Tuesday, April 30, 2013

ನಾ ಹೀಗೆ ಕಣೆ ಹುಡುಗಿ

ನಾ ಹೀಗೆ ಕಣೆ ಹುಡುಗಿ


ನಾ ಹೀಗೆ ಕಣೆ ಹುಡುಗಿ
ಸುಮ್ಮನೆ, ಬಿಮ್ಮನೆ..!
ಬದುಕಲಿಕೆ, ನಲಿಯಲಿಕೆ..!!

ಅರಿತು ನಡೆಯಲಿಕ್ಕಾಗೇ
ನೋವಲ್ಲೂ ನಕ್ಕೆ..!
ನಗು ನಗುವ ನಡುವೆಯೇ
ಮನದೊಳಗೆ ಅತ್ತೆ..!!

ನಾ ಹೀಗೆ ಕಣೆ ಹುಡುಗಿ
ಪ್ರೀತಿ ಹುಡುಕಲಿಕೆ
ಗೆದ್ದು ಪಡೆಯೋಕೆ..!
ಸಿಕ್ಕರೆ ನಲಿವೆನಾದರೂ
ಸಿಗದಿರೆ ಅಳಲಾರೆ..!!

ಗೊತ್ತಿಲ್ದೇ ಹೇಳ್ಕೋತೀನಿ ನಾ
ಹೇಳ್ಕೊಂಡು ನಗ್ತೀನಿ.
ನಗ್ತೀನಿ ನಗಿಸ್ತೀನಿ..!
ಒಬ್ಬೊಬ್ನೆ ಅಳ್ತೀನಿ,
ಅಳೋರ್ನೂ ನಗಿಸ್ತೀನಿ..!!

ನಾ ಒಗಟಿನಂತಲ್ಲ ಹುಡುಗಿ
ಚಿಪ್ಪು ಬಾದಾಮಿ.
ಕನಸು ಕಾಣುವ ಪ್ರೇಮಿ.!
ನಾ ನಿರಾಸೆ ಆಗಲಾರೆ ಕಣೆ
ಅರಿಯದುತ್ತರಕ್ಕೆ..!
ಪ್ರತಿ ಸೋಲಿನಲ್ಲೂ ಗೆಲುವ
ಕಾಣ್ತೇನೆ, ಗೆಲ್ತೇನೆ..!!

ನಾ ಹೇಗ್ಹೇಗೋ ಇಲ್ಲ ಕಣೆ ಗೆಳತಿ,
ಒಗಟೂ ಅಲ್ಲ, ಮುಗುಟೂ ಅಲ್ಲ.
ಎಲ್ಲ ಪರೀಕ್ಷೆಗಾಗಿ,
ಅರಿವಿಗಾಗಿ ಮಾತ್ರ..!!

ನಾ ಹೀಗೆ ಕಣೆ ಗೆಳತಿ,
ನಿನಗಾಗಿ, ನಿನ್ನ ಪ್ರೀತಿಗಾಗಿ,
ಮನದೊಳು ಮನೆ ಮಾಡಲು
ಹೊಸ ಹಸಿರಾಗಲು, ಮನಸಾಗಲು ..!!
ಕವಿಯಾಗಲು, ಕವನಕಟ್ಟಲು
ಅರ್ಥವಾಗಲು..!!

ನಾ ಉಬ್ಬಿ ಒಡೆವ ಬಲೂನಿನಂತಲ್ಲ ಕಣೆ
ಲಂಗರು ಕಿತ್ತ ಹಡಗಿನಂತಿದ್ದೇನೆ..!
ಪದೇ ಪದೆ ನಾ
ನಿನ್ನ ಬಯಸಿದ್ದೇನೆ..!!

ಹೇಳೇ ಹುಡುಗಿ,
ನಾ ಹೀಗೆ ಇರಲೇನೇ.
ಒಗಟಿನಂತೆ ಅರ್ಥವಾಗದೇ,
ಅಥವಾ ಬತ್ತಿನಂತೆ..?

ನಗುವಾಗಲೇ ಅಥವಾ
ಅಳುವಾಗಲೇ ಹೇಳು ನೀ..

ಗೆಳತಿ,
ಒಗಟಾಗಿದ್ದರೆ ಮಾತ್ರ
ಅರ್ಥವೇ ಆಗದಂತಿದ್ದರೆ ಮಾತ್ರ
ಕುತೂಹಲ ಅಲ್ಲಿರುತ್ತದೆ ಕಣೆ.
ಇಲ್ಲದಿದ್ದರೆ ಅದು ತೆರೆದ
ಪುಸ್ತಕ ಖೋರಾ ಖಾಗಜé..!
ಅದಕ್ಕೇ ನಾ ಹೀಗೆ ಕಣೆ
ಅರ್ಥವಾಗದ ಒಗಟಿನ ಹಾಗೆ...

(ಪ್ರಸ್ತುತ ಕಾಲೇಜು ದಿನಗಳಲ್ಲಿ `ನೀ ಯಾಕೆ ಹೀಗೆ ಗೆಳೆಯಾ..? ಅರ್ಥವಾಗದ ಒಗಟಿನ ಹಾಗೆ..' 
ಎಂದು ನನ್ನ ಬಳಿ ಅಸ್ಪಷ್ಟವಾಗಿ ಕೇಳಿದ ಗೆಳತಿಯೊಬ್ಬಳಿಗೆ ಬರೆದಿದ್ದ ಕವನ ಇದು...)
ಬರೆದಿದ್ದು : 24-07-2008
ಸ್ಥಳ ದಂಟಕಲ್ಲಿನಲ್ಲಿ

Monday, April 29, 2013

ವಿಸ್ಮಯಗಳ ಗೂಡು : ಈ ಮಲೆನಾಡು ಭಾಗ -2

ವಿಸ್ಮಯಗಳ ಗೂಡು : ಈ ಮಲೆನಾಡು

ಭಾಗ -2

ಮಲೆನಾಡ ಒಡಲಿನೊಳು
ಏನುಂಟು ಏನಿಲ್ಲ..?
ಕಣ್ಣ ನೋಟದ ತುಂಬ
ಹಸಿರು ಮಡಿಲು.
.
    ನಿಜ.., ಮಲೆನಾಡೆಂದರೆ ಹಾಗೆ.. ಸುಳಿದು ಬರುವ ಹೂ ಕಂಪು. ತಳಿರು, ತರುಲತೆಗಳ ಸೋಂಪು. ಕೋಗಿಲೆ, ಹಕ್ಕಿ ಪಕ್ಷಿಗಳ ಇಂಪು. ಹಸಿರು ಒನಪು.. ಒಬ್ಬಂಟಿಯಾದಾಗಲೆಲ್ಲ ಕಾಡುವ ನೆನಪು..
    ಮಲೆನಾಡೆಂದೂಡಲೆಲ್ಲ ನೆನಪಾಗುವಂತದ್ದು ಹಸಿರು ಅಡಿಕೆಯ ತೋಟ.., ಅಲ್ಲಲ್ಲಿ ಕಣ್ತಣಿಪ ಭತ್ತದ ಗದ್ದೆಗಳ ಸೊಬಗು, ಮಾವಿನ, ಅಪ್ಪೆಯ ಮರಗಳ ನರ್ತನ, ಒಂದಕ್ಕಿಂತ ಒಂದು ಎತ್ತರಕ್ಕೆ ಸ್ಪರ್ಧೆ ಮಾಡುವಂತಹ ಪರ್ವತ ಶೀಖರಗಳು.. ಅಲ್ಲಲ್ಲಿ ಕಾಫಿಯೂ ಇದೆ.. ಮತ್ತೆ ಹಲವೆಡೆ ಅರ್ಧಮರ್ಧ ಕಾನು..
    ಇಲ್ಲಿಯ ವಿಶಿಷ್ಟತೆಗಳನ್ನು ಹೆಸರಿಸಿ ಪಟ್ಟಿಮಾಡುವುದು ಬಹಳ ಕಷ್ಟದ ಕೆಲಸವೇ ಸರಿ. ಅದೊಂದು ಬೃಹತ್, ಹೆಮ್ಮೆಯ ಕೆಲಸ. ಕನ್ಣಿಗೆ ಕಾಣದ ಜೀವಿ ಸಂಕುಲದಿಂದ ಕಣ್ಣಿನಲ್ಲಿ ಹಿಡಿಯದಂತಹ ಜೀವಿ ಜಗತ್ತಿನ ಆಶ್ರಯ ತಾಣವೂ ಈ ಮಲೆನಾಡು ಎಂದರೆ ತಪ್ಪಾಗಲಿಕ್ಕಿಲ್ಲ. ಕನ್ಣಿಗೆ ಕಾಣದಂತಹ ಜೀವ ಪ್ರಬೇಧವಾದ `ದಾಟುಬಳ್ಳಿ' ಹಾವು ಈ ಮಲೆನಾಡಿನ ವಿಶ್ಷತೆಗಳಲ್ಲೊಂದು. ಹಾರ್ನಬಿಲ್, ಉದ್ದ ಬಾಲದ ಮಂಗ, ಲಂಗೂರ್ ಗಳು, ಕಣ್ಣಲ್ಲಿಯೇ ಕಾಡುವ, ಕಾಟಕೊಡುವ ಕಾಡುಪಾಪ.. ಅಷ್ಟೇ ಏಕೆ ದಿನ ಬೆಳಗಾದರೆ ಮನೆಯಂಗಳಕ್ಕೆ ಬಂದು ಹಾಯ್ ಹೇಳಿ ಹೋಗುವ ಕಾಡೆಮ್ಮೆಗಳ ಹಿಂಡು, ಮಳೆಗಾಲದ ಮಧುರ ಭಾವದಿಂದ ಕುಣಿದು ಎಲ್ಲರ ಕರೆಯುವ ನವಿಲು.. ಇವಿಷ್ಟನ್ನು ಹೇಳಿದರೆ ಮಲೆನಾಡಿನ ದೇಷ್ಯವೈಭವದ ಸವಿಗೆ ಸ್ವಲ್ಪ ಕಾಣಿಕೆ ಕೊಟ್ಟಂತಾಗುತ್ತದೆಯಲ್ಲವೇ..?
    ಕಂಡ ಕಂಡಕಡೆಯಲ್ಲೆಲ್ಲ ಧುಮ್ಮಿಕ್ಕಿ ಹರಿದು ಕೆಳಗೆ ಹೋಗುವ ಜಲಪಾತ, ನಲಿದು-ಕುಣಿದು-ಬಳಸಿ-ಬಳುಕಿ-ಬೆಳೆಸಿ ಹರಿಯುವ ನದಿಗಳು, ವರ್ಷದ ಆರು ತಿಂಗಳುಗಳ ಕಾಲ ಜಿಟಿ ಜಿಟಿಯೆನ್ನುವ ಮಳೆ, ಕಾಲಿಟ್ಟಲ್ಲಿ ಸದ್ದಿಲ್ಲದೇ ಅಂಟಿಕೊಂಡು ರಕ್ತಹೀರಿ ಡೊಣೆಯನಂತಾಗುವ ಉಂಬಳ, ಜಿಗಳೆಗಳು, ಮಳೆಗಾಲ ಬಂದ ತಕ್ಷಣ ಟ್ವಂಯ್ ಟ್ವಂಯ್ ಎಂದು ವದರಿ ಎಲ್ಲರನ್ನೂ ಸಜ್ಜುಗೊಳಿಸುವ ಮಳೆಜಿರಲೆಗಳು ಅಥವಾ ಸಿಕಾಡಗಳು.. ಇವುಗಳೆ ಮಲೆನಾಡಿನ ಯಜಮಾನರುಗಳು.. ಅಥವಾ ಮಲೆನಾಡನ್ನು ಸಾಕ್ಷೀಕರಿಸುವ ಪ್ರಾಣಿ, ಪಕ್ಷಿ ಕೀಟ ಪ್ರಬೇಧಗಳು..
    ಕೆಂಪು, ಅರಶಿಣ ಬಣ್ಣದಲ್ಲಿರುವ ಕಾದಾಳಿ ಮಣ್ಣು, ಮಳೆಗಾಲದಲ್ಲಿ ಬರಿ ಅರಲು, ಬೇಸಿಗೆಯಲ್ಲಿ ಹುಡಿ ಹುಡಿ ಧೂಳನ್ನು ರಾಚುವ ಈ ಮಣ್ಣು ಇನ್ಯಾವ ಕಡೆಯಲ್ಲೂ ಕಾಣಸಿಗುವುದಿಲ್ಲ.. ಕಚಕ್ಕನೆ ಕಾಲನ್ನು ಬಗೆಯುವ ಬಿಳಿಗಲ್ಲುಗಳು ಮಲೆನಾಡಿನ ಮತ್ತಷ್ಟು ವಿಶೇಷತೆಗಳು.
    ಹಸಿರು ಚಾದರವನ್ನು ಹೊದ್ದು ಶತಮಾನದಿಂದ ಕಾಲುಚಾಚಿ ಮಲಗಿರುವ ದೈತ್ಯ ಗುಡ್ಡಗಳು, ಬಾನಿಗೆ ಸವಾಲು ಹಾಕಿ ಚುಂಬನಕ್ಕಾಘಿ ನಿಂತಿರುವ ದೈತ್ಯ ಮರಗಳು, ಮುಳ್ಳು ಮುಳುಗಳ ಬೆತ್ತ, ಹಕ್ಕಿಗಳ ಪಾಲಿನ ಸ್ವರ್ಗವಾಗಿ, ಮಣ್ಣನ್ನು ಕೊಚ್ಚಿಕೊಂಡು ಹೋಗದಂತೆ ತಡೆದು ನಿಂತು ರೈತ ಸ್ನೇಹಿಯಾಗಿರುವ ವಾಟೆಮಟ್ಟಿ, ಅಂಡಿನಲ್ಲಿ ವಿಷದ ಬಾಣವನ್ನೇ ಹೊತ್ತುಕೊಂಡು ಸೊಂಯ್ಯನೆ ಹಾರಾಡುವ ಭಂಡಾರಮಡಿಕೆ ಹುಳುಗಳೆಂಬ ಪ್ರಕೃತಿ ಸೈನಿಕರು, ಕಡಜೀರಿಗೆ ಹುಳುಗಳು, ಸವಿ ಸವಿಯ ತುಪ್ಪವನ್ನು ಕರುಣಿಸುವ ಮಿಸರಿ, ತುಡುವಿ, ಕೋಲ್ಜೇನುಗಳು., ಇವೆಲ್ಲ ಮಲೆನಾಡಿನ ಮೆರಗಿನ ಚೌಕಟ್ಟುಗಳೆನ್ನುವುದು ಸುಳ್ಳಲ್ಲ..
     ಪಟ್ಟೆಪಟ್ಟೆಯ ಕೊಳಕು ಮಂಡಲ, ಹಸಿರೆಲೆಯ ನಡುವೆ ಹಾಯಾಗಿ ಜೀವನ ನಡೆಸುವ ಹಸುರುಳ್ಳೆ ಹಾವು, ಕಣ್ಣಿಲ್ಲದಿದ್ದರೂ ಎರಡೂ ತಲೆಗಳನ್ನು ಒಳಗೊಂಡು ಅತ್ತ ಇತ್ತ ಎಂಬಂತೆ ಸುಳಿದಾಡುವ ಮಣ್ಣಮುಕ್ಕ ಹಾವು, ಮನುಷ್ಯನನ್ನೂ ಮೀರಿಸುವ ಕಾಳಿಂಗ, ಕೇರೆ ಹಾವು, ಸರ್ಪ, ಕುದುರುಬೆಳ್ಳ, ಹಾರಗಿಣಿ ಮುಂತಾದ ಹಾವುಗಳ ಸಮೂಹ, ವೂವೂಝಿಲಾ ವಾದ್ಯವನ್ನೂ ಮೀರಿಸುವ ವಂಡರು (ಡೊಂಗರು) ಕಪ್ಪೆಗಳು.., ಚಕ್ಕನೆ ನೀರನಿಂದ ಜಿಗಿದು ಕೈಗೆ ಮುತ್ತಿಕ್ಕಿ ಕೈಯಲ್ಲಿನ ತಿಂಡಿಯನ್ನು ಕಳ್ಳತನ ಮಾಡುವ ಬಳ್ಳಿ ಮಿಂಚಿನ ಮೀನುಗಳು, ಹೊಳೆಯ ದಡದಲ್ಲಿ ತಲೆಯೆತ್ತಿ ನಿಂತು ಸವಿ ಹಣ್ಣನ್ನು ನೀಡುವ ಹೂಡಲು.. ಇನ್ನೆಷ್ಟು ನಮೂನೆಗಳನ್ನು ಹೇಳಿದರೂ ಮಲೆನಾಡಿನ ದೃಶ್ಯ ವೈಭವವನ್ನು ಕಿಂಚಿತ್ತೂ ತಿಳಿಸಿದಂತೆ ಆಗುವುದಿಲ್ಲ...
    ಮಲೆನಾಡಿನ ಒಡಲೊಳಗೆ ಹೆಜ್ಜೆ ಹಾಕಿದಂತೆಲ್ಲ ನಿಘೂಡಗಳು ಆವರಿಸುತ್ತವೆ.. ಕುತೂಹಲಕ್ಕೆ ಕೈಹಾಕಿದಂತೆಲ್ಲ ಹೊಸ ಹೊಸ ಬೆಡಗುಗಳು ಬೆರಗುಗಳು ತೆರೆದುಕೊಳ್ಳುತ್ತವೆ.. ಇವುಗಳೆಲ್ಲ ಮಲೆನಾಡಿನ ಚಿಕ್ಕದೊಂದು ತುಣುಕಷ್ಟೇ.. ಮಲೆನಾಡಿನ ಅಸಲೀತನದ ಪರಿಚಯ ನಮಗಾಗಬೇಕಾದರೆ ಅಲ್ಲಿಗೇ ಹೋಗಬೇಕು. 1801ರಲ್ಲಿ ಬ್ರಿಟಿಷರ ಜಾನ್ ಬುಕಾನನ್ ಎಂಬಾತ ಮಲೆನಾಡಿನ ಒಡಲೊಳಗೆ ಹೆಜ್ಜೆ ಹಾಕಿ ಇಲ್ಲಿನ ಬೆರಗನ್ನೆಲ್ಲ ದಾಖಲಿಸಿದ್ದಾನಂತೆ.. ಅವನಂತೆ ಇನ್ನೊಮ್ಮೆ ನಾವು ಹೆಜ್ಜೆ ಹಾಕಿದಾಗಲೇ ಅಲ್ಪಸ್ವಲ್ಪವಾದರೂ ಮಲೆನಾಡು ಅರ್ಥವಾಗಬಲ್ಲದೇನೋ.. ಮಲೆನಾಡೆಂಬ ಸಾಗರದೊಳಗೆ ಒಮ್ಮೆಯಾದರೂ ಬುಕಾನನ್ ನಂತೆ ದೋಣಿಯಾನ ಮಾಡೋಣ.. ಮಲೆನಾಡಿನ ಸೊಬಗನ್ನು ಆಸ್ವಾದಿಸೋಣ ಅಲ್ಲವೇ..

Wednesday, April 24, 2013

ಮೋಹ...

 ಮೋಹ...



ಸಮುದ್ರದ ಅಲೆಗಳಿಗೆ
ನನ್ನ ಮೇಲೆ..
ಏಕಿಷ್ಟು ಹುಚ್ಚು ಪ್ರೀತಿ..?
ಪದೇ ಪದೆ ಬಂದು
ನನ್ನನ್ನು ಚುಂಬಿಸುತ್ತಾಳೆ..?

ತಪ್ಪಿಸಿಕೊಂಡು ಹೋದಷ್ಟೂ 
ಬೆನ್ನಟ್ಟಿ ಬಂದು
ಕಾಲು ತೋಯಿಸುತ್ತಾಳೆ.. 
ತಂಪಾಗುತ್ತಾಳೆ..

ಕಾಲಡಿಯಲ್ಲೆಲ್ಲ ಸುಳಿದು 
ಕಚಗುಳಿಯಿಕ್ಕಿ
ಒಮ್ಮೆಲೆ ಕಕ್ಕಾಬಿಕ್ಕಿ...

ನಾನು ಏನನ್ನೇಕೊಟ್ಟರೂ
ಬಿಡದೆ ಬರಸೆಳೆದು 
ಕಣ್ಣಿಗೆ ಕಾಣದಂತೆ
ತೆಕ್ಕೆಯೊಳಗೆಳೆದುಕೊಂಡು 
ಓಡಿ ಹೋಗುತ್ತಾಳೆ..

ಅಲೆಯಲೆಯಾಗಿ
ಮನದಲ್ಲಿ ನಿಲ್ಲುತ್ತಾಳೆ..
ಅಪ್ಪಿ ತಪ್ಪಿ ನಾವು ಒದ್ದೆಯಾದರೂ
ತಾಳಲಾರೆನೆಂಬ ಕಿರಿ ಕಿರಿ..
ಉಪ್ಪು ಉಪ್ಪು ನವೆ..

ಬಿಸಿ ಬೇಗೆಯ ಬೆಂಕಿ..
ಉರಿ ಉರಿ..

ಮೋಹದ ಕಡಲ ಪ್ರೀತಿಯ ಪರಿಗೆ 
ಸೋತರೂ ಸೋಲರಾರೆ..
ನಿಂತರೂ ನಿಲ್ಲಲಾರೆ

Tuesday, April 23, 2013

ನಿನ್ನದೇ ನೆನಪು ನೆರಳಿನಲ್ಲಿ : ಪ್ರೇಮಪತ್ರ-4

ಪ್ರೇಮಪತ್ರ-4

ನಿನ್ನದೇ ನೆನಪು ನೆರಳಿನಲ್ಲಿ

   
ಪ್ರೀತಿಯ ಗೆಳತಿ,
    ಛೇ.., ನೀನು ಹೀಗೆ ಮಾಡ್ತೀಯಾ ಅಂತ ನಾನು ಅಂದುಕೊಂಡಿರಲಿಲ್ಲ. ನೀನು ಬರ್ತೀಯಾ.. ಬಂದು ನನ್ನ ಬಳಿಯಲ್ಲಿ ನಾಲ್ಕೆಂಟು ಮಾತುಗಳನ್ನಾಡಿ, ಹಾಗೆ ಸುಮ್ಮನೇ ನಕ್ಕು ನಲಿದು ವಾತಾವರಣವನ್ನು ಸೆಳೆದುಹೋಗುತ್ತೀಯಾ ಅಂದುಕೊಂಡಿದ್ದೆ.. ಆದರೆ ನನ್ನ ನಿರೀಕ್ಷೆ ಹುಸಿಯಾಗಿ ಹೋಯ್ತು. ನಾನು ನಿನಗಾಗಿ ಕಾದು ಕಾದು ಸುಸ್ತಾಗಿ ಬಸವಳಿದು ಹೋದೆ.
    ಅಂದು ನಿನಗೆ ನೆಪಿತ್ತಲ್ಲ. ಫೆಬ್ರವರಿ 14. ನನ್ನ ನಿನ್ನಂತಹ ಪ್ರೇಮಿಗಳಿಗೆಂದೇ ರಿಸರ್ವ್ ಆಗಿರೋ ದಿನ. ವ್ಯಾಲಂಟಾಯಿನ್ಸ್ ಡೇ. ನಿನಗೆ ಮರೆತಿಲ್ಲ. ಮರೆಯೋದೂ ಇಲ್ಲ ಅಂದ್ಕೊಂಡಿದ್ದೀನಿ. ಆವತ್ತು ನೀನು ನನ್ನ ಬಳಿ ಬಂದು ಮಾತನಾಡಿ ಹೋಗ್ತೀಯಾ ಅಂದ್ಕೊಂಡಿದ್ನಲ್ಲೆ ಗೆಳತಿ., ಯಾಕೆ ನೀನು ಬರ್ಲೇ ಇಲ್ಲ..? ನೀನು ಬರದೇ ಇರಲು ಅಂತಹುದೇನಾದರೂ ಕಾರಣವಿದೆಯಾ..? ಇಲ್ಲವಾದಲ್ಲಿ ನನ್ನನ್ನು ಸುಮ್ಮ ಸುಮ್ಮನೇ ಕಾಡಿಸಬೇಕೆಂಬ ಕಾರಣದಿಂದಲೇ ಬಂದಿಲ್ಲವಾ..?
    ನೀನಾಗಿಯೇ ಮೈಮೇಲೆ ಬಿದ್ದು, ಕಾಟಕೊಟ್ಟು ಅದೆಷ್ಟೋ ಪರಿ ಬಳಸಿ ಬಯಸಿ ನನ್ನಿಂದ ಪ್ರೇಮವನ್ನು ಪಡೆದ ನಿನಗೆ ಪ್ರೇಮಿಗಳ ದಿನದಂದು ನನ್ನ ಮರೆತುಹೋಯಿತಾ..?
    ನನ್ನೊಲವೆ., ನಿನಗಾಗಿ ಅಂತ್ಲೇ ಒಂದು ಬಿಳಿಯ ಹಾಗೂ ಮತ್ತೊಂದು ನಸುಗೆಂಪಿನ ಗುಲಾಬಿಯನ್ನು ತಂದು, ಕೊಡಬೇಕೆಂದು ಕೈಯಲ್ಲಿ ಹಿಡಿದು ನಿಂತಿದ್ದೆ. ಆದರೆ ನೀನು ಎಷ್ಟು ಹೊತ್ತಾದರೂ ಬರಲೇ ಇಲ್ಲ. ಅದರ ದಂಟಿನಲ್ಲಿದ್ದ ಮುಳ್ಳೊಂದು ಹಾಗೆ ಸುಮ್ಮನೆ ಚುಚ್ಚಿ ರಕ್ತವನ್ನು ಒತ್ತರಿಸಿದ ಗಾಯ ನಿಧಾನವಾಗಿ ಮಾಯುತ್ತಿದೆ. ಕೈಯಲ್ಲಿ ಹಿಡಿದ ಹೂವಿನ ಎಸಳುಗಳೆಲ್ಲ ಉದುರಿ ಕೇವಲ ದಂಟೊಂದೆ ಉಳಿದುಕೊಂಡಿದೆ. ಯಾಕ್ಹೀಗೆ ಗೆಳತಿ..? ನಾನು ನಿನಗೆ ಬೇಡವಾದ್ನಾ..?
    ಫೆಬ್ರವರಿ 14ರಂದು ನಿನ್ನ ನೋಟ ಮಾತ್ರದಿಂದಲೇ ಹೊಸದೊಂದು ಲೋಕ ಕಟ್ಟಿಕೊಳ್ಳೋಣ ಎಂದು ಬಯಸಿದ್ದೆ. ನಿನ್ನ ನಗುವಲ್ಲಿ ನಾನು ಮಗುವಾಗ ಬಯಕೆಯನ್ನು ಹೊಂದಿದ್ದೆ..ನಿನ್ನ ಉಸಿರಾಗಬೇಕೆಂದುಕೊಂಡಿದ್ದೆ. ಕಣ್ಣಲ್ಲಿ ಕಣ್ಣಿಟ್ಟು ಮನದ ಭಾವನೆಗಳನ್ನು ನಿನ್ನ ಜೊತೆ ಹಂಚಿಕೊಳ್ಳಬಯಸಿದ್ದೆ.. ಆದರೆ ಅದೆಲ್ಲ ಭಾವನೆಗಳ ಗಾಳಿ ಗೋಪರುವನ್ನು ಉಫ್ ಎಂದು ಊದಿದೆ. ಕಾಯುತ್ತಲೇ ಇರುವ ನನ್ನ ಭಾವನೆಗೆ ಪೂರಕವಾಗಿ ನಡೆದುಕೊಳ್ಳಲೇ ಇಲ್ಲ. ಬೆಳಗ್ಗಿನಿಂದ ಸಂಜೆಯವರೆಗೆ ನಮ್ಮ ರೆಗ್ಯೂಲರ್ ಜಾಗದಲ್ಲಿ ನಾನು ಕಾದಿದ್ದೇ ಬಂತು. ಹಾಂ.. ನೀನು ನಮ್ಮ ಟ್ರಿಪ್ಪಿನ ಸಂದರ್ಭದಲ್ಲಿ ಕೊಡಿಸಿದ್ದೆಯಲ್ಲ ತಿಳಿನೀಲಿ ಬಣ್ಣದ ಟೀಷರ್ಟ್.. ಎದೆಯ ಮೇಲೆ ಚೆ ಗುವೆರಾ ನ ಉತ್ಸಾಹ ಉಕ್ಕಿಸುವ ಪೋಟೋ. ಅದನ್ನು ಧರಿಸಿಯೇ ಬಂದಿದ್ದೆ.. ಆದಿನ ಅದೇನಾಗಿತ್ತೋ ಏನೋ ನಾವು ಸೇರುತ್ತಿದ್ದ ಆ ಜಾಗದ್ದಿ ನಮ್ಮಂತಹ ಎಂಟ್ಹತ್ತು ಜೋಡಿಗಳು. ನಾನೊಬ್ಬನೆ .. ಒಂಟಿ ಒಂಟಿ.. ಅದೆಷ್ಟು ನಕ್ಕರೋ..
    ನಿನಗಾಗಿ ಕಾದು ಕಾದು ಈಗ ಬರುತ್ತೀಯಾ ಆಗ ಬರುತ್ತೀಯಾ ಎಂದು ಗಡಿಯಾರದ ಮೇಲೆ ಕಣ್ಣೊಟ ಬೀರಿದ್ದೇ ಬಂತು.. ಆದರೆ ನೀನು ಬರಲೇ ಇಲ್ಲ. ನಿನ್ನ ನೋಡುವ ತವಕದ ನನ್ನ ಮನಸ್ಸಿಗೆ ಉರಿಕೆಂಡವನ್ನು ಸೋಕಿಬಿಟ್ಟೆ ನೀನು. ಯಾಕೆ ಹೀಗೆ..? ಎಷ್ಟು ಬೇಜಾರಾಗಿದೆ ಗೊತ್ತಾ..? ಅಳೋಣ ಎಂದರೆ ನಾನು ಗಂಡಸು. ನಕ್ಕುಬಿಡುತ್ತದೆ ಸಮಾಜ. ಆದರೆ ಸೀದಾ ಸಾದಾ ಇರಲೋ ಎಂದರೆ ಮೀರಿ ಮೆರೆವ ಎದೆ ಭಾರ.. ನಿಟ್ಟುಸಿರು. ನೀನು ಹಾಗೆ ಮಾಡಿದ್ದರ ಕಾರಣ ಏಕೋ.. ಏನೋ.. ನಾನರಿಯೆ.. ಯಾಕೋ ಭಯವಾಗುತ್ತಿದೆ ಗೆಳತಿ..
    ಇರಲಿ ಬಿಡು.., ಮತ್ತೆ ನಿನ್ನದೇ ನೆನಪು ನೆರಳಿನಲ್ಲಿ ಕನವರಿಕೆಯಲ್ಲಿ ಬದುಕಿದ್ದೇನೆ. ಗೋಡೆಗಂಟಿಸಿದ ನವಿಲುಗರಿ  ನಿನ್ನ ನೆನಪನ್ನು ಮತ್ತಷ್ಟು ತರುತ್ತಿದೆ. ನಮ್ಮ ಮನೆಗೆ ಬಂದಾಗ ಗುಡ್ಡದ ಮೇಲೆ ನಿನಗೆ ಸಿಕ್ಕ ನವಿಲುಗರಿಯನ್ನು ಜತನದಿಂದ ಎತ್ತಿಕೊಂಡು ನನಗೆ ಕೊಟ್ಟಿದ್ದೆ.. ನಾನು ಅದನ್ನು ಅಷ್ಟೇ ಜತನದಿಂದ ನನ್ನ ಮಲಗುವ ಕೋಣೆಯ ಪಕ್ಕದ ಗೋಡೆಗೆ ಅಂಟಿಸಿದ್ದೆ... ಅಮೃತವರ್ಷಿಣಿಯ ಥರ.. ನಿನ್ನ ನೆನಪಾದಾಗ ನವಿಲುಗರಿಯ ಟೆಲಿಪತಿ ಸಂದೇಶ ರವಾನೆ ಮಾಡುತ್ತಿದ್ದೆ..
    ಬಿಡು.. ನೀನು ಬರಲಿಲ್ಲ.. ಆದರೂ ನಾನು ಕಾಯುತ್ತಿದ್ದೇನೆ.. ನಿನ್ನ ನೆನಪಿನಲ್ಲಿ.. ಭಯದ ನೆರಳಿನಲ್ಲಿ.. ನೀ ಬಂದರೆ ನನ್ನ ಹಳೆಯ ದುಕ್ಕ ಬೇಗುದಿಯನ್ನೆಲ್ಲ ಮರೆತುಬಿಡುತ್ತೆನೆ.. ಬರುವೆಯಲ್ಲ..?
ಇಂತಿ ನಿನ್ನವ
ಜೀವನ

Sunday, April 14, 2013

ಎಲ್ಲ ಮರೆತಿರುವಾಗ ( ಕಥೆ ಭಾಗ -9)

ಎಲ್ಲ ಮರೆತಿರುವಾಗ


ಭಾಗ -9


ಹೀಗೆ ದಿನಗಳು ಸಾಗಿದವು...
ನನ್ನ ಹಾಗೂ ಅವಳ ನಡುವೆ ಇದ್ದುದು ಸ್ನೇಹವೋ ಪ್ರೇಮವೋ ಯಾವುದೂ ಅರ್ಥವಾಗಲಿಲ್ಲ. ಗೊಂದಲಕ್ಕೆ ಬಿದ್ದಿದ್ದೆ..
ಬಹುಶಃ ಅದೇ ಗೊಂದಲ ಅವಳಲ್ಲಿತ್ತೋ ಇಲ್ಲವೋ ನಾ ಕಾಣೆ...
ಈ ಗೊಂದಲದ ಗೂಡಿನಲ್ಲಿಯೇ ಅನೇಕ ದಿನಗಳನ್ನೂ ದೂಡಿದೆವು...

--

ಪ್ರೇಮದ ಗುಂಗು ಅಪಾರ.. ಅದನ್ನು ಅದುಮಲು ಯತ್ನಿಸಿದಂತೆಲ್ಲ ಹೆಚ್ಚುತ್ತದೆ...
ಒಂದಿನ ಶುಭ ಮುಂಜಾನೆ ಕಾಲೇಜಿಗೆ ಬಂದವನೇ ಇವತ್ತು ನನ್ನ ಪ್ರೇಮದ ಪರಿಯನ್ನು ಅವಳಿಗೆ ತಿಳಿಸಲೇ ಬೇಕೆಂದು ನಿರ್ಧರಿಸಿದೆ...
ಆದರೆ ಆಕೆ ಆ ದಿನ ಬರಲೇ ಇಲ್ಲ...
ಮರು ದಿನ ಮತ್ತೆ ಯಥಾ ಪ್ರಕಾರ ಅದೇ ನಿರ್ಧಾರ..
ಆ ದಿನ ನಮ್ಮ ಕಾಲೇಜಿ ಎದುರಿನ ಚಿಕ್ಕ ುದ್ಯಾನಕ್ಕೆ ಕರೆದೊಯ್ದು ನನ್ನ ಮನದಾಳದ ಭಾವನೆಗಳನ್ನು ಹೇಳಿಯೇ ಬಿಟ್ಟೆ...

ಬೈಗುಳಗಳೋ.. ಮತ್ತೇನೋ ನಿರೀಕ್ಷೆಯಲ್ಲಿದ್ದೆ... ಹೂಂ ಅನ್ನಲಿಲ್ಲ.. ಊಹೂಂ ಅಂತಲೂ ಹೇಳಲಿಲ್ಲ..
ಮರುದಿನ ಸಿಗ್ತೇನೆ ಅಂದವಳು ನಾಲ್ಕು ದಿನ ನಾಪತ್ತೆ...
ಅಲ್ಲಿಗೆ ನನ್ನ ಪ್ರೇಮಕ್ಕೆ ದಿ ಎಂಡ್ ಗ್ಯಾರಂಟಿ ಅಂದುಕೊಂಡೆ...


ಐದನೇ ದಿನ ಬಂದಳು...
ಸಂಗೀತದಂತೆ...
ಬಂದವಳು ನನ್ನ ಕಣ್ಣನ್ನು ಸಾಕಷ್ಟು ಸಾರಿ ತಪ್ಪಿಸಲು ಯತ್ನಿಸಿದಳು..
ಕೊನೆಗೊಮ್ಮೆ ಸಿಕ್ಕಳು...
ಏನು..? ಎಂದೆ..
ಯೆಸ್ ಅಂದಳು...

ನನಗಂತೂ ಒಮ್ಮೆ ಆಕಾಶ ಕೈಗೆ ಸಿಕ್ಕಂತಹ ಅನುಭವ...
ಎದೆಯೊಳಗೆ ನೂರು ಗಿಟಾರು ಮೀಟಿದಂತಹ ಸಂಭ್ರಮ...

ಅದಾಗಿ ನಾಲ್ಕುದಿನ ನಾನು ಅಕ್ಷರಶಹ ನೆಲದಿಂದ ನಾಲ್ಕು ಇಂಚು ಮೇಲಿದ್ದೆ.. ಅಂದರೂ ತಪ್ಪಿಲ್ಲ..
ಮೊದಲ ಪ್ರೇಮದ ಮಧುರ ಭಾವನೆ ಅಂದರೆ ಇದೇ ಏನೋ... ಅದು ಹೀಗೆಯೇ ಇರ್ತದೇನೋ...
ಅಂತೂ ಇಂತೂ ಮೊಟ್ಟ ಮೊದಲ ಬಾರಿಗೆ ನಾನು ಇಷ್ಟಪಟ್ಟದ್ದು ನನ್ನ ಕೈಗೆ ಸಿಕ್ಕ ಸಂತಸ...

ಮುಂದಿನ ದಿನಗಳು ಅತ್ಯಂತ ಸಂಬ್ರಮದಿಂದ ಕಳೆದವು ಎನ್ನುವುದನ್ನು ಮತ್ತೆ ನಾನು ಹೇಳಬೇಕಿಲ್ಲವಲ್ಲ...
ಒಮ್ಮೆ ಅದೃಷ್ಟ ಕೈ ಹಿಡಿದರೆ ಎಲ್ಲಕಡೆಯಿಂದ ಒದ್ದುಕೊಂಡು ಬರ್ತದಂತಲ್ಲ ಅದೇ ರೀತಿ..
ಆ ದಿನಗಳಲ್ಲಿ ನನ್ನ ಹಾಡನ್ನು ಕೇಳಿದ ಅದ್ಯಾರೋ..
ಪ್ರಖ್ಯಾತ ಟಿ.ವಿ. ವಾಹಿನಿಯ ಸಂಗೀತ ಕಾರ್ಯಕ್ರಮಕ್ಕೂ ಆಯ್ಕೆ ಮಾಡಿ ಕಳಿಸಿದರು.
ಕಾರ್ಯಕ್ರಮ ಬಹಳ ಸಕ್ಸಸ್ಸೂ ಆಯಿತು...

ತೀರಾ ಬಹುಮಾನ ಗೆಲ್ಲದಿದ್ದರೂ 3 ನೇ ಸ್ಥಾನವನ್ನು ಗೆದ್ದುಕೊಂಡೆ...

ಆದರೆ ಮುಂದಿನ ದಿನಗಳು ದುರಂತಮಯವಾಗಿದ್ದವು..

(ಮುಂದುವರಿಯುವುದು...)

Monday, April 1, 2013

ಒಂದಿಷ್ಟು ಹನಿ ಚುಟುಕಗಳು

ಒಂದಿಷ್ಟು ಹನಿ ಚುಟುಕಗಳು


43)ತೋರಿಕೆಗಳು

ಭಾರತ ದೇಶದ
ಮೂರು ಜಗತ್ಪ್ರಸಿದ್ಧ
ತೋರಿಕೆಗಳೆಂದರೆ
ಗೊರಕೆ,
ತುರಿಕೆ ಹಾಗೂ
ಕಲಬೆರಕೆ..!!


44)ಲಕ್ ವಾ

ಲಕ್ ಲಕ್ ಎಂದು
ಪದೆ ಪದೇ ಹೇಳುತ್ತಾ
ಸಾಗುತ್ತಿದ್ದವನಿಗೆ
ಲಕ್ಕೋ ಎಂಬಂತೆ
ಲಕ್ವಾ ಹೊಡೆದುಬಿಟ್ಟಿತು..!!

45)ಸ್ಮಿತ

ಅವಳ ಹೆಸರೇನೋ
ಚೆಂದದ ಸ್ಮಿತ.!
ಆಕೆ ಬಾಯಿಬಿಟ್ಟರೆ ಮಾತ್ರ
ತಾಳಲಾರದ ಗಬ್ಬುನಾಥ...!!

 

46)ಮೊಡವೆ

ಮೊಡವೆ ಎಂದರೆ
ಹೆಣ್ಣು ಹುಡುಗಿಯ ಮೊಗದ
ಭಾವನೆಗಳು ಹೊರಹೋಗುವ
ಒಂದು way..!!

47)`ಕೋಲಾ'ಹಲ

ನಮ್ಮೂರಿನ ಯಶಸ್ವಿ ರೈತ
ಬೋರನಲ್ಲಿದೆ ಬೆಳೆದ ಸೋಂಪಾದ ಹೊಲ..!!
ಅದಕ್ಕೆ ಕಾರಣ ಹುಡುಕಿದಾಗ
ಸಿಕ್ಕಿದ್ದು ಮಾತ್ರ
ಕೋಕಾ ಕೋಲ..!!!