Thursday, October 31, 2013

ಗೆಳತಿ ನೀನಿಲ್ಲದೇ



ಗೆಳತಿ,
ನವಿಲಿನ ಚುಕ್ಕೆಗಳೇಕೋ
ನೀನಿಲ್ಲದೇ ಅರ್ಥ ಕಳೆದುಕೊಂಡಿವೆ.
ಹಾಡಬಯಸಿದ ಹಾಡೇಕೋ ಪದೆ ಪದೇ
ಶೃತಿ ತಪ್ಪಿ ಅಪದ್ಧವಾಗುತ್ತಿದೆ ||

ನೀನಿಲ್ಲದ ಇರುಳೊಳಿ ಕನಸಿಲ್ಲ
ಗೆಳತಿ, ಅದು ಹಲ್ಕಿಸಿಯುತ್ತಿದೆ.
ಉಣ್ಣುವ ಊಟವೆಲ್ಲ ರುಚಿ
ಮರೆತು ಸಪ್ಪೆಯಾಗಿವೆ ||

ಗೆಳತೀ, ನೀನಿಲ್ಲದೇ ಈ ಭುವಿಯ
ಹಸಿ ಹಸಿರ ರಾಶಿಗೇಕೋ ಅರ್ಥವಿಲ್ಲ.
ಬದುಕಿನ ಶಿಸ್ತು ಮರೆತಿದೆ.
ನಿದಿರೆಗೇಕೋ ಮೊದಲಿನ ಮತ್ತಿಲ್ಲ ||

ಗೆಳತೀ ನೀನಿಲ್ಲದ ಈ ಉದ್ದಾನುದ್ದದ
ಕಡಲತೀರ ಏಕೋ ಊಳಿಡುತ್ತಿದೆ.
ಮನ ಪದೆ ಪದೆ ಹಳಿತಪ್ಪುತ್ತಿದೆ.
ಕಣ್ಣಹನಿ ಅರ್ಥ ಕಳೆದುಕೊಳ್ಳುತ್ತಿದೆ. ||

ಗೆಳತೀ, ನೀನಿಲ್ಲದ
ಈ ಪ್ರೀತಿಗೆ ಅರ್ಥವೇ ಇಲ್ಲ
ನನ್ನ ಪ್ರೀತಿಗೆ ನೀನೇ ಎಲ್ಲ ||

{ಇದನ್ನು ಬರೆದಿದ್ದು = ದಂಟಕಲ್ಲಿನಲ್ಲಿ 03-01-2007ರಂದು}.

Wednesday, October 30, 2013

ಚದುರಂಗದ ಕುದುರೆಯ ಬೆನ್ನೇರಿ -ಭಾಗ 1

ಆತ್ಮೀಯರೇ..,
ತಿರುಗಾಟವೇ ನನ್ನ ಬದುಕು..
ಅಲ್ಲಿ ಇಲ್ಲಿ.. ಹಾಗೆ ಸುಮ್ಮನೆ ತಿರುಗಾಡುತ್ತಿರುವುದು..
ಪ್ರಸ್ತುತ ಕಾಲೇಜು ಫೈನಲ್ ಇಯರ್ ಆಗಿದ್ದಾಗ ನಾನು ನಮ್ಮ  ಎಂ.ಎಂ.ಕಲಾ ಮತ್ತು ವಿಜ್ಞಾನ ಕಾಲೇಜಿನ ಚದುರಂಗ ತಂಡದ ಕ್ಯಾಪ್ಟನ್ ಆಗಿ ಬಸವನ ಬಾಗೇವಾಡಿಗೆ ಹೋಗಿದ್ದರ ಪ್ರವಾಸ ಕಥನ..
ಅಲ್ಲೇನೇನಾಯ್ತು ಎನ್ನುವುದನ್ನು ಇಲ್ಲಿಟ್ಟಿದ್ದೇನೆ..
ಇಲ್ಲಿ ಬರುವ ಪಾತ್ರಗಳು 8+1 ಹಾಗೂ ಇತರೆ ಇತರೆ.. ಇವರು ನನ್ನ ಜೊತೆ ಹೋದವರು.
ಉಳಿದವರು ಹೀಗೆ ಬಂದು ಹಾಗೆ ಹೋಗುತ್ತಾರಾದರೂ ನೆನಪಿನ್ನಲಿ ಉಳಿಯುತ್ತಾರೆ.
9 ಜನರೂ 9 ಮುಖಗಳಂತೆ ತಮ್ಮ ವಿಶಿಷ್ಟ ಮ್ಯಾನರಿಸಮ್ಮಿನಿಂದ ಸದಾಕಾಲ ಕಾಡಬಲ್ಲರು.
ನಾನು ಹೊರಟಿದ್ದು ಚೆಸ್ ಆಟದ ಕಾರಣಕ್ಕಾಗಿ. ಒಂದು ವಾರದ  ಈ ಪ್ರವಾಸದ ರಸ-ರುಚಿ-ಸ್ವಾದ, ಹಾಸ್ಯ-ಸಿಟ್ಟು-ಸೆಡವು ಇವುಗಳೆಲ್ಲದರ ಬಹುರೂಪ ನಿಮ್ಮೆದುರು.
ಓದಿ, ಖುಷಿಪಡಿ, ಎಂಜಾಯ್ ಮಾಡಿ.. ಆ ನಂತರ ನಿಮ್ಮದೊಂದು ಚಿಕ್ಕ ಅನಿಸಿಕೆ ಕೊಡಿ..


**
17-09-2007, ಸೋಮವಾರ
             ಮುಂಚಿನ ದಿನ ರಾತ್ರಿಯೇ ನಾನು-ಕಿಟ್ಟು ದೋಸ್ತ ರಾಘವನ ರೂಮಿನಲ್ಲಿ ಉಳಿದುಕೊಂಡ ಕಾರಣದಿಂದ ನಾವು ಬಸ್ ಸ್ಟಾಂಡಿಗೆ ಲೇಟಾಗಿ ಬರುವ ಸಂಭವವೇ ಇರಲಿಲ್ಲ. ಬೆಳಿಗ್ಗೆ ಐದಕ್ಕೇ ಎದ್ದು, ದಡಬಡಿಸಿ ತಯಾರಾಗಿ , ನನ್ನ ಅಶ್ವಿನಿ ಸರ್ಕಲ್ಲಿನ ರೂಮಿಗೆ ಬಂದು ಕುಳಿತು ಅಲ್ಲೊಂದರ್ಧ ಘಂಟೆ ಹಾಗೆ ಸುಮ್ಮನೇ ಚೆಸ್ ಆಡಿದೆವು. ಆದಿನ ರಾಘವ ಹಾಗೂ ಕಿಟ್ಟು ಅದ್ಭುತ ಫಾರ್ಮಿನಲ್ಲಿದ್ದರು. ಪರಿಣಾಮ ಗೆಲುವಿನ ಮೇಲೆ ಗೆಲುವು ಸಾಧಿಸುತ್ತಾ ಹೋದರು. ನಾನು ಸೋತು-ಸೋತು ಸುಣ್ಣವಾಗಿ ಹೋದೆ.
ಬೆಳಿಗ್ಗೆ ಏಳೂವರೆಗೆ ಬಸ್ ನಿಲ್ದಾಣದಲ್ಲಿರಬೇಕಾಗಿದ್ದ ನಾವು ಹತ್ತು ನಿಮಿಷ Late  ಆಗಿ ಹೋದೆವು. ಆಗಲೇ ಅಲ್ಲಿಗೆ ಬಂದಿದ್ದ ನವೀನ ಪಾವಸ್ಕರ `ಏನ್ರೋ..ಏಳೂವರೆಗೆ ಅಂದ್ರೆ ಈಗ ಬರೋದೇನು? ನಾನು ಏಳೂವರೆಯಿಂದ್ಲೇ ಕಾಯ್ತಾ ಇದ್ದೀನಿ..' ಎಂದು ವಟಗುಡಲು ಪ್ರಾರಂಭಿಸಿದ್ದ.
              ಆದರೆ ಬರಬೇಕಿದ್ದ ಮಹಿಳಾ ಮಣಿಗಳಿನ್ನೂ ಬಂದೇ ಇರಲಿಲ್ಲ. ಪವಿತ್ರಳೊಬ್ಬಳು ಮಾತ್ರ ಬಂದಿದ್ದಳು. ಉಳಿದವರು ಒಬ್ಬೊಬ್ಬರಾಗಿ ಬರುತ್ತಿದ್ದರು. ಮುಖ್ಯವಾಗಿ ನಮ್ಮ ತಂಡದ ಮ್ಯಾನೇಜರ್ ಆಗಿದ್ದ ಕಾಲೇಜಿನ ದೈಹಿಕ ಶಿಕ್ಷಕ ಎನ್. ಎಚ್. ಗೌಡರೇ ಬಂದಿರಲಿಲ್ಲ.
             ಅಂತೂ ಎಲ್ಲರೂ ಬಂದು ತಲುಪುವ ವೇಳೆಗೆ ಗಂಟೆ ಎಂಟನ್ನು ದಾಟಿ ಹದಿನೈದು ನಿಮಿಷವನ್ನು ಹೆಚ್ಚಿಗೆ ನುಂಗಿತ್ತು. ನಾನು, ಕಿಟ್ಟು, ರಾಘವ ಅವರಿಗಂತೂ ಇವರು ಇಸ್ಟು ಲೇಟಾಗಿ ಬರ್ತಾರೆ ಅಂತ ಗೊತ್ತಿದ್ದರೆ ನಾವುನ್ನೂ ನಾಲ್ಕೈದು ಮ್ಯಾಚ್ ಆಡಿ ಬರುತ್ತಿದ್ದೆವು ಎಂದು ಕೊಂಡೆವು.. ಕಿಟ್ಟು ಅಂತೂ ಚಿಕ್ಕದಾಗಿ `ಛೇ.. ವಿನಯನ್ನ  ಇನ್ನೊಂದೆರಡು ಮ್ಯಾಚಲ್ಲಿ ಹೊಡೆಯಲಾಗ್ತಿತ್ತು..' ಎಂದಾಗ ನನಗೆ ಹಾಗೂ ರಾಘುವಿಗೆ ನಗುವ ಬುಗ್ಗೆಯೇ ಹೊಮ್ಮಿತ್ತು.
          ಆಗಲೇ ನಮ್ಮ ಗೌಡರು ಹುಬ್ಬಳ್ಳಿಗೆ ಲಟ್ಟು ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ನಮ್ಮನ್ನು ಕರೆದೊಯ್ಯಲು ಅನುವಾದರು. ಅವರ ಜೊತೆಗೆ ಹೌದೆನ್ನಲು ಪಾವಸ್ಕರನಿದ್ದ. ನನಗೆ ಹಾಗೂ ಕಿಟ್ಟುವಿಗೆ ಶಿರಸಿಯಲ್ಲಿ ಆಗಿನ ಕಾಲಕ್ಕೆ ಚನ್ನಾಗಿದ್ದ `ಸಾಮ್ರಾಟ್' ಬಸ್ಸಿನಲ್ಲಿ ಹೋಗುವ ಆಸೆ.
          `ಸರ.. ಸಾಮ್ರಾಟ ಬಸ್ಸಿಗೆ ಹೋಗೋಣ್ರೀ..' ಅಂದರೆ ಗೌಡರು ಒಲ್ಲೆ ಎಂದರು. ನಮ್ಮ ಮನದಾಳವನ್ನು ತಕ್ಷಣ ಅರಿತ ರಾಘವ `ಸರ್ ನೀವು ಸಾಮ್ರಾಟ್ ಬಸ್ಸಿಗೆ ಹೋಗೋದೇ ಒಳ್ಳೇದು. ಯಾಕಂದ್ರೆ ಅದು ವೀಡಿಯೋ ಕೋಚ್ ಬಸ್ಸು. ಜೊತೆಗೆ ಕೆಎಸ್ಸಾರ್ಟಿಸಿಗಿಂತ 2 ರು. ಕಡಿಮೆ ರೇಟು.' ಎಂದ.
          ಒಂದು ತಲೆಗೆ ಎರಡು ರುಪಾಯಿಯಂತೆ 9 ತಲೆಗೆ 18 ರುಪಾಯಿ ಉಳಿಯುತ್ತದೆ ಎಂದು ಆಲೋಚನೆ ಮಾಡಿ ತಲೆ ಓಡಿಸಿದ ನಾಗಭೂಷಣ ಗೌಡರು ರಾಘವನ ಸಲಹೆಗೆ ಜೈ ಎಂದು ನಮ್ಮನ್ನು ಸಾಮ್ರಾಟ್ ಬಸ್ಸು ಹತ್ತಿಸಿದರು.
         ನಾನು, ನವೀನ ಪಾವಸ್ಕರ, ಆನಂದ ನಾಯ್ಕ, ಕೃಷ್ಣ ಮೂರ್ತಿ ದೀಕ್ಷಿತ, ಪೂರ್ಣಿಮಾ ಹೆಗಡೆ ವಾನಳ್ಳಿ, ಪೂರ್ಣಿಮಾ ಬೆಂಗ್ರೆ ಭಟ್ಕಳ, ತೃಪ್ತಿ ಹೆಗಡೆ, ಪವಿತ್ರಾ ಹೆಗಡೆ ಹಾಗೂ ನಾಗಭೂಷಣ ಗೌಡರನ್ನು ಹೊಂದಿದ ಬಸ್ಸು ಶಿರಸಿಯನ್ನು ಬಿಡುವ ಹೊತ್ತಿಗೆ ರಾಘವ ನಮಗೆ ಟಾಟಾ ಮಾಡಿ ಶುಭವಿದಾಯ ಹೇಳಿಯಾಗಿತ್ತು. ಸಮಯ ಆಗಲೇ 8.30ನ್ನೂ ಮೀರಿ ಮುಂದಕ್ಕೆ ಟಿಕ್ಕೆನ್ನುತ್ತಿತ್ತು..

(ಮುಂದುವರಿಯುತ್ತದೆ..)
(ಮುಂದಿನ ಭಾಗದಲ್ಲಿ ನಿರೀಕ್ಷಿಸಿ-ವಿಶಿಷ್ಟ ಸಾಮ್ರಾಟ್ ಬಸ್ಸು ಹಾಗೂ ದೋಸ್ತರ ದಂಡು)

Sunday, October 27, 2013

ಮದ್ವೆ ಮಾಡ್ಕ್ಯಳೇ..,


ಯಮ್ಮನೆ ಮಾಣಿ ಚೋಲೋ ಇದ್ದ
ಮದ್ವೆ ಮಾಡ್ಕೈಳೇ ಕೂಸೆ,
ಯಮ್ಮನೆ ಮಾಣಿ ಚೊಲೋ ಇದ್ದ
ಮದ್ವೆ ಮಾಡ್ಕ್ಯಳೇ ||

ಅಮೇರಿಕಾದಲ್ಲಿ ಜ್ವಾಬ್ ನಲ್ಲಿದ್ದ
ಮದ್ವೆ ಮಾಡ್ಕ್ಯಳೇ ಕೂಸೆ,
ಐವತ್ತು ಸಾವ್ರ ಸಂಬ್ಳ ಬತ್ತು
ಮದ್ವೆ ಮಾಡ್ಕ್ಯಲೇ ||

ಕಾರು, ಗೀರು ಬಂಗ್ಲೆ ಇದ್ದು
ಮದ್ವೆ ಮಾಡ್ಕ್ಯಳೇ ಕೂಸೆ,
ಆಳು, ಕಾಳು ಜೋರೇ ಇದ್ದ
ಮದ್ವೆ ಮಾಡ್ಕ್ಯಳೇ ||

ಜಮೀನಂತೂ ರಾಶಿ ಇದ್ದು
ಮದ್ವೆ ಮಾಡ್ಕ್ಯಳೇ ಕೂಸೆ,
ಹವ್ಯಕರಲ್ಲಿ ಹೆಣ್ಣು ಕಡಿಮೆ
ಮದ್ವೆ ಮಾಡ್ಕ್ಯಳೇ ||

ಯಮ್ಮನೆ ಮಾಣಿ ಭಾರಿ ಶುಭಗ
ಚಟ ಮಾಡ್ತ್ನಿಲ್ಯೇ ಕೂಸೆ
ಜೂಜಾಡ್ತ್ನಿಲ್ಲೆ, ಕುಡೀತ್ನಿಲ್ಲೆ
ಓಸಿ ಆಡ್ತ್ನಿಲ್ಲೆ ||

ಯಮ್ಮನೆ ಮಾಣಿ ಶಿಸ್ತಾಗಿದ್ದ
ಮದ್ವೆ ಮಾಡ್ಕ್ಯಳೇ ಕೂಸೆ,
ಸದಾ ನಿನ್ನ ಸೇವೆ ಮಾಡ್ತ
ಮದ್ವೆ ಮಾಡ್ಕ್ಯಳೇ ||

ವಾರಕ್ಕೊಮ್ಮೆ ಸೀರೆ ತತ್ತ
ಮದ್ವೆ ಮಾಡ್ಕ್ಯಳೇ ಕೂಸೆ,
ತಿಂಗ್ಳಿಗೊಂದು ನೆಕ್ಲೆಸ್ ತತ್ತಾ
ಮದ್ವೆ ಮಾಡ್ಕ್ಯಳೇ ||

ಕಪ್ಪಗಿದ್ರೂ ಒಪ್ಪಾಗಿದ್ದ
ಮದ್ವೆ ಮಾಡ್ಕ್ಯಳೇ ಕೂಸೆ
ಬದುಕಿನ ಪೂರ್ತಿ ಪ್ರೀತಿ ಮಾಡ್ತ
ಮದ್ವೆ ಮಾಡ್ಕ್ಯಳೇ ||

(ಇದೊಂದು ಹವ್ಯಕ ಟಪ್ಪಾಂಗುಚ್ಚಿ ಗೀತೆ. ಹವ್ಯಕರಲ್ಲಿ ಹೆಣ್ಣು ಕಡಿಮೆ. ಹುಡುಗ ಎಷ್ಟೇ ಸಕಲಗುಣ ಸಂಪನ್ನರಾದರೂ ಹವ್ಯಕ ಹುಡುಗಿಯರು ಕ್ಯಾತೆ ತೆಗೆದು ಬೇಡವೆನ್ನುತ್ತಾರೆ. ಗಂಡಿನ ತಂದೆ-ತಾಯಿ ಹುಡುಗಿಯ ಬಳಿ ಬಂದು ಮದ್ವೆ ಮಾಡ್ಕ್ಯಳೇ ಎಂದು ಗೋಗರೆದು, ಮಗನ ಗುಣಗಾನ ಮಾಡಿ ಮದುವೆ ಮಾಡಿಕೋ ಎನ್ನುವ ಹಾಸ್ಯಮಿಶ್ರಿತ ಗೀತೆ.

Friday, October 25, 2013

ಮೆಚ್ಚಿನ ಮಾಸ್ತರು(ಕಥೆ)

    ಅಂದು ಸಂಜೆ ನಾನು ನನ್ನ ಆಫೀಸು ಕೆಲಸ ಮುಗಿಸಿ ಮನೆಗೆ ಬಂದು ಸೇರುತ್ತಿದ್ದ ಹಾಗೆಯೇ ನನ್ನ ಮೊಬೈಲ್ ರಿಂಗಣಿಸತೊಡಗಿತು. ನಾನು ಅದನ್ನು ಲಗುಬಗೆಯಿಂದ ಎತ್ತಿಕೊಂಡು `ಹಲೋ' ಎಂದೆ..
    ಆ ಕಡೆಯಿಂದ `ನಾನು ಸಂತೋಷ..' ಎಂದ.
    `ಏನ್ ಸಮಾಚಾರ ಸಂತೋಷ..? ಚನ್ನಾಗಿದ್ದೀಯಾ..? ಹೇಗಿದ್ದೀಯಾ..' ಎಂಬಿತ್ಯಾದಿ ಉಭಯಕುಶಲೋಪರಿ ಸಾಂಪ್ರತಗಳೆಲ್ಲ ನಡೆದವು.
    ಕೊನೆಗವನು `ನೀನು ಅರ್ಜೆಂಟಾಗಿ ಇಲ್ಲಿಗೆ ಬಾ.. ನಮ್ಮೆಲ್ಲರ ಪ್ರೀತಿ ಪಾತ್ರರಾದ ತ್ಯಾಗರಾಜ ಸರ್ ಅವರು ತೀರಿಕೊಂಡರು. ನೀನು ಬೇಗ ಹೊರಡು ಬಾ..' ಎಂದು ಪೋನಿಟ್ಟ.
    ನನಗೆ ಒಮ್ಮೆಲೆ ದಿಗ್ಭ್ರಾಂತಿಯಾಯಿತು. ತ್ಯಾಗರಾಜ ಮಾಸ್ತರರು ನನ್ನ ಹೈಸ್ಕೂಲು ಹಾಗೂ ಜೀವನದಲ್ಲಿ ಸಿಕ್ಕ ಅತ್ಯಂತ ಪ್ರೀತಿ ಪಾತ್ರ ಮಾಸ್ತರರಾಗಿದ್ದರು. ಅವರು ನನಗಷ್ಟೇ ಅಲ್ಲದೇ ಹೈಸ್ಕೂಲಿನ ಪುಂಡ ಹುಡುಗರಿಗೆಲ್ಲ ಗುರುವಿನಂತಿದ್ದ ಸಂತೋಷನಂತಹ ಹಲವರಿಗೂ ಅಚ್ಚುಮೆಚ್ಚಿನ ಗುರುಗಳಾಗಿದ್ದರು.
    ನಾನು ಲಗುಬಗೆಯಿಂದ ಕೈಗೆ ಸಿಕ್ಕ ಬಟ್ಟೆಗಳನ್ನು ಬ್ಯಾಗಿನಾಳಕ್ಕೆ ತುರುಕಿ ತಯಾರಾಗಿ ಬೆಂಗಳೂರಿನಿಂದ ಶಿರಸಿಯ ಕಡೆಗೆ ಹೊರಡುವ ಬಸ್ಸನ್ನು ಹತ್ತಿ ಕುಳಿತೆ. ಕುಳಿತ ಘಳಿಗೆಯಿಂದ ನನ್ನ ಮನದ ಭಿತ್ತಿಯ ಮೇಲೆ ತ್ಯಾಗರಾಜ ಮಾಸ್ತರರ ನೆನಪು ಒಂದರಹಿಂದೊಂದರಂತೆ ಮೂಡಿಬರಲಾರಂಭಿಸಿತು.
    *****
    ತ್ಯಾಗರಾಜ್ ಸರ್ ನನ್ನ ಅತ್ಯಂತ ಪ್ರೀತಿಪಾತ್ರ ಗುರುಗಳು. ಹಾಗೆಯೇ ನಾನೂ ಕೂಡ ಅವರ ಅತ್ಯಂತ ಪ್ರೀತಿ ಪಾತ್ರ ವಿದ್ಯಾರ್ಥಿಯಾಗಿದ್ದೆ. ಅವರು ತಮ್ಮ ವೃತ್ತಿ ಬದುಕಿನಲ್ಲಿ ಬಹಳಷ್ಟು ವಿದ್ಯಾರ್ಥಿಗಳನ್ನು ಕಂಡಿದ್ದರೂ ಅವರ ಒಲವು ಮಾತ್ರ ನನ್ನ ಮೇಲಿತ್ತು.
    ಹೈಸ್ಕೂಲಿನಲ್ಲಿ ಅವರು ಇಂಗ್ಲೀಷ್ ವಿಷಯದ ಶಿಕ್ಷಕರಾಗಿದ್ದರು. ಇಂಗ್ಲೀಷಿನಲ್ಲಿ ಅವರು ಹೆಚ್ಚು ಪಾಂಡಿತ್ಯ ಗಳಿಸಿಕೊಂಡಿದ್ದರು. ಅವರು ಇಂಗ್ಲಿಷೀನ ಬಹುತೇಕ ಎಲ್ಲಾ ಪುಸ್ತಕಗಳನ್ನು ಓದಿಕೊಂಡಿದ್ದರೇನೋ ಎನ್ನುವ ನಂಬಿಕೆ ನನ್ನದಾಗಿತ್ತು. ಪ್ರತಿಯೊಂದೂ ಸಮಯದಲ್ಲಿ ಅವರು ತಮ್ಮ ಕೈಯಲ್ಲಿ ಇಂಗ್ಲೀಷಿನ ಯಾವುದಾದರೊಂದು ಪುಸ್ತಕವನ್ನು ಹಿಡಿದು ಓದುತ್ತಿದ್ದರು. ಇಲ್ಲವಾದರೆ ಕೈಯಲ್ಲೊಂದು ಚಿಕ್ಕ ರೇಡಿಯೋ ಹಿಡಿದು ಬಿಬಿಸಿಯನ್ನೋ ವಾಯ್ಸ್ ಆಫ್ ಅಮೇರಿಕಾವನ್ನೋ ರಷ್ಯನ್ ಚಾನಲ್ಲನ್ನೋ ಹಾಕಿಕೊಂಡು ಕೇಳುತ್ತಿದ್ದರು. ಅವರ ಇಂಗ್ಲೀಷ್ ಪಾಂಡಿತ್ಯ ಎಷ್ಟಿತ್ತೆಂದರೆ ಒಮ್ಮೆ ಬಿಬಿಸಿಯ ನ್ಯೂಸ್ ನಲ್ಲಿ ಒಂದು ತಪ್ಪನ್ನು ಕಂಡುಹಿಡಿದು, ಬಿಬಿಸಿಯವರಿಗೆ ಪತ್ರ ಬರೆದು ಅವರಿಂದ ಪ್ರಶಂಸೆಯನ್ನೂ ಪಡೆದುಕೊಂಡಿದ್ದರು.
    ನಾನು ಹೈಸ್ಕೂಲಿಗೆ ಸೇರಿದ ಹೊಸತರಲ್ಲಿ ಮಾತೃಭಾಷಾ ಪ್ರವೀಣ ಎಂಬ ಹೆಸರನ್ನು ಪಡೆದುಕೊಂಡಿದ್ದೆ. ನನಗೆ ಇಂಗ್ಲೀಷ್ ಎಂದರೆ ಕಬ್ಬಣಕ್ಕಿಂತ ಗಟ್ಟಿಯಾಗಿದ್ದ ಕಡಲೆಯಾಗಿತ್ತು. ಈ ಮಾಸ್ತರರು ನನಗೆ ಇಂಗ್ಲೀಷಿನ ಕಡೆಗಿದ್ದ ಭಯ, ಅನ್ಯಮನಸ್ಕತೆಯನ್ನು ಹೋಗಲಾಡಿಸಿ ಇಂಗ್ಲೀಷು ಸುಲಭವಾಗಿಸಿದ್ದರು.
    ಸರಿಯಾಗಿ ಇಂಗ್ಲೀಷಿನ ಪುಸ್ತಕವನ್ನೂ ಕೊಂಡು ಓದಲು ನನಗೆ ಕಷ್ಟವಾಗುತ್ತಿದ್ದ ಸಮಯದಲ್ಲಿ ಅವರು ತಮ್ಮಲ್ಲಿದ್ದ ಶೇಕ್ಸ್ಪೀಯರ್, ಮ್ಯಾಥ್ಯೂ ಅರ್ನಾಲ್ಡ್, ಚಾರ್ಲ್ಸ್ ಲ್ಯಾಂಬ್, ಜಾನ್ ಕೀಟ್ಸ್, ವೈ, ಬಿ. ಯೇಟ್ಸ್ ಮುಂತಾದ ಇಂಗ್ಲೀಷಿನ ಮಹಾಮಹಿಮರ ಪುಸ್ತಕಗಳನ್ನು ನನಗೆ ತಂದುಕೊಟ್ಟು, ಕಷ್ಟಪಟ್ಟು ಓದುವಂತೆ ಮಾಡಿ ಅವುಗಳನ್ನು ಕೊಡುಗೆಯಾಗಿ ನೀಡಿದರು.
    ನಂತರದ ದಿನಗಳಲ್ಲಿ ಅವರು ತಮ್ಮ ಸ್ವಂತ ಖರ್ಚಿನಲ್ಲಿ ನನ್ನನ್ನು ಓದಿಸಿದರು ಎಂದರೂ ತಪ್ಪಾಗಲಿಕ್ಕಿಲ್ಲ. ಅವರು ತಮಗೆ ಸ್ವಂತ ಮಕ್ಕಳನ್ನು ಹೊಂದಿಲ್ಲದೇ ಇದ್ದ ಕಾರಣ ನನ್ನನ್ನು ಸ್ವಂತ ಮಗನಂತೆ ಸಾಕಿದರು. ಜೊತೆ ಜೊತೆಯಲ್ಲಿ ನನ್ನ ತಂದೆ ತಾಯಿಗಳಿಗೂ ಸಾಕಷ್ಟು ಸಹಾಯ ಮಾಡಿದ್ದರು.
    ನಂತರ ನಾನು ಓದಿ ಬಿ.ಎಸ್ಸಿ, ಎಂ.ಎಸ್ಸಿ ಮುಂತಾದ ಹಲವಾರು ಡಿಗ್ರಿಗಳ ಸರದಾರನಾದೆ. ಜೊತೆಗೆ ಬೆಂಗಳೂರಿನ ಒಂದು ದೊಡ್ಡದೊಂದು ಕಂಪನಿ ಉದ್ಯೋಗ ನೀಡುತ್ತೇನೆಂದು ಕೈಬೀಸಿ ಕರೆಯಿತು. ಹುಂ ಅಂದ ತಕ್ಷಣ ಕೈಚಾಚಿ ನನ್ನನ್ನು ಕರೆದು ಸೆಳೆದು ತೆಕ್ಕೆಯೊಳಗೆ ಮುಳುಗಿಸಿಬಿಟ್ಟಿತು. ನಾನು ಉದ್ಯೋಗಲೋಕದಲ್ಲಿ ಹೆಚ್ಚು ಹೆಚ್ಚು ತೊಡಗಿಕೊಂಡಂತೆಲ್ಲ ಮೆಚ್ಚಿನ ಮಾಸ್ತರು ದೂರದೂರವಾಗತೊಡಗಿದರು. ಅವರ ಒಡನಾಟ ತಪ್ಪಿತು. ನನಗೆ ಇಷ್ಟೆಲ್ಲ ಸಹಾಯಗಳನ್ನು ಮಾಡಿದ್ದ ತ್ಯಾಗರಾಜ ಮಾಸ್ತರು ಜಗತ್ತಿನ ಎಲ್ಲಾ ಭಾಷೆಗಳನ್ನೂ ಕಲಿಯಬೇಕೆಂಬ ಮಹೋನ್ನತ ಉದ್ದೇಶವನ್ನು ಹೊಂದಿದ್ದರು.
    ನಾನು ಸಾಗುತ್ತಿದ್ದ ಬಸ್ಸಿನ ಡ್ರೈವರ್ ಒಮ್ಮೆ ಇದ್ದಕ್ಕಿದ್ದಂತೆ ಬ್ರೇಕ್ ಒತ್ತಿದ. ನಾನು ಮೋಡದಿಂದ ಮಳೆಹನಿ ಭೂಮಿ ಜಾರಿ ಇಳಿವಂತೆ ಒಮ್ಮೆ ನೆನಪಿನ ಲೋಕದಿಂದ ವಾಸ್ತವಕ್ಕೆ ದಡಾರನೆ ಬಂದು ಬಿದ್ದೆ. ನೋಡಿದರೆ ಬಸ್ಸು ಅರಸೀಕೆರೆಯನ್ನು ದಾಟಿತ್ತು. ಯಾವುದೋ ಹೆರುಗೊತ್ತಿಲ್ಲದ ಊರಿನಲ್ಲಿ ತಿಂಡಿಗಾಗಿ ನಿಂತಿತ್ತು.
    ಬಸ್ಸು ಮತ್ತೆ ಮುಂದಕ್ಕೆ ಚಲಿಸಿದಂತೆಲ್ಲ ನಾನು ಮತ್ತೆ ನೆನಪಿನ ಅಂಗಣದೊಳಕ್ಕೆ ಪಯಣ ಮಾಡಿದೆ. ಹಲವಾರು ಉತ್ತಮ ಗುಣಗಳ ಖಜಾನೆಯಾಗಿದ್ದ ತ್ಯಾಗರಾಜ ಮಾಸ್ತರರಲ್ಲಿ ಕೆಲವೊಂದು ಅವಗುಣಗಳೂ ಇದ್ದವು.
    ಅವರಲ್ಲಿದ್ದ ಮುಖ್ಯ ತೊಂದರೆಯೆಂದರೆ ಮರೆಗುಳಿತನವಾಗಿತ್ತು. ಅತಿಯಾದ ಮರೆವು ಅವರನ್ನು ಕಾಡುತ್ತಿತ್ತು. ಅತಿಯಾಗಿ ಓದಿದ ಕಾರಣದಿಂದಲೇ ಈ ಮರೆವು ತ್ಯಾಗರಾಜ ಮಾಸ್ತರರನ್ನು ಆವರಿಸಿಕೊಂಡಿದೆ ಎಂದು ಕೆಲವರು ಹೇಳುತ್ತಿದ್ದರು. ಇವರ ಮರೆಗುಳಿತನ ಆಗಲೇ ಹೈಸ್ಕೂಲಿನಲ್ಲಿ ವರ್ಡ್ ಫೇಮಸ್ಸಾಗಿತ್ತು. ಇವರ ಮರೆಗುಳಿತನ ಹೇಗಿತ್ತೆಂದರೆ ಒಮ್ಮೆ ಅವರು ತಮ್ಮ ಮೋಟಾರ್ ಬೈಕಿನಲ್ಲಿ ಸಾಗುತ್ತಿದ್ದು. ಬೈಕಿಗೆ ಬ್ರೇಕ್ ಹಾಕಲು ಮರೆತುಹೋದ ಪರಿಣಾಮ ಎದುರಿನ ಬಂಡೆಗಲ್ಲಿಗೆ ಢಿಕ್ಕಿಕೊಟ್ಟು ಬಿದ್ದು ಆಸ್ಪತ್ರೆಯ ಪಾಲಾಗಿದ್ದರು.
    ಇನ್ನೊಂದು ಅವರಲ್ಲಿನ ಮುಖ್ಯ ಸಮಸ್ಯೆ ಎಂದರೆ ರೋಗಗಳ ಕಡೆಗಿದ್ದ ಅಪಾರ ಭಯ. ಅದರಲ್ಲೂ ಮುಖ್ಯವಾಗಿ ಕ್ಯಾನ್ಸರ್ ಮಹಾಮಾರಿಯ ಕುರಿತು ಅವರಿಗೆ ವಿಪರೀತ ಭಯವಿತ್ತು. ಯಾವುದೇ ಹೊಸ ರೋಗ ಪತ್ತೆಯಾದರೂ ಮೊದಲು ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದರು. ಕ್ಯಾನ್ಸರನ್ನಂತೂ ಅವರು ಭೂತ ಎಂದೇ ಕರೆಯುತ್ತಿದ್ದರು.
    ಕ್ಯಾನ್ಸರಿನ ಕುರಿತು ಭಯದ ಕಾರಣದಿಂದಲೇ ಅವರು ತಮ್ಮ ಜೀವಮಾನದಲ್ಲೇ ಉಗುರಿಗೆ ಬಣ್ಣ ಹಚ್ಚಲಿಲ್ಲ. ಮುಖಕ್ಕೆ ಪೌಡರನ್ನೂ, ದೇಹಕ್ಕೆ ಸೆಂಟನ್ನೂ ಪೂಸಿಕೊಳ್ಳುತ್ತಿರಲಿಲ್ಲ. ಅಷ್ಟೇ ಏಕೆ ಮಾರುಕಟ್ಟೆಯಲ್ಲಿ ಸಿಗುತ್ತಿದ್ದ ಸಾಪ್ಟ್ ಡ್ರಿಂಕ್ ಗಳನ್ನೂ ಬಳಸುತ್ತಿರಲಿಲ್ಲ. ಮೊಬೈಲ್ ಬಳಕೆಯಿಂದ ಕ್ಯಾನ್ಸರ್ ಬರುತ್ತದೆ ಎಂದುಕೊಂಡು ಮೊಬೈಲನ್ನು ದೂರವಿಟ್ಟಿದ್ದರು. ಯಾವುದೇ ರಾಸಾಯನಿಕ ವಸ್ತುಗಳನ್ನೂ ಬಳಕೆ ಮಾಡುತ್ತಿರಲಿಲ್ಲ. ಅತಿಯಾಗಿ ಎಕ್ಸರೇ ಮಾಡಿಸಿಕೊಂಡರೆ ಮುಂದೊಂದು ದಿನ ಕ್ಯಾನ್ಸರ್ ಬರುವ ಸಾಧ್ಯತೆಗಳು ಹೆಚ್ಚು ಎಂದು ಎಲ್ಲೋ ಓದಿದ್ದನ್ನು ತಪ್ಪಾಗಿ ಅರ್ಥೈಸಿಕೊಂಡು ಅತಿಯಾಗಿ ಪೋಟೋ ತೆಗೆಸಿಕೊಂಡರೆ ಕ್ಯಾನ್ಸರ್ ಬರುತ್ತದೆ ಎನ್ನುತ್ತಿದ್ದರು. ಅಷ್ಟೇ ಅಲ್ಲದೇ ಪೋಟೋ ತೆಗೆಸಿಕೊಳ್ಳಲೂ ಹಿಂದೇಟು ಹಾಕಿದ ಅನೇಕ ಸಂದರ್ಭಗಳು ನನಗಿನ್ನೂ ನೆನಪಿದೆ. ನನ್ನ ಎಸ್ಸೆಸ್ಸೆಲ್ಸಿ ಬೀಳ್ಕೊಡುಗೆ ಸಮಾರಂಭದ ಪೋಟೋವೂ ಅದರಲ್ಲೊಂದು. ಅಷ್ಟರ ಜೊತೆಗೆ ಎಲ್ಲೇ ಕ್ಯಾನ್ಸರ್ ಕುರಿತು ಅಥವಾ ಇತರ ರೋಗಗಳ ಕುರಿತು ಮಾಹಿತಿ ಕಾರ್ಯಾಗಾರ, ಅರಿವು ಮೂಡಿಸುವ ಕಾರ್ಯಕ್ರಮವಿದ್ದರೆ ಅಲ್ಲಿ ತಪ್ಪದೇ ಪಾಲ್ಗೊಳ್ಳುತ್ತಿದ್ದರು.
    ಹೀಗೆ ನನ್ನ ನೆನಪಿನ ನೌಕೆ ತಂಗಾಳಿಯಲೆಗೆ ಎದುರಾಗಿ ಸಾಗುತ್ತಿದ್ದ ವೇಳೆಯಲ್ಲೇ ನಾಣು ಇಳಿಯಬೇಕಾದ ಕೊನೆಯ ನಿಲ್ದಾಣ ಬಂದೇಬಿಟ್ಟಿತು. ನಾನು ಲಗುಭಗೆಯಿಂದ ಇಳಿದು ತ್ಯಾಗರಾಜ ಮಾಸ್ತರರ ಮನೆಯ ಕಡೆಗೆ ನಡೆದೆ.
    ಅವರ ಮನೆಯ ಅಂಗಳದಲ್ಲಿ ನೀರವ ಮೌನ ತುಂಬಿತ್ತು. ಮಾಸ್ತರರ ಹಲವರು ಬಂಧು ಮಿತ್ರರಿರಬೇಕು. ಸೇರಿದ್ದರು. ನನ್ನೆಡೆಗೆ ಎಲ್ಲರ ಕಣ್ಣು ಕುತೂಹಲ, ಸೇರಿದಂತೆ ಹಲವು ಭಾವನೆಗಳಿಂದ ಅವರೆಲ್ಲ ನೋಡುವ ವೇಳೆಗೆ ನಾನು ಅಂಗಳ ದಾಟಿ ಮುಂದಡಿಯಿಟ್ಟಿದ್ದೆ. ಅಲ್ಲೊಂದು ಕಡೆ ತ್ಯಾಗರಾಜ ಮಾಸ್ತರರ ಹೆಂಡತಿ ರೋಧಿಸುತ್ತಿದ್ದಳು. ಅತ್ತು ಅತ್ತು ಕಣ್ಣು ಕೆಂಪಾಗಿದ್ದವು. ತಲೆಗೂದಲು ಕೆದರಿತ್ತು. ಮತ್ತೊಂದು ಕಡೆಯಲ್ಲಿ `ಸಂತೋಷ' ನಿಂತುಕೊಂಡಿದ್ದ. ನಡುವಲ್ಲಿ ತ್ಯಾಗರಾಜ ಮಾಸ್ತರರು ಅಚೇತನರಾಗಿದ್ದರು. ಮಾಸ್ತರರ ನಿಶ್ಚಲ ದೇಹ ಭೂಮಿಯ ಮೇಲೆ ಅಂಗಾತ ಒರಗಿತ್ತು.
    ನಾನು ಸಂತೋಷನ ಬಳಿ ಹೋಗಿ ಏನೇನಾಯ್ತು ಎಂದು ಕೇಳಿದೆ.
    ಅದಕ್ಕೆ ಸಂತೋಷ `ಅವರಿಗೆ ಕ್ಯಾನ್ಸರ್ ಇತ್ತಂತೆ ಮಾರಾಯಾ..' ಎಂದ.
    ನನಗೊಮ್ಮೆ ದಿಗ್ಭ್ರಾಂತಿಯಾಯಿತು. ನಾನು `ಏನು..? ಕ್ಯಾನ್ಸರ್..?' ಎಂದು ತೊದಲುತ್ತಾ ಉದ್ಘರಿಸಿ `ನನಗೇಕೆ ಹೇಳಲಿಲ್ಲ..' ಎಂದೆ.
    `ಅವರಿಗೆ ಕ್ಯಾನ್ಸರ್ ಬಂದು ಬಹಳ ವರ್ಷವಾಗಿತ್ತಂತೆ. ಮೊನ್ನೆ ಬಹಳ ಹೆಚ್ಚಾಗಿತ್ತು. ನಾನು ನಿನಗೆ ಸುದ್ದಿ ತಿಳಿಸಬೇಕೆಂದು ಹೊರಟಾಗ ಮಾಸ್ತರರೇ ಬೇಡ ಎಂದರು'.. ಎಂದು ತಿಳಿಸಿದ.
    ನನಗಂತೂ ಒಂದು ಕ್ಷಣ ಗಗನವೇ ಹರಿದುಬಿದ್ದಂತೆ ಅನ್ನಿಸತೊಡಗಿತು. ಆಕ್ಷಣದಲ್ಲಿ ನನಗೆ ಆಗುತ್ತಿದ್ದುದು ದುಗುಡವೋ, ಭಯವೋ, ಆಶ್ಚರ್ಯವೋ, ಕೌತುಕವೋ, ಉದ್ವೇಗವೋ, ದುಮ್ಮಾನವೋ.. ಬಗೆಹರಿಯಲಿಲ್ಲ. ಏನಾಗುತ್ತಿದೆ ಎನ್ನುವುದೇ ಅರ್ಥವಾಗಲಿಲ್ಲ. ಕಣ್ಣು ಕತ್ತಲಿಟ್ಟಂತಾಯಿತು.
    ಕೊನೆಗೆ ಸಂತೋಷ ನನ್ನ ಬಳಿ `ನೀನು ಮಾಸ್ತರರ ಚಿತೆಗೆ ಬೆಂಕಿ ಇಡಬೇಕಂತೆ..ಇದು ಅವರ ಕೊನೆಯ ಆಸೆಯಾಗಿತ್ತು..' ಎಂದ.
    ಆಗ ನನಗೆ ಎಲ್ಲವೂ ಅರ್ಥವಾಯಿತು. ಅವರೇಕೆ ಕ್ಯಾನ್ಸರ್ ಬಗ್ಗೆ ಅಷ್ಟು ಭಯ ಹೊಂದಿದ್ದು, ಕ್ಯಾನ್ಸರ್ ಕುರಿತ ಕಾರ್ಯಕ್ರಮಗಳಿಗೆಲ್ಲ ತೆರಳುತ್ತಿದ್ದರು ಎಂಬುದು. ರೋಗಗಳ ಕುರಿತು ಅವರು ಹೊಂದಿದ್ದ ಭಯದ ಮೂಲ ಕಾರಣವೂ ನನಗೆ ಅರಿವಾಗಿತ್ತು. ನಾನು ಮನಸ್ಸಿನಲ್ಲಿಯೇ ಕ್ಯಾನ್ಸರ್ ಭೂತವನ್ನು ಹಳಿಯಲಾರಂಭಿಸಿದೆ. ಎಂತೆಂತಹ ಮಹಾನ್ ವ್ಯಕ್ತಿಗಳನ್ನು ಬಲಿ ತೆಗೆದುಕೊಂಡಿತಲ್ಲಾ ಈ ಕ್ಯಾನ್ಸರ್ ಭೂತ.. ಕೊನೆಗೆ ನನ್ನ ಪ್ರೀತಿಯ ತ್ಯಾಗರಾಜ ಮಾಸ್ತರರನ್ನೂ ಬಿಡಲಿಲ್ಲವಲ್ಲ ಎಂದು ಬಹಳ ಖೇದವುಂಟಾಯಿತು.
    ಕೊನೆಗೆ ದುಃಖದ ನಡುವೆಯೇ ಅವರ ಚಿತೆಗೆ ನಾನೇ ಅಗ್ನಿಸ್ಪರ್ಷ ಮಾಡಿದೆ. ದುಃಖದ ನಡುವೆಯೂ ಗುರುವಿನ ಋಣ ತೀರಿಸಿದ, ತನ್ಮೂಲಕ ಗುರುದಕ್ಷಿಣೆ ಸಲ್ಲಿಸಿದ ತೃಪ್ತಿ ಸಿಕ್ಕಿತು. ಕ್ಷಣ ಕ್ಷಣಕ್ಕೂ ಚಿತೆಯ ಬೆಂಕಿ ಗಗನಮುಖಿಯಾಗುತ್ತಿತ್ತು. ಅಗ್ನಿ ಜ್ವಾಲೆಯಲ್ಲಿ ಕ್ಯಾನ್ಸರ್ ಭೂತದ ರುದ್ರನರ್ತನ ವಿಕಟಾಟ್ಟಹಾಸದಿಂದ ಮೆರೆಯುತ್ತಿರುವಂತೆ ಕಂಡು ಬೆನ್ನಿನ ಆಳದಲ್ಲಿ ಚುಳ್ಳೆಂದಿತು.
    ನಾನು ಆ ನಂತರ
    ಗುರು ಬ್ರಹ್ಮ, ಗುರುರ್ವಿಷ್ಣು..
    ಗುರುದೇವೋ ಮಹೇಶ್ವರಃ
    ಗುರು ಸಾಕ್ಷಾತ್ ಪರಬ್ರಹ್ಮ,
    ತಸ್ಮೈ ಶ್ರೀ ಗುರವೇ ನಮ:
ಎಂದು ಹೇಳುತ್ತಾ ಅಲ್ಲಿಂದ ಹಿಂದಿರುಗಲಾರಂಭಿಸಿದೆ.



********

(ಬರೆದಿದ್ದು 11-05-2005ರಂದು ದಂಟಕಲ್ಲಿನಲ್ಲಿ)..

Thursday, October 24, 2013

ಎಂಟು ವಸಂತಗಳಾಚೆ




ಎಂಟು ವಸಂತಗಳಾಚೆ
ಮತ್ತೊಮ್ಮೆ ಅಲ್ಲಿಗೆ ಹೋಗಿದ್ದೆ |
ದ್ವಾರಕೆಯಂತಹ ನಾಡಿಗೆ
ಮುಳುಗಿ ಹೋದ ಊರಿಗೆ,
ನನ್ನ ಅಮ್ಮನ ತೌರಿಗೆ ||

ಹೋದೊಡನೆಯೇ ಕಂಡಿದ್ದೇನು?
ಕಣ್ಣ ಮುಂದಿಡೀ ನೀರು
ಕೊನೆಮೊದಲಿಲ್ಲದ ಜಲ |
ಅಲ್ಲಲ್ಲಿ ತಲೆಯುರುಳಿದ
ಅಡಿಕೆ ಮರಗಳ ಬೊಡ್ಡೆ,
ಲಡ್ಡಾದ ತೆಂಗು, ಬಯಲಾದ ಕಾಡು ||

ನಲಿ ನಲಿದು ಬಾಲ್ಯವ
ಕಳೆದಲ್ಲೀಗ ತುಂಬಿರುವುದು
ನೀರು, ನೀರು ಹಾಗೂ ಬರೀ ನೀರು |
ಅಳಿದುಳಿದಂತೆ ಕಾಣುವುದೋ
ಅಲ್ಲಲ್ಲಿ ದ್ವೀಪ, ನರಕದ ಕೂಪ ||

ಹೆಸರೇನೋ ಇತ್ತು ಬರಬಳ್ಳಿ
ಸುತ್ತಲೂ ವನರಾಶಿ ಗಿಡ, ಮರ ಬಳ್ಳಿ
ತುಂಬಿತ್ತು ಜನ, ಧನ
ನಲಿದಿತ್ತು ಮನೆ, ಮನ ||

ಒಂದೆಡೆ ನೇರ ನಿಂತ ಸಹ್ಯಾದ್ರಿ
ಮತ್ತೊಂದೆಡೆ ರೌದ್ರ ಕರಿಕಾಳಿ |
ನಟ್ಟನಡುವಲಿ ಊರಿತ್ತು ಅಲ್ಲಿ
ಮುಗ್ಧ ಜನ ಮನದಿ ನಲಿವಿತ್ತಲ್ಲಿ ||

ಈಗಲೋ ಉಳಿದಿದ್ದು ಮಾತ್ರ
ಕಳೆದ ಹಳೆ ನೆನಪು, ಕರಿ ನೀರು
ಸ್ಪೂರ್ತಿಯಿಲ್ಲದ ಬಾಳು
ಜೊತೆಗೆ ಕೊನೆಯಿಲ್ಲದ ನೀರು ||

ದಾರಿಯೊಳು ಸಿಗುವ `ಕಳಚೆ'
ಹೊಳಪ ಕಳಚಿತ್ತು |
ಪಕ್ಕದ ಕೊಡಸಳ್ಳಿಯೋ
ಎಲ್ಲರ ಪಾಲಿಗೆ ಆಗಿತ್ತೊಂದು
ಬೆಂಕಿಯ ಕೊಳ್ಳಿ ||

ಊರ ವಾಸಂತಿಕೆರೆ ಒಬ್ಬಂಟಿಯಾಗಿತ್ತು,
ಉಕ್ಕೇರಿದ ಕಾಳಿಯಲೆ ಊರ ನುಂಗಿತ್ತು |
ನನ್ನನ್ನುಳಿಸಲು ವೈದ್ಯರಿದ್ದರು
ಈ ಊರುಳಿಸಲು ವೈದ್ಯರಿಲ್ಲ
ಜೊತೆಗೆ ಯಾರೂ ಇಲ್ಲ ||

ಪಕ್ಕದ ಸಾತೋಡ್ಡಿ ಎಂದೋ ಓಡಿಹೋಯ್ತು
ಭಾಗಿನಕಟ್ಟಾಕ್ಕೆ ಭಾಗಿನಕೊಟ್ಟಾಯ್ತು |
ಯಾರದೋ ದಾಹಕ್ಕೆ, ಆಸೆ, ಆಮಿಷಕ್ಕೆ
ಮುಗ್ಧ ಮನಸ್ಸುಗಳು ಬಲಿಯಾಯ್ತು ||

ಹಸಿರು ಸ್ವರ್ಗ ದೇವಕಾರ
ದೇವರ ಪಾದ ಸೇರಿತ್ತು
ಹಸಿರು ಶಿವಪುರ ನರಕವಾಗಿತ್ತು..
ದೂರದ ಕೈಗಾ ಮತ್ತೆ ಮತ್ತೆ ಕಾಡಿತ್ತು ||

ಇಂದು ನನ್ನೆದುರು ನಿಂತಿದ್ದು
ಹಳೆ ನೆನಹುಗಳ ಬಿಂಬ
ಸಿಗದ ಕಾಲ, ಕಳೆದ ಕ್ಷಣ
ಎಲ್ಲವೂ ನೀರಿನಡಿ. ನಿರ್ನಾಮ.
ಮತ್ತೆ ಹುಡುಕಿದರೆ ಎದುರು ಬರೀ ನೀರು ||

ಎಂಟು ವಸಂತಗಳಾಚೆ
ಲೋಕವೇ ಬದಲು |
ನಲಿವಿದ್ದ ಜಾಗದಲಿ
ತುಂಬಿದೆಯೋ ನೋವು |
ಭುವಿಯಿದ್ದ ಜಾಗದಲ್ಲಿ ಪೂರ್ತಿ
ಕರಿಕಾಳಿ ನೀರು |
ಜನರಿಲ್ಲ, ಜೀವ ಕುರುಹಿಲ್ಲ
ಮಸಣವಾಗಿದೆ ಬದುಕು ||

ಅಂತೂ ಆಗಿದೆ ಮುಳುಗಡೆ
ಭುವಿಗೂ, ಭಾವನೆಗಳಿಗೂ
ಕಳೆದುಹೋಗಿದೆಯೆಲ್ಲವೂ
ನೀರಿನಡಿ, ನೆನಪು
ಮರಳುವುದಿಲ್ಲ ಬಾಳ್ವೆ
ಮರುಗುವುದೊಂದೆ, ಜೊತೆಗೆ ಮೆಲುಕು ||

( ನನ್ನ ಅಜ್ಜನಮನೆಯಾದ ಯಲ್ಲಾಪುರ ತಾಲೂಕಿನ ಬರಬಳ್ಳಿ, ಅದು ಕಾಳಿ ನದಿಗೆ ಕಟ್ಟಲಾದ ಕೊಡಸಳ್ಳಿ ಅಣೆಕಟ್ಟಿನಲ್ಲಿ ಮುಳುಗಿ ಹೋಗಿ ಎಂಟು ವರ್ಷಗಳ ನಂತರ ನೋಡಿ ನೋವಿನೊಂದಿಗೆ ಬರೆದಿದ್ದು. ಆಗ ನನ್ನ ಮನಸ್ಸಿಗಾದ ಅನುಭವ. ನಿಮ್ಮ ಮುಂದೆ. ಕಳೆದ ಬಾಲ್ಯ, ಬಾಲ್ಯದ ಹುಡುಗಾಟ, ಒದ್ದಾಟ, ಬರಬಳ್ಳಿಯೆಂಬ ಜಗತ್ತು ಈಗಲೂ ಕಾಡುತ್ತಿದೆ. )
(ನಾನು, ಗಿರೀಶ್ ಕಲ್ಲಾರೆ, ಗುರುಪ್ರಸಾದ್, ಪ್ರಶಾಂತ ಭಟ್, ಅರುಣ ಭಟ್, ಯೋಗೀಶ್, ಶಶಿಧರ, ಗಣಪಣ್ಣ ಇತ್ಯಾದಿಗಳಿಗೆಲ್ಲ ಬರಬಳ್ಳಿಯೇ ಲೋಕವಾಗಿದ್ದ ಒಂದು ಕಾಲವಿತ್ತು. ನಾನು, ಗಿರೀಶ, ಗುರು ಇವರೆಲ್ಲ ರಜಾ ಸಿಕ್ಕಾಗ ಬರಬಳ್ಳಿಗೆ ಓಡಿಬರುತ್ತಿದ್ದೆವು. ಬೇಸಿಗೆ ರಜಾ ಬರಬಳ್ಳಿಯ ಉರಿಬಿಸಿಲು ಕಾಡುತ್ತಿತ್ತಾದರೂ ಬಹಳ ಇಷ್ಟವಾಗುತ್ತಿತ್ತು. ಈಜು ಕಲಿತ ವಾಸಂತಿಕೆರೆ, ರಕ್ತದ ಬೆಲೆ ತಿಳಿಸಿದ ಉದ್ದಬ್ಬಿಯ ಉಂಬಳಗಳು, ತಾಕತ್ತಿದ್ದರೆ ಒಂದೇ ಗುಟುಕಿಗೆ ಕುಡಿ ನೋಡೋಣ ಎಂದು ಸವಾಲು ಹಾಕುವಂತಿದ್ದ ಕಳಚೆಯ ಶೀಯಾಳಗಳು, ಸಕ್ಕರೆ, ಜೇನುತುಪ್ಪಕ್ಕಿಂತ ಸಿಹಿಯಾಗಿದ್ದ ಅಜ್ಜನಮನೆಯ ದೊಡ್ಡ ಮಾವಿನ ಹಣ್ಣುಗಳು, ಆರಿಸಿ ಆರಿಸಿ ತಿನ್ನುತ್ತಿದ್ದ ಗಿಳಿ ತಿಂದ ಪೇರಲೆಗಳು, ಬರಬಳ್ಳಿ ದೇವಸ್ತಾನದ ಬಳಿಯಲ್ಲಿದ್ದ ಗೃಂಥಾಲಯದಿಂದ ತಂದು ಓದಿದ್ದ ರಕ್ತರಾತ್ರಿ, ಕಂಬನಿಯ ಕುಯಿಲು, ಬರಬಳ್ಳಿಯ ಬಲಮುರಿ ಗಣಪನ ಕುರಿತಿದ್ದ ನಂಬಿಕೆ-ಮೂಢ ನಂಬಿಕೆಗಳು......ಇವೆಲ್ಲ ಬರಬಳ್ಳಿಯ ಕುರಿತಾದ ಒಂದು ನೆನಪಿನ ಹಂದರಗಳು..
ಅದೇ ರೀತಿ ಕೊಡಸಳ್ಳಿ ಡ್ಯಾಮಿಗಾಗಿ ನಡೆದ ಮರಗಳ ಮಾರಣಹೋಮ, ಮುಳುಗಿದ ಭೂಮಿ, ಅದೇ ಸಮಯದಲ್ಲಿ ನಾನು ಅಲ್ಲಿ ಮಂತ್ರ ಕಲಿಯುತ್ತಿದ್ದೆ. ದಣೀ ಉಪನಯನವಾಗಿತ್ತು. ಭಾವ ಗಣಪಣ್ಣ ಹುಳಸೇಬರಲಿನೊಂದಿಗೆ ಗಣಪತಿ ಉಪನಿಷತ್ತು, ಮುಂತಾದವುಗಳನ್ನು ಕಲಿಸುತ್ತಿದ್ದರೆ ಪಕ್ಕದ ಜಮೀನಿನಲ್ಲಿ ದೊಡ್ಡ ಮರಗಳನ್ನು ಕಡಿದುರುಳಿಸಿದ ಸದ್ದು ಎದೆಯನ್ನು ಝಲ್ಲೆನ್ನಿಸುತ್ತಿದ್ದವು.. ದೈತ್ಯ ಮರದ ದಿಮ್ಮಿಗಳನ್ನು ಎಳೆಯಲಾರದೇ ಘೀಳಿಡುತ್ತಿದ್ದ ಆನೆಗಳು.. ಬಾರುಕೋಲಿನ ಹೊಡೆತಕ್ಕೆ ಯಮಗಾತ್ರದ ಕೋಣಗಳು ಬೆದರುವ ಬಗೆಯೆಲ್ಲ ಮನದಲ್ಲಿ ಏನೇನೋ ಭಾವನೆಗಳನ್ನು ಮೂಡಿಸಿ ಕಣ್ಣೀರುಗರೆಯುತ್ತಿದ್ದವು.. ನಾನು ಮಂತ್ರ ಕಲಿತು ಅಲ್ಲಿಂದ ಹೊರಟು ಬಂದ ವಾರಕ್ಕೆಲ್ಲ ಸುದ್ದಿ ಬಂದಿತ್ತು ನೋಡಿ ಡ್ಯಾಂ ಬಾಗಿಲು ಹಾಕಿದರು ಬರಬಳ್ಳಿ ಮುಳುಗಿತು ಅಂತ.. ಕರುಳು ಕಲಸಿ ಬಂದಿತ್ತು.. ಅಂತಹ ಭಾವನಾತ್ಮಕ ಊರನ್ನು ಅದು ಮುಳುಗಿದ 8 ವರ್ಷಗಳ ನಂತರ ನೋಡಿ ಬಂದೆ.. ಆಗ ಆದ ಅನುಭವಕ್ಕೆ ಶಬ್ದಗಳು ಸಾಲುವುದಿಲ್ಲ..ಭಾವನೆಗಳು ಬಾಳುವುದಿಲ್ಲ.. )
(15-10-2006, ದಂಟಕಲ್ಲಿನಲ್ಲಿ)
 

Monday, October 21, 2013

ಮಾರಿಕಾಂಬೆಯ ತಂಗಿ...

ಹಳ್ಳಿಗಾಡಿನಲ್ಲಿ ಹುಡುಕಿದರೆ ನೂರಾಉ ದೇವರು-ದಿಂಡರು ಸಿಗಬಲ್ಲವು. ವಿಶಿಷ್ಟ-ವಿಚಿತ್ರ  ಆಚರಣೆಯ ದೇವಳಗಳಿರುತ್ತವೆ...ಹಲವರು ನಡೆದುಕೊಂಡು ಹರಕೆ ಹೊತ್ತುಕೊಂಡು ದೇವರನ್ನು ಸಾಕಷ್ಟು ಶಕ್ತಿವಂತರನ್ನಾಗಿ ಮಾಡುತ್ತಾರೆ..
ಇಂತಹ ಒಂದು ಶಕ್ತಿ ದೇವತೆ, 
ಕುಚಗುಂಡಿಯ ಅಮ್ಮನೋರು..

ಸರತಿಯಲ್ಲಿ ಶಿರಸಿ ಮಾರಿಕಾಂಬೆಗೆ ತಂಗಿಯಾಗಬೇಕಂತೆ...
ಸಾಗರದ ಮಾರಮ್ಮ, ಹುಕ್ಕಳಿ ಅಮ್ಮನೋರುಗಳು ಈಕೆಯ ಸೋದರಿಯರೇ ಹೌದೆಂದು ಹೇಳಲಾಗುತ್ತದೆ.

ವರುಷಕ್ಕೊಮ್ಮೆ ಸುತ್ಪತಮುತ್ತಲ ಊರುಗಳಿಗೆ ಪಲ್ಲಕ್ಕಿಯಲ್ಲಿ ಬಂದು ಹೋಗುತ್ತಾಳೆ...
ಹಿತ್ತಲಕೈ, ಯಲೂಗಾರು, ಬೇಣದ ಮನೆ, ಸಂಕದ ಮನೆ, ಇವುಗಳೆಲ್ಲ ಅಮ್ಮನೋರು ಸಾಗುವ ಮಾರ್ಗಗಳಾಗಿದ್ದವಂತೆ.. ಮುಂಚೆ ನಮ್ಮೂರಿಗೂ ಬರುತ್ತಿದ್ದಳಂತೆ... ಈಗ ಬರುತ್ತಿಲ್ಲ.. ಆದರೂ ಸುತ್ತ ಮುತ್ತಲ ಹೆಗಡೆಮನೆ, ಹಿತ್ತಲಕೈಗೆ ಹೋಗಿ ಬರುತ್ತಾಳೆ...

ಅಂದ ಹಾಗೆ ಹಿತ್ತಲಕೈ ಈ ಅಮ್ಮನೋರ ತವರು ಮನೆ ಎಂಬ ಮಾತಿದೆ.
ವರುಷಕ್ಕೊಂದು ಕಾರ್ತೀಕ...
ದೊಡ್ಡಹಬ್ಬದಲ್ಲಿ ವಾರು, ಸೀರೆ ಪಡೆವ ಹಬ್ಬ, ಸಂಪ್ರದಾಯಗಳಿವೆ...
ಆಗೊಮ್ಮೆ ಈಗೊಮ್ಮೆ ಭಾಗಿನ ಪಡೆಯುತ್ತಾಳೆ...


ಸಿದ್ದಾಪುರ ತಾಲೂಕಿನ ಕೋಡ್ಸರ/ಯಲುಗಾರು ಸೀಮೆಯ ಕುಚಗುಂಡಿಯ ಕೆರಿಯ ನ ಮನೆಯ ಆವರಣದಲ್ಲಿ ಈ ಅಮ್ಮ ನೆಲೆಸಿದ್ದಾಳೆ...
ಚಿಕ್ಕ ಪುಟ್ಟ ಉಪದ್ರವಗಳ ಹಿಂದೆ ಅಮ್ಮನ ಕೈ ಇದೆ.
ಅದಕ್ಕೆ ಪ್ರತಿಯಾಗಿ ಚಿಕ್ಕಪುಟ್ಟ ಹರಕೆಗಳನ್ನು ಲಂಚದ ರೂಪದಲ್ಲಿ ಕೊಟ್ಟರೆ ಅಮ್ಮ ಫುಲ್ ಖುಷ್..
ಚಿಕ್ಕಮಕ್ಕಳ ಬಾಲಗ್ರಹ, ಸಿಡುಬು, ಕಜ್ಜಿ, ಅಲರ್ಜಿ, ಹಲ್ಲು ಹುಟ್ಟದಿದ್ದರೆ ಹೀಗೆ ಅನೇಕ ಸಮಸ್ಯೆಗಳಿಗೆ ಅಮ್ಮನ ಬಳಿ ಹೇಳಿಕೊಂಡರೆ ಪರಿಹಾರ ಲಭ್ಯ...

ಕೆರಿಯ ಅಥವಾ ಕೆರಿಯನ ಮನೆಯವರು, ಆತನ ಅಣ್ಣ ಚೌಡ ಈ ಮುಂತಾದವರೇ ಅಮ್ಮನನ್ನು ಪೂಜಿಸಬೇಕೆಂಬ ಹಿಂದಿನಕಾಲದಿಂದ ಬಂದ ನಿಯಮಗಳಿವೆ...
ಕೋಳಿ ಕಡಿಯಲಾಗುತ್ತದೆಯಾದರೂ ಅಪರೂಪಕ್ಕೆ ಮಾತ್ರ... ಅಂದರೆ ಕೆರಿಯನ ಮನೆಗೆ ನೆಂಟರು ಬಂದರೆ ಕೋಳಿ ಕಡಿಯಲಾಗುತ್ತದೆ... ಅಥವಾ ಅಮ್ಮನ ಹಬ್ಬದ ಸಂದರ್ಭದಲ್ಲಿ ಕೋಳಿ ಕಡಿದರೆ ಕೆರಿಯನ ಮನೆಗೆ ನೆಂಟರು ಬಂದಿರುತ್ತಾರೆ/ಬಂದೇ ಬರುತ್ತಾರೆ.
ಊರಿನ ತುದಿಯಲ್ಲಿ ಕಲ್ಯಾಣೇಶ್ವರನಿದ್ದಾನೆ.. ಶಕ್ತಿಯಲ್ಲಿ ಆತನ ಸಮನಲ್ಲವಾದರೂ ಅಮ್ಮನಿಗೆ ತನ್ನದೇ ಆದ ಭಕ್ತಗಣಗಳಿದ್ದಾರೆ..
ಪ್ರೀತಿಯಿಂದ ನಡೆದುಕೊಳ್ಳುವವರೂ ಇದ್ದಾರೆ...

ಈ ಅಮ್ಮನೋರನ್ನು ನೋಡಲು ಬರುವವರು ಶಿರಸಿಯಿಂದ ಬಾಳೇಸರ ಬಸ್ಸಿಗೆ ಬಂದು ಕೋಡ್ಸರದಲ್ಲಿ ಇಳಿದು ಸನಿಹದ ರಸ್ತೆಯಲ್ಲಿ ಕುಚಗುಂಡಿಯತ್ತ ಬರಬಹುದು. ಇಲ್ಲವಾದರೆ ಶಿರಸಿಯಿಂದ ಅಡ್ಕಳ್ಳಿ ರಸ್ತೆಯ ಮೂಲಕ ದಂಟಕಲ್ ಹಾದು ಕುಚಗುಂಡಿಗೆ ಬರಬಹುದು. ಕುಚಗುಂಡಿಯಲ್ಲಿ ಕೆರಿಯಾನ ಮನೆಯನ್ನು ಕೇಳಿದರೆ ಮಾಹಿತಿ ನೀಡುತ್ತಾರೆ.  ಒಮ್ಮೆ ನೋಡಿ ಹೋಗಬಹುದಾದಂತಹ ತಾಣ..

ಕುಚಗುಂಡಿಯಲ್ಲೊಂದು ಚಿಕ್ಕದಾದ ಚೊಕ್ಕದಾದ ಕಲ್ಯಾಣೇಶ್ವರ ಜಲಪಾತವಿದೆ. ಪಿಕ್ ನಿಕ್ ಸ್ಥಳ.. ವಾರಾಂತ್ಯಕ್ಕೆ ಮುದ ನೀಡಬಹುದು..
ಹಾಗಾದರೆ ಯಾಕೆ ತಡ..?

ಕುಚಗುಂಡಿ ಅಮ್ಮ....
ಕಾಪಾಡಮ್ಮಾ....

ಹೀಗೆನ್ನುತ್ತಾ ಒಮ್ಮೆ ಬಂದು ಹೋಗಿ...

ಪೋಲಿ ಜಾನಿಯ ಕಾಲಿ ಪೀಲಿ ಸ್ಟೋರಿ

`ಯೇ ತಮಾ...
ನಿನ್ ಮಿಣ್ಣಿ ಕೊಯ್ತೇನಿ ನೋಡು...' ಎನ್ನುವ ಡೈಲಾಗ್ ಕೇಳಿಬಂತೆಂದರೆ ಅದು ಜಾನಿಯೇ ಹೌದು..
ಎತ್ತರದ, ಬಡಕಲು ದೇಹದ, ಮಾಸಲು ಮಾಸಲು ಸೀರೆಯ, ಕಪ್ಪು ಬಣ್ಣದ, ಬಾಯಿತುಂಬ ತಂಬಾಕಿನ ಕವಳದ ಕೆಂಪಿನ, ಕೈಯಲ್ಲಿ ಸದೆಗತ್ತಿಯ ಹಿಡಿದ ಜಾನಿಯ ಬಾಹ್ಯ ಚರ್ಯೆ ಎಂತವರಿಗಾದರೂ ದೀರ್ಘಕಾಲ ನೆನಪಿನಲ್ಲಿ ಇರುತ್ತದೆ.. ಅದಕ್ಕೆ ತಕ್ಕಂತೆ ಸೆನ್ಸಾರ್ ಇಲ್ಲದ ಆಕೆಯ  ಪೋಲಿ ಮಾತುಗಳು ಆಕೆಯನ್ನು ನೆನಪಿನ ಪುಟದಲ್ಲಿ ಅಚ್ಚಳಿಯದಂತೆ ಮಾಡುತ್ತವೆ..
ಜಾನಿ ನೋಡಲು ಬಡಕಲಾದರೂ ಆಕೆಯ ಮಾತುಗಳಿಂದಲೇ ವರ್ಡ್ ಫೇಮಸ್ಸಾಗಿರುವುದು.. ಊರಿಗೆ ಜಾನಿ ಕಾಲಿಟ್ಟಕೂಡಲೇ ಊರಲ್ಲಿರುವ ಹೆಂಗಸರು ತಮ್ಮ ಮನೆಯ ಬೆಳೆಯುತ್ತಿರುವ ಮಕ್ಕಳು, ಹರೆಯದ ಹುಡುಗ-ಹುಡುಗಿಯರನ್ನು ಏನೋ ನೆಪ ಹೇಳಿ ಜಾನಿಯ ಮಾತು ಕೇಳದಷ್ಟು ದೂರಕ್ಕೆ ಕಳಿಸಲು ನೋಡುತ್ತಾರೆ.. ಈಕೆಯ ಕಣ್ಣಿಗೇನಾದರೂ ಇಂತ ಹುಡುಗರು/ಹುಡುಗಿಯರು ಮಕ್ಕಳು ಬಿದ್ದರೋ, ಪೋಲಿ ಮಾತುಗಳು ಮೇರೆ ಮೀರುತ್ತವೆ. ಮಾತು ಮಾತಿಗೆ ದ್ವಂದ್ವಾರ್ಥದ ಸಂಭಾಷಣೆಗಳನ್ನು ಪುಂಖಾನುಪುಂಖವಾಗಿ ಬಿಡುತ್ತ ಸಾಗುವ ಈಕೆಯ ಎದುರು ಜಗ್ಗೇಶ, ಎನ್ನೆಸ್ ರಾವ್, ಉಮಾಶ್ರೀಯರೆಲ್ಲ ಮಂಡಿಗಾಲು ಊರಿ ಶರಣು ಶರಣಾರ್ಥಿ ಎನ್ನಬೇಕು. ಈಕೆಯ ಪೋಲಿ ಮಾತಿಗೋ ಅಂಕೆಯೇ ಇಲ್ಲ. ಒಂದರ ಹಿಂದೊಂದರಂತೆ. ಕೇಳುಗರೇ ನಾಚಿಕೆಯಿಂದ ಕಿವಿ ಮುಚ್ಚಿಕೊಳ್ಳಬೇಕು. ಆಕೆಯ ಪೋಲಿ ಮಾತು ಅಷ್ಟು ಪರಿಣಾಮಕಾರಿ.
ಈ ಜಾನಿಗೆ ನಮ್ಮೂರಿನ ಸನಿಹವೇ ಊರು. ಬಾಯಿ ಬೊಂಬಾಯಿ ಎನ್ನುವುದನ್ನು ಬಿಟ್ಟರೆ ದುರ್ಗುಣಗಳೇನಿಲ್ಲ. ಮನೆಗೆಲಸ, ತೋಟದ ಕೆಲಸ ಈಕೆಯ ಪ್ರಮುಖ ಕಾರ್ಯಗಳು.. ಸೀಸನ್ ಟೈಮಿನಲ್ಲಿ ಮಾತ್ರ ಈಕೆ ಸೂಲಗಿತ್ತಿಯಾಗುತ್ತಾಳೆ.. ಹೌದು ಸೂಲಗಿತ್ತಿ ಕೆಲಸ ಇವಳ ಪ್ರಮುಖ ಕೆಲಸಗಳಲ್ಲಿ ಒಂದು ಎಂದರೂ ತಪ್ಪಾಗಲಿಕ್ಕಿಲ್ಲ.
`ಹೆಗಡ್ರೆ ನಾ ಮಾಡೋ ಕೆಲ್ಸಾ ಸುಲಭದ್ದಲ್ಲ ತಿಳ್ಕಳಿ.. ನನ್ ಹಂಗೆ ಮಾಡೋವ್ರು ಯಾರೂ ಇಲ್ಲ ಸುತ್ತಮುತ್ತ 10 ಹಳ್ಳಿಯಾಗೆ.. ನಾ ಕೇಳದಷ್ಟು ಕೊಡ್ಲುಲ್ಲಾ ಅಂದ್ರೆ ನಾಳಿಂದ ಬೇರೆ ಯಾರ್ ಬತ್ತಾರೆ ಅಂತ ನೋಡ್ತೂನಿ..' ಎಂದು ಲೈಟಾಗಿ ರೋಪ್ ಹಾಕುವ ಗೌಡರ ಪೈಕಿಯ ಜಾನಿ ಖಯಾಲಿಯ ಸಮಯದಲ್ಲಿ `ಅಯ್ಯೋ ಸಣ್ ಹೆಗ್ಡೇರೆ.. ಅದೆಂತಾ ಹಂಗೆ ಮುಚ್ಕಂತೀರಿ.. ನಾ ನೋಡ್ದೇ ಇರೋದೆ..' ಎಂದು ಸರಕ್ಕನೆ ಹೇಳಿ ಗಲಿಬಿಲಿಯನ್ನೂ ಹುಟ್ಟು ಹಾಕುತ್ತಾಳೆ..
ಹರೆಯದಲ್ಲಿ ಹೀಗಿದ್ದಿರಬಹುದಾ ಜಾನಿ..?

ಹತ್ತಿರ ಹತ್ತಿರ ಆರು ಅಡಿಯಷ್ಟು ಎತ್ತರದ ಜಾನಿ ನಾಜೂಕಿನ ಹೆಂಗಸಲ್ಲ. ಯಾವುದೇ ಕೆಲಸ ಮಾಡಿದರೂ ಒರಟುತನವೆನ್ನುವುದು ಎದ್ದು ಕಾಣುತ್ತದೆ. ಪಾತ್ರೆ ತೊಳೆದರೆ ಕನಿಷ್ಟ ನಾಲ್ಕು ಕಡೆಯಾದರೂ ಅದು ನಪ್ಪತ್ತಬೇಕು. ಬಟ್ಟೆ ಒಗೆದರೆ ಹರಿಯದಿದ್ದರೆ ಪುಣ್ಯ ಎನ್ನುವಷ್ಟು ಒರಟುತನ. ಈ ಕಾರಣದಿಂದಲೇ ಅನೇಕ ಮನೆಗಳಲ್ಲಿ ಜಾನಿಯನ್ನು ಮನೆಗೆಲಸಕ್ಕೆ ಕರೆಯುವುದನ್ನು ಬಿಟ್ಟಿದ್ದಾರೆ ಎಂದರೂ ತಪ್ಪಿಲ್ಲ. ತೋಟದ ಕೆಲಸವನ್ನು ಜಾನಿ ನಿಜವಾಗಿಯೂ ಚನ್ನಾಗಿ ಮಾಡುತ್ತಾಳೆ.. ಗಂಡಾಳಿಗೆ ಸರಿಸಮನಾಗಿ ದುಡಿಯುತ್ತಾಳೆ ಎನ್ನಬಹುದು. ಗಂಡಾಳು ತರುವಂತಹ ಹುಲ್ಲು ಹೊರೆ, ಕಟ್ಟಿಗೆ ಹೊರೆ, ಸೊಪ್ಪಿನ ಹೊರೆಯನ್ನು ಹೊತ್ತು ತಂದಾಗ ನಾನೇ ಅನೇಕ ಸಾರಿ `ಜಾನಿ.. ನೀ ಗಂಡ್ಸಾಗಬೇಕಿತ್ತೆ..' ಎಂದು ಛೇಡಿಸಿದ್ದಿದೆ.. ಅದಕ್ಕವಳು ಸಿಟ್ಟಿನಿಂದ `ಸಣ್ಣ ಹೆಗುಡ್ರೆ.. ನಿಮ್ ಗಂಡುಸ್ರದ್ದೆಲ್ಲ ಕಂಡೀನಿ ಸುಮ್ಕಿರಿ.. ನನ್ ಹತ್ರ ಹೇಳೂಕ್ ಬರ್ಬೇಡಿ.. ಎಲ್ಲಾರ್ದೂ ಒಂದೇ ನಮೂನಿ..' ಎಂದು ಬಾಂಬ್ ಒಗೆದ ಮೇಲೆ ನಾನು ಮರುಮಾತಿಲ್ಲದೇ ಮಂಗಮಾಯವಾಗಬೇಕು.. ಅಂತಹ ಮಾತುಗಳು ಬರುತ್ತಿದ್ದವು.
`ಅಮ್ಮಾ..ನಮ್ ದೊಡ್ಡ ಹೆಗುಡ್ರಿಗೆ  ಲುಂಗಿ ಗಟ್ಟಿ ಕಟ್ಗಳಾಕೆ ಹೇಳಿ.. ಮೊನ್ನೆ ಗದ್ದೆ ಹಾಳಿ ಮ್ಯಾಲೆ ದೊಡ್ಡ ಗಾಳಿ ಬೀಸಿ ಲುಂಗಿ ಬಿಚ್ಚೋಗಿ ದೇವರ ದರ್ಶನ ಆಗೋತು..' ಎಂದು ಲೈಟಾಗಿ ವಾರ್ನಿಂಗು ಮಾಡುವ ಕಲೆಯೂ ಜಾನಿಗೆ ಗೊತ್ತಿದೆ.. ಅಗತ್ಯಬಿದ್ದ ಸಂದರ್ಭದಲ್ಲಿ ಸಮಯವನ್ನು ನೋಡಿ ರೈಲಾಗ್ ಹೊಡೆದು ಮರ್ಯಾದಿಯನ್ನು ಕಳೆಯುವ ಸಕಲಗುಣ ಸಂಪನ್ನೆ ಈ ಜಾನಿ.
ಜಾನಿಯ ಜನ್ಮಪುರಾಣ ಹೇಳಲೇ ಬೇಕು. ಆಕೆ ಹುಟ್ಟಿದ್ದು ಬೆಳೆದಿದ್ದು ಇತ್ಯಾದಿ ಇತಿಹಾಸಗಳೆಲ್ಲ ನಮ್ಮ ಪಕ್ಕದ ಊರಲ್ಲೇ. ಆಕೆಯ ತಾಯಿಯೂ ಜಾನಿಯಷ್ಟೇ ಪೋಲಿಮಾತಿನ ಸರದಾರಿಣಿಯಾಗಿದ್ದಳಂತೆ.. ತಾಯಿಯದೇ ಹುಟ್ಟುಗುಣ ಸುಡದೇ ಈಕೆಯ ಪಾಲಿಗೆ ಧಾರೆ ಧಾರೆಯಾಗಿ, ಓತಪ್ರೋತವಾಗಿ ಬಂದಿದೆ. ಬಾಲ್ಯದಲ್ಲಿ ಗಂಡುಬೀರಿಯಾಗಿದ್ದ ಈಕೆ ಹರೆಯದಲ್ಲೂ ಹಾಗೆಯೇ ಇದ್ದಳಂತೆ.. `ನಾ ನಿಮ್ ವಯಸ್ನಾಗೆ ಹೆಂಗಿದ್ದೆ ಗೊತ್ತಾ..? ಸುತ್ತಮನೆ ಮಾಬ್ಲು ಹಿಂದ್ ಬಿದ್ದು ಕಾಟ ಕೊಡ್ತಿದ್ದ.. ಆ ಮಾಬ್ಲೇಸ್ರ ಅಂತೂ ಮೂರ್ ಸಾರಿ ನನ್ ತಾವ ಮದ್ವೆ ಆಯ್ತೀಯೇನೆ..' ಎಂದು ಕೇಳಿದ್ದ.. ಕೊನೆಗೆ ಆಕೆಯನ್ನು ಮದುವೆಯಾಗಿದ್ದು ಅವಳದೇ ಊರಿನ ದ್ಯಾವ. ಈ ದ್ಯಾವನ ಪುರಾಣ ಬರೆದರೆ ಇನ್ನೊಂದು ದೊಡ್ಡ ಕಥೆಯಾಗುತ್ತದೆ ಬಿಡಿ.. ಅದನ್ನು ಅಲ್ಪಸ್ವಲ್ಪ ಹೇಳಿ ಮುಂದೊಮ್ಮೆ ತಿಳಿಸುತ್ತೇನೆಂಬ ಆಶ್ವಾಸನೆ ಕೊಟ್ಟು ಮುಂದಕ್ಕೆ ಹೋಗ್ತೇನೆ..
ದ್ಯಾವ ಏಕ್ ದಂ ಆರೂವರೆ ಅಡಿಯ ಆಳು. ಅಜಾನುಬಾಹು ಎನ್ನುವ ಪದ ಇವನನ್ನು ನೋಡಿಯೇ ಹುಟ್ಟಿದ್ದೇನೋ ಅನ್ನುವಂತಹ ವ್ಯಕ್ತಿ. ಎತ್ತರಕ್ಕೆ ತಕ್ಕ ದಪ್ಪ ಆತನ ಚಹರೆಯ ವಿಶೇಷ ಅಂಶ. ಕಪ್ಪು ಬಣ್ಣದ ನಗುಮೊಗದ ಸರದಾರ. ಓಸಿಯ ಚಟವೊಂದಿಲ್ಲದಿದ್ದರೆ ಆತ ಬಹಳ ಒಳ್ಳೆಯವನೆಂಬ ಸರ್ಟಿಫಿಕೇಟ್ ಕೊಡಬಹುದು.. ಪ್ರಾರಂಭದಲ್ಲಿ ಕೃಷಿಕನಾಗಿದ್ದ ದ್ಯಾವ ಕೊನೆ ಕೊನೆಗೆ ಕೊನೆಗೌಡನಾಗಿ ಬದಲಾಗಿದ್ದನ್ನು ಹಲವರು ವಿಸ್ಮಯದಿಂದ ನೋಡುತ್ತಾರೆ. ಕೊನೆಗೌಡನಾದ ಮೇಲೆ ದ್ಯಾವನದ್ದು ಪ್ಯಾಮಿಲಿ ಪ್ಯಾಕೇಜು ಎಂಬ ಜೋಕು ನಮ್ಮ ಸುತ್ತಮುತ್ತಲ ಊರುಗಳಲ್ಲಿ ಪ್ರಚಲಿತಕ್ಕೆ ಬಂದಿದೆ. ಕೊನೆಗೌಡನಾಗಿ ಚಾಲ್ತಿಗೆ ಬಂದ ದ್ಯಾವ ಸುಲಭದಲ್ಲಿ ಕೈಗೆ ಸಿಗುವ ಅಡಿಕೆ ಕೊನೆ ಕೊಯ್ಯುತ್ತಾನೆ. ಸ್ವಲ್ಪ ಕಸ್ಟಪಡಬೇಕು ಎಂದಾದರೆ ಆ ಕೊನೆಗೆ ದೋಟಿಗಳ ಹಾಕಿ ಎಳೆದು ತೆರಿಯಡಿಕೆ ಮಾಡಿ ಬಿಡುತ್ತಾನೆ ಎನ್ನುವುದು ಆತನ ಮೇಲಿನ ಗಂಭೀರ ಆರೋಪ. ಆರೋಪ ಮಾಡಿ ಕೆಲವು ವರ್ಷಗಳಾಗಿದೆ. ಇನ್ನೂ ಸ್ಪಷ್ಟನೆ ಸಿಕ್ಕಿಲ್ಲವಾದ್ದರಿಂದ ಹೌದೆಂದು ಒಪ್ಪಿಕೊಂಡಿದ್ದಾನೆ ಎಂಬ ಮಾತುಗಳೂ ಚಾಲ್ತಿಯಲ್ಲಿದೆ.  ಆತ ಕೊನೆಗೌಡನಾಗಿ ಹೋಗುವ ಮನೆಗೆ ಆತನ ಜೊತೆಗೆ ಜಾನಿ ಹೋಗಲೇಬೇಕೆಂಬ ಷರತ್ತು ಇದೆ. ಆತ ಕೊನೆಗೌಡಿಕೆ ಮಾಡಿದರೆ ಆಕೆ ತೆರಿಯಡಿಕೆ ಹೆಕ್ಕಲೇಬೇಕು. ಇದರಿಂದ ಆತನಿಗೆ ಡಬ್ಬಲ್ ಪ್ರಾಫಿಟ್ಟು. ತೆರಿಯಡಿಕೆ ಹೆಕ್ಕುವಿಕೆಯಲ್ಲಿ ಲಾಭವಾಗಲಿ ಎಂಬ ಕಾರಣಕ್ಕೆ ಆತ ಹಾಗೆಮಾಡುತ್ತಾನೆ. ಆತನಿಗೆ ಈ ಐಡಿಯಾ ಕೊಟ್ಟಿದ್ದು ಜಾನಿಯೇ ಎಂಬ ಆಪಾದನೆ ಜಾನಿಯ ಕಿವಿಗೆ ಬಿದ್ದ ದಿನ ಬಹಳ ರಂಪಗಳಾಗಿವೆ.
ಇಂತಹ ದ್ಯಾವ ಜಾನಿಯ ತಂದೆಯ ಒತ್ತಾಯಕ್ಕೆ ಕಟ್ಟುಬಿದ್ದು ಆಕೆಯನ್ನು ಮದುವೆಯಾದನಂತೆ. ಜಾನಿಗೆ ಹುಡುಗರ ಕಾಟ ಹೆಚ್ಚಾದಂತೆಲ್ಲ ಚಿಂತಾಕ್ರಾಂತನಾದ ಆಕೆಯ ಅಪ್ಪ ಸಾಕಷ್ಟು ಕಡೆಗಳಲ್ಲಿ ಜಾನಿಗೆ ಗಂಡು ಹುಡುಕಿದ್ದ. ಆದರೆ ಜಾನಿಯ ಮನಸ್ಸಿಗೆ ಹೋಗಿರಲಿಲ್ಲ. ಕೊನೆಗೆ ಬೇಸತ್ತು ಊರಿನಲ್ಲಿ ಆಗ ತಾನೇ ಪ್ರಾಯಕ್ಕೆ ಬಂದಿದ್ದ, ಜಾನಿಗಿಂತ ನಾಕು ವರ್ಷ ದೊಡ್ಡವನಾದ ದ್ಯಾವನ ಅಪ್ಪನ ಬಳಿ ಮದುವೆ ಪ್ರಸ್ತಾಪ ಇಟ್ಟಿದ್ದ. ಎಲ್ಲ ಪೋಲಿ ಸುದ್ದಿಗಳನ್ನೂ ದೊಡ್ಡದಾಗಿ ಒದರುವ ಜಾನಿ ಈ ವಿಷಯದಲ್ಲಿ ಮಾತ್ರ ನಾಚಿ ನೀರಾಗುತ್ತಾಳೆ..
`ಜಾನಿ.. ನೀ ಮದ್ವೆ ಆಗಿದ್ ಸುದ್ದಿ ಹೇಳೆ..' ಅಂದ್ರೆ
`ಈ ಶಣ್ ಹೆಗುಡ್ರಿಗೆ ಬ್ಯಾರೆ ಕೆಲ್ಸಿಲ್ಲಾ.. ಅದನ್ನ ತಗುಂಡ್ ಎಂತಾ ಮಾಡ್ತೀರಿ ಹೇಳಿ..?' ಎಂದು ಹೇಳುವಷ್ಟರಲ್ಲಿ ಕಪ್ಪನೆಯ ಆಕೆಯ ಮುಖ ಕೆಂಪಾದರೂ `ಈ ನಮ್ಮನೇವ್ರ್ ಇದ್ರಲ್ರಾ.. ಅವರು ನನ್ ಮದ್ವೇನೆ ಆಗೂದಿಲ್ಲಾ ಹೇಳಿ ಕುಂತೀರು,.. ನಮ್ ಅಪ್ಪುಗೆ ಸಾಕ್ ಬೇಕಾಗೋತ್ರಾ.. ನಮ್ಮನೇವ್ರ ಅಪ್ಪಂತೂ 100 ರುಪಾಯ್ ಮಡಗಿದ ಮೇಲೆ ಮದ್ವೆ ಅಂದ್ರು.. ಕೊನಿಗೆ ಕೋಡ್ಸರ ಹೆಗುಡ್ರ ಮನಿಂದ ಸಾಲ ತಂದ್ ಕೊಟ್ಟಾರ್ರಾ.. ಆಮೇಲೆ ಮದ್ವೆ ಆತು ನೋಡಿ..' ಎಂದಿದ್ದಳು..
ಈ ಕುರಿತು ದ್ಯಾವನನ್ನೂ ಕೇಳಿದ್ದೆ..ಆತ ಮೊದಮೊದಲು ನಾಚಿಕೆ ಪಟ್ಟಿದ್ದ.. ಆಮೇಲೆ ಮದುವೆಯ ಪ್ರವರ ಬಿಚ್ಚಿಟ್ಟಿದ್ದ.. `ಸುಳ್ಲೇಳ್ತಾಳ್ರಾ... ನೂರ್ ರುಪಾಯಿ ಕೇಳೋಕೆ ನಮಗೆಂತಾ ಮಳ್ಳನ್ರ..? ಅದೆಂತದೋ ಹೇಳದೆ.. ನೀವ್ ಕೇಳ್ಕಂಡ್ರಿ.. ಆಗ ನಂಗೆ ಮದ್ವೆ ಆಗೋ ವಯಸ್ಸೇಯಾ.. ಇವ್ಳನ್ನೂ ದಿನಾ ನೋಡ್ತಿದ್ನಾ.. ಆದ್ರೆ ಇಂತವ್ಳನ್ನೇ ಆಗ್ಬೇಕೂ ಅಂದಕಂಡಿದ್ದೆ.. ಆದ್ರೆ ಕೇಳೋದ್ ಹೆಂದೆ..? ಹಿಂಗೆ ಇದ್ದಾಗ ಹಾಕಿದ ಬಾಂಬಿಗೆ ಮೀನು ಬಿದ್ದಾಂಗೆಯಾ ಇವ್ಳ ಅಪ್ಪ ಬಂದು ಕೇಳಿದ್ನಾ.. ಆಮೇಲೆ ನಾ ಬ್ಯಾಡ ಹೇಳಿದ್ನಾ.. ಕೊನೆಗೆ ಮದ್ವೆ ಆದ ಮೇಲೆ ...' ಎಂದು ಹೇಳಿದ್ದ.. ಮುಂದಿನದು ಅನ್ ಇಂಟರೆಸ್ಟಿಂಗ್..
ಇಂಥ ಜಾನಿ ಮದುವೆಯಾಗಿ ಸಾಲು ಸಾಲಾಗಿ ನಾಲ್ಕು ಹೆಣ್ಣು ಮಕ್ಕಳನ್ನು ಹೆತ್ತಿದ್ದಳು.. ಕೊನೆಗೂ ಐದನೆಯವನು ಕುಲಪುತ್ರ ಹುಟ್ಟಿದ ಮೇಲೆಯೇ ಆಕೆಯ ಹಡೆಯುವ ಕಾಯಕ ನಿಂತಿದ್ದು. ಜಾನಿಯ ತಾಯಿಯಿಂದ ಪೋಲಿ ಮಾತು ಧಾರೆಯೆರೆದು ಬಂದಿದೆ ಎಂದೆನಲ್ಲ.. ಹಾಗೆಯೇ ಬಂದಿದ್ದು ಈ ಸೂಲಗಿತ್ತಿತನವೂ.. ತನ್ನ ಇದುವರೆಗಿನ ಜೀವನದಲ್ಲಿ ಏನಿಲ್ಲವೆಂದರೂ 50ಕ್ಕೂ ಹೆಚ್ಚು ಮಕ್ಕಳ ಬಾಳಂತನ ಆರೈದ ಖ್ಯಾತಿ ಜಾನಿಯದ್ದು. ಬಾಳಂತಿಗೆ ಅಗತ್ಯವಿರುವ ಎಲ್ಲ ಕೆಲಸಗಳನ್ನೂ ಮಾಡಿಸಿ, ನವಜಾತ ಮಗುವಿನ ಸ್ನಾನ, ಬಾಳಂತಿ ಸ್ನಾನ, ಮಗುವಿನ ಬಟ್ಟೆ ತೊಳೆಯುವ ಕಾಯಕ, ಬಾಳಂತಿಗೆ ಹಳ್ಳಿ ಔಷಧಿ ನೀಡುವಿಕೆ ಯಿಂದ ಹಿಡಿದು ಮಗುವಿನ ದೃಷ್ಟಿ ತೆಗೆದು, ಹಾನ ಸುಳಿದು ಮಲಗಿಸುವ ವರೆಗೆ ದೈನಂದಿನ ಕಾಯಕ ಸಾಂಗವಾಗಿ ಮುಗಿಯುವವರೆಗೂ ಪೋಲಿ ಮಾತುಗಳಿಗೆ ಬರವಿರಲಿಲ್ಲ.
ಸುತ್ತಮುತ್ತಲ ಊರಿನಲ್ಲಿ ಹೊಸ ಮಗು ಜನನ ವಾದರೆ ಈಕೆಗೆ ಆಹ್ವಾನ ನೀಡಲೇಬೇಕು ಎನ್ನುವ ಫಾರ್ಮಾಲಿಟೀಸ್ ಗಳು, ಪ್ರೋಟೋಕಾಲುಗಳಿಲ್ಲ. ಈಕೆ ಬಿಂಕವಿಲ್ಲದೇ ಬರುತ್ತಾಳೆ ಎಂಬುದು ಈಕೆಯ ದೊಡ್ಡಗುಣಗಳಲ್ಲೊಂದು. ನೀವ್ ಎಂತಾ ಬೇಕಂತ ಮಾಡ್ತೀರನ್ರಾ..? ಮಗು ಹುಟ್ಯದೆ.. ಎಲ್ಲೋ ಮರ್ತೋಕ್ತದೆ.. ಇರ್ಲಿ ಬಿಡಿ. ನಾ ಎಂತಾ ಅಂದ್ಕಳ್ಲಿಲ್ಲ.. ಎಂದು ಹೇಳಿ ಮಾತಿಗೆ ನಿಂತು ನಯವಾಗಿ ಬೆಣ್ಣೆ ಹಚ್ಚಿ ಡೀಲು ಕುದುರಿಸುವ ಜಾನಿ ಕೊನೆಗೆ ಹಣವನ್ನು ಮಾತ್ರ ಜಬರದಸ್ತಿನಿಂದಲೇ ಇಸಗೊಂಡು ಹೋಗುತ್ತಾಳೆ..
ದ್ಯಾವ ಜಾನಿಗೆ ಸಿಕ್ಕಾಪಟ್ಟೆ ಹೆದರುತ್ತಾನೆಂಬ ಗಾಳಿಮಾತುಗಳಿವೆ.. ಅದಕ್ಕೆ ತಕ್ಕಂತೆ ನಮ್ಮೆದುರು ಇಬ್ಬರೂ ಎದುರಾಬದುರಾ ಆಗಿಬಿಟ್ಟರೆ ಪರಸ್ಪರ ಮಾತೇ ಆಡುವುದಿಲ್ಲ. ಕೆಲವು ಸಮಯ ಜಾನಿ ವ್ಯಂಗ್ಯವಾಗಿ ಗಂಡನನ್ನು ಚುಚ್ಚುವುದೂ ಇದೆ. ಹುಲಿಯಂತಿದ್ದು, ಹಸುವಿನಂತಾಗಿರುವ ದ್ಯಾವ ಜಾನಿಯ ಮಾತುಗಳಿಗೆಲ್ಲ ಮೌನವಾಗಿ ಇದ್ದು ಬುದ್ದಿವಂತಿಕೆ ಪ್ರದರ್ಶನ ಮಾಡುತ್ತಾನೆ. ಇಂತಹ ಜಾನಿ ನಮ್ಮೂರಿನ ಹಲವು ಹೆಂಗಳೆಯರಿಗೆ ಗಂಡನನ್ನು ಬುಟ್ಟಿಯಲ್ಲಿ ಇಟ್ಟುಕೊಳ್ಳುವುದು ಹೇಗೆ ಎನ್ನುವ ಗುಟ್ಟನ್ನು ಹೇಳಿಕೊಟ್ಟು ಪಾಪ ಕಟ್ಟಿಕೊಂಡಿದ್ದಾಳೆ. ಜಾನಿಯ ಬಂಢಾರದಲ್ಲಿ ಅನೇಕ ಪಿಲಾನುಗಳಿದ್ದು ಆಗಾಗ ಒಂದೊಂದನ್ನೇ ಹೇಳಿಕೊಡುವ ಮೂಲಕ ನಮ್ಮೂರಿನಲ್ಲಿ ಕ್ರಾಂತಿಯಾಗಲು ಕಾರಣೀಭೂತವಾಗಿದ್ದಾಳೆ ಎಂದರೆ ತಪ್ಪಾಗಲಿಕ್ಕಿಲ್ಲ ಬಿಡಿ.
ಇಂತಹ ಜಾನಿಯನ್ನು ಕಂಡರೆ ಈಗಷ್ಟೇ ನಡೆಯಲು, ಮಾತನಾಡಲು ಕಲಿತ ಮಕ್ಕಳು ಚಿಟ್ಟನೆ ಚೀರಿ, ಬೆದರಿ ರಚ್ಚೆ ಹಿಡಿದು ಅಳುತ್ತಾರೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಸದೆಗತ್ತಿ ಹಿಡಿದು ಬರುವ ಜಾನಿಯನ್ನು ತೋರಿಸಿ ಮಕ್ಕಳನ್ನು ಸುಮ್ಮನಿರಿಸುವ ಯತ್ನ ಮಾಡುತ್ತಾರೆ ಮನೆಯ ದೊಡ್ಡವರು. ಅದಕ್ಕೆ ತಕ್ಕಂತೆ ಜಾನಿಯೂ ನಡೆದುಕೊಳ್ಳುತ್ತಾಳೆ. ಜಾನಿಯನ್ನು ತೋರಿಸಿ ಮಕ್ಕಳಿಗೆ ಊಟ ಮಾಡಿಸುವ, ಹಾಲು ಕುಡಿಸುವ ಕೆಲಸ ಮಾಡಿಸುವ ಭರದಲ್ಲಿ ಜಾನಿಯೆಂದರೆ ಯಾವುದೋ ಭೂತದಂತೆ ಚಿತ್ರಿಸಲಾಗುತ್ತದೆ.. ಅಪ್ಪಿತಪ್ಪಿ ಆ ಸಮಯದಲ್ಲಿ ಜಾನಿ ಎದುರಿಗೆ ಬಂದಳೋ ರಗಳೆ ಮಾಡುವ ಮಕ್ಕಳ ಬಳಿ ಹೋಗಿ ಕತ್ತಿಯನ್ನು ಎತ್ತಿ `ಏ ತಮಾ... ನೀ ಹಿಂಗೆ ರಗಳೆ ಮಾಡ್ತಾ ಇರು.. ನಿನ್ ಮಿಣ್ಣಿ ಕೊಯ್ದು ಸಾರಿಗೆ ಹಾಕ್ತೀನೊ ನೋಡು.. ' ಎಂದು ಅಭಿನಯ ಪೂರ್ವಕವಾಗಿ ತೋರಿಸುವ ಭರದಲ್ಲಿ ಮಕ್ಕಳು ಚಡ್ಡಿಯಲ್ಲೇ ಉಚ್ಚೆ ಹೊಯ್ದುಕೊಳ್ಳುತ್ತವೆ..
ಹೌದು.. ನಾನೂ ಹೀಗೆ ಮಾಡಿದ್ದೆನಂತೆ.. ಈ ವಿಷಯವನ್ನು ಜಗಜ್ಜಾಹೀರು ಮಾಡಿದ್ದು ಜಾನಿಯೇ.. ಇದಕ್ಕಾಗಿ ಆಕೆಗೆ ಕೆಜಿಗಟ್ಟಲೆ ಹಿಡಿಶಾಪ ಹಾಕಿದ್ದೇನೆ. ನಾನು ಹಿಡಿಶಾಪ ಹಾಕಿದ ಮೇಲೆ ಈ ವಿಷಯ ಜಗಜ್ಜಾಹೀರಾತಾಗುವುದು ತಪ್ಪಿದೆ.. ಇರ್ಲಿ ಬಿಡಿ..
ಹಾಗೆ ಉಚ್ಚೆಹೊಯ್ದುಕೊಳ್ಳುವ ಮಕ್ಕಳು ನಮ್ಮೂರ ಫಾಸಲೆಯಲ್ಲಿ ಜಾನಿ ಕಾಲಿಟ್ಟ ತಕ್ಷಣ ತಮ್ಮ ಕಿಲಾಡಿ, ರಗಳೆಗಳನ್ನೆಲ್ಲ ಬಂದ್ ಮಾಡಿ ಕೋಣೆಯನ್ನೋ, ಮೂಲೆಯನ್ನೋ ಸೇರುತ್ತವೆ. ಊಹೂಂ.. ಜಪ್ಪಯ್ಯ ಎಂದರೂ ಹೊರಬರುವುದಿಲ್ಲ..
ಇಷ್ಟರ ನಡುವೆ.. ಜಾನಿ `ನಾನೇ ಈ ಮಕ್ಕಳ ಕುಂಡೆ ತೊಳ್ಸೇನಿ.. ಶಣ್ಣಕಿದ್ದಾಗ ನಾನೇ ಎಲ್ಲಾ ಕೆಲ್ಸ ಮಾಡ್ಸೇನಿ.. ಈಗ ನನ್ ಹತ್ರಾ ಬರಾದಿಲ್ಲ ಅಂತಾವೆ.. ಎಂತಕ್ಕೇನ..' ಎಂದು ಅಲವತ್ತುಕೊಳ್ಳುತ್ತಾಳೆ.. ಜಾನಿಯ ವಿಶ್ವರೂಪಕ್ಕೆ ಬೆದರುವ ಮಕ್ಕಳು ಈ ಕಾರಣದಿಂದಲೇ ಅವಳಿಂದ ದೂರ ಉಳಿಯುತ್ತಾರೆ ಎನ್ನುವುದನ್ನು ಯಾರೂ ಅವಳೆದುರು ಹೇಳಲು ಹೋಗುವುದಿಲ್ಲ.
ಇತ್ತೀಚೆಗೆ ಈ ಜಾನಿ ಬಹಳ ಥಂಡಾಗಿದ್ದಾಳೆ.. ಮೊದಲಿನ ಹುರುಪಿಲ್ಲ. ಮೊದಲಿದ್ದಷ್ಟು ಪೋಲಿ ಮಾತುಗಳಿಲ್ಲ. ತನ್ನಷ್ಟಕ್ಕೆ ತಾನು ಬರುತ್ತಾಳೆ.. ಹೋಗುತ್ತಾಳೆ.. ಹೇಳಿದ ಕೆಲಸವನ್ನು ಮಾಡಿ ಹೋಗುತ್ತಾಳೆ.. ಬಡಕಾಗಿದ್ದ ಜಾನಿ ಮತ್ತಷ್ಟು ಬಡಕಾಗಿದ್ದಾಳೆ.. ಕವಳದ ಸೈಡೆ ಎಫೆಕ್ಟಿನಿಂದಾಗಿ ಕಡುಗೆಂಪಾಗಿದ್ದ ಹಲ್ಲುಗಳಲ್ಲಿ ಹಲವು ಬಿದ್ದು ಹೋಗಿ ಕನ್ನಂಬಾಡಿಯ ಗೇಟನ್ನು ಓಪನ್ ಮಾಡಿದಂತೆ ಕಾಣುತ್ತದೆ. ಇದನ್ನು ನೋಡಿದಾಗಲೆಲ್ಲ.. ಯಾಕೋ ಕಾಲ ಕಟ್ಹೋಯ್ತು ಎಂದು ನಾವು ಅಂದುಕೊಂಡಿದ್ದಿದೆ..ಆದರೆ ಯಾಕ್ಹೀಗೆ ಅನ್ನುವ ಕಾರಣ ಮೊನ್ನೆಯವರೆಗೂ ಗೊತ್ತಾಗಿರಲಿಲ್ಲ.. ಇದಕ್ಕೆ ಪ್ರಮುಖ ಎರಡು ಕಾರಣಗಳನ್ನು ಜಾನಿಯ ಅಕ್ಕಪಕ್ಕದ ಮನೆಯವರು ಕೊಡುತ್ತಾರೆ.
ಜಾನಿಗೆ ಯಾರೋ ಆಗದವರು ಮದ್ದು ಹಾಕಿದ್ದಾರೆ. ಅದರಿಂದಾಗಿ ಆಕೆ ಮೊದಲಿನ ಹುರುಪು ಕಳೆದುಕೊಂಡಿದ್ದಾಳೆ.. ತಲೆ ಹಾಳು ಮಾಡಿಕೊಂಡಿದ್ದಾಳೆ ಎನ್ನುವುದು ಒಂದು ಗಾಳಿಸುದ್ದಿಯ ಮಾಹಿತಿ. ಇನ್ನೊಂದೇನೆಂದರೆ ಆಕೆಯ ಹೆಣ್ಣುಮಕ್ಕಳ ಮದುವೆ. ಸಾಲು ಸಾಲು ನಾಲ್ಕು ಹೆಣ್ಣು ಮಕ್ಕಳು.. ಎಷ್ಟೇ ತನ್ನ ಸುಪರ್ದಿಯಲ್ಲಿದ್ದರೂ ಓಸಿಯಾಡುವ ದ್ಯಾವ ಮೊನ್ನೆ ಏನೋ ಭಯಂಕರ ಲುಕ್ಸಾನು ಮಾಡಿಕೊಂಡಿದ್ದಾನೆಂಬ ಮಾತುಗಳೂ ಕೇಳಿಬಂದಿವೆ. ಹೆಣ್ಣು ಮಕ್ಕಳ ಮದುವೆ ಮಾಡಿರುವ ಜಾನಿ ಪದೆ ಪದೆ ವರದಕ್ಷಿಣೆ ನೀಡಲಾಗುತ್ತಿಲ್ಲ ಎಂಬ ಸಮಸ್ಯೆಯಲ್ಲಿ ನಲುಗುತ್ತಿದ್ದಾಳಂತೆ.. ಅಳಿಯನ ಮನೆಯಲ್ಲಿ ಹೆಣ್ಣು ಮಕ್ಕಳಿಗೆ ತೊಂದರೆ ಕೊಡುತ್ತಿರುವ ಸುದ್ದಿಯೂ ಇದೆ. ಇದರ ನಡುವೆ ಗಂಡನಿಗಾದ ಲುಕ್ಸಾನು ಆಕೆಯ ಧೈರ್ಯವನ್ನು ಕಿತ್ತುಹಾಕಿದೆ.. ಪರಿಣಾಮವಾಗಿ ಜಾನಿ ಥಂಡಾಗಿದ್ದಾಳೆ.. ಮಕ್ಕಳೂ ಅಷ್ಟೇ ಜಾನಿಗೆ ಹೆದರುವುದನ್ನು ಬಿಟ್ಟುಬಿಟ್ಟಿವೆ..
ಇಷ್ಟರ ನಡುವೆ ಬ್ರೇಕಿಂಗ್ ನ್ಯೂಸ್ ಒಂದು ಬಂದಿದೆ.. ಜಾನಿ ತನ್ನ ಆಜನ್ಮ ಕಸುಬಾಗಿದ್ದ ಸೂಲಗಿತ್ತಿ ಕಾರ್ಯ ಬಿಡಲು ನಿರ್ಧರಿಸಿದ್ದಾಳಂತೆ.. ಆಕೆಗೆ ಏನಾಯಿತೋ ಏನೋ.. ಎಲ್ಲ ಕೆಲಸಗಳಿಗೆ ಶರಣೆಂದು ಸನ್ಯಾಸಿ ಗಿನ್ಯಾಸಿ ಆಗಲು ಹೊರಟಳೋ ಎನ್ನುವ ಭಾವ ಕಾಡುತ್ತಿದೆ.. ಆಕೆಯಿಂದ ಹಲವು ಪಿಲಾನುಗಳನ್ನು ಕಲಿತಿದ್ದ ನಮ್ಮೂರ ಹೆಂಗಳೆಯರೂ ಇದರಿಂದ ಚಿಂತಾಕ್ರಾಂತರಾಗಿದ್ದಾರೆ. ಸಂಸಾರದ ಹಲವು ಮಂತ್ರಗಳನ್ನು ಹೇಳಿಕೊಟ್ಟಿದ್ದ ಗುರು ಜಾನಿಗೆ ಬಂದ ತೊಂದರೆ ತಮಗೆ ಬಂದಿದೆಯೇನೋ ಎಂಬಂತೆ ಕಸಿವಿಸಿಗೊಳಗಾಗಿ `ಪಾಪ.. ಹಂಗಾಗಕಾಗಿತ್ತಿಲ್ಲೆ..' ಎಂದು ಹೇಳುತ್ತಿರುವುದೂ ಆಗಾಗ ತಮ್ಮ ನಾಲ್ಕು ಗೋಡೆಯ ನಡುವಿನಿಂದ ಹೊರಬಂದು ಕೇಳಿದೆ.
ಜೊತೆಯಲ್ಲಿ ನಮ್ಮೂರಿನ ನಿಯೋಗವೊಂದು ತೆರಳಿ ಜಾನಿಗೆ ಸಾಕಷ್ಟು ಸಲಹೆಗಳನ್ನು  ನೀಡಿ, ಸಮಸ್ಯೆಗಳಿಗೆ ಪರಿಹಾರದ ಉಪಾಯಗಳನ್ನು ನೀಡಿ, ಮೊದಲಿನ ರಿತಿಯಾಗು, ಸೂಲಗಿತ್ತಿ ಕಾರ್ಯ ಬಿಡಬೇಡ ಎಂದು ಹೇಳಿ ಬಂದಿದೆಯಂತೆ..
ಅದಕ್ಕೆ ಪ್ರತಿಯಾಗಿ `ನೋಡ್ವಾ.. ಕಾಲ ಹೆಂಗಿರ್ತದೇನೋ.. ನಂಗೂ ವಯಸ್ಸಾಯ್ತಲ್ರ.. ನೋಡ್ವಾ,.. ನಾ ಎಷ್ಟೋ ನೋಡೀನಲ್ರ.. ಇನ್ನೂ ನನ್ನ ಜೀವನದಾಗೆ ಎಷ್ಟು ನೋಡಬೇಕು ಅಂತೈತೋ..ನೀವ್ ಹೇಳೀರಿ ಅಂತ ನಾ ಮಾಡ್ತೇನಿ.. ಈಗ ನಿಮ್ಮನಿಯವ್ರ ಜೊತೆ ಬೆಚ್ಚಗೆ ಮಲ್ಕಳಿ...' ಎಂದು ಹೇಳಿ ಕಳಿಸಿದ್ದಾಳಂತೆ..
ಅದಕ್ಕೆ ತಕ್ಕಂತೆ ನಮ್ಮೂರ ಲೋಕಲ್ ಪತ್ರಿಕೆಯವರು ಫಾರ್ಮಿಗೆ ಮರಳಿದ ಜಾನಿ ಎಂಬ ತಲೆಬರಹದಲ್ಲಿ ಸುದ್ದಿ ಬರೆಯಲು ರೆಡಿಯಾಗಿದ್ದಾರಂತೆ.. ಅಂತೂ ಜಾನಿ ಮತ್ತೆ ಫಾರ್ಮಿಗೆ ಬಂದಿದ್ದಾಳೆ... ಇನ್ನು ನಮ್ಮೂರಿನಲ್ಲಿ ಕಿವಿ ಬಿಡುವ ಹಾಗಿಲ್ಲ ಬಿಡಿ..


Sunday, October 20, 2013

ಗೆಳತಿ, ಮತ್ತೆ ನಿನ್ನ ನೆನಪಾಗುತ್ತಿದೆ


ಗೆಳತಿ,
ಅತ್ತು ಅತ್ತು ಬತ್ತಿದ
ಕಣ್ಣೆವೆಯಲ್ಲಿ ಮತ್ತೆ
ನೀರು ಜಿನುಗುತ್ತಿದೆ ||

ಮನದ ಬಣ್ಣಗೆಟ್ಟ ಕ್ಯಾನವಾಸಿನಲ್ಲಿ
ಸರ್ವಬಣ್ಣದ
ಕಾಮನಬಿಲ್ಲು ಮೂಡುತ್ತಿದೆ ||

ಮರೆತೇ ಹೋದಂತಿದ್ದ
ಹಳೆಯದೊಂದು ಹಾಡು
ಮತ್ತೆ ಗುನುಗುತ್ತಿದೆ ||

ನಿದ್ದೆಗೆಡುವ ನಿರಭ್ರ ರಾತ್ರಿಗಳು
ಸರಿದು, ತರತರದ
ಕನಸು ಬೀಳುತ್ತಿದೆ ||

ಬೋಳು, ಬರಲೆದ್ದ
ಒಂಟಿ ಮರ ಚಿಗುರಿ
ಹಸಿಹಸಿರಾಗುತ್ತಿದೆ ||

ನೀನೆದ್ದು, ಒದ್ದು ಹೋದ
ಎದೆಯ ಗಾಯ
ನಿಧಾನವಾಗಿ ಮಾಯುತ್ತಿದೆ ||

ನೀ ಬಿಟ್ಟುಹೋದ
ಕಾಲುಗೆಜ್ಜೆ ನನ್ನ ಬಳಿ
ಮತ್ತೆ ಕಿಣಿಕಿಣಿಸುತ್ತಿದೆ ||

ಸುರಿವ ಮಂಜಿನ ಧಾರೆ
ನಡು ನಡುವಲ್ಲೊಂದು
ಸೂರ್ಯಕಿರಣ ಹಾಯುತ್ತಿದೆ ||

ಗೆಳತಿ
ಮನದ ಪಟಲದೊಳಗೆ
ಮತ್ತೆ ನಿನ್ನ ಬಿಂಬ
ಮೂಡುತ್ತಿದೆ||

ಹಾಗೇ
ಮತ್ತೆ ನಿನ್ನ ನೆನಪಾಗುತ್ತಿದೆ ||

ಈ ಕವಿತೆಯನ್ನು ಆಕಾಶವಾಣಿ ಕಾರವಾರದಲ್ಲಿ 23-01-2008ರಂದು ವಾಚಿಸಲಾಗಿದೆ
2008ರ ಫೆಬ್ರವರಿ 16ರಂದು ಬೆಳಲೆಯಲ್ಲಿ ನಡೆದ ಎಂ.ಎಂ ಕಲಾ ಮತ್ತು ವಿಜ್ಞಾನ ಮತ್ತು ಕಲಾ ಕಾಲೇಜಿನ ಎನ್ನೆಸ್ಸೆಸ್ ಕ್ಯಾಂಪಿನಲ್ಲಿ ವಾಚಿಸಲಾಗಿದೆ.
ಜುಲೈ 12, 2009ರ ಕರ್ಮವೀರ ವಾರಪತ್ರಿಕೆಯ ಯುವ ಲಹರಿಯಲ್ಲಿ ಪ್ರಕಟವಾಗಿದೆ

Friday, October 18, 2013

ಮತ್ತಷ್ಟು ಹಾಯ್ಕುಗಳು


ದಿನದಿನವೂ ಸೂರ್ಯ
ಹುಟ್ಟಿಬರುತ್ತಲೇ ಇದ್ದಾನೆ
ಚಿಕ್ಕದಾಗುತ್ತಿಲ್ಲ||

ಗುಲಾಬಿಯೋ ನೋಡಲಿಕ್ಕೆ
ಚೆಂದವುಂಟು, ಒಡಲಲ್ಲಿ
ಮುಳ್ಳಿದೆ ||

ಯಾವಾಗಲೂ ಬಾನ
ಚಂದಿರ ರಾತ್ರಿಯಲ್ಲೇ
ಬರುತ್ತಾನೆ||

ಅವನು ಜೋರಾಗಿ
ನಗುತ್ತಿದ್ದಾನೆ, ಆದರೆ
ಹುಚ್ಚನಲ್ಲ||

ಅವನು ಸ್ವಲ್ಪಹೊತ್ತು
ನಕ್ಕಕೂಡಲೇ
ಸುಮ್ಮನಾಗಿಬಿಟ್ಟ ||

ಆತ ಕುಳಿತಿದ್ದಾನೆ.
ಧ್ಯಾನ ಮಾಡುತ್ತಿಲ್ಲ
ಯೋಚಿಸುತ್ತಿದ್ದಾನೆ||

(ಇವು ಹಾಯ್ಕಾಗಬಹುದಾ ಅಥವಾ ಹೈಕಾಗಬಹುದಾ ಅನ್ನುವ ಸ್ಪಷ್ಟನೆಯಿಲ್ಲ.. ಒಂದು ಪ್ರಯತ್ನ ಮಾಡಿದ್ದೇನೆ..
ಹಾಗೆ ಸುಮ್ಮನೆ ಓದಿ ನೋಡಿ...)

(ಬರೆದಿದ್ದು 26-10-2006ರಂದು ದಂಟಕಲ್ಲಿನಲ್ಲಿ)
 

Thursday, October 17, 2013

ಬಲಿಪಶು (ಕಥೆ)

    ಶಿರಸಿಯ ದೊಡ್ಡ ಆಸ್ಪತ್ರೆ. ಅಲ್ಲಿಯ ಮಹಡಿಯ ಕೊಠಡಿಯೊಂದರಲ್ಲಿ ನಾನು ಮಲಗಿದ್ದೆ. ಮೈತುಂಬಾ ಬ್ಯಾಂಡೇಜು ಸುತ್ತಲಾಗಿತ್ತು. ಕಾಲಿನ ಮೂಳೆಯೊಂದು ಮುರಿದಿದ್ದರಿಂದ ಕಾಲಿಗೆ ತುಸು ದೊಡ್ಡದಾದ ಬ್ಯಾಂಡೇಜನ್ನು ಹಾಕಲಾಗಿತ್ತು. ತಲೆ, ಮುಖಗಳಿಗೆಲ್ಲಾ ಪೆಟ್ಟು ಬಿದ್ದಿದ್ದ ಪರಿಣಾಮ ಅಲ್ಲೆಲ್ಲಾ ಬ್ಯಾಂಡೇಜುಗಳನ್ನು ಹಾಕಿದ್ದರು. ನಾನು ಅಲ್ಲಿ ನನ್ನ ದೇಹವನ್ನು ಕೊಂಚವೂ ಅಲ್ಲಾಡಿಸಲು ಅಸಾಧ್ಯ ಎನ್ನುವಂತೆ ಮಲಗಿದ್ದೆ. ಅದೆಷ್ಟು ದಿನವಾಗಿತ್ತೋ ಗೊತ್ತಿ.. ಕನಿಷ್ಟವೆಂದರೂ ಹದಿನೈದು ದಿನಗಳು ಸಂದಿರಬಹುದು. ಆದರೆ ಕಳೆದ ಒಂದೆರಡು ಗಂಟೆಗಳ ಹಿಂದೆ ಅರೆಬರೆ ಪ್ರಜ್ಞೆ ಬಂದಿತ್ತು. ಸಂಪೂರ್ಣ ಪ್ರಜ್ಞೆ ಬರಲು ಕೆಲ ಕಾಲ ಹಿಡಿಯಿತು.
    ಒಂದೆರಡು ದಿನ ಕಳೆದವು. ಎಲ್ಲರ ಆರೈಕೆಯಿಂದಾಗಿ ನಾನು ನಿಧಾನವಾಗಿ ಎದ್ದು ಕುಳಿತುಕೊಳ್ಳುವಂತಾಗಿದ್ದೆ. ಆಗ ನನಗೆ ನಿಧಾನವಾಗಿ ನಡೆದಿದ್ದೆಲ್ಲವೂ ಜ್ಞಾಪಕಕ್ಕೆ ಬರತೊಡಗಿತು. ನಾನು ಕ್ರಮೇಣ ನೆನಪಿನ ಆಳಕ್ಕೆ ಇಳಿದೆ. ಮೊದಮೊದಲು ಅಸ್ಪಷ್ಟವಾಗಿ ನಂತರ ನಿಚ್ಚಳವಾಗಿ ಘಟನೆಗಳೆಲ್ಲ ನೆನಪಾಯಿತು. ಹಾಗೆ ಸುಮ್ಮನೇ ವಿಷಾದವೊಂದು ಸುಳಿದುಹೋಯಿತು. ಕಣ್ಣಿನ ಮುಂದೆ ನಡೆದ ಘಟನೆ ಪರದೆಯಂತೆ ಸರಿಯುತ್ತಿತ್ತು. ಪಕ್ಕನೆ ಎಚ್ಚರಾದಂತಾಯಿತು. ಎದ್ದು ಕುಳಿತು ನೋಡಿದರೆ ಡಾಕ್ಟರಾದಿಯಾಗಿ ಒಂದೆರಡು ಜನ ನನ್ನ ಮುಂದೆ ಕುಳಿತು ಕುತೂಹಲದಿಂದ ದಿಟ್ಟಿಸುತ್ತಿದ್ದಾರೆ. ವೈದ್ಯರು ಮುಂದೆ ಕುಳಿತು ಪರಿಕ್ಷಾರ್ಥವಾಗಿ ನನ್ನನ್ನು ನೋಡುತ್ತಿದ್ದರೆ ಅವರ ಹಿಂಬದಿಯಲ್ಲಿ ಭಯಭೀತರಾಗಿ ಅಮ್ಮ ನಿಂತು ಮುಂದೇನು ಎಂಬಂತೆ ಗಮನಿಸುತ್ತಿದ್ದಳು.
    ಡಾಕ್ಟರು ನನ್ನ ಬಳಿ `ಹಲೋ.. ಹೇಗಿದ್ದೀರಿ..?' ಎಂದರು. ನಾನು ಸನ್ನೆಯಲ್ಲಿಯೇ ಮುಗುಳುನಕ್ಕು ಚನ್ನಾಗಿದ್ದೇನೆ ಎಂದೆ. ನಂತರ ಅವರು `ಈಗ ತಲೆನೋವು ಹೇಗಿದೆ' ಎಂದರು. ನಾನು ನಿಧಾನವಾಗಿ `ಪರವಾಗಿಲ್ಲ ಡಾಕ್ಟ್ರೆ..' ಎಂದೆ
    `ಡೋಂಟ್ ವರಿ.. ಇನ್ನೊಂದೆರಡು ವಾರದಲ್ಲಿ ನೀನು ಹುಷಾರಾಗಬಲ್ಲೆ.. ನಿನ್ನ ವಿಲ್ ಪವರ್ ಚನ್ನಾಗಿದೆ. ಅದೇ ನಿನ್ನನ್ನು ಉಳಿಸಿದೆ..' ಎಂದರು.. ನಾನು `ಥ್ಯಾಂಕ್ಸ್..' ಎಂದೆ..
    ಅದಾಗಿ ಒಂದೆರಡು ದಿನ ಡಾಕ್ಟರ್ ಬಂದು ಚೆಕಪ್ ಮಾಡಿ ಹೋಗುತ್ತಿದ್ದರು.. ಅಷ್ಟರಲ್ಲಿ ನಾನು ಎಷ್ಟೋ ಸುಧಾರಿಸಿದ್ದೆ. ಕೊನೆಗೊಂದು ದಿನ ತಮ್ಮ ಕೆಲಸ ಮುಗಿಸಿ ಬಂದ ಡಾಕ್ಟರ್ ನನ್ನ ಜೊತೆ ಹಾಗೆ ಸುಮ್ಮನೆ ಮಾತಿಗಿಳಿದರು.. ನಾನೂ ಹೊತ್ತು ಹೋಗದ ಕಾರಣ ಮಾತನಾಡತೊಡಗಿದೆ.. ಅವರು ತಮ್ಮ ಕುಟುಂಬ ಸೇರಿದಂತೆ ಹಲವು ವಿಷಯಗಳನ್ನು ನನ್ನೆದುರು ಬಿಚ್ಚಿಟ್ಟರು.. ಅದ್ಯಾಕೆ ಹಾಗೆ ಮಾಡಿದರೋ ನನಗೆ ಅರ್ಥವಾಗಲಿಲ್ಲ. ನನ್ನೆಡೆಗೆ ಅವರಿಗೆ ಕುತೂಹಲ ಇರಬಹುದು.. ನಾನ್ಯಾಕೆ ಗಾಯಗೊಂಡು ಆಸ್ಪತ್ರೆಯನ್ನು ಸೇರುವಂತಾಯ್ತು..? ನಾನು ಅರೆಪ್ರಜ್ಞಾವಸ್ತೆಗೆ ಮರಳಲು ಏನು ಕಾರಣ ಇತ್ಯಾದಿ ಗೊಂದಲಗಳು ಕಾಡಿರಬಹುದು.. ನನ್ನ ಮನೆಯವರು ಈ ಕುರಿತು ಹೇಳಿದರೂ ನನ್ನ ಬಳಿ ಸ್ಪಷ್ಟವಾಗಿ ತಿಳಿದುಕೊಳ್ಳುವ ಇಚ್ಛೆಯೂ ಇರಬಹುದು.. ಅಂತೂ ಮಾತಿಗೆ ನಿಂತರು.. ವಿಷಯಕ್ಕೂ ಬಂದರು..
    ನಾನು ನನ್ನೊಳಗಿದ್ದ ಆ ಘಟನೆಯನ್ನು ಅವರೆದುರು ನಿಧಾನವಾಗಿ ಹೇಳಲು ಆರಂಭಿಸಿದೆ..

******

    ಅದು ಶಿರಸಿಯ ದೊಡ್ಡ ಕಾಲೇಜು.. ಅಲ್ಲಿ ನಾನು ಕೊನೆಯ ವರ್ಷದ ಬಿ.ಎಸ್ಸಿ ವಿದ್ಯಾರ್ಥಿ. ಈ ಸಾರಿಯ ಪರೀಕ್ಷೆಯೊಂದು ಚನ್ನಾಗಿ ಆಗಿಬಿಟ್ಟಿತೆಂದರೆ ರ್ಯಾಂಕ್ ಕಟ್ಟಿಟ್ಟ ಬುತ್ತಿ ಎನ್ನುವುದು ನನ್ನ ಆಸೆಯಾಗಿತ್ತು. ಅದಕ್ಕೆ ತಕ್ಕಂತೆ ನನ್ನ ತಾಲೀಮೂ ಇತ್ತು.
    ಕಾಲೇಜಿನ ಆರಂಭದ ದಿನಗಳಿಂದಲೂ ಕಾಲೇಜಿನಲ್ಲಿ ನಾನು ಇಬ್ಬರು ಪರಮಾಪ್ತ ಮಿತ್ರರನ್ನು ಹೊಂದಿದ್ದೆ. ಒಬ್ಬನ ಹೆಸರು ವಿಶಾಲ್ ಇನ್ನೊಬ್ಬಾತ ಕುಮಾರ. ಇಬ್ಬರೂ ಶಿರಸಿಯವರೇ ಆಗಿದ್ದರು. ನಾನು ಮಾತ್ರ ಹಳ್ಳಿಯಿಂದ ಬಂದವನಾಗಿದ್ದೆ. ಈ ಇಬ್ಬರೂ ಪರಮ ಮುಂಗೋಪಿಗಳು. ಎದುರು ಸಿಟ್ಟಿನವರು.. ನಾನು ಶಾಂತಿದೂತ. ನನಗೂ ಇವರಿಗೂ ಅದ್ಯಾವ ಮಾಯೆಯಲ್ಲಿ ಸ್ನೇಹವಾಯಿತೋ ಗಿತ್ತಿಲ್ಲ. ನಮ್ಮ ಗೆಳೆತನ ಕಾಲೇಜಿನ ಕಿಟಕಿ ಬಾಗಿಲುಗಳಿಗೆ, ಬೇಂಚು ಡೆಸ್ಕುಗಳಿಗೆ ಗೊತ್ತಿತ್ತು.. ಅಷ್ಟೇ ಏಕೆ ವಾರಕ್ಕೊಮ್ಮೆ ಕದ್ದುಮುಚ್ಚಿ ನೋಡುವ ಸಿನಿಮಾ ಥಿಯೇಟರಿನ ಕೊನೆಯ ಸಾಲಿನ ಖುರ್ಚಿಗಳಿಗೂ ಗೊತ್ತಿತ್ತು.. ರಿಸರ್ವ್ ಕೂಡ ಆಗಿತ್ತು. ಈ ಇಬ್ಬರೂ ಸಾಕಷ್ಟು ದುಡ್ಡಿದ್ದವರಾಗಿದ್ದರೂ ಅಷ್ಟೇನೂ ಸ್ಥಿತಿವಂತನಾಗಿಲ್ಲದ ನಾನು ಅವರ ಪಾಲಿಗೆ ದೋಸ್ತನಾಗಿದ್ದೆ. ಹಣದ ವಿಷಯದಲ್ಲಿ ಅವರು ನನ್ನ ಪಾಲಿಗೆ ಗಾಡ್ ಫಾದರ್ ಆಗಿದ್ದರೆ ಪಠ್ಯದ ಚಟುವಟಿಕೆಗಳಿಗೆ ನಾನು ಅವರ ಪಾಲಿನ ವೀಕೀಪೀಡಿಯಾ ಆಗಿದ್ದೆ. ನಮ್ಮ ಕಾಲೇಜು ಜೀವನದ ಮೊದಲೆರಡು ವರ್ಷ ಇದೇ ಅಲೆಯಲ್ಲಿ ಏರಿಳಿಯುತ್ತಾ ಸಾಗಿತ್ತು.. ಬಹು ಸಂತಸದ ದಿನಗಳಾಗಿ ಸಾಗಿದ್ದವು.
    ಹೀಗಿರಲೊಂದು ದಿನ ಕಾಲೇಜಿನ ಕೊನೆಯ ವರ್ಷದ ಸಂಸತ್ ಚುನಾವಣೆ ಹತ್ತಿರಕ್ಕೆ ಬಂದಿತು. ನಮ್ಮ ಮೂವರಲ್ಲಿ ಸ್ವಲ್ಪ ಹುಡುಗಾಟದ ಸ್ವಭಾವದ ನಾನು ನನ್ನಿಬ್ಬರು ದೋಸ್ತರನ್ನೂ ಚುನಾವಣೆಗೆ ನಿಲ್ಲಿಸಿದೆ. ಬೇರೆ ಬೇರೆ ಕಾಂಬಿನೇಶನ್ನಿನ ಈ ಇಬ್ಬರೂ ದೋಸ್ತರು ನನ್ನ ಒತ್ತಾಯದ ಸುರಿಮಳೆಗೆ ಬಲಿಯಾಗಿ ಚುನಾವಣೆಗೆ ನಿಂತರು. ಅಷ್ಟೇ ಅಲ್ಲದೇ ನಾನೂ ಚುನಾವಣೆಗೆ ನಿಲ್ಲುವಂತೆ ಮಾಡಿದರು.
    ಅದೊಂದು ದುನ ಚುನಾವಣೆಯೂ ನಡೆಯಿತು. ಆಶ್ಚರ್ಯವೆಂಬಂತೆ ಆ ಚುನಾವಣೆಯಲ್ಲಿ ನಾವು ಮೂರೂ ಜನ ಆರಿಸಿ ಬಂದಿದ್ದೆವು. ಬಹುಶಃ ಇದೇ ನನ್ನ ಹಣೆಬರಹ ಹಾಳಾಗಲು ಕಾರಣವೇನೋ ಅನ್ನಿಸಿತು. ನಮ್ಮ ಬದುಕು ಅಡ್ಡದಾರಿಯಲ್ಲಿ ಹೊರಳಲೂ ಇದೂ ಕಾರಣವಾಯಿತು. ತಮಾಷೆಗೆ ಚುನಾವಣೆಗೆ ಸ್ಪರ್ಧಿಸಿದ್ದ ನಾವು ಸೀರಿಯಸ್ಸಾಗಿ ಗೆದ್ದ ಪರಿಣಾಮ ನಮ್ಮ ಬದುಕು ಸೀರಿಯಸ್ಸಾಯಿತು. ಈ ಸಾರಿ ಮಾತ್ರ ನಾನು ಎಷ್ಟು ಹೇಳಿದರೂ ಕಿವಿ ಮೇಲೆ ಹಾಕಿಕೊಳ್ಳದ ವಿಶಾಲ ಹಾಗೂ ಕುಮಾರ ವಿದ್ಯಾರ್ಥಿ ಯೂನಿಯನ್ನಿನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದರು.
    ಇದರ ಲಾಭವನ್ನು ಪಡೆದುಕೊಂಡ ಕೆಲವು ವ್ಯಕ್ತಿಗಳು, ನಮಗಾಗದವರು ವಿಶಾಲ ಹಾಗೂ ಕುಮಾರನ ನಡುವೆ ದ್ವೇಷದ ಬೀಜವನ್ನು ಬಿತ್ತಿದರು. ಈ ಇಬ್ಬರೂ ಇದರ ಪರಿಣಾಮವಾಗಿ ಪ್ರಭಲ ದ್ವೇಷಿಗಳಾಗಿ ಬದಲಾದರು. ಅಷ್ಟೇ ಅಲ್ಲದೇ ಸುತ್ತಮುತ್ತ ಜೊತೆಗಾರರನ್ನು ಕಟ್ಟಿಕೊಂಡು ಗ್ಯಾಂಗ್ ಮನ್ನುಗಳಾಗಿ ಬದಲಾದರು. ಒಬ್ಬರನ್ನು ಕಂಡರೆ ಮತ್ತೊಬ್ಬರು ಸಾಯಿಸುವಷ್ಟು ದ್ವೇಷಪಡಲಾರಂಭಿಸಿದರು. ನಾನು ಮಾತ್ರ ಇಬ್ಬರ ನಡುವೆ ಸಂಧಾನದ ಹಲವು ವಿಫಲ ಯತ್ನಗಳನ್ನು ನಡೆಸಿದೆ. ಸುಸ್ತಾಗಿ ಏಕಾಂಗಿಯಾದೆ. ಹಾಗೆಮದು ಈ ಇಬ್ಬರೂ ನನ್ನ ಬಳಿ ಚನ್ನಾಗಿಯೇ ಇದ್ದರು. ಆದರೆ ತಮ್ಮಲ್ಲಿ ಮಾತ್ರ ಸಿಟ್ಟಿನ ಬೆಟ್ಟವನ್ನೇ ಹೊಂದಿದ್ದರು.
    ಕೊನೆಯದಾಗಿ ಕಾರ್ಯದರ್ಶಿಯ ಆಯ್ಕೆಗಾಗಿ ಚುನಾವಣೆ ಬಂದಿತು. ಆ ದಿನ ನಾನು ಹಲವು ಕಾರಣಗಳಿಂದಾಗಿ ಕಾಲೇಜಿಗೆ ಹೋಗಲು ಆಗಲೇ ಇಲ್ಲ. ಮರುದಿನ ಹೋದೆ. ಆಗ ತಿಳಿಯಿತು ವಿಶಾಲ್ ಹಾಗೂ ಕುಮಾರ ಇಬ್ಬರಿಗೂ ಸಮನಾದ ಮತಗಳು ಬಿದ್ದಿದ್ದವು ಎಂಬುದು. ಅಂತಿಮವಾಗಿ ಗೆಲುವಿನ ನಿರ್ಧಾರ ಮಾಡುವುದು ನನ್ನ ಮತ ಎನ್ನುವುದನ್ನು ತಿಳಿದು ಗೊಂದಲದಲ್ಲಿ ಮುಳುಗಿದೆ. ಹೇಗಾದರೂ ಮಾಡಿ ತೊಂದರೆ ತಪ್ಪಿದರೆ ಸಾಕಪ್ಪಾ ಅಂದುಕೊಂಡಿದ್ದವನಿಗೆ ಏನು ಮಾಡಿದರೂ ಸಮಸ್ಯೆ ಬಿಡಲೊಲ್ಲದು.
    ತಮಗೇ ಮತ ಹಾಕಬೇಕೆಂದು ವಿಶಾಲ ಹಾಗೂ ಕುಮಾರ ಇಬ್ಬರೂ ಸಾಕಷ್ಟು ಆಮಿಷಗಳ ಜೊತೆಗೆ ಚಿಕ್ಕ ಪ್ರಮಾಣದ ಬೆದರಿಕೆಯನ್ನೂ ಒಡ್ಡಿದ್ದರು. ಏನು ಮಾಡೋದು ಎನ್ನುವ ಸಂದಿಗ್ಧತೆ ನನ್ನದಾಗಿತ್ತು. ಆದರೂ ಹಲವು ಕ್ಷಣಗಳ ಕಾಲ ಆಲೋಚನೆಯನ್ನು ಮಾಡಿ ಕೊನೆಗೆ ವಿಶಾಲನಿಗೆ ಮತವನ್ನು ಹಾಕಿದೆ. ನಾನು ಹಾಗೇಕೆ ಮಾಡಿದ್ದೆಂದು ಈಗಲೂ ಅರ್ಥವಾಗಿಲ್ಲ. ನನ್ನ ಮತದಿಂದಾಗಿ ವಿಶಾಲ ಕಾಲೇಜಿನ ಕಾರ್ಯದರ್ಶಿಯಾಗಿ ಆಯ್ಕೆಯಾದ. ಈಗಲಾದರೂ ಅವರೀರ್ವರ ನಡುವಣ ವೈರತ್ವ, ವೈಶಮ್ಯ ಕಡಿಮೆಯಾಗಬಹುದು ಎಂದು ಆಲೋಚಿಸಿದೆ. ಆದರೆ ಹಾಗಾಗಲೇ ಇಲ್ಲ.
    ಅವರು ಹಾಗೂ ಅವರ ಗುಂಪು ಸಂದರ್ಭ ಸಿಕ್ಕಾಗಲೆಲ್ಲಾ ಒಬ್ಬರನ್ನೊಬ್ಬರು ಹಳಿಯಬೇಕು, ತುಳಿಯಬೇಕು ಎಂದು ಕಾಯುತ್ತಲೇ ಇದ್ದವು. ಅವರಿಗಿಂತ ತಾವು ಕಡಿಮೆಯಿಲ್ಲ, ನಾವೇ ಹೆಚ್ಚಿನವರು ಎನ್ನಿಸಿಕೊಳ್ಳಬೇಕೆಂಬ ದೃಷ್ಟಿಯಿಂದ ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದರು. ಹೀಗಿದ್ದಾಗಲೇ ಕಾಲೇಜಿನ ಕ್ರೀಡಾ ವಿಭಾಗಗಳಲ್ಲಿ, ಹಲವು ಕ್ರೀಡೆಗಳಲ್ಲಿ ಕುಮಾರ ಹಾಗೂ ಆತನ ಜೊತೆಗಾರರೇ ಗೆಲುವು ಜಯಗಳಿಸಿದ್ದರು. ಇದು ವಿಶಾಲನಿಗೆ ಸಿಟ್ಟನ್ನು ತರಿಸಿತ್ತು. ಅವನು ಹೇಗಾದರೂ ಮಾಡಿ ಒಂದು ವಿಷಯದಲ್ಲಾದರೂ ಕುಮಾರನನ್ನು ಸೋಲಿಸಬೇಕು ಎಂದು ಕಾಯುತ್ತಿದ್ದ.
    ಕೊನೆಗೆ ಬಿ.ಎಸ್ಸಿ ಪರೀಕ್ಷೆಗಳು ಹತ್ತಿರಬಂದವು. ಇಲ್ಲೂ ಪುನಃ ಮೇಲಾಟ, ತುಳಿದಾಟ, ಹಗೆ, ವೈಶಮ್ಯಗಳು ಮೆರೆದವು. ಅವರಿಬ್ಬರೂ ತಮ್ಮ ತಮ್ಮ ಗ್ಯಾಂಗಿನಿಂದ ಒಬ್ಬ ವ್ಯಕ್ತಿಯಾದರೂ ರ್ಯಾಂಕ್ ಬರಬೇಕು ಎಂದು ಬಯಸಿದರು.
    ತಾವೇ ಓದಿ ರ್ಯಾಂಕ್ ಗಳಿಸಲು ಪ್ರಯತ್ನ ಮಾಡುವುದನ್ನು ಬಿಟ್ಟು ಅವರಿಬ್ಬರೂ ತಮ್ಮ ಗ್ಯಾಂಗುಗಳ ಸಮೇತ ನನ್ನ ಬಳಿ ಬಂದರು. ನಾನು ಆಗ ಕಾಲೇಜಿನ ರ್ಯಾಂಕ್ ವಿದ್ಯಾರ್ಥಿ. ರ್ಯಾಂಕ್ ಪಡೆಯುವುದರಲ್ಲಿ ಎಲ್ಲರಿಗಿಂತ ಮುಂದಿದ್ದ ಕಾರಣ ನನ್ನನ್ನು ಹುಡುಕಿಕೊಂಡು ಬಂದಿದ್ದರು. ನನಗೆ ಮತ್ತೆ ಉಭಯ ಸಂಕಟ ಹಾಗೂ ಪೇಚಾಟ.. ಏನು ಮಾಡುವುದಕ್ಕೂ ಬಗೆ ಹರಿಯಲಿಲ್ಲ. ಕೊನೆಗೆ ಮತ್ತೆ ಯೋಚನಾ ಲಹರಿಯನ್ನು ಕೈಗೊಂಡು ಈ ಸಾರಿ ಕುಮಾರನ ಜೊತೆಗೆ ಇರುವುದೆಂದು ನಿರ್ಧಾರ ಮಾಡಿದೆ. ಚುನಾವಣೆಯಲ್ಲಿ ವಿಶಾಲನ ಪರವಾಗಿ ಮತಹಾಕಿದ್ದರಿಂದ ಈ ಸಾರಿ ಕುಮಾರನ ಜೊತೆಗೆ ಇರಬೇಕು ಇದರಿಂದಾಗಿ ಇಬ್ಬರಿಗೂ ನ್ಯಾಯ ದೊರಕಿಸಿದಂತಾಗುತ್ತದೆ ಎನ್ನುವುದು ನನ್ನ ಭಾವನೆಯಾಗಿತ್ತು. ನನ್ನ ನಿರ್ಧಾರದಿಂದ ವಿಶಾಲ ಸಿಟ್ಟಾಗಿಬಿಟ್ಟ. ಸಿಟ್ಟಿನಿಂದ ಆತ `ಏಯ್.. ನಾನ್ ನಿನ್ನ ಸುಮ್ನೆ ಬಿಡೋದಿಲ್ವೋ.. ಒಂದು ಕೈ ನೋಡ್ಕೋತೀನಿ..' ಎಂದು ಬೆದರಿಸಿ ಅಲ್ಲಿಂದ ಹೋದ.. ನಾನು ಈ ಘಟನೆಯನ್ನು ತಮಾಷೆಯೆಂದುಕೊಂಡು ಸುಮ್ಮನೆ ಬಿಟ್ಟುಬಿಟ್ಟೆ.
    ಹಲವು ದಿನಗಳು ಕಳೆದವು... ಕೊನೆಗೆ ಪರೀಕ್ಷೆಗೆ ಒಂದು ವಾರವಷ್ಟೇ ಉಳಿದಿತ್ತು. ನಾನು ಆ ದಿನ ಕಾಲೇಜಿಗೆ ಬಂದವನು ನನ್ನ ಹಾಲ್ ಟಿಕೆಟ್ ಪಡೆದು ಕಾಲೇಜಿನಿಂದ ಬಸ್ ನಿಲ್ದಾಣದ ಕಡೆಗೆ ನಡೆದುಕೊಮಡು ಬರುತ್ತಿದ್ದೆ. ಇನ್ನೇನು ದೇವಿಕೆರೆಯನ್ನು ದಾಟಿ ತಿರುವಿನಲ್ಲಿ ಮುನ್ನಡೆಯಬೇಕೆನ್ನಿಸುವಷ್ಟರಲ್ಲಿ ಎದುರಿನಿಂದ ಒಂದು ಟೆಂಪೋ ಬಂತು. ನಾಲ್ಕಾರು ಜನ ಹುಡುಗರು ಸರಸರನೆ ಇಳಿದರು. ಅವರೆಲ್ಲರ ಕೈಯಲ್ಲಿ ತರಹೇವಾರಿ ಆಯುಧಗಳಿದ್ದವು. ದೊಣ್ಣೆ, ರಾಡು, ಚೈನು ಇನ್ನೂ ಏನೇನೋ.. ನಾನು ವಿಸ್ಮಯದಿಂದ ನೋಡುತ್ತಿದ್ದಂತೆಯೇ ಆ ಗುಂಪು ನನ್ನ ಮೇಲೆ ಮುಗಿಬಿದ್ದು ಬಿಟ್ಟಿತು. ದಾಳಿ ಮಾಡಿತು. ಒಂದೆರಡು ಹೊಡೆತ ಬಿದ್ದಿದ್ದಷ್ಟೇ ನೆನಪು. ನಂತರ ಎಚ್ಚರಾದಾಗ ನಾನು ಇಲ್ಲಿ ಬಿದ್ದುಕೊಂಡಿದ್ದೆ.

*****

    ಇದು ನನ್ನ ಕತೆ ಡಾಕ್ಟ್ರೆ.. ಈಗ ಹೇಳಿ ನಾನು ಇದಕ್ಕೇನು ಮಾಡಬೇಕು..? ಈಗ ಪರೀಕ್ಷೆಗಳೆಲ್ಲ ಮುಗಿದು ಹೋಗಿದೆ. ನಾನು ರ್ಯಾಂಕ್ ಪಡೆಯಬೇಕೆಂಬುದು ಪರಮಗುರಿಯಾಗಿತ್ತು.. ಆದರೆ ನನ್ನ ಕನಸೆಲ್ಲಾ ನುಚ್ಚು ನೂರಾಗಿ ಹೋಯಿತು.. ಎಂದು ಬಿಕ್ಕಳಿಸಿದೆ.
    ಬೇರೆ ಇನ್ನೇನನ್ನೋ ಆಲೋಚಿಸುತ್ತಿದ್ದ ಡಾಕ್ಟರ್ `ಅಲ್ಲಪ್ಪಾ ನಿನ್ನನ್ನು ಹೊಡೆದವರನ್ನೆಲ್ಲ ಪೊಲೀಸರು ಅರೆಸ್ಟು ಮಾಡ್ಕೊಂಡು ಹೋಗಿದ್ದಾರಲ್ಲಾ..' ಎಂದರು.
    `ಇನ್ನು ಅವರನ್ನು ಅರೆಸ್ಟ್ ಮಾಡಿ ಏನು ಪ್ರಯೋಜನ ಹೇಳಿ.. ನಾನು ನನ್ನ ದೋಸ್ತರನ್ನು ಚುನಾವಣೆಗೆ ನಿಲ್ಲಿಸಲೇ ಬಾರದಿತ್ತು. ಅದೇ ಇಷ್ಟಕ್ಕೆಲ್ಲ ಕಾರಣವಾಯಿತು.. ನನ್ನ ವಿಲಕ್ಷಣ ನಿರ್ಧಾರಗಳು ಮತ್ತೂ ವಿಕೋಪವನ್ನು ಉಂಟುಮಾಡಿತು. ಕೊನೆಗೆ ನನ್ನ ಆತ್ಮೀಯ ಗೆಳೆಯ ವಿಶಾಲನೇ ನನ್ನ ಮೇಲೆ ಹಲ್ಲೆ ಮಾಡಿಸಿದ.. ನಾನು ಅವರನ್ನು ಚುನಾವಣೆಗೆ ನಿಲ್ಲಿಸಿದ ತಪ್ಪಿಗೆ ಹಾಸಿಗೆ ಸೇರುವಂತಾಯಿತು..' ಎಂದು ಚೀರಿದೆ.
    ಡಾಕ್ಟರ್ ಅಸ್ಪಷ್ಟವಾಗಿ `ಛೇ.. ನಿನಗೆ ಹೀಗಾಗಬಾರದಿತ್ತು..' ಎಂದರು
    ಆಗ ನಾನು `ನಾನು ಮಾಡಿದ್ದಕ್ಕೆ ನನಗೆ ಹೀಗಾಯ್ತಾ ಎನ್ನುವ ಗೊಂದಲ ಇದೆ.. ಒಟ್ಟಿನಲ್ಲಿ ನಾನು ಇಲ್ಲಿ ಬಲಿಪಶು ಆಗಿಬಿಟ್ಟೆ. ವಿಧಿ ನನ್ನನ್ನು ಬಲಿಪಶು ಮಾಡಿತು. ನನ್ನ ಅದೃಷ್ಟ ನೆಟ್ಟಗಿರಲಿಲ್ಲ.. ಯಾವಾಗಲೋ ವಿಧಿಯನ್ನು ನಾನು ಹಳಿದಿದ್ದೆನೇನೋ.. ಅದಕ್ಕೆ ಈ ರೂಪದಲ್ಲಿ ಈಗ ನನ್ನನ್ನು ಅದು ಕಾಡುತ್ತಿದೆ.. ಎಂದು ಅರಚಿದೆ..
    ಇದನ್ನು ಕೇಳಿದ ಡಾಕ್ಟರ್ `ಬಹುಶಃ ಬಡವರು ಪ್ರತಿಭಾವಂತರಾಗಿದ್ದರೆ ಹೀಗೆ ಆಗುತ್ತೇನೋ.. ಅವರ ಪಾಲಿಗೆ ಅದೃಷ್ಟವೆಂಬುದು ಗಗನಕುಸುಮವೇ ಹೌದೇನೋ..' ಎಂದು ಹೇಳಿ ದೋರ್ಘ ನಿಟ್ಟುಸಿರನ್ನು ಬಿಟ್ಟರು..
    ಆ ನಿಟ್ಟುಸಿರು ನನಗೆ ಒಂದು ಕ್ಷಣದಲ್ಲಿ ವಿಧಿಯ ಅಟ್ಹಾಸದಂತೆಯೂ ಮತ್ತೊಮ್ಮೆ ಸಮಾಜದ ಅಸಹಾಯಕತೆಯ ನಿಟ್ಟುಸಿರಿನಂತೆಯೂ ಅನ್ನಿಸಿತು.

Monday, October 14, 2013

ಸಂಜೆ ಬಕುಲ


ಮೂಡಿತೊಂದು ಸಂಜೆ ಬಕುಲ
ಕಾವ್ಯಲೋಕ ಕಲ ಕಲ|
ನಿರ್ಧಾರವು ಅಚಲ ಅಚಲ
ಒಮ್ಮೆಗೆಲ್ಲಾ ತಳಮಳ ||

ಬಯಸಿತದು ಸರ್ವಸಕಲ
ಪರಿಸರಗಳ ನಿರ್ಮಲ |
ಪ್ರೇಮ ಛಾಯೆ, ಸರಳ, ಸುಜಲ
ಮರುಗು ಮನಸು ಮಮ್ಮಲ ||

ಕೊಂಚ ಕಠಿಣ, ಕೊಂಚ ವಿರಲ
ಜೀವ ಹೃದಯ ಶ್ಯಾಮಲ |
ಬಕುಲವಿದುವೆ ರಂಜಲ
ಎಂದೆಂದಿಗು ಕುಶಲ ||

ಅಂತರಂಗ ಶುಭ್ರ ಸಲಿಲ
ಆಗದದುವೆ ಚಂಚಲ |
ಸಂಜೆಬಕುಲ ವಿರಲ ಸರಲ
ಕಾವ್ಯಧಾರೆ ಫಲ ಫಳ ||


(ಕವಿಮಿತ್ರ, ಗೆಳೆಯ ಸಂಜೆಬಕುಲ/ಸಂಜಯ ಭಟ್ಟ ಬೆಣ್ಣೆ ಕುರಿತು ಹಾಗೆ ಸುಮ್ಮನೆ ಬರೆದ ಕವಿತೆ)
(ಬರೆದಿದ್ದು : 10-12-2005ರಂದು, ದಂಟಕಲ್ಲಿನಲ್ಲಿ )

Friday, October 11, 2013

ನನ್ನ ನಿನ್ನ ನಡುವೆ


ನನ್ನ ನಿನ್ನ ನಡುವೆ ಮಾತಿಲ್ಲ ಕಥೆಯಿಲ್ಲ
ಮೌನವೇ ಮಾತಾಗಿದೆ ಅಲ್ಲಿ ||2||

ನನ್ನ ನಿನ್ನ ನಡುವೆ ಮುನಿಸಿಲ್ಲ, ಸಿಟ್ಟಿಲ್ಲ
ಸಂತಸವೇ ಸೇತುವಾಗಿದೆ ಅಲ್ಲಿ ||4||

ನನ್ನ ನಿನ್ನ ನಡುವೆ ಮರೆವಿಲ್ಲ-ಮೆರೆವಿಲ್ಲ
ನೆನಪುಗಳೇ ತುಂಬುಬಿಟ್ಟಿದೆ ಅಲ್ಲಿ ||6||

ನನ್ನ ನಿನ್ನ ನಡುವೆ ಸೋಲಿಲ್ಲ ಸೆಡವಿಲ್ಲ
ಗೆಲುವೇ ಮೆರೆದು ನಿಂತಿದೆ ಅಲ್ಲಿ ||8||

ನನ್ನ ನಿನ್ನ ನಡುವೆ ಧೂಳಿಲ್ಲ-ಗೋಳಿಲ್ಲ
ನಲಿವೇ ಬೆರೆತ್ಹೋಗಿದೆ ಅಲ್ಲಿ ||10||

ನನ್ನ ನಿನ್ನ ನಡುವೆ ಗತ್ತಿಲ್ಲ-ಕುತ್ತಿಲ್ಲ
ಪ್ರೀತಿಯೇ ಆಟವಾಡಿದೆ ಅಲ್ಲಿ ||12||

ನನ್ನ ನಿನ್ನ ನಡುವೆ ಅಳುವಿಲ್ಲ-ಬಿಕ್ಕಿಲ್ಲ
ನಗುವೇ ಹರಿದಿದೆಯೋ ಅಲ್ಲಿ ||14||

ನನ್ನ ನಿನ್ನ ನಡುವೆ ಬತ್ತಿಲ್ಲ-ಬರಡಿಲ್ಲ
 ಹಸಿರೇ ಹೊನಲಿದೆಯೋ ಅಲ್ಲಿ||16|| 

(ಒಂದು ಗಝಲ್ ಬರೆಯಲು ವ್ಯರ್ಥ ಪ್ರಯತ್ನ.. ಇದು ಗಝಲ್ ಆಗಬಹುದಾ..? ಬಲ್ಲವರು ಹೇಳಬೇಕು...)
(20-08-2006ರಂದು ದಂಟಕಲ್ಲಿನಲ್ಲಿ ಈ ಕವಿತೆಯನ್ನು ಬರೆದಿದ್ದೇನೆ..)

Thursday, October 10, 2013

ಬಾವಲಿ ಗುಹೆ

    ಉತ್ತರಕನ್ನಡ ಜಿಲ್ಲೆ ಪ್ರಾಕೃತಿಕವಾಗಿ ಸಂಪದ್ಭರಿತ. ಹೆಜ್ಜೆ ಹೆಜ್ಜೆಗೂ ಜಲಪಾತ, ತೊರೆ, ಝರಿ, ಇಳಿಜಾರು, ಗುಡ್ಡ, ಕಣಿವೆ, ಕಾಡು, ಗುಹೆ ಹೀಗೆ ಒಂದಿಲ್ಲೊಂದು ಬಗೆಯ ಸೃಷ್ಟಿ ಸೌಂದರ್ಯಗಳನ್ನೊಳಗೊಂಡಿದೆ. ಪ್ರಕೃತಿಯ ಮಡಿಲಲ್ಲಿ ಅದೆಷ್ಟೋ ವಿಸ್ಮಯ, ವಿಶಿಷ್ಟ ಸಂಗತಿಗಳು ಅಗೋಚರವಾಗಿದೆ. ಕೆಲವೊಂದು ಗೋಚರಿಸುತ್ತವೆ. ಅಂತಹ ವಿಶಿಷ್ಟ ತಾಣಗಳಲ್ಲಿ ಯಲ್ಲಾಪುರ ತಾಲೂಕಿನ ಬಾವಲಿ ಗುಹೆ ಒಂದಾಗಿದೆ.
    ಯಲ್ಲಾಪುರ ನಗರದಿಂದ 22 ಕಿ.ಮಿ ಕಡಿದಾದ ಮಾರ್ಗದಲ್ಲಿ ಸಾಗಿದರೆ ಬಾವಲಿ ಗುಹೆ ತಲುಪಬಹುದು. ಯಲ್ಲಾಪುರ-ವಜ್ರಳ್ಳಿ ಮಾರ್ಗದಿಂದ 3 ಕಿ.ಮಿ ದಟ್ಟಡವಿಯ ಮಧ್ಯ ಸಂಚಾರಕ್ಕೆ ಯೋಗ್ಯವಾದ ರಸ್ತೆಯಿದೆ. ಆ ಮೂಲಕ ಬೆಣ್ಣೆಜಡ್ಡಿ ಎನ್ನುವ ಊರನ್ನು ತಲುಪಬೇಕು. ಅಲ್ಲಿಂದ ಕಾಲ್ನಡಿಗೆಯಲ್ಲಿ ತೋಟಪಟ್ಟಿ ಮತ್ತು ಗುಡ್ಡದ ಇಳಿಜಾರಿನಲ್ಲಿಯ ಅಂಚಿನಲ್ಲಿ ಬಾವಲಿಗುಹೆಗೆ ತಲುಪಬಹುದಾಗಿದೆ. ಬಾವಲಿ ಗುಹೆಗೆ ತಲುಪುವವರಲ್ಲಿ ಬಾಹುಗಳು ಗಟ್ಟಿಯಾಗಿರಬೇಕು. ಸಾಹಸಕ್ಕೆ ಮತ್ತು ಚಾರಣಕ್ಕೆ ಹೇಳಿ ಮಾಡಿಸಿದ ಸ್ಥಳ.
    ಕಡಿದಾದ ಇಳಿಜಾರಿ, ತಗ್ಗುದಿಣ್ಣೆಗಳ ಸಾಲಿನಲ್ಲಿ ಕೊಂಚ ಯಾಮಾದಿರೂ ಪ್ರಪಾತ. ಅಂತಹ ಸ್ಥಳದಲ್ಲೇ ಸಾಗಬೇಕು. ಬಾವಲಿಗಳು ಲಕ್ಷ ಲಕ್ಷ ಸಂಖ್ಯೆಯಲ್ಲಿ ವಾಸಿಸುತ್ತಿರುವ ಪ್ರದೇಶಕ್ಕೆ ಕಲ್ಲಿನಿಂದಾವೃತವಾದ ಕಡಿದಾದ ಮಾರ್ಗದಲ್ಲಿ ಕಲ್ಲು ಬಂಡೆಗಳನ್ನು ಹತ್ತಿ ಗುಹೆ ತಲುಪಿವಷ್ಟರಲ್ಲಿ ಜೀವ ಹೈರಾಣ ಎಂದೆನಿಸಿದರೂ ಅಲ್ಲಿಯ ಪ್ರಕೃತಿಯ ಸೊಬಗನ್ನು ಸವಿದಾಗ ಶ್ರಮ ಸಾರ್ಥಕವೆನಿಸುತ್ತದೆ. ಗುಹೆ ಪ್ರವೇಶಿಸುವಾಗ ಬೆಳಕಿನ ವ್ಯವಸ್ಥೆ ಸ್ಪಷ್ಟವಾಗಿರಬೇಕು. ಒಬ್ಬರು ನುಸುಳಿ ಒಳ ಪ್ರವೇಶ ಮಾಡಬಹುದಾಗಿದೆ. ಬ್ಯಾಟರಿ ಬೆಳಕನ್ನು ಗುಹೆಯ ಒಳಗಡೆ ಹಾಯಿಸುತ್ತಿದ್ದಂತೆ ಬಾವಲಿಗಳ ಹಾರಾಟ ಶುರುವಾಗುತ್ತದೆ. ಅದೆಷ್ಟೋ ಬಾವಲಿಗಳು ನಮಗೆ ಢೀ ಕೊಟ್ಟು ಹೊರಹಾರುತ್ತವೆ. ಒಳಗಡೆ ಪ್ರವೇಶ ಮಾಡಿದರೆ ಅಲ್ಲೊಂದು ಕೊಳವಿದೆ. ವರ್ಷವಿಡೀ ಈ ಕೊಳದಲ್ಲಿ ನೀರು ತುಂಬಿಕೊಂಡಿರುತ್ತದೆ. ಈ ನೀರು ಬೇಸಿಗೆಯಲ್ಲೂ ಹರಿದು ಕೆಳಗಿರುವ ತೋಟಪಟ್ಟಿಗಳಿಗೆ ತಂಪೆರೆಯುತ್ತದೆ. ಈ ನೀರಿಗೆ ಅಬ್ಬಿ ನೀರು ಎನ್ನಲಾಗುತ್ತದೆ.
  ಬಾವಲಿ ಗುಹೆಯಲ್ಲಿ ಧೈರ್ಯವಿದ್ದರೆ ಎಷ್ಟು ದೂರ ಬೇಕಾದರೂ ಸಾಗಬಹುದು. ಆದರೆ ಬಾವಲಿಗಳ ಹಿಕ್ಕೆ ಮತ್ತು ಮೂತ್ರದ ವಾಸನೆಗಳನ್ನು ತಡೆದುಕೊಳ್ಳುವ ಶಕ್ತಿ ನಿಮ್ಮಲ್ಲಿರಬೇಕು. ಒಳ ಪ್ರವೇಶ ಮಾಡಿದ ಮೇಲೆ 5-6 ಜನ ನಿಲ್ಲುವಷ್ಟು ಸ್ಥಳಾವಕಾಶವಿದೆ. ಗುಹೆ ಎಷ್ಟು ದೂರವಿದೆ ಎನ್ನುವುದು ಈ ವರೆಗೆ ಯಾರಿಗೂ ನಿಖರ ಮಾಹಿತಿಯಿಲ್ಲ. ಮನುಷ್ಯರನ್ನು ಕಂಡ ಬಾವಲಿಗಳು ಹೊರಡಿಸುವ ಶಬ್ದಗಳು ಅಲ್ಪಮಟ್ಟಿನ ಭಯವನ್ನು ಹುಟ್ಟುಹಾಕುತ್ತದೆ. ಆದರೂ ಬಾವಲಿ ಗುಹೆ ಸಾಹಸಿಗರ ಮತ್ತು ಪರಿಸರ ಪ್ರೇಮಿಗಳ ಅಚ್ಚುಮೆಚ್ಚಿನ ತಾಣ.
    ಬಾವಲಿ ಗುಹೆಯೊಳಗಡೆ ಹೋದಂತೆ ಹಲವಾರು ಉಪ ಮಾರ್ಗಗಳೂ ಇವೆ. ಅವು ಎಲ್ಲಿ ಸೇರುತ್ತವೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಅಷ್ಟು ದೂರ ಕ್ರಮಿಸಲೂ ಸಾಧ್ಯವಿಲ್ಲ. ಪಕ್ಕದಲ್ಲಿ ಇನ್ನೊಂದು ಗುಹೆಯಿದೆ. ಈ ಗುಹೆಯನ್ನು ಯಾರೂ ಹೊಕ್ಕಿಲ್ಲ. ಕಾರಣ ಆ ಗುಹೆಯಲ್ಲಿ ಬಾವಲಿಗಳಿಲ್ಲ. ಬಾವಲಿಗಳಿಲ್ಲದ ಸ್ಥಳಗಳಲ್ಲಿ ಹಾವು, ಚೇಳುಗಳಂತಹ ಅಪಾಯಕಾರಿ ಜೀವಿಗಳಿರುತ್ತವೆ ಎಂದು ಸ್ಥಳೀಯರು ಹೇಳುತ್ತಾರೆ. ಬಾವಲಿ ಗುಹೆ ಕುರಿತಂತೆ ಸ್ಥಳೀಯರು ಹೇಳುವಂತೆ ಮಹಾಭಾರತದ ಸಂದರ್ಭದಲ್ಲಿ ಪಾಂಡವರು ವನವಾಸದಲ್ಲಿದ್ದಾಗ ಈ ಗುಹೆಯಲ್ಲಿ ಆಶ್ರಯ ಪಡೆದಿದ್ದರು. ಅದೇ ರೀತಿ ಗುಹೆಯ ಮೇಲಿನ ಗುಡ್ಡದಲ್ಲಿ ವನದೇವತೆಯಿದೆ.
    ಬಾವಲಿಗಳು ರೈತಸ್ನೇಹಿ ಎನ್ನುವುದು ಅನೇಕರಿಗೆ ಗೊತ್ತಿಲ್ಲ. ಬಾವಲಿಗಳ ಹಿಕ್ಕೆ ಕೃಷಿಗೆ ಉತ್ಕೃಷ್ಟ ಸಾವಯವ ಗೊಬ್ಬರ. ಸುತ್ತಮುತ್ತಲ ಐದಾರು ಕಿಲೋಮೀಟರ್ನ ಜನ ತಮಗೆಷ್ಟು ಬೇಕೋ ಅಷ್ಟು ಬಾವಲಿ ಹಿಕ್ಕೆಗಳನ್ನು ಕೊಂಡೊಯ್ದು ಕೃಷಿಗೆ ಬಳಸುತ್ತಾರೆ. ಗುಹೆಯ ಹೊರಭಾಗದಲ್ಲಿ ಅಬ್ಬಿ ನೀರಿರುವುದರಿಂದ ಅಲ್ಲಿಯ ವಾತಾವರಣ ಮನಸ್ಸಿಗೆ ಮುದ ನೀಡುತ್ತದೆ. ಬಾವಲಿ ಗುಹೆಗೆ ತೆರಳಲು ಪಕ್ವ ಕಾಲವೆಂದರೆ ನವೆಂಬರ್ನಿಂದ ಮೇ ವರೆಗಿನ ಅವಧಿಯಲ್ಲಿ ಯಾವಾಗಲೂ ಈ ಪ್ರದೇಶಕ್ಕೆ ತೆರಳಬಹುದಾಗಿದೆ.

    ಬಾವಲಿ ಗುಹೆಗೆ ಹೋಗುವವರು ಕಟ್ಟುನಿಟ್ಟಾಗಿ ಪಾಲಿಸಲೇ ಬೇಕಾದ ಹಲವಾರು ಅಂಶಗಳಿವೆ. ಬಾವಲಿಗಳ ಶಾಂತತೆಗೆ ಭಂಗವನ್ನು ತರಬಾರದು. ಒಂದು ವೇಳೆ ಅವುಗಳು ಸಿಟ್ಟಾದರೆ ಪ್ರವಾಸಿಗರ ಮೇಲೆ ದಾಳಿ ಮಾಡುವ ಸಾಧ್ಯತೆಗಳೂ ಇರುತ್ತವೆ. ನಿಸರ್ಗ ಮಧ್ಯದಲ್ಲಿರುವ ಈ ಸ್ಥಳದಲ್ಲಿ ಪ್ಲಾಸ್ಟಿಕ್ ಮುಂತಾದ ತ್ಯಾಜ್ಯಗಳನ್ನು ಎಸೆಯುವುದು ನಿಷೇಧ. ಹಾಗೊಂದು ವೇಳೆ ಪ್ಲಾಸ್ಟಿಕ್ ಎಸೆದರೆ ಸ್ಥಳೀಯರು ದಂಡ ಹಾಕುತ್ತಾರೆ. ಬಾವಲಿ ಗುಹೆಗೆ ಹೋಗ ಬಯಸುವವರು ತಾರಗಾರಿನ ಗಣೇಶ ಕಿರಿಗಾರಿ ಮೊಬೈಲ್ ಸಂಖ್ಯೆ : 9449112440 ಅಥವಾ 08419-238070 ಈ ದೂರವಾಣಿಗಳಿಗೆ ಸಂಪಕರ್ಿಸಿದರೆ ಅಗತ್ಯ ವ್ಯವಸ್ಥೆಗಳನ್ನು ಕೈಗೊಳ್ಳುತ್ತಾರೆ. ಮೊದಲೇ ತಿಳಿಸಿದ್ದರೆ ಊಟದ ವ್ಯವಸ್ಥೆಯನ್ನೂ ಕೈಗೊಳ್ಳುತ್ತಾರೆ. ಬಾವಲಿ ಗುಹೆಗೆ ತೆರಳುವವರಿಗೆ ಮಾರ್ಗದರ್ಶನ ನೀಡುತ್ತಾರೆ.

Tuesday, October 8, 2013

ಹೇಳಿ ಹೋಗು ಕಾರಣ


ನನ್ನ ಮನವ ತೊರೆವ ಮುನ್ನ
ಹೇಳಿಹೋಗು ಕಾರಣ..
ನನ್ನ ಕನಸ ಕೊಲುವ ಮುನ್ನ
ಹೇಳಿ ಹೋಗು ಕಾರಣ..||

ಅಂದು ನೀನು ಕಂಡುದೇಕೆ..?
ನನ್ನ ಮನವ ಸೆಳೆದುದೇಕೆ.?
ಪ್ರೀತಿ ಬಲೆಯ ಬೀಸಿದ್ದೇಕೆ..?
ಹೇಳಿ ಹೋಗು ಕಾರಣ..||

ಜೊತೆಗೆ ಹಲವು ಮಾತನಾಡಿ
ಮನದ ಜೊತೆಗೆ ಆಟವಾಡಿ
ಬಿಟ್ಟು ಓಡಿ ಹೋಗುವ ಮೊದಲು
ಹೇಳಿ ಹೋಗು ಕಾರಣ..||

ನನ್ನೊಳೇನು ತಪ್ಪು ಕಂಡೆ.?
ನನ್ನ ಪ್ರೀತಿ ಚುಚ್ಚಿ ಕೊಂದೆ
ನೀನು ದೂರವಾಗೋ ಮೊದಲು
ಹೇಳಿ ಹೋಗು ಕಾರಣ..||

ನೀನು ಪ್ರೀತಿಸಿದ್ದು ಸುಳ್ಳೆ?
ಏಕೆ ನನ್ನ ಸೆಳೆದೆ ಮರುಳೆ..?
ನನ್ನೊಡಲು ಸಾಯೋ ಮೊದಲು
ಹೇಳಿ ಹೋಗು ಕಾರಣ..||


(ಬರೆದಿದು : ಶಿರಸಿಯಲ್ಲಿ, 23-01-2006ರಂದು )
(ಈ ಕವಿತೆಯನ್ನು 24-01-2006ರಂದು ಶಿರಸಿ ತಾಲೂಕಿನ ಉಂಚಳ್ಳಿಯಲ್ಲಿ 
ಓದುಗರ ವೇದಿಕೆ ಹಮ್ಮಿಕೊಂಡಿದ್ದ ಯುವ ಕವಿಗೋಷ್ಟಿಯಲ್ಲಿ ವಾಚಿಸಲಾಗಿದೆ.)

Sunday, October 6, 2013

ಪ್ರೇಮಪತ್ರ -6 ಪ್ರೀತಿಯ ಓಲೆ

ಪ್ರೀತಿಯ ಗೆಳೆಯಾ..,
    ಅದೆಷ್ಟು ಬಗೆಯಿಂದ ಬೇರೆ ಬೇರೆ ಚಿಂತನೆಗಳ ಕಡೆಗೆ ನನ್ನನ್ನು ನಾನು ತೊಡಗಿಸಿಕೊಂಡರೂ ನಿನ್ನ ನೆನಪೇ ನನ್ನತ್ತ ಸುಳಿದುಬರುತ್ತಿದೆ. ಏನೇ ಮಾಡಿದರೂ ನನ್ನ ಕಣ್ಣೆದುರು ನೀನೇ ಸುಳಿದು ಬರುತ್ತೀಯಾ.., ನೆನಪಾಗ್ತೀಯಾ.. ಪದೇ ಪದೆ ಕಾಡ್ತೀಯಾ.. ಯಾಕೋ ಗೊತ್ತಿಲ್ಲ ಗೆಳೆಯಾ, ನಿನ್ನ ಮಡಿಲ ಮೇಲೆ ನನ್ನ ತಲೆಯನ್ನಿಟ್ಟು ನಲಿಯಬೇಕೆಂಬ ಆಸೆ ಮನದೊಳಗೆ ತುಂಬಿಕೊಂಡಿದೆ.. ಹಾಗೇ ಸುಮ್ಮನೆ ಕನ್ಣು ಮುಚ್ಚಿಕೊಂಡು ಯಾವುದೋ ಭಾವಗೀತೆಯನ್ನು ಗುನುಗಬೇಕು ಎನ್ನಿಸುತ್ತಿದೆ..
    ಬಹುದಿನಗಳಾಯ್ತಲ್ಲೋ ಗೆಳೆಯಾ.., ಕಾಲೇಜಿನಲ್ಲಿ ನಿನ್ನ ಮುಖ ಕಂಡು.. ಎಲ್ಲಿಗೆ ಹೋಗಿಬಿಟ್ಯೋ?? ಪ್ರತಿದಿನ ನಿನ್ನದೇ ನೆನಪು ನೆರಳಿನಲ್ಲಿ, ಕನಸು-ಕನವರಿಕೆಯಲ್ಲಿ ಕಾಲೇಜಿಗೆ ಎಡತಾಕುತ್ತಿದ್ದೇನೆ.. ಅಲ್ಲಿ ನಿನ್ನ ಬಿಂಬವನ್ನು ಕಾಣದೇ ಮುದುಡುತ್ತಿದ್ದೇನೆ..? ಯಾಕೋ ಶಂಕೆ ಮನದಲಿ.. ಕಾಣದ ಭೀತಿ ಎದೆಯಲ್ಲಿ ಎನ್ನುವಂತಾಗಿದೆ..
    ನಾನು ಪ್ರೀತಿಗೆ ಬಿದ್ದು ಅದೆಷ್ಟು ದಿನ ಸಂದಿತೋ.., ಅಂದಿನಿಂದ ಯಾಕೋ ನಿನ್ನ ಒಡನಾಟ ತಪ್ಪಿಯೇ ಹೋಗಿದೆ ಕಣೋ.. ನೀನು ಯಾವಾಗ ನನ್ನ ಕಣ್ಣೆದುರು ಕಾಣುತ್ತಿದ್ದೆಯೋ ಆಗೆಲ್ಲಾ ನಾನು ಹೂವಿನಂತಾಗುತ್ತಿದ್ದೆ ಮತ್ತೆ ಮತ್ತೆ ಅರಳುತ್ತಿದ್ದೆ ನಿನ್ನೆಡೆಗೆ ಹೊರಳುತ್ತಿದ್ದೆ. ಮುಖ ಕಂಡರೆ ಸಾಕಿತ್ತು ಸೋರ್ಯನತ್ತ ತಿರುಗುವ ಸೂರ್ಯಕಾಂತಿಯಂತೆ ಗೆಲುವಾಗುತ್ತಿದ್ದೆ.. ಚುಕ್ಕಿಯ ಜಿಂಕೆಮರಿಯಾಗುತ್ತಿದ್ದೆ.. ಹೊಟ್ಟೆತುಂಬಾ ಹಾಲುಕುಡಿದು ಧುತ್ತನೆ ಎದ್ದೋಡಿ ಬಿದ್ದೋಡಿ ಸೆಳೆಯುವಂತಹ `ಪುಟ್ಟಿಕರು'ವಾಗುತ್ತಿದ್ದೆ..
    ಅದೇನಾಯ್ತು ನಿಂಗೆ..? ಕಾಲೇಜಿನಲ್ಲಿ ನಿನ್ನ ಸುಳಿವಿಲ್ಲ. ಪ್ರತಿದಿನ ನೀನು ಹಾಯ್ದು ಬರುತ್ತಿದ್ದ ಜಾಗಗಳತ್ತ ಕಣ್ಣು ಹಾಯಿಸಿದರೆ ಅಲ್ಲೆಲ್ಲ ನೀನಿಲ್ಲ..? ನೀನೆಲ್ಲಿ.? ಯಾಕೋ ಏನೊಂದೂ ಗೊತ್ತಾಗುತ್ತಿಲ್ಲ.. ಮನಸ್ಸಿನಲ್ಲಿ ನೂರೊಂದು ಪ್ರಶ್ನೆಗಳ ಸುಳಿ.. ಅದ್ಯಾವ ಕೇಡು ಬಂದು ಕಾಡಿತು..? ನಿನ್ನ ಇರವೇ ಇಲ್ಲವಲ್ಲ..
    ಗೆಳೆಯಾ..
    ನೀನು ಇರದಿರುವ ಈ ಕ್ಷಣವನ್ನು ನಾನು ಬಹಳ ಬೇಸರದಿಂದ ಅನುಭವಿಸುತ್ತಿದ್ದೇನೆ.. ನನಗ್ಯಾಕೋ ಒಂದು ಕ್ಷಣವನ್ನೂ ಕಳೆಯಲಾಗುತ್ತಿಲ್ಲ.. ನೀನಿಲ್ಲದ ಒಂದು ಘಳಿಗೆಯೂ ನನಗೆ ವರುಷದಂತೆ ಕಾಣುತ್ತಿದೆ. ನಿನ್ನ ಕಡೆಗೆ ಕನಸನ್ನು ಕಂಡು ಕಂಡು ನಲಿಯುತ್ತಿದ್ದ ನಾನು ಇಂದೇಕೋ ಕಮರುತ್ತಿದ್ದೇನೆ..
    ನೀನಿಲ್ಲದ ಲೈಬ್ರರಿ ಎದುರಿನ ಕಟ್ಟೆ ಖಾಲಿ ಖಾಲಿಯಾಗಿ ಕುಂತಿದೆ. ಕಾಲೇಜಿನ ಪ್ರತಿ ಕೋಣೆಯಲ್ಲಿಯೂ ನಿನಗಾಗಿ ಇಣುಕು ಹಾಕಿದರೆ ಮೂಲೆಯಲ್ಲಿರುವ ಸಿಸಿ ಟಿವಿಗಳು ನನ್ನನ್ನು ಅಣಕಿಸುತ್ತಿವೆ.. ಆ ಭಟ್ಟರ ಕ್ಯಾಂಟೀನಿನ ಹೊಸ ಸಪ್ಲೈಯರ್ ಹುಡುಗ ವಿಸ್ಮಿತನಾಗಿ ನನ್ನನ್ನು ನೋಡುತ್ತಿದ್ದಾನೆ. ಕಾಲೇಜು ಎದುರಿಗಿನ ಹಸಿರು ವೃಕ್ಷ ಸಮೂಹವಂತೂ ಸುಳಿದು ತರುವ ಗಾಳಿ ನೀನಿಲ್ಲ ನೀನಿಲ್ಲ ಎಂದಂತೆ ಅನ್ನಿಸುತ್ತಿದೆ.. ಯಾಕೋ ಇವೆಲ್ಲದರಲ್ಲಿಯೂ ನಾನು ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ..
    ಹೇಳದೇ ಕಾರಣ ಹೋದೆಯಾ ನೀ ದೂರ..?
    ನಿನ್ನ ಜೊತೆಗಿನ ಆ ದೋಸ್ತರ ಸಮೂಹ ಕಾಣುತ್ತಿದೆ.. ಆ ಗುಂಪಿನ ನಡುವೆ ನೀನಿಲ್ಲ.. ನೀನೆಲ್ಲಿ ಎಂದು ಅವರ ಬಳಿ ಕೇಳಲು ನಗೆ ಮುಜುಗರ, ನಾಚಿಕೆ.. ಅವ್ಯಕ್ತ ಭಯ.. ನಮ್ಮ ನಡುವೆ ಆಗಾಗ ಕಂಡು ಸೆಳೆಯುತ್ತಿದ್ದ ನೀನು ಇಲ್ಲದ ಈ ಸಂದರ್ಭ ಯಾಕೋ ನನ್ನನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ...
    ನಿನ್ನ ಮನೆಯ ಪರಿಸ್ಥಿತಿ ನನಗೆ ಅಸ್ಪಷ್ಟವಾಗಿ ಗೊತ್ತಿದೆ. ನಿಮ್ಮೂರಿನ ಆ ನಿನ್ನ ಪರಿಷಯದ ಹುಡುಗಿ ಯಾವಾಗಲೋ ಮಾತಿನ ಮಧ್ಯ ಹೇಳಿದಂತಹ ನೆನಪು.. ಸಮಸ್ಯೆಗಳ ಸುಳಿಯಲ್ಲಿ ಕೊಚ್ಚಿಹೋದೆಯಾ ಗೆಳೆಯಾ.? ಸಮಸ್ಯೆ ಕಾಡಿ ಕಾಡಿ ಕಾಲೇಜನ್ನೇ ಬಿಟ್ಟೆಯಾ...? ಅಥವಾ ಊರನ್ನೇ ಬಿಟ್ಟೆಯಾ..? ಮತ್ತೀನ್ನೇನಾದರೂ ಮಾಡಿಕೊಂಡೆಯಾ..? ದೇವರೆ ಹಾಗಾಗದಿರಲಿ..
    ನೀನು ಇಲ್ಲದ ಈ ಕಾಲವನ್ನು ನನ್ನ ಬಳಿ ಸಹಿಸಿಕೊಳ್ಳಲಾಗುತ್ತಿಲ್ಲ.. ಹಾಳಾದ್ದು ನಿನ್ನ ಬಳಿ ಮೊಬೈಲ್ ಇದೆಯೋ ಇಲ್ಲವೋ ಎನ್ನುವುದೂ ನನಗೆ ಗೊತ್ತಿಲ್ಲ ನೋಡು.. ಮೋಸ್ಟ್ ಲಿ ಇಲ್ಲ ಅನ್ಸುತ್ತೆ ಬಿಡು.. ಬಿಡು ಅದಕ್ಕೆ ಈ ರೀತಿ ಪತ್ರ ಬರೆಯುತ್ತಿದ್ದೇನೆ.. ನಿನಗೆ ತಲುಪುತ್ತದೆಯೋ ಇಲ್ಲವೋ ಗೊತ್ತಿಲ್ಲ.. ಆದರೆ ಬರೆದು ನನ್ನಲ್ಲಿಯಂತೂ ಇಟ್ಟುಕೊಳ್ಳುತ್ತಿದ್ದೇನೆ..
    ಐ ಮಿಸ್ ಯೂ ಗೆಳೆಯಾ.. ಎಲ್ಲಿದ್ದರೂ ಬೇಗ ಬಾ ಪ್ಲೀಸ್..

ಇಂತಿ ನಿನ್ನ
ಪ್ರೀತಿ

Thursday, October 3, 2013

ನನ್ನ ಕವನ


ನನ್ನ ಕವನ ತೊದಲು ನುಡಿ
ಬಿರಿದು ಹೊರಗೆ ಬಂದಿದೆ
ಈ ನಲಿವ ಜಗದ ಚೆಲುವ
ಕಂಡು ಬಾಯಿ ಬಿಟ್ಟಿದೆ..!!


ಕೌತುಕ ಭಯ ಭೀತಿಗಳೆಡೆ
ನನ್ನ ಕವನ ಸಿಲುಕಿದೆ
ಹಲ ಕೆಲವು ಪ್ರೀತಿ ನುಡಿಯ
ಕೇಳ ಬಯಸಿ ಕಾದಿದೆ ||

ಗಾನ ನೃತ್ಯ ನಟನೆಗಳನು
ನನ್ನ ಕವನ ಬಯಸಿದೆ
ನೂರಾರು ಕನಸುಗಳ
ಬಯಸಿ ಬೆನ್ನು ಹತ್ತಿದೆ
||

ನೂರಾರು ರಸ ನಿಮಿಷವ
ಕವನ ಬಳಸಿಕೊಂಡಿದೆ
ನನ್ನ ಎದೆಯ ಆಳದಿಂದ
ಕೊನರಿ ಹೊರಗೆ ಬಂದಿದೆ ||

(ಬರೆದಿದ್ದು ದಂಟಕಲ್ಲಿನಲ್ಲಿ, 25-09-2005ರಂದು, 
ಈ ಕವಿತೆಯನ್ನು ಪ್ರಕಟಿಸಿದ ಲೋಕಧ್ವನಿ ಪತ್ರಿಕೆಯ ಬಳಗಕ್ಕೆ ಧನ್ಯವಾದಗಳು)