Saturday, August 21, 2010

ಮನ ಸೆಳೆಯುವ ಉತ್ತರ ಕನ್ನಡ ಜಲಪಾತಗಳು

ಉತ್ತರ ಕನ್ನಡ ಜಿಲ್ಲೆಯಲ್ಲಿ ನೂರಾರು ಸುಂದರ ಜಲಪಾತಗಳಿವೆ. ಸುರಿಯುತ್ತಿರುವ ಮುಂಗಾರಿನಿಂದ ಇಲ್ಲಿನ ಜಲಪಾತಗಳಿಗೆ ಮತ್ತೆ ಜೀವಕಳೆ ಬಂದಿದೆ. ಮುಂಗಾರಿನಲ್ಲಿ ಹೊಸ ಜೀವ ಪಡೆಯುವ ಈ ಜಲಪಾತಗಳು ಎಲ್ಲರ ಆಕರ್ಷಣೆಯ ತಾಣಗಳು. ಮಳೆ ಹನಿಯಿಂದಾಗಿ ಮನಸೆಳೆಯುತ್ತಿರುವ ಈ ಜಲಪಾತಗಳ ಬಗ್ಗೆ ಕಿರು ಪರಿಚಯ ಹೀಗಿದೆ.

ಬಳುಕುವ ಉಂಚಳ್ಳಿ ಜಲಪಾತ
ಅಘನಾಶಿನಿ ನದಿಯಿಂದ ಸೃಷ್ಟಿಯಾಗುವ ಈ ಜಲಪಾತವನ್ನು ಲೂಷಿಂಗ್ಟನ್ ಜಲಪಾತ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಶಿರಸಿಯಿಂದ 30 ಕಿಲೋಮೀಟರ್ ಅಂತರದಲ್ಲಿರುವ ಈ ಜಲಪಾತದ ಎತ್ತರ 116 ಮೀಟರ್. 1845ರಲ್ಲಿ ಉತ್ತರ ಕನ್ನಡದಲ್ಲಿ ಸವರ್ೇ ಕಾರ್ಯ ನಿರ್ವಹಿಸುತ್ತಿದ್ದ ಬ್ರಿಟೀಷ್ ಅಧಿಕಾರಿ ಜೆ. ಡಿ. ಲೂಷಿಂಗ್ಟನ್ ಈ ಜಲಪಾತವನ್ನು ಕಂಡುಹಿಡಿದ ಎಂಬ ಮಾಹಿತಿಯಿದೆ. ಆದ್ದರಿಂದ ಈ ಜಲಪಾತವನ್ನು ಲೂಷಿಂಗ್ಟನ್ ಜಲಪಾತ ಎಂದು ಕರೆಯುತ್ತಾರೆ. ಈ ಜಲಪಾತದ ನೀರು ಬೀಳುವಾಗ ಭಾರಿ ದೊಡ್ಡ ಶಬ್ದ ಉಂಟುಮಾಡುತ್ತದೆ. ಆ ಕಾರಣದಿಂದ ಸ್ಥಳೀಯರು ಈ ಜಲಪಾತವನ್ನು `ಕೆಪ್ಪ ಜೋಗ' ಎಂದು ಕರೆಯುತ್ತಾರೆ. ವರ್ಷದ ಎಲ್ಲ ಕಾಲದಲ್ಲಿಯೂ ಈ ಜಲಪಾತದ ದರ್ಶನ ಲಭ್ಯ. ಮಳೆಗಾಲದಲ್ಲಂತೂ ಇದು ರುದ್ರರಮಣೀಯ.

ಸೊಬಗಿನ ಸಾತೊಡ್ಡಿ ಜಲಪಾತ
ಯಲ್ಲಾಪುರ ತಾಲೂಕಿನಲ್ಲಿರುವ ಈ ಜಲಪಾತ ತಾಲೂಕಿನ ಮುಖ್ಯ ಪಟ್ಟಣದಿಂದ 30 ಕಿ.ಮಿ ದೂರದಲ್ಲಿದೆ. ಕಾಳಿ ನದಿಯ ಉಪ ನದಿಯಿಂದ ಸೃಷ್ಟಿಯಾಗುವ ಈ ಜಲಪಾತವನ್ನು ಮಿನಿ ಜೋಗ ಎಂದೂ ಕರೆಯುತ್ತಾರೆ. ನಿಸರ್ಗದ ನಟ್ಟ ನಡುವೆ ಇರುವ ಈ ಜಲಪಾತ ಮಳೆಗಾಲದಲ್ಲಿ ಅತ್ಯಂತ ಆಕರ್ಷಣೀಯ. ಬಳುಕುತ್ತಾ ಕಮರಿಗೆ ಇಳಿಯುವ ಈ ಜಲಪಾತದ ಸೊಬಗು ವರ್ಣನಾತೀತ. ಜಲಪಾತದ ದಾರಿಯಲ್ಲಿ ಕಾಣಸಿಗುವ ಕಾಳಿ ಹಿನ್ನೀರಿನ ದೃಶ್ಯ ಪ್ರವಾಸಿಗರಿಗೆ ಬೋನಸ್ ಖುಷಿ ನೀಡುತ್ತದೆ.

ಹೊಳೆಯುವ ಬೆಣ್ಣೆಹೊಳೆ ಜಲಪಾತ
ಅಘನಾಶಿನಿಯ ಉಪನದಿಯ ಸೃಷ್ಟಿ ಈ ಬೆಣ್ಣೆಹೊಳೆ ಜಲಪಾತ. ದಟ್ಟ ಕಾನನದ ನಡುವೆ ಇರುವ ಈ ಜಲಪಾತದ ಎತ್ತರ 200 ಅಡಿಗಿಂತ ಹೆಚ್ಚು. ಜಲಪಾತಕ್ಕೆ ಸಾಗುವ ಮಾರ್ಗ ಕೊಂಚ ಕಷ್ಟಕರವಾದುದು. ಆದರೆ ಕಣ್ಮನ ಸೆಳೆಯುವ ದೃಶ್ಯವೈಭವ ಜಲಪಾತದಿಂದ ಸಾಧ್ಯ. ಶಿರಸಿಯಿಂದ ಕುಮಟಾ ಕಡೆಗೆ ಸಾಗುವ ದಾರಿಯ ನಡುವೆ ಈ ಜಲಪಾತದ ಮಾರ್ಗ ಸಿಗುತ್ತದೆ. ಅತ್ಯುತ್ತಮ ಟ್ರೆಕ್ಕಿಂಗ್ ಸ್ಪಾಟ್. ಮಳೆಗಾಲದಲ್ಲಿ ಜಲಪಾತದ ಬಳಿ ಸಾಗುವುದು ಅಪಾಯಕಾರಿ. ಆದರೆ ಉಳಿದ ಕಾಲಗಳಲ್ಲಿ ಜಲಪಾತದ ದರ್ಶನಕ್ಕೆ ಹೇಳಿಮಾಡಿಸಿದ ಹಾಗಿದೆ. ಕಾಡು, ಕಾಡುಪ್ರಾಣಿಗಳ ಪ್ರದೇಶ ಇದು.

ಅಭಯಾರಣ್ಯದ ಒಡಲಿನ ಕೂಸು ಅಣಶಿ ಜಲಪಾತ
ಕಾರವಾರ ದಾಂಡೆಲಿ ಮಾರ್ಗ ಮಧ್ಯ ಇರುವ ಅಣಶಿ ಜಲಪಾತ ನೋಡುಗರನ್ನು ತಟ್ಟನೆ ಸೆಳೆಯುವಂತಹುದು. ಅಣಶಿ ರಾಷ್ಟ್ರೀಯ ಉದ್ಯಾನದ ನಡುವೆ ಇರುವ ಈ ಜಲಪಾತ ಕಾರವಾರದಿಂದ 32 ಕಿಲೋಮೀಟರ್ ದೂರದಲ್ಲಿದೆ. ಪಶ್ಚಿಮ ಘಟ್ಟದ ಹಾಗೂ ಕಾನನದ ನಡುವೆ ಇರುವ ಈ ಜಲಪಾತ ಮಳೆಗಾಲದಲ್ಲಿ ಮೈದುಂಬುತ್ತದೆ. ಈ ಜಲಪಾತ ಹಲವು ಹಂತಗಳಲ್ಲಿ ಧುಮ್ಮಿಕ್ಕುತ್ತದೆ. ಇದರ ಎಲ್ಲರ 150 ಅಡಿಗಳು. ಈ ಜಲಪಾತ ಛಾಯಾಚಿತ್ರಕಾರರಿಗೆ ಹಬ್ಬ ಉಂಟುಮಾಡುತ್ತದೆ. ಕದ್ರಾ ಅಣೆಕಟ್ಟೆಯಿಂದ 8 ಕಿಲೋಮೀಟರ್ ದೂರದಲ್ಲಿರುವ ಈ ಜಲಪಾತ ರಸ್ತೆ ಪಕ್ಕದಲ್ಲಿಯೇ ಇರುವುದರಿಂದ ಇದರ ಬುಡಕ್ಕೆ ತಲುಪಲು ಕಷ್ಟಪಡಬೇಕಿಲ್ಲ.


ಲವಲವಿಕೆಯ ಲಾಲಗುಳಿ ಜಲಪಾತ
ಮಳೆಗಾಲದಲ್ಲಿ ಮೈದುಂಬುವ ಜಲಪಾತಗಳ ಜಾತಿಗೆ ಇದು ಸೇರುತ್ತದೆ. ಕಾಳಿ ನದಿಗೆ ಬೊಮ್ಮನಹಳ್ಳಿಯಲ್ಲಿ ಅಣೆಕಟ್ಟು ನಿಮರ್ಾಣವಾಗುವ ಮೊದಲು ವರ್ಷದ ಎಲ್ಲ ಕಾಲದಲ್ಲಿಯೂ ಕಾಣಸಿಗುತ್ತಿದ್ದ ಈ ಜಲಪಾತ ಈಗ ಮಳೆಗಾಲದಲ್ಲಿ ಮಾತ್ರ ಮೈದುಂಬುತ್ತದೆ. ಯಲ್ಲಾಪುರದಿಂದ 13 ಕಿಲೋಮೀಟರ್ ದೂರದಲ್ಲಿರುವ ಈ ಜಲಪಾತ ಧುಮ್ಮಿಕ್ಕುವುದನ್ನು ನೋಡುವುದು ಬಲು ಅಂದ.



ಮನ ಸೆಳೆಯುವ ಮಾಗೋಡು ಜಲಪಾತ
ಯಲ್ಲಾಪುರದಿಂದ 20 ಕಿಲೋಮೀಟರ್ ದೂರದಲ್ಲಿರುವ ಮಾಗೋಡು ಜಲಪಾತ ಬೇಡ್ತಿ (ಗಂಗಾವಳಿ) ನದಿಯ ಸೃಷ್ಟಿ. 200 ಮೀಟರ್ ಎತ್ತರದಿಂದ ಧುಮ್ಮಿಕ್ಕುವ ಈ ಜಲಪಾತವನ್ನು ವರ್ಷದ ಎಲ್ಲ ಕಾಲದಲ್ಲಿಯೂ ವೀಕ್ಷಿಸಬಹುದು. ಮಳೆಗಾಲದಲ್ಲಿ ರುದ್ರರಮಣೀಯವಾಗಿ ಕಾಣುವ ಈ ಜಲಪಾತ ಎರಡು ಹಂತಗಳಲ್ಲಿ ದುಮ್ಮಿಕ್ಕುತ್ತದೆ. ಈ ಜಲಪಾತದ ಬಳಿ ವೀಕ್ಷಣಾ ಗೋಪುರ ನಿಮರ್ಿಸಿರುವ ಪ್ರವಾಸೋದ್ಯಮ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದೆ. ಜಲಪಾತದವರೆಗೂ ಉತ್ತಮ ರಸ್ತೆ ಇರುವುದರಿಂದ ಯಾವುದೆ ಕಾಲದಲ್ಲಿಯೂ ಪ್ರವಾಸ ಮಾಡಬಹುದಾಗಿದೆ.

ಭಯ ಹುಟ್ಟಿಸುವ ಬುರುಡೆ ಜಲಪಾತ
ಮಲೆನಾಡ ಮಡಿಲಿನಲ್ಲಿರುವ ಈ ಸುಂದರ ಜಲಪಾತ ಅಘನಾಶಿನಿ ನದಿಯ ಉಪನದಿಯ ಸೃಷ್ಟಿ. ನಾಲ್ಕು ಹಂತಗಳಲ್ಲಿ ದುಮ್ಮಿಕ್ಕುವ ಈ ಜಲಪಾತ ವೀಕ್ಷಣೆ ಮಾಡಲು ಮಳೆಗಾಲದಲ್ಲಿ ಹೋಗಲು ಸಾಧ್ಯವೇ ಇಲ್ಲ. ಸಿದ್ದಾಪುರದಿಂದ 20 ಕಿಲೋಮೀಟರ್ ದೂರದಲ್ಲಿರುವ ಈ ಜಲಪಾತ ದರ್ಶನ ಮಾಡಬೇಕೆಂದರೆ ಕನಿಷ್ಟ 6 ಕಿಲೋಮೀಟರ್ ನಡಿಗೆಯನ್ನು ಕೈಗೊಳ್ಳಲೇಬೇಕು. ಇಳಿಮನೆ ಜಲಪಾತ ಎಂದೂ ಕರೆಯಲಾಗುವ ಈ ಜಲಪಾತದ ಎರಡು ಹಂತಗಳನ್ನು ಸುಲಭವಾಗಿ ನೋಡಬಹುದು.

ಸ್ನಿಗ್ಧ ಸುಂದರ ವಿಭೂತಿ ಜಲಪಾತ
ಶಿರಸಿಯಿಂದ 40 ಕಿಲೋಮೀಟರ್ ದೂರದಲ್ಲಿರುವ ವಿಭೂತಿ ಜಲಪಾತ ವಿಭೂತಿ ಹೊಳೆಯ ಸೃಷ್ಟಿ. ವಿಶ್ವ ಪ್ರಸಿದ್ಧ ಯಾಣದ ಹತ್ತಿರದಲ್ಲಿರುವ ಈ ಜಲಪಾತದ ಎತ್ತರ 100 ಅಡಿಗಿಂತ ಹೆಚ್ಚು. ಎರಡು ಹಂತಗಳಲ್ಲಿ ದುಮ್ಮಿಕ್ಕುವ ಈ ಜಲಪಾತ ಮಳೆಗಾಲದಲ್ಲಿ ಬಹಳ ಸುಂದರವಾಗಿ ಕಾಣಿಸುತ್ತದೆ. ವರ್ಷದ ಎಲ್ಲ ಸಮಯದಲ್ಲಿಯೂ ಜಲಪಾತವನ್ನು ನೋಡಬಹುದು. ನಿಸರ್ಗದ ನಡುವೆ ಇರುವ ಈ ಜಲಪಾತ ಒಳ್ಳೆಯ ಪಿಕ್ನಿಕ್ ಸ್ಪಾಟ್.


ಶಿವಗಂಗಾ ಜಲಪಾತ
74 ಅಡಿ ಎತ್ತರದ ಶಿವಗಂಗಾ ಜಲಪಾತ ಶಿರಸಿಯಿಂದ 22 ಕಿಲೋಮೀಟರ್ ದೂರದಲ್ಲಿದೆ. ಸೋಂದಾ ಹೊಳೆಯಿಂದ ಸೃಷ್ಟಿಯಾಗಿರುವ ಈ ಜಲಪಾತ ದಟ್ಟ ಕಾಡಿನ ನಡುವೆ ಇದೆ. ಮಳೆಗಾಲದಲ್ಲಿ ಬಹಳ ಸುಂದರವಾಗಿ ಕಾಣುವ ಈ ಜಲಪಾತ ಅತ್ಯಂತ ಅಪಾಯಕಾರಿಯಾದುದು. ಜಲಪಾತಕ್ಕೆ ಸಾಗುವ ಮಾರ್ಗದಲ್ಲಿ ಸೋಂದಾ, ವಾದಿರಾಜ ಮಠ ಮುಂತಾದ ಕ್ಷೇತ್ರಗಳಿವೆ. ಅವುಗಳನ್ನು ನೋಡಿ ಬರಲು ಸಾಧ್ಯ.


ಕಾನನದ ಮಡಿಲ ವಾಟೆಹಳ್ಳ ಜಲಪಾತ
ಪಶ್ಚಿಮ ಘಟ್ಟದ ದಟ್ಟ ಕಾಡಿನ ಮಧ್ಯದಲ್ಲಿರುವ ಜಲಪಾತ ವಾಟೆಹಳ್ಳ. ಹಲವು ಹಂತಗಳಲ್ಲಿ ಧುಮ್ಮಿಕ್ಕುಪ ಈ ಜಲಪಾತದ ಸೊಬಗು ಬಹು ಸುಂದರ. ಸಿದ್ದಾಪುರದಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ಈ ಜಲಪಾತವನ್ನು ಮಳೆಗಾಲದಲ್ಲಿ ವೀಕ್ಷಣೆ ಮಾಡಲು ಸಾಧ್ಯವೇ ಇಲ್ಲ. ನಿಲ್ಕುಂದ ಬಳಿ ಇರುವ ಈ ಜಲಪಾತವನ್ನು ವೀಕ್ಷಿಸಲು ಕನಿಷ್ಟ 2 ಕಿಲೋಮೀಟರ್ ಕಾಲ್ನಡಿಗೆ ಸವೆಸಬೇಕು. ಕಡಿದಾದ ಬೆಟ್ಟವನ್ನು ಜಾಗ್ರತೆಯಿಂದ ಇಳಿದರೆ ಇದರ ದರ್ಶನ ಸಾಧ್ಯ. ಅದೃಷ್ಟವಿದ್ದರೆ ವನ್ಯ ಮೃಗಗಳೂ ಕಾಣಬಹುದು. ಹಲವು ಹಂತಗಳು ಜಲಪಾತಕ್ಕೆ ಇದ್ದರೂ ಒಂದೆ ದಿನದಲ್ಲಿ ಅವುಗಳಷ್ಟನ್ನೂ ನೋಡುವುದು ಕಷ್ಟ. ಚಿಕ್ಕ ಹಳ್ಳ ಸೃಷ್ಟಿಸಿದ ಈ ಜಲಪಾತ ನೋಡುಗರನ್ನು ಸೇಳೆಯುತ್ತದೆ. ಒಳ್ಳೆಯ ಟ್ರೆಕ್ಕಿಂಗ್ ತಾಣ

ಇಷ್ಟೇ ಅಲ್ಲದೆ ಉತ್ತರ ಕನ್ನಡದಲ್ಲಿ ಇನ್ನೂ ಹಲವಾರು ಜಲಪಾತಗಳಿವೆ. ಪಶ್ಚಿಮ ಘಟ್ಟಗಳ ಶ್ರೇಣಿ ಈ ಜಿಲ್ಲೆಯಲ್ಲಿ ಹಾದುಹೋಗುತ್ತದೆ. ಈ ಪಶ್ಚಿಮ ಘಟ್ಟ ಶ್ರೇಣಿಯಲ್ಲಿ ನೂರಾರು ಜಲಪಾತಗಳಿವೆ. ಮಳೆಗಾಲ ಬಂತೆಂದರೆ ಈ ಜಲಪಾತಗಳಿಗೆ ಮತ್ತೆ ಜೀವಕಳೆ ಬರುತ್ತವೆ. ತುಂಬ್ರಿಕೊಡ್ಲು, ಸೂಸಬ್ಬಿಕೊಡ್ಲು, ವಜ್ರದುಂಡಿ, ಮುರೇಗಾರ, ಕರೂರು ಈ ಮುಂತಾದ ಹಲವಾರು ಜಲಪಾತಗಳು ಉತ್ತರ ಕನ್ನಡದ ಕಾನನದ ನಡುವೆ ಇವೆ. ಮಳೆಗಾಲದಲ್ಲಿ ಇವುಗಳು ನಯನಮನೋಹರ.

2 comments:

  1. ಮಾಹಿತಿಯೇನೋ ಇದೆ. ಆದರೆ ಯಾರಿಗೂ ಅದು ತಲುಪುದಿಲ್ಲ. ನೀವು ಬರವಣಿಗೆಗೆ ಬಳಸಿರುವ ಬಣ್ಣಗಳಿಂದ ಏನನ್ನು ಓದಲು ಸಾಧ್ಯವಿಲ್ಲ. ಮೊದಲು ಅದನ್ನು ಬದಲಾಯಿಸಿ.

    ReplyDelete
  2. Unchalli falls ge matte hog beku , e modlu pradeepa namma bhatru hogiddu aa borgareta iglu haage kanna munde ide , manushya este aadunikate maigudisikondru Prakriti munde elvu shoonya .

    ReplyDelete