ಬೆಂಗಾಲಿ ಸುಂದರಿ-10

ಏಕಾದಶೀ ಗುಡ್ಡದ ಮೇಲಿನ ಸೂರ್ಯೋದಯ
                  ಕಾಂತಾಜಿ ದೇವಾಲಯದಿಂದ ಕೆಲವು ಕಿಲೋಮೀಟರ್ ದೂರದಲ್ಲಿರುವ ಸಾಮಾನ್ಯ ಹೊಟೆಲಿನಲ್ಲಿ ಉಳಿದಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಸಂಜೆಯಾಗುತ್ತಿದ್ದಂತೆ ದೂರದ ಹಿಮಾಲಯದ ಮಾಲೆಯಿಂದ ಬೀಸಿ ಬರತೊಡಗಿದ ಚಳಿಗಾಳಿ ಮೈಮೂಳೆಯಲ್ಲಿ ನಡುಕವನ್ನು ಹುಟ್ಟುಹಾಕಲು ಆರಂಭಿಸಿತ್ತು. ಬಿಸಿಲ ನಾಡಿನಿಂದ ಬಂದ ಸೂರ್ಯನ್ ಆಗಲೇ ಮೈಮೇಲೆ ರಗ್ಗನ್ನು ಹೊತ್ತು ಕುಳಿತಿದ್ದ. ವಿನಯಚಂದ್ರ ಜರ್ಕಿನ್ನು ಹಾಕಿಕೊಂಡಿದ್ದರೂ ಹಲ್ಲು ಕಟಕಟನೆ ಕಡಿಯಲಾರಂಭಿಸಿದ್ದ. ಹಿಮಾಲಯದ ತಪ್ಪಲಿನ ನಾಡಿನಿಂದ ಬಂದ ಕೆಲ ಆಟಗಾರರಿಗೆ ಚಳಿಯ ಅನುಭವವಿದ್ದುದರಿಂದ ಅವರು ಸಾಮಾನ್ಯವಾಗಿ ಹೊಟೆಲಿನ ಎದುರು ಬಯಲಿನಲ್ಲಿ ಅಡ್ಡಾಡುತ್ತಿದ್ದರು. ಆದರೂ ಬಾಯಲ್ಲಿ ಬಿಸಿಯುಸಿರು ಸಾಮಾನ್ಯವಾಗಿತ್ತು.
                   ವಿನಯಚಂದ್ರನಿಗೆ ಉತ್ತರ ಕನ್ನಡದ ಚಳಿಯ ಪರಿಚಯವಿತ್ತು. ಕೆಲದಿನಗಳು ಮಾತ್ರ ಹಲ್ಲು ಕಟೆಯುವಂತಹ ಚಳಿಯದು. ಆದರೆ ಉತ್ತರ ಕನ್ನಡಕ್ಕಿಂತ ಹೆಚ್ಚಿನ ಚಳಿ ಇಲ್ಲಿತ್ತು. ಕೆಲವೇ ಕ್ಷಣಗಳಲ್ಲಿ ಇಬ್ಬನಿ ಮಾಲೆ ಮಾಲೆಯಾಗಿ ಇಳಿಯಲಾರಂಭಿಸಿತು. ಐದು ಮೀಟರ್ ದೂರದಲ್ಲಿ ಏನಿದೆ ಎನ್ನುವುದೂ ಕಾಣಿಸದಷ್ಟು ದಟ್ಟವಾಗಿ ಮಂಜು ಬೀಳಲು ಆರಂಭಗೊಂಡಿತು. ವಿನಯಚಂದ್ರ ಮಂಜು ಮುಸುಕುವುದನ್ನು ನೋಡಿದ್ದ. ಖುಷಿಯಿಂದ ಆಸ್ವಾದಿಸಿದ್ದ. ಮಂಜಿನ ಅಡಿಯಲ್ಲಿ ನಿಂತು ಶೀತ ಮಾಡಿಕೊಂಡಿದ್ದ. ತನ್ನ ಧ್ವನಿಯನ್ನೂ ಕೂರಿಸಿಕೊಂಡಿದ್ದ. ನಂತರ ಕಷ್ಟದಿಂದ ಮಾತನಾಡಿದ್ದ. ನಕ್ಕಿದ್ದ. ಬವಣೆಯನ್ನು ಅನುಭವಿಸಿದ್ದ. ಬೆಳಗು ಮುಂಜಾವಿನಲ್ಲಿ ಜೇಡ ಕಟ್ಟಿದ ಬಲೆಯ ಮೇಲೆ ಮಂಜು ಬಿದ್ದು ಬೆಳ್ಳಗೆ ಹೊಳೆಯುವ ಗೂಡನ್ನು ಕಾಲಿನಿಂದ ಒತ್ತಿ ಏನೋ ಖುಷಿಯನ್ನು ಅನುಭವಿಸಿದ್ದ. ಯಾಕೋ ಮತ್ತೆ ಮನಸ್ಸು ಪ್ರಫುಲ್ಲಗೊಂಡಂತಾಗಿತ್ತು.
                    ವಿನಯಚಂದ್ರ ಫೈರ್ ಕ್ಯಾಂಪಿನ ಸೌಲಭ್ಯ ಇದೆಯೇ ಎಂದು ಕೇಳುವುದನ್ನು ಇತರರೂ ಕಾಯುತ್ತಿದ್ದರೋ ಎಂಬಂತೆ ತವಕಿಸಿದರು. ಅದ್ಯಾರೋ ಫೈರ್ ಕ್ಯಾಂಪಿಗೆ ಬೇಕಾಗುವ ವಸ್ತುಗಳನ್ನು ತಂದರು. ಹೊಟೆಲಿನ ಬಯಲಿನ ಚಿಕ್ಕದೊಂದು ಮೂಲಕೆಯಲ್ಲಿ ಫೈರ್ ಕ್ಯಾಂಪ್ ಹೊತ್ತಿಸಿಯೇ ಬಿಟ್ಟರು. ಸಮಯ ಕಳೆಯಲು ಏನಾದರೂ ಮಾಡಬೇಕಲ್ಲ, ಆಟಗಾರರೆಲ್ಲ ಭಾರತದ ಹಲವಾರು ರಾಜ್ಯಗಳಿಂದ ಬಂದವರು. ತಮ್ಮ ತಮ್ಮ ರಾಜ್ಯದ ವಿಶೇಷತೆಗಳ ಬಗ್ಗೆ ಹೇಳಿ ಎಂದರು. ಪಂಜಾಬಿಗರು ತಮ್ಮೂರಿನ ಬಗ್ಗೆ, ವಿಶೇಷತೆ, ವಿಶಿಷ್ಟತೆಗಳ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡರು. ತಮ್ಮೂರಿಗರು ಯಾವ ರೀತಿ ಖಡಕ್ ಎಂಬುದನ್ನೂ, ತಮ್ಮ ಆಹಾರ ಶೈಲಿ, ತಮ್ಮೂರ ಹುಡುಗಿಯರ ಬಗ್ಗೆಯೆಲ್ಲ ಹೇಳಿದರು. ತಮಿಳ್ನಾಡಿನ ಸೂರ್ಯನ್ ತಮ್ಮ ನಾಡಿನ ಬಗ್ಗೆ ಹೇಳಿದ. ಯಾವಾಗಲೂ ತಮಾಷೆಯಿಂದ ಕಾಲೆಳೆಯುತ್ತ ಮಾತಾಡುತ್ತಿದ್ದ ಸೂರ್ಯನ್ ತಮ್ಮೂರಿನ ಬಗ್ಗೆ ಹೇಳುವಾಗ ತುಸು ಗಂಭೀರನಾಗಿ ಹೇಳಿದ್ದು ವಿನಯಚಂದ್ರನಿಗೆ ಅಚ್ಚರಿಯಾಯಿತು. ತಮ್ಮೂರಿನ ಬಗ್ಗೆ ಆತನಿಗೆ ಇರುವ ಅಭಿಮಾನದ ಬಗ್ಗೆಯೂ ಹೆಮ್ಮೆ ಮೂಡಿತು. ಎಷ್ಟೇ ತಮಾಷೆ ಮಾಡಿದ್ದರೂ ತಮ್ಮೂರಿನ ಬಗ್ಗೆ ಮಾತ್ರ ಗಂಭೀರವಾಗಿ ಮಾತನಾಡಿದ್ದು ವಿಶೇಷವಾಗಿತ್ತು. ಮಹಾರಾಷ್ಟ್ರದವರು, ಉತ್ತರಪ್ರದೇಶದವರೆಲ್ಲ ತಮ್ಮ ತಮ್ಮ ನಾಡಿನ ಬಗ್ಗೆ ಹೇಳಿದರು.
                    ನಂತರ ಬಂದಿದ್ದು ವಿನಯಚಂದ್ರನ ಸರದಿ. ಮಾತಾಡಲು ಆರಂಭಿಸಿದವನಿಗೆ ಏನು ಹೇಳಬೇಕೆಂಬುದೇ ಗೊತ್ತಾಗಲಿಲ್ಲ. ಮಾತನಾಡುವ ಮುನ್ನ ಹಾಗೆ ಹೇಳಬೇಕು, ಹೀಗೆ ಹೇಳಬೇಕು ಎಂದುಕೊಂಡವನಿಗೆ ತನ್ನ ಸರದಿ ಬಂದಾಗ ಎದೆಯೊಳಗೆ ನಡುಕ ಶುರುವಾದಂತಾಯಿತು. ಅಳುಕಿನಿಂದಲೇ ತನ್ನೂರಿನ ಬಗ್ಗೆ ಶುರು ಮಾಡಿದ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ತನ್ನ ಮನೆ, ಅಪ್ಪನ ಹಳೆಯ ಮಹೀಂದ್ರಾ ಕಾರು, ಹವ್ಯಕ ಸಂಪ್ರದಾಯದ ಹಳ್ಳಿ ಹಾಡುಗಳು, ತೊಡದೇವು, ವಿಶೇಷವಾದ ಹವ್ಯಕ ನುಡಿ, ಅಡಿಕೆ, ಅಘನಾಶಿನಿ ನದಿಗಳ ಬಗ್ಗೆಯೆಲ್ಲ ಹೇಳಿದ. ಆರಂಭದಲ್ಲಿ ಅಳುಕಿದರೂ ನಂತರ ಆತನ ಮಾತು ಸ್ಫುಟವಾಗಿತ್ತು. ತಾಸುಗಳ ಕಾಲ ಮಾತನಾಡಿದ. ಕಬ್ಬಡ್ಡಿ ತಂಡದ ಪಾಲಿಗೆ ಹೊಸ ಆಟಗಾರನಾಗಿ ಸೇರಿದ್ದ ವಿನಯಚಂದ್ರ ತನ್ನ ಮಾತಿನಿಂದ ಹಲವು ಆಟಗಾರರನ್ನು ಸೆಳೆದುಕೊಳ್ಳುವಲ್ಲಿ ಸಫಲನಾಗಿದ್ದ. ತಂಡದಲ್ಲಾಗಲೇ ಇದ್ದ ಹಿರಿಯ ಆಟಗಾರರಿಗೆ ಈತನ ಮಾತು ಬಹಳ ಹಿಡಿಸಿತ್ತು. ಒಮ್ಮೆಯಾದರೂ ಕರ್ನಾಟಕದ ಕಾಶ್ಮೀರ ಉತ್ತರ ಕನ್ನಡವನ್ನು ನೋಡಬೇಕು. ಅದರಲ್ಲಿಯೂ ವಿನಯಚಂದ್ರನ ಊರನ್ನು ನೋಡಬೇಕು ಎಂಬಂತಹ ಇಂಗಿತವನ್ನು ವ್ಯಕ್ತಪಡಿಸಿದರು. ತನ್ನೂರಿಗೆ ಖಂಡಿತವಾಗಿಯೂ ಕರೆದೊಯ್ಯುತ್ತೇನೆ ಎಂಬ ಭರವಸೆಯನ್ನು ವಿನಯಚಂದ್ರ ನೀಡಿದ. ಹಲವರಿಗೆ ಉತ್ತರ ಕನ್ನಡದ ಪ್ರಸಿದ್ಧ ಯಾತ್ರಾ ಸ್ಥಳವಾದ ಯಾಣದ ಬಗ್ಗೆ ತಿಳಿದಿತ್ತು. ಒಂದಿಬ್ಬರು ಯಾಣದ ವಿಷಯದ ಬಗ್ಗೆ ಕೇಳಿದರು. ವಿನಯಚಂದ್ರ ಯಾಣಕ್ಕೆ ಎಲ್ಲರನ್ನೂ ಕರೆದೊಯ್ಯುವ ಭರವಸೆಯನ್ನು ನೀಡಿದ.
                     ಎಲ್ಲರ ಮಾತು ಮುಗಿಯುವ ವೇಳೆಗೆ ಸಮಯ ಹನ್ನೆರಡನ್ನೂ ಮೀರಿತ್ತು. ಉತ್ತರದಿಂದ ಬೀಸಿ ಬರುವ ಚಳಿಗಾಳಿ ಮತ್ತಷ್ಟು ಜೋರಾಗಿತ್ತು. ಕೊರೆಯುವ ಚಳಿಗೆ ಹಾಕಿದ್ದ ಫೈರ್ ಕ್ಯಾಂಪಿನಲ್ಲಿ ಬಿದ್ದು ಬಿಡಬೇಕು ಎನ್ನಿಸುತ್ತಿತ್ತು. ಚಳಿಯ ಭಯಕ್ಕೆ ಒಬ್ಬೊಬ್ಬರಾಗಿ ಫೈರ್ ಕ್ಯಾಂಪಿನಿಂದ ರೂಮಿಗೆ ಮರಳಿದರು. ಕೊನೆಯಲ್ಲಿ ಉಳಿದವರು ವಿನಯಚಂದ್ರ ಹಾಗೂ ಮಧುಮಿತಾ ಇಬ್ಬರೆ.
                  `ಮಾತು ತುಂಬ ಚನ್ನಾಗಿತ್ತು' ಎಂದಳು ಮಧುಮಿತಾ.
                  `ಹುಂ.'
                 `ನೀವು ಓದಿದ್ದು ಏನು..?'
                 `ಡಿಗ್ರಿ..'
                 `ಬಹಳ ಚನ್ನಾಗಿ ಮಾತನಾಡುತ್ತೀರಾ..'
                  `ಹೇ.. ಹಾಗೇನಿಲ್ಲ.. ಸುಮ್ಮನೆ ಮಾತನಾಡುತ್ತ ಹೋದೆ.. ಅಷ್ಟೇ..' ಎಂದ.
                  `ನಿಮ್ಮೂರಿನ ಬಗ್ಗೆ ನನಗೆ ಬಹಳ ಕುತೂಹಲ ಆಗ್ತಾ ಇದೆ. ನಿಮ್ಮೂರನ್ನು ನೋಡಬೇಕು ಎನ್ನಿಸುತ್ತಿದೆ.'
                  `ಪಾಸ್ ಪೋರ್ಟ್ ಆಗಿದ್ದರೆ ಹೇಳು. ಖಂಡಿತ ಕರೆದೊಯ್ಯುತ್ತೇನೆ. ನಮ್ಮೂರನ್ನು ನೋಡಲೇಬೇಕು ನೀನು.'
                   `ಹುಂ. ಭಾರತಕ್ಕೆ ಬರುವ ಆಸೆಯಿಂದ ಪಾಸ್ ಪೋರ್ಟ್ ಮಾಡಿಸಿದ್ದೆ. ಮುಂದೆಂದಾದರೂ ಬಾಂಗ್ಲಾದೇಶ ನಮ್ಮನ್ನು ಹೊರ ಹಾಕಿದರೆ ಭಾರತದಲ್ಲಿ ನಮಗೆ ಅವಕಾಶ ಸಿಗಬಹುದು ಎನ್ನುವ ಕಾರಣಕ್ಕೆ ನಮ್ಮ ಮನೆಯಲ್ಲಿ ಎಲ್ಲರೂ ಪಾಸ್ ಪೋರ್ಟ್ ಮಾಡಿಟ್ಟುಕೊಂಡಿದ್ದಾರೆ. ನನ್ನನ್ನು ನಿಮ್ಮೂರಿಗೆ ಕರೆದೊಯ್ಯುತ್ತೀಯಾ?' ಎಂದಳು ಮಧುಮಿತಾ. ವಿನಯಚಂದ್ರ ತಲೆ ಅಲ್ಲಾಡಿಸಿದ.
                   ವಿನಯಚಂದ್ರನಿಗೆ ಮತ್ತೆ ಬಾಂಗ್ಲಾದೇಶ ವಿಚಿತ್ರವೆನ್ನಿಸಿತು. ಬಾಯ್ಬಿಟ್ಟು ಕೇಳಲಿಲ್ಲ.
                   ಮಧುಮಿತಾಳೇ ಮುಂದುವರಿದಳು `ಅದೇನೋ ಹೇಳಿದ್ಯಲ್ಲ ಹವ್ಯಕ ಹಳ್ಳಿ ಹಾಡು ಅಂದ್ಯಲ್ಲ.. ಅದೇನು? ಏನದು? ಹವ್ಯಕರು ಎಂದರೆ ? ಅದೇನದು ತೊಡದೇವು?' ಪ್ರಶ್ನೆಗಳನ್ನು ಸುರಿಸಿದಳು.
                   `ಹವ್ಯಕರೆಂದರೆ ಬ್ರಾಹ್ಮಣರೇ. ಹವಿಸ್ಸನ್ನು ಅರ್ಪಿಸುವವರು ಎನ್ನುವ ಅರ್ಥವಿದೆಯಂತೆ. ನನಗೆ ಪೂರ್ತಿಯಾಗಿ ಗೊತ್ತಿಲ್ಲ. ಹವ್ಯಕರಲ್ಲಿ ಭಟ್ಟರು, ಹೆಗಡೆ, ಜೋಶಿ, ಗಾಂವ್ಕಾರ, ಶಾಸ್ತ್ರಿ, ದೀಕ್ಷಿತ ಹೀಗೆ ಹಲವು ಉಪನಾಮಗಳೂ ಇವೆ. ಉತ್ತರ ಭಾರತದಿಂದ ವಲಸೆ ಬಂದವರೆಂದು ಹೇಳಲಾಗುತ್ತದೆ. ಇತಿಹಾಸ ನನಗೆ ಗೊತ್ತಿಲ್ಲ. ಬಹಳ ಬುದ್ಧಿವಂತರು ಹೌದು.. ಎಲ್ಲರೂ ಸಿಕ್ಕಾಪಟ್ಟೆ ಓದಿಕೊಂಡವರು. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಓದಿಕೊಂಡು ಸಮುದಾಯದವರು ಎನ್ನುವ ಖ್ಯಾತಿ ಹವ್ಯಕರದ್ದು..' ಎಂದ ವಿನಯಚಂದ್ರ.
                 ಮುಂದುವರೆದು `ಮದುವೆ, ಮುಂಜಿ ಸೇರಿದಂತೆ ಹಲವಾರು ಮಂಗಲ ಕಾರ್ಯಗಳಲ್ಲಿ ಹವ್ಯಕರದ್ದೇ ಆದ ವಿಶಿಷ್ಟ ಶೈಲಿಯಲ್ಲಿ ಹಾಡನ್ನು ಹಾಡುತ್ತಾರೆ. ಅದನ್ನು ಹವ್ಯಕರ ಹಳ್ಳಿ ಹಾಡು ಎನ್ನಬಹುದು..' ಎಂದ ವಿನಯಚಂದ್ರ.
                 `ಚಂದ್ರಗೆ ಮುನಿದು ನಿಂದು ಶಾಪವನಿತ್ತು
                 ತಂದು ಸುತ್ತಿದ ಕಿರು ಡೊಳ್ಳಿಗೆ ಉರುಗನ
                  ಸುಂಡಿಲ ಗಣಪತಿಗೆ ಶರಣೆಂದು...'
ಆಕೆಗೆ ಅರ್ಥವಾಗಲಿ ಎಂಬಂತೆ ಒಂದು ಹಾಡನ್ನೂ ಹಾಡಿ ತೋರಿಸಿದ. ಆಕೆಗೆಷ್ಟು ಅರ್ಥವಾಯಿತೋ ಗೊತ್ತಾಗಲಿಲ್ಲ. ಆದರೆ ಮುಖವರಳಿಸಿ ಚಪ್ಪಾಳೆ ತಡ್ಡಿ ವಾವ್ ಸೂಪರ್ ಎಂದು ಹೇಳಿದ್ದು ವಿನಯಚಂದ್ರನಿಗೆ ಖುಷಿಯನ್ನು ತಂದಿತು. ಕೊನೆಗೆ ತೊಡದೇವು ಮಾಡುವ ಬಗೆಯನ್ನೂ ಹೇಳಿದ. ಮಧುಮಿತಾಳಿಗೆ ವಿನಯಚಂದ್ರ ವಿವರಿಸಿ ಹೇಳುತ್ತಿದ್ದ ಬಗೆ ವಿಶೇಷ ಅನುಭವವನ್ನು ನೀಡಿತು. ಈತನಿಗೆ ಏನೆಲ್ಲ ಗೊತ್ತಿದೆಯಲ್ಲ ಎಂದೂ ಅನ್ನಿಸಿತು. ರಾತ್ರಿ ಮತ್ತಷ್ಟು ಆಗುವ ವೇಳೆಗೆ ಇಬ್ಬರೂ ತಮ್ಮ ತಮ್ಮ ರೂಮನ್ನು ಸೇರಿದ್ದರು.

**

ಮಂಜಿನ ಪಂಜರದೊಳಗೆ ಏಕಾದಶಿ ಗುಡ್ಡ ಹಾಗೂ ಅಘನಾಶಿನಿ ಕಣಿವೆ
                           ಕಣ್ಮುಚ್ಚಿ ಅರೆಗಳಿಗೆಯಾದಂತೆನ್ನಿಸಿದೆ ಎನ್ನುವಾಗಲೇ ಯಾರೋ ವಿನಯಚಂದ್ರನ ರೂಮಿನ ಬಾಗಿಲನ್ನು ಬಡಿಯುತ್ತಿದ್ದಾರೆ ಎನ್ನುವ ಅನುಭವ. ಈಗಷ್ಟೇ ಬಂದು ಮಲಗಿದ್ದೇನೆ. ಚಳಿ ಬೇರೆ ಕೊರೆಯುತ್ತಿದೆ. ಮೂಳೆ ಮೂಳೆಗಳನ್ನು ತೂತು ಮಾಡುತ್ತಿದೆಯೇನೋ ಎನ್ನುವ ಅನುಭವ. ಇದ್ಯಾರಪ್ಪಾ ನಿದ್ದೆ ಹಾಳುಮಾಡಿದೋರು ಎಂದುಕೊಳ್ಳುತ್ತಿರುವಾಗ ಮಧುಮಿತಾಳ ಧ್ವನಿ ಕೇಳಿಸಿ ದಿಗ್ಗನೆ ಎದ್ದು ಕುಳಿತ. ನಿದ್ದೆ ಕಡಿಮೆಯಾಗಿದ್ದರಿಂದ ಕಣ್ಣು ಕೆಂಪಾಗಿತ್ತು. ಹೊರ ಬಂದವನನ್ನು ಮಧುಮಿತಾ ಕಾಂತಾನಗರವನ್ನು ಬೆಳಗಿನ ಸೌಂದರ್ಯ ವೀಕ್ಷಣೆಗೆ ಹೇಳಿದಾಗಲೇ ಬೆಳಗಾಗುತ್ತಿರುವ ಅರಿವು ಆತನಿಗಾದದ್ದು. ಎರಡು ಅಚ್ಚರಿ ಆತನನ್ನು ಆ ಸಂದರ್ಭದಲ್ಲಿ ಕಾಡಿದ್ದು ಸುಳ್ಳಲ್ಲ. ಇಷ್ಟು ಬೇಗ ಬೆಳಗಾಯಿತಾ ಎನ್ನುವುದು ಮೊದಲ ಅಚ್ಚರಿಯಾದರೆ ಈಕೆ ತನಗಿಂತ ಲೇಟಾಗಿ ನಿದ್ದೆ ಮಾಡಿದ್ದಾಳೆ. ಇಷ್ಟು ಬೇಗ ಎದ್ದಿದ್ದಾಳಲ್ಲ ಎನ್ನುವುದು ಇನ್ನೊಂದು ಅಚ್ಚರಿ. ತಯಾರಾಗಿ ಬಂದವನನ್ನು ಮಧುಮಿತಾ ಅಲ್ಲೇ ಸನಿಹದ ಚಿಕ್ಕ ಗುಡ್ಡವೊಂದಕ್ಕೆ ಕರೆದೊಯ್ದಳು. ಯಾಕೋ ವಾಚು ನೋಡಿದ ವಿನಯಚಂದ್ರನಿಗೆ ಬೆಳಗಿನ 5.30 ಕಾಣಿಸಿತು. ರಾತ್ರಿಯಂತೆ ಮಾಲೆ ಮಾಲೆಯಾಗಿ ಮಂಜು ಬೀಳುತ್ತಿತ್ತು. ದೂರದಿಗಂತದಲ್ಲೆಲ್ಲೋ ಬಾನಿಗೆ ಕಿತ್ತಳೆ ಬಣ್ಣವನ್ನು ಹಚ್ಚಿದ್ದಾರೋ ಎಂಬಂತಾಗಿತ್ತು.
ಯಾಕೋ ಈ ಊರು ನಮ್ಮ ಮಲೆನಾಡಿನಂತಿದೆಯಲ್ಲ ಎಂದುಕೊಂಡ ವಿನಯಚಂದ್ರನಿಗೆ ಕಂಡಿದ್ದು ಗುಡ್ಡ ಬೆಟ್ಟಗಳ ಸಾಲು.
                      ಅಲ್ಲೆಲ್ಲೋ ದೂರದಲ್ಲಿ ಗಂಗೆಯ ಹಾಗೂ ಬ್ರಹ್ಮಪುತ್ರಾ ನದಿಗಳ ಬಯಲು ಅಸ್ಪಷ್ಟವಾಗಿ ಕಾಣಿಸಿದಂತಾಯಿತು. ಸೂರ್ಯ ಮೂಡಲು ತವಕಿಸುತ್ತಿದ್ದ. ಭಾರತದಲ್ಲಿ ಹುಟ್ಟುವ ಸೂರ್ಯ ನಮ್ಮದೇ ಅರುಣಾಚಲ, ತ್ರಿಪುರಾ, ಮಣಿಪುರಗಳನ್ನು ಮೀಜೋರಾಮ್ ಗಳನ್ನು ಹಾದು ಬಂದು ಬಾಂಗ್ಲಾದೊಳಕ್ಕೆ ತೂರುತ್ತದೆ. ಮತ್ತೆ ಭಾರತಕ್ಕೆ ಕಾಲಿಡುತ್ತದೆಯಲ್ಲ ಎಂತ ಮಜವಾಗಿದೆಯಲ್ಲ ಎಂದುಕೊಂಡ. ತಮ್ಮೂರ ಫಾಸಲೆಯಲ್ಲಿದ್ದ ಏಕಾದಶಿ ಗುಡ್ಡ ವಿನಯಚಂದ್ರನಿಗೆ ನೆನಪಾಯಿತು. ಚಿಕ್ಕಂದಿನಲ್ಲಿ ಸೂರ್ಯೋದಯವನ್ನು ನೋಡಬೇಕೆಂಬ ಕಾರಣಕ್ಕೆ ಒಂದೇ ಗುಕ್ಕಿಗೆ ಏಕಾದಶಿ ಗುಡ್ಡವನ್ನು ಓಡಿ ಹತ್ತುತ್ತಿದ್ದ ವಿನಯಚಂದ್ರ ತನ್ನೂರನ್ನು ಇಬ್ಬನಿ ತಬ್ಬಿ ನಿಂತಿದ್ದ ಬಗೆಯನ್ನೆಲ್ಲ ನೋಡಿ ಆಸ್ವಾದಿಸುತ್ತಿದ್ದ. ದೂರದಲ್ಲೆಲ್ಲೋ ಹುಟ್ಟುವ ಸೂರ್ಯ ಮಂಜಿನ ಮುಸುಕನ್ನು ಸೀಳಿ ತನ್ನತ್ತ ನೋಡಿದಾಗಲೆಲ್ಲ ಅನಿರ್ವಚನೀಯ ಆನಂದವನ್ನು ಆತ ಅನುಭವಿಸುತ್ತಿದ್ದ. ಅಂತಹದೇ ಅನುಭವ ಮತ್ತೊಮ್ಮೆ ಆತನಿಗಾಯಿತು. ಪಕ್ಕದಲ್ಲಿಯೇ ಮಧುಮಿತಾ ನಿಂತಿದ್ದಳು. ಇಂತಹ ಸಡಗರದಲ್ಲಿ ಇಂತಹ ಒಳ್ಳೆಯ ದೃಶ್ಯವನ್ನು ಎಷ್ಟೋ ವರ್ಷಗಳ ನಂತರ ಮತ್ತೆ ತನಗೆ ನೀಡಿದಳಲ್ಲ ಈಕೆ.. ಒಮ್ಮೆ ಹೋಗಿ ತಬ್ಬಿಕೊಳ್ಳಲಾ ಎನ್ನಿಸಿತು. ಮನಸ್ಸನ್ನು ಕಷ್ಟಪಟ್ಟು ನಿಯಂತ್ರಿಸಿಕೊಂಡ.
                     `ನಾನು ಅದೆಷ್ಟೋ ಸಾರಿ ಈ ಊರಿಗೆ ಬಂದಿದ್ದೇನೆ. ಬಾಂಗ್ಲಾ ಸರ್ಕಾರ ನೀಡಿದ ಕೆಲಸ ವರ್ಷಕ್ಕೆ ಕನಿಷ್ಟ 25ಕ್ಕೂ ಅಧಿಕ ಸಾರಿ ನಾನು ಇಲ್ಲಿಗೆ ಬರಬೇಕಾಗುತ್ತದೆ. ಬಂದಾಗಲೆಲ್ಲ ಬೆಳಿಗ್ಗೆ ಮುಂಚೆ ಇಲ್ಲಿಗೆ ಬಂದುಬಿಡುತ್ತೇನೆ. ಎಷ್ಟೇ ಒತ್ತಡವಿರಲಿ, ಬೇಜಾರು, ಸುಸ್ತಾಗಿರಲಿ ಇಲ್ಲಿ ಬಂದಾಗ ಮನಸ್ಸು ಪ್ರಫುಲ್ಲ. ಹಾಯಾಗುತ್ತದೆ. ಕಳೆದುಕೊಂಡ ಚೈತನ್ಯವನ್ನು ಮರಳಿ ಪಡೆದುಕೊಂಡಂತಾಗುತ್ತದೆ. ಏನೋ ಒಂದು ಸೆಳೆತವಿದೆ ಇಲ್ಲಿ..' ಎಂದಳು ಮಧುಮಿತಾ.
                    `ನನಗೆ ನಮ್ಮೂರು ನೆನಪಾಯಿತು.. ನಮ್ಮೂರ ಏಕಾದಶಿ ಗುಡ್ಡ ನೆನಪಾಯಿತು..' ಎಂದ ವಿನಯಚಂದ್ರ ಅದರ ಬಗ್ಗೆ ಹೇಳಿದ.
                      `ನಿಮ್ಮೂರಲ್ಲಿ ಏನಿಲ್ಲ ಹೇಳು ಮಾರಾಯಾ.. ಎಲ್ಲಾ ಇದೆಯಲ್ಲೋ..' ಎಂದಳು ಮಧುಮಿತಾ.
                      `ಹೂಂ..' ಅಂದ ವಿನಯಚಂದ್ರ.
                       ಮತ್ತೊಂದು ಅರ್ಧಗಂಟೆಯಲ್ಲಿ ಸೂರ್ಯನ ಕಿರಣಗಳು ಆ ಗುಡ್ಡವನ್ನು ಸ್ಪರ್ಷಿಸಿದ್ದವು. ಮಂಜಿನ ಹನಿಗಳ ಮೇಲೆ ಬಿದ್ದ ಸೂರ್ಯರಶ್ಮಿ ಫಳ್ಳನೆ ಹೊಳೆಯುತ್ತಿತ್ತು. ಎಷ್ಟು ನೋಡಿದರೂ ಮನಸ್ಸು ತಣಿಯುವುದಿಲ್ಲ. ನೋಡಿದಷ್ಟೂ ನೋಡಬೇಕೆನ್ನಿಸಿತು.  ಮತ್ತೊಂದು ಸ್ವಲ್ಪ ಹೊತ್ತು ಅಲ್ಲಿದ್ದು ಇಬ್ಬರೂ ವಾಪಸಾದರು.
                       ವಾಪಾಸು ತಾವುಳಿದಿದ್ದ ರೂಮಿನ ಬಳಿಗೆ ಬರುವ ವೇಳೆಗೆ ಕೆಲವರು ಎದ್ದಿದ್ದರು. ಇನ್ನೂ ಹಲವರು ಹಾಸಿಗೆಯಲ್ಲಿಯೇ ಇದ್ದರು. ಅವರ್ಯಾರಿಗೂ ಇವರು ಮಲಗಿದ್ದು, ಮುಂಜಾನೆದ್ದು ಗುಡ್ಡವನ್ನು ಹತ್ತಿದ್ದು ಗೊತ್ತೇ ಇರಲಿಲ್ಲ. ಎತ್ಲಾಗೆ ಹೋಗಿದ್ದಿರಿ? ರಾತ್ರಿಯಿಡಿ ನಿದ್ದೆಯನ್ನೇ ಮಾಡಿಲ್ಲವಾ..? ಎಂಬಂತೆ ನೋಡಿದರು. ಹಾಗೆಯೇ ಕೇಳಿದರೂ ಕೂಡ. ಅವರಿಗೆಲ್ಲ ಮುಗುಳ್ನಗುವಿನ ಉತ್ತರವನಿತ್ತು, ತಿಂಡಿ ತಿಂದು ಮತ್ತೊಮ್ಮೆ ಕಾಂತಾಜಿ ದೇವಾಲಯಕ್ಕೆ ತೆರಳಿದರು.
                       ದೇಗುಲದಲ್ಲಿ ಬೆಳಗಿನ ಪೂಜೆ ನಡೆಯುತ್ತಿತ್ತು. ದೇವರಿಗೆ ನಮಿಸಿ, ವಿಶ್ವಕಪ್ ತಮಗೆ ಸಿಗಲಿ ಎಂಬ ಬೇಡಿಕೆಯನ್ನು ದೇವರ ಬಳಿಯಿತ್ತು, ಆಶೀರ್ವಾದ ಪಡೆಯುವ ವೇಳೆಗೆ ಸೂರ್ಯ ಬಾನಿನಲ್ಲಿ ಆಗಲೆ ಸೈಕಲ್ ಹೊಡೆಯಲಾರಂಭಿಸಿದ್ದ.
                       ಮತ್ತೆ ಬಸ್ಸನ್ನು ಹತ್ತಿ ಢಾಕಾದ ಕಡೆಗೆ ಹೊರಳುವ ವೇಳೆಗೆ ಮಧುಮಿತಾ ಹಾಗೂ ವಿನಯಚಂದ್ರ ಇಬ್ಬರಲ್ಲೂ ಸ್ನೇಹಕ್ಕಿಂತ ಮಿಗಿಲಾದ ಭಾವ ಬೆಳೆದಿತ್ತು. ಅದು ಪ್ರೀತಿಯ ಕಡೆಗೆ ಹೊರಳುತ್ತಿತ್ತು. ವಿಷಯ ಅರಿತಿದ್ದ ಸೂರ್ಯನ್ ನಗುತ್ತಿದ್ದ. ಬಸ್ಸಿನಲ್ಲಿ ಒಂದೆರಡು ಸಾರಿ ಕೀಟಲೆಯನ್ನೂ ಮಾಡಿದ್ದ. ಆಗ ಇಬ್ಬರೂ ನಾಚಿದ್ದರು.

(ಮುಂದುವರಿಯುತ್ತದೆ..)

Wednesday, March 19, 2014

ಏನ ಮಾಡಲೆ ಗೆಳತಿ

ಏನು ಮಾಡಲೆ ಗೆಳತಿ
ನೆನಹುಗಳು ನಲಿಯುತಿವೆ
ಬದುಕ ಬೀದಿಯ ಹಲವು
ಕವನಗಳು ಜೊತೆಯಲಿವೆ |

ಹೊಸ ನೀರು ಹರಿಯುತಿದೆ
ಹಳೆ ನೀರ ಮರೆಸುತಿದೆ
ಹಳೆ ಕುರುಹ ನಡುವಿನಲಿ
ಹೊಸ ಚಿಗುರು ಉದಿಸುತಿದೆ |

ಏನ ಮಾಡಲೆ ಗೆಳತಿ
ನೆನಹುಗಳು ಸವೆಯುತಿದೆ
ಹಳೆ ಬಾಲ್ಯ ಹಸಿ ಹರೆಯ
ಕಾಣದಲೆ ಮರೆಯುತಿದೆ |

ಹೊಸತನವು ಉದಿಸುತಿದೆ
ಹಳೆಕಾಲ ಕಮರುತಿದೆ
ಹಳೆ ನೆನಪ ಸಖ್ಯದೊಳು
ಜಗ ಜೀವ ಓಡುತಿದೆ |

ಏನ ಮಾಡಲೆ ಗೆಳತಿ
ನೆನಹುಗಳು ಮರಳುತಿದೆ
ಕಳೆದ ಕ್ಷಣಗಳ ನೂರು
ಘಟನೆಗಳು ಹೊರಳುತಿದೆ |

***
(ಈ ಕವಿತೆಯನ್ನು ಬರೆದಿದ್ದು 24.03.2007ರಂದು ದಂಟಕಲ್ಲಿನಲ್ಲಿ)

Tuesday, March 18, 2014

ಲೋಕಸಭಾ ಟಿಕೆಟ್ ಪಡೆಯಲು ಕೆಲವು ಸೂತ್ರಗಳು

                 ಲೋಕಸಭಾ ಟಿಕೆಟ್ ಬೇಕಾದರೆ ತಾವು ಈ ಸೂತ್ರಗಳನ್ನು ಅಳವಡಿಸಿಕೊಳ್ಳಿ. ನಿಮಗೆ ಟಿಕೆಟ್ ಲಭ್ಯವಾಗುತ್ತದೆ. ಈ ಸೂತ್ರಗಳನ್ನು ಗಂಭೀರವಾಗಿ ಪರಿಗಣಿಸಿದರೆ ಟಿಕೆಟ್ ಸಿಗಬಲ್ಲದು. ಫನ್ನಿಯಾಗಿ ತೆಗೆದುಕೊಂಡರೆ ನಿಮ್ಮ ಮೂಡು ಸರಿಯಾಗಬಹುದು. ಯಾವ ಯಾವ ಪಕ್ಷಗಳ ಟಿಕೆಟ್ ಬೇಕಾದರೆ ಯಾವ ಯಾವ ರೀತಿ ಮಾಡಬೇಕು ಎನ್ನುವುದು ಇಲ್ಲಿದೆ ನೋಡಿ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಆಮ್ ಆದ್ಮಿ ಪಕ್ಷಗಳು ಹಾಗೂ ಇತರೆ ಕೆಲವು ಪಕ್ಷಗಳ ಟಿಕೆಟ್ ಬೇಕಾದಲ್ಲಿ ನೀವು ಅನುಸರಿಸಬೇಕಾದ ಸೂತ್ರಗಳು ಇಲ್ಲಿವೆ. ನಿಮಗೆ ಖಂಡಿತ ಇಷ್ಟವಾಗಬಹುದು.

ಬಿಜೆಪಿ ಟಿಕೆಟ್ ಬೇಕಾದರೆ
1) ದೇಶ ಕಟ್ಟುವ ಮಾತುಗಳನ್ನು ದೊಡ್ಡ ದೊಡ್ಡ ರೂಪದಲ್ಲಿ ಆಡಿ.
2) ಆಗಾಗ ರಾಮ ಹಾಗೂ ರಾಮಮಂದಿರದ ಭಜನೆ ಮಾಡಿ
3) ರಾಷ್ಟ್ರಭಕ್ತಿ, ರಾಷ್ಟ್ರಪ್ರೇಮದ ಕುರಿತು ಮಾತನಾಡಿ
4) ಆಗಾಗ ಮುಸ್ಲಿಮರಲ್ಲಿ ನಮ್ಮ ತಪ್ಪಿದ್ದರೆ ಕ್ಷಮೆ ಇರಲಿ ಎಂದೂ ಹೇಳಿ
5) ಭ್ರಷ್ಟಾಚಾರದ ವಿರುದ್ಧ ಉದ್ದುದ್ದದ ಭಾಷಣ ಬಿಗಿಯಿರಿ
6) ನಮೋ ಭಜನೆ ಮಾಡಿ
7) ಪತ್ರಿಕೆಗಳಲ್ಲಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪ್ರೇಮದ ಕುರಿತು ಸರಣಿ ಲೇಖನಗಳನ್ನು, ಅಂಕಣಗಳನ್ನು ಬರೆಯಿರಿ


ಕಾಂಗ್ರೆಸ್ ಟಿಕೆಟ್ ಬೇಕಾದರೆ
1) ಮೋದಿಯವರನ್ನು ಯದ್ವಾ ತದ್ವಾ ಬಯ್ಯಿರಿ
2) ಮೋದಿಯವರನ್ನು ಕೋಮುವಾದಿ ಎನ್ನಿ
3) ರಾಹುಲ್ ಗಾಂಧಿ ಮುಂದಿನ ಪ್ರಧಾನಿ ಎಂದು ಆಗಾಗ ಹೇಳಿ
4) ಸೋನಿಯಾಗಾಂದಿಗಿಂತ ಮಹಾನ್ ನಾಯಕರಿಲ್ಲ ಎಂದು ಹೇಳುತ್ತಿರಿ
5) ಹಿಂದುಳಿದವರು, ಅಲ್ಪಸಂಖ್ಯಾತರ ಧ್ಯೇಯವೇ ಪರಮಗುರಿ ಎಂದು ಭಾಷಣ ಕೊಚ್ಚಿ
6) ಮುಸ್ಲಿಮರನ್ನು ಎಷ್ಟು ಸಾಧ್ಯವೋ ಅಷ್ಟು ಓಲೈಕೆ ಮಾಡಿ
7) ದೇವಸ್ಥಾನವೊಂದನ್ನು ಬಿಟ್ಟು ಆಗಾಗ ಚರ್ಚು, ಮಸೀದಿಗಳಿಗೆ ಹೋಗಿ ಬರುತ್ತಿರಿ

ಜೆಡಿಎಸ್ ಟಿಕೆಟ್ ಬೇಕಾದರೆ
1) ಸ್ವಲ್ಪ ಕಾಲ ಬಿಜೆಪಿ, ಸ್ವಲ್ಪ ಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದು ಬಂಡೆದ್ದು ಬನ್ನಿ
2) ಅಪ್ಪ-ಮಗನ ಭಜನೆ ಮಾಡಿ
3) ನಿದ್ದೆಯನ್ನು ನಿಮ್ಮ ಖಾಯಂ ಹವ್ಯಾಸವನ್ನಾಗಿ ಮಾಡಿಕೊಳ್ಳಿ
4) ಬೇರೆ ಪಕ್ಷದಿಂದ ಪಕ್ಷಾಂತರ ಮಾಡಿ ಬಂದ ತಕ್ಷಣ ಆ ಪಕ್ಷಗಳನ್ನು ಯದ್ವಾ ತದ್ವಾ ಬೈಯಿರಿ
5) ತಮ್ಮನ್ನು ಬಿಟ್ಟು ಉಳಿದವರೆಲ್ಲರೂ ಮೋಸಗಾರರು ಎಂದು ಹೇಳಿರಿ
6) ಅಪ್ಪ-ಮಗ-ಸೊಸೆ-ಮೊಮ್ಮಗನ ಪೋಟೋಕ್ಕೆ ಆಗಾಗ ಪೂಜೆ ಮಾಡುವ ಪೋಸು ಕೊಡಿ
7) ಭವಿಷ್ಯ, ಜಾತಕ, ನಂಬಿಕೆ, ಮಾಟ, ಮಂತ್ರ ಇವುಗಳಲ್ಲೆಲ್ಲ ಸಿಕ್ಕಾಪಟ್ಟೆ ನಂಬಿಕೆ ಇದೆ ಎನ್ನುವುದನ್ನು ಆಗಾಗ ಪ್ರೂವ್ ಮಾಡಿ ತೋರಿಸಿ

ಉಳಿದಂತೆ ಇರುವುದು ದಿ ಗ್ರೇಟ್ ಆಮ್ ಆದ್ಮಿ ಪಕ್ಷ.
1) ಭ್ರಷ್ಟಾಚಾರದ ವಿರೋಧಿ ಉಪವಾಸ ಮಾಡಿ
2) ಭ್ರಷ್ಟಾಚಾರ ವಿರೋಧಿ ಭಾಷಣ ಹಾಗೂ ಪ್ರತಿಭಟನೆಗಳನ್ನು ಸರಣಿಗಳಂತೆ ಮಾಡಿ, ಆಗಾಗ ಮಾಧ್ಯಮದವರನ್ನು ಜೈಲಿಗೆ ಅಟ್ಟುತ್ತೇನೆ ಎಂದು ಗುಡುಗಿ
3) ನಿಮಗೆ ಯಾರು ಆಗುವುದಿಲ್ಲವೋ ಅವರನ್ನು ನರೇಂದ್ರ ಮೋದಿ ಹಾಗೂ ಅಂಬಾನಿ ಏಜೆಂಟ್ ಎಂದು ಬಯ್ಯಿರಿ
4) ಜನಸಾಮಾನ್ಯ ಎಂದು ಬಿಂಬಿಸಿಕೊಳ್ಳಲು ರೈಲು, ಬೈಕು, ಕಾರು, ಸೈಕಲ್ಲು, ಬಸ್ಸು ಸೇರಿದಂತೆ ಎಷ್ಟು ಸಾಧ್ಯವೋ ಅಷ್ಟು ಜನಸಾಮಾನ್ಯರ ಗಾಡಿಯಲ್ಲಿ ಓಡಾಡಿ ಅವರಿಗೆ ಕಿರಿ ಕಿರಿ ಉಂಟು ಮಾಡಿ
5) ಕುತ್ತಿಗೆಗೆ ಒಂದು ಮಫ್ಲರ್ ಹಾಕಿಕೊಂಡು ಸದಾಕಾಲ ಓಡಾಡಿ
6) ಯಾವುದೇ ಕ್ಷೇತ್ರದಲ್ಲಿ ಬೇಕಾದರೂ ಗುರುತಿಸಿ ತಾಕತ್ತಿದ್ದರೆ ನನ್ನ ವಿರುದ್ಧ ಸ್ಪರ್ಧೆ ಮಾಡಿ ಎಂದು ಮೋದಿಗೆ ಸವಾಲು ಹಾಕಿ
7) ಪ್ರತಿಭಟನೆಯ ವಿರುದ್ಧ ಪ್ರತಿಭಟನೆ ಮಾಡಿ ನೀವೊಬ್ಬ ಉಗ್ರ ಪ್ರತಿಭಟನಾಕಾರ ಎಂಬುದನ್ನು ಸಾಬೀತು ಮಾಡಿ

Monday, March 17, 2014

ಹೇಳದೇ ಉಳಿದ ಮಾತು (ಕಥಾ ಸರಣಿ ಭಾಗ-2)

 `ಹಲೋ...
ವಾಣಿ ಇದ್ದಾ..?' ವಿನಾಯಕ ಮನಸ್ಸು ತಾಳಲಾರದೇ ಪೋನ್ ಮಾಡಿದ್ದ.
                   ಆತ ಪೋನ್ ಮಾಡುವ ವೇಳೆಗಾಗಲೇ ವಾಣಿಯ ಮದುವೆಯಾಗಿ ಮೂರ್ನಾಲ್ಕು ತಿಂಗಳು ಕಳೆದಿತ್ತು.
`ಇಲ್ಯಲಾ ತಮಾ.. ನೀ ಯಾರಾ..? ವಾಣಿ ಅದರ ಗಂಡನ ಮನೆಲ್ಲಿ ಇದ್ದಲ್ಲ..' ವಾಣಿಯ ಆಯಿ ಉತ್ತರ ನೀಡಿದ್ದಳು.
                   `ಹೌದಾ.. ಯಂಗೆ ಅಮೃತಬಳ್ಳಿಮನೆಯಾತು.. ವಿನಾಯ್ಕ ಹೇಳಿ ಯನ್ನ ಹೆಸ್ರು. ವಾಣಿ ಕ್ಲಾಸಿನವ್ವ. ಅವಳ ಪ್ರೆಂಡು.. ಯಂಗೆ ವಾಣಿ ಮನೆಯ ಪೋನ್ ನಂಬರ್ ಸಿಗ್ಲಕ್ಕಾ..?' ವಿನಾಯಕ ಕೇಳಿದ್ದ.
                    `ಓ.ವಿನಾಯಕನನಾ ತಮಾ.. ಅರಾಮ್ ಇದ್ಯಾ.. ವಾಣಿ ಆಗಾಗ ಹೇಳ್ತಾ ಇರ್ತಿತ್ತಾ.. ನೀನು ಯಂಗಳ ನೆಂಟರಡಲಾ..' ವಾಣಿಯ ಆಯಿ ಉತ್ತರ ನೀಡಿದ್ದಳು.
                    `ಹುಂ.. ಹೌದಡಾ.. ಯಾವಾಗಲೋ ವಾಣಿ ಹೇಳಿದ ನೆನಪು.. ವಾಣಿಗೆ ಪೋನ್ ಮಾಡಿದ್ರೆ ಸಿಗ್ಲಕ್ಕಾ ಈಗ..?' ವಿನಾಯ್ಕ ಮತ್ತೆ ಕೇಳಿದ್ದ..
                    `ತಮಾ ನಿನ್ ಆಯಿ ಅಪ್ಪಯ್ಯ ಎಲ್ಲಾ ಅರಾಮ್ ಇದ್ವಾ.. ಎಂತಾ ಮಾಡ್ತಾ ಇದ್ದೆ ನೀನು ಈಗ..?' ವಾಣಿಯ ಆಯಿ ವಿನಾಯಕನ ಪ್ರಶ್ನೆಗೆ ಉತ್ತರಿಸದೇ ತಾನೇ ಪ್ರಶ್ನೆ ಮಾಡಿದಳು.
                    `ಆನು ಬೆಂಗಳೂರಲ್ಲಿ ಇದ್ದಿ ಈಗ. ಯಮ್ಮನೆಲಿ ಎಲ್ಲಾ ಅರಾಮ್ ಇದ್ದ. ನಂಗೆ ಕಾಲೇಜು ದಿನಗಳಲ್ಲಿ ವಾಣಿ ಪ್ರೆಂಡ್ ಆಗಿತ್ತು. ಇವತ್ತು ನೆನಪಾತು ಮಾತಾಡನಾ ಹೇಳಿ ಮಾಡಿದ್ದಿ.. ಅದರ ಮನೆಯ ನಂಬರ್ ಇತ್ತಿಲ್ಲೆ.. ಹಂಗಾಗಿ ನಿಮ್ಮನಿಗೆ ಮಾಡಿದ್ದು..' ವಿನಾಯಕ ಇದ್ದ ವಿಷಯವನ್ನು ಹೇಳಿದ್ದ.
                     ಕೊನೆಗೂ ಉತ್ತರ ನೀಡಲು ಮುಂದಾದ ವಾಣಿಯ ಆಯಿ `ತಮಾ ಆನು ನಂಬರ್ ಕೊಡ್ತಿ ತಡಿ.. ಪಟ್ಟಿ ನೋಡ್ಕ್ಯಂಡು ಹೇಳವು............... ....... ........ ...... ಹಿಡಿ ಇಕಾ ಬರಕಾ..' ವಿನಾಯಕ ಬರೆದುಕೊಂಡ. ವಾಣಿಯ ಆಯಿಯೇ ಮುಂದುವರಿಸಿದಳು `... ಆದರೆ ತಮಾ ಒಂದ್ ಮಾತು ಹೇಳಲಾ.. ನೀನು ಈಗ ವಾಣಿಗೆ ಪೋನ್ ಮಾಡದು ಯಂಗೆಂತಕ್ಕೋ ಸರಿ ಕಾಣ್ತಿಲ್ಲೆ ತಮಾ.. ವಾಣಿಯ ಅತ್ತೆಗೆ ಇದೆಲ್ಲಾ ಸರಿ ಕಾನ್ತಿಲ್ಲೆ.. ರಾಶಿ ಕಟ್ಟು ನಿಟ್ಟಲಾ..' ಎಂದಾಗ ವಿನಾಯಕ ಒಮ್ಮೆ ಪೆಚ್ಚಾದ ಅಷ್ಟೇ ಅಲ್ಲದೇ ವಾಣಿಗೆ ಪೋನ್ ಮಾಡಲೋ ಬೇಡವೋ ಎನ್ನುವ ದ್ವಂದ್ವಕ್ಕೆ ಸಿಲುಕಿದ. ಮನಸು ಒಮ್ಮೆ ಪೋನ್ ಮಾಡು ಎಂದರೆ ಮತ್ತೊಮ್ಮೆ ಬೇಡ ಎನ್ನುವಂತೆ ಅನ್ನಿಸುತ್ತಿತ್ತು. ಪೋನ್ ಹಿಡಿದುಕೊಂಡೇ ಇದ್ದ ವಿನಾಯಕನಿಗೆ ಇದೇ ಆಲೋಚನೆಯಲ್ಲಿ ವಾಣಿಯ ಆಯಿ ಮತ್ತೇನೋ ಹೇಳುತ್ತಿದ್ದರೂ ಕಿವಿಗೆ ಹೋಗಲಿಲ್ಲ. ಎಲ್ಲ ಮಾತುಗಳಿಗೂ ಹೂ.. ಹೂ ಎಂದು ಪೋನಿಟ್ಟ.
                       ಪೋನಿಟ್ಟ ಘಳಿಗೆಯಿಂದ ಹೊಸದೊಂದು ದ್ವಂದ್ವ ವಿನಾಯಕನನ್ನು ಕಾಡಹತ್ತಿತು. ತಾನೀಗ ವಾಣಿಗೆ ಪೋನ್ ಮಾಡಿದರೆ ಆಕೆ ಮಾತನಾಡುತ್ತಾಳೋ ಇಲ್ಲವೋ ಎಂಬ ಬಾವ ಕಾಡಿತು. ಒಂದು ವೇಳೆ ಮಾತನಾಡಿದರೂ ಏನು ಮಾತಾಡಬಹುದು..?  ಪೋನ್ ಮಾಡಿದ ತನ್ನ ಮೇಲೆ ಬೈದು ಇನ್ನು ಮೇಲೆ ಹೀಗೆ ಮಾಡಬೇಡ ಎಂದರೆ..? ವಾಣಿಯ ಬದಲು ಅವಳ ಮನೆಯಲ್ಲಿ ಆಕೆಯ ಅತ್ತೆಯೋ, ಮಾವನೋ, ಗಂಡನೋ ಪೋನ್ ತೆಗೆದುಕೊಂಡರೆ ತಾನ್ಯಾರು ಎಂದು ಹೇಗೆ ಹೇಳುವುದು? ವಾಣಿಯ ಗೆಳೆಯ ತಾನು ಎಂದರೆ ಅವರು ಏನೆಂದುಕೊಂಡಾರು..? ತಾನು ಮಾಡಿದ ಒಂದೇ ಒಂದು ಪೋನು ವಾಣಿಯ ಬದುಕನ್ನು ಹಾಳು ಮಾಡಿದರೆ ಏನು ಮಾಡೋದು..? ಸುಮ್ಮನೆ ಮಾಡಿದೆ ಎನ್ನಲಾ..? ಬಿಟ್ಟು ಬಿಡದೆ ವಿನಾಯಕ ಆಲೋಚಿಸಿದ. ಕೊನೆಗೊಮ್ಮೆ ಪೋನ್ ಮಾಡುವುದು ಬೇಡ ಎನ್ನುವ ನಿರ್ಧಾರಕ್ಕೆ ಬಂದ.
                     `ಛೇ... ಅಷ್ಟು ಪ್ರೀತಿಯಿತ್ತಲ್ಲ.. ನಾನು ಪ್ರಪೋಸ್ ಮಾಡಿಬಿಡಬೇಕಿತ್ತು.. ಅವಳು ನನ್ನನ್ನು ತಿರಸ್ಕರಿಸಿದ್ದರೆ ಮನಸ್ಸಿಗೆ ಸಮಾಧಾನವಾದರೂ ಇರುತ್ತಿತ್ತು. ಆದರೆ ಈಗ ಮನಸ್ಸಿನಲ್ಲಿ ನೂರಾರು ಪ್ರಶ್ನೆಗಳು ಹಾಗೆಯೇ ಉಳಿದುಹೋಗಿಬಿಟ್ಟವು. ಅಲ್ಲಾ ಅವಳಾದರೂ ನನ್ನ ಬಳಿ ನೀನಂದ್ರೆ ನನಗಿಷ್ಟ ಕಣೋ ಎಂದು ಹೇಳಬಹುದಾಗಿತ್ತು..' ಎಂದು ಹಲುಬಿಕೊಂಡ ವಿನಾಯಕ `ಷಿಟ್..' ಎಂದು ಒಮ್ಮೆ ತಲೆಕೊಡವಿಕೊಂಡ.

***
                        ವಿನಾಯಕ ಈಗ ಹೇಗಿರಬಹುದು..? ತಾನೇನೋ ಮದುವೆಯಾಗಿ ಬಂದು ಬಿಟ್ಟೆ. ಆದರೆ ವಿನಾಯಕನ ಪಾಡು ಯಾವ ರೀತಿ ಇದೆ ಎಂಬುದು ಗೊತ್ತಾಗುತ್ತಿಲ್ಲವಲ್ಲ ಎಂದು ವಾಣಿ ಆಲೋಚಿಸುವ ವೇಳೆಗೆ ಆಕೆಗೆ ತನ್ನ ಸಂಸಾರದ ಅನೇಕ ಮಜಲುಗಳನ್ನು ದಾಟಿದ್ದಳು. ಶಿರಸಿಯಲ್ಲಿ ಕೆಲಸ ಮಾಡುವ ಗಂಡ ಬೆಳಿಗ್ಗೆ ಶಿರಸಿಗೆ ಹೋದರೆ ಬರುವುದು ಕತ್ತಲಾದ ಮೇಲೆಯೆ. ಅಲ್ಲಿಯವರೆಗೂ ಮನೆಯಲ್ಲಿ ತಾನು ಸುಮ್ಮನೇ ಇರಬೇಕು. ಅತ್ತೆಯಿದ್ದಾಳೆ. ಮಾವನೂ ಇದ್ದಾನೆ. ಮನೆಯಲ್ಲಿ ಜಮೀನು ಸಾಕಷ್ಟಿರುವ ಕಾರಣ ಆಳು-ಕಾಳುಗಳೂ ತುಂಬಿದ್ದಾರೆ. ಬೆಳಿಗ್ಗೆ ಅಡಿಗೆ ಮಾಡಿ ಗಂಡನನ್ನು ಶಿರಸಿಗೆ ಕಳಿಸಿದ ನಂತರ ಒಂದೆರಡು ತಾಸುಗಳ ಕಾಲ ಪುರಸೊತ್ತು ಲಭಿಸುತ್ತದೆ. ಅಷ್ಟರಲ್ಲಿ ಅತ್ತೆಯವರು ಬಂದು `ಮಧ್ಯಾಹ್ನಕ್ಕೆ ಎಂತಾ ಆಸೆ ಮಾಡ್ತೆ..? ಬೆಂಡೆಕಾಯಿ ಹಶಿ ಅಂದ್ರೆ ಯಂಗೆ ಪಂಚಪ್ರಾಣ ಅದನ್ನೇ ಮಾಡ್ತ್ಯಾ..?' ಎಂದು ಕೇಳುತ್ತಾರೆ.
                    ಅತ್ತೆ ಹೀಗೆ ಹೇಳುವುದು ತನಗಿಷ್ಟ ಮಾಡು ಎಂಬ ಇನ್ ಡೈರೆಕ್ಟ್ ಆದ ಆರ್ಡರ್ ಎಂಬುದು ವಾಣಿಗೆ ಗೊತ್ತಾಗುತ್ತಿದ್ದರೂ ತನ್ನ ಮಾತಿಗೆ ಗಂಡನ ಮನೆಯಲ್ಲಿ ಬೆಲೆ ಇಲ್ಲ ಎಂಬುದನ್ನು ಮದುವೆಯಾಗಿ ಬಂದ ಹದಿನೈದೇ ದಿನಗಳಲ್ಲಿ ತಿಳಿದುಕೊಂಡಿದ್ದಾಳೆ.  ತನ್ನ ಮಾತಿಗೊಂದೆ ಅಲ್ಲ ತನ್ನ ಭಾವನೆಗಳಿಗೂ ಕಿಮ್ಮತ್ತಿಲ್ಲ ಎಂಬುದು ನಂತರದ ದಿನಗಳಲ್ಲಿ ವಾಣಿಗೆ ಅರಿವಾಗಿದೆ. ಮದ್ಯಾಹ್ನದ ಊಟದ ಶಾಸ್ತ್ರ ಮಾಡಿ ಮುಗಿದ ನಂತರ ಟಿವಿಯಲ್ಲಿ ಯಾವುದೋ ಮೂರ್ನಾಲ್ಕು ಬಾಗಿಲುಗಳ ಧಾರಾವಾಹಿ ಕಳೆದಿರುತ್ತದೆ. ಅವನ್ನೆಲ್ಲ ನೋಡಿದ ಹಾಗೇ ಮಾಡುವ ವೇಳೆಗೆ ಇಳಿಸಂಜೆ ಆವರಿಸಿ ಮನಸ್ಸೆಲ್ಲ ಖಾಲಿ ಖಾಲಿಯಾದ ಅನುಭವ. ಮತ್ತೆ ಸಂಜೆಯ ಊಟಕ್ಕೆ ಮಾಡಬೇಕಲ್ಲ ಎನ್ನುವ ಆಲೋಚನೆ ವಾಣಿಯದ್ದು. ಮನೆಯಲ್ಲಿ ಅತ್ತೆ-ಮಾವ ಬೇಗನೆ ಊಟ ಮಾಡಿದರೂ ಗಂಡ ಬಂದ ನಂತರವೇ ಊಟ ಮಾಡಬೇಕು. ಇದು ಅತ್ತೆ ಹೊರಡಿಸಿದ ಫರ್ಮಾನು. ಆದ ಕಾರಣ ಎಷ್ಟೇ ಹಸಿವಾಗಿದ್ದರೂ ತಡರಾತ್ರಿ ಬರುವ ಗಂಡನಿಗಾಗಿ ಕಾಯಲೇ ಬೇಕು. ಆ ವೇಳೆಗೆ ಮತ್ತೆ ಟಿವಿಯ ಸಾನ್ನಿಧ್ಯ ಲಭ್ಯ. ತರಹೇವಾರಿ ಧಾರಾವಾಹಿಗಳು. ಹೆಚ್ಚಿನವುಗಳು ಅತ್ತೆಗೆ ಇಷ್ಟ. ಆದ್ದರಿಂದ ಅತ್ತೆಗೆ ಏನಿಷ್ಟವೋ ಅದನ್ನೇ ನೋಡಬೇಕು. ಬೋರಾದರೂ ಪ್ರಶ್ನೆ ಮಾಡುವಂತಿಲ್ಲ. ಚಾನಲ್ ಬದಲು ಮಾಡುವಂತಿಲ್ಲ.
                     ರಾತ್ರಿ ಬರುವ ಗಂಡನನ್ನು ಕಾಯುವ ವಾಣಿಗೆ ಗಂಡ ಬಂದ ನಂತರ ಮನಸ್ಸಿನಲ್ಲಿ ಎಷ್ಟೇ ಬೇಸರವಿದ್ದರೂ ಚೈತನ್ಯಯುತವಾಗಿದ್ದೇನೆ, ಖುಷಿಯಿಂದ ಇದ್ದೇನೆ ಎಂದು ತೋರಿಸಬೇಕು. ಮೊದ ಮೊದಲು ಈ ಭಾವಗಳು ನಾಟಕೀಯ ಎನ್ನಿಸಿದರೂ ಈಗ ಅದು ರೂಢಿಯಾಗಿದೆ. ಗಂಡ ಹೆಚ್ಚಿನ ದಿನ ಶಿರಸಿಯಲ್ಲೇ ಊಟ ಮಾಡಿ ಬರುತ್ತಾನೆ. ಅಂತಹ ದಿನಗಳಲ್ಲೆಲ್ಲ ತಾನೊಬ್ಬನೇ ಮೌನದಿಂದ ಊಟಮಾಡಿ ಎದ್ದು ಬರುವಾಗ ಆಕೆಗೆ ಜೊತೆಯಾಗುವುದು ನಿಟ್ಟುಸಿರು. ಊಟ ಮುಗಿಸಿ ಮನೆವಾರ್ತೆಯನ್ನು ಮುಗಿಸುವ ವೇಳೆಗೆ ಗಂಡ ಹಾಸಿಗೆಗೆ ಕರೆದಿರುತ್ತಾನೆ. ಆತನನ್ನು ರಮಿಸಿ, ಮನದಣಿಯೆ ಖುಷಿ ಪಡುವಲ್ಲಿಗೆ ವಾಣಿಯ ದಿನವೊಂದು ಸುಮ್ಮನೆ ಕಳೆದುಹೋಗುತ್ತದೆ.
                    ಇಂತಹ ಏಕತಾನತೆಯ ದಿನಗಳಲ್ಲೇ ಒಮ್ಮೆ ವಾಣಿಗೆ ನೆನಪಾದದ್ದು ವಿನಾಯಕ. ತಾನೇ ಮುಂದಾಗಿ ವಿನಾಯಕನಿಗೆ ಪ್ರಪೋಸ್ ಮಾಡಿ ಬಿಡಬೇಕಿತ್ತು ಎನ್ನಿಸಿದ್ದೂ ಸುಳ್ಳಲ್ಲ. ತಾನು ಒಂಚೂರು ಧೈರ್ಯ ಮಾಡಿ ಏನಾದರಾಗಲಿ ಎಂದು ವಿನಾಯಕನಿಗೆ ಪ್ರಪೋಸ್ ಮಾಡಿಬಿಟ್ಟಿದ್ದರೆ ಬದುಕು ಹೀಗೆ ಖಂಡಿತ ಇರುತ್ತಿರಲಿಲ್ಲ ಎಂದುಕೊಮಡಳು. ಯಾಕೋ ತನ್ನ ಮನಸ್ಸಿನ ಭಾವನೆಗಳನ್ನು ವಿನಾಯಕನ ಬಳಿ ಹೇಳಿಕೊಳ್ಳಬೇಕು ಎಂದುಕೊಂಡಳು ವಾಣಿ. ವಿನಾಯಕನಿಗೆ ಪೋನ್ ಮಾಡಿಬಿಡಲಾ ಎಂದುಕೊಂಡಳು. ಆದರೆ ಪೋನ್ ಮಾಡಲು ಧೈರ್ಯ ಸಾಕಾಗಲಿಲ್ಲ. ಅದಕ್ಕಿಂತಲೂ ಹೆಚ್ಚಾಗಿ ಈಗ ತಾನು ಪೋನ್ ಮಾಡುವುದು ಅಷ್ಟು ಸಮಂಜಸವಾಗಲಾರದು ಎಂದುಕೊಂಡಳು.
                  `ಹಾಳಾದವನು.. ಎಷ್ಟೆಲ್ಲ ಇಷ್ಟಪಟ್ಟಿದ್ದೆ. ಆತನಿಗೂ ಖಂಡಿತ ನನ್ನ ಮೇಲೆ ಮನಸ್ಸಿದ್ದೇ ಇರುತ್ತದೆ. ಪ್ರಪೋಸ್ ಮಾಡಲಿಕ್ಕೇನಾಗಿತ್ತು ಧಾಡಿ..? ನನಗೆ ಈ ಜಂಜಡಗಳು ಇರುತ್ತಿರಲಿಲ್ಲವೇನೋ. ಬೇರೆ ತೆರನಾದ ಬದುಕನ್ನು ಬಾಳಬಹುದಿತ್ತೇನೋ. ನಾನು-ಅವನು ಇಬ್ಬರೇ ಇರಬಹುದಾಗಿತ್ತೇನೋ..' ಎಂದೆಲ್ಲಾ ಎಂದುಕೊಂಡವಳಿಗೆ ವಿನಾಯಕನಾದರೂ ಒಮ್ಮೆ ಪೋನ್ ಮಾಡಬಾರದೇ ಅನ್ನಿಸಿತ್ತು. ಇನ್ನು ಪೋನ್ ಮಾಡಿ ಏನು ಪ್ರಯೋಜನ ಎಂದುಕೊಂಡಳು.

***
                ಶಿರಸಿ ಜಾತ್ರೆಯ ನೆಪದಿಂದ ವಿನಾಯಕ ಬೆಂಗಳೂರಿನಿಂದ ಊರಿಗೆ ಮರಳಿದ್ದ.  ವೀಕೆಂಡಿನಲ್ಲಿ ಜಾತ್ರೆ ತಿರುಗಲು ದೋಸ್ತರು ಕರೆದಿದ್ದರು. ಹೋಗಿದ್ದ. ಜಾತ್ರೆಯೆಂಬ ಜನಜಂಗುಳಿ ವಿನಾಯಕನನ್ನು ಬೇರೆಯ ಲೋಕಕ್ಕೆ ಒಯ್ದಿತ್ತು. ಜಾತ್ರೆಯಲ್ಲಿ ಮಾರಿಕಾಂಬಾ ದೇವಿಯ ದರ್ಶನದ ನೆಪದಲ್ಲಿ ಪೇಟೆ ಸುತ್ತಲು ದೋಸ್ತರ ಜೊತೆಗೆ ಹೊರಟಿದ್ದ ವಿನಾಯಕ. ಗಿಜುಗುಡುವ ಜನಸಾಗರದಲ್ಲಿ ಯಾರ್ಯಾರದ್ದೋ ಮೈಗೆ ಮೈಯನ್ನು ತಾಗಿಸುತ್ತ, ಒಳಗೊಳಗೆ ಖುಷಿ ಪಡುತ್ತ ವಿನಾಯಕ ಹಾಗೂ ದೋಸ್ತರ ದಂಡು ಹೊರಟಿದ್ದು. ಕೋಟೆಕೆರೆಯ ಸರ್ಕಸ್ಸು, ಟೊರಟೊರ, ಜಾಯಿಂಟ್ ವೀಲ್, ಕ್ರೊಕೋಡೈಲ್, ದೋಣಿ ಸೇರಿದಂತೆ ತರಹೇವಾರಿ ಮನರಂಜನೆಯನ್ನು ಪಡೆದುಕೊಂಡು ವಾಪಾಸಾಗುತ್ತಿದ್ದಾಗ ವಿನಾಯಕನ ಕಣ್ಣಿಗೆ ವಾಣಿ ಬಿದ್ದಳು. ವಿನಾಯಕ ಬೇಕಂತಲೇ ಕಣ್ತಪ್ಪಿಸಲು ಯತ್ನಿಸಿದ. ಅದೇ ಸಮಯಕ್ಕೆ ವಾಣಿಯೂ ವಿನಾಯಕನತ್ತ ನೋಡಿದಳು. ಒಮ್ಮೆ ಇಬ್ಬರಲ್ಲೂ ಹಳೆಯ ದಿನಗಳು ನೆನಪಾದವು.
                 ದೋಸ್ತರ ಜೊತೆಗೆ ಬಂದಿದ್ದ ವಿನಾಯಕನನ್ನು ವಾಣಿ ದೂರದಿಂದಲೇ ಅಳೆದಳು. ವಿನಾಯಕ ಆಕೆಯನ್ನೂ ಆಕೆಯ ಪಕ್ಕದಲ್ಲಿ ಬರುತ್ತಿದ್ದ ಗಂಡನನ್ನೂ ನೋಡಿದಂತೆ ಮಾಡಿ ಮುಖ ತಿರುಗಿಸಲು ಯತ್ನಿಸಿದ. ದೋಸ್ತರ ಬಳಿ ಬೇರೆ ಕಡೆಗೆ ಹೋಗೋಣ ಎಂದು ಹೇಳಿ ಒತ್ತಾಯ ಮಾಡಲು ಯತ್ನಿಸಿದ. ಆದರೆ ದೋಸ್ತರು ವಾಣಿ ಕಂಡ ದಿಕ್ಕಿನತ್ತಲೇ ಸಾಗಿದರು. ಕೊನೆಗೊಮ್ಮೆ ವಾಣಿ-ವಿನಾಯಕ ಎದುರಾಬದರಾದರು.
                 ಅವಳೇ ಮಾತಾಡಿಸಲಿ ಎಂದುಕೊಂಡ ವಿನಾಯಕ. ಮಾತಾಡ್ಸೋ ಮಾರಾಯಾ ಎಂದುಕೊಂಡಳು. ಇಬ್ಬರಲ್ಲಿ ಯಾರೊಬ್ಬರೂ ಮಾತನಾಡಿಸುವ ಲಕ್ಷಣಗಳಿರಲಿಲ್ಲ. ಕೊನೆಗೆ ವಾಣಿಯೇ `ಅರೇ ವಿನಾಯ್ಕಾ... ಅರಾಮನಾ..?' ಎಂದಳು.
                ಮುಗುಳ್ನಕ್ಕ ವಿನಾಯಕ `ಹೇಯ್ ವಾಣಿ.. ಎಂತಾ ಸರ್ ಪ್ರೈಸ್ ಮಾರಾಯ್ತಿ.. ಫುಲ್ ಬಿಂದಾಸ್.. ನೀ ಹೆಂಗಿದ್ದೆ..?' ಎಂದು ಕೇಳುತ್ತಿದ್ದಂತೆ ಇತ್ತ ವಿನಾಯಕನ ದೋಸ್ತರು ಹಾಗೂ ಅತ್ತ ವಾಣಿಯ ಗಂಡ ಇವರಿಬ್ಬರನ್ನೂ ಬೆಕ್ಕಸ ಬೆರಗಿನಿಂದ ನೋಡತೊಡಗಿದ್ದರು.
               `ಇಂವ ವಿನಾಯ್ಕ ಹೇಳಿ. ನನ್ನ ಕ್ಲಾಸಿನವನೇಯಾ.. ಡಿಗ್ರಿಲಿ ಓದಕಿದ್ರೆ ಬರ್ತಿದ್ದ.. ನೆಂಟರಾಗವು..' ಗಂಡನಿಗೆ ಪರಿಚಯಿಸಿದಳು ವಾಣಿ. ಹಲೋ ಎಂದದ್ದು ಆಕೆಯ ಗಂಡ. ಅದಕ್ಕೆ ಪ್ರತಿಯಾಗಿ ತಾನೂ ತನ್ನ ದೋಸ್ತರನ್ನು ಪರಿಚಯ ಮಾಡಿಸಿದ ವಿನಾಯಕ.
               ಮುಂದಿನ ಮಾತುಗಳಲ್ಲಿ ವಾಣಿ ವಿನಾಯಕನ ಕೆಲಸ, ವೃತ್ತಿ, ಬೆಂಗಳೂರಿನಿಂದ ಬಂದಿದ್ದು, ಮನೆಯವರ ಬಗ್ಗೆಯೆಲ್ಲಾ ವಿಚಾರಿಸಿದಳು. ವಿನಾಯಕನೂ ಪ್ರತಿಯಾಗಿ ಉತ್ತರಿಸಿ ಕೆಲವು ಪ್ರಶ್ನೆಗಳನ್ನು ಕೇಳಿದ.
               `ಅಲ್ದಾ ವಿನಾಯಕಾ.. ರಾಶಿ ಬಡಿ ಬಿದ್ದೋಜ್ಯಲಾ.. ಎಂತಕ್ಕಾ.. ಸರಿಯಾಗಿ ಊಟ-ತಿಂಡಿ ಮಾಡ್ತಾ ಇದ್ಯಾ ಇಲ್ಯಾ..?' ಎಂದು ವಾಣಿ ಕೇಳುವ ವೇಳೆಗೆ ವಿನಾಯಕನ ಕಣ್ಣಲ್ಲಿ ನೀರು ಬರುವುದೊಂದೇ ಬಾಕಿ.
               ಕೀಟಲೆಯ ಸ್ವಭಾವದ ವಿನಾಯಕನ ದೋಸ್ತರಲ್ಲೊಬ್ಬ `ಅದೆಂತಾ ಕೇಳ್ತೀರಿ.. ಅಂವ ಡಿಗ್ರಿಯಲ್ಲಿ ಯಾರನ್ನೋ ಲವ್ ಮಾಡಿದ್ನಡಾ.. ಕೊನೆಗೂ ಹೇಳ್ಕಂಬಲೆ ಆಜಿಲ್ಯಡಾ.. ಅದೇ ಮನಸ್ಸಿನಲ್ಲಿ ಇದ್ದಾ.. ಲವ್ ಫೇಲ್ಯೂರ್ ಆದವರ ಹಣೇಬರಹವೇ ಇಷ್ಟು ನೋಡಿ..' ಎಂದಾಗ ವಾಣಿಯ ಗಂಡನಾದಿಯಾಗಿ ಎಲ್ಲರೂ ನಕ್ಕರು. ವಾಣಿ ಹಾಗೂ ವಿನಾಯಕ ಇಬ್ಬರೂ ನಗಲಿಲ್ಲ. ಇಬ್ಬರ ಕಣ್ಣಲ್ಲೂ ನೀರು ಇಳಿಯಲು ತವಕಿಸುತ್ತಿತ್ತು.
                ಅಷ್ಟರಲ್ಲಿ ದೋಸ್ತರು ವಿನಾಯಕನನ್ನು ಬೇರೆಡೆಗೆ ಕರೆದೊಯ್ದರು. ವಾಣಿ ಹಾಗೂ ಆಕೆಯ ಗಂಡ ಮತ್ತೆಲ್ಲೋ ಜಾತ್ರೆಯಲ್ಲಿ ಕಳೆದು ಹೋದರು. ಎಂದೋ ತಿಳಿಯಬೇಕಿದ್ದ ವಿಷಯ ಈ ರೂಪದಲ್ಲಿ ತಿಳಿಯುತ್ತದೆ ಎಂದು ಇಬ್ಬರೂ ಅಂದುಕೊಂಡಿರಲಿಲ್ಲ. ಇಬ್ಬರ ಮನಸ್ಸೂ ಭಾವನೆಗಳ ಮಳೆಯಲ್ಲಿ ತೊಯ್ದು ತೊಪ್ಪೆಯಾಗಿತ್ತು. ಜಾತ್ರೆಯ ಜನಸಮುದ್ರದಲ್ಲಿ ಕಣ್ಣೀರು ಉರುಳಿದ್ದು ಯಾರಿಗೂ ಕಾಣಲಿಲ್ಲ. 

Saturday, March 15, 2014

ಹಮ್ ಆಪ್ ಕೆ ಹೈ ಕೌನ್ (ಕಥಾ ಸರಣಿ ಭಾಗ-1)

                  ವಾಣಿಗೆ ವಿನಾಯಕನ ಮೇಲೆ ಸಿಕ್ಕಾಪಟ್ಟೆ ಲವ್ವಾಗಿತ್ತು. ಆದರೆ ತಾನಾಗಿಯೇ ಯಾಕೆ ಹೇಳಬೇಕು. ಅವನೇ ಹೇಳಲಿ ಎನ್ನುವ ಹಮ್ಮು-ಬಿಮ್ಮು.  ಪ್ರತಿದಿನ ಸಿಗುತ್ತಿದ್ದ ವಿನಾಯಕ ಗಂಟೆಗಟ್ಟಲೆ ಹರಟೆ ಹೊಡೆಯುತ್ತಿದ್ದ. ಮಾತಾಡುತ್ತಿದ್ದ. ನಗುತ್ತಿದ್ದ. ನಗಿಸುತ್ತಿದ್ದ. ಮಾತಿಗೊಮ್ಮೆ ಕೆಣಕುತ್ತಿದ್ದ. ಇಂತಹ ಹುಡುಗನ ಮೇಲೆ ವಾಣಿಗೆ ಲವ್ವಾಗದೇ ಇರಲು ಸಾಧ್ಯವೇ ಇರಲಿಲ್ಲ ಬಿಡಿ.
                  ವಾಣಿಗೆ ವಿನಾಯಕನ ಪರಿಚಯ ಆಗಿದ್ದು ವಿಚಿತ್ರ ರೂಪದಲ್ಲಿ. ಆಗಿನ್ನೂ ನೋಕಿಯಾ ಬೇಸಿಕ್ ಸೆಟ್ ಕೂಡ ಮಾರ್ಕೇಟಿಗೆ ಬರದಿದ್ದ ಕಾಲ. ಕಾಲೇಜು ಲೋಕ. ಕಾಲೇಜಿನ ಹುಡುಗ-ಹುಡುಗಿಯರಿಗೆಲ್ಲ `ಹಾಯ್ ಮನಸೆ' ಎಂಬ ಪಾಕ್ಷಿಕವೇ ಗೆಳೆಯ, ಗೆಳತಿ, ಮನಶಾಸ್ತ್ರ ಗೃಂಥಿಕೆ. ಎದೆಗವಚಿಕೊಂಡು ಹೋಗಲು ಇರುವ ಪುಸ್ತಿಕೆ. ಹಾಯ್ ಮನಸೆಯ ಮುಖ್ಯ ಪುಟದಲ್ಲಿ ಬರುವ ಚಿಕ್ಕ ಚಿಕ್ಕ ಮಕ್ಕಳ ಪೋಟೋಗಳನ್ನು ಕತ್ತರಿಸಿ ಇಟ್ಟುಕೊಳ್ಳುವವರು ಅನೇಕ, ಅದರ ಮುಖಪುಟದಲ್ಲಿ ತಮ್ಮದಾದರೂ ಚಿತ್ರ ಬರಬಾರದೇ ಎಂದುಕೊಂಡವರೂ ಹಲವರು. ಇಂತಹ ಹಾಯ್ ಮನಸೆಗೆ ರೆಗ್ಯೂಲರ್ ಆಗಿ ಬರೆಯುತ್ತಿದ್ದವ ವಿನಾಯಕ.
                  ಒಂದು ದಿನ ಅದೇ ಪಾಕ್ಷಿಕದ ಗೆಳೆತನದ ಕಾಲಮ್ಮಿನಲ್ಲಿ ವಿನಾಯಕನ ಪೋಟೋ ಜೊತೆಗೆ ವಿಳಾಸ ಬಂದಾಗ ವಾಣಿ ಕಣ್ಣಿಗೆ ಮೊದಲ ಬಾರಿ ಬಿದ್ದಿದ್ದ ವಿನಾಯಕ. ಯಾಕೋ ಕೀಟಲೆ ಮಾಡೋಣ ಎಂದುಕೊಂಡು ಪತ್ರ ಬರೆದಿದ್ದಳು. ವಿನಾಯಕನಿಂದ ಮರು ಉತ್ತರ ಬಂದಿದ್ದಾಗ ವಾಣಿ ಅಚ್ಚರಿಯ ಜೊತೆಗೆ ಖುಷಿಯನ್ನೂ ಅನುಭವಿಸಿದ್ದಳು ವಾಣಿ. ಪತ್ರಗಳು ಮುಂದುವರಿದವು. ಪರಿಚಯ ಸ್ನೇಹವಾಯಿತು. ಕೊನೆಗೊಮ್ಮೆ ಶಿರಸಿಯ ದೊಡ್ಡ ಕಾಲೇಜಿನಲ್ಲಿ ಓದುತ್ತಿದ್ದ ವಿನಾಯಕ, ಕಾಮರ್ಸ್ ಕಾಲೇಜಿನಲ್ಲಿ ಓದುತ್ತಿದ್ದ ವಾಣಿ ಎದುರು ಸಿಕ್ಕು ಮಾತಾಡಬೇಕಲ್ಲ ಎಂದುಕೊಂಡು ಅದಕ್ಕೊಂದು ದಿನ ನಿಗದಿ ಮಾಡಿಕೊಂಡರು.
                  ಆದರ್ಶ ನಗರದಲ್ಲಿ ಕಾಮರ್ಸ್ ಕಾಲೇಜಿಗೂ ದೊಡ್ಡ ಕಾಲೇಜಿಗೂ ಸಮಾ ಮಧ್ಯ ಜಾಗದಲ್ಲಿ ಆಯಕಟ್ಟಿನ ಸ್ಥಳದಲ್ಲಿರುವ ವರದಮೂರ್ತಿ ಗಣಪತಿ ದೇವಾಲಯದಲ್ಲಿ ಅಂದು ಸಂಕಷ್ಟಿ ಉತ್ಸವ.  ವಾಣಿಗೆ ಸಂಕಷ್ಟಿಯ ನೆಪ. ವಿನಾಯಕನೊಂದಿಗೆ ಮಾತನಾಡುವ ತವಕ. ಪ್ರತಿ ಸಂಕಷ್ಟಿಯಂದೂ ತಪ್ಪದೆ ವಿನಾಯಕ ಗಣಪತಿ ದೇವಾಲಯಕ್ಕೆ ಹೋಗುತ್ತಾನೆ. ಆತನ ದೈವ ಭಕ್ತಿ ಕೊಂಚ ಪ್ರಮಾಣದ್ದು. ಆದರೆ ದೇವಾಲಯಕ್ಕೆ ಬರುವ ಹುಡುಗಿಯರನ್ನು ನೋಡು ಕಣ್ಣು ತಂಪು ಮಾಡಿಕೊಳ್ಳುವುದು ಆತನ ದೇಗುಲ ದರ್ಶನದ ಅಸಲಿಯತ್ತು.
                ಪತ್ರದ ಗೆಳತಿ ವಾಣಿಯೇ ತನ್ನನ್ನು ಭೇಟಿಯಾಗಲು ಹೇಳಿದ್ದಾಳೆ ಎನ್ನುವ ಕಾರಣಕ್ಕೆ ಎಂದಿಗಿಂತ ಸ್ವಲ್ಪ ಹೆಚ್ಚಾಗಿ ತಯಾರಾಗಿ ಆಕೆ ಹೇಳಿದ್ದ ಸಮಯಕ್ಕಿಂತ ಎರಡು ತಾಸು ಮೊದಲೇ ದೇವಾಲಯದ ಪಕ್ಕದಲ್ಲಿರುವ ವಾಹನಗಳ ವಾಯುಮಾಲಿನ್ಯ ಪರೀಕ್ಷಣಾ ಕೇಂದ್ರದ ಎದುರು ಹಾಜರಾದ ವಿನಾಯಕ ಕೆಮ್ಮುತ್ತ ನಿಂತಿದ್ದ. ದೋಸ್ತರು ಕಾಡುತ್ತಾರೆ ಎನ್ನುವ ಕಾರಣಕ್ಕೆ ಯಲ್ಲಾಪುರ ನಾಕೆಯಲ್ಲಿದ್ದ ಸರ್ಕೂಲೇಶನ್ ಲೈಬ್ರರಿಗೆ ಹೋಗುವ ಕಾಮನ್ ಸುಳ್ಳನ್ನೂ ಹೇಳಿದ್ದ. ಬರೀ ಓದುಗುಳಿ ಎಂಬ ಆರೋಪವನ್ನು ಹೊಂದಿದ್ದ ವಿನಾಯಕ ಸರ್ಕೂಲೇಶನ್ ಲೈಬ್ರರಿ ಹೆಸರೆತ್ತಿದಾಗ ದೋಸ್ತರೆಲ್ಲ `ಮಾರಾಯಾ ನೀ ಹೋಗಿ ಬಾ.. ನಾವ್ಯಾರೂ ಬರ್ತ್ವಿಲ್ಲೆ' ಎಂದು ಅವನನ್ನು ಸಾಗ ಹಾಕಿದ್ದರು. ಸರ್ಕೂಲೇಶನ್ ಲೈಬ್ರರಿಗೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಹುಡುಗಿಯರು ಬರುತ್ತಾರೆ. ಪಿಯು ಕಾಲೇಜಿನ ಹುಡುಗಿಯರು, ಕಾಮರ್ಸ್ ಕಾಲೇಜಿನ ಹುಡುಗಿಯರು, ದೊಡ್ಡ ಕಾಲೇಜಿನವರು, ಜೆಎಂಜೆಯವರು ಬಂದು ತುಂಬಿ ತುಳುಕುತ್ತಿರುತ್ತಾರೆ. ಅಲ್ಲಿ ಹೋಗಿ ಸಾಯಿಸುತೆಯೋ, ಕೌಂಡಿಣ್ಯ, ಯಂಡಮೂರಿ, ಭೈರಪ್ಪರದ್ದೋ ಕಾದಂಬರಿಗಳನ್ನು ತೆಗೆದುಕೊಂಡು ಹೋಗುವಂತೆ ನಟನೆ ಮಾಡುವುದು ವಿನಾಯಕನ ವಾಡಿಕೆ. ಈ ಬರಹಗಾರರ ಪುಸ್ತಕಗಳನ್ನು ಭಕ್ತಿಯಿಂದ ಹುಡುಗಿಯರು ಓದುತ್ತಾರೆ. ಅವನ್ನು ಒಯ್ಯುವ ಹುಡುಗರ ಕಡೆಗೆ ಆಸಕ್ತಿಯುತವಾದ ನೋಟವನ್ನು ಹರಿಸುತ್ತಾರೆ ಎನ್ನುವುದನ್ನು ತಿಳಿದುಕೊಂಡಿದ್ದ ವಿನಾಯಕ ಇಂತಹ ಗುಟ್ಟನ್ನು ಯಾವತ್ತೂ ದೋಸ್ತರಿಗೆ ಹೇಳುವ ಕೆಲಸ ಮಾಡಿರಲಿಲ್ಲ.
               ಸಮಯಕ್ಕೆ ಸರಿಯಾಗಿ ಯಲ್ಲಾಪುರ ನಾಕಾ ಕಡೆಯಿಂದ ಬಂದಳು ವಾಣಿ. ಬಹಳಷ್ಗುಟು ಹುಡುಗಿಯರು ಆ ದಾರಿಯಲ್ಲೆ ಬಂದಿದ್ದರೂ ಅವರನ್ನು ಕಣ್ಣಿನಲ್ಲಿ ತುಂಬಿಕೊಳ್ಳುತ್ತ ನಿಂತಿದ್ದ ವಿನಾಯಕ ಈಕೆಯನ್ನು ನೋಡಿದವನೇ ಇವಳೇ ವಾಣಿಯಾದರೆ ಸಾಕಿತ್ತು ಗಣೇಶಾ ಎಂದುಕೊಂಡಿದ್ದ. ತನ್ನ ಬಳಿ ಪತ್ರಮೈತ್ರಿಯಲ್ಲಿ ತನ್ನ ಪೋಟೋವನ್ನು ಕಳಿಸಿಕೊಡು ಎಂದು ಗೋಗರೆದು ಪಡೆದುಕೊಂಡಿದ್ದ ಈಕೆ ತಾನು ಮಾತ್ರ ತನ್ನ ಪೋಟೋ ಕಳಿಸದೇ, ಸಮಯ ಸಿಕ್ಕಾಗ ಕೊಡ್ತಿ ಎಂದೋ, ಸಸ್ಪೆನ್ಸ್ ಎಂದೋ ಸಾಗ ಹಾಕುತ್ತಿದ್ದಳು. ಕಾಲೇಜಿಗೆ ಯುನಿಫಾರ್ಮಿರಲಿಲ್ಲ. ಹುಡುಗಿಯರು ಹುಡುಗರನ್ನು ಭೇಟಿ ಮಾಡಬೇಕಾದರೆ ಯುನಿಫಾರ್ಮ್ ಇಲ್ಲದ ದಿನವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದುಕೊಂಡ. ಆಕಾಶ ನೀಲಿ ಕಲರಿನ ಚುಡಿಯಲ್ಲಿ ಚನ್ನಾಗಿ ಕಾಣುತ್ತಿದ್ದಳು ವಾಣಿ. ಯಾಕೋ ವಿನಾಯಕನಿಗೆ ಯಡಳ್ಳಿ ಕಾಲೇಜಿನ ಯುನೀಫಾರ್ಮ್ ತುತ್ತಾ ಸುಣ್ಣಾ ನೆನಪಾಯಿತು. ಬಂದವಳೇ ವರದಮೂರ್ತಿ ದೇವಾಲಯದ ಎದುರು ನಿಂತಿದ್ದ ವಿನಾಯಕನನ್ನು ನೋಡಿದಳು. ಪೋಟೋದಲ್ಲಿ ನೋಡಿದ್ದಕ್ಕೂ ಎದುರಾ ಬದರಾ ನೋಡುವುದಕ್ಕೂ ಬಹಳಷ್ಟು ವ್ಯತ್ಯಾಸಗಳಿವೆ ಎಂದುಕೊಂಡ ವಾಣಿ ಅನುಮಾನದಿಂದಲೇ `ನೀನು ವಿನಾಯಕ ಅಲ್ದಾ..?' ಎಂದು ಮಾತನಾಡಿಸಿದಳು.
ಪೆಚ್ಚುನಗೆಯಿಂದ ಹೌದೆಂದ ವಿನಾಯಕ. ತಾನು ಅಂದುಕೊಂಡಿದ್ದ ಹುಡುಗಿಯೇ ವಾಣಿಯಾಗಿದ್ದಳು ಎನ್ನುವ ಖುಷಿ, ಆಕೆಯೇ ಮೊದಲು ಬಂದು ಮಾತನಾಡಿಸಿದಳು ಎನ್ನುವ ಅಚ್ಚರಿಯಿಂದ ಪೆಚ್ಚಾಗಿ ನಿಂತಿದ್ದ ವಿನಾಯಕ.
                ಮಾಡಲು ಬೇರೇ ಏನೂ ಕೆಲಸವಿರದಿದ್ದ ಕಾರಣ ವಿನಾಯಕ ಅವಳ ಜೊತೆಗೆ ವರದಮೂರ್ತಿ ಗಣಪತಿಯನ್ನು ಸುತ್ತುಹಾಕಲು ಹೊರಟ. ಹುಡುಗಿಯೊಬ್ಬಳ ಜೊತೆಗೆ ಮೊತ್ತಮೊದಲ ಬಾರಿಗೆ ದೇವಸ್ಥಾನವನ್ನು ಸುತ್ತಲು ಹೊರಟಿದ್ದ ವಿನಾಯಕನಿಗೆ ಸಾಕಷ್ಟು ಮುಜುಗರವಾಗಿತ್ತು. ದೇಗುಲದಲ್ಲಿ ನಾಲ್ಕಾರು ಬಿಳಿಕೂದಲ ಮುದುಕಿಯರು ಕುಳಿತಿದ್ದವರು ವಾಣಿ-ವಿನಾಯಕನನ್ನು ದುರುಗುಟ್ಟು ನೊಡಲು ಆರಂಭಿಸಿದಾಗ ವಿನಾಯಕ ಕಸಿವಿಸಿಗೊಂಡ. ಹುಡುಗಿಯರು ಮುಖದ ಮೇಲೆ ಭಾವನೆಗಳನ್ನು ತೋರ್ಪಡಿಸದ ಕಾರಣ ಆಕೆಯ ಮನದಲ್ಲಿ ಯಾವ ಭಾವನೆಗಳೆದ್ದಿರಬಹುದು ಎನ್ನುವುದು ವಿನಾಯಕನಿಗೆ ಗೊತ್ತಾಗಲಿಲ್ಲ.
                 ದೇವಸ್ಥಾನ ಸುತ್ತುವ ಕೆಲಸ ಕೆಲವೇ ಕ್ಷಣಗಳಲ್ಲಿ ಸರಿದುಹೋಯಿತು. ವಾಣಿಗೆ ವಿನಾಯಕನ ಸಾನ್ನಿಧ್ಯ, ವಿನಾಯಕನಿಗೆ ವಾಣಿಯ ಸಾನ್ನಿಧ್ಯ ಖುಷಿಕೊಟ್ಟಿತ್ತು. ವಾಣಿಗೆ ವಿನಾಯಕ ಪರವಾಗಿಲ್ಲ, ಚನ್ನಾಗಿದ್ದಾನೆ ಎನ್ನಿಸಿದ್ದರಿಂದ ಆತನ ಬಳಿ ಮಾತಿಗೆ ನಿಂತಿದ್ದಳು. ದೇಗುಲ ದರ್ಶನದ ಕಾರ್ಯ ಮುಗಿದ ನಂತರ ಮುಂದೇನು ಮಾಡಬೇಕೋ ತಿಳಿಯಲಿಲ್ಲ.
              `ಸುರಭಿಗೆ ಹೋಪನಾ..?' ವಿನಾಯಕನೇ ಕೇಳಿದ್ದ.
              `ಮಂಜಣ್ಣನ ಕಂಡಾಂಗೆ ಆಜಿಲ್ಲೆ.. ಹುಂ ಹೋಪನ ಬಾ..'
              ಸುರಭಿಯಲ್ಲಿ ಮಂಜಣ್ಣನಿದ್ದ. ಮಸಾಲಾಪುರಿಗೆ ಆರ್ಡರ್ ಕೊಟ್ಟು ಮಾತಿಗೆ ನಿಂತರು. ನಿಮಿಷಕ್ಕೊಮ್ಮೆ ಜೋಕ್ ಕಟ್ ಮಾಡುತ್ತ ವಿನಾಯಕ ವಾಣಿಗೆ ಇಷ್ಟವಾದ. ಅಪರೂಪಕ್ಕೆಂಬಂತೆ ಕಾಮರ್ಸ್ ಕಾಲೇಜಿನ ಹುಡುಗಿಯೊಬ್ಬಳು ಆರ್ಟ್ ಎಂಡ್ ಸೈನ್ಸ್ ಕಾಲೇಜು ಹುಡುಗನನ್ನು ಇಷ್ಟಪಟ್ಟಿದ್ದಳು.
               ಆ ನಂತರದ ದಿನಗಳಲ್ಲಿ ವಿನಾಯಕ-ವಾಣಿ ಬಿಡುವಿದ್ದಾಗಲೆಲ್ಲ ಮಾತಾಡುತ್ತಿದ್ದರು. ಸಿಕ್ಕಾಗ ಮಂಜಣ್ಣನ ಸುರಭಿ ಹೊಟೆಲಿನಲ್ಲಿ ಮಸಾಲೆಪುರಿ ಖಾಯಂ ತಿನ್ನುವುದು ವಾಡಿಕೆಯಾಗಿಬಿಟ್ಟಿತ್ತು. ಇವರಿಬ್ಬರೂ ಈ ರೀತಿ ಮಾಡುತ್ತಿದ್ದಾರೆ ಎನ್ನುವುದು ವಿನಾಯಕನ ದೋಸ್ತರಿಗಾಗಲೀ ವಾಣಿಯ ಗೆಳತಿಯರಿಗಾಗಲೀ ಗೊತ್ತಾಗಲು ಬಿಡಲಿಲ್ಲ. ಅಂದ ಹಾಗೆ ಇಷ್ಟೆಲ್ಲ ನಡೆದಿದ್ದು ಡಿಗ್ರಿ ಫೈನಲ್ ಇಯರಿನಲ್ಲಿ. ಒಂದಾರು ತಿಂಗಳಾಗಿತ್ತು ಪರಿಚಯವಾಗಿ. ಇಬ್ಬರಲ್ಲೂ ಸ್ನೇಹದ ಜಾಗದಲ್ಲಿ ಪ್ರೀತಿ ಮನೆ ಮಾಡಿತ್ತು. ಆದರೆ ಇಬ್ಬರೂ ಅದನ್ನು ಹೇಳಿಕೊಳ್ಳಲು ಧೈರ್ಯ ತೋರಲಿಲ್ಲ. ಬಹುಶಃ ಹುಡುಗ-ಹುಡುಗಿಯರಲ್ಲಿ ಮೊದಲ ಪ್ರೇಮದ ದೊಡ್ಡ ಸಮಸ್ಯೆ ಇದೇ ಇರಬೇಕು. ಗೆಳೆಯ-ಗೆಳತಿಯರ ನಡುವೆ ಪ್ರೇಮಾಂಕುರವಾದಾಗ ಎಲ್ಲಿ ಅದನ್ನು ಹೇಳಿಕೊಂಡು ಬಿಟ್ಟರೆ ಮುಂದೆ ಮಾತುಕತೆ ಇರುವುದಿಲ್ಲವೋ? ಒಪ್ಪದಿದ್ದರೆ ಎಲ್ಲಿ ದೂರವಾಗಿಬಿಡಬೇಕಾಗುತ್ತದೋ ಎನ್ನುವ ಭಯವೇ ಕಾಡಿಬಿಡುತ್ತದೆ. ನಮ್ಮ ಈ ಕಥೆಯ ನಾಯಕ-ನಾಯಕಿಯರಿಗೂ ಹೀಗೆಯೇ ಆಯಿತು.
                 ಬನವಾಸಿ ರಸ್ತೆಯ ವಾಣಿ, ಬಾಳೇಸರ ಬಸ್ಸಿನ ವಿನಾಯಕನ ಪ್ರೇಮ ಕಥಾನಕ ಒಳಗೊಳಗೆ ಹೆಮ್ಮರವಾಗಿತ್ತು. ಹೀಗಿರುವ ವೇಳೆಗೆ ವಾಣಿ-ವಿನಾಯಕ ಇಬ್ಬರ ಕೈಯಲ್ಲೂ ನೋಕಿಯಾ ಬೇಸಿಕ್ ಸೆಟ್ ಬಂದಿತ್ತು. ವಾಣಿಗೆ ಮನೆ ಮನೆಯಲ್ಲೂ ನೆಟ್ ವರ್ಕ್ ಬರುತ್ತಿದ್ದ ಕಾರಣ ಯಾವಾಗಲೂ ಮೊಬೈಲ್ ನಲ್ಲಿ ಇರುತ್ತಿದ್ದರೆ ವಿನಾಯಕ ದಿನದ ಅರ್ಭ ಭಾಗ ನಾಟ್ ರೀಚೆಬಲ್. ಆದರೆ ವಾಣಿ ಮೆಸೇಜ್ ಮಾಡುತ್ತಾಳೆ ಎಂಬ ಕಾರಣಕ್ಕಾಗಿ ತಮ್ಮೂರಿನ ಅರ್ಧ ಕಿಲೋಮೀಟರ್ ಹುಡ್ಡವನ್ನು ಹತ್ತು ನಿಮಿಷದಲ್ಲಿ ಓಡಿ ಹತ್ತಬಂದು ಕುಳಿತು ನಂತರ ಎದುಸಿರು ಬಿಡುತ್ತ ಟೊಯ್ ಎನ್ನುತ್ತಿದ್ದ ಮೆಸೇಜ್ ಟೋನ್ ಕೇಳುತ್ತ ಮುಖವರಳಿಸುತ್ತಿದ್ದ. ರಾತ್ರಿ ಒಂಭತ್ತಾಗುವವರೆಗೂ ಮೆಸೇಜುಗಳ ಲೇವಾದೇವಿ ವ್ಯವಹಾರ ನಡೆಯುತ್ತಿತ್ತು. ಆದರೆ ಈ ಸಂದರ್ಭದಲ್ಲಿಯೂ ಅವಳು ತನ್ನ ಪ್ರೀತಿಯನ್ನು ಹೇಳಿಕೊಳ್ಳಲಿಲ್ಲ. ವಿನಾಯಕನೂ ಪ್ರೇಮನಿವೇದನೆ ಮಾಡಿಕೊಳ್ಳಲಿಲ್ಲ.
                 ಡಿಗ್ರಿ ಮುಗಿಯಿತು. ವಾಣಿ ಮನೆಯಲ್ಲೇ ಉಳಿದಳು. ವಿನಾಯಕ ಬೆಂಗಳೂರಿಗೆ ಹಾರಲು ಹವಣಿಸುತ್ತಿದ್ದ. ಬೆಂಗಳೂರಿಗೆ ಹೋಗುವ ಮುನ್ನ ಸ್ಥಳೀಯ ಬ್ಯಾಂಕೊಂದರಲ್ಲಿ ಡಾಟಾ ಎಂಟ್ರಿಯ ಕೆಲವೊಂದು ಆತನನ್ನು ಕೈ ಬೀಸಿ ಕರೆದಿತ್ತು. ಅಲ್ಲಿಗೆ ಹೋಗಿ ಕೆಲಸ ಮಾಡಲು ಆರಂಭಿಸಿದ್ದ. ಈ ಸಂದರ್ಭದಲ್ಲಿಯೇ ವಾಣಿಯ ಮನೆಯಲ್ಲಿ ವಾಣಿಯ ಮದುವೆಯ ಪ್ರಸ್ತಾಪ ಶುರುಮಾಡಿದ್ದರು. ಅಲ್ಲಿ ಇಲ್ಲಿ ಜಾತಕ ಕೇಳಲು ಆರಂಭಿಸಿದ್ದರು. ಈ ವಿಷಯ ವಾಣಿಗೆ ತಿಳಿದು ತಲ್ಲಣಗೊಂಡಿದ್ದಳು. ಕೊನೆಗೊಮ್ಮೆ ತನಗೆ ಮದುವೆ ಮಾಡಲು ಮನೆಯಲ್ಲಿ ಹಂಡು ಹುಡುಕುತ್ತಿದ್ದಾರೆ ಎಂದು ವಿನಾಯಕನಿಗೂ ಹೇಳಿದ್ದಳು. ವಿನಾಯಕನಿಗೆ ಈಗ ಅವಳ ಬಳಿ ತನ್ನ ಪ್ರೇಮ ನಿವೇದನೆ ಮಾಡಿಕೊಂಡು ಬಿಡೋಣ ಎನ್ನಿಸಿತ್ತು. ಆದರೆ ತಾನು ಬೆಂಗಳೂರಿಗೆ ಹೋದ ಮೇಲೆ ತನ್ನಲವ್ ವಿಷಯ ಹೇಳಿಕೊಂಡರೆ ಅದಕ್ಕೆ ಬೆಲೆ ಬರುತ್ತದೆ. ಆಗ ಆಕೆಯ ಮನೆಯಲ್ಲೂ ಒಪ್ಪಿಕೊಳ್ಳುತ್ತಾರೆ ಎಂದುಕೊಂಡು ಸುಮ್ಮನಾದ. ವಾಣಿ ಹತಾಶಳಾಗಿದ್ದಳು. ಆದರೆ ಆಕೆಯೂ ಆತನ ಬಳಿ ಹೇಳಿಕೊಳ್ಳಲಿಲ್ಲ.
                ಕೊನೆಗೊಂದು ಜಾತಕ ಹೊಂದಿಕೆಯಾಯಿತು. ಮನೆಯವರು ಒಪ್ಪಿಕೊಂಡರು. ವಾಣಿಗೆ ಮನಸ್ಸಿರಲಿಲ್ಲ. ಆದರೆ ಮನೆಯ ತೀರ್ಮಾನ ಅಂತಿಮವಾಗಿತ್ತು. ವಿನಾಯಕನ ಬಳಿ ಹೇಳಿದರೆ... ಎಂಬ ಆಲೋಚನೆ ಬಂತಾದರೂ ಏನು ಮಾಡಬೇಕೆಂದು ತೋಚಲಿಲ್ಲ. ತಾನಾಗಿಯೇ ವಿನಾಯಕನ ಬಳಿ ನಾ ನಿನ್ನ ಲವ್ ಮಾಡ್ತಾ ಇದ್ದೀನಿ ಅಂದರೆ ವಿನಾಯಕ ಎಲ್ಲಾದರೂ ವಿರೋಧ ಮಾಡಿದರೆ..? ಎಂಬ ಭೀತಿ ಕಾಡಿತು. ತಳಮಳದೊಂದಿಗೆ ಸುಮ್ಮನಾದಳು. ಇತ್ತ ವಿನಾಯಕ ಚಡಪಡಿಸಿದ.

**
`ವಿನಾಯ್ಕಾ.. ಮುಂದಿನ ವಾರ ನನ್ನ ಮದುವೆ.. ಮನೆಯಲ್ಲಿ ನಿಶ್ಚಯ ಮಾಡಿದ್ದ. ನಿಂಗೆ ಆನು ಸಿಕ್ಕಿ ಕರೆಯಕಾಗಿತ್ತು. ಆದರೆ ಕರೆಯಲಾಜಿಲ್ಲೆ.. ಸಾರಿ.. ಪೋನ್ ಮಾಡಿದ್ದಕ್ಕೆ ಬೇಜಾರಾಗಡಾ.. ಮದುವೆಗೆ ಬಾ. ಶಿರಸಿ ಲಿಂಗದಕೋಣ ಕಲ್ಯಾಣ ಮಂಟಪದಲ್ಲಿ ಆಕ್ತು. ನೀ ಹೆಂಗಂದ್ರೂ ದೂರದಿಂದ ನೆಂಟರಾಗವಡಲಾ..'
ವಿನಾಯಕನಿಗೆ ಒಮ್ಮೆ ದಿಗ್ಭ್ರಮೆ. ಆದರೆ ತೋರಿಸಿಕೊಳ್ಳದೇ `ವಾವ್.. ವಾಣಿ ಕಂಗ್ರಾಟ್ಸ್.. ಎಷ್ಟು ಖುಷಿಯಾಗ್ತಾ ಇದ್ದು ಗೊತ್ತಿದ್ದ ಯಂಗೆ. ಒಳ್ಳೆ ಸುದ್ದಿ ಹೇಳದೆ ಹಾಂ.. ನೋಡ್ತಿ. ನಾ ರಜಾಕ್ಕೆ ಅಪ್ಲೈ ಮಾಡ್ತಿ. ಕೊಟ್ರೆ ಖಂಡಿತ ಬರ್ತಿ.. ಹಾ..'
ಈಗಲಾದರೂ ತನಗೆ ಪ್ರಪೋಸ್ ಮಾಡುತ್ತಾನೆ ಎಂದುಕೊಂಡಿದ್ದ ವಾಣಿ ನಿಜಕ್ಕೂ ಹತಾಶಳಾದಳು. `ಮತ್ತೆ ವಿನಾಯ್ಕಾ.. ಇನ್ನೆಂತಾದ್ರೂ ಹೇಳದು ಇದ್ದಾ..?'
`ಊಹೂ.. ಎಂತಾ ಇಲ್ಯೆ.. ನಿಮ್ಮನೇಲಿ ಕೇಳಿದ್ದಿ ಹೇಳು..' ವಿನಾಯಕನೂ ಹೇಳು ಸಿದ್ಧನಿರಲಿಲ್ಲ..
`ಎಂತಾದ್ರೂ ಹೇಳದಿದ್ರೆ ಹೇಳಾ.. ಆಮೇಲೆ ನಾ ನಿಂಗೆ ಸಿಗದು ಡೌಟು. ಬ್ಯುಸಿಯಾಗಿಬಿಡ್ತಿ. ಮದುವೆ ತಯಾರಿನಲಾ..'
ವಿನಾಯಕನ ಟ್ಯೂಬ್ ಲೈಟ್ ಈಗಲೂ ಹತ್ತಿಕೊಳ್ಳಲಿಲ್ಲ..`ಮತ್ತೆಂತಾ ಇಲ್ಯೆ.. ನೆನಪಾದ ಕೂಡಲೇ ಮೇಸೇಜ್ ಮಾಡ್ತಿ..' ಖಂಡಿತ ವಿನಾಯಕ ಈ ಸಾರಿ ಖಡ್ಡತನ ಮಾಡಿದ್ದ.
`ಸರಿ ಹಾಗಾದ್ರೆ.. ಮತ್ಯಾವಾಗಾದ್ರೂ ಲೈಫಲ್ಲಿ ಮೀಟ್ ಮಾಡನಾ..' ವಾಣಿ ಪೋನ್ ಇಟ್ಟಿದ್ದಳು.

**
ವಿನಾಯಕನ ಕಣ್ಣು ಹನಿಗೂಡಿತ್ತು. ವಾಣಿ ಪೋನ್ ಇಡುವ ಮುನ್ನ ಹೇಳಿದ ಸಾಲಿನ ಜೊತೆಗಿದ್ದ ಗದ್ಗದಿತ ಭಾವ ಕೊನೆಗೂ ವಿನಾಯಕನಿಗೆ ತಿಳಿಯಲೇ ಇಲ್ಲ. ತಿಳಿದರೂ ಸುಮ್ಮನುಳಿದಿದ್ದ.

Thursday, March 13, 2014

ನದಿಯ ಆತ್ಮಕಥೆ

ಗಣೇಶಪಾಲದಲ್ಲಿ ಹರಿಯುತ್ತಿರುವ ಶಾಲ್ಮಲೆ
ದಟ್ಟ ವೃಕ್ಷಗಳ ಮಧ್ಯ ಜನಿಸಿದೆನು ನಾನು
ಸುತ್ತಮುತ್ತಲೂ ತುಂಬಿತ್ತು ಕಾನು |

ಚಿಕ್ಕಂದಿನಲಿ ನಾನು ಕುಣಿಕುಣಿಯುತಿದ್ದೆ
ಜುಳು ಜುಳು ನಾದದಲಿ ನಲಿ ನಲಿಯುತಿದ್ದೆ |

ನನ್ನೆಡೆಗೆ ಹರಿದವು ನೂರಾರು ಹಳ್ಳ
ಹಳ್ಳಗಳ ಹೀರುತಲಿ ನಾನಾದೆ ಕೊಳ್ಳ |

ನೋಡ ನೋಡುತಲೆ ನಾನಾದೆ ಹೊಳೆ
ತೊಳೆಯತೊಡಗಿದೆನು ಎಲ್ಲರ ಕೊಳೆ |

ಮುಂದೊಮ್ಮೆ ಕಣಿವೆಗೆ ಭೋರೆಂದು ಹಾರಿ
ಸೌಂದರ್ಯ ಜಲಪಾತಕ್ಕೆ ನಾನಾದೆ ದಾರಿ |

ಮುಂದೊಮ್ಮೆ ಮರೆಯಿತು ನನ್ನ ಚಿನ್ನಾಟ
ಮೈಮೇಲೆ ಶುರುವಾಯ್ತು ದೋಣಿಗಳ ಕಾಟ |

ಸಹ್ಯಾದ್ರಿ ಕಳೆದು ಬಳಿ ಬಂತು ಬಯಲು
ಇನ್ನೇನು ಸನಿಹ ಕರೆಯುತಿದೆ ಕಡಲು |

ಮುಂದೆಲ್ಲಾ ಬಂತು ಬಹು ಕರಾವಳಿ
ಎಲ್ಲ ಕಡೆ ಮೆರೆಯಿತು ಹಡಗುಗಳ ಹಾವಳಿ |

ನೋಡುತಿರುವಂತೆಯೇ ಕುಡಿಯಿತು ಕಾರ್ಖಾನೆ ನೀರು
ಮೈನದ ತುಂಬೆಲ್ಲ ಕೀವು ಒಸರು |

ನನ್ನನ್ನು ಬಳಸಿ ಮಾನವ ಮೆರೆದ
ಬದುಕಿನ ನಡುವಲ್ಲಿ ಮಾನವತೆ ಮರೆತ |

ಇದ್ದಕ್ಕಿದ್ದಂತೆ ಮರೆಯಿತು ನಲಿವು
ಒಡಲಿನ ತುಂಬ ತುಂಬಿತು ನೋವು |

ಸಾಕಪ್ಪಾ ಸಾಕಯ್ಯ ಈ ನದಿಯ ಬಾಳು
ಕೇಳದೇ ದೇವನೆ ಈ ಬಾಳ ಗೋಳು |

ಕೊನೆಗೊಮ್ಮೆ ನಾನು ಕಡಲಿಗೆ ಜಿಗಿದೆ
ನದಿಯಾಗಿ-ಕೊನೆಯಾಗಿ ಸಾರ್ಥಕ್ಯ ಪಡೆದೆ |

**
(ಈ ಕವಿತೆ ಬರೆದಿದ್ದು 10-04-2007ರಂದು ದಂಟಕಲ್ಲಿನಲ್ಲಿ)
(ಎತ್ತಿನಹೊಳೆ ತಿರುವು ಮಾಡಿ ಬಯಲಿಗೆ ಹರಿಸಿ, ಅಘನಾಶಿನಿಯನ್ನು ಬೆಂಗಳೂರಿಗೆ ಒಯ್ಯಿರಿ, ಶಾಲ್ಮಲೆಗೆ ಅಣೆಕಟ್ಟುಗಳನ್ನು ಕಟ್ಟಿ ಬತ್ತಿಸಿ, ಕೃಷ್ಣ, ತುಂಗಭದ್ರಾ, ಕಾವೇರಿ, ಮಲಪ್ರಭೆ, ನೇತ್ರಾವತಿ, ಕಾಳಿ ನದಿಗಳನ್ನೆಲ್ಲ ಹೊಲಸೆಬ್ಬಿಸಿ... ಮನಸೋ ಇಚ್ಛೆ ನದಿಯ ಮೇಲೆ ದಬ್ಬಾಳಿ ಕಾಡಲಾಗುತ್ತಿದೆ. ಇವುಗಳಲ್ಲಿ ಹಲವು ಯೋಜನೆಗಳು ಕೈಗೊಳ್ಳಲಾಗಿದೆ. ಇನ್ನೂ ಹಲವು ಯೋಜನೆಗಳು ರಾಜಕೀಯದ ಕಣ್ಣಾ ಮುಚ್ಚಾಲೆಯಲ್ಲಿ ನರಳುತ್ತ ಬಿದ್ದಿವೆ. ಹಸಿರು ಹಸಿರಾಗಿ ಹರಿಯುತ್ತಿರುವ ನದಿಯನ್ನು ಯೋಜನೆಯ ನೆಪದಲ್ಲಿ ಬರಿದು ಮಾಡುವುದು, ಆ ಸಂದರ್ಭದಲ್ಲಿ ಏನು ಸಿಗುತ್ತದೋ ಅದೆಲ್ಲವನ್ನೂ ದೋಚಿಕೊಳ್ಳುವುದು ರಾಜಕಾರಣಿಗಳ ಹುನ್ನಾರ. ಸಾಧಕ-ಬಾಧಕ ಚಿಂತಿಸದೇ ಒಟ್ಟೂ ತಮ್ಮ ಬೇಳೆ ಬೆಯ್ದರೆ ಸಾಕು ಎನ್ನುವ ಗೂಸುಂಬೆ ರಾಜಕಾರಣಿಗಳ ದಾಹಕ್ಕೆ ನದಿಗಳು ಬಲಿಯಾಗುತ್ತಿವೆ. ನದಿಯೊಂದು ಹೇಗೆ ಹುಟ್ಟಿ, ಹೇಗೆಲ್ಲಾ ಆಗಿ ಕೊನೆಗೆ ಏನಾಗುತ್ತದೆ ಎನ್ನುವುದರ ಬಗ್ಗೆ ಒಂದು ಚಿಕ್ಕ ಕವಿತೆ ಇದು)
(ನದಿಗಳಲ್ಲಿ ನೀರಿರುವ ಚಿತ್ರಗಳನ್ನು ಅಪ್ ಲೋಡ್ ಮಾಡಲು ಭಯವಾಗುತ್ತದೆ.. ಮತ್ಯಾರಾದರೂ ಅದರಲ್ಲಿ ನೀರನ್ನು ಕಂಡು ಯೋಜನೆಗಳನ್ನು ರೂಪಿಸಿಬಿಟ್ಟಾರು ಎನ್ನುವ ಭಯದೊಂದಿಗೆ ಇಲ್ಲೊಂದು ಪೋಟೋ ಹಾಕಿದ್ದೆನೆ.)


Monday, March 3, 2014

ಬಸ್ಸಿನ ಕಂಬಿಯಲ್ಲಿ ತಲೆ ಸಿಕ್ಕಿಸಿಕೊಂಡಿದ್ದು

(ಇಂತದ್ದೇ ಕಂಬಿಯಲ್ಲಿ ತಲೆ ಸಿಕ್ಕಿಸಿಕೊಂಡಿದ್ದು-ಬಾಣದ ಗುರುತಿದ್ದಲ್ಲಿ ಗಮನಿಸಿ)
         ಯಾವಾಗ್ಲೂ ಇವನು ತನ್ನ ಅನುಭವಗಳನ್ನೇ ಬರೆದುಕೊಳ್ಳುತ್ತಾನೆ ಎಂದುಕೊಳ್ಳಬೇಡಿ. ನನ್ನ ಬದುಕಿನಲ್ಲಿ ಕೆಲವೊಂದು ಅಪರೂಪದ ಅನುಭಗಳಾಗಿವೆ. ಅವನ್ನು ಹಂಚಿಕೊಳ್ಳುತ್ತಿದ್ದೇನೆ ಅಷ್ಟೇ.
           ಇದು ಚಿಕ್ಕವನಿದ್ದಾಗ ಎಂದೋ ನಡೆದ ಘಟನೆ. ನನಗೆ ಆ ಚಿಕ್ಕಂದಿನ ಘಟನೆ ಅಲ್ಪ ಸ್ವಲ್ಪ ನೆನಪಿನಲ್ಲಿದೆ. ಅದಕ್ನಕಿಂತ ಹಿರಿಯರು ಹೆಚ್ಚು ಹೇಳಿದ್ದರಿಂದ ಘಟನೆ ನೆನಪಿದೆ. ಆಗ ನನಗೆ ಮೂರೋ ನಾಲ್ಕೋ ವರ್ಷ ವಯಸ್ಸು ಇರಬಹುದು. ಕಿಲಾಡಿ ಹುಡುಗ ನಾನು ಎಂದೇ ವರ್ಡ್ ಫೇಮಸ್ಸು. ನಿಂತಲ್ಲಿ ನಿಲ್ಲದ ಪೋಕರಿ ಮಾಣಿ.
            ಅಂದು ಅಮ್ಮ ಹಾಗೂ ಅರುಂಧತಿ ಅತ್ತೆ (ಅಪ್ಪನ ಅಕ್ಕ. ಅವರು ಈಗಿಲ್ಲ) ಇವರಿಬ್ಬರೂ ಸೇರಿ ನನ್ನನ್ನು ಕರೆದುಕೊಂಡು ಸಾಗರದ ಹತ್ತಿರ ಭೀಮನಕೋಣೆಯಲ್ಲಿರುವ ನೆಂಟರಮನೆಯ ಕಡೆಗೆ ಹೊರಟಿದ್ದರು. ಸಾಗರದಿಂದ ಅನತಿ ದೂರದಲ್ಲಿರುವ ಈ ಊರಿಗೆ ಹೋಗಬೇಕೆಂದರೆ ಖಾಸಗಿ ಬಸ್ಸುಗಳನ್ನೇ ಹಿಡಿಯಬೇಕು. ಸರ್ಕಾರಿ ಬಸ್ಸುಗಳು ಅಲ್ಲೊಂದು ಇಲ್ಲೊಂದು ಇದ್ದ ಕಾಲದಲ್ಲಿ ನಾವು ಒಂದು ಖಾಸಗಿ ಬಸ್ಸನ್ನೇರಿ ಹೊರಟೆವು.
             ನಾನು ಕಿಲಾಡಿ ಎಂದು ಮೊದಲೇ ಹೇಳಿದ್ದೆನಲ್ಲ. ಸುಮ್ಮನೆ ಇರದ ನಾನು ಬಸ್ಸಿನಲ್ಲಿ ಪುಂಡರಪೂಟನ್ನು ಶುರುಹಚ್ಚಿಕೊಂಡೆ. ಅಮ್ಮ ಬೈದು ಹಿಡಿಶಾಪ ಹಾಕಿದರೂ ಕೇಳಲಿಲ್ಲ. ಬಸ್ಸ್ಇನಲ್ಲಿ ಓಡುವುದು, ಸೀಟಿನಿಂದ ಸೀಟಿಗೆ ಜಿಗಿಯುವುದು.. ಹೀಗೆ ಹಲವಾರು ಕೆಲಸಗಳನ್ನು ಮಾಡಿದೆ. ಅದ್ಯಾವುದೋ ಪುಣ್ಯಾತ್ಮ ಬಸ್ಸಿನ ತಲೆಯ ಮೇಲೆ ಹತ್ತಿ ಯಾವುದೋ ಲಗೇಜನ್ನು ಏರಿಸುತ್ತಿದ್ದ. ನನಗೆ ಕುತೂಹಲ ತಡೆಯಲು ಸಾಧ್ಯವಾಗಲಿಲ್ಲ. ಬಸ್ಸಿನಲ್ಲಿ ಕಂಡಕ್ಟರ್ ಕೂರುವ ಸೀಟಿನ ಪಕ್ಕದಲ್ಲಿ ಹಾಕಿರುತ್ತಾರಲ್ಲ ಲಗೇಜ್  ಕಂಬಿಗಳು ಅದರೊಳಗೆ ತಲೆ ತೂರಿಸಿಬಿಟ್ಟೆ.
             ತೂರಿಸುವುದು ತೂರಿಸಿದೆ. ಆದರೆ ತೆಗೆಯಲಿಕ್ಕಾಗಬೇಕಲ್ಲ. ಊಹೂ.. ಏನು ಮಾಡಿದರೂ ತಲೆಯನ್ನು ಹೊರಕ್ಕೆ ತೆಗೆಯಲು ಆಗುತ್ತಿಲ್ಲ. ಬಸ್ಸಿನ ಮೇಲೆ ಲಗೇಜು ಏರಿಸುವವರೆಲ್ಲ ಗದರಲು ಆರಂಭಿಸಿದರು. ನಾನು ಹೋ ಎಂದು ಅರಚಲು ಆರಂಭಿಸಿದೆ.
             ದುರಾದೃಷ್ಟಕ್ಕೆ ಆಗಲೇ ಬಸ್ಸನ್ನೂ ಬಿಟ್ಟುಬಿಟ್ಟರು.ದೇಹ-ತಲೆ ಬೇರೆ ಬೇರೆ ಆದಂತೆ. ದೇಹ ಒಳಗೆ, ತಲೆ ಹೊರಗೆ. ನನ್ನ ಅಳು ಜೋರಾಯಿತು. ಅಮ್ಮ ಹಾಗೂ ಅತ್ತೆಗೆ ದಿಗ್ಭ್ರಮೆ.
             ಅಷ್ಟರಲ್ಲಾಗಲೇ ಬಸ್ಸಿನಲ್ಲಿದ್ದ ಜನರು, ಕಂಡಕ್ಟರ್-ಡ್ರೈವರ್ ಇವರ ಗಮನ ನನ್ನ ಕಡೆಗೆ ಹರಿದಿತ್ತು. ಮಗನನ್ನು ಸರಿಯಾಗಿ ನೋಡಿಕೊಂಡಿಲ್ಲ. ಭಾನಗಡಿ ಮಾಡಿಕೊಂಡಿದೆ ಎಂದು ಎಲ್ಲರೂ ಅಮ್ಮನಿಗೆ ಬೈಯುವವರೇ. ಭಯ ಹಾಗೂ ನಾಚಿಕೆಯಿಂದ ಅಮ್ಮ ಹಾಗೂ ಅತ್ತೆಯ ಮುಖ ಕೆಂಪಾಗಿತ್ತು.
             ಅಮ್ಮ ಅದೇನು ಮಾಡಿದರೂ ತಲೆಯನ್ನು ಸಿಕ್ಕಿಬಿದ್ದ ಕಂಬಿಯಿಂದ ತೆಗೆಯಲಿಕ್ಕಾಗುತ್ತಿಲ್ಲ. ಗಿಲೋಟಿನ್ ಯಂತ್ರಕ್ಕೆ ಹಾಕಿದಾಗ ಹೇಗೆ ತಲೆ ಸಿಕ್ಕಿಬಿದ್ದು ಒದ್ದಾಡುತ್ತೇವೋ ಹಾಗೆ ನಾನು ಒದ್ದಾಡತೊಡಗಿದ್ದೆ. ಕೊನೆಗೊಮ್ಮೆ ಅಮ್ಮ ದೇವರ ಮೇಲೆ ಭಾರ ಹಾಕಿ ಕಣ್ಣು ಮುಚ್ಚಿ ಜೋರಾಗಿ ಎಳೆದಳು. ಪುಣ್ಯಕ್ಕೆ ತಲೆ ಕಂಬಿಯಿಂದ ಬಿಡಿಸಿಕೊಂಡು ಬಂದಿತು. ಉಫ್.. ನನ್ನ ಪ್ರಾಣ ಉಳಿಯಿತು. ಎಳೆದ ರಭಸಕ್ಕೆ ನನ್ನ ತಲೆಯ ಎರಡೂ ಪಕ್ಕ ಕೆಂಪಗಾಗಿ ಕಿನ್ನೆತ್ತರು ಗಟ್ಟಿತ್ತಲ್ಲದೇ ಈಗಲೋ ಆಗಲೋ ರಕ್ತ ಸುರಿಯುತ್ತದೆ ಎನ್ನುವಂತಾಗಿತ್ತು. ಹಿಂಗಾದರೆ ಆಗಲಿ ಜೀವ ಉಳಿಯಿತಲ್ಲ.. ಸಾಕು. ಎಂದು ನಿಟ್ಟುಸಿರಾಗಿದ್ದರು ಮನೆಯಲ್ಲಿ.
**
             ಇಂತಹ ನನ್ನ ಅನೇಕ ಲಿಗಾಡಿತನಗಳನ್ನು ಅಮ್ಮ ಸೈರಿಸಿಕೊಂಡಿದ್ದಾಳೆ. ಹೆಚ್ಚಿನ ಸಾರಿ ಸಹನೆಯಿಂದ ಮತ್ತೆ ಹಲವು ಸಾರಿ ಸಹನೆಯನ್ನೂ ಬಿಟ್ಟು ಏಟು ಹಾಕಿದವಳು ಅಮ್ಮ. ಅವಿಭಕ್ತ ಕುಟುಂಬದಲ್ಲಿ  ಹಿರಿಯ ಮೊಮ್ಮಗನಾಗಿ ಹುಟ್ಟಿದ ತಪ್ಪಿಗೆ ಯಾರೇ ತಪ್ಪು ಮಾಡಿದರೂ ನನ್ನ ಮೇಲೆ ಅದು ಬರುತ್ತಿತ್ತು. ಶಿಕ್ಷೆ ಅನುಭವಿಸಬೇಕಾಗುತ್ತಿತ್ತು. ಆಗೆಲ್ಲ ನನ್ನ ಬೆನ್ನಿಗೆ ನಿಂತು ನನ್ನ ಪರವಾಗಿ ವಾದಿಸಿದವಳು ಅಮ್ಮ. ಪರಿಣಾಮವಾಗಿ ಅಮ್ಮ ಬೈಗುಳಗಳನ್ನು ಕೇಳಬೇಕಿತ್ತು. ನನ್ನ ಬಾಲ್ಯದ ಕಿಲಾಡಿತನಗಳ ದೆಸೆಯಿಂದ ಅನೇಕ ಸಾರಿ ಅಮ್ಮ ಕಣ್ಣೀರು ಹಾಕಿದ್ದೂ ಇದೆ. ಆದರೆ ಈಗ ಅವುಗಳನ್ನು ಮೆಲುಕು ಹಾಕುವ ಅಮ್ಮ ಅವೆಲ್ಲ ಎಷ್ಟು ಮಜವಾಗಿದ್ದವಲ್ಲಾ ಎಂದು ನಗುತ್ತಾಳೆ. ಅಮ್ಮನಿಗೆ ಹಾಗೂ ಅಮ್ಮನ ಪ್ರೀತಿಗೆ ಸಲಾಂ. ಮಾ.8 ವಿಶ್ವಮಹಿಳಾ ದಿನಾಚರಣೆ. ಅಮ್ಮನಿಗೆ ಶುಭಾಷಯ ಹೇಳಲು ಮತ್ತೊಮ್ಮೆ ನೆಪ ಸಿಕ್ಕಂತಾಗಿದೆ.
ಅಮ್ಮಾ. ವಿಶ್ವ ಮಹಿಳಾ ದಿನಾಚರಣೆಯ ಶುಭಾಷಯಗಳು.