Friday, November 30, 2012

ನಿನ್ನ ನೆನಪು ಬಂದಾಗಲೆಲ್ಲ...



ನಿನ್ನ ನೆನಪು ಬಂದಾಗಲೆಲ್ಲ
ಬೇಸಿಗೆಯಲ್ಲೂ ಮಳೆ
ಬರುತ್ತದೆ ಗೆಳತೀ, ಕೊರೆವ
ಚಳಿಯೂ ಹಿತವೆನ್ನಿಸುತ್ತದೆ..||

ನಿನ್ನ ನೆನಪು ಬಂದಾಗಲೆಲ್ಲ
ಭಾವಗಳು ಹಾಡಾಗುತ್ತವೆ, ಗೆಳತೀ
ಮನಸುಗಳು ಹೂವಾಗುತ್ತವೆ..||

ನಿನ್ನ ನೆನಪು ಬಂದಾಗಲೆಲ್ಲ
ಕಣ್ಣೀರಿಗೂ ಅರ್ಥ ಬರುತ್ತದೆ ಗೆಳತೀ,
ಪ್ರತಿ ಮಾತೂ ವ್ಯರ್ಥವೆನ್ನಿಸುತ್ತದೆ...||

ನಿನ್ನ ನೆನಪು ಬಂದಾಗಲೆಲ್ಲ, ಸುಪ್ತ
ಪ್ರೀತಿಯ ಶೋಕಗೀತೆ ನೆನಪಾಗುತ್ತದೆ ಗೆಳತಿ,
ಕಂಡ ಕನಸುಗಳೆಲ್ಲ ಸದ್ದಿಲ್ಲದೇ ಕರಗುತ್ತವೆ...||

ನಿನ್ನ ನೆನಪು ಬಂದಾಗಲೆಲ್ಲ
ಉಸಿರು ಭಾರವೆನ್ನಿಸುತ್ತದೆ ಗೆಳತಿ,
ಸಂಗೀತದ ಮೋಡಿ ಚಿತ್ತ ಕಲಕುತ್ತಿದೆ..||

ನಿನ್ನ ನೆನಪುಬಂದಾಗಲೆಲ್ಲ, ಮತ್ತದೆ
ಪ್ರೀತಿ ಸೆಳೆಯುತ್ತದೆ ಗೆಳತೀ, ಈ
ಹೃದಯ ಪದೇ ಪದೆ ಹಿಂಡುತ್ತದೆ..
ಕಣ್ಣು ಮಂಜಾಗುತ್ತಿದೆ...||

(ಬರೆದಿದ್ದು: ದಂಟಕಲ್ನಲ್ಲಿ 09-02-2008ರಂದು)
(ವಿ.ಸೂ : ಮೇಲೆ ಹಾಕಿರೋ ಪೋಟೋವನ್ನು 4 ವರುಷದ ಹಿಂದೆ ಜೋಗ ಜಲಪಾತದ ತಳಭಾಗದಲ್ಲಿ ನಾನು ತೆಗೆದಿದ್ದು. ಜೋಗದ ಚಿತ್ರವನ್ನು ತೆಗೆಯೋಣ ಅಂತ ಕ್ಲಿಕ್ಕಿಸಿದ್ದು. ಕೊನೆಗೆ ಪ್ರಿಂಟ್ ಹಾಕಿಸಿದಾಗಲೇ ಇಷ್ಟು ಸುಂದರವಾಗಿ ಮೂಡಿಬಂದಿದ್ದು ಗೊತ್ತಾದದ್ದು. ಮಿತ್ರರಾದ ರಾಘವ, ಕೃಷ್ಣಮೂರ್ತಿ ಇವರು ಈ ಚಿತ್ರವನ್ನು ಚೆನ್ನಾಗಿ ವಿಮರ್ಷೆ ಮಾಡಿದ್ದಾರೆ. ಇದು ಹೇಗಿದೆ ಎಂಬುದನ್ನು ತಾವು ಹೇಳಬೇಕು.)

Thursday, November 29, 2012

ಕನಸಿನ ಪ್ರಶ್ನೆಗೆ ಉತ್ತರವಾಗಿ : ಪ್ರೇಮ ಪತ್ರ-2

ಪ್ರೇಮ ಪತ್ರ-2

ಕನಸಿನ ಪ್ರಶ್ನೆಗೆ ಉತ್ತರವಾಗಿ


ಒಲವಿನ ಗೆಳತಿ..,
    ನೀನ್ಯಾಕೆ ನನ್ನ ಮನಸ್ಸನ್ನು ಈ ಪರಿಯಲ್ಲಿ ಆವರಿಸಿದ್ದೀಯಾ? ಅದ್ಯಾಕೆ ನೀನು ನನ್ನೆದೆಯಾಳದ ಕೋಟೆಯೊಳಗೆ ಅವಿತುಕೊಂಡು ಹಗಲಿರುಳೂ ಮನದ ತುಂಬ ಪರಿತಾಪ ಮೂಡುವಂತೆ ಮಾಡುತ್ತೀಯಾ? ಬೆಳಗ್ಗಿನಿಂದ ಸಂಜೆಯ ತನಕ ಮಾಡಬಹುದಾಗಿದ್ದ ಎಲ್ಲ ಕೆಲವನ್ನೂ ಬದಿಗೊತ್ತಿ ಮಾತಾಡಿದ್ದು, ಕಾಡು ಹರಟೆ ಹೊಡೆದಿದ್ದು ನಿನಗಿನ್ನೂ ಸಾಕು ಎನ್ನಿಸಲಿಲ್ಲವೇ..? ಮತ್ಯಾಕೆ ನೀನು ನನ್ನ ಕನಸಲ್ಲಿ ಬಂದು ಮತ್ತೆ ಮತ್ತೆ ತಟ್ಟಿ ತಟ್ಟಿ ಎಬ್ಬಿಸುತ್ತೀಯಾ..? ಪದೇ ಪದೆ ಕನವರಿಸುವಂತೆ ಮಾಡುತ್ತೀಯಾ..?
    ನಿನ್ನೆ ಏನಾಯ್ತು ಗೊತ್ತಾ..? ಬೆಳಿಗ್ಗೆ ಎದ್ದ ಕೂಡಲೇ ಕನ್ನಡಿಯೊಳಗೆ ಇಣುಕಿದೆ. ಮುಖದ ಮೇಲೆ ಹಸಿ ಹಸಿ ಮೊಡವೆ. ಹಣ್ಣಾಗುವ ಲಕ್ಷಣಗಳನ್ನು ತೋರಿಸ್ತಾ ಇದೆ.! ಆ ತಕ್ಷಣ ನನಗೆ ಸುದೀಪನ `ಮೈ ಆಟೋಗ್ರಾಫ್' ಸಿನಹೆಮಾದಲ್ಲಿ ಆತನ ತಾಯಿ ಅವನ ಬಳಿ `ನಿನ್ನ ಮೇಲೆ ಯಾವುದೋ ಹುಡುಗಿಯ ಕಣ್ಣು ಬಿದ್ದಿರಬೇಕು' ಎಂದು ಹೇಳಿದ ಡೈಲಾಗ್ ನೆನಪಾಯ್ತು. ನನ್ನ ಮುಖದ ಮೇಲೆ ಎದ್ದಿರುವ ಮೊಡವೆಗೆ ಒಡತಿ ನೀನೇ ಬಿಡು. ಅದರಲ್ಲಿ ಎರಡು ಮಾತಿಲ್ಲ.
    ಹೇಯ್ ಮರೆತೇ ಬಿಟ್ಟಿದ್ದೆ ನೋಡು.. ನಾನು ಕೊಡಿಸಿದ್ನಲ್ಲಾ.. ಕ್ರೀಂ ಕಲರಿನ ಟೆಡ್ಡಿ ಬೇರ್. ನಿನ್ನ ಬೆಚ್ಚನೆಯ ತಬ್ಬುಗೆಯಲ್ಲಿ ಹಿತವಾಗಿ ಮಲಗಿದೆಯೇನೋ ಅಲ್ವಾ? ಏನು..? ಇನ್ನೂ ಮಲಗಿಲ್ವಾ? ಅದೂ ಕೂಡ ನೆನಪಿನ ಊಟೆಯಲ್ಲಿ ಮಿಂದೇಳ್ತಾ ಇರಬಹುದು ಬಿಡು..
    ಈಗಂತೂ ನಿನ್ನ ನೆನಪು ಅದ್ಯಾವಪರಿ ನನ್ನನ್ನು ಹಿಂಡಿ ಹಿಪ್ಪೆ ಮಾಡ್ತಾ ಇದೆ ಗೊತ್ತಾ..ಯಾವಾಗ ನಿಶೆ ಕಳೆದು ಬಾನಂಚಿನಲ್ಲಿ ಭಾಸ್ಕರ ಮೂಡಿ ಮೊದಲ ಕಿರಣಗಳು ಭೂಮಿಯನ್ನು ಚುಂಬಿಸುತ್ತದೆಯೋ ಎಂಬುದನ್ನು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದೇನೆ. ಯಾಕಂದ್ರೆ ಬೆಳಕು ಹರಿದರೆ ಸಾಕು ನಾನು ಓಡೋಡಿ ಬಂದು ನಿನ್ನನ್ನು ಕಾಣುತ್ತೇನೆ. ಮಾತಾಡುತ್ತೇನೆ. ಮೌನವನ್ನು ಸೀಳುತ್ತೇನೆ.. ಅಲ್ವಾ.. ಹಾಗೇ ನೀನು ಕಂಡೊಡನೆ ತುಟಿಯಂಚಿನಲ್ಲಿ ತುಂಟದೊಂದು ಕಿರುನಗೆಯನ್ನು ಎಸೆಯುತ್ತೀಯಲ್ಲಾ ಅದನ್ನು ಯಾವಾಗ ಕಾಣುತ್ತೀನೋ ಎಂಬ ತವಕ ನನ್ನ ಮನದೊಳಗೆ. ಹಾಳಾದ ಸಂಜೆ.. ಯಾಕೆ ಇಷ್ಟು ಲೇಟಾಗಿ ಸರಿಯುತ್ತಿದೆಯೋ..
    ಟೈಮಿಗಂತೂ ಸೆನ್ಸೇ ಇಲ್ಲ. ಯಾವಾಗ ಓಡಬೇಕೋ ಆಗ ಓಡೋದೆ ಇಲ್ಲ. ಟಕಾ ಟಕಾ.. ಅಂತ ನಿಧಾ......ನ ಓಡ್ತಾ ಇದೆ. ಅದಕ್ಕೇನು ಗೊತ್ತು ನನ್ನ ಪರಿತಾಪ..? ಪ್ರೀತಿಯ ಬಗ್ಗೆ ಆ ಮಿಷೀನಿಗೆ ಅರಿವಾದರೂ ಹೇಗಿರಬೇಕು ಹೇಳು. ಸಮಯದ ಕೈಗೊಂಬೆ ಅದು. ಟೈಂ ತೋರಿಸೋ ಭರದಲ್ಲಿ ತಾನು ಪ್ರೀತಿ ಎಂಬ ವಿಸ್ಮಯವನ್ನು ಕಳೆದುಕೊಳ್ಳುತ್ತಿದ್ದೇನೆ ಎಂಬುದನ್ನೂ ಗೊತ್ತು ಮಾಡಿಕೊಳ್ಳಲಾಗದಂತಹ ವಿಚಿತ್ರ ಯಂತ್ರ ಅದು. ಹೋಗ್ಲಿ ಬಿಡು. ಅದಕ್ಕೇ ಅಂದು ಏನು ಪ್ರಯೋಜನ..?
    ಹಾಂ.. ಮರೆತಿದ್ದೆ ನೋಡು. ನಾಳೆ ಬರುವಾಗ ಖಂಡಿತವಾಗಿಯೂ ಆ ಪುಟ್ಟ ನವಿಲುಗರಿಯನ್ನು ತರುತ್ತೇನೆ. ನವಿಲುಗರಿಯಾ ಅದು.. ಊಹುಂ ಅಲ್ಲ. ನವಿಲುಗರಿಯ ಮರಿ ಎನ್ನಬಹುದು. ನೀನು ನನ್ನ ಮನೆಗೆ ಬಂದಿದ್ದಾಗ, ನಿನ್ನ ಸಂಗಡ ಗುಡ್ಡೇ ತೋಟ ಗಣೇಶನ ದೇವಳಕ್ಕೆ ಹೋಗುವಾಗ ಮಾರ್ಗ ಮಧ್ಯದಲ್ಲಿ ಸಿಕ್ಕಿತ್ತು. ಚಕ್ಕನೆ ಎತ್ತಿಕೊಂಡು ನಿನಗೆ ಕೊಟ್ಟಿದ್ದೆ. ದಾರಿಯಲ್ಲೆಲ್ಲಾದರೂ ಕಳೆದುಹೋದೀತು.. ಮನೆಯ ತನಕ ನೀನೆ ಇಟ್ಟುಕೋ ಎಂದವಳಿಗೆ ಕೊನೆಗೆ ಮರೆತು ಹೋಗಿತ್ತು. ಕಡೆಗೊಮ್ಮೆ ನೆನಪಾಗಿ ಕೊಡು ಎಂದು ಕಾಡಿದ್ದೆಯಲ್ಲ. ನಾಳೆ ಮಿಸ್ ಮಾಡದೇ ತರುತ್ತೇನೆ. ಅದು ನನ್ನ ಕಬೋರ್ಡಿನಲ್ಲಿ ಮಿನುಗುತ್ತಾ ಕುಳಿತಿದೆ. ಅದೆಷ್ಟೋ ವರ್ಣಗಳ ಚಿಕ್ಕ ಚುಲ್ಟಾರಿ ನವಿಲುಗರಿಗೂ ನಾಳೆ ನಿನ್ನನ್ನು ತಲುಪುವ ತವಕ.
    ಆಯ್ತು.. ಆಯ್ತು... ಖಂಡಿತ ಹಾಗೇ ಮಾಡ್ತೀನಿ.. ನೀ ಹೇಳಿದ ಹಾಗೆಯೇ ಆ ಹಸಿರು ಬಣ್ಣದ ಟಿ-ಷರ್ಟ್ ಹಾಕಿಕೊಂಡೇ ಬರ್ತೀನಿ. ಕಾಲೇಜಿನ ಟ್ರಿಪ್ ಸಂದರ್ಭದಲ್ಲಿ ಶಿವಮೊಗ್ಗೆಯ ಯಾವುದೋ ಬಝಾರಿನಲ್ಲಿ ನನಗಾಗಿ ನೀನು ಕೊಂಡು ತಂದ ಷರ್ಟ್ ಅದು. ನನ್ನ ಜೀವಾಳವೂ ಹೌದು. ಬೆನ್ನಮೇಲೊಂದು ದೊಡ್ಡ ಅಕ್ಷರಗಳಲ್ಲಿ ಬರೆದ ಯು ಕ್ಯಾನ್ ವಿನ್ ಎಂಬ ಬರಹ.. ಎದುರು ಭಾಗದಲ್ಲಿ ಚಿಕ್ಕ ಗಿಟಾರಿನ ಚಿತ್ರ.. ಯಾಕೆ ನಿನಗೆ ಇಂತಹ ವಿಶಿಷ್ಟ ಟೇಸ್ಟು ಅಂತ ಅರ್ಥ ಆಗ್ತಾ ಇಲ್ಲ. ವಿಭಿನ್ನ ಇಂಟರೆಸ್ಟಿನ ನಿನ್ನ ಈ ಟೀಷರ್ಟ್ ನನ್ನ ಪಾಲಿನ ಅಮೂಲ್ಯ ಆಸ್ತಿ. ಇದನ್ನು ಬಹಳ ಜೋಪಾನವಾಗಿ ಕಾಯ್ದಿಟ್ಟುಕೊಳ್ಳುತ್ತೇನೆ.
    ಸಾಕು.. ಸಾಕು.. ಇನ್ನು ಸಾಕು ಮಾಡ್ತೀನಿ.. ರಾತ್ರಿ ಒಂದೋ ಎರಡೂ ಆಯ್ತು ಇರಬೇಕು ಗಂಟೆಗಳು. ಮನೆಯ ಮಹಡಿಯ ಮೇಲೆ ಕುಳಿತವನಿಗೆ ದೂರದಲ್ಲೆಲ್ಲೋ ಸುಟ್ರನಕ್ಕಿ ಕಿಟ್ಟನೆ ಕಿರುಚಿದ ಅನುಭವಗಳು. ನೀರವತೆ.. ನಾಳೆ ಸಿಗುವ ಮೊದಲು ಈ ಏಕಾಂತ ಪರಿಹಾರಕ್ಕಾಗಿ ಸುಮ್ಮನಿರಲಾರದೇ ಬರೆದ ಬರಹ ಇದು. ಬೇಸರಿಸದಿರು ಮನವೇ. ಇನ್ನು ಹೆಚ್ಚು ಬರೆಯಲಾರೆ ಗೆಳತಿ..
    ನಿನ್ನ ಸವಿ ನೆನಪೆ ಮನದಲ್ಲಿ ಆರಾಧನೆ...
    ....ಪ್ರೀತಿಯ ಉಪಾಸನೆ..

    ನಾಳೆ ಬೆಳಗ್ಗೆ ಮುಂಜಾನೆ ಬಂದು ನಿನ್ನನ್ನು ಕಂಡು ಇದನ್ನು ಕೊಟ್ಟಾಗ ನಿನ್ನ ಮನದಲ್ಲಿ ಮೂಡುವ ಭಾವನೆಗಳನ್ನು ನಾನು ಗಮನಿಸಬೇಕು. ಆಗ ಮಾತ್ರ ನನಗೆ ಏನೋ ಒಂಥರಾ.. ಟಿಡ್ಡಿ ಬೇರ್ ಜೊತೆ ಬೆಚ್ಚಗಿರು. ನಾಳೆ ಸಿಗುತ್ತೇನೆ.
    ಮಿಸ್ ಯೂ..

ಇಂತಿ ನಿನ್ನವ

Wednesday, November 28, 2012

ಅಘನಾಶಿನಿ ತೀರದ ಮೌನ ತಪಸ್ವಿಯ ನೆತ್ತಿಯ ಮೇಲೆ ಕುಳಿತು...

 ಅಘನಾಶಿನಿ ತೀರದ ಮೌನ ತಪಸ್ವಿಯ ನೆತ್ತಿಯ ಮೇಲೆ ಕುಳಿತು...

ಲೆಕ್ಖ ಹಾಕಿದರೆ ಅದೆಷ್ಟು ಶತ ಸಹಸ್ರ ಮೀರುತ್ತದೆಯೇನೋ. ಅಷ್ಟು ಸಹಸ್ರಸಾರಿ ನಾನು ಹೋಗಿ ಅಲ್ಲಿ ಕುಳಿತೆದ್ದು ಬಂದಿದ್ದೇನೆ. ನನ್ನ ಅತ್ಯಂತ ಪ್ರೀತಿಯ ಜಾಗ. ಅಘನಾಶಿನಿ ತೀರದ ಇಷ್ಟದ ಸ್ಥಳಗಳ ಸಾಲಿನಲ್ಲಿ ಇದು ಮೊದಲನೆಯದು ಎಂದರೆ ತಪ್ಪಿಲ್ಲ. ಅದು ನನ್ನ ಸ್ಫೂತರ್ಿಯ ಸ್ಥಳ. ಕವನಗಳನ್ನು ಕಟ್ಟಲು ಕಾರಣವಾದ ಸ್ಥಳ. ನನ್ನೊಳಗಿನ ಕವಿಯನ್ನು ಉದ್ದೀಪನಗೊಳಿಸಿ ಕವಿಭಾವಕ್ಕೊಂದು ರೂಪ ನೀಡಿದ ಜಾಗ. ಬೇರೆನೂ ಅಲ್ಲ. ಅದೊಂದು ದೈತ್ಯ ಕಲ್ಲು ಬಂಡೆ.
    ಸುತ್ತಲೂ ಜುಳು ಜುಳು ನಿದಾದವನ್ನು ಹೊರಡಿಸುತ್ತ ನರ್ತನ ಮಾಡುತ್ತ ಹರಿಯುವ ಅಘನಾಶಿನಿ ನದಿ. ಆಗಾಗ ಆರ್ಭಟ, ಹೆಚ್ಚಿನ ಕಾತ ನೀರ ನರ್ತನದ ತನನ. ಯಾಕೋ ಈ ಕಲ್ಲುಬಂಡೆ ನನಗೆ ಬಹಳ ಆಪ್ತವಾಗಿದೆ. ಈ ಬಂಡೆ ಅದೆಷ್ಟು ನನ್ನನ್ನು ಕಾಡಿಸಿ, ಹಿಡಿದು ಇಟ್ಟುಕೊಂಡಿದೆ ಎಂದರೆ... ಮನಸ್ಸೆಷ್ಟೇ ಬೇಸರದಲ್ಲಿರಲಿ ಅಲ್ಲಿ ಹೋಗಿ ಆ ಬಂಡೆಯ ಮೇಲೆ ಕುಳಿತುಬಿಟ್ಟರೆ ಸಾಕು ಮನಸ್ಸಿನ ಎಲ್ಲ ಬೇಸರ ಮೂಟೆಗಳು ಕರಗಿ ಹರ್ಷ ಮನೆಮಾಡುತ್ತದೆ. ಖುಷಿ ಒಳಗೊಳಗೆ ಮೂಡಿ ನವ ಚೈತನ್ಯ ಚಿಮ್ಮುತ್ತದೆ.
    ಈ ಬಂಡೆಗಲ್ಲಿನ ಮೇಲೆ ನಾನು ಕುಳಿತಷ್ಟು ಮತ್ಯಾರೂ ಕುಳಿತಿಲ್ಲವೇನೋ. ನನ್ನ ದುಃಖ, ಸಂತಸಗಳಿಗೆ ಈ ಬಂಡೆಯೇ ಹೆಚ್ಚಿನ ಕಾಲ ಕೇಳುಗ, ನೋಡುಗ, ಜೊತೆಯಲ್ಲಿ ಮಾತನಾಡುವ ದೋಸ್ತಿ. ನನ್ನ ಏರಿಳಿವುಗಳಿಗೆ ಈ ಬಂಡೆಯೇ ಸಾಕ್ಷಿ ಎಂದರೂ ತಪ್ಪಿಲ್ಲ. ಅಘನಾಶಿನಿ ನದಿಗಂತೂ ಈ ಬಂಡೆಗಲ್ಲು ಹಾಗೂ ನನ್ನ ದೋಸ್ತಿಯ ಕುರಿತು ಬಹಳ ಹೊಟ್ಟೆಕಿಚ್ಚು ಕಣ್ರೀ. ಅದಕ್ಕೆ ಮಳೆಗಾಲ ಸೇರಿದಂತೆ ಆರುತಿಂಗಳಿಗೂ ಹೆಚ್ಚಿನ ಕಾಲ ನನ್ನನ್ನು ಈ ಬಂಡೆಗಲ್ಲಿನ ಬಳಿಗೆ ಹೋಗದಂತೆ ತಡೆದು, ಅದನ್ನು ಅಪ್ಪಿ ಹಿಡಿದುಬಿಡುತ್ತದೆ. ಮುಂದಿನ ಆರು ತಿಂಗಳುಗಳ ಕಾಲ ನಾನು ಅಘನಾಶಿನಿಯನ್ನು ಅಣಕಿಸುತ್ತ ಕೂರುತ್ತೇನೆ.
    ಈ ದೊಡ್ಡ ಕಲ್ಲಿಗೆ ನಮ್ಮೂರಿನಲ್ಲಿ ಆನೆಗಲ್ಲು ಅಥವಾ ಆನೆಕಲ್ಲು ಎನ್ನುತ್ತಾರೆ. ಕೆಲವು ಮಂದಿ ಇದು ಆನೆಕಲ್ಲಲ್ಲ ಎಂದೂ ಹೇಳುತ್ತಾರಾದರೂ ನಾನು ಇದಕ್ಕೆ ಆನೇಕಲ್ಲು ಎಂದು ವಿಧ್ಯುಕ್ತವಾಗಿ ನಾಮಕರಣ ಮಾಡಿ ಅದಕ್ಕೊಂದು ಜೀವ ಕೊಡುವ ಯತ್ನ ಮಾಡಿದ್ದೇನೆ. ನನಗೆ ಅಲ್ಪಸ್ವಲ್ಪ ನಡೆಯಲು ಬರುತ್ತಿದ್ದ ಸಂದರ್ಭ. ನೆನಪೆಲ್ಲ ಇನ್ನೂ ಮಾಸಲು ಮಾಸಲಾಗಿದ್ದಾಗ ಅಮ್ಮ ನನ್ನನ್ನು ಇಲ್ಲಿಗೆ ಕರೆದುಕೊಂಡು ಬರುತ್ತಿದ್ದಳು. ಯಾವಾಗಲೂ ಅಲ್ಲ. ತಿಂಗಳಿಗೊಮ್ಮೆ ಮುಟ್ಟಾದಾಗ ಅವಳಂತೆ ಊರಿನ ಒಂದೆರಡು ಸೊಸೆಯರು ಈ ಕಲ್ಲಿನ ಮೇಲೆ ಬಂದು ಸುದ್ದಿ ಹೇಳುತ್ತಿದ್ದರು. ಆಗೆಲ್ಲ ಅಮ್ಮ ನನ್ನನ್ನು ಕರೆದುಕೊಂಡು ಬರುತ್ತಿದ್ದಳು. ಆಕೆ ಆಕೆಯ ದೋಸ್ತಿಣಿಯರ ಜೊತೆ ಮಾತಾಡುತ್ತಿದ್ದರೆ ನಾನಂತೂ ಆನೆಕಲ್ಲಿನ ಬುಡದಲ್ಲಿ ಕಾಲನ್ನು ಇಳಿಬಿಟ್ಟುಕೊಂಡು ಮಿಸುಕಾಡದೇ ಕುಳಿತುಬಿಡುತ್ತಿದ್ದೆ. ಹೀಗೆ ಕುಳಿತಾಗ ನಮ್ಮ ಬಳಿಗೆ ಬರುವ ಮೀನುಗಳು ಕಾಲಿಗೆ ಕಚ್ಚಿ ಕಚಗುಳಿ ನೀಡುವುದನ್ನು ಬಹಳ ಬೆರಗಿನಿಂದ ಸವಿಯುತ್ತಿದ್ದೆ.
    ಆ ಮೇಲೆ ಈ ಆನೆಕಲ್ಲಿನ ಬುಡದ ಸಾಧಾರಣ ಗಾತ್ರದ ಹೊಂಡ ನನ್ನಂತಹ ತುಡುಗು ಹುಡುಗರಿಗೆ ಈಜುಕೊಳವಾಯಿತು. ಈಜು ಕಲಿಯುವ ತಾಣವಾಯಿತು. ಬೇಸಿಗೆ ರಜೆ ಬಂತೆಂದರೆ ಮದ್ಯಾಹ್ನದ 1 ಗಂಟೆಯ ಕಾಲವನ್ನು ಬಿಟ್ಟರೆ ಹಗಲಿಡಿ ಈ ಕಲ್ಲಿನ ಬುಡದಲ್ಲಿ ಈಸು ಬೀಳುವುದು ನಮ್ಮ ಪರಮಾಪ್ತ ಕಾರ್ಯವಾಗಿತ್ತು. ನನ್ನ ವೋರಗೆಯ 8-10 ಹುಡುಗರು ಸೇರಿ ಹೊಳೆಗೆ ಬಿದ್ದೆವೆಂದರೆ ಮೀನುಗಳೆಲ್ಲ ಕಕ್ಕಾಬಿಕ್ಕಿ. ಕಂತು ಈಸ ಹೊಡೆಯುವುದು, ನೀರೊಳಗೆ ಕಣ್ಣು ಬಿಟ್ಟು ಈಜುವುದು, ಯಾರು ಜಾಸ್ತಿ ಹೊತ್ತು ನೀರಿನಲ್ಲಿ ಮುಳುಗುಹಾಕುತ್ತಾರೆ ಎಂದು ಪಂಥ ಕಟ್ಟುವುದು, ಹೊಳೆಯ ನೀರು ಚಳಿ ಮಾರಾಯ ಎಂದು ಹೇಳುತ್ತ ಆನೆಕಲ್ಲಿನ ಮೇಲೆ ಕುಳಿತು ಸೂರ್ಯ ರಶ್ಮಿಗೆ ಬೆನ್ನು ಒಡ್ಡಿ ಕುಳಿತು ಅದು ನೀಡುವ ಆನಂದವನ್ನು ಸವಿಯುವುದು ನನಗಿನ್ನೂ ನೆನಪಿದೆ.
    ಈ ಕಲ್ಲಿನ ಮೇಲೆಯೇ ನಮ್ಮ ಕಿಲಾಡಿತನಗಳು ಅನಾವರಣಗೊಳ್ಳುತ್ತಿದ್ದುದೂ ಉಂಟು. ಯಾರದ್ದೋ ಮನೆಯ ಬಾಳೆ ಹಣ್ಣಿನ ಗೊನೆಯನ್ನು ಕದ್ದು ತಂದರೆ ಈ ಕಲ್ಲಿನಮೇಲೆಯೇ ಅವನ್ನು ಹಸಗೆ ಮಾಡಿಕೊಳ್ಳುತ್ತಿದ್ದೆವು. ಈ ಬಂಡೆಗಲ್ಲಿನ ಆಜು ಬಾಜಿನಲ್ಲಿ ಅಪ್ಪೆಮಿಡಿ ಮರಗಳ ಸಾಲು ಸಾಲೇ ಇದ್ದವಲ್ಲ ಅವುಗಳಿಗೆ ಅಡ್ಡಬಡ್ಚಿಗೆ ಹೊಡೆದು ಅಪ್ಪೆಮಿಡಿಯನ್ನು ಕೆಡವಿ ಅದಕ್ಕೆ ಉಪ್ಪು ಹಾಕಿಕೊಂಡು ತಿನ್ನುತ್ತಿದ್ದುದು ಇನ್ನೂ ನೆನಪಿದೆ. ಅಷ್ಟೇ ಏಕೆ ವಿಪರೀತ ಸೊನೆಯಿಂದ ಕೂಡಿರುತ್ತಿದ್ದ ಈ ಅಪ್ಪೆ ಮಿಡಿಯನ್ನು ತಿನ್ನುವಾಗ ಬಾಯಿಗೆಲ್ಲ ಸೊನೆ ತಾಗಿಸಿ ಸುಟ್ಟುಕೊಂಡಿದ್ದೂ ಇನ್ನೂ ಹಚ್ಚ ಹಸುರಾಗಿದೆ. ನನಗಿಂತಲೂ ನನ್ನ ಪ್ರೀತಿಯ ಬಂಡೆಗಲ್ಲಿಗೆ ಇದು ಇನ್ನೂ ಸ್ಫಷ್ಟವಾಗಿ ನೆನಪಿದೆ.
       ಇಷ್ಟೇ ಅಲ್ಲ. ಪ್ರತಿದಿನ ನಾನು ಓಡಿ ಬಂದು ಈ ಬಂಡೆಯ ಮೇಲೆ ಕುಳಿತು ಅಕ್ಕಪಕ್ಕದ ವಾಟೆ ಮಟ್ಟಿಯ ಸಾಲುಗಳ ಒಡಲಿನಿಂದ ಕೇಳಿಬರುವು ಹಕ್ಕಿಗಳ ವಿವಿಧ ರೀತಿಯ ನಾದ ತರಂಗಗಳನ್ನು ಸವಿದಿದ್ದೇನೆ. ಈ ಬಂಡೆಗಲ್ಲಿನ ಮೇಲೆ ಅಂಗಾತ ಮಲಗಿ ಆಕಾಶದಲ್ಲಿ ಓಡೋಡಿ ಹೋಗುವ ಮೋಡಗಳನ್ನು ಕಣ್ತುಂಬಿಕೊಳ್ಳುವುದು, ಅಪ್ಪೆ ಮಿಡಿಗಳು ಕಸ್ತ್ರಬಿಡುವ ವೇಳೆಯಲ್ಲಿ ಸುಳಿದು ಬರುವ ಗಾಳಿ ತಂದು ಕೊಡುವ ಸುಮಧುರ ವಾಸನೆಯನ್ನು ಮನದಣಿಯೆ ಆಘ್ರಾಣಿಸಿದ್ದೇನೆ. ಎಲ್ಲಕ್ಕಿಂತ ಮಿಗಿಲಾಗಿ ಈ ಬಂಡೆಗಲ್ಲಿನ ಮೇಲೆಯೇ ನಾನು ಅದೆಷ್ಟೋ ಚೆಂದದ ಪುಸ್ತಕಗಳನ್ನು ಓದಿದ್ದೇನೆ.
    ಈ ಬಂಡೆಗಲ್ಲು ನನಗೊಬ್ಬನಿಗೇ ಅಲ್ಲ.. ಇನ್ನೂ ಹಲವರಿಗೆ ಆಪ್ತವಾಗಿದೆ. ಮಿತ್ರನೊಬ್ಬ ಈ ಬಂಡೆಗಲ್ಲಿನ ಮೇಲೆ ಕುಳಿತು `ನನಗೆ ಅವಳು ಮೋಸ ಮಾಡಿಬಿಟ್ಟಳು ಕಣೋ ವಿನು..' ಅಂದಿದ್ದ. ನನ್ನ ಜೊತೆ ಖುಷಿಯಾಗಿ ಬಂದಿದ್ದ ಅವಳಿಗೆ ನನ್ನ ಮನಸ್ಸಿನ ತುಮುಲಗಳನ್ನು ಹೇಳಿಕೊಳ್ಳಲು ಆಗದೇ ಕಂಗಾಲಾಗಿದ್ದು ಇದೇ ಬಂಡೆಯ ಮೇಲೆ. ಇವುಗಳ ಜೊತೆಗೆ ಅವಿಭಕ್ತ ಕುಟುಂಬದ ನಮ್ಮ ಮನೆಯ ಅನೇಕ ಹಿಸೆ ಪಂಚಾಯ್ತಿಯ ಪ್ಲಾನುಗಳು ಈ ಕಲ್ಲಿನ ಮೇಲೆಯೇ ರೂಪುಗೊಂಡಿದೆ ಅನ್ನುವುದು ಓಪನ್ ಸೀಕ್ರೇಟ್ ಸಂಗತಿ. ಇಷ್ಟೆಲ್ಲ ರಸನಿಮಿಷಗಳನ್ನು ಈ ಬಂಡೆಗಲ್ಲು ನನಗೆ ತಗೋ ಮಾಣಿ.. ನಿನನ್ನ ಮಾತಿಗೆ ನನ್ನ ಕಾಣಿಕೆ ಅಂತ ನೀಡಿಬಿಟ್ಟಿದೆ.
    ಹಾಂ.. ಇಷ್ಟೆಲ್ಲ ವಿಷಯಗಳ ಜೊತೆಗೆ ಮುಖ್ಯ ಸಂಗತಿಯನ್ನೇ ಮರೆತಿದ್ದೆ ನೋಡಿ.. ಅದೆಂದರೆ, ಈ ಕಲ್ಲುಬಂಡೆಯ ಬುಡದಲ್ಲಿ ಹಾಕುತ್ತಿದ್ದ ಕಾಲುಸಂಕ. ನಮ್ಮೂರಿನ ಹಿರಿಕಿರಿಯ ಜೀವಗಳೆಲ್ಲ ಸೇರಿ ಅಘನಾಶಿನಿಯ ಆರ್ಭಟ ಕಡಿಮೆಯಾಗಿ ಸೌಮ್ಯ ಸುಕೋಮಲೆಯ ರೂಪ ತಾಳುತ್ತಿದ್ದ ಸಂದರ್ಭದಲ್ಲಿ ಈ ಕಲ್ಲಿನ ಬುಡಕ್ಕೆ ಮೂರ್ನಾಲ್ಕು ದೈತ್ಯ ಅಡಿಕೆ ಮರದ ತುಂಡುಗಳನ್ನು ಹೊತ್ತುತಂದು ಸಂಕ ಹಾಕುತ್ತಾರೆ. ಈ ಸಂಕ ನಮ್ಮೂರಿಗೂ, ಪಕ್ಕದ ಹಿತ್ಲಕೈ ಊರಿಗೂ ಬೇಸಿಗೆಯಾದ್ಯಂತ ಸಂಚಾರ ವ್ಯವಸ್ಥೆಯನ್ನು ಕಕ್ಲಿಸುತ್ತದೆ. ಇದಕ್ಕೂ ಮಿಗಿಲಾಗಿ ಈ ಕಾಲು ಸಂಕ ನಮ್ಮೂರಿನ ಹುಡುಗರಿ ಈಜುವ ಮನಸ್ಸಿಗೆ ನೀರೆರೆಯುತ್ತದೆ. ಈ ಸಂಕದ ಮೇಲಿಂದ ನಮ್ಮೂರಿನ ಹುಡುಗರು ನೀರಿನಾಳಕ್ಕೆ ಡೈವ್ ಹೊಡೆಯುತ್ತಿದ್ದರೆ... ಆಹಾ.. ಸ್ವರ್ಗಸುಖ. ಇಂತಹ ದಿವ್ಯಕಾರ್ಯಕ್ಕೆ ಸದ್ದಿಲ್ಲದೇ ಮೆಟ್ಟಿಲಾದದ್ದು ನನ್ನ ಪ್ರೀತಿಯ ಬಂಡೆಗಲ್ಲು.
    ಕಾಲ ಎಂದಿನಂತೆ ಇರುವುದಿಲ್ಲ ನೋಡಿ. ಕಾಲನ ಆರ್ಭಟವೋ ಅಥವಾ ಆಧುನಿಕತೆಯ ಭೀಖರ ಪರಿಣಾಮವೋ.. ನನ್ನ ಪ್ರೀತಿಯ ಕಲ್ಲಿಗೂ ಅದರ ಭೀಖರತೆ ಕಾಡುತ್ತಿದೆ ಸಾರ್.. ಏನು ಮಾಡಬೇಕೆಂದು ತೋಚದೇ ಒದ್ದಾಡುತ್ತಿದ್ದೇನೆ. ಮಳೆಗಾಲದಲ್ಲಿ ಬಳುಕಿ, ಬಳಸಿ ತಬ್ಬಿ ಹಿಡಿದಿದ್ದ ಅಘನಾಶಿನಿಯ ನೀರಿನ ಸುಳಿಗಳು ಕಲ್ಲುಬಂಡೆಯ ಮೇಲೆ ಉಂಟು ಮಾಡಿದ್ದ ಆಕೃತಿಗಳು ಚಿತ್ತಾರಗಳೆಲ್ಲ, ಹೊಪ್ಪಳಿಕೆ ಎದ್ದಂತೆ ಏಳುತ್ತಿವೆ. ಮೀನಿಗಾಗಿ ಬಾಂಬು ಹಾಕುವವರ ಬಾಂಬಿನ ಢಾಂ..ಗೆ ಕಲ್ಲು ಗಡಗಡನೆ ನಡುಗುತ್ತಿದೆ. ಅದೆಷ್ಟು ಮೂಕವಾಗಿ ರೋಧಿಸುತ್ತಿದೆಯೋ. ನಾನು ನನ್ನ ಭಾವನೆಗಳನ್ನು ಅದರ ಬಳಿ ಹಂಚಿಕೊಂಡಂತೆ ಅದೂ ನನ್ನ ಬಳಿ ಏನೋ ಹೇಳಲು ತವಕ ಗೊಂಡಂತೆ ನನಗೆ ಇತ್ತಿತ್ತಲಾಗಿ ಅನ್ನಿಸುತ್ತಿದೆ. ಅಘನಾಶಿನಿ ನದಿಗೆ ಅದೆಂತೆಂತದ್ದೂ ಯೋಜನೆಗಳು ಬರುತ್ತವೆ ಎನ್ನುವ ಭಯನೀಡುವ ಸುದ್ದಿಗಳು ಜೋರಾಗುತ್ತಿವೆ. ಈ ಯೋಜನೆಗಳ ಗೋಜಿನಲ್ಲಿ ನಾನು ನನ್ನ ಮಿತ್ರ ಆನೆಕಲ್ಲು ಒದ್ದಾಡುತ್ತಿದ್ದೇವೆ.
    ಕ್ರಮೇಣ ಮನಸ್ಸು ಬಾಲ್ಯದ ಖುಷಿ ಸಂಗತಿಯೆಡೆಗೆ ಹೊರಳುತ್ತದೆ. ಕಾಲ ಸರಿದಂತೆಲ್ಲ ಬಾಲ್ಯದ ಜಾಗದಲ್ಲಿ ಮುಪ್ಪು ಅಡರಿಕೊಳ್ಳುತ್ತದೆ. ನನ್ನನ್ನೂ, ನನ್ನಂತಹ ಅದೆಷ್ಟೋ ತುಡುಗರನ್ನೂ, ನೂರಾರು ತಲೆಮಾರನ್ನೂ ಕಂಡ ಆನೇಕಲ್ಲು ನನ್ನ ತಲೆಮಾರಿನಲ್ಲೇ ಕಾಣೆಯಾಗಿಬಿಡುತ್ತದಾ? ಯಾವುದೋ ಮೀನಿನ ಚಪಲದ ಮನುಷ್ಯನ ಬಾಂಬಿಗೆ ಈ ಕಲ್ಲು ಹೋಳಾಗಿಬಿಡುತ್ತದಾ ಎಂಬ ಭಯ ಕಾಡುತ್ತಿದೆ. ನನ್ನ ಹಾಗೂ ನನ್ನಂತಹ ನೂರಾರು ಜನರ ಭಾವನೆಗಳಿಗೆ ಸಾಕ್ಷಿಯಾಗಿರುವ ಈ ಆನೆಗಲ್ಲು ಮಾತ್ರ ಶತ ಸಹಸ್ರಮಾನಗಳಿಂದ ನಡೆದು ಪಂದ ಪ್ರಕೃತಿಯ ಆಟ, ಪ್ರಕೃತಿ-ಮಾನವನ ಹೊಡೆದಾಟಗಳಿಗೆ ಮೌನತಪಸ್ವಿಯಾಗಿ ನಿಂತಿದೆ..

Tuesday, November 27, 2012

ಸಾಂತ್ವನ


ಅಂಗಾತ ಮಲಗಿದ್ದೆ..
ಬಹುಕಾಲದಿಂದ ಕರೆಗಟ್ಟಿ
ಉಳಿದಿದ್ದವು ಕಣ್ಣೀರು...|

ಸುಮ್ಮನೆ ಮಗ್ಗುಲಾಗಿ
ಹೊರಳಿದೆ.,,
ಬಲಗಣ್ಣಿನೊಳಗೆ ಜಿನುಗಿದ ನೀರು
ಸೀದಾ ಮೂಗಿನ ಮೇಲ್ಗಡೆಯಲ್ಲಿ
ಹಾದುಹೋಗಿ
ಎಡಗಣ್ಣಿನೊಳಗೆ ಬಿದ್ದಿತು...||

ಸುಮ್ಮನೆ
ಒಮ್ಮೆ ತಂಪಾಯಿತು
ಸಾಂತ್ವನ ಹೇಳಿತು..||


(ವಿ. ಸು. : ಒಂದು ಬೇಸರಿನ ಸಂಜೆಯಲಿ ಬರೆದ ಕವಿತೆ..2-2-2009ರಂದು ದಂಟಕಲ್ಲಿನಲ್ಲಿ ಬರೆದಿದ್ದು..)

Friday, November 23, 2012

ವಾಸಂತಿ ಕೆರೆಯಲ್ಲಿ ಮುರುಕು ಮರದ ದೋಣಿಯಲ್ಲಿ...

ವಾಸಂತಿ ಕೆರೆಯಲ್ಲಿ ಮುರುಕು ಮರದ ದೋಣಿಯಲ್ಲಿ...

    ಅಲ್ಲಿ ನೀರಿನ ಮಧ್ಯ ಬಿದ್ದ ಮದರ ಒಂದು ಅಗಲವಾದ ತುಂಡು. ಎಂದೋ, ಯಾರೋ ಹಚ್ಚಿದ ಬೆಂಕಿಗೆ ಅರ್ಧಂಬರ್ಧ ಸುಟ್ಟು ಕರಕಲಾಗಿ ಉಳಿದಿದ್ದು. ಬಾಲ್ಯದ ನಮ್ಮಂತ ತುಡುಗಿನ ಹುಡುಗರಿಗೆ ಅದೇ ದೋಣಿ, ತೆಪ್ಪ, ಆಟವಾಡುವ ದೋಣಿಮನೆ ಎಲ್ಲ.
    ನಮ್ಮ ಗ್ಯಾಂಗೋ ಭಾರಿ ಇತ್ತು ಬಿಡಿ. ಎಲ್ಲರಿಗಿಂತ ಕಿರಿಯ ನಾನು. ಕಾನಲೆಯ ಗಿರೀಶಣ್ಣ, ಗುರಣ್ಣ, ಯೋಗೀಶ ಭಾವ, ಶಶಿ ಭಾವ, ಹರೆಯಕ್ಕೆ ಕಾಲಿಟ್ಟು ಗಂಭೀರತನ ಮೈಮೂಡಿದ್ದರೂ ಆಗೊಮ್ಮೆ ಈಗೊಮ್ಮೆ ಗಣಪಣ್ಣ ಭಾವನೂ ನಮ್ಮ ಪುಂಡರಪೂಟಿಗೆ ಸೈ. ನಮ್ಮ ಕಿಲಾಡಿ ತುಂಟತನಕ್ಕೆಲ್ಲ ರಾಮಚಂದ್ರಮಾವ ಕಾವಲುಗಾರ.. ಮಂತ್ರಾಕ್ಷತೆಯನ್ನು ಮನಸಾರೆ ಕೊಡುವ ಸಹೃದಯಿ.
    ಒಂದು ಬೇಸಿಗೆಯಲ್ಲಿ ನಮ್ಮ ದಂಡು ಅಜ್ಜನಮನೆಯಾದ ಬರಬಳ್ಳಿಯಲ್ಲಿ ಬೀಡು ಬಿಟ್ಟಿತ್ತು. ನಮ್ಮ ಲಿಗಾಡಿತನಕ್ಕೆ ಯಾವಾಗಲೂ ಅಲ್ಲಿ ಬೀಡು ಬಿಡುತ್ತಿದ್ದ ಮಂಗಗಳ ಗ್ಯಾಂಗು ನಾಪತ್ತೆ.. ಕಾಗೆಗಳಿಗೂ ನೆಲೆಯಿಲ್ಲದಂತಾಗಿದ್ದವು. ಒಂದು ಶುಭ ಮದ್ಯಾಹ್ನದಲ್ಲಿ ಅಜ್ಜನಮನೆಯ ಜಮೀನಿನ ಅತ್ಯಂತ ಮೇಲ್ಭಾಗಕ್ಕೆ ನಾವೆಲ್ಲ ಹೋಗಿದ್ದೆವು. ಕೆರೆ ಈಸುವುದು ನಮ್ಮ ಪರಮ ಉದ್ದೇಶವಾಗಿದ್ದರೂ ರಾಮಚಂದ್ರಮಾವನ ಕಾವಲುಗಾರಿಕೆ ನಮಗೆ ಅಡ್ಡಿಯಾಗಿತ್ತು. ಕೊನೆಗೆ ಹಾಗೂ ಹೀಗೂ ಅವನ ಕಣ್ಣು ತಪ್ಪಿಸಿ ದೋಣಿಯಾಟ ಆಡುವ ಎಂದು ಎಲ್ಲರೂ ಮರದ ತುಂಡಿನ ಮೇಲೆ ಏರಿದೆವು. ಬೆಂಡಿನಂತಹ ದೋಣಿ ನಮ್ಮೆಲ್ಲರ ಭಾರವನ್ನು ಅನಾಮತ್ತಾಗಿ ಹೊತ್ತುಕೊಂಡಿತು. ನಮ್ಮ ಭಾರಕ್ಕದು ಒಮ್ಮೆ ಅಲುಗಾಡಿತಾದರೂ ಸಾಕಷ್ಟು ಉದ್ದವಾಗಿದ್ದರಿಂದ ಮುಳುಗುವ ಭಯ ಇರಲಿಲ್ಲ.
    ಇದ್ದವರ ಪೈಕಿ ಅತ್ಯಂತ ಕಿಲಾಡಿ ಎಂದು ಜನಮಾನಸದಲ್ಲಿ ಹಸಿರಾಗಿದ್ದ ಯೋಗೀಶ ಭಾವ ಅದೆಲ್ಲಿಂದಲೋ ಒಂದು ಉದ್ದನೆಯ ಗಳವನ್ನು ಹಿಡಿದು ತಂದೇಬಿಟ್ಟ. ತಂದವನಿಗೆ ಕೈ ಸುಮ್ಮನಿರಬೇಕಲ್ಲ.. ಹುಟ್ಟುಹಾಕಲು ಪ್ರಾರಂಭಿಸಿದ. ಮರದ ತುಂಡು ನಿಧಾನವಾಗಿ ಮುಂದಕ್ಕೆ ಸಾಗಿತು. ಆಗ ನನಗೆ ಎದೆಯಲ್ಲಿ ಶುರುವಾಯಿತಲ್ಲ ನಡುಗ.. ಅದೇನೋ ಡುಕಡುಕಿ. ನನಗೆ ಆಗ ಆರೋ ಏಳೋ ವರ್ಷ ಇರಬೇಕಷ್ಟೇ. ನಮ್ಮೂರಿನ ಅಘನಾಶಿನಿ ನದಿಯಲ್ಲಿ ನೀರು ಕಡಿಮೆಯಾಗಿ ಮಳ್ಳಂಡೆ ಮುಳುಗುವಷ್ಟು ನೀರಿದ್ದಾಗ ಕಲಿತಿದ್ದ ಅಥವಾ ಕಲಿಯಲು ಪ್ರಯತ್ನಿಸಿದ್ದ ಈಜೆಂಬುದು ಮಾತ್ರ ನನ್ನ ಪಾಲಿಗಿದ್ದ ಆಸರೆಯಾಗಿತ್ತು.
    ಭಾವ ಯೋಗೀಶನಂತೂ ಕೆರೆಯ ಮಧ್ಯಕ್ಕೆ ನಮ್ಮೆಲ್ಲರನ್ನು ಕರೆದೊಯ್ದವನೇ ಮದರ ದಿಮ್ಮಿಯ ಮೇಲೆ ನಿಂತು ಚಿಟ್ಟಾಣಿಯನ್ನು ನೆನಪಿಸಿಕೊಂಡವನಂತೆ ಧಿತ್ತೋಂ ನರ್ತನ ಶುರಹಚ್ಚಿಕೊಂಡೇ ಬಿಟ್ಟ. ಇನ್ನೇನು ಮಾಡೋದಪ್ಪಾ ಅನ್ನೋ ತಲೆ ಬಿಸಿ ನಮ್ಮೆಲ್ಲರದ್ದು. ಇದೆಲ್ಲಕ್ಕಿಂತಲೂ ನಮ್ಮೆಲ್ಲರನ್ನೂ ಭಯಕ್ಕೆ ಈಡು ಮಾಡಿದ್ದೆಂದರೆ ವಾಸಂತಿ ಕೆರೆಯ ದಂತ ಕಥೆಗಳು. ಅದ್ಯಾರದ್ದೂ ಬಾಳಂತಿಯ ಬಲಿ ಪಡೆದ ವಾಸಂತಿ ಕೆರೆ ನಮಗೆ ಅದೆಷ್ಟು ಖುಷಿ ಕೊಟ್ಟಿದ್ದರೂ ಆಗಾಗ ಭಯದ ಸೆಳಕನ್ನು ಮೂಡಿಸುತ್ತಿದ್ದುದಂತೂ ಹೌದು. ನನಗಂತೂ ಅವೆಲ್ಲವೂ ಒಮ್ಮೆಲೆ ನೆನಪಾಗಿ ಅಳಲು ಪ್ರಾರಂಭಿಸಿದೆ. ನಾನು ಅಳಲು ಶುರುಮಾಡಿದರೆ ಭಾವ ಯೋಗೀಶ ತನ್ನ ನರ್ತನವನ್ನು ಹೆಚ್ಚಿಸಿಯೇ ಬಿಟ್ಟ.
    ನನಗಂತೂ ಏನು ಮಾಡುವುದೋ ತೋಚಲೇ ಇಲ್ಲ. ತಗಳಪ್ಪಾ ಜಿಗಿದೇ ಬಿಟ್ಟೆ ನೋಡಿ ನೀರಿಗೆ.. ಧಬಲ್ ಅಂತ.. ಒಮ್ಮೆಲೆ ಯೋಗೀಶನಾದಿಯಾಗಿ ಎಲ್ಲರೂ ಕಕ್ಕಾಬಿಕ್ಕಿ. ವಿನಯನ ಕಥೆ ಮುಗೀತು....
    ಸಿನಿಮಾ ಸ್ಯಾಡ್ ಎಂಡಿಂಗ್ ಅಲ್ಲ ಮಾರಾಯ್ರೇ.. ಕ್ಲೈಮ್ಯಾಕ್ಸ್ ಅಭೀ ತೋ ಬಾಕಿ ಹೈ ಮೆರೆ ದೋಸ್ತೋ.. 
    ಆ ದಿನಗಳಿಂದಲೂ ನಾನು ಕುಳ್ಳನೇ. ಈಗ 5.7 ಅಡಿ ಇದ್ದೇನೆ. ಆಗ 4-4.5 ಇದ್ದಿರಬಹುದು. ನಾನು ಜಿಗಿದೇನೋ ಜಿಗಿದೆ. ಏನು ಮಾಡಿದರೂ ಕಾಲಿಗೆ ನೆಲ ಸಿಗೋದೇ ಇಲ್ಲ. ಒಮ್ಮೆ ಕಂತಿದೆ. ಬುಳುಕ್ಕನೆ ನೀರು ಕುಡಿದೆ. ಒಂದೆರಡು ಸಾರಿ ಕೆಮ್ಮಿದೆ. ಹಣೆಬರಹಕ್ಕೆ ಹೊನೆ ಯಾರ್ರೀ.. ನಾನು ಜಿಗಿದ ಸ್ಥಳದಲ್ಲಿ ಅನಾಮತ್ತು ಏಳು ಅಡಿ ಆಳ. ಈಗಾದರೆ ಎಂತಹ ಆಳವನ್ನಾದರೂ ಈಜಬಲ್ಲೆ. ಆಗ.. ??!!
    ಒಮ್ಮೆಲೆ ಯಮಧರ್ಮರಾಜನ್ನು ನೆನೆದೆ ನೋಡಿ.. ಎಲ್ಲಿತ್ತೋ ಯಮ ಶಕ್ತಿ.. ಕೈಕಾಲನ್ನು ವಿಚಿತ್ರವಾಗಿ ಬಡಿದು, ನೀರನ್ನು ಸೀಳಿ, ಎಮ್ಮೆಗಳು ಕುಪ್ಪಳಿಸುವಂತೆ ಕುಪ್ಪಳಿಸಿ ದಡ ತಲುಪುವ ಹೊತ್ತಿಗೆ, ಎದೆಯಲ್ಲಿ ಗಿಟಾರು ನೂರು.... ಇನ್ನು ಕೈಕಾಲುಗಳ ಸ್ಥಿತಿಯಂತೂ ಬೇಡವೇ ಬೇಡ ಬಿಡಿ.. ಡಗಡಗ ಅಲ್ಲಲ್ಲ.. ಗಡಗಡ.. ಅಷ್ಟರ ಹೊತ್ತಿಗೆ ನಮ್ಮ ದಂಡನ್ನು ಹುಡುಕಿಕೊಂಡು ಬಂದಿದ್ದ ರಾಮಚಂದ್ರಮಾವನ ಕಣ್ಣಿಗೆ ನಾನು ಬಿದ್ದಿದ್ದೆ. ನೋಡಿದ ತಕ್ಷಣವೇ ನಮ್ಮ ಭಾನಗಡಿ ಗೊತ್ತಾಗಿಯೇ ಬಿಟ್ಟಿತು. ಶುರುವಾಯಿತು ನೋಡಿ.. ಪುರುಷ ಸೂಕ್ತ.. ಸಹಿತ ಮಂಗಳಾರತಿ.. ಸಾಕಪ್ಪಾ ಸಾಕು... ಕೇಳಲಾರೆ..
    ನಾನಂತೂ ಹಾಗೋ ಹೀಗೋ ಹಾರಿ ಬಂದೆ.. ಮುಂದಿನ ಕಥೆ ಕೇಳಿ ಇನ್ನೂ ಗಮ್ಮತ್ತಾಗಿದೆ. ಯೋಗೀಶ ಭಾವ ತನ್ನ ಲಿಗಾಡಿತನವನ್ನು ಇಷ್ಟಕ್ಕೆ ಎಲ್ಲಿ ಬಿಡ್ತಾನೆ ಹೇಳಿ.. ಮುಂದುವರಿದ, ಮುಂದುವರಿದ.. ಕೆರೆಯ ಮಧ್ಯ ಒಂದು ಚಿಕ್ಕ ಬಂಡೆಯಂತದ್ದು ಇತ್ತು. ವಾಸ್ತವದಲ್ಲಿ ಅದೂ ಇನ್ನೊಂದು ಮರದ ದಿಮ್ಮಿ. ಯಾವಾಗಲೋ ಕೆರೆಯಲ್ಲಿ ಬಿದ್ದು ಗಟ್ಟಿಯಾಗಿ ನಡುಗಡ್ಡೆಯಂತಾಗಿ ಹೋಗಿತ್ತು. ಅಲ್ಲಿಯವರೆಗೂ ಮುಂದುವರಿದ. ಅಲ್ಲಿ ಗಿರೀಶಣ್ಣನ ಬಳಿ ಒಂದ್ನಿಮಿಷ ಇಲ್ಲಿ ಇಳಿ ಅಂದ. ಯಂತಕ್ಕಾ ಹೇಳಿ ಕೇಳಿದ್ದಕ್ಕೆ ತಡಿ ಈಗ ಬತ್ತಿ ಎಂದು ಹೇಳಿ ವಾಪಾಸು ಬಂದುಬಿಟ್ಟ.
    ಯೋಗೀಶ ಭಾವ ವಾಪಾಸು ದಡಕ್ಕೆ ಬಂದು ನಗಲು ಪ್ರಾರಂಭಿಸಿದಾಗಲೇ ಗಿರೀಶಣ್ಣನಿಗೆ ತಾನು ಪೆಚ್ಚಾಗಿದ್ದು ಅರಿವಿಗೆ ಬಂದಿದ್ದು. ಅವನಂತೂ ಜೋರಾಗಿ ಅಳಲು ಪ್ರಾರಂಭಿಸಿದ. ಕೊನೆಗೆ ಅಲ್ಲೇ ಇದ್ದ ರಾಮಚಂದ್ರ ಮಾವ ಯೋಗೀಶನನ್ನು ಹಿಡಿದು ನಾಲ್ಕೇಟು ಬಡಿದು ಗಿರೀಶಣ್ಣನನ್ನು ಕರೆದುಕೊಂಡುಬಂದ.
    ಬಾಲ್ಯದಲ್ಲಿ ನಡೆದ ಈ ಘಟನೆ ನನ್ನ ಮನದಾಳದಲ್ಲಿ ಅಚ್ಚಳಿಯದೇ ನಿಂತಿದೆ. ಇಲ್ಲಿ ಪುಂಡರಪೂಟು ಮಾಡಿದ ನಾವೆಲ್ಲ ಇದೀಗ ಎಲ್ಲೆಲ್ಲೋ ನೆಲೆ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದೇವೆ. ನಮ್ಮೆಲ್ಲರ ಪಾಲಿಗೆ ಸ್ವಿಮ್ಮಿಂಗ್ ಫೂಲ್ ಆಗಿದ್ದ ವಾಸಂತೀಕೆರೆ ತನ್ನ ಗೂಢ ಕಥೆಗಳ ಜೊತೆಗೆ ಗೂಢವಾಗಿಯೇ ಉಳಿದು ಹೋಗಿದೆ. ಎಲ್ಲಕ್ಕಿಂತಲೂ ಮಿಗಿಲಾಗಿ ಕಾಳಿನದಿಗೆ ಕಟ್ಟಲಾಗಿರುವ ಕೊಡಸಳ್ಳಿ ಡ್ಯಾಮಿನ ನೀರು ವಾಸಂತಿ ಕೆರೆಯನ್ನು ಆಪೋಶನ ಪಡೆದುಕೊಂಡುಬಿಟ್ಟಿದೆ.
    ತಮಾಶೆಯಾಗಿದ್ದರೂ ಅನೇಕ ಜೀವನ ಅಂಶಗಳನ್ನು ಕಟ್ಟಿಕೊಟ್ಟ ಈ ಘಟನೆ ಎಂದು ಮರೆಯಲಾರದಂತದ್ದು. ಜೊತೆಗೆ ವಾಸಂತೀ ಕೆರೆಯೂ. 

(ಬಾಲ್ಯದ ಅನುಭವದ ಕಣಜದಿಂದ ಇದು ಚಿಕ್ಕ ಬರಹ ಇದು..ಸ್ವಲ್ಪ ಕುತೂಹಲ, ಸ್ವಲ್ಪ ಬಾಲಿಶ, ಸ್ವಲ್ಪ ಕಾಮಿಡಿ... ಜೊತೆಗೊಂದು ಕ್ಲೈಮ್ಯಾಕ್ಸ್.. )

Wednesday, November 21, 2012

ಮೂರು ಹಾಯ್ಕುಗಳು...


ಅವನು ನಕ್ಕು ನಕ್ಕು..
ಕಣ್ಣೀರು ಹಾಕಿಬಿಟ್ಟ|

--

ಅವನು ಬೆಳಿಗ್ಗೆ ಮೆಸೇಜು ಕಳಿಸಿದ್ದ
ಯಾಕೋ.... ರಾತ್ರಿ ಬಂದಿದೆ..||

--

ಅವನು ಕನಸು ಕಾಣುವ ರೀತಿ ಕಂಡು
ಕನಸಿಗೇ ಬೇಸರ ಬಂದುಬಿಟ್ಟಿದೆ||


ಬೆಳಕಿನೆಡೆಗೆ

ಮತ್ತೊಂದು ಕವಿತೆ...


ಬೆಳಕಿನೆಡೆಗೆ


ಯಾಕೋ ಗೊತ್ತಿಲ್ಲ..|
ಈ ಬೆಳಗು ಮುಂಜಾವಿನಲಿ
ಹಾಡು ಗುನುಗಬೇಕೆನ್ನಿಸುತ್ತಿದೆ||

ಚುಮು ಚುಮು ಚಳಿಯಲ್ಲಿ,
ಸುರಿವ ಇಬ್ಬನಿಯ ಧಾರೆಯಲ್ಲಿ,
ನಸುಕ ಮುಸುಕಲ್ಲಿ
ಕುಣಿಯಬೇಕೆನ್ನಿಸುತ್ತಿದೆ||

ಹೊನ್ನ ಬಣ್ಣದ ಸೂರ್ಯ ಕಿರಣಕ್ಕೆ
ಕೈಯ ತಾಕಿಸಿ, ಮೆರೆದು
ಮನ ಮಣಿಯಬಯಸಿದೆ||

ಸುರಿವ ಇಬ್ಬನಿಯ ಧಾರೆಯ ತಾಳಕ್ಕೆ
ತಕಪಕನೆ ಹೆಜ್ಜೆ ಹಾಕಬೇಕೆನ್ನಿಸುತ್ತಿದೆ||

ಯಾಕೋ ಗೊತ್ತಿಲ್ಲ..|
ಮನಸು ಹೊಸತಾಗುತ್ತಿದೆ..
ನಸುಕು ಹರಿಯುತ್ತಿದೆ..||


ಮನದಿ ಕತ್ತಲೆಯೋಡಿ..
ಬಾಳ ಬಾಂದಳದಲ್ಲಿ ಹೊಸ ಸೂರ್ಯ ಮೂಡಿ
ಮತ್ತೆ ಮುಂಜಾವುದಯಿಸುತ್ತಿದೆ..|


ಇದನ್ನು ಬರೆದಿದ್ದು -ದಂಟಕಲ್ಲಿನಲ್ಲಿ 7-11-2007ರಂದು

Tuesday, November 13, 2012

ನಮ್ಮೂರ ಜಲಪಾತ...

ನಮ್ಮೂರ ಜಲಪಾತ...

ನಮ್ಮೂರಲ್ಲೆ ಏನೆಲ್ಲ ಇದೆ.. ಆದರೆ ಜಲಪಾತ ಇಲ್ಲವಲ್ಲ ಅನ್ನೋ ಕೊರಗಿತ್ತು...
ಮೊನ್ನೆ ಮನೆಗೆ ಹೋದಾಗ ಹಾಗೆಯೇ ಗುಡ್ಡ ಬೆಟ್ಟ ತಿರುಗಾಡಲು ಹೋಗಿದ್ದೆ...
ಆಗ ಕಂಡಿದ್ದು ಈ ಜಲಪಾತ...

ಇದನ್ನು ಜಲಪಾತ ಎನ್ನಬಹುದೋ..ದಬದಬೆ ಎನ್ನಬಹುದೋ.. ಅಥವಾ.. ಇಳಿಜಾರಕಲಲ್ಲಿ ನೀರು ಬೀಳ್ತದೆ ಅಷ್ಟೇ ಅನ್ನಬಹುದೋ.. ನಿಮಗೆ ಬಿಟ್ಟದ್ದು..
ನಾನಂತೂ ಅದಕ್ಕೆ ಕಲ್ಯಾಣೇಶ್ವರ ಜಲಪಾತ ಉರುಫ್ ಕಲ್ಲೆ ಜಲಪಾತ ಎಂದು ಕರೆದಿದ್ದೇನೆ...
ಹೀಗೆ ಕರೆಯಲೂ ಕಾರಣ ಇದೆ ನೋಡಿ..

ಈ ಜಲಪಾತ ಇರುವುದು ನಮ್ಮೂರಿನ ಹತ್ತಿರದ ಕುಚಗುಂಡಿ ಎಂಬ ಊರಿನ ಬಳಿ..
ಈ ಊರಿನಲ್ಲಿಯೇ ಕಲ್ಯಾಣೇಶ್ವರ ದೇವಾಲಯ ಇದೆ..
ನಮ್ಮೂರಿಗರು ಈ ದೇವಸ್ಥಾನಕ್ಕೇ ನಡೆದುಕೊಳ್ಳುತ್ತಾರೆ. 
ಅದಕ್ಕೆ ಕಲ್ಯಾಣೇಶ್ವರ ದೇವಾಲಯ ಅಥವಾ ಶಾರ್ಟ್ ಆಗಿ ಕಲ್ಲೆ ಜಲಪಾತ ಎಂದು ಕರೆದಿದ್ದೇನೆ..

ಇದು ತೀರಾ ದೊಡ್ಡ ಜಲಪಾತ ಅಲ್ಲ.. ಆದ್ದರಿಂದ ಈ ಜಲಪಾತ ಅಷ್ಟು ಎತ್ತರ ಉಂಟು, ಇಷ್ಟು ಎತ್ತರ ಉಂಟು ಎಂಬ ಕಲ್ಪನೆಗಳು ಬೇಡ..15-20 ಅಡಿಗಳ ಎತ್ತರ ಇರಬಹುದು ಅಷ್ಟೇ.. ಮಳೆಗಾಲದಿಂದ ಡಿಸೆಂಬರ್ ತನಕ ನೀರು ಇರ್ತದೆ...
ಆ ಮೇಲೆ ಹಳ್ಳದಲ್ಲಿ ನೀರಿದ್ದರೆ ಮಾತ್ರ ಜಲಪಾತದ ದರ್ಶನ ಭಾಗ್ಯ ಸಾಧ್ಯ...
ಇಲ್ಲವಾದಲ್ಲಿ ಬಂದ ದಾರಿಗೆ ಸುಂಕವಿಲಲ್ಲ..

ಜಲಪಾತದ ಎದುರು ದೊಡ್ಡ ಗುಂಡಿ ಇದೆ.. ಆಳವಿಲ್ಲ. ಈಜಬಹುದು..
ಕಲ್ಲಿನ ಹಾಸು ಇಲ್ಲವಾದ ಕಾರಣ... ಮಣ್ಣು ಮಣ್ಣು.. ಆದರೆ ನೀರು ಮಾತ್ರ ಕೊರೆಯುವಷ್ಟು ತಂಪು..
ಪಿಕ್ ನಿಕ್ಕಿಗೆ ಬರಬಹುದು..
ಎದುರಿಗೆ ಗುರು ಗೌಡನ ಮನೆ ಇದೆ..
ಕುಡಿಯಲು ನೀರು ಕೊಟ್ಟಾರು..

ಬರುವ ಬಗೆ : ಶಿರಸಿಯಿಂದ ಕಾನಸೂರು, 2 ಕಿ.ಮಿ ದೂರದ ಅಡಕಳ್ಳಿ.. ಅಡಕಳ್ಳಿಯ ಭೂತನಕಟ್ಟೆಯಿಂದ ದಂಟಕಲ್ ದಾರಿಯಲ್ಲಿ 4.5 ಕಿ.ಮಿ ದೂರ ಈ ಜಲಪಾತಕ್ಕೆ. ದಂಟಕಲ್ಗೆ ಬಂದು ಕುಚಗುಂಡಿ ಊರಿನ ಕುರಿತು ಕೇಳಿದರೆ ಯಾರಾದರೂ ದಾರಿ ತೋರಿಸಿಯಾರು.. ಕುಚಗುಂಡಿಯಲ್ಲಿ ಕಲ್ಲೇ ದೇವಸ್ಥಾನವನ್ನು ಹಾದು, ಗುರು ನಾಯ್ಕನ ಮನೆ ಹತ್ತಿರ ಬರಬೇಕು.. ಮರಲಮನೆ ಬಳಿ ಇದೆ ಈ ಜಲಪಾತ...ಇದು ಒಂದು ದಾರಿ..
ಇನ್ನೊಂದು : ಶಿರಸಿಯಿಂದ ಕಾನಸೂರು.. ಕಾನಸೂರಿನಿಂದ ಬಾಳೇಸರ ರಸ್ತೆಯಲ್ಲಿ ಕೋಡ್ಸರ.. ಕೋಡ್ಸರದಿಂದ ಕುಚಗುಂಡಿ ಅಥವಾ ದಂಟಕಲ್ ರಸ್ತೆಯ ಗುಂಟ 2 ಕಿ.ಮಿ ಬಂದರೆ ಮರಲ ಮನೆ ಘಟ್ಟ ಅಥವಾ ಮರಲಮನೆ ಮುರುಕಿ ಸಿಗ್ತದೆ.. ಅದರ ಕೆಳಗೆ ಒಂದು ಹಳ್ಳ ಹರಿದು ಹೋಗ್ತದೆ.. ಅದಕ್ಕೆ ಈ ಜಲಪಾತ ಆಗಿದೆ.. ರಸ್ತೆ ಪಕ್ಕವೇ ಕಾಣ್ತದೆ..
ಸರ್ವ ಋತು ರಸ್ತೆ ಇದೆ..
ಆದರೆ ಸರ್ವ ಋತುವಿನಲ್ಲೂ ನೀರು ಇರೋದಿಲ್ಲ..

ಊರು ಚಿಕ್ಕದು.. ಮುಗ್ದ ಜನ.. ಬಂದವರು ಮಲಿನ ಮಾಡದಿದ್ದರೆ ಊರಿನವರಿಗೆ ಸಂತಸ...
ಹೊರ ಜಗತ್ತಿಗೆ ಇದರ ಬಗ್ಗೆ ಗೊತ್ತಿರಲಿಲ್ಲ.. ಈಗ ನಾನೇ ಎಲ್ಲರಿಗೆ ತಿಳಿಸ್ತಾ ಇರೋದ್ರಿಂದ..
ಅಲ್ಲಿ ಮಲಿನವಾದರೆ ನಾನೇ ಹೊಣೆಗಾರನಾಗಬೇಕಾಗುತ್ತದೆ..
ಪ್ಲಾಸ್ಟಿಕ್ ಬೇಡ..
ಸುಮ್ಮನೆ ಹೋಗಿ ಎಂಜಾಯ್ ಮಾಡ್ಕೊಂಡು ಬನ್ನಿ...
ನಿಮ್ಮ ಕುತೂಹಲ ತಣಿಕೆಗೆ ಇದೋ ಪೋಟೋ ಹಾಕಿದ್ದೇನೆ.. ಹೋಗಲಿಕ್ಕಾಗದವರು ಇಲ್ಲೇ ನೋಡಿ ಖುಷಿ ಪಡಿ..

Thursday, November 8, 2012

ಪರಿತಾಪಿಯ ಪ್ರೇಮಪತ್ರ

ಪರಿತಾಪಿಯ ಪ್ರೇಮಪತ್ರ

ಮನದ ಮೂಸೆಯಿಂದರಳಿದ ಪ್ರೇಮಕಾವ್ಯ


ಒಲವಿನ ಗೆಳತಿ,
    ನೀನು ಇಷ್ಟು ಬೇಗ ಹೀಗೆ ರಿಯಾಕ್ಟ್ ಆಗ್ತೀಯಾ ಅಂತ ನಾನು ತಿಳಿದಿರಲಿಲ್ಲ. ನೀನು ಒಪ್ಪದೇ ಇರಬಹುದು, ನನ್ನ ಲೈಕ್ ಮಾಡದೇ ಇರಬಹುದು ಅಂದ್ಕೊಂಡಿದ್ದೆ. ನಿನ್ನ ನಿರ್ಧಾರ ಕೇಳಿನ ನನ್ನೊಡಲಿನಲ್ಲಿ ಅದೆಷ್ಟೋ ಹರ್ಷಗಳು ಚಿಲುಮೆ ಉಕ್ಕಿ ಒಡೆದು ಎಂತಹ ಮಧುರ ಯಾತನೆಯಾಯ್ತು ಅಂತೀಯಾ...
    ನೀನು ನನ್ನ ಪ್ರೀತಿಗೆ ಗ್ರೀನ್ ಸಿಗ್ನಲ್ ಕೊಟ್ಟ ಕ್ಷಣವೇ ನನ್ನ ಮನದ ಮರುಭೂಮಿಯೊಳಗೆ ವರ್ಷಧಾರೆ ಸುರಿದಂತಾಗಿಬಿಟ್ಟಿತು. ಅಂತೂ ಜೀವನದಲ್ಲಿ ಮೊದಲಬಾರಿಯೋ ಎಂಬಂತೆ ನಾನು ಆಸೆ ಪಟ್ಟಿದ್ದು, ಇಷ್ಟಪಟ್ಟಿದ್ದು ನನ್ನ ಕೈ ಹಿಡಿದಿದೆ. ಇಂಥಾ ಹೊತ್ನಲ್ಲೇ ನನ್ನ ಮನಸ್ಸು ಅದೆಷ್ಟು ಕವನಗಳನ್ನು ದೊಡ್ಡ ಹಬ್ಬದಲ್ಲಿ ಪುಂಡಿ ನಾರಿನ ಹಗ್ಗ ಹೊಸೆದಂತೆ ಹೊಸೆಯಲಾರಂಭಿಸಿದೆ ಗೊತ್ತಾ...
    ಅದು ಹಾಗಿರಲಿ ಬಿಡು, ನನಗೆ ನೀನು ಯಾಕಿಷ್ಟವಾದೆ ಅನ್ನುವುದನ್ನು ಮೊದಲು ಹೇಳಿಬಿಡುತ್ತೇನೆ ಕೇಳು. ಆ ನಿನ್ನ ನಗು, ನಕ್ಕಾಗ ಗುಳಿ ಬೀಳುವ ಕೆನ್ನೆ, ಇಂಪಾದ ಧ್ವನಿ ಇವೆಲ್ಲವೂ ನನ್ನನ್ನು ಮೊದಲು ಇಂಪ್ರೆಸ್ ಮಾಡಿದ್ದು. ಆ ನಂತರ ನೀನು ಮೊದಲು ನನ್ನ ಕವನಗಳ ಅಭಿಮಾನಿಯಾಗಿ `ನೀನು ಚೊಲೋ ಕವನ ಬರೀತೆ ಹಾ.. ಐ ಲೈಕ್ ಇಟ್..' ಎಂದಾಗ ಹೊಸ ಗೆಳತಿಯೊಬ್ಬಳು ಸಿಕ್ಕಳು ಅಂದ್ಕೊಂಡಿದ್ದೆ. ಆ ನಂತರವೇ ಅಲ್ಲವೇ ನಾನು ನಿನ್ನನ್ನು ಸಂಪೂರ್ಣವಾಗಿ ಅರಿತಿದ್ದು.
    ನಿನ್ನ ಗುಣಗಳು, ನಿನ್ನ ಗುರಿಗಳು, ಮನದಾಳದ ತುಮುಲಗಳು, ಭಾವನೆಗಳು, ಜೊತೆಗೆ ಬದುಕೂ ಕೂಡ.. ಇವೆಲ್ಲ ನನ್ನದರಂತೆಯೇ ಇವೆ ಎಂದು ಅರಿತಿದ್ದು ಆ ನಂತರವೇ ಅಲ್ಲವೇ. ಹೀಗೆಲ್ಲಾ ಇಷ್ಟಪಟ್ಟರೂ ನಿನ್ನ ಬಳಿ ನನ್ನ ಮನದಾಳದ ಬಯಕೆಯನ್ನು ತಿಳಿಸಲು ಅದೆಷ್ಟು ಕಷ್ಟಪಟ್ಟುಬಿಟ್ಟಿದ್ದೆನಲ್ಲಾ... ಎಲ್ಲರಿಗೂ ಹಾಗೆಯೇ ಆಗ್ತದಾ ಎಂಬ ತಳಮಳ.. ಮನದೊಳಗೆ ಅದೇನೋ ದುಗುಡ. ಹೇಳಿಕೊಳ್ಳಲಾಗದ ಚಡಪಡಿಕೆ. ನೀನು ಒಪ್ಕೋತೀಯೋ, ಇಲ್ವೋ.. ಸಿಟ್ಟಾಗಿಬಿಡ್ತೀಯೋ.. ನಿನ್ನೆಡೆಗೆ ಹುಟ್ಟಿದ ಪ್ರೀತಿ ನಮ್ಮಿಬ್ಬರ ನಡುವಣ ಸ್ನೇಹವನ್ನು ಕೊಂದುಹಾಕಿದರೆ... ಎಂಬ ಆತಂಕ.. ನೀನು ಎಲ್ಲಿ ನನ್ನನ್ನು ತಿರಸ್ಕರಿಸಿ, ನನ್ನನ್ನು ಅವಮಾನದ ಕೋಟೆಯೊಳಗೆ ಮುಳುಗುವಂತೆ ಮಾಡುತ್ತೀಯೋ ಎಂಬ ಭಯ.. ಇಂತಹ ಭಾವನೆಗಳ ತೊಳಲಾಟದ ನಡುವೆ ಅನೇಕ ದಿನಗಳನ್ನು ದೂಡಿದೆ.
    ಇನ್ನಾಗೋದೇ ಇಲ್ಲ.. ಅಂತ ಕೊನೆಗೊಂದು ದಿನ ನೀನು ಕೇಳಿದ್ದ ಒಂದು ಪುಸ್ತಕದ ನಡುವಣ ಯಾವುದೋ ಪುಟದ ಮಧ್ಯ ನನ್ನ ಭಾವನೆಗಳನ್ನೆಲ್ಲ ಅಕ್ಷರ ರೂಪಕ್ಕೆ ಇಳಿಸಿ, ನನ್ನ ಪ್ರೀತಿಸ್ತೀಯಾ ಅಂತ ಕೇಳಿ ಬರೆದಿಟ್ಟುಬಿಟ್ಟಿದ್ದು ಇನ್ನೂ ನೆನಪಿದೆ ಅಲ್ವಾ.. ಕೊನೆಗೊಮ್ಮೆ ನೀನು ತಿರುಗಿ ಬಂದು ಸಿಟ್ಟಾಗದೇ ನನಗೆ ಪುಸ್ತಕ ಮರಳಿಸಿ ಹೂ ನಗು ನಕ್ಕು ಹೋದೆಯಲ್ಲಾ ಆಗಲೇ ನನಗೆ ಮೂರನೇ ಸಾರಿ ಜೀವ ಬಂದಿದ್ದು. ನಾನು ಕೊಟ್ಟ ಪತ್ರಕ್ಕೆ ಉತ್ತರವೋ ಎಂಬಂತೆ ನೀನು ಕೊಟ್ಟ ನವಿಲುಗರಿಯನ್ನು ಜೋಪಾನವಾಗಿ ಇಟ್ಟಿದ್ದೇನೆ. ಈ ವಿಷಯ ಯಾರಿಗೂ ಗೊತ್ತಿಲ್ಲ ಹಾಂ ಮತ್ತೆ...ನಾನು ಪ್ರೇಮ ಪತ್ರ ಕೊಟ್ಟು, ನೀನು ಮರಳಿ ಉತ್ತರ ಹೇಳುವ ನಡುವೆ ನಾನು ಎದುರಿಸಿದ ಭಾವನೆಗಳು ಶಬ್ದಕ್ಕೆ ನಿಲುಕೋದಿಲ್ಲ..ಮುಂದೊಂದು ದಿನ ಎಂದಾದರೂ ಕವಿತೆಯಾಗಿ ಹೊರ ಬೀಳಬಹುದು ಬಿಡು..
    ಆದರೂ.. ನೀನು ಒಪ್ಪಿಬಿಟ್ಟೆಯಲ್ಲಾ.. ಇನ್ನೇನು ಬಿಡು.. ಒಂದು ಟೆನ್ಶನ್ ತಪ್ಪಿದ ಹಾಗಾಯಿತು. ಹಾಗೇ ನನ್ನ ಬದುಕಿನಲ್ಲಿ ಬಂದಿದ್ದೀಯಾ.. ನನ್ನ ಮನಸ್ಸಿನ ಮೂಟೆಗೆ ನಿನ್ನ ಬದುಕೆಂಬ ಮೊಬೈಲಿನಿಂದ ಆಗಾಗ ಮೆಸೇಜ್ ಮಾಡ್ತಾ ಇರು ಮಾರಾಯ್ತಿ,,, ನನ್ನ ಇನ್ ಬಾಕ್ಸ್ ಖಾಲಿ ಹೊಡಿತಾ ಇದೆ. ಅದಕ್ಕಾಗಿಯೇ ಕಾಯ್ತಾ ಇದ್ದೇನೆ.. ಈಗಷ್ಟೇ ನೀನು ನನ್ನಿಂದ ಬೀಳ್ಕೊಟ್ಟು, ನಾಳೆ ಬರ್ತೀನಿ ಅಂತ ಹೇಳಿ ಹೋಗಿದ್ದೀಯಾ,.. ಹುಚ್ಚು ಖೋಡಿ ಮನಸ್ಸು ಕೇಳ್ತಾನೇ ಇಲ್ಲ ನೋಡು... ಬರಹಕ್ಕೆ ಹಚ್ಚಿಬಿಟ್ಟಿದೆ..
    ಮತ್ತೆ ನಾಳೆ ಸಿಗ್ತೀನಿ.. ಬದುಕಿನ ಭಾವನೆಗಳ ವಿನಿಮಯ ಮಾಡಿಕೊಳ್ಳೋಣ.. ಸರಿ ಮಾರಾಯ್ತಿ.. ಈಗ ಇನ್ನು ಹೆಚ್ಚು ಹೇಳಲಾರೆ.. ಭಾವದಾಟ ಮೇರೆ ಮೀರ್ತಾಇದೆ.. ಬರಹಕ್ಕೊಂದು ಕೊನೆ ಬಿಂದು ಇಡ್ತೀನಿ..

ಇಂತಿ ನಿನ್ನವ
ತೇಜಸ್ವಿ.

(ಪ್ರೇಮದ ಕಾಣಿಕೆ.. ಪ್ರೀತಿಯಲ್ಲಿ ಬಿದ್ದವನ ಮೊದಲ ಪ್ರೇಮಪತ್ರ ಹೀಗಿರಬಹುದಾ... ಸುಮ್ಮನೇ ಬರೆದಿದ್ದು.. ಹೆಂಗಿದೇ ಅನ್ನೋದನ್ನು ಕಮೆಂಟಿಸಿ..)

Wednesday, November 7, 2012

ಒಂದಷ್ಟು ಹನಿ ಚುಟುಕಗಳು...

28) ಪಾಣಿಗ್ರಹಣ
ಮದುವೆಯ ಸಂಪ್ರದಾಯ
ಪಾಣಿಗ್ರಹಣ...!
ಹೆಣ್ಣಿಗೋ ಒಂದು
ಪ್ರಾಣಿ ಗ್ರಹಣ..!!
ಆದರೆ ಗಂಡಿಗೆ ಮಾತ್ರ
ಬಾಳಿನ ತುಂಬಾ
ಖಗ್ರಾಸ ಗ್ರಹಣ...!!

29)ರಾಧಾ

ಜಗತ್ತಿನ ರಕ್ಷಕ
ಭಕುತರ ಪ್ರೇಮಿ
ಕೃಷ್ಣನನ್ನು love
ಮಾಡಿದರೂ ಈಕೆ
ಭಗ್ನ ಪ್ರೇಮಿ!!

30) ರಾಜಕಾರಣ

 ರಾ- ರಾಜ್ಯವನ್ನು
 -ಜಗಿದು ತಿಂದು
ಕಾ- ಕಾಲಿ ಮಾಡಿ
ರಣ-ರಣವನ್ನಾಗಿಸುವುದು
ರಾಜಕಾರಣ

31)ಭಾರತವೆಂದರೆ...

ಭಾರತವೆಂದರೆ
ಒಂದು ವಿಶ್ವ ಚೇತನ..!
ಭವ್ಯ ಸಮ್ಮೇಳನ...!!
ಹುಟ್ಟಿಬೆಳೆದಿದೆ ಮಹಾ ಚೇತನ..!!!
ಜೊತೆಗೆ ತುಂಬಿ ತುಳುಕಿದೆ
ಬಡತನ!

32) ತೋರಿಕೆಗಳು

ಭಾರತ ದೇಶದ 
ಮೂರು ಜಗತ್ಪ್ರಸಿದ್ಧ 
ತೋರಿಕೆಗಳೆಂದರೆ
ಗೊರಕೆ,
ತುರಿಕೆ ಹಾಗೂ
ಕಲಬೆರಕೆ...

Monday, November 5, 2012

ಹಾಯ್ಕುಗಳು


ನಾನು ವೀಕ್ ಆಗಿ ಆಗಿ...
ವೀಕಿಪೀಡಿಯಾ ಆಗಿಬಿಟ್ಟೆ...

--

ಆಕೆ ನೈಟ್ ಡ್ಯೂಟಿ ಮಾಡಿ ಮಾಡಿ..
ನೈಟಿಂಗೇಲ್ ಆಗಿಬಿಟ್ಟಳು..
--

ಆತ ಕನ್ನಡದಲ್ಲಿ ಓದಿ ಓದಿ
ಕನ್ನಡಕ ತಂದುಕೊಂಡುಬಿಟ್ಟ...

--

ನಾನು ಸ್ಟಾಂಡ್ ಹಾಕಿ ಹಾಕಿ
ಸ್ಟಾಂಡರ್ಡ್ ಮೆಂಟೇನ್ ಮಾಡಿಬಿಟ್ಟೆ..

ನನ್ನ ಚುನಾವಣಾ ಪರಿಣಯ

    ಯಾರ್ಯಾರಿಗೋ ಚುನಾವಣೆಯಲ್ಲಿ ನಿಲ್ಲಬೇಕು, ಗೆಲ್ಲಬೇಕು, ಖುಚರ್ಿ ಪಡೆಯಬೇಕು ಎನ್ನುವ ಆಸೆ ಆಕಾಂಕ್ಷೆಗಳು ಬೃಹದಾಕಾರವಾಗಿರುತ್ತದೆ. ನನಗೂ ಅಂತಹ ಒಂದಷ್ಟು ಆಸೆಗಳು ಇದ್ದವು. ಈಗಲೂ ಗೆಲ್ಲಿಸುತ್ತಾರೆ ಅಂತಾದರೆ ಆ ಖಯಾಲಿ ಮತ್ತೆ ಚಿಗುರು ಒಡೆಯುತ್ತದೆ.
    ಹಿಂದೆ ಅನೇಕ ಸಾರಿ ನಾನು ಚುನಾವಣೆಗೆ ನಿಂತಿದ್ದೆ. ಬಹುತೇಕ.. ಅಲ್ಲ ಹೆಚ್ಚಿನವು.. ಊಹೂ.. 100ಕ್ಕೆ 99 ಚುನಾವಣೆಯಲ್ಲಿ ನಾನು ಹೊಟ್ಟೆ ಪಕ್ಷದ ರಂಗಸ್ವಾಮಿಗೆ ಸಮ. ಗೆಲುವೆಂಬೋ ಕನಸ ಕುದುರೆಯನ್ನೇರಿ ಎಂಬುದು ನನ್ನ ಚುನಾವಣಾ ಪ್ರಣಾಳಿಕೆಯ ಮೂಲ ಮಂತ್ರವಾಗಿತ್ತು ಎಂದರೂ ತಪ್ಪಿಲ್ಲ. ಅಷ್ಟು ಕನಸಾರ್ಹ ಅದು.
    ನಾನು ನಿಂತಿದ್ದು ಅಂತ ದೊಡ್ಡ ಚುನಾವಣೆಗಳಿಗೇನೂ ಅಲ್ಲ ಬಿಡಿ. ಸೀದಾ ಸಾದಾ.. ಚುನಾವಣೆ ಯಾವುದಾದರೇನು..? ಚುನಾವಣೆ ಚುನಾವಣೆಯೇ ಅಲ್ಲವೇ.. ಅಲ್ಲೊಂಚೂರು ಒಣ ಪ್ರತಿಷ್ಠೆ ಪ್ರದರ್ಶನ ಮಾಡಬೇಕು. ಯಾರಾದ್ರೂ ಬಂದರೆ ಹಿಂದಕ್ಕೆ ಒಂದಷ್ಟು ಮಂದಿಯನ್ನು ಕಟ್ಟಿಕೊಂಡು ಓಡಾಡಬೇಕು. ಅವರು ಆಗಾಗ ಬೋಪರಾಕ್ ಹೇಳ್ತಾ ಇರಬೇಕು. ಹಲ್ಲು ಗಿಂಜುವವರೂ ಜೊತೆಗೆ ಇರಬೇಕು. ಭಾಷಣ ಕೊಚ್ಚಬೇಕು. ಹಾಗೆ ಮಾಡ್ತೇನೆ, ಹೀಗೆ ಮಾಡ್ತೇನೆ ಅನ್ನೋ ಭರವಸೆಗಳ ಸುರಿಮಳೆಯನ್ನೇ ಹರಿಸಬೇಕು. ಅವನ್ನು ಮಾಡದಿದ್ದರೂ ಲಾಲಾರಸವನ್ನಾದರೂ ಸುರಿಸಬೇಕು. ಇದು ಎಲ್ಲ ಚುನಾವಣೆಗಳಲ್ಲಿನ ರೂಟೀನ್ ಡ್ರಾಮಾ.
ಕಾಲೇಜು ಚುನಾವಣೆ, ಪ್ರಾಥಮಿಕ ಶಾಲೆಗೆ ಮುಖ್ಯಮಂತ್ರಿ, ವಿಧಾನಸಭಾ ಚುನಾವಣೆ ಹೀಗೆ ಎಲ್ಲಕಡೆಯೂ ಸ್ಫಧರ್ೆಯೇ ಬಹುಮುಖ್ಯ. ಕಾಲೇಜು ಚುನಾವಣೆ ಎಂದರೆ ಅದಕ್ಕೆ ಅದರದೇ ಆದ ರಂಗಿರುತ್ತದೆ. ರೀತಿ ರಿವಾಜು ಇರುತ್ತದೆ. ಕೆಲವರಿಗೆ ಕಾಲೇಜು ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾದರೆ ಮತ್ತೆ ಕೆಲವರಿಗೆ ತಮ್ಮ ಸಾಮಥ್ರ್ಯ ಟೆಸ್ಟ್ ಮಾಡುವ ತಾಣ. ಇಂತಹ ಕಾಲೇಜು ಚುನಾವಣೆಗಳಲ್ಲಿ ಬಹಳ ಸಾರಿ ಮಾರಾ ಮಾರಿಗಳು ನಡೆಯುವುದು ಸಹಜ. ರಕ್ತ ಸುರಿಯುವುದೂ ಉಂಟು. ಪ್ರೈಮರಿಯಲ್ಲಿ ಹಾಗೆಲ್ಲಾ ಆಗೋದಿಲ್ಲ ಬಿಡಿ. ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆಗಳೆಲ್ಲ ದೊಡ್ಡವರಿಗೆ, ದಡ್ಡವರಿಗೆ ಬಿಟ್ಟದ್ದು. ಅದು ನಮಗೆ ಬೇಡ ಬಿಡಿ.
    ನಾನು ಚುನಾವಣೆಗೆ ನಿಂತಿದ್ದ ವಿಷಯ ಹೇಳದೇ ಹೋದರೆ ಏನನ್ನೋ ಕಳೆದುಕೊಂಡ ಫೀಲಿಂಗು ಕಾಡ್ತದೆ. ಕನ್ನಡ ಶಾಲೆಯ ಪ್ರಾರಂಭದಿಂದಲೂ ನಾನು ಹಲವಾರು ಚುನಾವಣೆಗಳಲ್ಲಿ ನಿಂತಿದ್ದಿದೆ. ಆದರೆ ಗೆದ್ದ ದಾಖಲೆಗಳು ಇಲ್ಲವೇ ಇಲ್ಲ ಬಿಡಿ. ಇಂದೊಂಥರಾ ನೆಟ್ ಪ್ರಾಕ್ಟೀಸ್ ಮಾಡಿದ ಹಾಂಗೆ.. ಆದರೆ ಕೊನೆಯ ತನಕ ಬ್ಯಾಟಿಂಗ್ ಅವಕಾಶ ಸಿಗಲೇ ಇಲ್ಲ.
    ನಾನು ಮೊದಲು ಚುನಾವಣೆಗೆ ಸ್ಪರ್ಧಿಸಿದ್ದು 4 ನೇ ಕ್ಲಾಸಿನಲ್ಲಿ. ನಮ್ಮೂರ ಶಾಲೆಯಲ್ಲಿ ಸ್ವಚ್ಛತಾ ಮಂತ್ರಿ ಎಂಬ ಪೋಷ್ಟಿಗೆ ನಾನು ನಿಂತಿದ್ದೆ. ಆದರೆ ಅದೇನು ದುರಂತವೋ ಕಾಣೆ.. ಆಗ ಆ ಚುನಾವಣೆಗೆ ನನ್ನ ಕಾಖಿ ಚೆಡ್ಡಿ ದೋಸ್ತ ವಿಜಯ ನಿಂತುಬಿಡಬೇಕೆ.. ವಿಜಯ ಅಂತೂ ಅದೇ ಊರತಿನ ದೊಡ್ಡವರ ಮನೆಯ ಹುಡುಗ. ಎಲ್ಲರೂ ಕೈ ಎತ್ತಿ ಅಂದ್ರ. ನನ್ನ ಪಾಲಿಗೆ ನನ್ನ ಕೈ ಒಂದೆ ಎದ್ದು ನಿಂತಿದ್ದು. ಮೊದಲ ಚುಂಬನವೇ ಸಾಕು ಸಾಕೆಂಬ ರೀತಿಯಲ್ಲಿ ಹೊಡೆತ ಕೊಟ್ಟಿತು. ವಿಜಯ ಸ್ವಚ್ಛತಾ ಮಂತ್ರಿ ಆದ. ಆತ ಆಗಿದ್ರಿಂದ ಲಾಭ ಆಗಿದ್ದು ಬೇರೆ ಯಾರಿಗಲ್ಲದಿದ್ರೂ ನನಗೆ. ಯಾಕಂದ್ರೆ ಉಗುರು ಉದ್ದ ಬೆಳೆಯಬಾರದು, ಕೂದಲು ಬಾಚಿರಬೇಕು. ಟೈ ಇರಬೇಕು ಇಂತಹ ಫರ್ಮಾನುಗಳಲ್ಲೆಲ್ಲ ವಿಜಯ ಇದ್ದಿದ್ದಕ್ಕೆ ನನಗೆ ಮಾಫಿಯಾಗಿದ್ದವು. ಅಘೋಷಿತ ಒಪ್ಪಂದದ ಹಾಗೆಯೇ ನನಗೆ ಅವುಗಳಲ್ಲಿ ರಿಯಾಯಿತಿ ಸಿಕ್ಕಿತ್ತು.
    ಆ ನಂತರ ಆರು-ಏಳನೇ ಕ್ಲಾಸಿನಲ್ಲಿ ಚುನಾವಣೆಗಳು ನಡೆದು ನಾನು ಸ್ಪರ್ಧಿಸಿದ್ದರೂ ಗೆಲುವು ನನ್ನ ಬಳಿ ಸುಳಿಯಲಿಲ್ಲ ಬಿಡಿ. ಆದರೂ ಬುದ್ದಿ ಬರಬೇಕಲ್ಲ. ಹೈಸ್ಕೂಲಿಗೆ ಹೋದರೆ ಮತ್ತೆ ಪುನಃ ಇದರ ಪುನರಾವರ್ತನೆಯೇ. ಎಂಟರಲ್ಲಿ ಸೋತೆ. ಒಂಭತ್ತರಲ್ಲಿ ಸೋತೆ. ಹತ್ತನೇ ಕ್ಲಾಸಿನಲ್ಲಿ ನಡೆದ ಚುನಾವಣೆಯ ಕುರಿತು ಸ್ಪಲ್ಪ ಹೇಳುವುದು ಒಳಿತು. ಅದೊಂತರಾ ಗೆಲುವನ್ನು ಕೊಡ್ತೀನಿ ಕೊಡ್ತೀನಿ ಅಂತ ಹೇಳಿ ಹೇಳಿ ಮಸ್ಕಾ ಹೊಡೆದು ಸೋತ ಕಥೆ.
    ನಾನು ಆ ಹೈಸ್ಕೂಲಿಗೆ ಬುದ್ಧಿವಂತ ವಿದ್ಯಾರ್ಥಿ ಎಂಬ ಖ್ಯಾತಿಯ ಜೊತೆಗೆ ಕಣಕ್ಕಿಳಿದಿದ್ದೆ. ಶಿಕ್ಷಕರ ಮನಸ್ಸು ನಾನಾಗಲಿ ಎಂದಿತ್ತು. 10 ನೇಕ್ಲಾಸಿನಲ್ಲಿ ಕಾರ್ಯದರ್ಶಿ ಸ್ಥಾನಕ್ಕೆ ನಿಂತಿದ್ದ ನನ್ನ ವಿರುದ್ಧ ನಿಂತಿದ್ದು ನಂಜುಂಡ ಎಂಬಾತ. 8, 9, 10 ಈ ಮೂರು ಕ್ಲಾಸಿನ ವಿದ್ಯಾರ್ಥಿಗಳು ಮತ ಹಾಕಬೇಕು. ಚುನಾವಣೆ ರಂಗೇರಿತು. ನನ್ನ ಕ್ಲಾಸಿನ ಕುರಿತು ಅಪಾರ ಆತ್ಮವಿಶ್ವಾಸ ಇದ್ದ ನಾನು ಒಳ್ಳೆಯ ಭಾಷಣ ಬಿಗಿದೆ. ಪ್ರತಿಯಾಗಿ ನಂಜುಂಡನಿಗಿಂತ 5 ಮತ ಜಾಸ್ತಿ ಬಿತ್ತು. 9ನೇ ಕ್ಲಾಸಿಗೆ ಹೋಗಿ ಹಾಗೆ ಮಾಡ್ತೀನಿ, ಹೀಗೆ ಮಾಡ್ತೀನಿ ಅಂತೆಲ್ಲ ಹೇಳಿ ಭಾಷಣ ಕೊಚ್ಚಿದ ಪರಿಣಾಮ ನಂಜುಂಡನಿಗಿಂತ 2 ಮತ ಜಾಸ್ತಿ ಆಯ್ತು. ಅಲ್ಲಿಗೆ ನನ್ನ ಲೀಡ್ 7. ಇನ್ನುಳಿದಿದ್ದು 8ನೇ ಕ್ಲಾಸು. ಬಿಡಿ ಅವರು ಬಚ್ಚಾಗಳು. ಹೇಗೆಂದರೂ ನನಗೆ ಮತ ಹಾಕ್ತಾರೆ ಅಲ್ಲಿಗೆ ನಾನು ಗೆದ್ದಂತೆಯೇ ಅಂದ್ಕೊಂಡು ಭಾಷಣ ಮಾಡಿದೆ. ಆದರೆ ಚುನಾವಣೆಯಲ್ಲಿ ಎಲ್ಲಾ ಉಲ್ಟಾ. ನನಗಿಂತ 10 ಮತಗಳನ್ನು ಜಾಸ್ತಿ ಪಡೆದ ನಂಜುಂಡ 3 ಮತಗಳ ಲೀಡ್ ಆಧಾರದ ಮೇಲೆ ಗೆಲುವಿನ ಕೇಕೆ ಹಾಕಿ ನಕ್ಕಿದ್ದ.
    ಅರೇ ಯಾಕ್ ಹಿಂಗಾಯ್ತು ಅಂತ ಮಥನ ಮಾಡಿದಾಗ ಕೊನೆಗೆ ತಿಳಿದಿದ್ದು, ನಂಜುಂಡನ ಊರಿನ ಹುಡುಗರೇ ಆ ಕ್ಲಾಸಿನಲ್ಲಿ ಮೆಜಾರಿಟಿ ಅಂತ. ಸೋಲೆಂಬ ಸೋಲು ಸೋಲಾಗಿಬಂದ ಪರಿಣಾಮ ನಾನು ಸೋತೆ. ವಿಚಿತ್ರ ನೋಡಿ ಆ ನಂಜುಂಡ  ಕಾರ್ಯದರ್ಶಿ ಆಗಿದ್ದೇನೋ ನಿಜ. ಆದರೆ ನಂತರ ಆ ವರ್ಷದಲ್ಲಿ ಆತ ಅರ್ಧದಲ್ಲಿಯೇ ಕಾಲೇಜು ಬಿಟ್ಟ ಪರಿಣಾಮ  ಕಾರ್ಯದರ್ಶಿ ಇದ್ದೂ ಇಲ್ಲದೇ ಅನಾಥವಾಗಿತು ನಮ್ಮ ಹೈಸ್ಕೂಲು.
    ಇನ್ನು ಕಾಲೇಜು ವಿಷಯ. ಕಾಲೇಜು ಚುನಾವಣೆಗಳಲ್ಲಿ ಜೆನರಲ್ ಸೆಕ್ರೆಟರಿಯ ಆಯ್ಕೆ ವಿಧಾನವಿದೆಯಲ್ಲ ಅದರ ಕುರಿತು ಹೇಳಲೇಬೇಕು. ಮೊದಲು ಕಾಲೇಜಿನ ಕ್ಲಾಸಿಗೆ ಚುನಾವಣೆಗೆ ನಿಲ್ಲಬೇಕು. ಆಮೇಲೆ ಗೆದ್ದವರಲ್ಲೇ ಮೇಲಿನ ಸ್ಥಾನಕ್ಕೆ ಆಯ್ಕೆ ನಡೆಯುತ್ತದೆ. ಇದೊಂತರಾ ಬಿಜೆಪಿಯಲ್ಲಿ ಗೆದ್ದರೂ ಮೇಲೆ ಮುಖ್ಯಮಂತ್ರಿ ಆಗಲು ಚುನಾವಣೆ ಮಾಡ್ಕೋತಾರಲ್ಲ ಹಾಗೆ. ಅದೊಂದೆ ಅಲ್ಲಾ ಎಲ್ಲ ಪಕ್ಷಗಳಲ್ಲೂ ಹೀಗೆಯೇ ಇದೆ. ಪ್ರಜಾಪ್ರಭುತ್ವದ ಮೂಲ ಬೇರೂ ಹೀಗೆಯೇ ಇದೆ ಅಲ್ವೇ.
    ಪಿಯು ಕಾಲೇಜಿನ ಚುನಾವಣೆಯಲ್ಲೂ ಒಂದು ಕೈ ನೋಡಿದ್ದೆ ನಾನು ಎಂಬುದು ಎಷ್ಟು ಮಜಬೂತು ವಿಷಯ ಅಂದ್ರೆ ಆಕುರಿತು ನೀವು ಬೇಡ ಎಂದರೂ ಕೇಳಲೇ ಬೇಕು. ಪಿಯು ಎರಡನೇ ವರ್ಷ. ನಾವೆಲ್ಲ ರಾಘವೇಂದ್ರ ಎನ್ನುವವನನ್ನು ಚುನಾವಣೆಗೆ ನಿಲ್ಲಿಸಿ, ಗೆಲ್ಲಿಸಬೇಕು ಎಂದು ಕೊಂಡಿದ್ವಿ. ಆದರೆ ಚುನಾವಣೆಯ ದಿನವೇ ಆದ ಕಾಣೆಯಾದವರ ಪಟ್ಟಿಯಲ್ಲಿ. ಮುಂದೇನು ಮಾಡೋದು. ಅಂತ ಚಿಂತಿಸ್ತಾ ಇದ್ದಾಗ ದೋಸ್ತ ಕಮಲಾಕರ ಚುನಾವಣೆಗೆ ನಿಲೀನಿ ಅಂತ ಘೋಷಿಸಿಬಿಟ್ಟ. ಅವನ ವಿರುದ್ಧ ನಿಲ್ಲೋರು ಯಾರೂ ಇಲ್ಲ. ಅವಿರೋಧವೇ ಆಯ್ತೇ ಅನ್ನೋ ಆಲೋಚನೆ. ಮಿತ್ರ ಕಮಲಾಕರ ಅವಿರೋಧ ಆಯ್ಕೆ ಆಗ್ತಾನೆ ಅಂದರೆ ಖುಷಿಯೇ. ಆದರೆ ಚುನಾವಣೆ ನಡೆದರೆ ಒಂದು ದಿನದ ಕ್ಲಾಸು ಹಾಳಾಗಿ ಸ್ವಲ್ಪ ಮನರಂಜನೆ ಸಿಗುತ್ತದಲ್ಲಾ. ಅದಕ್ಕೆ ಏನು ಮಾಡೋದು ಅಂತ ಆಲೋಚಿಸುತ್ತಿದ್ದಾಗ ಗೆಳೆಯ ಹೇಮರಾಜ ಬಂದು ನೀನು ನಿಂತ್ಕೋ ವಿನು ಅಂದ. ನಾನು ತಮಾಷೆ ಮಾಡ್ತಿರಬೌದು ಅಂದುಕೊಂಡೆ. ಏಕೆಂದರೆ ಬಹಿರಂಗವಾಗಿ ಹೇಮು ಕಮಲಾಕರನನ್ನು ಸಪೋಟರ್್ ಮಾಡ್ತಿದ್ದ. ಆದರೆ ಅವನೇ ಹೀಗೆ ಹೇಳ್ತಿದ್ದಾನಲ್ಲ ಅಂತ. ಸರಿ ಸೋಲಿನ ಸರಪಳಿಗೆ ಇನ್ನೊಂದು ಸೇರಿಸೋಣ ಅಂದ್ಕೊಂಡು ಚುನಾವಣೆಗೆ ನಿಂತೆ.
    ಚುನಾವಣೆಯ ಭಾಷಣದ ವೇಳೆ ಕಮಲಾಕರ `ನೀವು ಯಾರಿಗೆ ಬೇಕಾದ್ರೂ ಮತ ಹಾಕಿ. ಆದರೆ ಒಳ್ಳೆಯವರಿಗೆ ಹಾಕಿ. ದೋಸ್ತ ವಿನಯ್ ನನಗಿಂತ ಒಳ್ಳೆಯವ. ಆತನಿಗೆ ಮತ ಹಾಕಿದ್ರೂ ನನಗೆ ಬೇಜಾರಿಲ್ಲ' ಎಂದು ಭಾಷಣ ಮಾಡಿ ದೊಡ್ಡೋನಾಗಿಬಿಟ್ಟ. ನಾನಂತೂ ಹಾಗೆ ಮಾಡ್ತೇನೆ ಹೀಗೆ ಮಾಡ್ತೇನೆ ಅಂತ ಪಕ್ಕಾ ರಾಜಕಾರಣಿ ಥರಾ ಭರವಸೆಗಳ ಸುರಿಮಳೆ ಸುರಿಸಿದೆ. ಆದರೂ ನಾನು ಗೆಲ್ಲೋದು ಡೌಟು. ಇನ್ನೇನು ಮಾಡೋದು ಅಂತ ಆಲೋಚಿಸಿ, ಮಹಿಳಾ ಮಣಿಯರ ಬಳಿ ಹೋಗಿ ನನಗೆ ಮತ ಹಾಕಬೇಕು ಎಂದು ಮಾತನಾಡಿಸಿದೆ. ಕಮಲಾಕರನಿಗೆ ಅದೇನು ಆಗಿತ್ತೋ. ಒಬ್ಬೇ ಒಬ್ಬ ಹುಡುಗಿಯರ ಬಳಿಯೂ ಮತ ಯಾಚಿಸಲಿಲ್ಲ. ಇಷ್ಟ ಇದ್ದರೆ ಹಾಕ್ತಾರೆ ಬಿಡು ಅನ್ನೋ ಮೆಂಟಾಲಿಟಿಯ ಆತ ಸುಮ್ಮನಾಗಿ ಬಿಟ್ಟ. ಪರಿಣಾಮವಾಗಿ ಷುನಾವಣೆಯಲ್ಲಿ ಭೀಕರವಾಗಿ ಅಂದರೆ 27-9 ಮತಗಳ ಅಂತರದಲ್ಲಿ ಗೆದ್ದು ಬಿಟ್ಟೆ.
    ಸೋಲಿನ ಸರಪಳಿ ತುಂಡರಿಸಿದಂತಹ ಸಂಭ್ರಮ. ಸಾಲು ಸಾಲು ಮ್ಯಾಚುಗಳನ್ನು ಸೋತನಂತರ ಅಪರೂಪಕ್ಕೆ ಗೆಲ್ಲುವ ಭಾರತ ತಂಡವೂ ಇಷ್ಟು ಖುಷಿ ಪಟ್ಟಿಲ್ಲ ಅನ್ಸುತ್ತೆ. ಸರಿ ಹುಡುಗರ ಪ್ರತಿನಿಧಿಯಾದೆ. ಕಮಲಾಕರನನ್ನೇ ನನ್ನ ಆಪ್ತ ಸಲಹೆಗಾರನನ್ನಾಗಿ ನೇಮಕ ಮಾಡಿಕೊಂಡೆ. ಅಂವ ಹೇಳಿದ್ದು, ಇನ್ನೇನು ಕಾಲೇಜು ಜಿ.ಎಸ್. ಗೂ ನೀನೇ ನಿಲ್ಗಲು ಅಂತ. ಬೇಡ ಬೇಡ ಎನ್ನುವ ಮನಸ್ಥಿತಿಯಲ್ಲೇ ನಿಂತೆ. ನಮ್ಮದು ಹೈಸ್ಕೂಲು ಸೇರಿಕೊಂಡಿದ್ದ ಪಿಯು ಕಾಲೇಜಾದ್ದರಿಂದ ಹೈಸ್ಕೂಲು ಪ್ರತಿನಿಧಿಗಳ ಓಟಿಗೂ ಮಹತ್ವ ಇರುತ್ತದೆ. ಅವರೆಲ್ಲ ಮತ ಹಾಕಿದರು ಗೆದ್ದೆ.
    ಗೆದ್ದು ಜಿ.ಎಸ್. ಆದ ಮೇಲೆ ಶುರು ಆಯ್ತು ನೋಡಿ ಪಡಿಪಾಟಲು. ಒಂದೇ ಒಂದು ಕೆಲಸವನ್ನು ನೆಟ್ಟಗೆ ಮಾಡಲಿಕ್ಕೆ ಆಗಲೇ ಇಲ್ಲ. ವೋಟು ಹಾಕಿದ್ದ ಮಿತ್ರರು ಅದೆಷ್ಟು ಬೇಜಾರು ಮಾಡ್ಕೊಂಡ್ರೋ. ಸಾಂಸ್ಕೃತಿಕ ಕಾರ್ಯಕ್ರಮಗಳು ಸುಮಾರಾಗಿ ನಡೆದರೂ ಕ್ರೀಡಾ ಕಾರ್ಯಕ್ರಮ ಸೇರಿದಂತೆ ಇತರ ಎಲ್ಲವುಗಳೂ ಟುಸ್ಸಾಗಿದ್ದವು. ಅಷ್ಟೇ ಅಲ್ಲದೇ ಉಪನ್ಯಾಸಕರ ಜೊತೆ ಮುನಿಸು ಮಾಡ್ಕೊಂಡು ಮಾತು ಬಿಟ್ಟಿದ್ದೆ. ಕೆಲವು ಮಿತ್ರರ ಪರವಾಗಿದ್ದರಿಂದ ನಮ್ಮ ಹಾಗೂ ನಮ್ಮ ಪ್ರಾಧ್ಯಾಪಕರ ನಡುವೆ ಅಂತರ ಬೆಳೆದು ಆ ವರ್ಷ ಬೀಳ್ಕೊಡುಗೆ ಸಮಾರಂಭವನ್ನೂ ಮಾಡಲಾಗಲಿಲ್ಲ. ಅಂತೂ ಆ ವರ್ಷ ಮುಗಿದರೆ ಸಾಕು ಅನ್ನಿಸಿತು.
    ಕೊನೆಗೊಮ್ಮೆ ಗೆಲುವು ಪಡೆದೆ. ದೊಡ್ಡದಾಗಿ ಪಡೆದರೂ ಅದು ನನ್ನನ್ನು ಸಾಕು ಬೇಕು ಎನ್ನಿಸಿದ್ದು ಮಾತ್ರ ಸುಳ್ಳಲ್ಲ. ಅಷ್ಟರ ನಂತರ ಮತ್ಯಾವುದೇ ಚುನಾವಣೆಗೂ ನಿಲ್ಲಲಿಲ್ಲ ಬಿಡಿ. ಡಿಗ್ರಿಯಲ್ಲಿ ನಾನು ಸವರ್ೇ ಸಾಮಾನ್ಯ ಆಮ್ ಆದ್ಮಿಯಾಗಿದ್ದೆ. ಯಾರೋ ಬಂದು ನಂಗೆ ಮತ ಹಾಕು ಅನ್ನೋರು. ಹುಂ ಅನ್ನೋದು, ಇನ್ನೊಬ್ರು ಬಂದು ನಿಂದು ನನಗೆ ಅನ್ನೋರು.. ಅದಕ್ಕೂ ಹುಂ ಅಂತಿದ್ದೆ. ಯಾರು ಗೆದ್ರೋ ಯಾರು ಬಿಟ್ರೋ .. ಆದರೆ ಮತ ಎಣಿಕೆಗೆ ಮಾತ್ರ ಬಹಳ ಕುತೂಹಲದಿಂದ ಕುಳಿತ್ಕೊಳ್ತಿದ್ದೆ. ಯಾಕಂದ್ರೆ ಅದೊಂತರಾ ಪ್ಲೇವಿನ್ ಹಾಂಗೆ.. ಸಂಖತ್ ಖುಷಿ, ಟೆನ್ಶನ್ ಕೊಡೋವಂತದ್ದು.
    ಬಿಡಿ.. ಚುನಾವಣೆ ಅಂದ್ರೇ ಹಾಗೆ ಅಲ್ವಾ.. ಅಲ್ಲಿ ಸೋಲು ಗೆಲುವು ಇದ್ದದ್ದೇ. ಇಂತಹ ನನ್ನ ಬದುಕಿನ ಚುನಾವಣೆಗಳು ವಿಜಯ್, ಕಮಲಾಕರ, ಪ್ರದೀಪ್, ಸುರೇಂದ್ರ ಈ ಮುಂತಾದ ಕೆಲವು ಮಿತ್ರರನ್ನು ನನಗೆ ನೀಡಿದೆ ಎನ್ನುವುದಂತೂ ಸುಳ್ಳಲ್ಲ.

Saturday, November 3, 2012

ಒಂದು ಕವಿತೆ

ವಿಷಜಂತು

ಬಹು ದಿನಗಳಿಂದ
ವಿಷ ಸಂಗ್ರಹಿಸಿ
ಸೇಡಿಟ್ಟು ಕಾದ
ಹಾವು ಕೊನೆಗೊಂದು ದಿನ
ಅವನಿಗೆ ಕಚ್ಚಿತು...
ಬಿಡದೇ ವಿಷ ಕಕ್ಕಿತು.. ಕಾರಿತು...
ನಂಜೂ ಏರಿತು..
ಆದರೆ.,
ಹಾವು ಸತ್ತು ಹೋಯಿತು...!!!

ಎಲ್ಲ ಮರೆತಿರುವಾಗ... ( ಕಥೆ ಭಾಗ-6)

(ಭಾಗ ಐದರಿಂದ ಮುಂದುವರಿದಿದ್ದು..)

ಇಷ್ಟೆಲ್ಲ ಆದರೂ ಆತನ ಹೆಸರು ನೆನಪಾಗಲಿಲ್ಲ ನೋಡಿ...
ಜೀವನ್.. ಅವನ ಹೆಸರು..
ಶಿರಸಿ ಹತ್ತಿರದ ಅಪ್ಪಟ ಮಲೆನಾಡಿನ ಹಳ್ಳಿ..
ಒಂದು ಕಡೆ ದೈತ್ಯಾಕಾರದ ಗುಡ್ಡ.. ಿನ್ನೊಂದು ಕಡೆಗೆ ಅಡಿಕೆಯ ತೋಟ...
ಮತ್ತೊಂದು ಕಡೆ ಊರನ್ನು ಮುತ್ತಿಕ್ಕಿ ಕುತ್ತಿಕ್ಕಿ ಹರಿಯುವ ನದಿ ಅಘನಾಶಿನಿ,...

ಆತ ಬೆಂಗಳೂರಿನ ಭ್ರಮಾನಗರಿಯನ್ನು ಹೊಕ್ಕು ಹಾದಿದ ಕೆಲವೇ ದಿನಗಳಲ್ಲಿ ಆ ಊರಿನ ಪಟ್ಟುಗಳನ್ನೆಲ್ಲ ಕಲಿತುಬಿಟ್ಟ.
ಾತನ ಪಾಲಿನ ಹಾಡೂ ಅಷ್ಟೇ ಕೈ ಹಿಡಿಯಿತು.
ನಿಧಾನವಾಗಿ ಹಾಡಿನ ಕಛೇರಿ ಕೊಡಲು ಪ್ರಾರಂಭಿಸಿದ..
ಾತನ ಹಾಡುಗಳಿಗೆ ಎಫ್ ಎಂ ರೇಡಿಯೋಗಳು ಧ್ವನಿಯಾದವು..
ನಿಧಾನವಾಗಿ ಆತ ಕನಾಱಟಕಾದ್ಯಂತ ವರ್ಡ್ ಫೇಮಸ್ಸಾಗಲು ಪ್ರಾರಂಭಿಸಿದ..
ಮುಂದೊಮ್ಮೆ ಆಗಿಯೂಬಿಟ್ಟ..
ಪ್ರತಿಯಾಗಿ ರಾಜ್ಯೋತ್ಸವದಂತಹ ಹಿರಿಯ ಪ್ರಶಸ್ತಿಗಳೇ ಆತನಿಗೆ ಸಿಕ್ಕವು...
ಯುವ ವಯಸ್ಸಿನಲ್ಲೇ ಆತ ಬಹುದೊಡ್ಡ ಸೆಲೆಬ್ರಿಟಿಯಾಗಿ ಹೊರಹೊಮ್ಮಿದ.

---

ಾತನ ಯಶಸ್ಸನ್ನು ಕಂಡು ಹಿಗ್ಗಿದವಳು ರಚನಾ..
ಬೆಂಗಳೂರಿಗೆ ಕರೆತಂದು ಆತನನ್ನು ಸರಿಪಡಿಸಿ, ತನ್ನ ಮನೆಯಲ್ಲೇ ಆಶ್ರಯ ನೀಡಿದವಳು ಆಕೆ..
ಆಕೆಯೆಡೆಗೆ ಧನ್ಯತಾ ಭಾವ ಜೀವನ್ ಗೆ..
ಆಕೆಗೆ ಪ್ರೇಮದ ಭಾವ...

ಅದನ್ನು ಹೇಳಿಕೊಳ್ಳಲು ಆಗದ ತಳಮಳ...
ಹೇಳಿದರೆ ಅದ್ಯಾವ ರೀತಿಯ ಪ್ರತಿಕ್ರಿಯೆ ನೀಡ್ತಾನೋ ಅನ್ನುವ ಻ಳುಕು ಆಕೆಯ ಮನದೊಳಗೆ...

ಆದರೂ ಅದನ್ನು ಕೇಳುವ ನೆಪದಲ್ಲಿ ಜೀವನ್ನ ಬಳಿ ಒಂದು ದಿನ ಬಂದು ಮಾತನಾಡಲಾರಂಭಿಸಿದಳು...
ಹಾಯ್ ಜೀವನ್..
ಹೇಳು ರಚನಾ..
ಹೇಗಿದೆ ಹೊಸ ಲೈಫು..?
ಏನೋ ಬೇರೆಯ ಥರಾ ಇದ್ದು..
ನಿನ್ ಮೊದಲಿನ ಬದುಕಿಗೆ ಈಗಿನದಕ್ಕೆ ಸಂಪೂಣಱ ಬದಲಾವಣೆ ಸಿಕ್ಕಿದ್ದು...
ಹೌದು...
ಆದರೆ ನಂಗಿನ್ನೂ ನಿನ್ನ ಪೂರ್ವ ಿತಿಹಾಸ ತಿಳಿದ್ದಿಲ್ಲೆ... ಏನಾಗಿತ್ತು ನಿಂಗೆ... ಯಾಕೆ ನಿಂಗೆ ಹುಚ್ಚು ಹಿಡಿದಿತ್ತು.. ಇಂತಹ ಟ್ಯಾಲೆಂಟೆಡ್ ವ್ಯಕ್ತಿ ನೀನು.. ಯಾಕೆ ಶಿರಸಿಯಲ್ಲಿ ಆ ಪರಿಯ ಕೆಟ್ಟಾ ಕೊಳಕು ಜೀವನ ನಡಿಸ್ತಾ ಇದ್ದಿದ್ದೆ?

ಚಿಂತನೆಗೆ ಬಿದ್ದ ಜೀವನ್ ನಿಟ್ಟುಸಿರು ಬಿಟ್ಟು... ಏನ್ ಹೇಳವ್ವು... ನನ್ನ ಬದುಕಿನ ಬಗ್ಗೆ ಹೇಗೆ ಹೇಳೋದು... ಅದೊಂದು ಥರಾ ಕಹಿ ಘಟನೆಗಳ ಗೋಜಲು ಗೋಜಲು.. ಹೇಳು ಹೋದರೆ ಮನಸ್ಸಿಗೆ ಬೇಸರ... ಹೇಳೋದಾದ್ರೋ ಹ್ಯಾಂಗೆ ಅಂತ....

ರಚನಾ: ಹೇಳೋ ಮಾರಾಯ.. ಕೇಳಿ ಸ್ವಲ್ಪ ತಿಳ್ಕತ್ತಿ..
ಜೀವನ್ : ಹೌದು.. ಆದರೆ ಹೆಂಗೆ ಹೇಳೋದು..? ನಂಗೆ ತಳಮಳ...
ರಚನಾ: ಟೈಂ ತಗಂಡಾದ್ರೂ ಹೇಳು ಮಾರಾಯಾ...

ಜೀವನ್ ಆಲೋಚಿಸಿ.. ಆಲೋಚಿಸಿ ಹೇಳಲು ತೊಡಗಿದ....

(ಮುಂದಿನದು.... ಮುಂದಕ್ಕೆ....)

Friday, November 2, 2012

ನಮ್ಮೂರಿನ ಕುರಿತು ವೀಕಿಪೀಡಿಯಾದಲ್ಲಿ ಬರೆಯಲಾಗಿರುವ ಸಾಲುಗಳು...

ನಮ್ಮೂರಿನ ಕುರಿತು ವೀಕಿಪೀಡಿಯಾದಲ್ಲಿ ಬರೆಯಲಾಗಿರುವ ಸಾಲುಗಳು...

ಗೂಗಲ್ಗೆ ಹೋಗಿ DANTKAL ಎಂದು ಸರ್ಚ್ ಕೊಟ್ಟರೆ ಈ ಪುಟ ಪ್ರತ್ಯಕ್ಷ... 

ನಮ್ಮೂರಿನ ಕುರಿತು ಕೆಲವು ವಿಶೇಷಗಳನ್ನು ಇಲ್ಲಿ ದಾಖಲಿಸುವ ಪ್ರಯತ್ನ ಅಷ್ಟೆ...

Dantkal

From Wikipedia, the free encyclopedia
Jump to: navigation, search
Dantkal is a village near Sirsi, Siddapura Taluk, North Kanara, State of Karnataka, India. All people staying there are Havyaka Brahmins, and the village is only connected with roads from Sirsi and Siddapur. This place is famous for "Shedi" So this place is known as Shedi Dantkal.[citation needed] The place is on the shore of river "Aghanashini". "Agha" means "sin" and "Nashini" means "remover". Dantkal is mainly famous for Ananta Bhattana Appe. This is a different type of mango. Locations Dantkalis in between hosmane, hittalakai, muttamurdu, adkalli and sankada mane.. every side full of forest. one side is in AGHANASHINI Rivar. Most of the peoples are Areconout grovers.Some of the younger generations peoples are in Bangalore, Sirsi, Tumkur, Shimogga etc.. Dantkal from sirsi 16 Kms, from siddapura 30 Kms, form Kanasuru 6.5 Kms.
Notable Persons
  • Ganapati Ganesh Hegde -Kasi tajna, Appemidi tali ulisida vyakti
  • Ganesh Hegde- Freedom Fighter, Vidyuth tayarisida vyakti.
  • Ramachandra Hegde- Abakari ilakheyalli kelasamaadi nivrutti hondiddare..
  • Ganapati vi. Hegde-ISRO dalli karya nirvahisuttiddare..
  • Subraya V. Hegde-Founder of ANAGHA HARBAL PRODUCTS, Nati vaidya, Aakala kechchalu baavige oushadhi koduva vishesha vyakti
  • Ganga Hegde- Ayurveda Salahegarti, Ayurveda tajne
  • Madhukeshvara t. hegde- Koogilu balliya vastugala tayarika vyakti
  • Kamalaxi hegde- Halli haadugala saradaarini
  • V. V hegde Melnamane-Homeopathya Doctor
  • V. V. Hegde- Teacher
  • R. V. Hegde- Sahakaari dhureena, At present lokhadhvaniyalli karya nirvahane..
  • Vinay Hegde- Journalist
  • Sindhu Hegde- Rank Holder student, at present Charted accountent..
Notable Areas

ಇದು ಏಕಾದಶಿ ಗುಡ್ಡದಲ್ಲಿ ಕಾಣಸಿಗುವ ಸುಂದರ ಸೂರ್ಯೋದಯದ ದೃಶ್ಯ ವೈಭವ...
  • Ekadashi Gudda- Famous for sunset
  • Shedi Gudda - It is famous for Shedi mannu
  • Devara Kaanu - famous of historical idols, old pots.


Thursday, November 1, 2012

ಎಲ್ಲ ಮರೆತಿರುವಾಗ... (ಕಥೆ - ಭಾಗ : 5)

 (ಮೊದಲಿಗೆ ಒಂದಷ್ಟು ಮಾತು.... ಎಂದೋ ಅರ್ಧಂಬರ್ಧ ಬರೆದಿಟ್ಟಿದ್ದ ಈ ಕಥೆಗೆ ಮತ್ತೆ ಜೀವ ತುಂಬುವ ಯತ್ನ... ಬಹಳ ತಡವಾಗಿದೆ.. ಕ್ಷಮೆ ಇರಲಿ... ಮುಂದೆ ಓದಿ... ಹೇಗಿದೆ ಎಂಬುದನ್ನು ತಿಳಿಸಿ...)

(ನಾಲ್ಕನೇ ಭಾಗದಿಂದ.....)

ಆದರೆ ಅದನ್ನು ಪ್ರೇಮವೆನ್ನಬೇಕಾ... ತಿಳಿಯದಂತಾಗಿದೆ...
ರಚನಾ ಳ ಸಂದಿಗ್ಧತೆಗೆ ಉತ್ತರ ಬಲು ಕಷ್ಟವಾದುದೇ ಹೌದು... ಆದರೂ ಅದನ್ನು ಏನೆಂದು ಕರೆಯೋಣ..?
ಆಕರ್ಷಣೆಯಾ..? ಅರ್ಥವಾಗುತ್ತಿಲ್ಲ... ಆದರೆ ದಿನದಿಂದ ದಿನಕ್ಕೆ ಸನಿಹವಾಗುತ್ತಿದ್ದಾನೆ...
 ದಿನದ ತೊಳಲಾಟಗಳಲ್ಲಿ ಬಳಲಿ ಬಸವಳಿದವಳು ಈಕೆ...

--

ಅಷ್ಟರಲ್ಲಾಗಲೇ ಅವನು ಸಂಪೂರ್ಣ ಚೇತರಿಕೆ ಕಂಡಿದ್ದ... ಹಳೆಯ ನೆನಪುಗಳು ನಿಧಾನವಾಗಿ ಮರುಕಳಿಸಲು ಪ್ರಾರಂಭವಾಗಿದ್ದವು.. ಎಲ್ಲಕ್ಕಿಂತ ಮಿಗಿಲಾಗಿ ಆತನ ಹಾಡು ಕಳೆಕಟ್ಟಲಕಾರಂಭವಾಗಿತ್ತು...
ಆತನ ಹಾಡುವ ವೈಖರಿಯನ್ನು ಗಮನಿಸಿದ ರಚನಾ ಆತನನ್ನು ಸಂಗೀತ ತರಗತಿಗೆ ಸೇರಿಸಿದಳು..
ಸಂಗೀತ ತರಗತಿಯಲ್ಲಿಯೇ ಆತನ ಬದುಕು ಹೊರಳು ದಾರಿಯನ್ನು ಕಂಡಿತು..
ಬೆಂಗಳೂರೆಂಬ ಭ್ರಮಿತ ೂರಿನಲ್ಲಿ ಹಲವಾರು ಸಂಗೀತದಿಗ್ಗಜರಿದ್ದಾರೆ..
ಅವರಲ್ಲೊಬ್ಬರು ಆತನಿಗೆ ಗುರುವಾಗಿ ಸಿಕ್ಕಿದರು...
ಹಳೆಯ ನೆನಪುಗಳ ಸಹಾಯದಿಂದ ಾತ ಬಹು ಬೇಗನೆ ಸಂಗೀತದ ಮಟ್ಟುಗಳನ್ನೆಲ್ಲ ಕಲಿತ...
ಹಾಡಿಗೆ ಸ್ಪಷ್ಟ ರೂಪ ಸಿಕ್ಕಿತು....

ಕೊಚ್ಚಿ ಹೋಗುವ ಎಲೆಗೆ..
ಬಲೆಯ ಹಾಕಿದ ಹಾಗೆ..
ನನ್ನ ಬಾಳಲಿ ನೀನು...
ಸುಳಿದು ಬಂದೆ....

ಇದು ಆತನ ಪಾಲಿಗೆ ಎಂದೂ ಮರೆಯದ ಸಾಲುಗಳಾದವು....

(ಮುಂದುವರಿಯುತ್ತದೆ...)