Friday, July 9, 2010

ನೀನು

ಎದೆಯ ಬೃಂದಾವನದ
ಹಸಿರು ಹೂಗಿಡ ನೀನು,
ನನ್ನೊಳಗೆ ನೀನಿರಲು
ಬಾಳಿಗದು ಶೋಭೆ ||


ನನ್ನ ಬಯಕೆಯ ಮನದ
ಕಣ್ಣರೆಪ್ಪೆಯು ನೀನು,
ನನ್ನುಳಿಸೆ ನೀನಿರಲು
ಬಾಳಿಗದು ರಕ್ಷೆ ||


ನನ್ನ ಅಕ್ಷಿ ಆಳದೊಳು
ಕಿಡಿ ಕಾಂತಿ ನೀನು,
ಬದುಕೊಳಗೆ ನೀನಿರಲು
ಕಡೆಗೋಲು ಛಲ ||

ಒಡಲ ತಿಳಿ ನೀರಿನಲಿ
ಹಸಿರು ಹಾವಸೆ ನೀನು,
ನೀರೊಳಗೆ ನೀನಿರಲು
ಅಲ್ಲಹುದು ಸೃಷ್ಟಿ ||


-ವಿನಯ್ ದಂಟಕಲ್

Monday, July 5, 2010

ಕನ್ನಡದ ಕ್ಲಾಸಿಕ್ `ಭೂತಯ್ಯನ ಮಗ ಅಯ್ಯು'

ನಿರ್ದೆಶಕ : ಸಿದ್ಧಲಿಂಗಯ್ಯ
ಕಥೆ : ಗೋರೂರು ರಾಮಸ್ವಾಮಿ ಅಯ್ಯಂಗಾರ್

ನಿರ್ಮಾಪಕ : ಜೈನ್ ಕಂಬೈನ್ಸ್
ಛಾಯಾಗ್ರಹಣ : ಡಿ. ವಿ. ರಾಜಾರಾಂ
ಚಿತ್ರ ಬಿಡುಗಡೆ : 1974
ಸಂಗೀತ : ಜಿ. ಕೆ. ವೆಂಕಟೇಶ್
ತಾರಾಗಣದಲ್ಲಿ : ವಿಷ್ಣುವರ್ಧನ್, ಲೋಕೇಶ್, ಎಂ. ಪಿ. ಶಂಕರ್, ಬಾಲಕೃಷ್ಣ, ಲೋಕನಾಥ್ ಮುಂತಾದವರು.

ಕನ್ನಡದ ಕ್ಲಾಸಿಕ್ ಚಿತ್ರಗಳ ಬಗ್ಗೆ ಕಣ್ಣಾಡಿಸಿದಾಗ ಎಲ್ಲಕ್ಕಿಂತ ಮೊದಲು ಕಂಡುಬರುವ ಚಿತ್ರ `ಭೂತಯ್ಯನ ಮಗ ಅಯ್ಯು'. ಸಾಹಿತ್ಯ ಆಕಾಡಮಿ ಪ್ರಶಸ್ತಿ ವಿಜೇತ ಗೋರೂರು ರಾಮಸ್ವಾಮಿ ಅಯ್ಯಂಗಾರರ ಕಾದಂಬರಿ ಆಧಾರಿತ ಭೂತಯ್ಯನ ಮಗ ಅಯ್ಯು, ಚಿತ್ರರಂಗದಲ್ಲಿ ವಿಷ್ಣುವರ್ಧನ್ಗೆ ಭದ್ರವಾದ ನೆಲೆ ನೀಡಿದ ಚಿತ್ರ.
ಜಮೀನ್ದಾರ ಭೂತಯ್ಯ(ಎಂ.ಪಿ. ಶಂಕರ್) ಭಾರಿ ಜುಗ್ಗ. ಇನ್ನೊಬ್ಬರ ತಲೆಒಡೆದು ದುಡ್ಡುಮಾಡುವ ವ್ಯಕ್ತಿ. ಸುಳ್ಳು ದಾಖಲೆಗಳ ಮೂಲಕ ಇನ್ನೊಬ್ಬರ ಜಮೀನು ಕಬಳಿಸುವಾತ. ಊರಿನ ಜನರಿಗೆ ಆತನೆಂದರೆ ತಿರಸ್ಕಾರ. ಆತನ ಹಾದಿಯಲ್ಲೇ ಸಾಗುವ ಮಗ ಅಯ್ಯು(ಲೋಕೇಶ್). ಊರ ಮಂದಿಗೆ ಮೋಸ ಮಾಡಿ ತನ್ನ ಬದುಕು ಕಟ್ಟಿಕೊಳ್ಳುವ ಭೂತಯ್ಯ ಮೋಸ ಮಾಡುತ್ತಲೆ ಜೀವ ಬಿಡುತ್ತಾನೆ. ಆತನ ನಂತರ ಮಗ ಅಯ್ಯು ಸಹ ಅದೇ ರೀತಿ ನಡವಳಿಕೆ ಪ್ರದರ್ಶಿಸುತ್ತಾನೆ. ನಡುವೆ ಊರಿನ ವ್ಯಕ್ತಿಯೊಬ್ಬನ ಮಗ ಗುಳ್ಳ (ವಿಷ್ಣುವರ್ಧನ್)ನೊಂದಿಗೆ ಹಗೆ ಬೆಳೆಯುತ್ತದೆ. ಅಯ್ಯುವಿನ ವಿರುದ್ಧ ಗುಳ್ಳ ತಿರುಗಿ ಬೀಳುತ್ತಾನೆ. ಇಬ್ಬರ ನಡುವೆ ಆಸ್ತಿ ಪತ್ರಕ್ಕಾಗಿ ಗಲಾಟೆ ಆಗುತ್ತದೆ. ಇಬ್ಬರೂ ಕೋರ್ಟ್  ಮೆಟ್ಟಿಲನ್ನು ಏರುತ್ತಾರೆ. ಅಲ್ಲಿ ಗುಳ್ಳ ಸೋಲುತ್ತಾನೆ. ಆ ನಂತರ ಚಿತ್ರ ಅನೇಕ ತಿರುವುಗಳನ್ನು ಕಾಣುತ್ತದೆ.
ಪರಸ್ಪರ ವಿರೋಧಿಗಳಾದ ಅಯ್ಯು ಹಾಗೂ ಗುಳ್ಳ ಕೊನೆಯಲ್ಲಿ ಮಿತ್ರರಾಗುತ್ತಾರೆ. ತಂದೆ ಭೂತಯ್ಯನಂತೆ ದುರ್ಗುಣವನ್ನು ಪ್ರದರ್ಶಿಸುತ್ತಿದ್ದ ಅಯ್ಯು ಒಳ್ಳೆಯವನಾಗುತ್ತಾನೆ ಇದು ಚಿತ್ರದ ತಿರುಳು. ಸಂಪೂರ್ಣ ಚಿತ್ರ ಚಿಕ್ಕಮಂಗಳೂರಿನ ಕಳಸಾಪುರದಲ್ಲಿ ಚಿತ್ರೀಕರಣಗೊಂಡಿದೆ.
ಚಿತ್ರದಲ್ಲಿ ವಿಷ್ಣು, ಲೋಕೇಶ್, ಎಂ. ಪಿ ಶಂಕರ್, ಬಾಲಕೃಷ್ಣ, ಲೋಕೇಶ್, ದಿನೇಶ್ ಸೇರಿದಂತೆ ಹಲವರು ಅಮೋಘ ಅಭಿನಯ ನೀಡಿದ್ದಾರೆ. ಚಿತ್ರಕ್ಕೆ ಸಂಗೀತ ನೀಡಿದ್ದು ಜಿ. ಕೆ. ವೆಂಕಟೇಶ್. ಪಿ. ಬಿ ಶ್ರೀನಿವಾಸ್ ಹಾಗೂ ಎಸ್. ಜಾನಕಿ ಅವರ ಸ್ವರಗಳಲ್ಲಿ ಮೂಡಿಬಂದ `ಮಲೆನಾಡ ಹೆಣ್ಣ ಮೈಬಣ್ಣ' ಹಾಡನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.
ಚಿತ್ರದಲ್ಲಿ ಅನೇಕ ಮರೆಯಲಾರದ ಸನ್ನಿವೇಶಗಳಿವೆ. ಕೋರ್ಟ್ ಪ್ರಕರಣ ಮುಗಿಸಿ ವಾಪಸ್ ಬರುವ ಗುಳ್ಳನ ಮಿತ್ರರು ಹೊಟೆಲಲ್ಲಿ ಊಟ ಮಾಡುವುದು, ಲೋಕನಾಥ್ ಉಪ್ಪಿನಕಾಯಿಗಾಗಿ ಹಾತೊರೆಯುವುದು, ಭೂತಯ್ಯ ಸಿದ್ದಿಯ ಎತ್ತುಗಳನ್ನು ಕದ್ದು ಮಾರಾಟ ಮಾಡುವುದು, ಮಾವ ಬಾಲಕೃಷ್ಣ ಅಯ್ಯುವಿಗೆ ಬುದ್ಧಿಕಲಿಸಲು ಪ್ರಯತ್ನಿಸುವುದು, ಮಳೆಯಿಂದ ಅಣೆಕಟ್ಟು ಒಡೆದು ಅಯ್ಯುವಿನ ಮನೆ ಮುಳುಗುವುದು, ಗುಳ್ಳ ಅಯ್ಯುವಿನ ಹೆಂಡತಿ ಮಕ್ಕಳನ್ನು ಕಾಪುಡುವ ಸನ್ನಿವೇಶಗಳನ್ನು ಎಂದಿಗೂ ಮರೆಯುವಂತಿಲ್ಲ.
ಭೂತಯ್ಯನ ಮಗ ಅಯ್ಯು ಪಕ್ಕಾ ಗ್ರಾಮೀಣ ಸೊಗಡಿನ ಚಿತ್ರ. ಸಮಾಜಕ್ಕೆ ಉತ್ತಮ ಅಂಶಗಳನ್ನು ತಿಳಿಸುವ ಚಿತ್ರ ಕನ್ನಡದ ಅತ್ಯುತ್ತಮ ಚಿತ್ರಗಳಲ್ಲೊಂದು. ಕನ್ನಡ ನಾಡಿನ ಎಲ್ಲ ಉತ್ತಮ ಅಂಶಗಳನ್ನು ಸಾರುವ ಚಿತ್ರ ಇದು. ಮಲೆನಾಡು, ಬಯಲು ಸೀಮೆ ಮುಂತಾದ ವಿವಿಧ ಭಾಗಗಳ ಜನಜೀವನವನ್ನು ಸೂಕ್ಷ್ಮವಾಗಿ ವಿವರಿಸುತ್ತದೆ. ಎಲ್ಲ ವಯೋಮಾನದವರೂ ನೋಡಲೇ ಬೇಕಾದ ಚಿತ್ರ ಇದು.

ವಿನಯ್ ದಂಟಕಲ್